ಶಿಕ್ಷಕರಾಗುವ ಆಯ್ಕೆಯನ್ನು ಮಾಡುವುದೇಕೆ?
ಶಿಕ್ಷಕರಾಗುವ ಆಯ್ಕೆಯನ್ನು ಮಾಡುವುದೇಕೆ?
“ಹೆಚ್ಚಿನ ಶಿಕ್ಷಕರು ತಮ್ಮ ಈ ಜೀವನವೃತ್ತಿಯನ್ನು ಆಯ್ಕೆಮಾಡಿರಲು ಕಾರಣ, ಅದು ಜನರಿಗೆ ಸಹಾಯಮಾಡುವ ವೃತ್ತಿಯಾಗಿದೆ ಎಂದೇ. [ಕಲಿಸುವುದು] ಮಕ್ಕಳ ಜೀವನಗಳಲ್ಲಿ ಬದಲಾವಣೆಯನ್ನು ಮಾಡಲಿಕ್ಕಾಗಿರುವ ಒಂದು ವಚನಬದ್ಧತೆಯಾಗಿದೆ.” —ಶಿಕ್ಷಕರು, ಶಾಲೆಗಳು ಮತ್ತು ಸಮಾಜ.
ಕೆಲವು ಮಂದಿ ಶಿಕ್ಷಕರು, ಕಲಿಸುವಿಕೆಯು ತುಂಬ ಸುಲಭದ ಕೆಲಸವೆಂದು ತೋರಿಸಿಕೊಡಬಹುದಾದರೂ, ವಾಸ್ತವದಲ್ಲಿ ಅದು ಜಯಿಸಬೇಕಾದಂಥ ನೂರಾರು ಅಡ್ಡಿತಡೆಗಳಿರುವ ಕೆಲಸವಾಗಿರಬಲ್ಲದು. ತೀರ ಹೆಚ್ಚು ವಿದ್ಯಾರ್ಥಿಗಳುಳ್ಳ ತರಗತಿ, ವಿಪರೀತವಾದ ಲೇಖನಿ ಕೆಲಸ, ಕಂಗೆಡಿಸುವಂಥ ಕಛೇರಿ ಕ್ರಮಕಾಯಿದೆ, ಕಲಿಯದಿರುವ ವಿದ್ಯಾರ್ಥಿಗಳು, ಮತ್ತು ಕಡಿಮೆ ಸಂಬಳದಂಥ ಅಡ್ಡಿತಡೆಗಳನ್ನು ಅವರು ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಸ್ಪೆಯ್ನ್ನ ಮ್ಯಾಡ್ರಿಡ್ನಲ್ಲಿರುವ ಒಬ್ಬ ಶಿಕ್ಷಕರಾದ ಪೇದ್ರೊ ಅದನ್ನು ಈ ರೀತಿಯಲ್ಲಿ ವಿವರಿಸಿದರು: “ಒಬ್ಬ ಶಿಕ್ಷಕನಾಗಿರುವುದು ಖಂಡಿತವಾಗಿಯೂ ಸುಲಭದ ಕೆಲಸವಲ್ಲ. ಅದು ತುಂಬ ಸ್ವತ್ಯಾಗವನ್ನು ಕೇಳಿಕೊಳ್ಳುತ್ತದೆ. ಆದರೆ ಈ ಎಲ್ಲ ಕಷ್ಟಗಳಿದ್ದರೂ, ವ್ಯಾಪಾರ ಜಗತ್ತಿನಲ್ಲಿನ ಒಂದು ಉದ್ಯೋಗಕ್ಕಿಂತಲೂ ಶಿಕ್ಷಕ ವೃತ್ತಿಯೇ ಹೆಚ್ಚು ಪ್ರತಿಫಲದಾಯಕ ಕಾಯಕವೆಂದು ನಾನು ನೆನಸುತ್ತೇನೆ.”
ಹೆಚ್ಚಿನ ದೇಶಗಳ ನಗರಗಳಲ್ಲಿನ ದೊಡ್ಡ ಶಾಲೆಗಳಲ್ಲಿ ಪಂಥಾಹ್ವಾನವು ಇನ್ನೂ ಹೆಚ್ಚಾಗಿರಬಲ್ಲದು. ಮಾದಕವಸ್ತುಗಳು, ಪಾತಕ, ಸಡಿಲು ನೈತಿಕತೆ, ಮತ್ತು ಕೆಲವೊಮ್ಮೆ ಹೆತ್ತವರ ಅನಾಸಕ್ತಿಯು, ಶಾಲೆಯ ವಾತಾವರಣವನ್ನೂ ಶಿಸ್ತನ್ನೂ ಗಂಭೀರವಾಗಿ ಬಾಧಿಸಬಲ್ಲದು. ದಂಗೆಕೋರ ಮನೋಭಾವಗಳು ಸರ್ವಸಾಮಾನ್ಯವಾಗಿಬಿಟ್ಟಿವೆ. ಹೀಗಿರುವಾಗ, ಇಷ್ಟೊಂದು ಮಂದಿ ಅರ್ಹ ಜನರು ಶಿಕ್ಷಕರಾಗುವ ಆಯ್ಕೆಮಾಡುವುದೇಕೆ?
ಲೀಮೇರಿಸ್ ಮತ್ತು ಡಯಾನಾ ಎಂಬವರು, ನ್ಯೂ ಯಾರ್ಕ್ ಸಿಟಿಯಲ್ಲಿ ಶಿಕ್ಷಕರಾಗಿದ್ದಾರೆ. ಅವರು ಶಿಶುವಿಹಾರದ ಮಕ್ಕಳಿಂದ ಹಿಡಿದು ಹತ್ತು ವರ್ಷ ಪ್ರಾಯದ ಮಕ್ಕಳಿಗೆ ಕಲಿಸುತ್ತಾರೆ. ಇಬ್ಬರೂ ದ್ವಿಭಾಷಿಗಳಾಗಿದ್ದಾರೆ (ಇಂಗ್ಲಿಷ್-ಸ್ಪ್ಯಾನಿಷ್) ಮತ್ತು ಮುಖ್ಯವಾಗಿ ಹಿಸ್ಪ್ಯಾನಿಕ್ ಮಕ್ಕಳೊಂದಿಗೆ ವ್ಯವಹರಿಸುತ್ತಾರೆ. ನಮ್ಮ ಪ್ರಶ್ನೆಯು ಇದಾಗಿತ್ತು:
ಒಬ್ಬ ಶಿಕ್ಷಕರಿಗೆ ಪ್ರೇರಣೆ ನೀಡುವ ಸಂಗತಿ ಯಾವುದು?
ಲೀಮೇರಿಸ್ ಹೇಳಿದ್ದು: “ನನ್ನನ್ನು ಯಾವುದು ಪ್ರಚೋದಿಸಿತೆಂದು ಕೇಳುತ್ತಿದ್ದೀರೊ? ಅದು ಮಕ್ಕಳಿಗಾಗಿರುವ ನನ್ನ ಪ್ರೀತಿಯೇ. ಕೆಲವೊಂದು ಮಕ್ಕಳಿಗಾದರೊ, ಅವರ ಪ್ರಯತ್ನಗಳನ್ನು ಬೆಂಬಲಿಸುವವಳು ನಾನು ಮಾತ್ರ ಎಂದು ನನಗೆ ಗೊತ್ತಿದೆ.”
ಡಯಾನಾ ಹೇಳಿದ್ದು: “ಶಾಲಾ ಕೆಲಸದೊಂದಿಗೆ ಕಷ್ಟಪಡುತ್ತಿದ್ದ, ಅದರಲ್ಲೂ ವಿಶೇಷವಾಗಿ ಓದಲು ಒದ್ದಾಡುತ್ತಿದ್ದ ನನ್ನ ಎಂಟು ವರ್ಷ ಪ್ರಾಯದ ಸೋದರಳಿಯನಿಗೆ ನಾನು ಕಲಿಸುತ್ತಿದ್ದೆ. ಅವನು ಮತ್ತು ಇತರರು ಕಲಿಯುವುದನ್ನು ನೋಡಿ ಎಷ್ಟು ತೃಪ್ತಿಯನ್ನು ಅನುಭವಿಸಿದೆ! ಆಗಲೇ ನಾನು ಶಿಕ್ಷಕ ವೃತ್ತಿಯನ್ನು ಕೈಗೊಳ್ಳುವ ನಿರ್ಧಾರಮಾಡಿ, ನನ್ನ ಬ್ಯಾಂಕ್ ಉದ್ಯೋಗವನ್ನು ಬಿಟ್ಟುಬಿಟ್ಟೆ.”
ಎಚ್ಚರ! ಪತ್ರಿಕೆಯು ಹಲವಾರು ದೇಶಗಳಲ್ಲಿರುವ ಶಿಕ್ಷಕರಿಗೆ ಇದೇ ಪ್ರಶ್ನೆಯನ್ನು ಕೇಳಿತು ಮತ್ತು ಅದು ಪಡೆದಂಥ ಉತ್ತರಗಳ ಒಂದು ನಮೂನೆಯನ್ನು ಇಲ್ಲಿ ಕೊಡಲಾಗಿದೆ.
ಇಟಲಿಯವರಾಗಿರುವ, ನಾಲ್ವತ್ತನಾಲ್ಕು ವರ್ಷ ವಯಸ್ಸಿನ ಜುಲ್ಯಾನೊ ಎಂಬವರು ವಿವರಿಸಿದ್ದು: “ನಾನೊಬ್ಬ ವಿದ್ಯಾರ್ಥಿಯಾಗಿದ್ದಾಗಲೇ (ಬಲಗಡೆಯಲ್ಲಿ) ಈ ವೃತ್ತಿಗೆ ಮನಸೋತಿದ್ದೆ. ಅದನ್ನು ನಾನು ಸೃಜನಶೀಲವಾದದ್ದಾಗಿಯೂ, ಇತರರಲ್ಲಿ ಸ್ಫೂರ್ತಿಯನ್ನು ತುಂಬಿಸುವ ಅವಕಾಶಗಳಿಂದ ತುಂಬಿರುವಂಥದ್ದಾಗಿಯೂ ಪರಿಗಣಿಸಿದೆ. ನನ್ನ ಆರಂಭದ ಉತ್ಸಾಹವು, ನನ್ನ ಈ
ಜೀವನವೃತ್ತಿಯ ಪ್ರಾರಂಭದಲ್ಲಿ ನಾನು ಅನುಭವಿಸಿದ ಕಷ್ಟಗಳನ್ನು ದಾಟಿ ಮುಂದೆಸಾಗಲು ಸಹಾಯಮಾಡಿತು.”ಆಸ್ಟ್ರೇಲಿಯದ ನ್ಯೂ ಸೌತ್ ವೇಲ್ಸ್ನ ನಿಕ್ ಎಂಬವರು ಹೇಳುವುದು: “ರಾಸಾಯನಿಕ ಸಂಶೋಧನೆಯ ನನ್ನ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಪಡೆಯುವ ಅವಕಾಶ ತುಂಬ ಕಡಿಮೆ ಇತ್ತು. ಆದರೆ ಶಿಕ್ಷಣ ರಂಗದಲ್ಲಿ ಹಲವಾರು ಅವಕಾಶಗಳಿದ್ದವು. ನಾನು ಇದನ್ನು ಆರಂಭಿಸಿದಂದಿನಿಂದ ಇದರಲ್ಲಿ ತುಂಬ ಆನಂದಿಸಿದ್ದೇನೆ, ಮತ್ತು ನನ್ನ ವಿದ್ಯಾರ್ಥಿಗಳು ಸಹ ನನ್ನ ಕಲಿಸುವಿಕೆಯಲ್ಲಿ ಆನಂದಿಸುತ್ತಿದ್ದಾರೆಂದು ತೋರುತ್ತದೆ.”
ಶಿಕ್ಷಕ ವೃತ್ತಿಯನ್ನು ಆಯ್ಕೆಮಾಡಿರುವವರ ನಡುವೆ, ಹೆಚ್ಚಿನ ವೇಳೆ ಅವರ ಹೆತ್ತವರ ಮಾದರಿಯು ಒಂದು ಪ್ರಧಾನ ಅಂಶವಾಗಿದೆ. ಕೆನ್ಯದ ವಿಲ್ಯಮ್ ಎಂಬವರು ನಮ್ಮ ಪ್ರಶ್ನೆಗೆ ಈ ಉತ್ತರವನ್ನು ಕೊಟ್ಟರು: “ಕಲಿಸಲು ನನಗಿರುವ ಆಸೆಯನ್ನು ಬಹಳಷ್ಟು ಮಟ್ಟಿಗೆ ಪ್ರಭಾವಿಸಿದವರು ನನ್ನ ತಂದೆ. ಅವರು 1952ರಷ್ಟು ಹಿಂದೆ ಒಬ್ಬ ಶಿಕ್ಷಕರಾಗಿದ್ದರು. ನಾನು ಯುವ ಜನರ ಮನಸ್ಸುಗಳನ್ನು ರೂಪಿಸುತ್ತಿದ್ದೇನೆಂಬ ಅರಿವು, ನಾನು ಈ ವೃತ್ತಿಗೆ ಅಂಟಿಕೊಂಡಿರುವಂತೆ ಮಾಡಿರುವ ಒಂದು ಅಂಶವಾಗಿದೆ.”
ಕೆನ್ಯದವರೇ ಆಗಿರುವ ರೋಸ್ಮೇರಿ ಎಂಬವರು ನಮಗಂದದ್ದು: “ಶುರುವಿನಿಂದಲೂ ನನ್ನಲ್ಲಿ ಅನುಕೂಲಸ್ಥರಲ್ಲದ ಜನರಿಗೆ ಸಹಾಯಮಾಡಬೇಕೆಂಬ ಅಭಿಲಾಷೆಯಿತ್ತು. ಆದುದರಿಂದ ನಾನು ಒಂದೇ ನರ್ಸ್ ಆಗಬೇಕೆಂದಿದ್ದೆ ಇಲ್ಲವೇ ಒಬ್ಬ ಶಿಕ್ಷಕಿಯಾಗಬೇಕೆಂದಿದ್ದೆ. ಶಿಕ್ಷಕಿಯಾಗುವ ಅವಕಾಶ ಮೊದಲು ಸಿಕ್ಕಿತು. ನಾನು ಒಬ್ಬ ತಾಯಿಯೂ ಆಗಿರುವುದರಿಂದ, ಈ ವೃತ್ತಿಗಾಗಿರುವ ನನ್ನ ಪ್ರೀತಿಯು ಬೆಳೆದಿದೆ.”
ಜರ್ಮನಿಯ ಡ್ಯೂರೆನ್ನ ಬರ್ಟೊಲ್ಟ್ ಎಂಬವರಿಗೆ ಶಿಕ್ಷಕ ವೃತ್ತಿಯನ್ನು ಆಯ್ಕೆಮಾಡಲು ಒಂದು ಭಿನ್ನ ಕಾರಣವಿತ್ತು: “ನಾನೊಬ್ಬ ಒಳ್ಳೇ ಶಿಕ್ಷಕನಾಗಿರಬಲ್ಲೆ ಎಂದು ನನ್ನ ಹೆಂಡತಿ ನನಗೆ ಮನದಟ್ಟುಮಾಡಿದಳು.” ಮತ್ತು ಅವಳು ಏನು ಹೇಳಿದಳೊ ಅದು ಸತ್ಯವೆಂದು ರುಜುವಾಯಿತು. ಅವನು ಕೂಡಿಸಿ ಹೇಳಿದ್ದು: “ನನ್ನ ಈ ವೃತ್ತಿ ನನಗೀಗ ತುಂಬ ಆನಂದವನ್ನು ತರುತ್ತದೆ. ಒಬ್ಬ ಶಿಕ್ಷಕನಿಗೆ/ಶಿಕ್ಷಕಿಗೆ ವಿದ್ಯೆ ಎಷ್ಟು ಅಮೂಲ್ಯವೆಂಬುದು ಮನದಟ್ಟಾಗಿರದಿದ್ದಲ್ಲಿ ಇಲ್ಲವೇ ಯುವ ಜನರಲ್ಲಿ ಆಸಕ್ತಿ ಇಲ್ಲದಿರುವಲ್ಲಿ, ಅವನು ಇಲ್ಲವೇ ಅವಳು ಒಬ್ಬ ಒಳ್ಳೆಯ, ಯಶಸ್ವೀ, ಆಸಕ್ತ ಮತ್ತು ತೃಪ್ತ ಶಿಕ್ಷಕರಾಗುವುದು ಅಸಾಧ್ಯವೇ ಸರಿ.”
ನಾಕಾಟ್ಸು ಸಿಟಿಯ ಮಾಸಾಹೀರೊ ಎಂಬ ಜಪಾನೀ ಶಿಕ್ಷಕನು ಹೇಳಿದ್ದು: “ಮಾಧ್ಯಮಿಕ ಶಾಲೆಯಲ್ಲಿ ನನ್ನ ಪ್ರಥಮ ವರ್ಷದಲ್ಲಿ ನನಗೊಬ್ಬ ನಿಪುಣ ಶಿಕ್ಷಕರಿದ್ದದರಿಂದಲೇ, ನಾನೂ ಒಬ್ಬ ಶಿಕ್ಷಕನಾಗುವಂತೆ ಪ್ರೇರಿತನಾದೆ. ಅವರು ನಿಜವಾಗಿಯೂ ಸಮರ್ಪಣಾಭಾವದೊಂದಿಗೆ ನಮಗೆ ಕಲಿಸಿದರು. ಮತ್ತು ನನ್ನ ಈ ವೃತ್ತಿಯಲ್ಲಿ ನಾನು ಮುಂದುವರಿಯಲು ಮುಖ್ಯ ಕಾರಣವೇನೆಂದರೆ, ನನಗೆ ಮಕ್ಕಳೆಂದರೆ ತುಂಬ ಪ್ರೀತಿ.”
ಜಪಾನಿನವರೇ ಆಗಿರುವ ಮತ್ತು ಈಗ 54 ವರ್ಷ ಪ್ರಾಯದವರಾಗಿರುವ ಯೋಶೀಯ ಎಂಬವರಿಗೆ ಒಂದು ಕಾರ್ಖಾನೆಯಲ್ಲಿ ಕೈತುಂಬ ಸಂಬಳ ಸಿಗುವ ಉದ್ಯೋಗವಿತ್ತು. ಆದರೆ ತಾನು ಆ ಉದ್ಯೋಗಕ್ಕೆ ಮತ್ತು ನಿತ್ಯದ ಪ್ರಯಾಣಕ್ಕೆ ಗುಲಾಮನಾಗಿದ್ದೇನೆಂದು ಅವರಿಗನಿಸುತ್ತಿತ್ತು. “ಒಂದು ದಿನ ನಾನು ನನ್ನಷ್ಟಕ್ಕೆ, ‘ನಾನು ಎಷ್ಟರ ತನಕ ಇದೇ ಜೀವನ ಶೈಲಿಯನ್ನು ಮುಂದುವರಿಸಿಕೊಂಡು ಹೋಗಬೇಕಪ್ಪಾ?’ ಎಂದು ಯೋಚಿಸಿದೆ. ವಸ್ತುಗಳಿಗಿಂತಲೂ ಜನರೊಂದಿಗೆ ಹೆಚ್ಚು ಸಂಪರ್ಕವಿರುವ ಒಂದು ಉದ್ಯೋಗವನ್ನು ಹುಡುಕಲು ನಾನು ನಿರ್ಧರಿಸಿದೆ. ಶಿಕ್ಷಕ ವೃತ್ತಿಯು ಅಪೂರ್ವವಾದದ್ದು. ನೀವು ಯುವ ಜನರೊಂದಿಗೆ ಕೆಲಸಮಾಡುತ್ತಿದ್ದೀರಿ. ಅದು ಪರೋಪಕಾರಿ ಕೆಲಸವಾಗಿದೆ.”
ರಷ್ಯಾದ ಸೆಂಟ್ ಪೀಟರ್ಸ್ಬರ್ಗ್ನ ವ್ಯಾಲೆಂಟೀನಾ ಒಬ್ಬ ಶಿಕ್ಷಕಿಯಾಗಿರುವುದರ ಆ ಅಂಶವನ್ನೂ ಗಣ್ಯಮಾಡುತ್ತಾಳೆ. ಅವಳಂದದ್ದು: “ಶಿಕ್ಷಕ ವೃತ್ತಿಯು ನಾನೇ ಆಯ್ಕೆಮಾಡಿರುವ ಕಸಬಾಗಿದೆ. ನಾನು 37 ವರ್ಷಗಳಿಂದ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕೆಲಸಮಾಡಿದ್ದೇನೆ. ಮಕ್ಕಳೊಂದಿಗೆ ವಿಶೇಷವಾಗಿ ಎಳೆಯರೊಂದಿಗೆ ಕೆಲಸಮಾಡುವುದರಲ್ಲಿ ನಾನು ಆನಂದಿಸುತ್ತೇನೆ. ನನ್ನ ಕೆಲಸವನ್ನು ನಾನು ತುಂಬ ಇಷ್ಟಪಡುತ್ತೇನೆ, ಆದುದರಿಂದಲೇ ಈ ವರೆಗೂ ನಾನು ನಿವೃತ್ತಿ ಪಡೆದುಕೊಂಡಿಲ್ಲ.”
ಸ್ವತಃ ಒಬ್ಬ ಶಿಕ್ಷಕರಾಗಿರುವ ವಿಲ್ಯಮ್ ಏಯರ್ಸ್ ಬರೆದುದು: “ಜನರು ಶಿಕ್ಷಕ ವೃತ್ತಿಗೆ ಕರೆಯಲ್ಪಡಲು ಕಾರಣ, ಅವರು ಮಕ್ಕಳನ್ನೂ ಯುವ ಜನರನ್ನೂ
ಪ್ರೀತಿಸುತ್ತಾರೆ, ಇಲ್ಲವೆ ಅವರೊಂದಿಗಿರಲು, ಅವರು ವಿಕಾಸಹೊಂದಿ ಬೆಳೆದು ಹೆಚ್ಚು ಶಕ್ತರೂ, ಹೆಚ್ಚು ಸಾಮರ್ಥ್ಯವುಳ್ಳವರೂ, ಲೋಕದಲ್ಲಿ ಹೆಚ್ಚು ಪ್ರಬಲರೂ ಆಗುವುದನ್ನು ನೋಡಲು ಇಷ್ಟಪಡುತ್ತಾರೆ. . . . ಜನರು ಕಲಿಸಲು ಕಾರಣ . . . ಅವರು ತಮ್ಮನ್ನೇ ಇತರರಿಗೆ ಒಂದು ವರದಾನದೋಪಾದಿ ನೀಡಲಿಕ್ಕಾಗಿಯೇ. ನಾನಾದರೊ, ಈ ಜಗತ್ತನ್ನು ಒಂದು ಉತ್ತಮ ಸ್ಥಳವನ್ನಾಗಿ ಮಾಡುವ ನಿರೀಕ್ಷೆಯಿಂದ ಕಲಿಸುತ್ತೇನೆ.”ಹೌದು, ಅನೇಕ ತೊಂದರೆಗಳು ಮತ್ತು ಅನನುಕೂಲತೆಗಳ ಎದುರಿನಲ್ಲೂ ಸಮರ್ಪಣಾಭಾವವುಳ್ಳ ಸಾವಿರಾರು ಮಂದಿ ಸ್ತ್ರೀಪುರುಷರು ಶಿಕ್ಷಕ ವೃತ್ತಿಯತ್ತ ಆಕರ್ಷಿತರಾಗುತ್ತಾರೆ. ಅವರು ಎದುರಿಸುವಂಥ ಪ್ರಧಾನ ಪಂಥಾಹ್ವಾನಗಳಲ್ಲಿ ಕೆಲವು ಯಾವುವು? ಮುಂದಿನ ಲೇಖನವು ಆ ಪ್ರಶ್ನೆಯನ್ನು ಪರಿಗಣಿಸುವುದು.(g02 3/8)
[ಪುಟ 6ರಲ್ಲಿರುವ ಚೌಕ]
ಶಿಕ್ಷಕರ ಮತ್ತು ಹೆತ್ತವರ ನಡುವಣ ಸಂವಾದಕ್ಕಾಗಿ ಸಲಹೆಗಳು
✔ ಹೆತ್ತವರ ಪರಿಚಯಮಾಡಿಕೊಳ್ಳಿ. ಇದನ್ನು ಮಾಡಲಿಕ್ಕಾಗಿ ನೀವು ಕಳೆಯುವ ಸಮಯವು ವ್ಯರ್ಥವಲ್ಲ. ಇದು ನಿಮಗೂ ಹೆತ್ತವರಿಗೂ ಉಪಯುಕ್ತವಾಗಿರುವ ಸಮಯದ ಬಂಡವಾಳವಾಗಿದೆ. ನಿಮ್ಮ ಅತ್ಯುತ್ತಮ ಸಹಯೋಗಿಗಳಾಗಿರಬಲ್ಲ ವ್ಯಕ್ತಿಗಳೊಂದಿಗೆ ವಿಶ್ವಾಸದ ಸಂಬಂಧವನ್ನು ಸ್ಥಾಪಿಸಲು ಇದು ನಿಮಗಿರುವ ಸದವಕಾಶವಾಗಿದೆ.
✔ ಹೆತ್ತವರ ಮಟ್ಟಕ್ಕಿಳಿದು ಮಾತಾಡಿರಿ. ಅವರನ್ನು ತುಚ್ಛೀಕರಿಸಿ ಮಾತಾಡಬೇಡಿ. ಅವರೊಂದಿಗೆ ಮಾತಾಡುವಾಗ, ಕೇವಲ ಶಿಕ್ಷಕರು ಉಪಯೋಗಿಸುವಂಥ ಪದವಿನ್ಯಾಸಗಳನ್ನು ಉಪಯೋಗಿಸಬೇಡಿ.
✔ ಮಕ್ಕಳ ಬಗ್ಗೆ ಮಾತಾಡುವಾಗ, ಸಕಾರಾತ್ಮಕ ಅಂಶಗಳಿಗೆ ಹೆಚ್ಚಿನ ಒತ್ತನ್ನು ಕೊಡಿರಿ. ಖಂಡನೆಗಿಂತಲೂ ಶ್ಲಾಘನೆ ಪರಿಣಾಮಕಾರಿ. ಮಗು ಯಶಸ್ವಿಯಾಗುವಂತೆ ನೆರವು ನೀಡಲು ಹೆತ್ತವರು ಏನು ಮಾಡಬಲ್ಲರೆಂಬುದನ್ನು ಅವರಿಗೆ ವಿವರಿಸಿ ಹೇಳಿ.
✔ ಹೆತ್ತವರು ತಮಗೇನನ್ನು ಹೇಳಲಿಕ್ಕಿದೆಯೊ ಅದನ್ನು ಹೇಳುವಂತೆ ಅನುಮತಿಸಿರಿ ಮತ್ತು ಅವರು ಮಾತಾಡುವಾಗ ನಿಜವಾಗಿಯೂ ಗಮನಕೊಟ್ಟು ಆಲಿಸಿರಿ.
✔ ಮಗುವಿನ ಮನೆಯಲ್ಲಿನ ವಾತಾವರಣ ಹೇಗಿದೆಯೆಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಸಾಧ್ಯವಿರುವಲ್ಲಿ ಮಗುವಿನ ಮನೆಗೆ ಭೇಟಿ ನೀಡಿ.
✔ ಮುಂದಿನ ಬಾರಿ ಹೆತ್ತವರೊಂದಿಗೆ ಭೇಟಿಯಾಗಲಿಕ್ಕಾಗಿ ತಾರೀಖನ್ನು ನಿಗದಿಪಡಿಸಿರಿ. ಮತ್ತು ತಪ್ಪದೆ ಭೇಟಿಯಾಗುವುದು ಪ್ರಾಮುಖ್ಯ. ನೀವು ನಿಜವಾಗಿಯೂ ಆಸಕ್ತರಾಗಿದ್ದೀರೆಂಬುದನ್ನು ಅದು ತೋರಿಸುತ್ತದೆ.—ಅಮೆರಿಕದಲ್ಲಿ ಕಲಿಸುವುದು (ಇಂಗ್ಲಿಷ್) ಎಂಬ ಪುಸ್ತಕದ ಮೇಲಾಧಾರಿತ.
[picture on page 6]
‘ನನ್ನ ತಂದೆ ಕೂಡ ಒಬ್ಬ ಶಿಕ್ಷಕರಾಗಿದ್ದರು.’ —ವಿಲ್ಯಮ್, ಕೆನ್ಯಾ
[ಪುಟ 7ರಲ್ಲಿರುವ ಚಿತ್ರ]
‘ಮಕ್ಕಳೊಂದಿಗೆ ಕೆಲಸಮಾಡುವುದರಲ್ಲಿ ನಾನು ಆನಂದಿಸುತ್ತೇನೆ.’ —ವ್ಯಾಲೆಂಟೀನಾ, ರಷ್ಯಾ
[ಪುಟ 7ರಲ್ಲಿರುವ ಚಿತ್ರ]
“ಶಿಕ್ಷಕ ವೃತ್ತಿಯು ಅಪೂರ್ವವಾದದ್ದು. ನೀವು ಯುವ ಜನರೊಂದಿಗೆ ಕೆಲಸಮಾಡುತ್ತಿದ್ದೀರಿ.”—ಯೋಶೀಯ, ಜಪಾನ್