ಶಿಕ್ಷಕರು ನಮಗೆ ಅವರ ಅಗತ್ಯ ಏಕಿದೆ?
ಶಿಕ್ಷಕರು ನಮಗೆ ಅವರ ಅಗತ್ಯ ಏಕಿದೆ?
“ಶ್ರದ್ಧೆಯಿಂದ ಅಭ್ಯಾಸಮಾಡುವ ಸಾವಿರ ದಿನಗಳಿಗಿಂತಲೂ ಒಬ್ಬ ಮಹಾನ್ ಶಿಕ್ಷಕನೊಂದಿಗೆ ಕಳೆಯುವ ಒಂದು ದಿನ ಎಷ್ಟೋ ಉತ್ತಮ.”—ಜಪಾನಿ ಗಾದೆ.
ನೀವು ಶಾಲೆಯಲ್ಲಿ ಇದ್ದಾಗ ನಿಮ್ಮ ಮೇಲೆ ಒಳ್ಳೆಯ ಪ್ರಭಾವವನ್ನು ಬೀರಿದ ಒಬ್ಬ ಶಿಕ್ಷಕರ ನೆನಪು ನಿಮಗಿದೆಯೊ? ಅಥವಾ ನೀವೊಬ್ಬ ವಿದ್ಯಾರ್ಥಿಯಾಗಿರುವಲ್ಲಿ, ನಿಮ್ಮ ಅಚ್ಚುಮೆಚ್ಚಿನ ಶಿಕ್ಷಕರು ಯಾರಾದರೂ ಇದ್ದಾರೊ? ಇರುವಲ್ಲಿ, ಕಾರಣವೇನು?
ಒಬ್ಬ ಒಳ್ಳೆಯ ಶಿಕ್ಷಕರು ಆತ್ಮವಿಶ್ವಾಸವನ್ನು ತುಂಬಿಸುತ್ತಾರೆ ಮತ್ತು ಕಲಿಯುವುದನ್ನು ಚಿತ್ತಾಕರ್ಷಕ ಕೆಲಸವನ್ನಾಗಿ ಮಾಡುತ್ತಾರೆ. ಭಾರತದ ನಡುವಯಸ್ಸಿನ ವ್ಯಾಪಾರಿಯೊಬ್ಬರು, ಕೊಲ್ಕತ್ತದಲ್ಲಿ ತನ್ನ ಶಾಲೆಯಲ್ಲಿದ್ದ ಇಂಗ್ಲಿಷ್ ಶಿಕ್ಷಕರನ್ನು ಅಕ್ಕರೆಯಿಂದ ಸ್ಮರಿಸುತ್ತಾರೆ. “ಶ್ರೀ. ಸಸೂನರ ಕಲಿಸುವ ವಿಧಾನಗಳು, ನಾನು ಆ ಭಾಷೆಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಿದವು ಮಾತ್ರವಲ್ಲ, ಅವು ನನ್ನ ಸ್ವಂತ ಸ್ವಗೌರವವನ್ನು ಕಟ್ಟಿದವು. ಅನೇಕಸಲ ಅವರು ನನ್ನ ಅತ್ಯುತ್ತಮ ಕೃತಿಗಳನ್ನು ತೆಗೆದುಕೊಂಡು, ಸ್ವಲ್ಪ ‘ತಿದ್ದಿ ನಯಗೊಳಿಸಿದ’ ನಂತರ, ಆ ಪ್ರಬಂಧಗಳನ್ನು ಬೇರೆ ಬೇರೆ ವಾರ್ತಾಪತ್ರಿಕೆಗಳು ಮತ್ತು ಮಾಸಪತ್ರಿಕೆಗಳಿಗೆ ಕಳುಹಿಸುತ್ತಿದ್ದರು. ಇವುಗಳಲ್ಲಿ ಕೆಲವು ತಿರಸ್ಕರಿಸಲ್ಪಟ್ಟರೂ, ಕೆಲವೊಂದನ್ನು ಸ್ವೀಕರಿಸಲಾಗುತ್ತಿತ್ತು. ವಾರ್ತಾಪತ್ರಿಕೆಗಳು ಕೊಡುತ್ತಿದ್ದ ಹಣಕ್ಕಿಂತಲೂ, ನನ್ನ ಕೃತಿಯನ್ನು ಮುದ್ರಿತರೂಪದಲ್ಲಿ ನೋಡುವ ಆನಂದವೇ, ಬರಹದಲ್ಲಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯಮಾಡಿತು.”
ಜರ್ಮನಿಯ ಮ್ಯೂನಿಕ್ ಎಂಬಲ್ಲಿನ, ಮಾರ್‌ಗಿಟ್ ಎಂಬ 50ರ ಪ್ರಾಯದ ಸಂತೋಷಕರ ವ್ಯಕ್ತಿತ್ವವುಳ್ಳ ಒಬ್ಬ ಮಹಿಳೆಯು ಹೇಳುವುದು: “ನಾನು ವಿಶೇಷವಾಗಿ ಪ್ರೀತಿಸುತ್ತಿದ್ದ ಒಬ್ಬ ಶಿಕ್ಷಕಿಯಿದ್ದರು. ತುಂಬ ಜಟಿಲವಾದ ಸಂಗತಿಗಳನ್ನು ಅತಿ ಸರಳ ರೀತಿಯಲ್ಲಿ ವಿವರಿಸುವ ಒಳ್ಳೆಯ ವಿಧಾನ ಅವರಿಗೆ ಗೊತ್ತಿತ್ತು. ನಮಗೆ ಏನಾದರೂ ಅರ್ಥವಾಗದಿರುತ್ತಿದ್ದಲ್ಲಿ, ನಾವು ಪ್ರಶ್ನೆಗಳನ್ನು ಕೇಳುವಂತೆ ಅವರು ನಮ್ಮನ್ನು ಉತ್ತೇಜಿಸಿದರು. ಅವರು ಬಿಗುಮಾನದವರಾಗಿರಲಿಲ್ಲ ಬದಲಾಗಿ ಸ್ನೇಹಜೀವಿಯಾಗಿದ್ದರು. ಇದರಿಂದಾಗಿ ಪಾಠಗಳು ಹೆಚ್ಚು ಆನಂದದಾಯಕವಾಗಿದ್ದವು.”
ಆಸ್ಟ್ರೇಲಿಯದವನಾಗಿರುವ ಪೀಟರ್ ಎಂಬವನು, ಒಬ್ಬ ಗಣಿತದ ಶಿಕ್ಷಕನನ್ನು ಜ್ಞಾಪಿಸಿಕೊಳ್ಳುತ್ತಾನೆ. ಅವನು ಹೇಳಿದಂತೆ, “ವ್ಯಾವಹಾರಿಕ ಉದಾಹರಣೆಗಳನ್ನು ಕೊಡುವ ಮೂಲಕ, ನಾವೇನನ್ನು ಕಲಿಯುತ್ತಿದ್ದೇವೊ ಅದರ ಪ್ರಾಯೋಗಿಕ ಅನ್ವಯವನ್ನು ಗ್ರಹಿಸುವಂತೆ ಅವರು ನಮಗೆ ಸಹಾಯಮಾಡಿದರು. ನಾವು ತ್ರಿಕೋನಮಿತಿ ಗಣಿತವನ್ನು ಕಲಿಯುತ್ತಿದ್ದಾಗ, ಕೇವಲ ತ್ರಿಕೋನಮಿತಿಯ ಸೂತ್ರಗಳನ್ನು ಉಪಯೋಗಿಸುವ ಮೂಲಕ, ಒಂದು ಕಟ್ಟಡವನ್ನು ಸ್ವಲ್ಪವೂ ಸ್ಪರ್ಶಿಸದೆ ದೂರದಿಂದಲೇ ಅದರ ಎತ್ತರವನ್ನು ಹೇಗೆ ಅಳೆಯಬಹುದೆಂಬುದನ್ನು ಅವರು ತೋರಿಸಿದರು. ‘ಅಬ್ಬ! ಎಷ್ಟು ಅದ್ಭುತ!’ ಎಂದು ನಾನು ಮನಸ್ಸಿನಲ್ಲೇ ಅಂದುಕೊಂಡದ್ದು ನನಗೆ ಈಗಲೂ ನೆನಪಿದೆ.”
ಉತ್ತರ ಇಂಗ್ಲೆಂಡಿನ ಪೌಲಿನ್ ತನ್ನ ಶಿಕ್ಷಕನಿಗೆ ಅರಿಕೆಮಾಡಿದ್ದು: “ನನಗೆ ಗಣಿತ ತುಂಬ ಕಷ್ಟವಾಗುತ್ತದೆ.” ಅವನು ಕೇಳಿದ್ದು: “ನೀನು ಹೆಚ್ಚು ಚೆನ್ನಾಗಿ ಕಲಿಯಲು ಬಯಸುತ್ತೀಯೊ? ನಾನು ಸಹಾಯಮಾಡುವೆ.” ಅವಳು ಮುಂದುವರಿಸಿ ಹೇಳುವುದು: “ಮುಂದಿನ ಕೆಲವು ತಿಂಗಳುಗಳಲ್ಲಿ, ಅವರು ನನಗೆ ಹೆಚ್ಚಿನ ಗಮನವನ್ನು ಕೊಟ್ಟರು. ಶಾಲಾ ಸಮಯದ ನಂತರವೂ ನನಗೆ ಸಹಾಯಮಾಡಿದರು. ಅವರಿಗೆ ನನ್ನ ಬಗ್ಗೆ ಚಿಂತೆಯಿದೆ, ನಾನು ಇದರಲ್ಲಿ ಯಶಸ್ಸು ಹೊಂದಬೇಕೆಂದು ಅವರು ಬಯಸುತ್ತಾರೆಂದು ನನಗೆ ತಿಳಿದಿತ್ತು. ಇದೇ ಸಂಗತಿ ನಾನು ಹೆಚ್ಚು ಕಷ್ಟಪಟ್ಟು ಕೆಲಸಮಾಡುವಂತೆ ಮಾಡಿತು, ಮತ್ತು ನಾನು ಅಭಿವೃದ್ಧಿಮಾಡಿದೆ.”
ತನ್ನ 30ರ ಪ್ರಾಯದಲ್ಲಿರುವ ಸ್ಕಾಟ್‌ಲೆಂಡ್‌ನ ಆ್ಯಂಜಿ ಎಂಬವಳು, ಅವಳ ಇತಿಹಾಸದ ಶಿಕ್ಷಕನಾದ ಶ್ರೀ. ಗ್ರಾಹಮ್‌ರನ್ನು ನೆನಪಿಸಿಕೊಳ್ಳುತ್ತಾಳೆ. “ಅವರು ಇತಿಹಾಸದ ಪಾಠಗಳನ್ನು ಎಷ್ಟು ಆಸಕ್ತಿದಾಯಕ ವಿಷಯವನ್ನಾಗಿ ಮಾಡಿದರು! ನಡೆದಂಥ ಘಟನೆಗಳನ್ನು ಅವರು ಒಂದು ಕಥೆಯಂತೆ ವರ್ಣಿಸುತ್ತಿದ್ದರು, ಮತ್ತು ಪ್ರತಿಯೊಂದು ವಿಷಯದ ಬಗ್ಗೆ ನಿಜವಾಗಿ ಉತ್ಸಾಹಿಗಳಾಗಿದ್ದರು. ಅದೆಲ್ಲವೂ ನಮ್ಮ ಕಣ್ಮುಂದೆಯೇ ನಡೆಯುತ್ತಿದೆಯೊ ಎಂಬಂತೆ ಅವರು ವಿವರಿಸುತ್ತಿದ್ದರು.” ಅವಳು ತನ್ನ ಮೊದಲನೆಯ ತರಗತಿಯ, ವಯಸ್ಸಾದ ಶಿಕ್ಷಕಿ ಶ್ರೀಮತಿ ಹೆವಿಟ್‌ರನ್ನೂ ಅಕ್ಕರೆಯಿಂದ ಜ್ಞಾಪಿಸಿಕೊಳ್ಳುತ್ತಾಳೆ. “ಅವರು ತುಂಬ ದಯಾಪರರೂ, ಕಾಳಜಿವಹಿಸುವವರೂ ಆಗಿದ್ದರು. ಒಂದು ದಿನ ತರಗತಿಯಲ್ಲಿ, ನಾನು ಅವರ ಬಳಿ ಒಂದು ಪ್ರಶ್ನೆಯನ್ನು ಕೇಳಲು ಹೋದೆ. ಅವರು ನನ್ನನ್ನು ಬಾಚಿ ತಬ್ಬಿಕೊಂಡರು. ಅವರು ನಿಜವಾಗಿಯೂ ನನ್ನ ಬಗ್ಗೆ ಕಾಳಜಿವಹಿಸುತ್ತಾರೆಂಬ ಭಾವನೆಯನ್ನು ನನ್ನಲ್ಲಿ ಮೂಡಿಸಿದರು.”
ದಕ್ಷಿಣ ಗ್ರೀಸ್‌ನಿಂದ ಬಂದಿರುವ ತಿಮಥಿಯು ತನ್ನ ಗಣ್ಯತೆಯನ್ನು ವ್ಯಕ್ತಪಡಿಸಿದನು. “ನನಗಿನ್ನೂ ನನ್ನ ವಿಜ್ಞಾನ ಶಿಕ್ಷಕರ ನೆನಪಿದೆ. ಅವರು, ನನ್ನ ಸುತ್ತಲಿನ ಜಗತ್ತು ಮತ್ತು ಜೀವನದ ಕುರಿತಾದ ನನ್ನ ನೋಟವನ್ನೇ ಸದಾಕಾಲಕ್ಕೂ ಬದಲಾಯಿಸಿಬಿಟ್ಟರು. ಅವರು ತರಗತಿಯಲ್ಲಿ ಭಯಾಶ್ಚರ್ಯ ಹಾಗೂ ವಿಸ್ಮಯದ ಲೋಕವನ್ನು ಸೃಷ್ಟಿಸುತ್ತಿದ್ದರು. ಅವರು ನಮ್ಮಲ್ಲಿ ಜ್ಞಾನದ ಹುಚ್ಚು ಮತ್ತು ತಿಳಿವಳಿಕೆಯ ಒಲವನ್ನು ತುಂಬಿಸಿದರು.”
ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ರಮೋನ ಎಂಬವಳು ಇನ್ನೊಂದು ಉದಾಹರಣೆಯಾಗಿದ್ದಾಳೆ. ಅವಳು ಹೀಗೆ ಬರೆಯುತ್ತಾಳೆ: “ನನ್ನ ಪ್ರೌಢ ಶಾಲೆಯ ಶಿಕ್ಷಕಿಯು ಇಂಗ್ಲಿಷ್ ಭಾಷೆಯನ್ನು ತುಂಬ ಪ್ರೀತಿಸುತ್ತಿದ್ದರು. ಅವರ ಹುರುಪು ಎಲ್ಲರಿಗೂ ಅಂಟುವಂಥದ್ದಾಗಿತ್ತು. ಕಷ್ಟಕರವಾದ ವಿಷಯಗಳನ್ನೂ ಅವರು ಸುಲಭವನ್ನಾಗಿ ಮಾಡುತ್ತಿದ್ದರು.”
ಕೆನಡದ ಜೇನ್ ಎಂಬವಳು, ತನ್ನ ವ್ಯಾಯಾಮ ಶಿಕ್ಷಕರ ಬಗ್ಗೆ ಉತ್ಸಾಹದಿಂದ ಮಾತಾಡಿದಳು. “ಅವರ ಬಳಿ ಮನೋರಂಜನೆ ಹಾಗೂ ಕಲಿಕೆಯ ಬಗ್ಗೆ ಅನೇಕಾನೇಕ ಯೋಜನೆಗಳಿರುತ್ತಿದ್ದವು. ನಮ್ಮನ್ನು ದೊಡ್ಡ ದೊಡ್ಡ ಆಟದ ಬಯಲುಗಳಿಗೆ ಒಯ್ದು, ಕ್ರಾಸ್‌ಕಂಟ್ರಿ ಸ್ಕೀಇಂಗ್ ಹಾಗೂ ಐಸ್ ಫಿಶಿಂಗ್ ಅನ್ನು ಮೊದಲು ಪರಿಚಯಿಸಿದವರೂ ಅವರೇ. ನಾವೇ ಕಟ್ಟಿದಂಥ ಒಂದು
ಶಿಬಿರಾಗ್ನಿಯ ಮೇಲೆ, ಬಾನಾಕ್ ಎಂಬ ಒಂದು ವಿಧದ ಇಂಡಿಯನ್ ರೊಟ್ಟಿಯನ್ನು ನಾವು ತಯಾರಿಸಿದೆವು. ಸಾಮಾನ್ಯವಾಗಿ ಮನೆಯೊಳಗೇ ಇದ್ದು, ಯಾವಾಗಲೂ ಪುಸ್ತಕಗಳ ರಾಶಿಯಲ್ಲೇ ಮುಳುಗಿರುತ್ತಿದ್ದ ನನ್ನಂಥ ಹುಡುಗಿಗೆ ಇದೊಂದು ಅದ್ಭುತ ಅನುಭವವಾಗಿತ್ತು!”ಹೆಲೆನ್ ಎಂಬವಳು, ಶಾಂಘೈನಲ್ಲಿ ಹುಟ್ಟಿ, ಹಾಂಗ್‌ಕಾಂಗ್‌ನಲ್ಲಿ ಶಾಲೆಗೆ ಹೋದ ಒಬ್ಬ ನಾಚಿಕೆ ಸ್ವಭಾವದ ಸ್ತ್ರೀಯಾಗಿದ್ದಾಳೆ. ಅವಳು ಜ್ಞಾಪಿಸಿಕೊಳ್ಳುವುದು: “ಐದನೇ ತರಗತಿಯಲ್ಲಿ, ನನಗೆ ಶ್ರೀ. ಚ್ಯಾನ್ ಎಂಬ ಶಿಕ್ಷಕರಿದ್ದರು. ಅವರು ನಮಗೆ ವ್ಯಾಯಾಮ ಶಿಕ್ಷಣ ಮತ್ತು ಚಿತ್ರಕಲೆಯನ್ನು ಕಲಿಸುತ್ತಿದ್ದರು. ನನ್ನ ಮೈಕಟ್ಟು ಸಣಕಲಾಗಿದ್ದದ್ದರಿಂದ ನಾನು ವಾಲಿಬಾಲ್ ಮತ್ತು ಬಾಸ್ಕೆಟ್‌ಬಾಲ್ ಆಡುವುದರಲ್ಲಿ ತುಂಬ ಹಿಂದಿದ್ದೆ. ಅವರು ನನ್ನನ್ನು ಮುಜುಗರಕ್ಕೀಡುಮಾಡಲಿಲ್ಲ. ನನಗೆ ಸರಿಹೊಂದುತ್ತಿದ್ದ ಬಾಡ್ಮಿನ್‌ಟನ್ ಮತ್ತು ಇತರ ಆಟಗಳನ್ನು ಆಡುವಂತೆ ಅವರು ಅನುಮತಿಸುತ್ತಿದ್ದರು. ಅವರು ವಿಚಾರಪರರೂ ದಯಾಪರರೂ ಆಗಿದ್ದರು.
“ಚಿತ್ರಕಲೆಯಲ್ಲೂ ಹೀಗೆಯೇ ಆಯಿತು. ನಾನು ವಸ್ತುಗಳ ಇಲ್ಲವೇ ಜನರ ಚಿತ್ರಬಿಡಿಸುವುದರಲ್ಲಿ ನಿಪುಣೆಯಾಗಿರಲಿಲ್ಲ. ಆದುದರಿಂದ ಅವರು, ನನಗೆ ಸಹಜ ಸಾಮರ್ಥ್ಯವಿದ್ದ ನಮೂನೆಗಳನ್ನೂ ವಿನ್ಯಾಸಗಳನ್ನೂ ಬಿಡಿಸುವಂತೆ ಅನುಮತಿಸುತ್ತಿದ್ದರು. ನಾನು ಬೇರೆ ವಿದ್ಯಾರ್ಥಿಗಳಿಗಿಂತ ಚಿಕ್ಕವಳಾಗಿದ್ದರಿಂದ, ನಾನು ಅದೇ ತರಗತಿಯಲ್ಲಿ ಇನ್ನೊಂದು ವರ್ಷ ಇರುವಂತೆ ಮನವೊಪ್ಪಿಸಿದರು. ಅದು ನನ್ನ ಶಾಲಾ ತರಬೇತಿಯಲ್ಲಿ ಒಂದು ತಿರುಗು ಬಿಂದು ಆಗಿತ್ತು. ನಾನು ಆತ್ಮವಿಶ್ವಾಸವನ್ನು ಪಡೆದುಕೊಂಡು, ಪ್ರಗತಿಮಾಡಿದೆ. ನಾನು ಅವರಿಗೆ ಸದಾ ಆಭಾರಿಯಾಗಿರುವೆ.”
ಯಾವ ರೀತಿಯ ಶಿಕ್ಷಕರು ಬಹಳಷ್ಟು ಪ್ರಭಾವವನ್ನು ಬೀರುತ್ತಾರೆ? ಕಲಿಸಲಿಕ್ಕಾಗಿ—ಒಬ್ಬ ಶಿಕ್ಷಕನ ಪ್ರಯಾಣ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ವಿಲ್ಯಮ್ ಏಯರ್ಸ್ ಉತ್ತರಿಸುವುದು: “ಪರಿಣಾಮಕಾರಿಯಾದ ಕಲಿಸುವಿಕೆಯಲ್ಲಿ ಎಲ್ಲಕ್ಕಿಂತಲೂ ಮುಖ್ಯವಾಗಿ, ವಿದ್ಯಾರ್ಥಿಗಳ ಜೀವನಗಳಿಗೆ ತನ್ನನ್ನೇ ಮುಡಿಪಾಗಿಟ್ಟುಕೊಂಡಿರುವ ಪರಹಿತಚಿಂತನೆಯುಳ್ಳ, ಒಲವುಳ್ಳ ಶಿಕ್ಷಕನ ಆವಶ್ಯಕತೆಯಿದೆ. . . . ಪರಿಣಾಮಕಾರಿ ಕಲಿಸುವಿಕೆಯಲ್ಲಿ ನಿರ್ದಿಷ್ಟ ವಿಧಾನಗಳು ಇಲ್ಲವೇ ಶೈಲಿಗಳು, ಯೋಜನೆಗಳು ಇಲ್ಲವೇ ಕ್ರಿಯೆಗಳು ಪ್ರಮುಖ ಸಂಗತಿಗಳಲ್ಲ . . . ಕಲಿಸುವಿಕೆಯಲ್ಲಿ ಪ್ರಮುಖ ಸಂಗತಿಯು ಪ್ರೀತಿಯಾಗಿದೆ.” ಆದುದರಿಂದ, ಯಾರನ್ನು ಒಬ್ಬ ಯಶಸ್ವಿ ಶಿಕ್ಷಕ ಎಂದು ಕರೆಯಸಾಧ್ಯವಿದೆ? ಅವರು ಹೇಳುವುದು: “ನಿಮ್ಮ ಮನಮುಟ್ಟಿದ್ದ ಶಿಕ್ಷಕ, ನಿಮ್ಮನ್ನು ಅರ್ಥಮಾಡಿಕೊಂಡ ಇಲ್ಲವೇ ಒಬ್ಬ ವ್ಯಕ್ತಿಯೋಪಾದಿ ನಿಮ್ಮ ಬಗ್ಗೆ ಕಾಳಜಿವಹಿಸಿದ ಶಿಕ್ಷಕ, ಸಂಗೀತವಾಗಿರಲಿ, ಗಣಿತವಾಗಿರಲಿ, ಲ್ಯಾಟಿನ್ ಭಾಷೆಯಾಗಿರಲಿ, ಗಾಳಿಪಟಗಳಾಗಿರಲಿ ಹೀಗೆ ಯಾವುದೇ ವಿಷಯವಾಗಿರಲಿ, ಅದಕ್ಕಾಗಿದ್ದ ಅವರ ಉತ್ಸಾಹವು ಎಲ್ಲರಿಗೂ ತಟ್ಟುವಂಥದ್ದೂ ಸ್ಫೂರ್ತಿದಾಯಕವೂ ಆಗಿದ್ದ ಶಿಕ್ಷಕರೇ.”
ನಿಸ್ಸಂದೇಹವಾಗಿ, ಅನೇಕ ಶಿಕ್ಷಕರು ವಿದ್ಯಾರ್ಥಿಗಳಿಂದಲೂ ಹೆತ್ತವರಿಂದಲೂ ಗಣ್ಯತೆಯ ಮಾತುಗಳನ್ನು ಕೇಳಿಸಿಕೊಂಡಿದ್ದಾರೆ ಮತ್ತು ಹೀಗೆ ತೊಂದರೆಗಳ ಎದುರಿನಲ್ಲೂ ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯುವಂತೆ ಉತ್ತೇಜಿಸಲ್ಪಟ್ಟಿದ್ದಾರೆ. ಈ ಎಲ್ಲಾ ಹೇಳಿಕೆಗಳಲ್ಲಿ ಒಂದು ಮುಖ್ಯ ಅಂಶವು, ಶಿಕ್ಷಕನು/ಶಿಕ್ಷಕಿಯು ವಿದ್ಯಾರ್ಥಿಯ ಕಡೆಗೆ ತೋರಿಸಿದ ನಿಜವಾದ ಆಸಕ್ತಿ ಮತ್ತು ದಯೆಯೇ ಆಗಿದೆ.
ಎಲ್ಲ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಕಡೆಗೆ ಇಂಥ ಗುಣಗಳನ್ನು ಪ್ರದರ್ಶಿಸುವುದಿಲ್ಲ ಎಂಬುದೇನೋ ನಿಜ. ಆದರೆ ನಾವು ಇದನ್ನೂ ನೆನಪಿನಲ್ಲಿಡಬೇಕು, ಏನೆಂದರೆ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗಾಗಿ ಮಾಡಬಹುದಾದ ಸಂಗತಿಗಳನ್ನು ನಿರ್ಬಂಧಿಸುವ ಹಲವಾರು ಒತ್ತಡಗಳಿಗೆ ಅನೇಕವೇಳೆ ತುತ್ತಾಗುತ್ತಾರೆ. ಇದು ನಮ್ಮನ್ನು ಈ ಪ್ರಶ್ನೆಗೆ ನಡೆಸುತ್ತದೆ: ಈ ಕಷ್ಟಕರವಾದ ವೃತ್ತಿಯನ್ನು ಜನರು ಏಕೆ ಆಯ್ಕೆಮಾಡುತ್ತಾರೆ? (g02 3/8)
[ಪುಟ 4ರಲ್ಲಿರುವ ಚಿತ್ರ]
“ಕಲಿಸುವಿಕೆಯಲ್ಲಿ ಪ್ರಮುಖ ಸಂಗತಿಯು ಪ್ರೀತಿಯಾಗಿದೆ”