ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಕ್ಷಕ ವೃತ್ತಿ ಕಷ್ಟನಷ್ಟಗಳು

ಶಿಕ್ಷಕ ವೃತ್ತಿ ಕಷ್ಟನಷ್ಟಗಳು

ಶಿಕ್ಷಕ ವೃತ್ತಿ ಕಷ್ಟನಷ್ಟಗಳು

“ಶಿಕ್ಷಕ ವೃತ್ತಿಯಿಂದ ಬಹಳಷ್ಟನ್ನು ನಿರೀಕ್ಷಿಸಲಾಗುತ್ತದೆ, ಆದರೆ ಹೆಚ್ಚಾಗಿ ನಮ್ಮ ಶಾಲೆಗಳಲ್ಲಿ ಸಮರ್ಪಣಾಭಾವದಿಂದ ಕೆಲಸಮಾಡುತ್ತಿರುವ ಶಿಕ್ಷಕರಿಗೆ, ತಮ್ಮ ಪ್ರಯಾಸಕ್ಕಾಗಿ ಸಿಗುವ ಬಹಿರಂಗ . . . ಪ್ರಶಂಸೆಯಾದರೊ ತೀರ ಕಡಿಮೆ.” ​—⁠ಕೆನ್‌ ಎಲ್ಟಿಸ್‌, ಸಿಡ್ನಿ ವಿಶ್ವವಿದ್ಯಾನಿಲಯ, ಆಸ್ಟ್ರೇಲಿಯ.

“ಅತೀ ಮಹತ್ವಪೂರ್ಣ ವೃತ್ತಿ” ಎಂದು ಯಾವುದನ್ನು ಕರೆಯಲಾಗುತ್ತದೊ ಆ ವೃತ್ತಿಯಲ್ಲೇ ಅನೇಕ ಸಮಸ್ಯೆಗಳು ಒಳಗೂಡಿವೆಯೆಂಬುದನ್ನು ಒಪ್ಪಬೇಕಾಗುತ್ತದೆ. ಆ ಸಮಸ್ಯೆಗಳಲ್ಲಿ ಕೆಲವು, ಕಡಿಮೆ ಸಂಬಳ, ತರಗತಿ ಕೋಣೆಗಳ ಹೀನ ಸ್ಥಿತಿ, ವಿಪರೀತವಾದ ಲೇಖನಿ ಕೆಲಸ, ವಿದ್ಯಾರ್ಥಿಗಳಿಂದ ತುಂಬಿತುಳುಕುತ್ತಿರುವ ತರಗತಿಗಳು, ವಿದ್ಯಾರ್ಥಿಗಳು ತೋರಿಸುವ ಅಗೌರವ, ಹಾಗೂ ಹೆತ್ತವರ ಅನಾಸಕ್ತಿ ಇನ್ನು ಮುಂತಾದವುಗಳೇ ಆಗಿವೆ. ಕೆಲವು ಶಿಕ್ಷಕರು ಇಂಥ ಸಮಸ್ಯೆಗಳನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ?

ಗೌರವದ ಕೊರತೆ

ನ್ಯೂ ಯಾರ್ಕ್‌ ಸಿಟಿಯಲ್ಲಿರುವ ನಾಲ್ಕು ಶಿಕ್ಷಕರು, ಯಾವುದನ್ನು ಅತಿ ದೊಡ್ಡ ಸಮಸ್ಯೆಗಳೆಂದು ಪರಿಗಣಿಸುತ್ತಾರೆಂದು ಅವರನ್ನೇ ಕೇಳಿದೆವು. ಅವರು ಒಂದೇ ಕಂಠದಿಂದಲೊ ಎಂಬಂತೆ, “ಅಗೌರವ” ಎಂದು ಉತ್ತರಿಸಿದರು.

ಕೆನ್ಯದ ವಿಲ್ಯಮ್‌ರವರಿಗನುಸಾರ, ಈ ವಿಷಯದಲ್ಲಿ ಆಫ್ರಿಕದಲ್ಲೂ ಬದಲಾವಣೆಗಳಾಗಿವೆ. ಅವರಂದದ್ದು: “ಮಕ್ಕಳ ನಡುವಿನ ಶಿಸ್ತು ಇಳಿಮುಖವಾಗುತ್ತಾ ಇದೆ. ನಾನು ದೊಡ್ಡವನಾಗುತ್ತಿದ್ದಾಗ [ಈಗ ಅವರು 40ರ ಪ್ರಾಯದಲ್ಲಿದ್ದಾರೆ] ಆಫ್ರಿಕನ್‌ ಸಮಾಜದಲ್ಲಿ ಶಿಕ್ಷಕರೇ ಅತಿ ಗೌರವಾನ್ವಿತ ಜನರಾಗಿದ್ದರು. ಹಿರಿಯರೂ ಕಿರಿಯರೂ ಎಲ್ಲರೂ ಶಿಕ್ಷಕರನ್ನು ತಮ್ಮ ಆದರ್ಶ ವ್ಯಕ್ತಿಯಾಗಿ ಪರಿಗಣಿಸುತ್ತಿದ್ದರು. ಈ ರೀತಿಯ ಗೌರವವು ಈಗ ತಗ್ಗುತ್ತಾ ಇದೆ. ಪಾಶ್ಚಾತ್ಯ ಸಂಸ್ಕೃತಿಯು ಎಳೆಯರನ್ನು, ಅದು ಕೂಡ ಗ್ರಾಮೀಣ ಆಫ್ರಿಕದಲ್ಲಿ ಮೆಲ್ಲಮೆಲ್ಲನೆ ಪ್ರಭಾವಿಸುತ್ತಿದೆ. ಚಲನ ಚಿತ್ರಗಳು, ವಿಡಿಯೋಗಳು ಮತ್ತು ಸಾಹಿತ್ಯದಲ್ಲಿ, ಅಧಿಕಾರಕ್ಕಾಗಿ ಅಗೌರವವನ್ನು ತೋರಿಸುವುದನ್ನು ಒಂದು ವೀರ ಕೃತ್ಯದೋಪಾದಿ ಚಿತ್ರಿಸಲಾಗುತ್ತಿದೆ.”

ಇಟಲಿಯಲ್ಲಿ ಕಲಿಸುತ್ತಿರುವ ಜುಲ್ಯಾನೊ ಎಂಬವರು ಪ್ರಲಾಪಿಸುವುದು: “ಇಡೀ ಸಮಾಜದಲ್ಲೇ ಹರಿಯುತ್ತಿರುವ ಪ್ರತಿಭಟನಾತ್ಮಕ, ಉದ್ಧಟ ಹಾಗೂ ಅವಿಧೇಯ ಆತ್ಮದಿಂದ ಮಕ್ಕಳು ಪ್ರಭಾವಿಸಲ್ಪಟ್ಟಿದ್ದಾರೆ.”

ಮಾದಕ ವಸ್ತುಗಳು ಹಾಗೂ ಹಿಂಸಾಚಾರ

ದುಃಖಕರವಾದ ಸಂಗತಿಯೇನೆಂದರೆ, ಮಾದಕವಸ್ತುಗಳು ಶಾಲೆಗಳಲ್ಲಿ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿವೆ. ಎಷ್ಟೆಂದರೆ, ಅಮೆರಿಕದಲ್ಲಿ ಶಿಕ್ಷಕರೂ ಲೇಖಕರೂ ಆಗಿರುವ ಲೂಆನ್‌ ಜಾನ್ಸನ್‌ ಬರೆಯುವುದು: “ಶಿಶುವಿಹಾರದಲ್ಲೇ ಆರಂಭಿಸುತ್ತಾ, ಬಹುಮಟ್ಟಿಗೆ ಪ್ರತಿಯೊಂದು ಶಾಲೆಯ ಪಠ್ಯಕ್ರಮದಲ್ಲಿ ಮಾದಕವಸ್ತುಗಳ ದುರ್ಬಳಕೆಯ ನಿವಾರಣೆ ಎಂಬ ವಿಷಯವು ಒಂದು ಭಾಗವಾಗಿದೆ. [ಓರೆ ಅಕ್ಷರಗಳು ನಮ್ಮವು.] ಹೆಚ್ಚಿನ ವಯಸ್ಕರಿಗಿಂತಲೂ . . . ಮಕ್ಕಳಿಗೆ ಮಾದಕ ವಸ್ತುಗಳ ಬಗ್ಗೆ ಹೆಚ್ಚು ತಿಳಿದಿದೆ.” ಅವರು ಕೂಡಿಸಿದ್ದು: “ಆತ್ಮವಿಶ್ವಾಸವಿಲ್ಲದ, ತಮ್ಮನ್ನು ಯಾರೂ ಪ್ರೀತಿಸುವುದಿಲ್ಲವೆಂಬ ಭಾವನೆಯಿರುವ, ಏಕಾಂಗಿತನ, ಬೇಸರ ಇಲ್ಲವೇ ಅಸುರಕ್ಷತೆಯ ಅನಿಸಿಕೆಗಳಿರುವ ವಿದ್ಯಾರ್ಥಿಗಳೇ, ಮಾದಕ ವಸ್ತುಗಳೊಂದಿಗೆ ಪ್ರಯೋಗ ನಡೆಸುವುದರ ಹೆಚ್ಚಿನ ಸಂಭಾವ್ಯತೆ ಇದೆ.”​—⁠ಎರಡು ಭಾಗ ಪಠ್ಯಪುಸ್ತಕ, ಒಂದು ಭಾಗ ಪ್ರೀತಿ (ಇಂಗ್ಲಿಷ್‌).

ಆಸ್ಟ್ರೇಲಿಯದಲ್ಲಿ ಒಬ್ಬ ಶಿಕ್ಷಕರಾಗಿರುವ ಕೆನ್‌ ಎಂಬವರು ಕೇಳಿದ್ದು: “ತನ್ನ ಸ್ವಂತ ಹೆತ್ತವರಿಂದಲೇ ಮಾದಕ ವಸ್ತುಗಳಿಗೆ ಪರಿಚಯಿಸಲ್ಪಟ್ಟ ಮತ್ತು ಈಗ ಅದಕ್ಕೆ ವ್ಯಸನಿಯಾಗಿಬಿಟ್ಟಿರುವ ಒಂಬತ್ತು ವರ್ಷ ಪ್ರಾಯದ ಹುಡುಗನೊಬ್ಬನಿಗೆ ಶಿಕ್ಷಕರಾದ ನಾವು ಹೇಗೆ ತಾನೇ ಕಲಿಸಬಹುದು?” ತನ್ನ 30ರ ಪ್ರಾಯದಲ್ಲಿರುವ ಮೀಕಾಯೇಲ್‌, ಜರ್ಮನಿಯಲ್ಲಿ ವಿವಿಧೋದ್ದೇಶದ ಒಂದು ಪ್ರೌಢ ಶಾಲೆಯಲ್ಲಿ ಕಲಿಸುತ್ತಾರೆ. ಅವರು ಬರೆದುದು: “ಶಾಲೆಗಳಲ್ಲಿ ಮಾದಕ ವಸ್ತುಗಳ ಖರೀದಿ ಮತ್ತು ಮಾರಾಟವು ನಡೆಯುತ್ತಿದೆಯೆಂದು ನಮಗೆ ಚೆನ್ನಾಗಿ ತಿಳಿದಿದೆ, ಆದರೆ ಅದನ್ನು ತೀರ ಅಪರೂಪವಾಗಿ ಬಯಲಿಗೆ ತರಲಾಗುತ್ತದೆ.” ಶಿಸ್ತಿನ ಕೊರತೆಯ ಬಗ್ಗೆಯೂ ಅವರು ಮಾತಾಡುತ್ತಾರೆ ಮತ್ತು ಇದು “ಸರ್ವಸಾಮಾನ್ಯವಾಗಿರುವ ವಿನಾಶಕಾರಕ ಪ್ರವೃತ್ತಿಯಲ್ಲಿ ತೋರಿಬರುತ್ತದೆ” ಎಂದು ಹೇಳುತ್ತಾರೆ. ಅವರು ಮುಂದುವರಿಸುತ್ತಾ ಹೇಳುವುದು: “ಡೆಸ್ಕುಗಳ ಮೇಲೂ ಗೋಡೆಗಳ ಮೇಲೂ ಏನೇನನ್ನೊ ಅಂಟಿಸಲಾಗುತ್ತದೆ ಮತ್ತು ಪೀಠೋಪಕರಣವನ್ನು ಹಾನಿಗೊಳಿಸಲಾಗುತ್ತದೆ. ನನ್ನ ವಿದ್ಯಾರ್ಥಿಗಳಲ್ಲಿ ಕೆಲವರನ್ನು ಅಂಗಡಿ ಕಳ್ಳತನ ಅಥವಾ ತದ್ರೀತಿಯ ಅಪರಾಧಗಳಿಗಾಗಿ ಪೊಲೀಸರು ಹಿಡಿದಿದ್ದಾರೆ ಇಲ್ಲವೇ ಅವರನ್ನು ವಿಚಾರಣೆಗೊಳಪಡಿಸಲಾಗಿದೆ. ಶಾಲೆಯಲ್ಲೂ ಕಳ್ಳತನಗಳು ಆಗುತ್ತಾ ಇರುವುದರಲ್ಲಿ ಏನೂ ಅಚ್ಚರಿಯಿಲ್ಲ!”

ಅಮೀರಾ ಎಂಬವರು ಮೆಕ್ಸಿಕೊದ ಗುಆನಾಜುಆಟೊ ರಾಜ್ಯದಲ್ಲಿ ಕಲಿಸುತ್ತಾರೆ. ಅವರು ಒಪ್ಪಿಕೊಳ್ಳುವುದು: “ಮಕ್ಕಳ ಮೇಲೆ ನೇರವಾಗಿ ಪ್ರಭಾವ ಬೀರುವ, ಕುಟುಂಬದಲ್ಲಿನ ಹಿಂಸಾಚಾರ ಹಾಗೂ ಮಾದಕ ವಸ್ತುಗಳ ಚಟದಂಥ ಸಮಸ್ಯೆಗಳನ್ನು ನಾವು ಎದುರಿಸುತ್ತೇವೆ. ಈ ಮಕ್ಕಳು, ಹೊಲಸು ಮಾತು ಮತ್ತು ಇನ್ನಿತರ ಕೆಟ್ಟ ಚಾಳಿಗಳನ್ನು ಕಲಿಯುವಂಥ ಪರಿಸರದಲ್ಲೇ ಮುಳುಗಿರುತ್ತಾರೆ. ಬಡತನವು ಇನ್ನೊಂದು ದೊಡ್ಡ ಸಮಸ್ಯೆಯಾಗಿದೆ. ಇಲ್ಲಿ ಶಾಲಾ ಶಿಕ್ಷಣವು ಉಚಿತವಾಗಿದೆಯಾದರೂ, ಹೆತ್ತವರು ನೋಟ್‌ಬುಕ್‌ಗಳನ್ನು, ಪೆನ್‌ಗಳನ್ನು ಮತ್ತು ಇತರ ಸಾಮಗ್ರಿಗಳನ್ನು ಖರೀದಿಸಬೇಕು. ಆದರೆ ಎಲ್ಲಕ್ಕಿಂತಲೂ ಮುಖ್ಯವಾಗಿ ಅವರು ಊಟವನ್ನು ಕೊಡಬೇಕು.”

ಶಾಲೆಯಲ್ಲಿ ಬಂದೂಕುಗಳೊ?

ಅಮೆರಿಕದಲ್ಲಿ ಇತ್ತೀಚೆಗೆ ಶಾಲೆಗಳಲ್ಲಿ ನಡೆದಿರುವ ಗುಂಡೇಟಿನ ಪ್ರಸಂಗಗಳು, ಬಂದೂಕು ಸಂಬಂಧಿತ ಹಿಂಸಾಚಾರವು ಆ ದೇಶದಲ್ಲಿ ಒಂದು ಚಿಕ್ಕ ಸಮಸ್ಯೆಯಲ್ಲವೆಂಬುದನ್ನು ಎತ್ತಿತೋರಿಸುತ್ತವೆ. ಒಂದು ವರದಿಯು ಹೇಳುವುದು: “ಪ್ರತಿ ದಿನ ಆ ದೇಶದ 87,125 ಸಾರ್ವಜನಿಕ ಶಾಲೆಗಳಲ್ಲಿ 1,35,000 ಬಂದೂಕುಗಳನ್ನು ತರಲಾಗುತ್ತದೆಂದು ಅಂದಾಜುಮಾಡಲಾಗುತ್ತದೆ. ಶಾಲೆಗಳೊಳಗೆ ತರಲಾಗುವ ಬಂದೂಕುಗಳ ಸಂಖ್ಯೆಗಳನ್ನು ಕಡಿಮೆಗೊಳಿಸಲು, ಮೆಟಲ್‌ ಡಿಟೆಕ್ಟರ್‌ಗಳು, ಸರ್ವೇಲೆನ್ಸ್‌ ಕ್ಯಾಮೆರಗಳು, ಮೂಸಿ ನೋಡಿ ಬಂದೂಕುಗಳನ್ನು ಪತ್ತೆಹಚ್ಚಲಿಕ್ಕಾಗಿ ವಿಶೇಷವಾಗಿ ತರಬೇತಿಗೊಳಿಸಲ್ಪಟ್ಟಿರುವ ನಾಯಿಗಳು, ಲಾಕರ್‌ಗಳ ತಪಾಸಣೆಗಳು, ಐಡೆಂಟಿಟಿ ಕಾರ್ಡುಗಳನ್ನು ಮತ್ತು ಬ್ರೀಫ್‌ಕೇಸ್‌ಗಳನ್ನು ಶಾಲೆಗೆ ತರುವುದರ ಮೇಲೆ ನಿಷೇಧದಂಥ ಕ್ರಮಗಳನ್ನು ಅಧಿಕಾರಿಗಳು ಬಳಸುತ್ತಿದ್ದಾರೆ.” (ಅಮೆರಿಕದಲ್ಲಿ ಕಲಿಸುವುದು) ಈ ಎಲ್ಲ ಭದ್ರತಾ ಕ್ರಮಗಳು, ನಾವು ಶಾಲೆಗಳ ಕುರಿತಾಗಿ ಮಾತಾಡುತ್ತಿದ್ದೇವೊ, ಸೆರೆಮನೆಗಳ ಬಗ್ಗೆ ಮಾತಾಡುತ್ತಿದ್ದೇವೊ ಎಂದು ಕೇಳುವಂತೆ ಮಾಡುತ್ತವೆ. ಶಾಲೆಗೆ ಬಂದೂಕುಗಳನ್ನು ತೆಗೆದುಕೊಂಡು ಹೋದದ್ದಕ್ಕಾಗಿ 6,000ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಲಾಗಿದೆಯೆಂದು ಆ ವರದಿಯು ಕೂಡಿಸುತ್ತದೆ!

ನ್ಯೂ ಯಾರ್ಕ್‌ ಸಿಟಿಯ ಐರಿಸ್‌ ಎಂಬ ಶಿಕ್ಷಕರೊಬ್ಬರು ಎಚ್ಚರ! ಪತ್ರಿಕೆಗೆ ಹೀಗಂದರು: “ವಿದ್ಯಾರ್ಥಿಗಳು ಆಯುಧಗಳನ್ನು ಕಳ್ಳತನದಿಂದ ಶಾಲೆಗಳೊಳಗೆ ತರುತ್ತಾರೆ. ಮೆಟಲ್‌ ಡಿಟೆಕ್ಟರ್‌ಗಳು ಆ ಆಯುಧಗಳನ್ನು ಶಾಲೆಯಿಂದ ಹೊರಗಿರಿಸಲಾರವು. ಶಾಲೆಯಲ್ಲಿ ಪುಂಡಾಟವು ಇನ್ನೊಂದು ದೊಡ್ಡ ಸಮಸ್ಯೆಯಾಗಿದೆ.”

ಆರಾಜಕತೆಯ ಈ ಪರಿಸರದಲ್ಲಿ, ನ್ಯಾಯನಿಷ್ಠ ಶಿಕ್ಷಕರು ವಿದ್ಯೆ ಹಾಗೂ ಮೌಲ್ಯಗಳನ್ನು ತುಂಬಿಸಲು ಹೆಣಗಾಡುತ್ತಾರೆ. ಹೀಗಿರುವುದರಿಂದ, ಅನೇಕ ಶಿಕ್ಷಕರು ಖಿನ್ನಾವಸ್ಥೆಗೆ ತುತ್ತಾಗುವುದು ಮತ್ತು ವಿಪರೀತ ಕೆಲಸದಿಂದಾಗಿ ನಿತ್ರಾಣರಾಗುವುದು ಅಚ್ಚರಿಯ ಸಂಗತಿಯೇನಲ್ಲ. ಜರ್ಮನಿಯ ಥುರಿಂಗ್ಯದಲ್ಲಿರುವ ಶಿಕ್ಷಕ ಸಂಘದ ಅಧ್ಯಕ್ಷರಾಗಿರುವ ರೊಲ್ಫ್‌ ಬುಶ್‌ ಹೇಳಿದ್ದು: “ಜರ್ಮನಿಯಲ್ಲಿರುವ ಹತ್ತು ಲಕ್ಷ ಶಿಕ್ಷಕರಲ್ಲಿ ಬಹುಮಟ್ಟಿಗೆ ಮೂರರಲ್ಲೊಂದಂಶ ಮಾನಸಿಕ ಒತ್ತಡದಿಂದ ಅಸ್ವಸ್ಥರಾಗುತ್ತಾರೆ. ಅವರ ಉದ್ಯೋಗದಲ್ಲಿನ ವಿಪರೀತ ಕೆಲಸದಿಂದಾಗಿ ಅವರಿಗೆ ನಿತ್ರಾಣದ ಅನಿಸಿಕೆಯಾಗುತ್ತದೆ.”

ಮಕ್ಕಳಿರುವ ಮಕ್ಕಳು

ಇನ್ನೊಂದು ದೊಡ್ಡ ಸಮಸ್ಯೆಯು, ತರುಣಾವಸ್ಥೆಯ ಲೈಂಗಿಕ ಚಟುವಟಿಕೆಯಾಗಿದೆ. ಅಮೆರಿಕದಲ್ಲಿ ಕಲಿಸುವುದು (ಇಂಗ್ಲಿಷ್‌) ಎಂಬ ಪುಸ್ತಕದ ಲೇಖಕರಾದ ಜಾರ್ಜ್‌ ಎಸ್‌. ಮಾರಿಸನ್‌ರವರು ಆ ದೇಶದ ಬಗ್ಗೆ ಹೀಗನ್ನುತ್ತಾರೆ: “ಸುಮಾರು ಹತ್ತು ಲಕ್ಷ ಹದಿವಯಸ್ಕರು (15-19 ವರ್ಷ ಪ್ರಾಯದ ಹುಡುಗಿಯರಲ್ಲಿ 11 ಪ್ರತಿಶತ) ಪ್ರತಿ ವರ್ಷ ಗರ್ಭವತಿಯರಾಗುತ್ತಾರೆ.” ಅಭಿವೃದ್ಧಿಹೊಂದಿರುವ ಎಲ್ಲ ದೇಶಗಳ ಪೈಕಿ ಹದಿವಯಸ್ಕ ಗರ್ಭಧಾರಣೆಯ ಅತ್ಯುಚ್ಛ ಪ್ರಮಾಣ ಅಮೆರಿಕಕ್ಕಿದೆ.

ಈ ಸ್ಥಿತಿಯನ್ನು ಐರಿಸ್‌ ದೃಢೀಕರಿಸುತ್ತಾರೆ. ಅವರನ್ನುವುದು: “ಈ ತರುಣತರುಣಿಯರು ಮಾತಾಡುವುದೇ ಸೆಕ್ಸ್‌ ಮತ್ತು ಪಾರ್ಟಿಗಳ ಬಗ್ಗೆ ಅಷ್ಟೇ. ಅದೊಂದು ಗೀಳಾಗಿದೆ. ಮತ್ತು ಈಗ ಶಾಲೆಯ ಕಂಪ್ಯೂಟರ್‌ಗಳಲ್ಲಿ ಇಂಟರ್‌ನೆಟ್‌ ಕೂಡ ಇದೆ! ಇದರರ್ಥ ಈಗ ಚ್ಯಾಟ್‌ ಗುಂಪುಗಳು ಮತ್ತು ಅಶ್ಲೀಲ ಸಾಹಿತ್ಯ ಹಾಗೂ ಚಿತ್ರಗಳು ಸುಲಭವಾಗಿ ಲಭ್ಯವಾಗುವವು.” ಸ್ಪೆಯ್ನ್‌ ದೇಶದ ಮ್ಯಾಡ್ರಿಡ್‌ನ ಆಂಜಲ್‌ ವರದಿಸಿದ್ದು: “ಲೈಂಗಿಕ ಸ್ವೇಚ್ಛಾಚಾರವು ವಿದ್ಯಾರ್ಥಿಗಳ ನಡುವೆ ಜೀವನದ ವಾಸ್ತವಿಕತೆಯಾಗಿದೆ. ತುಂಬ ಎಳೆಯ ವಿದ್ಯಾರ್ಥಿಗಳು ಸಹ ಗರ್ಭವತಿಯರಾದ ಪ್ರಸಂಗಗಳೂ ನಮ್ಮಲ್ಲಿವೆ.”

“ವೈಭವೀಕರಿಸಲ್ಪಟ್ಟಿರುವ ಶಿಶುಪಾಲಕರು”

ಕೆಲವು ಶಿಕ್ಷಕರ ಇನ್ನೊಂದು ದೂರು ಏನೆಂದರೆ, ಅನೇಕ ಹೆತ್ತವರು ಮಕ್ಕಳಿಗೆ ಮನೆಯಲ್ಲಿ ಶಿಕ್ಷಣ ನೀಡುವ ತಮ್ಮ ಸ್ವಂತ ಜವಾಬ್ದಾರಿಯನ್ನು ನಿರ್ವಹಿಸುವುದಿಲ್ಲ ಎಂಬುದೇ. ಹೆತ್ತವರು ತಮ್ಮ ಮಕ್ಕಳ ಮೊತ್ತಮೊದಲ ಶಿಕ್ಷಕರಾಗಿರಬೇಕೆಂದು ಶಿಕ್ಷಕರಿಗನಿಸುತ್ತದೆ. ಸಭ್ಯಾಚಾರಗಳು ಮನೆಯಲ್ಲೇ ಆರಂಭವಾಗತಕ್ಕದ್ದು. ಅಮೆರಿಕದ ಶಿಕ್ಷಕರ ಸಂಘದ ಅಧ್ಯಕ್ಷರಾಗಿರುವ ಸ್ಯಾಂಡ್ರ ಫೆಲ್ಡ್‌ಮ್ಯಾನ್‌ರು, “ಶಿಕ್ಷಕರನ್ನು . . . ಹೆಚ್ಚಾಗಿ ಬೇರೆ ವೃತ್ತಿಗಾರರಂತೆಯೇ ಉಪಚರಿಸಬೇಕೇ ಹೊರತು, ವೈಭವೀಕರಿಸಲ್ಪಟ್ಟಿರುವ ಶಿಶುಪಾಲಕರಂತಲ್ಲ” ಎಂದು ಹೇಳಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಹೆಚ್ಚಾಗಿ ಹೆತ್ತವರು, ಮಕ್ಕಳಿಗೆ ಶಾಲೆಯಲ್ಲಿ ಕೊಡಲಾಗುವ ಶಿಸ್ತನ್ನು ಬೆಂಬಲಿಸಲು ತಪ್ಪಿಹೋಗುತ್ತಾರೆ. ಹಿಂದಿನ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟಿರುವ ಲೀಮೇರಿಸ್‌ ಎಚ್ಚರ! ಪತ್ರಿಕೆಗೆ ಹೀಗಂದರು: “ಅಪರಾಧಿ ಮಕ್ಕಳ ಬಗ್ಗೆ ಮುಖ್ಯೋಪಾಧ್ಯಾಯರಿಗೆ ವರದಿಮಾಡಿದರೆ ಸಾಕು, ಅವರ ಹೆತ್ತವರು ಬಂದು ನಿಮ್ಮ ಮೇಲೆರಗುತ್ತಾರೆ!” ಸಮಸ್ಯಾತ್ಮಕ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವುದರ ಬಗ್ಗೆ, ಈ ಮುಂಚೆ ಉಲ್ಲೇಖಿಸಲ್ಪಟ್ಟಿರುವ ಬುಶ್‌ ಹೇಳಿದ್ದು: “ಕುಟುಂಬದಲ್ಲಿ ಪರಿಪಾಲನೆ ಮಾಯವಾಗುತ್ತಿದೆ. ಹೆಚ್ಚಿನ ಮಕ್ಕಳು ಒಳ್ಳೆಯ, ಯುಕ್ತವಾದ ಪರಿಪಾಲನೆ ಇದ್ದಂಥ ಕುಟುಂಬಗಳಿಂದ ಬಂದಿದ್ದಾರೆಂದು ಈಗಂತೂ ಪರಿಗಣಿಸಲು ಸಾಧ್ಯವೇ ಇಲ್ಲ.” ಅರ್ಜೆಂಟೀನದ ಮೆಂಡೊನ್ಸಾದಿಂದ ಎಸ್ಟೇಲಾ ಎಂಬವರು ಹೇಳಿದ್ದು: “ಶಿಕ್ಷಕರಾದ ನಾವೇ ವಿದ್ಯಾರ್ಥಿಗಳಿಗೆ ಹೆದರುತ್ತೇವೆ. ನಾವು ಅವರಿಗೆ ಕಡಿಮೆ ಅಂಕಗಳನ್ನು ಕೊಟ್ಟರೆ, ಅವರು ನಮ್ಮ ಮೇಲೆ ಕಲ್ಲೆಸೆಯುತ್ತಾರೆ ಇಲ್ಲವೇ ಆಕ್ರಮಣ ಮಾಡುತ್ತಾರೆ. ನಮಗೊಂದು ಕಾರ್‌ ಇರುವಲ್ಲಿ ಅದಕ್ಕೆ ಹಾನಿಮಾಡುತ್ತಾರೆ.”

ಆದುದರಿಂದ, ಹೆಚ್ಚಿನ ದೇಶಗಳಲ್ಲಿ ಶಿಕ್ಷಕರ ಕೊರತೆಯಿರುವುದು ಆಶ್ಚರ್ಯದ ಸಂಗತಿಯೊ? ಕಾರ್ನೇಜಿ ಕಾರ್ಪರೇಷನ್‌ ಆಫ್‌ ನ್ಯೂ ಯಾರ್ಕ್‌ನ ಅಧ್ಯಕ್ಷರಾಗಿರುವ ವಾರ್ಟಾನ್‌ ಗ್ರೆಗೊರಿಯನ್‌ ಎಚ್ಚರಿಸಿದ್ದು: “ಮುಂದಿನ ದಶಕದಲ್ಲಿ ನಮ್ಮ [ಅಮೆರಿಕದ] ಶಾಲೆಗಳಿಗೆ 25 ಲಕ್ಷದಷ್ಟು ಹೊಸ ಶಿಕ್ಷಕರು ಬೇಕಾಗುವರು.” ದೊಡ್ಡ ನಗರಗಳು, “ಒಳ್ಳೆಯ ಶಿಕ್ಷಕರನ್ನು ಪಡೆಯಬಹುದಾದ ಭಾರತ, ವೆಸ್ಟ್‌ ಇಂಡೀಸ್‌, ದಕ್ಷಿಣ ಆಫ್ರಿಕ, ಯೂರೋಪ್‌ ಮತ್ತು ಬೇರೆ ಕಡೆಗಳಿಂದ ಶಿಕ್ಷಕರಿಗಾಗಿ ಸಕ್ರಿಯವಾಗಿ ಹುಡುಕುತ್ತಿವೆ.” ಇದರಿಂದಾಗಿ ಈ ಎಲ್ಲ ದೇಶಗಳಲ್ಲೂ ಖಂಡಿತವಾಗಿಯೂ ಶಿಕ್ಷಕರ ಕೊರತೆ ಇರುವುದು.

ಶಿಕ್ಷಕರ ಕೊರತೆ​—⁠ಏಕೆ?

ಮೂವತ್ತೆರಡು ವರ್ಷಗಳ ಅನುಭವವಿರುವ ಒಬ್ಬ ಜಪಾನಿ ಶಿಕ್ಷಕನಾದ ಯೋಶೀನಾರಿ ಹೇಳಿದ್ದೇನೆಂದರೆ, “ಶಿಕ್ಷಕ ವೃತ್ತಿಯು ಸದುದ್ದೇಶವುಳ್ಳ ಒಂದು ಉದಾತ್ತ ಕೆಲಸವಾಗಿದೆ ಮತ್ತು ಜಪಾನಿ ಸಮಾಜದಲ್ಲಿ ಅದನ್ನು ತುಂಬ ಗೌರವಿಸಲಾಗುತ್ತದೆ.” ವಿಷಾದಕರವಾಗಿ, ಪ್ರತಿಯೊಂದು ಸಂಸ್ಕೃತಿಗೆ ಈ ಮಾತು ಅನ್ವಯವಾಗುವುದಿಲ್ಲ. ಈ ಹಿಂದೆ ಉಲ್ಲೇಖಿಸಲ್ಪಟ್ಟಿರುವ ಗ್ರೆಗೊರಿಯನ್‌ ಹೇಳಿದ್ದೇನೆಂದರೆ, ಶಿಕ್ಷಕರಿಗೆ “ವೃತ್ತಿಪರವಾದ ಗೌರವ, ಮನ್ನಣೆ ಮತ್ತು ನಷ್ಟಪರಿಹಾರವನ್ನು ಕೊಡಲಾಗುವುದಿಲ್ಲ. . . . [ಅಮೆರಿಕದ] ಹೆಚ್ಚಿನ ರಾಜ್ಯಗಳಲ್ಲಿ ಶಿಕ್ಷಕ ವೃತ್ತಿಗಾಗಿ ಸಿಗುವ ವೇತನವು, ಬ್ಯಾಚಲರ್‌ ಇಲ್ಲವೇ ಮಾಸ್ಟರ್‌ ಡಿಗ್ರಿಯನ್ನು ಅವಶ್ಯಪಡಿಸುವಂಥ ಬೇರಾವುದೇ ಉದ್ಯೋಗಕ್ಕಿಂತಲೂ ಕಡಿಮೆಯಾಗಿರುತ್ತದೆ.”

ಆರಂಭದಲ್ಲಿ ಉಲ್ಲೇಖಿಸಲ್ಪಟ್ಟಿರುವ ಕೆನ್‌ ಎಲ್ಟಿಸ್‌ ಬರೆದುದು: “ತಮಗಿಂತಲೂ ಕಡಿಮೆ ವಿದ್ಯಾ ಅರ್ಹತೆಗಳನ್ನು ಅಗತ್ಯಪಡಿಸುವ ಅನೇಕ ಉದ್ಯೋಗಗಳಲ್ಲಿ ಶಿಕ್ಷಕ ವೃತ್ತಿಗಿಂತ ಎಷ್ಟೋ ಹೆಚ್ಚು ಸಂಬಳ ಸಿಗುತ್ತದೆಂದು, ಅಥವಾ ಕೇವಲ ಹನ್ನೆರಡು ತಿಂಗಳುಗಳ ಹಿಂದೆ ತಾವು ಕಲಿಸಿದಂಥ ವಿದ್ಯಾರ್ಥಿಗಳೇ ತಮಗಿಂತಲೂ ಅಥವಾ ಮುಂದಿನ ಐದು ವರ್ಷಗಳಲ್ಲಿ ತಮಗೆ ಸಿಗುವ ಸಂಬಳಕ್ಕಿಂತಲೂ ಹೆಚ್ಚನ್ನು ಸಂಪಾದಿಸುತ್ತಿದ್ದಾರೆಂದು ಶಿಕ್ಷಕರು ಕಂಡುಹಿಡಿಯುವಾಗ ಏನಾಗುತ್ತದೆ? ಅಂಥ ಗ್ರಹಿಕೆಯು ಒಬ್ಬ ಶಿಕ್ಷಕನು ತನ್ನ ಯೋಗ್ಯತೆಯ ಬಗ್ಗೆ ಚಿಂತಿಸುವಂತೆ ಮಾಡುತ್ತದೆ.”

ವಿಲ್ಯಮ್‌ ಏಯರ್ಸ್‌ ಬರೆದುದು: “ಶಿಕ್ಷಕರಿಗೆ ತೀರ ಕಡಿಮೆ ಸಂಬಳವನ್ನು ಕೊಡಲಾಗುತ್ತದೆ. . . . ಸರಾಸರಿಯಾಗಿ ನಾವು, ವಕೀಲರಿಗೆ ಸಿಗುವಂಥ ಹಣದಲ್ಲಿ ಮುಕ್ಕಾಲುಭಾಗ, ಅಕೌಂಟೆಂಟರಿಗೆ ಸಿಗುವ ಸಂಬಳದಲ್ಲಿ ಅರ್ಧದಷ್ಟು, ಮತ್ತು ಟ್ರಕ್‌ ಡ್ರೈವರುಗಳು ಹಾಗೂ ಹಡಗಿನ ಕಾರ್ಮಿಕರಿಗಿಂತ ಕಡಿಮೆ ಹಣವನ್ನು ಸಂಪಾದಿಸುತ್ತೇವೆ. . . . ಇಷ್ಟೊಂದು ಬೇಡಿಕೆಗಳನ್ನು ಮಾಡುವಂಥ, ಆದರೆ ಇಷ್ಟು ಕಡಿಮೆ ಆರ್ಥಿಕ ಪ್ರತಿಫಲವನ್ನು ಕೊಡುವಂಥ ಬೇರೆ ಯಾವುದೇ ವೃತ್ತಿಯಿಲ್ಲ.” (ಕಲಿಸಲು​—⁠ಒಬ್ಬ ಶಿಕ್ಷಕನ ಪ್ರಯಾಣ [ಇಂಗ್ಲಿಷ್‌]) ಅದೇ ವಿಷಯದ ಕುರಿತಾಗಿ, ಇಸವಿ 2000ದ ನವೆಂಬರ್‌ನಲ್ಲಿ ಅಮೆರಿಕದ ಮಾಜಿ ಸರ್ಕಾರಿ ವಕೀಲರಾದ ಜ್ಯಾನೆಟ್‌ ರೇನೊ ಹೇಳಿದ್ದು: “ನಾವು ಜನರನ್ನು ಚಂದ್ರನ ವರೆಗೆ ಕಳುಹಿಸುತ್ತೇವೆ. . . . ನಮ್ಮ ಸ್ಪರ್ಧಾಳುಗಳಿಗೆ ದೊಡ್ಡ ಸಂಬಳಗಳನ್ನು ಕೊಡುತ್ತೇವೆ. ಆದರೆ ನಮ್ಮ ಶಿಕ್ಷಕರಿಗೆ ನಾವೇಕೆ ಹೆಚ್ಚು ಸಂಬಳ ಕೊಡಲಾರೆವು?”

“ಸಾಮಾನ್ಯವಾಗಿ ಶಿಕ್ಷಕರಿಗೆ ಕಡಿಮೆ ಸಂಬಳ ಸಿಗುತ್ತದೆ,” ಎಂದು ಲೀಮೇರಿಸ್‌ ಹೇಳುತ್ತಾರೆ. “ಈ ಎಲ್ಲ ವರ್ಷಗಳ ವ್ಯಾಸಂಗದ ನಂತರ, ನನಗೀಗಲೂ ಇಲ್ಲಿ ನ್ಯೂ ಯಾರ್ಕ್‌ ಸಿಟಿಯಲ್ಲಿ, ಈ ದೊಡ್ಡ ನಗರದ ಎಲ್ಲ ಒತ್ತಡ ಮತ್ತು ಜಂಜಾಟಗಳೊಂದಿಗೆ ವಾರ್ಷಿಕವಾಗಿ ಸಿಗುವ ವೇತನ ತೀರ ಕಡಿಮೆ.” ರಷ್ಯದ ಪೀಟರ್ಸ್‌ಬರ್ಗ್‌ನಲ್ಲಿ ಒಬ್ಬ ಶಿಕ್ಷಕಿಯಾಗಿರುವ ವ್ಯಾಲೆಂಟೀನಾ ಹೇಳಿದ್ದು: “ಸಂಬಳದ ವಿಷಯದಲ್ಲಿ ಶಿಕ್ಷಕ ವೃತ್ತಿಯು ನಿಷ್ಪ್ರಯೋಜಕವಾದ ಕೆಲಸವಾಗಿದೆ. ಸಂಬಳವು ಯಾವಾಗಲೂ ಸಾಧಾರಣ ಮಟ್ಟಕ್ಕಿಂತಲೂ ಕಡಿಮೆಯೇ ಇರುತ್ತದೆ.” ಆರ್ಜೆಂಟೀನದ ಚುಬುಟ್‌ನ ಮಾರ್ಲಿನ್‌ ಎಂಬವರು ಇದೇ ವಿಚಾರವನ್ನು ಪ್ರತಿಧ್ವನಿಸುತ್ತಾರೆ: “ಕಡಿಮೆ ಸಂಬಳಗಳಿಂದಾಗಿ ನಾವು ಎರಡು ಅಥವಾ ಮೂರು ಸ್ಥಳಗಳಲ್ಲಿ ಕೆಲಸಮಾಡುವಂತೆ ಒತ್ತಾಯಿಸಲ್ಪಟ್ಟು, ನಾವು ಸದಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡುತ್ತಾ ಇರುತ್ತೇವೆ. ಇದು ನಿಜವಾಗಿಯೂ ನಮ್ಮ ಪರಿಣಾಮಕಾರಿತ್ವವನ್ನು ತಗ್ಗಿಸುತ್ತದೆ.” ಕೆನ್ಯದ ನೈರೋಬಿಯ ಒಬ್ಬ ಶಿಕ್ಷಕರಾಗಿರುವ ಆರ್ಥರ್‌ ಎಂಬವರು ಎಚ್ಚರ! ಪತ್ರಿಕೆಗೆ ಹೇಳಿದ್ದು: “ಕುಸಿಯುತ್ತಿರುವ ಆರ್ಥಿಕತೆಯಿಂದಾಗಿ, ಒಬ್ಬ ಶಿಕ್ಷಕನೋಪಾದಿ ನನ್ನ ಜೀವನವು ಸುಗಮವಾಗಿಲ್ಲ. ಕಡಿಮೆ ವೇತನವೇ, ಜನರು ನಮ್ಮ ವೃತ್ತಿಯನ್ನು ಹಿಡಿಯುವುದರಿಂದ ಅವರನ್ನು ಯಾವಾಗಲೂ ನಿರುತ್ತೇಜಿಸಿದೆ ಎಂಬ ಮಾತನ್ನು ನನ್ನ ಸಹೋದ್ಯೋಗಿಗಳಲ್ಲಿ ಹೆಚ್ಚಿನವರು ಒಪ್ಪಿಕೊಳ್ಳುವರು.”

ನ್ಯೂ ಯಾರ್ಕ್‌ ಸಿಟಿಯಲ್ಲಿರುವ ಒಬ್ಬ ಶಿಕ್ಷಕಿ ಡಯಾನಾ, ಶಿಕ್ಷಕರ ಹೆಚ್ಚಿನ ಸಮಯವನ್ನು ಕಬಳಿಸುವ ಲೇಖನಿ ಕೆಲಸದ ಕುರಿತಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಇನ್ನೊಬ್ಬ ಶಿಕ್ಷಕರು ಹೀಗೆ ಬರೆದರು: “ಇಡೀ ದಿನವು, ಯಾಂತ್ರಿಕವಾಗಿ ಮಾಡಿದ್ದನ್ನೇ ಮಾಡುವುದರಲ್ಲಿ ಕಳೆದುಹೋಗುತ್ತದೆ.” ಒಂದು ಸಾಮಾನ್ಯ ದೂರು ಇದಾಗಿತ್ತು: “ಇಡೀ ದಿನ ಎಷ್ಟೊಂದು ಲೇಖನಿ ಕೆಲಸವಿರುತ್ತದೆ.”

ಕಡಿಮೆ ಶಿಕ್ಷಕರು, ಹೆಚ್ಚು ವಿದ್ಯಾರ್ಥಿಗಳು

ಜರ್ಮನಿಯ ಡ್ಯೂರೆನ್‌ನವರಾಗಿರುವ ಬರ್ಟ್‌ಹೋಲ್ಡ್‌ ಇನ್ನೊಂದು ಸಾಮಾನ್ಯ ದೂರನ್ನು ವ್ಯಕ್ತಪಡಿಸಿದರು: “ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತುಂಬ ಹೆಚ್ಚಾಗಿರುತ್ತದೆ. ಇಲ್ಲಿ ಕೆಲವು ತರಗತಿಗಳಲ್ಲಿ 34ರಷ್ಟು ವಿದ್ಯಾರ್ಥಿಗಳಿರುತ್ತಾರೆ. ಇದರಿಂದಾಗಿ, ಸಮಸ್ಯೆಗಳಿರುವ ವಿದ್ಯಾರ್ಥಿಗಳಿಗೆ ನಾವು ಗಮನವನ್ನು ಕೊಡಲಾಗುವುದಿಲ್ಲ. ಅವರು ಅಲಕ್ಷಿಸಲ್ಪಡುತ್ತಾರೆ. ವೈಯಕ್ತಿಕ ಅಗತ್ಯಗಳು ಅಸಡ್ಡೆಮಾಡಲ್ಪಡುತ್ತವೆ.”

ಈ ಹಿಂದೆ ಉಲ್ಲೇಖಿಸಲ್ಪಟ್ಟಿರುವ ಲೀಮೇರಿಸ್‌ ವಿವರಿಸಿದ್ದು: “ಹೋದ ವರ್ಷ, ಯಾವುದೇ ಆಸಕ್ತಿಯನ್ನು ತೋರಿಸದ ಹೆತ್ತವರಲ್ಲದೆ ನನಗಿದ್ದ ಅತಿ ದೊಡ್ಡ ಸಮಸ್ಯೆಯೇನೆಂದರೆ, ನನ್ನ ತರಗತಿಯಲ್ಲಿ 35 ಮಂದಿ ಮಕ್ಕಳಿದ್ದರು. ಆರು ವರ್ಷ ಪ್ರಾಯದ 35 ಮಂದಿ ಮಕ್ಕಳಿಗೆ ಕಲಿಸಲು ಪ್ರಯತ್ನಿಸುವುದನ್ನು ಸ್ವಲ್ಪ ಊಹಿಸಿಕೊಳ್ಳಿ!”

ಐರಿಸ್‌ ಹೇಳಿದ್ದು: “ಇಲ್ಲಿ ಅಂದರೆ ನ್ಯೂ ಯಾರ್ಕ್‌ನಲ್ಲಿ ಶಿಕ್ಷಕರ ಬರ ಇದೆ, ವಿಶೇಷವಾಗಿ ಗಣಿತ ಮತ್ತು ವಿಜ್ಞಾನದ ವಿಷಯಗಳಿಗಾಗಿ. ಅವರು ಬೇರೆ ಕಡೆಗಳಲ್ಲಿ ಹೆಚ್ಚು ಉತ್ತಮ ಉದ್ಯೋಗಗಳನ್ನು ಪಡೆಯಬಲ್ಲರು. ಆದುದರಿಂದ, ನಗರವು ಅನೇಕ ವಿದೇಶಿ ಶಿಕ್ಷಕರನ್ನು ಕರೆಸಿಕೊಂಡಿದೆ.”

ಶಿಕ್ಷಕ ವೃತ್ತಿಯು ತುಂಬ ಸಮಯ, ಶ್ರಮ ಹಾಗೂ ಗಮನವನ್ನು ಕೇಳಿಕೊಳ್ಳುವ ವೃತ್ತಿಯಾಗಿದೆಯೆಂಬುದು ಸ್ಪಷ್ಟ. ಹೀಗಿರುವಾಗ, ಈ ಶಿಕ್ಷಕರಿಗೆ ಪ್ರೇರಣೆ ಕೊಡುವ ಸಂಗತಿ ಯಾವುದು? ಅವರೇಕೆ ಈ ವೃತ್ತಿಯಲ್ಲಿ ಮುಂದುವರಿಯಲು ಪಟ್ಟುಹಿಡಿಯುತ್ತಾರೆ? ನಮ್ಮ ಕೊನೆಯ ಲೇಖನವು ಈ ಪ್ರಶ್ನೆಗಳನ್ನು ಪರಿಗಣಿಸುವುದು.(g02 3/8)

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

ಪ್ರತಿ ದಿನ ಅಮೆರಿಕದ ಶಾಲೆಗಳಿಗೆ 1,35,000 ಬಂದೂಕುಗಳನ್ನು ಕೊಂಡೊಯ್ಯಲಾಗುತ್ತದೆಂದು ಅಂದಾಜುಮಾಡಲಾಗಿದೆ

[ಪುಟ 10ರಲ್ಲಿರುವ ಚೌಕ/ಚಿತ್ರ]

ಒಬ್ಬ ಯಶಸ್ವೀ ಶಿಕ್ಷಕರು ಯಾರು?

ನೀವು ಯಾರನ್ನು ಒಬ್ಬ ಯಶಸ್ವೀ ಶಿಕ್ಷಕರೆಂದು ಕರೆಯುವಿರಿ? ವಾಸ್ತವಾಂಶಗಳನ್ನು ಬಾಯಿಪಾಠ ಮಾಡಿ, ಪರೀಕ್ಷೆಗಳಲ್ಲಿ ಉತ್ತೀರ್ಣವಾಗಲಿಕ್ಕಾಗಿ ಒಂದು ಮಗುವಿನ ಸ್ಮರಣಾ ಶಕ್ತಿಯನ್ನು ವಿಕಸಿಸಸಾಧ್ಯವಿರುವ ಶಿಕ್ಷಕರನ್ನೊ? ಅಥವಾ ಆ ಮಗು ಪ್ರಶ್ನೆಗಳನ್ನು ಕೇಳುವಂತೆ, ಯೋಚಿಸುವಂತೆ ಹಾಗೂ ತರ್ಕಿಸುವಂತೆ ಕಲಿಸುವ ಶಿಕ್ಷಕರನ್ನೊ? ಇವರಲ್ಲಿ ಯಾರು ಮಗುವನ್ನು ಒಬ್ಬ ಒಳ್ಳೇ ನಾಗರಿಕನಾಗುವಂತೆ ಸಹಾಯಮಾಡುತ್ತಾರೆ?

“ಜೀವನವೆಂಬ ದೀರ್ಘ ಹಾಗೂ ಜಟಿಲವಾದ ಪ್ರಯಾಣದಲ್ಲಿ ನಮ್ಮ ವಿದ್ಯಾರ್ಥಿಗಳು ನಮ್ಮ ಸಂಗಡಿಗರಾಗಿದ್ದಾರೆ ಎಂಬುದನ್ನು ಶಿಕ್ಷಕರಾದ ನಾವು ಅಂಗೀಕರಿಸಿ, ಮಾನವರೋಪಾದಿ ಅವರೂ ಪಡೆಯಲು ಅರ್ಹರಾಗಿರುವ ಮಾನಮರ್ಯಾದೆಯೊಂದಿಗೆ ಅವರನ್ನು ಉಪಚರಿಸಲಾರಂಭಿಸುವಾಗಲೇ ನಾವು ಅರ್ಹ ಶಿಕ್ಷಕರಾಗುವ ಹಾದಿಯಲ್ಲಿದ್ದೇವೆ. ಅದು ಅಷ್ಟು ಸುಲಭವಾಗಿದೆ, ಮತ್ತು ಅದೇ ಸಮಯದಲ್ಲಿ ಅಷ್ಟೇ ಕಷ್ಟಕರವೂ ಆಗಿದೆ.”​—⁠ಕಲಿಸಲು–ಒಬ್ಬ ಶಿಕ್ಷಕನ ಪ್ರಯಾಣ (ಇಂಗ್ಲಿಷ್‌).

ಒಬ್ಬ ಒಳ್ಳೇ ಶಿಕ್ಷಕನಿಗೆ ಪ್ರತಿ ವಿದ್ಯಾರ್ಥಿಯಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ, ಅದು ಚಿಗುರಿ ನಳನಳಿಸುವಂತೆ ಮಾಡುವುದು ಹೇಗೆಂಬುದು ತಿಳಿದಿರುತ್ತದೆ. ವಿಲ್ಯಮ್‌ ಏಯರ್ಸ್‌ ಗಮನಿಸಿದ್ದು: “ನಾವು ಹೆಚ್ಚು ಉತ್ತಮವಾದ ವಿಧವನ್ನು, ಅಂದರೆ ಬಲಗಳು, ಅನುಭವಗಳು, ಕುಶಲತೆಗಳು ಹಾಗೂ ಸಾಮರ್ಥ್ಯಗಳ ಮೇಲೆ ಕಟ್ಟುವಂಥ ವಿಧವನ್ನು ಕಂಡುಹಿಡಿಯಬೇಕು . . . ಒಬ್ಬ ಅಮೆರಿಕನಳಾಗಿದ್ದ ತಾಯಿಯೊಬ್ಬಳ ಬೇಡಿಕೆ ನನ್ನ ನೆನಪಿಗೆ ಬರುತ್ತದೆ. ಅವಳ ಐದು ವರ್ಷ ಪ್ರಾಯದ ಮಗನು ‘ಕಲಿಯುವುದರಲ್ಲಿ ಹಿಂದಿದ್ದಾನೆ’ ಎಂದು ಹೇಳಲಾಯಿತು. ಆ ತಾಯಿ ಹೇಳಿದ್ದು: ‘ವಿಂಡ್‌ ವುಲ್ಫ್‌ನಿಗೆ ನಲ್ವತ್ತಕ್ಕಿಂತಲೂ ಹೆಚ್ಚು ಪಕ್ಷಿಗಳ ಹೆಸರುಗಳು ಮತ್ತು ಅವುಗಳ ವಲಸೆಮಾರ್ಗಗಳು ಗೊತ್ತಿವೆ. ಸರಿಯಾದ ತೂಕವುಳ್ಳ ಗಿಡುಗನ ಬಾಲದಲ್ಲಿ ಹದಿಮೂರು ಗರಿಗಳಿರುತ್ತವೆಂದು ಅವನಿಗೆ ಗೊತ್ತಿದೆ. ಅವನಿಗೆ ಬೇಕಾಗಿರುವುದು, ಅವನ ಪೂರ್ಣ ಸಾಮರ್ಥ್ಯವನ್ನು ತಿಳಿದಿರುವ ಒಬ್ಬ ಶಿಕ್ಷಕನು, ಅಷ್ಟೇ.”

ಪ್ರತಿಯೊಂದು ಮಗುವಿನಲ್ಲಿರುವ ಅತ್ಯುತ್ತಮ ಅಂಶಗಳನ್ನು ಹೊರತರಲಿಕ್ಕಾಗಿ, ಶಿಕ್ಷಕನು ಆ ಮಗುವಿಗೆ ಯಾವುದರಲ್ಲಿ ಆಸಕ್ತಿಯಿದೆ, ಅದನ್ನು ಯಾವುದು ಪ್ರೇರಿಸುತ್ತದೆ, ಮತ್ತು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ಯಾವುದು ಮಾಡುತ್ತದೆಂಬುದನ್ನು ಕಂಡುಹಿಡಿಯಬೇಕು. ಒಬ್ಬ ಸಮರ್ಪಣಾಭಾವದ ಶಿಕ್ಷಕನು ಮಕ್ಕಳನ್ನು ಪ್ರೀತಿಸಬೇಕು.

[ಕೃಪೆ]

United Nations/Photo by Saw Lwin

[ಪುಟ 11ರಲ್ಲಿರುವ ಚೌಕ]

ಕಲಿಯುವಿಕೆ ಯಾವಾಗಲೂ ಮೋಜಿನಿಂದ ಕೂಡಿರಬೇಕೊ?

ಕಲಿಸುವಿಕೆಯ ಬಗ್ಗೆ ಇರುವ ಹತ್ತು ಮಿಥ್ಯೆಗಳನ್ನು ಶಿಕ್ಷಕರಾದ ವಿಲ್ಯಮ್‌ ಏಯರ್ಸ್‌ ಪಟ್ಟಿಮಾಡಿದರು. ಆ ಮಿಥ್ಯೆಗಳಲ್ಲಿ ಒಂದು, “ಒಳ್ಳೇ ಶಿಕ್ಷಕರು ಕಲಿಯುವುದನ್ನು ಮೋಜನ್ನಾಗಿ ಮಾಡುತ್ತಾರೆ” ಎಂದಾಗಿದೆ. ಅವರು ಮುಂದುವರಿಸಿ ಹೇಳಿದ್ದು: “ಮೋಜು ಅಂದರೆ, ಮನಸ್ಸನ್ನು ಬೇರೆ ಕಡೆ ತಿರುಗಿಸುವುದು, ನಗುವಂತೆ ಮಾಡುವುದು. ವಿದೂಷಕರು ಮೋಜು ಮಾಡುತ್ತಾರೆ. ಹಾಸ್ಯಚಟಾಕಿಗಳು ಮೋಜುಭರಿತವಾಗಿರಬಲ್ಲವು. ಆದರೆ ಕಲಿಯುವಿಕೆಯು ಮನಸ್ಸನ್ನು ಮಗ್ನವಾಗಿರಿಸಬಲ್ಲದು, ತಲ್ಲೀನಗೊಳಿಸಬಲ್ಲದು, ಅಚ್ಚರಿಗೊಳಿಸಬಲ್ಲದು, ಗಲಿಬಿಲಿಗೊಳಿಸಬಲ್ಲದು ಮತ್ತು ಅನೇಕವೇಳೆ ತುಂಬ ಆನಂದದಾಯಕವಾಗಿರಬಲ್ಲದು. ಅದು ಮೋಜಿನಿಂದ ಕೂಡಿರುವಲ್ಲಿ, ಒಳ್ಳೇದೇ. ಆದರೆ ಅದು ಮೋಜುಭರಿತವಾಗಿರಲೇಬೇಕು ಎಂದೇನಿಲ್ಲ.” ಅವರು ಕೂಡಿಸಿ ಹೇಳಿದ್ದು: “ಕಲಿಸಲಿಕ್ಕಾಗಿ, ಜ್ಞಾನ, ಸಾಮರ್ಥ್ಯ, ನೈಪುಣ್ಯ, ವಿವೇಚನಾಶಕ್ತಿ ಮತ್ತು ತಿಳಿವಳಿಕೆಯ ವಿಶಾಲವಾದ ಹರವು ಆವಶ್ಯಕ. ಮತ್ತು ಎಲ್ಲಕ್ಕಿಂತಲೂ ಪ್ರಮುಖವಾಗಿ, ಪರಹಿತಚಿಂತನೆ ಮಾಡುವ ಹಾಗೂ ಕಾಳಜಿವಹಿಸುವ ಒಬ್ಬ ವ್ಯಕ್ತಿಯು ಇರಬೇಕು.”​—⁠ಕಲಿಸಲು​—⁠ಒಬ್ಬ ಶಿಕ್ಷಕನ ಪ್ರಯಾಣ.

ಜಪಾನಿನ ನಗೋಯ ಸಿಟಿಯ ಸುಮ್ಯೊ ಎಂಬುವರು ತಮ್ಮ ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆಯನ್ನು ಕಂಡುಕೊಳ್ಳುತ್ತಾರೆ: “ಹೆಚ್ಚಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕೇವಲ ಮೋಜಿನಲ್ಲಿ ಮತ್ತು ಯಾವುದೇ ಶ್ರಮವನ್ನು ಕೇಳಿಕೊಳ್ಳದಂಥ ವಿಷಯದಲ್ಲಿ ಮಾತ್ರ ಆಸಕ್ತಿಯಿರುತ್ತದೆ.”

ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಒಬ್ಬ ವಿದ್ಯಾರ್ಥಿ ಸಲಹೆಗಾರ್ತಿಯಾಗಿರುವ ರೋಸ ಹೇಳಿದ್ದು: “ಸಾಮಾನ್ಯವಾಗಿ ವಿದ್ಯಾರ್ಥಿಗಳಿಗಿರುವ ಮನೋಭಾವವೇನೆಂದರೆ, ಕಲಿಯುವಿಕೆಯು ಬೇಸರ ಹಿಡಿಸುತ್ತದೆ. ಶಿಕ್ಷಕರು ಬೇಸರ ಹಿಡಿಸುತ್ತಾರೆ. ಎಲ್ಲವೂ ಮೋಜಿನದ್ದಾಗಿರಬೇಕೆಂದು ಅವರು ನೆನಸುತ್ತಾರೆ. ಕಲಿಯುವುದರಿಂದ ಏನು ಸಿಗುವುದೊ ಅದು, ಕಲಿಯುವುದಕ್ಕಾಗಿ ಅವರು ಹಾಕುವ ಪ್ರಯತ್ನದ ಮೇಲೆ ಅವಲಂಬಿಸುತ್ತದೆಂಬದನ್ನು ಗ್ರಹಿಸಲು ಅವರು ತಪ್ಪಿಹೋಗುತ್ತಾರೆ.”

ಈ ಮೋಜಿನ ಗೀಳು, ಯುವ ಜನರಿಗೆ ಪ್ರಯತ್ನ ಹಾಗೂ ತ್ಯಾಗಗಳನ್ನು ಮಾಡುವುದನ್ನು ಕಷ್ಟಕರವನ್ನಾಗಿ ಮಾಡುತ್ತದೆ. ಮೇಲೆ ಉಲ್ಲೇಖಿಸಲ್ಪಟ್ಟಿರುವ ಸುಮ್ಯೊ ಹೇಳಿದ್ದು: “ಇದರ ತಿರುಳೇನೆಂದರೆ, ಮುಂದೆ ಭವಿಷ್ಯತ್ತನ್ನು ಏನು ಬಾಧಿಸಬಲ್ಲದೆಂಬುದನ್ನು ಅವರು ವಿವೇಚಿಸಲಾರರು. ತಾವು ಈಗ ಸ್ವಲ್ಪ ಕಷ್ಟಪಡುವಲ್ಲಿ, ಅದು ಭವಿಷ್ಯತ್ತಿನಲ್ಲಿ ಸಾರ್ಥಕವಾಗಿರುವುದೆಂದು ನೆನಸುವ ಪ್ರೌಢ ಶಾಲಾ ವಿದ್ಯಾರ್ಥಿಗಳು ತೀರ ಕಡಿಮೆ.”

[ಪುಟ 7ರಲ್ಲಿರುವ ಚಿತ್ರ]

ಡಯಾನಾ, ಅಮೆರಿಕ

[ಪುಟ 8ರಲ್ಲಿರುವ ಚಿತ್ರ]

‘ಶಾಲೆಗಳಲ್ಲಿ ಮಾದಕ ವಸ್ತುಗಳ ಬಳಕೆಯು ಪ್ರಚಲಿತವಾಗಿದೆ, ಆದರೆ ಅದನ್ನು ತೀರ ಅಪರೂಪವಾಗಿ ಬಯಲಿಗೆ ತರಲಾಗುತ್ತದೆ.’ ​—⁠ಮೈಕಲ್‌, ಜರ್ಮನಿ

[ಪುಟ 8ರಲ್ಲಿರುವ ಚಿತ್ರ]

“ಕುಟುಂಬದಲ್ಲಿನ ಹಿಂಸಾಚಾರ ಹಾಗೂ ಮಾದಕ ವಸ್ತುಗಳ ಚಟದಂಥ ಸಮಸ್ಯೆಗಳನ್ನು ನಾವು ಎದುರಿಸುತ್ತೇವೆ.” ​—⁠ಅಮೀರಾ, ಮೆಕ್ಸಿಕೊ

[ಪುಟ 9ರಲ್ಲಿರುವ ಚಿತ್ರ]

“ಶಿಕ್ಷಕರನ್ನು . . . ಹೆಚ್ಚಾಗಿ ಬೇರೆ ವೃತ್ತಿಗಾರರಂತೆಯೇ ಉಪಚರಿಸಬೇಕೇ ಹೊರತು ವೈಭವೀಕರಿಸಲ್ಪಟ್ಟಿರುವ ಶಿಶುಪಾಲಕರಂತಲ್ಲ.” ​—⁠ಸ್ಯಾಂಡ್ರ ಫೆಲ್ಡ್‌ಮ್ಯಾನ್‌, ಅಮೆರಿಕದ ಶಿಕ್ಷಕರ ಸಂಘದ ಅಧ್ಯಕ್ಷರು