ಶಿಕ್ಷಕ ವೃತ್ತಿ ತೃಪ್ತಿಆನಂದಗಳು
ಶಿಕ್ಷಕ ವೃತ್ತಿ ತೃಪ್ತಿಆನಂದಗಳು
“ನಾನು ಶಿಕ್ಷಕಿಯಾಗಿ ಮುಂದುವರಿಯುವಂತೆ ಮಾಡುವಂಥ ಸಂಗತಿ ಯಾವುದೆಂದು ಕೇಳುತ್ತಿದ್ದೀರೊ? ಕಲಿಸುವುದು ಕಷ್ಟಕರವೂ ದಣಿಸುವಂಥದ್ದೂ ಆಗಿರುವುದಾದರೂ, ಮಕ್ಕಳು ಕಲಿಯುವುದರ ಬಗ್ಗೆ ಉತ್ಸಾಹದಿಂದಿರುವುದನ್ನು ನೋಡುವುದು ಮತ್ತು ಅವರು ಮಾಡುತ್ತಿರುವ ಪ್ರಗತಿಯನ್ನು ನೋಡುವುದೇ, ನನಗೆ ಮುಂದುವರಿಯುವಂತೆ ಪ್ರಚೋದಿಸುತ್ತದೆ.”—ಲೀಮೇರಿಸ್, ನ್ಯೂ ಯಾರ್ಕ್ ಸಿಟಿಯ ಒಬ್ಬ ಶಿಕ್ಷಕಿ.
ಅನೇಕ ಪಂಥಾಹ್ವಾನಗಳು, ತಡೆಗಳು ಮತ್ತು ನಿರಾಶೆಗಳ ಎದುರಿನಲ್ಲೂ, ಲೋಕವ್ಯಾಪಕವಾಗಿ ಲಕ್ಷಾಂತರ ಮಂದಿ ಶಿಕ್ಷಕರು ತಾವು ಆಯ್ಕೆಮಾಡಿರುವ ವೃತ್ತಿಯಲ್ಲಿ ಪಟ್ಟುಹಿಡಿದು ಮುಂದುವರಿಯುತ್ತಾರೆ. ತಮಗೆ ಸಿಗಬೇಕಾದಷ್ಟು ಮನ್ನಣೆ ಸಿಗದೇ ಹೋಗುವುದೆಂದು ತಿಳಿದಿದ್ದರೂ, ಶಿಕ್ಷಕರಾಗಲಿಕ್ಕಾಗಿ ಅರ್ಹರಾಗುತ್ತಿರುವ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವಂಥ ಸಂಗತಿ ಯಾವುದು? ಅವರು ಮುಂದುವರಿಯುವಂತೆ ಯಾವುದು ಮಾಡುತ್ತದೆ?
ಭಾರತದ ರಾಜಧಾನಿಯಾದ ನವ ದೆಹಲಿಯಲ್ಲಿ ಒಬ್ಬ ಶಿಕ್ಷಕಿಯಾಗಿರುವ ಮೇರಿಆ್ಯನ್ ಎಂಬವರು ವಿವರಿಸಿದ್ದು: “ಒಬ್ಬ ಹದಿವಯಸ್ಕನಿಗೆ ತನ್ನ ಅತಿ ಕಷ್ಟಕರವಾದ ವರ್ಷಗಳಲ್ಲಿ ಮಾರ್ಗದರ್ಶನ ನೀಡಿದವರಲ್ಲಿ ಒಬ್ಬರೆಂದು ಅಂಗೀಕರಿಸಲ್ಪಡುವುದೇ ತುಂಬ ಧನ್ಯ ಭಾವನೆಯನ್ನು ಉಂಟುಮಾಡುತ್ತದೆ. ನಿಮ್ಮ ಸಹಾಯಕ್ಕೆ ಸ್ಪಂದಿಸಿದ ಯುವ ಜನರು, ಮುಂದಿನ ವರ್ಷಗಳಲ್ಲಿ ನಿಮ್ಮನ್ನು ಅಕ್ಕರೆಯಿಂದ ಸ್ಮರಿಸುವಾಗ ನೀವು ಅನುಭವಿಸುವಂಥ ಸಂತೃಪ್ತಿಯನ್ನು ಇನ್ನಾವುದೇ ವೃತ್ತಿಯು ಕೊಡಲಾರದು.”
ಹಿಂದಿನ ಲೇಖನಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಜುಲ್ಯಾನೊ ಎಂಬ ಶಿಕ್ಷಕರು ಹೇಳಿದ್ದು: “ಒಂದು ನಿರ್ದಿಷ್ಟ ಪಾಠವಿಷಯದಲ್ಲಿ ನೀವು ವಿದ್ಯಾರ್ಥಿಗಳ ಆಸಕ್ತಿಯನ್ನು ಕೆರಳಿಸುವುದರಲ್ಲಿ ನೀವು ಯಶಸ್ವಿಯಾಗಿದ್ದೀರೆಂಬ ಮನವರಿಕೆಯೇ ಅತಿ ಶ್ರೇಷ್ಠವಾದ ತೃಪ್ತಿಯನ್ನು ತರುತ್ತದೆ. ಉದಾಹರಣೆಗಾಗಿ, ಇತಿಹಾಸದ ಬಗ್ಗೆ ಒಂದು ವಿಷಯವನ್ನು ನಾನು ವಿವರಿಸಿಯಾದ ನಂತರ, ‘ಇಷ್ಟಕ್ಕೇ ನಿಲ್ಲಿಸಬೇಡಿ. ನಮಗೆ ಇನ್ನೂ ಕಲಿಸಿರಿ!’ ಎಂದು ಕೆಲವು ವಿದ್ಯಾರ್ಥಿಗಳು ಹೇಳಿದರು. ಈ ಸ್ವಪ್ರೇರಣೆಯ ಅಭಿವ್ಯಕ್ತಿಗಳು, ಶಾಲೆಯಲ್ಲಿ ಒಂದು ಮಂಕು ಕವಿದ ದಿನವನ್ನು ಬೆಳಗಿಸಬಲ್ಲವು, ಯಾಕೆಂದರೆ ಆ ಯುವ ಜನರಲ್ಲಿ ಹೊಸದಾಗಿರುವ ಭಾವನೆಗಳನ್ನು ಕೆರಳಿಸಿದ್ದೀರೆಂಬುದನ್ನು ನೀವು ಗ್ರಹಿಸುತ್ತೀರಿ. ಒಂದು ವಿಷಯವನ್ನು ಅವರು ಅರ್ಥಮಾಡಿಕೊಂಡಿರುವುದರಿಂದ ತಟ್ಟನೆ ಅವರ ಕಣ್ಣುಗಳು ಹೊಳೆಯುವಾಗ, ಅವರ ಮುಖಗಳನ್ನು ನೋಡಲು ಎಷ್ಟು ಸಂತೋಷವಾಗುತ್ತದೆ!”
ಇಟಲಿಯಲ್ಲಿ ಒಬ್ಬ ಶಿಕ್ಷಕಿಯಾಗಿರುವ ಎಲಾನಾ ಹೇಳಿದ್ದು: “ದೈನಂದಿನ ಚಿಕ್ಕಪುಟ್ಟ ವಿಷಯಗಳಲ್ಲಿ, ಅಂದರೆ ತೀರ ಅಪರೂಪವಾಗಿ ಸಂಭವಿಸುವಂಥ ಭೂಮಿಯನ್ನೇ ನಡುಗಿಸಿಬಿಡುವ ಫಲಿತಾಂಶಗಳಲ್ಲಿ ಅಲ್ಲ, ಬದಲಾಗಿ ವಿದ್ಯಾರ್ಥಿಗಳ ಚಿಕ್ಕಪುಟ್ಟ ಸಾಧನೆಗಳಿಂದ ಸಂತೃಪ್ತಿ ಲಭಿಸುತ್ತದೆಂಬುದು ನನ್ನ ಅಭಿಪ್ರಾಯ.”
ಮೂವತ್ತರ ಆರಂಭದ ವರ್ಷಗಳಲ್ಲಿರುವ ಆಸ್ಟ್ರೇಲಿಯದ ಕಾನಿ ಎಂಬವಳು ಹೇಳಿದ್ದು: “ನೀವು ಯಾರೊಂದಿಗೆ ಒಂದು ಒಳ್ಳೆಯ ಶಿಕ್ಷಕ-ವಿದ್ಯಾರ್ಥಿ ಸಂಬಂಧವನ್ನು ಹೊಂದಿದ್ದೀರೊ ಆ ವಿದ್ಯಾರ್ಥಿಯು, ನಿಮ್ಮ ಪ್ರಯತ್ನಗಳಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸುತ್ತಾ ಒಂದು ಪತ್ರವನ್ನು ಬರೆಯಲು ಸಮಯವನ್ನು ತೆಗೆದುಕೊಳ್ಳುವಾಗ ದೊಡ್ಡ ಬಹುಮಾನ ಸಿಕ್ಕಿದಂತಾಗುತ್ತದೆ.”
ಆರ್ಜೆಂಟೀನಾದ ಮೆಂಡೊನ್ಸದಿಂದ ಆಸ್ಕರ್ ಎಂಬವರು ಅದೇ ರೀತಿಯ ಭಾವವನ್ನು ವ್ಯಕ್ತಪಡಿಸಿದರು: “ನನ್ನ ವಿದ್ಯಾರ್ಥಿಗಳು ಬೀದಿಯಲ್ಲೊ ಇನ್ನೆಲ್ಲೊ ನನ್ನೆದುರು ಬಂದು ನಾನು ಅವರಿಗೆ ಕಲಿಸಿದಂಥ ವಿಷಯಗಳಿಗಾಗಿ ಗಣ್ಯತೆಯನ್ನು ತೋರಿಸಿದಾಗ, ನನ್ನ ಎಲ್ಲ ಶ್ರಮವು ಸಾರ್ಥಕವೆಂಬ ಭಾವನೆಯುಂಟಾಗುತ್ತದೆ.” ಸ್ಪೆಯ್ನ್‌ನ ಮ್ಯಾಡ್ರಿಡ್‌ನ ಏಂಜಲ್ ಹೇಳಿದ್ದು: “ಕಷ್ಟಕರವಾದರೂ, ಅದ್ಭುತವಾಗಿರುವ ಈ ವೃತ್ತಿಗೆ ನನ್ನ ಜೀವನದ ಒಂದು ಭಾಗವನ್ನೇ ಮುಡಿಪಾಗಿರಿಸಿರುವ ನನಗೆ, ನಾನು
ಕಲಿಸಿರುವ ಎಳೆಯರು, ಭಾಗಶಃ ನನ್ನ ಪ್ರಯತ್ನಗಳ ಫಲಿತಾಂಶವಾಗಿ ಸತ್ಯವಂತ ಸ್ತ್ರೀಪುರುಷರಾಗಿ ಪರಿಣಮಿಸುವುದನ್ನು ನೋಡುವುದೇ ನಿಸ್ಸಂದೇಹವಾಗಿ ಅತಿ ಶ್ರೇಷ್ಠವಾದ ತೃಪ್ತಿಯನ್ನು ತರುತ್ತದೆ.”ಆರಂಭದಲ್ಲಿ ಉಲ್ಲೇಖಿಸಲ್ಪಟ್ಟಿರುವ ಲೀಮೇರಿಸ್ ಹೇಳಿದ್ದು: “ನಿಜವಾಗಿಯೂ ಶಿಕ್ಷಕರು ಅದ್ವಿತೀಯ ವ್ಯಕ್ತಿಗಳಾಗಿದ್ದಾರೆಂದು ನನಗೆ ಅನಿಸುತ್ತದೆ. ನಾವು ಸ್ವಲ್ಪ ವಿಚಿತ್ರ ಸ್ವಭಾವದವರೂ ಹೌದು, ಏಕೆಂದರೆ ನಾವು ಈ ಬೆರಗುಗೊಳಿಸುವಂಥ ಮಹಾ ಜವಾಬ್ದಾರಿಯನ್ನು ನಮ್ಮ ಹೆಗಲಿಗೇರಿಸಿಕೊಂಡಿದ್ದೇವೆ. ಆದರೆ, ಹತ್ತು ಮಕ್ಕಳಲ್ಲಾಗಲಿ ಅಥವಾ ಕೇವಲ ಒಂದು ಮಗುವಿನಲ್ಲಾಗಲಿ ನೀವು ಗಮನಾರ್ಹವಾದ ಬದಲಾವಣೆಯನ್ನು ಮಾಡಲು ಶಕ್ತರಾಗಿರುವಲ್ಲಿ, ನೀವು ನಿಮ್ಮ ಕರ್ತವ್ಯವನ್ನು ಪೂರೈಸಿದ್ದೀರಿ. ಮತ್ತು ಇದಕ್ಕಿಂತಲೂ ಒಳ್ಳೆಯ ಭಾವನೆ ಬೇರೊಂದಿಲ್ಲ. ನೀವು ನಿಮ್ಮ ಕೆಲಸವನ್ನು ಆನಂದದಿಂದ ಮಾಡುವಿರಿ.”
ನೀವು ನಿಮ್ಮ ಶಿಕ್ಷಕರಿಗೆ ಉಪಕಾರ ಹೇಳಿದ್ದೀರೊ?
ನೀವು ಒಬ್ಬ ವಿದ್ಯಾರ್ಥಿಯಾಗಿರಲಿ ಇಲ್ಲವೇ ಹೆತ್ತವರಾಗಿರಲಿ, ಒಬ್ಬ ಶಿಕ್ಷಕನು/ಶಿಕ್ಷಕಿಯು ಕೊಟ್ಟಿರುವ ಸಮಯ, ಹಾಕಿರುವ ಪ್ರಯಾಸ ಮತ್ತು ತೋರಿಸಿರುವ ಆಸಕ್ತಿಗಾಗಿ ಎಂದಾದರೂ ಉಪಕಾರ ಹೇಳಿದ್ದೀರೊ? ಇಲ್ಲವೇ ಒಂದು ಉಪಕಾರದ ಚೀಟಿ ಇಲ್ಲವೇ ಪತ್ರವನ್ನಾದರೂ ಕಳುಹಿಸಿದ್ದೀರೊ? ಕೆನ್ಯಾದ ನೈರೋಬಿಯ ಆರ್ಥರ್ ಎಂಬವರು ಈ ಸಮಂಜಸವಾದ ವಿಷಯವನ್ನು ತಿಳಿಸಿದರು: “ಶಿಕ್ಷಕರು ಸಹ ಪ್ರಶಂಸೆಯಿಂದಾಗಿ ನಳನಳಿಸುತ್ತಾರೆ. ಸರಕಾರ, ಹೆತ್ತವರು ಮತ್ತು ವಿದ್ಯಾರ್ಥಿಗಳು ಅವರಿಗೂ ಅವರ ಸೇವೆಗೂ ಉಚ್ಚ ಮಾನ್ಯತೆಯನ್ನು ಕೊಡಬೇಕು.”
ಲೇಖಕಿ ಹಾಗೂ ಶಿಕ್ಷಕಿಯಾಗಿರುವ ಲೂಆನ್ ಜಾನ್ಸನ್ ಬರೆದುದು: “ಒಬ್ಬ ಶಿಕ್ಷಕರ ಕುರಿತಾಗಿ ನನಗೆ ಒಂದು ನಕಾರಾತ್ಮಕ ಪತ್ರ ಸಿಗುವಾಗ, ಅವರ ಬಗ್ಗೆ ಒಂದು ನೂರು ಪ್ರಶಂಸೆಯ ಪತ್ರಗಳೂ ಸಿಗುತ್ತವೆ. ಇದು, ಕೆಟ್ಟ ಶಿಕ್ಷಕರಿಗಿಂತಲೂ ಒಳ್ಳೇ ಶಿಕ್ಷಕರು ಹೆಚ್ಚಿದ್ದಾರೆಂಬ ನನ್ನ ನಂಬಿಕೆಯನ್ನು ದೃಢೀಕರಿಸುತ್ತದೆ.” ಆಸಕ್ತಿಕರವಾದ ಸಂಗತಿಯೇನೆಂದರೆ, ಅನೇಕ ಜನರು “ತಮ್ಮ ಹಿಂದಿನ ಶಿಕ್ಷಕರೊಬ್ಬರ ಪತ್ತೆಹಚ್ಚಲು” ಪತ್ತೇದಾರರನ್ನು ಉಪಯೋಗಿಸುತ್ತಾರೆ. “ಜನರು ತಮ್ಮ ಶಿಕ್ಷಕರನ್ನು ಹುಡುಕಿ, ಅವರಿಗೆ ಉಪಕಾರ ಹೇಳಲು ಬಯಸುತ್ತಾರೆ.”
ಶಿಕ್ಷಕರು ಒಬ್ಬ ವ್ಯಕ್ತಿಯ ಶಿಕ್ಷಣಕ್ಕಾಗಿ ಮೂಲಭೂತ ತಳಪಾಯವನ್ನು ಹಾಕುತ್ತಾರೆ. ತುಂಬ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿನ ಅತ್ಯುತ್ತಮ ಪ್ರೊಫೆಸರರು ಕೂಡ, ವಿದ್ಯೆ, ಜ್ಞಾನ ಮತ್ತು ತಿಳಿವಳಿಕೆಗಾಗಿದ್ದ ತಮ್ಮ ಆಸೆಯನ್ನು ಕೆರಳಿಸಿ, ಬೆಳೆಸಲು ಸಮಯ ಹಾಗೂ ಪ್ರಯತ್ನವನ್ನು ಹಾಕಿದ ಶಿಕ್ಷಕರಿಗೆ ಚಿರಋಣಿಗಳಾಗಿದ್ದಾರೆ. ನೈರೋಬಿಯಲ್ಲಿರುವ ಆರ್ಥರ್ ಹೇಳುವುದು: “ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರಗಳಲ್ಲಿರುವ ಎಲ್ಲ ಉಚ್ಚ ಅಧಿಕಾರಿಗಳು ತಮ್ಮ ಜೀವಿತದಲ್ಲಿ ಒಂದಲ್ಲ ಒಂದು ಸಮಯ ಒಬ್ಬ ಶಿಕ್ಷಕರಿಂದ ಕಲಿಸಲ್ಪಟ್ಟಿದ್ದಾರೆ.”
ನಮ್ಮ ಕುತೂಹಲವನ್ನು ಬಡಿದೆಬ್ಬಿಸಿ, ನಮ್ಮ ಹೃದಮನವನ್ನು ಕೆರಳಿಸಿ, ಜ್ಞಾನ ಹಾಗೂ ತಿಳಿವಳಿಕೆಗಾಗಿರುವ ನಮ್ಮ ದಾಹವನ್ನು ತಣಿಸುವ ವಿಧವನ್ನು ತೋರಿಸಿದ ಆ ಸ್ತ್ರೀಪುರುಷರಿಗಾಗಿ ನಾವೆಷ್ಟು ಆಭಾರಿಗಳಾಗಿರಬೇಕು!
ಮಹಾನ್ ಶಿಕ್ಷಕನಾದ ಯೆಹೋವ ದೇವರಿಗೂ ನಾವು ಇನ್ನೆಷ್ಟು ಹೆಚ್ಚು ಆಭಾರಿಗಳಾಗಿರಬೇಕು! ಆತನೇ ಜ್ಞಾನೋಕ್ತಿ 2:1-6ರ ಈ ಮಾತುಗಳನ್ನು ಪ್ರೇರಿಸಿದನು: “ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ, ನಿನ್ನ ಕಿವಿಯನ್ನು ಜ್ಞಾನದ ಕಡೆಗೂ ಹೃದಯವನ್ನು ವಿವೇಕದ ಕಡೆಗೂ ತಿರುಗಿಸು; ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ. ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.”
ಆ ವಿಚಾರಪ್ರೇರಕ ವಚನದಲ್ಲಿ “ಆಗ” ಎಂಬ ಷರತ್ತುಳ್ಳ ಪದಕ್ಕೆ ಗಮನಕೊಡಿ. ಸ್ವಲ್ಪ ಊಹಿಸಿ, ನಾವು ಆ ಪಂಥಾಹ್ವಾನವನ್ನು ಸ್ವೀಕರಿಸಲು ಸಿದ್ಧರಾಗಿರುವಲ್ಲಿ, ‘ದೈವಜ್ಞಾನವನ್ನು ಪಡೆದುಕೊಳ್ಳಲು’ ಶಕ್ತರಾಗಿರುವೆವು! ಇದು ಖಂಡಿತವಾಗಿಯೂ ಎಲ್ಲಕ್ಕಿಂತಲೂ ಶ್ರೇಷ್ಠವಾದ ಶಿಕ್ಷಣವಾಗಿದೆ.(g02 3/8)
[ಪುಟ 13ರಲ್ಲಿರುವ ಚೌಕ]
ಒಬ್ಬ ಆನಂದಿತ ಹೆತ್ತವಳು
ನ್ಯೂ ಯಾರ್ಕ್ ಸಿಟಿಯ ಶಿಕ್ಷಕರೊಬ್ಬರು ಈ ಪತ್ರವನ್ನು ಪಡೆದರು:
“ನನ್ನ ಮಕ್ಕಳಿಗಾಗಿ ನೀವೇನನ್ನು ಮಾಡಿದ್ದೀರೊ ಅದಕ್ಕಾಗಿ ನಾನು ಹೃದಯದಾಳದಿಂದ ಮತ್ತು ಮನಃಪೂರ್ವಕವಾಗಿ ನಿಮಗೆ ಉಪಕಾರ ಹೇಳಬಯಸುತ್ತೇನೆ. ನೀವಿಲ್ಲದೆ ಅವರು ಖಂಡಿತವಾಗಿಯೂ ಎಂದಿಗೂ ಏರಲು ಸಾಧ್ಯವಿರದಂಥ ಎತ್ತರಗಳನ್ನು ತಲಪುವಂತೆ, ನಿಮ್ಮ ಕಾಳಜಿ, ದಯೆ, ಮತ್ತು ಕೌಶಲದ ಮೂಲಕ ಅವರಿಗೆ ಸಹಾಯಮಾಡಿದ್ದೀರಿ. ನನ್ನ ಮಕ್ಕಳ ಬಗ್ಗೆ ನಾನು ಹೆಮ್ಮೆಪಟ್ಟುಕೊಳ್ಳುವಂತೆ ನೀವು ಮಾಡಿದ್ದೀರಿ. ಇದನ್ನು ನಾನೆಂದಿಗೂ ಮರೆಯಲಾರೆ. ಇತಿ ವಿಶ್ವಾಸದೊಂದಿಗೆ, ಎಸ್. ಬಿ.”
ನೀವು ಸಹ ಪ್ರೋತ್ಸಾಹವನ್ನು ನೀಡಬಲ್ಲ ಒಬ್ಬ ಶಿಕ್ಷಕರು ಇದ್ದಾರೊ?
[ಪುಟ 12ರಲ್ಲಿರುವ ಚಿತ್ರ]
‘ವಿದ್ಯಾರ್ಥಿಗಳು ಒಂದು ವಿಷಯವನ್ನು ಅರ್ಥಮಾಡಿಕೊಂಡಿರುವುದರಿಂದ ತಟ್ಟನೆ ಅವರ ಕಣ್ಣುಗಳು ಹೊಳೆಯುವುದನ್ನು ನೋಡಲು ಎಷ್ಟು ಸಂತೋಷವಾಗುತ್ತದೆ!’ —ಜುಲ್ಯಾನೊ, ಇಟಲಿ
[ಪುಟ 13ರಲ್ಲಿರುವ ಚಿತ್ರಗಳು]
‘ಒಬ್ಬ ವಿದ್ಯಾರ್ಥಿಯು, ಗಣ್ಯತೆಯನ್ನು ವ್ಯಕ್ತಪಡಿಸುತ್ತಾ ಒಂದು ಪತ್ರವನ್ನು ಬರೆಯಲು ಸಮಯವನ್ನು ತೆಗೆದುಕೊಳ್ಳುವಾಗ ದೊಡ್ಡ ಬಹುಮಾನ ಸಿಕ್ಕಿದಂತಾಗುತ್ತದೆ.’ —ಕಾನಿ, ಆಸ್ಟ್ರೇಲಿಯ