ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೀಬ್ರ–ಆಫ್ರಿಕದ ಕಾಡುಕುದುರೆ

ಸೀಬ್ರ–ಆಫ್ರಿಕದ ಕಾಡುಕುದುರೆ

ಸೀಬ್ರ–ಆಫ್ರಿಕದ ಕಾಡುಕುದುರೆ

ಆಫ್ರಿಕದಲ್ಲಿರುವ ಎಚ್ಚರ! ಲೇಖಕರಿಂದ

ಹೆಚ್ಚುಕಡಿಮೆ ಒಂದು ಸಾವಿರ ಸೀಬ್ರಗಳಿರುವ ಒಂದು ಹಿಂಡು, ಆಫ್ರಿಕದ ಹುಲ್ಲುಗಾವಲಿನಲ್ಲಿ ಸ್ವಚ್ಛಂದವಾಗಿ ಓಡುತ್ತಿದೆ. ದಟ್ಟವಾದ ಕೂದಲುಗಳುಳ್ಳ ಅವುಗಳ ಕತ್ತುಗಳು, ಅವುಗಳ ಪ್ರಬಲ ಚಲನೆಯ ತಾಳಕ್ಕೆ ತಕ್ಕಂತೆ ತೂಗಾಡುವಾಗ, ಅವುಗಳ ಪಟ್ಟೆಗಳುಳ್ಳ ಪಾರ್ಶ್ವ ಭಾಗಗಳು ತುಯ್ದಾಡುತ್ತಿವೆ. ಬತ್ತಿಹೋದ ನೆಲವನ್ನು ಬಡಿಯುತ್ತ ಓಡುತ್ತಿರುವ ಅವುಗಳ ಗೊರಸಿನ ಶಬ್ದವು, ಬಯಲಿನಾಚೆ ಮಾರ್ದನಿಸುತ್ತಿದೆ. ಅವುಗಳ ಹಿಂದೆ ಕೆಂಪು ಧೂಳಿನ ಮೋಡವು ಅಲೆಯಂತೆ ಚಲಿಸುತ್ತಿದೆ ಮತ್ತು ಅದನ್ನು ಅನೇಕ ಕಿಲೊಮೀಟರುಗಳಷ್ಟು ದೂರದಿಂದಲೂ ನೋಡಬಹುದು. ಅವು ಯಾವುದೇ ನಿರ್ಬಂಧವಿಲ್ಲದೆ, ಸ್ವಚ್ಛಂದವಾಗಿ ಮತ್ತು ಸ್ವತಂತ್ರವಾಗಿ ಓಡುತ್ತಿವೆ.

ಆಗ ಇದ್ದಕ್ಕಿದ್ದಂತೆ ಯಾವುದೋ ಅದೃಶ್ಯ ಸೂಚನೆಯಿಂದಲೋ ಎಂಬಂತೆ, ಅವು ಓಡುವುದನ್ನು ನಿಧಾನಗೊಳಿಸುತ್ತವೆ ಮತ್ತು ಕೊನೆಗೆ ನಿಂತುಕೊಳ್ಳುತ್ತವೆ. ತಮ್ಮ ಗಟ್ಟಿಯಾದ ಹಾಗೂ ದಪ್ಪವಾದ ಹಲ್ಲುಗಳನ್ನು ಉಪಯೋಗಿಸಿ, ಒಣಹುಲ್ಲನ್ನು ಬಲವಾಗಿ ಎಳೆಯತೊಡಗುತ್ತವೆ. ಈ ಹಿಂಡು ಆಗಿಂದಾಗ್ಗೆ ಮೇಲೆ ನೋಡುತ್ತಾ, ಆಲಿಸುತ್ತಾ, ಗಾಳಿಯನ್ನು ಆಘ್ರಾಣಿಸುತ್ತಾ ತುಂಬ ಎಚ್ಚರಿಕೆಯಿಂದಿದೆ. ಬಹು ದೂರದಲ್ಲಿ ಕೇಳಿಬರುತ್ತಿರುವ ಸಿಂಹದ ಗರ್ಜನೆಯು ಗಾಳಿಯ ಮೂಲಕ ಇವುಗಳ ಕಿವಿಮುಟ್ಟುತ್ತದೆ ಮತ್ತು ಇವು ಉದ್ವೇಗಗೊಳ್ಳುತ್ತವೆ. ಇವುಗಳಿಗೆ ಈ ಧ್ವನಿ ಚಿರಪರಿಚಿತವಾಗಿದೆ. ಈ ಸೀಬ್ರಗಳು ಕಿವಿಯನ್ನು ನೆಟ್ಟಗೆ ಮಾಡಿಕೊಂಡು, ಅವುಗಳ ಬಾಯಲ್ಲಿ ಹುಲ್ಲು ನಿಶ್ಚಲವಾಗಿ ನೇತಾಡುತ್ತಿರುವಾಗ, ಅವು ಮುಲುಗುತ್ತಿರುವ ಧ್ವನಿಯು ಕೇಳಿಬರುತ್ತಿರುವ ದಿಕ್ಕಿನತ್ತ ನೋಡುತ್ತಿವೆ. ಸದ್ಯಕ್ಕೆ ಯಾವುದೇ ಅಪಾಯವಿಲ್ಲ ಎಂಬುದನ್ನು ಅರ್ಥಮಾಡಿಕೊಂಡ ಅವು, ಪುನಃ ತಮ್ಮ ಕತ್ತುಗಳನ್ನು ಬಗ್ಗಿಸಿ ಮೇಯುವುದನ್ನು ಮುಂದುವರಿಸುತ್ತವೆ.

ಸೂರ್ಯನ ಬಿಸಿಲ ಕಾವು ತೀಕ್ಷ್ಣವಾಗತೊಡಗಿದಂತೆ, ಅವು ಅಲ್ಲಿಂದ ಹೊರಡುತ್ತವೆ. ಈ ಬಾರಿ ನೀರಿನ ವಾಸನೆಯು ಈ ಕಾಡುಕುದುರೆಗಳನ್ನು ನದಿಯ ಕಡೆಗೆ ಕರೆದೊಯ್ಯುತ್ತದೆ. ನದಿಯ ದಡದ ಮೇಲೆ ನಿಂತುಕೊಂಡು, ಘೂಂಕರಿಸುತ್ತಾ ಮತ್ತು ಧೂಳನ್ನು ಕೆರೆಯುತ್ತಾ, ನಿಧಾನವಾಗಿ ಹರಿಯುತ್ತಿರುವ ಕಂದು ನೀರಿನ ಕಡೆಗೆ ಅವು ದಿಟ್ಟಿಸಿ ನೋಡುತ್ತವೆ. ನದಿಯ ಪ್ರಶಾಂತ ಮೇಲ್ಮೈಯ ಕೆಳಗಿರುವ ಸಂಭಾವ್ಯ ಅಪಾಯದ ಅರಿವಿರುವ ಇವು ಸ್ವಲ್ಪ ಹಿಂಜರಿಯುತ್ತವೆ. ಆದರೆ ಇವುಗಳ ಬಾಯಾರಿಕೆ ತೀವ್ರವಾಗಿದೆ; ಇದರಿಂದಾಗಿ ಈ ಹಿಂಡಿನಲ್ಲಿರುವ ಕೆಲವು ಸೀಬ್ರಗಳು ದಾರಿಮಾಡಿಕೊಂಡು ಮುನ್ನುಗ್ಗಲು ಆರಂಭಿಸುತ್ತವೆ. ನಂತರ ತಲೆಮುಂದೆ ಮಾಡಿಕೊಂಡು ಧಾವಿಸುತ್ತಾ, ಅವು ನದಿಯ ನೀರಿನ ಬಳಿಗೆ ಓಡುತ್ತವೆ. ಒಂದಾದ ನಂತರ ಇನ್ನೊಂದರಂತೆ ಅವು ಹೊಟ್ಟೆ ತುಂಬುವಷ್ಟು ನೀರನ್ನು ಕುಡಿಯುತ್ತವೆ ಮತ್ತು ಬಯಲು ಪ್ರದೇಶದ ಕಡೆಗೆ ತೆರಳುತ್ತವೆ.

ಸಾಯಂಕಾಲದಷ್ಟಕ್ಕೆ ಈ ಹಿಂಡು, ಉದ್ದವಾಗಿ ಬೆಳೆದು ನಿಂತಿರುವ ಹುಲ್ಲುದಾರಿಯ ಮೂಲಕ ಆರಾಮವಾಗಿ ನಡೆಯುತ್ತದೆ. ಅಸ್ತಮಿಸುತ್ತಿರುವ ಸೂರ್ಯನ ಗಾಢ ಕೆಂಪು ಬಣ್ಣದ ಹೊಳಪಿಗೆ ಎದುರಾಗಿ ಕಾಣುವ ಪಾರ್ಶ್ವ ಚಿತ್ರದಿಂದ ಮತ್ತು ಆಫ್ರಿಕದ ಹುಲ್ಲುಗಾಡುಗಳ ಸೌಂದರ್ಯದ ಚೌಕಟ್ಟುಗಳಿಂದ ಸುತ್ತುವರಿದ ಇವು ತುಂಬ ಶೋಭಾಯಮಾನವಾಗಿ ಕಂಡುಬರುತ್ತವೆ.

ಪಟ್ಟೆಗಳುಳ್ಳ ಸಂಘಜೀವಿ

ಸೀಬ್ರಗಳ ದೈನಂದಿನ ನಿಯತಕ್ರಮವು ಯಾವಾಗಲೂ ಒಂದೇ ಆಗಿರುತ್ತದೆ. ಅವು ಸತತವಾಗಿ ಆಹಾರ ಮತ್ತು ನೀರಿಗಾಗಿ ಹುಡುಕುತ್ತಾ ಇರುತ್ತವಾದ್ದರಿಂದ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತಾ ಇರುತ್ತವೆ. ಬಯಲು ಪ್ರದೇಶಗಳಲ್ಲಿ ಮೇಯುವಂಥ ಈ ಸೀಬ್ರಗಳ ಮಾಂಸಖಂಡಗಳುಳ್ಳ ದೇಹಗಳ ಮೇಲೆ ಬಿಗಿಯಾಗಿ ಹರಡಿಕೊಂಡಿರುವ ಪಟ್ಟೆಗಳುಳ್ಳ ಚರ್ಮದೊಂದಿಗೆ, ಇವು ಅಂದವಾದ ಅಂಗಸೌಷ್ಠವವುಳ್ಳವಾಗಿಯೂ ದಷ್ಟಪುಷ್ಟವಾಗಿಯೂ ಕಾಣುತ್ತವೆ. ಈ ಸೀಬ್ರಗಳ ಪಟ್ಟೆಗಳು ಅಪೂರ್ವವಾಗಿವೆ, ಮತ್ತು ಯಾವ ಎರಡು ನಮೂನೆಗಳು ನಿರ್ದಿಷ್ಟವಾಗಿ ಒಂದೇ ರೀತಿಯಲ್ಲಿ ಇರುವುದಿಲ್ಲ ಎಂದು ಸಹ ಕೆಲವರು ಹೇಳುತ್ತಾರೆ. ಬಯಲಿನ ಇತರ ಪ್ರಾಣಿಗಳ ನಡುವೆ ಈ ಆಕರ್ಷಕ ಬಿಳಿ ಮತ್ತು ಕಪ್ಪು ಪಟ್ಟೆಗಳು ತುಂಬ ವಿಚಿತ್ರವಾಗಿ ಕಂಡುಬರಬಹುದು. ಆದರೂ, ಅವುಗಳ ಹೊರತೋರಿಕೆಯು ಆಕರ್ಷಕವಾಗಿದೆ ಮತ್ತು ಆಫ್ರಿಕದ ವನ್ಯಸ್ಥಿತಿಯೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಸೀಬ್ರಗಳು ಸ್ವಭಾವತಃ ವಿಪರೀತ ಸಂಘಜೀವಿಗಳಾಗಿವೆ. ಒಂದೊಂದು ಸೀಬ್ರವೂ ಜೀವಮಾನಕಾಲವೆಲ್ಲಾ ಉಳಿಯಸಾಧ್ಯವಿರುವಷ್ಟು ಬಲವಾದ ಬಂಧವನ್ನು ಬೆಳೆಸಿಕೊಳ್ಳುತ್ತದೆ. ಒಂದು ದೊಡ್ಡ ಹಿಂಡಿನಲ್ಲಿ ಸಾವಿರಾರು ಸಂಖ್ಯೆಯ ಸೀಬ್ರಗಳಿರುವುದಾದರೂ, ಒಂದು ಗಂಡು ಕಾಡುಕುದುರೆ ಮತ್ತು ಅದರ ಹೆಣ್ಣು ಕಾಡುಕುದುರೆಗಳಿಂದ ಒಳಗೂಡಿರುವ ಅನೇಕ ಚಿಕ್ಕ ಚಿಕ್ಕ ಕುಟುಂಬ ಘಟಕಗಳಾಗಿ ಅವು ವಿಭಾಗಿಸಲ್ಪಟ್ಟಿರುತ್ತವೆ. ಈ ಚಿಕ್ಕ ಕುಟುಂಬ ಘಟಕವು, ತನ್ನ ಸದಸ್ಯರನ್ನು ಸ್ಥಾನಕ್ಕನುಸಾರ ಕಟ್ಟುನಿಟ್ಟಾಗಿ ಪ್ರತ್ಯೇಕಿಸುವ ಮೂಲಕ ಕ್ರಮಬದ್ಧತೆಯನ್ನು ಕಾಪಾಡಿಕೊಳ್ಳುತ್ತದೆ. ಅಧಿಕಾರವಿರುವ ಹೆಣ್ಣು ಕಾಡುಕುದುರೆಯು ಕುಟುಂಬದ ಚಲನೆಯನ್ನು ನಿರ್ಧರಿಸುತ್ತದೆ. ಇದು ಮುಂದಾಳತ್ವವನ್ನು ವಹಿಸುತ್ತದೆ, ಮತ್ತು ಇತರ ಹೆಣ್ಣು ಕಾಡುಕುದುರೆಗಳು ಹಾಗೂ ಅವುಗಳ ಮರಿಗಳು ತಮ್ಮ ಸ್ಥಾನಕ್ಕನುಸಾರ ಇದರ ಹಿಂದೆ ಸಾಲಾಗಿ ನಡೆಯುತ್ತವೆ. ಆದರೂ, ಕಟ್ಟಕಡೆಗೆ ಇದರ ಮೇಲ್ವಿಚಾರಣೆಯನ್ನು ನಡೆಸುವಂಥದ್ದು ಗಂಡು ಕಾಡುಕುದುರೆಯೇ ಆಗಿದೆ. ಒಂದುವೇಳೆ ತನ್ನ ಕುಟುಂಬವು ಮಾರ್ಗವನ್ನು ಬದಲಾಯಿಸಬೇಕೆಂದು ಗಂಡು ಕಾಡುಕುದುರೆಯು ಬಯಸುವಲ್ಲಿ, ಅದು ಮುಂದಾಳತ್ವವನ್ನು ವಹಿಸುತ್ತಿರುವ ಹೆಣ್ಣು ಕಾಡುಕುದುರೆಯ ಬಳಿಗೆ ಬಂದು, ಹೊಸ ದಿಕ್ಕಿನತ್ತ ಸಾಗುವಂತೆ ಅದಕ್ಕೆ ತಿವಿಯುತ್ತದೆ.

ತಮ್ಮ ಗುಂಪಿನ ಇನ್ನೊಂದು ಪ್ರಾಣಿಯು ತಮ್ಮ ಉಣ್ಣೆಯನ್ನು ಮಾಲೀಸುಮಾಡುವುದನ್ನು ಸೀಬ್ರಗಳು ತುಂಬ ಇಷ್ಟಪಡುತ್ತವೆ. ಮತ್ತು ಅವು ತಮ್ಮ ಗುಂಪಿನ ಇನ್ನೊಂದು ಪ್ರಾಣಿಯ ಪಾರ್ಶ್ವಭಾಗಗಳು, ಭುಜಗಳು, ಮತ್ತು ಹಿಂಭಾಗಗಳನ್ನು ಉಜ್ಜುತ್ತಿರುವುದು ಹಾಗೂ ಆಟವಾಡುವಂತೆ ಕಚ್ಚುತ್ತಿರುವುದು ಒಂದು ಸಾಮಾನ್ಯವಾದ ನೋಟವಾಗಿದೆ. ಹೀಗೆ ಪರಸ್ಪರ ಮಾಲೀಸುಮಾಡುವಿಕೆಯು ಒಂದೊಂದು ಸೀಬ್ರದ ನಡುವಿನ ಬಂಧವನ್ನು ಇನ್ನಷ್ಟು ಬಲಗೊಳಿಸುತ್ತದೆ ಮತ್ತು ಇದು ಮರಿಗಳು ಕೆಲವೇ ದಿನದವುಗಳಾಗಿರುವಾಗಲೇ ಆರಂಭವಾಗುತ್ತದೆ. ಮಾಲೀಸುಮಾಡಲಿಕ್ಕಾಗಿ ಕುಟುಂಬದ ಇನ್ನೊಂದು ಪ್ರಾಣಿಯು ಲಭ್ಯವಿಲ್ಲದಿರುವಲ್ಲಿ, ತುರಿಕೆಯಿರುವ ಸೀಬ್ರಗಳು ಧೂಳಿನಲ್ಲಿ ಉರುಳಾಡುವ ಮೂಲಕ ಅಥವಾ ಒಂದು ಮರಕ್ಕೋ, ಗೆದ್ದಲಿನ ಹುತ್ತಕ್ಕೋ, ಇಲ್ಲವೆ ಒಂದು ಸ್ಥಿರವಾದ ವಸ್ತುವಿಗೋ ವಿರುದ್ಧವಾಗಿ ತಮ್ಮ ದೇಹಗಳನ್ನು ಉಜ್ಜಿಕೊಳ್ಳುವ ಮೂಲಕ ಉಪಶಮನವನ್ನು ಕಂಡುಕೊಳ್ಳುತ್ತವೆ.

ಬದುಕಿ ಉಳಿಯಲಿಕ್ಕಾಗಿರುವ ಹೋರಾಟ

ಒಂದು ಸೀಬ್ರದ ಜೀವನವು ಯಾವಾಗಲೂ ಅಪಾಯದಿಂದ ತುಂಬಿರುತ್ತದೆ. ಸಿಂಹಗಳು, ಕಾಡುನಾಯಿಗಳು, ಕಿರುಬಗಳು, ಚಿರತೆಗಳು, ಮತ್ತು ಮೊಸಳೆಗಳು​—⁠ಇವೆಲ್ಲವೂ 250 ಕಿಲೊಗ್ರಾಮ್‌ಗಳಷ್ಟು ತೂಕದ ಈ ಪ್ರಾಣಿಯನ್ನು ಸೂಕ್ತವಾದ ಬೇಟೆಯಾಗಿ ಪರಿಗಣಿಸುತ್ತವೆ. ಒಂದು ಸೀಬ್ರವು ಒಂದು ತಾಸಿಗೆ ಸುಮಾರು 55 ಕಿಲೊಮೀಟರುಗಳಷ್ಟು ವೇಗವಾಗಿ ಓಡಬಲ್ಲದು, ಆದರೆ ಅನಿರೀಕ್ಷಿತವಾಗಿ ಮತ್ತು ರಹಸ್ಯವಾಗಿ ದಾಳಿಮಾಡುವ ಪರಭಕ್ಷಕ ಪ್ರಾಣಿಗಳಿಂದ ಅವು ಹೊಂಚಿಹಾಕಿ ಕೊಲ್ಲಲ್ಪಡುತ್ತವೆ. ಸಿಂಹಗಳು ಹೊಂಚುಹಾಕಿ ಹಿಡಿಯುತ್ತವೆ, ಮೊಸಳೆಗಳು ಕೆಸರಿನ ನೀರಿನ ಕೆಳಗೆ ಕಾಯುತ್ತವೆ, ಮತ್ತು ಚಿರತೆಗಳು ಕತ್ತಲೆಯ ಮರೆಯಲ್ಲಿ ಇವುಗಳಿಗಾಗಿ ದಾರಿನೋಡುತ್ತಿರುತ್ತವೆ.

ಸೀಬ್ರದ ಸಂರಕ್ಷಣೆಯು, ಹಿಂಡಿನ ಸದಸ್ಯರ ಎಚ್ಚರಿಕೆ ಹಾಗೂ ಸಾಮೂಹಿಕ ಕ್ರಿಯೆಯ ಮೇಲೆ ಹೊಂದಿಕೊಂಡಿರುತ್ತದೆ. ರಾತ್ರಿ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯ ಸೀಬ್ರಗಳು ನಿದ್ರೆಮಾಡುತ್ತವಾದರೂ, ಕೆಲವು ಮಾತ್ರ ಯಾವಾಗಲೂ ಎಚ್ಚರವಾಗಿರುತ್ತವೆ, ಶಬ್ದವನ್ನು ಆಲಿಸುತ್ತಾ ಕಾವಲು ಕಾಯುತ್ತಿರುತ್ತವೆ. ಒಂದು ಪರಭಕ್ಷಕವು ಬರುತ್ತಿರುವುದನ್ನು ಒಂದು ಸೀಬ್ರ ನೋಡುವಲ್ಲಿ, ಅದು ಒಂದು ರೀತಿಯ ಎಚ್ಚರಿಕೆಯ ಘೂಂಕಾರ ಕೊಡುತ್ತದೆ; ಇದು ಇಡೀ ಹಿಂಡಿಗೆ ಸೂಚನೆಯಾಗಿರುತ್ತದೆ. ಅನೇಕವೇಳೆ, ಹಿಂಡಿನ ಒಂದು ಪ್ರಾಣಿಯು ಅಸ್ವಸ್ಥವಾಗಿರುವಲ್ಲಿ ಅಥವಾ ಮುದಿಯಾಗಿರುವಲ್ಲಿ ಮತ್ತು ಅದು ಹಿಂಡಿಗೆ ಸರಿಸಮವಾಗಿ ಓಡಲು ಅಸಮರ್ಥವಾಗಿರುವಲ್ಲಿ, ಆ ಪ್ರಾಣಿಯು ಪುನಃ ಹಿಂಡಿನೊಂದಿಗೆ ಜೊತೆಗೂಡುವ ತನಕ ಇತರ ಸೀಬ್ರಗಳು ತಮ್ಮ ಓಟವನ್ನು ಉದ್ದೇಶಪೂರ್ವಕವಾಗಿ ನಿಧಾನಗೊಳಿಸುತ್ತವೆ ಅಥವಾ ಕಾಯುತ್ತವೆ. ಅಪಾಯವು ಬಂದೆರಗುವಾಗ, ಗಂಡು ಕಾಡುಕುದುರೆಯು ಪರಭಕ್ಷಕ ಪ್ರಾಣಿ ಹಾಗೂ ಹೆಣ್ಣು ಕಾಡುಕುದುರೆಗಳ ಮಧ್ಯೆ ನಿರ್ಭಯವಾಗಿ ನಿಂತುಕೊಂಡು, ಹಿಂಡಿನ ಪ್ರಾಣಿಗಳು ತಪ್ಪಿಸಿಕೊಳ್ಳಲು ಸಮಯಾವಕಾಶವನ್ನು ನೀಡಲಿಕ್ಕಾಗಿ ತನ್ನ ವೈರಿಯನ್ನು ಕಚ್ಚುತ್ತಾ, ಅದಕ್ಕೆ ಒದೆಯುತ್ತಾ ಇರುತ್ತದೆ.

ಇಂತಹ ಕುಟುಂಬ ಐಕ್ಯ ಮನೋಭಾವವು, ಆಫ್ರಿಕದಲ್ಲಿರುವ ಸೆರಂಗೆಟಿ ಪ್ಲೈನ್‌ನಲ್ಲಿ ನಡೆದ ಒಂದು ಗಮನಾರ್ಹ ಘಟನೆಯಿಂದ ದೃಷ್ಟಾಂತಿಸಲ್ಪಟ್ಟಿದೆ. ಪ್ರಕೃತಿಶಾಸ್ತ್ರಜ್ಞರಾದ ಹ್ಯೂಕೊ ವಾನ್‌ ಲಾವಿಕ್‌ ಇದನ್ನು ಕಣ್ಣಾರೆ ನೋಡಿದರು. ಕಾಡುನಾಯಿಗಳ ತಂಡವೊಂದು ಸೀಬ್ರಗಳ ಒಂದು ಹಿಂಡನ್ನು ಹೇಗೆ ಅಟ್ಟಿಸಿಕೊಂಡು ಹೋಗತೊಡಗಿತು ಎಂಬುದನ್ನು ತಿಳಿಸುತ್ತಾ, ಆ ನಾಯಿಗಳು ಒಂದು ಹೆಣ್ಣು ಸೀಬ್ರವನ್ನು, ಅದರ ಚಿಕ್ಕ ಮರಿಯನ್ನು ಹಾಗೂ ಒಂದು ವರ್ಷ ಪ್ರಾಯದ ಒಂದು ಮರಿಯನ್ನು ಹಿಂಡಿನಿಂದ ಬೇರ್ಪಡಿಸಲು ಶಕ್ತವಾದವು ಎಂದು ಅವರು ಹೇಳಿದರು. ಸೀಬ್ರವು ಹಿಂಡಿನ ಉಳಿದ ಪ್ರಾಣಿಗಳು ನಾಗಾಲೋಟದಿಂದ ಓಡಿಹೋದಾಗ, ಈ ತಾಯಿ ಸೀಬ್ರ ಹಾಗೂ ಅದರ ಒಂದು ವರ್ಷದ ಮರಿಯು ಸೇರಿಕೊಂಡು, ಆ ನಾಯಿಗಳೊಂದಿಗೆ ಧೈರ್ಯದಿಂದ ಕಾದಾಡತೊಡಗಿದವು. ಅಷ್ಟರಲ್ಲೇ ಆ ನಾಯಿಗಳು ಇನ್ನಷ್ಟು ಆಕ್ರಮಣಶೀಲವಾದವು, ಮತ್ತು ಆ ಹೆಣ್ಣು ಸೀಬ್ರ ಮತ್ತು ಅದರ ದೊಡ್ಡ ಮರಿಯೂ ತುಂಬ ಆಯಾಸಗೊಂಡವು. ಅವುಗಳ ಸಾವು ನಿಶ್ಚಿತ ಎಂಬಂತೆ ತೋರಿತು. ವಾನ್‌ ಲಾವಿಕ್‌ ಆ ನಿರೀಕ್ಷಾಹೀನ ದೃಶ್ಯವನ್ನು ಜ್ಞಾಪಿಸಿಕೊಳ್ಳುತ್ತಾರೆ: “ಆ ಕೂಡಲೆ ಇದ್ದಕ್ಕಿದ್ದಂತೆ ನೆಲವು ಕಂಪಿಸುತ್ತಿರುವ ಅನುಭವ ನನಗಾಯಿತು ಮತ್ತು ನಾನು ಸುತ್ತಲೂ ನೋಡುತ್ತಿದ್ದಾಗ, ನನ್ನ ಆಶ್ಚರ್ಯಕ್ಕೆ ಹತ್ತು ಸೀಬ್ರಗಳು ವೇಗವಾಗಿ ಧಾವಿಸುತ್ತಿರುವುದನ್ನು ನಾನು ನೋಡಿದೆ. ಕ್ಷಣಮಾತ್ರದಲ್ಲಿ ಈ ಹಿಂಡು, ಆ ತಾಯಿ ಸೀಬ್ರ ಹಾಗೂ ಅದರ ಎರಡು ಮರಿಗಳನ್ನು ಸುತ್ತುವರಿಯಿತು, ಅವೆಲ್ಲವೂ ಒಟ್ಟಿಗೆ ಓಡುತ್ತಾ, ಆ ಹತ್ತು ಸೀಬ್ರಗಳು ಬಂದಿದ್ದ ದಿಕ್ಕಿನಲ್ಲೇ ನಾಗಾಲೋಟದಿಂದ ದೌಢಾಯಿಸಿದವು. ನಾಯಿಗಳು ಸುಮಾರು 50 ಮೀಟರುಗಳ ವರೆಗೆ ಅವುಗಳನ್ನು ಅಟ್ಟಿಸಿಕೊಂಡು ಹೋದವು, ಆದರೆ ಈ ಹಿಂಡಿನ ಒಳಗೆ ತೂರಲು ಅವು ಅಶಕ್ತವಾಗಿದ್ದವು ಮತ್ತು ಕೂಡಲೆ ತಮ್ಮ ಪ್ರಯತ್ನವನ್ನು ಕೈಬಿಟ್ಟವು.”

ಒಂದು ಕುಟುಂಬವನ್ನು ಬೆಳೆಸುವುದು

ಹೆಣ್ಣು ಸೀಬ್ರ ತನ್ನ ನವಜಾತ ಮರಿಯನ್ನು ತುಂಬ ಸಂರಕ್ಷಿಸುವ ಮನೋಭಾವದ್ದಾಗಿರುತ್ತದೆ ಮತ್ತು ಆರಂಭದಲ್ಲಿ ತನ್ನ ಮರಿಯನ್ನು ಹಿಂಡಿನ ಇತರ ಪ್ರಾಣಿಗಳಿಂದ ದೂರವಿಡುತ್ತದೆ. ಈ ಪ್ರತ್ಯೇಕವಾಸದ ಅನ್ಯೋನ್ಯವಾದ ಕಾಲಾವಧಿಯಲ್ಲಿ, ಈ ಎಳೆಮರಿಯು ತನ್ನ ತಾಯಿಯೊಂದಿಗೆ ತುಂಬ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುತ್ತದೆ. ತನ್ನ ತಾಯಿಯ ಚರ್ಮದ ಮೇಲೆ ಮಾತ್ರ ಇರುವ ಅಪೂರ್ವವಾದ ಬಿಳಿ ಹಾಗೂ ಕಪ್ಪು ಪಟ್ಟೆಗಳ ನಮೂನೆಯನ್ನು ಈ ಎಳೆಮರಿಯು ಕರಗತಗೊಳಿಸಿಕೊಳ್ಳುತ್ತದೆ. ತದನಂತರ, ಇದು ತನ್ನ ತಾಯಿಯ ಕರೆ, ವಾಸನೆ, ಮತ್ತು ಪಟ್ಟೆಯ ನಮೂನೆಯನ್ನು ಗುರುತಿಸುತ್ತದೆ ಹಾಗೂ ಇನ್ನಾವುದೇ ಹೆಣ್ಣು ಕಾಡುಕುದುರೆಯನ್ನು ಸ್ವೀಕರಿಸುವುದಿಲ್ಲ.

ನವಜಾತ ಮರಿಗಳು ಹುಟ್ಟುವಾಗಲೇ ತಮ್ಮ ಹೆತ್ತವರಂತೆ ವಿಶಿಷ್ಟವಾದ ಬಿಳಿ ಮತ್ತು ಕಪ್ಪು ಪಟ್ಟೆಗಳೊಂದಿಗೆ ಹುಟ್ಟುವುದಿಲ್ಲ. ಅವುಗಳ ಪಟ್ಟೆಗಳು ಕೆಂಪುಮಿಶ್ರಿತ ಕಂದು ಬಣ್ಣದವುಗಳಾಗಿರುತ್ತವೆ ಮತ್ತು ವಯಸ್ಸಾದಂತೆ ಅವು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹೆಚ್ಚು ದೊಡ್ಡದಾದ ಹಿಂಡಿನೊಳಗೆ, ಬೇರೆ ಬೇರೆ ಕುಟುಂಬ ಗುಂಪುಗಳಿಂದ ಬಂದ ಸೀಬ್ರ ಮರಿಗಳು ಆಟಕ್ಕಾಗಿ ಒಟ್ಟುಗೂಡುತ್ತವೆ. ಅವು ಓಡುತ್ತವೆ ಮತ್ತು ಒಂದನ್ನೊಂದು ಹಿಡಿಯಲು ಪ್ರಯತ್ನಿಸುತ್ತವೆ, ವಯಸ್ಕ ಸೀಬ್ರಗಳ ಮಧ್ಯೆ ಒದ್ದುಕೊಳ್ಳುತ್ತಾ ಓಡುತ್ತಾ ಇರುತ್ತವೆ; ಕೆಲವೊಮ್ಮೆ ವಯಸ್ಕ ಸೀಬ್ರಗಳು ಸಹ ಆಟದಲ್ಲಿ ಇವುಗಳೊಂದಿಗೆ ಜೊತೆಗೂಡುತ್ತವೆ. ಈ ಮರಿಗಳು ತಮ್ಮ ನೀಳವಾದ ಕಾಲುಗಳಿಂದ ದೌಡಾಯಿಸುತ್ತಾ, ಪಕ್ಷಿಗಳನ್ನು ಮತ್ತು ಇತರ ಚಿಕ್ಕ ಪ್ರಾಣಿಗಳನ್ನು ಅಟ್ಟಿಸಿಕೊಂಡು ಹೋಗುವ ಮೂಲಕ ತಮಾಷೆಮಾಡುತ್ತವೆ. ತಮ್ಮ ನೀಳವಾದ ತೆಳ್ಳನೆಯ ಕಾಲುಗಳು, ದೊಡ್ಡ ಕಪ್ಪು ಕಣ್ಣುಗಳು, ಹಾಗೂ ಥಳಥಳಿಸುವ ಮೃದುವಾದ ಹೊರಚರ್ಮವಿರುವ ಮರಿ ಸೀಬ್ರಗಳು, ಸುಂದರವಾದ ಚಿಕ್ಕ ಪ್ರಾಣಿಗಳಾಗಿವೆ ಮತ್ತು ಇವುಗಳನ್ನು ನೋಡುವುದೇ ನಯನಮನೋಹರ ದೃಶ್ಯವಾಗಿದೆ.

ಸ್ವಚ್ಛಂದ ಹಾಗೂ ಅದ್ಭುತಕರ

ಇಂದು ಸೀಬ್ರಗಳ ದೊಡ್ಡ ಮಂದೆಗಳು ಆಫ್ರಿಕದ ವಿಸ್ತಾರವಾದ ಹೊಂಬಣ್ಣದ ಹುಲ್ಲುಗಾವಲುಗಳಲ್ಲಿ ಸ್ವಚ್ಛಂದವಾಗಿ ಮತ್ತು ಸ್ವತಂತ್ರವಾಗಿ ಓಡಾಡುತ್ತಿರುವುದನ್ನು ಕಾಣಸಾಧ್ಯವಿದೆ. ಇದು ತುಂಬ ಪ್ರೇಕ್ಷಣೀಯ ನೋಟವಾಗಿದೆ.

ಅಪೂರ್ವವಾದ ಬಿಳಿ ಹಾಗೂ ಕಪ್ಪು ಪಟ್ಟೆಗಳ ನಮೂನೆ, ಅತಿಯಾದ ಕುಟುಂಬ ನಿಷ್ಠೆ, ಹಾಗೂ ಸ್ವಚ್ಛಂದವಾದ ಹಾಗೂ ಸ್ವತಂತ್ರ ಪ್ರವೃತ್ತಿಯನ್ನು ಹೊಂದಿರುವ ಸೀಬ್ರ, ತುಂಬ ಶೋಭಾಯಮಾನವಾದ ಹಾಗೂ ಅದ್ಭುತಕರವಾದ ಸೃಷ್ಟಿಜೀವಿಯಾಗಿದೆ ಎಂಬುದನ್ನು ಯಾರು ತಾನೇ ಅಲ್ಲಗಳೆಯಸಾಧ್ಯವಿದೆ? ಅಂತಹ ಪ್ರಾಣಿಯ ಕುರಿತು ತಿಳಿದುಕೊಳ್ಳುವುದು, ಸಾವಿರಾರು ವರ್ಷಗಳ ಹಿಂದೆ ಎಬ್ಬಿಸಲ್ಪಟ್ಟ ಒಂದು ಪ್ರಶ್ನೆಗೆ ಉತ್ತರವನ್ನು ನೀಡುತ್ತದೆ: “ಕಾಡುಕತ್ತೆಯನ್ನು [“ಸೀಬ್ರವನ್ನು,” NW] ಸ್ವತಂತ್ರವಾಗಿರುವಂತೆ ಯಾರು ಕಳುಹಿಸಿಬಿಟ್ಟರು?” (ಯೋಬ 39:⁠5) ಇದಕ್ಕೆ ಉತ್ತರವು ಸ್ಪಷ್ಟವಾಗಿದೆ. ಸರ್ವ ಸಜೀವ ಸೃಷ್ಟಿಜೀವಿಗಳ ವಿನ್ಯಾಸಕನಾಗಿರುವ ಯೆಹೋವ ದೇವರೇ ಆತನಾಗಿದ್ದಾನೆ. (g02 1/22)

[ಪುಟ 18ರಲ್ಲಿರುವ ಚೌಕ]

ಸೀಬ್ರಗಳಿಗೆ ಪಟ್ಟೆಗಳಿವೆ ಏಕೆ?

ಯಾರು ವಿಕಾಸವಾದದಲ್ಲಿ ನಂಬಿಕೆಯಿಡುತ್ತಾರೋ ಅವರು, ಸೀಬ್ರದ ಪಟ್ಟೆಗಳನ್ನು ವಿವರಿಸಲು ಕಷ್ಟಕರವಾದ ವಿಷಯವಾಗಿ ಕಂಡುಕೊಳ್ಳುತ್ತಾರೆ. ಅವು ಎಚ್ಚರಿಕೆ ನೀಡುವ ವ್ಯವಸ್ಥೆಯಾಗಿ ಕಾರ್ಯನಡಿಸಬಹುದು ಎಂದು ಕೆಲವರು ನೆನಸಿದ್ದಾರೆ. ಆದರೂ, ಸಿಂಹಗಳು ಮತ್ತು ಇತರ ದೊಡ್ಡ ಪರಭಕ್ಷಕಗಳು ಸೀಬ್ರದ ಪಟ್ಟೆಗಳಿಂದ ಸ್ವಲ್ಪವೂ ಬೆದರಿಕೆಗೊಳಗಾಗುವುದಿಲ್ಲ ಎಂಬುದಂತೂ ಸುವ್ಯಕ್ತ.

ಈ ಪಟ್ಟೆಗಳು ಲೈಂಗಿಕ ಆಕರ್ಷಣೆಯ ಮಾಧ್ಯಮವಾಗಿ ಕಾರ್ಯನಡಿಸುತ್ತವೆ ಎಂದು ಇತರರು ಸೂಚಿಸಿದ್ದಾರೆ. ಆದರೂ, ಎಲ್ಲ ಸೀಬ್ರಗಳು ತದ್ರೀತಿಯ ಪಟ್ಟೆಗಳುಳ್ಳವುಗಳಾಗಿರುವುದರಿಂದ ಮತ್ತು ಅವುಗಳ ಪಟ್ಟೆಗಳು ಯಾವುದೇ ಒಂದು ಲಿಂಗಜಾತಿಗೆ ವಿಶಿಷ್ಟವಾಗಿಲ್ಲದಿರುವುದರಿಂದ, ಇದು ಸಂಭವನೀಯವಾಗಿ ತೋರುವುದಿಲ್ಲ.

ಇನ್ನೊಂದು ಸಿದ್ಧಾಂತವೇನೆಂದರೆ, ತೀವ್ರ ತಾಪಮಾನದಿಂದ ಕೂಡಿರುವ ಆಫ್ರಿಕದ ಸೂರ್ಯನ ಶಾಖವನ್ನು ಹೋಗಲಾಡಿಸಲಿಕ್ಕಾಗಿ ಬಿಳಿ ಹಾಗೂ ಕಪ್ಪು ವಿನ್ಯಾಸವು ವಿಕಾಸಗೊಂಡಿದೆ. ಹಾಗಾದರೆ, ಇನ್ನಿತರ ಪ್ರಾಣಿಗಳಿಗೆ ಏಕೆ ಈ ಪಟ್ಟೆಗಳಿಲ್ಲ?

ಒಂದು ರೀತಿಯ ವೇಷ ಮರೆಸುವಿಕೆಯೋಪಾದಿ ಕಾರ್ಯನಡಿಸಲಿಕ್ಕಾಗಿ ಸೀಬ್ರವು ಪಟ್ಟೆಗಳನ್ನು ವಿಕಸಿಸಿಕೊಂಡಿತು ಎಂಬುದು ಬಳಕೆಯಲ್ಲಿರುವ ಇನ್ನೊಂದು ಸಿದ್ಧಾಂತವಾಗಿದೆ. ಆಫ್ರಿಕದ ಬಯಲುಗಳಿಂದ ಅಧಿಕಗೊಳ್ಳುವ ಶಾಖವು ಖಂಡಿತವಾಗಿಯೂ ಸೀಬ್ರದ ಆಕೃತಿಯನ್ನು ವಿಕೃತಗೊಳಿಸುತ್ತದೆ ಮತ್ತು ಮೊಬ್ಬುಗೊಳಿಸುತ್ತದೆ, ಹಾಗೂ ಬಹಳ ದೂರದಿಂದ ಒಂದು ಸೀಬ್ರವನ್ನು ನೋಡುವುದನ್ನು ಕಷ್ಟಕರವಾದದ್ದಾಗಿ ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಆದರೂ, ಅಂಥ ದೂರದ ಅಂತರದ ವೇಷ ಮರೆಸುವಿಕೆಯಿಂದ ಯಾವುದೇ ಪ್ರಯೋಜನವಿಲ್ಲ; ಏಕೆಂದರೆ, ಸೀಬ್ರಗಳ ಮುಖ್ಯ ಶತ್ರುಗಳಾಗಿರುವ ಸಿಂಹಗಳು ಬಹಳ ಹತ್ತಿರದ ವ್ಯಾಪ್ತಿಯಿಂದ ಮಾತ್ರ ಆಕ್ರಮಣಮಾಡುತ್ತವೆ.

ಇದ್ದಕ್ಕಿದ್ದ ಹಾಗೆ ದಿಕ್ಕುಪಾಲಾಗಿ ಓಡುತ್ತಿರುವಾಗ, ಪಟ್ಟೆಗಳಿರುವ ಸೀಬ್ರಗಳ ದೇಹಗಳ ದೊಡ್ಡ ಸಮೂಹವು ಬೇಟೆಯಾಡುತ್ತಿರುವ ಸಿಂಹಗಳನ್ನು ತಬ್ಬಿಬ್ಬುಗೊಳಿಸುತ್ತದೆ, ಮತ್ತು ಒಂದೊಂದು ಪ್ರಾಣಿಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಅವುಗಳ ಸಾಮರ್ಥ್ಯಕ್ಕೆ ತಡೆಯನ್ನೊಡ್ಡುತ್ತವೆ ಎಂದು ಸಹ ಪ್ರತಿಪಾದಿಸಲಾಗಿದೆ. ಆದರೂ, ವಾಸ್ತವದಲ್ಲಿ, ಸಿಂಹಗಳು ಬೇರೆ ಪ್ರಾಣಿಗಳನ್ನು ಬೇಟೆಯಾಡುತ್ತಿರುವಾಗ ಎಷ್ಟು ಚತುರವಾಗಿರುತ್ತವೋ ಮತ್ತು ಸಾಫಲ್ಯವನ್ನು ಪಡೆಯುತ್ತವೋ ಅದೇ ರೀತಿಯಲ್ಲಿ ಸೀಬ್ರಗಳನ್ನು ಬೇಟೆಯಾಡುತ್ತಿರುವಾಗಲೂ ಸಾಫಲ್ಯವನ್ನು ಪಡೆಯುತ್ತವೆ ಎಂಬುದನ್ನು ವನ್ಯಜೀವಿ ಅಧ್ಯಯನಗಳು ತೋರಿಸಿವೆ.

ಸೀಬ್ರಗಳ ಪಟ್ಟೆಗಳು ಕೆಲವೊಮ್ಮೆ ಈ ಪ್ರಾಣಿಗಳಿಗೆ ಒಂದು ಅನನುಕೂಲವಾಗಿಯೂ ಪರಿಣಮಿಸಬಹುದು ಎಂಬ ವಾಸ್ತವಾಂಶವು ಈ ಮೇಲಿನ ಪ್ರಶ್ನೆಗೆ ಹೆಚ್ಚಿನ ಗೊಂದಲವನ್ನು ಕೂಡಿಸುತ್ತದೆ. ರಾತ್ರಿ ಸಮಯದಲ್ಲಿ, ಚಂದ್ರನ ಬೆಳಕಿರುವ ಬಯಲುಗಳಲ್ಲಿ, ಸೀಬ್ರಗಳ ಬಿಳಿ ಮತ್ತು ಕಪ್ಪು ಪಟ್ಟೆಗಳುಳ್ಳ ವಿನ್ಯಾಸವು, ಅಖಂಡ ಏಕವರ್ಣವನ್ನು ಹೊಂದಿರುವ ಇತರ ಪ್ರಾಣಿಗಳಿಗಿಂತಲೂ ಹೆಚ್ಚಾಗಿ ಇವುಗಳನ್ನು ತುಂಬ ದೃಷ್ಟಿಗೋಚರವಾಗಿ ಮಾಡುತ್ತವೆ. ಸಾಮಾನ್ಯವಾಗಿ ಸಿಂಹಗಳು ರಾತ್ರಿ ಸಮಯದಲ್ಲಿ ಬೇಟೆಯಾಡುವುದರಿಂದ, ಇದು ಸೀಬ್ರವನ್ನು ತುಂಬ ವಿಶಿಷ್ಟವಾದ ರೀತಿಯಲ್ಲಿ ತೊಂದರೆಗೊಳಪಡಿಸುವಂತೆ ತೋರುತ್ತದೆ.

ಹಾಗಾದರೆ ಸೀಬ್ರಗಳಿಗೆ ಪಟ್ಟೆಗಳು ಎಲ್ಲಿಂದ ಬಂದವು? ಇದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿರುವ ಕೀಲಿ ಕೈಯನ್ನು ಈ ಸರಳ ವಾಕ್ಯದಲ್ಲಿ ಕಂಡುಕೊಳ್ಳಸಾಧ್ಯವಿದೆ: “ಯೆಹೋವನ ಕೈಯೇ ಸಕಲ ಕಾರ್ಯಗಳನ್ನು ಮಾಡುತ್ತದೆ.” (ಯೋಬ 12:⁠9) ಹೌದು, ಸೃಷ್ಟಿಕರ್ತನು ಭೂಮಿಯ ಸೃಷ್ಟಿಜೀವಿಗಳನ್ನು ವಿವಿಧ ಲಕ್ಷಣಗಳು ಹಾಗೂ ಗುಣಗಳೊಂದಿಗೆ ವಿನ್ಯಾಸಿಸಿದ್ದಾನೆ. ಜೀವಿತಕ್ಕಾಗಿ ಇವುಗಳನ್ನು ಅದ್ಭುತಕರವಾಗಿ ಸನ್ನದ್ಧಗೊಳಿಸಿರುವ ಕಾರಣಗಳನ್ನು ಮನುಷ್ಯನು ಪೂರ್ಣವಾಗಿ ಗ್ರಹಿಸದಿರಬಹುದು. ಸಜೀವ ಜೀವಿಗಳಲ್ಲಿರುವ ಅದ್ಭುತಕರ ವಿನ್ಯಾಸವು ಇನ್ನೊಂದು ಉದ್ದೇಶವನ್ನು ಪೂರೈಸುತ್ತದೆ. ಇದು ಮನುಷ್ಯರ ಹೃದಯಗಳಿಗೆ ಸಂತೋಷ, ಸುಖಾನುಭವ ಹಾಗೂ ಆನಂದವನ್ನು ತರುತ್ತದೆ. ವಾಸ್ತವದಲ್ಲಿ, ಸೃಷ್ಟಿಯ ಸೌಂದರ್ಯವು, ಅನೇಕರು ಇಂದು ದೀರ್ಘ ಕಾಲದ ಹಿಂದೆ ದಾವೀದನಿಗೆ ಹೇಗನಿಸಿತೋ ಅದೇ ರೀತಿಯ ಅನಿಸಿಕೆಯನ್ನು ಪಡೆಯುವಂತೆ ಪ್ರಚೋದಿಸಿದೆ: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.”​—⁠ಕೀರ್ತನೆ 104:⁠24.