ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಗಂಧದ್ರವ್ಯ ಯುಗಗಳಾದ್ಯಂತದ ಚರಿತ್ರೆ

ಸುಗಂಧದ್ರವ್ಯ ಯುಗಗಳಾದ್ಯಂತದ ಚರಿತ್ರೆ

ಸುಗಂಧದ್ರವ್ಯ ಯುಗಗಳಾದ್ಯಂತದ ಚರಿತ್ರೆ

ಮೆಕ್ಸಿಕೊದಲ್ಲಿರುವ ಎಚ್ಚರ! ಲೇಖಕರಿಂದ

ಸುಗಂಧದ್ರವ್ಯಕ್ಕೆ ತುಂಬ ಹಳೆಯ ಇತಿಹಾಸವಿದೆ. ಆರಂಭದ ಸುಗಂಧದ್ರವ್ಯವು, ಧಾರ್ಮಿಕ ಸಮಾರಂಭಗಳಲ್ಲಿ ಧೂಪಕ್ಕಾಗಿ ಗೋಂದು ಮತ್ತು ರಾಳದ ಸುಡುವಿಕೆಯೊಂದಿಗೆ ಶುರುವಾಯಿತೆಂದು ಹೇಳಲಾಗುತ್ತದೆ. ಆದುದರಿಂದ, ಸುಗಂಧದ್ರವ್ಯಕ್ಕಾಗಿರುವ “ಪರ್‌ಫ್ಯೂಮ್‌” ಎಂಬ ಇಂಗ್ಲಿಷ್‌ ಪದವು, ಲಾಟಿನ್‌ ಭಾಷೆಯ ಪರ್‌ ಫ್ಯೂಮಮ್‌ನಿಂದ ಬಂದಿದೆ. ಇದರರ್ಥ, “ಹೊಗೆಯ ಮೂಲಕ” ಎಂದಾಗಿದೆ. ಸುಗಂಧದ್ರವ್ಯದ ಕುರಿತಾದ ಅತ್ಯಾರಂಭದ ದಾಖಲೆಯು ಐಗುಪ್ತದಲ್ಲಿ ಸಿಗುತ್ತದೆ. ಫರೋಹ ಟುಟಂಕಮೇನನ ಗೋರಿಯನ್ನು ತೆರೆಯಲಾದಾಗ, 30 ಶತಮಾನಕ್ಕಿಂತಲೂ ಹೆಚ್ಚು ಸಮಯದ ನಂತರವೂ ತಮ್ಮ ಸುಗಂಧವನ್ನು ಕಾಪಾಡಿಕೊಂಡಂಥ ಸುಗಂಧದ್ರವ್ಯದ 3,000ಕ್ಕಿಂತಲೂ ಹೆಚ್ಚು ಜಾಡಿಗಳು ಸಿಕ್ಕಿದವು!

ಸಾಮಾನ್ಯ ಶಕದ ಒಂದು ಸಾವಿರದ ಐನೂರು ವರ್ಷಗಳ ಹಿಂದೆ, ಇಸ್ರಾಯೇಲಿನ ಯಾಜಕರು ಉಪಯೋಗಿಸಿದಂಥ ಪವಿತ್ರವಾದ ಅಭಿಷೇಕ ತೈಲಕ್ಕಾಗಿ ದೇವರು ಕೊಟ್ಟ ತಯಾರಿಕೆಯ ವಿಧಾನದಲ್ಲಿ, “ಅತ್ಯುತ್ತಮವಾದ ಸುಗಂಧದ್ರವ್ಯಗಳನ್ನು” ಸೇರಿಸಲಾಗಿತ್ತು. (ವಿಮೋಚನಕಾಂಡ 30:​23-33) ಇಬ್ರಿಯ ಜನರು ಸುಗಂಧಭರಿತ ಮುಲಾಮುಗಳನ್ನು ಪ್ರಸಾಧನಗಳಲ್ಲಿ ಮತ್ತು ಔಷಧಗಳಲ್ಲಿ ಹಾಗೂ ಸತ್ತವರ ಶವಸಂಸ್ಕಾರಕ್ಕಾಗಿರುವ ಸಿದ್ಧತೆಯಲ್ಲಿ ಉಪಯೋಗಿಸುತ್ತಿದ್ದರು. ಇದು ನಿಸ್ಸಂದೇಹವಾಗಿಯೂ ಸೋಂಕು ನಿವಾರಕದಂತೆ ಮತ್ತು ದುರ್ಗಂಧನಿರೋಧಕದಂತೆ ಕೆಲಸಮಾಡುತ್ತಿತ್ತು. ಉದಾಹರಣೆಗಾಗಿ, ಯೇಸುವಿನ ಶವಕ್ಕೆ ಹಚ್ಚಲಿಕ್ಕಾಗಿ ಸ್ತ್ರೀಯರು ಪರಿಮಳದ್ರವ್ಯಗಳನ್ನೂ ಸುಗಂಧತೈಲವನ್ನೂ ತೆಗೆದುಕೊಂಡುಹೋದರು. (ಲೂಕ 23:56; 24:⁠1) ಒಬ್ಬ ಅತಿಥಿಯ ಪಾದಗಳಿಗೆ ಸುಗಂಧಿತ ಎಣ್ಣೆಯನ್ನು ಹಚ್ಚುವುದು, ಇಸ್ರಾಯೇಲ್ಯರ ಮನೆಗಳಲ್ಲಿ ಅತಿಥಿಸತ್ಕಾರದ ಭಾಗವಾಗಿತ್ತು.​—⁠ಲೂಕ 7:​37-46.

ಪ್ರಥಮ ಶತಮಾನದಲ್ಲಿ, ಒಂದು ವರ್ಷಕ್ಕೆ ರೋಮ್‌ ಸುಮಾರು 2,800 ಟನ್ನುಗಳಷ್ಟು ಲೋಬಾನ ಮತ್ತು 550 ಟನ್ನುಗಳಷ್ಟು ರಕ್ತಬೋಳವನ್ನು ಉಪಯೋಗಿಸುತ್ತಿತ್ತೆಂದು ಹೇಳಲಾಗುತ್ತದೆ. ಬಾಲ ಯೇಸುವಿಗೆ ಅಂಥ ಸುಗಂಧಭರಿತ ವಸ್ತುಗಳನ್ನು ಕೊಡುಗೆಗಳಾಗಿ ಕೊಂಡೊಯ್ಯಲಾಯಿತು. (ಮತ್ತಾಯ 2:​1, 11) ಸಾ.ಶ. 54ರಲ್ಲಿ ರೋಮನ್‌ ಸಮ್ರಾಟ ನೀರೊ ಒಂದು ಸಂತೋಷಗೋಷ್ಠಿಯನ್ನು ಸುವಾಸನೆಭರಿತಗೊಳಿಸಲು, ಸುಮಾರು 46,00,000 ರೂಪಾಯಿಗಳಿಗೆ ಸಮಾನವಾದ ಮೊತ್ತವನ್ನು ಖರ್ಚುಮಾಡಿದನೆಂದು ಹೇಳಲಾಗುತ್ತದೆ. ಅವನ ಭೋಜನಶಾಲೆಗಳಲ್ಲಿ ಮರೆಮಾಡಲ್ಪಟ್ಟಿದ್ದ ಕೊಳವೆಗಳು ಅತಿಥಿಗಳ ಮೇಲೆ ಸುಗಂಧಿತ ನೀರನ್ನು ಚಿಮುಕಿಸುತ್ತಿದ್ದವು. ಸಾ.ಶ. ಏಳನೆಯ ಶತಮಾನದಂದಿನಿಂದ ಹಿಡಿದು, ಚೀನ ದೇಶದವರು ಪರಿಮಳ ಸೂಸುವ ಪೊಟ್ಟಣಗಳ ಸಮೇತ, ಸುಗಂಧದ್ರವ್ಯಗಳನ್ನು ಉಪಯೋಗಿಸಿದರು. ಮಧ್ಯ ಯುಗಗಳಲ್ಲಿ, ಸುಗಂಧದ್ರವ್ಯಗಳನ್ನು ವಿಶೇಷವಾಗಿ ಗುಲಾಬಿ ಸುಗಂಧತೈಲಗಳನ್ನು ಇಸ್ಲಾಮ್‌ ಸಂಸ್ಕೃತಿಗಳಲ್ಲಿ ಉಪಯೋಗಿಸಲಾಯಿತು.

ಹದಿನೇಳನೆಯ ಶತಮಾನದಲ್ಲಿ ಸುಗಂಧದ್ರವ್ಯದ ಉದ್ಯಮವು ಫ್ರಾನ್ಸ್‌ನಲ್ಲಿ ಎಷ್ಟು ಚೆನ್ನಾಗಿ ತಳವೂರಿತೆಂದರೆ, XVನೆಯ ಲೂಯಿಯ ಆಸ್ಥಾನವನ್ನು, ಸುಗಂಧಿತ ಆಸ್ಥಾನವೆಂದು ಕರೆಯಲಾಗುತ್ತಿತ್ತು. ಸುಗಂಧತೈಲಗಳನ್ನು ಚರ್ಮಕ್ಕೆ ಮಾತ್ರವಲ್ಲ, ಬಟ್ಟೆ, ಕೈಚೀಲಗಳು, ಫ್ಯಾನ್‌ಗಳು ಮತ್ತು ಪೀಠೋಪಕರಣಗಳಿಗೂ ಹಚ್ಚಲಾಗುತ್ತಿತ್ತು.

ಕಲೋನ್‌ ಸುಗಂಧಜಲವನ್ನು 18ನೆಯ ಶತಮಾನದಲ್ಲಿ ಕಂಡುಹಿಡಿಯಲಾಯಿತು ಮತ್ತು ಅದನ್ನು ಸ್ನಾನದ ನೀರಿನಲ್ಲಿ ಹಾಕಲಾಗುತ್ತಿತ್ತು, ದ್ರಾಕ್ಷಾರಸದೊಂದಿಗೆ ಬೆರೆಸಲಾಗುತ್ತಿತ್ತು, ಬಾಯಿಯನ್ನು ಮುಕ್ಕಳಿಸಲಿಕ್ಕಾಗಿ ಗಟ್ಟಿಸಕ್ಕರೆಯ ಚೂರಿನ ಮೇಲೆ ಹಾಕಿ ತಿನ್ನಲಾಗುತ್ತಿತ್ತು ಮತ್ತು ಪಿಚಕಾರಿ ಹಾಗೂ ಕುದಿಹಿಟ್ಟಿನ ಪಟ್ಟಿಗಳಲ್ಲಿ ಔಷಧವಾಗಿಯೂ ಉಪಯೋಗಿಸಲಾಗುತ್ತಿತ್ತು. 19ನೆಯ ಶತಮಾನದಲ್ಲಿ ಕೃತಕ ಸುಗಂಧದ್ರವ್ಯಗಳನ್ನು ತಯಾರಿಸಲಾಯಿತು. ಹೀಗೆ, ಔಷಧಕ್ಕಾಗಿ ಬಳಸಲಾಗದಂಥ ಪ್ರಥಮ ಸುಗಂಧದ್ರವ್ಯಗಳ ಮಾರಾಟ ಆರಂಭವಾಯಿತು. ಇಂದು ಸುಗಂಧದ್ರವ್ಯ ತಯಾರಿಕೆಯು, ಕೋಟ್ಯಾನುಕೋಟಿ ಡಾಲರುಗಳ ಲಾಭವುಳ್ಳ ವ್ಯಾಪಾರವಾಗಿದೆ. *(g02 2/8)

[ಪಾದಟಿಪ್ಪಣಿ]

^ ಸುಗಂಧದ್ರವ್ಯಗಳಿಗೆ ಸೂಕ್ಷ್ಮಸಂವೇದಿಯಾಗಿರುವುದರ ಬಗ್ಗೆ ಆಗಸ್ಟ್‌ 8, 2000ದ (ಇಂಗ್ಲಿಷ್‌) ಸಂಚಿಕೆಯಲ್ಲಿ ಚರ್ಚಿಸಲಾಗಿದೆ.

[ಪುಟ 22ರಲ್ಲಿರುವ ಚಿತ್ರ]

ಐಗುಪ್ತ, ಸಾ.ಶ.ಪೂ. 14ನೆಯ ಶತಮಾನದ ಟುಟಂಕಮೇನನ ಸಮಾಧಿಯಿಂದ ಸುಗಂಧದ್ರವ್ಯದ ಜಾಡಿ

[ಕೃಪೆ]

Werner Forman/Egyptian Museum, Cairo, Egypt/Art Resource, NY

[ಪುಟ 22ರಲ್ಲಿರುವ ಚಿತ್ರ]

ಗ್ರೀಸ್‌, ಸಾ.ಶ.ಪೂ. 5ನೆಯ ಶತಮಾನ

[ಕೃಪೆ]

Musée du Louvre, Paris

[ಪುಟ 22ರಲ್ಲಿರುವ ಚಿತ್ರವಿವರಣೆ]

ಫ್ರಾನ್ಸ್‌, ಸಾ.ಶ. 18ನೆಯ ಶತಮಾನ

[ಕೃಪೆ]

Avec lʹaimable autorisation du Musée de la Parfumerie Fragonard, Paris

[ಪುಟ 22ರಲ್ಲಿರುವ ಚಿತ್ರ]

ಆಧುನಿಕ ದಿನದ ಸುಗಂಧದ್ರವ್ಯದ ಬಾಟಲಿ