ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತರು ದೈವಿಕ ಸಂರಕ್ಷಣೆಯನ್ನು ನಿರೀಕ್ಷಿಸಬೇಕೊ?

ಕ್ರೈಸ್ತರು ದೈವಿಕ ಸಂರಕ್ಷಣೆಯನ್ನು ನಿರೀಕ್ಷಿಸಬೇಕೊ?

ಬೈಬಲಿನ ದೃಷ್ಟಿಕೋನ

ಕ್ರೈಸ್ತರು ದೈವಿಕ ಸಂರಕ್ಷಣೆಯನ್ನು ನಿರೀಕ್ಷಿಸಬೇಕೊ?

ತನ್ನ ಆರಾಧಕರನ್ನು ಹಾನಿಯಿಂದ ಕಾಪಾಡಲು ದೇವರಿಗಿರುವ ಸಾಮರ್ಥ್ಯದ ಬಗ್ಗೆ ಬೈಬಲು ಅನೇಕಾವರ್ತಿ ಮಾತಾಡುತ್ತದೆ. ರಾಜ ದಾವೀದನು ಹೇಳಿದ್ದು: “ಯೆಹೋವನೇ, ಕೆಡುಕರಿಂದ ನನ್ನನ್ನು ಬಿಡಿಸು; ಬಲಾತ್ಕಾರಿಗಳಿಗೆ ತಪ್ಪಿಸಿ ಕಾಪಾಡು.” (ಕೀರ್ತನೆ 140:1) ಇಂದು, ಬಲಾತ್ಕಾರ, ಪಾತಕ ಅಥವಾ ನೈಸರ್ಗಿಕ ವಿಪತ್ತುಗಳಿಗೊಳಗಾಗಿರುವ ಅನೇಕ ಮಂದಿ ದೇವರ ಆರಾಧಕರು, ಮರಣ ಅಥವಾ ಹಾನಿಯನ್ನು ಬಹಳ ಕಷ್ಟದಿಂದ ತಪ್ಪಿಸಿಕೊಂಡಿದ್ದಾರೆ. ಈ ಸಂದರ್ಭಗಳಲ್ಲಿ, ದೇವರು ತಮ್ಮನ್ನು ಅದ್ಭುತಕರವಾಗಿ ರಕ್ಷಿಸಿದ್ದಾನೊ ಎಂದು ಅವರು ಯೋಚಿಸುತ್ತಾರೆ. ಏಕೆಂದರೆ, ವಿಶೇಷವಾಗಿ ಇನ್ನು ಅನೇಕ ಸಂದರ್ಭಗಳಲ್ಲಿ, ದೇವಭಯವುಳ್ಳ ಜನರು ಹಾಗೆ ರಕ್ಷಿಸಲ್ಪಡದೆ, ಮಹಾ ದುರಂತಗಳಿಗೂ ಹಿಂಸಾತ್ಮಕ ಮರಣಗಳಿಗೂ ಈಡಾಗಿದ್ದಾರೆ.

ಹಾಗಾದರೆ ಯೆಹೋವನು ಕೆಲವರನ್ನು ಹಾನಿಯಿಂದ ಸಂರಕ್ಷಿಸಿ ಇನ್ನು ಕೆಲವರನ್ನು ಸಂರಕ್ಷಿಸದೆ ಇರುತ್ತಾನೊ? ನಾವು ಇಂದು ಹಿಂಸಾಚಾರದಿಂದಲೂ ವಿಪತ್ತುಗಳಿಂದಲೂ ಅದ್ಭುತಕರವಾಗಿ ಪಾರುಗೊಳಿಸಲ್ಪಡುವುದನ್ನು ನಿರೀಕ್ಷಿಸಬಹುದೊ?

ಬೈಬಲ್‌ ವೃತ್ತಾಂತಗಳಲ್ಲಿ ತಿಳಿಸಲ್ಪಟ್ಟಿರುವ ಅದ್ಭುತಕರವಾದ ಸಂರಕ್ಷಣೆ

ದೇವರು ತನ್ನ ಆರಾಧಕರ ಪರವಾಗಿ ಅದ್ಭುತಕರವಾಗಿ ಹಸ್ತಕ್ಷೇಪ ಮಾಡಿದ ಅನೇಕಾನೇಕ ವೃತ್ತಾಂತಗಳು ಬೈಬಲಿನಲ್ಲಿವೆ. (ಯೆಶಾಯ 38:1-8; ಅ. ಕೃತ್ಯಗಳು 12:1-11; 16:25, 26) ಬೇರೆ ಸಂದರ್ಭಗಳಲ್ಲಿ ಯೆಹೋವನ ಸೇವಕರು ವಿಪತ್ತುಗಳಿಂದ ಪಾರುಗೊಳಿಸಲ್ಪಡದಿದ್ದ ಅನುಭವಗಳೂ ಶಾಸ್ತ್ರದಲ್ಲಿವೆ. (1 ಅರಸುಗಳು 21:1-16; ಅ. ಕೃತ್ಯಗಳು 12:1, 2; ಇಬ್ರಿಯ 11:35-38) ಆದುದರಿಂದ, ಯೆಹೋವನು ಒಂದು ನಿರ್ದಿಷ್ಟ ಕಾರಣ ಅಥವಾ ಉದ್ದೇಶದ ನಿಮಿತ್ತ ತಾನು ಆರಿಸಿಕೊಳ್ಳುವಲ್ಲಿ ಸಂರಕ್ಷಣೆಯನ್ನು ಕೊಡಲು ನಿರ್ಣಯಿಸಬಲ್ಲನು. ಆದಕಾರಣ, ಕ್ರೈಸ್ತರು ವೈಯಕ್ತಿಕವಾಗಿ ಒಬ್ಬೊಬ್ಬರು ಸಂಕಷ್ಟಗಳಿಂದ ಪಾರುಗೊಳಿಸಲ್ಪಡದಿರುವಲ್ಲಿ, ದೇವರು ಅವರ ಕೈಬಿಟ್ಟಿದ್ದಾನೆಂದು ಅವರು ತೀರ್ಮಾನಿಸಬಾರದು. ಕೆಟ್ಟ ಸಂಗತಿಗಳು, ಯೆಹೋವನ ನಂಬಿಗಸ್ತರಿಗೂ ಸಂಭವಿಸುತ್ತವೆಂಬ ನಿಜತ್ವವನ್ನು ನಾವು ಒಪ್ಪಿಕೊಳ್ಳಬೇಕು. ಆದರೆ ಹೀಗೇಕೆ?

ದೇವರ ನಂಬಿಗಸ್ತ ಸೇವಕರಿಗೆ ಕೆಟ್ಟ ಸಂಗತಿಗಳೇಕೆ ಸಂಭವಿಸುತ್ತವೆ?

ನಾವೆಲ್ಲರೂ ಆದಾಮ ಹವ್ವರಿಂದ ಪಾಪ ಮತ್ತು ಮರಣವನ್ನು ಬಾಧ್ಯತೆಯಾಗಿ ಪಡೆದದ್ದು ಇದಕ್ಕೆ ಒಂದು ಕಾರಣ. ಹೀಗಿರುವುದರಿಂದ ನಾವು ನೋವು, ಕಷ್ಟಾನುಭವ ಮತ್ತು ಮರಣದ ಪ್ರತೀಕ್ಷೆಯನ್ನು ಎದುರಿಸುತ್ತೇವೆ. (ರೋಮಾಪುರ 5:12; 6:23) ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿರುವುದು ಇದಕ್ಕಿರುವ ಇನ್ನೊಂದು ಕಾರಣ. ನಮ್ಮ ದಿನಗಳ ಜನರನ್ನು ಬೈಬಲ್‌, “ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ” ಎಂಬುದಾಗಿ ವರ್ಣಿಸುತ್ತದೆ. (2 ತಿಮೊಥೆಯ 3:1-5) ಬಲಾತ್ಕಾರ ಸಂಭೋಗ, ಜನರನ್ನು ಅಪಹರಿಸುವುದು, ಕೊಲೆ ಹಾಗೂ ಇನ್ನಿತರ ಕ್ರೂರ ಪಾತಕಗಳ ಹೆಚ್ಚುತ್ತಿರುವ ಸಂಖ್ಯೆಯೇ ಇವುಗಳಿಗೆ ಪುರಾವೆ ಕೊಡುತ್ತವೆ.

ದೇವರ ಅನೇಕ ನಂಬಿಗಸ್ತ ಸೇವಕರು ಹಿಂಸಾತ್ಮಕ ಜನರ ಮಧ್ಯೆ ಜೀವಿಸಿ ಕೆಲಸ ಮಾಡುವುದರಿಂದ, ಕೆಲವು ಸಮಯಗಳಲ್ಲಿ ಅವರು ಇಂತಹ ಜನರ ಬಲಿಪಶುಗಳಾಗುತ್ತಾರೆ. ನಾವು ಕೆಲವು ಬಾರಿ, ತಪ್ಪಾದ ಸಮಯದಲ್ಲಿ ತಪ್ಪಾದ ಸ್ಥಳದಲ್ಲಿರುವುದರಿಂದ ಜೀವಾಪಾಯಕರವಾದ ಸನ್ನಿವೇಶ ನಮಗೆ ಬಂದೀತು. ಇದಲ್ಲದೆ, “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎಂದು ಹೇಳಿದ ಸೊಲೊಮೋನನ ಮಾತುಗಳ ನಿಜತ್ವವನ್ನು ನಾವು ಅನುಭವಿಸುತ್ತೇವೆ.​—⁠ಪ್ರಸಂಗಿ 9:11.

ಇದಕ್ಕೆ ಕೂಡಿಸಿ, ಕ್ರೈಸ್ತರು ದೇವರನ್ನು ಆರಾಧಿಸುವ ಕಾರಣ ಹಿಂಸೆಯ ಬಲಿಗಳಾಗುತ್ತಾರೆಂದು ಅಪೊಸ್ತಲ ಪೌಲನು ಹೇಳಿದನು. ಅವನಂದದ್ದು: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” (2 ತಿಮೊಥೆಯ 3:12) ಇತ್ತೀಚೆಗಿನ ವರುಷಗಳಲ್ಲಿ, ಅನೇಕ ದೇಶಗಳಲ್ಲಿ ಇದು ನಿಜವಾಗಿ ಪರಿಣಮಿಸಿದೆ.

ಆದಕಾರಣ, ದೇವಭಯವುಳ್ಳ ಜನರು ಹಿಂಸಾಚಾರ, ಪಾತಕ, ನೈಸರ್ಗಿಕ ವಿಪತ್ತು ಅಥವಾ ಅನಿರೀಕ್ಷಿತ ಮರಣದಿಂದ ವಿನಾಯಿತಿಯನ್ನು ಪಡೆಯುವುದಿಲ್ಲ. ವಿಪತ್ತಿನ ಅನುಭವವಿಲ್ಲದೆ ಜೀವಿಸಲಿಕ್ಕಾಗಿ ಯೆಹೋವನು ತನ್ನ ಜನರ ಸುತ್ತಲೂ ಬೇಲಿ ಹಾಕಿದ್ದಾನೆಂಬ ವಾದವನ್ನು ಸೈತಾನನು ಉಪಯೋಗಿಸಲು ಪ್ರಯತ್ನಿಸಿದ್ದಾನೆ. (ಯೋಬ 1:​9, 10) ಆದರೆ ವಿಷಯ ಹಾಗಿಲ್ಲ. ಯೆಹೋವನು ತನ್ನ ಜನರನ್ನು ಒಂದು ಸನ್ನಿವೇಶದಿಂದ ಅದ್ಭುತಕರವಾದ ರೀತಿಯಲ್ಲಿ ಪಾರುಗೊಳಿಸದಿದ್ದರೂ, ಆತನು ಅವರಿಗೆ ಸಂರಕ್ಷಣೆಯನ್ನು ಒದಗಿಸುತ್ತಾನೆಂಬ ಖಾತ್ರಿ ನಮಗಿರಬಲ್ಲದು.

ಯೆಹೋವನು ಇಂದು ತನ್ನ ಜನರನ್ನು ಕಾಪಾಡುವ ವಿಧ

ಯೆಹೋವನು ತನ್ನ ವಾಕ್ಯದ ಮೂಲಕ ತನ್ನ ಜನರನ್ನು ಕಾಪಾಡುವ ಮಾರ್ಗದರ್ಶನವನ್ನು ಕೊಡುತ್ತಾನೆ. ಆತ್ಮಿಕತೆಯೂ ಬೈಬಲ್‌ ಜ್ಞಾನವೂ ನಮಗೆ ಒಳ್ಳೆಯ ವಿವೇಚನೆಯನ್ನೂ ಸ್ವಸ್ಥ ಮನಸ್ಸನ್ನೂ ಒದಗಿಸಬಲ್ಲವು. ಇದು ಅನಾವಶ್ಯಕವಾದ ತಪ್ಪುಗಳನ್ನು ಮಾಡುವುದರಿಂದ ನಮ್ಮನ್ನು ದೂರವಿಟ್ಟು ವಿವೇಕಯುತವಾದ ನಿರ್ಣಯಗಳನ್ನು ಮಾಡುವಂತೆ ನಮಗೆ ಸಹಾಯ ಮಾಡಬಲ್ಲದು. (ಕೀರ್ತನೆ 38:4; ಜ್ಞಾನೋಕ್ತಿ 3:21; 22:3) ದೃಷ್ಟಾಂತಕ್ಕೆ, ಲೈಂಗಿಕ ನೀತಿ, ದುರಾಶೆ, ಕ್ರೋಧ ಮತ್ತು ಹಿಂಸಾಚಾರದ ಕುರಿತು ಬೈಬಲ್‌ ಕೊಟ್ಟಿರುವ ಸಲಹೆಯು ಅನೇಕ ವಿಪತ್ತುಗಳಿಂದ ಕ್ರೈಸ್ತರನ್ನು ತಪ್ಪಿಸಿದೆ. ಅಲ್ಲದೆ, ಕೆಟ್ಟವರೊಂದಿಗೆ ಆಪ್ತ ಸಹವಾಸ ಮಾಡದ ಕಾರಣ, ವಿಪತ್ತು ಬಡಿಯುವಾಗ, ನಾವು ಅಪಾಯಕರವಾದ ಸ್ಥಳದಲ್ಲಿ ಅಪಾಯದ ಸಮಯದಲ್ಲಿ ಇರುವ ಸಂಭವವು ಕಡಮೆಯಾಗಿರುತ್ತದೆ. (ಕೀರ್ತನೆ 26:4, 5; ಜ್ಞಾನೋಕ್ತಿ 4:14) ಬೈಬಲ್‌ ಮೂಲಸೂತ್ರಾನುಸಾರ ಬದುಕುವವರು ಶ್ರೇಷ್ಠ ಜೀವನರೀತಿಯಲ್ಲಿ ಆನಂದಿಸುವುದರಿಂದ, ಅನೇಕ ವೇಳೆ ಇದರ ಫಲವಾಗಿ ಹೆಚ್ಚು ಉತ್ತಮವಾದ ಮಾನಸಿಕ ಮತ್ತು ಶಾರೀರಿಕ ಆರೋಗ್ಯವು ಅವರದ್ದಾಗಿರುತ್ತದೆ.

ಕೆಟ್ಟ ಸಂಗತಿಗಳು ನಮ್ಮ ಮೇಲೆ ಬರುವಂತೆ ದೇವರು ಬಿಡಬಹುದಾದರೂ, ತನ್ನ ಆರಾಧಕರು ಅದನ್ನು ಸಹಿಸಿಕೊಳ್ಳುವಂತೆ ಬೇಕಾಗುವ ಶಕ್ತಿಯನ್ನೂ ಆತನು ಒದಗಿಸುತ್ತಾನೆಂಬ ತಿಳುವಳಿಕೆಯು ತುಂಬ ಸಾಂತ್ವನದಾಯಕವಾದ ಸಂಗತಿಯಾಗಿದೆ. ಅಪೊಸ್ತಲ ಪೌಲನು ಆಶ್ವಾಸನೆ ನೀಡುವುದು: “ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” (1 ಕೊರಿಂಥ 10:13) ನಾವು ವಿಪತ್ತುಗಳನ್ನು ತಾಳಿಕೊಳ್ಳಲು ಸಹಾಯಮಾಡುವ “ಬಲಾಧಿಕ್ಯ”ವನ್ನೂ ಬೈಬಲು ವಾಗ್ದಾನಿಸುತ್ತದೆ.​—⁠2 ಕೊರಿಂಥ 4:⁠7.

ದೇವರು ತನ್ನ ಚಿತ್ತಾನುಸಾರ ಮಾಡುತ್ತಾನೆ

ಘಟಿಸಲಿರುವ ಪ್ರತಿಯೊಂದು ವಿಪತ್ತಿನಲ್ಲಿ ದೇವರು ತಮ್ಮನ್ನು ಅದ್ಭುತಕರವಾಗಿ ರಕ್ಷಿಸಬೇಕೆಂದು ಕ್ರೈಸ್ತರು ನಿರೀಕ್ಷಿಸಬೇಕೊ? ಅಂತಹ ಹಾರೈಕೆಯನ್ನು ಬೈಬಲ್‌ ದಾಖಲೆಯು ಸಮರ್ಥಿಸುವುದಿಲ್ಲ.

ಹೌದು, ಯೆಹೋವ ದೇವರು ತನ್ನ ಸೇವಕರಲ್ಲಿ ಯಾವನ ಪರವಾಗಿಯೂ ನೇರವಾಗಿ ಹಸ್ತಕ್ಷೇಪ ಮಾಡಲು ಆರಿಸಿಕೊಳ್ಳಬಹುದೆಂಬುದು ನಿಶ್ಚಯ. ಮತ್ತು ಒಬ್ಬನು ದೈವಿಕ ಹಸ್ತಕ್ಷೇಪದ ಕಾರಣ ತಾನು ಹಾನಿಗೊಳಗಾಗಿರುವುದಿಲ್ಲ ಎಂದು ನಂಬುವುದಾದರೆ, ಅವನನ್ನು ನಾವು ಟೀಕಿಸಬಾರದು. ಹಾಗೆಯೇ, ಯೆಹೋವನು ಹಸ್ತಕ್ಷೇಪ ಮಾಡಲು ಮನಸ್ಸು ಮಾಡದಿದ್ದರೆ, ಅದನ್ನು ದೇವರ ಅಸಮಾಧಾನದ ಸೂಚನೆಯಾಗಿ ಯಾರೂ ತೆಗೆದುಕೊಳ್ಳಬಾರದು.

ನಾವು ಯಾವದೇ ಪರೀಕ್ಷೆ ಅಥವಾ ಸನ್ನಿವೇಶವನ್ನು ಎದುರಿಸಲಿ, ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ, ಒಂದೇ ಆ ಸನ್ನಿವೇಶವನ್ನು ತೊಲಗಿಸಿ, ಇಲ್ಲವೆ ಅದನ್ನು ತಾಳಿಕೊಳ್ಳುವಂತೆ ಬಲವನ್ನು ನೀಡಿ, ಇಲ್ಲವೆ ನಾವು ಸಾಯುವಲ್ಲಿ, ಆತನ ನೂತನ ಲೋಕದಲ್ಲಿ ನಿತ್ಯಜೀವಕ್ಕೆ ಪುನರುತ್ಥಾನ ಮಾಡುವ ಮೂಲಕ ದೈವಿಕ ಸಂರಕ್ಷಣೆಯನ್ನು ಒದಗಿಸುವನೆಂಬ ಭರವಸೆ ನಮಗಿರಲಿ.​—⁠ಕೀರ್ತನೆ 37:10, 11, 29; ಯೋಹಾನ 5:28, 29. (g02 4/8)