ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಕಾಲವಿಳಂಬ ಮತ್ತು ಆರೋಗ್ಯ

“ಕಾಲವಿಳಂಬಮಾಡುವುದು ನಿಮ್ಮನ್ನು ಅಸ್ವಸ್ಥಗೊಳಿಸಬಲ್ಲದು” ಎಂದು ವ್ಯಾಂಕೊವರ್‌ ಸನ್‌ ವಾರ್ತಾಪತ್ರಿಕೆಯಲ್ಲಿ ಉಲ್ಲೇಖಿಸಲ್ಪಟ್ಟಿದ್ದ ಒಂದು ಸಮೀಕ್ಷೆಯು ಹೇಳುತ್ತದೆ. ಕೆನಡದ ಟೊರಾಂಟೊದಲ್ಲಿ ಜರಗಿದ ಅಮೆರಿಕನ್‌ ಸೈಕೊಲಾಜಿಕಲ್‌ ಸೊಸೈಟಿಯ ಇತ್ತೀಚಿನ ಸಮ್ಮೇಳನದಲ್ಲಿ ಪ್ರಸ್ತುತಪಡಿಸಲ್ಪಟ್ಟಂತೆ, ಕೆನಡದ 200 ಮಂದಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಸಮೀಕ್ಷೆಯು, “ಕಾಲವಿಳಂಬಮಾಡುವವರು ಕಾರ್ಯವನ್ನು ಮುಂದಕ್ಕೆ ತಳ್ಳುವ ಮೂಲಕ ತಮ್ಮನ್ನು ಎಷ್ಟೊಂದು ಒತ್ತಡದ ಕೆಳಗೆ ಹಾಕಿದರೆಂದರೆ ಅವರು ಇತರರಿಗಿಂತಲೂ ಹೆಚ್ಚು ಒತ್ತಡ ಸಂಬಂಧಿತ ಕಾಯಿಲೆಗಳಿಂದ ನರಳುತ್ತಿದ್ದರು. . . . ಪರೀಕ್ಷೆಯ ದಿನ ಹತ್ತಿರ ಬರುತ್ತಾ ಇದ್ದಾಗ, ಕಾಲವಿಳಂಬ ಮಾಡುವವರ ಒತ್ತಡದ ಮಟ್ಟಗಳು ಮೇಲೇರಿದವು. ಯಾವುದರ ಬಗ್ಗೆಯೂ ಚಿಂತೆಯಿಲ್ಲದ ಇವರಿಗೆ ತಲೆನೋವುಗಳು, ಬೆನ್ನುನೋವು, ಶೀತ, ನಿದ್ರೆಯ ಸಮಸ್ಯೆಗಳು ಮತ್ತು ಇನ್ನಿತರ ಅಲರ್ಜಿಗಳ ದಾಳಿಯಾಗುತ್ತಿದ್ದವು. ಅವರು ಹೆಚ್ಚಿನ ಶ್ವಾಸಸಂಬಂಧಿತ ರೋಗಗಳಿಂದಲೂ ಸೋಂಕು ಮತ್ತು ಮೈಗ್ರೇನ್‌ ತಲೆನೋವುಗಳಿಂದಲೂ ನರಳುತ್ತಿದ್ದರು ಎಂಬದನ್ನು ಕಂಡುಹಿಡಿಯಿತು.”(g02 4/8)

ಉತ್ತರ ಧ್ರುವ ಪ್ರದೇಶದ ಎಚ್ಚರಿಕೆ

“ಈ ಭೂಗ್ರಹದ ತುಂಬ ನಾಜೂಕಿನ ಉತ್ತರ ಧ್ರುವ ಪ್ರದೇಶದಲ್ಲಿ ನಡೆಯುತ್ತಿರುವ ಕೈಗಾರಿಕಾ ಅಭಿವೃದ್ಧಿಯು ನಿಧಾನವಾಗದಿದ್ದರೆ ಆ ಪ್ರದೇಶದ ಸುಮಾರು 80 ಪ್ರತಿಶತದಷ್ಟು ಭಾಗವು ಗುರುತರವಾದ ರೀತಿಯಲ್ಲಿ ಹಾನಿಗೊಳಿಸಲ್ಪಡುವುದು,” ಎಂದು ಕೆನಡದ ವಾರ್ತಾಪತ್ರಿಕೆಯಾದ ದ ಗ್ಲೋಬ್‌ ಆ್ಯಂಡ್‌ ಮೇಲ್‌ ಹೇಳುತ್ತದೆ. ಇಡೀ ಉತ್ತರ ಧ್ರುವ ಪ್ರದೇಶದಲ್ಲಿ ಮಾನವ ಅಭಿವೃದ್ಧಿಯಿಂದಾಗುವ ಒಟ್ಟು ಪರಿಣಾಮಗಳ ಕುರಿತಾಗಿ ಯುಎನ್‌ ಪರಿಸರ ಕಾರ್ಯಯೋಜನೆಯ ಒಂದು ವರದಿಯು ಹೇಳಿಕೆಯನ್ನು ಕೊಡುತ್ತದೆ. ಆ ವರದಿಗನುಸಾರ, ಕೈಗಾರಿಕಾ ಅಭಿವೃದ್ಧಿಯು 1940ರಿಂದ 1990ರ ವರೆಗೆ ನಡೆದಂಥ ವೇಗದಲ್ಲೇ ನಡೆದರೆ, ಫಲಿತಾಂಶಗಳು ಧ್ವಂಸಕರವಾಗಿರುವವು. ಉತ್ತರ ಧ್ರುವ ಪ್ರದೇಶದ ಅನೇಕ ಪ್ರಾಣಿಗಳು ವಲಸೆಹೋಗುವಂಥವುಗಳು ಆಗಿರುವುದರಿಂದ ಆ ಹಾನಿಯು ಬೇರೆ ಪ್ರದೇಶಗಳಿಗೂ ಹಬ್ಬುವ ಸಾಧ್ಯತೆಯಿದೆಯೆಂದೂ ಹೇಳಲಾಗಿದೆ. “ಈಗಾಗಲೇ, ಲೋಕದ ಧ್ರುವ ಪ್ರದೇಶದಲ್ಲಿ 10ರಿಂದ 15 ಪ್ರತಿಶತ ಭಾಗವು ಕೈಗಾರಿಕಾ ಅಭಿವೃದ್ಧಿಯಿಂದಾಗಿ [ಪ್ರತಿಕೂಲವಾಗಿ] ಬಾಧಿಸಲ್ಪಟ್ಟಿದೆ” ಎಂದು ಆ ವಾರ್ತಾಪತ್ರಿಕೆಯು ಹೇಳುತ್ತದೆ.(g02 3/22)

‘ಧರ್ಮಕ್ಕೆ ಎರಡನೆಯ ಸ್ಥಾನ’

ಇತ್ತೀಚೆಗೆ ಬ್ರಸಿಲ್‌ನ ಬಡ ವಯಸ್ಕರ ನಡುವೆ ನಡೆಸಲಾದ ಸಮೀಕ್ಷೆಯು, 67 ಪ್ರತಿಶತ ಮಂದಿ ತಾವು ಕ್ಯಾಥೊಲಿಕರೆಂದು ಹೇಳಿಕೊಳ್ಳುತ್ತಿರುವುದಾದರೂ, ಯೇಸುವಿನಲ್ಲಿ, ಮರಿಯಳಲ್ಲಿ ಮತ್ತು ಚರ್ಚು ಬೋಧನೆಯಲ್ಲಿ ನಿಜವಾಗಿಯೂ ನಂಬಿಕೆಯಿರುವುದಾಗಿ ಹೇಳಿಕೊಂಡವರು ಕೇವಲ 35 ಪ್ರತಿಶತ ಮಂದಿ ಎಂಬುದನ್ನು ಪ್ರಕಟಿಸಿತು. ಮತ್ತು ಇದಕ್ಕಿಂತಲೂ ಕಡಿಮೆ ಮಂದಿ, ಅಂದರೆ ಬರೀ 30 ಪ್ರತಿಶತ ಜನರು ಪ್ರತಿ ವಾರ ಚರ್ಚಿಗೆ ಹೋಗುತ್ತಾರೆ. ವಿವಾಹಪೂರ್ವ ಸಂಭೋಗ (44 ಪ್ರತಿಶತ), ವಿವಾಹ ವಿಚ್ಛೇದ (59 ಪ್ರತಿಶತ), ಪುನರ್ವಿವಾಹ (63 ಪ್ರತಿಶತ), ಮತ್ತು ಗರ್ಭನಿರೋಧಕಗಳ ಉಪಯೋಗ (73 ಪ್ರತಿಶತ)ದ ಕುರಿತಾದ ಚರ್ಚಿನ ಬೋಧನೆಯನ್ನು ಅನೇಕರು ಅಸಮ್ಮತಿಸುತ್ತಾರೆಂಬುದನ್ನೂ ಬ್ರಸಿಲ್‌ನ ಬಿಷಪರ ನ್ಯಾಷನಲ್‌ ಕಾನ್ಫರೆನ್ಸ್‌ನಿಂದ ನೇಮಿಸಲ್ಪಟ್ಟಿದ್ದ ಆ ಸಮೀಕ್ಷೆಯು ತೋರಿಸುತ್ತದೆ. ಚರ್ಚಿನಲ್ಲಿ ಪಾದ್ರಿಗಳ ಕೊರತೆ, ಬ್ರಸಿಲ್‌ನ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಇಳಿಮುಖವಾಗುತ್ತಿರುವ ಅದರ ಪ್ರಭಾವ, ಮತ್ತು ಅದರ ಬಾಹ್ಯಾಚಾರದ ಬೋಧನೆಗಳ ಕಲಿಸುವಿಕೆಯಿಂದಾಗಿ ಚರ್ಚು ಬೆಂಬಲವನ್ನು ಕಳೆದುಕೊಳ್ಳುತ್ತಿದೆಯೆಂಬುದು ದೇವತಾಶಾಸ್ತ್ರಜ್ಞ ಸೆವರೀನೊ ವಿಸೆಂಟೇಯ ಅಭಿಪ್ರಾಯವಾಗಿದೆ. ಅವರು ಹೇಳುವುದು: “ಹೊಸ ತಲೆಮಾರಿನ ಕ್ಯಾಥೊಲಿಕರು, ಸಂಬಂಧ ವಾದದಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ, ಮತ್ತು ಧರ್ಮವನ್ನು ಎರಡನೆಯ ಸ್ಥಾನದಲ್ಲಿಡಬೇಕಾದ ಒಂದು ವಿಷಯವಾಗಿ ದೃಷ್ಟಿಸುತ್ತಾರೆ.”(g02 3/8)

ನಸುನಿದ್ದೆಯ ಶಕ್ತಿ

ಲಾಬೊರೊ ವಿಶ್ವವಿದ್ಯಾನಿಲಯದ ಬ್ರಿಟಿಷ್‌ ನಿದ್ರೆತಜ್ಞ ಪ್ರೊಫೆಸರ್‌ ಜಿಮ್‌ ಹಾರ್ನ್‌ ಎಂಬವರಿಗನುಸಾರ, ಮಧ್ಯಾಹ್ನದ ತೂಕಡಿಸುವಿಕೆಗೆ ಅತ್ಯುತ್ತಮ ಔಷಧಿ, “ಹತ್ತು ನಿಮಿಷದ ನಸುನಿದ್ದೆಯೇ” ಎಂದು ಲಂಡನಿನ ದ ಟೈಮ್ಸ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಹಾರ್ನ್‌ ಹೇಳುವುದೇನೆಂದರೆ, “ಅದು ಬೇರಾವುದೇ ಚಿಕಿತ್ಸೆಯಂತೆಯೇ ಇದೆ: ವ್ಯಥೆಯನ್ನು ಅನುಭವಿಸುತ್ತಿರುವ ಸಮಯದ ಹತ್ತಿರದಲ್ಲೇ ಚಿಕಿತ್ಸೆಯನ್ನು ಕೊಡುವಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.” ಅಮೆರಿಕದಲ್ಲಿನ ಕೆಲವೊಂದು ಕಂಪನಿಗಳು, ನಸುನಿದ್ದೆಯ ಕೋಣೆಗಳನ್ನು ಸಿದ್ಧಪಡಿಸಿವೆ. ಅವುಗಳಲ್ಲಿ ತಮ್ಮ ಸಿಬ್ಬಂದಿಗಾಗಿ ಮಂಚಗಳು, ಕಂಬಳಿಗಳು, ತಲೆದಿಂಬುಗಳು, ಮತ್ತು ಶಮನಕಾರಿ ಧ್ವನಿಗಳಿರುತ್ತವೆ. ಅಲ್ಲದೆ ಪ್ರತಿ 20 ನಿಮಿಷಗಳಂತೆ ಆಲಾರಮ್‌ ಬಾರಿಸುವ ಗಡಿಯಾರಗಳೂ ಇರುತ್ತವೆ. ಆದರೆ ನೀವು ತೀರ ಹೆಚ್ಚು ಸಮಯ ನಿದ್ರಿಸಿದರೆ, ಅಂದರೆ 25 ನಿಮಿಷಗಳೆಂದಿಟ್ಟುಕೊಳ್ಳಿ, ನೀವು ಏಳುವಾಗ ನಿಮ್ಮ ಸ್ಥಿತಿಯು ಇನ್ನೂ ಕೆಟ್ಟದ್ದಾಗಿರುವುದು ಎಂದು ಪ್ರೊಫೆಸರ್‌ ಹಾರ್ನ್‌ ಎಚ್ಚರಿಕೆ ಕೊಡುತ್ತಾರೆ. “ಒಮ್ಮೆ ದೇಹವು ಹತ್ತು ನಿಮಿಷಗಳಿಗಿಂತಲೂ ಹೆಚ್ಚು ನಿದ್ದೆಯನ್ನು ಪಡೆಯಿತೆಂದರೆ, ಈಗ ರಾತ್ರಿ ಸಮಯವೆಂದು ಅದು ನೆನಸಲಾರಂಭಿಸಿ, ಗಾಢವಾದ ನಿದ್ದೆಯ ಪ್ರಕ್ರಿಯೆಯು ಆರಂಭವಾಗುತ್ತದೆ.”(g02 3/8)

ಗಂಡಸರಿಗೆ ಮೀನು ತಿನ್ನುವಂತೆ ಪ್ರೋತ್ಸಾಹಿಸಲಾಗುತ್ತದೆ

ಸಾಲ್ಮನ್‌, ಹೆರಿಂಗ್‌, ಮತ್ತು ಬಂಗುಡೆಯಂಥ ಕೊಬ್ಬುಳ್ಳ ಮೀನುಗಳನ್ನು ದೊಡ್ಡ ಪ್ರಮಾಣಗಳಲ್ಲಿ ತಿನ್ನುವ ಗಂಡಸರಿಗೆ, ಮೀನನ್ನು ಅಪರೂಪವಾಗಿ ತಿನ್ನುವ ಪುರುಷರಂತೆ ಪ್ರಾಸ್ಟೇಟ್‌ ಕ್ಯಾನ್ಸರ್‌ ತಗಲುವ ಸಾಧ್ಯತೆಗಳು ಎರಡರಿಂದ ಮೂರು ಪಟ್ಟು ಕಡಿಮೆಯಾಗಿರುತ್ತವೆಂದು, ಸ್ಟಾಕ್‌ಹೋಮ್‌ನಲ್ಲಿರುವ ಕ್ಯಾರೊಲಿನ್‌ಸ್ಕಾ ಇನ್ಸ್‌ಟಿಟ್ಯೂಟ್‌ನ ಸಂಶೋಧಕರು ಹೇಳುತ್ತಾರೆ. 30 ವರ್ಷಗಳಿಂದ 6,272 ಪುರುಷರ ಮೇಲೆ ನಡೆಸಲಾಗಿದ್ದ ಅಧ್ಯಯನವು, ಧೂಮಪಾನದಂಥ ಅಪಾಯಸಂಭವ ಅಂಶಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡಿತು. “ಒಮೇಗಾ-3 ಎಂದು ಕರೆಯಲ್ಪಡುವ ಕೊಬ್ಬಿನ ಆಮ್ಲಗಳು [ವಿಶೇಷವಾಗಿ ಎಣ್ಣೆಭರಿತ ಮೀನುಗಳಲ್ಲಿರುತ್ತವೆ] ಪ್ರಾಸ್ಟೇಟ್‌ ಕ್ಯಾನ್ಸರಿನ ಬೆಳವಣಿಗೆಯನ್ನು ತಡೆಗಟ್ಟುತ್ತವೆಂಬುದು ವ್ಯಕ್ತ” ಎಂದು ಸಂಶೋಧಕರು ತೀರ್ಮಾನಿಸಿದರು. ಇವೇ ಕೊಬ್ಬಿನ ಆಮ್ಲಗಳು “ಹೃದಯಾಘಾತದ ಅಪಾಯವನ್ನೂ ಕಡಿಮೆಗೊಳಿಸುತ್ತವೆ” ಎಂದು ಆ ವರದಿಯು ಹೇಳುತ್ತದೆ. ಹೀಗಿರುವುದರಿಂದ ಜನರು “ವಾರದಲ್ಲಿ ಒಂದೆರಡು ಸಲ” ಮೀನನ್ನು ತಿನ್ನುವಂತೆ ಪರಿಣತರು ಸಲಹೆಕೊಡುತ್ತಾರೆ.(g02 4/8)

ಪೀಡೆಯಂತಿರುವ ಕಳೆಗಳ ಸದ್ವಿನಿಯೋಗ

“ವಾಟರ್‌ ಹೈಯಸಿಂತ್‌, ಲಂಟಾನಾ ಮತ್ತು ಪಾರ್ಥೇನಿಯಮ್‌ನಂಥ ಕಳೆಗಳು, ಅವುಗಳ ಚೇತರಿಸಿಕೊಳ್ಳುವ ಶಕ್ತಿಯಿಂದಾಗಿ ಅಭಿವೃದ್ಧಿಮಾಡುವವರಿಗೆ ಹುಚ್ಚುಹಿಡಿಸಿವೆ” ಎಂದು ಇಂಡಿಯಾ ಟುಡೇ ಪತ್ರಿಕೆಯು ಹೇಳುತ್ತದೆ. ಬೇಲಿಯೋಪಾದಿ ಉಪಯೋಗಿಸಲಿಕ್ಕಾಗಿ 1941ರಲ್ಲಿ ಬ್ರಿಟಿಷರು ಭಾರತಕ್ಕೆ ತಂದಂಥ ಲಂಟಾನಾ ಕಮಾರಾ 2,00,000ಕ್ಕಿಂತಲೂ ಹೆಚ್ಚು ಏಕರೆ ಭೂಮಿಯನ್ನು ಕಬಳಿಸಿಬಿಟ್ಟಿದೆ ಮತ್ತು ಅದನ್ನು ಕೈಯಿಂದಾಗಲಿ, ರಾಸಾಯನಿಕದಿಂದಾಗಲಿ ಇಲ್ಲವೆ ಜೈವಿಕ ವಿಧದಲ್ಲಾಗಲಿ ನಿರ್ಮೂಲಮಾಡುವುದು ಬಹುಮಟ್ಟಿಗೆ ಅಸಾಧ್ಯವಾಗಿಬಿಟ್ಟಿದೆ. ಆ ಕಳೆಯಿಂದಾಗುವ ವಿಷಕಾರಿ ಪರಿಣಾಮಗಳು ಇತರ ಗಿಡಗಳ ಬೆಳವಣಿಗೆಯನ್ನು ತಡೆಗಟ್ಟುತ್ತವೆ ಮತ್ತು ಈ ಕಾರಣದಿಂದ ಅವುಗಳ ದಾಳಿಯ ನಂತರ ಇಡೀ ಊರುಗಳನ್ನೇ ಸ್ಥಳಾಂತರಿಸಬೇಕಾಗಿ ಬಂದಿದೆ. ಆದರೆ ಲಚ್ಚಿವಾಲಾ ಎಂಬಲ್ಲಿನ ಹಳ್ಳಿಗರಿಗೆ ಈ ಕಳೆಯು ಆರ್ಥಿಕವಾಗಿ ಅಮೂಲ್ಯವಾಗಿ ಪರಿಣಮಿಸಿದೆ. ಮನೆಗಳನ್ನು ಮತ್ತು ಕೋಳಿ ಗೂಡುಗಳನ್ನು ಕಟ್ಟಲಿಕ್ಕಾಗಿ ಲಂಟಾನಾವನ್ನು ಮಣ್ಣಿನೊಂದಿಗೆ ಉಪಯೋಗಿಸಲಾಗುತ್ತದೆ. ಕ್ರಿಮಿಕೀಟ ನಿರೋಧಕವಾಗಿರುವ ಈ ಕಳೆಯ ತೊಗಟೆಯು ಕಿತ್ತುಹಾಕಲ್ಪಟ್ಟಾಗ, ಅದು ಪೀಠೋಪಕರಣ ಮತ್ತು ಬುಟ್ಟಿಗಳನ್ನು ತಯಾರಿಸಲಿಕ್ಕಾಗಿ ಅತ್ಯುತ್ಕೃಷ್ಟವಾದ ಸಾಮಗ್ರಿಯಾಗಿಬಿಡುತ್ತದೆ. ಲಂಟಾನಾ ಎಲೆಗಳನ್ನು, ಸೊಳ್ಳೆ ನಿರೋಧಕಗಳಿಗಾಗಿ ಮತ್ತು ಧೂಪದ ಕಡ್ಡಿಗಳಿಗಾಗಿ ಉಪಯೋಗಿಸಲಾಗುತ್ತದೆ. ಈ ಗಿಡದ ಬೇರುಗಳು ಪುಡಿಮಾಡಲ್ಪಟ್ಟು, ದಂತ ಸೋಂಕುಗಳನ್ನು ನಿವಾರಿಸಲು ಉಪಯೋಗಿಸಲ್ಪಡುತ್ತವೆ. (g02 4/22)

ಅತಿ ನಿಖರವಾದ ಸಮಯಪಾಲಕ

ಅಮೆರಿಕದ ವಿಜ್ಞಾನಿಗಳ ಒಂದು ತಂಡವು ಪಾದರಸ ವಿದ್ಯುದ್ವಾಹಿ ಕಣದ ಗಡಿಯಾರವನ್ನು ವಿಕಸಿಸಿದೆ. ಅದು “ಒಂದು ಫೆಮ್ಟೊಸೆಕೆಂಡ್‌​—⁠ವಿಜ್ಞಾನದಲ್ಲಿ ಸಾಮಾನ್ಯವಾಗಿ ಬಳಸಲಾಗುವ ಸಮಯದ ಅತ್ಯಂತ ಚಿಕ್ಕ ಏಕಮಾನ​—⁠ವರೆಗೆ ನಿಖರವಾಗಿರುತ್ತದೆ” ಎಂದು ಲಂಡನಿನ ದ ಟೈಮ್ಸ್‌ ವರದಿಸುತ್ತದೆ. “ಜಗದ್ವ್ಯಾಪಕ ಸಮಯಪಾಲನೆಯ ಮಟ್ಟವಾಗಿರುವ, ಕೊ-ಆರ್ಡಿನೇಟಡ್‌ ಯೂನಿರ್ವಸಲ್‌ ಟೈಮ್‌ (UTC)ಅನ್ನು ಪಾಲಿಸಲು ಉಪಯೋಗಿಸಲ್ಪಡುವ ಪರಮಾಣು ಗಡಿಯಾರಗಳಿಗಿಂತಲೂ ಇದು 1,000 ಪಟ್ಟು ಹೆಚ್ಚು ನಿಖರವಾಗಿದೆ” ಎಂದು ಹೇಳಲಾಗುತ್ತದೆ. ಭೌತವಿಜ್ಞಾನಿ ಸ್ಕಾಟ್‌ ಡಿಡಾಮ್ಸ್‌ ವಿವರಿಸುವುದು: “ಅದನ್ನು, ವಿಶ್ವದ ಕುರಿತಾದ ಹೆಚ್ಚು ವಿವರವಾದ ತಿಳಿವಳಿಕೆಯನ್ನು ಪಡೆಯಲಿಕ್ಕಾಗಿ ತೀರ ಹೆಚ್ಚಾಗಿ ಉಪಯೋಗಿಸಲಾಗುವುದು ಮೂಲಭೂತ ಭೌತವಿಜ್ಞಾನದಲ್ಲಿಯೇ.” ಸಕಾಲದಲ್ಲಿ ಟೆಲಿಫೋನ್‌ ಜಾಲಗಳು ಮತ್ತು ಸಂಚಾರಿ ಉಪಗ್ರಹಗಳೂ ಪ್ರಯೋಜನ ಪಡೆಯುವವು. ಈ ಗಡಿಯಾರ ಯಂತ್ರವು, “ಲೋಕದ ಅತಿ ನಿಖರವಾದ ಗಡಿಯಾರ” ಎಂದು ಡಿಡಾಮ್ಸ್‌ ಹೇಳುವುದಾದರೂ, ಅದನ್ನು ಇನ್ನೂ ಹೆಚ್ಚು ಉತ್ತಮಗೊಳಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. (g02 4/22)

ಯುವ ಜನರ ಡೈಅಟಿಂಗ್‌

ಕೆನಡದಲ್ಲಿ 12ರಿಂದ 18ರ ವರೆಗಿನ ಪ್ರಾಯದ 1,739 ಮಂದಿ ಹುಡುಗಿಯರ ನಡುವೆ ನಡೆದ ಇತ್ತೀಚಿನ ಸಮೀಕ್ಷೆಯು, ತಿನ್ನುವ ಅಸ್ವಸ್ಥತೆಯ ರೋಗಲಕ್ಷಣಗಳನ್ನು ತೋರಿಸುತ್ತಿದೆಯೆಂದು ಗ್ಲೋಬ್‌ ಆ್ಯಂಡ್‌ ಮೇಲ್‌ ವಾರ್ತಾಪತ್ರಿಕೆಯು ಹೇಳುತ್ತದೆ. ತಿನ್ನುವ ಮನೋಭಾವಗಳು ಮತ್ತು ದೇಹದ ಬಗ್ಗೆ ಇರುವ ಅತೃಪ್ತಿಯನ್ನು ಪರೀಕ್ಷಿಸಿದ ಒಂದು ಪ್ರಶ್ನಾವಳಿಯನ್ನು ನಗರದ, ಹೊರವಲಯದ ಮತ್ತು ಗ್ರಾಮೀಣ ಕ್ಷೇತ್ರಗಳ ನಿವಾಸಿಗಳು ಉತ್ತರಿಸುತ್ತಾ ಪಾಲ್ಗೊಂಡರು. 12 ವರ್ಷ ಪ್ರಾಯದಷ್ಟು ಚಿಕ್ಕ ಪ್ರಾಯದ ಎಳೆಯರು, ತೂಕವನ್ನು ಕಳೆಯಲಿಕ್ಕಾಗಿ ವಿಪರೀತ ತಿನ್ನುವ ಕೇಳಿಗಳಲ್ಲಿ ಮತ್ತು ಬಾಯೊಳಗೆ ಕೈಹಾಕಿ ವಾಂತಿಮಾಡಿಕೊಳ್ಳುವುದರಲ್ಲಿ ತೊಡಗುತ್ತಾರೆ ಎಂದು ಅಥವಾ ಡೈಅಟ್‌ ಗುಳಿಗೆಗಳು, ಭೇದಿಯೌಷಧ ಹಾಗೂ ಮೂತ್ರವರ್ಧಕಗಳನ್ನು ಉಪಯೋಗಿಸುತ್ತಾರೆಂಬುದನ್ನು ದತ್ತಾಂಶವು ಪ್ರಕಟಿಸುತ್ತದೆ. ಟೊರಾಂಟೊವಿನ ಯೂನಿವರ್ಸಿಟಿ ಹೆಲ್ತ್‌ ನೆಟ್‌ವರ್ಕ್‌ನಲ್ಲಿ ಒಬ್ಬ ಸಂಶೋಧನಾ ವಿಜ್ಞಾನಿಯಾಗಿರುವ ಡಾಕ್ಟರ್‌ ಜೆನಿಫರ್‌ ಜೋನ್ಸ್‌ರವರಿಗನುಸಾರ, ವಿಶೇಷವಾಗಿ ಹುಡುಗಿಯರು “ಆಹಾರ ಮತ್ತು ವ್ಯಾಯಾಮದ ಕುರಿತಾಗಿ ಆರೋಗ್ಯಕರವಾದ ಮನೋಭಾವಗಳನ್ನು ಬೆಳೆಸಿಕೊಳ್ಳಬೇಕು. ಅವರು ತಮ್ಮ ದೇಹಗಳ ಬಗ್ಗೆ ಕಲಿಯಬೇಕು ಮತ್ತು ತಾವು ಜಾಹೀರಾತು ಫಲಕಗಳು, ಪತ್ರಿಕೆಗಳು ಮತ್ತು ರಾಕ್‌ ಸಂಗೀತದ ವಿಡಿಯೋಗಳಲ್ಲಿ ನೋಡುವಂಥ ದೇಹಗಳು ಸಹಜವಾದದ್ದಲ್ಲ ಎಂಬುದನ್ನು ಕಲಿಯಬೇಕು.” “ಹರೆಯದಲ್ಲಿ ಕೊಬ್ಬು ಶೇಖರವಾಗುವುದು ಸಹಜವಾದ ಸಂಗತಿಯಾಗಿದೆ ಮತ್ತು ಹಾಗೆ ಮಾಡುವುದು ಸಹಜವಾದ ಬೆಳವಣಿಗೆಗಾಗಿ ಪ್ರಾಮುಖ್ಯವಾಗಿದೆ ಎಂಬುದು ಅನೇಕ ಹದಿವಯಸ್ಕ ಹುಡುಗಿಯರಿಗೆ ತಿಳಿದಿರುವುದಿಲ್ಲ” ಎಂದು ಗ್ಲೋಬ್‌ ವಾರ್ತಾಪತ್ರಿಕೆಯು ಕೂಡಿಸಿ ಹೇಳುತ್ತದೆ. (g02 4/22)

ಸೊಳ್ಳೆ ಆಕರ್ಷಣೆ

ಸಿಂಗಪೂರ್‌ನಲ್ಲಿರುವ ಒಂದು ಕಂಪನಿಯು, ಕೀಟನಾಶಕಗಳನ್ನು ಬಳಸದೇ ಸೊಳ್ಳೆಗಳನ್ನು ನಾಶಮಾಡುವ ಒಂದು ಯಂತ್ರವನ್ನು ಉತ್ಪಾದಿಸುತ್ತಿದೆ. ಅದು 38 ಸೆಂಟಿಮೀಟರ್‌ ಉದ್ದದ ಕಪ್ಪು ಪ್ಲಾಸ್ಟಿಕ್‌ ಪೆಟ್ಟಿಗೆಯಾಗಿದೆ. ಅದು “ಒಂದು ಮಾನವ ದೇಹದಷ್ಟೇ ಪ್ರಮಾಣದಲ್ಲಿ ಶಾಖ ಮತ್ತು ಆಮ್ಲಜನಕವನ್ನು ಹೊರಸೂಸುತ್ತದೆ” ಎಂದು ಲಂಡನಿನ ದ ಎಕಾನಮಿಸ್‌ ವರದಿಸುತ್ತದೆ. ದೇಹದ ಶಾಖ ಮತ್ತು ಶ್ವಾಸದಲ್ಲಿರುವ ಆಮ್ಲಜನಕವನ್ನು ಪತ್ತೆಹಚ್ಚಿಸಿ, ಅದರ ದಿಕ್ಕಿನಲ್ಲಿ ಹೋಗುವ ಮೂಲಕ ಸೊಳ್ಳೆಗಳು ತಮ್ಮ ಬಲಿಗಳನ್ನು ಹುಡುಕುವುದರಿಂದ, ಆ ಯಂತ್ರವು “ಸೊಳ್ಳೆಗಳಿಗೆ ಒಂದು ಊಟ ಸಿಗಲಿದೆಯೆಂದು ನೆನಸುವಂತೆ ಮಾಡುತ್ತಾ ವಂಚಿಸುತ್ತದೆ.” ಆ ಪೆಟ್ಟಿಗೆಯನ್ನು ವಿದ್ಯುಚ್ಛಕ್ತಿಯಿಂದ ಕಾವೇರಿಸಲಾಗುತ್ತದೆ ಮತ್ತು ಅದು ಒಂದು ಚಿಕ್ಕ ನಳಿಗೆಯ ಮುಖಾಂತರ ಆಮ್ಲಜನಕವನ್ನು ಬಿಡುಗಡೆಮಾಡುತ್ತದೆ. ಝಗಝಗಿಸುವ ಬೆಳಕುಗಳು ಆ ಕೀಟವನ್ನು ಪೆಟ್ಟಿಗೆಯಲ್ಲಿರುವ ಒಂದು ಕಿರಿದಾದ ಕಂಡಿಯೊಳಗೆ ಸೆಳೆಯುತ್ತವೆ. ಅನಂತರ ಒಂದು ಫ್ಯಾನ್‌ ಅದನ್ನು ನೀರಿನ ಒಂದು ಮಡುವಿನತ್ತ ತಳ್ಳುತ್ತದೆ ಮತ್ತು ಅಲ್ಲಿ ಅದು ಮುಳುಗಿಹೋಗುತ್ತದೆ. ಆ ಯಂತ್ರವು ಒಂದು ರಾತ್ರಿಯಲ್ಲಿ 1,200 ಸೊಳ್ಳೆಗಳನ್ನು ಸಿಕ್ಕಿಸಿಹಾಕಬಲ್ಲದು ಮತ್ತು ಮಲೇರಿಯ ರೋಗವನ್ನು ಹೊತ್ತುಕೊಂಡಿರುವ ರಾತ್ರಿವೇಳೆಯ ಆ್ಯನೊಫೀಲಿಸ್‌ ಸೊಳ್ಳೆಯನ್ನು ಇಲ್ಲವೆ ಪೀತಜ್ವರ ಮತ್ತು ಡೆಂಗಿ ಜ್ವರ ವಾಹಕವಾಗಿರುವ ದೈನಂದಿನ ಏಯ್ಡಿಸ್‌ ಸೊಳ್ಳೆಯನ್ನು ಹಿಡಿಯಲು ಅದನ್ನು ಹೊಂದಿಸಿಕೊಳ್ಳಬಹುದು. ಇನ್ನೊಂದು ಲಾಭವೇನೆಂದರೆ, ಬಣ್ಣದ ಚಿಟ್ಟೆಗಳಂಥ ನಿರಪಾಯಕಾರಿ ಕೀಟಗಳು ನಾಶಗೊಳಿಸಲ್ಪಡುವುದಿಲ್ಲ.(g02 4/8)

ಅಕ್ಕಿ ಹೊಟ್ಟು ಮರಗಳನ್ನು ಉಳಿಸುತ್ತದೆ

ಉತ್ತರ ಪೆರುವಿನ ಇಟ್ಟಿಗೆಯ ಕಾರ್ಖಾನೆಗಳಲ್ಲಿ ಒಂದು ಬದಲಿ ಇಂಧನ ವಸ್ತುವಾಗಿರುವ ಅಕ್ಕಿ ಹೊಟ್ಟು, ಅಪಾಯಕ್ಕೊಳಗಾಗಿರುವ ಕಾರೊಬ್‌ ಮರಗಳನ್ನು ಸೌದೆಗಾಗಿ ಕಡಿದುಹಾಕುವುದನ್ನು ತಡೆಯಲು ಸಹಾಯಮಾಡುತ್ತಿದೆ ಎಂದು ಪೆರುವಿನ ವಾರ್ತಾಪತ್ರಿಕೆಯಾದ ಎಲ್‌ ಕಾಮರ್ಸ್ಯೊ ವರದಿಸುತ್ತದೆ. ಒಂದು ಕೃಷಿ ಉಪ ಉತ್ಪನ್ನವಾಗಿರುವ ಅಕ್ಕಿ ಹೊಟ್ಟನ್ನು 21 ಇಟ್ಟಿಗೆ ತಯಾರಕರು ಬಳಸುವುದರಿಂದಾಗಿ, ಆಮ್ಲಜನಕದ ವಿಸರ್ಜಿಸುವಿಕೆಗಳನ್ನೂ ಕಡಿಮೆಗೊಳಿಸಲು ಸಹಾಯಮಾಡಿದೆ. ಅಷ್ಟುಮಾತ್ರವಲ್ಲದೆ, ಉಸುಬು, ಜೇಡಿಮಣ್ಣು ಮತ್ತು ಕಾಕಂಬಿಯ ಮಿಶ್ರಣದಿಂದ​—⁠ಇದು ಶಾಖವನ್ನು ತಡೆದು, ಹೀಗೆ ಶಾಖ ನಷ್ಟವನ್ನು ಕಡಿಮೆಗೊಳಿಸುತ್ತದೆ —⁠ತಯಾರಿಸಲ್ಪಟ್ಟ ಕಣಕವನ್ನು ಒಲೆಯ ಗೋಡೆಗಳಿಗೆ ಹಚ್ಚಿಸುವ ಮೂಲಕ ಆ ಒಲೆಗಳ ಕಾರ್ಯಕ್ಷಮತೆಯು 15 ಪ್ರತಿಶತ ಹೆಚ್ಚಾಗಿದೆ. ಕೊನೆಯಲ್ಲಿ ಸಿಗುವ ಉತ್ಪನ್ನವನ್ನು ಬಲವಾಗಿರಿಸುವ ಉದ್ದೇಶದಿಂದ ಇಟ್ಟಿಗೆಗಾಗಿರುವ ಮಿಶ್ರಣದಲ್ಲಿ ಅಕ್ಕಿ ಹೊಟ್ಟಿನ ಬೂದಿಯನ್ನು ಸೇರಿಸಲು ಸಹ ಪ್ರಯೋಗಗಳು ನಡೆಯುತ್ತಾ ಇವೆ. “ಇದು, ಮಾಲಿನ್ಯವನ್ನು ಮತ್ತು ತ್ಯಾಜ್ಯ ಉತ್ಪನ್ನಗಳನ್ನು ಎಲ್ಲಿಡುವುದೆಂಬ ಸಮಸ್ಯೆಗಳನ್ನೂ ಕಡಿಮೆಗೊಳಿಸುತ್ತದೆ” ಎಂದು ಎಲ್‌ ಕಾಮರ್ಸ್ಯೊ ಹೇಳುತ್ತದೆ.(g02 4/8)