ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಅಜಾತ ಮಗುವನ್ನು ಕಳೆದುಕೊಂಡೆ

ನನ್ನ ಅಜಾತ ಮಗುವನ್ನು ಕಳೆದುಕೊಂಡೆ

ನನ್ನ ಅಜಾತ ಮಗುವನ್ನು ಕಳೆದುಕೊಂಡೆ

ಸೋಮವಾರ, ಏಪ್ರಿಲ್‌ 10, 2000. ಅದೊಂದು ಬೆಚ್ಚಗಿನ, ಪ್ರಕಾಶಮಾನ ದಿನವಾಗಿತ್ತು. ಆದುದರಿಂದ ನನ್ನ ಕೆಲವೊಂದು ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಮುಗಿಸಲಿಕ್ಕಾಗಿ ಮನೆಯಿಂದ ಹೊರಗೆ ಕಾಲಿಟ್ಟೆ. ನಾನು ನನ್ನ ಗರ್ಭಾವಸ್ಥೆಯ ನಾಲ್ಕನೆಯ ತಿಂಗಳನ್ನು ಪ್ರವೇಶಿಸುತ್ತಿದ್ದೆನಷ್ಟೆ. ನನ್ನಲ್ಲಿ ತುಂಬ ಚೈತನ್ಯವಿದ್ದಂತೆ ಅನಿಸದಿದ್ದರೂ, ನನಗೆ ಮನೆಯಿಂದ ಹೊರಬರಲು ತುಂಬ ಸಂತೋಷವಾಯಿತು. ಆದರೆ ನಾನೊಂದು ಕಿರಾಣಿ ಅಂಗಡಿಯಲ್ಲಿ ಹಣವನ್ನು ತೆರಲಿಕ್ಕಾಗಿ ನನ್ನ ಸರದಿಗಾಗಿ ಕಾಯುತ್ತಾ ಇದ್ದಾಗ, ನನಗೇನೊ ಆಗುತ್ತಿರುವಂತೆ ಭಾಸವಾಯಿತು.

ನಾನು ಮನೆಗೆ ಬಂದಾಗ, ನನಗಿದ್ದ ಶಂಕೆ ನಿಜವೆಂದು ಗೊತ್ತಾಯಿತು. ನನಗೆ ರಕ್ತಸ್ರಾವವಾಗುತ್ತಿತ್ತು. ಈ ಹಿಂದೆ ನಾನು ಎರಡು ಸಲ ಗರ್ಭಿಣಿಯಾಗಿದ್ದಾಗ ಹೀಗಾಗಿರಲಿಲ್ಲ. ಆದುದರಿಂದ ನಾನು ಹೆದರಿಹೋದೆ! ನನ್ನ ಡಾಕ್ಟರರಿಗೆ ನಾನು ಫೋನ್‌ ಮಾಡಿ ಇದನ್ನು ತಿಳಿಸಿದಾಗ, ನನಗೆ ಹೇಗೂ ಮರುದಿನ ಒಂದು ಅಪಾಯಿಂಟ್‌ಮೆಂಟ್‌ ಇದ್ದದರಿಂದ ನಾನು ಅಲ್ಲಿಯ ವರೆಗೆ ಕಾದು, ನಂತರ ಬರುವಂತೆ ಸಲಹೆ ಕೊಟ್ಟರು. ನನ್ನ ಪತಿ ಮತ್ತು ನಾನು ನಮ್ಮಿಬ್ಬರು ಮಕ್ಕಳನ್ನು ಆ ರಾತ್ರಿ ಮಲಗಿಸುವ ಮುಂಚೆ, ಇಬ್ಬರೂ ಜೊತೆಯಾಗಿ ಪ್ರಾರ್ಥನೆ ಮಾಡಿದೆವು. ನಮಗೆ ಬೇಕಾಗಬಹುದಾದ ಯಾವುದೇ ರೀತಿಯಲ್ಲಿ ನಮಗೆ ಶಕ್ತಿಯನ್ನು ಕೊಡುವಂತೆ ಯೆಹೋವನ ಬಳಿ ಬೇಡಿಕೊಂಡೆವು. ಕಟ್ಟಕಡೆಗೆ ನನಗೆ ನಿದ್ರೆ ಬಂತು.

ಆದರೆ ರಾತ್ರಿ ಸುಮಾರು ಎರಡು ಗಂಟೆಗೆ, ತೀವ್ರವಾದ ನೋವಿನಿಂದಾಗಿ ನನಗೆ ಎಚ್ಚರವಾಯಿತು. ಕ್ರಮೇಣ ಆ ನೋವು ಕಡಿಮೆಯಾಗುತ್ತಾ ಹೋಯಿತು, ಆದರೆ ನಾನು ಪುನಃ ನಿದ್ದೆಹೋಗುತ್ತಿದ್ದಾಗಲೇ ಅದು ಪುನಃ ಆರಂಭವಾಯಿತು. ಈ ಸಲವಾದರೊ ನೋವು ಕ್ರಮವಾಗಿ ಅಲೆಗಳಂತೆ ಬರುತ್ತಾ ಇತ್ತು. ರಕ್ತಸ್ರಾವವೂ ಹೆಚ್ಚಾಯಿತು, ಮತ್ತು ನನಗೆ ಸಂಕುಚನಗಳಾಗುತ್ತಿವೆಯೆಂದು ಅರಿವಾಯಿತು. ಹೀಗಾಗಲಿಕ್ಕಾಗಿ ನಾನೇನಾದರೂ ಮಾಡಿದ್ದೆನೊ ಎಂದು ನೆನಪಿಸಿಕೊಳ್ಳಲು ನನ್ನ ಮನಸ್ಸು ಹಿಂದಕ್ಕೋಡಿತು. ಆದರೆ ನಾನು ಅಂಥದ್ದೇನನ್ನೂ ಮಾಡಿದ್ದು ನೆನಪಿಗೆ ಬರಲಿಲ್ಲ.

ಬೆಳಗ್ಗೆ ಐದು ಗಂಟೆಯೊಳಗೆ ನಾನು ಹೇಗಾದರೂ ಆಸ್ಪತ್ರೆಗೆ ತಲಪಲೇಬೇಕೆಂದು ನನಗೆ ಗೊತ್ತಾಯಿತು. ನನ್ನ ಗಂಡ ಮತ್ತು ನಾನು ಅಲ್ಲಿ ತಲಪಿದಾಗ, ದಯಾಪರರೂ ಸಹಾಯಮಾಡುವವರೂ ಮತ್ತು ಸಹಾನುಭೂತಿಯುಳ್ಳವರೂ ಆಗಿದ್ದ ತುರ್ತುಸ್ಥಿತಿಯ ಸಿಬ್ಬಂದಿಯ ಹಸ್ತಗಳಲ್ಲಿ ಇರುವುದರಿಂದ ನಮಗೆ ಹಾಯೆನಿಸಿತು. ಆದರೆ ಎರಡು ತಾಸುಗಳ ನಂತರ, ನಾವು ಯಾವುದರ ಬಗ್ಗೆ ಹೆದರುತ್ತಿದ್ದೆವೊ ಆ ಸುದ್ದಿಯನ್ನು ಡಾಕ್ಟರರು ನಮಗೆ ಕೊಟ್ಟರು: ನನ್ನ ಮಗುವನ್ನು ನಾನು ಕಳೆದುಕೊಂಡಿದ್ದೆ.

ಈ ಹಿಂದಿನ ಲಕ್ಷಣಗಳಿಂದಾಗಿ, ನಾನು ಈ ಫಲಿತಾಂಶಕ್ಕಾಗಿ ಸಿದ್ಧಳಾಗಿದ್ದೆ ಮತ್ತು ಆ ಸುದ್ದಿಯನ್ನು ಬಹುಮಟ್ಟಿಗೆ ಶಾಂತಚಿತ್ತಳಾಗಿ ಸ್ವೀಕರಿಸಿದೆ. ಅಷ್ಟುಮಾತ್ರವಲ್ಲದೆ, ನನ್ನ ಗಂಡ ಯಾವಾಗಲೂ ನನ್ನ ಪಕ್ಕದಲ್ಲೇ ಇದ್ದರು ಮತ್ತು ಇದರಿಂದಾಗಿ ನನಗೆ ತುಂಬ ಬೆಂಬಲ ಸಿಕ್ಕಿತು. ಆದರೆ ಈಗ ನಾವು ಕೈಗಳಲ್ಲಿ ಒಂದು ಮಗುವಿಲ್ಲದೆ ಮನೆಗೆ ಹಿಂದಿರುಗಲಿದ್ದದರಿಂದ, ನಮ್ಮಿಬ್ಬರು ಮಕ್ಕಳಿಗೆ ಏನು ಹೇಳುವುದೆಂಬುದರ ಕುರಿತಾಗಿಯೇ ನಾವು ಯೋಚಿಸುತ್ತಿದ್ದೆವು. ಕ್ಯಾಟ್ಲಿನಳು ಆರು ವರ್ಷದವಳು, ಮತ್ತು ಡೇವಿಡ್‌ ನಾಲ್ಕು ವರ್ಷದವನಾಗಿದ್ದನು.

ನಮ್ಮ ಮಕ್ಕಳಿಗೆ ಏನು ಹೇಳುವುದು?

ಏನೋ ಆಗಿದೆ ಎಂಬ ಯೋಚನೆಯೊಂದಿಗೆ ಮಕ್ಕಳು ನಿದ್ದೆಹೋಗಿದ್ದರು. ಆದರೆ ಅವರ ಪುಟ್ಟ ತಮ್ಮ ಅಥವಾ ತಂಗಿ ಆಗಲಿದ್ದ ಮಗುವು ತೀರಿಹೋಗಿತ್ತೆಂಬುದನ್ನು ನಾವು ಅವರಿಗೆ ಹೇಳುವುದು ಹೇಗೆ? ನಾವು ಮುಚ್ಚುಮರೆಯಿಲ್ಲದೆ, ಸತ್ಯ ಸಂಗತಿಯನ್ನೇ ಹೇಳಲು ನಿರ್ಧರಿಸಿದೆವು. ಈ ವಿಷಯದಲ್ಲಿ ನನ್ನ ತಾಯಿಯವರು ನಮಗೆ ಸಹಾಯಮಾಡಿದ್ದರು. ಮಗು ನಮ್ಮೊಂದಿಗೆ ಮನೆಗೆ ಬರುವುದಿಲ್ಲವೆಂದು ಅವರು ಈಗಾಗಲೇ ಮಕ್ಕಳಿಗೆ ಹೇಳಿಟ್ಟಿದ್ದರು. ನಾವು ಮನೆಗೆ ತಲಪಿದಾಗ, ಅವರು ನಮ್ಮ ಬಳಿ ಓಡಿ ಬಂದು, ನಮ್ಮನ್ನು ತಬ್ಬಿಹಿಡಿದು, ಮುತ್ತುಗಳ ಸುರಿಮಳೆಗೈದರು. “ಮಗು ಹುಷಾರಾಗಿದೆ ತಾನೇ?” ಎಂಬುದು ಅವರ ಮೊದಲ ಪ್ರಶ್ನೆಯಾಗಿತ್ತು. ನನಗಂತೂ ಏನೂ ಹೇಳಲಿಕ್ಕಾಗಲಿಲ್ಲ. ಆದರೆ ನನ್ನ ಗಂಡನು ನಮ್ಮೆಲ್ಲರನ್ನೂ ಬಿಗಿಯಾಗಿ ಹಿಡಿದುಕೊಂಡು, “ಮಗು ತೀರಿಕೊಂಡಿತು” ಎಂದು ಹೇಳಿದರು. ನಾವು ಪರಸ್ಪರರನ್ನು ಹಿಡಿದುಕೊಂಡು ಅತ್ತುಬಿಟ್ಟೆವು. ಇದು ನಮ್ಮ ದುಃಖಶಮನಕ್ಕೆ ಸಹಾಯಮಾಡಿತು.

ಆದರೆ ನಮ್ಮ ಮಕ್ಕಳ ಮುಂದಿನ ಪ್ರತಿಕ್ರಿಯೆಗಳಿಗಾಗಿ ನಾವು ಸಿದ್ಧರಾಗಿರಲಿಲ್ಲ. ಉದಾಹರಣೆಗಾಗಿ, ನನ್ನ ಗರ್ಭಸ್ರಾವವಾಗಿ ಎರಡು ವಾರಗಳು ಕಳೆದ ನಂತರ, ನಮ್ಮ ಕುಟುಂಬದ ಒಬ್ಬ ಆಪ್ತ ಮಿತ್ರರಾಗಿದ್ದ ಒಬ್ಬ ವೃದ್ಧ ಸಾಕ್ಷಿಯು ತೀರಿಹೋದರೆಂಬುದನ್ನು ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯಲ್ಲಿ ಪ್ರಕಟಿಸಲಾಯಿತು. ಇದನ್ನು ಕೇಳಿ, ನಮ್ಮ ನಾಲ್ಕು ವರ್ಷ ಪ್ರಾಯದ ಮಗನಾದ ಡೇವಿಡ್‌ ಜೋರಾಗಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದನು. ಆದುದರಿಂದ ನನ್ನ ಪತಿ ಅವನನ್ನು ಹೊರಗೆ ಕೊಂಡೊಯ್ದರು. ಡೇವಿಡ್‌ ಶಾಂತನಾದ ನಂತರ, ತನ್ನ ಮಿತ್ರನು ಏಕೆ ಸತ್ತುಹೋದನೆಂದು ಕೇಳಿದನು. ಅನಂತರ, ಮಗು ಏಕೆ ಸತ್ತುಹೋಯಿತೆಂದು ಅವನು ಕೇಳಿದನು. ಆ ಬಳಿಕ ಅವನು ತನ್ನ ತಂದೆಗೆ, “ನೀವು ಸಹ ಸತ್ತುಹೋಗುವಿರೊ?” ಎಂದು ಕೇಳಿದನು. ಯೆಹೋವ ದೇವರು ಇಷ್ಟರೊಳಗೆ ಸೈತಾನನನ್ನು ನಾಶಮಾಡಿ, “ಎಲ್ಲವನ್ನು ಸರಿಪಡಿಸಲು” ಏಕೆ ಆರಂಭಿಸಿಲ್ಲವೆಂಬುದನ್ನು ಅವನು ತಿಳಿಯಲು ಬಯಸಿದನು. ಅವನ ಆ ಎಳೆಯ ಮನಸ್ಸಿನಲ್ಲಿ ಏನೆಲ್ಲ ವಿಚಾರಗಳಿದ್ದವೆಂಬುದನ್ನು ನೋಡಿ ನಮಗೆ ಖಂಡಿತವಾಗಿಯೂ ಆಶ್ಚರ್ಯವಾಯಿತು.

ಕ್ಯಾಟ್ಲಿನಳಿಗೂ ತುಂಬ ಪ್ರಶ್ನೆಗಳಿದ್ದವು. ಅವಳು ತನ್ನ ಗೊಂಬೆಗಳೊಂದಿಗೆ ಆಡುತ್ತಿದ್ದಾಗ, ಹೆಚ್ಚಾಗಿ ಒಂದು ಗೊಂಬೆ ಅಸ್ವಸ್ಥವಾಗಿದೆ ಮತ್ತು ಬೇರೆ ಗೊಂಬೆಗಳು ನರ್ಸುಗಳು ಇಲ್ಲವೆ ಕುಟುಂಬ ಸದಸ್ಯರಾಗಿವೆ ಎಂಬ ಆಟವಾಡುತ್ತಿದ್ದಳು. ಒಂದು ರಟ್ಟಿನ ಪೆಟ್ಟಿಗೆಯಿಂದ ಅವಳು ಗೊಂಬೆಗಳ ಆಸ್ಪತ್ರೆಯನ್ನು ಮಾಡಿದಳು, ಮತ್ತು ಆಗಾಗ್ಗೆ ತನ್ನ ಗೊಂಬೆಗಳಲ್ಲಿ ಒಂದು ಸತ್ತುಹೋಗಿರುವಂತೆ ನಟಿಸುತ್ತಿದ್ದಳು. ನಮ್ಮ ಮಕ್ಕಳ ಪ್ರಶ್ನೆಗಳು ಮತ್ತು ಆಟಗಳು, ನಾವು ಅವರಿಗೆ ಜೀವನದ ಬಗ್ಗೆ ಪ್ರಾಮುಖ್ಯ ಪಾಠಗಳನ್ನೂ, ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ಬೈಬಲ್‌ ನಮಗೆ ಹೇಗೆ ಸಹಾಯಮಾಡಬಲ್ಲದೆಂಬುದನ್ನೂ ಕಲಿಸುವಂತೆ ಅವಕಾಶಗಳನ್ನು ಮಾಡಿಕೊಟ್ಟವು. ಈ ಭೂಮಿಯನ್ನು ಒಂದು ಸುಂದರ ಪರದೈಸವನ್ನಾಗಿ ಮಾಡಿ, ಎಲ್ಲ ದುಃಖ, ನೋವು ಮತ್ತು ಮರಣವನ್ನೂ ತೆಗೆದುಹಾಕುವಂಥ ದೇವರ ಉದ್ದೇಶದ ಬಗ್ಗೆಯೂ ನಾವು ಅವರಿಗೆ ನೆನಪುಹುಟ್ಟಿಸುತ್ತಿದ್ದೆವು.​—⁠ಪ್ರಕಟನೆ 21:​3, 4.

ನಾನು ಆ ನಷ್ಟವನ್ನು ನಿಭಾಯಿಸಿದ ರೀತಿ

ನಾನು ಆಸ್ಪತ್ರೆಯಿಂದ ಮೊದಲ ಬಾರಿ ಮನೆಗೆ ಬಂದಾಗ, ಭಾವನಾತ್ಮಕವಾಗಿ ಮರಗಟ್ಟಿಹೋಗಿದ್ದೆ ಮತ್ತು ಕಕ್ಕಾಬಿಕ್ಕಿಯಾಗಿದ್ದೆ. ನನ್ನ ಸುತ್ತಲೂ ಮಾಡಲು ಬಹಳಷ್ಟು ಕೆಲಸವಿತ್ತು, ಆದರೆ ಎಲ್ಲಿಂದ ಆರಂಭಿಸುವುದೆಂದೇ ನನಗೆ ತೋಚುತ್ತಿರಲಿಲ್ಲ. ಇದೇ ರೀತಿಯ ಅನುಭವವನ್ನು ಹೊಂದಿದ್ದ ಕೆಲವು ಸ್ನೇಹಿತೆಯರೊಂದಿಗೆ ನಾನು ಫೋನ್‌ ಮೂಲಕ ಮಾತಾಡಿದೆ ಮತ್ತು ಅವರು ನನಗೆ ತುಂಬ ಸಾಂತ್ವನವನ್ನು ನೀಡಿದರು. ಒಬ್ಬ ಪ್ರಿಯ ಸ್ನೇಹಿತೆಯು ನಮಗೆ ಹೂವುಗಳನ್ನು ಕಳುಹಿಸಿದಳು, ಮತ್ತು ಇಡೀ ಮಧ್ಯಾಹ್ನ ಮಕ್ಕಳನ್ನು ನೋಡಿಕೊಳ್ಳಲಿಕ್ಕಾಗಿ ತನ್ನೊಂದಿಗೆ ಕರೆದುಕೊಂಡು ಹೋಗಲು ಸಿದ್ಧಳಿದ್ದಾಳೆಂದು ಹೇಳಿದಳು. ಅವಳು ತೋರಿಸಿದಂಥ ಹಾರ್ದಿಕ ಚಿಂತೆ ಮತ್ತು ವ್ಯಾವಹಾರಿಕ ಸಹಾಯವನ್ನು ನಾನು ತುಂಬ ಗಣ್ಯಮಾಡಿದೆ!

ನಾನು ಕುಟುಂಬದ ಫೋಟೋಗಳನ್ನು ಆಲ್ಬಮ್‌ಗಳಲ್ಲಿ ಜೋಡಿಸಿಟ್ಟೆ. ಮಗು ಇನ್ನೂ ಧರಿಸಿರದಂಥ ಬಟ್ಟೆಗಳನ್ನು ನೋಡಿ, ಕೈಯಲ್ಲಿ ಹಿಡಿಯುತ್ತಿದ್ದೆ. ನಾನು ಕಳೆದುಕೊಂಡಿದ್ದ ಮಗುವಿನ ಏಕಮಾತ್ರ ದೃಶ್ಯ ಜ್ಞಾಪಕಗಳು ಅವುಗಳಾಗಿದ್ದವು. ಅನೇಕ ವಾರಗಳ ವರೆಗೆ ನನ್ನ ಭಾವನೆಗಳು ಇದ್ದಕ್ಕಿದ್ದಂತೆ ಹಾಗೂ ಮತ್ತೆ ಮತ್ತೆ ಬದಲಾಗುತ್ತಾ ಇದ್ದವು. ನನಗೆ ಕುಟುಂಬ ಹಾಗೂ ಸ್ನೇಹಿತರಿಂದ ಬಹಳಷ್ಟು ಬೆಂಬಲವಿದ್ದರೂ, ಕೆಲವು ದಿನಗಳಲ್ಲಂತೂ ನನಗೆ ಅಳುವುದನ್ನು ನಿಲ್ಲಿಸಲಿಕ್ಕೇ ಆಗುತ್ತಿರಲಿಲ್ಲ. ನನಗೆ ಹುಚ್ಚುಹಿಡಿಯುತ್ತಿದೆಯೆಂದು ಕೆಲವೊಮ್ಮೆ ನೆನಸುತ್ತಿದ್ದೆ. ಗರ್ಭವತಿಯರಾಗಿದ್ದ ಸ್ನೇಹಿತೆಯರೊಂದಿಗಿರುವುದು ವಿಶೇಷವಾಗಿ ತುಂಬ ಕಷ್ಟಕರವಾಗಿತ್ತು. ಗರ್ಭಸ್ರಾವವು ಒಬ್ಬ ಸ್ತ್ರೀಯ ಬದುಕಿನಲ್ಲಿ “ಒಂದು ತಾತ್ಕಾಲಿಕವಾದ, ಕ್ಷುಲ್ಲಕ” ವಿಷಯವೆಂದು ಮತ್ತು ಅದರಿಂದ ಹೆಚ್ಚೇನೂ ಸಮಸ್ಯೆಗಳಿಲ್ಲದೆ ಗುಣಮುಖವಾಗಬಹುದೆಂದು ನಾನು ಈ ಹಿಂದೆ ಊಹಿಸುತ್ತಿದ್ದೆ. ಆದರೆ ನನ್ನೆಣಿಕೆ ಎಷ್ಟು ತಪ್ಪಾಗಿತ್ತು! *

ಪ್ರೀತಿ​—⁠ಅತ್ಯುತ್ತಮ ಔಷಧಿ

ಸಮಯ ದಾಟಿದಂತೆ, ನನ್ನ ಗಂಡ ಮತ್ತು ಜೊತೆ ಕ್ರೈಸ್ತರು ತೋರಿಸಿದಂಥ ಪ್ರೀತಿಯೇ ಪರಿಣಾಮಕಾರಿಯಾದ ವಾಸಿಕಾರಕವಾಗಿತ್ತು. ಒಬ್ಬ ಸಾಕ್ಷಿಯು ಅಡಿಗೆಮಾಡಿ ನಮಗೋಸ್ಕರ ಊಟವನ್ನು ತಯಾರಿಸಿ ಮನೆಗೆ ತಂದಳು. ಒಬ್ಬ ಸಭಾ ಹಿರಿಯನು ಮತ್ತು ಅವನ ಪತ್ನಿಯು ಹೂವುಗಳನ್ನೂ ಒಂದು ಪ್ರೀತಿಭರಿತ ಕಾರ್ಡನ್ನೂ ತಂದರು, ಮತ್ತು ಆ ಸಾಯಂಕಾಲ ನಮ್ಮೊಂದಿಗಿದ್ದರು. ಅವರು ಎಷ್ಟು ಕಾರ್ಯನಿರತ ವ್ಯಕ್ತಿಗಳಾಗಿದ್ದಾರೆಂಬುದು ನಮಗೆ ಗೊತ್ತಿತ್ತು, ಆದುದರಿಂದ ಅವರ ಪರಿಗಣನೆಯು ನಮ್ಮ ಹೃದಯವನ್ನು ಸ್ಪರ್ಶಿಸಿತು. ಇನ್ನೂ ಅನೇಕ ಮಂದಿ ಸ್ನೇಹಿತರು ಕಾರ್ಡುಗಳನ್ನು ಇಲ್ಲವೆ ಹೂವುಗಳನ್ನು ಕಳುಹಿಸಿದರು. “ನಾವು ನಿನ್ನ ಬಗ್ಗೆ ಯೋಚಿಸುತ್ತಿದ್ದೇವೆ!” ಎಂಬ ಸರಳವಾದ ಮಾತುಗಳು ಎಷ್ಟು ನೆಮ್ಮದಿಯನ್ನು ಕೊಟ್ಟವು! ಸಭೆಯ ಒಬ್ಬ ಸದಸ್ಯಳು ಬರೆದುದು: “ಜೀವದ ಕುರಿತು ನಮಗೆ ಯೆಹೋವನಿಗಿರುವ ದೃಷ್ಟಿಕೋನವೇ ಇದೆ. ಅಂದರೆ ಅದು ತುಂಬ ಅಮೂಲ್ಯವಾದದ್ದಾಗಿದೆ ಎಂದೇ. ಒಂದು ಗುಬ್ಬಿಯು ಯಾವಾಗ ನೆಲಕ್ಕೆ ಬೀಳುತ್ತದೆಂಬುದು ಆತನಿಗೆ ಗೊತ್ತಿರುವುದಾದರೆ, ಒಂದು ಮಾನವ ಭ್ರೂಣವು ಬೀಳುವಾಗಲೂ ಆತನಿಗೆ ಖಂಡಿತವಾಗಿಯೂ ಗೊತ್ತಿರುತ್ತದೆ.” ನನ್ನ ಸೋದರಮಾವನವರ ಸೊಸೆ ಬರೆದದ್ದು: “ಜನ್ಮ ಮತ್ತು ಜೀವದ ಅದ್ಭುತದಿಂದ ನಾವೆಷ್ಟು ಆಶ್ಚರ್ಯಚಕಿತರಾಗಿರುತ್ತೇವೆ, ಮತ್ತು ಒಂದು ಭ್ರೂಣವು ಬದುಕಿ ಉಳಿಯದಿರುವಾಗಲೂ ನಾವು ಅಷ್ಟೇ ಆಶ್ಚರ್ಯಪಡುತ್ತೇವೆ.”

ಕೆಲವು ವಾರಗಳ ನಂತರ ನಾನು ರಾಜ್ಯ ಸಭಾಗೃಹದಲ್ಲಿದ್ದಾಗ, ನನಗೆ ಅಳುವ ಮನಸ್ಸಾಯಿತು. ಅದನ್ನು ಹತ್ತಿಕ್ಕಲಾಗದೆ, ಕೂಟವು ಇನ್ನೇನು ಆರಂಭವಾಗುವುದರಲ್ಲಿದ್ದಾಗಲೇ ನಾನು ಹೊರಬಂದೆ. ನಾನು ಅಳುಮೋರೆಯಿಂದ ಹೊರಬರುವುದನ್ನು ಗಮನಿಸಿದ ಇಬ್ಬರು ಪ್ರಿಯ ಸ್ನೇಹಿತೆಯರು, ನನ್ನೊಂದಿಗೆ ಕಾರಿನಲ್ಲಿ ಕುಳಿತುಕೊಂಡು, ನನ್ನ ಕೈಹಿಡಿದರು ಮತ್ತು ನನ್ನನ್ನು ನಗುವಂತೆ ಮಾಡಿದರು. ಸ್ವಲ್ಪ ಸಮಯದೊಳಗೆ ನಾವು ಮೂವರು ಸೇರಿ ಪುನಃ ಸಭಾಗೃಹದೊಳಗೆ ಹೋದೆವು. “ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರ”ರಿರುವುದು ಎಂಥ ಆನಂದವಾಗಿದೆ!​—⁠ಜ್ಞಾನೋಕ್ತಿ 18:⁠24.

ಸುದ್ದಿಯು ಹಬ್ಬಿದಂತೆ, ಎಷ್ಟೋ ಮಂದಿ ಜೊತೆ ಸಾಕ್ಷಿಗಳಿಗೆ ನನ್ನಂಥದ್ದೇ ಅನುಭವವಾಗಿತ್ತೆಂಬುದನ್ನು ತಿಳಿದು ನನಗೆ ಆಶ್ಚರ್ಯವಾಯಿತು. ನನಗೆ ಈ ಹಿಂದೆ ಹೆಚ್ಚು ಪರಿಚಯವಿಲ್ಲದಿದ್ದ ಕೆಲವರು ಸಹ, ವಿಶೇಷವಾದ ಸಾಂತ್ವನ ಮತ್ತು ಉತ್ತೇಜನವನ್ನು ನೀಡಲು ಶಕ್ತರಾಗಿದ್ದರು. ನನ್ನ ಕಷ್ಟದ ಸಮಯದಲ್ಲಿ ಅವರು ಕೊಟ್ಟ ಪ್ರೀತಿಪರ ಬೆಂಬಲವು ನನಗೆ ಈ ಬೈಬಲ್‌ ಹೇಳಿಕೆಯನ್ನು ನೆನಪಿಗೆ ತಂದಿತು: “ಒಬ್ಬ ನಿಜ ಒಡನಾಡಿಯು ಯಾವಾಗಲೂ ಪ್ರೀತಿಸುತ್ತಾನೆ, ಮತ್ತು ಆಪತ್ತಿನ ಸಮಯದಲ್ಲಿ ಸಹಾಯಮಾಡಲಿಕ್ಕಾಗಿ ಹುಟ್ಟಿರುವ ಸಹೋದರನಾಗಿದ್ದಾನೆ.”​—⁠ಜ್ಞಾನೋಕ್ತಿ 17:17, NW.

ದೇವರ ವಾಕ್ಯದಿಂದ ಸಾಂತ್ವನ

ನನ್ನ ಗರ್ಭಸ್ರಾವವಾದ ಮುಂದಿನ ವಾರದಲ್ಲೇ, ಕ್ರಿಸ್ತನ ಮರಣದ ಜ್ಞಾಪಕಾಚರಣೆಯಿತ್ತು. ಒಂದು ಸಾಯಂಕಾಲ ನಾವು ಯೇಸುವಿನ ಕೊನೆಯ ದಿನಗಳ ಬಗ್ಗೆ ಬೈಬಲ್‌ ವೃತ್ತಾಂತಗಳನ್ನು ಓದುತ್ತಿದ್ದಾಗ, ಈ ವಿಚಾರವು ತಟ್ಟನೆ ನನ್ನ ಮನಸ್ಸಿಗೆ ಹೊಳೆಯಿತು: ‘ಯೆಹೋವನು ತನ್ನ ಸ್ವಂತ ಮಗನನ್ನು ಕಳೆದುಕೊಂಡಿರುವುದರಿಂದ ಆತನಿಗೆ ಈ ನಷ್ಟದ ನೋವೇನೆಂಬುದು ಗೊತ್ತಿದೆ!’ ಯೆಹೋವನು ನಮ್ಮ ಸ್ವರ್ಗೀಯ ತಂದೆಯಾಗಿರುವುದರಿಂದ, ಗಂಡಾಗಿರಲಿ, ಹೆಣ್ಣಾಗಿರಲಿ ಆತನು ತನ್ನ ಎಲ್ಲ ಸೇವಕರನ್ನು ಎಷ್ಟೊಂದು ಅರ್ಥಮಾಡಿಕೊಳ್ಳುತ್ತಾನೆ ಮತ್ತು ಎಷ್ಟು ಸಹಾನುಭೂತಿಯನ್ನು ತೋರಿಸುತ್ತಾನೆಂಬುದನ್ನು ನಾನು ಕೆಲವೊಮ್ಮೆ ಮರೆತುಬಿಡುತ್ತೇನೆ. ಆ ವಿಚಾರವು ನನ್ನ ಮನಸ್ಸಿಗೆ ಬಂದ ಕ್ಷಣದಲ್ಲೇ ನನ್ನನ್ನು ಒಂದು ರೀತಿಯ ನೆಮ್ಮದಿಯು ಆವರಿಸಿತು. ನಾನು ಯೆಹೋವನಿಗೆ ಹಿಂದೆಂದಿಗಿಂತಲೂ ಹೆಚ್ಚು ಆಪ್ತಳಾಗಿದ್ದೇನೆಂಬ ಭಾವನೆ ನನ್ನಲ್ಲಿ ಉಂಟಾಯಿತು.

ಬೈಬಲ್‌ ಆಧಾರಿತ ಪ್ರಕಾಶನಗಳಿಂದಲೂ, ವಿಶೇಷವಾಗಿ ಒಬ್ಬ ಪ್ರಿಯ ವ್ಯಕ್ತಿಯ ನಷ್ಟವನ್ನು ಚರ್ಚಿಸಿದಂಥ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಹಿಂದಿನ ಸಂಚಿಕೆಗಳಿಂದ ನಾನು ತುಂಬ ಉತ್ತೇಜನವನ್ನು ಪಡೆದೆ. ಉದಾಹರಣೆಗಾಗಿ, ಆಗಸ್ಟ್‌ 8, 1987ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಸಂಚಿಕೆಯಲ್ಲಿ “ಒಂದು ಮಗುವಿನ ನಷ್ಟವನ್ನು ನಿಭಾಯಿಸುವುದು” ಎಂಬ ಲೇಖನಗಳು ಹಾಗೂ, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ ಬ್ರೋಷರ್‌ ತುಂಬ ಸಹಾಯಕಾರಿಯಾಗಿದ್ದವು. *

ದುಃಖಕ್ಕೆ ಅಂತ್ಯ

ಕಾಲಚಕ್ರವು ಉರುಳಿದಂತೆಯೇ, ನಾನು ಯಾವುದೇ ಅಪರಾಧಿ ಭಾವನೆಯಿಲ್ಲದೆ ನಗಾಡಲು ಶಕ್ತಳಾಗಿದ್ದದರಿಂದ ಮತ್ತು ನಾನು ಕಳೆದುಕೊಂಡಿದ್ದ ಮಗುವಿನ ಬಗ್ಗೆ ಏನನ್ನೂ ಹೇಳದೆ ಸಂಭಾಷಣೆಯನ್ನು ಮಾಡಲು ಶಕ್ತಳಾದಾಗ, ನಾನು ವಾಸಿಯಾಗುತ್ತಿದ್ದೇನೆಂದು ನನಗೆ ತಿಳಿದುಬಂತು. ಹಾಗಿದ್ದರೂ ಆಗೊಮ್ಮೆ ಈಗೊಮ್ಮೆ ನಾನು ಭಾವನಾತ್ಮಕ ಸಂಕ್ಷೋಭೆಯನ್ನು ಅನುಭವಿಸುತ್ತಿದ್ದೆ. ನನ್ನ ಗರ್ಭಸ್ರಾವದ ಬಗ್ಗೆ ಕೇಳಿಸಿಕೊಂಡಿರದಂಥ ಸ್ನೇಹಿತರನ್ನು ಭೇಟಿಯಾದಾಗಲೊ, ಒಂದು ನವಜಾತ ಶಿಶುವಿನೊಂದಿಗೆ ಯಾವುದಾದರೂ ಕುಟುಂಬವು ನಮ್ಮ ರಾಜ್ಯ ಸಭಾಗೃಹಕ್ಕೆ ಭೇಟಿ ನೀಡುತ್ತಿದ್ದಂಥ ಸಂದರ್ಭಗಳಲ್ಲೊ ಹೀಗಾಗುತ್ತಿತ್ತು.

ಆಮೇಲೆ ಒಂದು ದಿನ ಬೆಳಗ್ಗೆ, ಕಾರ್ಮೋಡಗಳು ಸರಿದುಹೋಗಿರುವ ಭಾವನೆಯೊಂದಿಗೆ ಎದ್ದೆ. ನನ್ನ ಕಣ್ಣುಗಳನ್ನು ತೆರೆಯುವ ಮುಂಚೆಯೇ, ನನಗೆ ಒಂದು ರೀತಿಯ ಗುಣಹೊಂದಿರುವ ಅನಿಸಿಕೆಯಾಯಿತು. ಈ ರೀತಿಯ ಸಮಾಧಾನ ಮತ್ತು ಪ್ರಶಾಂತತೆಯನ್ನು ನಾನು ಎಷ್ಟೋ ತಿಂಗಳುಗಳ ನಂತರ ಅನುಭವಿಸಿದೆ. ಆದರೆ, ಆ ಮಗುವನ್ನು ಕಳೆದುಕೊಂಡ ಒಂದು ವರ್ಷದ ನಂತರ ನಾನು ಪುನಃ ಗರ್ಭಿಣಿಯಾದಾಗ, ಪುನಃ ಗರ್ಭಸ್ರಾವವಾಗುವುದೋ ಏನೋ ಎಂಬ ವಿಚಾರಗಳು ಮನಸ್ಸಿಗೆ ಬಂದವು. ಆದರೆ ಸಂತೋಷಕರವಾಗಿ, ನಾನು ಅಕ್ಟೋಬರ್‌ 2001ರಲ್ಲಿ ಒಬ್ಬ ಆರೋಗ್ಯವಂತ ಗಂಡು ಮಗುವಿಗೆ ಜನ್ಮವಿತ್ತೆ.

ನಾನು ಕಳೆದುಕೊಂಡ ಮಗುವಿಗಾಗಿ ನಾನೀಗಲೂ ದುಃಖಿಸುತ್ತೇನೆ. ಆದರೆ ಆ ಇಡೀ ಘಟನಾವಳಿಯು, ಜೀವಕ್ಕಾಗಿ, ನನ್ನ ಕುಟುಂಬಕ್ಕಾಗಿ, ಜೊತೆ ಕ್ರೈಸ್ತರಿಗಾಗಿ ಮತ್ತು ನಮ್ಮನ್ನು ಸಂತೈಸುವ ದೇವರಿಗಾಗಿ ನನ್ನ ಗಣ್ಯತೆಯನ್ನು ಹೆಚ್ಚಿಸಿದೆ. ದೇವರು ನಮ್ಮ ಮಕ್ಕಳನ್ನು ಕೊಂಡೊಯ್ಯುವುದಿಲ್ಲ ಬದಲಾಗಿ “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎಂಬ ಕಟುವಾದ ಸತ್ಯಕ್ಕೆ ಆ ಅನುಭವವು ಒತ್ತು ನೀಡಿದೆ.​—⁠ಪ್ರಸಂಗಿ 9:⁠11.

ದೇವರು ಎಲ್ಲ ದುಃಖ, ಗೋಳಾಟ ಮತ್ತು ಗರ್ಭಸ್ರಾವದ ಶಾರೀರಿಕ ಹಾಗೂ ಭಾವನಾತ್ಮಕ ನೋವನ್ನು ಸೇರಿಸಿ ಎಲ್ಲ ವಿಧದ ವೇದನೆಯನ್ನು ನಿರ್ಮೂಲಮಾಡುವ ಸಮಯಕ್ಕಾಗಿ ನಾವೆಷ್ಟು ಕಾತುರದಿಂದ ಮುನ್ನೋಡುತ್ತೇವೆ! (ಯೆಶಾಯ 65:​17-23) ಆಗ ಎಲ್ಲ ವಿಧೇಯ ಮಾನವರು ಹೀಗೆ ಹೇಳಲು ಶಕ್ತರಾಗಿರುವರು: “ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?”​—⁠1 ಕೊರಿಂಥ 15:55; ಯೆಶಾಯ 25:8.​—⁠ ದತ್ತಲೇಖನ. (g02 3/22)

[ಪಾದಟಿಪ್ಪಣಿಗಳು]

^ ಪ್ರತಿಯೊಬ್ಬರು ಗರ್ಭಸ್ರಾವಕ್ಕೆ ಭಿನ್ನವಾದ ರೀತಿಯಲ್ಲಿ ಪ್ರತಿಕ್ರಿಯೆ ತೋರಿಸುತ್ತಾರೆಂದು ಸಂಶೋಧನೆಯು ತೋರಿಸುತ್ತದೆ. ಕೆಲವರಿಗೆ ಗಲಿಬಿಲಿಯಾಗುತ್ತದೆ, ಕೆಲವರು ನಿರಾಶರಾಗುತ್ತಾರೆ ಮತ್ತು ಇನ್ನೂ ಕೆಲವರು ದುಃಖದ ಸಾಗರದಲ್ಲಿ ಮುಳುಗಿಬಿಡುತ್ತಾರೆ. ಸಂಶೋಧಕರು ಹೇಳುವುದೇನೆಂದರೆ, ಗರ್ಭಸ್ರಾವದಂಥ ಗಂಭೀರವಾದ ನಷ್ಟಕ್ಕೆ, ಅಳುವುದು ಒಂದು ಸಹಜ ಪ್ರತಿಕ್ರಿಯೆಯಾಗಿದೆ ಮತ್ತು ಗುಣಮುಖವಾಗುವ ಪ್ರಕ್ರಿಯೆಯ ಒಂದು ಭಾಗವಾಗಿದೆ.

^ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 21ರಲ್ಲಿರುವ ಚೌಕ]

ಗರ್ಭಸ್ರಾವದ ಸಂಭವ ಪ್ರಮಾಣ ಮತ್ತು ಕಾರಣಗಳು

“ಪತ್ತೆಹಚ್ಚಲ್ಪಟ್ಟಿರುವ ಎಲ್ಲ ಗರ್ಭಾವಸ್ಥೆಗಳಲ್ಲಿ 15ರಿಂದ 20 ಪ್ರತಿಶತದಷ್ಟು, ಗರ್ಭಸ್ರಾವದಲ್ಲಿ ಅಂತ್ಯಗೊಳ್ಳುತ್ತವೆಂದು ಸಮೀಕ್ಷೆಗಳು ಸೂಚಿಸುತ್ತವೆ” ಎಂದು ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಹೇಳುತ್ತದೆ. “ಆದರೆ ಗರ್ಭಸ್ರಾವದ ಅಪಾಯ ಸಂಭವವು, ಹೆಚ್ಚಿನ ಸ್ತ್ರೀಯರಿಗೆ ತಾವು ಗರ್ಭಿಣಿಯರಾಗಿದ್ದೇವೆಂದು ತಿಳಿದಿರದಂಥ ಸಮಯದಲ್ಲಿ, ಅಂದರೆ ಗರ್ಭತಾಳುವಿಕೆ (ಫಲವತ್ತಾಗುವಿಕೆ)ಯ ನಂತರದ ಮೊದಲ ಎರಡು ವಾರಗಳಲ್ಲಿ ಅತಿ ಹೆಚ್ಚಾಗಿರುತ್ತದೆ.” ಇನ್ನೊಂದು ಕೃತಿಯು ಹೇಳುವುದೇನೆಂದರೆ, “ಗರ್ಭಾವಸ್ಥೆಯ ಮೊದಲ 12 ವಾರಗಳಲ್ಲಿ 80 ಪ್ರತಿಶತ ಗರ್ಭಸ್ರಾವಗಳು ನಡೆಯುತ್ತವೆ.” ಇವುಗಳಲ್ಲಿ ಕಡಿಮೆಪಕ್ಷ ಅರ್ಧದಷ್ಟು, ಭ್ರೂಣದ ವರ್ಣತಂತುಗಳಲ್ಲಿರುವ ದೋಷಗಳಿಂದಾಗಿ ಉಂಟಾಗುತ್ತದೆಂದು ನೆನಸಲಾಗುತ್ತದೆ. ಈ ದೋಷಗಳು ತಂದೆ ಅಥವಾ ತಾಯಿಯ ವರ್ಣತಂತುಗಳಲ್ಲಿ ಇರುವ ಅದೇ ರೀತಿಯ ದೋಷಗಳಿಂದಾಗಿರುವುದಿಲ್ಲ.

ಗರ್ಭಸ್ರಾವಕ್ಕೆ ಇನ್ನಿತರ ಕಾರಣಗಳು, ತಾಯಿಯ ಆರೋಗ್ಯದಿಂದ ಉದ್ಭವಿಸಬಹುದು. ಹಾರ್ಮೋನಿನ ಮತ್ತು ಸೋಂಕು ರಕ್ಷಣಾ ವ್ಯವಸ್ಥೆಯ ವ್ಯಾಧಿಗಳು, ಸೋಂಕುಗಳು ಮತ್ತು ತಾಯಿಯ ಗರ್ಭಕೋಶದ ಕಂಠ ಇಲ್ಲವೇ ಗರ್ಭಕೋಶದಲ್ಲಿರುವ ಅಸಾಮಾನ್ಯತೆಗಳು ಇದಕ್ಕೆ ಕಾರಣಗಳಾಗಿರುತ್ತವೆಂದು ವೈದ್ಯಕೀಯ ಅಧಿಕಾರಿಗಳು ಸೂಚಿಸುತ್ತಾರೆ. ಮಧುಮೇಹ ರೋಗ (ಸರಿಯಾಗಿ ನಿಯಂತ್ರಿಸಲ್ಪಡದಿದ್ದರೆ) ಮತ್ತು ಅಧಿಕ ರಕ್ತದೊತ್ತಡದಂಥ ದೀರ್ಘಕಾಲದ ರೋಗಗಳೂ ಕಾರಣಗಳಾಗಿರಬಲ್ಲವು.

ಪರಿಣತರಿಗನುಸಾರ ವ್ಯಾಯಾಮ ಮಾಡುವುದರಿಂದ, ಭಾರವಾದ ವಸ್ತುಗಳನ್ನು ಎತ್ತುವುದರಿಂದ ಅಥವಾ ಲೈಂಗಿಕ ಸಂಬಂಧಗಳಿಂದಾಗಿ ಗರ್ಭಸ್ರಾವವು ಆಗಬೇಕೆಂದೇನಿಲ್ಲ. ಜಾರಿ ಬೀಳುವಿಕೆ, ಒಂದು ಚಿಕ್ಕ ಹೊಡೆತ, ಅಥವಾ ಆಕಸ್ಮಿಕವಾಗಿ ಹೆದರಿಹೋಗುವುದರಿಂದ ಗರ್ಭಸ್ರಾವವಾಗುವುದು ಅಸಂಭವ. ಒಂದು ಕೃತಿಯು ಹೀಗನ್ನುತ್ತದೆ: “ನಿಮ್ಮ ಸ್ವಂತ ಜೀವವನ್ನು ಅಪಾಯಕ್ಕೆ ಹಾಕುವಷ್ಟು ಗಂಭೀರವಾದ ಹಾನಿಯಿಂದಾಗಿ ಮಾತ್ರ ಭ್ರೂಣಕ್ಕೂ ಹಾನಿಯಾಗುವುದು.” ಗರ್ಭಕೋಶದ ವಿನ್ಯಾಸವು, ಒಬ್ಬ ವಿವೇಕಯುತ ಹಾಗೂ ಪ್ರೀತಿಪರ ಸೃಷ್ಟಿಕರ್ತನಿದ್ದಾನೆ ಎಂಬುದಕ್ಕೆ ಎಷ್ಟು ಚೆನ್ನಾಗಿ ಸಾಕ್ಷ್ಯವನ್ನು ನೀಡುತ್ತದೆ!​—⁠ಕೀರ್ತನೆ 139:​13, 14.

[ಪುಟ 23ರಲ್ಲಿರುವ ಚೌಕ/ಚಿತ್ರ]

ಕುಟುಂಬ ಮತ್ತು ಸ್ನೇಹಿತರು ಸಹಾಯಮಾಡಬಹುದಾದ ವಿಧಗಳು

ಒಬ್ಬ ಕುಟುಂಬ ಸದಸ್ಯೆ ಇಲ್ಲವೆ ಸ್ನೇಹಿತೆಗೆ ಗರ್ಭಸ್ರಾವವಾದಾಗ, ನಮಗೆ ಏನು ಹೇಳುವುದು ಅಥವಾ ಮಾಡುವುದೆಂದು ತಿಳಿದುಕೊಳ್ಳಲು ಕೆಲವೊಮ್ಮೆ ಕಷ್ಟವಾಗುತ್ತದೆ. ಇಂಥ ನಷ್ಟಕ್ಕೆ ಜನರು ಭಿನ್ನ ಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ತೋರಿಸುತ್ತಾರೆ. ಆದುದರಿಂದ ಸಾಂತ್ವನ ಮತ್ತು ಸಹಾಯವನ್ನು ನೀಡಲಿಕ್ಕಾಗಿ ಒಂದೇ ಸೂತ್ರವೆಂಬುದೇನಿಲ್ಲ. ಆದರೆ ಈ ಮುಂದಿನ ಸಲಹೆಗಳನ್ನು ಪರಿಗಣಿಸಿರಿ. *

ಸಹಾಯಮಾಡಲಿಕ್ಕಾಗಿ ನೀವು ಮಾಡಬಹುದಾದ ಪ್ರಾಯೋಗಿಕ ವಿಷಯಗಳು:

ಹಿರಿಯ ಮಕ್ಕಳನ್ನು ನೋಡಿಕೊಳ್ಳಲು ಸಿದ್ಧರಿದ್ದೀರೆಂದು ಹೇಳಿರಿ.

ಕುಟುಂಬಕ್ಕಾಗಿ ಊಟವನ್ನು ತಯಾರಿಸಿ ತಂದುಕೊಡಿ.

ತಂದೆಗೂ ಸಾಂತ್ವನ ನೀಡಿರಿ. ಒಬ್ಬ ತಂದೆ ಹೇಳಿದಂತೆ, “ಈ ಸನ್ನಿವೇಶದಲ್ಲಿರುವ ತಂದೆಗಾಗಿ ಕಾರ್ಡುಗಳು ತಯಾರಿಸಲ್ಪಡುವುದಿಲ್ಲ.”

ಹೇಳಬಹುದಾದ ಸಹಾಯಕಾರಿ ಮಾತುಗಳು:

“ನಿಮ್ಮ ಗರ್ಭಸ್ರಾವದ ಬಗ್ಗೆ ಕೇಳಿ ನನಗೆ ತುಂಬ ಬೇಸರವಾಯಿತು.”

ಈ ಪದಗಳು ತುಂಬ ಸರಳವಾಗಿದ್ದರೂ, ಅವು ಬಹಳಷ್ಟು ಸಾಂತ್ವನವನ್ನು ನೀಡಿ, ಇನ್ನೂ ಹೆಚ್ಚಿನ ಸಂತೈಸುವಿಕೆಯ ಮಾತುಗಳಿಗಾಗಿ ಎಡೆಮಾಡಿಕೊಡುವವು.

“ಅತ್ತುಬಿಡಿ, ಪರವಾಗಿಲ್ಲ.”

ಒಂದು ಗರ್ಭಸ್ರಾವವಾದ ನಂತರದ ಆರಂಭದ ವಾರಗಳಲ್ಲಿ ಅಥವಾ ತಿಂಗಳುಗಳಲ್ಲೂ ಕಂಬನಿ ಸದಾ ಕಣ್ಣಂಚಿನಲ್ಲೇ ಸಿದ್ಧವಾಗಿರುತ್ತದೆ. ಆ ವ್ಯಕ್ತಿಯು ತನ್ನ ಭಾವೋದ್ವೇಗಗಳನ್ನು ತೋರಿಸುವುದರಿಂದ, ನಿಮಗೆ ಅವಳಿಗಾಗಿರುವ ಗೌರವವು ಸ್ವಲ್ಪವೂ ಕಡಿಮೆಯಾಗುವುದಿಲ್ಲವೆಂಬ ಆಶ್ವಾಸನೆಯನ್ನು ಅವಳಿಗೆ ನೀಡಿರಿ.

“ನೀವು ಹೇಗಿದ್ದೀರೆಂದು ತಿಳಿದುಕೊಳ್ಳಲು ನಾನು ಪುನಃ ಬರುವ ವಾರ ಫೋನ್‌ ಮಾಡಬಹುದೊ?”

ಗರ್ಭಸ್ರಾವವಾದವರಿಗೆ ಆರಂಭದಲ್ಲಿ ಬಹಳಷ್ಟು ಸಹಾನುಭೂತಿಯು ಸಿಗುತ್ತಿರಬಹುದು. ಆದರೆ ಸಮಯ ದಾಟಿದಂತೆ ಮತ್ತು ಅವರಿನ್ನೂ ನೋವಿನಲ್ಲಿರುವಾಗ, ಬೇರೆಯವರು ತಮ್ಮನ್ನು ಮರೆತುಬಿಟ್ಟಿದ್ದಾರೆಂಬ ಭಾವನೆ ಅವರಲ್ಲಿ ಉಂಟಾಗಬಹುದು. ನಿಮ್ಮ ಬೆಂಬಲ ಇನ್ನೂ ಇದೆಯೆಂಬ ಅರಿವು ಅವರಿಗಾದರೆ ಅವರಿಗೆ ಹಿತವಾದ ಅನಿಸಿಕೆಯುಂಟಾಗುವುದು. ಏಕೆಂದರೆ ಆ ದುಃಖದ ಭಾವನೆಗಳು ಹಲವಾರು ವಾರಗಳು ಇಲ್ಲವೆ ತಿಂಗಳುಗಳ ವರೆಗೂ ಮುಂದುವರಿಯಬಲ್ಲವು. ಆಮೇಲೆ ಅವರು ಇನ್ನೊಂದು ಮಗುವನ್ನು ಯಶಸ್ವಿಯಾಗಿ ಹೆತ್ತನಂತರವೂ ಅವು ಪುನಃ ಬರಬಲ್ಲವು.

“ನನಗೆ ಏನು ಹೇಳಬೇಕೆಂಬುದೇ ತೋಚುತ್ತಿಲ್ಲ.”

ಏನನ್ನೂ ಹೇಳದೆ ಇರುವುದಕ್ಕಿಂತಲೂ ಹೀಗೆ ಹೇಳುವುದು ಎಷ್ಟೋ ಲೇಸು. ನಿಮ್ಮ ಪ್ರಾಮಾಣಿಕತೆ ಮತ್ತು ನೀವು ಅಲ್ಲಿ ಉಪಸ್ಥಿತರಿದ್ದೀರೆಂಬ ವಾಸ್ತವಾಂಶವೇ ನಿಮ್ಮ ಚಿಂತೆಯನ್ನು ಪ್ರತಿಬಿಂಬಿಸುತ್ತದೆ.

ಹೇಳಬಾರದ ಮಾತುಗಳು:

“ನಿನಗೀಗಲೂ ಇನ್ನೊಂದು ಮಗುವಾಗುವ ಸಾಧ್ಯತೆಯಿದೆ.”

ಇದು ಸತ್ಯವಾಗಿರಬಹುದಾದರೂ, ಅದು ಸಹಾನುಭೂತಿಯ ಕೊರತೆಯನ್ನು ಪ್ರತಿಬಿಂಬಿಸುತ್ತದೆ. ಆ ಹೆತ್ತವರಿಗೆ ಬರಿ ಯಾವುದೇ ಮಗು ಅಲ್ಲ, ಬದಲಾಗಿ ಮಗುವೇ ಬೇಕಾಗಿತ್ತು. ಇನ್ನೊಂದು ಮಗುವನ್ನು ಪಡೆಯುವುದರ ಬಗ್ಗೆ ಯೋಚಿಸುವ ಮುಂಚೆ, ಅವರು ತಾವು ಕಳೆದುಕೊಂಡ ಮಗುವಿಗಾಗಿ ಶೋಖಿಸುವ ಗತ್ಯವಿರಬಹುದು.

“ಅದರಲ್ಲಿ ಯಾವುದೊ ದೋಷವಿತ್ತೋ ಏನೋ.”

ಹಾಗಿದ್ದಿರಲೂಬಹುದು. ಆದರೆ ಅದು ಸಾಂತ್ವನದಾಯಕ ಮಾತಾಗಿರುವುದಿಲ್ಲ. ತಾಯಿಯ ಮನಸ್ಸಿನಲ್ಲಿ, ಅವಳ ಗರ್ಭದಲ್ಲಿ ಒಂದು ಆರೋಗ್ಯಕರ ಮಗುವೇ ಇತ್ತು.

“ಕಡಿಮೆಪಕ್ಷ ನಿನಗೆ ಆ ಮಗುವಿನ ಪರಿಚಯವಿಲ್ಲದಿದ್ದದ್ದು ಒಳ್ಳೇದಾಯಿತು. ಇದು ನಂತರ ಮುಂದೆಂದಾದರೂ ಸಂಭವಿಸುತ್ತಿದ್ದರೆ ಇನ್ನೂ ಕೆಟ್ಟದ್ದಾಗಿರುತ್ತಿತ್ತು.”

ಹೆಚ್ಚಿನ ಸ್ತ್ರೀಯರು ಆರಂಭದಿಂದಲೇ ತಮ್ಮ ಅಜಾತ ಶಿಶುಗಳೊಂದಿಗೆ ಒಂದು ಬಂಧವನ್ನು ಬೆಸೆದಿರುತ್ತಾರೆ. ಆದುದರಿಂದ ಅಂಥ ಮಗು ಸಾಯುವಾಗ, ದುಃಖವಾಗುವುದು ಸಾಮಾನ್ಯ. ತಾಯಿಗೆ “ಗೊತ್ತಿದ್ದಷ್ಟು” ಚೆನ್ನಾಗಿ ಬೇರೆ ಯಾರಿಗೂ ಆ ಮಗುವಿನ ಬಗ್ಗೆ ತಿಳಿದಿರಲಿಲ್ಲವೆಂಬ ವಾಸ್ತವಾಂಶದಿಂದ ಈ ದುಃಖವು ಇನ್ನೂ ಹೆಚ್ಚಾಗುತ್ತದೆ.

“ನಿನಗೆ ಕಡಿಮೆಪಕ್ಷ ಬೇರೆ ಮಕ್ಕಳಾದರೂ ಇದ್ದಾರಲ್ಲ.”

ದುಃಖಿಸುತ್ತಿರುವ ಹೆತ್ತವರಿಗೆ ಹೀಗನ್ನುವುದು, ಒಂದು ಕೈ ಇಲ್ಲವೇ ಕಾಲನ್ನು ಕಳೆದುಕೊಂಡಿರುವ ಒಬ್ಬ ವ್ಯಕ್ತಿಗೆ “ಕಡಿಮೆಪಕ್ಷ ನಿನ್ನ ಇನ್ನೊಂದು ಕೈ/ಕಾಲು ಆದರೂ ಇದೆಯಲ್ಲ” ಎಂದು ಹೇಳುವುದಕ್ಕೆ ಸಮಾನವಾಗಿದೆ.

ತುಂಬ ಕಾಳಜಿವಹಿಸುವ ಮತ್ತು ಪ್ರಾಮಾಣಿಕ ಮನಸ್ಸಿನ ಜನರು ಸಹ ಕೆಲವೊಮ್ಮೆ ತಪ್ಪಾದ ಮಾತುಗಳನ್ನಾಡುತ್ತಾರೆಂಬುದು ಅಂಗೀಕರಿಸತಕ್ಕ ವಿಷಯವಾಗಿದೆ. (ಯಾಕೋಬ 3:⁠2) ಹೀಗಿರುವುದರಿಂದ, ಗರ್ಭಸ್ರಾವವಾಗಿರುವ ಒಬ್ಬ ಸ್ತ್ರೀಯು ವಿವೇಚನೆಯುಳ್ಳವಳಾಗಿರುವಲ್ಲಿ, ಕ್ರೈಸ್ತ ಪ್ರೀತಿಯನ್ನು ತೋರಿಸಿ, ಒಳ್ಳೇ ಉದ್ದೇಶದಿಂದ ಆದರೆ ನಯವಾದ ಜಾಣ್ಮೆಯಿಲ್ಲದ ಮಾತುಗಳನ್ನಾಡಿದವರ ಬಗ್ಗೆ ಮನಸ್ಸಿನಲ್ಲಿ ಅಸಮಾಧಾನದ ಭಾವನೆಗಳನ್ನು ಇಟ್ಟುಕೊಳ್ಳುವುದಿಲ್ಲ.​—⁠ಕೊಲೊಸ್ಸೆ 3:⁠13.

[ಪಾದಟಿಪ್ಪಣಿ]

^ ವೆಲ್ಲಿಂಗ್ಟನ್‌, ನ್ಯೂ ಸೀಲೆಂಡ್‌ನ ಗರ್ಭಸ್ರಾವದ ಬೆಂಬಲ ಗುಂಪಿನಿಂದ ತಯಾರಿಸಲ್ಪಟ್ಟಿರುವ ಗರ್ಭಸ್ರಾವವನ್ನು ನಿಭಾಯಿಸಲು ಒಂದು ಮಾರ್ಗದರ್ಶಕ (ಇಂಗ್ಲಿಷ್‌) ಎಂಬ ಪುಸ್ತಕದಿಂದ ತೆಗೆದು ಅಳವಡಿಸಲ್ಪಟ್ಟಿರುವುದು.