ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ರೂಮ್‌ಮೇಟ್‌ನೊಂದಿಗೆ ಜೀವಿಸುವುದು ಅಷ್ಟು ಕಷ್ಟಕರವೇಕೆ?

ನನ್ನ ರೂಮ್‌ಮೇಟ್‌ನೊಂದಿಗೆ ಜೀವಿಸುವುದು ಅಷ್ಟು ಕಷ್ಟಕರವೇಕೆ?

ಯುವ ಜನರು ಪ್ರಶ್ನಿಸುವುದು . . .

ನನ್ನ ರೂಮ್‌ಮೇಟ್‌ನೊಂದಿಗೆ ಜೀವಿಸುವುದು ಅಷ್ಟು ಕಷ್ಟಕರವೇಕೆ?

“ನಾನು ಸ್ವಭಾವತಃ ಅಚ್ಚುಕಟ್ಟಾಗಿ, ಅತಿ ಅಚ್ಚುಕಟ್ಟಾಗಿ ಜೀವಿಸುವವನು. ಆದರೆ ರೂಮ್‌ಗೆ ಬರುವಾಗ, ನನ್ನ ರೂಮ್‌ಮೇಟ್‌ ನೆಲದ ಮೇಲೆ ಕೈಕಾಲು ಚಾಚಿ ಮಲಗಿ ಟಿವಿ ನೋಡುತ್ತಿರುತ್ತಾನೆ. ಕಾಗದಗಳು ಮತ್ತು ಪಾಪ್‌ಕಾರ್ನ್‌ ಎಲ್ಲೆಲ್ಲಿಯೂ ಬಿದ್ದಿರುತ್ತದೆ. ಪ್ರತಿ ಬಾರಿ ರೂಮ್‌ಗೆ ಹಿಂದಿರುಗುವಾಗ, ನಾನು ಏನನ್ನು ನೋಡಲಿದ್ದೇನೊ ಅದರ ಚಿತ್ರ ನನ್ನೆದುರಿಗೆ ಬರುವುದರಿಂದ, ‘ನನಗೆ ರೂಮ್‌ಗೆ ಹಿಂದಿರುಗಲು ಮನಸ್ಸಿಲ್ಲ’ ಎಂದು ನನ್ನಷ್ಟಕ್ಕೆ ಹೇಳಿಕೊಳ್ಳುತ್ತೇನೆ.”​—⁠ ಡೇವಿಡ್‌.

“ನನ್ನ ರೂಮ್‌ಮೇಟ್‌ ತನ್ನ ಮನೆಯಲ್ಲಿ ಅತಿ ಮುದ್ದಿನಿಂದ ಬೆಳೆದು ಕೆಟ್ಟುಹೋಗಿದ್ದಳು. ತನ್ನ ಕೆಲಸ ಮಾಡಲು ಕೆಲಸದವಳು ಮತ್ತು ಅಡುಗೆಯವಳು ನಮ್ಮೊಂದಿಗೆ ಇದ್ದಾಳೆಂದು ಅವಳಿಗನಿಸುತ್ತಿತ್ತೆಂದು ನೆನಸುತ್ತೇನೆ. ಮತ್ತು ಎಲ್ಲ ಕೆಲಸಗಳು ಅವಳಂದಂತೆಯೇ ಆಗಬೇಕಿತ್ತು.”​—⁠ ರನೇ. *

“ಅಪರಿಚಿತರ ಸ್ವಭಾವ ವೈಚಿತ್ರ್ಯಗಳನ್ನು ಸಹಿಸಿಕೊಳ್ಳಲು ಕಲಿತುಕೊಳ್ಳುವುದು . . . ಹೊಂದಿಸಿಕೊಳ್ಳುವ ಮತ್ತು ರಾಜಿಮಾಡಿಕೊಳ್ಳುವ ಕಲೆಯನ್ನು ಕಲಿಸಬಹುದು” ಎಂದು ಯು.ಎಸ್‌. ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ನಲ್ಲಿ ಒಂದು ಲೇಖನವು ಹೇಳಿತು. “ಆದರೆ ಇದನ್ನು ಕಲಿತುಕೊಳ್ಳುವ ವಿಧಾನವು ಅನೇಕವೇಳೆ ಸಂಕಟಕರ.” ಯಾರಿಗೆ ರೂಮ್‌ಮೇಟ್‌ನ/ಳ ಜೊತೆಯಿತ್ತೊ ಅವರು ಇದನ್ನು ಒಪ್ಪಿಯಾರು.

ಶಾಲಾ ಶಿಕ್ಷಣದ ದುಬಾರಿ ವೆಚ್ಚವನ್ನು ಕಡಮೆ ಮಾಡುವುದರಲ್ಲಿ ಸಹಾಯಮಾಡಲು ಅನೇಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಒಬ್ಬ ರೂಮ್‌ಮೇಟ್‌ನೊಂದಿಗೆ ಜೀವಿಸುತ್ತಾರೆ. ಇನ್ನು ಕೆಲವು ಯುವ ವ್ಯಕ್ತಿಗಳು, ತಮಗೆ ಹೆತ್ತವರಿಂದ ಸ್ವಾತಂತ್ರ್ಯ ದೊರೆಯುವ ದೃಷ್ಟಿಯಿಂದ ರೂಮ್‌ಮೇಟ್‌ಗಳೊಂದಿಗೆ ವಾಸಿಸುತ್ತಾರೆ. ಯುವ ಕ್ರೈಸ್ತರ ಮಧ್ಯೆ, ಅನೇಕರು ಆತ್ಮಿಕ ಅಭಿರುಚಿಗಳನ್ನು ಬೆನ್ನಟ್ಟಲಿಕ್ಕೋಸ್ಕರ ರೂಮ್‌ಮೇಟ್‌ಗಳನ್ನು ಆರಿಸಿಕೊಂಡಿದ್ದಾರೆ. (ಮತ್ತಾಯ 6:33) ಜೀವಿಸಲು ತಗಲುವ ಖರ್ಚಿನಲ್ಲಿ ಯಾರಾದರೂ ಭಾಗಿಗಳಾಗುವಲ್ಲಿ, ಅದು ತಮ್ಮ ಪೂರ್ಣ ಸಮಯದ ಸೇವೆಗೆ ಸಹಾಯಕರವಾಗುತ್ತದೆಂದು ಅವರು ಕಂಡುಕೊಳ್ಳುತ್ತಾರೆ. ಕೆಲವು ವೇಳೆ ಮಿಷನೆರಿ ಜೀವಿತದಲ್ಲಿ ಹಾಗೂ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸುಗಳಲ್ಲಿನ ಸೇವೆಯಲ್ಲಿ ಒಬ್ಬ ರೂಮ್‌ಮೇಟ್‌ ಜೊತೆ ಇರಬೇಕಾಗುತ್ತದೆ. *

ಎಚ್ಚರ! ಪತ್ರಿಕೆಯು ರೂಮ್‌ಮೇಟ್‌ಗಳೊಂದಿಗೆ ಜೀವಿಸಿರುವ ಅನೇಕ ಮಂದಿ ಯುವಕ ಯುವತಿಯರೊಂದಿಗೆ ಮಾತಾಡಿರುತ್ತದೆ. ಅವರೆಲ್ಲರೂ ಒಪ್ಪಿಕೊಳ್ಳುವುದೇನಂದರೆ, ರೂಮ್‌ಮೇಟ್‌ಗಳು ರೂಮಿನ ಬಾಡಿಗೆ ಹಣಕ್ಕೆ ಸಹಾಯಮಾಡುವವರು ಮಾತ್ರವಲ್ಲ, ಬದಲಾಗಿ ಅವರು ಸಂಗಾತಿಗಳು, ಅಂದರೆ ಮಾತುಕತೆ ನಡೆಸಿ, ಕೂಡಿ ಕೆಲಸಮಾಡುವ ಸಹವಾಸಿಗಳೂ ಆಗಿರಬಲ್ಲರು. ಲಿನ್‌ ಎಂಬವಳು ಜ್ಞಾಪಿಸಿಕೊಳ್ಳುವುದು: “ನಾವು ಇಡೀ ರಾತ್ರಿ ಎಚ್ಚರವಾಗಿದ್ದು, ಹುಡುಗಿಯರಿಗೆ ಇಷ್ಟವಾಗುವಂಥ ವಿಷಯಗಳ ಕುರಿತಾಗಿ ಹರಟೆಹೊಡೆಯುತ್ತಿದ್ದೆವು ಇಲ್ಲವೆ ಚಲನ ಚಿತ್ರಗಳನ್ನು ನೋಡುತ್ತಿದ್ದೆವು.” ರನೇ ಹೇಳುವುದು: “ರೂಮ್‌ಮೇಟ್‌ ನಮ್ಮನ್ನು ಪ್ರೋತ್ಸಾಹಿಸಲೂ ಶಕ್ತಳು. ಕೆಲವು ಸಲ, ನಾವು ಜೀವನೋಪಾಯಕ್ಕಾಗಿ ಕೆಲಸಮಾಡುತ್ತ, ಎಲ್ಲ ಖರ್ಚುಗಳನ್ನು ನೋಡಿಕೊಳ್ಳುತ್ತ, ಅದೇ ಸಮಯದಲ್ಲಿ ಸಾರಲು ಪ್ರಯತ್ನಿಸುತ್ತಿರುವಾಗ, ನಮ್ಮನ್ನು ಪ್ರೋತ್ಸಾಹಿಸಲು ರೂಮ್‌ಮೇಟ್‌ ಒಬ್ಬಳು ಇರುವುದು ಒಳ್ಳೆಯದು.”

ಹೀಗಿದ್ದರೂ, ರೂಮ್‌ಮೇಟ್‌ಗಳೊಂದಿಗೆ, ಅದರಲ್ಲೂ ಆರಂಭದಲ್ಲಿ ಅಪರಿಚಿತರಾಗಿರುವವರೊಂದಿಗೆ ಜೀವಿಸುವುದು ಒಂದು ದೊಡ್ಡ ಪಂಥಾಹ್ವಾನವಾಗಿರಬಲ್ಲದು. ಕಾಲೇಜ್‌ ಪರಿಸರದ ವಿಷಯದಲ್ಲಿ, ಯು.ಎಸ್‌. ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ ಹೇಳಿದ್ದು: “ಅನೇಕ ಶಾಲೆಗಳು ಹೊಂದಿಕೊಳ್ಳಸಾಧ್ಯವಿರುವ ರೂಮ್‌ಮೇಟ್‌ಗಳನ್ನು ಒಂದು ರೂಮ್‌ಗೆ ನೇಮಿಸಲು ಬಹಳ ಪ್ರಯತ್ನಗಳನ್ನು ಮಾಡಿರುವುದಾದರೂ, ಇದರ ಫಲಿತಾಂಶವು ಅತೃಪ್ತಿಕರವಾಗಿರುವುದು ಸಾಮಾನ್ಯ.” ಕಾಲೇಜ್‌ ರೂಮ್‌ಮೇಟ್‌ಗಳ ನಡುವಿನ ತಿಕ್ಕಾಟಗಳು ಹಿಂಸಾಚಾರದ ಹಂತದ ವರೆಗೂ ತಲಪುವುದುಂಟು! ಈ ಕಾರಣದಿಂದ, ತಮ್ಮ ರೂಮ್‌ಮೇಟ್‌ಗಳ ವಿಷಯದಲ್ಲಿ ನಿರಂತರವೋ ಎಂಬಂತೆ ತೋರಿಬರುವ ಹತಾಶೆಯನ್ನು ವ್ಯಕ್ತಪಡಿಸಲಾಗುವಂತೆ, ಅನೇಕ ಇಂಟರ್‌ನೆಟ್‌ ವೆಬ್‌ಸೈಟುಗಳು ಹುಟ್ಟಿಬಂದಿವೆ. ರೂಮ್‌ಮೇಟ್‌ಗಳೊಂದಿಗಿನ ಜೀವನವು ಅನೇಕವೇಳೆ ಇಷ್ಟು ಕಷ್ಟಕರವಾಗಿ ಪರಿಣಮಿಸುವುದು ಏಕೆ?

ಅಪರಿಚಿತನೊಂದಿಗೆ ಜೀವಿಸುವುದು

ಮಾರ್ಕ್‌ ಹೇಳುವುದು: “ಒಬ್ಬ ಅಪರಿಚಿತನೊಂದಿಗೆ ರೂಮ್‌ನಲ್ಲಿ ಜೀವಿಸುವುದು ಒಂದು ರೀತಿಯ ಆಸಕ್ತಿಕರ ಅನುಭವವಾಗಿದೆ. ಏಕೆಂದರೆ ಅವನು ಎಂತಹ ವ್ಯಕ್ತಿಯೆಂಬುದು ನಮಗೆ ಗೊತ್ತಿರುವುದಿಲ್ಲ.” ಹೌದು, ನಿಮಗೆ ಕೊಂಚವೇ ತಿಳಿದಿರುವ ಅಥವಾ ಏನೂ ತಿಳಿಯದಿರಬಹುದಾದ ಒಬ್ಬನೊಂದಿಗೆ ಜೀವಿಸುವ ವಿಚಾರವು ನಿಮ್ಮಲ್ಲಿ ಕಳವಳವನ್ನು ಉಂಟುಮಾಡಬಹುದು. ಕ್ರೈಸ್ತರ ಮಧ್ಯೆ ಅನೇಕ ಸಮಾನಾಭಿಪ್ರಾಯಗಳೂ ಮಾತುಕತೆಗೆ ಯೋಗ್ಯವಾದ ಅನೇಕ ವಿಷಯಗಳೂ ಇವೆಯೆಂಬುದು ನಿಜ. ಹಾಗಿದ್ದರೂ, ಡೇವಿಡ್‌ ಒಪ್ಪಿಕೊಳ್ಳುವುದು: “ಒಬ್ಬ ರೂಮ್‌ಮೇಟ್‌ನೊಂದಿಗೆ ಜೀವಿಸುವ ವಿಷಯದಲ್ಲಿ ನನಗೆ ತುಂಬಾ ಭಯವಿತ್ತು.”

ಆದರೆ ಈ ಸಂದರ್ಭದಲ್ಲಿ ಡೇವಿಡ್‌ನಿಗೆ ಸಿಕ್ಕಿದಂಥ ರೂಮ್‌ಮೇಟ್‌ ಅವನಿಗಿದ್ದ ರೀತಿಯ ಹಿನ್ನೆಲೆಯವನೇ ಆಗಿದ್ದನು. ಆದರೆ ಎಲ್ಲರೊಂದಿಗೆ ಹೀಗೆಯೇ ಆಗುವುದಿಲ್ಲ. ಮಾರ್ಕ್‌ ಹೇಳುವುದು: “ನನ್ನ ಮೊದಲನೆಯ ರೂಮ್‌ಮೇಟ್‌ ಹೆಚ್ಚು ಮಾತಾಡುತ್ತಿರಲಿಲ್ಲ. ಒಂದೇ ರೂಮ್‌ನಲ್ಲಿರುವಾಗ, ಮಾತಾಡುವುದು ನಿಜವಾಗಿಯೂ ಆವಶ್ಯಕ. ಆದರೆ ಅವನು ಮಾತಾಡುತ್ತಲೇ ಇರಲಿಲ್ಲ. ಮತ್ತು ಇದು ನನ್ನನ್ನು ರೇಗಿಸುತ್ತಿತ್ತು.”

ಹಿನ್ನೆಲೆಗಳಲ್ಲಿನ ವ್ಯತ್ಯಾಸಗಳು ಬೇರೆ ಒತ್ತಡಗಳನ್ನು ತರಬಲ್ಲದು. ಲಿನ್‌ ಹೇಳುವುದು: “ನಾವು ಮೊದಲ ಬಾರಿ ಮನೆಬಿಟ್ಟು ನಮ್ಮಷ್ಟಕ್ಕೆ ಜೀವಿಸುತ್ತಿರುವಾಗ, ನಮ್ಮ ಇಷ್ಟದ ಪ್ರಕಾರ ಕೆಲಸಗಳನ್ನು ಮಾಡಬಯಸುತ್ತೇವೆ. ಆದರೆ ನಾವು ಬೇರೆಯವರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕೆಂದು ನಮಗೆ ಬೇಗನೇ ತಿಳಿದುಬರುತ್ತದೆ.” ನಿಮ್ಮ ಕುಟುಂಬದ ಬೆಚ್ಚಗಿನ ಗೂಡಿನಿಂದ ಹೊರಗೆ ಬಂದವರಾದ ನಿಮಗೆ, ಬೇರೆ ಜನರು ವಿಷಯಗಳನ್ನು ಭಿನ್ನವಾಗಿ ದೃಷ್ಟಿಸುವಂಥ ರೀತಿಯನ್ನು ತಿಳಿದು ಆಘಾತವಾಗಬಲ್ಲದು.

ವಿಭಿನ್ನ ಹಿನ್ನೆಲೆಗಳು, ವಿಭಿನ್ನ ರೀತಿಗಳು

ಒಬ್ಬ ವ್ಯಕ್ತಿ ತನ್ನ ಹೆತ್ತವರಿಂದ ಪಡೆದಿರುವ ಅಥವಾ ಪಡೆಯದೆ ಇರುವ ತರಬೇತಿಯ ಮೇಲೆ ಹೆಚ್ಚಿನದ್ದು ಹೊಂದಿಕೊಂಡಿರುತ್ತದೆ. (ಜ್ಞಾನೋಕ್ತಿ 22:⁠6) ಫೆರ್ನಾಂಡೊ ಎಂಬ ಯುವಕನು ಹೇಳುವುದು: “ನಾನು ಅಚ್ಚುಕಟ್ಟಿನ ವ್ಯಕ್ತಿ. ಆದರೆ ನನ್ನ ರೂಮ್‌ಮೇಟ್‌ ಕೊಳಕನಾಗಿದ್ದ. ಉದಾಹರಣೆಗೆ ನಮ್ಮ ಕಪಾಟನ್ನೇ ತೆಗೆದುಕೊಳ್ಳಿ. ಅವನು ವಸ್ತುಗಳನ್ನು ಎಲ್ಲೆಡೆ ಎಸೆದುಬಿಡುವವನಾಗಿದ್ದ. ನನಗೆ ಅವುಗಳನ್ನು ಅಚ್ಚುಕಟ್ಟಾಗಿ ತೂಗುಹಾಕುವುದು ಇಷ್ಟವಾಗಿತ್ತು.” ಕೆಲವು ಬಾರಿ ಮಟ್ಟಗಳಲ್ಲಿರುವ ವ್ಯತ್ಯಾಸಗಳು ವಿಪರೀತವಾಗಿರುತ್ತವೆ.

ರನೇ ಜ್ಞಾಪಿಸಿಕೊಳ್ಳುವುದು: “ನನ್ನ ರೂಮ್‌ಮೇಟ್‌ನ ಮಲಗುವ ರೂಮ್‌ ಕಸದ ತಿಪ್ಪೆಯಂತೆ ಕಾಣುತ್ತಿತ್ತು! ತಮ್ಮ ಊಟ ಮುಗಿಸಿದ ಮೇಲೆ ಮೇಜನ್ನು ಶುಚಿಗೊಳಿಸದೆ ಅಥವಾ ಎರಡೊ ಮೂರೊ ದಿನ ಪಾತ್ರೆಗಳನ್ನು ತೊಳೆಯದೆ ಅವನ್ನು ತೊಟ್ಟಿಯಲ್ಲೇ ಬಿಡುತ್ತಿದ್ದ ರೂಮ್‌ಮೇಟ್‌ಗಳೂ ನನಗಿದ್ದರು.” ಹೌದು, ಮನೆಗೆಲಸದ ವಿಷಯದಲ್ಲಿ, ಕೆಲವು ರೂಮ್‌ಮೇಟ್‌ಗಳು ಜ್ಞಾನೋಕ್ತಿ 26:14ರ ಸಾಕಾರರೂಪವೇ ಆಗಿರುವಂತೆ ಕಾಣುತ್ತಾರೆ: “ಕದವು ತಿರುಗುಣಿಯಲ್ಲಿ ಹೇಗೋ ಹಾಗೆ ಸೋಮಾರಿಯು ಹಾಸಿಗೆಯಲ್ಲಿ ಸುತ್ತಾಡುತ್ತಿರುವನು.”

ಆದರೆ ಇನ್ನೊಂದು ಕಡೆಯಲ್ಲಿ, ವಿಪರೀತವಾಗಿ ಅಚ್ಚುಕಟ್ಟಾಗಿರುವವರೊಂದಿಗೆ ವಾಸಮಾಡುವುದೂ ಮೋಜಿನದ್ದಾಗಿರಲಿಕ್ಕಿಲ್ಲವೆಂಬುದೂ ನಿಜ. ಲೀ ಎಂಬ ಯುವತಿ ತನ್ನ ರೂಮ್‌ಮೇಟ್‌ ವಿಷಯದಲ್ಲಿ ಹೇಳುವುದು: “ಪ್ರತಿ ತಾಸು ಶುಚಿಮಾಡುವುದು ಅವಳ ಗೀಳು. ನಾನು ಖಂಡಿತವಾಗಿ ಕೊಳಕು ವ್ಯಕ್ತಿಯಲ್ಲ. ಆದರೆ ಕೆಲವು ಸಲ, ಪುಸ್ತಕಗಳಂತಹ ವಸ್ತುಗಳನ್ನು ನಾನು ಹಾಸಿಗೆಯ ಮೇಲೆ ಬಿಡುತ್ತಿದ್ದೆ. ಆಕೆ ಅದನ್ನೂ ನಿಯಂತ್ರಿಸಬೇಕೆಂದು ನೆನಸುತ್ತಿದ್ದಳು.”

ವೈಯಕ್ತಿಕ ನೈರ್ಮಲ್ಯದ ವಿಷಯದಲ್ಲಿಯೂ ಕೆಲವು ರೂಮ್‌ಮೇಟ್‌ಗಳಿಗೆ ತಮ್ಮದೇ ಆದ ಅಭಿಪ್ರಾಯಗಳಿರಬಹುದು. ಮಾರ್ಕ್‌ ವಿವರಿಸುವುದು: “ನನ್ನ ರೂಮ್‌ಮೇಟ್‌ ಕೊನೆ ನಿಮಿಷದಲ್ಲಿ ಎದ್ದು, ತೊಟ್ಟಿಗೆ ಓಡಿಹೋಗಿ, ತಲೆಗೂದಲಿಗೆ ಸ್ವಲ್ಪ ನೀರೆರಚಿ, ಹೊರಗೆ ಹೋಗಿಬಿಡುತ್ತಾನೆ.”

ಹಿನ್ನೆಲೆ ಮತ್ತು ವ್ಯಕ್ತಿತ್ವದಲ್ಲಿ ಭಿನ್ನತೆಗಳು ನಮ್ಮ ವಿನೋದಾವಳಿ ಮತ್ತು ಮನೋರಂಜನೆಗಳ ಆಯ್ಕೆಗಳನ್ನೂ ಪ್ರಭಾವಿಸಬಲ್ಲವು. ಮಾರ್ಕ್‌ ತನ್ನ ರೂಮ್‌ಮೇಟ್‌ ವಿಷಯದಲ್ಲಿ ಹೇಳುವುದು: “ನಾವಿಬ್ಬರೂ ಒಂದೇ ವಿಧದ ಸಂಗೀತವನ್ನು ಇಷ್ಟಪಡುವುದಿಲ್ಲ.” ಆದರೆ ಪರಸ್ಪರ ಗೌರವವಿರುವಲ್ಲಿ, ಇಂತಹ ಭಿನ್ನತೆಗಳು ಪ್ರಯೋಜನಕರವಾಗಿರಬಲ್ಲವು. ಇದು ಪ್ರಾಯಶಃ ರೂಮ್‌ಮೇಟ್‌ಗಳಿಬ್ಬರ ಸಂಗೀತ ಅಭಿರುಚಿಯನ್ನೂ ವಿಸ್ತರಿಸಬಹುದು. ಆದರೆ, ಅನೇಕಸಲ ಈ ವ್ಯತ್ಯಾಸಗಳು ತಿಕ್ಕಾಟಗಳನ್ನು ಉಂಟುಮಾಡುತ್ತವೆ. ಫೆರ್ನಾಂಡೊ ಹೇಳುವುದು: “ನನಗೆ ಸ್ಪ್ಯಾನಿಷ್‌ ಸಂಗೀತ ಇಷ್ಟ. ಆದರೆ ನನ್ನ ರೂಮ್‌ಮೇಟ್‌ ಅದನ್ನು ಸದಾ ಟೀಕಿಸುತ್ತಿರುತ್ತಾನೆ.”

ಟೆಲಿಫೋನ್‌ ಸಮಸ್ಯೆ

ಟೆಲಿಫೋನಿನ ಉಪಯೋಗವು ತಿಕ್ಕಾಟದ ಒಂದು ಅತಿ ದೊಡ್ಡ ಕಾರಣವಾಗಿರಬಲ್ಲದು. ಮಾರ್ಕ್‌ ಹೇಳುವುದು: “ನನಗೆ ನಿದ್ದೆ ಮಾಡಲು ಮನಸ್ಸಾಗುವಾಗ ನನ್ನ ರೂಮ್‌ಮೇಟ್‌ ಎಚ್ಚರವಿರುತ್ತ ಫೋನಿನಲ್ಲಿ ಮಾತಾಡುತ್ತ ಇರುತ್ತಾನೆ. ಸ್ವಲ್ಪ ಸಮಯದ ಬಳಿಕ ಅಂತಹ ಅಭ್ಯಾಸ ಒಬ್ಬನನ್ನು ರೇಗಿಸಬಲ್ಲದು.” ಲಿನ್‌ ಅದೇ ರೀತಿ ನೆನಪಿಸಿಕೊಳ್ಳುವುದು: “ಕೆಲವು ಬಾರಿ ನನ್ನ ರೂಮ್‌ಮೇಟ್‌ಳ ಮಿತ್ರರು ಬೆಳಿಗ್ಗೆ ಮೂರೋ ನಾಲ್ಕೋ ಗಂಟೆಗೆ ಫೋನ್‌ ಮಾಡುತ್ತಿದ್ದರು. ಅವಳು ಇಲ್ಲದಿದ್ದಾಗ, ನಾನು ಎದ್ದು ಉತ್ತರಕೊಡಬೇಕಾಗುತ್ತಿತ್ತು.” ಸಮಸ್ಯೆಯ ಪರಿಹಾರ? “ನಮಗೆ ನಮ್ಮ ಸ್ವಂತ ಫೋನ್‌ಗಳನ್ನು ಕೊಳ್ಳಬೇಕಾಯಿತು.”

ಆದರೂ, ಎಲ್ಲ ಯುವ ಜನರಿಗೆ ತಮ್ಮ ಸ್ವಂತ ಫೋನ್‌ಗಳನ್ನು ಖರೀದಿಸಲಾಗುವುದಿಲ್ಲ. ಅವರು ಒಂದೇ ಫೋನನ್ನು ಹಂಚಿಕೊಳ್ಳಬೇಕಾಗುತ್ತದೆ. ಇದು ಬಿಕ್ಕಟ್ಟಿಗೆ ನಡೆಸಬಲ್ಲದು. ರನೇ ನೆನಪಿಸಿಕೊಳ್ಳುವುದು: “ನನ್ನ ರೂಮ್‌ಮೇಟ್‌ಗಳಲ್ಲಿ ಒಬ್ಬಳಿಗೆ ಒಬ್ಬ ಬಾಯ್‌ಫ್ರೆಂಡ್‌ ಇದ್ದ. ಆಕೆ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತಾಡುತ್ತಿದ್ದಳು. ಒಂದು ತಿಂಗಳಲ್ಲಿ ಅವಳ ಬಿಲ್‌ ರೂ. 4,000ಕ್ಕೂ ಹೆಚ್ಚಾಗಿತ್ತು. ನಾವು ಫೋನ್‌ ಖರ್ಚಿನಲ್ಲಿ ಸಮಭಾಗಿಗಳಾಗಲು ಒಪ್ಪಿಕೊಂಡದ್ದರಿಂದ, ನಾವು ಇದರಲ್ಲಿಯೂ ಭಾಗಿಗಳಾಗಬೇಕೆಂದು ಅವಳು ನೆನಸಿದಳು.”

ಬೇಕಾಗಿರುವಾಗ ಫೋನ್‌ ಮಾಡಲು ಸಾಧ್ಯವಿಲ್ಲದಿರುವುದು ಇನ್ನೊಂದು ಸಮಸ್ಯೆ. ಲೀ ಜ್ಞಾಪಿಸಿಕೊಳ್ಳುವುದು: “ನನಗಿಂತ ದೊಡ್ಡ ಪ್ರಾಯದವಳೊಂದಿಗೆ ನಾನು ರೂಮನ್ನು ಹಂಚಿಕೊಳ್ಳುತ್ತಿದ್ದೆ. ನಮ್ಮಲ್ಲಿ ಒಂದೇ ಫೋನ್‌ ಇತ್ತು. ನಾನು ಯಾವಾಗಲೂ ಫೋನ್‌ ಮಾಡುತ್ತಿದ್ದೆ, ಏಕೆಂದರೆ ನನಗೆ ತುಂಬ ಮಂದಿ ಸ್ನೇಹಿತೆಯರಿದ್ದರು. ಆಕೆ ಏನೂ ಹೇಳುತ್ತಿರಲಿಲ್ಲ. ಫೋನ್‌ ಮಾಡಲಿರುವಾಗ ಆಕೆ ನನ್ನನ್ನು ಕೇಳಿಯಾಳು ಎಂದು ನಾನು ನೆನಸಿದ್ದೆ. ಆದರೆ ನಾನು ಅವಳನ್ನು ಲಕ್ಷ್ಯಕ್ಕೆ ತೆಗೆದುಕೊಂಡಿರಲಿಲ್ಲವೆಂಬುದು ನನಗೆ ಈಗ ತಿಳಿದುಬಂದಿದೆ.”

ಏಕಾಂತತೆಯ ಅಭಾವ

ಡೇವಿಡ್‌ ಹೇಳುವುದು: “ಪ್ರತಿಯೊಬ್ಬನಿಗೂ ಸ್ವಲ್ಪ ಏಕಾಂತತೆ ಅಗತ್ಯ. ಕೆಲವು ಸಲ, ನನಗೆ ಯಾವ ಕೆಲಸವನ್ನೂ ಮಾಡದೆ ವಿಶ್ರಾಮ ಪಡೆಯಬೇಕೆಂದೆನಿಸುತ್ತದೆ.” ಆದರೂ, ನಿಮ್ಮ ವಾಸಸ್ಥಳದಲ್ಲಿ ನೀವು ಇನ್ನೊಬ್ಬರೊಂದಿಗಿರುವುದಾದರೆ, ಏಕಾಂತತೆಯ ಕ್ಷಣಗಳನ್ನು ಕಂಡುಕೊಳ್ಳುವುದು ಪಂಥಾಹ್ವಾನವೇ ಸರಿ. ಮಾರ್ಕ್‌ ಒಪ್ಪಿಕೊಳ್ಳುವುದು: “ನನಗೆ ಏಕಾಂತದಿಂದಿರುವುದೆಂದರೆ ಇಷ್ಟ. ಹೀಗಿರುವುದರಿಂದ ಏಕಾಂತತೆಯ ಕೊರತೆಯೇ ನನಗೆ ಸಹಿಸಲು ಅತಿ ಕಷ್ಟಕರವಾದ ಸಂಗತಿಯಾಗಿದೆ. ನನ್ನ ಮತ್ತು ನನ್ನ ರೂಮ್‌ಮೇಟ್‌ನ ಕೆಲಸದ ಸಮಯ ಒಂದೇ ಆಗಿರುವುದರಿಂದ, ರೂಮಿನಲ್ಲಿ ಏಕಾಂತತೆ ಸಿಗುವುದು ಕಷ್ಟ.”

ಯೇಸುವಿಗೂ ಆಗಾಗ ಏಕಾಂತತೆಯ ಆವಶ್ಯಕತೆಯಿತ್ತು. (ಮತ್ತಾಯ 14:13) ಆದಕಾರಣ, ನಿಮ್ಮ ರೂಮ್‌ಮೇಟ್‌ ರೂಮಿನಲ್ಲಿರುವಾಗ, ಓದುವುದೊ ಅಧ್ಯಯನ ಮಾಡುವುದೊ ಅಥವಾ ಧ್ಯಾನಿಸುವುದೊ ಅಸಾಧ್ಯವಲ್ಲವಾದರೂ ತುಂಬ ಕಷ್ಟಕರವಾಗಿ ಪರಿಣಮಿಸಬಹುದು. ಮತ್ತು ಇದು ನಿಮ್ಮನ್ನು ರೇಗಿಸಸಾಧ್ಯವಿದೆ. ಮಾರ್ಕ್‌ ಹೇಳುವುದು: “ಏನಾದರೂ ನಡೆಯುತ್ತಲೇ ಇರುವುದರಿಂದ ಅಧ್ಯಯನ ಮಾಡುವುದು ಕಷ್ಟಕರ. ಅವನ ಸ್ನೇಹಿತರು ಬರುತ್ತಾರೆ, ಅವನು ಫೋನಿನಲ್ಲಿ ಮಾತಾಡುತ್ತಿರುತ್ತಾನೆ, ಇಲ್ಲವೆ ಅವನು ಟಿವಿ ನೋಡುತ್ತಿರುತ್ತಾನೆ ಅಥವಾ ರೇಡಿಯೊದಲ್ಲಿ ಏನು ಬರುತ್ತದೋ ಅದನ್ನು ಕೇಳಿಸಿಕೊಳ್ಳುತ್ತಿರುತ್ತಾನೆ.”

ರೂಮ್‌ಮೇಟ್‌ನೊಂದಿಗೆ ಸೈರಣೆಯಿಂದ ಜೀವಿಸುವುದು ಪಂಥಾಹ್ವಾನದ ವಿಷಯವಾಗಿದೆಯಾದರೂ, ಸಾವಿರಾರು ಮಂದಿ ಯುವ ಜನರು ಅದರಲ್ಲಿ ಯಶಸ್ಸನ್ನು ಪಡೆದಿದ್ದಾರೆ. ಈ ಲೇಖನಮಾಲೆಯಲ್ಲಿ ಮುಂದೆ ಬರಲಿರುವ ಲೇಖನಗಳು, ರೂಮ್‌ಮೇಟ್‌ನೊಂದಿಗೆ ಜೀವಿಸುವಾಗ ಅದನ್ನು ಹೆಚ್ಚು ಪ್ರಯೋಜನಕರವಾಗಿ ಮಾಡುವ ಕೆಲವು ಪ್ರಾಯೋಗಿಕ ವಿಧಗಳನ್ನು ಚರ್ಚಿಸುವವು. (g02 4/22)

[ಪಾದಟಿಪ್ಪಣಿಗಳು]

^ ಹೆಸರುಗಳಲ್ಲಿ ಕೆಲವು ಬದಲಾಯಿಸಲ್ಪಟ್ಟಿವೆ.

^ ಈ ಸಲಹೆಯನ್ನು ಯುವ ಜನರಿಗೆ ಕೊಡಲಾಗುತ್ತದೆಯಾದರೂ, ಇದು ಬದಲಾಗಿರುವ ಪರಿಸ್ಥಿತಿಗಳಲ್ಲಿ, ಉದಾಹರಣೆಗೆ, ವಿವಾಹಜೊತೆಯನ್ನು ಕಳೆದುಕೊಂಡ ಸಂದರ್ಭದಲ್ಲಿ, ರೂಮ್‌ಮೇಟ್‌ಗಳೊಂದಿಗೆ ವಾಸಿಸಲು ಆರಂಭಿಸಿರುವ ಪ್ರಾಯಸ್ಥರಿಗೂ ಅನ್ವಯಿಸುತ್ತದೆ.

[ಪುಟ 12, 13ರಲ್ಲಿರುವ ಚಿತ್ರ]

ಸಂಗೀತದ ವಿಷಯದಲ್ಲಿ ಭಿನ್ನ ಅಭಿರುಚಿಗಳು ಸವಾಲನ್ನೊಡ್ಡಸಾಧ್ಯವಿದೆ

[ಪುಟ 14ರಲ್ಲಿರುವ ಚಿತ್ರ]

ಪರಸ್ಪರರಿಗಾಗಿ ಲಕ್ಷ್ಯವನ್ನು ತೋರಿಸದಿರುವುದು ಒತ್ತಡಗಳನ್ನು ಸೃಷ್ಟಿಸಬಲ್ಲದು