ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಯಂಕರ ದೃಶ್ಯಗಳು, ಆಶಾಕಿರಣಗಳು

ಭಯಂಕರ ದೃಶ್ಯಗಳು, ಆಶಾಕಿರಣಗಳು

ಭಯಂಕರ ದೃಶ್ಯಗಳು, ಆಶಾಕಿರಣಗಳು

“ನನ್ನ ಸುತ್ತಲೂ ಕಟ್ಟಡಗಳು ತೂಗಾಡುತ್ತಿದ್ದವು ಮತ್ತು ಜ್ವಾಲೆಗಳು ಆಕಾಶದತ್ತ ಏರುತ್ತಿದ್ದವು. ನಾನು ಓಡುತ್ತಾ ಇದ್ದಾಗ, ಎಲ್ಲ ಕಡೆಗಳಲ್ಲೂ ಜನರು ಅಳುತ್ತಾ, ಪ್ರಾರ್ಥಿಸುತ್ತಾ, ಸಹಾಯಕ್ಕಾಗಿ ಕೂಗುತ್ತಾ ಇದ್ದರು. ಲೋಕದ ಅಂತ್ಯ ಬಂದುಬಿಟ್ಟಿದೆಯೆಂದು ನಾನು ನೆನಸಿದೆ.”–ಜಿ. ಆರ್‌., ಭೂಕಂಪದಿಂದ ಪಾರಾಗಿ ಉಳಿದವನು.

ಪ್ರತಿ ವರ್ಷ ಕೋಟಿಗಟ್ಟಲೆ ಭೂಕಂಪಗಳು, ಸದಾ ಚಲಿಸುತ್ತಿರುವ ನಮ್ಮ ಈ ಭೂಗ್ರಹದ ಒಡಲಿನಲ್ಲಿ ಗುಡುಗುತ್ತಾ ಇರುತ್ತವೆ. ಈ ಭೂಕಂಪಗಳಲ್ಲಿ ಹೆಚ್ಚಿನವುಗಳು ಸಂಭವಿಸುವಾಗ ನಮಗೆ ಗೊತ್ತಾಗುವುದೇ ಇಲ್ಲ. * ಆದರೆ ಸರಾಸರಿಯಾಗಿ ಒಂದು ವರ್ಷದಲ್ಲಿ ಆಗುವ ಭೂಕಂಪಗಳಲ್ಲಿ ಬಹುಮಟ್ಟಿಗೆ 140 ಭೂಕಂಪಗಳು “ಬಲವಾದ,” “ದೊಡ್ಡ,” ಇಲ್ಲವೇ “ಭೀಕರ” ಎಂದು ಹೆಸರಿಸಲ್ಪಡುವಷ್ಟು ಗಂಭೀರವಾಗಿರುತ್ತವೆ. ಇತಿಹಾಸದಾದ್ಯಂತ ಇಂಥ ಭೂಕಂಪಗಳು ಕೋಟಿಗಟ್ಟಲೆ ಸಾವುಗಳನ್ನೂ ಎಣಿಸಲಾಗದಷ್ಟು ಸೊತ್ತು ಹಾನಿಯನ್ನೂ ಉಂಟುಮಾಡಿವೆ.

ಭೂಕಂಪಗಳು, ಪಾರಾಗಿ ಉಳಿದವರ ಮೇಲೆ ಗಾಢವಾದ ಭಾವನಾತ್ಮಕ ಹಾನಿಯನ್ನೂ ಉಂಟುಮಾಡುತ್ತವೆ. ಉದಾಹರಣೆಗಾಗಿ, 2001ರ ಆರಂಭದಲ್ಲಿ ಎರಡು ಭೂಕಂಪಗಳು ಎಲ್‌ ಸಾಲ್ವಡಾರ್‌ ದೇಶವನ್ನು ಭಯಂಕರವಾಗಿ ಕುಲುಕಾಡಿದ ಬಳಿಕ, ಆ ದೇಶದ ಆರೋಗ್ಯ ಇಲಾಖೆಯ ಮಾನಸಿಕ ಆರೋಗ್ಯ ಸಲಹಾ ಕಮಿಟಿಯ ಸಂಘಟಕನು ತಿಳಿಸಿದ್ದು: “ಜನರು ದುಃಖ, ಹತಾಶೆ ಮತ್ತು ಕೋಪಗಳಂಥ ಲಕ್ಷಣಗಳುಳ್ಳ ಮನೋಸಂಬಂಧಿತ ಸಮಸ್ಯೆಗಳ ಘಟ್ಟವನ್ನು ಪ್ರವೇಶಿಸುತ್ತಿದ್ದಾರೆ.” ಆದುದರಿಂದ, ಎಲ್‌ ಸಾಲ್ವಡಾರ್‌ನ ಆರೋಗ್ಯ ಕಾರ್ಮಿಕರು, ಖಿನ್ನತೆ ಮತ್ತು ಚಿಂತೆಯಿಂದ ಪೀಡಿತರಾದ ರೋಗಿಗಳ ಸಂಖ್ಯೆಯಲ್ಲಿ 73 ಪ್ರತಿಶತ ವೃದ್ಧಿಯನ್ನು ವರದಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ವಾಸ್ತವದಲ್ಲಿ, ಪರಿಹಾರ ಶಿಬಿರಗಳಲ್ಲಿದ್ದವರಿಗಿದ್ದ ಆವಶ್ಯಕತೆಗಳಲ್ಲಿ, ನೀರಿನ ನಂತರ ಅವರಿಗೆ ಆವಶ್ಯಕವಾಗಿದ್ದ ವಿಷಯವು, ಮಾನಸಿಕ ಆರೋಗ್ಯಾರೈಕೆಯೇ ಆಗಿತ್ತು ಎಂದು ಸಮೀಕ್ಷೆಗಳು ಸೂಚಿಸಿದವು.

ಆದರೆ ಭೂಕಂಪಗಳ ಕುರಿತಾದ ಕಥೆಯಲ್ಲಿ ಸಾವು, ವಿನಾಶ ಮತ್ತು ನಿರಾಶೆಗಿಂತಲೂ ಹೆಚ್ಚಿನದ್ದು ಒಳಗೂಡಿದೆ. ಹೆಚ್ಚಿನ ವಿದ್ಯಮಾನಗಳಲ್ಲಿ, ಜನರು ಅಸಾಧಾರಣವಾದ ಸದ್ಭಾವನೆ ಮತ್ತು ಸ್ವತ್ಯಾಗವನ್ನು ಪ್ರದರ್ಶಿಸುವಂತೆ ಈ ವಿಪತ್ತುಗಳು ಅವರನ್ನು ಪ್ರಚೋದಿಸಿವೆ. ಹೌದು, ಕೆಲವರಂತೂ ಹಾನಿಗೊಳಗಾಗಿರುವ ಕಟ್ಟಡಗಳನ್ನು ರಿಪೇರಿಮಾಡಲು ಮತ್ತು ನುಚ್ಚುನೂರಾಗಿದ್ದ ಬದುಕುಗಳನ್ನು ಪುನಃ ಕಟ್ಟಲು ಹಗಲುರಾತ್ರಿಯೆನ್ನದೆ ದುಡಿದಿದ್ದಾರೆ. ನಾವು ನೋಡಲಿರುವಂತೆ, ಭಯಹಿಡಿಸುವ ಅತ್ಯಂತ ಕರಾಳವಾದ ದೃಶ್ಯಗಳೆಡೆಯಿಂದಲೂ ಅಂಥ ಆಶಾಕಿರಣಗಳು ಹೊಳೆದಿವೆ. (g02 3/22)

[ಪಾದಟಿಪ್ಪಣಿ]

^ ಇದರಲ್ಲಿ ಪ್ರತಿ ದಿನ ಸಂಭವಿಸುವ ಸಾವಿರಾರು ತೀರ ಚಿಕ್ಕ ಭೂಕಂಪಗಳು ಸೇರಿವೆ.

[Pictures on page  2, 3]

ಪುಟಗಳು 2 ಮತ್ತು 3: ಗ್ರೀಸ್‌ ದೇಶದ ಆ್ಯಥೆನ್ಸ್‌ ಎಂಬಲ್ಲಿ, ಕುಸಿದಿರುವ ಕಟ್ಟಡದೊಳಗೆ ತನ್ನ ತಾಯಿ ಸಿಕ್ಕಿಬಿದ್ದಿದ್ದಾಳೆಂದು ತಿಳಿದುಕೊಂಡು ಸಂಕಟದಿಂದ ತಳಮಳಿಸುತ್ತಿರುವ ಒಬ್ಬ ಯುವತಿ. ಅದೇ ಸಮಯದಲ್ಲಿ, ಒಬ್ಬ ತಂದೆಯು, ತನ್ನ ಐದು ವರ್ಷ ಪ್ರಾಯದ ಮಗಳು ರಕ್ಷಿಸಲ್ಪಟ್ಟಿರುವುದನ್ನು ನೋಡಿ ಸಂತೋಷದಿಂದ ಹಿಗ್ಗುತ್ತಾನೆ

[ಕೃಪೆ]

AP Photos/Dimitri Messinis