ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವನ್ಯಜೀವಿಗಳನ್ನು ನಿಕಟವಾಗಿ ಪರೀಕ್ಷಿಸುವುದು

ವನ್ಯಜೀವಿಗಳನ್ನು ನಿಕಟವಾಗಿ ಪರೀಕ್ಷಿಸುವುದು

ವನ್ಯಜೀವಿಗಳನ್ನು ನಿಕಟವಾಗಿ ಪರೀಕ್ಷಿಸುವುದು

ನಿಮ್ಮ ಪ್ರತಿಯೊಂದು ಚಲನವಲನವು ಪರೀಕ್ಷಿಸಲ್ಪಟ್ಟು ವಿಶ್ಲೇಷಿಸಲ್ಪಡಲು ಸಾಧ್ಯವಾಗುವಂತೆ ನಿಮ್ಮ ಬೆನ್ನಿಗೆ ಒಂದು ರೇಡಿಯೊ ಟ್ರ್ಯಾನ್ಸ್‌ಮಿಟರ್‌ (ಪ್ರೇಷಕ) ಅನ್ನು ಬಿಗಿಯಲಾಗಿದೆಯೆಂದು ಭಾವಿಸಿರಿ. ಮಿಸೆಸ್‌ ಗಿಬ್ಸನ್‌ ಎಂದು ಕರೆಯಲ್ಪಡುವ ಒಂದು ಕಪ್ಪುರೆಕ್ಕೆಯ ಬಿಳಿ ಆ್ಯಲ್ಬಟ್ರಾಸ್‌ ಕಡಲುಕೋಳಿ ಹಕ್ಕಿಯ ಜೀವನಾವಸ್ಥೆಯು ಇದಾಗಿದೆ. ಆಕೆಗೆ ಬಿಗಿಯಲ್ಪಟ್ಟಿರುವ ಆ ಚಿಕ್ಕ ಪ್ರೇಷಕವು, ಆಕೆಯ ಹಾಗೂ ಆಕೆಯಂತೆಯೇ ಪ್ರೇಷಕವು ಬಿಗಿಯಲ್ಪಟ್ಟಿರುವ ಬೇರೆ ಪಕ್ಷಿಗಳ ಸಂಕೇತಗಳನ್ನು ಗ್ರಹಿಸಿ ಅವನ್ನು ಭೂಮಿಗೆ ಹಿಂದೆ ಕಳುಹಿಸುವಂಥ ಉಪಗ್ರಹಗಳ ಬಳಕೆಯ ಮೂಲಕ ಸಂಶೋಧಕರು ಅಕೆಯನ್ನು ನಿಕಟವಾಗಿ ಪರೀಕ್ಷಿಸಲು ಅನುಮತಿಸುತ್ತದೆ. ಇದರ ಫಲವಾಗಿ ದೊರೆತಿರುವ ದತ್ತಾಂಶವು ಈ ಪಕ್ಷಿಗಳ ಕುರಿತು ಕೆಲವು ಆಶ್ಚರ್ಯಕರವಾದ ಹೊಸ ಮಾಹಿತಿಯನ್ನು ತಿಳಿಯಪಡಿಸಿದೆ ಮತ್ತು ಇದು ಅವುಗಳನ್ನು ಸಂರಕ್ಷಣೆ ಮಾಡಲು ಸಹಾಯ ಮಾಡಬಹುದೆಂದು ನಿರೀಕ್ಷಿಸಲಾಗಿದೆ.

ಆಸ್ಟ್ರೇಲಿಯದ ವಿಕ್ಟೋರಿಯ ಪ್ರಾಂತ್ಯದಲ್ಲಿರುವ ಲ ಟ್ರೋಬ್‌ ವಿಶ್ವವಿದ್ಯಾನಿಲಯದ ವರದಿಗನುಸಾರ, ಈ ಕಪ್ಪುರೆಕ್ಕೆಯ ಬಿಳಿ ಆ್ಯಲ್ಬಟ್ರಾಸ್‌ ಕಡಲುಕೋಳಿ ಹಕ್ಕಿಗಳು ದಿನಕ್ಕೆ ಸರಾಸರಿ 300 ಕಿಲೊಮೀಟರ್‌ ಹಾರಾಡುತ್ತವೆಂದೂ, ಒಮ್ಮೊಮ್ಮೆ ದಿನಕ್ಕೆ 1,000 ಕಿಲೊಮೀಟರ್‌ಗಳಷ್ಟು ಕೂಡ ಹಾರುವುದುಂಟೆಂದೂ ಸಂಶೋಧಕರು ಕಂಡುಹಿಡಿದರು. ಜೀವಿಸುತ್ತಿರುವ ಯಾವುದೇ ಪಕ್ಷಿಗಿಂತ ವಿಸ್ತಾರವಾದ ರೆಕ್ಕೆಯ ಚಾಚು ಇರುವ, ಅಂದರೆ 340 ಸೆಂಟಿಮೀಟರ್‌ಗಳಿಗಿಂತಲೂ ವಿಸ್ತಾರವಾಗಿರುವ ರೆಕ್ಕೆಯ ಚಾಚಿನ ಈ ಪ್ರೇಕ್ಷಣೀಯ ಮೃದುಚಲನ ಹಾರುಗ ಪಕ್ಷಿಗಳು ಸಾಗರಗಳ ಮೇಲೆ ಚಾಪಸರಣಿಗಳಲ್ಲಿ ಹಾರಿ ಕೆಲವೇ ತಿಂಗಳುಗಳಲ್ಲಿ 30,000 ಕಿಲೊಮೀಟರ್‌ಗಳಿಗೂ ಹೆಚ್ಚು ದೂರವನ್ನು ಆವರಿಸುತ್ತವೆ. ಅಮೆರಿಕದಲ್ಲಿ ನಡೆಸಲ್ಪಟ್ಟ ಇಂತಹ ಅಧ್ಯಯನಗಳು, ಒಂದು ಲೇಸಾನ್‌ ಕಡಲುಕೋಳಿ ಹಕ್ಕಿಯು ಅದರ ಒಂದೇ ಮರಿಗೆ ಆಹಾರ ತರಲು, ಹಾನಲೂಲೂವಿನ ವಾಯುವ್ಯ ದಿಕ್ಕಿಗಿರುವ ಟರ್ನ್‌ ದ್ವೀಪದಿಂದ ಅಲೂಷನ್‌ ದ್ವೀಪಗಳಿಗೆ, ಅಂದರೆ ಹೋಗಿ ಬರಲು 6,000 ಕಿಲೊಮೀಟರ್‌ ದೂರ ಹಾರಾಡಿತೆಂದು ತಿಳಿಯಪಡಿಸಿದವು.

ಈ ಉಚ್ಚಮಟ್ಟದ ಯಾಂತ್ರಿಕ ಅಧ್ಯಯನಗಳು, ಈ ಹೆಣ್ಣು ಹಕ್ಕಿಗಳ ಸಂಖ್ಯೆಯು ಗಂಡು ಹಕ್ಕಿಗಳ ಸಂಖ್ಯೆಗಿಂತ ಹೆಚ್ಚು ವೇಗವಾಗಿ ಏಕೆ ಕಡಮೆಯಾಗುತ್ತಿವೆ ಎಂಬುದನ್ನೂ ತಿಳಿಯಪಡಿಸಿರಬಹುದು. ಸಂತಾನ ಶಕ್ತಿ ಸಾಮರ್ಥ್ಯವಿರುವ ಗಂಡು ಹಕ್ಕಿಗಳು ಅಂಟಾರ್ಟಿಕ ಪ್ರದೇಶಕ್ಕೆ ಸಮೀಪದಲ್ಲಿ ಮೀನು ಹಿಡಿಯುತ್ತವೆಂದೂ ಆದರೆ ಆ ಸಾಮರ್ಥ್ಯವಿರುವ ಹೆಣ್ಣು ಪಕ್ಷಿಗಳು ಸಾಮಾನ್ಯವಾಗಿ ಇನ್ನೂ ಹೆಚ್ಚು ಉತ್ತರಕ್ಕೆ, ದೊಡ್ಡ ಬಲೆಗಳುಳ್ಳ ಮೀನುದೋಣಿಗಳಿರುವ ಪ್ರದೇಶಕ್ಕೆ ಹೋಗುತ್ತವೆಂದೂ ಅವುಗಳ ಹಾರುಪಥಗಳು ತಿಳಿಯಪಡಿಸುತ್ತವೆ. ಈ ಹೆಣ್ಣು ಪಕ್ಷಿಗಳು ಆ ದೋಣಿಗಳ ಹಿಂದಿರುವ ಬಲೆಯ ಮೇವನ್ನು ತಿನ್ನಲು ಹೋಗಿ, ಅವುಗಳಲ್ಲಿ ಸಿಕ್ಕಿಬಿದ್ದು ಮುಳುಗಿ ಸಾಯುತ್ತವೆ. ಸಂತಾನ ಶಕ್ತಿಯಿರುವ ಇಂಥ ಪಕ್ಷಿಗಳಲ್ಲಿ ಕೆಲವು ಸ್ಥಳಗಳಲ್ಲಿ, ಗಂಡುಗಳು ಹೆಣ್ಣು ಪಕ್ಷಿಗಳಿಗಿಂತ ಇಮ್ಮಡಿ ಸಂಖ್ಯೆಯಲ್ಲಿವೆ. ಕಡಲುಕೋಳಿಗಳ ಬೇರೆ ಜಾತಿಗಳಿಗೂ ಇದೇ ಅಪಾಯವು ತಟ್ಟಿದೆ. ವಾಸ್ತವವೇನಂದರೆ, ಆಸ್ಟ್ರೇಲಿಯ ಮತ್ತು ನ್ಯೂ ಸೀಲೆಂಡ್‌ ಸಮುದ್ರಗಳಲ್ಲಿನ ದೊಡ್ಡ ಮೀನುಗಾರಿಕಾ ಹಡಗುಗಳ ಬಲೆಗಳ ಹಿಂದೆ ಒಂದು ಹಂತದಲ್ಲಿ ಪ್ರತಿ ವರ್ಷ ಸುಮಾರು 50,000 ಪಕ್ಷಿಗಳು ಸತ್ತವು. ಹೀಗೆ ಈ ಪಕ್ಷಿಗಳ ವಿವಿಧ ಜಾತಿಗಳು ನಿರ್ಮೂಲವಾಗುವ ಅಪಾಯಕ್ಕೊಳಗಾದವು. ವಾಸ್ತವವೇನಂದರೆ, ಆ ಕಪ್ಪುರೆಕ್ಕೆಯ ಬಿಳಿ ಕಡಲುಕೋಳಿ ಜಾತಿಯನ್ನು ಆಸ್ಟ್ರೇಲಿಯವು ಅಪಾಯಕ್ಕೊಳಗಾಗಿರುವ ಜಾತಿ ಎಂದು ಘೋಷಿಸಿದೆ. ಆ ಸಂಶೋಧನೆಗಳು ಮೀನು ಹಿಡಿಯುವ ವಿಧಾನಗಳಲ್ಲಿ ಬದಲಾವಣೆಗಳನ್ನು ಉಂಟುಮಾಡಿ ಈ ಕಡಲುಕೋಳಿಗಳ ಸಾವನ್ನು ಕಡಮೆಯಾಗಿಸಿವೆ. ಆದರೂ, ಅನೇಕ ದೊಡ್ಡ ಸಂತಾನವೃದ್ಧಿ ಪ್ರದೇಶಗಳಲ್ಲಿ ಈ ಜಾತಿಗಳು ಕಡಮೆಯಾಗುತ್ತ ಹೋಗುತ್ತಿವೆ.

ಪಕ್ಷಿಗೆ ಪಟ್ಟಿ ಬಿಗಿಯುವುದು

ಕೆಲವು ಪಕ್ಷಿಜಾತಿಗಳನ್ನು ಅಧ್ಯಯನ ಮಾಡಲು ಸೂಕ್ಷ್ಮ ಇಲೆಕ್ಟ್ರಾನಿಕ್‌ ಉಪಕರಣಗಳು ಸಂಶೋಧಕರಿಗೆ ಸಹಾಯ ಮಾಡುತ್ತವೆಯಾದರೂ, ಕಡಮೆ ಖರ್ಚು ತಗಲುವ, ಹೆಚ್ಚು ಸುಲಭ ವಿಧಾನಗಳೂ ಅನೇಕ ವರ್ಷಗಳಿಂದ ಉಪಯೋಗದಲ್ಲಿವೆ. ಇವುಗಳಲ್ಲಿ ಒಂದು, ಪಕ್ಷಿಗೆ ಪಟ್ಟಿ ಬಿಗಿಯುವುದಾಗಿದೆ. ಅಂದರೆ ಪಕ್ಷಿಯ ಕಾಲಿಗೆ ಒಂದು ಚಿಕ್ಕ ಲೋಹದ ಅಥವಾ ಪ್ಲ್ಯಾಸ್ಟಿಕ್‌ ಪಟ್ಟಿಯನ್ನು ಕಾಲ್ಬಳೆಯಂತೆ ಜಾಗರೂಕತೆಯಿಂದ ಬಿಗಿಯುವುದು ಎಂದರ್ಥ.

ಸ್ಮಿತ್ಸೋನಿಯನ್‌ ಪತ್ರಿಕೆ ಹೇಳುವುದೇನಂದರೆ, ಪಕ್ಷಿಗೆ ಪಟ್ಟಿ ಬಿಗಿಯುವ ಕೆಲಸವು ಔಪಚಾರಿಕ ಸಂಶೋಧನಾ ಉಪಕರಣವಾಗಿ, ಡೇನಿಷ್‌ ಅಧ್ಯಾಪಕ ಹಾನ್ಸ್‌ ಕ್ರಿಶ್ಚ್ಯನ್‌ ಮಾರ್ಟನ್‌ಸನ್‌, 1899ರಲ್ಲಿ, “ತನ್ನ ಸ್ವಂತ ಲೋಹದ ಪಟ್ಟಿಗಳನ್ನು ತಯಾರಿಸಿ, ಅವುಗಳಲ್ಲಿ ತನ್ನ ಹೆಸರು ಮತ್ತು ವಿಳಾಸವನ್ನು ಕೆತ್ತಿ, ಅವನ್ನು ಎಳೆಯ ಪ್ರಾಯದ ಮೈನಾ ಜಾತಿಯ 165 ಸ್ಟಾರ್ಲಿಂಗ್‌ ಪಕ್ಷಿಗಳಿಗೆ ಬಿಗಿದಾಗ” ಆರಂಭಗೊಂಡಿತು. ಇಂದು ಪಕ್ಷಿಗಳಿಗೆ ಪಟ್ಟಿ ಬಿಗಿಯುವುದರ ಪದ್ಧತಿಯು ಅಂತಾರಾಷ್ಟ್ರೀಯವಾಗಿ ಜಾರಿಯಲ್ಲಿದ್ದು, ಪಕ್ಷಿಗಳು ಎಲ್ಲೆಲ್ಲಿ ಹರಡಿಕೊಂಡಿವೆ, ಅವುಗಳ ವಲಸೆಹೋಗುವ ಅಭ್ಯಾಸಗಳು, ವರ್ತನೆಗಳು, ಸಾಮಾಜಿಕ ಅಂತಸ್ತುಗಳು, ಪಕ್ಷಿಸಂಖ್ಯೆಗಳು, ಅವುಗಳು ಬದುಕಿ ಉಳಿಯುವ ಮತ್ತು ವೃದ್ಧಿಯಾಗುವ ಪ್ರತಿಶತಗಳು​—⁠ಇವುಗಳ ವಿಷಯದಲ್ಲಿ ಬೆಲೆಬಾಳುವ ದತ್ತಾಂಶಗಳನ್ನು ಒದಗಿಸುತ್ತವೆ. ಎಲ್ಲಿ ಬೇಟೆಯಾಡುವ ಅನುಮತಿಯಿದೆಯೊ ಅಲ್ಲಿ ಪಟ್ಟಿ ಬಿಗಿಯುವಿಕೆಯು, ಮನುಷ್ಯನು ಬೇಟೆಯಾಡುವ ಪಕ್ಷಿಗಳನ್ನು ದೀರ್ಘಕಾಲ ಕಾಪಾಡಲಿಕ್ಕಾಗಿ ಸರಕಾರವು ಕ್ರಮಕೈಕೊಂಡು ಕಾನೂನುಗಳನ್ನು ಮಾಡುವಂತೆ ಸಾಧ್ಯಮಾಡುತ್ತದೆ. ರೋಗಗಳು ಮತ್ತು ರಾಸಾಯನಿಕ ವಿಷಪದಾರ್ಥಗಳು ಪಕ್ಷಿಗಳ ಮೇಲೆ ಯಾವ ಪರಿಣಾಮವನ್ನು ಬೀರುತ್ತವೆಂದೂ ಪಟ್ಟಿ ಬಿಗಿಯುವಿಕೆಯು ತೋರಿಸುತ್ತದೆ. ವಾಸ್ತವವೇನಂದರೆ, ಕೆಲವು ಪಕ್ಷಿಗಳು ಎನ್‌ಸೆಫಿಲೈಟಿಸ್‌ (ಮಸ್ತಿಷ್ಕೋದ್ರೇಕ ರೋಗ) ಮತ್ತು ಲೈಮ್ಸ್‌ ರೋಗದಂತಹ ರೋಗಗಳನ್ನು ಒಯ್ಯಬಲ್ಲವಾದುದರಿಂದ, ಪಕ್ಷಿಗಳ ಜೀವಶಾಸ್ತ್ರ ಮತ್ತು ಅಭ್ಯಾಸಗಳ ವಿಷಯದಲ್ಲಿ ದೊರೆಯುವ ದತ್ತಾಂಶಗಳು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿಯೂ ಉಪಯುಕ್ತವಾಗಿರಬಲ್ಲವು.

ಪಟ್ಟಿ ಬಿಗಿಯುವುದು ಕ್ರೂರತೆಯೊ?

ಈ ರೂಢಿ ಇರುವ ದೇಶಗಳಲ್ಲಿ ಪಟ್ಟಿ ಬಿಗಿಯುವುದನ್ನು ನಿಕಟವಾಗಿ ನಿಯಂತ್ರಿಸಲಾಗುತ್ತದೆ ಮಾತ್ರವಲ್ಲ, ಬಿಗಿಯುವವರೂ ಸಾಮಾನ್ಯವಾಗಿ ಲೈಸನ್ಸ್‌ ಇರುವವರಾಗಿದ್ದಾರೆ. ಆಸ್ಟ್ರೇಲಿಯದ ನಿಸರ್ಗ ರಕ್ಷಕ ಏಜನ್ಸಿ ಹೇಳುವುದು, ಆಸ್ಟ್ರೇಲಿಯದಲ್ಲಿ, “ಪಟ್ಟಿ ಬಿಗಿಯುವವರಿಗೆ, ಗಾಯಗೊಳಿಸದೆ ಪಕ್ಷಿಗಳನ್ನು ಹಿಡಿಯುವುದರಲ್ಲಿ, ಅವುಗಳ ನಿರ್ವಹಣೆಯಲ್ಲಿ ಮತ್ತು ಪಟ್ಟಿ ಬಿಗಿಯುವುದರಲ್ಲಿ ಜಾಗರೂಕತೆಯ ತರಬೇತನ್ನು ಕೊಡಲಾಗುತ್ತದೆ. ಈ ತರಬೇತಿಗೆ ಸಾಮಾನ್ಯವಾಗಿ ಎರಡು ವರ್ಷ ಹಿಡಿಯುವುದು ಮಾತ್ರವಲ್ಲ ಅದರಲ್ಲಿ ತುಂಬ ಅಭ್ಯಾಸವೂ ಸೇರಿದೆ.” ತದ್ರೀತಿಯ ಕ್ರಮಗಳು ಯೂರೋಪ್‌, ಕೆನಡ, ಅಮೆರಿಕ ಮತ್ತು ಬೇರೆ ದೇಶಗಳಲ್ಲಿಯೂ ಜಾರಿಯಲ್ಲಿವೆ.

ಪಕ್ಷಿ ಪಟ್ಟಿಗಳು ಆಕಾರ, ಗಾತ್ರ, ಬಣ್ಣ ಮತ್ತು ಪದಾರ್ಥಗಳಲ್ಲಿ ವಿಭಿನ್ನವಾಗಿವೆ. ಹೆಚ್ಚಿನ ಪಟ್ಟಿಗಳನ್ನು ಹಗುರ ಪದಾರ್ಥಗಳಾದ ಅಲ್ಯೂಮಿನಿಯಮ್‌ ಅಥವಾ ಪ್ಲ್ಯಾಸ್ಟಿಕ್‌ನಿಂದ ಮಾಡಲಾಗುತ್ತದೆಯಾದರೂ, ದೀರ್ಘ ಕಾಲ ಬದುಕುವ ಪಕ್ಷಿಗಳ ಅಥವಾ ಉಪ್ಪುನೀರಿನ ಪ್ರದೇಶದಲ್ಲಿರುವ ಪಕ್ಷಿಗಳಿಗೆ ಸ್ಟೇನ್ಲೆಸ್‌ ಸ್ಟೀಲ್‌ ಮತ್ತು ಕಿಲುಬು ಹಿಡಿಯದ ವಸ್ತುಗಳನ್ನು ಉಪಯೋಗಿಸಲಾಗುತ್ತದೆ. ವರ್ಣ ಸಂಕೇತ ಪಟ್ಟಿಗಳಿರುವಾಗ ಪಕ್ಷಿಗಳನ್ನು ದೂರದಿಂದ ಗುರುತಿಸಬಹುದು. ಅನೇಕ ಪಟ್ಟಿಗಳನ್ನು ಬಿಗಿಯುವುದನ್ನು ಇದು ಕೇಳಿಕೊಳ್ಳುತ್ತದಾದರೂ, ಪಕ್ಷಿಗಳನ್ನು ಗುರುತಿಸಲು ಅವನ್ನು ಪುನಃ ಪುನಃ ಹಿಡಿಯುವುದರಿಂದ ಬರುವ ಒತ್ತಡದಿಂದ ಅವುಗಳನ್ನು ಮುಕ್ತಗೊಳಿಸುತ್ತದೆ.

ಯಾವ ವಿಧದ ಪಟ್ಟಿ ಅಥವಾ ಗುರುತನ್ನೇ ಉಪಯೋಗಿಸಲಿ, ಅದು ಪಕ್ಷಿಗಳು ಪೀಡೆಯನ್ನೊ, ಅವುಗಳ ವರ್ತನೆ, ದೈಹಿಕ ಕ್ರಿಯೆ, ಜೀವಮಾನ, ಸಾಮಾಜಿಕ ಜೀವನ, ಪರಿಸರ ಅಥವಾ ಬದುಕಿ ಉಳಿಯುವ ಪ್ರತೀಕ್ಷೆಗಳಂತಹ ಇನ್ನಾವುದನ್ನೊ ಬಾಧಿಸದಂತೆ ಸಂಶೋಧಕರು ಜಾಗರೂಕತೆ ವಹಿಸುತ್ತಾರೆ. ಉದಾಹರಣೆಗೆ, ರೆಕ್ಕೆಗೆ ಬಿಗಿದ ಉಜ್ವಲ ವರ್ಣದ ಪಟ್ಟಿಯಂತಹ ಗುರುತು, ಅದನ್ನು ಪರಭಕ್ಷಕ ಪ್ರಾಣಿಗಳಿಗೆ ಸುಲಭವಾಗಿ ತೋರಿಸಬಹುದು ಇಲ್ಲವೆ ಒಂದು ಸಂಗಾತಿಯನ್ನು ಪಡೆಯುವುದರಲ್ಲಿನ ಅದರ ಸಾಫಲ್ಯವನ್ನು ತಡೆಗಟ್ಟಬಹುದು. ಕೆಲವು ಪಕ್ಷಿಗಳು ತಮ್ಮ ಕಾಲುಗಳ ಮೇಲೆ ಹಿಕ್ಕೆಹಾಕುವುದರಿಂದ ಅವಕ್ಕೆ ಪಟ್ಟಿ ಬಿಗಿಯುವುದು ರೋಗವನ್ನು ಅಂಟಿಸಬಹುದು. ಶೀತ ಪ್ರದೇಶಗಳಲ್ಲಿ, ಪಟ್ಟಿಗಳಲ್ಲಿ ಹಿಮ ಸೇರಿಕೊಳ್ಳಬಹುದಾದ ಕಾರಣ, ವಿಶೇಷವಾಗಿ ನೀರುಕೋಳಿಗಳಿಗೆ ಅದು ಅಪಾಯಕರವಾಗಬಹುದು. ಇವು ಪಕ್ಷಿಗಳಿಗೆ ಗುರುತು ಹಾಕುವುದರಲ್ಲಿ ಒಳಗೂಡಿರುವ ಕೇವಲ ಕೆಲವೇ ವಿಚಾರಗಳಾಗಿವೆ. ಆದರೂ, ಈ ಕಾರ್ಯಕ್ರಮವು ಫಲಕಾರಿಯಾಗಿರಲಿಕ್ಕಾಗಿ ಮತ್ತು ಅದೇ ಸಮಯದಲ್ಲಿ ಮಾನವೀಯತೆಯುಳ್ಳದ್ದಾಗಿರಲಿಕ್ಕಾಗಿ ಪಕ್ಷಿ ಜೀವಶಾಸ್ತ್ರ ಮತ್ತು ವರ್ತನೆಯ ಸಂಬಂಧದಲ್ಲಿ ಬೇಕಾಗುವ ವೈಜ್ಞಾನಿಕ ಅರಿವಿನ ವ್ಯಾಪ್ತಿಯನ್ನು ಇದು ತಿಳಿಯಪಡಿಸುತ್ತದೆ.

ಪಟ್ಟಿ ಬಿಗಿದಿರುವ ಅಥವಾ ಲೋಹಕಟ್ಟಿರುವ ಪ್ರಾಣಿಯು ನಿಮಗೆ ದೊರೆಯುವಲ್ಲಿ ಆಗೇನು?

ಕೆಲವು ಸಲ ಪಟ್ಟಿ ಅಥವಾ ಲೋಹಕಟ್ಟುಗಳಲ್ಲಿ ಟೆಲಿಫೋನ್‌ ನಂಬರ್‌ ಅಥವಾ ವಿಳಾಸವನ್ನು ನೀವು ನೋಡಬಹುದು. ಆಗ ಅದರ ಧಣಿ ಅಥವಾ ಪಟ್ಟಿ ಬಿಗಿಯುವ ಅಧಿಕಾರಿಗಳನ್ನು ನೀವು ಸಂಪರ್ಕಿಸಬಹುದು. * ಆಗ ಆ ಪಟ್ಟಿ ನಿಮಗೆ ಎಲ್ಲಿ ಮತ್ತು ಯಾವಾಗ ದೊರೆಯಿತು ಮತ್ತು ಪ್ರಾಯಶಃ ಬೇರೆ ಕೆಲವು ವಿಷಯಗಳನ್ನು ನೀವು ಧಣಿಗೆ ತಿಳಿಸಸಾಧ್ಯವಿದೆ. ಉದಾಹರಣೆಗೆ, ಮೀನಿನ ಸಂಬಂಧದಲ್ಲಿ, ಅದಕ್ಕೆ ಪಟ್ಟಿ ಬಿಗಿದು ಅದನ್ನು ಬಿಟ್ಟ ನಂತರ ಅದು ಎಷ್ಟು ದೂರ ಮತ್ತು ಎಷ್ಟು ವೇಗವಾಗಿ ಪ್ರಯಾಣ ಮಾಡಿದೆ ಎಂದು ಒಬ್ಬ ಜೀವಶಾಸ್ತ್ರಜ್ಞನು ನಿರ್ಣಯಿಸಬಲ್ಲನು.

ಲೋಕಾದ್ಯಂತ ಇರುವ ಸಂಶೋಧಕರ ಕೆಲಸದ ಮತ್ತು ತಾವು ಕಂಡುಕೊಳ್ಳುವ ಲೋಹಕಟ್ಟು ಮತ್ತು ಪಟ್ಟಿಗಳನ್ನು ವರದಿ ಮಾಡುವ ಶುದ್ಧಾಂತಃಕರಣದ ಜನರ ಪ್ರಯತ್ನಗಳ ಪರಿಣಾಮವಾಗಿ, ವನ್ಯಜೀವಿಗಳ ವಿಷಯದಲ್ಲಿ ನಿಬ್ಬೆರಗುಗೊಳಿಸುವಂಥ ರೀತಿಯ ವಿವರಗಳು ಶೇಖರಿಸಲ್ಪಟ್ಟಿವೆ. ನೂರರಿಂದ ಇನ್ನೂರು ಗ್ರ್ಯಾಮ್‌ ಭಾರವಿರುವ ಸ್ಯಾಂಡ್‌ಪೈಪರ್‌ ಜಾತಿಯ ರೆಡ್‌ ನಾಟ್‌ ಎಂಬ ಪಕ್ಷಿಯನ್ನು ತೆಗೆದುಕೊಳ್ಳಿ. ಕೆಲವು ರೆಡ್‌ ನಾಟ್‌ ಪಕ್ಷಿಗಳು ಪ್ರತಿ ವರ್ಷ, ಕೆನಡದ ತೀರ ಉತ್ತರ ಭಾಗದಿಂದ ದಕ್ಷಿಣ ಅಮೆರಿಕದ ತುತ್ತತುದಿಗೆ, ಸುಮಾರು 30,000 ಕಿಲೊಮೀಟರ್‌ಗಳಷ್ಟು ದೂರ ವಲಸೆ ಹೋಗುತ್ತವೆಂದು ವಿಜ್ಞಾನಿಗಳಿಗೆ ಈಗ ತಿಳಿದುಬಂದಿದೆ!

ಮುದಿಯಾಗಿದ್ದರೂ ಆರೋಗ್ಯದಿಂದಿದ್ದ ಒಂದು ರೆಡ್‌ ನಾಟ್‌ಗೆ ಬಿಗಿದಿದ್ದ ಪಟ್ಟಿಯು, ಅದು 15 ವರುಷಗಳಲ್ಲಿ ಹೀಗೆ ಹಾರಿದ್ದಿರಬಹುದೆಂಬುದನ್ನು ತೋರಿಸಿತು. ಹೌದು, ಈ ಪುಟ್ಟ ಪಕ್ಷಿಯು 4,00,000 ಕಿಲೊಮೀಟರ್‌ಗಳಷ್ಟು ದೂರ, ಅಂದರೆ, ಭೂಮಿಯಿಂದ ಚಂದ್ರನಿಗಿರುವ ಸರಾಸರಿ ದೂರಕ್ಕಿಂತ ಹೆಚ್ಚು ದೂರ ಹಾರಿದ್ದಿರಬಹುದು! ಈ ನಿಜವಾಗಿಯೂ ಗಮನಾರ್ಹವಾದ ಪುಟ್ಟ ಪಕ್ಷಿಯನ್ನು ತನ್ನ ಅಂಗೈಯಲ್ಲಿ ಕುಳ್ಳಿರಿಸಿಕೊಂಡು, ನಿಸರ್ಗ ಲೇಖಕ ಸ್ಕಾಟ್‌ ವೈಡನ್‌ಸಾಲ್‌ ಹೇಳಿದ್ದು: “ಈ ವ್ಯಾಪಕವಾದ ಲೋಕವನ್ನು ಹೆಣೆದು ಒಟ್ಟುಗೂಡಿಸುವ ಈ ರೀತಿಯ ಪ್ರಯಾಣಿಕರ ವಿಷಯದಲ್ಲಿ, ನಾನು ಆಶ್ಚರ್ಯ ಮತ್ತು ಗೌರವದಿಂದ ತಲೆದೂಗಬೇಕಷ್ಟೆ.” ಹೌದು, ಭೂಮಿಯ ಅನೇಕ ಜೀವಿಗಳ ಕುರಿತು ನಾವು ಎಷ್ಟು ಹೆಚ್ಚು ಕಲಿಯುತ್ತೇವೊ ನಮ್ಮಲ್ಲಿ ಅಷ್ಟು ಹೆಚ್ಚು ಭಯಭಕ್ತಿ ಮತ್ತು ಗೌರವವು, “ಭೂಮಿ, ಆಕಾಶ, ಸಾಗರ, ಚರಾಚರ ಇವುಗಳನ್ನು ನಿರ್ಮಿಸಿದವನು” ಆಗಿರುವ ಯೆಹೋವ ದೇವರಿಗಾಗಿ ತುಂಬಿ ಬರುತ್ತದೆ.​—⁠ಕೀರ್ತನೆ 146:5, 6. (g02 3/22)

[ಪಾದಟಿಪ್ಪಣಿ]

^ ಪಟ್ಟಿಗಳು ಅಥವಾ ಲೋಹಕಟ್ಟುಗಳು ತೀರ ಸವೆದು ಹೋಗಿರುವಾಗ ವಿವರವನ್ನು ಓದಲು ಸಾಧ್ಯವಾಗಲಿಕ್ಕಿಲ್ಲ. ಆದರೆ ಎಚ್ಚುವಿಕೆಯ ಮೂಲಕ, ಅದೃಶ್ಯವಾಗಿರುವಂತೆ ತೋರುವ ವಿವರಗಳನ್ನೂ ಅನೇಕ ವೇಳೆ ಓದುವ ಸಾಧ್ಯತೆ ಇದೆ. ಅಮೆರಿಕದಲ್ಲಿ, ಪ್ರತಿ ವರ್ಷ, ಇಂತಹ ನೂರಾರು ಪಟ್ಟಿಗಳನ್ನು ಪಕ್ಷಿಗಳಿಗೆ ಪಟ್ಟಿ ಬಿಗಿಯುವ ಪ್ರಯೋಗಶಾಲೆಯು ಓದಿ ತಿಳಿಸುತ್ತದೆ.

[ಪುಟ 27ರಲ್ಲಿರುವ ಚೌಕ/ಚಿತ್ರಗಳು]

ಗುರುತು ಹಾಕುವ ಮತ್ತು ಜಾಡು ಹಿಡಿಯುವ ವಿವಿಧ ವಿಧಗಳು

ಪಕ್ಷಿಗಳಲ್ಲದೆ ಬೇರೆ ಅನೇಕ ಜೀವಿಗಳನ್ನೂ ಅಧ್ಯಯನಕ್ಕಾಗಿ ಗುರುತಿಸಲಾಗುತ್ತದೆ. ಉಪಯೋಗಿಸಲ್ಪಡುವ ಈ ಗುರುತಿಸುವ ವಿಧಾನಗಳು ವೈಜ್ಞಾನಿಕ ಉದ್ದೇಶಗಳ ಮೇಲೆ ಹಾಗೂ ಇದರಲ್ಲಿ ಸೇರಿರುವ ಪ್ರಾಣಿಗಳ ಲಕ್ಷಣ ಮತ್ತು ಸ್ವಭಾವಗಳ ಮೇಲೆ ಹೊಂದಿಕೊಂಡಿರುತ್ತವೆ. ಕಾಲು ಪಟ್ಟಿಗಳಲ್ಲದೆ, ಸಂಶೋಧಕರು ಪತಾಕೆ, ಹಾರಾಡುವ ಪಟ್ಟಿ, ಲೋಹಕಟ್ಟು, ಪೆಯಿಂಟು, ಹಚ್ಚೆ ಗುರುತು, ರಂಗು, ಬರೆ, ಕಂಠಪಟ್ಟಿ, ರೇಡಿಯೊ ಪತ್ತೆಹಚ್ಚುವ ಸಾಧನಗಳು, ಸೂಕ್ಷ್ಮಗಣಕಗಳು, ಮತ್ತು (ಸಂಕೇತಪಟ್ಟಿ ಸೇರಿಸಿರುವ ಪಟ್ಟಿಗಳು ಕೂಡಿರುವ) ಸ್ಟೇನ್‌ಲೆಸ್‌ ಸ್ಟೀಲ್‌ ಸೂಕ್ಷ್ಮ ಡಾರ್ಟ್‌ಗಳು, ಹಾಗೂ ಕಾಲ್ಬೆರಳು, ಕಿವಿ ಮತ್ತು ಬಾಲಗಳ ಅಂಚನ್ನು ಕತ್ತರಿಸುವುದು ಮತ್ತು ವಿವಿಧ ರೀತಿಯ ಬೇರೆ ವಿಧಾನಗಳನ್ನೂ ಉಪಾಯಗಳನ್ನೂ ಉಪಯೋಗಿಸುತ್ತಾರೆ. ಇವುಗಳಲ್ಲಿ ಕೆಲವಕ್ಕೆ ಹೆಚ್ಚು ಬೆಲೆ ತಗಲುವುದಿಲ್ಲ. ಆದರೆ ಇನ್ನು ಕೆಲವು, ಅಂದರೆ ಸೀಲ್‌ ಮೀನು ನೀರಿಗೆ ದುಮುಕುವುದನ್ನು ಅಧ್ಯಯನ ಮಾಡುವ, ರೂ. 6,90,000 ಕ್ರಯದ, ಕ್ಯಾಮ್‌ಕಾರ್ಡರ್‌ ಇರುವ ಸೂಕ್ಷ್ಮ ಇಲೆಕ್ಟ್ರಾನಿಕ್‌ ಉಪಕರಣದಂತಹ ಹೆಚ್ಚು ಬೆಲೆಯ ಸಾಧನಗಳೂ ಇವೆ.

ಪ್ಯಾಸಿವ್‌ ಇಂಟೆಗ್ರೇಟೆಡ್‌ ಟ್ರಾನ್ಸ್‌ಪಾಂಡರ್‌ ಎಂಬ ಇಲೆಕ್ಟ್ರಾನಿಕ್‌ ಉಪಕರಣವನ್ನು ಅರಿವಳಿಸಿದ ಪ್ರಾಣಿಯ ಚರ್ಮದಡಿಯಲ್ಲಿ ಅಥವಾ ಅದರ ದೇಹದೊಳಕ್ಕೆ ಇರಿಸಿ, ಆ ಬಳಿಕ ಒಂದು ವಿಶೇಷ ಉಪಕರಣದಿಂದ ಅದನ್ನು ಹೊರಗಿನಿಂದಲೇ ಓದಸಾಧ್ಯವಿದೆ. ಬ್ಲೂಫಿನ್‌ ಟೂನ ಮೀನನ್ನು ಅಧ್ಯಯನ ಮಾಡಲು ವಿಜ್ಞಾನಿಗಳು ಆರ್ಕೈವಲ್‌ ಟ್ಯಾಗ್‌ ಅಥವಾ ಸ್ಮಾರ್ಟ್‌ ಟ್ಯಾಗ್‌ ಎಂದು ಕರೆಯಲ್ಪಡುವ ಒಂದು ಚಿಕ್ಕ ಕಂಪ್ಯೂಟರನ್ನು ಮೀನಿನೊಳಗೆ ಇಡುತ್ತಾರೆ. ಆಗ ಮುಂದಿನ ಒಂಬತ್ತು ವರ್ಷಕಾಲ, ಈ ಮೈಕ್ರೋಚಿಪ್‌ ಬಿಲ್ಲೆಗಳು ಶಾಖದ ಮಟ್ಟ, ಮೀನು ಎಷ್ಟು ಆಳದಲ್ಲಿದೆ, ಬೆಳಕಿನ ತೀಕ್ಷ್ಣತೆ ಮತ್ತು ಸಮಯದ ದತ್ತಾಂಶಗಳನ್ನು ಶೇಖರಿಸುತ್ತವೆ. ಬಳಿಕ ಆ ಲೋಹಪಟ್ಟಿ ಹಿಂದೆ ದೊರೆಯುವಾಗ, ಅದರಲ್ಲಿ ಧಾರಾಳ ಮಾಹಿತಿ ಇರುತ್ತದೆ. ಇದರಲ್ಲಿ, ಹಗಲುಹೊತ್ತಿನ ಬೆಳಕಿನ ಲೆಕ್ಕವನ್ನು, ಸಮಯದ ದತ್ತಾಂಶದೊಂದಿಗೆ ಹೋಲಿಸುವುದರಿಂದ ಪಡೆಯಬಹುದಾದಂಥ ಆ ಟೂನದ ಪ್ರಯಾಣಗಳ ಕುರಿತಾದ ಮಾಹಿತಿಯು ಸೇರಿರುತ್ತದೆ.

ಹಾವುಗಳನ್ನು ಅವುಗಳ ಕೆಲವು ಪೊರೆಗಳನ್ನು ಕತ್ತರಿಸುವುದರಿಂದ ಗುರುತಿಸಬಹುದು; ಆಮೆಗಳನ್ನು ಚಿಪ್ಪಿನ ಮೇಲೆ ಕಚ್ಚು ಹಾಕಿ, ಹಲ್ಲಿಗಳನ್ನು ಕಾಲ್ಬೆರಳು ಕತ್ತರಿಸಿ, ಮೊಸಳೆಗಳನ್ನು ಕಾಲ್ಬೆರಳನ್ನು ಕತ್ತರಿಸಿಯೊ ಬಾಲದಿಂದ ಕೊಂಬು ಪದಾರ್ಥದ ಪೊರೆಯನ್ನು ತೆಗೆದೊ ಗುರುತಿಸಬಹುದು. ಕೆಲವು ಪ್ರಾಣಿಗಳ ತೋರಿಕೆಯಲ್ಲಿ ನೈಸರ್ಗಿಕ ವೈವಿಧ್ಯವಿರುವುದರಿಂದ ಅವುಗಳನ್ನು ಛಾಯಾಚಿತ್ರಗಳಿಂದಲೇ ಗುರುತಿಸಬಹುದು.

[ಚಿತ್ರಗಳು]

ಕಪ್ಪು ಕರಡಿಯ ಕಿವಿಗಳಿಗೆ ಲೋಹಕಟ್ಟು ಬಿಗಿಯುವುದು; ದಪ್ಪ ಸೇವಿಗೆಯ ರೂಪದ ಲೋಹಕಟ್ಟು ಬಿಗಿದಿರುವ ಡ್ಯಾಮ್ಸಲ್‌ ಮೀನು; ಮೊಸಳೆಗಳ ಬಾಲಕ್ಕೆ ಬಿಗಿದಿರುವ ಲೋಹಕಟ್ಟುಗಳು

ಉಪಗ್ರಹ ಪ್ರೇಷಕ ಕಟ್ಟಿರುವ ಬೇಟೆಡೇಗೆ ಪಕ್ಷಿ

ಆಂತರಿಕ ದೂರನಿಯಂತ್ರಣ ಉಪಕರಣ ಬಿಗಿದಿರುವ ಬಹುವರ್ಣದ ಟ್ರಾವ್ಟ್‌ ಮೀನು

[ಕೃಪೆ]

ಕರಡಿ: © Glenn Oliver/Visuals Unlimited; ಡ್ಯಾಮ್ಸಲ್‌ ಮೀನು: Dr. James P. McVey, NOAA Sea Grant Program; ಮೊಸಳೆ: Copyright © 2001 by Kent A. Vliet; ಪುಟಗಳು 2 ಮತ್ತು 27ರಲ್ಲಿ ಡೇಗೆಪಕ್ಷಿ: Photo by National Park Service; ಮೀನಿನೊಂದಿಗಿರುವ ಪುರುಷರು: © Bill Banaszewski/Visuals Unlimited

[ಪುಟ 25ರಲ್ಲಿರುವ ಚಿತ್ರ]

ಕಡುಪಾದ ಕಣಕಾಲಿನ ಗಿಡುಗನಿಗೆ ಪಟ್ಟಿ ಬಿಗಿಯುವುದು

[ಕೃಪೆ]

© Jane McAlonan/Visuals Unlimited