ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಾಸುಗಂಬಳಿಗಳು ಎಷ್ಟು ಸುರಕ್ಷಿತವಾಗಿವೆ?

ಹಾಸುಗಂಬಳಿಗಳು ಎಷ್ಟು ಸುರಕ್ಷಿತವಾಗಿವೆ?

ಹಾಸುಗಂಬಳಿಗಳು ಎಷ್ಟು ಸುರಕ್ಷಿತವಾಗಿವೆ?

ನೆಯೊಳಗೆ ಹಾಸುಗಂಬಳಿಗಳಿಂದ ಹೊದಿಸಲ್ಪಟ್ಟಿರುವ ಕ್ಷೇತ್ರಗಳಲ್ಲಿ ನೀವು ಎಷ್ಟು ಸಮಯವನ್ನು ಕಳೆಯುತ್ತೀರಿ? ನ್ಯೂ ಸೈಯಂಟಿಸ್ಟ್‌ ಪತ್ರಿಕೆಯಲ್ಲಿನ ಒಂದು ವರದಿಯು ಸೂಚಿಸುವುದೇನೆಂದರೆ, ಇದರ ಉತ್ತರವು ಚಿಂತೆಯ ವಿಷಯವಾಗಿರಬಹುದು, ವಿಶೇಷವಾಗಿ ಮಕ್ಕಳ ಸಂಬಂಧದಲ್ಲಿ.

ಆ ಪತ್ರಿಕೆಯು ಗಮನಿಸಿದ್ದು: “ಹೆಚ್ಚಿನ ವಿಷಕಾರಿ ಮಲಿನಕಾರಕಗಳಿಗೆ ನಮ್ಮ ಒಡ್ಡುವಿಕೆಯು ಮನೆಯ ಹೊರಗಿನ ಪರಿಸರಕ್ಕಿಂತಲೂ ಮನೆಯೊಳಗಿನ ಪರಿಸರದಲ್ಲೇ 10ರಿಂದ 50 ಪಟ್ಟು ಹೆಚ್ಚಾಗಿರುತ್ತದೆ.” ಅಮೆರಿಕದಲ್ಲಿ ಒಬ್ಬ ಪರಿಸರವಾದಿ ಇಂಜಿನಿಯರನಾಗಿರುವ ಜಾನ್‌ ರಾಬರ್ಟ್ಸ್‌ ಹೇಳುವುದೇನೆಂದರೆ, ಸಾಮಾನ್ಯವಾದ ಮನೆಗಳಿಂದ ತೆಗೆದುಕೊಳ್ಳಲ್ಪಟ್ಟ ಹಾಸುಗಂಬಳಿಯ ಧೂಳಿನ ನಮೂನೆಗಳಲ್ಲಿ ಮಲಿನಕಾರಕಗಳ ಭೀತಿಹುಟ್ಟಿಸುವಷ್ಟು ಉಚ್ಚ ಪ್ರಮಾಣಗಳಿರಬಲ್ಲವು. ಇವುಗಳಲ್ಲಿ, ಸೀಸ, ಕ್ಯಾಡ್ಮಿಯಮ್‌, ಪಾದರಸ, ಕೀಟನಾಶಕಗಳು, ಮತ್ತು ಕಾರ್ಸಿನೊಜೆನಿಕ್‌ ಪಾಲಿಕ್ಲೊರಿನೇಟಡ್‌ ಬೈಫೀನಲ್ಸ್‌ (ಪಿ.ಸಿ.ಬಿ.)ಗಳು ಮತ್ತು ಪಾಲಿಸೈಕ್ಲಿಕ್‌ ಅರೋಮ್ಯಾಟಿಕ್‌ ಹೈಡ್ರೊಕಾರ್ಬನ್ಸ್‌ (ಪಿ.ಎ.ಎಚ್‌.)ಗಳು ಸೇರಿವೆ.

ಪಾದರಕ್ಷೆಗಳು ಮತ್ತು ಮುದ್ದುಪ್ರಾಣಿಗಳ ಪಂಜಗಳಿಂದ ಮನೆಯೊಳಗೆ ಸೇರಿಕೊಳ್ಳುವ ಕೀಟನಾಶಕಗಳು, ಹಾಸುಗಂಬಳಿಯ ಧೂಳಿನಲ್ಲಿ ಕೀಟನಾಶಕ ಪರಿಮಾಣವನ್ನು 400 ಪಟ್ಟು ಏರಿಸಬಲ್ಲವೆಂದು ಹೇಳಲಾಗುತ್ತದೆ. ಮತ್ತು ಈ ಮಲಿನಕಾರಕಗಳು ವರ್ಷಾನುಗಟ್ಟಲೆ ಸಮಯ ಹಾಗೆಯೇ ಉಳಿಯುತ್ತವೆ. ಕೀಟನಾಶಗಳು ಮತ್ತು ಪಿ.ಎ.ಎಚ್‌.ಗಳು ಅರೆಬಾಷ್ಪವಾಗುವಂಥವುಗಳಾಗಿರುವುದರಿಂದ, ಅವು ಬಾಷ್ಪೀಕರಿಸಿ, ಅತ್ತಿತ್ತ ಸುಳಿದಾಡಿ, ಅನಂತರ ಪುನಃ ಹಾಸುಗಂಬಳಿಗಳು ಇಲ್ಲವೆ ಬೇರೆ ಮೇಲ್ಮೈಗಳಲ್ಲಿ ಬಂದು ನೆಲಸುತ್ತವೆ.

ಚಿಕ್ಕ ಮಕ್ಕಳು ಹೆಚ್ಚಾಗಿ ನೆಲದ ಮೇಲೆ ಆಡುತ್ತಾರೆ ಮತ್ತು ನಂತರ ತಮ್ಮ ಬೆರಳುಗಳನ್ನು ಬಾಯಲ್ಲಿ ಹಾಕುತ್ತಾರೆ. ಆದುದರಿಂದ ಅವರು ವಿಶೇಷವಾಗಿ ಈ ಮಲಿನಕಾರಗಳಿಗೆ ಸುಲಭಬೇದ್ಯರಾಗಿರುತ್ತಾರೆ. ಚಿಕ್ಕ ಮಕ್ಕಳ ಮೆಟಬಾಲಿಕ್‌ ಪ್ರಮಾಣವು ವಯಸ್ಕರಿಗಿಂತ ಹೆಚ್ಚಾಗಿರುವುದರಿಂದ, ಅವರ ತೂಕ ಕಡಿಮೆಯಾಗಿರುವುದಾದರೂ ಅವರು ವಯಸ್ಕರಿಗಿಂತ ಹೆಚ್ಚು ಗಾಳಿಯನ್ನು ಒಳಗೆ ತೆಗೆದುಕೊಳ್ಳುತ್ತಾರೆ.

ಮಕ್ಕಳಲ್ಲಿನ ಉಬ್ಬಸರೋಗ, ಅಲರ್ಜಿಗಳು ಮತ್ತು ಕ್ಯಾನ್ಸರ್‌ ರೋಗಗಳಲ್ಲಿನ ಏರುವಿಕೆಗೆ, ಮನೆಯೊಳಗೆ ಹೆಚ್ಚುತ್ತಿರುವ ಹಾಸುಗಂಬಳಿಯ ಕ್ಷೇತ್ರವು ಕಾರಣವಾಗಿರಬಹುದೊ ಎಂದು ಕೆಲವು ಸಂಶೋಧಕರು ಕುತೂಹಲಪಡುತ್ತಾರೆ. ರಾಬರ್ಟ್ಸ್‌ ಗಮನಿಸುವುದು: “ಖಾಲಿ ನೆಲಗಳು ಮತ್ತು ಕೆಲವೇ ಕ್ಷೇತ್ರಗಳಲ್ಲಿ ನೆಲಹಾಸುಗಳುಳ್ಳ ಒಂದು ಮನೆಯಲ್ಲಿ, ಎಲ್ಲ ಕಡೆಗಳಲ್ಲಿಯೂ ಹಾಸುಗಂಬಳಿ ಹಾಸಲ್ಪಟ್ಟಿರುವ ಮನೆಯಲ್ಲಿರುವ ಧೂಳಿಗಿಂತ ಹತ್ತರಲ್ಲಿ ಒಂದು ಭಾಗ ಧೂಳು ಮಾತ್ರ ಇರುವುದು.”

ಹಾಸುಗಂಬಳಿಗಳನ್ನು ಹೆಚ್ಚು ಸುರಕ್ಷಿತವನ್ನಾಗಿ ಮಾಡಲಿಕ್ಕಾಗಿ, ತುಂಬ ಬಲವಾದ ಚೋಷಣ ಶಕ್ತಿಯಿರುವ ಕೊಳವೆಯುಳ್ಳ ವಾಕ್ಯೂಮ್‌ ಕ್ಲೀನರ್‌ ಅನ್ನು ನೀವು ಉಪಯೋಗಿಸಬೇಕೆಂದು ರಾಬರ್ಟ್ಸ್‌ ಸಲಹೆನೀಡುತ್ತಾರೆ. ಅನಂತರ, ಹಲವಾರು ವಾರಗಳ ವರೆಗೆ ವಾರಕ್ಕೊಮ್ಮೆ, ಮುಖ್ಯ ಪ್ರವೇಶದ್ವಾರಗಳಿಂದ ನಾಲ್ಕು ಅಡಿಯ ವರೆಗೆ 25 ಬಾರಿ, ಅತಿ ಹೆಚ್ಚಿನ ಓಡಾಟವಿರುವಂಥ ಕ್ಷೇತ್ರಗಳಲ್ಲಿ 16 ಬಾರಿ, ಮತ್ತು ಹಾಸುಗಂಬಳಿಯ ಉಳಿದ ಭಾಗದಲ್ಲಿ 8 ಬಾರಿ ಆ ಕೊಳವೆಯನ್ನು ಓಡಿಸಿರಿ.

ಈ ಸರಳವಾದ ಕಾರ್ಯವಿಧಾನವನ್ನು ಪೂರೈಸಿದ ನಂತರ, ಪ್ರತಿ ವಾರ ಹಾಸುಗಂಬಳಿಯ ಮೇಲೆ, ಶಿಫಾರಸ್ಸು ಮಾಡಲ್ಪಟ್ಟಿರುವ ಆ ಸಂಖ್ಯೆಗಿಂತ ಅರ್ಧದಷ್ಟು ಸಲ ಕೊಳವೆಯನ್ನು ಓಡಿಸುವಲ್ಲಿ ನೀವು ಧೂಳಿನ ಪ್ರಮಾಣವನ್ನು ಕೆಳಮಟ್ಟದಲ್ಲಿಡಲು ಶಕ್ತರಾಗಿರುವಿರಿ. ರಾಬರ್ಟ್ಸ್‌ ಈ ಸಲಹೆಯನ್ನೂ ಕೊಡುತ್ತಾರೆ: “ನಿಮ್ಮ ಮನೆಯ ಪ್ರವೇಶದ್ವಾರಗಳಲ್ಲಿ ಉಚ್ಚ ಗುಣಮಟ್ಟದ ಕಾಲೊರಸಿಯನ್ನು ಹಾಕಿರಿ ಮತ್ತು ಒಳಗೆ ಕಾಲಿಡುವ ಮೊದಲು ನಿಮ್ಮ ಪಾದರಕ್ಷೆಗಳನ್ನು ಅದರ ಮೇಲೆ ಎರಡು ಸಲ ತಿಕ್ಕಿರಿ.”(g02 4/22)