ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಶ್ಲೀಲ ಸಾಹಿತ್ಯ —ಕೇವಲ ಹಾನಿರಹಿತವಾದ ಕಾಲಕ್ಷೇಪವಷ್ಟೆಯೊ?

ಅಶ್ಲೀಲ ಸಾಹಿತ್ಯ —ಕೇವಲ ಹಾನಿರಹಿತವಾದ ಕಾಲಕ್ಷೇಪವಷ್ಟೆಯೊ?

ಬೈಬಲಿನ ದೃಷ್ಟಿಕೋನ

ಅಶ್ಲೀಲ ಸಾಹಿತ್ಯ—⁠ಕೇವಲ ಹಾನಿರಹಿತವಾದ ಕಾಲಕ್ಷೇಪವಷ್ಟೆಯೊ?

ವಿಕ್ಟೋರಿಯ ರಾಣಿಯ ಕಾಲದ ಪ್ರಾಕ್ತನಶಾಸ್ತ್ರಜ್ಞರು ಪ್ರಾಚೀನಕಾಲದ ಪಾಂಪೇ ನಗರದ ಅವಶೇಷಗಳನ್ನು ವ್ಯವಸ್ಥಿತರೂಪದಲ್ಲಿ ಅಗೆದು ತೆಗೆಯಲು ಆರಂಭಿಸಿದಾಗ, ಅವರೇನನ್ನು ಹೊರತೆಗೆದರೊ ಅದನ್ನು ನೋಡಿ ಗರಬಡಿದವರಾದರು. ಸುಂದರವಾದ ಮಂಡೋದರ ಚಿತ್ರಗಳು ಮತ್ತು ಕಲಾಕೃತಿಗಳ ನಡುವೆ, ಲೈಂಗಿಕತೆಯ ಸುಸ್ಪಷ್ಟ ವರ್ಣನೆಯುಳ್ಳ ಬಹಳಷ್ಟು ವರ್ಣಚಿತ್ರಗಳೂ ಶಿಲ್ಪಗಳೂ ಅಲ್ಲಲ್ಲಿ ಬಿದ್ದಿದ್ದವು. ಅವುಗಳ ದಂಗುಬಡಿಸುವಂಥ ಸ್ವರೂಪದಿಂದ ಅಧಿಕಾರಿಗಳು ಗಾಬರಿಗೊಂಡು, ಅವುಗಳನ್ನು ಗುಪ್ತವಾದ ಮ್ಯೂಸಿಯಮ್‌ಗಳಲ್ಲಿ ಸಂಗ್ರಹಿಸಿಟ್ಟರು. ಲೈಂಗಿಕತೆಯ ಸುಸ್ಪಷ್ಟ ವರ್ಣನೆಯುಳ್ಳ ಈ ಹಸ್ತಕೃತಿಗಳನ್ನು ವರ್ಗೀಕರಿಸಲಿಕ್ಕಾಗಿ ಅವರು ಇಂಗ್ಲಿಷ್‌ ಭಾಷೆಯಲ್ಲಿ ‘ಪೋರ್ನಾಗ್ರಫಿ’ (ಅಶ್ಲೀಲ ಸಾಹಿತ್ಯ) ಎಂಬ ಪದವನ್ನು ರಚಿಸಿದರು. ಇದು ಪೋರ್ನ್‌ ಮತ್ತು ಗ್ರಾಫೋಸ್‌ ಎಂಬ ಗ್ರೀಕ್‌ ಪದಗಳಿಂದ ಬಂದದ್ದಾಗಿದೆ. ಅದರರ್ಥ, “ವೇಶ್ಯೆಯರ ಕುರಿತಾದ ಬರಹ” ಎಂದಾಗಿದೆ. ಇಂದು ಪೋರ್ನಾಗ್ರಫಿ ಎಂಬ ಪದವನ್ನು, ಪುಸ್ತಕಗಳು, ಚಿತ್ರಗಳು, ಪ್ರತಿಮೆಗಳು, ಚಲನ ಚಿತ್ರಗಳು ಮುಂತಾದವುಗಳಲ್ಲಿ ಲೈಂಗಿಕ ಉದ್ರೇಕವನ್ನು ಕೆರಳಿಸುವ ಉದ್ದೇಶವುಳ್ಳ ಕಾಮಪ್ರಚೋದಕ ನಡವಳಿಕೆಯ ಚಿತ್ರಣ ಎಂದು ಅರ್ಥನಿರೂಪಿಸಲಾಗಿದೆ.

ಈ ದಿನಗಳಲ್ಲಿ, ಅಶ್ಲೀಲ ಸಾಹಿತ್ಯವು ವಿಪರೀತವಾಗಿ ಎಲ್ಲ ಕಡೆಗಳಲ್ಲೂ ಹಬ್ಬಿಕೊಂಡಿದ್ದು, ಆಧುನಿಕ ಸಮಾಜದ ಅಧಿಕಾಂಶ ಜನರು ಅದನ್ನು ಸ್ವೀಕರಿಸಿರುವಂತೆ ತೋರುತ್ತದೆ. ಒಂದು ಕಾಲದಲ್ಲಿ ಅದು ಅಪಖ್ಯಾತಿಯುಳ್ಳ ಚಿತ್ರಮಂದಿರಗಳು ಮತ್ತು ಕೆಂಪುದೀಪ ಕ್ಷೇತ್ರಗಳ ವೈಶಿಷ್ಟ್ಯವಾಗಿತ್ತು. ಆದರೆ ಇಂದು ಹೆಚ್ಚಿನ ಸಮಾಜಗಳಲ್ಲಿ ಅದು ತುಂಬ ಪ್ರಸಿದ್ಧವಾಗಿದೆ. ಅಮೆರಿಕವೊಂದರಲ್ಲೇ, ಅಶ್ಲೀಲ ಸಾಹಿತ್ಯದಿಂದಾಗಿ ವಾರ್ಷಿಕವಾಗಿ ಒಂದು ಸಾವಿರ ಕೋಟಿ ಡಾಲರುಗಳಿಗಿಂತಲೂ ಹೆಚ್ಚು ಲಾಭವಾಗುತ್ತದೆ!

ಅಶ್ಲೀಲ ಸಾಹಿತ್ಯವು, ಬೇಸರಹುಟ್ಟಿಸುತ್ತಿರುವ ಒಂದು ವಿವಾಹಕ್ಕೆ ಸ್ವಾರಸ್ಯವನ್ನು ಕೂಡಿಸುವ ಒಂದು ವಿಧಾನವೆಂದು ಹೇಳಿ ಕೆಲವು ಸಮರ್ಥಕರು ಅದನ್ನು ಪ್ರೋತ್ಸಾಹಿಸುತ್ತಾರೆ. ಒಬ್ಬ ಲೇಖಕಿಯು ಹೇಳಿದ್ದು: “ಅದೊಂದು ಸಕ್ರಿಯವಾದ ಕಾಲ್ಪನಿಕ ಜೀವನವನ್ನು ಪ್ರಚೋದಿಸುತ್ತದೆ. ಅದು ಲೈಂಗಿಕ ಸುಖಾನುಭೋಗಕ್ಕಾಗಿ ಸೂಚನೆಗಳನ್ನು ಕೊಡುತ್ತದೆ.” ಅದು ಲೈಂಗಿಕ ವಿಷಯಗಳಲ್ಲಿ ಮುಚ್ಚುಮರೆಯಿಲ್ಲದೆ ಇರುವುದನ್ನು ಉತ್ತೇಜಿಸುತ್ತದೆಂದು ಇತರರು ಹೇಳುತ್ತಾರೆ. “ಅಶ್ಲೀಲ ಸಾಹಿತ್ಯವು ಸ್ತ್ರೀಯರಿಗೆ ಪ್ರಯೋಜನದಾಯಕವಾಗಿದೆ” ಎಂದು ಲೇಖಕಿ ವೆಂಡಿ ಮಕೆಲ್‌ರಾಯ್‌ ಹೇಳುತ್ತಾರೆ.

ಆದರೆ ಈ ಮಾತನ್ನು ಎಲ್ಲರೂ ಸಮ್ಮತಿಸುವುದಿಲ್ಲ. ಎಷ್ಟೋ ಸಾರಿ ಅಶ್ಲೀಲ ಸಾಹಿತ್ಯವನ್ನು, ಹಾನಿಕರವಾದ ಫಲಿತಾಂಶಗಳು ಮತ್ತು ಮನೋಭಾವಗಳ ಒಂದು ವಿಸ್ತಾರವಾದ ಶ್ರೇಣಿಯೊಂದಿಗೆ ಜೋಡಿಸಲಾಗಿದೆ. ಅಶ್ಲೀಲ ಸಾಹಿತ್ಯಕ್ಕೂ ಬಲಾತ್ಕಾರ ಸಂಭೋಗ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ಇತರ ಹಿಂಸಾಕೃತ್ಯಗಳಿಗೂ ಸಂಬಂಧವಿದೆಯೆಂದು ಕೆಲವರು ಸೂಚಿಸುತ್ತಾರೆ. ಒಬ್ಬ ಕುಖ್ಯಾತ ಸರಣಿ ಹಂತಕನಾಗಿದ್ದ ಟೆಡ್‌ ಬಂಡಿ ಒಪ್ಪಿಕೊಳ್ಳುವುದೇನೆಂದರೆ, ಅವನಿಗೆ “ಹಿಂಸಾತ್ಮಕ ಅಶ್ಲೀಲ ಸಾಹಿತ್ಯಕ್ಕಾಗಿ ತೀವ್ರವಾದ ಹಸಿವಿತ್ತು.” ಅವನು ಹೇಳುವುದು: “ಈ ಸಮಸ್ಯೆಯನ್ನು ಒಬ್ಬ ವ್ಯಕ್ತಿಯು ತತ್‌ಕ್ಷಣ ಗ್ರಹಿಸುವುದಿಲ್ಲ ಇಲ್ಲವೆ ಅದೊಂದು ಗಂಭೀರ ಸಮಸ್ಯೆಯೆಂದೆಣಿಸುವುದಿಲ್ಲ. . . . ಆದರೆ ಈ ಆಸಕ್ತಿಯು . . . ಹಿಂಸಾಚಾರವನ್ನು ಒಳಗೂಡಿರುವ ಲೈಂಗಿಕ ಸ್ವರೂಪದ ವಿಷಯಗಳತ್ತ ಬಿರುಸಿನಿಂದ ಮುನ್ನುಗ್ಗುತ್ತದೆ. ಈ ರೀತಿಯ ಹಸಿವು ಕ್ರಮೇಣವಾಗಿ ಬೆಳೆಯುತ್ತಾ ಹೋಗುತ್ತದೆಂಬ ಸಂಗತಿಯನ್ನು ನಾನು ಎಷ್ಟು ಒತ್ತಿಹೇಳಿದರೂ ಸಾಲದು. ಅದು ಒಂದು ಅಲ್ಪಾವಧಿಯಲ್ಲಿ ನಡೆಯುವಂಥ ಸಂಗತಿಯಲ್ಲ.”

ಇಂದು ಅಶ್ಲೀಲ ಸಾಹಿತ್ಯದ ಬಗ್ಗೆ ನಡೆಯುತ್ತಿರುವ ನಿರಂತರ ವಾಗ್ವಾದ ಮತ್ತು ಅದರ ಪ್ರಚಲಿತತೆಯ ಕಾರಣ, ‘ಈ ವಿಷಯದಲ್ಲಿ ಬೈಬಲ್‌ ಏನಾದರೂ ಮಾರ್ಗದರ್ಶನ ನೀಡುತ್ತದೊ?’ ಎಂದು ನೀವು ಯೋಚಿಸುತ್ತಿರಬಹುದು.

ಲೈಂಗಿಕತೆಯ ಬಗ್ಗೆ ಬೈಬಲ್‌ ನೇರವಾಗಿ ಮಾತಾಡುತ್ತದೆ

ಬೈಬಲಿನಲ್ಲಿ, ಲೈಂಗಿಕ ವಿಷಯಗಳ ಕುರಿತು ಇದ್ದದ್ದನ್ನು ಇದ್ದಂತೆ ಮತ್ತು ನಾಚಿಕೆರಹಿತ ರೀತಿಯಲ್ಲಿ ತಿಳಿಸಲಾಗಿದೆ. (ಧರ್ಮೋಪದೇಶಕಾಂಡ 24:5; 1 ಕೊರಿಂಥ 7:​3, 4) “ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು” ಎಂದು ಸೊಲೊಮೋನನು ಸಲಹೆ ನೀಡಿದನು. “ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ.” (ಜ್ಞಾನೋಕ್ತಿ 5:18, 19) ಲೈಂಗಿಕ ಸಂಬಂಧಗಳನ್ನು ಯಾವ ಪರಿಧಿಗಳೊಳಗೆ ಆನಂದಿಸಬೇಕೆಂಬ ವಿಷಯವನ್ನೂ ಸೇರಿಸಿ, ಅದರ ಕುರಿತಾಗಿ ಸ್ಪಷ್ಟವಾದ ಬುದ್ಧಿವಾದ ಮತ್ತು ಮಾರ್ಗದರ್ಶನವು ಕೊಡಲ್ಪಟ್ಟಿದೆ. ವಿವಾಹದ ಏರ್ಪಾಡಿನ ಹೊರಗಿನ ಲೈಂಗಿಕತೆಯು ನಿಷಿದ್ಧಗೊಳಿಸಲ್ಪಟ್ಟಿದೆ. ಇದು, ಎಲ್ಲ ಪ್ರಕಾರದ ವಿಕೃತ ಕಾಮಾಚರಣೆಗಳ ವಿಷಯದಲ್ಲೂ ಸತ್ಯವಾಗಿದೆ.​—⁠ಯಾಜಕಕಾಂಡ 18:​22, 23; 1 ಕೊರಿಂಥ 6:9; ಗಲಾತ್ಯ 5:⁠19.

ಲೈಂಗಿಕ ಸಂಬಂಧಗಳು ಅನುಮತಿಸಲ್ಪಟ್ಟಿರುವ ಪರಿಧಿಗಳೊಳಗೂ, ನಿಗ್ರಹ ಮತ್ತು ಗೌರವವು ತೋರಿಸಲ್ಪಡುವಂತೆ ನಿರೀಕ್ಷಿಸಲಾಗುತ್ತದೆ. “ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ” ಎಂದು ಅಪೊಸ್ತಲ ಪೌಲನು ಬರೆದನು. (ಇಬ್ರಿಯ 13:4) ಈ ಸಲಹೆಯು, ಅಶ್ಲೀಲ ಸಾಹಿತ್ಯದ ಉದ್ದೇಶ ಮತ್ತು ಸಂದೇಶಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ.

ಅಶ್ಲೀಲ ಸಾಹಿತ್ಯವು ಲೈಂಗಿಕತೆಯನ್ನು ವಿಕೃತಗೊಳಿಸುತ್ತದೆ

ಲೈಂಗಿಕ ಸಂಬಂಧವನ್ನು, ಗೌರವಯುತವಾದ ವಿವಾಹವೊಂದರಲ್ಲಿ ಒಬ್ಬ ಪುರುಷ ಮತ್ತು ಸ್ತ್ರೀಯ ನಡುವಣ ಪ್ರೀತಿಯ ಸುಂದರ ಹಾಗೂ ಆಪ್ತತೆಯ ಅಭಿವ್ಯಕ್ತಿಯಾಗಿ ವರ್ಣಿಸುವ ಬದಲು, ಅಶ್ಲೀಲ ಸಾಹಿತ್ಯವು ಲೈಂಗಿಕ ಕ್ರಿಯೆಯನ್ನು ಕೀಳಾಗಿ ಚಿತ್ರಿಸುತ್ತದೆ ಮತ್ತು ವಿಕೃತಗೊಳಿಸುತ್ತದೆ. ಬೇಜವಾಬ್ದಾರಿಯ ಹಾಗೂ ವಿಕೃತ ಕಾಮವನ್ನು ಉದ್ರೇಕಕಾರಿಯೂ, ಅಪೇಕ್ಷಣೀಯವೂ ಆಗಿರುವಂತೆ ಚಿತ್ರಿಸಲಾಗುತ್ತದೆ. ಇನ್ನೊಬ್ಬ ವ್ಯಕ್ತಿಗಾಗಿ ಅಲ್ಪ ಪರಿಗಣನೆಯನ್ನು ಅಥವಾ ಯಾವುದೇ ಪರಿಗಣನೆಯನ್ನು ತೋರಿಸದೆ ಸ್ವಂತ ಆಸೆಯನ್ನು ತೃಪ್ತಿಪಡಿಸುವುದಕ್ಕೇ ಹೆಚ್ಚಿನ ಮಹತ್ವವನ್ನು ಕೊಡಲಾಗುತ್ತದೆ.

ಸ್ತ್ರೀಪುರುಷರು ಮತ್ತು ಮಕ್ಕಳು ಕೇವಲ ಲೈಂಗಿಕ ತೃಪ್ತಿಯನ್ನು ಕೊಡಲಿಕ್ಕಾಗಿ ಅಸ್ತಿತ್ವದಲ್ಲಿರುವ ವಸ್ತುಗಳಾಗಿರುವಂತೆ ಚಿತ್ರಿಸಲಾಗುತ್ತದೆ. “ಸೌಂದರ್ಯವನ್ನು ಅಂಗಾಂಗಗಳ ರೂಪಕ್ಕನುಸಾರ ಅಳೆಯಲಾಗುತ್ತದೆ, ಮತ್ತು ಹೀಗೆ ಅವಾಸ್ತವಿಕ ನಿರೀಕ್ಷಣೆಗಳು ರೂಪಿಸಲ್ಪಡುತ್ತವೆ” ಎಂದು ಒಂದು ವರದಿಯು ಹೇಳುತ್ತದೆ. “ಸ್ತ್ರೀಯರನ್ನು ತಮ್ಮ ಸ್ವಂತ ವ್ಯಕ್ತಿತ್ವವಿಲ್ಲದವರಾಗಿ, ಸದಾ ಬಯಸುತ್ತಾ/ಕಾಯುತ್ತಾ ಇರುವವರಾಗಿ, ಪುರುಷರಿಗೋಸ್ಕರ ಬರಿಯ ಲೈಂಗಿಕ ಆಟಿಕೆಗಳಂತೆ, ಹಣಕ್ಕಾಗಿ ಮತ್ತು ಮನೋರಂಜನೆಗಾಗಿ ಬಟ್ಟೆಗಳನ್ನು ಕಳಚಿಹಾಕುವವರಾಗಿ ಮತ್ತು ತಮ್ಮ ದೇಹಗಳನ್ನು ನಗ್ನಗೊಳಿಸುವವರಾಗಿ ಚಿತ್ರಿಸುವುದು, ಸ್ತ್ರೀಯರಿಗೂ ಸಮಾನತೆ, ಘನತೆ ಹಾಗೂ ಮಾನವೀಯತೆ ಎಂಬುದಿದೆ ಎಂಬ ಸಂದೇಶವನ್ನು ಖಂಡಿತವಾಗಿಯೂ ಕೊಡಲಾರದು,” ಎಂದು ಹೇಳುತ್ತಾ ಇನ್ನೊಂದು ವರದಿಯು ಸಮಾಪ್ತಿಗೊಳಿಸುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, ಪ್ರೀತಿಯು ‘ಮರ್ಯಾದೆಗೆಟ್ಟು ನಡೆಯುವುದಿಲ್ಲ’ ಎಂದು ಪೌಲನು ಬರೆದನು. “[ಅದು] ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ.” (1 ಕೊರಿಂಥ 13:⁠5) ಪುರುಷರು ಸ್ತ್ರೀಯರನ್ನು ತಮ್ಮ ಲೈಂಗಿಕ ತೃಷೆಯನ್ನು ತೃಪ್ತಿಪಡಿಸುವ ವಸ್ತುಗಳಾಗಿ ದೃಷ್ಟಿಸುವ ಬದಲು, ತಮ್ಮ ‘ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವಂತೆ,’ ಮತ್ತು ‘ಅವರಿಗೆ ಮಾನವನ್ನು ಸಲ್ಲಿಸುವಂತೆ’ ಬೈಬಲ್‌ ಉತ್ತೇಜಿಸುತ್ತದೆ. (ಎಫೆಸ 5:28; 1 ಪೇತ್ರ 3:⁠7) ಲೈಂಗಿಕವಾಗಿ ಸುಸ್ಪಷ್ಟವಾದ ವರ್ಣನೆಯುಳ್ಳ ಬೇರೆ ಜನರ ಚಿತ್ರಗಳನ್ನು ಕ್ರಮವಾಗಿ ನೋಡುತ್ತಿರುವ ಗಂಡಾಗಲಿ ಹೆಣ್ಣಾಗಲಿ ಮರ್ಯಾದೆಯಿಂದ ನಡೆಯುತ್ತಿದ್ದಾನೆ/ಳೆ ಎಂದು ನಿಜವಾಗಿ ಹೇಳಬಹುದೊ? ಆ ವ್ಯಕ್ತಿಯು ನಿಜವಾಗಿ ಮಾನ ಹಾಗೂ ಗೌರವವನ್ನು ತೋರಿಸುತ್ತಿದ್ದಾನೊ? ಅಶ್ಲೀಲ ಸಾಹಿತ್ಯವು ಒಬ್ಬ ವ್ಯಕ್ತಿಯಲ್ಲಿ ಪ್ರೀತಿಯ ಬದಲು ಸ್ವವಿಚಾರಾಸಕ್ತ, ಸ್ವಾರ್ಥಪರ ಬಯಕೆಯನ್ನು ಬೆಳೆಸುತ್ತದೆ.

ಇನ್ನೊಂದು ಅಂಶವೂ ಇದೆ. ಬೇರೆ ರೀತಿಯ ಅಯೋಗ್ಯವಾದ ಪ್ರಚೋದನೆಯಂತೆ, ಶುರುಶುರುವಿನಲ್ಲಿ ಒಬ್ಬ ವ್ಯಕ್ತಿಯ ಆಸೆಗಳನ್ನು ಕೆರಳಿಸಿದಂಥ ವಿಷಯಗಳು ಆಮೇಲೆ ಮಾಮೂಲಿಯಾಗಿ ಹಾಗೂ ನಿತ್ಯದ ಸಂಗತಿಯಾಗಿ ಪರಿಣಮಿಸುತ್ತವೆ. “ಕಾಲಕ್ರಮೇಣ, [ಅಶ್ಲೀಲ ಸಾಹಿತ್ಯವನ್ನು ಉಪಯೋಗಿಸುವವರು] ಹೆಚ್ಚು ವರ್ಣನಾತ್ಮಕವಾದ ಮತ್ತು ವಕ್ರವಾದ ಸಾಮಗ್ರಿಯನ್ನು ಬಯಸುತ್ತಾರೆ . . . ಅವರು ತಮ್ಮ ಸಂಗಾತಿಗಳನ್ನು ಹೆಚ್ಚು ವಿಲಕ್ಷಣವಾದ ಲೈಂಗಿಕ ಚಟುವಟಿಗಳಿಗೆ ತಳ್ಳಬಹುದು . . . , ಹೀಗೆ ಅವರು ನಿಜವಾದ ವಾತ್ಸಲ್ಯವನ್ನು ತೋರಿಸುವ ತಮ್ಮ [ಸ್ವಂತ] ಸಾಮರ್ಥ್ಯವನ್ನು ಕುಗ್ಗಿಸುವರು” ಎಂದು ಒಬ್ಬ ಲೇಖಕನು ಹೇಳುತ್ತಾನೆ. ಹೀಗಿರುವಾಗ ಇದು ಒಂದು ಹಾನಿರಹಿತವಾದ ಕಾಲಕ್ಷೇಪವಾಗಿ ತೋರುತ್ತದೊ? ಆದರೆ ಅಶ್ಲೀಲ ಸಾಹಿತ್ಯದಿಂದ ದೂರವಿರಲು ಇನ್ನೊಂದು ಪ್ರಾಮುಖ್ಯ ಕಾರಣವಿದೆ.

ಬೈಬಲ್‌ ಮತ್ತು ಕಾಮಾಸಕ್ತಿ

ಲೈಂಗಿಕ ಕಲ್ಪನೆಗಳನ್ನು ಕೆರಳಿಸಲು ಪ್ರಯತ್ನಿಸುವುದರಲ್ಲಿ ಏನೂ ತಪ್ಪಿಲ್ಲ ಇಲ್ಲವೆ ಅಪಾಯವಿಲ್ಲವೆಂದು ಇಂದು ಅನೇಕರಿಗೆ ಅನಿಸುವುದಾದರೂ, ಬೈಬಲ್‌ ಈ ಮಾತನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮ ಮನಸ್ಸುಗಳಲ್ಲಿ ನಾವೇನನ್ನು ತುಂಬಿಸಿಕೊಳ್ಳುತ್ತೇವೊ ಮತ್ತು ನಾವು ಹೇಗೆ ಕ್ರಿಯೆಗೈಯುತ್ತೇವೊ ಅದರ ನಡುವೆ ಒಂದು ಸಹಜ ಸಂಬಂಧವಿದೆ ಎಂದು ಅದು ಸ್ಪಷ್ಟವಾಗಿ ವಿವರಿಸುತ್ತದೆ. “ಆದರೆ ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ” ಎಂದು ಕ್ರೈಸ್ತ ಶಿಷ್ಯನಾದ ಯಾಕೋಬನು ತೋರಿಸುತ್ತಾನೆ. “ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ.” (ಯಾಕೋಬ 1:14, 15) ಯೇಸು ಹೇಳಿದ್ದು: “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.”​—⁠ಮತ್ತಾಯ 5:⁠28.

ಯಾಕೋಬ ಮತ್ತು ಯೇಸು ಇಬ್ಬರೂ ಸೂಚಿಸುವಂತೆ, ಮಾನವರು ಆಂತರಿಕ ಆಸೆಗಳ ಪ್ರಚೋದನೆಗನುಸಾರ ಕ್ರಿಯೆಗೈಯುತ್ತಾರೆ. ಆ ಆಸೆಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಅವುಗಳನ್ನು ಪೋಷಿಸುವುದಾದರೆ, ಅವು ಸಕಾಲದಲ್ಲಿ ಬಲವಾದ ಗೀಳುಗಳಾಗಿ ಪರಿಣಮಿಸಬಲ್ಲವು. ಗೀಳುಗಳನ್ನು ಪ್ರತಿರೋಧಿಸುವುದು ತುಂಬ ಕಷ್ಟಕರ ಮತ್ತು ಅವು ಕಟ್ಟಕಡೆಗೆ ಒಬ್ಬ ವ್ಯಕ್ತಿಯನ್ನು ಕ್ರಿಯೆಗೈಯುವಂತೆ ಮುಂದೂಡಬಲ್ಲವು. ಹೀಗೆ, ನಾವು ನಮ್ಮ ಮನಸ್ಸುಗಳಲ್ಲಿ ಏನು ತುಂಬಿಸುತ್ತೇವೊ ಅದು, ನಾವು ಕಟ್ಟಕಡೆಗೆ ಏನು ಮಾಡುವೆವೊ ಅದರ ಮೇಲೆ ಬಲವಾದ ಪರಿಣಾಮವನ್ನು ಬೀರಬಲ್ಲದು.

ಲೈಂಗಿಕ ಕನಸುಗಳನ್ನು ಕಾಣುವುದು, ದೇವರೊಂದಿಗಿನ ನಮ್ಮ ಸಂಬಂಧಕ್ಕೆ ನೇರವಾಗಿ ಅಡ್ಡಬರಬಹುದು. ಆದುದರಿಂದಲೇ ಅಪೊಸ್ತಲ ಪೌಲನು ಬರೆದುದು: “ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ.”​—⁠ಕೊಲೊಸ್ಸೆ 3:⁠5.

ಪೌಲನು ಇಲ್ಲಿ ಲೈಂಗಿಕ ಆಸೆಯನ್ನು ಲೋಭದೊಂದಿಗೆ ಜೋಡಿಸುತ್ತಾನೆ. ಈ ಲೋಭವು, ಒಬ್ಬನ ಬಳಿ ಇರದಂಥ ಏನನ್ನಾದರೂ ಪಡೆಯಲು ವಿಪರೀತವಾಗಿ ಆಸೆಪಡುವುದೇ ಆಗಿದೆ. * ಲೋಭವು ವಿಗ್ರಹಾರಾಧನೆಯ ಒಂದು ರೂಪವಾಗಿದೆ. ಏಕೆ? ಏಕೆಂದರೆ ಲೋಭವುಳ್ಳವನು, ತಾನು ಆಸೆಪಡುವ ವಿಷಯವನ್ನು, ದೇವರ ಸಮೇತ ಬೇರೆಲ್ಲ ವಿಷಯಕ್ಕಿಂತಲೂ ಮುಂದಿಡುತ್ತಾನೆ. ಅಶ್ಲೀಲ ಸಾಹಿತ್ಯವು, ಒಬ್ಬ ವ್ಯಕ್ತಿಯ ಬಳಿ ಇಲ್ಲದಿರುವಂಥ ಒಂದು ವಿಷಯಕ್ಕಾಗಿ ಉತ್ಕಟ ಬಯಕೆಯನ್ನು ಬಡಿದೆಬ್ಬಿಸುತ್ತದೆ. “ನೀವು ಇನ್ನಾರದ್ದೊ ಲೈಂಗಿಕ ಜೀವನವನ್ನು ಬಯಸುತ್ತೀರಿ. . . . ನಿಮ್ಮ ಬಳಿ ಇಲ್ಲದಿರುವ ಆ ಸಂಗತಿಗಾಗಿರುವ ಹಸಿವನ್ನು ಬಿಟ್ಟರೆ ನಿಮ್ಮ ಮನಸ್ಸಿನಲ್ಲಿ ಇನ್ನೇನೂ ಇರುವುದಿಲ್ಲ. . . . ಯಾವುದಕ್ಕಾಗಿ ನಮ್ಮಲ್ಲಿ ಉತ್ಕಟ ಬಯಕೆಯಿದೆಯೊ, ಅದನ್ನೇ ನಾವು ಆರಾಧಿಸುತ್ತೇವೆ” ಎಂದು ಒಬ್ಬ ಧಾರ್ಮಿಕ ಲೇಖಕನು ಹೇಳುತ್ತಾನೆ.

ಅಶ್ಲೀಲ ಸಾಹಿತ್ಯವು ಭ್ರಷ್ಟಗೊಳಿಸುತ್ತದೆ

“ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ” ಎಂದು ಬೈಬಲ್‌ ಬುದ್ಧಿಹೇಳುತ್ತದೆ. (ಫಿಲಿಪ್ಪಿ 4:⁠8) ತನ್ನ ಕಣ್ಣುಗಳನ್ನೂ ಮನಸ್ಸನ್ನೂ ಅಶ್ಲೀಲ ಸಾಹಿತ್ಯದಿಂದ ತುಂಬಿಸುವ ವ್ಯಕ್ತಿಯು ಪೌಲನ ಈ ಬುದ್ಧಿವಾದವನ್ನು ತಿರಸ್ಕರಿಸುತ್ತಿದ್ದಾನೆ. ಅಶ್ಲೀಲ ಸಾಹಿತ್ಯವು ಅಸಭ್ಯವಾದದ್ದಾಗಿದೆ, ಏಕೆಂದರೆ ಅದು ನಿರ್ಲಜ್ಜೆಯಿಂದ ಅತಿ ಗುಪ್ತವಾದ ಹಾಗೂ ಖಾಸಗಿಯಾದ ಕ್ರಿಯೆಗಳನ್ನು ಸಾರ್ವಜನಿಕ ನೋಟಕ್ಕೆ ತೆರೆದಿಡುತ್ತದೆ. ಅದು ತುಚ್ಛವಾದದ್ದಾಗಿದೆ ಏಕೆಂದರೆ ಅದು ಜನರನ್ನು ಹೀನಾಯಗೊಳಿಸುತ್ತದೆ ಮತ್ತು ಅವರು ಮಾನವೀಯತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಅದು ಪ್ರೀತಿಪರವಾದ ಸಂಗತಿಯಲ್ಲ, ಏಕೆಂದರೆ ಅದು ಕೋಮಲ ಭಾವವನ್ನೂ ಕಾಳಜಿಯನ್ನೂ ಪ್ರವರ್ಧಿಸುವುದಿಲ್ಲ. ಅದು ಕೇವಲ ಸ್ವಾರ್ಥಪರ ಕಾಮಾಸಕ್ತಿಯನ್ನು ಪ್ರವರ್ಧಿಸುತ್ತದೆ ಅಷ್ಟೇ.

ಅನೈತಿಕ ಮತ್ತು ಕಾಮುಕ ಕೃತ್ಯಗಳನ್ನು ಸಿಕ್ಕಾಬಟ್ಟೆ ತೋರಿಸುವ ಮೂಲಕ ಅಶ್ಲೀಲ ಸಾಹಿತ್ಯವು, ಒಬ್ಬ ಕ್ರೈಸ್ತನು ‘ಕೆಟ್ಟದ್ದನ್ನು ದ್ವೇಷಿಸಲು’ ಮಾಡುವ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತದೆ ಇಲ್ಲವೆ ಬುಡಮೇಲುಮಾಡುತ್ತದೆ. (ಆಮೋಸ 5:15) ಅದು ಪಾಪಗೈಯುವುದನ್ನು ಉತ್ತೇಜಿಸುತ್ತದೆ ಮತ್ತು ಪೌಲನು ಎಫೆಸದವರಿಗೆ ಏನನ್ನು ಉತ್ತೇಜಿಸಿದನೊ ಅದನ್ನು ಪೂರ್ತಿಯಾಗಿ ಉಲ್ಲಂಘಿಸುತ್ತದೆ: “ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು; ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು. ಹೊಲಸು ಮಾತು ಹುಚ್ಚು ಮಾತು ಕುಚೋದ್ಯ ಮಾತು ಇವು ಬೇಡ, ಅಯುಕ್ತವಾಗಿವೆ.”​—⁠ಎಫೆಸ 5:3, 4.

ಖಂಡಿತವಾಗಿಯೂ ಅಶ್ಲೀಲ ಸಾಹಿತ್ಯವು ಹಾನಿರಹಿತವಾದದ್ದಲ್ಲ. ಅದು ಶೋಷಣೆಮಾಡುವಂಥದ್ದೂ, ಭ್ರಷ್ಟಗೊಳಿಸುವಂಥದ್ದೂ ಆಗಿದೆ. ಅದು ಸಂಬಂಧಗಳನ್ನು ನಾಶಗೊಳಿಸಿ, ಲೈಂಗಿಕ ಸಂಬಂಧದ ಸ್ವಾಭಾವಿಕ ಅಭಿವ್ಯಕ್ತಿಯನ್ನು, ಲೈಂಗಿಕ ಚಟುವಟಿಕೆಯನ್ನು ನೋಡಿ ಲೈಂಗಿಕಾಸೆಯನ್ನು ತಣಿಸುವ ಕ್ರಿಯೆಯಾಗಿ ವಕ್ರಗೊಳಿಸಬಲ್ಲದು. ಇದನ್ನು ಮಾಡುವ ವ್ಯಕ್ತಿಯ ಮನಸ್ಸನ್ನೂ ಆತ್ಮಿಕತೆಯನ್ನೂ ಅದು ನಂಜುಗೊಳಿಸುತ್ತದೆ. ಅದು ಸ್ವಾರ್ಥಪರ, ದುರಾಸೆಯ ಮನೋಭಾವಗಳಿಗೆ ಇಂಬುಕೊಡುತ್ತದೆ ಮತ್ತು ಜನರು ಇತರರನ್ನು ಕೇವಲ ತಮ್ಮ ಕಾಮಾಸಕ್ತಿಯನ್ನು ತಣಿಸಲಿಕ್ಕಾಗಿ ಇರುವಂಥ ವಸ್ತುಗಳಾಗಿ ದೃಷ್ಟಿಸುವಂತೆ ಕಲಿಸುತ್ತದೆ. ಒಳ್ಳೇದನ್ನು ಮಾಡಲು ಮತ್ತು ಒಂದು ಶುದ್ಧ ಮನಸ್ಸಾಕ್ಷಿಯನ್ನು ಹೊಂದಲು ಮಾಡಲಾಗುವ ಪ್ರಯತ್ನಗಳನ್ನು ಅದು ಶಿಥಿಲಗೊಳಿಸುತ್ತದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಅದು ಒಬ್ಬನಿಗೆ ದೇವರೊಂದಿಗಿರುವ ಆತ್ಮಿಕ ಸಂಬಂಧವನ್ನು ಹಾನಿಗೊಳಪಡಿಸಬಲ್ಲದು ಇಲ್ಲವೆ ಹಾಳುಮಾಡಲೂಬಹುದು. (ಎಫೆಸ 4:​17-19) ನಿಜವಾಗಿಯೂ, ಅಶ್ಲೀಲ ಸಾಹಿತ್ಯವು ನಾವು ದೂರವಿರಿಸಬೇಕಾದ ಒಂದು ಪೀಡೆಯಾಗಿದೆ.​—⁠ಜ್ಞಾನೋಕ್ತಿ 4:​14, 15.(g02 7/8)

[ಪಾದಟಿಪ್ಪಣಿ]

^ ಪೌಲನು ಇಲ್ಲಿ ಸಹಜವಾದ ಲೈಂಗಿಕ ಆಸೆಯ ಕುರಿತು, ಅಂದರೆ ಒಬ್ಬನ ವಿವಾಹ ಸಂಗಾತಿಯ ಜೊತೆಗೆ ಸಾಧಾರಣವಾದ ಲೈಂಗಿಕ ಸಂಬಂಧವನ್ನು ಹೊಂದಿರುವ ಬಯಕೆಯ ಕುರಿತಾಗಿ ಮಾತಾಡುತ್ತಿರಲಿಲ್ಲ.

[ಪುಟ 20ರಲ್ಲಿರುವ ಚಿತ್ರ]

ಅಶ್ಲೀಲ ಸಾಹಿತ್ಯವು, ವಿರುದ್ಧ ಲಿಂಗದವರ ಕುರಿತಾದ ಒಬ್ಬನ ದೃಷ್ಟಿಕೋನವನ್ನು ವಿಕೃತಗೊಳಿಸುತ್ತದೆ