ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಇಲಿಗಳು ಮತ್ತು ಮಾನವರ ನಡುವೆ ಆಹಾರಕ್ಕಾಗಿ ಸ್ಪರ್ಧೆ

ಆಸ್ಟ್ರೇಲಿಯನ್‌ ಕಾಮನ್‌ವೆಲ್ತ್‌ ಸೈಂಟಿಫಿಕ್‌ ಆ್ಯಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌ ಆರ್ಗನೈಸೇಷನ್‌ (ಸಿಎಸ್‌ಐಆರ್‌ಓ)ಗನುಸಾರ, ಒಂದು ಮಾನವ ಶಿಶು ಜನಿಸುವಾಗ, ಹತ್ತು ಇಲಿಮರಿಗಳೂ ಹುಟ್ಟುತ್ತವೆ. ಪ್ರತಿ ದಿನ, ಸುಮಾರು 3,60,000 ಹೊಸ ಮಾನವ ಶಿಶುಗಳಿಗೆ ಆಹಾರವನ್ನು ಉಣಿಸಬೇಕಾಗಿರುವಾಗ, ಹೊಸದಾಗಿ ಹುಟ್ಟಿದಂಥ 36,00,000 ಇಲಿಮರಿಗಳು ಸಹ ಆಹಾರಕ್ಕಾಗಿ ತಗಾದೆಮಾಡುತ್ತವೆ. ಉದಾಹರಣೆಗೆ, ಇಂಡೊನೇಶಿಯದಲ್ಲಿ ಜನಸಂಖ್ಯೆಯು ಸುಮಾರು 23 ಕೋಟಿ ಆಗಿದೆ, ಮತ್ತು ಅವರಲ್ಲಿ 60 ಪ್ರತಿಶತ ಮಂದಿ ತಮ್ಮ ದೈನಂದಿನ ಶಕ್ತಿಯ ಆವಶ್ಯಕತೆಗಳಿಗಾಗಿ ಅಕ್ಕಿಯ ಮೇಲೆ ಅವಲಂಬಿಸಿರುತ್ತಾರೆ. ಆದರೂ, ಆ ದೇಶದಲ್ಲಿ, ಪ್ರತಿ ವರ್ಷದ ಅಕ್ಕಿ ಬೆಳೆಯಲ್ಲಿ ಸುಮಾರು 15 ಪ್ರತಿಶತದಷ್ಟನ್ನು ಇಲಿಗಳೇ ಕಬಳಿಸಿಬಿಡುತ್ತವೆ. “ಅಂದರೆ ವರ್ಷಪೂರ್ತಿ ಇಂಡೊನೇಶಿಯದ ಎರಡು ಕೋಟಿಗಿಂತಲೂ ಹೆಚ್ಚು ಜನರಿಗೆ ಉಣಿಸಲು ಸಾಕಾಗುವಷ್ಟು ಅಕ್ಕಿಯನ್ನು ಇಲಿಗಳು ತಿಂದುಹಾಕುತ್ತಿವೆ” ಎಂದು ಸಿಎಸ್‌ಐಆರ್‌ಓ ವಿಜ್ಞಾನಿಯಾದ ಡಾ. ಗ್ರ್ಯಾಂಟ್‌ ಸಿಂಗಲ್ಟನ್‌ ತಿಳಿಸುತ್ತಾರೆ. (g02 6/22)

ತೈಲಪ್ರಿಯ ಆನೆಗಳು

ಈಶಾನ್ಯ ಭಾರತದ ಡಿಗ್‌ಬಾಯ್‌ ಎಂಬಲ್ಲಿರುವ ಆನೆಗಳು ತೈಲದ ಕಡೆಗೆ ವಿಶೇಷವಾದ ಆಕರ್ಷಣೆಯನ್ನು ಹೊಂದಿವೆ. “ಈ ಆನೆಗಳು ತೈಲಕ್ಷೇತ್ರಗಳಲ್ಲಿ ಸ್ವಚ್ಛಂದವಾಗಿ ಓಡಾಡುತ್ತವೆ, ಮತ್ತು ಅನೇಕವೇಳೆ ತೈಲವನ್ನು ಸಂಸ್ಕರಿಸುವ ಕೇಂದ್ರವನ್ನು ತೈಲ ಬಾವಿಗಳಿಗೆ ಜೋಡಿಸುವ ಪೈಪ್‌ಲೈನುಗಳ ಮುಖ್ಯ ತಿರುಪುಗಳನ್ನು ತೆರೆದಿವೆ” ಎಂದು, ಆಯಿಲ್‌ ಇಂಡಿಯಾ ಲಿಮಿಟೆಡ್‌ನ ಹಿರಿಯ ಇಂಜಿನಿಯರರಾಗಿರುವ ರಮಣ್‌ ಚೊಕ್ರೊವರ್ತಿಯವರು ಹೇಳುತ್ತಾರೆ. “ಒಂದು ತಿರುಪು ತೆರೆಯಲ್ಪಟ್ಟಾಗ, ಅದರಲ್ಲೂ ಕಚ್ಚಾಎಣ್ಣೆಯು ಪ್ಯಾರಫಿನ್‌ ಆಗದಿರುವಂತೆ ತಡೆಗಟ್ಟಲಿಕ್ಕಾಗಿ ಆವಿಯನ್ನು ನಿಯಂತ್ರಿಸುವಂಥ ಒಂದು ಪೈಪಿನ ತಿರುಪು ತೆರೆಯಲ್ಪಟ್ಟಾಗ ಉಂಟಾಗುವ ಶಬ್ದವು ಆನೆಗಳಿಗೆ ತುಂಬ ಖುಷಿಯನ್ನು ನೀಡುವಂತೆ ತೋರುತ್ತದೆ.” ಆ ಆನೆಗಳು “ಉಷ್‌ ಎಂದು ರಭಸವಾಗಿ ಹೊರಚಿಮ್ಮುವಂಥ ತೈಲದ ಧ್ವನಿಯನ್ನು ಕೇಳಿ ಆನಂದಿಸುತ್ತವೆ” ಮಾತ್ರವಲ್ಲ, ತೈಲ ಬಾವಿಗಳಿಂದ “ಕಚ್ಚಾಎಣ್ಣೆಯೊಂದಿಗೆ ಹೊರಬರುವಂಥ ಕೆಸರು ಮತ್ತು ನೀರಿನ” ಕಡೆಗೂ ಅವು ಆಕರ್ಷಿತವಾಗುವಂತೆ ತೋರುತ್ತದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವಾರ್ತಾಪತ್ರಿಕೆಯು ವರದಿಸುತ್ತದೆ. “ಆ ನೀರು ಲವಣಭರಿತವಾಗಿದ್ದು, ಆನೆಗಳು ಅದನ್ನು ತುಂಬ ಇಷ್ಟಪಡುತ್ತವೆ.” ಆಸಕ್ತಿಕರವಾಗಿಯೇ, ಅಲ್ಲಿನ ತೈಲ ಪ್ರದೇಶದ ಆಕಸ್ಮಿಕ ಕಂಡುಹಿಡಿತಕ್ಕೆ ಒಂದು ಆನೆಯೇ ಕಾರಣವಾಗಿತ್ತು. ಆ ಆನೆಯು ಆ ಪ್ರದೇಶದಲ್ಲಿನ ಪ್ರಪ್ರಥಮ ರೈಲ್ವೇ ಲೈನಿಗಾಗಿ ಹಳಿಗಳನ್ನು ಕೊಂಡೊಯ್ದು ಕ್ಯಾಂಪಿಗೆ ಹಿಂದಿರುಗಿತ್ತಷ್ಟೇ; ಅಷ್ಟರಲ್ಲಿ ಬ್ರಿಟಿಷ್‌ ಅಧಿಕಾರಿಗಳು ಅದರ ಕಾಲುಗಳ ಮೇಲೆ ತೈಲದಂಥ ದ್ರವವನ್ನು ಗಮನಿಸಿದರು ಮತ್ತು ಆನೆಯ ಹೆಜ್ಜೆಜಾಡನ್ನು ಹಿಂಬಾಲಿಸಿ ಹೋದಾಗ, ತೈಲವು ಚಿಮ್ಮುತ್ತಿದ್ದಂಥ ಒಂದು ಗುಂಡಿಯನ್ನು ಕಂಡುಕೊಂಡರು. ಇದು, 1889ರಲ್ಲಿ ಏಷಿಯಾದ ಪ್ರಪ್ರಥಮ ತೈಲ ಬಾವಿಯನ್ನು ಆರಂಭಿಸುವುದರಲ್ಲಿ ಫಲಿಸಿತು. (g02 7/22)

ಹೆಚ್ಚೆಚ್ಚು ವಿವಾಹಬಾಹಿರ ಮಕ್ಕಳು

ಯೂರೋಪಿನ ಯೂರೋಸ್ಟ್ಯಾಟ್‌ ಎಂಬ ಒಂದು ಸಂಖ್ಯಾಸಂಗ್ರಹಣ ಏಜೆನ್ಸಿಗನುಸಾರ, ಸದ್ಯಕ್ಕೆ ಯೂರೋಪಿಯನ್‌ ಯೂನಿಯನ್‌ನ ನಾಲ್ಕು ಮಕ್ಕಳಲ್ಲಿ ಒಂದು ಮಗುವು ವಿವಾಹಬಾಹಿರ ಹೆತ್ತವರಿಗೆ ಜನಿಸುತ್ತಿದೆ ಎಂದು, ವೆಸ್ಟ್‌ಡೈಟ್‌ಶ್‌ ಆಲ್‌ಗೆಮೈನ ಟ್ಸೈಟುಂಗ್‌ ಎಂಬ ಜರ್ಮನ್‌ ವಾರ್ತಾಪತ್ರಿಕೆಯು ವರದಿಸುತ್ತದೆ. 1980ರಲ್ಲಿ ಈ ಪ್ರಮಾಣವು ಹತ್ತು ಮಕ್ಕಳಲ್ಲಿ ಒಂದಕ್ಕಿಂತಲೂ ಕಡಿಮೆಯಾಗಿತ್ತು. ವಿವಾಹಬಾಹಿರ ಮಕ್ಕಳ ಜನನದ ತೀರ ಕಡಿಮೆ ಪ್ರಮಾಣವು​—⁠ಕೇವಲ 4 ಪ್ರತಿಶತ​—⁠ಗ್ರೀಸ್‌ನಲ್ಲಿ ಕಂಡುಬರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಸ್ವೀಡನ್‌ನಲ್ಲಿನ ಎಲ್ಲ ಜನನಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವು ವಿವಾಹಬಾಹಿರವಾಗಿರುತ್ತವೆ. ಐರ್ಲೆಂಡ್‌ ಮಾತ್ರ ಅತಿ ದೊಡ್ಡ ಬದಲಾವಣೆಯನ್ನೇ ಅನುಭವಿಸಿದೆ. ಅಲ್ಲಿ ವಿವಾಹಬಾಹಿರ ಹೆತ್ತವರಿಗೆ ಜನಿಸಿದ ಮಕ್ಕಳ ಸಂಖ್ಯೆಯು 1980ರಲ್ಲಿ ಕೇವಲ 5 ಪ್ರತಿಶತದಿಂದ, 2000ದಲ್ಲಿ 31.8 ಪ್ರತಿಶತಕ್ಕೆ ಏರಿಬಿಟ್ಟಿದೆ. ಇಂಥ ಎದ್ದುಕಾಣುವಂಥ ಹೆಚ್ಚಳಗಳು “ಯೂರೋಪಿಯನರ ನಡುವೆ ವಿವಾಹ ಹಾಗೂ ಕುಟುಂಬದ ಕಡೆಗಿನ ಮನೋಭಾವದಲ್ಲಾಗಿರುವ ಗಮನಾರ್ಹ ಬದಲಾವಣೆಯನ್ನು ರುಜುಪಡಿಸುತ್ತವೆ” ಎಂದು ಆ ವರದಿಯು ತಿಳಿಸುತ್ತದೆ. (g02 5/8)

100ರ ಪ್ರಾಯದಲ್ಲಿ ಆನಂದಿತರು ಮತ್ತು ಆರೋಗ್ಯಭರಿತರು

ಯೋಮಿಯೂರೀ ಶೆಮ್‌ಬುನ್‌ ವಾರ್ತಾಪತ್ರಿಕೆಯಲ್ಲಿನ ಒಂದು ವರದಿಗನುಸಾರ, “100ಕ್ಕಿಂತಲೂ ಹೆಚ್ಚು ಪ್ರಾಯದ ಜನರಲ್ಲಿ 80 ಪ್ರತಿಶತ ಮಂದಿಗೆ, ಪ್ರತಿ ದಿನ ತಾವು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಆರೋಗ್ಯದಿಂದಿದ್ದೇವೆ ಎಂಬ ಅನಿಸಿಕೆಯಾಗುತ್ತದೆ.” ಜಪಾನಿನಲ್ಲಿರುವ ಶತಾಯುಷಿಗಳ ಸಂಖ್ಯೆ 1981ರಲ್ಲಿ ಪ್ರಥಮ ಬಾರಿ 1,000 ಸಂಖ್ಯೆಯನ್ನು ದಾಟಿತು, ಮತ್ತು 2000 ಇಸವಿಯಲ್ಲಿ ಅದು 13,000ವನ್ನು ತಲಪಿತು. ಇತ್ತೀಚೆಗೆ, ಆರೋಗ್ಯ ಮತ್ತು ದೇಹಬಲದ ಕುರಿತಾದ ಜಪಾನಿನ ಸಂಸ್ಥೆಯು, 1,900ಕ್ಕಿಂತಲೂ ಹೆಚ್ಚು ಮಂದಿ ಶತಾಯುಷಿಗಳ ಸಮೀಕ್ಷೆಯನ್ನು ನಡೆಸಿತು. 100ಕ್ಕಿಂತಲೂ ಹೆಚ್ಚು ಪ್ರಾಯದ ವ್ಯಕ್ತಿಗಳ “ಜೀವನ ಗುಣಮಟ್ಟದ” ಬಗ್ಗೆ ಇಷ್ಟರ ತನಕ ನಡೆಸಲ್ಪಟ್ಟಿರುವ ಅತಿ ದೊಡ್ಡ ಅಧ್ಯಯನ ಇದಾಗಿತ್ತು ಎಂಬುದು ಸುವ್ಯಕ್ತ. “25.8 ಪ್ರತಿಶತ ಸಂಖ್ಯೆಯ ಸ್ತ್ರೀಯರಿಗೆ ಪ್ರತಿಯಾಗಿ, ಪುರುಷರ ಒಂದು ದೊಡ್ಡ ಸಂಖ್ಯೆಯು, ಅಂದರೆ ಸುಮಾರು 43.6 ಪ್ರತಿಶತ ಮಂದಿ, ‘ಜೀವನದಲ್ಲಿ ಒಂದು ಉದ್ದೇಶವನ್ನು ಹೊಂದಿದ್ದೇವೆ’ ಎಂದು ಹೇಳುತ್ತಾರೆ” ಎಂದು ಆ ವಾರ್ತಾಪತ್ರಿಕೆಯು ವರದಿಸಿತು. ಶತಾಯುಷಿಗಳಲ್ಲಿ ಅಧಿಕಾಂಶ ಮಂದಿ, ತಮ್ಮ ಜೀವಿತದ ಉದ್ದೇಶಗಳಲ್ಲಿ “ಕುಟುಂಬ,” “ದೀರ್ಘಾಯುಷ್ಯ” ಮತ್ತು “ಒಳ್ಳೇ ಆರೋಗ್ಯವನ್ನು ಹೊಂದಿರುವುದು ಹಾಗೂ ಸಂತೋಷದಿಂದ ಜೀವಿಸು”ವಂಥ ವಿಷಯಗಳನ್ನು ತಿಳಿಸಿದರು. ಆದುದರಿಂದ, ಯೋಮಿಯೂರೀ ಶೆಮ್‌ಬುನ್‌ ಸೂಚಿಸುವುದೇನೆಂದರೆ, “ಜೀವನದಲ್ಲಿ ಒಂದು ಉದ್ದೇಶವಿರುವುದು ದೀರ್ಘಾಯುಷ್ಯಕ್ಕೆ ನಡೆಸುತ್ತದೆ.” (g02 5/8)

ದೇವರ ಹೆಸರಿನಲ್ಲಿ ಕಳ್ಳತನ

“ಇಪ್ಪತ್ತು ವರ್ಷಗಳಿಂದ ನಾನು ಬಂಡವಾಳ ಚಟುವಟಿಕೆಗಳನ್ನು ನಿಯಂತ್ರಿಸುವ ಅಧಿಕಾರಿಯಾಗಿ ಕೆಲಸಮಾಡುತ್ತಿದ್ದೇನೆ, ಮತ್ತು ಬೇರಾವುದೇ ವಿಧಕ್ಕಿಂತಲೂ ಹೆಚ್ಚಾಗಿ ದೇವರ ಹೆಸರಿನಲ್ಲಿ ಹೆಚ್ಚು ಹಣವು ಕದಿಯಲ್ಪಡುವುದನ್ನು ನಾನು ನೋಡಿದ್ದೇನೆ” ಎಂದು, ನಾರ್ತ್‌ ಅಮೆರಿಕನ್‌ ಸೆಕ್ಯುರಿಟೀಸ್‌ ಆ್ಯಡ್‌ಮಿನಿಸ್ಟ್ರೇಟರ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷರಾಗಿರುವ ಡೆಬ್ರ ಬೋರ್ಟ್‌ನರ್‌ ಹೇಳುತ್ತಾರೆ. “ನೀವು ಬಂಡವಾಳವನ್ನು ಹೂಡುವಾಗ, ನಿಮ್ಮ ಧರ್ಮ ಅಥವಾ ನಿಮ್ಮ ನಂಬಿಕೆಯ ಬಗ್ಗೆ ಜ್ಞಾಪಕ ಹುಟ್ಟಿಸುವ ಮೂಲಕ ಬಂಡವಾಳ ಹೂಡುವಂತೆ ಪುಸಲಾಯಿಸಲು ಪ್ರಯತ್ನಿಸುತ್ತಿದ್ದಾರೆಂಬ ಮಾತ್ರಕ್ಕೆ, ಎಚ್ಚರಿಕೆಯಿಂದಿರುವುದನ್ನು ಅಲಕ್ಷಿಸದಿರಿ.” ಕ್ರೈಸ್ತ ಶತಮಾನ (ಇಂಗ್ಲಿಷ್‌) ಎಂಬ ಪತ್ರಿಕೆಗನುಸಾರ, “ಕಳೆದ ಮೂರು ವರ್ಷಗಳಲ್ಲಿ, 27 ರಾಜ್ಯಗಳಲ್ಲಿರುವ ಬಂಡವಾಳ ಚಟುವಟಿಕೆಗಳ ನಿಯಂತ್ರಕರು, ಬಂಡವಾಳಗಾರರ ಭರವಸೆಯನ್ನು ಪಡೆಯಲಿಕ್ಕಾಗಿ ಆತ್ಮಿಕ ಅಥವಾ ಧಾರ್ಮಿಕ ನಂಬಿಕೆಗಳನ್ನು ಉಪಯೋಗಿಸಿದಂಥ ನೂರಾರು ವ್ಯಕ್ತಿಗಳು ಹಾಗೂ ಕಂಪೆನಿಗಳ ವಿರುದ್ಧ ಕ್ರಮಗಳನ್ನು ಕೈಗೊಂಡಿದ್ದಾರೆ. . . . [ಐದು ವರ್ಷಗಳಿಗಿಂತಲೂ ಹೆಚ್ಚು] ಸಮಯದ ವರೆಗೆ ಇದ್ದ ಒಂದು ಕುಪ್ರಸಿದ್ಧ ಸನ್ನಿವೇಶದಲ್ಲಿ,” ಒಂದು ಪ್ರಾಟೆಸ್ಟಂಟ್‌ ಸಂಸ್ಥೆಯು “ದೇಶದಾದ್ಯಂತ ಇದ್ದ 13,000ಕ್ಕಿಂತಲೂ ಹೆಚ್ಚಿನ ಬಂಡವಾಳಗಾರರಿಂದ 59 ಕೋಟಿ ಡಾಲರುಗಳನ್ನು ಸಂಗ್ರಹಿಸಿತು. 1999ರಲ್ಲಿ ರಾಜ್ಯ ನಿಯಂತ್ರಕರಿಂದ ಈ ಸಂಸ್ಥೆಯು ಮುಚ್ಚಲ್ಪಟ್ಟಿತು ಮತ್ತು ಅದರ ಅಧಿಕಾರಿಗಳಲ್ಲಿ ಮೂವರು ಮೋಸದ ಆರೋಪಗಳ ಆಧಾರದ ಮೇಲೆ ದೋಷಿಗಳಾಗಿ ಪ್ರತಿಪಾದಿಸಲ್ಪಟ್ಟರು.” ಇನ್ನೂ ಮೂರು ಸನ್ನಿವೇಶಗಳು “ಒಟ್ಟು 150 ಕೋಟಿಯಷ್ಟು ಹಣದ ನಷ್ಟಕ್ಕೆ ಕಾರಣವಾಗಿದ್ದವು” ಎಂದು ಕ್ರೈಸ್ತ ಶತಮಾನ ಪತ್ರಿಕೆಯು ವರದಿಸುತ್ತದೆ.(g02 5/22)

ಚರ್ಚ್‌ ವ್ಯಾಪಾರ

ಅಮೆರಿಕದಾದ್ಯಂತ ತೀರ ಕಡಿಮೆ ಹಾಜರಿಯಿರುವ ಮತ್ತು ಕಡಿಮೆ ಪ್ರಮಾಣದ ಕಾಣಿಕೆಯು ಸಿಗುತ್ತಿರುವಂಥ ಚರ್ಚುಗಳು, ಬಿಲ್‌ ಪಾವತಿಗಾಗಿ ಹಣವನ್ನು ಒಟ್ಟುಗೂಡಿಸಲಿಕ್ಕಾಗಿ ಐಹಿಕ ವ್ಯಾಪಾರಗಳನ್ನು ಆರಂಭಿಸುತ್ತಿವೆ. “ಪ್ರತಿಯೊಂದು ಸಾಹಸಭರಿತ ಚರ್ಚಿನ ಭವಿಷ್ಯತ್ತು ಇದೇ ಆಗಿದೆ” ಎಂದು, ಇಂಡಿಯಾನದ ಮುನ್‌ಸ್ಟರ್‌ನಲ್ಲಿರುವ ಫ್ಯಾಮಿಲಿ ಕ್ರಿಸ್ಟಿಯನ್‌ ಸೆಂಟರ್‌ನ ಸೀನಿಯರ್‌ ಪಾಸ್ಟರ್‌ರಾಗಿರುವ ಸ್ಟೀವನ್‌ ಮನ್ಸೀ ಹೇಳುತ್ತಾರೆ. ದ ವಾಲ್‌ ಸ್ಟ್ರೀಟ್‌ ಜರ್ನಲ್‌ಗನುಸಾರ, ಚರ್ಚಿನ ವ್ಯಾಪಾರ ವಹಿವಾಟುಗಳು, ಚರ್ಚಿನ ಮೊಗಸಾಲೆಯಲ್ಲಿ ಕಾಫಿ ಹಾಗೂ ಡೋನಟ್‌ಗಳನ್ನು ಮಾರುವುದರಿಂದ ಹಿಡಿದು, ಚರ್ಚಿನ ಛಾವಣಿಯ ಮೇಲೆ ಪೂರ್ಣ ಪ್ರಮಾಣದ ರೆಸ್ಟೊರೆಂಟ್‌ಗಳನ್ನು ನಡಿಸುವುದನ್ನು ಒಳಗೂಡಿವೆ. ಫ್ಲಾರಿಡದ ಜ್ಯಾಕ್‌ಸನ್‌ವಿಲ್‌ನಲ್ಲಿರುವ ಒಂದು ಚರ್ಚು, ಅದರ ಕಟ್ಟಡದ ಬಳಿಯೇ ಒಂದು ದೊಡ್ಡ ವ್ಯಾಪಾರ ಮಳಿಗೆಯನ್ನು ತೆರೆದಿದೆ. ಈ ವ್ಯಾಪಾರ ಮಳಿಗೆಯಲ್ಲಿ ಒಂದು ಟ್ರ್ಯಾವೆಲ್‌ ಏಜೆನ್ಸಿ, ಒಂದು ಬ್ಯೂಟಿ ಪಾರ್ಲರ್‌ ಮತ್ತು ಒಂದು ಸೋಲ್‌-ಫುಡ್‌ ಆಹಾರದ ರೆಸ್ಟೊರೆಂಟ್‌ ಇದೆ. ಈ ಚರ್ಚಿನ ಸ್ಥಾಪಕನೂ ಅಲ್ಲಿನ ಬಿಷಪನೂ ಆಗಿರುವ ವಾನ್‌ ಮಕ್‌ಲಾಫ್‌ಲನ್‌ ಹೇಳುವುದು: “ಯೇಸು ನಮಗೆ ಕೊಡುವಂಥ ಉಡುಗೊರೆಗಳನ್ನು ನಾವು ತೆಗೆದುಕೊಳ್ಳುವಂತೆ ಮತ್ತು ಲಾಭವನ್ನು ಪಡೆದುಕೊಳ್ಳುವಂತೆ ಅವನು ಬಯಸುತ್ತಾನೆ.” 2000 ಇಸವಿಯಲ್ಲಿ, ಚರ್ಚಿನ ವ್ಯಾಪಾರಗಳು ಎರಡು ಮಿಲಿಯ ಡಾಲರುಗಳಿಗಿಂತಲೂ ಹೆಚ್ಚು ಆದಾಯವನ್ನು ತಂದಿವೆ ಎಂದು ಸಹ ಅವನು ಕೂಡಿಸುತ್ತಾನೆ.(g02 6/22)

ಫ್ರಾನ್ಸಿನಲ್ಲಿ ಬೈಬಲ್‌ ವಾಚನ

ಲಾ ಕ್ರ್ವಾ ಎಂಬ ಕ್ಯಾಥೊಲಿಕ್‌ ವಾರ್ತಾಪತ್ರಿಕೆಯಲ್ಲಿ ಪ್ರಕಟಿಸಲ್ಪಟ್ಟ ಒಂದು ಜನಾಭಿಪ್ರಾಯ ಸಂಗ್ರಹಣೆಯಲ್ಲಿ, ಸಮೀಕ್ಷೆ ನಡೆಸಲ್ಪಟ್ಟ ಫ್ರೆಂಚ್‌ ಜನರಲ್ಲಿ 42 ಪ್ರತಿಶತ ಮಂದಿಯ ಬಳಿ ಒಂದು ಬೈಬಲ್‌ ಇದೆಯಾದರೂ, ಅವರಲ್ಲಿ ಕೇವಲ 2 ಪ್ರತಿಶತ ಮಂದಿ ಮಾತ್ರ ತಾವು ಅದನ್ನು ಬಹುಮಟ್ಟಿಗೆ ಪ್ರತಿ ದಿನ ಓದುತ್ತೇವೆ ಎಂದು ಹೇಳುತ್ತಾರೆ. ಎಪ್ಪತ್ತೆರಡು ಪ್ರತಿಶತ ಮಂದಿ, ತಾವೆಂದೂ “ಬೈಬಲನ್ನು ಓದಿಲ್ಲ” ಎಂದು ಹೇಳುತ್ತಾರೆ. ಅಭಿಪ್ರಾಯ ಕೊಟ್ಟವರಲ್ಲಿ 54 ಪ್ರತಿಶತ ಮಂದಿ, ಬೈಬಲನ್ನು “ಆಧುನಿಕ ಜಗತ್ತಿನೊಂದಿಗೆ ಹೊಂದಿಕೆಯಲ್ಲಿಲ್ಲ”ದಿರುವಂಥ “ಹಳೇ ಕಾಲದ ಒಂದು ಪುಸ್ತಕ”ವಾಗಿ ಪರಿಗಣಿಸಿದರು. ಆ ವರದಿಯು ವಿವರಿಸಿದ್ದೇನೆಂದರೆ, “ಫ್ರೆಂಚ್‌ ಜನರು ಬೈಬಲನ್ನು ಮೊದಲಾಗಿ ಶೈಕ್ಷಣಿಕ ದೃಷ್ಟಿಕೋನದಿಂದ ಪರಿಗಣಿಸುತ್ತಾರೆ,” ಅಂದರೆ “ಯೆಹೂದಿ ಮತ ಹಾಗೂ ಕ್ರೈಸ್ತ ಮತದ ಮೂಲಗಳ” ಕುರಿತಾದ ವಿವರಣೆಗಾಗಿ ಅದನ್ನು ಪರೀಕ್ಷಿಸುತ್ತಾರೆ. “ಪ್ರತಿ ವರ್ಷ ಫ್ರಾನ್ಸ್‌ನಲ್ಲಿ, ಸುಮಾರು 2,50,000 ಬೈಬಲ್‌ಗಳು ಮತ್ತು 30,000 ಹೊಸ ಒಡಂಬಡಿಕೆಗಳು ವಿಕ್ರಯಿಸಲ್ಪಡುತ್ತವೆ” ಎಂದು ಲಾ ಕ್ರ್ವಾ ವಾರ್ತಾಪತ್ರಿಕೆಯು ಹೇಳಿತು.(g02 7/8)

ಎವರೆಸ್ಟ್‌ ಪರ್ವತದ ನಿರ್ಮಲೀಕರಣ

ಭೂಮಿಯಲ್ಲೇ ಅತಿ ಎತ್ತರವಾದ ಎವರೆಸ್ಟ್‌ ಪರ್ವತ (29,035 ಅಡಿಗಳು)ದ ಸಾಮಾನ್ಯ ಚಿತ್ರಣವು, ಪುರಾತನ ಸೌಂದರ್ಯ ಹಾಗೂ ಭವ್ಯತೆಯ ಚಿತ್ರಣಗಳಲ್ಲಿ ಒಂದಾಗಿದೆ. ಆದರೂ, ನವ ದೆಹಲಿಯ ಡೌನ್‌ ಟು ಅರ್ತ್‌ ಎಂಬ ಒಂದು ಪತ್ರಿಕೆಯಲ್ಲಿನ ಒಂದು ವರದಿಯು, ಎವರೆಸ್ಟ್‌ ಪರ್ವತವು ಈಗ ಒಂದು ದೊಡ್ಡ ಕಸದ ರಾಶಿಯಾಗಿಬಿಟ್ಟಿದೆ ಎಂಬುದನ್ನು ಬಯಲುಪಡಿಸುತ್ತದೆ. ದಶಕಗಳಿಂದಲೂ ಎವರೆಸ್ಟ್‌ ಪರ್ವತವನ್ನು ಏರಿದಂಥ ನೂರಾರು ಪರ್ವತಾರೋಹಿಗಳು, “ಖಾಲಿಯಾದ ಆಮ್ಲಜನಕದ ಸಿಲಿಂಡರ್‌ಗಳು, ಹಳೇ ಏಣಿಗಳು ಅಥವಾ ಕಂಬಗಳು ಮತ್ತು ಪ್ಲ್ಯಾಸ್ಟಿಕ್‌ ಡಬ್ಬ”ಗಳನ್ನು ಒಳಗೊಂಡು ಅಕ್ಷರಾರ್ಥವಾಗಿ ಟನ್ನುಗಟ್ಟಲೆ ಕಸವನ್ನು ಹಿಂದೆಬಿಟ್ಟು ಹೋಗಿದ್ದಾರೆ. ಅತ್ಯಧಿಕ ಕಸದಿಂದ ತುಂಬಿರುವ ಶಿಬಿರವು “ಸೌತ್‌ ಕೋಲ್‌ ಶಿಬಿರವಾಗಿದ್ದು, ಅಧಿಕಾಂಶ ಪರ್ವತಾರೋಹಿಗಳು ಅಲ್ಲಿಂದಲೇ ಅಂತಿಮವಾಗಿ ಪರ್ವತ ಶಿಖರವನ್ನೇರುತ್ತಾರೆ” ಎಂದು ಆ ವರದಿಯು ತಿಳಿಸುತ್ತದೆ. ನೇಪಾಳದ ಪರ್ವತಾರೋಹಣ ಸಂಘದ ಒಬ್ಬ ಅಧಿಕಾರಿಯಾಗಿರುವ ಬೂಮಿ ಲಾಲ್‌ ಲಾಮ ಹೇಳಿದ್ದೇನೆಂದರೆ, “[ಷರ್ಪಾಗಳು] ಒಂದು ಕಿಲೊಗ್ರ್ಯಾಮ್‌ [2.2 ಪೌಂಡುಗಳು] ಕಸವನ್ನು ಸಂಗ್ರಹಿಸಿ ತರುವುದಾದರೆ ಅವರಿಗೆ 13.50 ಅಮೆರಿಕನ್‌ ಡಾಲರುಗಳನ್ನು ನೀಡುವುದರ ಬಗ್ಗೆ ನಾವು ಪರಿಗಣಿಸುತ್ತಾ ಇದ್ದೇವೆ.” ಈ ಷರ್ಪಾಗಳು “ಸಾಮಾನ್ಯವಾಗಿ ಮಾರ್ಗದರ್ಶಿಗಳೋಪಾದಿ ಕಾರ್ಯನಡಿಸುತ್ತಾರೆ” ಮತ್ತು ಎವರೆಸ್ಟನ್ನು ಹತ್ತುವಂಥ “ಜನರಿಗೆ ಅಗತ್ಯವಿರುವ ಸಾಮಾನುಗಳನ್ನು ಹೊತ್ತುಕೊಂಡುಹೋಗುತ್ತಾರೆ” ಎಂದು ಆ ವರದಿಯು ತಿಳಿಸುತ್ತದೆ. (g02 7/8)

ಏಷಿಯಾದಲ್ಲಿ ವಾಯು ಮಾಲಿನ್ಯದ ಅಪಾಯ

“ಭಾರತದಲ್ಲಿ, ಪ್ರತಿ ವರ್ಷ 40,000ಕ್ಕಿಂತಲೂ ಹೆಚ್ಚು ಜನರು ವಾಯು ಮಾಲಿನ್ಯದಿಂದ ಸಾಯುತ್ತಾರೆ” ಎಂದು ಡೌನ್‌ ಟು ಅರ್ತ್‌ ಎಂಬ ಪರಿಸರೀಯ ಪತ್ರಿಕೆಯು ತಿಳಿಸುತ್ತದೆ. ವಿಶ್ವ ಬ್ಯಾಂಕ್‌ನಿಂದ ಹಾಗೂ ಸ್ಟಾಕ್‌ಹೋಲ್ಮ್‌ ಪರಿಸರ ಸಂಸ್ಥೆಯಿಂದ ನಡೆಸಲ್ಪಟ್ಟ ಸಂಶೋಧನೆಯು ತೋರಿಸಿದ್ದೇನೆಂದರೆ, ಏಷಿಯಾದಲ್ಲಿನ ವಾಯು ಮಾಲಿನ್ಯವು ಯೂರೋಪ್‌ ಹಾಗೂ ಅಮೆರಿಕಗಳೆರಡರಲ್ಲಿಯೂ ಇರುವಂಥ ವಾಯು ಮಾಲಿನ್ಯಕ್ಕಿಂತ ಅತ್ಯಧಿಕವಾಗಿದೆ ಮತ್ತು ಸೋಲ್‌, ಬೇಜಿಂಗ್‌, ಬ್ಯಾಂಗ್‌ಕಾಕ್‌, ಜಕಾರ್ಟ, ಮತ್ತು ಮನಿಲದಲ್ಲಿ ಸಾವಿರಾರು ಮರಣಗಳಿಗೆ ಕಾರಣವಾಗಿದೆ. ಉದಾಹರಣೆಗೆ, ಮನಿಲದಲ್ಲಿ ಪ್ರತಿ ವರ್ಷ 4,000ಕ್ಕಿಂತಲೂ ಹೆಚ್ಚು ಜನರು ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸಾಯುವಾಗ, 90,000 ಮಂದಿ ಗುರುತರವಾದ ಅಸ್ಥಿಗತ ಬ್ರಾಂಕೈಟಿಸ್‌ನಿಂದ ನರಳುತ್ತಾರೆ. ಬೇಜಿಂಗ್‌ ಮತ್ತು ಜಕಾರ್ಟದಲ್ಲಿ ಮರಣ ಪ್ರಮಾಣವು ಇನ್ನೂ ಅಧಿಕವಾಗಿದೆ. “ಹೀನ ಗುಣಮಟ್ಟದ ಇಂಧನದ ಉಪಯೋಗ, ಶಕ್ತಿಯನ್ನು ಉತ್ಪಾದಿಸುವ ಅಸಮರ್ಥ ವಿಧಾನಗಳು, ಸುಸ್ಥಿತಿಯಲ್ಲಿರದಂಥ ವಾಹನಗಳ ಉಪಯೋಗ ಮತ್ತು ವಾಹನ ಸಂಚಾರದ ಅಡಚಣೆಯೇ” ಇದಕ್ಕೆ ಕಾರಣವೆಂದು ಆ ಪತ್ರಿಕೆಯು ತಿಳಿಸುತ್ತದೆ. (g02 8/22)