ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೊಲೀಸರು ಅವರ ಆವಶ್ಯಕತೆ ಏಕಿದೆ?

ಪೊಲೀಸರು ಅವರ ಆವಶ್ಯಕತೆ ಏಕಿದೆ?

ಪೊಲೀಸರು ಅವರ ಆವಶ್ಯಕತೆ ಏಕಿದೆ?

ಪೊಲೀಸರು ಇಲ್ಲದಿರುತ್ತಿದ್ದಲ್ಲಿ ಜೀವನವು ಹೇಗಿರುತ್ತಿತ್ತು? 1997ರಲ್ಲಿ, ಬ್ರಸಿಲ್‌ನ ರಸೀಫ ನಗರದಲ್ಲಿ 18,000 ಪೊಲೀಸ್‌ ಅಧಿಕಾರಿಗಳು ಮುಷ್ಕರ ನಡೆಸುತ್ತಾ ಆ ನಗರದ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿ ನಿವಾಸಿಗಳಿಗೆ ಪೊಲೀಸರಿಲ್ಲದಂತೆ ಮಾಡಿದಾಗ ಏನು ಸಂಭವಿಸಿತು?

“ಕಡಲ ತೀರದ ಈ ರಾಜಧಾನಿಯು ಅವ್ಯವಸ್ಥೆಯಿಂದ ಕೂಡಿದ್ದ ಐದು ದಿನಗಳಲ್ಲಿ, ದಿನಾಲೂ ನಡೆಯುವ ನರಹತ್ಯೆಯ ಪ್ರಮಾಣವು ಮೂರರಷ್ಟು ಹೆಚ್ಚಾಗಿದೆ” ಎಂದು ದ ವಾಷಿಂಗ್ಟನ್‌ ಪೋಸ್ಟ್‌ ವರದಿಸಿತು. “ಎಂಟು ಬ್ಯಾಂಕ್‌ಗಳಲ್ಲಿ ದರೋಡೆ ನಡೆದಿದೆ. ಜನರ ಗ್ಯಾಂಗ್‌ಗಳು ಇಲ್ಲಿನ ವ್ಯಾಪಾರ ಮಳಿಗೆಯಲ್ಲೆಲ್ಲಾ ಹುಚ್ಚಾಬಟ್ಟೆ ನುಗ್ಗಿವೆ ಮತ್ತು ಸಿಡಿಗುಂಡುಗಳನ್ನು ಹಾರಿಸುವ ಮೂಲಕ ಮೇಲ್‌ಅಂತಸ್ತಿನ ನೆರೆಹೊರೆಯಲ್ಲಿ ಅನೇಕ ಹಿಂಸಾತ್ಮಕ ಕೃತ್ಯಗಳನ್ನು ನಡೆಸಿವೆ. ಮತ್ತು ಯಾರೊಬ್ಬರೂ ವಾಹನ ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲ. . . . ದುಷ್ಕೃತ್ಯದಲ್ಲಿನ ಹೆಚ್ಚಳವು ಅನೇಕ ಮರಣಗಳನ್ನು ಉಂಟುಮಾಡಿದ್ದು, ಶವಾಗಾರಗಳು ತುಂಬಿತುಳುಕುತ್ತಿವೆ ಮತ್ತು ಅಧಿಕಾಧಿಕ ಸಂಖ್ಯೆಯಲ್ಲಿ ಜನರನ್ನು ನಗರದ ಅತಿ ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವಂತೆ ಮಾಡಿದೆ; ಈ ಆಸ್ಪತ್ರೆಗಳಲ್ಲಿ ಬಂದೂಕಿನ ಗುಂಡುಗಳಿಗೆ ಮತ್ತು ಇರಿತಗಳಿಗೆ ಬಲಿಯಾದ ಜನರು ಪ್ರವೇಶಾಂಗಣದುದ್ದಕ್ಕೂ ಬಿದ್ದುಕೊಂಡಿದ್ದಾರೆ.” ನ್ಯಾಯಾಧಿಕಾರಿಯು ಹೀಗೆ ಹೇಳಿದರೆಂದು ವರದಿಸಲಾಗಿದೆ: “ಈ ರೀತಿಯ ನಿಯಮರಾಹಿತ್ಯವು ಇಲ್ಲಿ ಹಿಂದೆಂದೂ ಇರಲಿಲ್ಲ.”

ನಾವು ಎಲ್ಲಿಯೇ ಜೀವಿಸುತ್ತಿರಲಿ, ನಾಗರಿಕತೆಯ ಸೋಗಿನ ಹಿಂದೆಯೇ ದುಷ್ಟತನವು ಅಡಗಿದೆ. ನಮಗೆ ಪೊಲೀಸರ ರಕ್ಷಣೆಯ ಅಗತ್ಯವಿದೆ. ಕೆಲವು ಮಂದಿ ಪೊಲೀಸ್‌ ಅಧಿಕಾರಿಗಳು ತೋರಿಸುವ ಪಾಶವೀಯತೆ, ಭ್ರಷ್ಟಾಚಾರ, ಉದಾಸೀನತೆ, ಹಾಗೂ ಅಧಿಕಾರದ ದುರುಪಯೋಗದ ಕುರಿತು ನಮ್ಮಲ್ಲಿ ಅನೇಕರು ಖಂಡಿತವಾಗಿಯೂ ಕೇಳಿಸಿಕೊಂಡಿದ್ದೇವೆ. ಈ ಘಟನೆಗಳ ತೀವ್ರತೆಯು ಕೆಲವು ದೇಶಗಳಿಗೆ ಹೋಲಿಸುವಾಗ ಇತರ ದೇಶಗಳಲ್ಲಿ ಹೆಚ್ಚಾಗಿರುತ್ತದೆ. ಆದರೂ, ಪೊಲೀಸರು ಇಲ್ಲದಿರುತ್ತಿದ್ದಲ್ಲಿ ನಾವೇನು ಮಾಡುತ್ತಿದ್ದೆವು? ಅನೇಕವೇಳೆ ಪೊಲೀಸರು ಅಮೂಲ್ಯವಾದ ಸೇವೆಯನ್ನು ಸಲ್ಲಿಸುತ್ತಾರೆ ಎಂಬುದು ನಿಜವಲ್ಲವೋ? ಎಚ್ಚರ! ಪತ್ರಿಕೆಯು, ಲೋಕದ ಬೇರೆ ಬೇರೆ ಭಾಗಗಳಲ್ಲಿರುವ ಕೆಲವು ಪೊಲೀಸ್‌ ಅಧಿಕಾರಿಗಳನ್ನು, ನೀವು ಏಕೆ ಈ ಜೀವನವೃತ್ತಿಯನ್ನು ಆಯ್ಕೆಮಾಡಿದ್ದೀರಿ ಎಂದು ಕೇಳಿತು.

ಒಂದು ಸಮುದಾಯದ ಮತ್ತು ಸಮಾಜದ ಸೇವೆ

ಒಬ್ಬ ಬ್ರಿಟಿಷ್‌ ಪೊಲೀಸ್‌ ಅಧಿಕಾರಿಯಾಗಿರುವ ಐವನ್‌ ಹೇಳಿದ್ದು: “ಜನರಿಗೆ ಸಹಾಯಮಾಡುವುದರಲ್ಲಿ ನಾನು ಸಂತೋಷವನ್ನು ಪಡೆಯುತ್ತೇನೆ. ನಾನು ಈ ಕೆಲಸದ ವೈವಿಧ್ಯದಿಂದ ಆಕರ್ಷಿತನಾದೆ. ಪೊಲೀಸ್‌ ಕೆಲಸದಲ್ಲಿ ದುಷ್ಕೃತ್ಯದ ಅಂಶವು ಕೇವಲ 20ರಿಂದ 30 ಪ್ರತಿಶತ ಮಾತ್ರ ಒಳಗೂಡಿರುತ್ತದೆ ಎಂಬುದನ್ನು ಸಾಮಾನ್ಯವಾಗಿ ಯಾರೂ ಗ್ರಹಿಸುವುದಿಲ್ಲ. ಈ ಕೆಲಸವು ಬಹುಮಟ್ಟಿಗೆ ಒಂದು ಸಮುದಾಯದ ಹಾಗೂ ಸಮಾಜದ ಸೇವೆಯಾಗಿದೆ. ನನ್ನ ಒಂದು ದಿನದ ಗಸ್ತು ತಿರುಗುವಿಕೆಯಲ್ಲಿ ನಾನು, ಒಂದು ಅನಿರೀಕ್ಷಿತ ಮರಣ, ಒಂದು ವಾಹನ ಅಪಘಾತ, ಒಂದು ದುಷ್ಕೃತ್ಯ ಮತ್ತು ತೊಂದರೆಗೊಳಗಾಗಿದ್ದು ಸಹಾಯದ ಅಗತ್ಯವಿರುವಂಥ ಒಬ್ಬ ವೃದ್ಧ ವ್ಯಕ್ತಿಗೆ ನೆರವಾಗುವಂಥ ಕೆಲಸಗಳನ್ನು ನೋಡಿಕೊಳ್ಳಬಲ್ಲೆ. ದಾರಿತಪ್ಪಿಹೋದ ಒಂದು ಮಗುವನ್ನು ಹಿಂದಿರುಗಿಸುವುದು ಅಥವಾ ದುಷ್ಕೃತ್ಯಕ್ಕೆ ಬಲಿಯಾದ ಒಬ್ಬ ವ್ಯಕ್ತಿಯು ಅವನ ಇಲ್ಲವೆ ಅವಳ ಮಾನಸಿಕ ಆಘಾತದಿಂದ ಚೇತರಿಸಿಕೊಳ್ಳುವಂತೆ ಸಹಾಯಮಾಡುವುದು ವಿಶೇಷವಾಗಿ ತೃಪ್ತಿದಾಯಕವಾಗಿರಸಾಧ್ಯವಿದೆ.”

ಸ್ಟೀವನ್‌, ಅಮೆರಿಕದ ಒಬ್ಬ ಮಾಜಿ ಪೊಲೀಸ್‌ ಅಧಿಕಾರಿಯಾಗಿದ್ದಾನೆ. ಅವನು ಹೇಳುವುದು: “ಜನರು ಸಹಾಯಕ್ಕಾಗಿ ಯಥಾರ್ಥ ಭಾವದಿಂದ ನಿಮ್ಮ ಬಳಿಗೆ ಬರುವಾಗ, ಒಬ್ಬ ಪೊಲೀಸ್‌ ಅಧಿಕಾರಿಯೋಪಾದಿ ಅವರಿಗೆ ಅಗತ್ಯವಿರುವ ಅತ್ಯುತ್ತಮ ಸಹಾಯವನ್ನು ನೀಡುವ ಸಾಮರ್ಥ್ಯ ಹಾಗೂ ಸಮಯವು ನಿಮಗಿರುತ್ತದೆ. ಇದೇ ನನ್ನನ್ನು ಈ ಉದ್ಯೋಗದ ಕಡೆಗೆ ಸೆಳೆಯಿತು. ನಾನು ಜನರಿಗೆ ಸಮಯಕ್ಕೆ ಸರಿಯಾಗಿ ಸಹಾಯಮಾಡಲು ಮತ್ತು ಅವರ ಭಾರವನ್ನು ಹೊರಲು ಬಯಸಿದೆ. ಕಡಿಮೆಪಕ್ಷ ಸ್ವಲ್ಪ ಮಟ್ಟಿಗೆ ಜನರನ್ನು ದುಷ್ಕೃತ್ಯದಿಂದ ಸಂರಕ್ಷಿಸುವುದರಲ್ಲಿ ಸಹಾಯಮಾಡಿದ್ದೇನೆ ಎಂದು ನನಗನಿಸುತ್ತದೆ. ಐದು ವರ್ಷಗಳಲ್ಲಿ ನಾನು 1,000 ಜನರನ್ನು ಬಂಧಿಸಿದೆ. ದಾರಿತಪ್ಪಿಹೋದ ಮಕ್ಕಳನ್ನು ಹುಡುಕುವುದು, ಆಲ್‌ಸೈಮರ್ಸ್‌ ರೋಗಿಗಳಿಗೆ ಸಹಾಯಮಾಡುವುದು, ಮತ್ತು ಕದಿಯಲ್ಪಟ್ಟ ವಾಹನಗಳನ್ನು ಮರಳಿಪಡೆಯುವಂಥ ಕೆಲಸಗಳು ನನಗೆ ಸಂತೃಪ್ತಿಯನ್ನು ತಂದಿವೆ. ಅಷ್ಟುಮಾತ್ರವಲ್ಲ, ಸಂಶಯಾಸ್ಪದ ವ್ಯಕ್ತಿಗಳನ್ನು ಬೆನ್ನಟ್ಟಿ ಹಿಡಿಯುವಾಗ ರೋಮಾಂಚನವೂ ಆಗುತ್ತದೆ.”

“ನಾನು ತುರ್ತುಪರಿಸ್ಥಿತಿಯಲ್ಲಿರುವ ಜನರಿಗೆ ಸಹಾಯಮಾಡಲು ಬಯಸಿದೆ” ಎಂದು ಬೊಲಿವಿಯದಲ್ಲಿನ ಒಬ್ಬ ಪೊಲೀಸ್‌ ಅಧಿಕಾರಿಯಾಗಿರುವ ರೋಬೆರ್ಟೋ ಹೇಳುತ್ತಾನೆ. “ಪೊಲೀಸರು ಜನರನ್ನು ಅಪಾಯದಿಂದ ಕಾಪಾಡುತ್ತಾರಾದ್ದರಿಂದ, ಒಬ್ಬ ಯುವಕನಾಗಿದ್ದಾಗ ನಾನು ಪೊಲೀಸರನ್ನು ತುಂಬ ಮೆಚ್ಚುತ್ತಿದ್ದೆ. ನನ್ನ ಜೀವನವೃತ್ತಿಯ ಆರಂಭದಲ್ಲಿ ನಾನು, ಸರಕಾರಿ ಆಫೀಸುಗಳು ಇರುವಂಥ ನಗರದ ಕೇಂದ್ರದಲ್ಲಿ ಗಸ್ತು ತಿರುಗುವುದಕ್ಕಾಗಿ ನಿಯಮಿತವಾದ ಕಾವಲು ದಳದ ಮೇಲ್ವಿಚಾರಕನಾಗಿದ್ದೆ. ಆದುದರಿಂದ ಹೆಚ್ಚುಕಡಿಮೆ ಪ್ರತಿ ದಿನ ನಾವು ರಾಜಕೀಯ ಪ್ರದರ್ಶನಗಳನ್ನು ನಿಭಾಯಿಸುತ್ತಿದ್ದೆವು. ಸನ್ನಿವೇಶಗಳು ಹಿಂಸಾತ್ಮಕ ಸ್ಥಿತಿಗೆ ತಲಪುವುದನ್ನು ತಡೆಯುವುದೇ ನನ್ನ ಕೆಲಸವಾಗಿತ್ತು. ನಾನು ಆ ಪ್ರದರ್ಶನಗಳ ಮುಖಂಡರೊಂದಿಗೆ ಸ್ನೇಹಭಾವದಿಂದ ಹಾಗೂ ವಿವೇಕಯುತವಾದ ರೀತಿಯಲ್ಲಿ ವ್ಯವಹರಿಸುವಲ್ಲಿ, ಅನೇಕ ಜನರಿಗೆ ಹಾನಿಯನ್ನು ಉಂಟುಮಾಡಬಹುದಾದ ಗಲಭೆಗಳನ್ನು ತಡೆಗಟ್ಟಸಾಧ್ಯವಿದೆ ಎಂಬುದನ್ನು ನಾನು ಕಂಡುಕೊಂಡೆ. ಇದು ನಿಜವಾಗಿಯೂ ಸಂತೃಪ್ತಿಕರವಾಗಿತ್ತು.”

ಪೊಲೀಸರು ಒದಗಿಸುವ ಸೇವೆಯ ಶ್ರೇಣಿಯು ವಿಸ್ತಾರವಾಗಿದೆ. ಅವರು ಒಂದು ಮರದಲ್ಲಿ ಸಿಕ್ಕಿಕೊಂಡಿದ್ದ ಬೆಕ್ಕೊಂದನ್ನು ರಕ್ಷಿಸುವಂಥ ಸನ್ನಿವೇಶಗಳಿಂದ ಹಿಡಿದು, ಭಯೋತ್ಪಾದಕರಿಂದ ಒತ್ತೆಯಾಳುಗಳನ್ನು ಬಿಡಿಸಿಕೊಂಡು ತರುವ ಹಾಗೂ ಬ್ಯಾಂಕ್‌ ದರೋಡೆಗಾರರನ್ನು ಎದುರಿಸುವ ತನಕದ ಸನ್ನಿವೇಶಗಳನ್ನು ನಿಭಾಯಿಸಿದ್ದಾರೆ. ಆದರೂ, ಆಧುನಿಕ ಪೊಲೀಸ್‌ ಪಡೆಗಳು ಆರಂಭವಾದಂದಿನಿಂದ, ಅವು ನಿರೀಕ್ಷೆಗಳ ಹಾಗೂ ಭಯಗಳ ಕೇಂದ್ರಬಿಂದುವಾಗಿ ಪರಿಣಮಿಸಿವೆ. ಏಕೆ ಎಂಬುದನ್ನು ಮುಂದಿನ ಲೇಖನವು ಪರಿಗಣಿಸುವುದು. (g02 7/8)

[ಪುಟ 2, 3ರಲ್ಲಿರುವ ಚಿತ್ರಗಳು]

2 ಮತ್ತು 3ನೇ ಪುಟಗಳು: ಚೀನಾದ ಚಂಗ್‌ಡುವಿನಲ್ಲಿ ವಾಹನ ಸಂಚಾರವನ್ನು ನಿರ್ದೇಶಿಸುತ್ತಿರುವುದು; ಗ್ರೀಸ್‌ ದೇಶದಲ್ಲಿ ಗಲಭೆಯನ್ನು ತಡೆಗಟ್ಟುವ ಪೊಲೀಸರು; ದಕ್ಷಿಣ ಆಫ್ರಿಕದಲ್ಲಿನ ಪೊಲೀಸ್‌ ಅಧಿಕಾರಿಗಳು

[ಕೃಪೆ]

Linda Enger/Index Stock Photography

[ಪುಟ 3ರಲ್ಲಿರುವ ಚಿತ್ರ]

ಇಸವಿ 2001ರ ಜುಲೈ ತಿಂಗಳಿನಲ್ಲಿ, ಬ್ರಸಿಲ್‌ನ ಸಾಲ್ವಡೋರ್‌ನಲ್ಲಿ ಪೊಲೀಸರ ಮುಷ್ಕರದ ಸಮಯದಲ್ಲಿ ಲೂಟಿಮಾಡಲ್ಪಟ್ಟ ಅಂಗಡಿ

[ಕೃಪೆ]

Manu Dias/Agência A Tarde

[ಪುಟ 4ರಲ್ಲಿರುವ ಚಿತ್ರ]

ಸ್ಟೀವನ್‌, ಅಮೆರಿಕ

[ಪುಟ 4ರಲ್ಲಿರುವ ಚಿತ್ರ]

ರೋಬೆರ್ಟೋ, ಬೊಲಿವಿಯ