ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೊಲೀಸರು ಅವರ ಭವಿಷ್ಯವೇನು?

ಪೊಲೀಸರು ಅವರ ಭವಿಷ್ಯವೇನು?

ಪೊಲೀಸರು ಅವರ ಭವಿಷ್ಯವೇನು?

ಪೊಲೀಸರು ಇಲ್ಲದಿರುತ್ತಿದ್ದರೆ ಬಹುಶಃ ಅರಾಜಕತೆಯಿರುತ್ತಿತ್ತು. ಈಗ ಪೊಲೀಸರಿರುವುದಾದರೂ ನಮ್ಮ ಲೋಕವು ಸುರಕ್ಷಿತವಾಗಿದೆಯೋ? ಇಂದು ಅನೇಕ ಗ್ರಾಮೀಣ ಕ್ಷೇತ್ರಗಳಲ್ಲಿರುವಂತೆಯೇ ಅನೇಕ ನಗರಗಳಲ್ಲೂ ಭದ್ರತೆಯ ಬಿಕ್ಕಟ್ಟಿನ ಅನಿಸಿಕೆಯಿದೆ. ವ್ಯವಸ್ಥಿತ ದುಷ್ಕೃತ್ಯದಿಂದ ಹಾಗೂ ಯಾವಾಗಲೂ ದುಷ್ಕೃತ್ಯಗಳನ್ನು ನಡೆಸುವವರಿಂದ ನಮ್ಮನ್ನು ಕಾಪಾಡುವಂತೆ ನಾವು ಪೊಲೀಸರಿಂದ ನಿರೀಕ್ಷಿಸಸಾಧ್ಯವಿದೆಯೋ? ಪೊಲೀಸರು ನಮ್ಮ ಬೀದಿಗಳನ್ನು ಸುರಕ್ಷಿತಗೊಳಿಸುವಂತೆ ನಾವು ನಿರೀಕ್ಷಿಸಸಾಧ್ಯವಿದೆಯೋ? ದುಷ್ಕೃತ್ಯದ ವಿರುದ್ಧವಾದ ಯುದ್ಧದಲ್ಲಿ ಅವರು ಜಯಗಳಿಸುವರೋ?

ಭವಿಷ್ಯತ್ತಿಗಾಗಿ ಪೊಲೀಸರು (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಡೇವಿಡ್‌ ಬೇಲೀಯವರು ಒಂದು ಅಭಿಪ್ರಾಯವನ್ನು ನೀಡುತ್ತಾರೆ: “ಪೊಲೀಸರು ದುಷ್ಕೃತ್ಯವನ್ನು ತಡೆಗಟ್ಟುವುದಿಲ್ಲ” ಎಂದು ಅವರು ಹೇಳುತ್ತಾರೆ. “ವಾಸ್ತವದಲ್ಲಿ ಪೊಲೀಸರು ಕ್ಯಾನ್ಸರ್‌ಗಾಗಿ ಕೇವಲ ಒಂದು ಬ್ಯಾಂಡ್‌-ಏಡ್‌ನಂತಿದ್ದಾರೆ. . . . ಪೊಲೀಸರು ಸಮಾಜವನ್ನು ದುಷ್ಕೃತ್ಯದಿಂದ ಕಾಪಾಡಲಿಕ್ಕಾಗಿಯೇ ಮೀಸಲಾಗಿರಿಸಲ್ಪಟ್ಟಿರುವುದಾದರೂ, ದುಷ್ಕೃತ್ಯವನ್ನು ತಡೆಗಟ್ಟಲಿಕ್ಕಾಗಿ ನಾವು ಅವರ ಮೇಲೆ ಸಂಪೂರ್ಣವಾಗಿ ಅವಲಂಬಿಸಸಾಧ್ಯವಿಲ್ಲ.” ಪೊಲೀಸರ ಮೂರು ಮುಖ್ಯ ಚಟುವಟಿಕೆಗಳು, ಅಂದರೆ ಬೀದಿಗಳಲ್ಲಿ ಗಸ್ತು ತಿರುಗುವುದು, ತುರ್ತುಕರೆಗಳಿಗೆ ಪ್ರತಿಕ್ರಿಯಿಸುವುದು, ಮತ್ತು ದುಷ್ಕೃತ್ಯಗಳ ವಿಚಾರಣೆ ನಡೆಸುವಂಥ ಕೆಲಸಗಳು ದುಷ್ಕೃತ್ಯವನ್ನು ತಡೆಗಟ್ಟುವುದಿಲ್ಲ ಎಂಬುದನ್ನು ಅಧ್ಯಯನಗಳು ತೋರಿಸಿವೆ. ಹಾಗೇಕೆ?

ಅತ್ಯಧಿಕ ಸಂಖ್ಯೆಯ ಪೊಲೀಸರ ಉಪಸ್ಥಿತಿಯ ಸಹಾಯದಿಂದ ದುಷ್ಕೃತ್ಯವನ್ನು ತಡೆಗಟ್ಟಲು ಪ್ರಯತ್ನಿಸುವುದು ಅತ್ಯಂತ ದುಬಾರಿಯಾಗಿರುವುದು. ಒಂದುವೇಳೆ ಭರಿಸಲು ಸಾಧ್ಯವಿದ್ದು, ಗಸ್ತು ತಿರುಗಲಿಕ್ಕಾಗಿರುವ ಪೊಲೀಸರ ಸಂಖ್ಯೆಯನ್ನು ಏರಿಸಿದರೂ, ಅದರಿಂದ ದುಷ್ಕರ್ಮಿಗಳು ಕಿಂಚಿತ್ತೂ ಹೆದರುವಂತೆ ತೋರಿಬರುವುದಿಲ್ಲ. ಪೊಲೀಸರಿಂದ ಸಿಗುವ ತ್ವರಿತಗತಿಯ ಪ್ರತಿಕ್ರಿಯೆಯೂ ಹೆಚ್ಚಿನ ದುಷ್ಕೃತ್ಯಕ್ಕೆ ತಡೆಯನ್ನೊಡ್ಡದು. ಒಂದು ದುಷ್ಕೃತ್ಯವು ನಡೆದ ಸ್ಥಳಕ್ಕೆ ತಾವು ಒಂದು ನಿಮಿಷದೊಳಗೆ ಆಗಮಿಸದಿದ್ದಲ್ಲಿ, ದುಷ್ಕರ್ಮಿಯನ್ನು ಹಿಡಿಯುವುದು ಅಸಂಭವನೀಯ ಎಂದು ಪೊಲೀಸರು ವರದಿಸಿದ್ದಾರೆ. ಅಂಥ ವೇಗದಲ್ಲಿ ತಲಪುವುದು ಅಪರೂಪದ ಸಂಗತಿ ಎಂಬುದನ್ನು ದುಷ್ಕರ್ಮಿಗಳು ಚೆನ್ನಾಗಿ ತಿಳಿದುಕೊಂಡಿರುವಂತೆ ತೋರುತ್ತದೆ. ಇದಲ್ಲದೆ ದುಷ್ಕರ್ಮಿಗಳ ವಿಚಾರಣೆಯು ಸಹ ಸಹಾಯಮಾಡುವುದಿಲ್ಲ. ಪತ್ತೇದಾರರು ಯಶಸ್ವಿಕರವಾಗಿ ದುಷ್ಕರ್ಮಿಗಳ ಅಪರಾಧವನ್ನು ರುಜುಪಡಿಸಿ, ಅವರನ್ನು ಸೆರೆಯಲ್ಲಿ ಹಾಕುವುದಾದರೂ, ಇದು ದುಷ್ಕೃತ್ಯವನ್ನು ತಡೆಗಟ್ಟಲಾರದು ಎಂಬುದು ಸುವ್ಯಕ್ತ. ಬೇರೆ ಯಾವುದೇ ದೇಶಕ್ಕಿಂತಲೂ ಹೆಚ್ಚಾಗಿ ಅಮೆರಿಕವು ದುಷ್ಕರ್ಮಿಗಳನ್ನು ಜೈಲಿನಲ್ಲಿ ಬಂಧಿಸಿಡುತ್ತದೆ, ಆದರೆ ಈಗಲೂ ಅಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದುಷ್ಕೃತ್ಯವು ನಡೆಯುತ್ತದೆ; ಅದೇ ಸಮಯದಲ್ಲಿ ಜಪಾನಿನಲ್ಲಿ ಕೆಲವೇ ಜನರು ಜೈಲಿಗೆ ಹಾಕಲ್ಪಡುವುದಾದರೂ ಅಲ್ಲಿ ಅತಿ ಕಡಿಮೆ ಪ್ರಮಾಣದ ದುಷ್ಕೃತ್ಯವು ನಡೆಸಲ್ಪಡುತ್ತದೆ. ನೆರೆಹೊರೆ ಕಾವಲಿನಂಥ ಯೋಜನೆಗಳು ಸಹ, ವಿಶೇಷವಾಗಿ ಅತಿ ಹೆಚ್ಚು ದುಷ್ಕೃತ್ಯವು ನಡೆಯುವ ಕ್ಷೇತ್ರಗಳಲ್ಲಿ ಶಾಶ್ವತವಾದ ಪರಿಣಾಮವನ್ನು ಬೀರುವವುಗಳಾಗಿ ಕಂಡುಬಂದಿಲ್ಲ. ಅಮಲೌಷಧ ವ್ಯಾಪಾರ ಅಥವಾ ಕಳ್ಳತನದಂಥ ನಿರ್ದಿಷ್ಟ ದುಷ್ಕೃತ್ಯದ ವಿರುದ್ಧ ಪ್ರಬಲವಾದ ಹಾಗೂ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವುದು, ಸ್ವಲ್ಪ ಸಮಯದ ವರೆಗೆ ಗಮನಾರ್ಹವಾದ ಪರಿಣಾಮವನ್ನು ಬೀರುತ್ತದಾದರೂ, ಆ ಪರಿಣಾಮಗಳನ್ನು ಮುಂದುವರಿಸಿಕೊಂಡು ಹೋಗುವುದೇ ತುಂಬ ಕಷ್ಟಕರವಾಗಿರುತ್ತದೆ.

“ಪೊಲೀಸರು ದುಷ್ಕೃತ್ಯವನ್ನು ತಡೆಗಟ್ಟಲು ಅಶಕ್ತರಾಗಿದ್ದಾರೆ ಎಂಬುದು ವಿವೇಚನಾಶೀಲ ಜನರಿಗೆ ತುಂಬ ಆಶ್ಚರ್ಯಗೊಳಿಸುವ ಸಂಗತಿಯಾಗಿರಬಾರದು” ಎಂದು ಭವಿಷ್ಯತ್ತಿಗಾಗಿ ಪೊಲೀಸರು ಎಂಬ ಪುಸ್ತಕವು ಹೇಳುತ್ತದೆ. “ಪೊಲೀಸರ ನಿಯಂತ್ರಣಕ್ಕೆ ಹಾಗೂ ಇಡೀ ಅಪರಾಧಿ ನ್ಯಾಯ ವ್ಯವಸ್ಥೆಯ ನಿಯಂತ್ರಣಕ್ಕೆ ಮೀರಿದ ಸಾಮಾಜಿಕ ಪರಿಸ್ಥಿತಿಗಳು, ಸಮುದಾಯಗಳಲ್ಲಿನ ದುಷ್ಕೃತ್ಯದ ಮಟ್ಟಗಳನ್ನು ನಿರ್ಧರಿಸುತ್ತವೆ ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ.”

ಪೊಲೀಸರು ಇಲ್ಲದಿರುತ್ತಿದ್ದರೆ ಏನಾಗುತ್ತಿತ್ತು?

ಪೊಲೀಸರು ನಿಮ್ಮನ್ನು ನೋಡದಿರುವ ಸಮಯದಲ್ಲಿ ನೀವು ಹೇಗೆ ವರ್ತಿಸುತ್ತೀರಿ? ನಿಯಮವನ್ನು ಉಲ್ಲಂಘಿಸಲಿಕ್ಕಾಗಿ ಅವರ ಅನುಪಸ್ಥಿತಿಯನ್ನು ದುರುಪಯೋಗಿಸುತ್ತೀರೋ? ಮಧ್ಯಮ ದರ್ಜೆ ಹಾಗೂ ಮೇಲ್‌ದರ್ಜೆಯ ಗೌರವಾನ್ವಿತ ಜನರೆಂದು ಕರೆಯಲ್ಪಡುವ ಅನೇಕರು, ಉನ್ನತ ಮಟ್ಟದ ದುಷ್ಕೃತ್ಯವನ್ನು ಮಾಡುವುದರ ಸಂಶಯಾಸ್ಪದ ಪ್ರಯೋಜನಗಳಿಗಾಗಿ ತಮ್ಮ ಹೆಸರನ್ನು ಹಾಗೂ ತಮ್ಮ ಭವಿಷ್ಯತ್ತನ್ನು ಹೇಗೆ ಅಪಾಯಕ್ಕೊಡ್ಡುತ್ತಾರೆ ಎಂಬುದನ್ನು ನೋಡುವುದು ಆಶ್ಚರ್ಯಕರವಾಗಿದೆ. ದ ನ್ಯೂ ಯಾರ್ಕ್‌ ಟೈಮ್ಸ್‌ ಪತ್ರಿಕೆಯು ಇತ್ತೀಚೆಗೆ ‘ಒಂದು ವಂಚನೆಯ ಹಂಚಿಕೆಯಲ್ಲಿ ಆಪಾದಿತರಾದ 112 ಮಂದಿಯ’ ಕುರಿತು ವರದಿಸಿತು. ‘ಆಟೋ ಇನ್ಸೂರೆನ್ಸ್‌ ಕಂಪೆನಿಗಳಿಗೆ ಮೋಸಮಾಡುವ ಹಂಚಿಕೆಯೊಂದರಲ್ಲಿ ಇವರು ಒಳಗೂಡಿದ್ದರೆಂದು ಹೇಳಲಾಗಿತ್ತು. ಆಪಾದನೆಯ ಪಟ್ಟಿಯಲ್ಲಿ ಸೇರಿದ್ದವರಲ್ಲಿ ವಕೀಲರು, ವೈದ್ಯರು, ಕಶೇರುಮರ್ದಕ ಚಿಕಿತ್ಸಕರು, ಶಾರೀರಿಕ ಚಿಕಿತ್ಸಕರು, ಸೂಜಿ ಚಿಕಿತ್ಸೆ ನೀಡುವವಳೊಬ್ಬಳು, ಮತ್ತು ಪೊಲೀಸ್‌ ಇಲಾಖೆಯ ಆಡಳಿತ ವಿಭಾಗದ ಸಹಾಯಕಿಯೊಬ್ಬಳು ಇದ್ದರು.’

ಇನ್ನೂ ಅಧಿಕ ಪ್ರಮಾಣದ ವಂಚನೆಯ ಇನ್ನೊಂದು ವಿದ್ಯಾಮಾನದಲ್ಲಿ, ನ್ಯೂ ಯಾರ್ಕ್‌ ನಗರದಲ್ಲಿರುವ ಸದೆಬಿ ಹರಾಜು ಸಂಸ್ಥೆ ಹಾಗೂ ಲಂಡನ್ನಿನಲ್ಲಿರುವ ಕ್ರಿಸ್ಟೀ ಸಂಸ್ಥೆಯ ಮಾಜಿ ಮುಖ್ಯ ಆಡಳಿತಗಾರರು ಬೆಲೆ ಒಪ್ಪಂದ (ಪ್ರೈಸ್‌ಫಿಕ್ಸಿಂಗ್‌)ವನ್ನು ಮಾಡಿರುವ ಆರೋಪಕ್ಕೊಳಗಾದಾಗ, ಇತ್ತೀಚೆಗೆ ಕಲಾ ಜಗತ್ತಿನ ಶ್ರೀಮಂತ ಆಶ್ರಯದಾತರೆಲ್ಲರಿಗೆ ಆಘಾತವಾಯಿತು. ಆ ಆಡಳಿತಗಾರರು ಮತ್ತು ಅವರ ಹರಾಜು ಸಂಸ್ಥೆಗಳು ಈಗ, ದಂಡಗಳು ಹಾಗೂ ನಷ್ಟಭರ್ತಿ ಧನದ ರೂಪದಲ್ಲಿ 84 ಕೋಟಿ 30 ಲಕ್ಷ ಡಾಲರುಗಳನ್ನು ಸಂದಾಯಮಾಡಬೇಕಾಗಿದೆ! ಹೀಗೆ, ಹಣಕ್ಕಾಗಿರುವ ತಣಿಸಲಾಗದ ದುರಾಸೆಯು ಸಮಾಜದ ಪ್ರತಿಯೊಂದು ಅಂತಸ್ತನ್ನು ತೂರಿಕೊಂಡು ಹೋಗುತ್ತದೆ.

ಬ್ರಸಿಲ್‌ನ ರಸೀಫ ನಗರದಲ್ಲಿ 1997ರಲ್ಲಿ ಪೊಲೀಸರು ಮುಷ್ಕರ ಹೂಡಿದಾಗ ಏನು ಸಂಭವಿಸಿತೋ ಅದು, ಅವರಿಗೆ ಅಡ್ಡಿಪಡಿಸುವಂಥದ್ದೇನೂ ಇಲ್ಲದಿರುವಾಗ ಅನೇಕರು ಸುಲಭವಾಗಿ ದುಷ್ಕೃತ್ಯವನ್ನು ಅವಲಂಬಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ಅವರಿಗಿರುವಂಥ ಯಾವುದೇ ಧಾರ್ಮಿಕ ನಿಶ್ಚಿತಾಭಿಪ್ರಾಯಗಳು ಅವರ ನಡತೆಯನ್ನು ಬಾಧಿಸವು. ಅವರು ಸುಲಭವಾದ ರೀತಿಯಲ್ಲಿ ನೈತಿಕತೆಯನ್ನು ಹಾಗೂ ಮೂಲತತ್ತ್ವಗಳನ್ನು ದುರ್ಬಲಗೊಳಿಸಬಲ್ಲರು ಅಥವಾ ತೊರೆಯಬಲ್ಲರು. ಅಧಿಕಾಂಶ ದೇಶಗಳಲ್ಲಿರುವ ಪೊಲೀಸರು, ಚಿಕ್ಕಪುಟ್ಟ ವಿಷಯಗಳಲ್ಲಿ ಅಥವಾ ದೊಡ್ಡ ದೊಡ್ಡ ವಿಷಯಗಳಲ್ಲಿ ನಿಯಮರಾಹಿತ್ಯದ ಪ್ರವೃತ್ತಿಯಿರುವ ಒಂದು ಲೋಕದಲ್ಲಿ, ತಾವು ಗೆಲುವನ್ನು ಪಡೆಯಲು ಅಸಮರ್ಥರಾಗಿರುವಂಥ ಒಂದು ಕದನದಲ್ಲಿ ಹೋರಾಡುತ್ತಿದ್ದಾರೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ.

ಇನ್ನೊಂದು ಕಡೆಯಲ್ಲಿ, ಕೆಲವು ಜನರು ಅಧಿಕಾರಕ್ಕೆ ಗೌರವವನ್ನು ತೋರಿಸುವ ಕಾರಣದಿಂದ ನಿಯಮಗಳಿಗೆ ವಿಧೇಯರಾಗುತ್ತಾರೆ. ಅಪೊಸ್ತಲ ಪೌಲನು ರೋಮಾಪುರದಲ್ಲಿದ್ದ ಕ್ರೈಸ್ತರಿಗೆ, ಅಸ್ತಿತ್ವದಲ್ಲಿರುವಂತೆ ದೇವರು ಅನುಮತಿಸುವ ಅಧಿಕಾರಿಗಳಿಗೆ ಅಧೀನತೆಯನ್ನು ತೋರಿಸಬೇಕೆಂದು ಹೇಳಿದನು. ಏಕೆಂದರೆ ಇವರು ಸಮಾಜದಲ್ಲಿ ಸ್ವಲ್ಪ ಮಟ್ಟಿಗಾದರೂ ಸುವ್ಯವಸ್ಥೆಯನ್ನು ಕಾಪಾಡಿಕೊಂಡುಹೋಗುತ್ತಾರೆ. ಅಂಥ ಅಧಿಕಾರದ ಕುರಿತು ಅವನು ಬರೆದುದು: “ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ನಡಿಸುವವನಿಗೆ ದೇವರ ದಂಡನೆಯನ್ನು ವಿಧಿಸುತ್ತಾನೆ. ಆದಕಾರಣ ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಿಗೆ ನ್ಯಾಯವಾಗಿ ತೋರುವದರಿಂದಲೂ ಅವನಿಗೆ ಅಧೀನನಾಗುವದು ಅವಶ್ಯ.”​—⁠ರೋಮಾಪುರ 13:​4, 5.

ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳು

ಸಾಮಾಜಿಕ ಪರಿಸ್ಥಿತಿಗಳನ್ನು ಉತ್ತಮಗೊಳಿಸುವುದರಲ್ಲಿ ಪೊಲೀಸರ ಕೆಲಸವು ನಿಶ್ಚಯವಾಗಿಯೂ ಸ್ವಲ್ಪಮಟ್ಟಿಗಿನ ಪರಿಣಾಮವನ್ನು ಬೀರುತ್ತದೆ. ಬೀದಿಗಳು ಕಾನೂನುಬಾಹಿರ ಅಮಲೌಷಧಗಳು ಮತ್ತು ಹಿಂಸಾಚಾರದಿಂದ ಸಂಪೂರ್ಣವಾಗಿ ಮುಕ್ತವಾಗಿರುವಾಗ, ಜನರು ಸಮುದಾಯದ ಪ್ರಗತಿಪರ ಹೆಸರಿಗನುಸಾರ ಜೀವಿಸುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಆದರೆ ಸಮಾಜವನ್ನು ಬದಲಾಯಿಸುವುದು ಹಾಗೂ ಉತ್ತಮಗೊಳಿಸುವುದು, ಯಾವುದೇ ಪೊಲೀಸ್‌ ಪಡೆಯ ಸಾಮರ್ಥ್ಯಕ್ಕೆ ಮೀರಿದಂಥ ಕೆಲಸವಾಗಿದೆ.

ಪೊಲೀಸರ ಆವಶ್ಯಕತೆಯೇ ಇಲ್ಲದಿರುವಷ್ಟರ ಮಟ್ಟಿಗೆ ಜನರು ನಿಯಮಗಳನ್ನು ಗೌರವಿಸುತ್ತಿರುವ ಒಂದು ಸಮಾಜದ ಕುರಿತು ನೀವು ಕಲ್ಪಿಸಿಕೊಳ್ಳಬಲ್ಲಿರೋ? ನೆರೆಯವರು ಯಾವಾಗಲೂ ಸಹಾಯಮಾಡಲು ಮನಃಪೂರ್ವಕವಾಗಿ ಸಿದ್ಧರಿರುವ ಹಾಗೂ ಯಾರೊಬ್ಬರೂ ಸಹಾಯಕ್ಕಾಗಿ ಪೊಲೀಸರ ಮರೆಹೋಗದಿರುವ ರೀತಿಯಲ್ಲಿ ಒಬ್ಬರು ಇನ್ನೊಬ್ಬರಿಗಾಗಿ ಚಿಂತೆಯನ್ನು ವ್ಯಕ್ತಪಡಿಸುವಂಥ ಜನರು ಇರುವ ಒಂದು ಲೋಕವನ್ನು ನೀವು ಚಿತ್ರಿಸಿಕೊಳ್ಳಬಲ್ಲಿರೋ? ಬಹುಶಃ ಇದು ಭ್ರಮೆಯಾಗಿ ಧ್ವನಿಸಬಹುದು. ಆದರೆ ಯೇಸುವಿನ ಈ ಮಾತುಗಳು ಇನ್ನೊಂದು ಪೂರ್ವಾಪರ ಸಂದರ್ಭದಲ್ಲಿ ತಿಳಿಸಲ್ಪಟ್ಟಿದ್ದವಾದರೂ, ಖಂಡಿತವಾಗಿಯೂ ಇಲ್ಲಿಯೂ ಅನ್ವಯವಾಗುತ್ತವೆ. ಅವನು ಹೇಳಿದ್ದು: “ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವು ಸಾಧ್ಯವೇ.”​—⁠ಮತ್ತಾಯ 19:⁠26.

ಸರ್ವ ಮಾನವಕುಲವು ಯೆಹೋವ ದೇವರಿಂದ ಸ್ಥಾಪಿಸಲ್ಪಟ್ಟ ಒಂದು ಸರಕಾರದ ಪ್ರಜೆಗಳಾಗಿ ಜೀವಿಸುವಂಥ ಒಂದು ಭವಿಷ್ಯತ್ತಿನ ಸಮಯದ ಕುರಿತು ಬೈಬಲು ವರ್ಣಿಸುತ್ತದೆ. ‘ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು . . . ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡುವುದು.’ (ದಾನಿಯೇಲ 2:44) ಎಲ್ಲ ಪ್ರಾಮಾಣಿಕ ಜನರಿಗೆ ದೇವರ ಪ್ರೀತಿಯ ಮಾರ್ಗದಲ್ಲಿ ಶಿಕ್ಷಣ ನೀಡುವ ಮೂಲಕ, ಈ ಹೊಸ ಸರಕಾರವು ದುಷ್ಕೃತ್ಯವನ್ನು ಉಂಟುಮಾಡುವ ಸಾಮಾಜಿಕ ಪರಿಸ್ಥಿತಿಗಳನ್ನೇ ಬದಲಾಯಿಸಿಬಿಡುವುದು. “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:⁠9) ಯೆಹೋವನು ನೇಮಿಸಿದ ಅರಸನಾಗಿರುವ ಯೇಸು ಕ್ರಿಸ್ತನು ಸರ್ವ ದುಷ್ಕೃತ್ಯವನ್ನೂ ತಡೆಗಟ್ಟಲು ಸಮರ್ಥನಾಗಿರುವನು. “ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡುವದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವದಿಲ್ಲ; ಬಡವರಿಗೋಸ್ಕರ ನ್ಯಾಯವಾಗಿ ತೀರ್ಪುಮಾಡುವನು, ಲೋಕದ ದೀನರಿಗೋಸ್ಕರ ಧರ್ಮವಾಗಿ ನಿರ್ಣಯಿಸುವನು.”​—⁠ಯೆಶಾಯ 11:​3, 4.

ಅಲ್ಲಿ ದುಷ್ಕರ್ಮಿಗಳೂ ಇರುವುದಿಲ್ಲ, ದುಷ್ಕೃತ್ಯವೂ ಇರುವುದಿಲ್ಲ. ಪೊಲೀಸರ ಅಗತ್ಯವೂ ಇರುವುದಿಲ್ಲ. ಪ್ರತಿಯೊಬ್ಬರೂ ‘ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವರು; ಅವರನ್ನು ಯಾರೂ ಹೆದರಿಸರು.’ (ಮೀಕ 4:⁠4) ಒಂದುವೇಳೆ ನೀವು ಬೈಬಲಿನಲ್ಲಿ ವರ್ಣಿಸಲ್ಪಟ್ಟಿರುವ ಆ ‘ನೂತನಭೂಮಂಡಲದ’ ಭಾಗವಾಗಿರಲು ಬಯಸುವುದಾದರೆ, ತನ್ನ ವಾಕ್ಯದಲ್ಲಿ ದೇವರು ಏನನ್ನು ವಾಗ್ದಾನಿಸಿದ್ದಾನೊ ಅದರ ಬಗ್ಗೆ ವಿಚಾರಿಸಿ ತಿಳಿದುಕೊಳ್ಳಲು ಸೂಕ್ತ ಸಮಯವು ಇದೇ ಆಗಿದೆ.​—⁠2 ಪೇತ್ರ 3:⁠13. (g02 7/8)

[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]

ಪೊಲೀಸರ ಆವಶ್ಯಕತೆಯೇ ಇಲ್ಲದಿರುವಷ್ಟರ ಮಟ್ಟಿಗೆ ಜನರು ನಿಯಮಗಳನ್ನು ಗೌರವಿಸುತ್ತಿರುವ ಒಂದು ಸಮಾಜದ ಕುರಿತು ನೀವು ಕಲ್ಪಿಸಿಕೊಳ್ಳಬಲ್ಲಿರೋ?

[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]

ಅಲ್ಲಿ ದುಷ್ಕರ್ಮಿಗಳೂ ಇರುವುದಿಲ್ಲ, ದುಷ್ಕೃತ್ಯವೂ ಇರುವುದಿಲ್ಲ

[ಪುಟ 11ರಲ್ಲಿರುವ ಚೌಕ/ಚಿತ್ರ]

ಪೊಲೀಸರಿಗೆ ವಿರುದ್ಧವಾಗಿ ಭಯೋತ್ಪಾದಕರು

ನ್ಯೂ ಯಾರ್ಕ್‌ ಸಿಟಿಯಲ್ಲಿ ಹಾಗೂ ವಾಷಿಂಗ್ಟನ್‌, ಡಿ.ಸಿ.ಯಲ್ಲಿ, 2001ರ ಸೆಪ್ಟೆಂಬರ್‌ 11ರಂದು ನಡೆದ ಘಟನೆಗಳು ಉದಾಹರಿಸಿದಂತೆ, ಅಪಹರಣಕಾರರು, ಒತ್ತೆಯಾಳುಗಳನ್ನು ಕೊಂಡೊಯ್ಯುವವರು, ಮತ್ತು ಭಯೋತ್ಪಾದಕರು, ಸಾರ್ವಜನಿಕರನ್ನು ಸಂರಕ್ಷಿಸುವುದರಲ್ಲಿ ಪೊಲೀಸರಿಗೆ ಅತ್ಯಂತ ಕಷ್ಟಕರ ಪಂಥಾಹ್ವಾನಗಳನ್ನು ಒಡ್ಡುತ್ತಾರೆ. ಲೋಕದ ಅನೇಕ ಭಾಗಗಳಲ್ಲಿ, ನಿಲ್ಲಿಸಲ್ಪಟ್ಟಿರುವ ವಿಮಾನಗಳನ್ನು ಕ್ಷಿಪ್ರವಾಗಿ ಪ್ರವೇಶಿಸಿ, ನಿಯಂತ್ರಣವನ್ನು ಪಡೆದುಕೊಳ್ಳಲು ವಿಶೇಷ ಪಡೆಗಳು ತರಬೇತುಗೊಳಿಸಲ್ಪಟ್ಟಿವೆ. ಅವರು ಛಾವಣಿಯಿಂದ ಹಗ್ಗಗಳನ್ನು ಇಳಿಸಿ ಕೆಳಗಿಳಿಯುವ ಮೂಲಕ, ಕಿಟಕಿಗಳಿಂದ ಜಿಗಿಯುವ ಮೂಲಕ, ಮತ್ತು ತಾತ್ಕಾಲಿಕವಾಗಿ ಆಘಾತವನ್ನು ಉಂಟುಮಾಡುವಂಥ ಕೈಬಾಂಬುಗಳನ್ನು ಹಾಗೂ ಕಣ್ಣೀರು ಬರಿಸುವ ವಿಶಾನಿಲದ ಸಣ್ಣ ಡಬ್ಬಿಗಳನ್ನು ಉಪಯೋಗಿಸುವ ಮೂಲಕ, ಹಠಾತ್ತನೆ ಕಟ್ಟಡಗಳನ್ನು ಪ್ರವೇಶಿಸುವ ಕೌಶಲಗಳನ್ನೂ ಕಲಿತಿದ್ದಾರೆ. ಅಂಥ ತರಬೇತಿ ಪಡೆದಿರುವ ಅಧಿಕಾರಿಗಳು ಅನೇಕವೇಳೆ ಒತ್ತೆಯಾಳುಗಳಿಗೆ ಕನಿಷ್ಠ ಮಟ್ಟದ ಅಪಾಯದೊಂದಿಗೆ ಮುನ್ನೆಚ್ಚರಿಕೆ ಕೊಡದೆ ಭಯೋತ್ಪಾದಕರ ಮೇಲೆ ಬಿದ್ದು ಅವರನ್ನು ಜಯಿಸುವುದರಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ.

[ಕೃಪೆ]

James R. Tourtellotte/U.S. Customs Service

[ಪುಟ 12ರಲ್ಲಿರುವ ಚಿತ್ರ]

ದೇವರ ಹೊಸ ಲೋಕದಲ್ಲಿ ಇನ್ನೆಂದಿಗೂ ಅಗತ್ಯವಿಲ್ಲದಿರುವಂಥ ವಸ್ತುಗಳು