ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೊಲೀಸ್‌ ಸಂರಕ್ಷಣೆ ನಿರೀಕ್ಷೆಗಳು ಮತ್ತು ಭಯಗಳು

ಪೊಲೀಸ್‌ ಸಂರಕ್ಷಣೆ ನಿರೀಕ್ಷೆಗಳು ಮತ್ತು ಭಯಗಳು

ಪೊಲೀಸ್‌ ಸಂರಕ್ಷಣೆ ನಿರೀಕ್ಷೆಗಳು ಮತ್ತು ಭಯಗಳು

ತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಇಂಗ್ಲೆಂಡಿನ ಅನೇಕ ಜನರು, ವೃತ್ತಿಪರ, ಸಮವಸ್ತ್ರಧಾರಿ ಪೊಲೀಸು ದಳವನ್ನು ಹೊಂದುವುದಕ್ಕಾಗಿ ಮಾಡಲ್ಪಟ್ಟ ಪ್ರಸ್ತಾಪವನ್ನು ಪ್ರತಿಭಟಿಸಿದರು. ಕೇಂದ್ರ ಸರಕಾರದ ಅಧೀನದಲ್ಲಿರುವ ಒಂದು ಶಸ್ತ್ರಸಜ್ಜಿತ ದಳವು ತಮ್ಮ ಸ್ವಾತಂತ್ರ್ಯಕ್ಕೆ ಬೆದರಿಕೆಯನ್ನೊಡ್ಡಬಹುದು ಎಂಬ ಭಯ ಅವರಿಗಿತ್ತು. ಜೋಸಫ್‌ ಫೂಶೇಯ ಅಧಿಕಾರದ ಕೆಳಗೆ ಫ್ರೆಂಚ್‌ ಪೊಲೀಸ್‌ ಗೂಢಚಾರರು ಇದ್ದಂತೆಯೇ ಇಲ್ಲಿಯೂ ಪೊಲೀಸ್‌ ಗೂಢಚಾರರ ವ್ಯವಸ್ಥೆಯು ಕಾಲಕ್ರಮೇಣ ಜಾರಿಗೆ ಬರಬಹುದೇನೋ ಎಂದು ಕೆಲವರು ಹೆದರಿದ್ದರು. ಆದರೂ, ‘ಪೊಲೀಸ್‌ ದಳವಿಲ್ಲದಿದ್ದರೆ ನಾವೇನು ಮಾಡುವೆವು?’ ಎಂಬ ಪ್ರಶ್ನೆಯನ್ನು ಸ್ವತಃ ಕೇಳಿಕೊಳ್ಳುವಂತೆ ಅವರು ಒತ್ತಾಯಿಸಲ್ಪಟ್ಟರು.

ಲಂಡನ್‌ ನಗರವು ಜಗತ್ತಿನಲ್ಲೇ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ನಗರವಾಗಿ ಪರಿಣಮಿಸಿತ್ತು; ದುಷ್ಕೃತ್ಯವು ದಿನೇ ದಿನೇ ಹೆಚ್ಚುತ್ತಿದ್ದು, ವ್ಯಾಪಾರಕ್ಕೆ ಬೆದರಿಕೆಯನ್ನೊಡ್ಡುತ್ತಿತ್ತು. ಒಬ್ಬ ಸ್ವಯಂಸೇವಕ ಕಾವಲುಗಾರನಾಗಲಿ, ಬೋ ಸ್ಟ್ರೀಟ್‌ ರನ್ನರ್ಸ್‌ ಎಂಬ ಪತ್ತೇದಾರರ ಖಾಸಗಿ ಸಂಸ್ಥೆಯ ಕಳ್ಳರನ್ನು ಹಿಡಿಯುವ ವೃತ್ತಿಪರರಾಗಲಿ, ಜನರನ್ನು ಹಾಗೂ ಅವರ ಸೊತ್ತುಗಳನ್ನು ಸಂರಕ್ಷಿಸಲು ಶಕ್ತರಾಗಿರಲಿಲ್ಲ. ಇಂಗ್ಲಿಷ್‌ ಪೊಲೀಸ್‌: ಒಂದು ರಾಜಕೀಯ ಹಾಗೂ ಸಮಾಜಿಕ ಇತಿಹಾಸ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಕ್ಲೈವ್‌ ಎಮ್‌ಸ್ಲೀ ಹೇಳುವುದು: “ದುಷ್ಕೃತ್ಯ ಹಾಗೂ ಅವ್ಯವಸ್ಥೆಯನ್ನು, ಸುಸಂಸ್ಕೃತ ಸಮಾಜದಲ್ಲಿ ಅಸ್ತಿತ್ವದಲ್ಲಿರಬಾರದಂಥ ವಿಷಯವೆಂದು ಹೆಚ್ಚಾಗಿ ಪರಿಗಣಿಸಲಾರಂಭಿಸಲಾಗಿತ್ತು. ಆದುದರಿಂದಲೇ ಲಂಡನ್ನಿನ ಜನರು ಒಳಿತನ್ನು ನಿರೀಕ್ಷಿಸುತ್ತಾ, ಸರ್‌ ರಾಬರ್ಟ್‌ ಪೀಲ್‌ನ ಮಾರ್ಗದರ್ಶನದ ಕೆಳಗೆ ಒಂದು ವೃತ್ತಿಪರ ಪೊಲೀಸ್‌ ದಳವನ್ನು ಇಟ್ಟುಕೊಳ್ಳಲು ನಿರ್ಧರಿಸಿದರು. * 1829ರ ಸೆಪ್ಟೆಂಬರ್‌ ತಿಂಗಳಿನಲ್ಲಿ, ಮೆಟ್ರೊಪಾಲಿಟನ್‌ ಪೊಲೀಸರ ಸಮವಸ್ತ್ರಧಾರಿ ಕಾನ್ಸ್‌ಟೇಬಲ್‌ಗಳು ತಮ್ಮ ಸರಹದ್ದಿನಲ್ಲಿ ಗಸ್ತು ತಿರುಗಲು ಆರಂಭಿಸಿದರು.

ಪೊಲೀಸರ ಆಧುನಿಕ ಇತಿಹಾಸದ ಆರಂಭದಿಂದಲೂ, ಅವರ ಕುರಿತಾದ ವಿಷಯವು ನಿರೀಕ್ಷೆ ಹಾಗೂ ಭಯದ ವಾದಾಂಶಗಳನ್ನು ಎಬ್ಬಿಸಿದೆ​—⁠ಅವರು ಭದ್ರತೆಯನ್ನು ಒದಗಿಸುತ್ತಾರೆ ಎಂಬ ನಿರೀಕ್ಷೆಯನ್ನು ಮತ್ತು ಅವರು ತಮ್ಮ ಅಧಿಕಾರವನ್ನು ದುರುಪಯೋಗಿಸಬಹುದು ಎಂಬ ಭಯವನ್ನು ಮೂಡಿಸಿದೆ.

ಅಮೆರಿಕದ ಪೊಲೀಸರ (ಕಾಪ್‌ಗಳ) ಆರಂಭ

ಅಮೆರಿಕದಲ್ಲಿ, ಒಂದು ವೃತ್ತಿಪರ ಪೊಲೀಸ್‌ ದಳವನ್ನು ಸ್ವೀಕರಿಸಿದಂಥ ಪ್ರಪ್ರಥಮ ನಗರವು ನ್ಯೂ ಯಾರ್ಕ್‌ ಸಿಟಿಯಾಗಿತ್ತು. ಆ ನಗರದ ಧನವು ಹೆಚ್ಚಿದಂತೆ, ಅಲ್ಲಿನ ದುಷ್ಕೃತ್ಯವೂ ಹೆಚ್ಚಿತು. 1830ರ ದಶಕದಷ್ಟಕ್ಕೆ, ಹೊಸದಾಗಿ ಪ್ರಕಾಶಿಸಲ್ಪಡುತ್ತಿದ್ದ ಪೆನಿ ಪ್ರೆಸ್‌ಗಳೆಂದು ಪ್ರಸಿದ್ಧವಾಗಿದ್ದ ಕಡಿಮೆ ಬೆಲೆಯ ವಾರ್ತಾಪತ್ರಿಕೆಗಳಲ್ಲಿ ಮುದ್ರಿಸಲ್ಪಡುತ್ತಿದ್ದ ದುಷ್ಕೃತ್ಯದ ಕುರಿತಾದ ಭೀಕರ ಕಥೆಗಳನ್ನು ಪ್ರತಿಯೊಂದು ಕುಟುಂಬವು ಓದಸಾಧ್ಯವಿತ್ತು. ಆಗ ಸಾರ್ವಜನಿಕರ ಗೋಳಾಟವು ಮುಗಿಲುಮುಟ್ಟಿತ್ತು, ಮತ್ತು 1845ರಲ್ಲಿ ನ್ಯೂ ಯಾರ್ಕ್‌ ನಗರವು ಪೊಲೀಸ್‌ ಪಡೆಯನ್ನು ಪಡೆಯಿತು. ಅಂದಿನಿಂದ ನ್ಯೂ ಯಾರ್ಕಿನವರು ಮತ್ತು ಲಂಡನ್ನಿನವರು, ಪರಸ್ಪರ ಪೊಲೀಸು ಪಡೆಗಳಿಂದ ಮಂತ್ರಮುಗ್ಧರಾಗಿದ್ದಾರೆ.

ಸರಕಾರದ ಕೈಕೆಳಗಿನ ಶಸ್ತ್ರಸಜ್ಜಿತ ಪೊಲೀಸು ದಳಗಳ ಕುರಿತು ಆಂಗ್ಲರಿಗೆ ಇದ್ದ ಭಯವು ಅಮೆರಿಕದವರಿಗೂ ಇತ್ತು. ಆದರೆ ಎರಡೂ ರಾಷ್ಟ್ರಗಳು ಬೇರೆ ಬೇರೆ ಪರಿಹಾರಗಳನ್ನು ಕಂಡುಕೊಂಡವು. ಆಂಗ್ಲರು ಉದ್ದವಾದ ಟೋಪಿಗಳಿದ್ದು, ಕಡುನೀಲಿ ಬಣ್ಣದ ಸಮವಸ್ತ್ರಗಳನ್ನು ಧರಿಸುವ ಮಹಾಶಯರ ದಳವನ್ನು ಆಯ್ಕೆಮಾಡಿದರು. ಅವರ ಬಳಿಯಿದ್ದ ಏಕಮಾತ್ರ ಆಯುಧವು ಮರೆಯಾಗಿ ಇಟ್ಟುಕೊಳ್ಳುವಂಥ ಒಂದು ಮೋಟುದೊಣ್ಣೆಯಾಗಿತ್ತು. ಇಂದಿನ ವರೆಗೂ ಬ್ರಿಟಿಷ್‌ ಬಾಬಿಗಳು ತುರ್ತುಪರಿಸ್ಥಿತಿಗಳನ್ನು ಬಿಟ್ಟರೆ ಬೇರೆ ಯಾವ ಸಮಯದಲ್ಲೂ ಬಂದೂಕುಗಳನ್ನು ಕೊಂಡೊಯ್ಯುವುದಿಲ್ಲ. ಆದರೂ, ಒಂದು ವರದಿಯು ತಿಳಿಸುವಂತೆ, “ಕಾಲಕಳೆದಂತೆ ಬ್ರಿಟಿಷ್‌ ಪೊಲೀಸರು ಖಂಡಿತವಾಗಿಯೂ ಪೂರ್ಣ ಶಸ್ತ್ರಸಜ್ಜಿತ ದಳವಾಗಿ ಪರಿಣಮಿಸುವರು . . . ಎಂಬ ಅನಿವಾರ್ಯ ಅನಿಸಿಕೆ ಬೆಳೆಯುತ್ತಿದೆ.”

ಆದರೆ ಅಮೆರಿಕದಲ್ಲಿ, ಸರಕಾರದ ಅಧಿಕಾರವು ದುರುಪಯೋಗಿಸಲ್ಪಡಬಹುದು ಎಂಬ ಭಯವು, ಅಮೆರಿಕದ ಸಂವಿಧಾನವು ಎರಡನೆಯ ತಿದ್ದುಪಡಿಯನ್ನು ಸ್ವೀಕರಿಸುವಂತೆ ಮಾಡಿದೆ. ಆ ತಿದ್ದುಪಡಿಯು, “ಆಯುಧಗಳನ್ನು ಹೊಂದಿರುವ ಮತ್ತು ಕೊಂಡೊಯ್ಯುವ ಜನರ ಹಕ್ಕುಗಳ” ಖಾತ್ರಿನೀಡುತ್ತದೆ. ಇದರ ಫಲಿತಾಂಶವಾಗಿ ಪೊಲೀಸರು ಸಹ ಬಂದೂಕುಗಳನ್ನು ಇಟ್ಟುಕೊಳ್ಳಲು ಬಯಸಿದರು. ಸಕಾಲದಲ್ಲಿ, ಅವರ ಬಂದೂಕುಗಳ ಉಪಯೋಗವು ಬೀದಿಗಳಲ್ಲಿನ ಗುಂಡುಹಾರಿಸುವಿಕೆಗಳಲ್ಲಿ ಫಲಿಸಿದ್ದು, ಇದು ಅಮೆರಿಕದ ಪೊಲೀಸರ ಮತ್ತು ಕಳ್ಳರ ವೈಶಿಷ್ಟ್ಯವಾಗಿ ಪರಿಣಮಿಸಿದೆ​—⁠ಕಡಿಮೆಪಕ್ಷ ಜನಪ್ರಿಯ ಕಲ್ಪನೆಯು ಇದಾಗಿದೆ. ಬಂದೂಕುಗಳನ್ನು ಕೊಂಡೊಯ್ಯುವುದರ ಕಡೆಗೆ ಅಮೆರಿಕದವರಿಗಿರುವ ಮನೋಭಾವಕ್ಕೆ ಇನ್ನೊಂದು ಕಾರಣವೇನೆಂದರೆ, ಅಮೆರಿಕದಲ್ಲಿನ ಪ್ರಪ್ರಥಮ ಪೊಲೀಸ್‌ ದಳವು ಲಂಡನ್ನಿನ ಪೊಲೀಸು ದಳಕ್ಕಿಂತಲೂ ತೀರ ಭಿನ್ನವಾದಂಥ ಒಂದು ಸಮಾಜದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ನ್ಯೂ ಯಾರ್ಕ್‌ ನಗರದ ಜನಸಂಖ್ಯೆಯು ಅಣಬೆಗಳಂತೆ ತೀವ್ರಗತಿಯಿಂದ ವೃದ್ಧಿಯಾಗುತ್ತಾ ಹೋದುದರಿಂದ, ಅದು ಸಂಪೂರ್ಣವಾಗಿ ಅವ್ಯವಸ್ಥಿತವಾದ ನಗರವಾಗಿ ಪರಿಣಮಿಸಿತ್ತು. ಮುಖ್ಯವಾಗಿ ಯೂರೋಪಿನಿಂದ ಹಾಗೂ 1861-65ರ ಆಂತರಿಕ ಯುದ್ಧವು ಆರಂಭವಾದ ಬಳಿಕ ಆಫ್ರೋ-ಅಮೆರಿಕದಿಂದ ಬಂದ ಸಾವಿರಾರು ವಲಸಿಗರ ಆಗಮನವು, ಕುಲಸಂಬಂಧಿತ ಹಿಂಸಾಚಾರಕ್ಕೆ ನಡೆಸಿತು. ಇದರಿಂದಾಗಿ, ತಾವು ಹೆಚ್ಚು ಕಠಿನ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಪೊಲೀಸರಿಗೆ ಅನಿಸಿತು.

ಆದುದರಿಂದ, ಪೊಲೀಸರನ್ನು ಅನೇಕವೇಳೆ ಅನಿವಾರ್ಯ ಕೆಡುಕಾಗಿ ಪರಿಗಣಿಸಲಾಯಿತು. ಸ್ವಲ್ಪ ಮಟ್ಟಿಗಿನ ಸುವ್ಯವಸ್ಥೆ ಹಾಗೂ ಭದ್ರತೆಯನ್ನು ಪಡೆಯುವ ನಿರೀಕ್ಷೆಯಲ್ಲಿ ಜನರು ಅಲ್ಲಲ್ಲಿ ಕೆಲವು ದೌರ್ಜನ್ಯಗಳನ್ನು ಸಹಿಸಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿದ್ದರು. ಆದರೂ, ಲೋಕದ ಕೆಲವು ಭಾಗಗಳಲ್ಲಿ ತೀರ ಭಿನ್ನವಾದ ಇನ್ನೊಂದು ಪೊಲೀಸ್‌ ಪಡೆಯು ಉದಯಿಸುತ್ತಿತ್ತು.

ಭೀತಿಹುಟ್ಟಿಸುವ ಪೊಲೀಸರು

ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ, ಆಧುನಿಕ ಪೊಲೀಸ್‌ ಪಡೆಗಳು ವಿಕಸಿಸುತ್ತಿರುವಾಗ, ಮಾನವಕುಲದ ಅಧಿಕಾಂಶ ಜನರು ಯೂರೋಪಿಯನ್‌ ಸಾಮ್ರಾಜ್ಯದ ಕೆಳಗೆ ಜೀವಿಸುತ್ತಿದ್ದರು. ಸಾಮಾನ್ಯವಾಗಿ ಯೂರೋಪಿನ ಪೊಲೀಸರು ಜನರಿಗೆ ಬದಲಾಗಿ ಅರಸರನ್ನು ರಕ್ಷಿಸಲು ವ್ಯವಸ್ಥಾಪಿಸಲ್ಪಟ್ಟವರಾಗಿದ್ದರು. ತಮ್ಮ ದೇಶದಲ್ಲಿ ಶಸ್ತ್ರಸಜ್ಜಿತ, ಮಿಲಿಟರಿ ಶೈಲಿಯ ಪೊಲೀಸರು ಇರುವಂಥ ಕಲ್ಪನೆಯನ್ನೇ ದ್ವೇಷಿಸುತ್ತಿದ್ದ ಬ್ರಿಟಿಷರಿಗೂ, ವಸಾಹತುಗಳನ್ನು ಅಧೀನದಲ್ಲಿಟ್ಟುಕೊಳ್ಳಲಿಕ್ಕಾಗಿ ಮಿಲಿಟರಿ ಪೊಲೀಸರನ್ನು ಉಪಯೋಗಿಸುವ ವಿಷಯದಲ್ಲಿ ಸ್ವಲ್ಪವೂ ಅಳುಕಿಲ್ಲದಿರುವಂತೆ ತೋರುತ್ತಿತ್ತು. ಲೋಕದಾದ್ಯಂತ ಪೊಲೀಸ್‌ ವ್ಯವಸ್ಥೆ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ರಾಬ್‌ ಮಾಬೀ ಹೇಳುವುದು: “ವಸಾಹತುಗಳಲ್ಲಿ ಪೊಲೀಸ್‌ ಪಡೆಗಳು ಅಸ್ತಿತ್ವದಲ್ಲಿದ್ದ ಬಹುಮಟ್ಟಿಗೆ ಪ್ರತಿಯೊಂದು ದಶಕದಲ್ಲಿ, ಪೊಲೀಸರ ಪಾಶವೀಯತೆ, ಭ್ರಷ್ಟಾಚಾರ, ಹಿಂಸಾಚಾರ, ಕೊಲೆ ಮತ್ತು ಅಧಿಕಾರದ ದುರುಪಯೋಗದ ಘಟನೆಗಳು ಸಂಭವಿಸಿದವು.” ಸಾಮ್ರಾಜ್ಯಶಾಹಿ ಪೊಲೀಸ್‌ ವ್ಯವಸ್ಥೆಯು ಸಹ ಕೆಲವು ಪ್ರಯೋಜನಗಳನ್ನು ನೀಡಿತು ಎಂಬುದನ್ನು ಸೂಚಿಸಿದ ಬಳಿಕ, ಅದೇ ಪುಸ್ತಕವು ಕೂಡಿಸಿ ಹೇಳುವುದೇನೆಂದರೆ, ಅದು “ಲೋಕದಾದ್ಯಂತ ಇರುವ ರಾಷ್ಟ್ರಗಳು, ಪೊಲೀಸ್‌ ವ್ಯವಸ್ಥೆಯನ್ನು ಒಂದು ಸಾರ್ವಜನಿಕ ಸೇವೆಯಾಗಿ ಅಲ್ಲ ಬದಲಾಗಿ ಒಂದು ಸರಕಾರಿ ಪಡೆಯಾಗಿ ಪರಿಗಣಿಸುವಂತೆ ಪ್ರಬಲವಾದ ಪ್ರಭಾವವನ್ನು ಬೀರಿತು.”

ಕ್ರಾಂತಿಗಳಾಗಬಹುದೆಂಬ ಭಯದಿಂದಿದ್ದ ನಿರಂಕುಶಾಧಿಕಾರದ ಸರಕಾರಗಳು ತಮ್ಮ ಪ್ರಜೆಗಳ ಗೂಢಚಾರಿಕೆ ನಡೆಸಲಿಕ್ಕಾಗಿ ಬಹುಮಟ್ಟಿಗೆ ಯಾವಾಗಲೂ ಗುಪ್ತ ಪೊಲೀಸು ದಳವನ್ನು ಉಪಯೋಗಿಸಿವೆ. ಅಂಥ ಪೊಲೀಸರು ಚಿತ್ರಹಿಂಸೆಯ ಮೂಲಕ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು ಮತ್ತು ರಾಜ್ಯಾಂಗವನ್ನು ತಲೆಕೆಳಗೆಮಾಡಲು ಪ್ರಯತ್ನಿಸುವವರಂತೆ ಕಂಡುಬರುತ್ತಿದ್ದ ವ್ಯಕ್ತಿಗಳ ಹತ್ಯೆಗೈಯುವ ಮೂಲಕ ಅಥವಾ ವಿಚಾರಣೆಯಿಲ್ಲದೆ ಅವರನ್ನು ಬಂಧಿಸುವ ಮೂಲಕ ಅವರನ್ನು ನಿರ್ಮೂಲನಮಾಡಲು ಪ್ರಯತ್ನಿಸುತ್ತಿದ್ದರು. ನಾಸಿಗಳಲ್ಲಿ ಗೆಸ್ಟಪೊ ಇತ್ತು, ಸೋವಿಯಟ್‌ ಒಕ್ಕೂಟದಲ್ಲಿ ಕೆಜಿಬಿ ಇತ್ತು, ಮತ್ತು ಪೂರ್ವ ಜರ್ಮನಿಯಲ್ಲಿ ಶ್ಟಾಸೀ ಇತ್ತು. ಆಶ್ಚರ್ಯಕರವಾಗಿಯೇ, ಸುಮಾರು 1.6 ಕೋಟಿ ಜನರನ್ನು ನಿಯಂತ್ರಿಸಲಿಕ್ಕಾಗಿ ಈ ಶ್ಟಾಸೀಯು 1,00,000 ಅಧಿಕಾರಿಗಳನ್ನು ಹಾಗೂ ಐದು ಲಕ್ಷ ಮಂದಿ ಗುಪ್ತಚಾರರನ್ನು ಕೆಲಸಕ್ಕಿಟ್ಟುಕೊಂಡಿತ್ತು. ಶ್ಟಾಸೀಯ ಅಧಿಕಾರಿಗಳು 24 ಗಂಟೆಯೂ ಟೆಲಿಫೋನ್‌ ಸಂಭಾಷಣೆಗಳನ್ನು ಕೇಳಿಸಿಕೊಳ್ಳುತ್ತಿದ್ದರು ಮತ್ತು ಇಡೀ ಜನಸಂಖ್ಯೆಯ ಮೂರನೇ ಒಂದು ಭಾಗದ ಕುರಿತು ಲಿಖಿತ ವರದಿಗಳನ್ನು ಇಟ್ಟಿದ್ದರು. “ಶ್ಟಾಸೀ ಅಧಿಕಾರಿಗಳಿಗೆ ಯಾವುದೇ ವಿಷಯದಲ್ಲಿ ಇತಿಮಿತಿಯೂ ಇರಲಿಲ್ಲ ನಾಚಿಕೆಯೂ ಇರಲಿಲ್ಲ” ಎಂದು ಶ್ಟಾಸೀ ಎಂಬ ತಮ್ಮ ಪುಸ್ತಕದಲ್ಲಿ ಜಾನ್‌ ಕೋಲರ್‌ ಹೇಳುತ್ತಾರೆ. “ಪ್ರಾಟೆಸ್ಟಂಟ್‌ ಮತ್ತು ಕ್ಯಾಥೊಲಿಕ್‌ ಪಂಗಡಗಳ ಉಚ್ಚ ಅಧಿಕಾರಿಗಳನ್ನೂ ಒಳಗೊಂಡು ಅನೇಕ ಪಾದ್ರಿಗಳನ್ನು ಗುಪ್ತಚಾರರಾಗಿ ದಾಖಲುಮಾಡಿಕೊಳ್ಳಲಾಗಿತ್ತು. ಅವರ ಆಫೀಸುಗಳು ಮತ್ತು ಪಾಪನಿವೇದನಾ ಸ್ಥಳಗಳು ಕದ್ದುಕೇಳುವಂಥ ಸಾಧನಗಳಿಂದ ತುಂಬಿದ್ದವು.”

ಆದರೂ, ಭೀತಿಯನ್ನು ಉಂಟುಮಾಡುವಂಥ ಪೊಲೀಸರು ನಿರಂಕುಶಾಧಿಕಾರದ ಸರಕಾರಗಳಿರುವ ಸಾಮ್ರಾಜ್ಯಗಳಲ್ಲಿ ಮಾತ್ರವೇ ಕಂಡುಬರುವುದಿಲ್ಲ. ಬೇರೆ ಕಡೆಗಳಲ್ಲಿರುವ ದೊಡ್ಡ ನಗರದ ಪೊಲೀಸರ ಮೇಲೂ, ನಿಯಮವನ್ನು ಜಾರಿಗೆ ತರಲು ಅವರು ವಿಪರೀತ ಆಕ್ರಮಣಶೀಲ ಶೈಲಿಯನ್ನು ಉಪಯೋಗಿಸುವಾಗ​—⁠ಅದರಲ್ಲೂ ವಿಶೇಷವಾಗಿ ಅವರು ಅಲ್ಪಸಂಖ್ಯಾತರನ್ನು ಗುರಿಹಲಗೆಯಾಗಿ ಮಾಡುವಾಗ​—⁠ಭಯೋತ್ಪಾದನೆಯನ್ನು ಉಂಟುಮಾಡುವವರೆಂಬ ದೋಷಾರೋಪಣೆಯನ್ನು ಹೊರಿಸಲಾಗಿದೆ. ಲಾಸ್‌ ಆ್ಯಂಜಲೀಸ್‌ನಲ್ಲಿ ತುಂಬ ಪ್ರಚಾರಪಡೆದ ಒಂದು ಆಪಾದನೆಯ ಕುರಿತು ಹೇಳಿಕೆ ನೀಡುತ್ತಾ ಒಂದು ವಾರ್ತಾಪತ್ರಿಕೆಯು ಹೇಳಿದ್ದೇನೆಂದರೆ, ಆ ಆಪಾದನೆಯು “ಪೊಲೀಸರ ದುರ್ನಡತೆಯು ನಿಯಮರಾಹಿತ್ಯದ ಹೊಸ ಮಟ್ಟವನ್ನು ತಲಪಿತ್ತು ಮತ್ತು ಒಂದು ಹೊಸ ಶಬ್ದವನ್ನು ಹೆಚ್ಚು ಜನಪ್ರಿಯಗೊಳಿಸಿತು: ಗೂಂಡಾ ಪೊಲೀಸರು (ಗ್ಯಾಂಗ್‌ಸ್ಟರ್‌ ಕಾಪ್ಸ್‌).”

ಆದುದರಿಂದ, ಪೊಲೀಸ್‌ ಇಲಾಖೆಗಳು ತಮ್ಮ ಹೆಸರನ್ನು ಕಾಪಾಡಿಕೊಳ್ಳಲು ಏನನ್ನು ಮಾಡಸಾಧ್ಯವಿದೆ ಎಂಬ ಪ್ರಶ್ನೆಯನ್ನು ಸರಕಾರಿ ಅಧಿಕಾರಿಗಳು ಕೇಳುತ್ತಾ ಇದ್ದಾರೆ. ತಮ್ಮ ಸಾರ್ವಜನಿಕ ಪಾತ್ರದ ಕುರಿತು ತಿಳಿಸುವ ಪ್ರಯತ್ನದಲ್ಲಿ ಅನೇಕ ಪೊಲೀಸ್‌ ಪಡೆಗಳು, ತಮ್ಮ ಪೊಲೀಸ್‌ ವ್ಯವಸ್ಥೆಯಿಂದ ಸಮುದಾಯಕ್ಕೆ ಆಗುವಂಥ ಪ್ರಯೋಜನದಾಯಕ ಅಂಶಗಳನ್ನು ಒತ್ತಿಹೇಳಲು ಪ್ರಯತ್ನಿಸಿವೆ.

ಸಮುದಾಯಿಕ ಪೊಲೀಸ್‌ ನಿಗಾವಣೆಯ ನಿರೀಕ್ಷೆ

ಜಪಾನಿನ ನೆರೆಹೊರೆ ಪೊಲೀಸ್‌ ನಿಗಾವಣೆಯ ಸಾಂಪ್ರದಾಯಿಕ ಶೈಲಿಯು ವಿದೇಶಿಯರ ಆಸಕ್ತಿಯನ್ನು ಆಕರ್ಷಿಸಿದೆ. ಸಾಂಪ್ರದಾಯಿಕವಾಗಿ, ಜಪಾನೀ ಪೊಲೀಸರು ಒಂದು ನಿರ್ದಿಷ್ಟ ಕ್ಷೇತ್ರದ ಜವಾಬ್ದಾರಿಯನ್ನು ಹೊತ್ತಿರುವಂಥ ಚಿಕ್ಕ ಪೊಲೀಸ್‌ ಆಫೀಸುಗಳಿಂದ ಕಾರ್ಯನಡಿಸುತ್ತಾರೆ. ಇವುಗಳಲ್ಲಿ ಬಹುಶಃ ಹನ್ನೆರಡು ಮಂದಿ ಅಧಿಕಾರಿಗಳು ಶಿಫ್ಟ್‌ಗಳಲ್ಲಿ ಕೆಲಸಮಾಡುವಂತೆ ನೇಮಿಸಲ್ಪಟ್ಟಿರುತ್ತಾರೆ. ಅಪರಾಧಶಾಸ್ತ್ರದಲ್ಲಿ ಬ್ರಿಟಿಷ್‌ ಉಪನ್ಯಾಸಕರೂ ಜಪಾನಿನಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವವರೂ ಆಗಿರುವ ಫ್ರಾಂಕ್‌ ಲೈಶ್‌ಮನ್‌ ಹೇಳುವುದು: “ಕೋಬಾನ್‌ (ಚಿಕ್ಕ ಪೊಲೀಸ್‌ ಆಫೀಸು) ಅಧಿಕಾರಿಗಳಿಂದ ಒದಗಿಸಲ್ಪಡುವ ಸ್ನೇಹಪರ ಸೇವಾ ಚಟುವಟಿಕೆಯ ಈ ವ್ಯಾಪ್ತಿಯು ಸುಪ್ರಸಿದ್ಧವಾಗಿದೆ: ಜಪಾನಿನ ಬಹುಮಟ್ಟಿಗೆ ಹೆಸರಿಲ್ಲದ ಬೀದಿಗಳಲ್ಲಿ ವಿಳಾಸಗಳ ಕುರಿತಾದ ಮಾಹಿತಿಯನ್ನು ನೀಡುವುದು; ತಮಗೆ ಸಿಗುವಂಥ ಛತ್ರಿಗಳನ್ನು ಅವುಗಳ ಒಡೆಯರು ತೆಗೆದುಕೊಂಡು ಹೋಗದಿರುವಾಗ, ಅಂಥ ಛತ್ರಿಗಳನ್ನು ಮಳೆಯಲ್ಲಿ ಸಿಕ್ಕಿಕೊಂಡಿರುವ ನಿತ್ಯಪ್ರಯಾಣಿಕರಿಗೆ ಎರವಲು ನೀಡುವುದು; ಪಾನಮತ್ತರಾಗಿರುವ ಸಾರಾರೀಮಾನ್‌ (ವ್ಯಾಪಾರಿಗಳು/ಆಫೀಸು ಕೆಲಸಗಾರರು)ಗಳು ತಮ್ಮ ಮನೆಗೆ ಹೋಗಿ ಸೇರುವ ಕೊನೆಯ ರೈಲನ್ನು ಹತ್ತುವಂತೆ ನೋಡಿಕೊಳ್ಳುವುದು; ಮತ್ತು ‘ಪ್ರಜೆಗಳ’ ತೊಂದರೆಗಳ ಕುರಿತು ಸಲಹೆ ನೀಡುವುದು.” ನಡೆಯಲು ಸುರಕ್ಷಿತವಾಗಿರುವ ಬೀದಿಗಳನ್ನು ಹೊಂದಿದೆ ಎಂಬ ಅಸೂಯಾಜನಕ ಕೀರ್ತಿಯನ್ನು ಜಪಾನಿಗೆ ತಂದುಕೊಡುವುದರಲ್ಲಿ ನೆರೆಹೊರೆಯನ್ನು ನೋಡಿಕೊಳ್ಳುವ ಪೊಲೀಸರು ಪ್ರಮುಖ ಅಂಶವಾಗಿದ್ದಾರೆ.

ಈ ರೀತಿಯ ಪೊಲೀಸ್‌ ವ್ಯವಸ್ಥೆಯು ಬೇರೆಲ್ಲಿಯಾದರೂ ಪರಿಣಾಮಕಾರಿ ಆಗಿರಸಾಧ್ಯವಿದೆಯೋ? ಕೆಲವು ಅಪರಾಧಶಾಸ್ತ್ರಜ್ಞರು ಈ ವಿಷಯದಲ್ಲಿ ಒಂದು ಪಾಠವನ್ನು ಕಲಿಯಲಾರಂಭಿಸಿದರು. ಸಂವಾದ ಮಾಡುವುದರಲ್ಲಿ ಆಗಿರುವಂಥ ಆಧುನಿಕ ಪ್ರಗತಿಯು, ಪೊಲೀಸರು ಯಾರ ಸೇವೆಯನ್ನು ಮಾಡುತ್ತಾರೋ ಆ ಜನರಿಂದಲೇ ಅವರನ್ನು ದೂರಸರಿಸುತ್ತಾ ಇದೆ. ಇಂದಿನ ಅನೇಕ ನಗರಗಳಲ್ಲಿ, ಪೊಲೀಸರ ಕೆಲಸವು ಅನೇಕವೇಳೆ ಮುಖ್ಯವಾಗಿ ತುರ್ತುಪರಿಸ್ಥಿತಿಗಳಿಗೆ ಮಾತ್ರ ಪ್ರತಿಕ್ರಿಯಿಸುವುದನ್ನು ಒಳಗೂಡಿರುವಂತೆ ತೋರುತ್ತದೆ. ಕೆಲವೊಮ್ಮೆ, ದುಷ್ಕೃತ್ಯವನ್ನು ತಡೆಗಟ್ಟಲು ಮೊದಲು ಕೊಡಲ್ಪಡುತ್ತಿದ್ದ ಪ್ರಾಮುಖ್ಯತೆಯು ಈಗ ಕಾಣೆಯಾಗಿರುವಂತೆ ತೋರುತ್ತದೆ. ಈ ಪ್ರವೃತ್ತಿಗೆ ಉತ್ತರವಾಗಿ, ನೆರೆಹೊರೆ ಕಾವಲು ಈಗ ಪುನಃ ಒಮ್ಮೆ ಜನಪ್ರಿಯವಾಗಿ ಪರಿಣಮಿಸಿದೆ.

ನೆರೆಹೊರೆ ಕಾವಲು

“ಇದು ನಿಜವಾಗಿಯೂ ಯಶಸ್ವಿಕರವಾಗಿದೆ; ಇದು ದುಷ್ಕೃತ್ಯವನ್ನು ಕಡಿಮೆಗೊಳಿಸುತ್ತದೆ” ಎಂದು, ವೇಲ್ಸ್‌ನಲ್ಲಿನ ತನ್ನ ಕೆಲಸದ ಕುರಿತು ಒಬ್ಬ ಪೊಲೀಸ್‌ ಕಾನ್ಸ್‌ಟೇಬಲ್‌ ಆಗಿರುವ ಡೂಯೀ ಎಂಬವರು ಹೇಳುತ್ತಾರೆ. “ನೆರೆಹೊರೆ ಕಾವಲು ಎಂಬುದರ ಅರ್ಥ, ಜನರೇ ಪರಸ್ಪರರ ಭದ್ರತೆಗಾಗಿ ಸದಾ ಎಚ್ಚರಿಕೆಯಿಂದಿರುವುದು. ನೆರೆಯವರು ಪರಸ್ಪರರ ಪರಿಚಯಮಾಡಿಕೊಳ್ಳಲು, ಹೆಸರುಗಳನ್ನು ಮತ್ತು ಫೋನ್‌ ನಂಬರ್‌ಗಳನ್ನು ವಿನಿಮಯಮಾಡಿಕೊಳ್ಳಲು, ಮತ್ತು ದುಷ್ಕೃತ್ಯವನ್ನು ಹೇಗೆ ತಡೆಗಟ್ಟುವುದು ಎಂಬುದರ ಕುರಿತು ಕೇಳಿಸಿಕೊಳ್ಳಲು ಸಾಧ್ಯವಾಗುವಂತೆ ನಾವು ಮೀಟಿಂಗ್‌ಗಳನ್ನು ಏರ್ಪಡಿಸುತ್ತೇವೆ. ಇದು ನೆರೆಹೊರೆಯವರಲ್ಲಿ ಪುನಃ ಸಮುದಾಯದ ಭಾವನೆಯನ್ನು ಪರಿಚಯಿಸುತ್ತದಾದ್ದರಿಂದ ನಾನು ಈ ಕೆಲಸದಲ್ಲಿ ಆನಂದಿಸುತ್ತೇನೆ. ಅನೇಕವೇಳೆ, ತಮ್ಮ ನೆರೆಯವರು ಯಾರು ಎಂಬುದೇ ಜನರಿಗೆ ಗೊತ್ತಿರುವುದಿಲ್ಲ. ಈ ಏರ್ಪಾಡು ಯಶಸ್ವಿಕರವಾಗಿದೆ, ಏಕೆಂದರೆ ಇದು ಜನರ ಅರಿವನ್ನು ಅಧಿಕಗೊಳಿಸುತ್ತದೆ.” ಇದು ಪೊಲೀಸರು ಮತ್ತು ಸಾರ್ವಜನಿಕರ ನಡುವಣ ಸಂಬಂಧಗಳನ್ನೂ ಉತ್ತಮಗೊಳಿಸುತ್ತದೆ.

ಇನ್ನೊಂದು ಪೂರ್ವಭಾವಿ ಹೆಜ್ಜೆಯು ಯಾವುದೆಂದರೆ, ಅನ್ಯಾಯಕ್ಕೆ ಬಲಿಯಾದವರ ಕಡೆಗೆ ಪೊಲೀಸರು ಹೆಚ್ಚು ಸಹಾನುಭೂತಿ ಉಳ್ಳವರಾಗಿರುವಂತೆ ಉತ್ತೇಜಿಸುವುದೇ. ಅನ್ಯಾಯಕ್ಕೆ ಬಲಿಯಾದವರ ಕುರಿತಾದ ಶ್ರೇಷ್ಠ ಡಚ್‌ ಅಧ್ಯಯನಶಾಸ್ತ್ರಜ್ಞ ಯಾನ್‌ ವಾನ್‌ ಡೇಕ್‌ ಬರೆದುದು: “ಬಲಿಪಶುಗಳೊಂದಿಗೆ ಪೊಲೀಸ್‌ ಅಧಿಕಾರಿಗಳು ಮಾತಾಡುವ ಹಾಗೂ ವ್ಯವಹರಿಸುವ ರೀತಿಗಳು, ರೋಗಿಗಳೊಂದಿಗೆ ವೈದ್ಯರು ಮಾತಾಡುವ ಹಾಗೂ ವ್ಯವಹರಿಸುವ ರೀತಿಗಳಷ್ಟೇ ಪ್ರಾಮುಖ್ಯವಾಗಿವೆ ಎಂಬುದನ್ನು ಪೊಲೀಸ್‌ ಅಧಿಕಾರಿಗಳಿಗೆ ಕಲಿಸಬೇಕಾಗಿದೆ.” ಅನೇಕ ಸ್ಥಳಗಳಲ್ಲಿ ಪೊಲೀಸರು ಈಗಲೂ ಗೃಹ ಹಿಂಸಾಚಾರ ಹಾಗೂ ಬಲಾತ್ಕಾರ ಸಂಭೋಗವನ್ನು ನಿಜವಾದ ದುಷ್ಕೃತ್ಯಗಳಾಗಿ ಪರಿಗಣಿಸುವುದಿಲ್ಲ. ಆದರೆ ರಾಬ್‌ ಮಾಬೀ ಹೇಳುವುದು: “ಗೃಹ ಹಿಂಸಾಚಾರ ಹಾಗೂ ಬಲಾತ್ಕಾರ ಸಂಭೋಗವನ್ನು ಪೊಲೀಸರು ನಿರ್ವಹಿಸುವ ವಿಧವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಉತ್ತಮಗೊಂಡಿದೆ. ಆದರೂ, ಬಹಳಷ್ಟು ಪ್ರಗತಿಯನ್ನು ಮಾಡಲು ಇನ್ನೂ ಅವಕಾಶವಿದೆ.” ಪೊಲೀಸರ ಅಧಿಕಾರದ ದುರುಪಯೋಗವು ಸಹ, ಬಹುಮಟ್ಟಿಗೆ ಪ್ರತಿಯೊಂದು ಪೊಲೀಸ್‌ ಪಡೆಯು ಪ್ರಗತಿಯನ್ನು ಮಾಡಸಾಧ್ಯವಿರುವ ಇನ್ನೊಂದು ಕ್ಷೇತ್ರವಾಗಿದೆ.

ಪೊಲೀಸ್‌ ಭ್ರಷ್ಟಾಚಾರದ ಭಯ

ವಿಶೇಷವಾಗಿ ಪೊಲೀಸರ ಭ್ರಷ್ಟಾಚಾರದ ಕುರಿತಾದ ಸುದ್ದಿಗಳು ಹಬ್ಬುತ್ತಿರುವಾಗ, ಪೊಲೀಸರಿಂದ ನಮಗೆ ಸಂರಕ್ಷಣೆ ಸಿಗುವುದೆಂಬ ಭಾವನೆಯನ್ನು ಹೊಂದುವುದು ಕೆಲವೊಮ್ಮೆ ಭೋಳೆತನದಂತೆ ತೋರುತ್ತದೆ. ಪೊಲೀಸ್‌ ಇತಿಹಾಸದ ಆರಂಭದಿಂದಲೂ ಅಂಥ ವರದಿಗಳು ಅಸ್ತಿತ್ವದಲ್ಲಿವೆ. 1855ನೆಯ ವರ್ಷವನ್ನು ಸೂಚಿಸುತ್ತಾ, ಎನ್‌ವೈಪಿಡಿ​—⁠ಒಂದು ನಗರ ಮತ್ತು ಅದರ ಪೊಲೀಸರು (ಇಂಗ್ಲಿಷ್‌) ಎಂಬ ಪುಸ್ತಕವು, “ಕೊಲೆಗಡುಕರು ಮತ್ತು ಪೊಲೀಸರ ನಡುವಣ ವ್ಯತ್ಯಾಸವನ್ನು ಗ್ರಹಿಸುವುದು ಕಷ್ಟಕರವಾಗುತ್ತಿದೆ ಎಂಬ ನ್ಯೂ ಯಾರ್ಕ್‌ ನಗರದ ಅನೇಕರ ಅಭಿಪ್ರಾಯವನ್ನು” ವರ್ಣಿಸಿತು. ಡಂಕನ್‌ ಗ್ರೀನ್‌ರ ಲ್ಯಾಟಿನ್‌ ಅಮೆರಿಕದ ಅಂಶಗಳು (ಇಂಗ್ಲಿಷ್‌) ಎಂಬ ಪುಸ್ತಕವು, ಅಲ್ಲಿನ ಪೊಲೀಸ್‌ ಪಡೆಗಳು “ಭ್ರಷ್ಟಾಚಾರದಿಂದ ತುಂಬಿವೆ, ಅಸಮರ್ಥವಾಗಿವೆ, ಮತ್ತು ಮಾನವ ಹಕ್ಕುಗಳನ್ನು ದುರುಪಯೋಗಿಸುವಂಥವುಗಳು ಆಗಿವೆ ಎಂದು ವ್ಯಾಪಕವಾಗಿ ನಂಬಲಾಗುತ್ತದೆ” ಎಂದು ವರದಿಸುತ್ತದೆ. 14,000 ಮಂದಿಯುಳ್ಳ ಲ್ಯಾಟಿನ್‌ ಅಮೆರಿಕನ್‌ ಪೊಲೀಸ್‌ ಪಡೆಯ ಮುಖ್ಯ ಸಿಬ್ಬಂದಿ ಅಧಿಕಾರಿಯು ಹೇಳಿದ್ದು: “ಒಬ್ಬ ಪೊಲೀಸನು ಒಂದು ತಿಂಗಳಿಗೆ 100 ಡಾಲರುಗಳಿಗಿಂತಲೂ ಕಡಿಮೆ ಹಣವನ್ನು ಸಂಪಾದಿಸುತ್ತಿರುವಾಗ ನೀವೇನನ್ನು ನಿರೀಕ್ಷಿಸಸಾಧ್ಯವಿದೆ? ಇಂಥ ಸಮಯದಲ್ಲಿ ಅವನಿಗೆ ಲಂಚ ಕೊಡಲ್ಪಡುವಲ್ಲಿ, ಅವನೇನು ಮಾಡಿಯಾನು?”

ಭ್ರಷ್ಟಾಚಾರವು ಎಷ್ಟು ಗಂಭೀರವಾದ ಸಮಸ್ಯೆಯಾಗಿದೆ? ಇದರ ಉತ್ತರವು ನೀವು ಯಾರನ್ನು ಕೇಳುತ್ತೀರಿ ಎಂಬುದರ ಮೇಲೆ ಅವಲಂಬಿಸಿದೆ. 1,00,000 ಜನಸಂಖ್ಯೆಯಿರುವ ಒಂದು ನಗರದಲ್ಲಿ ಅನೇಕ ವರ್ಷಗಳ ವರೆಗೆ ಗಸ್ತು ತಿರುಗಿದಂಥ ಉತ್ತರ ಅಮೆರಿಕದ ಒಬ್ಬ ಪೊಲೀಸನು ಉತ್ತರಿಸುವುದು: “ಇಲ್ಲಿ ಖಂಡಿತವಾಗಿಯೂ ಸ್ವಲ್ಪ ಪ್ರತಿಶತ ಅಪ್ರಾಮಾಣಿಕ ಪೊಲೀಸರಿದ್ದಾರಾದರೂ, ಅಧಿಕಾರಿಗಳಲ್ಲಿ ಅಧಿಕಾಂಶ ಮಂದಿ ಪ್ರಾಮಾಣಿಕರಾಗಿದ್ದಾರೆ. ಇದೇ ನನ್ನ ಅನುಭವ.” ಇನ್ನೊಂದು ಕಡೆಯಲ್ಲಿ, ಬೇರೊಂದು ದೇಶದಲ್ಲಿ ದುಷ್ಕೃತ್ಯದ ವಿಚಾರಣೆಗಾರನೋಪಾದಿ 26 ವರ್ಷಗಳ ಅನುಭವವಿರುವ ಒಬ್ಬ ವ್ಯಕ್ತಿಯು ಉತ್ತರಿಸುವುದು: “ಭ್ರಷ್ಟಾಚಾರವು ಬಹುಮಟ್ಟಿಗೆ ವಿಶ್ವವ್ಯಾಪಿ ಸಮಸ್ಯೆಯಾಗಿದೆ ಎಂದು ನಾನು ಪರಿಗಣಿಸುತ್ತೇನೆ. ಪೊಲೀಸರ ನಡುವೆ ಪ್ರಾಮಾಣಿಕತೆಯು ತುಂಬ ವಿರಳ. ಒಬ್ಬ ಪೊಲೀಸನು ಕನ್ನಗಳ್ಳತನವಾಗಿರುವ ಒಂದು ಮನೆಯನ್ನು ಶೋಧಿಸುತ್ತಿರುವಾಗ ಹಣವನ್ನು ಕಂಡುಕೊಳ್ಳುವಲ್ಲಿ, ಬಹುಶಃ ಅವನದನ್ನು ತೆಗೆದುಕೊಳ್ಳುವನು. ಕದಿಯಲ್ಪಟ್ಟ ಅಮೂಲ್ಯ ವಸ್ತುಗಳನ್ನು ಅವನು ಮರಳಿ ಪಡೆಯುವಲ್ಲಿ, ಅವುಗಳಲ್ಲಿ ಒಂದು ಭಾಗವನ್ನು ಅವನು ತನಗಾಗಿ ಇಟ್ಟುಕೊಳ್ಳುವನು.” ಕೆಲವು ಪೊಲೀಸರು ಏಕೆ ಭ್ರಷ್ಟರಾಗುತ್ತಾರೆ?

ಕೆಲವು ಪೊಲೀಸರು ಆರಂಭದಲ್ಲಿ ಉಚ್ಚ ಮಟ್ಟಗಳನ್ನು ಇಟ್ಟುಕೊಂಡಿರುತ್ತಾರೆ, ಆದರೆ ಸಮಯಾನಂತರ ಭ್ರಷ್ಟ ಸಹಕರ್ಮಿಗಳು ಹಾಗೂ ಅವರು ಯಾವುದರೊಂದಿಗೆ ಒಳಗೂಡುತ್ತಾರೋ ಆ ಪಾತಕ ಜಗತ್ತಿನ ಅವನತಿಗಿಳಿದಿರುವ ಮಟ್ಟಗಳ ಪ್ರಭಾವಕ್ಕೆ ಬಲಿಬೀಳುತ್ತಾರೆ. ಪೊಲೀಸರಿಗೆ ಏನು ತಿಳಿದಿದೆ (ಇಂಗ್ಲಿಷ್‌) ಎಂಬ ಪುಸ್ತಕವು, ಶಿಕಾಗೋದ ಒಬ್ಬ ಪೊಲೀಸನು ಹೀಗೆ ಹೇಳಿದ್ದಾಗಿ ಉಲ್ಲೇಖಿಸುತ್ತದೆ: “ಪೊಲೀಸ್‌ ಅಧಿಕಾರಿಗಳ ವಿಷಯದಲ್ಲಿ ಹೇಳುವುದಾದರೆ, ವೈಯಕ್ತಿಕ ಅನುಭವದಿಂದ ಕೆಡುಕಿನ ಕುರಿತು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ, ಅವರು ಕೆಡುಕಿನಿಂದ ಆವರಿಸಲ್ಪಟ್ಟಿರುತ್ತಾರೆ, ಅವರು ಅದನ್ನೇ ಸ್ಪರ್ಶಿಸುತ್ತಾರೆ . . . ಅದರದ್ದೇ ರುಚಿನೋಡುತ್ತಾರೆ . . . ಅದನ್ನೇ ಆಘ್ರಾಣಿಸುತ್ತಾರೆ . . . ಅದನ್ನೇ ಕೇಳಿಸಿಕೊಳ್ಳುತ್ತಾರೆ . . . ಅವರು ಅದನ್ನು ನಿರ್ವಹಿಸಲೇಬೇಕಾಗಿರುತ್ತದೆ.” ನೀತಿಭ್ರಷ್ಟತೆಯೊಂದಿಗಿನ ಇಂಥ ಸಂಪರ್ಕವು ಸುಲಭವಾಗಿ ಒಬ್ಬನ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಲ್ಲದು.

ಪೊಲೀಸರು ಅಮೂಲ್ಯವಾದ ಸೇವೆಯನ್ನು ಸಲ್ಲಿಸುತ್ತಾರೆಂಬುದು ನಿಜ, ಆದರೆ ಅವರ ಸೇವೆ ಆದರ್ಶದ ಮಟ್ಟದಿಂದ ದೂರದಲ್ಲಿದೆ. ಇದಕ್ಕಿಂತಲೂ ಉತ್ತಮವಾದದ್ದೇನನ್ನಾದರೂ ನಾವು ನಿರೀಕ್ಷಿಸಸಾಧ್ಯವಿದೆಯೋ? (g02 7/8)

[ಪಾದಟಿಪ್ಪಣಿ]

^ ತಮ್ಮ ಗುಂಪಿನ ಸ್ಥಾಪಕನಾದ ಸರ್‌ ರಾಬರ್ಟ್‌ (ಬಾಬಿ) ಪೀಲ್‌ನ ನಾಮಾರ್ಥವಾಗಿ ಬ್ರಿಟಿಷ್‌ ಪೊಲೀಸರು ಬಾಬಿಗಳೆಂದು ಪ್ರಸಿದ್ಧರಾದರು.

[ಪುಟ 8, 9ರಲ್ಲಿರುವ ಚೌಕ/ಚಿತ್ರಗಳು]

“ಬ್ರಿಟಿಷ್‌ ಬಾಬಿಗಳು ನಿಜವಾಗಿಯೂ ಬಹಳ ಒಳ್ಳೆಯವರಲ್ಲವೊ?”

ಒಂದು ವೃತ್ತಿಪರ ಪೊಲೀಸ್‌ ಪಡೆಯನ್ನು ಇಟ್ಟುಕೊಳ್ಳುವ ದುಬಾರಿ ವೆಚ್ಚವನ್ನು ಕೊಡಲು ಸಮರ್ಥರಾಗಿದ್ದವರಲ್ಲಿ ಬ್ರಿಟಿಷರು ಪ್ರಥಮರಾಗಿದ್ದರು. ಅವರ ದಕ್ಷ ಟಪ್ಪಾ ಬಂಡಿ (ಸ್ಟೇಜ್‌ಕೋಚ್‌) ವ್ಯವಸ್ಥೆಯು ಹೇಗೆ ಸಮಯಕ್ಕನುಸಾರ ಕಾರ್ಯನಡಿಸಿತೋ ಹಾಗೆಯೇ ಅವರ ಸಮಾಜವು ಸುವ್ಯವಸ್ಥೆಯಿಂದ ಇರಬೇಕೆಂಬುದು ಅವರ ಬಯಕೆಯಾಗಿತ್ತು. 1829ರಲ್ಲಿ ಗೃಹ ಸೆಕ್ರಿಟರಿಯಾಗಿದ್ದ ಸರ್‌ ರಾಬರ್ಟ್‌ (ಬಾಬಿ) ಪೀಲ್‌, ಲಂಡನ್‌ ಮೆಟ್ರೊಪಾಲಿಟನ್‌ ಪೊಲೀಸ್‌ ದಳಕ್ಕೆ ಸಮ್ಮತಿ ಕೊಡುವಂತೆ ಮತ್ತು ಅದರ ಮುಖ್ಯಕಾರ್ಯಾಲಯವು ಸ್ಕಾಟ್‌ಲೆಂಡ್‌ ಯಾರ್ಡ್‌ ಆಗಿರುವಂತೆ ಪಾರ್ಲಿಮೆಂಟನ್ನು ಒಡಂಬಡಿಸಿದನು. ಕುಡಿಕತನ ಹಾಗೂ ಬೀದಿಯ ಜೂಜಾಟದ ವಿರುದ್ಧ ಪ್ರಬಲವಾದ ಹಾಗೂ ನಿರ್ಣಾಯಕ ಕ್ರಿಯೆಯನ್ನು ಕೈಗೊಂಡದ್ದಕ್ಕಾಗಿ ಮೊದಮೊದಲು ಬಾಬಿಗಳು ಜನಪ್ರಿಯರಾಗಿರದಿದ್ದರೂ, ಕಾಲಕ್ರಮೇಣ ಇವರು ಜನರ ಪ್ರೀತಿಗೆ ಪಾತ್ರರಾದರು.

ಇಸವಿ 1851ರಲ್ಲಿ, ಒಂದು ಮಹಾ ಪ್ರದರ್ಶನಕ್ಕೆ ಬರುವಂತೆ ಮತ್ತು ಬ್ರಿಟಿಷ್‌ ಉದ್ಯಮದ ಸಾಧನೆಗಳನ್ನು ಪ್ರಶಂಸಿಸುವಂತೆ ಲಂಡನ್‌ ನಗರವು ಹೆಮ್ಮೆಯಿಂದ ಲೋಕವನ್ನೇ ಆಮಂತ್ರಿಸಿತು. ಸುವ್ಯವಸ್ಥಿತ ಬೀದಿಗಳನ್ನು ಮತ್ತು ಕುಡುಕರು, ವೇಶ್ಯೆಯರು ಹಾಗೂ ಪೋಲಿಪುಂಡರು ಇಲ್ಲದಿರುವುದನ್ನು ನೋಡಿ ಅತಿಥಿಗಳು ಆಶ್ಚರ್ಯಚಕಿತರಾದರು. ಸಮರ್ಥ ಪೊಲೀಸರು ಗುಂಪುಗಳನ್ನು ಮಾರ್ಗದರ್ಶಿಸುತ್ತಿದ್ದರು, ಸಂದರ್ಶಕರ ಲಗ್ಗೇಜುಗಳನ್ನು ಕೊಂಡೊಯ್ಯಲು ಸಹಾಯಮಾಡುತ್ತಿದ್ದರು, ರಸ್ತೆಯನ್ನು ದಾಟಲು ಜನರಿಗೆ ನೆರವನ್ನೀಯುತ್ತಿದ್ದರು, ಮತ್ತು ವೃದ್ಧ ಸ್ತ್ರೀಯರನ್ನು ಟ್ಯಾಕ್ಸಿಯ ತನಕ ಹೊತ್ತುಕೊಂಡೂ ಹೋಗುತ್ತಿದ್ದರು. ಆದುದರಿಂದ, ಬ್ರಿಟಿಷ್‌ ಜನರು ಹಾಗೂ ವಿದೇಶಿ ಸಂದರ್ಶಕರು “ಬ್ರಿಟಿಷ್‌ ಬಾಬಿಗಳು ನಿಜವಾಗಿಯೂ ಬಹಳ ಒಳ್ಳೆಯವರಲ್ಲವೊ?” ಎಂದು ಹೇಳುವುದನ್ನು ಕೇಳಿಸಿಕೊಳ್ಳುವುದು ಅಚ್ಚರಿಯನ್ನು ಉಂಟುಮಾಡಲಿಲ್ಲ.

ದುಷ್ಕೃತ್ಯವನ್ನು ತಡೆಗಟ್ಟುವುದರಲ್ಲಿ ಅವರು ಎಷ್ಟು ಪರಿಣಾಮಕಾರಿಯಾಗಿ ಕಂಡುಬಂದರೆಂದರೆ, 1873ರಲ್ಲಿ ಚೆಸ್ಟರ್‌ ಸಿಟಿಯ ಒಬ್ಬ ಮುಖ್ಯ ಕಾನ್ಸ್‌ಟೇಬಲ್‌, ವೃತ್ತಿಪರ ದುಷ್ಕೃತ್ಯವು ಸಂಪೂರ್ಣವಾಗಿ ನಿರ್ಮೂಲನಮಾಡಲ್ಪಟ್ಟಿರುವ ಒಂದು ಸಮಯ ಬರುವುದೆಂದು ಭಾವಿಸಿದನು! ಪೊಲೀಸರು ಆ್ಯಂಬುಲೆನ್ಸ್‌ಗಳನ್ನು ಮತ್ತು ಅಗ್ನಿಶಾಮಕ ಸೇವೆಗಳನ್ನು ಸಹ ಆರಂಭಿಸಿದರು. ಬಡವರಿಗಾಗಿ ಪಾದರಕ್ಷೆಗಳನ್ನು ಮತ್ತು ಬಟ್ಟೆಬರೆಯನ್ನು ಒದಗಿಸುವಂಥ ಧರ್ಮದರ್ಶಿ ಕಾರ್ಯಗಳನ್ನು ಅವರು ಏರ್ಪಡಿಸಿದರು. ಕೆಲವರು, ಹುಡುಗರಿಗಾಗಿ ಕ್ಲಬ್ಬುಗಳನ್ನು, ಪ್ರವಾಸಗಳನ್ನು ಮತ್ತು ರಜಾಧಾಮಗಳನ್ನು ವ್ಯವಸ್ಥಾಪಿಸಿದರು.

ಹೌದು, ಈ ಹೊಸ ಪೊಲೀಸರಿಗೆ ಭ್ರಷ್ಟಾಚಾರ ಹಾಗೂ ಪಾಶವೀಯತೆಯ ಸಂಬಂಧದಲ್ಲಿ ಕೆಲವು ಪೊಲೀಸರಿಗೆ ಶಿಸ್ತನ್ನು ಕೊಡುವ ಸಮಸ್ಯೆಗಳೂ ಇದ್ದವು ನಿಶ್ಚಯ. ಆದರೆ ಹೆಚ್ಚಿನ ಪೊಲೀಸರು ಶಾಂತಿಪಾಲನೆಯನ್ನು ಮಾಡುವಾಗ, ತೀರ ಕಡಿಮೆ ಬಲಪ್ರಯೋಗ ಮಾಡುವುದರಲ್ಲಿ ಹೆಮ್ಮೆಪಡುತ್ತಿದ್ದರು. 1853ರಲ್ಲಿ ಲ್ಯಾಂಕಶರ್‌ ಜಿಲ್ಲೆಯ ವಿಗನ್‌ನಲ್ಲಿರುವ ಪೊಲೀಸರು, ಮುಷ್ಕರ ನಡೆಸುತ್ತಿರುವ ಗಣಿಕೆಲಸಗಾರರ ಗಲಭೆಯನ್ನು ಎದುರಿಸಬೇಕಾಯಿತು. ಕೇವಲ ಹತ್ತು ಮಂದಿ ಪೊಲೀಸರ ಮೇಲ್ವಿಚಾರಕನಾಗಿದ್ದ ಒಬ್ಬ ಧೈರ್ಯಶಾಲಿ ಸಾರ್ಜಂಟನು, ಗಣಿಯ ಯಜಮಾನನ ಬಂದೂಕುಗಳನ್ನು ಉಪಯೋಗಿಸಲು ಸ್ಥಿರಮನಸ್ಸಿನಿಂದ ನಿರಾಕರಿಸಿದನು. 1886ರಲ್ಲಿ ಹೆಕ್ಟರ್‌ ಮೆಕ್ಲೌಡ್‌ ತನ್ನ ತಂದೆಯಂತೆ ಒಬ್ಬ ಪೊಲೀಸನಾದಾಗ ಅವನ ತಂದೆಯಿಂದ ಪಡೆದ ಒಂದು ಪತ್ರವು, ನಂತರ ವಿಕಸಿಸಿದಂಥ ಮನೋಭಾವಕ್ಕೆ ಉದಾಹರಣ ರೂಪವಾಗಿತ್ತು. ದ ಇಂಗ್ಲಿಷ್‌ ಪೊಲೀಸ್‌ನಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ ಆ ಪತ್ರವು ಹೀಗೆ ತಿಳಿಸಿತ್ತು: “ಬಿರುಸು ಮನೋಭಾವದವರಾಗಿರುವ ಮೂಲಕ ನೀವು ಸಾರ್ವಜನಿಕರ ನಿಷ್ಠೆ ಮತ್ತು ಬೆಂಬಲವನ್ನು ಕಳೆದುಕೊಳ್ಳುತ್ತೀರಿ . . . ನಾನು ಸಾರ್ವಜನಿಕರ ಅಭಿರುಚಿಗಳಿಗೆ ಮೊದಲ ಸ್ಥಾನ ಕೊಡುತ್ತೇನೆ, ಏಕೆಂದರೆ ಒಬ್ಬ ಪೊಲೀಸನು ಸಮುದಾಯದ ಸೇವಕನಾಗಿದ್ದಾನೆ, ಸದ್ಯಕ್ಕೆ ಅವರ ಸೇವೆಮಾಡಲು ನೇಮಿಸಲ್ಪಟ್ಟಿದ್ದಾನೆ, ಮತ್ತು ಸಮುದಾಯದ ಜನರನ್ನು ಹಾಗೂ ನಮ್ಮ ಅಧಿಕಾರಿಯನ್ನು ಮೆಚ್ಚಿಸುವುದು ನಮ್ಮ ಕರ್ತವ್ಯವಾಗಿದೆ.”

ಮೆಟ್ರೊಪಾಲಿಟನ್‌ ಪೊಲೀಸರ ಒಬ್ಬ ನಿವೃತ್ತ ಇನ್ಸ್‌ಪೆಕ್ಟರ್‌ ಆಗಿರುವ ಹೇಡನ್‌ ಹೇಳುವುದು: “ಯಾವಾಗಲೂ ಆತ್ಮನಿಯಂತ್ರಣದಿಂದ ಕಾರ್ಯನಡಿಸುವಂತೆ ನಮಗೆ ಕಲಿಸಲಾಗುತ್ತಿತ್ತು, ಏಕೆಂದರೆ ಯಶಸ್ವಿಕರವಾದ ಪೊಲೀಸ್‌ ವ್ಯವಸ್ಥೆಯು ಸಮುದಾಯದ ಬೆಂಬಲವನ್ನು ಅಗತ್ಯಪಡಿಸುತ್ತದೆ. ಸಾಮಾನ್ಯವಾಗಿ ನಮ್ಮ ಮೋಟುದೊಣ್ಣೆಗಳು ಕಟ್ಟಕಡೆಯ ಪ್ರಯತ್ನವಾಗಿ ಮಾತ್ರ ಉಪಯೋಗಿಸಲ್ಪಡುತ್ತಿದ್ದವು, ಆದರೂ ಅಧಿಕಾಂಶ ಅಧಿಕಾರಿಗಳು ತಮ್ಮ ಇಡೀ ಜೀವನವೃತ್ತಿಯಲ್ಲಿ ಇವುಗಳನ್ನು ಉಪಯೋಗಿಸಿಯೇ ಇಲ್ಲ.” ಬ್ರಿಟಿಷ್‌ ಬಾಬಿಗಳ ಸಕಾರಾತ್ಮಕ ಪ್ರಭಾವಕ್ಕೆ ಹೆಚ್ಚನ್ನು ಕೂಡಿಸಿದ ಇನ್ನೊಂದು ಅಂಶವು, ತನ್ನ ಗಸ್ತಿನ ಸರಹದ್ದಿನಲ್ಲಿದ್ದ ಪ್ರತಿಯೊಬ್ಬರ ಪರಿಚಯವಿದ್ದ ಒಬ್ಬ ಪ್ರಾಮಾಣಿಕ ಕಾನ್ಸ್‌ಟೇಬಲ್‌ನ ಕುರಿತು 21 ವರ್ಷಗಳ ವರೆಗೆ ತೋರಿಸಲ್ಪಟ್ಟ ಒಂದು ಜನಪ್ರಿಯ ಟಿವಿ ಸರಣಿ, ಡಿಕ್ಸನ್‌ ಆಫ್‌ ಡಾಕ್‌ ಗ್ರೀನ್‌ ಆಗಿತ್ತು. ಇದು ಆ ಕೀರ್ತಿಗೆ ತಕ್ಕಂತೆ ಜೀವಿಸಲು ಪೊಲೀಸರನ್ನು ಪ್ರೋತ್ಸಾಹಿಸಿರಬಹುದಾದರೂ, ಬ್ರಿಟಿಷರು ಪೊಲೀಸರನ್ನು ತುಂಬ ಮೆಚ್ಚುವಂತೆ ಇದು ಅವರನ್ನು ಪ್ರಚೋದಿಸಿತು ಎಂಬುದಂತೂ ನಿಶ್ಚಯ.

ಬ್ರಿಟನ್‌ನಲ್ಲಿನ ಮನೋಭಾವಗಳು 1960ಗಳಲ್ಲಿ ಬದಲಾದವು, ಮತ್ತು ರಾಷ್ಟ್ರೀಯ ಹೆಮ್ಮೆಯ ಪರಂಪರೆಗೆ ಬದಲಾಗಿ ಅಧಿಕಾರವನ್ನು ಪ್ರಶ್ನಿಸುವಂಥ ಪರಂಪರೆಯು ರೂಢಿಗೆ ಬಂತು. ನೆರೆಹೊರೆ ಕಾವಲಿನ ಹಂಚಿಕೆಯ ಮೂಲಕ ಸಾರ್ವಜನಿಕರ ಬೆಂಬಲವನ್ನು ಪಡೆಯಲು ಪೊಲೀಸರು ಅನೇಕ ಪ್ರಯತ್ನಗಳನ್ನು ಮಾಡಿದರೂ, ಪೊಲೀಸರ ದರ್ಜೆಗಳಲ್ಲಿ ಭ್ರಷ್ಟಾಚಾರ ಹಾಗೂ ಜಾತಿವಾದದ ಕುರಿತಾದ ವರದಿಗಳು 1970ಗಳಲ್ಲಿ ಅವರ ಹೆಸರನ್ನೇ ಹಾಳುಮಾಡಿಬಿಟ್ಟವು. ಇತ್ತೀಚೆಗೆ, ಜಾತಿವಾದ ಹಾಗೂ ತಮ್ಮ ಅಭಿಪ್ರಾಯಗಳನ್ನು ಪುಷ್ಟೀಕರಿಸಲಿಕ್ಕಾಗಿ ಕಲ್ಪಿತ ಪುರಾವೆಯ ಅನೇಕ ಆಪಾದನೆಗಳ ಬಳಿಕ, ಪೊಲೀಸರು ಈಗ ತಮ್ಮ ನಡವಳಿಕೆಯನ್ನು ಉತ್ತಮಗೊಳಿಸಲಿಕ್ಕಾಗಿ ಇನ್ನೂ ಹೆಚ್ಚಿನ, ಯಥಾರ್ಥ ಪ್ರಯತ್ನಗಳನ್ನು ಮಾಡಿದ್ದಾರೆ.

[ಕೃಪೆ]

Photograph above: http://www.constabulary.com

[ಪುಟ 10ರಲ್ಲಿರುವ ಚೌಕ/ಚಿತ್ರ]

ನ್ಯೂ ಯಾರ್ಕ್‌ ನಗರದಲ್ಲಿ ಒಂದು ಪವಾಡವೋ?

ಪೊಲೀಸರು ವಿಶೇಷ ಪ್ರಯತ್ನಗಳನ್ನು ಮಾಡುವಾಗ, ಫಲಿತಾಂಶಗಳು ಗಮನಾರ್ಹವಾಗಿರಬಲ್ಲವು. ಬಹಳ ಕಾಲದ ವರೆಗೆ ನ್ಯೂ ಯಾರ್ಕನ್ನು ಲೋಕದ ಅತ್ಯಂತ ಅಪಾಯಕರ ನಗರಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತಿತ್ತು; ಮತ್ತು 1980ಗಳ ಕೊನೆಯಷ್ಟಕ್ಕೆ, ಸ್ಥೈರ್ಯಗೆಟ್ಟಿದ್ದ ಪೊಲೀಸ್‌ ಪಡೆಗಳು ದುಷ್ಕೃತ್ಯವನ್ನು ನಿಯಂತ್ರಿಸಲು ಅಶಕ್ತವಾಗಿದ್ದವೋ ಎಂಬಂತೆ ತೋರುತ್ತಿತ್ತು. ಆರ್ಥಿಕ ಒತ್ತಡವು, ಪೊಲೀಸರ ಸಂಬಳವನ್ನು ತಟಸ್ಥಗೊಳಿಸುವಂತೆ ಹಾಗೂ ಅವರ ಸಂಖ್ಯೆಯನ್ನು ಕಡಿಮೆಗೊಳಿಸುವಂತೆ ಮಾಡಿತು. ಅಮಲೌಷಧದ ವ್ಯಾಪಾರಿಗಳು ತಮ್ಮ ಚಟುವಟಿಕೆಯನ್ನು ವಿಸ್ತರಿಸಿದರು ಮತ್ತು ಇದು ಹಿಂಸೆಯ ಭೀಕರ ಅಲೆಯನ್ನೇ ಎಬ್ಬಿಸಿತು. ನಗರದ ಕೇಂದ್ರಭಾಗದ ನಿವಾಸಿಗಳು ರಾತ್ರಿ ಮಲಗಲು ಹೋಗುವಾಗ ಅನೇಕವೇಳೆ ಬಂದೂಕಿನ ಧ್ವನಿಯನ್ನು ಕೇಳಿಸಿಕೊಳ್ಳುತ್ತಿದ್ದರು. 1991ರಲ್ಲಿ ಜಾತಿಸಂಬಂಧವಾದ ದೊಡ್ಡ ಗಲಭೆಗಳು ನಡೆದವು, ಮತ್ತು ಸ್ವತಃ ಪೊಲೀಸರೇ ತಮ್ಮ ದೂರುಗಳನ್ನು ವ್ಯಕ್ತಪಡಿಸಲಿಕ್ಕಾಗಿ ಗದ್ದಲಭರಿತ ಪ್ರತಿಭಟನೆಯನ್ನು ಮಾಡಿದರು.

ಆದರೂ, ಒಬ್ಬ ಹೊಸ ಪೊಲೀಸ್‌ ಮುಖ್ಯಸ್ಥನು ತನ್ನ ಅಧಿಕಾರಿಗಳನ್ನು ಪ್ರಚೋದಿಸುವುದರಲ್ಲಿ ಆಸಕ್ತಿಯನ್ನು ವಹಿಸಿದನು. ಇದಕ್ಕಾಗಿ ಅವನು ಕ್ರಮವಾಗಿ ಆ ಅಧಿಕಾರಿಗಳನ್ನು ಸಂಧಿಸುತ್ತಾ, ಪ್ರತಿಯೊಂದು ಉಪವಿಭಾಗಕ್ಕಾಗಿ ವ್ಯೂಹ ಉಪಾಯಗಳನ್ನು ಅವರೊಂದಿಗೆ ವಿಶ್ಲೇಷಿಸಿದನು. ಜೇಮ್ಸ್‌ ಲಾರ್ಡ್‌ನರ್‌ ಮತ್ತು ಥಾಮಸ್‌ ರಪೆಟೊ ಎಂಬವರು ಎನ್‌ವೈಪಿಡಿ ಎಂಬ ತಮ್ಮ ಪುಸ್ತಕದಲ್ಲಿ ವಿವರಿಸುವುದು: “ಪತ್ತೇದಾರರ ಮುಖಂಡ ಅಥವಾ ಮಾದಕವಸ್ತುಗಳ ಬ್ಯೂರೋದ ಮುಖ್ಯಸ್ಥನ ಕುರಿತು ಉಪವಿಭಾಗದ ಕಮಾಂಡರ್‌ಗಳು ವಾರ್ತಾಪತ್ರಿಕೆಗಳಲ್ಲಿ ಓದಿದ್ದರಷ್ಟೇ ಹೊರತು ಎಂದೂ ಅವರನ್ನು ಭೇಟಿಯಾಗಿರಲಿಲ್ಲ. ಆದರೆ ಈಗ ಅವರೆಲ್ಲರೂ ಈ ಸೆಶನ್‌ಗಳಿಗಾಗಿ ಗಂಟೆಗಟ್ಟಲೆ ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು.” ಅಂದಿನಿಂದ ದುಷ್ಕೃತ್ಯದ ಸಂಖ್ಯೆಗಳು ಕಡಿಮೆಯಾಗತೊಡಗಿದವು. ವರದಿಗನುಸಾರ, ಕೊಲೆಗಳು ಕ್ರಮೇಣವಾಗಿ 1993ರಲ್ಲಿ ಬಹುಮಟ್ಟಿಗೆ 2,000ದಿಂದ 1998ರಲ್ಲಿ 633ಕ್ಕೆ ಇಳಿದಿದ್ದವು. ಇದು 35 ವರ್ಷಗಳಲ್ಲೇ ಅತ್ಯಂತ ಕಡಿಮೆ ಸಂಖ್ಯೆಯಾಗಿತ್ತು. ನ್ಯೂ ಯಾರ್ಕಿನ ಜನರು ಇದನ್ನು ಒಂದು ಪವಾಡವಾಗಿ ಪರಿಗಣಿಸಿದರು. ಕಳೆದ ಎಂಟು ವರ್ಷಗಳಲ್ಲಿ, ಪೊಲೀಸ್‌ ಅಧಿಕಾರಿಗಳಿಗೆ ವರದಿಮಾಡಲ್ಪಟ್ಟಿದ್ದ ದುಷ್ಕೃತ್ಯಗಳಲ್ಲಿ ಸುಮಾರು 64 ಪ್ರತಿಶತ ಇಳಿತವಿದೆ.

ಈ ಪ್ರಗತಿಯು ಹೇಗೆ ಸಾಧಿಸಲ್ಪಟ್ಟಿತು? ಜನವರಿ 1, 2002ರ ದ ನ್ಯೂ ಯಾರ್ಕ್‌ ಟೈಮ್ಸ್‌ ಸಲಹೆ ನೀಡಿದ್ದೇನೆಂದರೆ, ಕಾಂಪ್‌ಸ್ಟ್ಯಾಟ್‌ (ಕಂಪ್ಯೂಟರ್‌ ಕಂಪ್ಯಾರಿಸನ್‌ ಸ್ಟ್ಯಾಟಿಸ್ಟಿಕ್ಸ್‌) ಅಂದರೆ “ಸಮಸ್ಯೆಗಳು ಉದಯಿಸಿದ ಕೂಡಲೆ ಅವುಗಳನ್ನು ಗುರುತಿಸಲು ಹಾಗೂ ಅವುಗಳಿಗೆ ಪ್ರತಿಕ್ರಿಯೆ ತೋರಿಸಲು, ಪ್ರತಿ ವಾರ ಪ್ರತಿಯೊಂದು ಉಪವಿಭಾಗದ ಸಂಖ್ಯಾಸಂಗ್ರಹಣಗಳ ಪರೀಕ್ಷೆ ಮಾಡುವುದನ್ನು ಒಳಗೂಡಿರುವ ದುಷ್ಕೃತ್ಯವನ್ನು ಪತ್ತೆಹಚ್ಚುವ ವ್ಯವಸ್ಥೆ”ಯೇ ಯಶಸ್ಸಿಗೆ ಒಂದು ಕೀಲಿ ಕೈಯಾಗಿತ್ತು. ಮಾಜಿ ಪೊಲೀಸ್‌ ಕಮಿಷನರ್‌ ಬರ್ನರ್ಡ್‌ ಕೆರಕ್‌ ಹೇಳಿದ್ದು: “ದುಷ್ಕೃತ್ಯವು ಎಲ್ಲಿ ನಡೆಯುತ್ತಿದೆ, ಅದು ಏಕೆ ನಡೆಯುತ್ತಿದೆ ಎಂಬುದನ್ನು ನಾವು ಗಮನಿಸುತ್ತಿದ್ದೆವು, ಮತ್ತು ನಂತರ ಆ ಕ್ಷೇತ್ರಗಳಿಗೆ ಹೆಚ್ಚು ಗಮನ ಕೊಡುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ [ಪೊಲೀಸ್‌] ದಳಗಳನ್ನು ಹಾಗೂ ಸಂಪನ್ಮೂಲಗಳನ್ನು ಬೇರೆ ಸ್ಥಳಗಳಿಂದ ತಂದು ಅಲ್ಲಿಗೆ ಕಳುಹಿಸುತ್ತಿದ್ದೆವು. ದುಷ್ಕೃತ್ಯವನ್ನು ತಗ್ಗಿಸಿದ ರೀತಿ ಇದೇ ಆಗಿತ್ತು.”

[ಪುಟ 7ರಲ್ಲಿರುವ ಚಿತ್ರ]

ಸಾಮಾನ್ಯ ಜಪಾನೀ ಪೊಲೀಸ್‌ ಠಾಣೆ

[ಪುಟ 7ರಲ್ಲಿರುವ ಚಿತ್ರ]

ಹಾಂಗ್‌ ಕಾಂಗ್‌ನಲ್ಲಿ ಟ್ರ್ಯಾಫಿಕ್‌ ಪೊಲೀಸ್‌

[ಪುಟ 8, 9ರಲ್ಲಿರುವ ಚಿತ್ರ]

ಇಂಗ್ಲಿಷ್‌ ಕಾಲ್ಚೆಂಡಾಟದ ಸ್ಪರ್ಧೆಯೊಂದರಲ್ಲಿ ಜನರ ಗುಂಪಿನ ನಿಯಂತ್ರಣ

[ಪುಟ 9ರಲ್ಲಿರುವ ಚಿತ್ರ]

ಪೊಲೀಸರ ಕರ್ತವ್ಯಗಳಲ್ಲಿ, ಅಪಘಾತಕ್ಕೆ ಒಳಗಾದ ಜನರಿಗೆ ಸಹಾಯ ನೀಡುವುದೂ ಸೇರಿದೆ