ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಹನ ಅಪಘಾತಗಳು ನೀವು ಸುರಕ್ಷಿತರಾಗಿದ್ದೀರೊ?

ವಾಹನ ಅಪಘಾತಗಳು ನೀವು ಸುರಕ್ಷಿತರಾಗಿದ್ದೀರೊ?

ವಾಹನ ಅಪಘಾತಗಳು ನೀವು ಸುರಕ್ಷಿತರಾಗಿದ್ದೀರೊ?

“ನನ್ನ ಡ್ರೈವಿಂಗ್‌ ರೆಕಾರ್ಡ್‌ ತುಂಬ ಒಳ್ಳೇದಿದೆ, ಆದುದರಿಂದ ವಾಹನ ಅಪಘಾತ ಆಗುವುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಬೇಕಾಗಿಲ್ಲ.” “ಅಪಘಾತಗಳು, ಯುವ ಪ್ರಾಯದ ಹಾಗೂ ಅಜಾಗರೂಕರಾಗಿರುವ ವಾಹನ ಚಾಲಕರಿಗೆ ಮಾತ್ರ ಆಗುತ್ತದೆ.” ತಮಗೆ ಎಂದೂ ವಾಹನ ಅಪಘಾತವಾಗಲಾರದು ಎಂದು ಅನೇಕರು ನೆನಸುತ್ತಾರೆ. ನಿಮಗೂ ಹೀಗೆಯೇ ಅನಿಸುತ್ತದೊ? ವಾಹನ ಅಪಘಾತಗಳ ವಿಷಯಕ್ಕೆ ಬರುವಾಗ, ನಿಮಗೆ ಏನೂ ಆಗಲಿಕ್ಕಿಲ್ಲವೊ?

ವಿಕಾಸಗೊಂಡಿರುವ ಒಂದು ದೇಶದಲ್ಲಿ ನೀವು ವಾಸಿಸುತ್ತಿರುವಲ್ಲಿ, ನಿಮ್ಮ ಜೀವಮಾನದಲ್ಲಿ ಕಡಿಮೆಪಕ್ಷ ಒಮ್ಮೆಯಾದರೂ ನೀವು ಒಂದು ವಾಹನ ಅಪಘಾತದಲ್ಲಿ ಗಾಯಗೊಳ್ಳುವ ಸಾಧ್ಯತೆಯಿದೆ ಎಂದು ಅಂಕಿಸಂಖ್ಯೆಗಳು ಸೂಚಿಸುತ್ತವೆ. ಅನೇಕರಿಗೆ ಇಂಥ ಅಪಘಾತಗಳು ಮಾರಕವಾಗಿ ಪರಿಣಮಿಸಿವೆ. ಲೋಕದಾದ್ಯಂತ, ಈಗ ಪ್ರತಿ ವರ್ಷ ವಾಹನ ಸಂಚಾರದ ಮರಣ ಸಂಖ್ಯೆಯು ಐದು ಲಕ್ಷಕ್ಕಿಂತಲೂ ಹೆಚ್ಚಾಗಿರುತ್ತದೆ. ಕಳೆದ ವರ್ಷ ಸಾವನ್ನಪ್ಪಿದವರಲ್ಲಿ ಅನೇಕರು, ಅದು ತಮಗೆ ಎಂದೂ ಸಂಭವಿಸಲಿಕ್ಕಿಲ್ಲವೆಂದು ನೆನಸಿದ್ದಿರಬಹುದು. ನಿಮ್ಮೆದುರಿಗಿರುವ ಗಂಡಾಂತರವನ್ನು ಕಡಿಮೆಗೊಳಿಸಲು ನೀವೇನು ಮಾಡಬಲ್ಲಿರಿ? ತಡೆಗಟ್ಟುವಿಕೆಯೇ ಮುಖ್ಯ ಕೀಲಿ ಕೈಯಾಗಿದೆ. ತೂಕಡಿಕೆ ಮತ್ತು ವೃದ್ಧಾಪ್ಯದ ಪರಿಣಾಮಗಳಿಂದ ಉಂಟಾಗುವ ಅಪಘಾತಗಳನ್ನು ನೀವು ಹೇಗೆ ತಡೆಗಟ್ಟಬಲ್ಲಿರೆಂಬುದನ್ನು ಪರಿಗಣಿಸಿರಿ.

ತೂಕಡಿಸುವಂಥ ಚಾಲಕನು

ತೂಕಡಿಸುವಂಥ ಒಬ್ಬ ಚಾಲಕನು, ಕುಡಿದು ಮತ್ತನಾಗಿರುವ ಚಾಲಕನಷ್ಟೇ ಅಪಾಯಕಾರಿಯಾಗಿರಬಲ್ಲನೆಂದು ಕೆಲವು ಪರಿಣತರು ಹೇಳುತ್ತಾರೆ. ತೂಕಡಿಸುವಿಕೆಯು ಹೆಚ್ಚೆಚ್ಚು ಸಂಖ್ಯೆಯ ಅಪಘಾತಗಳನ್ನು ಉಂಟುಮಾಡುತ್ತಿದೆಯೆಂದು ವರದಿಗಳು ಸೂಚಿಸುತ್ತವೆ. ಫ್ಲೀಟ್‌ ಮೇಂಟೆನೆನ್ಸ್‌ ಆ್ಯಂಡ್‌ ಸೇಫ್ಟಿ ರಿಪೋರ್ಟ್‌ ಇತ್ತೀಚೆಗೆ ತಿಳಿಸಿದ್ದೇನೆಂದರೆ, ಒಂದೇ ವರ್ಷದಲ್ಲಿ ನಾರ್ವೆಯಲ್ಲಿನ 12 ಮಂದಿ ಚಾಲಕರಲ್ಲಿ ಒಬ್ಬರು, ವಾಹನ ಚಲಾಯಿಸುತ್ತಿರುವಾಗಲೇ ತಾವು ನಿದ್ರೆಹೋಗುತ್ತಿದ್ದೆವೆಂಬುದನ್ನು ವರದಿಸಿದರು. ದಕ್ಷಿಣ ಆಫ್ರಿಕದ ಯೊಹಾನಸ್‌ಬರ್ಗ್‌ನ ದ ಸ್ಟಾರ್‌ ವಾರ್ತಾಪತ್ರಿಕೆಗನುಸಾರ, ಚಾಲಕರ ದಣಿವು ಆ ದೇಶದಲ್ಲಾಗುವ ಎಲ್ಲ ವಾಹನ ಢಿಕ್ಕಿಗಳಲ್ಲಿ ಸುಮಾರು ಮೂರನೇ ಒಂದು ಭಾಗಕ್ಕೆ ಕಾರಣವಾಗಿರುತ್ತದೆ. ದಣಿವು, ಎಲ್ಲೆಡೆಯೂ ಇರುವ ಚಾಲಕರನ್ನು ಬಾಧಿಸುತ್ತದೆಂದು ಇತರ ದೇಶಗಳಿಂದ ಬರುವ ವರದಿಗಳು ಬಯಲುಪಡಿಸುತ್ತವೆ. ಇಷ್ಟೊಂದು ಮಂದಿ ಚಾಲಕರು ತೂಕಡಿಸುತ್ತಿರಲು ಕಾರಣವೇನು?

ಇಂದಿನ ತರಾತುರಿಯ ಜೀವನ ಶೈಲಿಯು ಈ ಸಮಸ್ಯೆಗೆ ಕಾರಣವಾಗಿದೆ. ಅಮೆರಿಕನರು “ಇಪ್ಪತ್ತನೆಯ ಶತಮಾನದ ಅರಂಭದಲ್ಲಿ ಪ್ರತಿ ರಾತ್ರಿ ಮಲಗುತ್ತಿದ್ದ ಸಮಯಕ್ಕಿಂತಲೂ ಒಂದೂವರೆ ತಾಸು ಕಡಿಮೆ ಮಲಗುತ್ತಿರಬಹುದು​—⁠ಮತ್ತು ಈ ಸಮಸ್ಯೆಯು ಇನ್ನೂ ಕೆಟ್ಟದಾಗಲಿದೆ” ಎಂದು ಇತ್ತೀಚೆಗೆ ನ್ಯೂಸ್‌ವೀಕ್‌ ಪತ್ರಿಕೆಯು ವರದಿಸಿತು. ಏಕೆ? ನಿದ್ರೆ ಪರಿಣತರಾದ ಟೆರಿ ಯಂಗ್‌ ಹೀಗೆ ಹೇಳುವುದನ್ನು ಆ ಪತ್ರಿಕೆಯು ಉಲ್ಲೇಖಿಸಿತು: “ಜನರು ನಿದ್ರೆಯನ್ನು, ತಾವು ತೆಗೆದುಕೊಳ್ಳದೇ ಇರಬಹುದಾದ ಒಂದು ಸರಕಾಗಿ ಪರಿಗಣಿಸಿದ್ದಾರೆ. ತೀರ ಕಡಿಮೆ ನಿದ್ರಿಸಿ, ಕಠಿನವಾಗಿ ಕೆಲಸಮಾಡುವುದನ್ನು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗಿದೆ.”

ಸರಾಸರಿಯಾಗಿ ಒಬ್ಬ ವ್ಯಕ್ತಿಗೆ ಪ್ರತಿ ರಾತ್ರಿ ಆರೂವರೆ ತಾಸುಗಳಿಂದ ಹಿಡಿದು ಒಂಬತ್ತು ತಾಸುಗಳ ನಿದ್ರೆ ಅಗತ್ಯವೆಂದು ಹೇಳಲಾಗುತ್ತದೆ. ನಿದ್ರಾವಂಚಿತರಾದಾಗ, ಜನರು “ನಿದ್ರೆ ಸಾಲವನ್ನು” ಮಾಡಿಕೊಳ್ಳುತ್ತಾರೆ. ವಾಹನ ಸಂಚಾರ ಸುರಕ್ಷೆಗಾಗಿರುವ ಎಎಎ ಫೌಂಡೇಷನ್‌ನಿಂದ ವಿತರಿಸಲ್ಪಟ್ಟ ಒಂದು ವರದಿಯು ತಿಳಿಸುವುದು: “ಒಂದು ಸಾಮಾನ್ಯ ಕೆಲಸದ ವಾರದಲ್ಲಿ ಪ್ರತಿ ರಾತ್ರಿ 30 ಇಲ್ಲವೆ 40 ನಿಮಿಷ ಕಡಿಮೆ ನಿದ್ರಿಸುವುದರಿಂದ, ವಾರಾಂತ್ಯದೊಳಗೆ 3ರಿಂದ 4 ಗಂಟೆಗಳ ನಿದ್ರೆ ಸಾಲ ಜಮಾ ಆಗುತ್ತದೆ, ಮತ್ತು ಇದು ಹಗಲು ಹೊತ್ತಿನಲ್ಲಿ ತೂಕಡಿಸುವ ಮಟ್ಟಗಳನ್ನು ಗಮನಾರ್ಹವಾಗಿ ಏರಿಸಲು ಸಾಕಾಗಿರುತ್ತದೆ.”

ಕೆಲವೊಮ್ಮೆ, ಇಡೀ ರಾತ್ರಿ ಚೆನ್ನಾಗಿ ನಿದ್ರಿಸಲು ಸಾಧ್ಯವಾಗದಿರಬಹುದು. ನಿದ್ರಾಹೀನತೆ, ಅಸ್ವಸ್ಥ ಮಗುವಿನ ಆರೈಕೆ ಇಲ್ಲವೆ ನಿಮ್ಮ ಹಿಡಿತಕ್ಕೆ ಮೀರಿದ ಇತರ ಅಂಶಗಳಿಂದಾಗಿ ನಿಮಗೆ ನಿದ್ರಿಸಲು ಸಾಧ್ಯವಾಗಲಿಕ್ಕಿಲ್ಲ. ಆಗ ಮರುದಿನ ನೀವು ವಾಹನ ಚಲಾಯಿಸುತ್ತಿರುವಾಗ ನಿಮಗೆ ನಿದ್ರೆ ಬರುತ್ತಿರುವುದು ನಿಮ್ಮ ಅರಿವಿಗೆ ಬರಬಹುದು. ಹೀಗಾದಾಗ ನೀವೇನು ಮಾಡಬೇಕು?

ಕಾಫಿ ಕುಡಿಯುವುದು, ಕಿಟಕಿಯನ್ನು ತೆರೆದಿಡುವುದು, ಚೂಯಿಂಗ್‌ ಗಮ್‌ ಅಗಿಯುವುದು ಇಲ್ಲವೆ ಖಾರವಾದ ಯಾವುದೇ ತಿನಿಸನ್ನು ತಿನ್ನುವುದರಂಥ ಜನಪ್ರಿಯವಾದ ಉಪಾಯಗಳು ನಿಮ್ಮನ್ನು ಎಚ್ಚರವಾಗಿ ಇರಿಸದಿರಬಹುದು. ಉಪಾಯಗಳೆಂದು ಹೇಳಲಾಗುವ ಇವುಗಳಲ್ಲಿ ಒಂದೂ, ನಿಜವಾದ ಸಮಸ್ಯೆಯನ್ನು ಬಗೆಹರಿಸಲಾರವು. ನಿಮಗೆ ಬೇಕಾಗಿರುವುದು ನಿದ್ರೆಯೇ. ಆದುದರಿಂದ ಸ್ವಲ್ಪ ಹೊತ್ತು ನಿದ್ರಿಸಬಾರದೇಕೆ? ದ ನ್ಯೂ ಯಾರ್ಕ್‌ ಟೈಮ್ಸ್‌ ಸಲಹೆ ನೀಡಿದ್ದು: “ಕೆಲಸದ ದಿನದಂದು ಪುನರ್‌ಚೈತನ್ಯಗೊಳಿಸುವ ನಿದ್ದೆಯು 30 ನಿಮಿಷಗಳಿಗಿಂತಲೂ ಹೆಚ್ಚಾಗಿರಬಾರದು; ಇದಕ್ಕಿಂತಲೂ ಹೆಚ್ಚು ನಿದ್ರಿಸಿದರೆ ದೇಹವು ಗಾಢವಾದ ನಿದ್ರೆಗೆ ಜಾರುತ್ತದೆ ಮತ್ತು ಇದರಿಂದ ಎಚ್ಚೆತ್ತುಕೊಳ್ಳುವುದು ಕಷ್ಟ.” ಸ್ವಲ್ಪ ಹೊತ್ತು ನಿದ್ರೆಮಾಡುವುದರಿಂದ ನೀವು ನಿಮ್ಮ ಗಮ್ಯಸ್ಥಾನವನ್ನು ಸ್ವಲ್ಪ ತಡವಾಗಿ ತಲಪುವಿರಾದರೂ, ಅದು ನಿಮ್ಮ ಆಯುಷ್ಯವನ್ನು ಲಂಬಿಸುವುದು.

ನಿಮ್ಮ ಜೀವನ ಶೈಲಿಯು, ನೀವು ತೂಕಡಿಸುವಂಥ ಒಬ್ಬ ಚಾಲಕನಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದು. ನೀವು ಇಂಟರ್‌ನೆಟ್‌ನಲ್ಲಿ ಬಹಳಷ್ಟು ಸಮಯವನ್ನು ಕಳೆಯುತ್ತೀರೊ, ಇಲ್ಲವೆ ಟಿವಿ ನೋಡುತ್ತಾ ರಾತ್ರಿ ತುಂಬ ಹೊತ್ತಿನ ವರೆಗೂ ಎಚ್ಚರವಾಗಿರುತ್ತೀರೊ? ಮುಂಜಾನೆಯ ವರೆಗೂ ನಡೆಯುತ್ತಿರುವ ಸಾಮಾಜಿಕ ಗೋಷ್ಠಿಗಳಿಗೆ ಹೋಗುತ್ತೀರೊ? ಇಂಥ ರೂಢಿಗಳು, ನಿಮ್ಮ ನಿದ್ರೆಯನ್ನು ಕಸಿದುಕೊಳ್ಳುವಂತೆ ಬಿಡಬೇಡಿರಿ. ಕೇವಲ “ಒಂದು ಬೊಗಸೆ ತುಂಬ ವಿರಾಮ”ದ ಮೌಲ್ಯವನ್ನು ಬುದ್ಧಿವಂತ ರಾಜನಾದ ಸೊಲೊಮೋನನು ಒಮ್ಮೆ ಒತ್ತಿಹೇಳಿದನು.​—⁠ಪ್ರಸಂಗಿ 4:​6, NW.

ಅನುಭವಿಗಳಾದರೂ ಪ್ರಾಯವಾದವರು

ವೃದ್ಧ ಚಾಲಕರು ರಸ್ತೆಯಲ್ಲಿರುವ ಅತಿ ಅನುಭವಿ ಚಾಲಕರಾಗಿರುತ್ತಾರೆ. ಅದಲ್ಲದೆ, ಅವರು ಅಪಾಯಗಳಿಗೆ ತಲೆಗೊಡುವುದು ತುಂಬ ಕಡಿಮೆ ಮತ್ತು ಅವರಿಗೆ ತಮ್ಮ ಇತಿಮಿತಿಗಳು ತಿಳಿದಿರುತ್ತವೆ. ಆದರೆ ವೃದ್ಧ ಚಾಲಕರು, ವಾಹನ ಅಪಘಾತಗಳ ಅಪಾಯದಿಂದ ಸುರಕ್ಷಿತರಾಗಿದ್ದಾರೆಂದು ಹೇಳಲಾಗುವುದಿಲ್ಲ. ಕಾರ್‌ ಮತ್ತು ಪ್ರಯಾಣ (ಇಂಗ್ಲಿಷ್‌) ಎಂಬ ಅಮೆರಿಕನ್‌ ಪತ್ರಿಕೆಯು ವರದಿಸಿದ್ದು: “70 ವರ್ಷಕ್ಕಿಂತಲೂ ಹೆಚ್ಚು ಪ್ರಾಯದ ಜನರು ಜನಸಂಖ್ಯೆಯಲ್ಲಿ 9 ಪ್ರತಿಶತ ಇದ್ದಾರೆ, ಆದರೆ ವಾಹನ ಸಂಚಾರ ಅಪಘಾತಗಳ ಮರಣ ಸಂಖ್ಯೆಗಳಲ್ಲಿ 13 ಪ್ರತಿಶತ ಇದ್ದಾರೆ.” ವಿಷಾದಕರ ಸಂಗತಿಯೇನೆಂದರೆ, ವೃದ್ಧ ಚಾಲಕರನ್ನು ಒಳಗೊಂಡಿರುವ ವಾಹನ ಅಪಘಾತಗಳ ಸಂಖ್ಯೆಯು ಏರುತ್ತಾ ಇದೆ.

ಮರ್ಟಲ್‌ ಎಂಬ 80 ವರ್ಷ ಪ್ರಾಯದ ಮಹಿಳೆಯ ಅಭಿಪ್ರಾಯೋಕ್ತಿಗಳನ್ನು ಪರಿಗಣಿಸಿರಿ. * ಅವರು 60ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ವಾಹನ ಚಲಾಯಿಸಲು ಆರಂಭಿಸಿದ್ದರು ಮತ್ತು ಅಂದಿನಿಂದ ಈ ವರೆಗೂ ಅವರಿಗೆ ಒಮ್ಮೆಯೂ ವಾಹನ ಅಪಘಾತವಾಗಿಲ್ಲ. ಆದರೆ ಇತರರಂತೆ ಇವರಿಗೂ ವೃದ್ಧಾಪ್ಯದ ಪರಿಣಾಮಗಳ ಅನುಭವವಾಗುತ್ತಿದೆ. ಈ ಪರಿಣಾಮಗಳು ಅವರು ಒಂದು ಅಪಘಾತಕ್ಕೀಡಾಗುವ ಸಾಧ್ಯತೆಯನ್ನು ಹೆಚ್ಚಿಸಬಲ್ಲವು. ಇತ್ತೀಚೆಗೆ ಅವರು ಎಚ್ಚರ! ಪತ್ರಿಕೆಗೆ ಹೇಳಿದ್ದು: “ನೀವು ವೃದ್ಧರಾಗುತ್ತಾ ಹೋದಂತೆ, ಬದುಕಿನಲ್ಲಿ ಪ್ರತಿಯೊಂದು ವಿಷಯವೂ [ಡ್ರೈವಿಂಗ್‌ ಸಮೇತ] ಒಂದು ಕಷ್ಟಕರವಾದ ಕೆಲಸವಾಗಿಬಿಡುತ್ತದೆ.”

ವಾಹನ ಅಪಘಾತವಾಗುವ ಅಪಾಯವನ್ನು ಕಡಿಮೆಗೊಳಿಸಲು ಅವರು ಏನು ಮಾಡಿದ್ದಾರೆ? “ಕಳೆದ ಕೆಲವು ವರ್ಷಗಳಿಂದ ನನ್ನ ವಯಸ್ಸಿಗೆ ಸರಿದೂಗುವಂಥ ಹೊಂದಾಣಿಕೆಗಳನ್ನು ಮಾಡಿದ್ದೇನೆ” ಎಂದು ಮರ್ಟಲ್‌ ಹೇಳುತ್ತಾರೆ. ಉದಾಹರಣೆಗಾಗಿ, ವಾಹನ ಚಲಾಯಿಸುವುದರಲ್ಲಿ ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ ಅವರು ಕಳೆಯುವ ಸಮಯವನ್ನು ಕಡಿಮೆಗೊಳಿಸಿದ್ದಾರೆ. ಈ ಚಿಕ್ಕ ಬದಲಾವಣೆಯು ಅವರು ವಾಹನ ಚಲಾಯಿಸುವುದನ್ನು ನಿಲ್ಲಿಸದೆ, ಸುರಕ್ಷಿತವಾದ ಡ್ರೈವಿಂಗ್‌ ರೆಕಾರ್ಡ್‌ ಅನ್ನು ಕಾಪಾಡಿಕೊಳ್ಳುವಂತೆ ಸಹಾಯಮಾಡಿದೆ.

ಇದನ್ನು ಒಪ್ಪಿಕೊಳ್ಳುವುದು ಕಷ್ಟಕರವಾದ ಸಂಗತಿಯಾಗಿರಬಹುದಾದರೂ, ವೃದ್ಧರಾಗುವ ಕಾರ್ಯಗತಿಯು ಎಲ್ಲರ ಮೇಲೆ ಪ್ರತಿಕೂಲವಾದ ಪರಿಣಾಮಗಳನ್ನು ಬೀರುತ್ತದೆಂಬುದು ನಿಜ. (ಪ್ರಸಂಗಿ 12:​1-7) ವಿಭಿನ್ನ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ, ನಾವು ಸ್ವಲ್ಪ ನಿಧಾನವಾಗಿ ಪ್ರತಿಕ್ರಿಯೆ ತೋರಿಸುತ್ತೇವೆ, ಮತ್ತು ನಮ್ಮ ದೃಷ್ಟಿಯು ಹದಗೆಡುತ್ತಾ ಹೋಗುತ್ತದೆ. ಮತ್ತು ಇವೆಲ್ಲವೂ ಸುರಕ್ಷಿತವಾಗಿ ವಾಹನ ಚಲಾಯಿಸುವುದನ್ನು ಕಷ್ಟಕರವನ್ನಾಗಿ ಮಾಡಸಾಧ್ಯವಿದೆ. ಆದರೆ ಇಳಿವಯಸ್ಸು ತಾನೇ ಒಬ್ಬನನ್ನು ಚಾಲಕನಾಗಿರುವುದರಿಂದ ಅನರ್ಹಗೊಳಿಸುವುದಿಲ್ಲ. ಒಬ್ಬನು ಎಷ್ಟು ಚೆನ್ನಾಗಿ ವಾಹನ ಚಲಾಯಿಸುತ್ತಾನೆಂಬುದು ಮುಖ್ಯ ವಿಷಯವಾಗಿರುತ್ತದೆ. ನಮ್ಮ ಶಾರೀರಿಕ ಸಾಮರ್ಥ್ಯಗಳಲ್ಲಿ ಬದಲಾವಣೆಗಳಾಗುತ್ತಿವೆ ಎಂಬುದನ್ನು ಒಪ್ಪಿಕೊಳ್ಳುವುದು ಮತ್ತು ನಮ್ಮ ನಿತ್ಯದ ರೂಢಿಯಲ್ಲಿ ಸೂಕ್ತವಾದ ಹೊಂದಾಣಿಕೆಗಳನ್ನು ಮಾಡುವುದು, ನಮ್ಮ ಡ್ರೈವಿಂಗ್‌ ಅನ್ನು ಇನ್ನೂ ಹೆಚ್ಚು ಉತ್ತಮಗೊಳಿಸಬಲ್ಲದು.

ನಿಮ್ಮ ದೃಷ್ಟಿಶಕ್ತಿಯು ಬದಲಾಗುತ್ತಿರುವುದಾದರೂ ಇದು ನಿಮ್ಮ ಗಮನಕ್ಕೆ ಬರದಿರಬಹುದು. ನೀವು ವೃದ್ಧರಾಗುತ್ತಾ ಹೋದಂತೆ, ನಿಮ್ಮ ದೃಷ್ಟಿಯು ಹೆಚ್ಚು ಕಿರಿದಾಗುತ್ತದೆ ಮತ್ತು ಅಕ್ಷಿಪಟಲಕ್ಕೆ ಹೆಚ್ಚು ಬೆಳಕಿನ ಅಗತ್ಯವಿರುತ್ತದೆ. ಹೆಚ್ಚು ವಯಸ್ಸಾದ ಮತ್ತು ಹೆಚ್ಚು ವಿವೇಕಿಯಾದ ಡ್ರೈವರ್‌ (ಇಂಗ್ಲಿಷ್‌) ಎಂಬ ಶೀರ್ಷಿಕೆಯುಳ್ಳ ಪುಸ್ತಿಕೆಯು ತಿಳಿಸುವುದು: “60ರ ವಯಸ್ಸಿನ ಒಬ್ಬ ಚಾಲಕನಿಗೆ ಒಬ್ಬ ಹದಿವಯಸ್ಕನಿಗಿಂತಲೂ ಮೂರು ಪಟ್ಟು ಹೆಚ್ಚು ಬೆಳಕಿನ ಅಗತ್ಯವಿರುತ್ತದೆ, ಮತ್ತು ಬೆಳಕಿನಿಂದ ಕತ್ತಲೆಯಂಥ ಬದಲಾವಣೆಗೆ ಹೊಂದಿಕೊಳ್ಳಲು ಎರಡು ಪಟ್ಟು ಹೆಚ್ಚು ಸಮಯ ಆವಶ್ಯಕ.” ನಮ್ಮ ಕಣ್ಣುಗಳಲ್ಲಿನ ಈ ಬದಲಾವಣೆಗಳು, ರಾತ್ರಿ ಹೊತ್ತಿನಲ್ಲಿನ ಡ್ರೈವಿಂಗ್‌ ಅನ್ನು ಕಷ್ಟಕರವಾಗಿ ಮಾಡಬಲ್ಲದು.

ಹೆನ್ರಿ ಎಂಬವರ ವಯಸ್ಸು 72 ಮತ್ತು ಅವರು 50ಕ್ಕಿಂತಲೂ ಹೆಚ್ಚು ವರ್ಷಗಳಿಂದ ಸುರಕ್ಷಿತವಾದ ಡ್ರೈವಿಂಗ್‌ ರೆಕಾರ್ಡ್‌ ಅನ್ನು ಕಾಪಾಡಿಕೊಂಡಿದ್ದಾರೆ. ವರ್ಷಗಳು ದಾಟಿದಂತೆ, ರಾತ್ರಿ ಹೊತ್ತಿನಲ್ಲಿನ ತೀಕ್ಷ್ಣ ಬೆಳಕಿನಿಂದಾಗಿ ಅವರಿಗೆ ವಾಹನ ಚಲಾಯಿಸುವುದು ಕಷ್ಟಕರವಾಗುತ್ತಾ ಇರುವುದನ್ನು ಗಮನಿಸಿದರು. ಕಣ್ಣುಗಳನ್ನು ಪರೀಕ್ಷಿಸಿದ ನಂತರ ಅವರಿಗೆ, ರಾತ್ರಿ ಹೊತ್ತಿನ ತೀಕ್ಷ್ಣ ಬೆಳಕಿನ ಉಜ್ವಲತೆಯನ್ನು ಕಡಿಮೆಗೊಳಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರುವ ಹೊಸ ಕನ್ನಡಕಗಳ ಅಗತ್ಯವಿದೆಯೆಂದು ಗೊತ್ತಾಯಿತು. “ಈಗ ರಾತ್ರಿ ಹೊತ್ತಿನಲ್ಲಿ ವಾಹನ ಚಲಾಯಿಸುವುದು ಕಷ್ಟಕರವಲ್ಲ” ಎಂದು ಹೆನ್ರಿ ಹೇಳುತ್ತಾರೆ. ಅವರು ಮಾಡಿದ ಈ ಚಿಕ್ಕ ಹೊಂದಾಣಿಕೆಯು, ಅವರ ವಾಹನ ಚಲಾಯಿಸುವಿಕೆಯಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಿದೆ. ಮರ್ಟಲ್‌ರಂಥ ಇತರರಿಗೆ, ರಾತ್ರಿಹೊತ್ತಿನಲ್ಲಿ ವಾಹನ ಚಲಾಯಿಸುವುದನ್ನು ಪೂರ್ಣವಾಗಿ ಬಿಟ್ಟುಬಿಡುವುದೇ ಅವರ ಸಮಸ್ಯೆಗೆ ಪರಿಹಾರವಾಗಿರಬಹುದು.

ಒಬ್ಬ ವ್ಯಕ್ತಿಗೆ ವಯಸ್ಸಾಗುತ್ತಾ ಹೋಗುವಾಗ, ಅದು ಅವನು ಪ್ರತಿಕ್ರಿಯೆ ತೋರಿಸಲು ತೆಗೆದುಕೊಳ್ಳುವ ಸಮಯದ ಮೇಲೆ ಪ್ರಭಾವ ಬೀರುತ್ತದೆ. ವೃದ್ಧರ ಮನಸ್ಸುಗಳು ಯುವ ಜನರ ಮನಸ್ಸುಗಳಿಗಿಂತಲೂ ಹೆಚ್ಚು ವಿವೇಕಪೂರ್ಣವೂ ಹೆಚ್ಚು ಸೂಕ್ಷ್ಮವೂ ಆಗಿರಬಲ್ಲವು. ಆದರೆ ಒಬ್ಬ ವ್ಯಕ್ತಿಯು ವೃದ್ಧನಾಗುತ್ತಾ ಹೋದಂತೆ, ಮಾಹಿತಿಯನ್ನು ಸಂಸ್ಕರಿಸಿ, ಪ್ರತಿಕ್ರಿಯಿಸಲು ಹೆಚ್ಚು ಸಮಯ ತಗಲುತ್ತದೆ. ಇದರಿಂದಾಗಿ ವಾಹನ ಚಲಾಯಿಸುವುದು ಹೆಚ್ಚು ಕಷ್ಟಕರವಾಗುತ್ತದೆ, ಏಕೆಂದರೆ ವಾಹನ ಸಂಚಾರ ಮತ್ತು ರಸ್ತೆಯಲ್ಲಿನ ಸ್ಥಿತಿಗಳು ಸತತವಾಗಿ ಬದಲಾಗುತ್ತಾ ಇರುತ್ತವೆ. ಮತ್ತು ಸರಿಯಾದ ಸಮಯದಲ್ಲಿ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕಾದರೆ ಈ ಬದಲಾವಣೆಗಳನ್ನು ತಟ್ಟನೆ ಅಂದಾಜುಮಾಡಿ ನಿರ್ಣಯಗಳನ್ನು ಮಾಡಬೇಕಾಗುತ್ತದೆ.

ಕಾರ್‌ ಮತ್ತು ಪ್ರಯಾಣ (ಇಂಗ್ಲಿಷ್‌) ಎಂಬ ಪತ್ರಿಕೆಯು ವರದಿಸುವುದೇನೆಂದರೆ, “ಹಿರಿಯ ಚಾಲಕರಲ್ಲಿ ಆಗುವ ಮಾರಕವಾದ ಢಿಕ್ಕಿಗಳ ಅತಿ ಸಾಮಾನ್ಯ ಕಾರಣವೇನೆಂದರೆ, ವೃದ್ಧ ಚಾಲಕನು ವಾಹನ ಸಂಚಾರ ನಿಯಂತ್ರಣ ಉಪಕರಣದ ಸೂಚನೆಯನ್ನು ನೋಡದೆ ಮುಂದೆ ಹೋದದ್ದೇ.” ಏಕೆ? ಅದೇ ವರದಿಯು ಮುಂದುವರಿಸುವುದು: “ಒಬ್ಬ ವೃದ್ಧ ಚಾಲಕನು ಒಂದು ಚೌಕವನ್ನು ದಾಟುವ ಮುಂಚೆ ತನ್ನ ಎಡಕ್ಕೂ ಬಲಕ್ಕೂ ಬದಲಾಗುತ್ತಾ ಇರುವ ಸಂಚಾರವನ್ನು ವಿಮರ್ಶಿಸಬೇಕಾಗುವ ಸನ್ನಿವೇಶಗಳೊಂದಿಗೆ . . . ಈ ಸಮಸ್ಯೆಯು ಸಂಬಂಧಿಸಿರುವಂತೆ ತೋರುತ್ತದೆ.”

ಹೆಚ್ಚು ನಿಧಾನವಾಗಿ ಬರುವ ಪ್ರತಿಕ್ರಿಯೆಗಳಿಗಾಗಿ ನೀವೇನು ಮಾಡಬಹುದು? ರಸ್ತೆಗಳ ಚೌಕಗಳ ಹತ್ತಿರ ಬರುತ್ತಿರುವಾಗ ಎಚ್ಚರಿಕೆಯಿಂದಿರಿ. ಮುಂದುವರಿಯುವ ಮುಂಚೆ ಎರಡೆರಡು ಸಾರಿ ನೋಡುವ ರೂಢಿಯನ್ನು ಮಾಡಿಕೊಳ್ಳಿರಿ. ಟರ್ನ್‌ ಮಾಡುವಾಗ ವಿಶೇಷವಾಗಿ ಎಚ್ಚರಿಕೆಯಿಂದಿರಿ. ಚೌಕಗಳ ಬಳಿ ಟರ್ನ್‌ ಮಾಡುವುದು ಮಾರಕವಾಗಿರಬಲ್ಲದು. ನೀವು ಹೋಗಬೇಕಾದ ದಾರಿಯು, ನೀವು ರಸ್ತೆಯಲ್ಲಿ ವಾಹನ ಸಂಚಾರದ ಅನೇಕ ಓಣಿಗಳನ್ನು ದಾಟಿಹೋಗುವುದನ್ನು ಅವಶ್ಯಪಡಿಸುವಾಗ ಇದು ವಿಶೇಷವಾಗಿ ಸತ್ಯವಾಗಿದೆ.

ಅಮೆರಿಕದಲ್ಲಿ ಚಾಲಕರು ವಾಹನಗಳನ್ನು ರಸ್ತೆಯ ಬಲಬದಿಯಲ್ಲಿ ಚಲಾಯಿಸುತ್ತಾರೆ. ಅಲ್ಲಿ 75 ವರ್ಷ ವಯಸ್ಸಿಗೆ ಮೇಲ್ಪಟ್ಟ ಚಾಲಕರಿಗಾಗುವ ಮಾರಕವಾದ ಚೌಕ ಅಪಘಾತಗಳಲ್ಲಿ 40 ಪ್ರತಿಶತ ಅಪಘಾತಗಳು, ಎಡಕ್ಕೆ ಟರ್ನ್‌ ಮಾಡುವಾಗ ಸಂಭವಿಸುತ್ತವೆ. ವಾಹನಸಂಚಾರ ಸುರಕ್ಷೆಗಾಗಿರುವ ಎಎಎ ಫೌಂಡೇಷನ್‌, ಆ ದೇಶದಲ್ಲಿರುವ ಚಾಲಕರಿಗೆ ಈ ಸಲಹೆಯನ್ನು ನೀಡುತ್ತದೆ: “ನಿಮ್ಮ ಗಮ್ಯಸ್ಥಾನವನ್ನು ತಲಪಲಿಕ್ಕಾಗಿ, ಒಂದು ಎಡಬದಿಯ ಟರ್ನ್‌ ಹೊಡೆಯುವ ಬದಲಿಗೆ ನೀವು ಕೆಲವೊಮ್ಮೆ ಬಲಬದಿಯ ಮೂರು ಟರ್ನ್‌ ಮಾಡಬೇಕಾದೀತು.” ಈ ಮೂಲತತ್ತ್ವವನ್ನು ನೀವು ವಾಸಿಸುತ್ತಿರುವ ಸ್ಥಳದಲ್ಲಿನ ಪರಿಸ್ಥಿತಿಗಳಿಗೆ ತಕ್ಕಂತೆ ಹೊಂದಿಸಿಕೊಳ್ಳಬಹುದು. ಮುಂಗಡವಾಗಿಯೇ ಸ್ವಲ್ಪ ಯೋಜನೆಯನ್ನು ಮಾಡುವ ಮೂಲಕ, ನೀವು ಅಪಾಯಕರವಾದ ಹಾಗೂ ತೊಂದರೆಗ್ರಸ್ಥ ಚೌಕಗಳಿಂದ ತಪ್ಪಿಸಿಕೊಳ್ಳಲು ಶಕ್ತರಾಗಬಹುದು.

ಪರಿಗಣಿಸಬೇಕಾದ ಒಂದು ನಿರ್ಣಯ

ನಿಮ್ಮ ವಾಹನ ಚಲಾಯಿಸುವ ಸಾಮರ್ಥ್ಯಗಳ ಮೌಲ್ಯಮಾಪನ ಮಾಡಲು ಯಾವುದು ನಿಮಗೆ ಸಹಾಯಮಾಡುವುದು? ನೀವು ಗೌರವಿಸುತ್ತಿರುವ ಒಬ್ಬ ಸ್ನೇಹಿತನು ಇಲ್ಲವೆ ಕುಟುಂಬದ ಸದಸ್ಯನು ನಿಮ್ಮ ವಾಹನದಲ್ಲಿ ನಿಮ್ಮೊಂದಿಗಿದ್ದು, ನಿಮ್ಮ ವಾಹನ ಚಲಾಯಿಸುವ ಕೌಶಲಗಳ ಗುಣವಿಮರ್ಶೆಮಾಡುವಂತೆ ಕೇಳಿಕೊಳ್ಳಬಹುದು. ಆಮೇಲೆ, ಅವರು ಕೊಡುವಂಥ ಯಾವುದೇ ಅಭಿಪ್ರಾಯಗಳನ್ನು ಗಮನಕೊಟ್ಟು ಆಲಿಸಿರಿ. ಸುರಕ್ಷಿತವಾಗಿ ವಾಹನ ಚಲಾಯಿಸುವ ಕೋರ್ಸುಗಳನ್ನೂ ತೆಗೆದುಕೊಳ್ಳಲು ನೀವು ನಿರ್ಣಯಿಸಬಹುದು. ಅನೇಕ ವಾಹನ ಚಾಲಕರ ಸಂಘಗಳು ವಿಶೇಷವಾಗಿ ವೃದ್ಧ ಚಾಲಕರಿಗಾಗಿ ವಿನ್ಯಾಸಿಸಲ್ಪಟ್ಟಿರುವ ಕೋರ್ಸುಗಳನ್ನು ನೀಡುತ್ತವೆ. ಸಾವುನೋವುಗಳಲ್ಲಿ ಪರಿಣಮಿಸಸಾಧ್ಯವಿದ್ದ ಅಪಾಯಕಾರಿಯಾದ ಒಂದೆರಡು ಸನ್ನಿವೇಶಗಳನ್ನು ನೀವು ಅನುಭವಿಸಿರುವಲ್ಲಿ, ಅದು ನಿಮ್ಮ ವಾಹನ ಚಲಾಯಿಸುವ ಕೌಶಲಗಳು ಒಂದು ಕಾಲದಲ್ಲಿ ಇದ್ದಷ್ಟು ಉತ್ತಮವಾಗಿಲ್ಲ ಎಂಬುದನ್ನು ಸೂಚಿಸುವ ಎಚ್ಚರಿಕೆಯ ಸೂಚನೆಯಾಗಿರಬಲ್ಲದು.

ವಾಸ್ತವ ಸಂಗತಿಯೇನೆಂದರೆ, ಯಾವುದಾದರೊಂದು ಹಂತದಲ್ಲಿ ನೀವು ವಾಹನ ಚಲಾಯಿಸುವುದನ್ನು ನಿಲ್ಲಿಸಿಬಿಡುವುದು ನಿಮಗೇ ಒಳ್ಳೇದು. ಈ ನಿರ್ಣಯವನ್ನು ಮಾಡುವುದು ತುಂಬ ಮನನೋಯಿಸುವಂಥದ್ದಾಗಿರಬಲ್ಲದು. ಈ ಹಿಂದೆ ತಿಳಿಸಲ್ಪಟ್ಟಿರುವ ಮರ್ಟಲ್‌ರಿಗೆ, ಅತಿ ಬೇಗನೆ ತಾನು ವಾಹನ ಚಲಾಯಿಸುವುದನ್ನು ನಿಲ್ಲಿಸಿಬಿಡಬೇಕಾದೀತೆಂಬುದು ತಿಳಿದಿದೆ. ಆ ದಿನವು ಹತ್ತಿರವಾಗುತ್ತಾ ಇರುವಾಗ, ಅವರು ಈಗಾಗಲೇ ಹೆಚ್ಚೆಚ್ಚು ಬಾರಿ, ಇತರರು ವಾಹನ ಚಲಾಯಿಸುವಾಗ ಅವರೊಂದಿಗೆ ಪ್ರಯಾಣಿಸುತ್ತಾರೆ. ವಾಹನ ಚಲಾಯಿಸುವ ಜವಾಬ್ದಾರಿಯನ್ನು ಇತರರಿಗೆ ವಹಿಸಿಕೊಡುವುದರ ಬಗ್ಗೆ ಅವರಿಗೆ ಹೇಗನಿಸುತ್ತದೆ? “ಡ್ರೈವಿಂಗ್‌ ಮಾಡುವುದರ ಮಾನಸಿಕ ಒತ್ತಡವಿಲ್ಲದೆ ಪ್ರಯಾಣಿಸುವುದು ಆನಂದದಾಯಕವಾಗಿದೆ” ಎಂದವರು ಹೇಳುತ್ತಾರೆ.

ಆ ವಿಷಯವನ್ನು ಜಾಗರೂಕತೆಯಿಂದ ಪರಿಗಣಿಸಿದ ನಂತರ, ನಿಮಗೂ ಹಾಗೆಯೇ ಅನಿಸಬಹುದು. ಶಾಪಿಂಗ್‌ ಮಾಡುವುದು, ಹೊರಗಿನ ಕೆಲಸಗಳನ್ನು ಮಾಡುವುದು, ಮತ್ತು ಮೊದಲೇ ಗೊತ್ತುಮಾಡಲ್ಪಟ್ಟಿರುವ ನಿಶ್ಚಿತ ಕಾರ್ಯಕ್ಕಾಗಿ ಇಲ್ಲವೆ ಕೂಟಗಳಿಗೆ ಹೋಗಲು ಒಬ್ಬ ಸ್ನೇಹಿತರೊಂದಿಗೆ ಪ್ರಯಾಣಿಸುವುದು ಹೆಚ್ಚು ಆನಂದಕರವಾಗಿರಬಲ್ಲದು. ನಿಮ್ಮ ಕಾರನ್ನೇ ಉಪಯೋಗಿಸಿ, ಒಬ್ಬ ಸ್ನೇಹಿತನು/ಳು ಅದನ್ನು ಚಲಾಯಿಸಬಹುದು. ಈ ರೀತಿಯಲ್ಲಿ ಪ್ರಯಾಣಿಸುವುದು, ಒಂಟಿಯಾಗಿ ಹೋಗುವುದಕ್ಕಿಂತಲೂ ಹೆಚ್ಚು ಸುರಕ್ಷಿತವೂ ಹೆಚ್ಚು ಆನಂದದಾಯಕವೂ ಆಗಿರಬಲ್ಲದು. ಸಾಧ್ಯವಿರುವಲ್ಲೆಲ್ಲ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸುವುದು ಇನ್ನೊಂದು ವ್ಯಾವಹಾರಿಕ ಅನ್ಯಮಾರ್ಗವಾಗಿರಬಲ್ಲದು. ನಿಮ್ಮ ಯೋಗ್ಯತೆಯು ವಾಹನ ಚಲಾಯಿಸುವ ನಿಮ್ಮ ಸಾಮರ್ಥ್ಯದ ಮೇಲೆ ಹೊಂದಿಕೊಂಡಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿರಿ. ನಿಮ್ಮ ಒಳ್ಳೇ ಗುಣಗಳಿಂದಾಗಿಯೇ ನೀವು ನಿಮ್ಮ ಕುಟುಂಬಕ್ಕೆ, ನಿಮ್ಮ ಸ್ನೇಹಿತರಿಗೆ ಮತ್ತು ದೇವರಿಗೆ ಅಮೂಲ್ಯರಾಗಿದ್ದೀರಿ.​—⁠ಜ್ಞಾನೋಕ್ತಿ 12:2; ರೋಮಾಪುರ 14:⁠18.

ನೀವು ವೃದ್ಧರಾಗಿರಲಿ ಯುವ ಪ್ರಾಯದವರಾಗಿರಲಿ, ಅನುಭವಿ ಚಾಲಕರಾಗಿರಲಿ ಇಲ್ಲವೆ ಹೊಸಬರಾಗಿರಲಿ, ನಿಮಗೆ ವಾಹನ ಅಪಘಾತಗಳ ಅಪಾಯಗಳು ತಟ್ಟಲಾರವೆಂದು ಹೇಳಸಾಧ್ಯವಿಲ್ಲ. ವಾಹನ ಚಲಾಯಿಸುವುದರ ಜೊತೆಗೆ ಬರುವಂಥ ಗಂಭೀರ ಜವಾಬ್ದಾರಿಯನ್ನು ಅಂಗೀಕರಿಸಿರಿ. ಒಂದು ಅಪಘಾತದಲ್ಲಿ ಸಿಕ್ಕಿಬೀಳುವ ಸಾಧ್ಯತೆಗಳನ್ನು ಕಡಿಮೆಗೊಳಿಸಲು ಬೇಕಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿರಿ. ಹೀಗೆ ಮಾಡುವ ಮೂಲಕ, ಮುಂಬರುವ ಅನೇಕ ಪ್ರಯಾಣಗಳಲ್ಲಿ ನೀವು ನಿಮ್ಮನ್ನೂ ಇತರರನ್ನೂ ಸಂರಕ್ಷಿಸಬಹುದು. (g02 8/22)

[ಪಾದಟಿಪ್ಪಣಿ]

^ ಈ ಲೇಖನದಲ್ಲಿನ ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 22ರಲ್ಲಿರುವ ಚಿತ್ರ]

ರಾತ್ರಿಯ ಒಳ್ಳೆಯ ನಿದ್ರೆಯ ಮೂಲಕ ನಿಮ್ಮ ದೇಹದಲ್ಲಿ “ಇಂಧನವನ್ನು ತುಂಬಿಸಿದ್ದೀರೆಂಬುದನ್ನು” ಖಚಿತಪಡಿಸಿಕೊಳ್ಳಿರಿ

[ಪುಟ 23ರಲ್ಲಿರುವ ಚಿತ್ರ]

ಸ್ವಲ್ಪ ಹೊತ್ತಿನ ನಿದ್ದೆಯು ನಿಮ್ಮನ್ನು ಸ್ವಲ್ಪ ತಡಗೊಳಿಸಬಹುದು, ಆದರೆ ಅದು ಜೀವವನ್ನು ಉಳಿಸಬಲ್ಲದು

[ಪುಟ 23ರಲ್ಲಿರುವ ಚಿತ್ರ]

ವೃದ್ಧ ಚಾಲಕರು ಹೆಚ್ಚು ಅನುಭವಿಗಳಾಗಿರುತ್ತಾರೆ, ಆದರೆ ವಿಶೇಷವಾದ ಪಂಥಾಹ್ವಾನಗಳನ್ನು ಎದುರಿಸುತ್ತಾರೆ

[ಪುಟ 24ರಲ್ಲಿರುವ ಚಿತ್ರ]

ಇನ್ನೊಬ್ಬ ವ್ಯಕ್ತಿಯೊಂದಿಗೆ ಪ್ರಯಾಣಿಸುವುದರಲ್ಲಿ ಪ್ರಯೋಜನಗಳಿವೆ