ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಡ್ಸ್‌ ಆಫ್ರಿಕದಲ್ಲಿ ಹರಡುತ್ತದೆ

ಏಡ್ಸ್‌ ಆಫ್ರಿಕದಲ್ಲಿ ಹರಡುತ್ತದೆ

ಏಡ್ಸ್‌ ಆಫ್ರಿಕದಲ್ಲಿ ಹರಡುತ್ತದೆ

“ನಾವು ಒಂದು ದೊಡ್ಡ ಪ್ರಮಾಣದ ವಿಪತ್ಕಾರಕ ಸನ್ನಿವೇಶದೊಂದಿಗೆ ವ್ಯವಹರಿಸುತ್ತಿದ್ದೇವೆ.”

ಆಫ್ರಿಕದಲ್ಲಿನ ಏಚ್‌ಐವಿ/ಏಡ್ಸ್‌ನ ವಿಶ್ವ ಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿರುವ ಸ್ಟೀವನ್‌ ಲೂಅಸ್‌ರ ಆ ಮಾತುಗಳು, ಆಫ್ರಿಕದ ಸಹಾರಾದ ದಕ್ಷಿಣ ಪ್ರದೇಶಗಳಲ್ಲಿರುವ ಏಡ್ಸ್‌ನ ಸನ್ನಿವೇಶದ ಕುರಿತು ಅನೇಕರಿಗಿರುವ ಚಿಂತೆಯನ್ನು ಪ್ರತಿಧ್ವನಿಸುತ್ತವೆ.

ಏಚ್‌ಐವಿಯ ಹರಡುವಿಕೆಯಲ್ಲಿ ಅನೇಕ ಅಂಶಗಳು ಒಳಗೂಡಿವೆ. ಮತ್ತು ಇದಕ್ಕೆ ಪ್ರತಿಯಾಗಿ ಏಡ್ಸ್‌ ರೋಗವು ಇನ್ನಿತರ ಸಮಸ್ಯೆಗಳನ್ನು ಉಲ್ಬಣಗೊಳಿಸಿದೆ. ಎಲ್ಲಿ ಏಡ್ಸ್‌ ರೋಗವು ಹಬ್ಬುತ್ತಿದೆಯೋ ಆ ಆಫ್ರಿಕದ ಕೆಲವು ಪ್ರದೇಶಗಳಲ್ಲಿ ಮತ್ತು ಲೋಕದ ಇತರ ಭಾಗಗಳಲ್ಲಿ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳು, ಅನೇಕವೇಳೆ ಈ ಮುಂದಿನ ವಿಷಯಗಳಿಗೆ ಸಂಬಂಧಿಸಿರುತ್ತವೆ.

ನೈತಿಕತೆ. ಏಚ್‌ಐವಿ ಸೋಂಕಿನ ಪ್ರಮುಖ ಮಾಧ್ಯಮವು ಲೈಂಗಿಕ ಸಂಪರ್ಕವಾಗಿದೆ; ಸ್ಪಷ್ಟವಾದ ನೈತಿಕ ಮಟ್ಟಗಳ ಕೊರತೆಯು ಈ ರೋಗದ ಹಬ್ಬುವಿಕೆಯನ್ನು ಉತ್ತೇಜಿಸುತ್ತದೆ ಎಂಬುದು ಸುಸ್ಪಷ್ಟ. ಆದರೂ, ಅವಿವಾಹಿತರಿಗೆ ಲೈಂಗಿಕ ಭೋಗವರ್ಜನೆಯನ್ನು ಉತ್ತೇಜಿಸುವುದು ಪ್ರಾಯೋಗಿಕವಾದದ್ದಲ್ಲ ಎಂಬುದು ಅನೇಕರ ಅನಿಸಿಕೆ. “ಲೈಂಗಿಕ ಸಂಭೋಗದಿಂದ ದೂರವಿರಿ ಎಂದಷ್ಟೇ ಹದಿಪ್ರಾಯದವರನ್ನು ಎಚ್ಚರಿಸುವುದರಿಂದ ಯಾವುದೇ ಫಲವಿಲ್ಲ” ಎಂದು, ದಕ್ಷಿಣ ಆಫ್ರಿಕದ ಜೊಹಾನಸ್‌ಬರ್ಗ್‌ನ ದ ಸ್ಟಾರ್‌ ಎಂಬ ವಾರ್ತಾಪತ್ರಿಕೆಯಲ್ಲಿ ಫ್ರಾನ್‌ಸ್ವಾ ಡ್ಯೂಫೂರ್‌ ಬರೆಯುತ್ತಾರೆ. “ಅವರು ಹೇಗೆ ಕಾಣಬೇಕು ಮತ್ತು ಅವರು ಹೇಗೆ ವರ್ತಿಸಬೇಕು ಎಂಬುದರ ಲೈಂಗಿಕ ಉದಾಹರಣೆಗಳು ಅಥವಾ ದೃಶ್ಯಗಳು ಪ್ರತಿ ದಿನ ಅವರ ಕಣ್ಣಿಗೆ ಬೀಳುತ್ತಿರುತ್ತವೆ.”

ಈ ವಿಶ್ಲೇಷಣೆಯನ್ನು, ಯುವ ಜನರ ನಡತೆಯು ದೃಢಪಡಿಸುತ್ತಿರುವಂತೆ ತೋರುತ್ತದೆ. ಉದಾಹರಣೆಗೆ, ಒಂದು ದೇಶದ ಸಮೀಕ್ಷೆಯು ಸೂಚಿಸಿದ್ದೇನೆಂದರೆ, 12 ಮತ್ತು 17 ವರ್ಷ ಪ್ರಾಯದ ನಡುವಣ ಯುವ ಜನರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಮಂದಿ ಲೈಂಗಿಕ ಸಂಭೋಗದಲ್ಲಿ ಒಳಗೂಡಿದ್ದರು.

ಬಲಾತ್ಕಾರ ಸಂಭೋಗವನ್ನು ದಕ್ಷಿಣ ಆಫ್ರಿಕದಲ್ಲಿ ಒಂದು ರಾಷ್ಟ್ರೀಯ ಬಿಕ್ಕಟ್ಟಾಗಿ ವರ್ಣಿಸಲಾಗಿದೆ. ಜೊಹಾನಸ್‌ಬರ್ಗ್‌ನ ಸಿಟಿಜನ್‌ ಎಂಬ ವಾರ್ತಾಪತ್ರಿಕೆಯಲ್ಲಿನ ವರದಿಯೊಂದು ತಿಳಿಸಿದ್ದೇನೆಂದರೆ, ಬಲಾತ್ಕಾರ ಸಂಭೋಗವು “ಎಷ್ಟು ವ್ಯಾಪಕವಾಗಿದೆಯೆಂದರೆ, ಈ ದೇಶದ ಸ್ತ್ರೀಯರಿಗೆ ಮತ್ತು ಹೆಚ್ಚೆಚ್ಚು ಸಂಖ್ಯೆಯಲ್ಲಿ ಅದರ ಮಕ್ಕಳಿಗೂ ಉಂಟುಮಾಡಲ್ಪಡುವ ಪ್ರತಿಯೊಂದು ಆರೋಗ್ಯಾಪಾಯವನ್ನೂ ಇದು ಮೀರಿದೆ.” ಅದೇ ಲೇಖನವು ಗಮನಿಸಿದ್ದು: “ಇತ್ತೀಚಿನ ಸಮಯಗಳಲ್ಲಿ ಮಕ್ಕಳ ಬಲಾತ್ಕಾರ ಸಂಭೋಗವು ದ್ವಿಗುಣಗೊಂಡಿದೆ . . . ಈ ಕೃತ್ಯಗಳು ಏಚ್‌ಐವಿ ರೋಗಾಣುವಿರುವ ಒಬ್ಬ ವ್ಯಕ್ತಿಯು ಕನ್ಯೆಯೊಬ್ಬಳೊಂದಿಗೆ ಬಲಾತ್ಕಾರ ಸಂಭೋಗ ನಡೆಸುವುದಾದರೆ ಅವನು ಗುಣಹೊಂದುವನು ಎಂಬ ಮಿಥ್ಯೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವಂತೆ ತೋರುತ್ತದೆ.”

ರತಿ ರವಾನಿತ ರೋಗ. ಈ ಪ್ರದೇಶದಲ್ಲಿ ರತಿ ರವಾನಿತ ರೋಗಗಳ ಪ್ರಮಾಣಗಳು ಅತ್ಯುಚ್ಚವಾಗಿವೆ. ಸೌತ್‌ ಆಫ್ರಿಕನ್‌ ಮೆಡಿಕಲ್‌ ಜರ್ನಲ್‌ ತಿಳಿಸಿದ್ದು: “ರತಿ ರವಾನಿತ ರೋಗದ ಅಸ್ತಿತ್ವವು, ಏಚ್‌ಐವಿ-1ರ ಸೋಂಕಿನ ಅಪಾಯವನ್ನು 2-ರಿಂದ 5-ಪಟ್ಟು ಅಧಿಕಗೊಳಿಸುತ್ತದೆ.”

ಬಡತನ. ಆಫ್ರಿಕದಲ್ಲಿರುವ ಅನೇಕ ದೇಶಗಳು ಬಡತನದೊಂದಿಗೆ ಹೋರಾಡುತ್ತಿವೆ, ಮತ್ತು ಇದು ಏಡ್ಸ್‌ನ ಹಬ್ಬುವಿಕೆಗೆ ಅನುಕೂಲಕರವಾದ ಪರಿಸರವನ್ನು ನಿರ್ಮಿಸುತ್ತದೆ. ಅಭಿವೃದ್ಧಿಹೊಂದಿರುವ ದೇಶಗಳಲ್ಲಿ ಯಾವುದನ್ನು ಮೂಲಭೂತ ಆವಶ್ಯಕತೆಗಳು ಎಂದು ಪರಿಗಣಿಸಬಹುದಾಗಿದೆಯೋ ಅದು, ಅಧಿಕಾಂಶ ಅಭಿವೃದ್ಧಿಶೀಲ ದೇಶಗಳಲ್ಲಿ ಲಭ್ಯವಿಲ್ಲ. ಬಹುತೇಕ ಸಮುದಾಯಗಳಿಗೆ ವಿದ್ಯುಚ್ಛಕ್ತಿ ಇಲ್ಲ ಮತ್ತು ಶುದ್ಧವಾದ ಕುಡಿಯುವ ನೀರು ಸಹ ಸಿಗುವುದಿಲ್ಲ. ಗ್ರಾಮೀಣ ಕ್ಷೇತ್ರಗಳಲ್ಲಿ ಸಾಕಷ್ಟು ರಸ್ತೆಗಳಿಲ್ಲ ಅಥವಾ ರಸ್ತೆಗಳೇ ಇಲ್ಲ. ಅನೇಕ ನಿವಾಸಿಗಳು ನ್ಯೂನ ಪೋಷಣೆಯಿಂದ ಕಷ್ಟಾನುಭವಿಸುತ್ತಾರೆ, ಮತ್ತು ವೈದ್ಯಕೀಯ ಸೌಕರ್ಯಗಳು ಸಹ ತೀರ ಮಿತವಾದದ್ದಾಗಿವೆ.

ಏಡ್ಸ್‌ ರೋಗವು ವ್ಯಾಪಾರದ ಹಾಗೂ ಉದ್ಯಮದ ಮೇಲೆ ವಿಪರೀತ ಪರಿಣಾಮವನ್ನು ಬೀರುತ್ತದೆ. ಹೆಚ್ಚೆಚ್ಚು ಕೆಲಸಗಾರರು ಈ ರೋಗದಿಂದ ಬಾಧಿತರಾಗುತ್ತಿರುವುದರಿಂದ, ಗಣಿಗಾರಿಕೆಯ ಕಂಪೆನಿಗಳು ಕಡಿಮೆ ಉತ್ಪನ್ನದ ಪರಿಣಾಮಗಳನ್ನು ಅನುಭವಿಸುತ್ತಿವೆ. ಕಾರ್ಮಿಕರಿಂದ ಹೆಚ್ಚು ಕೆಲಸವನ್ನು ಮಾಡಿಸಿಕೊಳ್ಳಲು ಅಸಾಧ್ಯವಾಗುತ್ತಿರುವುದರಿಂದ, ಆ ನಷ್ಟಭರ್ತಿಗಾಗಿ ಕೆಲವು ಕಂಪೆನಿಗಳು ಹೆಚ್ಚೆಚ್ಚು ಯಾಂತ್ರಿಕ ಹಾಗೂ ಇಲೆಕ್ಟ್ರಾನಿಕ್‌ ಯಂತ್ರಗಳನ್ನು ಉಪಯೋಗಿಸುವ ವಿಧಗಳನ್ನು ಪರಿಗಣಿಸುತ್ತಿವೆ. 2000 ಇಸವಿಯಲ್ಲಿ ಒಂದು ಪ್ಲ್ಯಾಟಿನಮ್‌ ಗಣಿಯಲ್ಲಿದ್ದ ಕೆಲಸಗಾರರ ನಡುವೆ ಏಡ್ಸ್‌ ರೋಗದಿಂದ ಬಾಧಿತರಾದವರ ಸಂಖ್ಯೆ ಬಹುಮಟ್ಟಿಗೆ ಇಮ್ಮಡಿಯಾಯಿತು, ಮತ್ತು ಸುಮಾರು 26 ಪ್ರತಿಶತ ಮಂದಿ ಕೆಲಸಗಾರರು ಇದರಿಂದ ಸೋಂಕಿತರಾದರು ಎಂದು ಅಂದಾಜುಮಾಡಲಾಗಿತ್ತು.

ಆದರೆ ಏಡ್ಸ್‌ನ ದುಃಖಕರ ಪರಿಣಾಮವು ಯಾವುದೆಂದರೆ, ತಮ್ಮ ಹೆತ್ತವರು ಈ ರೋಗದಿಂದ ಸಾಯುವಾಗ ತಬ್ಬಲಿಗಳಾಗುವಂಥ ದೊಡ್ಡ ಸಂಖ್ಯೆಯ ಮಕ್ಕಳೇ. ಹೆತ್ತವರನ್ನು ಮತ್ತು ಹಣಕಾಸಿನ ಭದ್ರತೆಯನ್ನು ಕಳೆದುಕೊಳ್ಳುವುದರ ಜೊತೆಗೆ, ಈ ಮಕ್ಕಳು ಏಡ್ಸ್‌ ರೋಗಕ್ಕೆ ಅಂಟಿಕೊಂಡಿರುವ ಕಳಂಕವನ್ನು ಸಹ ಸಹಿಸಿಕೊಳ್ಳಬೇಕಾಗಿದೆ. ಇವರಿಗೆ ನೆರವನ್ನು ನೀಡಬೇಕಾದ ಹತ್ತಿರದ ಸಂಬಂಧಿಕರು ಅಥವಾ ಸಮುದಾಯಗಳು ಅನೇಕವೇಳೆ ತೀರ ಬಡ ಸ್ಥಿತಿಯಲ್ಲಿರುತ್ತವೆ ಅಥವಾ ಸಹಾಯಮಾಡಲು ಅವರಿಗೆ ಇಷ್ಟವಿರುವುದಿಲ್ಲ. ಅನೇಕ ತಬ್ಬಲಿ ಮಕ್ಕಳು ಶಾಲೆಯನ್ನು ಬಿಟ್ಟುಬಿಡುತ್ತಾರೆ. ಕೆಲವರು ವೇಶ್ಯವಾಟಿಕೆಗೆ ಇಳಿಯುತ್ತಾರೆ ಮತ್ತು ಈ ಮೂಲಕ ಏಡ್ಸ್‌ ರೋಗದ ಹಬ್ಬುವಿಕೆಯನ್ನು ಅಧಿಕಗೊಳಿಸುತ್ತಾರೆ. ಈ ತಬ್ಬಲಿ ಮಕ್ಕಳಿಗೆ ಸಹಾಯವನ್ನು ನೀಡಲಿಕ್ಕಾಗಿ ಅನೇಕ ದೇಶಗಳು ಸರಕಾರಿ ಅಥವಾ ಖಾಸಗಿ ಕಾರ್ಯಕ್ರಮಗಳನ್ನು ಸ್ಥಾಪಿಸಿವೆ.

ಅಜ್ಞಾನ. ಏಚ್‌ಐವಿಯಿಂದ ಸೋಂಕಿತರಾಗಿರುವವರಲ್ಲಿ ಹೆಚ್ಚಿನವರಿಗೆ ಇದರ ಅರಿವೇ ಇರುವುದಿಲ್ಲ. ಈ ರೋಗದೊಂದಿಗೆ ಜೋಡಿಸಲ್ಪಟ್ಟಿರುವ ಕಳಂಕದ ಕಾರಣದಿಂದಾಗಿ ಅನೇಕರು ತಪಾಸಣೆಯನ್ನು ಮಾಡಿಸಿಕೊಳ್ಳಲು ಬಯಸುವುದಿಲ್ಲ. “ಏಚ್‌ಐವಿ ರೋಗಾಣುವಿರುವ ಅಥವಾ ಅದು ಇರಬಹುದೆಂದು ಶಂಕಿಸಲಾಗಿರುವ ಜನರಿಗೆ ಆರೋಗ್ಯಾರೈಕೆಯ ಸೌಕರ್ಯಗಳಲ್ಲಿ ಚಿಕಿತ್ಸೆಯು ನಿರಾಕರಿಸಲ್ಪಡಬಹುದು, ಅವರು ವಸತಿ ಹಾಗೂ ಉದ್ಯೋಗದಿಂದ ವಂಚಿತರಾಗಬಹುದು, ತಮ್ಮ ಸ್ನೇಹಿತರು ಹಾಗೂ ಜೊತೆ ಕೆಲಸಗಾರರಿಂದ ತೊರೆಯಲ್ಪಡಬಹುದು, ವಿಮೆಯ ಸೌಕರ್ಯ ಕೊಡಲ್ಪಡದಿರಬಹುದು ಅಥವಾ ವಿದೇಶಕ್ಕೆ ಹೋಗಲು ಅವರಿಗೆ ಅನುಮತಿ ಸಿಗದಿರಬಹುದು” ಎಂದು, ಏಚ್‌ಐವಿ/ಏಡ್ಸ್‌ನ ಕುರಿತಾದ ವಿಶ್ವ ಸಂಸ್ಥೆಯ ಕಾರ್ಯಕ್ರಮ (ಯುಎನ್‌ಎಐಡಿಎಸ್‌) ಎಂಬ ಸಂಸ್ಥೆಯ ಪತ್ರಿಕಾ ಪ್ರಕಟನೆಯೊಂದು ವರದಿಸಿತು. ಏಚ್‌ಐವಿ ಇದೆಯೆಂದು ಕಂಡುಹಿಡಿಯಲ್ಪಟ್ಟಾಗ ಕೆಲವರ ಕೊಲೆಯನ್ನೂ ಮಾಡಲಾಗಿದೆ.

ಸಂಸ್ಕೃತಿ. ಅನೇಕ ಆಫ್ರಿಕನ್‌ ಸಂಸ್ಕೃತಿಗಳಲ್ಲಿ, ಅನೇಕವೇಳೆ ಸ್ತ್ರೀಯರು ತಮ್ಮ ಗಂಡಂದಿರ ವಿವಾಹಬಾಹಿರ ಸಂಬಂಧಗಳ ಕುರಿತು ಪ್ರಶ್ನಿಸುವ, ಲೈಂಗಿಕ ಸಂಪರ್ಕವನ್ನು ನಿರಾಕರಿಸುವ, ಅಥವಾ ಸುರಕ್ಷಿತವಾದ ಲೈಂಗಿಕ ರೂಢಿಗಳನ್ನು ಅನುಸರಿಸುವಂತೆ ಅವರಿಗೆ ಸಲಹೆ ನೀಡುವ ಸ್ಥಿತಿಯಲ್ಲಿರುವುದಿಲ್ಲ. ಸಾಂಸ್ಕೃತಿಕ ನಂಬಿಕೆಗಳು ಅನೇಕವೇಳೆ ಏಡ್ಸ್‌ನ ಕುರಿತಾದ ಸತ್ಯ ಅಥವಾ ವಾಸ್ತವಿಕತೆಯನ್ನು ಒಪ್ಪಿಕೊಳ್ಳಲು ನಿರಕರಿಸುತ್ತವೆ. ಉದಾಹರಣೆಗೆ, ಈ ಕಾಯಿಲೆಗೆ ಮಾಟಮಂತ್ರವೇ ಕಾರಣವೆಂದು ಹೇಳಿ, ಮಾಟಮಂತ್ರ ಮಾಡುವವರಿಂದ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತದೆ.

ಸಾಕಷ್ಟು ವೈದ್ಯಕೀಯ ಸೌಕರ್ಯಗಳ ಇಲ್ಲದಿರುವಿಕೆ. ಏಡ್ಸ್‌ನ ಕಾರಣದಿಂದಾಗಿ, ಈಗಾಗಲೇ ಮಿತವಾಗಿದ್ದ ವೈದ್ಯಕೀಯ ಸೌಕರ್ಯಗಳ ಮೇಲೆ ಈಗ ವಿಪರೀತವಾದ ಭಾರವು ಹೊರಿಸಲ್ಪಡುತ್ತದೆ. ವೈದ್ಯಕೀಯ ಒಳರೋಗಿಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವರು ಏಚ್‌ಐವಿ ಇರುವವರಾಗಿದ್ದಾರೆ ಎಂದು ಎರಡು ದೊಡ್ಡ ಆಸ್ಪತ್ರೆಗಳು ವರದಿಸುತ್ತವೆ. ಕ್ವಾಸೂಲೂ-ನಟಾಲ್‌ನಲ್ಲಿರುವ ಒಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿಯು ಹೇಳಿದ್ದೇನೆಂದರೆ, ತನ್ನ ವಾರ್ಡುಗಳಲ್ಲಿ 140-ಪ್ರತಿಶತ ರೋಗಿಗಳು ಇರುತ್ತಾರೆ. ಕೆಲವೊಮ್ಮೆ ಇಬ್ಬರು ರೋಗಿಗಳು ಒಂದು ಹಾಸಿಗೆಯನ್ನು ಹಂಚಿಕೊಳ್ಳಬೇಕಾಗುತ್ತದೆ, ಮತ್ತು ಮೂರನೆಯ ರೋಗಿಯು ಆ ಹಾಸಿಗೆಯ ಕೆಳಗೆ ನೆಲದ ಮೇಲೆ ಮಲಗಿರುತ್ತಾನೆ!​—⁠ಸೌತ್‌ ಆಫ್ರಿಕನ್‌ ಮೆಡಿಕಲ್‌ ಜರ್ನಲ್‌.

ಆಫ್ರಿಕದಲ್ಲಿನ ಪರಿಸ್ಥಿತಿಯು ಈಗಾಗಲೇ ದುರಂತಮಯವಾಗಿರುವುದಾದರೂ, ಅದು ಇನ್ನಷ್ಟು ಹದಗೆಡಸಾಧ್ಯವಿದೆ ಎಂಬ ಸೂಚನೆಗಳು ಕಂಡುಬರುತ್ತಿವೆ. “ನಾವಿನ್ನೂ ಈ ಸಾಂಕ್ರಾಮಿಕ ರೋಗದ ಆರಂಭದ ಹಂತಗಳಲ್ಲಿದ್ದೇವಷ್ಟೆ” ಎಂದು ಯುಎನ್‌ಎಐಡಿಎಸ್‌ ಸಂಸ್ಥೆಯ ಪೀಟರ್‌ ಪ್ಯಾ ತಿಳಿಸಿದರು.

ಕೆಲವು ದೇಶಗಳಲ್ಲಿ ಈ ರೋಗದೊಂದಿಗೆ ವ್ಯವಹರಿಸಲಿಕ್ಕಾಗಿ ಅನೇಕ ಪ್ರಯತ್ನಗಳು ಮಾಡಲ್ಪಡುತ್ತಿವೆ ಎಂಬುದು ಸುವ್ಯಕ್ತ. ಮತ್ತು ಪ್ರಪ್ರಥಮ ಬಾರಿಗೆ, 2001ರ ಜೂನ್‌ ತಿಂಗಳಿನಲ್ಲಿ ವಿಶ್ವ ಸಂಸ್ಥೆಯ ಜನರಲ್‌ ಅಸೆಂಬ್ಲಿಯು, ಏಚ್‌ಐವಿ/ಏಡ್ಸ್‌ನ ಕುರಿತು ಚರ್ಚಿಸಲು ಒಂದು ವಿಶೇಷ ಅಧಿವೇಶನವನ್ನು ನಡೆಸಿತು. ಮಾನವ ಪ್ರಯತ್ನಗಳು ಯಶಸ್ವಿಯಾಗುವವೋ? ಏಡ್ಸ್‌ನ ಪ್ರಾಣಾಂತಕ ಮುನ್ನಡೆಯು ಕೊನೆಗೂ ನಿಲ್ಲಿಸಲ್ಪಡುವುದೋ? (g02 11/08)

[ಪುಟ 5ರಲ್ಲಿರುವ ಚೌಕ/ಚಿತ್ರ]

ಏಡ್ಸ್‌ ಔಷಧ ನೆವೈರಪೀನ್‌ ಮತ್ತು ದಕ್ಷಿಣ ಆಫ್ರಿಕದ ಉಭಯಸಂಕಟ

ನೆವೈರಪೀನ್‌ ಎಂದರೇನು? ನೀಕಾಲ್‌ ಇಟಾನೋ ಎಂಬ ಪತ್ರಕರ್ತೆಗನುಸಾರ, ಇದು “ಒಂದು ರೆಟ್ರೋವೈರಸ್‌ನಾಶಕ ಔಷಧವಾಗಿದ್ದು, ಇದು ಏಡ್ಸ್‌ ರೋಗವು [ಒಬ್ಬ ತಾಯಿಯಿಂದ] ಅವಳ ಮಗುವಿಗೆ ರವಾನಿಸಲ್ಪಡುವ ಸಾಧ್ಯತೆಯನ್ನು ಅರ್ಧದಷ್ಟು ಕಡಿಮೆಗೊಳಿಸಬಲ್ಲದು ಎಂಬುದನ್ನು ಪರೀಕ್ಷೆಗಳು ತೋರಿಸಿವೆ.” ಜರ್ಮನಿಯ ಒಂದು ಔಷಧ ಕಂಪೆನಿಯು, ಮುಂದಿನ ಐದು ವರ್ಷಗಳ ವರೆಗೆ ದಕ್ಷಿಣ ಆಫ್ರಿಕಕ್ಕೆ ಈ ಔಷಧವನ್ನು ಉಚಿತವಾಗಿ ಸರಬರಾಯಿಮಾಡಲು ಒಪ್ಪಿಕೊಂಡಿತು. ಆದರೂ, 2001ರ ಆಗಸ್ಟ್‌ ತಿಂಗಳ ತನಕವೂ ಸರಕಾರವು ಈ ಬೇಡಿಕೆಯನ್ನು ಸ್ವೀಕರಿಸಿರಲಿಲ್ಲ. ಸಮಸ್ಯೆಯೇನು?

ದಕ್ಷಿಣ ಆಫ್ರಿಕದಲ್ಲಿ ಏಚ್‌ಐವಿ ರೋಗಾಣುವುಳ್ಳ 47 ಲಕ್ಷ ಜನರಿದ್ದು, ಇದು ಲೋಕದಲ್ಲಿರುವ ಇತರ ಯಾವುದೇ ದೇಶಕ್ಕಿಂತ ಹೆಚ್ಚಾಗಿದೆ. 2002ರ ಫೆಬ್ರವರಿ ತಿಂಗಳಿನಲ್ಲಿ ಲಂಡನ್ನಿನ ಇಕೊನಾಮಿಸ್ಟ್‌ ವರದಿಸಿದ್ದೇನೆಂದರೆ, ದಕ್ಷಿಣ ಆಫ್ರಿಕದ ಅಧ್ಯಕ್ಷರಾಗಿರುವ ಟಾಬಾ ಮಬೇಕೀಯವರು “ಏಚ್‌ಐವಿಯು ಏಡ್ಸ್‌ ರೋಗವನ್ನು ಉಂಟುಮಾಡುತ್ತದೆ ಎಂಬ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ದೃಷ್ಟಿಕೋನವನ್ನು ಸಂದೇಹಿಸುತ್ತಾರೆ” ಮತ್ತು “ಅವರು ಏಡ್ಸ್‌ನಾಶಕ ಔಷಧಗಳ ವೆಚ್ಚ, ಸುರಕ್ಷೆ ಮತ್ತು ಪ್ರಯೋಜನಾರ್ಹತೆಯ ಬಗ್ಗೆ ಸಂಶಯವುಳ್ಳವರಾಗಿದ್ದಾರೆ. ಅವರು ಅದನ್ನು ನಿಷೇಧಿಸಿಲ್ಲವಾದರೂ, ದಕ್ಷಿಣ ಆಫ್ರಿಕದ ವೈದ್ಯರಿಗೆ ಅವುಗಳನ್ನು ಉಪಯೋಗಿಸಲು ಅನುಮೋದನೆ ನೀಡಲಾಗಿಲ್ಲ.” ಇದು ಏಕೆ ಭಯಕ್ಕೆ ಒಂದು ಪ್ರಮುಖ ಕಾರಣವಾಗಿದೆ? ಏಕೆಂದರೆ ದಕ್ಷಿಣ ಆಫ್ರಿಕದಲ್ಲಿ ಪ್ರತಿ ವರ್ಷ ಸಾವಿರಾರು ಶಿಶುಗಳು ಏಚ್‌ಐವಿಯೊಂದಿಗೆ ಜನಿಸುತ್ತಾರೆ ಮತ್ತು 25 ಪ್ರತಿಶತದಷ್ಟು ಗರ್ಭಿಣಿ ಸ್ತ್ರೀಯರಲ್ಲಿ ಈ ರೋಗಾಣು ಇರುತ್ತದೆ.

ಭಿನ್ನವಾದ ದೃಷ್ಟಿಕೋನಗಳ ಸಂಘರ್ಷದ ಫಲಿತಾಂಶವಾಗಿ, ಸರಕಾರವು ನೆವೈರಪೀನನ್ನು ವಿತರಿಸುವಂತೆ ಅದನ್ನು ಒತ್ತಾಯಿಸಲಿಕ್ಕಾಗಿ ಒಂದು ಕಾನೂನುಬದ್ಧ ಮೊಕದ್ದಮೆಯನ್ನು ಕೋರ್ಟಿನ ಮುಂದೆ ತರಲಾಗಿತ್ತು. ದಕ್ಷಿಣ ಆಫ್ರಿಕದ ಸಂವಿಧಾನಾತ್ಮಕ ಕೋರ್ಟು 2002ರ ಏಪ್ರಿಲ್‌ ತಿಂಗಳಿನಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ದ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಬರೆದ ರಾವೀ ನೇಸ್ಮನ್‌ರಿಗನುಸಾರ, “ಈ ಔಷಧವನ್ನು ಉಪಯೋಗಿಸುವ ಸಾಮರ್ಥ್ಯವಿರುವ ಆರೋಗ್ಯ ಸಂಸ್ಥೆಗಳಿಗೆ ಸರಕಾರವು ಇದನ್ನು ಲಭ್ಯಗೊಳಿಸಬೇಕು” ಎಂದು ಕೋರ್ಟು ಅಧಿಕೃತ ನಿರ್ಣಯ ನೀಡಿತು. ದಕ್ಷಿಣ ಆಫ್ರಿಕದ ಸರಕಾರವು ದೇಶದಾದ್ಯಂತ ಈ ಔಷಧವನ್ನು 18 ಪ್ರಾಯೋಗಿಕ ಯೋಜನಾ ಸ್ಥಳಗಳಲ್ಲಿ ನೀಡುತ್ತಿರುವಾಗ, ಈ ಹೊಸ ಅಧಿಕೃತ ನಿರ್ಣಯವು ಈ ದೇಶದಲ್ಲಿ ಏಚ್‌ಐವಿ ರೋಗಾಣುವನ್ನು ಹೊಂದಿರುವ ಎಲ್ಲಾ ಗರ್ಭಿಣಿ ಸ್ತ್ರೀಯರಿಗೆ ನಿರೀಕ್ಷೆಯನ್ನು ನೀಡಿದೆ ಎಂದು ಹೇಳಲಾಗಿದೆ.

[ಪುಟ 6ರಲ್ಲಿರುವ ಚೌಕ/ಚಿತ್ರ]

ಒಂದು ಚತುರ ವೈರಸ್‌ ಜೀವಕೋಶವನ್ನು ಬಲೆಗೆ ಬೀಳಿಸಿಕೊಳ್ಳುತ್ತದೆ

ಒಂದು ಕ್ಷಣ ಹ್ಯೂಮನ್‌ ಇಮ್ಯೂನೊಡಿಫಿಶಿಯೆನ್ಸಿ ವೈರಸ್‌ (ಏಚ್‌ಐವಿ)ನ ಅತಿ ಚಿಕ್ಕ ಜಗತ್ತಿನೊಳಗೆ ಕಾಲಿಡಿರಿ. ಒಬ್ಬ ವಿಜ್ಞಾನಿಯು ಗಮನಿಸಿದ್ದು: “ಅನೇಕಾನೇಕ ವರ್ಷಗಳಿಂದ ಇಲೆಕ್ಟ್ರಾನಿಕ್‌ ಸೂಕ್ಷ್ಮದರ್ಶಕಯಂತ್ರದ ಮೂಲಕ ಈ ವೈರಸ್‌ನ ಕಣಗಳನ್ನು ಎಚ್ಚರಿಕೆಯಿಂದ ಗಮನಿಸಿದ ಬಳಿಕ, ಇಷ್ಟೊಂದು ಸೂಕ್ಷ್ಮವಾಗಿರುವ ಒಂದು ವಸ್ತುವಿನಲ್ಲಿರುವ ನಿಷ್ಕೃಷ್ಟತೆ ಹಾಗೂ ಅದರ ವಿನ್ಯಾಸದಲ್ಲಿರುವ ಜಟಿಲತೆಯನ್ನು ನೋಡಿ ನಾನೀಗಲೂ ಬೆರಗಾಗುತ್ತೇನೆ ಮತ್ತು ರೋಮಾಂಚಿತನಾಗುತ್ತೇನೆ.”

ಈ ವೈರಸ್‌, ಒಂದು ಬ್ಯಾಕ್ಟೀರಿಯಮ್‌ಗಿಂತಲೂ ಹೆಚ್ಚು ಚಿಕ್ಕದಾಗಿದೆ, ಮತ್ತು ಬ್ಯಾಕ್ಟೀರಿಯಮ್‌ ವಾಸ್ತವದಲ್ಲಿ ಸರಾಸರಿ ಮಾನವ ಜೀವಕೋಶಕ್ಕಿಂತಲೂ ತುಂಬ ಚಿಕ್ಕದಾಗಿರುತ್ತದೆ. ಒಂದು ಮೂಲಕೃತಿಗನುಸಾರ, ಏಚ್‌ಐವಿ ವೈರಸ್‌ ಎಷ್ಟು ಚಿಕ್ಕದಾಗಿದೆಯೆಂದರೆ, “ಈ ವಾಕ್ಯದ ಕೊನೆಯಲ್ಲಿರುವ ಪೂರ್ಣ ವಿರಾಮದಲ್ಲಿ [ಏಚ್‌ಐವಿಯ] ಸುಮಾರು 23 ಕೋಟಿ [ಕಣಗಳನ್ನು] ತುಂಬಿಸಸಾಧ್ಯವಿದೆ.” ಒಂದು ವೈರಸ್‌ ಒಂದು ಪರಪೋಷಿ ಜೀವಕೋಶದ ಒಳವ್ಯಾಪಿಸಿ, ಆ ಜೀವಕೋಶದ ಸಂಪನ್ಮೂಲಗಳನ್ನು ಬಲಾತ್ಕಾರದಿಂದ ವಶಪಡಿಸಿಕೊಂಡ ಹೊರತು ಅದರ ಸಂಖ್ಯೆಯು ವೃದ್ಧಿಯಾಗುವುದಿಲ್ಲ.

ಏಚ್‌ಐವಿಯು ಮಾನವ ದೇಹದ ಮೇಲೆ ದಾಳಿಮಾಡುವಾಗ, ಸೋಂಕು ರಕ್ಷಾ ವ್ಯವಸ್ಥೆಗೆ ಲಭ್ಯವಿರುವ ಗಮನಾರ್ಹ ಪಡೆಗಳೊಂದಿಗೆ ಅದು ಹೋರಾಡಬೇಕು. * ಬಿಳಿ ರಕ್ತ ಕಣಗಳಿಂದ ರಚಿತವಾಗಿರುವ ಒಂದು ರಕ್ಷಾ ವ್ಯವಸ್ಥೆಯು ಅಸ್ಥಿಮಜ್ಜೆಯಲ್ಲಿ ಉತ್ಪಾದಿಸಲ್ಪಡುತ್ತದೆ. ಬಿಳಿ ರಕ್ತ ಕಣಗಳಲ್ಲಿ ಎರಡು ಪ್ರಮುಖ ರೀತಿಯ ದುಗ್ಧಕಣಗಳು (ಲಿಂಪೊಸೈಟ್ಸ್‌) ಒಳಗೂಡಿದ್ದು, ಒಂದು T ಜೀವಕೋಶಗಳೆಂದೂ ಇನ್ನೊಂದು B ಜೀವಕೋಶಗಳೆಂದೂ ಕರೆಯಲ್ಪಡುತ್ತದೆ. ಇನ್ನಿತರ ಬಿಳಿಯ ರಕ್ತ ಕಣಗಳನ್ನು ಭಕ್ಷಕಕಣಗಳು (ಫ್ಯಾಗಸೈಟ್ಸ್‌) ಅಥವಾ “ಜೀವಕೋಶ ಭಕ್ಷಕಗಳು” ಎಂದು ಸಹ ಕರೆಯಲಾಗುತ್ತದೆ.

ಬೇರೆ ಬೇರೆ ವರ್ಗದ T ಜೀವಕೋಶಗಳಿಗೆ ಭಿನ್ನ ರೀತಿಯ ನೇಮಿತ ಕೆಲಸಗಳಿರುತ್ತವೆ. ಸಹಾಯಕ T ಜೀವಕೋಶಗಳೆಂದು ಕರೆಯಲ್ಪಡುವ ಜೀವಕೋಶಗಳು ಸೋಂಕು ರಕ್ಷಾ ವ್ಯೂಹದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಹೊರಗಿನಿಂದ ದಾಳಿಮಾಡುವ ವೈರಸ್‌ಗಳನ್ನು ಗುರುತಿಸುವುದರಲ್ಲಿ ಸಹಾಯಕ T ಜೀವಕೋಶಗಳು ನೆರವು ನೀಡುತ್ತವೆ ಮತ್ತು ಇವು ಶತ್ರು ವೈರಸ್‌ಗಳ ಮೇಲೆ ಆಕ್ರಮಣಮಾಡಿ ಅವುಗಳನ್ನು ನಾಶಮಾಡಿಬಿಡುವ ಜೀವಕೋಶಗಳ ಉತ್ಪಾದನೆಗೆ ಸೂಕ್ತವಾದ ಸೂಚನೆಗಳನ್ನು ನೀಡುತ್ತವೆ. ಆದರೆ ಏಚ್‌ಐವಿ ವೈರಸ್‌ ದಾಳಿಮಾಡುವಾಗ, ವಿಶೇಷವಾಗಿ ಈ ಸಹಾಯಕ T ಜೀವಕೋಶಗಳನ್ನು ತನ್ನ ಗುರಿಹಲಗೆಯಾಗಿ ಮಾಡಿಕೊಳ್ಳುತ್ತದೆ. ಆಗ, ದಾಳಿಗೆ ತುತ್ತಾಗಿರುವ ಈ ದೇಹದ ಜೀವಕೋಶಗಳನ್ನು ನಾಶಮಾಡಿಬಿಡಲಿಕ್ಕಾಗಿ ಹಂತಕ T ಜೀವಕೋಶಗಳು ಸಕ್ರಿಯಗೊಳ್ಳುತ್ತವೆ. ಮತ್ತು B ಜೀವಕೋಶಗಳು, ಸೋಂಕುಗಳ ವಿರುದ್ಧ ನಡೆಸಲ್ಪಡುವ ಹೋರಾಟದಲ್ಲಿ ಸೇರಿಸಿಕೊಳ್ಳಲ್ಪಡುವ ಪ್ರತಿಜೀವಾಣುಗಳೆಂದು ಕರೆಯಲ್ಪಡುವ ಆಯುಧಗಳನ್ನು ಉತ್ಪಾದಿಸುತ್ತವೆ.

ಚತುರ ವ್ಯೂಹ ವ್ಯವಸ್ಥೆ

ಏಚ್‌ಐವಿ ವೈರಸನ್ನು ರೆಟ್ರೋವೈರಸ್‌ ಆಗಿ ವರ್ಗೀಕರಿಸಲಾಗುತ್ತದೆ. ಏಚ್‌ಐವಿಯ ಜೆನೆಟಿಕ್‌ ನೀಲಿನಕ್ಷೆಯು, ಡಿಎನ್‌ಎ (ಡಿಆಕ್ಸೀರೈಬೊನ್ಯೂಕ್ಲೀಇಕ್‌ ಆ್ಯಸಿಡ್‌)ಯ ರೂಪದಲ್ಲಿರುವುದಿಲ್ಲ, ಬದಲಾಗಿ ಆರ್‌ಎನ್‌ಎ (ರೈಬೊನ್ಯೂಕ್ಲೀಇಕ್‌ ಆ್ಯಸಿಡ್‌)ಯ ರೂಪದಲ್ಲಿರುತ್ತದೆ. ಏಚ್‌ಐವಿಯು, ಲೆಂಟಿವೈರಸಸ್‌ ಎಂದು ಪ್ರಸಿದ್ಧವಾಗಿರುವ ರೆಟ್ರೋವೈರಸ್‌ನ ನಿರ್ದಿಷ್ಟ ಗುಂಪಿಗೆ ಸೇರಿದ್ದಾಗಿದೆ. ಏಕೆಂದರೆ ಈ ರೋಗದ ಗಂಭೀರ ರೋಗಲಕ್ಷಣಗಳು ಸುವ್ಯಕ್ತವಾಗುವುದಕ್ಕೆ ಮೊದಲು ಇದು ದೀರ್ಘ ಸಮಯದ ವರೆಗೆ ಅಂತರ್ಗತವಾಗಿಯೇ ಇರಸಾಧ್ಯವಿದೆ.

ಏಚ್‌ಐವಿ ವೈರಸ್‌ ಒಂದು ಪರಪೋಷಿ ಜೀವಕೋಶದೊಳಕ್ಕೆ ಪ್ರವೇಶವನ್ನು ಪಡೆದುಕೊಂಡಾಗ, ತನ್ನ ಗುರಿಯನ್ನು ಪೂರೈಸಲಿಕ್ಕಾಗಿ ಅದು ಆ ಜೀವಕೋಶದ ಪ್ರಕ್ರಿಯೆಯನ್ನೇ ಉಪಯೋಗಿಸಿಕೊಳ್ಳಲು ಶಕ್ತವಾಗಿರುತ್ತದೆ. ಏಚ್‌ಐವಿಯ ಅನೇಕ ಪ್ರತಿರೂಪಗಳನ್ನು ಉತ್ಪಾದಿಸಲಿಕ್ಕಾಗಿ, ಆ ಜೀವಕೋಶದ ಡಿಎನ್‌ಎಯನ್ನು ಇದು “ಪುನಃ ಪ್ರೋಗ್ರ್ಯಾಮ್‌ಮಾಡುತ್ತದೆ.” ಆದರೆ ಹೀಗೆ ಮಾಡುವುದಕ್ಕೆ ಮೊದಲು, ಏಚ್‌ಐವಿಯು ಭಿನ್ನವಾದ “ಆನುವಂಶಿಕ ಸಂಕೇತಭಾಷೆಯನ್ನು” ಉಪಯೋಗಿಸಬೇಕಾಗಿದೆ. ಅಂದರೆ ಅದು ತನ್ನ ಆರ್‌ಎನ್‌ಎ ಅನ್ನು ಡಿಎನ್‌ಎಯಾಗಿ ಬದಲಾಯಿಸಬೇಕಾಗುತ್ತದೆ; ಏಕೆಂದರೆ ಆಗ ಮಾತ್ರ ಪರಪೋಷಿ ಜೀವಕೋಶದ ಕಾರ್ಯತಂತ್ರವು ಇದನ್ನು ಓದಿ ಅರ್ಥಮಾಡಿಕೊಳ್ಳಲು ಸಾಧ್ಯವಿರುತ್ತದೆ. ಇದನ್ನು ಸಾಧಿಸಲಿಕ್ಕಾಗಿ, ಏಚ್‌ಐವಿಯು ರಿವರ್ಸ್‌ ಟ್ರ್ಯಾನ್ಸ್‌ಕ್ರಿಪ್ಟೇಸ್‌ (ವಿಪರ್ಯಯ ನಕಲು) ಎಂಬ ವೈರಲ್‌ ಕಿಣ್ವವನ್ನು ಉಪಯೋಗಿಸಿಕೊಳ್ಳುತ್ತದೆ. ಸಾವಿರಾರು ಹೊಸ ಐಚ್‌ಐವಿ ಕಣಗಳನ್ನು ಪ್ರಥಮವಾಗಿ ಉತ್ಪಾದಿಸಿದ ಬಳಿಕ ಸಕಾಲದಲ್ಲಿ ಆ ಜೀವಕೋಶವು ಸಾಯುತ್ತದೆ. ಹೊಸದಾಗಿ ಉತ್ಪಾದಿಸಲ್ಪಟ್ಟ ಈ ಕಣಗಳು ಇತರ ಜೀವಕೋಶಗಳಿಗೂ ಸೋಂಕನ್ನು ತಗಲಿಸುತ್ತವೆ.

ಸಹಾಯಕ T ಜೀವಕೋಶಗಳ ಸಂಖ್ಯೆಯು ಗಮನಾರ್ಹವಾದ ರೀತಿಯಲ್ಲಿ ಕಡಿಮೆಯಾದ ಬಳಿಕ, ಬೇರೆ ಕಣಶಕ್ತಿಗಳು ಆಕ್ರಮಣದ ಯಾವ ಭಯವೂ ಇಲ್ಲದೆ ದೇಹವನ್ನು ವಶಪಡಿಸಿಕೊಳ್ಳಸಾಧ್ಯವಿದೆ. ಹೀಗೆ ದೇಹವು ಎಲ್ಲಾ ರೀತಿಯ ರೋಗಗಳು ಹಾಗೂ ಸೋಂಕುಗಳಿಗೆ ತುತ್ತಾಗುತ್ತದೆ. ಸೋಂಕಿತನಾದ ವ್ಯಕ್ತಿಯು ಪೂರ್ತಿ ವಿಕಾಸಗೊಂಡಿರುವ ಏಡ್ಸ್‌ಗೆ ಬಲಿಯಾಗಿದ್ದಾನೆ. ಇಡೀ ಸೋಂಕು ರಕ್ಷಾ ವ್ಯವಸ್ಥೆಯನ್ನು ದುರ್ಬಲಗೊಳಿಸುವುದರಲ್ಲಿ ಏಚ್‌ಐವಿಯು ಪೂರ್ಣವಾಗಿ ಯಶಸ್ವಿಯಾಗಿದೆ.

ಇದು ತುಂಬ ಸರಳವಾದ ಒಂದು ವಿವರಣೆಯಾಗಿದೆ. ಆದರೆ ಸೋಂಕು ರಕ್ಷಾ ವ್ಯವಸ್ಥೆಯ ಕುರಿತು ಮತ್ತು ಏಚ್‌ಐವಿಯು ಹೇಗೆ ಕಾರ್ಯನಡಿಸುತ್ತದೆ ಎಂಬುದರ ಕುರಿತು ಸಂಶೋಧಕರಿಗೆ ತಿಳಿಯದಿರುವಂಥ ಇನ್ನೂ ಅತ್ಯಧಿಕ ವಿಚಾರಗಳಿವೆ ಎಂಬುದನ್ನು ನಾವು ಮನಸ್ಸಿನಲ್ಲಿಡಬೇಕಾಗಿದೆ.

ಬಹುಮಟ್ಟಿಗೆ ಎರಡು ದಶಕಗಳಿಂದ ಈ ಚಿಕ್ಕ ವೈರಸ್‌, ಲೋಕದಾದ್ಯಂತ ಇರುವ ಪ್ರಮುಖ ವೈದ್ಯಕೀಯ ಅನ್ವೇಷಕರ ಮಾನಸಿಕ ಹಾಗೂ ಭೌತಿಕ ಸಂಪನ್ಮೂಲಗಳನ್ನು ಸೂರೆಗೊಳಿಸಿದೆ. ಇದಕ್ಕಾಗಿ ಅಪಾರ ಪ್ರಮಾಣದಲ್ಲಿ ಹಣಕಾಸು ವೆಚ್ಚವಾಗಿದೆ. ಇದರ ಫಲಿತಾಂಶವಾಗಿ, ಏಚ್‌ಐವಿಯ ಕುರಿತು ಅಧಿಕ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ. ಒಬ್ಬ ಶಸ್ತ್ರಚಿಕಿತ್ಸಕರಾಗಿರುವ ಡಾ. ಶರ್ವನ್‌ ಬಿ. ನೂಲಾಂಡ್‌ ಅವರು ಕೆಲವು ವರ್ಷಗಳ ಹಿಂದೆ ಹೇಳಿಕೆ ನೀಡಿದ್ದು: “ಹ್ಯೂಮನ್‌ ಇಮ್ಯೂನೊಡಿಫಿಶಿಯೆನ್ಸಿ ವೈರಸ್‌ನ ಕುರಿತು ಮತ್ತು ಅದರ ಆಕ್ರಮಣದ ವಿರುದ್ಧ ರಕ್ಷಣೆಯನ್ನು ಸಿದ್ಧಪಡಿಸುವುದರಲ್ಲಿ ಮಾಡಲ್ಪಟ್ಟಿರುವ ಪ್ರಗತಿಯ ಕುರಿತು ಸಂಗ್ರಹಿಸಲ್ಪಟ್ಟಿರುವ . . . ಅಪಾರ ಮಾಹಿತಿಯು, ಖಂಡಿತವಾಗಿಯೂ ಆಶ್ಚರ್ಯಗೊಳಿಸುವಂಥದ್ದಾಗಿದೆ.”

ಆದರೂ, ಏಡ್ಸ್‌ ರೋಗದ ಪ್ರಾಣಾಂತಕ ಮುನ್ನಡೆಯು ಗಾಬರಿ ಹುಟ್ಟಿಸುವಂಥ ವೇಗದಲ್ಲಿ ಮುಂದುವರಿಯುತ್ತಿದೆ.

[ಪಾದಟಿಪ್ಪಣಿ]

^ ಫೆಬ್ರವರಿ 8, 2001ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ 13-15ನೆಯ ಪುಟಗಳನ್ನು ನೋಡಿರಿ.

[ಚಿತ್ರ]

ಏಚ್‌ಐವಿ ವೈರಸ್‌, ಸೋಂಕು ರಕ್ಷಾ ವ್ಯವಸ್ಥೆಯ ದುಗ್ಧಕಣಗಳ ಮೇಲೆ ಆಕ್ರಮಣಮಾಡುತ್ತದೆ ಮತ್ತು ಏಚ್‌ಐವಿ ವೈರಸ್‌ಗಳನ್ನು ಉತ್ಪಾದಿಸುವಂತೆ ಅವುಗಳನ್ನು ಪುನಃ ಪ್ರೋಗ್ರ್ಯಾಮ್‌ಮಾಡುತ್ತದೆ

[ಕೃಪೆ]

CDC, Atlanta, Ga.

[ಪುಟ 7ರಲ್ಲಿರುವ ಚಿತ್ರ]

ಸಾವಿರಾರು ಯುವ ಜನರು ಬೈಬಲ್‌ ಮಟ್ಟಗಳಿಗೆ ಅಂಟಿಕೊಳ್ಳುತ್ತಾರೆ