ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಡ್ಸ್‌ ರೋಗವನ್ನು ನಿಲ್ಲಿಸಸಾಧ್ಯವಿದೆಯೊ? ಸಾಧ್ಯವಿರುವಲ್ಲಿ, ಹೇಗೆ?

ಏಡ್ಸ್‌ ರೋಗವನ್ನು ನಿಲ್ಲಿಸಸಾಧ್ಯವಿದೆಯೊ? ಸಾಧ್ಯವಿರುವಲ್ಲಿ, ಹೇಗೆ?

ಏಡ್ಸ್‌ ರೋಗವನ್ನು ನಿಲ್ಲಿಸಸಾಧ್ಯವಿದೆಯೊ? ಸಾಧ್ಯವಿರುವಲ್ಲಿ, ಹೇಗೆ?

ಆಫ್ರಿಕದ ಅನೇಕ ದೇಶಗಳಲ್ಲಿ ಏಡ್ಸ್‌ ಸಾಂಕ್ರಾಮಿಕ ರೋಗವಿದೆ ಎಂಬುದನ್ನು ಸ್ವಲ್ಪ ಕಾಲದ ವರೆಗೆ ಸಂಪೂರ್ಣವಾಗಿ ಅಲ್ಲಗಳೆಯಲಾಗುತ್ತಿತ್ತು. ಇದು ಕೆಲವು ಜನರು ಚರ್ಚಿಸಲು ಇಷ್ಟಪಡದಿರುವಂಥ ಒಂದು ವಸ್ತುವಿಷಯವಾಗಿದೆ. ಆದರೆ ತೀರ ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ಯುವ ಜನರಿಗೆ ಇದರ ಬಗ್ಗೆ ಶಿಕ್ಷಣ ನೀಡಲು ಮತ್ತು ಮುಕ್ತವಾದ ಚರ್ಚೆಯನ್ನು ಉತ್ತೇಜಿಸಲು ಪ್ರಯತ್ನಗಳು ಮಾಡಲ್ಪಟ್ಟಿವೆ. ಈ ಪ್ರಯತ್ನಗಳು ಮಿತವಾದ ಯಶಸ್ಸನ್ನು ಕಂಡಿವೆ. ಏಕೆಂದರೆ ಜನರ ಜೀವನ ಶೈಲಿಗಳು ಮತ್ತು ಪದ್ಧತಿಗಳು ದೃಢವಾಗಿ ಬೇರೂರಿಬಿಟ್ಟಿವೆ, ಮತ್ತು ಹೀಗೆ ಒಂದು ಬದಲಾವಣೆಯನ್ನು ತರುವುದು ತುಂಬ ಕಷ್ಟಕರವಾಗಿದೆ.

ವೈದ್ಯಕೀಯ ಪ್ರಗತಿ

ವೈದ್ಯಕೀಯ ಕ್ಷೇತ್ರದಲ್ಲಿ, ವಿಜ್ಞಾನಿಗಳು ಏಚ್‌ಐವಿಯ ಕುರಿತು ಹೆಚ್ಚು ವಿಷಯಗಳನ್ನು ತಿಳಿದುಕೊಂಡಿದ್ದಾರೆ ಮತ್ತು ಅನೇಕರ ಜೀವನಗಳನ್ನು ಲಂಬಿಸಿರುವಂಥ ಔಷಧಗಳನ್ನು ವಿಕಸಿಸಿದ್ದಾರೆ. ತುಂಬ ಕ್ರಿಯಾಶೀಲವಾದ ರೆಟ್ರೋವೈರಲ್‌ನಾಶಕ ಚಿಕಿತ್ಸೆ ಎಂದು ಸೂಚಿಸಲ್ಪಟ್ಟಿರುವ, ರೆಟ್ರೋವೈರಲ್‌ನಾಶಕ ಔಷಧಿಯ ಕಡಿಮೆಪಕ್ಷ ಮೂರು ಸಂಯೋಗಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಲಾಗಿದೆ.

ಈ ಔಷಧಗಳು ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವುದಿಲ್ಲವಾದರೂ, ವಿಶೇಷವಾಗಿ ಅಭಿವೃದ್ಧಿಹೊಂದಿರುವ ದೇಶಗಳಲ್ಲಿ ಇವು ಏಚ್‌ಐವಿ ರೋಗದಿಂದ ಬಾಧಿತರಾಗಿರುವ ಜನರ ಮರಣ ಪ್ರಮಾಣವನ್ನು ಕಡಿಮೆಮಾಡುವುದರಲ್ಲಿ ಸಾಫಲ್ಯವನ್ನು ಪಡೆದಿವೆ. ಅಭಿವೃದ್ಧಿಶೀಲ ದೇಶಗಳಿಗೆ ಈ ಔಷಧಗಳನ್ನು ಸರಬರಾಜುಮಾಡುವುದರ ಪ್ರಮುಖತೆಯನ್ನು ಅನೇಕರು ಒತ್ತಿಹೇಳುತ್ತಿದ್ದಾರೆ. ಆದರೂ, ಈ ಔಷಧಗಳು ತುಂಬ ದುಬಾರಿಯಾಗಿವೆ ಮತ್ತು ಈ ದೇಶಗಳಲ್ಲಿರುವ ಅಧಿಕಾಂಶ ಜನರ ಕೈಗೆ ನಿಲುಕದವುಗಳಾಗಿವೆ.

ಇದು ಈ ಮುಂದಿನ ವಿವಾದವನ್ನು ಎಬ್ಬಿಸಿದೆ: ಮಾನವ ಜೀವಕ್ಕಿಂತಲೂ ಹಣಕಾಸಿನ ಲಾಭವು ಹೆಚ್ಚು ಪ್ರಾಮುಖ್ಯವಾಗಿದೆಯೋ? ಏಚ್‌ಐವಿ/ಏಡ್ಸ್‌ನ ಕುರಿತಾದ ಬ್ರಸಿಲ್‌ನ ಕಾರ್ಯಕ್ರಮದ ನಿರ್ದೇಶಕರಾಗಿರುವ ಡಾ. ಪೌಲೂ ಟೇಶೇರರು ಈ ಸನ್ನಿವೇಶವನ್ನು ಒಪ್ಪಿಕೊಂಡರು: “ಸಾಮಾನ್ಯವಾಗಿ ಸಂಪಾದಿಸಲ್ಪಡುವ ಲಾಭಗಳಿಗಿಂತಲೂ ಹೆಚ್ಚು ಮಹತ್ತರವಾದ ಲಾಭಗಳನ್ನು ಪಡೆದುಕೊಳ್ಳುವ ಸಲುವಾಗಿ, ಯಾವ ಔಷಧದಿಂದ ಬದುಕಿ ಉಳಿಯಸಾಧ್ಯವಿದೆಯೋ ಆ ಔಷಧಗಳ ಕೊರತೆಯಿಂದಾಗಿ ಸಾವಿರಾರು ಜನರು ಕೊಚ್ಚಿಕೊಂಡುಹೋಗುವಂತೆ ನಾವು ಬಿಡಸಾಧ್ಯವಿಲ್ಲ.” ಅವರು ಕೂಡಿಸಿ ಹೇಳಿದ್ದು: “ನೈತಿಕ ಹಾಗೂ ಮಾನವ ಪರಿಗಣನೆಗಳಿಗಿಂತ ವಾಣಿಜ್ಯ ಅಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡಬಾರದು ಎಂಬ ವಿಷಯದಲ್ಲಿ ನಾನು ತುಂಬ ಚಿಂತಿತನಾಗಿದ್ದೇನೆ.”

ಕೆಲವು ದೇಶಗಳು ದೊಡ್ಡ ಔಷಧವಸ್ತುಗಳ ಕಂಪೆನಿಗಳ ಹಕ್ಕುಪತ್ರಗಳಲ್ಲಿ ಕೆಲವನ್ನು ಅತಿಕ್ರಮಿಸಲು ಮತ್ತು ಕೆಲವು ಔಷಧಗಳ ವಿಶಿಷ್ಟವಾದ ರೂಪಗಳನ್ನು ತೀರ ಕಡಿಮೆ ಬೆಲೆಯಲ್ಲಿ ತಯಾರಿಸಲು ಅಥವಾ ಆಮದು ಮಾಡಿಕೊಳ್ಳಲು ನಿರ್ಧರಿಸಿವೆ. * ಒಂದು ಸಂಶೋಧನಾ ಅಧ್ಯಯನಕ್ಕನುಸಾರ, “[ವಿಶಿಷ್ಟವಾದ ಔಷಧಗಳ] ಕನಿಷ್ಠ ಬೆಲೆಯು, ವಿಶ್ವ ಸಂಸ್ಥೆಯ ಸ್ಟ್ಯಾಂಡರ್ಡ್‌ ಬೆಲೆಗಳಿಗಿಂತ 82% ಕಡಿಮೆಯಿರುತ್ತದೆಂದು ಕಂಡುಕೊಳ್ಳಲಾಗಿದೆ” ಎಂದು ಸೌತ್‌ ಆಫ್ರಿಕನ್‌ ಮೆಡಿಕಲ್‌ ಜರ್ನಲ್‌ ವರದಿಸುತ್ತದೆ.

ಚಿಕಿತ್ಸೆಗೆ ವಿಘ್ನಗಳು

ಸ್ವಲ್ಪ ಸಮಯಾನಂತರ, ಅಗತ್ಯದಲ್ಲಿರುವ ಅಭಿವೃದ್ಧಿಶೀಲ ದೇಶಗಳಿಗೆ ದೊಡ್ಡ ಔಷಧವಸ್ತುಗಳ ಕಂಪೆನಿಗಳು ಏಡ್ಸ್‌ ಔಷಧಗಳನ್ನು ತೀರ ಕಡಿಮೆ ಬೆಲೆಗಳಲ್ಲಿ ನೀಡಲಾರಂಭಿಸಿದವು. ಈ ರೀತಿಯಲ್ಲಿ ಇನ್ನೂ ಅನೇಕ ಜನರು ಔಷಧಗಳನ್ನು ಉಪಯೋಗಿಸಲು ಶಕ್ತರಾಗುವರು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಭಿವೃದ್ಧಿಶೀಲ ದೇಶಗಳಲ್ಲಿ ಇಂಥ ಔಷಧಗಳು ಸುಲಭವಾಗಿ ಸಿಗಸಾಧ್ಯವಾಗುವಂತೆ ಮಾಡಲಿಕ್ಕಾಗಿ ಅನೇಕ ಪ್ರಮುಖ ವಿಘ್ನಗಳನ್ನು ಜಯಿಸಬೇಕಾಗಿದೆ. ಇವುಗಳಲ್ಲಿ ಒಂದು ಅದರ ಬೆಲೆಯೇ ಆಗಿದೆ. ಅತಿ ಹೆಚ್ಚು ರಿಯಾಯಿತಿಯಿಂದ ಕೂಡಿರುವ ಬೆಲೆಗಳಿದ್ದರೂ, ಯಾರಿಗೆ ಈ ಔಷಧದ ಅಗತ್ಯವಿದೆಯೋ ಆ ಬಹುತೇಕ ಜನರಿಗೆ ಇವು ತೀರ ದುಬಾರಿಯಾಗಿವೆ.

ಇನ್ನೊಂದು ಸಮಸ್ಯೆಯೇನೆಂದರೆ, ಈ ಔಷಧಗಳನ್ನು ನಿಷ್ಕೃಷ್ಟ ಪ್ರಮಾಣದಲ್ಲಿ ಒಬ್ಬ ವ್ಯಕ್ತಿಗೆ ನೀಡುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಅನೇಕ ಮಾತ್ರೆಗಳನ್ನು ದಿನಾಲೂ ತೆಗೆದುಕೊಳ್ಳಬೇಕು ಮತ್ತು ನಿರ್ದಿಷ್ಟ ಸಮಯಗಳಲ್ಲಿ ತೆಗೆದುಕೊಳ್ಳಬೇಕು. ಒಂದುವೇಳೆ ಅವುಗಳನ್ನು ಸರಿಯಾಗಿ ತೆಗೆದುಕೊಳ್ಳದಿದ್ದರೆ ಅಥವಾ ಔಷಧದ ನಿಯತ ಕ್ರಮಕ್ಕೆ ಏನಾದರೂ ಭಂಗ ಉಂಟಾಗುವುದಾದರೆ, ಇದು ಏಚ್‌ಐವಿಯ ಔಷಧ-ನಿರೋಧಕ ರೂಪದ ವಿಕಸನಕ್ಕೆ ನಡೆಸಸಾಧ್ಯವಿದೆ. ಮಿತವಾದ ಆಹಾರ, ಸ್ವಚ್ಛವಾದ ಕುಡಿಯುವ ನೀರಿನ ಕಡಿಮೆ ಸರಬರಾಯಿ, ಮತ್ತು ತೀರ ಕಡಿಮೆ ವೈದ್ಯಕೀಯ ಸೌಕರ್ಯಗಳು ಇರುವಂಥ ಆಫ್ರಿಕ ದೇಶದ ಪರಿಸ್ಥಿತಿಗಳಲ್ಲಿ, ರೋಗಿಗಳು ಸೂಕ್ತ ಪ್ರಮಾಣದ ಔಷಧಗಳನ್ನು ತೆಗೆದುಕೊಳ್ಳುತ್ತಾ ಇದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ತುಂಬ ಕಷ್ಟಕರವಾಗಿದೆ.

ಅಷ್ಟುಮಾತ್ರವಲ್ಲ, ಯಾರು ಔಷಧಗಳನ್ನು ತೆಗೆದುಕೊಳ್ಳುತ್ತಾರೋ ಅವರ ಮೇಲ್ವಿಚಾರಣೆಯನ್ನು ಸಹ ಮಾಡಬೇಕು. ಒಂದುವೇಳೆ ನಿರೋಧಕ ಶಕ್ತಿಯು ವಿಕಸಿಸುವುದಾದರೆ, ಔಷಧಗಳ ಸಂಯೋಗವನ್ನು ಸಹ ಬದಲಾಯಿಸಬೇಕು. ಇದಕ್ಕಾಗಿ ಅನುಭವಸ್ಥ ವೈದ್ಯಕೀಯ ಸಿಬ್ಬಂದಿಯ ಆವಶ್ಯಕತೆಯಿದೆ, ಮತ್ತು ಇದಕ್ಕಾಗಿ ಮಾಡಲ್ಪಡುವ ಪರೀಕ್ಷೆಗಳು ಸಹ ತುಂಬ ದುಬಾರಿಯಾಗಿವೆ. ಇದಲ್ಲದೆ, ಈ ಔಷಧಗಳಿಗೆ ಅಡ್ಡಪರಿಣಾಮಗಳಿವೆ, ಮತ್ತು ಈ ವೈರಸ್‌ನ ಔಷಧ ನಿರೋಧಕ ರೂಪಗಳು ಸಹ ವಿಕಸಿಸುತ್ತಿರುತ್ತವೆ.

ಏಡ್ಸ್‌ನ ಕುರಿತಾದ ವಿಶ್ವ ಸಂಸ್ಥೆಯ ಜನರಲ್‌ ಅಸೆಂಬ್ಲಿಯ ವಿಶೇಷ ಕೂಟದಲ್ಲಿ, 2001ರ ಜೂನ್‌ ತಿಂಗಳಿನಲ್ಲಿ, ಅಭಿವೃದ್ಧಿಶೀಲ ದೇಶಗಳಿಗೆ ನೆರವು ನೀಡಲಿಕ್ಕಾಗಿ ಒಂದು ಭೌಗೋಲಿಕ ಆರೋಗ್ಯ ನಿಧಿಯ ರಚನೆಯನ್ನು ಪ್ರಸ್ತಾಪಿಸಲಾಯಿತು. 700 ಕೋಟಿ ಡಾಲರುಗಳು ಮತ್ತು 1,000 ಕೋಟಿ ಡಾಲರುಗಳ ನಡುವಣ ಮೊತ್ತದ ಅಗತ್ಯವಿದೆ ಎಂದು ಅಲ್ಲಿ ಅಂದಾಜುಮಾಡಲಾಯಿತು. ಆದರೆ ಈ ನಿಧಿಗಾಗಿ ದಾನಮಾಡುತ್ತೇವೆಂದು ಮಾತುಕೊಡಲಾಗಿರುವ ಹಣದ ಒಟ್ಟು ಮೊತ್ತವು, ಗುರಿಯೋಪಾದಿ ಇಡಲ್ಪಟ್ಟಿರುವ ಮೊತ್ತವನ್ನು ಈ ವರೆಗೂ ತಲಪಿಲ್ಲ.

ಒಂದು ಲಸಿಕೆಯನ್ನು ಕಂಡುಕೊಳ್ಳುವೆವು ಎಂಬ ಬಲವಾದ ನಿರೀಕ್ಷೆಗಳು ವಿಜ್ಞಾನಿಗಳಿಗಿವೆ, ಮತ್ತು ವಿಭಿನ್ನ ದೇಶಗಳಲ್ಲಿ ಬೇರೆ ಬೇರೆ ರೀತಿಯ ಲಸಿಕೆಗಳು ಪರೀಕ್ಷಿಸಲ್ಪಡುತ್ತಿವೆ. ಈ ಪ್ರಯತ್ನಗಳು ಯಶಸ್ವಿಕರವಾಗುವುದಾದರೂ, ಒಂದು ಲಸಿಕೆಯನ್ನು ಕಂಡುಹಿಡಿದು, ಪರೀಕ್ಷಿಸಿ, ಸಾಮಾನ್ಯ ಉಪಯೋಗಕ್ಕಾಗಿ ಸುರಕ್ಷಿತವಾಗಿದೆ ಎಂದು ರುಜುಪಡಿಸಲು ಇನ್ನೂ ಅನೇಕ ವರ್ಷಗಳು ಹಿಡಿಯುವವು.

ಥಾಯ್ಲೆಂಡ್‌, ಬ್ರಸಿಲ್‌ ಮತ್ತು ಯುಗಾಂಡದಂಥ ಕೆಲವು ದೇಶಗಳು, ಚಿಕಿತ್ಸೆಯ ಕಾರ್ಯಕ್ರಮಗಳಿಂದ ಗಮನಾರ್ಹ ಯಶಸ್ಸನ್ನು ಪಡೆದುಕೊಂಡಿವೆ. ಸ್ಥಳಿಕವಾಗಿ ತಯಾರಿಸಲ್ಪಟ್ಟ ಔಷಧಗಳನ್ನು ಉಪಯೋಗಿಸುವ ಮೂಲಕ, ಬ್ರಸಿಲ್‌ ದೇಶವು ಏಡ್ಸ್‌ಸಂಬಂಧಿತ ಮರಣ ಪ್ರಮಾಣವನ್ನು ಅರ್ಧದಷ್ಟು ಕಡಿಮೆಗೊಳಿಸಿದೆ. ಹಣಕಾಸಿನ ಸಾಮರ್ಥ್ಯವಿರುವ ಬಾಟ್ಸ್‌ವಾನ ಎಂಬ ಚಿಕ್ಕ ದೇಶವು, ಆ ದೇಶದಲ್ಲಿ ಅಗತ್ಯವಿರುವವರೆಲ್ಲರಿಗೆ ರೆಟ್ರೋವೈರಲ್‌ನಾಶಕ ಔಷಧಗಳನ್ನು ಒದಗಿಸಲು ಪ್ರಯತ್ನಗಳನ್ನು ಮಾಡುತ್ತಾ ಇದೆ.

ಏಡ್ಸ್‌ನ ಸೋಲು

ಏಡ್ಸ್‌ ರೋಗವು ಇತರ ಸಾಂಕ್ರಾಮಿಕ ರೋಗಗಳಿಗಿಂತ ಒಂದು ಪ್ರಮುಖ ವಿಧದಲ್ಲಿ ಭಿನ್ನವಾಗಿದೆ: ಈ ರೋಗವನ್ನು ತಡೆಗಟ್ಟಸಾಧ್ಯವಿದೆ. ಒಂದುವೇಳೆ ಜನರು ಬೈಬಲಿನ ಮೂಲತತ್ತ್ವಗಳಿಗೆ ಅಂಟಿಕೊಳ್ಳಲು ಸಿದ್ಧರಾಗಿರುವುದಾದರೆ, ಎಲ್ಲ ವಿದ್ಯಮಾನಗಳಲ್ಲಿ ಅಲ್ಲದಿದ್ದರೂ ಅನೇಕ ವಿದ್ಯಮಾನಗಳಲ್ಲಿ ಅವರು ಸೋಂಕಿತರಾಗುವುದನ್ನು ದೂರಮಾಡಬಲ್ಲರು.

ಬೈಬಲಿನ ನೈತಿಕ ಮಟ್ಟಗಳು ಸ್ಪಷ್ಟವಾಗಿವೆ. ಯಾರು ವಿವಾಹಿತರಲ್ಲವೋ ಅವರು ಲೈಂಗಿಕ ಸಂಭೋಗದಿಂದ ದೂರವಿರಬೇಕು. (1 ಕೊರಿಂಥ 6:18) ವಿವಾಹಿತ ಜನರು ತಮ್ಮ ಸಂಗಾತಿಗಳಿಗೆ ನಿಷ್ಠರಾಗಿರಬೇಕು ಮತ್ತು ವ್ಯಭಿಚಾರವನ್ನು ಮಾಡಬಾರದು. (ಇಬ್ರಿಯ 13:⁠4) ರಕ್ತವನ್ನು ವಿಸರ್ಜಿಸಬೇಕು ಎಂಬ ಬೈಬಲಿನ ಬುದ್ಧಿವಾದಕ್ಕೆ ಕಿವಿಗೊಡುವುದು ಸಹ ಒಬ್ಬನನ್ನು ಸಂರಕ್ಷಿಸಲು ಸಹಾಯಮಾಡುತ್ತದೆ.​—⁠ಅ. ಕೃತ್ಯಗಳು 15:​28, 29.

ಈಗಾಗಲೇ ಈ ರೋಗದಿಂದ ಸೋಂಕಿತರಾಗಿರುವವರು, ಸಮೀಪ ಭವಿಷ್ಯತ್ತಿಗಾಗಿ ದೇವರಿಂದ ವಾಗ್ದಾನಿಸಲ್ಪಟ್ಟಿರುವ ರೋಗಮುಕ್ತ ಲೋಕದ ಕುರಿತು ಕಲಿಯುವ ಮೂಲಕ ಮತ್ತು ದೇವರ ಆವಶ್ಯಕತೆಗಳಿಗೆ ಅನುಸಾರವಾಗಿ ನಡೆಯುವ ಮೂಲಕ ಮಹಾ ಆನಂದವನ್ನು ಹಾಗೂ ಸಾಂತ್ವನವನ್ನು ಕಂಡುಕೊಳ್ಳಸಾಧ್ಯವಿದೆ.

ರೋಗವನ್ನೂ ಒಳಗೊಂಡು ಸರ್ವ ಮಾನವಕುಲದ ವಿಪತ್ತುಗಳು ಸೂಕ್ತ ಸಮಯದಲ್ಲಿ ಕೊನೆಗೊಳಿಸಲ್ಪಡುವವು ಎಂದು ಬೈಬಲು ನಮಗೆ ಆಶ್ವಾಸನೆ ನೀಡುತ್ತದೆ. ಪ್ರಕಟನೆ ಪುಸ್ತಕದಲ್ಲಿ ಈ ವಾಗ್ದಾನವನ್ನು ಮಾಡಲಾಗಿದೆ: “ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾ ಶಬ್ದವು ನನಗೆ ಕೇಳಿಸಿತು. ಅದು​—⁠ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿತು.”​—⁠ಪ್ರಕಟನೆ 21:​3, 4.

ಯಾರು ದುಬಾರಿಯಾದ ಔಷಧವನ್ನು ಪಡೆದುಕೊಳ್ಳಲು ಶಕ್ತರಾಗಿದ್ದಾರೋ ಅವರಿಗಾಗಿ ಮಾತ್ರ ಆ ಆಶ್ವಾಸನೆಯು ಕೊಡಲ್ಪಟ್ಟಿಲ್ಲ. ಪ್ರಕಟನೆ 21ನೆಯ ಅಧ್ಯಾಯದಲ್ಲಿ ಕೊಡಲ್ಪಟ್ಟಿರುವ ಪ್ರವಾದನಾತ್ಮಕ ವಾಗ್ದಾನವು, ಯೆಶಾಯ 33:24ರಲ್ಲಿ ದೃಢೀಕರಿಸಲ್ಪಟ್ಟಿದೆ: “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” ಆಗ ಈ ಭೂಮಿಯಲ್ಲಿ ಜೀವಿಸುವವರೆಲ್ಲರೂ ದೇವರ ನಿಮಯಗಳನ್ನು ಪಾಲಿಸುವರು ಮತ್ತು ಪರಿಪೂರ್ಣ ಆರೋಗ್ಯದಲ್ಲಿ ಆನಂದಿಸುವರು. ಹೀಗೆ, ಏಡ್ಸ್‌ನ ಪ್ರಾಣಾಂತಕ ಮುನ್ನಡೆ ಹಾಗೂ ಇತರ ಎಲ್ಲ ರೋಗಗಳು ಸದಾಕಾಲಕ್ಕೂ ಕೊನೆಗೊಳಿಸಲ್ಪಡುವವು. (g02 11/08)

[ಪಾದಟಿಪ್ಪಣಿ]

^ ವಿಶಿಷ್ಟವಾದ ಔಷಧಗಳು, ಔಷಧಗಳ ಪಡಿಯಚ್ಚಾಗಿದ್ದು, ಇವು ಇತರ ಔಷಧವಸ್ತುಗಳ ಕಂಪೆನಿಗಳಿಂದ ಹಕ್ಕುಪತ್ರ ಪಡೆದಿರುತ್ತವೆ. ವಿಶ್ವ ವಾಣಿಜ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು, ತುರ್ತು ಪರಿಸ್ಥಿತಿಗಳಲ್ಲಿ ಔಷಧದ ಹಕ್ಕುಪತ್ರಗಳನ್ನು ಕಾನೂನುಬದ್ಧವಾಗಿ ಅತಿಕ್ರಮಿಸಬಹುದು.

[ಪುಟ 9, 10ರಲ್ಲಿರುವ ಚೌಕ/ಚಿತ್ರಗಳು]

ಈ ನೈಜ ಚಿಕಿತ್ಸೆಗಾಗಿಯೇ ನಾನು ಎದುರುನೋಡುತ್ತಿದ್ದೆ

ನಾನು ದಕ್ಷಿಣ ಆಫ್ರಿಕದಲ್ಲಿ ಜೀವಿಸುತ್ತಿದ್ದೇನೆ, ಮತ್ತು ನಾನು 23 ವರ್ಷ ಪ್ರಾಯದವಳು. ನನಗೆ ಏಚ್‌ಐವಿ ರೋಗವು ಸೋಂಕಿದೆ ಎಂದು ಗೊತ್ತಾದ ದಿನ ನನಗಿನ್ನೂ ನೆನಪಿದೆ.

ವೈದ್ಯರು ಈ ಸುದ್ದಿಯನ್ನು ನನಗೆ ತಿಳಿಸಿದಾಗ, ಕನ್ಸಲ್ಟಿಂಗ್‌ ರೂಮಿನಲ್ಲಿ ನಾನು ನನ್ನ ತಾಯಿಯೊಂದಿಗೆ ಇದ್ದೆ. ನನ್ನ ಜೀವನದಲ್ಲೇ ನಾನು ಕೇಳಿಸಿಕೊಂಡಿದ್ದ ಸುದ್ದಿಗಳಲ್ಲಿ ಅತ್ಯಂತ ದುಃಖಕರ ಸುದ್ದಿಯು ಇದಾಗಿತ್ತು. ನಾನು ತುಂಬ ಗಲಿಬಿಲಿಗೊಂಡೆ. ನನಗೆ ಇದನ್ನು ನಂಬಲು ಸಾಧ್ಯವಾಗಲಿಲ್ಲ. ಬಹುಶಃ ಪ್ರಯೋಗಶಾಲೆಯಲ್ಲಿ ಏನೋ ತಪ್ಪಾಗಿದೆ ಎಂದು ನಾನು ಆಲೋಚಿಸಿದೆ. ಏನು ಹೇಳಬೇಕು ಅಥವಾ ಏನು ಮಾಡಬೇಕು ಎಂಬುದೇ ನನಗೆ ತೋಚಲಿಲ್ಲ. ನನಗೆ ಅಳುವ ಮನಸ್ಸಾಯಿತು, ಆದರೆ ಕಣ್ಣೀರೇ ಬರಲಿಲ್ಲ. ವೈದ್ಯರು ನನ್ನ ತಾಯಿಯೊಂದಿಗೆ ರೆಟ್ರೋವೈರಲ್‌ನಾಶಕ ಔಷಧಗಳು ಹಾಗೂ ಇತರ ವಿಷಯಗಳ ಕುರಿತು ಚರ್ಚಿಸಲು ಆರಂಭಿಸಿದರು, ಆದರೆ ನನಗೆಷ್ಟು ಆಘಾತವಾಗಿತ್ತೆಂದರೆ, ನನ್ನಿಂದ ಏನನ್ನೂ ಗ್ರಹಿಸಲಾಗಲಿಲ್ಲ.

ನಾನು ವ್ಯಾಸಂಗಮಾಡುತ್ತಿದ್ದ ವಿಶ್ವವಿದ್ಯಾನಿಲಯದಲ್ಲಿ ಯಾರಿಂದಲೋ ನಾನು ಸೋಂಕಿತಳಾಗಿದ್ದೇನೆ ಎಂಬುದು ನನ್ನ ಅರಿವಿಗೆ ಬಂತು. ನನ್ನ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಸಾಧ್ಯವಿದ್ದ ಯಾರೊಂದಿಗಾದರೂ ನಾನು ಮಾತಾಡಬೇಕು ಎಂಬ ಬಯಕೆ ನನ್ನಲ್ಲಿ ತೀವ್ರವಾಗಿತ್ತು, ಆದರೆ ಯಾರೂ ನನ್ನ ಮನಸ್ಸಿಗೆ ಹೊಳೆಯಲಿಲ್ಲ. ಕ್ರಮೇಣ ನಾನು ಅಯೋಗ್ಯಳು ಮತ್ತು ಜೀವನದಲ್ಲಿ ಸೋತವಳು ಎಂಬ ಅನಿಸಿಕೆಗೆ ಬಲಿಯಾದೆ. ನನ್ನ ಕುಟುಂಬವು ನನಗೆ ಬೆಂಬಲವನ್ನು ನೀಡಿತಾದರೂ, ನಾನು ತುಂಬ ಆಶಾಭಂಗಗೊಂಡಿದ್ದೆ ಮತ್ತು ಭಯಗೊಂಡಿದ್ದೆ. ಎಲ್ಲಾ ಯುವ ಜನರಂತೆ ನನಗೂ ಅನೇಕ ಆಸೆಆಕಾಂಕ್ಷೆಗಳಿದ್ದವು. ವಿಜ್ಞಾನದ ಕ್ಷೇತ್ರದಲ್ಲಿ ಡಿಗ್ರಿಯನ್ನು ಮುಗಿಸಲು ಎರಡೇ ವರ್ಷಗಳು ಬಾಕಿ ಇದ್ದವು, ಆದರೆ ಆ ನಿರೀಕ್ಷೆಯು ನುಚ್ಚುನೂರಾಯಿತು.

ನಾನು ವೈದ್ಯರು ಬರೆದು ಕೊಟ್ಟಿದ್ದ ರೆಟ್ರೋವೈರಲ್‌ನಾಶಕ ಔಷಧಗಳನ್ನು ತೆಗೆದುಕೊಳ್ಳಲಾರಂಭಿಸಿದೆ ಮತ್ತು ಏಡ್ಸ್‌ ಸಲಹೆಗಾರರ ಬಳಿಯೂ ಹೋದೆ. ಆದರೂ ಇನ್ನೂ ಖಿನ್ನತೆಗೆ ಒಳಗಾದೆ. ನಾನು ಸಾಯುವುದಕ್ಕೆ ಮುಂಚೆ ನಿಜ ಕ್ರೈಸ್ತತ್ವವನ್ನು ನನಗೆ ತೋರಿಸಬೇಕೆಂದು ದೇವರಿಗೆ ಪ್ರಾರ್ಥಿಸಿದೆ. ನಾನು ಪೆಂಟೆಕೋಸ್ಟ್‌ ಚರ್ಚೊಂದರ ಸದಸ್ಯಳಾಗಿದ್ದೆ, ಆದರೆ ನನ್ನ ಚರ್ಚಿನಿಂದ ಯಾರೊಬ್ಬರೂ ನನ್ನನ್ನು ಭೇಟಿಮಾಡಲು ಬರಲಿಲ್ಲ. ಮರಣದ ಬಳಿಕ ನಾನು ಎಲ್ಲಿಗೆ ಹೋಗಲಿದ್ದೆ ಎಂಬುದರ ಕುರಿತು ನಾನು ತಿಳಿಯಲು ಬಯಸಿದ್ದೆ.

ಇಸವಿ 1999ರ ಆಗಸ್ಟ್‌ ತಿಂಗಳ ಆರಂಭದಲ್ಲಿ ಒಂದು ಬೆಳಗ್ಗೆ, ಯೆಹೋವನ ಸಾಕ್ಷಿಗಳಲ್ಲಿ ಇಬ್ಬರು ನನ್ನ ಮನೆ ಬಾಗಿಲನ್ನು ತಟ್ಟಿದರು. ಆ ದಿನ ನಾನು ತುಂಬ ಅಸ್ವಸ್ಥಳಾಗಿದ್ದೆ, ಆದರೆ ವಾಸದ ಕೋಣೆಯಲ್ಲಿ ಕುಳಿತುಕೊಳ್ಳಲು ಶಕ್ತಳಾಗಿದ್ದೆ. ಈ ಇಬ್ಬರು ಸ್ತ್ರೀಯರು ತಮ್ಮ ಪರಿಚಯಮಾಡಿಕೊಂಡರು ಮತ್ತು ತಾವು ಜನರಿಗೆ ಬೈಬಲ್‌ ಅಧ್ಯಯನಮಾಡಲು ಸಹಾಯಮಾಡುತ್ತಿದ್ದೇವೆ ಎಂದು ಹೇಳಿದರು. ಕೊನೆಗೂ ನನ್ನ ಪ್ರಾರ್ಥನೆಗಳು ಉತ್ತರಿಸಲ್ಪಟ್ಟದ್ದನ್ನು ನೋಡಿ ನನಗೆಷ್ಟು ನಿರಾಳವಾದ ಅನಿಸಿಕೆಯಾಯಿತು. ಆದರೆ ಅಷ್ಟರಲ್ಲಿ ನಾನು ತುಂಬ ನಿತ್ರಾಣಳಾಗಿದ್ದೆ ಮತ್ತು ಓದಲು ಅಥವಾ ಹೆಚ್ಚು ಸಮಯ ಮನಸ್ಸನ್ನು ಕೇಂದ್ರೀಕರಿಸಲು ಅಶಕ್ತಳಾಗಿದ್ದೆ.

ಆದರೂ, ನಾನು ಬೈಬಲ್‌ ಅಧ್ಯಯನಮಾಡಲು ಬಯಸುತ್ತೇನೆ ಎಂದು ಅವರಿಗೆ ಹೇಳಿದೆ, ಮತ್ತು ಅವರು ಅದಕ್ಕಾಗಿ ಬೇಕಾದ ಏರ್ಪಾಡುಗಳನ್ನು ಮಾಡಿದರು. ಅಸಂತೋಷಕರವಾಗಿ, ಅಧ್ಯಯನಕ್ಕಾಗಿ ನಿಗದಿತ ಸಮಯವು ಬರುವ ಮುಂಚೆಯೇ, ನನ್ನ ಖಿನ್ನತೆಯ ಕಾರಣಕ್ಕಾಗಿ ನನ್ನನ್ನು ಮನೋರೋಗದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೂರು ವಾರಗಳ ನಂತರ ನನ್ನನ್ನು ಡಿಸ್‌ಚಾರ್ಜ್‌ ಮಾಡಲಾಯಿತು ಮತ್ತು ಸಾಕ್ಷಿಗಳು ನನ್ನನ್ನು ಮರೆತಿಲ್ಲ ಎಂಬುದನ್ನು ತಿಳಿದು ನೆಮ್ಮದಿಯ ಅನಿಸಿಕೆಯಾಯಿತು. ಅವರಲ್ಲಿ ಒಬ್ಬರು ನಾನು ಹೇಗಿದ್ದೇನೆ ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ನನ್ನನ್ನು ಸಂಪರ್ಕಿಸುತ್ತಾ ಇದ್ದದ್ದು ನನಗೆ ಇನ್ನೂ ನೆನಪಿದೆ. ನಾನು ಶಾರೀರಿಕವಾಗಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡೆ, ಮತ್ತು ಆ ವರ್ಷದ ಕೊನೆಯಷ್ಟಕ್ಕೆ ಬೈಬಲ್‌ ಅಧ್ಯಯನಮಾಡಲಾರಂಭಿಸಿದೆ. ನನ್ನ ಸ್ಥಿತಿಯಲ್ಲಿ ಏರುಪೇರಾಗುತ್ತಾ ಇದ್ದ ಕಾರಣ, ಅಧ್ಯಯನಮಾಡುವುದನ್ನು ನಾನು ಸುಲಭವಾದದ್ದಾಗಿ ಕಂಡುಕೊಳ್ಳಲಿಲ್ಲ. ಆದರೆ ನನ್ನೊಂದಿಗೆ ಅಧ್ಯಯನಮಾಡುತ್ತಾ ಇದ್ದ ವ್ಯಕ್ತಿಯು ನನ್ನ ಸನ್ನಿವೇಶವನ್ನು ಅರ್ಥಮಾಡಿಕೊಂಡು, ತಾಳ್ಮೆಯಿಂದ ಸಹಕರಿಸಿದರು.

ಬೈಬಲಿನಲ್ಲಿ ಯೆಹೋವನ ಮತ್ತು ಆತನ ಗುಣಗಳ ಕುರಿತು, ಹಾಗೂ ಆತನ ಬಗ್ಗೆ ತಿಳಿದುಕೊಳ್ಳುವುದು ಮತ್ತು ನಿತ್ಯಜೀವಕ್ಕಾಗಿ ಎದುರುನೋಡುವುದು ನಿಜವಾಗಿಯೂ ಏನನ್ನು ಅರ್ಥೈಸುತ್ತದೆ ಎಂಬುದನ್ನು ನಾನು ಅಧ್ಯಯನಮಾಡಿದಾಗ, ನಾನು ತುಂಬ ಪ್ರಭಾವಿತಳಾದೆ. ಮಾನವಕುಲದ ಕಷ್ಟಾನುಭವಕ್ಕೆ ಕಾರಣವೇನು ಎಂಬುದನ್ನು ಸಹ ನಾನು ಮೊದಲ ಬಾರಿ ಅರ್ಥಮಾಡಿಕೊಂಡೆ. ಅತಿ ಬೇಗನೆ ಎಲ್ಲಾ ಮಾನವ ಸರಕಾರಗಳನ್ನು ಸ್ಥಾನಪಲ್ಲಟಗೊಳಿಸಲಿರುವ ದೇವರ ರಾಜ್ಯದ ಕುರಿತು ಕಲಿಯುವುದು ನನಗೆ ಮಹತ್ತರವಾದ ಆನಂದವನ್ನು ತಂದಿತು. ಇದು ನನ್ನ ಜೀವನಮಾರ್ಗವನ್ನು ಸಂಪೂರ್ಣವಾಗಿ ಬದಲಾಯಿಸುವಂತೆ ನನ್ನನ್ನು ಪ್ರಚೋದಿಸಿತು.

ಈ ನೈಜ ಚಿಕಿತ್ಸೆಗಾಗಿಯೇ ನಾನು ಎದುರುನೋಡುತ್ತಿದ್ದೆ. ಯೆಹೋವನು ಇನ್ನೂ ನನ್ನನ್ನು ಪ್ರೀತಿಸುತ್ತಾನೆ ಮತ್ತು ಕಾಳಜಿ ತೋರಿಸುತ್ತಾನೆ ಎಂಬುದನ್ನು ಗ್ರಹಿಸುವುದು ಎಷ್ಟು ಸಾಂತ್ವನದಾಯಕವಾಗಿತ್ತು! ದೇವರು ನನ್ನನ್ನು ದ್ವೇಷಿಸುತ್ತಾನೆ ಮತ್ತು ಈ ಕಾರಣಕ್ಕಾಗಿಯೇ ನನಗೆ ಈ ರೋಗವು ಸೋಂಕಿದೆ ಎಂದು ನಾನು ಈ ಮುಂಚೆ ನೆನಸಿದ್ದೆ. ಆದರೆ ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಕ್ಷಮಾಪಣೆಯನ್ನು ಒದಗಿಸಲಿಕ್ಕಾಗಿ ಯೆಹೋವನು ಪ್ರೀತಿಯಿಂದ ಏರ್ಪಾಡನ್ನು ಮಾಡಿದ್ದಾನೆ ಎಂಬುದನ್ನು ನಾನು ಕಲಿತೆ. ತದನಂತರ, 1 ಪೇತ್ರ 5:7 ತಿಳಿಸುವಂತೆ, ದೇವರು ನಮ್ಮ ಬಗ್ಗೆ ಕಾಳಜಿ ತೋರಿಸುತ್ತಾನೆ ಎಂಬುದನ್ನೂ ನಾನು ಅರಿತುಕೊಂಡೆ: “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.”

ಪ್ರತಿ ದಿನ ಬೈಬಲ್‌ ಅಧ್ಯಯನಮಾಡುವ ಮೂಲಕ ಮತ್ತು ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗುವ ಮೂಲಕ, ನನ್ನಿಂದ ಸಾಧ್ಯವಿರುವಷ್ಟರ ಮಟ್ಟಿಗೆ ಯೆಹೋವನಿಗೆ ಆಪ್ತಳಾಗಿರಲು ನಾನು ನಿಜವಾದ ಪ್ರಯತ್ನವನ್ನು ಮಾಡುತ್ತಿದ್ದೇನೆ. ಇದು ಯಾವಾಗಲೂ ಸುಲಭವಾಗಿರುವುದಿಲ್ಲವಾದರೂ, ನಾನು ಪ್ರಾರ್ಥನೆಯಲ್ಲಿ ನನ್ನ ಚಿಂತೆಗಳನ್ನು ಯೆಹೋವನ ಬಳಿ ಹೇಳಿಕೊಳ್ಳುತ್ತೇನೆ ಮತ್ತು ಆತನ ಬಲ ಹಾಗೂ ಸಾಂತ್ವನಕ್ಕಾಗಿ ಕೇಳಿಕೊಳ್ಳುತ್ತೇನೆ. ಸಭೆಯ ಸದಸ್ಯರು ನನಗೆ ಬೆಂಬಲ, ಸಹಾನುಭೂತಿ, ಹಾಗೂ ಸ್ನೇಹವನ್ನು ನೀಡಲು ಸದಾ ಸಿದ್ಧರಿದ್ದಾರೆ, ಆದುದರಿಂದಲೇ ನಾನು ಸಂತೋಷದಿಂದಿದ್ದೇನೆ.

ಸ್ಥಳಿಕ ಸಭೆಯೊಂದಿಗೆ ನಾನು ಸೌವಾರ್ತಿಕ ಕೆಲಸದಲ್ಲಿ ಕ್ರಮವಾಗಿ ಭಾಗವಹಿಸುತ್ತೇನೆ. ನಾನು ಇತರರಿಗೆ, ವಿಶೇಷವಾಗಿ ನನ್ನಂಥ ಸನ್ನಿವೇಶದಲ್ಲಿರುವವರಿಗೆ ಆತ್ಮಿಕವಾಗಿ ಸಹಾಯಮಾಡಲು ಬಯಸುತ್ತೇನೆ. ನಾನು 2001ರ ಡಿಸೆಂಬರ್‌ ತಿಂಗಳಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆ.

[ಚಿತ್ರ]

ದೇವರ ರಾಜ್ಯದ ಕುರಿತು ಕಲಿಯುವುದು ನನಗೆ ಮಹತ್ತರವಾದ ಆನಂದವನ್ನು ತಂದಿತು

[ಪುಟ 8ರಲ್ಲಿರುವ ಚಿತ್ರ]

ಬಾಟ್ಸ್‌ವಾನದಲ್ಲಿ ಏಡ್ಸ್‌ ಕುರಿತಾದ ಸಲಹಾ ತಂಡ

[ಪುಟ 10ರಲ್ಲಿರುವ ಚಿತ್ರ]

ಪರದೈಸಾಗುವ ಭೂಮಿಯಲ್ಲಿ ಎಲ್ಲರೂ ಪರಿಪೂರ್ಣ ಆರೋಗ್ಯದಲ್ಲಿ ಆನಂದಿಸುವರು