ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಅಪೂರ್ವ ಪುನರ್ಮಿಲನ 30 ವರ್ಷಗಳ ಬಳಿಕ

ಒಂದು ಅಪೂರ್ವ ಪುನರ್ಮಿಲನ 30 ವರ್ಷಗಳ ಬಳಿಕ

ಒಂದು ಅಪೂರ್ವ ಪುನರ್ಮಿಲನ 30 ವರ್ಷಗಳ ಬಳಿಕ

ಆಕಸ್ಮಿಕವಾಗಿ ಇಬ್ಬರು ಯುವಕರು 1967ರಲ್ಲಿ ಒಬ್ಬರನ್ನೊಬ್ಬರು ಭೇಟಿಯಾದರು. ಅವರು ಅಮೆರಿಕದ ಮಿಶಿಗನ್‌ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ರೂಮ್‌ಮೇಟ್‌ಗಳಾಗಿ ನೇಮಿಸಲ್ಪಟ್ಟಿದ್ದರು. ಓಹಾಯೋದ ಲೀಮದಿಂದ ಬಂದವರಾಗಿದ್ದ 18 ವರ್ಷ ಪ್ರಾಯದ ಡೆನಿಸ್‌ ಶೀಟ್ಸ್‌, ಮೊದಲನೇ ವರ್ಷದ ಅರಣ್ಯಶಾಸ್ತ್ರವನ್ನು ಅಭ್ಯಾಸಿಸುತ್ತಿದ್ದ ವಿದ್ಯಾರ್ಥಿಯಾಗಿದ್ದರು. ನ್ಯೂ ಯಾರ್ಕ್‌ನ ಬಫಲೋದವರಾಗಿದ್ದ ಇಪ್ಪತ್ತು ವರ್ಷ ಪ್ರಾಯದ ಮಾರ್ಕ್‌ ರೂಜ್‌ ಸಿವಿಲ್‌ ಎಂಜಿನಿಯರಿಂಗ್‌ ಓದುತ್ತಿದ್ದ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದರು.

ಆ ಸಮಯದಲ್ಲಿ, ಅವರಿಬ್ಬರ ಸ್ನೇಹವು ಅಲ್ಪಕಾಲಿಕವೂ ಕ್ಷಣಿಕವೂ ಆಗಿರುವಂತೆ ತೋರಿಬಂದಿರಬಹುದು. ತಮ್ಮ ವಿಶ್ವವಿದ್ಯಾನಿಲಯದ ಶಿಕ್ಷಣದಲ್ಲಿ ಅವರಿಬ್ಬರೂ ಮುಂದುವರಿಯಲಿಲ್ಲ; ಇಬ್ಬರೂ ತಮ್ಮ ತಮ್ಮ ದಾರಿ ಹಿಡಿದರು. ಮೂರಕ್ಕಿಂತಲೂ ಹೆಚ್ಚು ದಶಕಗಳು ಕಳೆದವು. ನಂತರ ಒಂದು ದಿನ, ಡೊಮಿನಿಕನ್‌ ರಿಪಬ್ಲಿಕ್‌ನಲ್ಲಿ ಈ ಇಬ್ಬರು ಪುರುಷರು ಮತ್ತೊಮ್ಮೆ ಮುಖಾಮುಖಿ ಭೇಟಿಯಾದರು. ಆಕಸ್ಮಿಕ ಘಟನೆ ಈ ಆಶ್ಚರ್ಯಗೊಳಿಸುವ ಪುನರ್ಮಿಲನದಲ್ಲಿ ತನ್ನ ಪಾತ್ರ ವಹಿಸಿತು. ಆದರೆ ಇದನ್ನು ಸಾಧ್ಯಗೊಳಿಸಿದ ಮತ್ತೊಂದು ಸಂಗತಿಯೂ ಇತ್ತು. ಅದು ಏನಾಗಿತ್ತು? ಉತ್ತರವನ್ನು ಕಂಡುಕೊಳ್ಳಲು, ಇವರಿಬ್ಬರ ಪ್ರತ್ಯೇಕವಾದ ಜೀವನ ಹಾದಿಯಲ್ಲಿ ನಾವು ಸ್ವಲ್ಪ ನಡೆದು ನೋಡೋಣ.

ಡೆನಿಸ್‌ ಯುದ್ಧಕ್ಕೆ ಹೋಗುತ್ತಾರೆ

ತಮ್ಮ ಮೊದಲನೇ ವರ್ಷದ ಕಾಲೇಜಿನ ನಂತರ ಡೆನಿಸ್‌ ಮನೆಗೆ ಹಿಂದಿರುಗಿದರು. ನಂತರ ಡಿಸೆಂಬರ್‌ 1967ರಲ್ಲಿ, ಅವರು ಅಮೆರಿಕದ ಸೇನಾದಳಕ್ಕೆ ನೋಂದಾಯಿಸಲ್ಪಟ್ಟರು, ಮತ್ತು ಜೂನ್‌ 1968ರಲ್ಲಿ ವಿಯಟ್ನಾಮ್‌ಗೆ ಕಳುಹಿಸಲ್ಪಟ್ಟರು. ಅಲ್ಲಿ ಅವರು ಯುದ್ಧದ ಭೀಕರತೆಗಳನ್ನು ನೋಡಿದರು. ತಮ್ಮ ಸೇವಾವಧಿ 1969ರಲ್ಲಿ ಮುಗಿದಾಗ, ಅವರು ಅಮೆರಿಕಕ್ಕೆ ಹಿಂದಿರುಗಿದರು ಮತ್ತು ಕಾಲ ಸಂದಂತೆ ಓಹಾಯೋದ ಒಂದು ದೊಡ್ಡ ಕಂಪನಿಯಲ್ಲಿ ಕೆಲಸವನ್ನು ಪಡೆದರು. ಆದರೂ, ಅವರು ಸಂತೃಪ್ತರಾಗಿರಲಿಲ್ಲ.

“ನನ್ನ ಬಾಲ್ಯದ ಕನಸು, ಅಲಾಸ್ಕಕ್ಕೆ ಸ್ಥಳಾಂತರಿಸಿ ಅಲ್ಲಿಯೇ ಒಂದು ಹೊಲಮನೆಯಲ್ಲಿ ವಾಸವಾಗಿದ್ದು ವ್ಯವಸಾಯ ಮಾಡಬೇಕೆಂಬುದಾಗಿತ್ತು,” ಎಂದು ಡೆನಿಸ್‌ ವಿವರಿಸುತ್ತಾರೆ. ಆದುದರಿಂದ, 1971ರಲ್ಲಿ ಅವರು ಮತ್ತು ಅವರ ಪ್ರೌಢ ಶಾಲೆಯ ಸ್ನೇಹಿತನೊಬ್ಬನು, ಆ ಕನಸನ್ನು ನನಸಾಗಿಸಲು ಹೊರಟರು. ಆದರೆ ಒಂದು ಹೊಲಮನೆಯಲ್ಲಿದ್ದು ವ್ಯವಸಾಯ ಮಾಡುವ ಬದಲು, ಅವರು ಹಲವೆಡೆ ಕಡಿಮೆ ಸಂಬಳದ ಕೆಲಸಗಳನ್ನು ಮಾಡಿದರು. ಸ್ವಲ್ಪ ಕಾಲದ ವರೆಗೆ ಒಂದು ಗುಡಾರದಲ್ಲಿ ವಾಸಿಸುತ್ತಾ, ಅಗ್ನಿ ನಿಯಂತ್ರಕನಾಗಿ ಕೆಲಸಮಾಡಿದರು. ಅವರು ಗಡ್ಡ ಮತ್ತು ಉದ್ದ ಕೂದಲನ್ನು ಬೆಳೆಸಿಕೊಂಡರು ಹಾಗೂ ಮ್ಯಾರಿಹ್ವಾನವನ್ನು ಸೇದಲು ಆರಂಭಿಸಿದರು.

ಇಸವಿ 1972ರಲ್ಲಿ, ಲೂಯಿಸಿಯಾನದ ನ್ಯೂ ಆರ್ಲಿಯನ್ಸ್‌ನಲ್ಲಿ ನಡೆಯುವ ಮಾರ್ಡಿ ಗ್ರಾ ಉತ್ಸವವನ್ನು ಆಚರಿಸಲಿಕ್ಕಾಗಿ ಡೆನಿಸ್‌ ಆ್ಯಂಕರಿಜನ್ನು ಬಿಟ್ಟು ಹೋದರು. ಅದರ ನಂತರ, ಆರ್ಕನ್ಸಾದ ಕಾಡುಗಳಲ್ಲಿ ಒಂದು ಚಿಕ್ಕ ಕುಟೀರವನ್ನು ಕಟ್ಟಿದರು. ಅಲ್ಲಿ ಅವರು ಮನೆಗಳಿಗೆ ಮರದ ಆಧಾರಕಟ್ಟನ್ನು ಮಾಡುವ ಮತ್ತು ಕಾಂಕ್ರೀಟನ್ನು ಹಾಕುವ ಕೆಲಸವನ್ನು ಮಾಡಿದರು. 1973ರ ಜೂನ್‌ ತಿಂಗಳಿನಲ್ಲಿ, ಜೀವನದ ಉದ್ದೇಶವೇನೆಂಬುದನ್ನು ಕಂಡುಕೊಳ್ಳಲು ಸಾಧ್ಯವೋ ಎಂಬುದನ್ನು ಹುಡುಕುವ ಯತ್ನದಲ್ಲಿ ಡೆನಿಸ್‌ ದೇಶವಿಡೀ ಸುತ್ತಾಡಿದರು.

ಯುದ್ಧವಿರೋಧಿ ಆಂದೋಳನದಲ್ಲಿ ಮಾರ್ಕ್‌

ಡೆನಿಸ್‌ ವಿಶ್ವವಿದ್ಯಾನಿಲಯವನ್ನು ಬಿಟ್ಟುಹೋದ ಬಳಿಕವೂ ಮಾರ್ಕ್‌ ಕೆಲವು ಸಿಮೆಸ್ಟರ್‌ಗಳಿಗಾಗಿ ಅಲ್ಲಿಯೇ ಉಳಿದರು. ಆದರೆ ಯುದ್ಧವನ್ನು ಬೆಂಬಲಿಸುತ್ತಿರುವ ಸಮಾಜದ ಭಾಗವಾಗಿ ನಾನಿರಲಾರೆ ಎಂದು ಅವರು ತೀರ್ಮಾನಿಸಿದರು. ಆದುದರಿಂದ ಅವರು ಬಫಲೋಗೆ ಹಿಂದಿರುಗಿದರು, ಮತ್ತು ಅಲ್ಲಿ ಸ್ವಲ್ಪ ಕಾಲ ಒಂದು ಉಕ್ಕಿನ ಕಾರ್ಖಾನೆಯಲ್ಲಿ ಫೋರ್‌ಮನ್‌ ಆಗಿ ಕೆಲಸ ಮಾಡಿದರು. ಯುದ್ಧವು ಮುಂದುವರಿಯುತ್ತಿದ್ದದರಿಂದ ಅಸಮಾಧಾನಗೊಂಡ ಕಾರಣ, ಇವರು ತಮ್ಮ ಕೆಲಸವನ್ನು ಬಿಟ್ಟುಬಿಟ್ಟು, ಒಂದು ದ್ವಿಚಕ್ರ ವಾಹನವನ್ನು ಖರೀದಿಸಿ, ದೇಶದ ಇನ್ನೊಂದು ಬದಿಯಲ್ಲಿದ್ದ ಕ್ಯಾಲಿಫೋರ್ನಿಯದ ಸಾನ್‌ ಫ್ರಾನ್ಸಿಸ್ಕೊಗೆ ಪ್ರಯಾಣಿಸಿದರು. ಡೆನಿಸ್‌ ಮತ್ತು ಮಾರ್ಕ್‌ಗೆ ಆಗ ಗೊತ್ತಿಲ್ಲದಿದ್ದರೂ, ಒಂದೇ ಸಮಯದಲ್ಲಿ ಸ್ವಲ್ಪ ಸಮಯ ಅವರಿಬ್ಬರೂ ಸಾನ್‌ ಫ್ರಾನ್ಸಿಸ್ಕೊದಲ್ಲಿದ್ದರು.

ಡೆನಿಸ್‌ರಂತೆ, ಮಾರ್ಕ್‌ ಕೂಡ ಗಡ್ಡ ಮತ್ತು ಉದ್ದ ಕೂದಲನ್ನು ಬೆಳೆಸಿದರು ಮತ್ತು ಮ್ಯಾರಿಹ್ವಾನವನ್ನು ಉಪಯೋಗಿಸಲು ಆರಂಭಿಸಿದರು. ಆದರೆ ಮಾರ್ಕ್‌ ಪ್ರತಿಭಟನೆಗಳು ಮತ್ತು ಮೆರವಣಿಗೆಗಳಲ್ಲಿ ಭಾಗವಹಿಸುತ್ತಾ ಯುದ್ಧವಿರೋಧಿ ಚಳುವಳಿಯಲ್ಲಿ ಬಹಳಷ್ಟು ಒಳಗೂಡಿದ್ದರು. ಮಿಲಿಟರಿ ಸೇವೆಯಿಂದ ತಪ್ಪಿಸಿಕೊಂಡದ್ದಕ್ಕಾಗಿ ಅವರನ್ನ ಎಫ್‌ಬಿಐ ಇಲಾಖೆಯವರು ಹುಡುಕುತ್ತಿದ್ದರು. ಆದುದರಿಂದ ಅವರ ಕೈಗೆ ಸಿಕ್ಕಿಬೀಳುವುದರಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಕೆಲವು ವರ್ಷಗಳಿಗೆ ಅವರು ಬೇರೆ ಬೇರೆ ಹೆಸರುಗಳನ್ನು ಉಪಯೋಗಿಸಿದರು. ಸಾನ್‌ ಫ್ರಾನ್ಸಿಸ್ಕೊದಲ್ಲಿ ಅವರು ಹಿಪ್ಪಿ ಜೀವನ ಶೈಲಿಯನ್ನು ಬೆನ್ನಟ್ಟಿದರು. ಅಲ್ಲಿ, 1970ರಲ್ಲಿ ಅವರ ಮನೆಬಾಗಿಲಿಗೆ ಇಬ್ಬರು ಯೆಹೋವನ ಸಾಕ್ಷಿಗಳು ಬಂದರು.

ಮಾರ್ಕ್‌ ವಿವರಿಸುವುದು: “ನಾನು ಸ್ವಲ್ಪ ಆಸಕ್ತಿಯನ್ನು ತೋರಿಸಿದಂತೆ ಅನಿಸಿದ್ದರಿಂದ ಅವರು ಪುನಃ ಬಂದರು. ಆಗ ನಾನು ಮನೆಯಲ್ಲಿರಲಿಲ್ಲ, ಆದರೆ ಅವರು ಹಸಿರು ಬಣ್ಣದ ಒಂದು ಬೈಬಲು ಮತ್ತು ಮೂರು ಪುಸ್ತಕಗಳನ್ನು ಬಿಟ್ಟುಹೋಗಿದ್ದರು.” ಆದರೆ ಮಾರ್ಕ್‌ ರಾಜಕೀಯ ಕಾರ್ಯಾಚರಣೆಯಲ್ಲಿ ಮತ್ತು ಸುಖಭೋಗದಲ್ಲಿ ಪಾಲ್ಗೊಳ್ಳುವುದರಲ್ಲಿ ಎಷ್ಟು ಮುಳುಗಿಹೋಗಿದ್ದರೆಂದರೆ, ಅವರು ಅವುಗಳನ್ನು ಓದಲಿಕ್ಕೆ ಸಮಯವನ್ನು ತೆಗೆದುಕೊಳ್ಳಲಿಲ್ಲ. ಮತ್ತು ಎಫ್‌ಬಿಐ ಇಲಾಖೆ ಕೂಡ ಅವರ ಬೆನ್ನ ಹಿಂದೆ ಬಿದ್ದಿತ್ತು. ಆದುದರಿಂದ ಮತ್ತೊಂದು ಹೆಸರನ್ನು ಉಪಯೋಗಿಸುತ್ತಾ, ಅವರು ವಾಷಿಂಗ್ಟನ್‌ ಡಿ.ಸಿ.ಗೆ ಸ್ಥಳಾಂತರಿಸಿದರು. ವಿಶ್ವವಿದ್ಯಾನಿಲಯದಲ್ಲಿ ಭೇಟಿಯಾಗಿದ್ದ ಅವರ ಸ್ನೇಹಿತೆ, ಕ್ಯಾಥಿ ಯನಿಸ್‌ಕಿವಿಸ್‌ ಅಲ್ಲಿ ಅವರನ್ನು ಜೊತೆಗೂಡಿದರು.

ಕೊನೆಗೆ 1971ರಲ್ಲಿ ಎಫ್‌ಬಿಐ ಇಲಾಖೆಯವರು ಮಾರ್ಕ್‌ ಅನ್ನು ಪತ್ತೆಹಚ್ಚಿದರು. ವಾಷಿಂಗ್ಟನ್‌ ಡಿ.ಸಿ.ಯಿಂದ ನ್ಯೂ ಯಾರ್ಕ್‌ ವರೆಗಿನ ವಿಮಾನ ಪ್ರಯಾಣದಲ್ಲಿ ಎರಡು ಎಫ್‌ಬಿಐ ಏಜಂಟ್‌ಗಳು ಅವರ ಮೈಗಾವಲಿನವರಾದರು, ಮತ್ತು ಅಲ್ಲಿಂದ ಮಾರ್ಕ್‌ ಕೆನಡದ ಟೊರಾಂಟೊಗೆ ಹೋಗುವಂತೆ ನೋಡಿಕೊಂಡರು. ಮಾರ್ಕ್‌ ಸಮಾಜದ ಶಾಂತಿಗೆ ಅಪಾಯಕರವಾದ ವ್ಯಕ್ತಿ ಎಂದು ಅವರು ಎಣಿಸಲಿಲ್ಲವೆಂಬುದು ವ್ಯಕ್ತ. ಅವರು ಕೇವಲ ಮಾರ್ಕ್‌ನನ್ನು ದೇಶದಿಂದ ಹೊರಗೆ ಕಳುಹಿಸಲು ಬಯಸಿದರು. ಮುಂದಿನ ವರ್ಷ ಕ್ಯಾಥಿ ಮತ್ತು ಮಾರ್ಕ್‌ ಮದುವೆಯಾದರು, ಮತ್ತು ಕೆನಡದ ಬ್ರಿಟಿಷ್‌ ಕೊಲಂಬಿಯದ ಗಬ್ರೀಓಲಾ ದ್ವೀಪಕ್ಕೆ ಸ್ಥಳಾಂತರಿಸಿದರು. ಅವರು ಸಮಾಜದಿಂದ ದೂರವಿರಲು ಬಯಸಿದರು, ಆದರೂ ಜೀವನಕ್ಕೆ ಇನ್ನೂ ಹೆಚ್ಚಿನ ಅರ್ಥ ಇರಲೇಬೇಕು ಎಂದು ಅವರಿಗನಿಸಿತು.

ಅವರಿಬ್ಬರೂ ಸಾಕ್ಷಿಗಳಾಗುತ್ತಾರೆ

ಡೆನಿಸ್‌, ನೀವು ಜ್ಞಾಪಿಸಿಕೊಳ್ಳಬಹುದಾಗಿರುವಂತೆ, ಜೀವನದಲ್ಲಿ ಒಂದು ಉದ್ದೇಶವನ್ನು ಹುಡುಕುತ್ತಾ ದೇಶವಿಡೀ ಸುತ್ತಾಡಲು ಹೊರಟಿದ್ದರು. ಅವರ ಪ್ರವಾಸವು ಅವರನ್ನು ಮೊಂಟಾನಾಗೆ ಕರೆದೊಯ್ಯಿತು, ಮತ್ತು ಅಲ್ಲಿ ಶಿನೂಕ್‌ ನಗರದ ಹೊರಗೆ, ಕೊಯ್ಲಿನ ಸಮಯದಲ್ಲಿ ಒಬ್ಬ ರೈತನಿಗೆ ಸಹಾಯಮಾಡುವ ಕೆಲಸ ಅವರಿಗೆ ಸಿಕ್ಕಿತು. ಆ ವ್ಯಕ್ತಿಯ ಹೆಂಡತಿ ಮತ್ತು ಮಗಳು ಯೆಹೋವನ ಸಾಕ್ಷಿಗಳಾಗಿದ್ದರು. ಡೆನಿಸ್‌ಗೆ ಓದಲಿಕ್ಕೆಂದು ಒಂದು ಎಚ್ಚರ! ಪತ್ರಿಕೆಯು ನೀಡಲ್ಪಟ್ಟಿತು. ಸ್ವಲ್ಪದರಲ್ಲೇ, ಸಾಕ್ಷಿಗಳು ಸತ್ಯ ಧರ್ಮವನ್ನು ಪಾಲಿಸುವವರಾಗಿದ್ದಾರೆ ಎಂಬುದು ಡೆನಿಸ್‌ಗೆ ಮನದಟ್ಟಾಯಿತು.

ತನ್ನೊಂದಿಗೆ ಒಂದು ಬೈಬಲನ್ನು ತೆಗೆದುಕೊಂಡು, ಡೆನಿಸ್‌ ಹೊಲವನ್ನು ಬಿಟ್ಟು ಮೊಂಟಾನಾದ ಕಾಲಿಸ್ಪೆಲ್‌ಗೆ ಸ್ಥಳಾಂತರಿಸಿದರು. ಅಲ್ಲಿ ಅವರು ಯೆಹೋವನ ಸಾಕ್ಷಿಗಳ ಕೂಟಕ್ಕೆ ಪ್ರಥಮ ಬಾರಿ ಹಾಜರಾದರು. ಆ ಕೂಟದಲ್ಲಿ ಅವರು ಒಂದು ಬೈಬಲ್‌ ಅಧ್ಯಯನಕ್ಕಾಗಿ ಕೇಳಿಕೊಂಡರು. ಇದಾದ ಸ್ವಲ್ಪದರಲ್ಲೇ, ಅವರು ತಮ್ಮ ಕೂದಲನ್ನು ಕತ್ತರಿಸಿದರು ಮತ್ತು ತಮ್ಮ ಗಡ್ಡವನ್ನು ಬೋಳಿಸಿದರು. 1974ರ ಜನವರಿಯಲ್ಲಿ ಅವರು ಪ್ರಥಮ ಬಾರಿ ಸಾರುವ ಕೆಲಸದಲ್ಲಿ ಭಾಗವಹಿಸಿದರು, ಮತ್ತು 1974, ಮಾರ್ಚ್‌ 3ರಂದು ಮೊಂಟಾನಾದ ಪೋಲ್‌ಸನ್‌ನಲ್ಲಿ ದನಕರುಗಳು ನೀರು ಕುಡಿಯಲಿಕ್ಕೆಂದು ಉಪಯೋಗಿಸಲ್ಪಡುವ ಒಂದು ತೊಟ್ಟಿಯಲ್ಲಿ ದೀಕ್ಷಾಸ್ನಾನ ಪಡೆದರು.

ಈ ಸಮಯದಲ್ಲಿ ಗಬ್ರೀಓಲಾ ದ್ವೀಪದಲ್ಲಿ ಜೀವಿಸುತ್ತಿದ್ದ ಮಾರ್ಕ್‌ ಮತ್ತು ಕ್ಯಾಥಿ, ವಿರಾಮ ಸಮಯವಿದ್ದ ಕಾರಣ ಬೈಬಲಿನಲ್ಲಿ ಸಂಶೋಧನೆ ಮಾಡಲು ಪ್ರಯತ್ನಿಸೋಣ ಎಂದು ತೀರ್ಮಾನಿಸಿದರು. ಅವರು ಕಿಂಗ್‌ ಜೇಮ್ಸ್‌ ವರ್ಷನ್‌ ಅನ್ನು ಓದಲಾರಂಭಿಸಿದರು, ಆದರೆ ಅದರ ಪ್ರಾಚೀನ ಇಂಗ್ಲಿಷ್‌ ಭಾಷೆಯು ಅರ್ಥಮಾಡಿಕೊಳ್ಳಲು ಕಷ್ಟಕರವೆಂದು ಕಂಡುಕೊಂಡರು. ಈ ಸಮಯದಲ್ಲಿ ಮಾರ್ಕ್‌ಗೆ, ಹಲವಾರು ವರ್ಷಗಳಿಗೆ ಹಿಂದೆ ಯೆಹೋವನ ಸಾಕ್ಷಿಗಳು ಕೊಟ್ಟಿದ್ದ ಬೈಬಲ್‌ ಮತ್ತು ಪುಸ್ತಕಗಳ ನೆನಪಾಯಿತು. ನಿತ್ಯ ಜೀವಕ್ಕೆ ನಡೆಸುವ ಸತ್ಯವು ಮತ್ತು ಬೈಬಲು ನಿಜವಾಗಿಯೂ ದೇವರ ವಾಕ್ಯವಾಗಿದೆಯೋ? (ಇಂಗ್ಲಿಷ್‌) ಎಂಬ ಪುಸ್ತಕಗಳೊಂದಿಗೆ ಅವರು ಆ ಬೈಬಲನ್ನು ಓದಿದರು. ತಾವು ಕಲಿತ ವಿಷಯಗಳಿಂದ ಮಾರ್ಕ್‌ ಮತ್ತು ಕ್ಯಾಥಿ ತುಂಬ ಪ್ರಭಾವಿತರಾದರು.

ಮಾರ್ಕ್‌ ವಿವರಿಸುವುದು: “ಸತ್ಯ ಪುಸ್ತಕವು, ಯಾವುದೇ ಸನ್ನಿವೇಶಗಳ ಎದುರಿನಲ್ಲೂ ಯುದ್ಧಕ್ಕೆ ಹೋಗಲು ನಿರಾಕರಿಸುವ ಕ್ರೈಸ್ತರ ಒಂದು ಗುಂಪಿನ ಬಗ್ಗೆ ಹೇಳುತ್ತದೆ; ಇದು ನನ್ನ ಮನಸ್ಸನ್ನು ತಟ್ಟಿದ ಸಂಗತಿಯಾಗಿತ್ತು. ಇಂಥವರೇ ನಿಜ ಕ್ರೈಸ್ತತ್ವವನ್ನು ಹಿಂಬಾಲಿಸುತ್ತಿದ್ದಾರೆ ಎಂದು ನನಗನಿಸಿತು.” ಸ್ವಲ್ಪ ಕಾಲದ ನಂತರ, ಕ್ಯಾಥಿಯ ಕುಟುಂಬವನ್ನು ಸಂದರ್ಶಿಸಲಿಕ್ಕಾಗಿ ಮಾರ್ಕ್‌ ಮತ್ತು ಕ್ಯಾಥಿ​—⁠ದಸ್ತಗಿರಿ ಮಾಡಲ್ಪಡುವ ಅಪಾಯದ ಹೊರತೂ, ಮಿಶಿಗನ್‌ನ ಹೋಟನ್‌ಗೆ ಹಿಂದಿರುಗಿದರು. ಅಲ್ಲಿ, ಇನ್ನೂ ಹಿಪ್ಪಿಗಳ ತೋರಿಕೆಯೊಂದಿಗೆ, ಅವರು ಸಾಕ್ಷಿಗಳ ಒಂದು ಕೂಟಕ್ಕೆ ಹಾಜರಾದರು. ಅವರು ಒಂದು ಬೈಬಲ್‌ ಅಧ್ಯಯನಕ್ಕಾಗಿ ಒಪ್ಪಿಕೊಂಡರು ಮತ್ತು ಅವರು ಮಿಶಿಗನ್‌ನಲ್ಲಿದ್ದ ತಿಂಗಳಲ್ಲಿ ಅಧ್ಯಯನ ಮಾಡಿದರು.

ಗಬ್ರೀಓಲಾ ದ್ವೀಪಕ್ಕೆ ಹಿಂದಿರುಗಿದ ಬಳಿಕ, ಅವರು ಬ್ರಿಟಿಷ್‌ ಕೊಲಂಬಿಯದ ನಾನೈಮೋ ಪಟ್ಟಣದ ಬೀದಿಯೊಂದರಲ್ಲಿ ಒಬ್ಬ ಸಾಕ್ಷಿಯನ್ನು ಭೇಟಿಯಾದರು, ಮತ್ತು ತಮಗೆ ಒಂದು ಬೈಬಲ್‌ ಅಧ್ಯಯನ ಬೇಕೆಂಬದನ್ನು ವಿವರಿಸಿದರು. ಅದೇ ದಿನ ದೋಣಿಯಲ್ಲಿ ಸಾಗಿಸಲ್ಪಟ್ಟ ಒಂದು ಕಾರು ತುಂಬ ಸಾಕ್ಷಿಗಳು ಬಂದು ಅವರನ್ನು ಸಂಪರ್ಕಿಸಿದರು, ಮತ್ತು ಒಂದು ಬೈಬಲ್‌ ಅಧ್ಯಯನವು ಆರಂಭಿಸಲ್ಪಟ್ಟಿತು. ಮೂರು ತಿಂಗಳುಗಳ ನಂತರ, ಮಾರ್ಕ್‌ ಮತ್ತು ಕ್ಯಾಥಿ ಸಾರುವ ಕೆಲಸದಲ್ಲಿ ಭಾಗವಹಿಸತೊಡಗಿದರು. ಮುಂದಿನ ಮೂರು ತಿಂಗಳುಗಳು ಕಳೆದ ನಂತರ, 1974ರ ಮಾರ್ಚ್‌ 10ರಂದು ಅವರಿಬ್ಬರೂ ದೀಕ್ಷಾಸ್ನಾನವನ್ನು ಪಡೆದರು. ಡೆನಿಸ್‌ ಕೇವಲ ಒಂದು ವಾರದ ಹಿಂದೆ ದೀಕ್ಷಾಸ್ನಾನವನ್ನು ಹೊಂದಿದ್ದರು!

ಪೂರ್ಣ ಸಮಯದ ಶುಶ್ರೂಷೆಯಲ್ಲಿ ಡೆನಿಸ್‌

ಡೆನಿಸ್‌ 1974ರ ಸೆಪ್ಟೆಂಬರ್‌ನಲ್ಲಿ ಒಬ್ಬ ಪಯನೀಯರ್‌ ಅಥವಾ ಒಬ್ಬ ಪೂರ್ಣ ಸಮಯದ ಶುಶ್ರೂಷಕರಾದರು. ಅವರು ಹೇಳುವುದು: “ನಾನು ಪಯನೀಯರ್‌ ಸೇವೆಯಲ್ಲಿ ಸಂತೋಷಿಸಿದೆ, ಆದರೆ ನಾನು ನನ್ನ ಶುಶ್ರೂಷೆಯನ್ನು ಹೆಚ್ಚಿಸಲು ಬಯಸಿದ್ದರಿಂದ 1975ರ ಜುಲೈ ತಿಂಗಳಿನಲ್ಲಿ ಬ್ರೂಕ್ಲಿನ್‌ ನ್ಯೂ ಯಾರ್ಕ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸಲು ಅರ್ಜಿಯನ್ನು ಹಾಕಿದೆ. ಆ ವರ್ಷದ ಡಿಸೆಂಬರ್‌ನಲ್ಲಿ ನನ್ನನ್ನು ಅಲ್ಲಿಗೆ ಆಮಂತ್ರಿಸಲಾಯಿತು.”

ಡೆನಿಸ್‌ಗೆ ಕೊಡಲ್ಪಟ್ಟ ಮೊದಲನೇ ನೇಮಕವು, ಮುಖ್ಯ ಕಾರ್ಯಾಲಯದ ಸಿಬ್ಬಂದಿಗಾಗಿ ಟವರ್ಸ್‌ ಹೋಟೆಲನ್ನು ವಸತಿಗೃಹವಾಗಿ ಮಾರ್ಪಡಿಸುವುದರಲ್ಲಿ ಸಹಾಯಮಾಡುವುದಾಗಿತ್ತು. ಅಲ್ಲಿ ಅವರು ಹಲವಾರು ವರ್ಷಗಳ ವರೆಗೆ, ಟೈಲ್‌ ಹಾಕುವ ಕೆಲಸದ ಮೇಲ್ವಿಚಾರಣೆ ಮಾಡಿದರು. ನಂತರ, ಅವರು ಮದುವೆಯಾಗಲು ಬಯಸಿದ್ದರಿಂದ ಕ್ಯಾಲಿಫೋರ್ನಿಯಕ್ಕೆ ಸ್ಥಳಾಂತರಿಸಿದರು. 1984ರಲ್ಲಿ, ಕ್ಯಾಥಿಡ್ರಲ್‌ ಸಿಟಿ ಸಭೆಯಲ್ಲಿ ಒಬ್ಬ ಹಿರಿಯನಾಗಿ ಸೇವೆ ಸಲ್ಲಿಸುತ್ತಿರುವಾಗ, ಕ್ಯಾಥೀ ಎನ್ಸ್‌ ಎಂಬ ಪಯನೀಯರರನ್ನು ಮದುವೆಯಾದರು.

ದೇವರ ರಾಜ್ಯದ ಅಭಿರುಚಿಗಳನ್ನು ಬೆನ್ನಟ್ಟಲಿಕ್ಕಾಗಿ ಡೆನಿಸ್‌ ಮತ್ತು ಕ್ಯಾಥೀ ತಮ್ಮ ಜೀವನವನ್ನು ಸರಳವಾಗಿಟ್ಟುಕೊಳ್ಳುವ ದೃಢತೀರ್ಮಾನವನ್ನು ಮಾಡಿದರು. ಆದುದರಿಂದಲೇ, ಭರಾಟೆಯಿಂದ ನಡೆಯುತ್ತಿದ್ದ ದಕ್ಷಿಣ ಕ್ಯಾಲಿಫೋರ್ನಿಯದ ನಿರ್ಮಾಣಕಾರ್ಯದ ವೃತ್ತಿಯಲ್ಲಿ ತುಂಬ ಹಣವನ್ನು ಗಳಿಸಲಿಕ್ಕಾಗಿ ಬಂದಂಥ ಅವಕಾಶಗಳನ್ನು ಡೆನಿಸ್‌ ತಳ್ಳಿಹಾಕಿದರು. 1988ರಲ್ಲಿ ಅವರು ಮತ್ತು ಕ್ಯಾಥೀ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ನಿರ್ಮಾಣ ಕೆಲಸದಲ್ಲಿ ಸಹಾಯಮಾಡಲು ತಮ್ಮನ್ನು ನೀಡಿಕೊಂಡರು. ಆ ವರ್ಷದ ಡಿಸೆಂಬರ್‌ನಲ್ಲಿ, ಆರ್ಜೆಂಟೀನದ ಬ್ಯೂನಸ್‌ ಆ್ಯರಸ್‌ನ ಬ್ರಾಂಚ್‌ ನಿರ್ಮಾಣ ಯೋಜನೆಯ ಭಾಗವಾಗಿ ಕೆಲಸಮಾಡುವ ನೇಮಕವನ್ನು ಅವರು ಪಡೆದುಕೊಂಡರು.

ಇಸವಿ 1989ರಲ್ಲಿ, ಡೆನಿಸ್‌ ಮತ್ತು ಕ್ಯಾಥೀ ಹೆಚ್ಚು ಕಾಯಂ ಆದ ರೀತಿಯಲ್ಲಿ ಯೆಹೋವನ ಸಾಕ್ಷಿಗಳ ನಿರ್ಮಾಣ ಕೆಲಸದಲ್ಲಿ ಸೇವೆ ಮಾಡುವಂತೆ ಆಮಂತ್ರಿಸಲ್ಪಟ್ಟರು. ಈ ವಿಶೇಷ ರೀತಿಯ ಪೂರ್ಣ ಸಮಯದ ಶುಶ್ರೂಷೆಯಲ್ಲಿ, ಅವರು ಎರಡೆರಡು ಬಾರಿ ಸುರಿನಾಮ ಮತ್ತು ಕೊಲಂಬಿಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಎಕ್ವಡಾರ್‌ ಮತ್ತು ಮೆಕ್ಸಿಕೊವಿನ ಬ್ರಾಂಚ್‌ ನಿರ್ಮಾಣ ಕೆಲಸದಲ್ಲಿಯೂ, ಹಾಗೂ ತದ್ರೀತಿಯ ಒಂದು ಯೋಜನೆಯಲ್ಲಿ ಡೊಮಿನಿಕನ್‌ ರಿಪಬ್ಲಿಕ್‌ನಲ್ಲೂ ಕೆಲಸ ಮಾಡಿದ್ದಾರೆ.

ಪೂರ್ಣ ಸಮಯದ ಶುಶ್ರೂಷೆಯಲ್ಲಿ ಮಾರ್ಕ್‌

ಇಸವಿ 1976ರಲ್ಲಿ, ಮಿಲಿಟರಿ ಸೇವೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಕೆನಡಕ್ಕೆ ಪಲಾಯನಗೈದಿದ್ದ ಮಾರ್ಕ್‌ ಮತ್ತು ಅಮೆರಿಕದ ಇನ್ನಿತರ ಸಾವಿರಾರು ಯುವ ಪುರುಷರು, ಅಮೆರಿಕದ ಸರ್ಕಾರದಿಂದ ಕ್ಷಮಾದಾನವನ್ನು ಪಡೆದುಕೊಂಡರು. ಅವರು ಮತ್ತು ಅವರ ಪತ್ನಿ ಕ್ಯಾಥಿ ಕೂಡ, ಶುಶ್ರೂಷೆಯಲ್ಲಿ ಹೆಚ್ಚು ಸಮಯವನ್ನು ನೀಡುವಂತಾಗಲು ತಮ್ಮ ಜೀವನವನ್ನು ಸರಳವಾಗಿಡಲು ಬಯಸಿದರು. ಆದುದರಿಂದ ಮಾರ್ಕ್‌, ಆಂಶಕಾಲಿಕ ಕೆಲಸದ ಒಬ್ಬ ಸರ್ವೇಯರ್‌ ಆಗಿ ಕೆಲಸಮಾಡಿದರು, ಮತ್ತು ಅವರು ಹಾಗೂ ಕ್ಯಾಥಿ ತಮ್ಮ ದೀಕ್ಷಾಸ್ನಾನಕ್ಕೆ ಮುಂಚೆ ಮಾಡಿದ್ದ ಎಲ್ಲಾ ಸಾಲಗಳನ್ನು ಕ್ರಮೇಣ ತೀರಿಸಿಬಿಟ್ಟರು.

ಇಸವಿ 1978ರಲ್ಲಿ, ಕೆನಡದಲ್ಲಿದ್ದ ಸಾಕ್ಷಿಗಳು ಒಂಟೇರಿಯೊ, ಟೊರಾಂಟೊವಿನಲ್ಲಿ ಒಂದು ಹೊಸ ಬ್ರಾಂಚ್‌ ಸಂಕೀರ್ಣವನ್ನು ಕಟ್ಟಲು ಯೋಜಿಸುತ್ತಿದ್ದಾಗ, ಮಾರ್ಕ್‌ ಮತ್ತು ಕ್ಯಾಥಿ ಅಲ್ಲಿ ತಮ್ಮ ಸೇವೆಯನ್ನು ನೀಡಲು ಶಕ್ತರಾಗಿದ್ದರು. ಮಾರ್ಕ್‌ಗೆ ಸರ್ವೇ ಮಾಡುವ ಕೆಲಸದಲ್ಲಿ ಅನುಭವವಿದ್ದ ಕಾರಣ, ಅವರು ನಿರ್ಮಾಣ ಕೆಲಸದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಲ್ಪಟ್ಟರು. ಜಾರ್ಜ್‌ಟೌನ್‌ನಲ್ಲಾದ ನಿರ್ಮಾಣ ಕೆಲಸವು 1981ರ ಜೂನ್‌ ತಿಂಗಳಿನಲ್ಲಿ ಪೂರ್ಣಗೊಳ್ಳುವ ತನಕ ಅದರ ಕೆಲಸಮಾಡಿದರು. ತದನಂತರ, ಅವರು ಬ್ರಿಟಿಷ್‌ ಕೊಲಂಬಿಯಕ್ಕೆ ಹಿಂದಿರುಗಿದರು ಮತ್ತು ಮುಂದಿನ ನಾಲ್ಕು ವರ್ಷಗಳಿಗೆ ಅಲ್ಲಿ ಯೆಹೋವನ ಸಾಕ್ಷಿಗಳ ಒಂದು ಸಮ್ಮೇಳನ ಸಭಾಗೃಹವನ್ನು ಕಟ್ಟುವುದರಲ್ಲಿ ಸಹಾಯಮಾಡಿದರು. ಅದು ಪೂರ್ಣಗೊಂಡ ನಂತರ, ಅವರು ಪುನಃ ಕೆನಡದ ಬ್ರಾಂಚಿನ ವಿಸ್ತರಣ ಕಾರ್ಯದಲ್ಲಿ ಕೆಲಸಮಾಡುವಂತೆ ಆಮಂತ್ರಿಸಲ್ಪಟ್ಟರು.

ಇಸವಿ 1986ರಲ್ಲಿ, ಜಾರ್ಜ್‌ಟೌನ್‌ನಲ್ಲಿ ಕೆಲವು ತಿಂಗಳುಗಳು ಕಳೆದ ನಂತರ, ಮಾರ್ಕ್‌ ಮತ್ತು ಕ್ಯಾಥಿಗೆ ಕೆನಡದ ಬ್ರಾಂಚ್‌ ಸಿಬ್ಬಂದಿಯ ಕಾಯಂ ಸದಸ್ಯರಾಗಿ ಉಳಿಯುವ ಆಮಂತ್ರಣವನ್ನು ಕೊಡಲಾಯಿತು. ಆ ಸಮಯದಿಂದ ಅವರು ಅಲ್ಲಿನ ಸಿಬ್ಬಂದಿಯ ಭಾಗವಾಗಿದ್ದಾರೆ, ಮತ್ತು ಇನ್ನೂ ಅನೇಕ ದೇಶಗಳಲ್ಲಿನ ನಿರ್ಮಾಣ ಕೆಲಸದಲ್ಲಿ ಪಾಲ್ಗೊಳ್ಳುವ ಅತಿ ವ್ಯಾಪಕವಾದ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಸರ್ವೇಯರ್‌ ಆಗಿದ್ದ ಮಾರ್ಕ್‌ ಅವರ ಅನುಭವದ ಕಾರಣ, ಅವರು ದಕ್ಷಿಣ ಮತ್ತು ಮಧ್ಯ ಅಮೆರಿಕ ಹಾಗೂ ಕರಿಬಿಯನ್‌ ದ್ವೀಪಗಳಲ್ಲಿ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಕಟ್ಟಡಗಳು ಮತ್ತು ಸಮ್ಮೇಳನ ಸಭಾಗೃಹಗಳನ್ನು ಸರ್ವೇ ಮಾಡುವ ಕೆಲಸದಲ್ಲಿ ಉಪಯೋಗಿಸಲ್ಪಟ್ಟರು.

ಈ ಎಲ್ಲಾ ವರ್ಷಗಳಲ್ಲಿ, ಮಾರ್ಕ್‌ ಮತ್ತು ಕ್ಯಾಥಿ ವೆನಿಸ್ವೇಲ, ನಿಕರಾಗುವ, ಹೈಟಿ, ಗಯಾನ, ಬಾರ್ಬಡೋಸ್‌, ಬಹಾಮಾಸ್‌, ಡೊಮಿನಿಕಾ, ಅಮೆರಿಕ (ಫ್ಲಾರಿಡ), ಮತ್ತು ಡೊಮಿನಿಕನ್‌ ರಿಪಬ್ಲಿಕ್‌ನಲ್ಲಿ ಸೇವೆ ಮಾಡಿದ್ದಾರೆ. ಈ ವಿಶೇಷ ರೀತಿಯ ಪೂರ್ಣ ಸಮಯದ ಶುಶ್ರೂಷೆಯು, ಮಾರ್ಕ್‌ರವರ ಜೀವನ ಹಾದಿಯು ಪುನಃ ಒಮ್ಮೆ ಡೆನಿಸ್‌ರವರ ಜೀವನ ಹಾದಿಯೊಂದಿಗೆ ಮಿಲನವಾಗುವಂತೆ ಮಾಡಿತು.

ಡೊಮಿನಿಕನ್‌ ರಿಪಬ್ಲಿಕ್‌ನಲ್ಲಿ ಪುನರ್ಮಿಲನ

ಪರಸ್ಪರರಿಗೆ ತಿಳಿಯದೆ, ಮಾರ್ಕ್‌ ಮತ್ತು ಡೆನಿಸ್‌ ಡೊಮಿನಿಕನ್‌ ರಿಪಬ್ಲಿಕ್‌ನಲ್ಲಿ ಒಂದೇ ರೀತಿಯ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಒಂದು ದಿನ ಸಾಂಟೊ ಡೊಮಿಂಗೊದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಸೌಕರ್ಯಗಳಲ್ಲಿ ಆಕಸ್ಮಿಕವಾಗಿ ಅವರು ಭೇಟಿಯಾದರು. ನೀವು ಊಹಿಸಸಾಧ್ಯವಿರುವಂತೆ, ಪುನಃ ಭೇಟಿಯಾದದ್ದಕ್ಕಾಗಿ ಅವರು ತುಂಬ ಸಂತೋಷಪಟ್ಟರು. ಎಷ್ಟೆಂದರೂ, ಈಗ ಅವರು 33 ವರ್ಷ ಹೆಚ್ಚು ಪ್ರಾಯದವರಾಗಿದ್ದರು ಮತ್ತು ತಮ್ಮ ತಮ್ಮ ಬಗ್ಗೆ ಹೇಳಿಕೊಳ್ಳಲಿಕ್ಕೆ ಅವರಿಗೆ ಎಷ್ಟೋ ವಿಷಯಗಳಿದ್ದವು. ಮೇಲೆ ನೀವು ಓದಿದಂಥ ಅನೇಕ ವಿಷಯಗಳನ್ನು ಅವರು ಪರಸ್ಪರ ಹಂಚಿಕೊಳ್ಳುತ್ತಾ ಹೋದಂತೆ ಅವರ ಅಚ್ಚರಿಯು ಹೆಚ್ಚುತ್ತಾ ಹೋಯಿತು. ಆದರೆ ಅವರಿಗೆ​—⁠ಮಾತ್ರವಲ್ಲದೆ ಅವರು ಯಾರೊಂದಿಗೆಲ್ಲಾ ತಮ್ಮ ಅನುಭವಗಳನ್ನು ಹಂಚಿಕೊಂಡರೋ ಅವರಿಗೆಲ್ಲರಿಗೂ​—⁠ತುಂಬ ಗಮನಾರ್ಹವಾದ ಸಂಗತಿಯು, ಅವರ ಜೀವನಗಳಲ್ಲಿನ ಸಾದೃಶ್ಯಗಳೇ ಆಗಿದ್ದವು.

ಇಬ್ಬರೂ ಹಿಪ್ಪಿ ಜೀವನ ಶೈಲಿಯನ್ನು ಜೀವಿಸಿದ್ದರು, ಮತ್ತು ಪ್ರಾಪಂಚಿಕವಾದ ಆಧುನಿಕ ಜೀವನ ರೀತಿಯನ್ನೂ ಅದರ ಎಲ್ಲಾ ಚಿಂತೆಗಳನ್ನೂ ಬಿಟ್ಟು ದೂರವಿರಲಿಕ್ಕಾಗಿ ಏಕಾಂತ ಪ್ರದೇಶಗಳಿಗೆ ಸ್ಥಳಾಂತರಿಸಿದರು. ಡೆನಿಸ್‌, ಕ್ಯಾಥೀ ಎಂಬ ಹುಡುಗಿಯನ್ನು ಮದುವೆಮಾಡಿಕೊಂಡರು; ಮಾರ್ಕ್‌ ಕೂಡ ಕ್ಯಾಥಿ ಎಂಬ ಹೆಸರಿನ ಹುಡುಗಿಯನ್ನು ಮದುವೆಮಾಡಿಕೊಂಡರು. ಇಬ್ಬರೂ ಯೆಹೋವನ ಸಾಕ್ಷಿಗಳ ಕೂಟಕ್ಕೆ ಪ್ರಥಮ ಬಾರಿ ಭೇಟಿಯಿತ್ತಾಗ ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದ್ದರು. ಇಬ್ಬರೂ 1974ರ ಮಾರ್ಚ್‌ ತಿಂಗಳಿನಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದರು. ಇಬ್ಬರೂ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಕುಟುಂಬಗಳ ಸದಸ್ಯರಾದರು​—⁠ಡೆನಿಸ್‌ ಅಮೆರಿಕದಲ್ಲಿ ಮತ್ತು ಮಾರ್ಕ್‌ ಕೆನಡದಲ್ಲಿ. ಇಬ್ಬರೂ ಆತ್ಮಿಕ ಗುರಿಗಳನ್ನು ಬೆನ್ನಟ್ಟಲಿಕ್ಕಾಗಿ ತಮ್ಮ ಜೀವನಗಳನ್ನು ಸರಳವಾಗಿಡಲು ಪ್ರಯತ್ನಗಳನ್ನು ಮಾಡಿದ್ದರು. (ಮತ್ತಾಯ 6:22) ಇಬ್ಬರೂ ಅಂತಾರಾಷ್ಟ್ರೀಯ ನಿರ್ಮಾಣ ಕೆಲಸದಲ್ಲಿ ಭಾಗವಹಿಸಿದ್ದಾರೆ ಮತ್ತು ಹಲವಾರು ದೇಶಗಳಲ್ಲಿ ನೇಮಕಗಳನ್ನು ಪಡೆದುಕೊಂಡಿದ್ದಾರೆ. ಇಬ್ಬರೂ ಡೊಮಿನಿಕನ್‌ ರಿಪಬ್ಲಿಕ್‌ನಲ್ಲಾದ ತಮ್ಮ ಆಕಸ್ಮಿಕ ಭೇಟಿಯ ತನಕ, ಬೈಬಲ್‌ ಸತ್ಯಗಳನ್ನು ಸ್ವೀಕರಿಸಿಕೊಂಡಿದ್ದ ಯಾವುದೇ ಮಾಜಿ ಸ್ನೇಹಿತರನ್ನು ಎಂದಿಗೂ ಭೇಟಿಯಾಗಿರಲಿಲ್ಲ.

ಮಾರ್ಕ್‌ ಮತ್ತು ಡೆನಿಸ್‌ ಈ ಗಮನಾರ್ಹವಾದ ಆಕಸ್ಮಿಕ ಸಹಘಟನೆಗಳನ್ನು ವಿಧಿಯ ಫಲವೆಂದು ಹೇಳುತ್ತಾರೋ? ಇಲ್ಲವೇ ಇಲ್ಲ. ಬೈಬಲ್‌ ಹೇಳುವ ಪ್ರಕಾರ, ಕೆಲವೊಮ್ಮೆ ಅತಿ ಆಸಕ್ತಿಕರವಾದ ರೀತಿಗಳಲ್ಲಿ, ‘ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ’ ಎಂಬುದನ್ನು ಅವರು ಗ್ರಹಿಸುತ್ತಾರೆ. (ಪ್ರಸಂಗಿ 9:11) ಆದರೂ, ತಮ್ಮ ಪುನರ್ಮಿಲನದಲ್ಲಿ ಬೇರೊಂದು ವಿಷಯವು ಕೂಡ ಪಾತ್ರವನ್ನು ವಹಿಸಿತು ಎಂಬುದನ್ನು ಅವರು ಗ್ರಹಿಸಿಕೊಳ್ಳುತ್ತಾರೆ: ಜೀವನದ ಉದ್ದೇಶಕ್ಕಾಗಿ ಅವರ ಪರಸ್ಪರ ಅನ್ವೇಷಣೆ ಮತ್ತು ಯೆಹೋವ ದೇವರಿಗಾಗಿದ್ದ ಅವರ ಪ್ರೀತಿ.

ಡೆನಿಸ್‌ ಮತ್ತು ಮಾರ್ಕರ ಅನುಭವವು ಬೈಬಲ್‌ ಸತ್ಯವನ್ನು ಕಲಿತುಕೊಳ್ಳುವ ಎಲ್ಲಾ ಸಹೃದಯಿಗಳಿಗೆ ಸಾಮಾನ್ಯವಾಗಿರುವ ಕೆಲವು ವಿಷಯಗಳನ್ನೂ ಎತ್ತಿತೋರಿಸುತ್ತದೆ. ಡೆನಿಸ್‌ ಹೇಳುವುದು: “ಮಾರ್ಕ್‌ ಮತ್ತು ನಾನು ಏನನ್ನು ಅನುಭವಿಸಿದ್ದೇವೋ ಅದು, ಯೆಹೋವನು ಜನರ ಜೀವನದ ಪರಿಸ್ಥಿತಿಗಳನ್ನು ಬಲ್ಲವನಾಗಿದ್ದಾನೆ, ಮತ್ತು ಅವರ ಹೃದಯಗಳು ಯೋಗ್ಯ ಪ್ರವೃತ್ತಿಯದ್ದಾಗುವಾಗ, ಆತನು ಅವರನ್ನು ಎಳೆಯುತ್ತಾನೆ ಎಂಬುದನ್ನು ತೋರಿಸುತ್ತದೆ.”​—⁠2 ಪೂರ್ವಕಾಲವೃತ್ತಾಂತ 16:9; ಯೋಹಾನ 6:44; ಅ. ಕೃತ್ಯಗಳು 13:48.

ಮಾರ್ಕ್‌ ಕೂಡಿಸುವುದು: “ನಮ್ಮ ಅನುಭವವು, ಒಬ್ಬನು ಯಾವಾಗ ತನ್ನನ್ನು ಯೆಹೋವನ ಮಟ್ಟಗಳಿಗೆ ಹೊಂದಿಸಿಕೊಂಡು, ತನ್ನ ಜೀವನವನ್ನು ಆತನಿಗೆ ಸಮರ್ಪಿಸಿ ತನ್ನನ್ನು ನೀಡಿಕೊಳ್ಳುತ್ತಾನೋ, ಆಗ ಯೆಹೋವನು ಅವನ ಶಕ್ತಿಸಾಮರ್ಥ್ಯಗಳನ್ನು ತನ್ನ ಜನರಿಗೆ ಪ್ರಯೋಜನವಾಗುವಂಥ ರೀತಿಯಲ್ಲಿ ಸತ್ಯಾರಾಧನೆಯನ್ನು ಪ್ರವರ್ಧಿಸಲಿಕ್ಕಾಗಿ ಉಪಯೋಗಿಸಿಕೊಳ್ಳಲು ಶಕ್ತನಾಗುವನು ಎಂಬುದನ್ನು ಗ್ರಹಿಸಿಕೊಳ್ಳಲು ಕಲಿಸಿದೆ.”​—⁠ಎಫೆಸ 4:⁠8.

ಅವರ ಅನುಭವವು, ಯೆಹೋವ ದೇವರು ತನ್ನ ಜನರ ಹೃತ್ಪೂರ್ವಕ ಸೇವೆಯನ್ನು ಆಶೀರ್ವದಿಸುತ್ತಾನೆ ಎಂಬುದನ್ನೂ ತೋರಿಸಿದೆ. ಡೆನಿಸ್‌ ಮತ್ತು ಮಾರ್ಕ್‌ ಖಂಡಿತವಾಗಿಯೂ ತಾವು ಆಶೀರ್ವದಿತರೆಂದು ಎಣಿಸಿಕೊಳ್ಳುತ್ತಾರೆ. ಡೆನಿಸ್‌ ಹೇಳುವುದು: “ವಿಶೇಷ ಪೂರ್ಣ ಸಮಯದ ಸೇವೆಯಲ್ಲಿ ರಾಜ್ಯದ ಅಭಿರುಚಿಗಳನ್ನು ಪ್ರವರ್ಧಿಸುವುದು ಒಂದು ಸುಯೋಗವಾಗಿದೆ. ಇದು, ಲೋಕದಲ್ಲೆಲ್ಲ ಇರುವ ನಮ್ಮ ಕ್ರೈಸ್ತ ಸಹೋದರ ಸಹೋದರಿಯರೊಂದಿಗೆ ಕೆಲಸ ಮಾಡುವಾಗ ಪ್ರೋತ್ಸಾಹ ವಿನಿಮಯದಲ್ಲಿ ಆನಂದಿಸಲು ನಮಗೆ ಸಾಧ್ಯಗೊಳಿಸಿದೆ.”

ಮಾರ್ಕ್‌ ಕೂಡಿಸುವುದು: “ಆತನ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಕೊಡುವವರನ್ನು ಯೆಹೋವನು ಖಂಡಿತವಾಗಿಯೂ ಆಶೀರ್ವದಿಸುತ್ತಾನೆ. ಕೆನಡ ಬ್ರಾಂಚ್‌ ಕುಟುಂಬದ ಸದಸ್ಯನಾಗಿ ಸೇವೆ ಮಾಡಲು ಮತ್ತು ಅಂತಾರಾಷ್ಟ್ರೀಯ ನಿರ್ಮಾಣ ಕೆಲಸದಲ್ಲಿ ಪಾಲಿಗನಾಗುವುದನ್ನು ನಾನು ಒಂದು ವಿಶೇಷವಾದ ಆಶೀರ್ವಾದವಾಗಿ ಪರಿಗಣಿಸುತ್ತೇನೆ.”

ಇದೊಂದು ಅಪೂರ್ವವಾದ ಪುನರ್ಮಿಲನವೋ? ಹೌದು, ಏಕೆಂದರೆ ಮಾರ್ಕ್‌ ಹೇಳುವಂತೆ: “ನಾವು ಒಬ್ಬರನ್ನೊಬ್ಬರು ಭೇಟಿಯಾದದ್ದರಲ್ಲಿ ಅಷ್ಟು ಪುಳಕಿತಗೊಳಿಸುವಂತಹ ನಿಜ ಕಾರಣವು ಏನೆಂದರೆ, ನಾವಿಬ್ಬರೂ ಅದ್ವಿತೀಯ ದೇವರಾದ ಯೆಹೋವನನ್ನು ಅರಿತುಕೊಂಡು, ಪ್ರೀತಿಸಿ ಆತನ ಸೇವೆ ಮಾಡುತ್ತಿದ್ದೇವೆ.” (g02 10/22)

[ಪುಟ 17ರಲ್ಲಿರುವ ಚಿತ್ರ]

ಡೆನಿಸ್‌, 1966

[ಪುಟ 17ರಲ್ಲಿರುವ ಚಿತ್ರ]

ಮಾರ್ಕ್‌, 1964

[ಪುಟ 19ರಲ್ಲಿರುವ ಚಿತ್ರ]

ಡೆನಿಸ್‌ ಸೌತ್‌ ಡಕೋಟದಲ್ಲಿ, 1974

[ಪುಟ 19ರಲ್ಲಿರುವ ಚಿತ್ರ]

ಮಾರ್ಕ್‌ ಒಂಟೇರಿಯೊದಲ್ಲಿ, 1971

[ಪುಟ 20ರಲ್ಲಿರುವ ಚಿತ್ರ]

ಡೆನಿಸ್‌ ಮತ್ತು ಮಾರ್ಕ್‌, ತಮ್ಮ ಪತ್ನಿಯರೊಂದಿಗೆ, ತಮ್ಮ ಆಕಸ್ಮಿಕ ಪುನರ್ಮಿಲನದ ಸ್ವಲ್ಪ ಸಮಯಾನಂತರ, 2001