ಜಗತ್ತನ್ನು ಗಮನಿಸುವುದು
ಜಗತ್ತನ್ನು ಗಮನಿಸುವುದು
ಆಕಳಿಕೆಯಲ್ಲಿ ಆನಂದಿಸಿ!
ಗರ್ಭಧಾರಣೆಯಾದ ನಂತರ ಕೇವಲ 11 ವಾರಗಳಲ್ಲಿ ಗರ್ಭದಲ್ಲಿರುವ ಶಿಶು ಆಕಳಿಸಲು ತೊಡಗುತ್ತದೆಂದು ಸೇಲುಡ್ ಎಂಬ ಸ್ಪ್ಯಾನಿಷ್ ವಾರಪತ್ರಿಕೆ ತಿಳಿಸುತ್ತದೆ. ಈ ಅನೈಚ್ಫಿಕ ಪ್ರತಿಕ್ರಿಯೆಯನ್ನು ಹೆಚ್ಚಿನ ಸಸ್ತನಿ ಪ್ರಾಣಿಗಳು ಹಾಗೂ ಕೆಲವು ಪಕ್ಷಿಗಳು ಮತ್ತು ಸರೀಸೃಪಗಳು ತೋರಿಸುತ್ತವಂತೆ. ಆಕಳಿಕೆಯ ಸ್ಪಷ್ಟ ಕಾರಣವು ಇನ್ನೂ ತಿಳಿದಿರುವುದಿಲ್ಲವಾದರೂ, ಮೈಮುರಿಯುವುದರಂಥ ಕ್ರಿಯೆಗಳು ಆಕಳಿಕೆಯೊಂದಿಗೆ ಜೊತೆಸೇರಿವೆಯೆಂದು ಸಂಶೋಧಕರು ಗಮನಿಸಿರುತ್ತಾರೆ. ಈ ಚಲನೆಗಳು, “ರಕ್ತದೊತ್ತಡ ಮತ್ತು ಹೃದಯ ಬಡಿತದ ಆವರ್ತನೆಯನ್ನು ಹೆಚ್ಚಿಸುವುದಲ್ಲದೆ, ಅವು ಸ್ನಾಯು ಮತ್ತು ಕೀಲುಗಳನ್ನು ಸಡಿಲಿಸುತ್ತವೆ” ಎಂದು ಅವರು ಗಮನಿಸುತ್ತಾರೆ. ನಾವು ದವಡೆಗಳನ್ನು ಬಿಗಿಹಿಡಿದು ಆಕಳಿಕೆಯನ್ನು ನಿಗ್ರಹಿಸುವಲ್ಲಿ, ಅಂತಹ ಪ್ರಯೋಜನಗಳು ನಮಗೆ ಇಲ್ಲವಾಗುತ್ತವೆ. ಹೀಗಿರುವುದರಿಂದ, ಸಂದರ್ಭವು ಅನುಮತಿಸುವಲ್ಲಿ ನಾವು ಆಕಳಿಸುವಾಗ “ನಮ್ಮ ದವಡೆಗಳನ್ನು ಮತ್ತು ಮುಖದ ಸ್ನಾಯುಗಳನ್ನು ಸ್ವಾಭಾವಿಕವಾಗಿ ಹಿಗ್ಗಿಸಬೇಕೆಂದು” ಆ ಸಂಶೋಧಕರ ತಂಡವು ಶಿಫಾರಸ್ಸು ಮಾಡುತ್ತದೆ. ಯಾರಿಗೆ ಗೊತ್ತು, ಒಂದು ಉತ್ತಮ ಆಕಳಿಕೆ ನಿಮ್ಮ ಇಡೀ ದಿನಕ್ಕೇ ಕಳೆತುಂಬಿಸೀತು!(g02 11/08)
ನಿದ್ರಿಸುತ್ತಿರುವ ಸ್ವಿಫ್ಟ್ ಹಕ್ಕಿಗಳು ತಮ್ಮ ಪಥದಲ್ಲೇ ಉಳಿಯುವ ವಿಧ
ಸ್ವಿಫ್ಟ್ ಹಕ್ಕಿಗಳು ಹಾರಾಡುತ್ತಿರುವಾಗ ನಿದ್ರಿಸುತ್ತವೆ ಮಾತ್ರವಲ್ಲ ಬೀಸುತ್ತಿರುವ ಗಾಳಿಯು ಅವುಗಳನ್ನು ಅವು ಇರಬೇಕಾದ ಪ್ರದೇಶದಿಂದ ಹೊರಗೆ ಒಯ್ಯದಂತೆಯೂ ನೋಡಿಕೊಳ್ಳುತ್ತವೆ. ಅದನ್ನು ಅವು ಹೇಗೆ ಮಾಡುತ್ತವೆಂಬುದನ್ನು ಕಂಡುಹಿಡಿಯಲು ಸ್ವೀಡನ್‌ನ ಲುಂಡ್ ವಿಶ್ವವಿದ್ಯಾನಿಲಯದ ಪಕ್ಷಿವಿಜ್ಞಾನಿಗಳಾದ ಯೂಹಾನ್ ಬೆಕ್ಮಾನ್ ಮತ್ತು ಥಾಮಸ್ ಆಲರ್‌ಸ್ಟಾಮ್ ಎಂಬವರು ಆ ಹಕ್ಕಿಗಳ ರಾತ್ರಿ ವೇಳೆಯ ಚಲನೆಯನ್ನು ಪತ್ತೆಹಚ್ಚಲು ರೇಡಾರ್ ಉಪಕರಣವನ್ನು ಉಪಯೋಗಿಸಿದರು. ಜರ್ಮನ್ ವಿಜ್ಞಾನ ಪತ್ರಿಕೆಯಾದ ವಿಲ್ಟ್ ಡೇರ್ ವಿಶನ್‌ಶಾಫ್ಟ್ ವರದಿಮಾಡಿರುವಂತೆ, ಈ ಸಂಶೋಧಕರು ಈ ಹಕ್ಕಿಗಳ ಹಾರಾಟದಲ್ಲಿ ಅವುಗಳನ್ನು ಅವುಗಳ ಪಥದಲ್ಲಿಡುವ ಒಂದು ನಿಶ್ಚಿತ ಹಾರಾಟ ನಮೂನೆಯನ್ನು ಗಮನಿಸಿದರು. ಆ ಹಕ್ಕಿಗಳು 3,000 ಮೀಟರುಗಳ ಎತ್ತರಕ್ಕೆ ಮೇಲೇರಿ ಆ ಬಳಿಕ ಗಾಳಿಗೆ ಓರೆಯಾಗಿ ಹಾರಾಡುತ್ತಾ, ಪ್ರತಿ ಕೆಲವು ನಿಮಿಷಗಳಿಗೊಮ್ಮೆ ಕ್ರಮವಾಗಿ ದಿಕ್ಕನ್ನು ಬದಲಾಯಿಸುತ್ತವೆ. ಈ ಕ್ರಮಬದ್ಧವಾದ ನಮೂನೆಯು ಅವುಗಳು ತಮ್ಮ ಪ್ರದೇಶದ ಮೇಲೆಯೇ ಆಚೀಚೆ ಚಲಿಸುವಂತೆ ಮಾಡುತ್ತದೆ. ಆದರೆ ಗಾಳಿಯ ವೇಗವು ಕಡಮೆಯಾಗಿರುವಾಗ, ಅವು ತಮ್ಮ ನಿದ್ರಿಸುವ ಸಮಯವನ್ನು ಗಾಳಿಯಲ್ಲಿ ಚಕ್ರಾಕಾರದಲ್ಲಿ ಸುತ್ತುತ್ತಾ ಕಳೆಯುತ್ತವೆಂಬುದನ್ನು ಗಮನಿಸಲಾಯಿತು. (g02 11/22)
ಮನೆಗೆಲಸ ಉತ್ತಮ ವ್ಯಾಯಾಮ
ಧೂಳುಚೋಷಕ ಯಂತ್ರೋಪಯೋಗ, ಕಿಟಿಕಿ ತೊಳೆಯುವ ಕೆಲಸ ಮತ್ತು ಮಕ್ಕಳ ತಳ್ಳುಬಂಡಿಯನ್ನು ತಳ್ಳುವ ಕೆಲಸ—ಇವು ಆರೋಗ್ಯಕರವಾದ ವ್ಯಾಯಾಮಗಳಾಗಿವೆಯೋ? ಆಸ್ಟ್ರೇಲಿಯದ ಕ್ವೀನ್ಸ್‌ಲೆಂಡ್ ವಿಶ್ವವಿದ್ಯಾನಿಲಯವು ಮಾಡಿದ ಇತ್ತೀಚಿನ ಒಂದು ಅಧ್ಯಯನಕ್ಕನುಸಾರ, ಹೌದು. ಐದು ವರ್ಷ ವಯಸ್ಸಿಗಿಂತ ಚಿಕ್ಕ ಮಕ್ಕಳಿದ್ದ ಏಳು ಮಂದಿ ತಾಯಂದಿರಿಗೆ ಸಂಶೋಧಕರು, ಆ ತಾಯಂದಿರ ದಿನಚರ್ಯೆಯ ಸಮಯದಲ್ಲಿ ಆಮ್ಲಜನಕ ಸೇವನೆಯನ್ನು ಅಳೆಯಲು ಗ್ಯಾಸ್ ವಿಶ್ಲೇಷಕ ಉಪಕರಣವನ್ನು ಬಿಗಿದರು, ಎಂದು ದ ಕ್ಯಾನ್ಬರ ಟೈಮ್ಸ್ ಪತ್ರಿಕೆಯ ವರದಿ ತಿಳಿಸುತ್ತದೆ. ಸಂಶೋಧಕರಿಗನುಸಾರ, “ಕೆಲವು ಮನೆಗೆಲಸಗಳು ಅವುಗಳಿಂದ ಸಾಧಾರಣ ಮಟ್ಟಿಗಿನ ಆರೋಗ್ಯ ಪ್ರಯೋಜನಗಳು ಬರಲು ಸಾಕಾಗುವಷ್ಟು ತೀವ್ರತೆಯಿಂದ ಮಾಡಲ್ಪಡುತ್ತವೆಂಬುದನ್ನು ಕಂಡುಹಿಡಿಯಲಾಗಿದೆ.” ಪ್ರೊಫೆಸರ್ ವೆಂಡಿ ಬ್ರೌನ್, “ಸ್ತ್ರೀಯರ ಮನೆಗೆಲಸವು ಹೆಚ್ಚುಕಡಮೆ ಮಿತ ತೀವ್ರತೆಯ ವ್ಯಾಯಾಮಗಳಿಗೆ ಅಂದರೆ ಜೋರಾದ ನಡಗೆ, ಸೈಕಲ್ ಸವಾರಿ ಅಥವಾ ಈಜುವಿಕೆಯಂತಹ ವ್ಯಾಯಾಮಗಳಿಗೆ ಸರಿಸಮಾನವಾಗಿದೆ” ಎಂಬುದನ್ನು ಕಂಡುಹಿಡಿದರು ಎನ್ನುತ್ತದೆ ಆ ವರದಿ. “ಇದು ಕೇವಲ ಆರಂಭದ ಸಂಶೋಧನೆಯಾಗಿದ್ದರೂ, ಸ್ತ್ರೀಯರು ಇಡೀ ದಿನ ಅತ್ತಿತ್ತ ಓಡಾಡುತ್ತಾ ಕೆಲಸ ಮಾಡುತ್ತಿರುವಾಗ ಅವರು ನಿಷ್ಕ್ರಿಯರೆಂದು ಹೇಳಲು ಸಾಧ್ಯವೇ ಇಲ್ಲವೆಂಬುದು ಸ್ಪಷ್ಟ” ಎಂದು ಬ್ರೌನ್ ಹೇಳಿದರು. (g02 11/08)
ನಾವು ತಪ್ಪಿಸಿಕೊಳ್ಳಬಹುದಾದ ಒಂದು ರೋಗ
ಆಸ್ಟ್ರೇಲಿಯದ ದ ಸನ್ ಹೆರಲ್ಡ್ ಹೇಳುವುದು: “ಅಸ್ಥಿಬಿಧುರತೆ (ಆಸ್ಟಿಯೋಪೊರಾಸಿಸ್) ನಮಗೆ ಇರಲೇ ಬೇಕೆಂದಿಲ್ಲ. ಅದನ್ನು ಬಹುಮಟ್ಟಿಗೆ ತಡೆಗಟ್ಟಸಾಧ್ಯವಿದೆ. ಆದರೂ, 2020ರೊಳಗೆ ಆಸ್ಪತ್ರೆಯ ಪ್ರತಿ ಮೂರು ಹಾಸಿಗೆಗಳಲ್ಲಿ ಒಂದರಲ್ಲಿ ಮೂಳೆ ಮುರಿದಿರುವ ಸ್ತ್ರೀಯರು ಇರುವರು ಎಂದು ಮುಂತಿಳಿಸಲಾಗುತ್ತದೆ.” ಆಸ್ಟಿಯೋಪೊರಾಸಿಸ್ ಆಸ್ಟ್ರೇಲಿಯ ಎಂಬ ಸಂಸ್ಥೆಯ ಒಂದು ವರದಿಯು ತೋರಿಸುವುದೇನಂದರೆ, ಮೂಳೆಗಳಲ್ಲಿ ತೂತುಗಳಿರುವಂತೆ ಮಾಡಿ ಅವುಗಳನ್ನು ಬಿಧುರಗೊಳಿಸುವ ಈ ರೋಗವು, “ಅಪಾರ ಕಲೆಸ್ಟರಾಲ್, ಅಲರ್ಜಿ ಮತ್ತು ನೆಗಡಿಗಳಿಗಿಂತ ಹೆಚ್ಚು ವ್ಯಾಪಕವಾಗಿದೆ. ಇದರ ವೆಚ್ಚವು ಮಧುಮೇಹ ಮತ್ತು ಉಬ್ಬಸಕ್ಕಿಂತ ಹೆಚ್ಚು. ಹೆಂಗಸರಿಗೆ ತಗಲುವ ಎಲ್ಲಾ ವಿಧದ ಕ್ಯಾನ್ಸರಿನಿಂದ ಸಾಯುವ ಸ್ತ್ರೀಯರ ಸಂಖ್ಯೆಗಿಂತಲೂ ಈ ರೋಗದಿಂದಾಗುವ ಟೊಂಕ ಮುರಿತದಿಂದಾಗಿ ಸಾಯುವ ಸ್ತ್ರೀಯರ ಸಂಖ್ಯೆಯು ಜಾಸ್ತಿ.” ಪ್ರೊಫೆಸರ್ ಫಿಲಿಪ್ ಸ್ಯಾಮ್‌ಬ್ರೂಕ್ ಅವರಿಗನುಸಾರ, ಜನರ ಜೀವಮಾನದಲ್ಲಿ ಸ್ತ್ರೀಯರಲ್ಲಿ ಅರ್ಧಾಂಶ ಮತ್ತು ಪುರುಷರಲ್ಲಿ ಮೂರರಲ್ಲಿ ಒಂದಂಶ ಮಂದಿ ಈ ಅಸ್ಥಿಭಿದುರತೆಯ ಕಾರಣ ಮೂಳೆ ಮುರಿದುಕೊಳ್ಳುತ್ತಾರೆ. ಆ ವಾರ್ತಾಪತ್ರವು ಹೇಳುವುದು, “ಜೀವನದ ಆರಂಭದ ಮೂವತ್ತು ವರುಷಗಳಲ್ಲಿ ವ್ಯಾಯಾಮ ಮತ್ತು ಸಾಕಷ್ಟು ಕ್ಯಾಲ್ಸಿಯಮ್ ಅನ್ನು ತೆಗೆದುಕೊಂಡು ಉತ್ತಮವಾಗಿ ಮೂಳೆಯನ್ನು ಬೆಳೆಸಿಕೊಳ್ಳುವುದೇ ಇದಕ್ಕಿರುವ ಅತ್ಯುತ್ತಮ ರಕ್ಷೆಯಾಗಿದೆ.” ಅಸ್ಥಿಭಿದುರತೆಯಿಂದ ನರಳುವ ಅಪಾಯಸಂಭವವನ್ನು ಧೂಮಪಾನ, ಅತಿ ಮದ್ಯ ಸೇವನೆ ಅಥವಾ ಕ್ಯಾಫೀನು ಸೇವನೆಯನ್ನು ತ್ಯಜಿಸುವುದರಿಂದ ಕಡಮೆ ಮಾಡಬಹುದು. ಸಹಾಯಕಾರಿಯಾದ ಅಭ್ಯಾಸಗಳಲ್ಲಿ, ಕ್ರಮದ ವ್ಯಾಯಾಮ ಮತ್ತು ಕ್ಯಾಲ್ಸಿಯಮ್ ಹಾಗೂ ಡಿ-ಜೀವಧಾತು ಹೆಚ್ಚಿರುವ ಆಹಾರ ಸೇವನೆಯು ಸೇರಿರುತ್ತದೆ. (g02 11/22)
ಗಂಟುಬಿಡಿಸುವ “ಸಂತ”
“ಇತ್ತೀಚಿನ ವರುಷಗಳಲ್ಲಿ, ಯಶಸ್ವಿಯಾಗದ ವಿಷಯಗಳ ಪೋಷಕನಾದ ಸಂತ ಜೂಡ್ ಥಡೇಯಸ್, ಹತಾಶರ ರಕ್ಷಣೆ ಮಾಡುವ ಸಂತಳಾದ ರೀಟ, ಸಾಲ ಪಡೆದುಕೊಂಡವರನ್ನು ರಕ್ಷಿಸುವ ಸಂತ ಹೇಟ್ವಿಕ್ ಮತ್ತು ತುರ್ತು ಆವಶ್ಯಕತೆಗಳ ಆಶ್ರಯದಾತ ಸಂತ ಎಕ್ಸ್‌ಪೆಡೀಟಸ್ ಇವರೆಲ್ಲ ಜನಪ್ರಿಯರಾಗಿದ್ದಾರೆ,” ಎನ್ನುತ್ತದೆ ವೇಸ ಪತ್ರಿಕೆ. ಈಗ ಬ್ರಸಿಲ್ ದೇಶದಲ್ಲಿ ಕ್ಯಾಥೊಲಿಕರ ಮಧ್ಯೆ ಜನಪ್ರಿಯತೆಯನ್ನು ಗಳಿಸಿರುವ ಇತ್ತೀಚಿನ ಸಂತಳು, “ಅವರ್ ಲೇಡಿ ಅಂಟೈಯರ್ ಆಫ್ ನಾಟ್ಸ್” (ನಮ್ಮ ಗಂಟುಬಿಡಿಸುವಾಕೆ) ಆಗಿದ್ದಾಳೆ. ಈ ವಿಚಿತ್ರ ಹೆಸರು ಜರ್ಮನಿಯ ಆಗ್ಸ್‌ಬರ್ಗ್ ದೇವಾಲಯದಲ್ಲಿ ತೂಗುತ್ತಿರುವ ಒಂದು ವರ್ಣಚಿತ್ರದಿಂದ ಬಂದಿದೆ. ಅದರಲ್ಲಿ ಕನ್ಯೆ ಮರಿಯಳು ಒಂದು ರಿಬನ್‌ನಲ್ಲಿರುವ ಗಂಟುಗಳನ್ನು ಬಿಡಿಸುವುದನ್ನು ತೋರಿಸಲಾಗಿದೆ. ವಾರ್ತಾ ಮಾಧ್ಯಮದ ವ್ಯಕ್ತಿಗಳು ಪ್ರೋತ್ಸಾಹಿಸಿರುವ ಈ “ಗಂಟುಬಿಡಿಸುವಾಕೆ” ಈಗ ಭಕ್ತರನ್ನು ಗಿಟ್ಟಿಸಿಕೊಂಡಿದ್ದಾಳೆ. ಇವರು ಆಕೆಯಿಂದ ತಮ್ಮ ಆರೋಗ್ಯ, ವೈವಾಹಿಕ ಮತ್ತು ಆರ್ಥಿಕ ಸಮಸ್ಯೆಗಳ ಗಂಟುಬಿಡಿಸಲು ಸಹಾಯ ಕೇಳುತ್ತಾರೆ ಮಾತ್ರವಲ್ಲ, ಅದೇ ಸಮಯದಲ್ಲಿ ಪದಕ ಭಾವಚಿತ್ರ, ಜಪಸರ, ಪ್ರತಿಮೆಗಳು ಮತ್ತು ಕಾರ್ ಸ್ಟಿಕರ್‌ಗಳ ವ್ಯಾಪಾರವನ್ನೂ ಬೆಳೆಸಿದ್ದಾರೆ. “ಈ ‘ಗಂಟುಬಿಡಿಸುವವಳ’ ಹುಚ್ಚು ಕೆಟ್ಟದ್ದೇನೂ ಅಲ್ಲದಿದ್ದರೂ ಅದು ಹೆಚ್ಚು ಕಾಲ ಬಾಳುವಂತಿಲ್ಲ” ಎನ್ನುತ್ತಾರೆ ಡಾರ್ಸಿ ನೀಕೋಲೀ, ಬ್ರಸಿಲ್‌ನ ಅತಿ ದೊಡ್ಡ ಕ್ಯಾಥೊಲಿಕ್ ಪುಣ್ಯಕ್ಷೇತ್ರದ ಆಡಳಿತಾಧಿಕಾರಿ. (g02 11/22)
ಅಂತರಿಕ್ಷದಲ್ಲಿ ಸುವಾರ್ತೆ
ಅಂತರಿಕ್ಷದಲ್ಲಿ ಜೀವವಿರುವ ಸಾಧ್ಯತೆ ಇದೆಯೊ ಎಂಬ ವಿಷಯದಲ್ಲಿ ವಿಜ್ಞಾನಿಗಳು ಈಗಲೂ ವಾದಿಸುತ್ತಾ ಇರುವಾಗ, ವ್ಯಾಟಿಕನ್ ವೀಕ್ಷಣಾಲಯದ ಪಾದ್ರಿಗಳು, “ವಿಶ್ವದಲ್ಲಿ ಕೇವಲ ಭೂನಿವಾಸಿಗಳು ದೇವರ ಸೃಷ್ಟಿಜೀವಿಗಳಾಗಿರುವುದಿಲ್ಲ. ದೇವರು ಭೂಮ್ಯಾತೀತ ಜೀವಿಗಳನ್ನೂ ಸೃಷ್ಟಿಸಿದ್ದಾನೆ” ಎಂಬ ತೀರ್ಮಾನಕ್ಕೆ ಬಂದಿದ್ದಾರೆಂದು ಬರ್ಲೀನರ್ ಮಾರ್ಗನ್‌ಪೋಸ್ಟ್ ವರದಿಮಾಡುತ್ತದೆ. ವೀಕ್ಷಣಾಲಯದ ಡೈರೆಕ್ಟರ್ ಜಾರ್ಜ್ ಕಾಯ್ನ್ ವಿವರಿಸಿರುವಂತೆ, “ಕೇವಲ ನಾವು ಮಾತ್ರ ಇರುವುದಕ್ಕೆ ಈ ವಿಶ್ವ ತೀರ ದೊಡ್ಡದಾಗಿದೆ.” ಈ ಭೂಮ್ಯಾತೀತ ಜೀವಿಗಳಿಗೆ ಸುವಾರ್ತೆಯನ್ನು ತಲಪಿಸಲು ಅನೇಕ ಸಂನ್ಯಾಸಿ ಮಠಗಳು ಸಂಕೇತೀಕೃತ ಸಂದೇಶದ ರೂಪದಲ್ಲಿ ಹೊಸ ಒಡಂಬಡಿಕೆಯನ್ನು ಅಂತರಿಕ್ಷಕ್ಕೆ ಕಳುಹಿಸುತ್ತಿವೆ. ವ್ಯಾಟಿಕನ್ ಮುಂದಕ್ಕೆ ತಿಳಿಯಲಿಚ್ಛಿಸುವ ವಿಷಯವೇನೆಂದರೆ, “ಯೇಸು ಕ್ರಿಸ್ತನು ಬೇರೆ ಗ್ರಹಗಳಲ್ಲಿಯೂ ತನ್ನನ್ನು ತೋರಿಸಿಕೊಂಡಿದ್ದಾನೊ ಎಂಬುದೇ” ಎನ್ನುತ್ತದೆ ಆ ವಾರ್ತಾಪತ್ರ. ಇದಕ್ಕೆ ಕೂಡಿಸುತ್ತಾ ಕಾಯ್ನ್ ಹೇಳುವುದು, “ಯೇಸು ಕ್ರಿಸ್ತನು ಆ ಗ್ರಹನಿವಾಸಿಗಳನ್ನೂ ರಕ್ಷಿಸಿದ್ದಾನೊ ಇಲ್ಲವೊ” ಎಂಬದನ್ನೂ ಅದು ತಿಳಿಯಲಿಚ್ಛಿಸುತ್ತದೆ. (g02 11/22)
ಉಷ್ಣಮಾಪಕಗಳಿಂದ ವಿಷ
“ಒಂದೇ ಒಂದು ಉಷ್ಣಮಾಪಕದಲ್ಲಿರುವ ಪಾದರಸವು 11 ಎಕ್ರೆ ಗಾತ್ರದ ಕೆರೆಯನ್ನು ಮಲಿನಮಾಡಬಲ್ಲದು ಮತ್ತು ಒಡೆದು ಹೋಗಿರುವ ಉಷ್ಣಮಾಪಕಗಳು ವಾರ್ಷಿಕವಾಗಿ ಅಮೆರಿಕದ ತ್ಯಾಜ್ಯ ನೀರಿಗೆ ಸುಮಾರು 17 ಟನ್ನುಗಳಷ್ಟು ಪಾದರಸವನ್ನು ಸೇರಿಸುತ್ತಿವೆ” ಎನ್ನುತ್ತದೆ ನ್ಯಾಷನಲ್ ಜಿಯಗ್ರಾಫಿಕ್ ಪತ್ರಿಕೆ. ಈ ಪಾದರಸವನ್ನು ಮೀನು ಹೀರಿಕೊಳ್ಳುವುದರಿಂದ ಮೀನನ್ನು ತಿನ್ನುವ ಮಾನವರು ಈ ಲೋಹವನ್ನು ಒಳಸೇರಿಸಿಕೊಳ್ಳುತ್ತಾರೆ. ಇದು ನರಗಳಿಗೆ ಹಾನಿಮಾಡಬಲ್ಲದು. ಪಾದರಸದ ಉಷ್ಣಮಾಪಕಗಳನ್ನು ಬಾಸ್ಟನ್ ಸಹಿತ ಅನೇಕ ನಗರಗಳಲ್ಲಿ ನಿಷೇಧಿಸಲಾಗಿದೆ. ಬಾಸ್ಟನ್‌ನಲ್ಲಿ ಕೆಲವು ಅಂಗಡಿಗಳು ಪಾದರಸದ ಉಷ್ಣಮಾಪಕಗಳಿಗೆ ಬದಲಾಗಿ ಅಂಕೀಯ ಉಷ್ಣಮಾಪಕಗಳನ್ನು ಇಲ್ಲವೆ ಕಡಮೆ ಅಪಾಯಕಾರಿಯಾಗಿರುವ ಉಪಕರಣಗಳನ್ನು ವಿನಿಮಯ ಮಾಡುತ್ತವೆ. (g02 10/08)
ಅತ್ಯಧಿಕ ವೇಗದ ರೋಲರ್ ಕೋಸ್ಟರ್
“ಲೋಕದ ಅತ್ಯಂತ ವೇಗದ ರೋಲರ್ ಕೋಸ್ಟರ್ (ಏರು ಬೀಳು ರೈಲು) ಫುಜೀಕ್ಯೂ ಐಲೆಂಡ್ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ಓಡತೊಡಗಿತು” ಎಂದು ಜಪಾನಿನ ಆಸಾಹೀ ಶೀಂಬುನ್ ವಾರ್ತಾಪತ್ರವು ವರದಿಮಾಡಿತು. “ಯಾವುದೇ ವೇಗವಿಲ್ಲದೆ ಆರಂಭಿಸುವ ಈ ಗಾಡಿ ಎರಡು ಸೆಕೆಂಡುಗಳೊಳಗೆ ಒಂದು ತಾಸಿಗೆ 172 ಕಿಲೊಮೀಟರ್ ವೇಗವನ್ನು ಮುಟ್ಟುವುದರಿಂದ, ಈ ಪ್ರಯಾಣವು ಪುಕ್ಕಲರಿಗಾಗಿರುವುದಿಲ್ಲ. ಅದು ಒಂದು ರಾಕೆಟ್‌ನಿಂದ ಉಡಾಯಿಸಲ್ಪಟ್ಟ ಹಾಗೆ ಇರುತ್ತದೆ. ಸಾಮಾನ್ಯವಾಗಿ, ಯುದ್ಧ ವೈಮಾನಿಕರಿಗಾಗುವ ಗುರುತ್ವಾಕರ್ಷಣ ಶಕ್ತಿಯನ್ನು ಇದರಲ್ಲಿ ಸವಾರರು ಅನುಭವಿಸಬಲ್ಲರು. ಈ ರೋಲರ್ ಕೋಸ್ಟರನ್ನು ರಚಿಸಿದ ಕಂಪನಿಯ ಪ್ರಾಜೆಕ್ಟ್ ಡೈರೆಕ್ಟರರಾದ ಹೀತ್ ರಾಬರ್ಟ್‌ಸನ್ ಹೇಳಿದ್ದು: “ವಿಮಾನ ಮೇಲೇರುವಾಗ ಅದರ ರಭಸವು ಗುರುತ್ವಾಕರ್ಷಣ ಶಕ್ತಿಗಿಂತ 2.5 ಪಾಲು ಜಾಸ್ತಿಯಾಗಿರುವಾಗ, ಈ ರೋಲರ್ ಕೋಸ್ಟರಿನ ವೇಗ 3.6 ಪಾಲು ಜಾಸ್ತಿಯಾಗಿರುತ್ತದೆ.” ಈ ರೋಲರ್ ಕೋಸ್ಟರ್ ರೈಲಿಗೆ “ಚಿಕ್ಕ ವಿಮಾನಗಳ ಗಾಲಿ”ಗಳಂಥ ಗಾಲಿಗಳಿದ್ದು, ಅದರ ಶಕ್ತಿಯು 50,000 ಹಾರ್ಸ್‌ಪವರ್ ಶಕ್ತಿಯನ್ನು ಉತ್ಪಾದಿಸುವ ಮೂರು ಕಂಪ್ರೆಸರ್‌ಗಳಿಂದ ಬರುತ್ತದೆ. ಇದು “ಒಂದು ಸಣ್ಣ ರಾಕೆಟ್‌ಗೆ ಸಮಾನ.” (g02 09/22)
ಭಾರತದಲ್ಲಿ ತಂಬಾಕು ಸಂಬಂಧಿತ ಹೃದ್ರೋಗ
“[ಭಾರತದ] ಹಿರಿಯ ಹೃದಯ ವಿಜ್ಞಾನಿಗಳು, ಪರಿಧಮನಿಯ ಕಾಯಿಲೆ ಏರುತ್ತಿದೆ ಎನ್ನುತ್ತಾರೆ” ಎಂದು ಮುಂಬಯಿಯ ನ್ಯೂಸ್‌ಲೈನ್ ಹೇಳುತ್ತದೆ. “ಜಸ್ಲೋಕ್ ಆಸ್ಪತ್ರೆಯ ಹೃದಯ ವಿಜ್ಞಾನದ ಡೈರೆಕ್ಟರ್, ಡಾ. ಅಶ್ವಿನ್ ಮೆಹತಾ ಅವರಿಗನುಸಾರ, ಭಾರತೀಯರಿಗೆ ಹೃದ್ರೋಗಗಳನ್ನು ಪಡೆಯುವ ಆನುವಂಶಿಕ ಪ್ರವೃತ್ತಿಯಿದೆ.” ವಿಶೇಷ ಚಿಂತೆಯೇನಂದರೆ, “ಧೂಮಪಾನದ ವೃದ್ಧಿಯ ಕಾರಣ” ಅನೇಕ ಯುವ ಜನರಿಗೆ “ಹೃದಯದ ತೊಂದರೆಗಳು” ಬರುತ್ತವೆ. ಬಾಂಬೆ ಹಾಸ್ಪಿಟಲ್‌ನ ಹೃದಯ ವಿಜ್ಞಾನದ ಸಲಹಾವೈದ್ಯರಾಗಿರುವ ಡಾ. ಪಿ. ಎಲ್. ತಿವಾರಿ ಅವರ ಅಭಿಪ್ರಾಯವೇನಂದರೆ, ಸೂಕ್ತ ಕ್ರಮವನ್ನು ಬೇಗನೆ ಕೈಕೊಳ್ಳದಿರುವಲ್ಲಿ, ಹೃದ್ರೋಗಿಗಳ ವಿಷಯದಲ್ಲಿ ಭಾರತವು ಒಂದು ದಿನ ಜಗತ್ತಿನಲ್ಲಿಯೇ ಒಂದನೆಯ ಸ್ಥಾನದಲ್ಲಿರುವುದು. ನೆರೆ ರಾಷ್ಟ್ರವಾದ ಬಾಂಗ್ಲಾದೇಶದಲ್ಲಿ, 35-49 ವರ್ಷ ವಯಸ್ಸಿನ ಪುರುಷರಲ್ಲಿ 70ಕ್ಕೂ ಹೆಚ್ಚು ಪ್ರತಿಶತ ಮಂದಿ ಧೂಮಪಾನಿಗಳಾಗಿದ್ದಾರೆ ಎಂದು ದ ಟೈಮ್ಸ್ ಆಫ್ ಇಂಡಿಯ ಹೇಳುತ್ತಾ, “ಆದಾಯ ಕಡಮೆಯಾದಂತೆ ಧೂಮಪಾನಮಾಡುವ ಪ್ರಮಾಣವು ಹೆಚ್ಚಾಯಿತು” ಎಂದಿತು. ಪ್ರತಿಯೊಬ್ಬ ಧೂಮಪಾನಿಯು “ಅನ್ನ, ಬಟ್ಟೆ, ಆರೋಗ್ಯ, ವಿದ್ಯೆ, ಇವೆಲ್ಲವನ್ನೂ ಸೇರಿಸಿ, ಅವುಗಳಾಗಿ ಖರ್ಚುಮಾಡುವ ಮೊತ್ತಕ್ಕಿಂತ ಎರಡಕ್ಕೂ ಹೆಚ್ಚು ಪಾಲನ್ನು ಸಿಗರೇಟಿಗಾಗಿ ಖರ್ಚುಮಾಡುತ್ತಾನೆ.” ಈ ಬಡ ದೇಶದಲ್ಲಿರುವ ನ್ಯೂನಪೋಷಣೆಗೊಳಗಾಗಿರುವ 105 ಲಕ್ಷ ಜನರು ತಾವು ಹೊಗೆಸೊಪ್ಪಿಗೆ ಖರ್ಚುಮಾಡುವ ಹಣವನ್ನು ಆಹಾರಕ್ಕೆ ಉಪಯೋಗಿಸುವಲ್ಲಿ, ಅವರಿಗೆ ಸಾಕಷ್ಟು ಪೋಷಣೆ ದೊರಕಸಾಧ್ಯವಿದೆ ಎಂದು ಅಂದಾಜು ಮಾಡಲಾಗುತ್ತದೆ. (g02 09/22)
ಎತ್ತರದ ಕಟ್ಟಡಗಳಿಗೆ ಈಗಲೂ ಬೇಡಿಕೆಯಿದೆ
ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಹೇಳುವುದು: “ಅವಳಿ ಕಟ್ಟಡಗಳ ಕುಸಿತವು ವಾಸ್ತುಶಿಲ್ಪಿಗಳನ್ನೂ ಎಂಜಿನಿಯರುಗಳನ್ನೂ ಹೊಸತಾದ ಮತ್ತು ಭೀಕರವಾದ ಅನುಭವಕ್ಕೆ ಬಡಿದೆಬ್ಬಿಸಿದೆ. ಜನರು ತಾತ್ಕಾಲಿಕವಾಗಿ ಹುಷಾರಾಗಿರುವ ಸ್ಥಿತಿಯಲ್ಲಿದ್ದಾರಾದರೂ, ಗಗನಚುಂಬಿಗಳಿಗಾಗಿರುವ ಬೇಡಿಕೆಯು ಮಾಯವಾಗದು.” ಇದಕ್ಕೆ ಒಂದು ಕಾರಣವು, ಕೆಲವು ಪ್ರದೇಶಗಳಲ್ಲಿ ಜಮೀನು ದೊರೆಯುವುದೇ ವಿರಳ ಮತ್ತು ಅದು ತೀರ ದುಬಾರಿಯಾಗಿರುತ್ತದೆ. ಅದಲ್ಲದೆ, ನಗರಗಳು ಇವುಗಳ ಬಗ್ಗೆ ಜಂಬಕೊಚ್ಚಿಕೊಳ್ಳಲು ಬಯಸುತ್ತವೆ. ವಿಪರೀತ ಎತ್ತರದ ಕಟ್ಟಡಗಳನ್ನು “ಒಂದು ಸ್ಥಳಕ್ಕೆ ಪ್ರಸಿದ್ಧಿ ಹಾಗೂ ಪ್ರಮುಖತೆಯನ್ನು ತರಲು ಮತ್ತು ಆಧುನಿಕ ಪ್ರವೃತ್ತಿಯ ಜೊತೆಯಲ್ಲಿ ಹೆಜ್ಜೆಯಿಡಲು ಹಾಗೂ ತದ್ರೀತಿಯ ಇತರ ಕಾರಣಗಳಿಗಾಗಿ ಕಟ್ಟಲಾಗುತ್ತದೆ,” ಎಂದು ಮ್ಯಾಸಚೂಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮುಖ್ಯಾಧಿಕಾರಿ ವಿಲ್ಯಮ್ ಮಿಚೆಲ್ ಹೇಳುತ್ತಾರೆ. ಆದರೂ, ವಾಸ್ತುಶಿಲ್ಪಿಗಳು ಕಟ್ಟಡಗಳನ್ನು ಹೆಚ್ಚು ಸುಭದ್ರವಾಗಿ ಮಾಡುವುದು ಹೇಗೆಂಬುದನ್ನು ಚರ್ಚಿಸುತ್ತಿದ್ದಾರೆ. ಆಸ್ಫೋಟ ನಿರೋಧಕ ಗೋಡೆ ಮತ್ತು ಕಿಟಿಕಿಗಳ ಮೂಲಕ ಕಟ್ಟಡಗಳನ್ನು ಆಕ್ರಮಣಗಳಿಗೆದುರಾಗಿ ಬಲಗೊಳಿಸಸಾಧ್ಯವಿದೆ, ಆದರೆ ಇವು ಇನ್ನಷ್ಟು ಭಾರವನ್ನು ಕೂಡಿಸುತ್ತವೆ ಮತ್ತು ತುಂಬ ದುಬಾರಿಯೂ ಆಗಿರುತ್ತವೆ. ಚೀನಾ ದೇಶದ ಕಟ್ಟಡ ಕ್ರಮವಿಧಾನಗಳು, ಪ್ರತಿ ಹದಿನೈದು ಮಾಳಿಗೆಗಳಿಗೆ ಒಂದರಂತೆ ಹೊರಾಂಗಣದಂತಹ ಖಾಲಿಯಾದ “ಆಶ್ರಯ ಮಾಳಿಗೆ” ಇರಬೇಕೆಂದು ಕೇಳಿಕೊಳ್ಳುತ್ತವೆ. ಬೇರೆ ಸ್ಥಳಗಳ ಕಟ್ಟಡ ಕ್ರಮವಿಧಾನಗಳು ಕಟ್ಟಡದ ತುದಿಯ ವರೆಗೆ ಅಗ್ನಿಶಾಮಕ ದಳದವರಿಗಾಗಿ ಎಲಿವೇಟರ್ ಇರಬೇಕೆಂದು ಹಾಗೂ ಹೊಗೆಯನ್ನು ಹೊರಗಿಡುವಂಥ ವಾಯು ಒತ್ತಡವಿರುವ ಮೆಟ್ಟಲ ಸಾಲುಗಳಿರಬೇಕೆಂದು ಕೇಳಿಕೊಳ್ಳುತ್ತವೆ. ಯಾವುದು ಲೋಕದ ಅತಿ ಎತ್ತರದ ಕಟ್ಟಡವಾಗಸಾಧ್ಯವಿದೆಯೊ ಆ ಶಾಂಘಾಯ್ ಜಾಗತಿಕ ಹಣಕಾಸಿನ ಕೇಂದ್ರದ ವಿನ್ಯಾಸಕಾರರು ಈಗಾಗಲೇ ತಮ್ಮ ವಿನ್ಯಾಸದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಸೇರಿಸುತ್ತಿದ್ದಾರೆ. (g02 09/22)