ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನಗೊಂದು ಮೋಬೈಲ್‌ ಫೋನಿನ ಅಗತ್ಯವಿದೆಯೋ?

ನನಗೊಂದು ಮೋಬೈಲ್‌ ಫೋನಿನ ಅಗತ್ಯವಿದೆಯೋ?

ಯುವ ಜನರು ಪ್ರಶ್ನಿಸುವುದು . . .

ನನಗೊಂದು ಮೋಬೈಲ್‌ ಫೋನಿನ ಅಗತ್ಯವಿದೆಯೋ?

“ನನ್ನೊಂದಿಗೆ ಮೋಬೈಲ್‌ ಫೋನ್‌ ಇಲ್ಲದಿದ್ದರೆ ನನಗೆ ಆತ್ಮವಿಶ್ವಾಸವೇ ಇರುವುದಿಲ್ಲ ಮತ್ತು ಸಿಡಿಮಿಡಿಗೊಳ್ಳುತ್ತೇನೆ.”​⁠ಆಕೀಕೋ. *

ಮೋಬೈಲ್‌ ಫೋನ್‌ಗಳು ಅನೇಕ ದೇಶಗಳಲ್ಲಿ ಹೆಚ್ಚೆಚ್ಚು ಜನಪ್ರಿಯವಾಗುತ್ತಿವೆ. ಅವು ಅನುಕೂಲಕರವಾಗಿವೆ. ಯಾವುದೇ ಸಮಯದಲ್ಲಿ, ಎಲ್ಲಿಯೇ ಆಗಲಿ ನಿಮ್ಮ ಸ್ನೇಹಿತರು ಮತ್ತು ಹೆತ್ತವರು ನಿಮ್ಮನ್ನು ಸಂಪರ್ಕಿಸಬಹುದು ಮತ್ತು ನೀವೂ ಅವರನ್ನು ಸಂಪರ್ಕಿಸಬಹುದು. ಕೆಲವು ಮೋಬೈಲ್‌ ಫೋನ್‌ಗಳಲ್ಲಿ ಚಿಕ್ಕ ಸಂದೇಶಗಳನ್ನು ಟೈಪ್‌ ಮಾಡಿ ಕಳುಹಿಸುವ ಸೌಲಭ್ಯವೂ ಇದೆ. ಇದು “ಸಂವಾದಮಾಡಲು ಯುವ ಜನರಿಗಿರುವ ಕಡುಬಯಕೆಯನ್ನು ಪೂರೈಸುವ ಅತ್ಯಾಧುನಿಕ ವಿಧವಾಗಿದೆ” ಎಂದು ಲಂಡನ್‌ನ ದ ಟೈಮ್ಸ್‌ ಪತ್ರಿಕೆಯು ಹೇಳುತ್ತದೆ. ವೆಬ್‌ ಸೈಟ್‌ ಮತ್ತು ಇ-ಮೇಲ್‌ಗಳನ್ನು ಉಪಯೋಗಿಸಲು ಸಾಧ್ಯಗೊಳಿಸುವಂತೆ ನಿಮ್ಮನ್ನು ಇಂಟರ್‌ನೆಟ್‌ಗೆ ಜೋಡಿಸುವ ಮೋಬೈಲ್‌ ಫೋನ್‌ಗಳೂ ಇವೆ.

ನಿಮ್ಮ ಬಳಿ ಈಗಾಗಲೇ ಒಂದು ಮೋಬೈಲ್‌ ಫೋನ್‌ ಇರಬಹುದು, ಅಥವಾ ಒಂದನ್ನು ಪಡೆದುಕೊಳ್ಳಲು ನೀವು ಯೋಜಿಸುತ್ತಿರಬಹುದು. ಸನ್ನಿವೇಶವು ಏನೇ ಆಗಿರಲಿ, ನೀವು “ನಾಣ್ಯಕ್ಕೆ ಎರಡು ಮುಖಗಳಿವೆ” ಎಂಬ ಹೇಳಿಕೆಯನ್ನು ಪರಿಗಣಿಸಬಹುದು. ಮೋಬೈಲ್‌ ಫೋನ್‌ನಿಂದ ಕೆಲವು ಪ್ರಯೋಜನಗಳಿರಬಹುದು ನಿಜ. ಆದರೂ, ನೀವು ನಾಣ್ಯದ ಇನ್ನೊಂದು ಮುಖದ ಕುರಿತು ಚಿಂತಿಸುವುದೂ ಯೋಗ್ಯವಾಗಿದೆ. ನೀವು ಅದನ್ನು ಖರೀದಿಸಲು ತೀರ್ಮಾನಿಸಬಹುದಾದರೂ, ಅದರ ಸಂಭಾವ್ಯ ಪ್ರತಿಕೂಲ ಪರಿಣಾಮಗಳ ಕುರಿತು ಸಂಪೂರ್ಣವಾಗಿ ತಿಳಿದಿರುವುದು, ನೀವು ಅದನ್ನು ವಿವೇಕದಿಂದ ಉಪಯೋಗಿಸುವಂತೆ ಸಹಾಯಮಾಡುವುದು.

‘ವೆಚ್ಚವನ್ನು ಲೆಕ್ಕಿಸಿರಿ’

ಒಂದು ಮುಖ್ಯವಾದ ಯೋಜನೆಯಲ್ಲಿ ತೊಡಗುವ ಮುನ್ನ, ಒಬ್ಬನು ‘ವೆಚ್ಚವನ್ನು ಲೆಕ್ಕಿಸ’ಬೇಕೆಂಬ ವಿವೇಕಯುತ ಮೂಲತತ್ತ್ವವನ್ನು ಯೇಸು ಹೇಳಿದನು. (ಲೂಕ 14:​28, NW) ಈ ಮೂಲತತ್ತ್ವವನ್ನು ಮೋಬೈಲ್‌ ಫೋನ್‌ಗಳಿಗೆ ಅನ್ವಯಿಸಸಾಧ್ಯವೋ? ಖಂಡಿತವಾಗಿಯೂ. ನೀವು ಫೋನನ್ನೇ ಈಗ ತುಂಬ ಕಡಿಮೆ ಬೆಲೆಯಲ್ಲಿ ಅಥವಾ ಉಚಿತವಾಗಿಯೂ ಪಡೆದುಕೊಳ್ಳಬಹುದು ನಿಜ. ಆದರೂ, 17 ವರ್ಷ ಪ್ರಾಯದ ಹೆನಾ ಕಂಡುಕೊಂಡ ಪ್ರಕಾರ, “ಅದರ ಬಿಲ್ಲು ಒಮ್ಮೆಗೇ ತುಂಬ ಹೆಚ್ಚಾಗಬಹುದು.” ಮಾತ್ರವಲ್ಲದೆ ಹೆಚ್ಚಿನ ಸೌಲಭ್ಯಗಳನ್ನು ಅಂಗೀಕರಿಸುವಂತೆ ಮತ್ತು ಹೆಚ್ಚು ದುಬಾರಿಯಾದ ಮೋಬೈಲ್‌ ಫೋನ್‌ಗಳನ್ನು ಖರೀದಿಸುವ ಒತ್ತಡವೂ ಸದಾ ನಿಮ್ಮ ಮೇಲೆ ಇರಬಹುದು. ಆದಕಾರಣ, ಹೀರೋಶೀ ಹೇಳುವುದು: “ನಾನು ಒಂದು ಪಾರ್ಟ್‌-ಟೈಮ್‌ ಕೆಲಸವನ್ನು ಮಾಡುತ್ತೇನೆ ಮತ್ತು ಪ್ರತಿ ವರ್ಷ ಒಂದು ಹೊಸ ಮೋಬೈಲ್‌ ಫೋನನ್ನು ಖರೀದಿಸಲಿಕ್ಕೋಸ್ಕರ ಹಣವನ್ನು ಬದಿಗಿಡುತ್ತೇನೆ.” ಅನೇಕ ಯುವ ಜನರು ಇದನ್ನೇ ಮಾಡುತ್ತಾರೆ. *

ಒಂದುವೇಳೆ ನಿಮ್ಮ ಹೆತ್ತವರು ನಿಮಗೋಸ್ಕರ ಬಿಲ್ಲನ್ನು ಪಾವತಿಮಾಡಲು ಒಪ್ಪುವುದಾದರೂ ಕೂಡ, ಇದಕ್ಕಾಗಿ ತಗಲುವ ವೆಚ್ಚಗಳನ್ನು ನೀವು ಅರ್ಥಮಾಡಿಕೊಳ್ಳುವುದು ಪ್ರಾಮುಖ್ಯವಾಗಿದೆ. ಜಪಾನಿನಲ್ಲಿರುವ ಒಬ್ಬ ಸಂಚಾರಿ ಕ್ರೈಸ್ತ ಶುಶ್ರೂಷಕನು ಗಮನಿಸುವುದು: “ಕೆಲವು ತಾಯಂದಿರು ತಮ್ಮ ಮಕ್ಕಳ ಮೋಬೈಲ್‌ ಫೋನ್‌ ಬಿಲ್ಲನ್ನು ಕಟ್ಟಲಿಕ್ಕಾಗಿಯೇ ಹೆಚ್ಚಿನ ಪಾರ್ಟ್‌-ಟೈಮ್‌ ಕೆಲಸಗಳನ್ನು ಮಾಡುತ್ತಿದ್ದಾರೆ. ಮೋಬೈಲ್‌ ಫೋನ್‌ ಅಷ್ಟು ಅಗತ್ಯವಾದ ವಿಷಯವೇನೂ ಅಲ್ಲ.” ನೀವು ಖಂಡಿತವಾಗಿಯೂ ನಿಮ್ಮ ಹೆತ್ತವರ ಮೇಲೆ ಇಂತಹ ಒತ್ತಡವನ್ನು ಹಾಕಲು ಬಯಸಲಾರಿರಿ!

“ಸಮಯ ಹಂತಕ”

ತಮ್ಮ ಫೋನನ್ನು ಮಿತಪ್ರಮಾಣದಲ್ಲಿ ಉಪಯೋಗಿಸಲು ಆರಂಭಿಸುವಂಥ ಅನೇಕರು, ಶೀಘ್ರವೇ ಅದು ತಾವು ಅಪೇಕ್ಷಿಸಿದ್ದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆಂದೂ, ಹೆಚ್ಚು ಪ್ರಾಮುಖ್ಯವಾದ ವಿಷಯಗಳನ್ನು ಬದಿಗೊತ್ತುತ್ತದೆಂದೂ ಕಂಡುಕೊಳ್ಳಬಹುದು. ಮೀಕಾ, ಊಟ ಮಾಡುವ ಸಮಯದಲ್ಲಿ ತನ್ನ ಕುಟುಂಬದೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತಿದ್ದಳು. ಆದರೆ, ಅವಳು ಹೇಳುವುದು, “ಈಗ ನಾವು ಊಟದ ನಂತರ ನಮ್ಮ [ಮೋಬೈಲ್‌ ಫೋನ್‌ಗಳೊಂದಿಗೆ] ನಮ್ಮ ಕೋಣೆಗಳಿಗೆ ಹೋಗಿಬಿಡುತ್ತೇವೆ.”

“ಬೇರೆಲ್ಲಾ ರೀತಿಯ ಬರಹ ರೂಪದ ಸಂವಾದಕ್ಕಿಂತ ಫೋನಿನ ಮೂಲಕ ಅಕ್ಷರ ರೂಪದ ಸಂದೇಶಗಳನ್ನು ಟೈಪ್‌ ಮಾಡಿ ಕಳುಹಿಸುದನ್ನು, 16 ಮತ್ತು 20ರ ನಡುವಣ ಪ್ರಾಯದ ನಾಲ್ಕು ಮಂದಿ ಯುವ ಜನರಲ್ಲಿ ಮೂರು ಮಂದಿ ಇಷ್ಟಪಡುತ್ತಾರೆ,” ಎಂದು ಲಂಡನ್‌ನ ದ ಗಾರ್ಡಿಯನ್‌ ವಾರ್ತಾಪತ್ರಿಕೆಯು ಹೇಳುತ್ತದೆ. ಅಕ್ಷರ ರೂಪದಲ್ಲಿ ಸಂದೇಶವನ್ನು ಕಳುಹಿಸುವುದು ಸ್ವರ ರೂಪದ ಸಂವಾದಕ್ಕಿಂತ ಕಡಿಮೆ ಹಣವನ್ನು ಕೇಳಿಕೊಳ್ಳಬಹುದಾದರೂ, ಅಕ್ಷರ ರೂಪದ ಸಂದೇಶಗಳನ್ನು ಟೈಪ್‌ ಮಾಡುವುದು ಹೆಚ್ಚಿನ ಸಮಯವನ್ನು ಕಬಳಿಸಿಬಿಡುತ್ತದೆ. ಮೀಏಕೋ ಒಪ್ಪಿಕೊಳ್ಳುವುದು: “ಯಾರಾದರೂ ‘ಗುಡ್‌ ನೈಟ್‌’ ಎಂಬ ಸಂದೇಶವನ್ನು ಕಳುಹಿಸುವುದಾದರೆ, ನಾನು ಪ್ರತ್ಯುತ್ತರವಾಗಿ ‘ಗುಡ್‌ ನೈಟ್‌’ ಎಂದು ಕಳುಹಿಸುತ್ತೇನೆ. ಆಮೇಲೆ, ಒಂದು ತಾಸಿನಷ್ಟು ಸಮಯ ಸಂದೇಶಗಳು ಹಿಂದೂ ಮುಂದೂ ಹೋಗುತ್ತಾ ಇರುತ್ತವೆ. ಅದೆಲ್ಲವೂ ಬರೀ ಪೊಳ್ಳು ಮಾತಷ್ಟೇ.”

ಅನೇಕ ಮೋಬೈಲ್‌ ಫೋನ್‌ ಬಳಕೆದಾರರು, ತುಸು ನಿಂತು ತಾವು ಒಂದು ತಿಂಗಳಿನಲ್ಲಿ ಫೋನನ್ನು ಉಪಯೋಗಿಸುವುದರಲ್ಲಿ ವ್ಯಯಿಸಿರುವ ಎಲ್ಲಾ ಸಮಯವನ್ನು ಲೆಕ್ಕಿಸುವುದಾದರೆ ಚಕಿತರಾಗಬಹುದು. 19 ವರ್ಷ ಪ್ರಾಯದ ಹುಡುಗಿ, ಟೇಜಾ ಒಪ್ಪಿಕೊಳ್ಳುವುದು: “ಅನೇಕ ಜನರಿಗೆ ಮೋಬೈಲ್‌ ಫೋನ್‌ ಎಂಬುದು ಸಮಯ ರಕ್ಷಕನಾಗಿರುವ ಬದಲು ಸಮಯ ಹಂತಕವಾಗಿದೆ.” ನಿಮ್ಮ ಪರಿಸ್ಥಿತಿಗಳು ನೀವು ಒಂದು ಮೋಬೈಲ್‌ ಫೋನ್‌ ಹೊಂದಿರಲಿಕ್ಕಾಗಿ ಒಂದು ಯೋಗ್ಯ ಕಾರಣವನ್ನು ಕೊಡಬಹುದಾದರೂ, ಅದನ್ನು ಉಪಯೋಗಿಸುವಾಗ ಸಮಯ ಪ್ರಜ್ಞೆಯುಳ್ಳವರಾಗಿರುವುದು ಆವಶ್ಯಕವಾಗಿದೆ.

ಒಬ್ಬ ಯುವ ಕ್ರೈಸ್ತ ಹುಡುಗಿ ಮಾರ್ಯಾ ಅವಲೋಕಿಸುವುದು: “ಕ್ರೈಸ್ತ ಅಧಿವೇಶನಗಳಲ್ಲಿ ಹಾಜರಿರುವಾಗ ಅನೇಕ ಯುವ ಜನರು ಇತರರಿಗೆ ಅನಗತ್ಯವಾದ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ. ಇದು ಸರ್ವಸಾಮಾನ್ಯವಾಗಿದೆ!” ತದ್ರೀತಿಯ ವರ್ತನೆಯು ಕ್ರೈಸ್ತ ಶುಶ್ರೂಷೆಯಲ್ಲಿ ತೊಡಗಿರುವ ಯುವ ಜನರ ಮಧ್ಯದಲ್ಲೂ ಗಮನಿಸಲಾಗಿದೆ. ಆದರೆ, ಕ್ರೈಸ್ತರು ಆತ್ಮಿಕ ಚಟುವಟಿಕೆಗಳಿಗಾಗಿ ಸಮಯವನ್ನು ಖರೀದಿಸಬೇಕೆಂದು ಬೈಬಲು ಆದೇಶಿಸುತ್ತದೆ. (ಎಫೆಸ 5:16) ಇಂತಹ ಅಮೂಲ್ಯವಾದ ಸಮಯವನ್ನು ಟೆಲಿಫೋನ್‌ ಸಂಭಾಷಣೆಯು ಕಸಿದುಕೊಳ್ಳುವುದಾದರೆ, ಅದೆಷ್ಟು ಶೋಚನೀಯ!

ಗುಪ್ತ ಸಂವಾದ

ಮಾರೀಏ ಮತ್ತೊಂದು ಅಪಾಯದ ಕುರಿತು ಹೇಳುತ್ತಾಳೆ: “ಕರೆಗಳು ಮನೆಗೆ ಅಲ್ಲ ಬದಲಾಗಿ ನೇರವಾಗಿ ಆ ವ್ಯಕ್ತಿಗೆ ಬರುವುದರಿಂದ, ತಮ್ಮ ಮಕ್ಕಳು ಯಾರೊಂದಿಗೆ ಮಾತಾಡುತ್ತಿದ್ದಾರೆ ಅಥವಾ ಅವರು ಫೋನ್‌ನಲ್ಲಿ ಯಾರೊಂದಿಗಾದರೂ ಮಾತಾಡುತ್ತಿದ್ದಾರೋ ಇಲ್ಲವೋ ಎಂಬುದು ಕೂಡ ಹೆತ್ತವರಿಗೆ ತಿಳಿಯದೆ ಹೋಗುವ ಅಪಾಯ ಇದೆ.” ಆದುದರಿಂದ ಕೆಲವು ಯುವ ಜನರು ವಿರುದ್ಧ ಲಿಂಗದವರೊಂದಿಗೆ ಗುಪ್ತ ಸಂಪರ್ಕವನ್ನು ಸ್ಥಾಪಿಸಲು ತಮ್ಮ ಮೋಬೈಲ್‌ ಫೋನ್‌ಗಳನ್ನು ಉಪಯೋಗಿಸುತ್ತಾರೆ. ಕೆಲವರು ಮುಂಜಾಗ್ರತೆಯನ್ನು ಗಾಳಿಗೆ ತೂರಿ, ಸಾಮಾನ್ಯವಾಗಿ ಇತರರೊಂದಿಗೆ ಸಂವಾದ ಮಾಡುವಾಗ ಅವರು ಪಾಲಿಸುವಂಥ ಮಟ್ಟಗಳನ್ನು ಅಸಡ್ಡೆ ಮಾಡಿದ್ದಾರೆ. ಅದು ಹೇಗೆ?

“ಅಕ್ಷರ ರೂಪದ ಸಂದೇಶವನ್ನು ಕಳುಹಿಸುವುದರ ಪರಿಣಾಮವೇನೆಂದರೆ, [ಯುವ ಜನರು] ಏನು ಮಾಡುತ್ತಿದ್ದಾರೆಂಬುದರ ಮೇಲೆ ಯಾರೂ ನಿಗಾ ಇಡಲು ಆಗುವುದಿಲ್ಲ,” ಎಂದು ಲಂಡನ್‌ನ ದ ಡೇಲಿ ಟೆಲಿಗ್ರಾಫ್‌ ಹೇಳುತ್ತದೆ. ಸಂಪರ್ಕ ಮಾಡುತ್ತಿರುವ ವ್ಯಕ್ತಿಯನ್ನು ಕೇಳಿಸಿಕೊಳ್ಳಲು ಅಥವಾ ನೋಡಸಾಧ್ಯವಿಲ್ಲದಿರುವುದು ನಿಮ್ಮನ್ನು ಬಾಧಿಸಬಲ್ಲದು. ಟಿಮಾ ಗಮನಿಸುವುದು: “ಅಕ್ಷರ ರೂಪದ ಸಂದೇಶವನ್ನು ಕಳುಹಿಸುವುದು ಸಂವಾದಮಾಡುವ ಹೆಚ್ಚು ಅವೈಯಕ್ತಿಕ ವಿಧ ಎಂದು ಕೆಲವರು ನೆನಸುತ್ತಾರೆ. ಸಂದೇಶವೊಂದರಲ್ಲಿ ತಾವು ಮುಖಾಮುಖಿಯಾಗಿ ಹೇಳಲು ಧೈರ್ಯಮಾಡದ ವಿಷಯಗಳನ್ನು ಕೆಲವರು ಬರೆಯಬಹುದು.”

ಹದಿನೇಳು ವರ್ಷ ಪ್ರಾಯದ ಕ್ರೈಸ್ತ ಹುಡುಗಿಯಾಗಿರುವ ಕೇಕೋ, ಒಂದು ಮೋಬೈಲ್‌ ಫೋನನ್ನು ಉಪಯೋಗಿಸಲು ಆರಂಭಿಸಿದಾಗ, ತನ್ನ ಸ್ನೇಹಿತರಲ್ಲಿ ಅನೇಕರಿಗೆ ಅದರ ನಂಬರನ್ನು ತಿಳಿಸಿದಳು. ಶೀಘ್ರವೇ ಅವಳು ತನ್ನ ಸಭೆಯಲ್ಲಿದ್ದ ಒಬ್ಬ ಹುಡುಗನೊಂದಿಗೆ ಪ್ರತಿ ದಿನ ಸಂದೇಶಗಳನ್ನು ವಿನಿಮಯ ಮಾಡಲು ಆರಂಭಿಸಿದಳು. ಕೇಕೋ ಹೇಳುವುದು: “ಆರಂಭದಲ್ಲಿ ನಾವು ಕೇವಲ ದಿನನಿತ್ಯದ ವಿಷಯಗಳ ಕುರಿತು ಮಾತಾಡಿದೆವು. ಆದರೆ ನಂತರ ನಾವು ನಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಆರಂಭಿಸಿದೆವು. ತದನಂತರ ನಮ್ಮ ಮೋಬೈಲ್‌ ಫೋನ್‌ಗಳ ಮೂಲಕ ನಮ್ಮದೇ ಆದ ಒಂದು ಚಿಕ್ಕ ಪ್ರಪಂಚವನ್ನು ಸೃಷ್ಟಿಸಿದೆವು.”

ಸಂತೋಷಕರವಾಗಿ, ವಿಷಯವು ಇನ್ನಷ್ಟು ಗಂಭೀರಗೊಳ್ಳುವ ಮುನ್ನ ಅವಳು ತನ್ನ ಹೆತ್ತವರು ಮತ್ತು ಕ್ರೈಸ್ತ ಹಿರಿಯರಿಂದ ಸಹಾಯವನ್ನು ಪಡೆದುಕೊಂಡಳು. ಅವಳು ಈಗ ಅಂಗೀಕರಿಸುವುದು: “ನನಗೆ ಮೋಬೈಲ್‌ ಫೋನನ್ನು ಕೊಡುವ ಮೊದಲು, ವಿರುದ್ಧ ಲಿಂಗದವರಿಗೆ ಸಂದೇಶಗಳನ್ನು ಕಳುಹಿಸುವುದರ ಕುರಿತು ನನ್ನ ಹೆತ್ತವರು ನನಗೆ ಎಷ್ಟೋ ಎಚ್ಚರಿಕೆಗಳನ್ನು ಕೊಟ್ಟಿದ್ದರೂ, ನಾನು ಅವನಿಗೆ ಪ್ರತಿನಿತ್ಯ ಸಂದೇಶಗಳನ್ನು ಕಳುಹಿಸಿದೆ. ಇದು ಆ ಫೋನಿನ ಯೋಗ್ಯವಾದ ಉಪಯೋಗವಾಗಿರಲಿಲ್ಲ.” *

“ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ” ಎಂದು ಬೈಬಲು ನಮ್ಮನ್ನು ಉತ್ತೇಜಿಸುತ್ತದೆ. (1 ಪೇತ್ರ 3:16) ಇದು, ನೀವು ಒಂದು ಮೋಬೈಲ್‌ ಫೋನನ್ನು ಉಪಯೋಗಿಸುವಾಗ, ನಿಮ್ಮ ಸಂದೇಶಗಳನ್ನು ಬೇರೆಯವರು ನೋಡುವುದಾದರೂ ಅಥವಾ ನಿಮ್ಮ ಸಂಭಾಷಣೆಯು ಅವರ ಕಿವಿಗೆ ಬೀಳುವುದಾದರೂ ಕೋಈಚೀ ಹೇಳುವಂತೆ “ನಿಮಗೆ ಅವಮಾನವಾಗುವ ಯಾವುದೇ ವಿಷಯವು ಅದರಲ್ಲಿಲ್ಲ” ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ನಮ್ಮ ಸ್ವರ್ಗೀಯ ತಂದೆಯ ಮುಂದೆ ಯಾವುದೇ ವಿಷಯವನ್ನು ಗುಟ್ಟಾಗಿಡಸಾಧ್ಯವಿಲ್ಲ ಎಂಬುದನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಿ. ಬೈಬಲ್‌ ವಿವರಿಸುವುದು: “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ [ದೇವರ] ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ. ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.” (ಇಬ್ರಿಯ 4:13) ಹೀಗಿರುವಾಗ ಒಂದು ಗುಪ್ತ ಸಂಬಂಧವನ್ನು ಇಟ್ಟುಕೊಳ್ಳಲು ಪ್ರಯತ್ನಿಸುವುದಾದರೂ ಏತಕ್ಕೆ?

ಮಿತಿಗಳನ್ನಿಡಿರಿ

ಒಂದು ಮೋಬೈಲ್‌ ಫೋನನ್ನು ಪಡೆದುಕೊಳ್ಳಲು ನೀವು ಯೋಚಿಸುತ್ತಿರುವುದಾದರೆ, ನಿಮಗೆ ನಿಜವಾಗಿಯೂ ಅದರ ಆವಶ್ಯಕತೆಯಿದೆಯೋ ಎಂಬುದನ್ನು ತಿಳಿಯಲು ಮೊದಲು ನಿಮ್ಮ ಪರಿಸ್ಥಿತಿಯನ್ನು ಏಕೆ ಪರಿಶೀಲಿಸಿ ನೋಡಬಾರದು? ಈ ವಿಷಯದ ಕುರಿತು ನಿಮ್ಮ ಹೆತ್ತವರೊಂದಿಗೆ ಮಾತಾಡಿರಿ. ಕೆಲವರಿಗೆ ಯೆನ್ನಾಳಂತೆ ಅನಿಸುತ್ತದೆ. ಅವಳು ಹೇಳುವುದು: “ಮೋಬೈಲ್‌ ಫೋನ್‌, ಅನೇಕ ಯುವ ಜನರಿಗೆ ನಿರ್ವಹಿಸಲಸಾಧ್ಯವಾದ ಒಂದು ದೊಡ್ಡ ಜವಾಬ್ದಾರಿಯಾಗಿದೆ.”

ಇಂತಹ ಒಂದು ಫೋನನ್ನು ನೀವು ಖರೀದಿಸಲು ತೀರ್ಮಾನಿಸುವುದಾದರೂ, ಅದರ ಉಪಯೋಗವನ್ನು ನಿಯಂತ್ರಿಸುವುದು ಪ್ರಾಮುಖ್ಯ. ಹೇಗೆ? ನ್ಯಾಯೋಚಿತವಾದ ಮಿತಿಗಳನ್ನಿಡಿರಿ. ಉದಾಹರಣೆಗೆ, ನೀವು ಉಪಯೋಗಿಸುವ ವೈಶಿಷ್ಟ್ಯಗಳನ್ನು ಅಥವಾ ನೀವು ಫೋನಿನ ಉಪಯೋಗದಲ್ಲಿ ವ್ಯಯಿಸುವ ಸಮಯ ಮತ್ತು ಹಣವನ್ನು ಮಿತಗೊಳಿಸಿರಿ. ಹೆಚ್ಚಿನ ಕಂಪನಿಗಳು ನಿಮ್ಮ ಉಪಯೋಗದ ಸವಿವರವಾದ ದಾಖಲೆಯನ್ನು ಒದಗಿಸುವುದರಿಂದ, ನೀವು ಆಗಿಂದಾಗ್ಗೆ ನಿಮ್ಮ ಹೆತ್ತವರೊಂದಿಗೆ ಬಿಲ್ಲನ್ನು ಪರಿಶೀಲಿಸಬಹುದು. ಉಪಯೋಗವನ್ನು ಮಿತಗೊಳಿಸಲಿಕ್ಕಾಗಿ ಕೆಲವರು ಮುಂಗಡವಾಗಿ ಹಣ ಸಲ್ಲಿಸಿರುವ ಮೋಬೈಲ್‌ ಫೋನ್‌ಗಳನ್ನು ಉಪಯೋಗಿಸುವುದು ಅನುಕೂಲಕರ ಎಂದು ಕಂಡುಕೊಳ್ಳುತ್ತಾರೆ.

ಮಾತ್ರವಲ್ಲದೆ, ನೀವು ಕರೆಗಳು ಇಲ್ಲವೆ ಸಂದೇಶಗಳಿಗೆ ಯಾವಾಗ ಮತ್ತು ಹೇಗೆ ಪ್ರತಿಕ್ರಿಯಿಸುವಿರಿ ಎಂಬುದಕ್ಕೂ ಜಾಗರೂಕವಾದ ಗಮನವನ್ನು ಕೊಡಿರಿ. ನಿಮ್ಮ ಸ್ವಂತ ನ್ಯಾಯಬದ್ಧವಾದ ನಿರ್ದೇಶನಗಳನ್ನು ಮಾಡಿಕೊಳ್ಳಿರಿ. ಶಿಂಜೀ ವಿವರಿಸುವುದು: “ನಾನು ನನ್ನ ಮೇಲ್‌ಬಾಕ್ಸ್‌ ಅನ್ನು ದಿನಕ್ಕೆ ಒಂದು ಸಲ ಮಾತ್ರ ತೆರೆಯುತ್ತೇನೆ, ಮತ್ತು ಸಾಮಾನ್ಯವಾಗಿ ಕೇವಲ ಪ್ರಾಮುಖ್ಯವಾದ ಸಂದೇಶಗಳಿಗೆ ಮಾತ್ರ ಪ್ರತ್ಯುತ್ತರವನ್ನು ಕಳುಹಿಸುತ್ತೇನೆ. ಇದರ ಪರಿಣಾಮವಾಗಿ, ಸ್ನೇಹಿತರು ಪ್ರಯೋಜನವಿಲ್ಲದ ಸಂದೇಶಗಳನ್ನು ಕಳುಹಿಸುವುದನ್ನು ನಿಲ್ಲಿಸಿದ್ದಾರೆ. ನಿಜವಾಗಿಯೂ ತುರ್ತಿನ ಸಮಸ್ಯೆ ಏನಾದರೂ ಇರುವುದಾದರೆ, ಹೇಗೂ ಅವರು ನನಗೆ ಫೋನ್‌ ಮಾಡುವರು.” ಹೆಚ್ಚು ಪ್ರಾಮುಖ್ಯವಾಗಿ, ನೀವು ಯಾರೊಂದಿಗೆ ಸಂಪರ್ಕ ಮಾಡುತ್ತೀರೋ ಅಂಥವರನ್ನು ಆರಿಸಿಕೊಳ್ಳಿರಿ. ನಿಮ್ಮ ಫೋನ್‌ ನಂಬರನ್ನು ಕೊಡುವ ವಿಷಯದಲ್ಲಿ ಎಚ್ಚರಿಕೆಯುಳ್ಳವರಾಗಿರ್ರಿ. ಒಳ್ಳೆಯ ಸಹವಾಸದ ವಿಷಯದಲ್ಲಿ ನೀವು ಉಪಯೋಗಿಸುವ ಅದೇ ಮಟ್ಟಗಳನ್ನು ಇಲ್ಲಿಯೂ ಅನ್ವಯಿಸಿಕೊಳ್ಳಿ.​—⁠1 ಕೊರಿಂಥ 15:33.

ಬೈಬಲ್‌ ಹೇಳುವುದು: “ಸುಮ್ಮನಿರುವ ಸಮಯ, ಮಾತಾಡುವ ಸಮಯ . . . ಅಂತೂ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.” (ಪ್ರಸಂಗಿ 3:7, 8) ಮೋಬೈಲ್‌ ಫೋನ್‌ಗಳಿಗೂ “ಸುಮ್ಮನಿರುವ ಸಮಯ” ಉಂಟೆಂಬುದು ಸ್ಪಷ್ಟ. ನಮ್ಮ ಕ್ರೈಸ್ತ ಕೂಟಗಳು ಮತ್ತು ಶುಶ್ರೂಷೆಯು ದೇವರನ್ನು ಆರಾಧಿಸಲಿಕ್ಕಾಗಿರುವ “ತಕ್ಕ ಸಮಯ”ವಾಗಿದೆ, ಫೋನನ್ನು ಉಪಯೋಗಿಸಲಿಕ್ಕಲ್ಲ. ರೆಸ್ಟರಾಂಟ್‌ ಮತ್ತು ಚಿತ್ರಮಂದಿರದ ಮ್ಯಾನೇಜರ್‌ಗಳು, ತಮ್ಮ ಗಿರಾಕಿಗಳು ಮೋಬೈಲ್‌ ಫೋನ್‌ಗಳನ್ನು ಉಪಯೋಗಿಸಬಾರದೆಂದು ಅನೇಕ ಸಲ ವಿನಂತಿಸಿಕೊಳ್ಳುತ್ತಾರೆ. ಈ ವಿನಂತಿಗಳಿಗೆ ನಾವು ಗೌರವಪೂರ್ವಕವಾಗಿ ಮಣಿಯುತ್ತೇವೆ. ಹೀಗಿರುವಾಗ ವಿಶ್ವದ ಪರಮಾಧಿಕಾರಿಯು ಖಂಡಿತವಾಗಿಯೂ ಕಡಿಮೆಪಕ್ಷ ಅದೇ ರೀತಿಯ ಗೌರವಕ್ಕೆ ಅರ್ಹನಾಗಿದ್ದಾನೆ!

ಒಂದು ತುರ್ತಿನ ಕರೆಯನ್ನು ನಿರೀಕ್ಷಿಸುತ್ತಿಲ್ಲವಾದರೆ ಅನೇಕ ಜನರು ತಮ್ಮ ಫೋನನ್ನು ಆಫ್‌ ಮಾಡಿಬಿಡುತ್ತಾರೆ, ಅಥವಾ ಆವಶ್ಯಕ ಚಟುವಟಿಕೆಗಳಲ್ಲಿ ತೊಡಗಿರುವಾಗ ಅದನ್ನು ಸೈಲಂಟ್‌ ಮೋಡ್‌ನಲ್ಲಿಡುತ್ತಾರೆ. ಕೆಲವರು ತಮ್ಮ ಮೋಬೈಲ್‌ ಫೋನನ್ನು ಕೈಗೆಟುಕದಷ್ಟು ದೂರದಲ್ಲಿ ಇಟ್ಟುಬಿಡುತ್ತಾರೆ. ಏನೇ ಆದರೂ, ಹೆಚ್ಚಿನ ಸಂದೇಶಗಳನ್ನು ಸ್ವಲ್ಪ ಸಮಯದ ನಂತರ ನೋಡಿಕೊಳ್ಳಬಹುದಲ್ಲವೇ?

ನೀವು ಒಂದು ಮೋಬೈಲ್‌ ಫೋನನ್ನು ಖರೀದಿಸಲು ತೀರ್ಮಾನಿಸುವುದಾದರೆ, ಅದು ನಿಮ್ಮ ಹತೋಟಿಯಲ್ಲಿರುವಂತೆ ನೋಡಿಕೊಳ್ಳಿರಿ​—⁠ನೀವು ಅದರ ಹತೋಟಿಯಲ್ಲಿ ಇರುವುದಲ್ಲ. ಸ್ಪಷ್ಟವಾಗಿಯೇ, ನೀವು ಎಚ್ಚರವಾಗಿದ್ದು ನಿಮ್ಮ ಆದ್ಯತೆಗಳಿಗೆ ಪ್ರಾಮುಖ್ಯತೆಯನ್ನು ಕೊಡುವವರಾಗಿರಬೇಕು. ಬೈಬಲು ನಮ್ಮನ್ನು ಪ್ರೋತ್ಸಾಹಿಸುವುದು: “ನಿಮ್ಮ ಸೈರಣೆಯು [“ವಿವೇಚನಾಶೀಲತೆ,” NW] ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ.” (ಫಿಲಿಪ್ಪಿ 4:5) ನೀವು ಒಂದು ಮೋಬೈಲ್‌ ಫೋನನ್ನು ಇಟ್ಟುಕೊಳ್ಳಲು ತೀರ್ಮಾನಿಸುವುದಾದರೆ, ಅದನ್ನು ಉಪಯೋಗಿಸುವುದರಲ್ಲಿ ನಿಮ್ಮ ವಿವೇಚನಾಶೀಲತೆಯನ್ನು ತೋರಿಸುವ ದೃಢನಿರ್ಧಾರವನ್ನು ದಯವಿಟ್ಟು ಮಾಡಿರಿ. (g02 10/22)

[ಪಾದಟಿಪ್ಪಣಿಗಳು]

^ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

^ ಶಾಲಾ ನಂತರದ ಉದ್ಯೋಗಗಳ ಕುರಿತಾದ ಒಂದು ಚರ್ಚೆಗಾಗಿ, “ಯುವ ಜನರು ಪ್ರಶ್ನಿಸುವುದು​—⁠ಹಣ ಸಂಪಾದಿಸುವುದರಲ್ಲಿ ತಪ್ಪೇನಿದೆ?” ಎಂಬ ಲೇಖನವನ್ನು 1997, ಅಕ್ಟೋಬರ್‌ 8ರ ಎಚ್ಚರ! ಪತ್ರಿಕೆಯಲ್ಲಿ ದಯವಿಟ್ಟು ನೋಡಿರಿ.

^ ವಿರುದ್ಧ ಲಿಂಗದವರೊಬ್ಬರೊಂದಿಗೆ ವಾಡಿಕೆಯಾಗಿ ಮಾತಾಡುವುದು ಅಥವಾ ಸಂದೇಶಗಳನ್ನು ಕಳುಹಿಸುವುದು ಒಂದು ರೀತಿಯ ಡೇಟಿಂಗ್‌ ಆಗಿರಬಲ್ಲದು. “ಯುವ ಜನರು ಪ್ರಶ್ನಿಸುವುದು​—⁠ಒಬ್ಬರೊಂದಿಗೊಬ್ಬರು ಮಾತಾಡಿಕೊಳ್ಳುವುದರಲ್ಲಿ ತಪ್ಪೇನಿದೆ?” ಎಂಬ ಲೇಖನವನ್ನು ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ 1992, ಆಗಸ್ಟ್‌ 22ರ ಸಂಚಿಕೆಯಲ್ಲಿ ದಯವಿಟ್ಟು ನೋಡಿರಿ.

[ಪುಟ 16ರಲ್ಲಿರುವ ಚಿತ್ರಗಳು]

ಕೆಲವು ಯುವ ಜನರು ಮೋಬೈಲ್‌ ಫೋನಿನ ಮುಖಾಂತರ ಗುಪ್ತ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ