ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಬಲಹೀನತೆಗಳನ್ನು ದೇವರು ಲಕ್ಷಿಸದಿರುವನೋ?

ನಮ್ಮ ಬಲಹೀನತೆಗಳನ್ನು ದೇವರು ಲಕ್ಷಿಸದಿರುವನೋ?

ಬೈಬಲಿನ ದೃಷ್ಟಿಕೋನ

ನಮ್ಮ ಬಲಹೀನತೆಗಳನ್ನು ದೇವರು ಲಕ್ಷಿಸದಿರುವನೋ?

‘ನಾನೇನು ದುಷ್ಟನಲ್ಲ! ನನ್ನ ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡಲು ನಾನು ಎಷ್ಟೋ ಕಷ್ಟಪಟ್ಟಿದ್ದೇನೆ, ಆದರೆ ಅವುಗಳನ್ನು ಬಿಟ್ಟುಬಿಡಲು ನನ್ನಿಂದಾಗದು!’

ನಿಮ್ಮ ಅಥವಾ ನಿಮ್ಮ ಪರಿಚಯಸ್ಥರೊಬ್ಬರ ಅನಿಸಿಕೆಗಳನ್ನು ಈ ಹೇಳಿಕೆಯು ಪ್ರತಿಧ್ವನಿಸುತ್ತದೋ? ಬೇರೂರಿರುವ ನೈತಿಕ ಬಲಹೀನತೆಗಳನ್ನು ಜಯಿಸುವುದು ಬಹುಮಟ್ಟಿಗೆ ಅಸಾಧ್ಯವೆಂದು ಅನೇಕರು ತೀರ್ಮಾನಿಸುತ್ತಾರೆ. ಕೆಲವು ಜನರು ಅಮಲೌಷಧ, ಧೂಮಪಾನ ಮತ್ತು ಮಾದಕ ವಸ್ತುಗಳ ಮೇಲೆ ಅವಲಂಬಿತರಾಗಿದ್ದಾರೆ. ಈರ್ಷ್ಯೆಯು ಇನ್ನಿತರ ಅನೇಕರ ಜೀವಿತಗಳನ್ನು ವಶಪಡಿಸಿಕೊಂಡಿದೆ. ಮತ್ತು ಅನೇಕರು ತಮಗೆ ಸೆಕ್ಸ್‌ ಚಟಹಿಡಿದಿದೆಯೆಂದು ಹೇಳಿ, ಇದು ತಮ್ಮ ನಿಯಂತ್ರಣಕ್ಕೆ ಮೀರಿದ ವಿಷಯವೆಂದು ಹೇಳಿಕೊಂಡು ಲೈಂಗಿಕ ದುರ್ನಡತೆಗೆ ಮಣಿದಿದ್ದಾರೆ.

ಮತ್ತಾಯ 26:41ರಲ್ಲಿ ಸೂಚಿಸಲ್ಪಟ್ಟಿರುವ ಪ್ರಕಾರ ಯೇಸು ಮಾನವ ಬಲಹೀನತೆಗಳನ್ನು ಅರ್ಥಮಾಡಿಕೊಳ್ಳಲು ಶಕ್ತನಾಗಿದ್ದಾನೆ ಎಂಬುದನ್ನು ಕರುಣೆಯಿಂದ ವ್ಯಕ್ತಪಡಿಸಿದನು. * ವಾಸ್ತವದಲ್ಲಿ ಬೈಬಲಿನ ಇಡೀ ವೃತ್ತಾಂತವು, ಯೆಹೋವ ದೇವರು ಮತ್ತು ಯೇಸು ಮಾನವರ ಕಡೆಗೆ ಕನಿಕರವುಳ್ಳವರಾಗಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. (ಕೀರ್ತನೆ 103:8, 9) ಆದರೆ ದೇವರು ನಮ್ಮ ಎಲ್ಲಾ ಕುಂದುಕೊರತೆಗಳನ್ನು ಅಲಕ್ಷಿಸಬೇಕೆಂದು ನಾವು ಅಪೇಕ್ಷಿಸಬೇಕೋ?

ಮೋಶೆ ಮತ್ತು ದಾವೀದ

ಮೋಶೆಯ ವೃತ್ತಾಂತವನ್ನು ಪರಿಗಣಿಸಿರಿ. ಅವನು “ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು” ಎಂದು ಹೆಸರುವಾಸಿಯಾಗಿದ್ದನು ಮತ್ತು ಅವನು ಈ ಒಳ್ಳೆಯ ಗುಣವನ್ನು ಕಾಪಾಡಿಕೊಳ್ಳಲು ಹೆಣಗಾಡಿದನು. (ಅರಣ್ಯಕಾಂಡ 12:3) ಇಸ್ರಾಯೇಲ್ಯರು ಅರಣ್ಯದಲ್ಲಿ ಪ್ರಯಾಣಿಸಿದಾಗ, ಅನೇಕವೇಳೆ ಅವಿವೇಕತನದಿಂದ ನಡೆದುಕೊಂಡರು ಮತ್ತು ದೇವರಿಗೆ ಹಾಗೂ ಆತನ ಪ್ರತಿನಿಧಿಗಳಿಗೆ ಅಗೌರವವನ್ನು ತೋರಿಸಿದರು.​—⁠ಅರಣ್ಯಕಾಂಡ 16:12-14, 28-30.

ಆದರೆ ಆ ದೀರ್ಘ ಪ್ರಯಾಸಕರ ಪ್ರಯಾಣವು ಕೊನೆಗೊಳ್ಳುತ್ತಿರುವಾಗ, ಅವನು ಇಡೀ ಜನಾಂಗದ ಮುಂದೆ ತನ್ನ ತಾಳ್ಮೆಯನ್ನು ಕಳೆದುಕೊಂಡು ದೇವರ ನಿರ್ದೇಶನಗಳಿಗೆ ಅವಿಧೇಯನಾದನು. ದೇವರು ಅವನನ್ನು ಕ್ಷಮಿಸಿದನು ನಿಜ, ಆದರೆ ಆತನು ಆ ಘಟನೆಯನ್ನು ಅಲಕ್ಷಿಸಿದನೋ? ಇಲ್ಲ. ಆತನು ಮೋಶೆ ಮತ್ತು ಆರೋನರಿಗೆ ಹೇಳಿದ್ದು: “ನೀವು ನನ್ನನ್ನು ನಂಬದವರಾಗಿ . . . ಈ ಸಮೂಹದವರನ್ನು ನಾನು ಅವರಿಗೆ ವಾಗ್ದಾನಮಾಡಿದ ದೇಶದೊಳಕ್ಕೆ ನೀವು ಕರಕೊಂಡು ಹೋಗಕೂಡದು.” ಮೋಶೆಯು ವಾಗ್ದತ್ತ ದೇಶವನ್ನು ಪ್ರವೇಶಿಸದಿರುವನು. ಆ ಅದ್ಭುತಕರ ಸುಯೋಗಕ್ಕಾಗಿ 40 ವರ್ಷಗಳ ವರೆಗೆ ಹೆಣಗಾಡಿದ ನಂತರ, ಒಂದು ಗಂಭೀರವಾದ ಮಾನವ ದೌರ್ಬಲ್ಯವು ಅವನು ತನ್ನ ಬಹುಮಾನವನ್ನು ಕಳಕೊಳ್ಳುವಂತೆ ಮಾಡಿತು.​—⁠ಅರಣ್ಯಕಾಂಡ 20:7-12.

ದೇವಭಕ್ತನಾಗಿದ್ದ ರಾಜ ದಾವೀದನಲ್ಲಿಯೂ ಒಂದು ಬಲಹೀನತೆಯಿತ್ತು. ಒಂದು ಸಂದರ್ಭದಲ್ಲಿ ಅವನು ಕಾಮಪ್ರಚೋದನೆಗೆ ಬಲಿಯಾಗಿ ಇನ್ನೊಬ್ಬನ ಹೆಂಡತಿಯೊಂದಿಗೆ ಸಂಭೋಗ ಮಾಡಿದನು. ತರುವಾಯ ತನ್ನ ತಪ್ಪನ್ನು ಮುಚ್ಚಿಹಾಕಲು ಅವಳ ಗಂಡನು ಕೊಲ್ಲಲ್ಪಡುವಂತೆ ನೋಡಿಕೊಂಡನು. (2 ಸಮುವೇಲ 11:2-27) ತದನಂತರ, ತನ್ನ ಪಾಪಕೃತ್ಯಗಳ ಬಗ್ಗೆ ಅವನು ಗಾಢವಾಗಿ ವಿಷಾದಿಸಿದನು, ಮತ್ತು ದೇವರು ಅವನನ್ನು ಕ್ಷಮಿಸಿದನು. ಆದರೆ ದಾವೀದನು ಒಂದು ಕುಟುಂಬವನ್ನು ನಾಶಗೊಳಿಸಿದ್ದನು. ಮತ್ತು ದೇವರು ಅದರ ನಂತರ ಬಂದ ಧ್ವಂಸಕಾರಕ ಪರಿಣಾಮಗಳಿಂದ ಅವನನ್ನು ಸಂರಕ್ಷಿಸಲಿಲ್ಲ. ದಾವೀದನ ಗಂಡು ಮಗು ತುಂಬ ಅಸ್ವಸ್ಥವಾಯಿತು, ಮತ್ತು ಆ ಮಗುವಿನ ಸಂಬಂಧದಲ್ಲಿ ದಾವೀದನು ಪ್ರಾರ್ಥನೆಗಳನ್ನು ಮಾಡಿದರೂ ಯೆಹೋವನು ವಿಷಯಗಳನ್ನು ಸರಿಪಡಿಸಲಿಲ್ಲ. ಮಗು ಸತ್ತುಹೋಯಿತು, ಮತ್ತು ಅಂದಿನಿಂದ ದಾವೀದನ ಮನೆವಾರ್ತೆಯ ಮೇಲೆ ದುರಂತಗಳು ಸರದಿಯಾಗಿ ಬಂದೆರಗಿದವು. (2 ಸಮುವೇಲ 12:13-18; 18:33) ನೈತಿಕ ದೌರ್ಬಲ್ಯಕ್ಕೆ ತುತ್ತಾದದ್ದಕ್ಕಾಗಿ ದಾವೀದನು ಭಾರಿ ಬೆಲೆಯನ್ನು ತೆರಬೇಕಾಯಿತು.

ಈ ಉದಾಹರಣೆಗಳು, ದೇವರು ಮಾನವರನ್ನು ತಮ್ಮ ನಡತೆಗಾಗಿ ಹೊಣೆಗಾರರನ್ನಾಗಿಸುತ್ತಾನೆ ಎಂಬುದನ್ನು ತೋರಿಸುತ್ತವೆ. ಆತನ ಸೇವೆ ಮಾಡಬೇಕೆಂದು ಬಯಸುವವರು, ತಮ್ಮ ಆತ್ಮಿಕತೆಯಲ್ಲಿ ಬಲಹೀನವಾದ ಕ್ಷೇತ್ರಗಳನ್ನು ಬಲಪಡಿಸಿಕೊಂಡು, ಉತ್ತಮ ಕ್ರೈಸ್ತರಾಗಬೇಕು. ಪ್ರಥಮ ಶತಮಾನದಲ್ಲಿ ಅನೇಕರು ಇದನ್ನು ಮಾಡಿದರು.

ಪಾಪವನ್ನು ಕಳಚಿಹಾಕಲಿಕ್ಕಾಗಿ ಹೋರಾಟ

ಅಪೊಸ್ತಲ ಪೌಲನು ಕ್ರಿಸ್ತೀಯ ಜೀವನದ ಒಳ್ಳೆಯ ಮಾದರಿಯಾಗಿ ಪರಿಗಣಿಸಲ್ಪಡುತ್ತಾನೆ. ಆದರೆ ಅವನು ತನ್ನ ಬಲಹೀನತೆಗಳ ವಿರುದ್ಧ ಸತತವಾಗಿ ಹೋರಾಡುತ್ತಿದ್ದನು ಎಂಬುದು ನಿಮಗೆ ಗೊತ್ತಿತ್ತೋ? ರೋಮಾಪುರ 7:​18-25 ಈ ಘರ್ಷಣೆಯನ್ನು ಅಥವಾ 23ನೆಯ ವಚನಕ್ಕನುಸಾರ ಈ ‘ಕಾದಾಟ’ವನ್ನು ಸವಿವರವಾಗಿ ವರ್ಣಿಸುತ್ತದೆ. ಪಾಪದ ಕೊಂಡಿಗಳು ನಿರಂತರವಾಗಿ ಎಳೆಯುತ್ತಿರುತ್ತವೆ ಎಂಬುದನ್ನು ತಿಳಿದವನಾಗಿದ್ದು, ಪೌಲನು ಎಡೆಬಿಡದೆ ಹೋರಾಡಿದನು.​—⁠1 ಕೊರಿಂಥ 9:26, 27.

ಪುರಾತನ ಕೊರಿಂಥದ ಕ್ರೈಸ್ತ ಸಭೆಯ ಕೆಲವು ಸದಸ್ಯರು ಹಿಂದೆ ರೂಢಿಗತವಾಗಿ ತಪ್ಪುಗಳನ್ನು ಮಾಡುವವರಾಗಿದ್ದರು. ಅವರು ‘ಜಾರರು ವ್ಯಭಿಚಾರಿಗಳು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡಿಕರು’ ಆಗಿದ್ದರು ಎಂದು ಬೈಬಲು ಹೇಳುತ್ತದೆ. ಆದರೆ ಅವರು ‘ತೊಳೆಯಲ್ಪಟ್ಟರು’ ಎಂದೂ ಅದು ತಿಳಿಸುತ್ತದೆ. (1 ಕೊರಿಂಥ 6:9-11) ಹೇಗೆ? ಅವರು ತಮ್ಮ ದುಷ್ಟ ಚಟುವಟಿಕೆಗಳನ್ನು ನಿಲ್ಲಿಸಲು ನಿಷ್ಕೃಷ್ಟ ಜ್ಞಾನ, ಕ್ರೈಸ್ತ ಸಾಹಚರ್ಯ, ಮತ್ತು ದೇವರಾತ್ಮದಿಂದ ಬಲಪಡಿಸಲ್ಪಟ್ಟರು. ಸಕಾಲದಲ್ಲಿ, ಅವರು ಕ್ರಿಸ್ತನ ಹೆಸರಿನಲ್ಲಿ ದೇವರಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟರು. ಹೌದು, ದೇವರು ಕ್ಷಮಾಪಣೆಯನ್ನು ಒದಗಿಸಿದನು ಮತ್ತು ಹೀಗೆ ಅವರು ಒಂದು ಶುದ್ಧ ಮನಸ್ಸಾಕ್ಷಿಯನ್ನು ಪಡೆದುಕೊಳ್ಳುವಂತಾಯಿತು.​—⁠ಅ. ಕೃತ್ಯಗಳು 2:38; 3:19.

ಪೌಲ ಮತ್ತು ಕೊರಿಂಥದಲ್ಲಿದ್ದ ಕ್ರೈಸ್ತರು ತಮ್ಮ ಪಾಪ ಪ್ರವೃತ್ತಿಗಳ ಗಂಭೀರತೆಯನ್ನು ಕಡಿಮೆಗೊಳಿಸಲಿಲ್ಲ. ಅವರು ಅವುಗಳ ವಿರುದ್ಧ ಹೋರಾಡಿದರು ಮತ್ತು ದೇವರ ಸಹಾಯದಿಂದ ಜಯಹೊಂದಿದರು. ತಮ್ಮ ಪರಿಸರ ಮತ್ತು ಅಪರಿಪೂರ್ಣ ಪ್ರವೃತ್ತಿಗಳ ಮಧ್ಯದಲ್ಲೂ ಪ್ರಥಮ ಶತಮಾನದ ಆರಾಧಕರು ನೈತಿಕವಾಗಿ ಸ್ತುತಿಗರ್ಹರಾದರು. ನಮ್ಮ ಕುರಿತಾಗಿ ಏನು?

ನಮ್ಮ ಬಲಹೀನತೆಗಳ ವಿರುದ್ಧ ಹೋರಾಡುವಂತೆ ದೇವರು ಅಪೇಕ್ಷಿಸುತ್ತಾನೆ

ಒಂದು ಬಲಹೀನತೆಯ ವಿರುದ್ಧ ಹೋರಾಡುವುದರಿಂದ ಅದು ಸಂಪೂರ್ಣವಾಗಿ ನಿರ್ನಾಮವಾಗದಿರಬಹುದು. ನಾವು ನಮ್ಮ ಅಪರಿಪೂರ್ಣತೆಗೆ ಅಧೀನರಾಗುವ ಆವಶ್ಯಕತೆಯಿಲ್ಲದಿರುವುದಾದರೂ, ನಾವು ಅದನ್ನು ನಾಶಮಾಡಸಾಧ್ಯವಿಲ್ಲ. ಪಟ್ಟುಹಿಡಿಯುವ ಬಲಹೀನತೆಗಳನ್ನು ಅದು ಪ್ರೇರಿಸುತ್ತದೆ. ಆದರೂ, ನಮ್ಮ ಬಲಹೀನತೆಗಳು ನಮ್ಮನ್ನು ವಶಪಡಿಸಿಕೊಳ್ಳುವಂತೆ ನಾವು ಬಿಡಬಾರದು. (ಕೀರ್ತನೆ 119:11) ಇದು ಏಕೆ ಪ್ರಾಮುಖ್ಯ?

ಏಕೆಂದರೆ, ಕೆಟ್ಟ ನಡತೆಗಾಗಿ ಯಾವಾಗಲೂ ಅಪರಿಪೂರ್ಣತೆಯನ್ನು ಒಂದು ನೆಪವಾಗಿ ಉಪಯೋಗಿಸಲು ದೇವರು ಅನುಮತಿಸುವುದಿಲ್ಲ. (ಯೂದ 4) ಮಾನವರು ತಮ್ಮನ್ನು ಶುದ್ಧೀಕರಿಸುವಂತೆ, ಒಳ್ಳೆಯ ನೈತಿಕ ಜೀವನಗಳನ್ನು ನಡೆಸುವಂತೆ ಯೆಹೋವನು ಬಯಸುತ್ತಾನೆ. ಬೈಬಲ್‌ ಹೇಳುವುದು: ‘ಕೆಟ್ಟತನವನ್ನು ಹೇಸಿರಿ.’ (ರೋಮಾಪುರ 12:9) ಇಂತಹ ಕಟ್ಟುನಿಟ್ಟಿನ ನಿಲುವನ್ನು ದೇವರು ಏಕೆ ತೆಗೆದುಕೊಳ್ಳುತ್ತಾನೆ?

ಬಲಹೀನತೆಗಳಿಗೆ ಮಣಿಯುವುದು ಹಾನಿಕರವಾಗಿದೆ ಎಂಬುದು ಒಂದು ಕಾರಣ. ಬೈಬಲು ಗಲಾತ್ಯ 6:7ರಲ್ಲಿ, “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು,” ಎಂದು ಹೇಳುತ್ತದೆ. ಯಾರು ದುಶ್ಚಟಗಳು, ಈರ್ಷ್ಯೆ ಮತ್ತು ಸ್ವೇಚ್ಛಾಚಾರಕ್ಕೆ ಬಲಿಯಾಗುತ್ತಾರೋ ಅವರು ಅನೇಕವೇಳೆ ತಮ್ಮ ಜೀವನಗಳಲ್ಲಿ ಘೋರವಾದ ಕೊಯ್ಲನ್ನು ಕೊಯ್ಯುತ್ತಾರೆ. ಆದರೆ ಮತ್ತೊಂದು ಅತಿ ಪ್ರಾಮುಖ್ಯವಾದ ಕಾರಣವೂ ಇದೆ.

ಪಾಪವು ದೇವರನ್ನು ಅಪ್ರಸನ್ನಗೊಳಿಸುತ್ತದೆ. ಅದು ನಮ್ಮನ್ನು ಯೆಹೋವನಿಂದ “ಅಗಲಿಸು”ತ್ತದೆ. (ಯೆಶಾಯ 59:2) ಪಾಪವನ್ನು ರೂಢಿಗತವಾಗಿ ಮಾಡುವವರು ಯೆಹೋವನ ಅನುಗ್ರಹವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲದ ಕಾರಣ, ಆತನು ಅಂಥವರನ್ನು ಪ್ರೋತ್ಸಾಹಿಸುವುದು: “ನಿಮ್ಮನ್ನು ತೊಳೆದುಕೊಳ್ಳಿರಿ, ಶುದ್ಧಿಮಾಡಿಕೊಳ್ಳಿರಿ, . . . ದುರಾಚಾರವನ್ನು ಬಿಡಿರಿ.”​—⁠ಯೆಶಾಯ 1:16.

ನಮ್ಮ ಸೃಷ್ಟಿಕರ್ತನು ಪ್ರೀತಿಪರನೂ ಕರುಣೆಯುಳ್ಳವನೂ ಆಗಿದ್ದಾನೆ. “ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸು”ವವನಾಗಿದ್ದಾನೆ. (2 ಪೇತ್ರ 3:9) ಸದಾ ಬಲಹೀನತೆಗಳಿಗೆ ಮಣಿಯುವುದು, ದೇವರ ಅನುಗ್ರಹವನ್ನು ಪಡೆಯುವುದರಿಂದ ನಮ್ಮನ್ನು ತಡೆಯುತ್ತದೆ. ದೇವರು ನಮ್ಮ ಬಲಹೀನತೆಗಳನ್ನು ಅಲಕ್ಷಿಸದ ಕಾರಣ, ನಾವು ಕೂಡ ಅವುಗಳನ್ನು ಅಲಕ್ಷಿಸಬಾರದು. (g02 11/08)

[ಪಾದಟಿಪ್ಪಣಿ]

^ ಯೇಸು ಹೇಳಿದ್ದು: “ಮನಸ್ಸು ಸಿದ್ಧವಾಗಿದೆ . . . ಆದರೆ ದೇಹಕ್ಕೆ ಬಲ ಸಾಲದು.”