ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀರು ಎಲ್ಲಿಗೆ ಹೋಗುತ್ತದೆ?

ನೀರು ಎಲ್ಲಿಗೆ ಹೋಗುತ್ತದೆ?

ನೀರು ಎಲ್ಲಿಗೆ ಹೋಗುತ್ತದೆ?

ಆಸ್ಟ್ರೇಲಿಯದಲ್ಲಿರುವ ಎಚ್ಚರ! ಲೇಖಕರಿಂದ

ಗಾಬರಿ! ಇದೇ ನನ್ನ ಮೊದಲ ಪ್ರತಿಕ್ರಿಯೆಯಾಗಿತ್ತು. ನನ್ನ ಬಚ್ಚಲುಮನೆಯ ನೆಲದಲ್ಲಿ ಚರಂಡಿಯಿಂದ ಮೇಲೆ ಬರುತ್ತಾ ಇದ್ದ ಬೂದುಬಣ್ಣದ ದ್ರವವು, ನನ್ನ ಅಪಾರ್ಟ್‌ಮೆಂಟನ್ನು ದುರ್ವಾಸನೆಯಿಂದ ಕೂಡಿರುವ ಕೊಳಚೆ ನೆಲವಾಗಿ ಮಾಡುವ ಬೆದರಿಕೆಯನ್ನೊಡ್ಡುತ್ತಿತ್ತು. ಆ ಕೂಡಲೆ ನಾನು ಸಹಾಯಕ್ಕಾಗಿ ಕೊಳಾಯಿಗಾರನನ್ನು ಕರೆದೆ. ಹೆದರಿಕೆಯಿಂದ ಬಾಯಿ ಒಣಗಿ ಹೋಗಿ, ಆ ಗಲೀಜು ನೀರು ನಿಧಾನವಾಗಿ ನನ್ನ ಕಾಲುಚೀಲಗಳನ್ನು ತೋಯಿಸುತ್ತಿದ್ದು ನಾನು ಹತಾಶೆಯಿಂದ ಕಾಯುತ್ತಿದ್ದಾಗ, ‘ಈ ನೀರೆಲ್ಲಾ ಎಲ್ಲಿಂದ ಬಂತು?’ ಎಂದು ನಾನು ಕುತೂಹಲಪಟ್ಟೆ.

ಆ ಕೊಳಾಯಿಗಾರನು ತಾಳ್ಮೆಯಿಂದ ಚರಂಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಂಥ ಕಸವನ್ನು ತೆಗೆಯುತ್ತಿದ್ದಾಗ ಹೀಗೆ ವಿವರಿಸಿದನು: “ನಗರದ ಸರಾಸರಿ ನಿವಾಸಿಗಳು ದಿನವೊಂದಕ್ಕೆ 200ರಿಂದ 400 ಲೀಟರ್‌ಗಳಷ್ಟು [50ರಿಂದ 100 ಗ್ಯಾಲನ್‌ಗಳು] ನೀರನ್ನು ಉಪಯೋಗಿಸುತ್ತಾರೆ. ಒಂದು ವರ್ಷಕ್ಕೆ ಪ್ರತಿಯೊಬ್ಬ ಗಂಡಸು, ಹೆಂಗಸು ಮತ್ತು ಮಗುವಿನ ಉಪಯೋಗಕ್ಕಾಗಿ ಸುಮಾರು 1,00,000 ಲೀಟರ್‌ಗಳಷ್ಟು [25,000 ಗ್ಯಾಲನ್‌ಗಳು] ನೀರು ಚರಂಡಿಗೆ ಹೋಗುತ್ತದೆ.” ಆಗ ನಾನು ಕೇಳಿದ್ದು: “ನಾನು ಅಷ್ಟೊಂದು ಪ್ರಮಾಣದ ನೀರನ್ನು ಹೇಗೆ ಉಪಯೋಗಿಸಸಾಧ್ಯವಿದೆ? ಖಂಡಿತವಾಗಿಯೂ ನಾನಷ್ಟು ನೀರನ್ನು ಕುಡಿಯುವುದಿಲ್ಲ!” ಅವನು ಉತ್ತರಿಸಿದ್ದು: “ನೀವು ಅಷ್ಟು ನೀರನ್ನು ಕುಡಿಯುವುದಿಲ್ಲ ನಿಜ, ಆದರೆ ಪ್ರತಿ ದಿನ ನೀವು ಸ್ನಾನಮಾಡುತ್ತೀರಿ, ಟಾಯ್ಲೆಟ್‌ ಫ್ಲಶ್‌ಮಾಡುತ್ತೀರಿ, ಮತ್ತು ಬಟ್ಟೆ ಒಗೆಯುವ ಯಂತ್ರವನ್ನೋ ಪಾತ್ರೆ ತೊಳೆಯುವ ಯಂತ್ರವನ್ನೋ ಉಪಯೋಗಿಸುತ್ತೀರಿ. ಈ ರೀತಿಯಲ್ಲಿ ಮತ್ತು ಇತರ ರೀತಿಗಳಲ್ಲಿ, ಆಧುನಿಕ ಜೀವನ ಶೈಲಿಯು ನಮ್ಮ ಅಜ್ಜಅಜ್ಜಿಯರು ಉಪಯೋಗಿಸಿದ ನೀರಿಗಿಂತ ಎರಡು ಪಟ್ಟು ಹೆಚ್ಚು ನೀರನ್ನು ಉಪಯೋಗಿಸುವಂತೆ ಮಾಡಿದೆ.” ಆಗ, ‘ಆ ನೀರೆಲ್ಲಾ ಎಲ್ಲಿಗೆ ಹೋಗುತ್ತದೆ?’ ಎಂಬ ಪ್ರಶ್ನೆ ತತ್‌ಕ್ಷಣವೇ ನನ್ನ ಮನಸ್ಸಿನಲ್ಲಿ ಉದ್ಭವಿಸಿತು.

ನಾವು ಜೀವಿಸುತ್ತಿರುವ ದೇಶ ಅಥವಾ ನಗರದ ಮೇಲೆ ಹೊಂದಿಕೊಂಡು, ಪ್ರತಿ ದಿನ ಚರಂಡಿಯ ಮೂಲಕ ಹೊರಗೆ ಹೋಗುವ ನೀರನ್ನು ತೀರ ಭಿನ್ನವಾದ ರೀತಿಯಲ್ಲಿ ಶುದ್ಧೀಕರಿಸಲಾಗುತ್ತದೆ ಎಂಬುದನ್ನು ನಾನು ಕಂಡುಕೊಂಡೆ. ಕೆಲವು ದೇಶಗಳಲ್ಲಿ ಇದು ಈಗ ಜೀವನ್ಮರಣಗಳ ಸಂಗತಿಯಾಗಿದೆ. (23ನೇ ಪುಟದಲ್ಲಿರುವ ಚೌಕಗಳನ್ನು ನೋಡಿರಿ.) ಸ್ಥಳಿಕ ಮಲಿನ ಜಲಶುದ್ಧೀಕರಣ ಸ್ಥಾವರಕ್ಕೆ ನಾನು ಭೇಟಿ ನೀಡುವಾಗ ನನ್ನೊಂದಿಗೆ ಬನ್ನಿರಿ ಮತ್ತು ನೀರು ಎಲ್ಲಿಗೆ ಹೋಗುತ್ತದೆ ಹಾಗೂ ನೀವು ಎಲ್ಲಿಯೇ ಜೀವಿಸುತ್ತಿರಲಿ, ಚರಂಡಿಯಲ್ಲಿ ಅಥವಾ ಟಾಯ್ಲೆಟ್‌ನಲ್ಲಿ ಗಲೀಜು ನೀರನ್ನು ಅಥವಾ ವಸ್ತುಗಳನ್ನು ಎಸೆಯುವ ಮುಂಚೆ ನೀವು ತುಂಬ ಜಾಗರೂಕತೆಯಿಂದ ಆಲೋಚಿಸುವುದು ಏಕೆ ಪ್ರಯೋಜನಕರವಾಗಿದೆ ಎಂಬುದನ್ನು ನೀವೇ ಕಂಡುಹಿಡಿಯಿರಿ.

ಮಲಿನ ಜಲಶುದ್ಧೀಕರಣ ಸ್ಥಾವರವನ್ನು ಸಂದರ್ಶಿಸುವುದು

ಮಲಿನ ಜಲಶುದ್ಧೀಕರಣ ಸ್ಥಾವರವು, ಸಂದರ್ಶಿಸಲು ಆಕರ್ಷಕವಾಗಿರುವಂಥ ಒಂದು ಸ್ಥಳವಾಗಿಲ್ಲವಲ್ಲ ಎಂದು ನೀವು ಆಲೋಚಿಸುತ್ತಿದ್ದೀರಿ ಎಂಬುದು ನನಗೆ ಗೊತ್ತು. ನಾನೂ ನಿಮ್ಮ ಅಭಿಪ್ರಾಯವನ್ನು ಸಮ್ಮತಿಸುತ್ತೇನೆ. ಆದರೂ, ನಮ್ಮ ನಗರವು ತನ್ನ ಸ್ವಂತ ಕಸದಲ್ಲಿ ಮುಳುಗಿಹೋಗದಂತೆ ತಡೆಯಲಿಕ್ಕಾಗಿ ನಮ್ಮಲ್ಲಿ ಅಧಿಕಾಂಶ ಮಂದಿ ಇಂಥ ಒಂದು ಸ್ಥಾವರದ ಮೇಲೆಯೇ ಹೊಂದಿಕೊಂಡಿದ್ದೇವೆ. ಮತ್ತು ಈ ಸ್ಥಾವರಗಳು ಸರಿಯಾಗಿ ಕಾರ್ಯನಡಿಸುವಂತೆ ಸಹಾಯಮಾಡುವುದರಲ್ಲಿ ನಾವೆಲ್ಲರೂ ಒಂದು ಪಾತ್ರವನ್ನು ವಹಿಸುತ್ತೇವೆ. ಸುಪ್ರಸಿದ್ಧವಾದ ಸಿಡ್ನಿ ಹಾರ್ಬರಿನ ಸ್ವಲ್ಪ ದಕ್ಷಿಣಕ್ಕೆ ಮಲಬಾರ್‌ನಲ್ಲಿರುವ ಮೂಲಭೂತ ಶುದ್ಧೀಕರಣ ಸ್ಥಾವರವೇ ನಮ್ಮ ಗಮ್ಯಸ್ಥಾನವಾಗಿದೆ. ನನ್ನ ಬಚ್ಚಲುಮನೆಯಿಂದ ಹೊರಟ ನೀರು ಆ ಸ್ಥಾವರಕ್ಕೆ ಹೇಗೆ ತಲಪುತ್ತದೆ?

ನಾನು ಟಾಯ್ಲೆಟನ್ನು ಫ್ಲಶ್‌ಮಾಡಿದಾಗ, ಸಿಂಕನ್ನು ಖಾಲಿಮಾಡುವಾಗ, ಅಥವಾ ಸ್ನಾನಮಾಡಿದಾಗ, ನೀರು ಮಲಿನ ಜಲಶುದ್ಧೀಕರಣ ಸ್ಥಾವರದ ಕಡೆಗೆ ಪ್ರಯಾಣಿಸುತ್ತದೆ. ಸುಮಾರು 30 ಮೈಲಿಗಳಷ್ಟು ದೂರ ಪ್ರಯಾಣಿಸಿದ ಬಳಿಕ, ಒಂದು ದಿನಕ್ಕೆ 48 ಕೋಟಿ ಲೀಟರ್‌ಗಳಷ್ಟು ಪ್ರಮಾಣದಲ್ಲಿ ಶುದ್ಧೀಕರಣ ಸ್ಥಾವರಕ್ಕೆ ರಭಸವಾಗಿ ಹರಿಯುತ್ತಿರುವ ನೀರಿನೊಂದಿಗೆ ಈ ನೀರೂ ಜೊತೆಗೂಡುತ್ತದೆ.

ಈ ಶುದ್ಧೀಕರಣ ಸ್ಥಾವರವು ಕಣ್ಣುಗಳಿಗೆ ಮತ್ತು ಮೂಗಿಗೆ ಏಕೆ ಅಹಿತಕರವಾಗಿರುವುದಿಲ್ಲ ಎಂಬುದನ್ನು ವಿವರಿಸುತ್ತಾ, ಆ ಸಮುದಾಯದ ಸಂಪರ್ಕಾಧಿಕಾರಿಯಾಗಿರುವ ರಾಸ್‌ ಅವರು ನನಗೆ ಹೇಳಿದ್ದು: “ಈ ಸ್ಥಾವರದ ಹೆಚ್ಚಿನ ಭಾಗವು ನೆಲದಡಿಯಲ್ಲಿದೆ. ಇದು ಅದರಿಂದ ಹೊರಡುವ ಅನಿಲಗಳನ್ನು ನಾವು ತಡೆಗಟ್ಟಿ, ಗಾಳಿಕೊಳವೆಯ ಮೂಲಕ ಅನಿಲವನ್ನು ಸೋಸುವ ಫಿಲ್ಟರ್‌ಗಳಿಗೆ (ಮಡಕೆಯಾಕಾರದ ಹೊಗೆಕೊಳವೆಗಳ ಸಾಲು) ಅವುಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಈ ಫಿಲ್ಟರ್‌ಗಳಲ್ಲಿ ಅಸಹ್ಯಕರವಾದ ದುರ್ವಾಸನೆಯು ಸಂಪೂರ್ಣವಾಗಿ ನಿರ್ಮೂಲನಮಾಡಲ್ಪಡುತ್ತದೆ. ತದನಂತರ ಶುದ್ಧೀಕರಿಸಲ್ಪಟ್ಟ ಗಾಳಿಯನ್ನು ವಾಯುಮಂಡಲಕ್ಕೆ ಬಿಡುಗಡೆಮಾಡಲಾಗುತ್ತದೆ. ಈ ಸ್ಥಾವರದ ಸುತ್ತಲೂ ಸಾವಿರಾರು ಮನೆಗಳು ಇರುವುದಾದರೂ, ವಾಸನೆಯ ಸಮಸ್ಯೆಗಳ ಕುರಿತು ದೂರುವ ವಿಷಯದಲ್ಲಿ ನನಗೆ ಬರುವ ಫೋನ್‌ ಕರೆಗಳು ಒಂದು ವರ್ಷಕ್ಕೆ ಕೆಲವೇ ಆಗಿವೆ.” ಅನಿವಾರ್ಯವಾಗಿ, ಇದರ ನಂತರ ರಾಸ್‌ ನಮ್ಮನ್ನು ಕರೆದುಕೊಂಡುಹೋಗುತ್ತಿರುವುದು, ಆ “ವಾಸನೆಯ ಸಮಸ್ಯೆಗಳ” ಮೂಲಗಳು ಇರುವ ಸ್ಥಳಕ್ಕೇ.

ಮಲಿನ ಜಲ ಎಂದರೇನು?

ಸ್ಥಾವರದೊಳಗೆ ಹೋಗಲಿಕ್ಕಾಗಿ ನಾವು ಸ್ವಲ್ಪ ಕೆಳಗೆ ಇಳಿದಾಗ, ನಮ್ಮ ಗೈಡ್‌ ನಮಗೆ ಹೇಳುವುದು: “ಮಲಿನ ಜಲ ಅಂದರೆ, 99.9 ಪ್ರತಿಶತ ನೀರು ಮತ್ತು ಮಾನವ ಮಲ, ರಾಸಾಯನಿಕಗಳು, ಮತ್ತು ಇನ್ನಿತರ ಚಿಕ್ಕಪುಟ್ಟ ವಸ್ತುಗಳೇ. 55,000-ಹೆಕ್ಟೇರು [1,30,000 ಎಕ್ರೆ]ಗಳಷ್ಟು ವಿಸ್ತಾರವಾದ ಕ್ಷೇತ್ರದಲ್ಲಿರುವ ಮನೆಗಳು ಮತ್ತು ಕಾರ್ಖಾನೆಗಳಿಂದ ಸಂಗ್ರಹಿಸಲ್ಪಟ್ಟು, 20,000 ಕಿಲೊಮೀಟರು [12,000 ಮೈಲು]ಗಳಷ್ಟು ಉದ್ದದ ಪೈಪುಗಳ ಮೂಲಕ ಹರಿದುಬರುವ ಮಲಿನ ಜಲವು, ಸಮುದ್ರ ಮಟ್ಟಕ್ಕಿಂತ 2 ಮೀಟರು [6 ಅಡಿಗಳು]ಗಳಷ್ಟು ಕೆಳಗಿರುವ ಸ್ಥಾವರವನ್ನು ಪ್ರವೇಶಿಸುತ್ತದೆ. ಇಲ್ಲಿ ಈ ಜಲವು ಬೇರೆ ಬೇರೆ ಜಾಲರಿಗಳ ಮೂಲಕ ಹಾದುಹೋಗುತ್ತದೆ. ಹೀಗೆ ಹಾದುಹೋಗುವಾಗ, ಚಿಂದಿಬಟ್ಟೆಗಳು, ಕಲ್ಲುಗಳು, ಪೇಪರ್‌ಗಳು ಮತ್ತು ಪ್ಲ್ಯಾಸ್ಟಿಕ್‌ಗಳು ಅದರಿಂದ ಪ್ರತ್ಯೇಕಿಸಲ್ಪಡುತ್ತವೆ. ತದನಂತರ, ಗ್ರಿಟ್‌ (ಮರಳಿನ ಅಥವಾ ಕಲ್ಲಿನ ಸಣ್ಣ ಕಣಗಳಿಂದ ಕೂಡಿದ) ಚೇಂಬರ್‌ಗಳಲ್ಲಿ ಜೈವಿಕ ವಸ್ತುಗಳು ಗಾಳಿಗುಳ್ಳೆಗಳ ಸಹಾಯದಿಂದ ನೀರಿನ ಮೇಲೆ ತೇಲುತ್ತವೆ ಮತ್ತು ಹೆಚ್ಚು ಭಾರವಾದ ಗ್ರಿಟ್‌ ನಿಧಾನವಾಗಿ ತಳದಲ್ಲಿ ಶೇಖರವಾಗುತ್ತದೆ. ತಳದಲ್ಲಿರುವ ಎಲ್ಲಾ ಅಜೈವಿಕ ಕಸವನ್ನು ಸಂಗ್ರಹಿಸಿ, ನೆಲಭರ್ತಿಗಾಗಿ ಕಳುಹಿಸಲಾಗುತ್ತದೆ. ಇದರ ನಂತರ ಉಳಿದಿರುವ ಮಲಿನ ಜಲವನ್ನು 15 ಮೀಟರುಗಳಷ್ಟು [50 ಅಡಿಗಳು] ದೂರದಲ್ಲಿರುವ ಮಡ್ಡಿಸೇರುವ ತೊಟ್ಟಿಗಳಿಗೆ (ಸೆಡಿಮೆಂಟೇಷನ್‌ ಟ್ಯಾಂಕ್ಸ್‌) ಪಂಪ್‌ಮಾಡಲಾಗುತ್ತದೆ.”

ಈ ಟ್ಯಾಂಕ್‌ಗಳು ಕಾಲ್ಚೆಂಡಾಟದ ಬಯಲಿನಷ್ಟು ಗಾತ್ರದ ಕ್ಷೇತ್ರವನ್ನು ಆವರಿಸುತ್ತವೆ, ಮತ್ತು ವಾಸನೆಯಿಂದ ಕೂಡಿರುವ ಗಾಳಿಯನ್ನು ಶುದ್ಧೀಕರಿಸುವ ವ್ಯವಸ್ಥೆಯು ಇಷ್ಟೊಂದು ಪರಿಣಾಮಕಾರಿಯಾಗಿರದಿದ್ದಲ್ಲಿ ನೆರೆಹೊರೆಯವರು ಎಷ್ಟು ದೂರುತ್ತಿದ್ದರು ಎಂಬುದನ್ನು ನೀವು ಅರ್ಥಮಾಡಿಕೊಳ್ಳುವುದು ಇಲ್ಲಿಯೇ. ನೀರು ನಿಧಾನವಾಗಿ ಈ ಟ್ಯಾಂಕ್‌ಗಳ ಮೂಲಕ ಹರಿಯುವಾಗ, ಎಣ್ಣೆ ಹಾಗೂ ಜಿಡ್ಡು ನೀರಿನ ಮೇಲ್ಮೈಯಲ್ಲಿ ತೇಲುತ್ತದೆ ಮತ್ತು ಇದನ್ನು ಅಲ್ಲಿಂದ ತೆಗೆಯಲಾಗುತ್ತದೆ. ಸ್ಲಡ್ಜ್‌ (ಕೆಸರು) ಎಂದು ಕರೆಯಲ್ಪಡುವ ಜೈವಿಕ ಕಸವು ಮಾತ್ರ ತಳಭಾಗದಲ್ಲಿ ಶೇಖರವಾಗುತ್ತದೆ, ಮತ್ತು ದೊಡ್ಡ ಯಾಂತ್ರಿಕ ಬ್ಲೇಡುಗಳು ಮಡ್ಡಿಯನ್ನು ಕೆರೆದುಹಾಕುತ್ತವೆ ಹಾಗೂ ಇನ್ನೂ ಹೆಚ್ಚಿನ ಶುದ್ಧೀಕರಣಕ್ಕಾಗಿ ಇದನ್ನು ಬೇರೆಡೆಗೆ ಪಂಪ್‌ಮಾಡಲಾಗುತ್ತದೆ.

ಪರಿಷ್ಕರಿಸಲ್ಪಟ್ಟ ಮಲಿನ ಜಲವು, ಮೂರು ಕಿಲೊಮೀಟರುಗಳಷ್ಟು ಉದ್ದದ ನೆಲದಡಿಯ ನದೀಮುಖ ಸುರಂಗದ ಮೂಲಕ ಸಮುದ್ರಕ್ಕೆ ಹರಿಯುತ್ತದೆ. ಅಲ್ಲಿ ನೀರು ಮಹಾ ಸಾಗರದ ತಳಕ್ಕೆ ಏರುತ್ತದೆ ಮತ್ತು ಅಲೆಗಳ 60ರಿಂದ 80 ಮೀಟರುಗಳಷ್ಟು ಕೆಳಗೆ ಸಮುದ್ರದಲ್ಲಿ ಲೀನವಾಗುತ್ತದೆ. ಕರಾವಳಿಯ ನೀರಿನ ಬಲವಾದ ಪ್ರವಾಹಗಳು ಮಲಿನ ಜಲವನ್ನು ಎಲ್ಲಾ ಕಡೆಗೂ ಚೆದರಿಸಿಬಿಡುತ್ತವೆ, ಮತ್ತು ಉಪ್ಪು ನೀರಿನ ಸಹಜವಾದ ಸೋಂಕುನಿವಾರಕ ಗುಣಲಕ್ಷಣವು ಶುದ್ಧೀಕರಣ ಕಾರ್ಯವಿಧಾನವನ್ನು ಮುಗಿಸುತ್ತದೆ. ಶುದ್ಧೀಕರಣ ಸ್ಥಾವರದಲ್ಲಿ ಉಳಿದಿರುವ ಕೆಸರನ್ನು ಆನೇರೋಬಿಕ್‌ ಡೈಜೆಸ್ಟರ್‌ (ನಿರ್ವಾತಜೀವಿ ಸಂಗ್ರಾಹಕ)ಗಳೆಂದು ಕರೆಯಲ್ಪಡುವ ದೊಡ್ಡ ಟ್ಯಾಂಕ್‌ಗಳಿಗೆ ಪಂಪ್‌ಮಾಡಲಾಗುತ್ತದೆ. ಅಲ್ಲಿ ಬ್ಯಾಕ್ಟೀರಿಯಗಳು ಜೈವಿಕ ವಸ್ತುವನ್ನು ಕೊಳೆಸಿ, ಅದನ್ನು ಮಿಥೇನ್‌ ಅನಿಲವಾಗಿಯೂ ವಿಭಜಿತ ಕೆಸರಾಗಿಯೂ (ಸ್ಟೇಬಲ್‌ ಸ್ಲಡ್ಜ್‌) ಮಾರ್ಪಡಿಸುತ್ತವೆ.

ಕೆಸರಿನಿಂದ ಮಣ್ಣಿಗೆ

ಇಷ್ಟೆಲ್ಲಾ ನೋಡಿದ ಬಳಿಕ, ನೆಮ್ಮದಿಯ ನಿಟ್ಟುಸಿರಿನೊಂದಿಗೆ ನಾನು ರಾಸ್‌ ಜೊತೆ ತಾಜಾ ಗಾಳಿಯಿರುವಲ್ಲಿಗೆ ಅಂದರೆ ಮೇಲಕ್ಕೆ ಬಂದೆ, ಮತ್ತು ನಾವು ವಾಯುಭದ್ರ ಸ್ಲಡ್ಜ್‌ ಟ್ಯಾಂಕ್‌ಗಳಲ್ಲಿ ಒಂದರ ಮೇಲಕ್ಕೆ ಹತ್ತಿದೆವು. ರಾಸ್‌ ಮುಂದುವರಿಸುವುದು: “ಬ್ಯಾಕ್ಟೀರಿಯಗಳಿಂದ ಉಂಟುಮಾಡಲ್ಪಡುವ ಮಿಥೇನ್‌ ಅನಿಲವನ್ನು, ಇಲೆಕ್ಟ್ರಿಕ್‌ ಜನರೇಟರ್‌ಗಳಿಗೆ ವಿದ್ಯುತ್‌ ಶಕ್ತಿಯನ್ನು ಒದಗಿಸಲು ಉಪಯೋಗಿಸಲಾಗುತ್ತದೆ ಮತ್ತು ಇದು ಜಲಶುದ್ಧೀಕರಣ ಸ್ಥಾವರದ ಕಾರ್ಯಾಚರಣೆಗಾಗಿ 60 ಪ್ರತಿಶತಕ್ಕಿಂತಲೂ ಹೆಚ್ಚು ವಿದ್ಯುಚ್ಛಕ್ತಿಯನ್ನು ಸರಬರಾಜುಮಾಡುತ್ತದೆ. ಆ ವಿಭಜಿತ ಕೆಸರನ್ನು ಸೋಂಕುನಿವಾರಣೆಗೊಳಿಸಿ, ಅದಕ್ಕೆ ಸುಣ್ಣವನ್ನು ಕೂಡಿಸಲಾಗುತ್ತದೆ. ಇದು ಈ ಕೆಸರನ್ನು, ಜೈವಿಕಗೊಬ್ಬರ (ಬಯೋಸಾಲಿಡ್ಸ್‌) ಎಂದು ಕರೆಯಲ್ಪಡುವ ಸಸ್ಯಪೋಷಕ ಆಹಾರವನ್ನು ಸಮೃದ್ಧವಾಗಿ ಹೊಂದಿರುವ ಒಂದು ಪ್ರಯೋಜನಕರ ವಸ್ತುವಾಗಿ ಮಾರ್ಪಡಿಸುತ್ತದೆ. ಮಲಬಾರ್‌ ಜಲಶುದ್ಧೀಕರಣ ಸ್ಥಾವರ ಒಂದೇ ವರ್ಷಕ್ಕೆ 40,000 ಟನ್ನುಗಳಷ್ಟು ಜೈವಿಕಗೊಬ್ಬರವನ್ನು ಉತ್ಪಾದಿಸುತ್ತದೆ. ಹತ್ತು ವರ್ಷಗಳ ಹಿಂದೆ, ಸಂಸ್ಕರಿಸಲ್ಪಟ್ಟಿರದ ಕೆಸರನ್ನು ಸುಟ್ಟು ಬೂದಿಮಾಡಲಾಗುತ್ತಿತ್ತು ಅಥವಾ ಅದನ್ನು ಮಹಾ ಸಾಗರಕ್ಕೆ ಎಸೆಯಲಾಗುತ್ತಿತ್ತು; ಈಗ ಈ ಸಂಪನ್ಮೂಲವನ್ನು ಹೆಚ್ಚು ಲಾಭದಾಯಕವಾಗಿ ಉಪಯೋಗಿಸಲಾಗುತ್ತಿದೆ.”

ಈ ಕೆಳಗಿನಂತೆ ವಿವರಿಸಿದಂಥ ಒಂದು ಬ್ರೋಷರನ್ನು ರಾಸ್‌ ನನಗೆ ಕೊಟ್ಟರು: “ಈ ಜೈವಿಕಗೊಬ್ಬರವನ್ನು ಹಾಕಿದ ಬಳಿಕ, [ನ್ಯೂ ಸೌತ್‌ ವೇಲ್ಸ್‌ನ] ಅರಣ್ಯಗಳು ಬೆಳವಣಿಗೆಯಲ್ಲಿ 20 ಮತ್ತು 35 ಪ್ರತಿಶತದಷ್ಟು ಅಭಿವೃದ್ಧಿಯನ್ನು ತೋರಿಸುತ್ತಿವೆ.” ‘ಜೈವಿಕಗೊಬ್ಬರಗಳನ್ನು ಹಾಕಿರುವ ನೆಲದಲ್ಲಿ ಗೋಧಿಯನ್ನು’ ಬೆಳೆಸುವುದು, ‘ಸುಮಾರು 70 ಪ್ರತಿಶತದಷ್ಟು ಅಧಿಕ ಫಲವನ್ನು ಉತ್ಪಾದಿಸಿದೆ’ ಎಂದು ಸಹ ಅದು ಹೇಳುತ್ತದೆ. ನನ್ನ ತೋಟದಲ್ಲಿರುವ ಹೂವಿನ ಗಿಡಗಳಿಗೆ ಗೊಬ್ಬರವನ್ನು ಹಾಕಲಿಕ್ಕಾಗಿ, ಮಿಶ್ರ ಜೈವಿಕಗೊಬ್ಬರಗಳನ್ನು ಉಪಯೋಗಿಸುವುದು ಸಾಕಷ್ಟು ಸುರಕ್ಷಿತವಾದದ್ದಾಗಿದೆ ಎಂಬುದನ್ನು ನಾನು ಗಮನಿಸಿದ್ದೇನೆ.

ಕಣ್ಣಿಗೆ ಮರೆ, ಮನಸ್ಸಿಗೂ ಮರೆ

ಟೂರ್‌ನ ಅಂತ್ಯದಲ್ಲಿ, ಪೈಂಟ್‌, ಕೀಟನಾಶಕ, ಔಷಧಗಳು, ಅಥವಾ ಎಣ್ಣೆಯನ್ನು ಚರಂಡಿಯಲ್ಲಿ ಸುರಿಯುವುದು, ಜಲಶುದ್ಧೀಕರಣ ಸ್ಥಾವರದಲ್ಲಿರುವ ಬ್ಯಾಕ್ಟೀರಿಯಗಳನ್ನು ಸಾಯಿಸಿಬಿಡಬಹುದು ಮತ್ತು ಹೀಗೆ ನೀರಿನ ಪುನರುಪಯೋಗದ ಕಾರ್ಯವಿಧಾನಕ್ಕೆ ಇದು ತಡೆಯನ್ನೊಡ್ಡಸಾಧ್ಯವಿದೆ ಎಂದು ನಮ್ಮ ಗೈಡ್‌ ನಮಗೆ ನೆನಪುಹುಟ್ಟಿಸಿದರು. ಅವರು ಒತ್ತಿಹೇಳಿದ್ದೇನೆಂದರೆ, ‘ಎಣ್ಣೆ ಮತ್ತು ಕೊಬ್ಬುಗಳು ನಮ್ಮ ಸ್ವಂತ ಅಪಧಮನಿಗಳಿಗೆ ತಡೆಯನ್ನೊಡ್ಡಿ ಅವುಗಳನ್ನು ಮುಚ್ಚಿಬಿಡುವಂತೆಯೇ, ಇವು ನಮ್ಮ ಕೊಳಾಯಿ ವ್ಯವಸ್ಥೆಗಳ ಅಪಧಮನಿಗಳನ್ನು ನಿಧಾನವಾಗಿ ಮುಚ್ಚಿಬಿಡುತ್ತವೆ ಮತ್ತು ಟಾಯ್ಲೆಟ್‌ನಲ್ಲಿ ಫ್ಲಶ್‌ಮಾಡಲ್ಪಟ್ಟಿರುವ ತ್ಯಾಜ್ಯ ಡಯಾಪರ್‌ಗಳು, ಬಟ್ಟೆ, ಹಾಗೂ ಪ್ಲ್ಯಾಸ್ಟಿಕ್‌ಗಳು ನಿಜವಾಗಿಯೂ ಮಾಯವಾಗುವುದಿಲ್ಲ, ಬದಲಾಗಿ ಅವು ನಿಧಾನವಾಗಿ ಪೈಪುಗಳನ್ನು ಬ್ಲೊಕ್‌ಮಾಡುತ್ತವೆ.’ ನಾನೀಗ ಕಲಿತಿರುವಂತೆ, ನಾವು ಕಚಡವನ್ನು ನೀರಿನಿಂದ ಫ್ಲಶ್‌ಮಾಡಿ ನಮ್ಮ ಕಣ್ಣಿಗೆ ಮರೆಮಾಡಬಹುದು, ಆದರೆ ಚರಂಡಿಯಲ್ಲಿ ನೀರು ಕಟ್ಟಿಕೊಂಡು ಹಿಮ್ಮೆಟ್ಟಿ ಬರುವಾಗ, ನೀವು ಫ್ಲಶ್‌ಮಾಡಿರುವ ಆ ಕಚಡವು ಬೇಗನೆ ನಿಮ್ಮ ನೆನಪಿಗೆ ಬರುತ್ತದೆ. ಆದುದರಿಂದ, ಮುಂದಿನ ಬಾರಿ ನೀವು ಸ್ನಾನಮಾಡುವಾಗ, ಟಾಯ್ಲೆಟನ್ನು ಫ್ಲಶ್‌ಮಾಡುವಾಗ, ಅಥವಾ ಒಂದು ಸಿಂಕನ್ನು ಖಾಲಿಮಾಡುವಾಗ, ಆ ನೀರು ಎಲ್ಲಿಗೆ ಹೋಗುತ್ತದೆ ಎಂಬುದರ ಕುರಿತು ತುಸು ಯೋಚಿಸಿರಿ. (g02 10/08)

[ಪುಟ 21ರಲ್ಲಿರುವ ಚೌಕ/ಚಿತ್ರ]

ಮಲಿನಗೊಂಡ ನೀರಿನಿಂದ ಕುಡಿಯುವ ನೀರು

ಅಮೆರಿಕದಲ್ಲಿರುವ ಕ್ಯಾಲಿಫಾರ್ನಿಯದ ಕಡಿಮೆ ಮಳೆ ಬೀಳುವಂಥ ಒಂದು ಕ್ಷೇತ್ರವಾಗಿರುವ ಆರೆಂಜ್‌ ಕೌಂಟಿಯ ಅನೇಕ ಲಕ್ಷ ನಿವಾಸಿಗಳು, ಮಲಿನ ಜಲದ ಸಮಸ್ಯೆಗೆ ಕಂಡುಕೊಳ್ಳಲ್ಪಟ್ಟಿರುವ ಆಧುನಿಕ ಪರಿಹಾರದಿಂದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ದಿನ ಲಕ್ಷಾಂತರ ಲೀಟರುಗಳಷ್ಟು ಮಲಿನ ಜಲವನ್ನು ನೇರವಾಗಿ ಮಹಾ ಸಾಗರಕ್ಕೆ ಹರಿಸುವುದಕ್ಕೆ ಬದಲಾಗಿ, ಇದರಲ್ಲಿ ಅಧಿಕಾಂಶ ಜಲವನ್ನು ನೀರಿನ ಸರಬರಾಯಿಗೇ ಹಿಂದಿರುಗಿಸಲಾಗುತ್ತದೆ. ಅನೇಕ ವರ್ಷಗಳಿಂದ ಈ ಸಾಹಸಕಾರ್ಯವನ್ನು ಮಲಿನ ಜಲಶುದ್ಧೀಕರಣ ಸ್ಥಾವರದ ಮೂಲಕ ಸಾಧಿಸಲಾಗುತ್ತಿದೆ. ಮೂಲಭೂತ ಶುದ್ಧೀಕರಣದ ಬಳಿಕ, ಮಲಿನ ಜಲವನ್ನು ದ್ವಿತೀಯ ಹಾಗೂ ತೃತೀಯ ಶುದ್ಧೀಕರಣಕ್ಕೂ ಒಳಪಡಿಸಲಾಗುತ್ತದೆ. ಇದು ಸರ್ವಸಾಮಾನ್ಯವಾದ ಕುಡಿಯುವ ನೀರಿನಷ್ಟು ಶುದ್ಧವಾಗಿರಲಿಕ್ಕಾಗಿ, ಇದರಲ್ಲಿ ನೀರನ್ನು ತುಂಬ ಶುದ್ಧೀಕರಿಸುವುದು ಒಳಗೂಡಿದೆ. ತದನಂತರ ಅದನ್ನು ಆಳವಾದ ಬಾವಿಯ ನೀರಿನೊಂದಿಗೆ ಮಿಶ್ರಗೊಳಿಸಲಾಗುತ್ತದೆ ಮತ್ತು ಈ ನೀರು ನೆಲದ ಕೆಳಗಿರುವ ಮಣ್ಣಿನ ನದಿತಟ್ಟೆಗಳಿಗೆ ಹೋಗುತ್ತದೆ. ಅಲ್ಲಿ ಅದು ನೆಲದ ಕೆಳಗಿರುವ ನದಿತಟ್ಟೆಗಳನ್ನು ಪುನಃಭರ್ತಿಮಾಡುತ್ತದೆ ಹಾಗೂ ಉಪ್ಪು ನೀರು ಒಳಗೆ ಜಿನುಗಿ ನೆಲದ ಕೆಳಗಣ ಜಲಾಶಯವನ್ನು ಹಾಳುಮಾಡದಂತೆ ತಡೆಯುತ್ತದೆ. ಈ ಜಿಲ್ಲೆಯ ನೀರಿನ ಒಟ್ಟು ಆವಶ್ಯಕತೆಯ 75 ಪ್ರತಿಶತವು, ಈ ನೆಲದ ಕೆಳಗಿನ ಸರಬರಾಯಿಯಿಂದ ಪೂರೈಸಲ್ಪಡುತ್ತದೆ.

[ಪುಟ 23ರಲ್ಲಿರುವ ಚೌಕ]

ನೀರನ್ನು ಜಾಗ್ರತೆಯಿಂದ ಉಪಯೋಗಿಸಲಿಕ್ಕಾಗಿರುವ ಐದು ವಿಧಗಳು

◼ ನೀರು ಸೋರುವಂಥ ವಾಷರ್‌ಗಳನ್ನು ಬದಲಾಯಿಸಿರಿ​—⁠ತೊಟ್ಟಿಕ್ಕುತ್ತಿರುವ ಒಂದು ನಲ್ಲಿಯು ಒಂದು ವರ್ಷಕ್ಕೆ ಸುಮಾರು 7,000 ಲೀಟರುಗಳಷ್ಟು ನೀರನ್ನು ವ್ಯಯಮಾಡಬಲ್ಲದು.

◼ ನಿಮ್ಮ ಟಾಯ್ಲೆಟ್‌ ಸೋರುವುದಿಲ್ಲ ಎಂಬುದನ್ನು ಪರೀಕ್ಷಿಸಿ ಖಚಿತಪಡಿಸಿಕೊಳ್ಳಿ​—⁠ಇದು ಒಂದು ವರ್ಷಕ್ಕೆ ಸುಮಾರು 16,000 ಲೀಟರುಗಳಷ್ಟು ನೀರನ್ನು ಹಾಳುಮಾಡಬಲ್ಲದು.

◼ ಜಲನಿಯಂತ್ರಕ ಶವರ್‌ ಹೆಡ್‌ (ಸೂಸುಬಾಯಿ) ಅನ್ನು ಹಾಕಿಸಿಕೊಳ್ಳಿರಿ. ಒಳ್ಳೇ ರೀತಿಯಲ್ಲಿ ನೀರನ್ನು ಸುರಿಸುವ ಶವರ್‌ ಹೆಡ್‌, ಒಂದು ನಿಮಿಷಕ್ಕೆ ಸುಮಾರು 18 ಲೀಟರುಗಳಷ್ಟು ನೀರನ್ನು ಸುರಿಸುತ್ತದೆ. ಕಡಿಮೆ ಪ್ರಮಾಣದಲ್ಲಿ ನೀರನ್ನು ಸುರಿಸುವ ಶವರ್‌ ಹೆಡ್‌, ಒಂದು ನಿಮಿಷಕ್ಕೆ 9 ಲೀಟರುಗಳಷ್ಟು ನೀರನ್ನು ಸುರಿಸುತ್ತದೆ. ನಾಲ್ಕು ಮಂದಿಯಿರುವ ಒಂದು ಕುಟುಂಬವು ವರ್ಷವೊಂದಕ್ಕೆ ಸುಮಾರು 80,000 ಲೀಟರುಗಳಷ್ಟು ನೀರನ್ನು ಉಳಿಸುವುದು.

◼ ನಿಮ್ಮ ಟಾಯ್ಲೆಟ್‌ನ ಫ್ಲಶ್‌ಗೆ ಇಬ್ಬಗೆಯ ವೈಶಿಷ್ಟ್ಯಗಳಿರುವಲ್ಲಿ, ಸೂಕ್ತವಾಗಿರುವಾಗ ಅರ್ಧ ಫ್ಲಶ್‌ಮಾಡುವ ಬಟನ್‌ ಅನ್ನು ಉಪಯೋಗಿಸಿರಿ. ಇದು ನಾಲ್ಕು ಮಂದಿಯಿರುವ ಒಂದು ಕುಟುಂಬವು ವರ್ಷವೊಂದಕ್ಕೆ 36,000 ಲೀಟರುಗಳಿಗಿಂತಲೂ ಹೆಚ್ಚು ನೀರನ್ನು ಉಳಿಸುವಂತೆ ಮಾಡುತ್ತದೆ.

◼ ನಿಮ್ಮ ನಲ್ಲಿಗಳಿಗೆ ವಾಯುಪೂರಕ (ಏರೇಟರ್‌)ವನ್ನು ಹಾಕಿಸಿ​—⁠ಇವು ಅಷ್ಟೇನೂ ದುಬಾರಿಯಲ್ಲ ಮತ್ತು ನೀರಿನ ಹರಿವನ್ನು ಅರ್ಧದಷ್ಟು ಕಡಿಮೆಗೊಳಿಸುತ್ತವೆ, ಅದೇ ಸಮಯದಲ್ಲಿ ನೀರಿನ ಪ್ರಯೋಜನವನ್ನೂ ಕಡಿಮೆಗೊಳಿಸುವುದಿಲ್ಲ.

[ಪುಟ 23ರಲ್ಲಿರುವ ಚೌಕ]

ಜಗತ್ತಿನ ಮಲಿನ ಜಲದ ಮುಗ್ಗಟ್ಟು

“ಸುಮಾರು 120 ಕೋಟಿಗಿಂತಲೂ ಹೆಚ್ಚು ಜನರಿಗೆ ಶುದ್ಧವಾದ ಕುಡಿಯುವ ನೀರು ಸಿಗುತ್ತಿಲ್ಲ, ಅದೇ ಸಮಯದಲ್ಲಿ 290 ಕೋಟಿ ಜನರಿಗೆ ಸಾಕಷ್ಟು ನೈರ್ಮಲ್ಯ ಸೌಕರ್ಯಗಳು ಸಿಗುತ್ತಿಲ್ಲ; ಇದರ ಫಲಿತಾಂಶವಾಗಿ, ನೀರಿನಿಂದ ಉಂಟಾಗುವ ರೋಗಗಳಿಂದ ಸುಮಾರು 50 ಲಕ್ಷ ವ್ಯಕ್ತಿಗಳು​—⁠ಇವರಲ್ಲಿ ಹೆಚ್ಚಿನವರು ಮಕ್ಕಳು​—⁠ವಾರ್ಷಿಕವಾಗಿ ಮರಣವನ್ನಪ್ಪುತ್ತಾರೆ.”​—⁠ನೆದರ್ಲೆಂಡ್ಸ್‌ನ ಹೇಗ್‌ ನಗರದಲ್ಲಿ ನಡೆದ ಸೆಕೆಂಟ್‌ ವರ್ಲ್ಡ್‌ ವಾಟರ್‌ ಫೋರಮ್‌.

[ಪುಟ 22ರಲ್ಲಿರುವ ರೇಖಾಕೃತಿ/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಮಲಬಾರ್‌ನಲ್ಲಿ ಮಲಿನ ಜಲಶುದ್ಧೀಕರಣ ಪ್ರಕ್ರಿಯೆ (ಸರಳೀಕರಿಸಲ್ಪಟ್ಟಿರುವ ನೋಟ)

1. ಮಲಿನ ಜಲ ಸ್ಥಾವರವನ್ನು ಪ್ರವೇಶಿಸುತ್ತದೆ

2. ಜಾಲರಿಗಳ ಮೂಲಕ ಹಾದುಹೋಗುವಿಕೆ

3. ಗ್ರಿಟ್‌ ಚೇಂಬರ್‌ಗಳು ⇨ ⇨ 4. ನೆಲಭರ್ತಿ ನಿವೇಶನಕ್ಕೆ ಸಾಗುತ್ತಿರುವುದು

5. ಮಡ್ಡಿಸೇರುವ ತೊಟ್ಟಿಗಳು ⇨ ⇨ 6. ಸಾಗರಕ್ಕೆ

7. ನಿರ್ವಾತಜೀವಿ ಸಂಗ್ರಾಹಕ ⇨ ⇨ 8. ಇಲೆಕ್ಟ್ರಿಕ್‌ ಜನರೇಟರ್‌ಗಳು

9. ಜೈವಿಕಗೊಬ್ಬರ ಶೇಖರಣಾ ತೊಟ್ಟಿಗಳು

[ಚಿತ್ರಗಳು]

ನಿರ್ವಾತಜೀವಿ ಸಂಗ್ರಾಹಣ ತೊಟ್ಟಿಗಳು ಕೆಸರನ್ನು ಉಪಯುಕ್ತವಾದ ಗೊಬ್ಬರ ಮತ್ತು ಮಿಥೇನ್‌ ಅನಿಲವಾಗಿ ಪರಿವರ್ತಿಸುತ್ತವೆ

ಮಿಥೇನ್‌ ಅನಿಲವು ವಿದ್ಯುತ್‌ಚ್ಛಕ್ತಿಯನ್ನು ಉತ್ಪಾದಿಸಲಿಕ್ಕಾಗಿ ಸುಡಲಾಗುತ್ತದೆ