ಬ್ರಿಟನ್‌ನ ಬ್ಯಾಡ್ಜರ್ ಕಾಡುಪ್ರದೇಶದ ಒಡೆಯ
ಬ್ರಿಟನ್‌ನ ಬ್ಯಾಡ್ಜರ್ ಕಾಡುಪ್ರದೇಶದ ಒಡೆಯ
ಬ್ರಿಟನ್‌ನಲ್ಲಿರುವ ಎಚ್ಚರ! ಲೇಖಕರಿಂದ
ಒಂದು ಕಪ್ಪುಲಿಗ ಹಕ್ಕಿಯ ಹಾಡಿನಿಂದ ಕಾಡುಪ್ರದೇಶದ ನೀರವತೆಗೆ ಭಂಗವುಂಟಾಯಿತು. ಸೂರ್ಯನು ನಿಧಾನವಾಗಿ ಅಸ್ತಮಿಸುತ್ತಿರುವಂತೆ, ಕೆಳಗೆ ಬಿದ್ದಿದ್ದ ಒಂದು ಸಿಲ್ವರ್ ಬರ್ಚ್ ಮರದ ಮೇಲೆ ನಾನು ಕುಳಿತುಕೊಂಡೆ. ಸ್ವಲ್ಪ ಮಳೆ ಬಿದ್ದ ನಂತರ ನೀರಿನಿಂದ ತೊಯ್ದಿದ್ದ ಗಿಡಮರಗಳ ಸುವಾಸನೆಯು ಆ ಮುಸ್ಸಂಜೆಯಲ್ಲಿ ಹೇಗೆ ತನ್ನ ಕಂಪನ್ನು ಬೀರುತ್ತಿದೆ ಎಂಬುದನ್ನು ಗಮನಿಸುತ್ತಾ ಇದ್ದೆ.
ಸ್ವಲ್ಪ ತಂಗಾಳಿಯು ನನ್ನ ಕಡೆಗೆ ಬೀಸುವಂಥ ಜಾಗವನ್ನು ಜಾಗರೂಕತೆಯಿಂದ ಆರಿಸಿಕೊಂಡಿದ್ದೆ, ಏಕೆಂದರೆ ನಾನು ಬ್ಯಾಡ್ಜರ್ (ಬಿಲಕರಡಿ) ಅನ್ನು ಗಮನಿಸಲಿಕ್ಕಾಗಿ ಇಲ್ಲಿಗೆ ಬಂದಿದ್ದೆ. ಬ್ಯಾಡ್ಜರ್‌ನ ಕಣ್ಣುಗಳು ಚಿಕ್ಕದಾಗಿವೆ ಮತ್ತು ತುದಿಯಲ್ಲಿ ಬಿಳಿಯ ಬಣ್ಣವನ್ನು ಹೊಂದಿರುವ ಅದರ ಕಿವಿಗಳು ಸಹ ಕಿರಿದಾಗಿವೆ. ಆದರೆ ಅದರ ಶ್ರವಣ ಹಾಗೂ ಘ್ರಾಣ ಶಕ್ತಿಗಳನ್ನು ಎಂದೂ ಕಡಿಮೆ ಅಂದಾಜುಮಾಡಬಾರದು ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ, ಏಕೆಂದರೆ ಈ ಎರಡೂ ಇಂದ್ರಿಯಗಳು ತುಂಬ ತೀಕ್ಷ್ಣವಾಗಿವೆ. ಒಂದುವೇಳೆ ಅದು ನಾನು ಮಾಡುವ ಧ್ವನಿಯನ್ನು ಕೇಳಿಸಿಕೊಳ್ಳುವಲ್ಲಿ ಅಥವಾ ನನ್ನ ವಾಸನೆಯನ್ನು ಹಿಡಿಯುವಲ್ಲಿ, ಆ ಕೂಡಲೆ ಅಲ್ಲಿಂದ ಕಾಲ್ಕಿತ್ತು, ಇಡೀ ರಾತ್ರಿ ಬಿಲದಲ್ಲಿಯೇ ಉಳಿಯುತ್ತದೆ ಎಂಬುದು ನನಗೆ ಗೊತ್ತಿತ್ತು.
ಯೂರೋಪಿಯನ್ ಬ್ಯಾಡ್ಜರ್ ದೊಡ್ಡ ಗಾತ್ರದ, ಗೋಪ್ಯವಾಗಿ ಉಳಿಯುವ ಪ್ರವೃತ್ತಿಯ ಪ್ರಾಣಿಯಾಗಿದ್ದು, ಸುಮಾರು ಮೂರು ಅಡಿ ಉದ್ದವಾಗಿಯೂ ಒಂದು ಅಡಿ ಎತ್ತರವಾಗಿಯೂ ಇದೆ. ಇದರ ಸರಾಸರಿ ತೂಕ ಸುಮಾರು 12 ಕಿಲೊಗ್ರಾಮ್‌ಗಳಷ್ಟಾಗಿದೆ. ಇದಕ್ಕೆ ಬೂದುಬಣ್ಣದ ಒರಟಾದ ತುಪ್ಪುಳಿನ ಹೊರಹೊದಿಕೆಯಿದ್ದು, ಇದರ ಮುಖ ಮತ್ತು ಕೆಳಭಾಗಗಳು ಕಪ್ಪಾಗಿದ್ದು, ಚಿಕ್ಕ ಕಪ್ಪು ಕಾಲುಗಳನ್ನು ಹಾಗೂ ಗಿಡ್ಡವೂ ದಪ್ಪಗೂ ಇರುವ ಬೂದುಬಣ್ಣದ ಬಾಲವನ್ನು ಇದು ಹೊಂದಿದೆ. ಪ್ರತಿಯೊಂದು ಕಾಲಿನಲ್ಲಿ ಬಲವಾದ ಪಂಜಗಳುಳ್ಳ ಐದು ಬೆರಳುಗಳಿವೆ.
ಅದರ ಮೂತಿಯಿಂದ ಕಿವಿಗಳ ವರೆಗೆ ಇರುವಂಥ ಮೂರು ಅಗಲವಾದ ಬಿಳಿಯ ಪಟ್ಟೆಗಳು ಅದರ ಎದ್ದುಕಾಣುವ ವಿಶೇಷತೆಯಾಗಿವೆ ಮಾತ್ರವಲ್ಲ, ಇವು ವಾಗ್ವಾದಕ್ಕೆ ಒಳಗಾಗಿರುವ ವಿಷಯವೂ ಆಗಿವೆ. ದಟ್ಟವಾದ ಕಗ್ಗತ್ತಲು ಇರುವ ರಾತ್ರಿಯಂದೂ ಬ್ಯಾಡ್ಜರ್‌ಗಳು ಈ ಪಟ್ಟೆಗಳ ಸಹಾಯದಿಂದ ತಮ್ಮ ಜಾತಿಯ ಪ್ರಾಣಿಗಳನ್ನು ಗುರುತಿಸಬಲ್ಲವು ಎಂದು ಕೆಲವು ಜನರು ಹೇಳುತ್ತಾರೆ. ಆದರೂ, ಬ್ಯಾಡ್ಜರ್‌ಗಳು ವಾಸನೆಯ ಮೂಲಕ ಪರಸ್ಪರ ಗುರುತಿಸುತ್ತವೆ ಎಂಬುದು ನಮಗೆ ಗೊತ್ತಿದೆ. ಈ ಪಟ್ಟೆಗಳಿಗೆ ಕಾರಣವು ಏನೇ ಇರಲಿ, ಇವು ಬ್ಯಾಡ್ಜರನ್ನು ತುಂಬ ಸುಂದರವಾದ ಸೃಷ್ಟಿಜೀವಿಯನ್ನಾಗಿ ಮಾಡುತ್ತವೆ.
ಬ್ಯಾಡ್ಜರ್, ಬ್ರಿಟನ್‌ನ ಗ್ರಾಮೀಣ ಕ್ಷೇತ್ರಗಳ ಚಿರಪರಿಚಿತ ದೃಶ್ಯಭಾಗವಾಗಿದೆ. ಸ್ವಭಾವತಃ ಹೊಂಡವನ್ನು ತೋಡುವ ಒಂದು ಬ್ಯಾಡ್ಜರ್, ತನ್ನ ಬಿಲವನ್ನು ನಿರ್ಮಿಸಲಿಕ್ಕಾಗಿ ಸುರಂಗಗಳನ್ನು, ಕಾಲುದಾರಿಗಳನ್ನು, ಮತ್ತು ಬಿಲಕೋಣೆಗಳನ್ನು ಸತತವಾಗಿ ಅಗೆಯುತ್ತಾ ಹೋಗುತ್ತದೆ. ಈ ಬಿಲವು 100 ಅಡಿಗಳಷ್ಟು ಸುತ್ತಳತೆಯುಳ್ಳದ್ದಾಗಿದ್ದು, ಅದರ ಸಂಕೀರ್ಣ ಸುರಂಗಗಳು 1,000 ಅಡಿಗಳಷ್ಟು ಉದ್ದವಾಗಿರಸಾಧ್ಯವಿದೆ! ಬ್ಯಾಡ್ಜರ್ ನಿಶಾಚರಿ ಜೀವಿಯಾಗಿದೆ, ಮತ್ತು ಹಗಲು ಹೊತ್ತಿನಲ್ಲಿ ಅದರ ಬಿಲದಲ್ಲಿರುವ ಕೋಣೆಗಳು ಮುಖ್ಯವಾಗಿ ನಿದ್ರಿಸುವ ಸ್ಥಳಗಳಾಗಿ ಉಪಯೋಗಿಸಲ್ಪಡುತ್ತವೆ. ಹೊಸತಾದ ಹುಲ್ಲುಮೆತ್ತೆಯ ಹಾಸು ಇರುವ ವಿಶೇಷ ಕೋಣೆಗಳನ್ನು, ಮರಿಗಳಿಗೆ ಜನ್ಮ ನೀಡುವಾಗ ಹೆಣ್ಣುಬ್ಯಾಡ್ಜರ್ ಉಪಯೋಗಿಸುತ್ತದೆ.
ನೆಲದ ಮೇಲೆ ತೆರೆದ ಬಯಲಿನಲ್ಲಿ ಅದರ ಬಿಲಕ್ಕೆ ಅನೇಕ ಪ್ರವೇಶದ್ವಾರಗಳಿರುತ್ತವೆ, ಕೆಲವೊಮ್ಮೆ ಆಲ್ಡರ್ ಮರದ ಬಳಿಯಲ್ಲಿ ಹಾಗೂ ಹಾಥಾರ್ನ್ ಗಿಡ ಅಥವಾ ಬ್ಲ್ಯಾಕ್ ಬೆರಿ ಪೊದೆಯ ನಡುವೆ ಬಿಲದ ದ್ವಾರಗಳಿರುತ್ತವೆ. ಇಂಗ್ಲೆಂಡಿನಲ್ಲಿರುವ ಕೆಲವು ಬಿಲಗಳು 50ಕ್ಕಿಂತಲೂ ಹೆಚ್ಚು ಪ್ರವೇಶದ್ವಾರಗಳನ್ನು ಹೊಂದಿದ್ದು, 150ಕ್ಕಿಂತಲೂ
ಹೆಚ್ಚು ವರ್ಷ ಹಳೆಯವುಗಳೆಂದು ಜ್ಞಾತವಾಗಿವೆ ಮತ್ತು ಇವು ಒಂದೇ ಜಾತಿಯ ಬೇರೆ ಬೇರೆ ಸಂತತಿಗಳಿಗೆ ಸ್ಥಳಾವಕಾಶವನ್ನು ನೀಡಸಾಧ್ಯವಿದೆ. ಬ್ಯಾಡ್ಜರ್‌ಗಳು 15 ವರ್ಷಗಳ ತನಕ ಅಥವಾ ಇನ್ನೂ ಹೆಚ್ಚು ಕಾಲ ಬದುಕಿರಬಲ್ಲವಾದರೂ, ಅದರ ಜೀವನಾಯುಷ್ಯವು 2ರಿಂದ 3 ವರ್ಷಗಳು ಆಗಿದೆ.ದೊಡ್ಡ ಮಣ್ಣಿನ ಗುಪ್ಪೆಗಳು ಬಿಲದ ದ್ವಾರದ ಕಡೆ ಇಳುಕಲಾಗಿ ಹೋಗಿದ್ದು, ಅದರಿಂದ ಕಲ್ಲು ಮತ್ತು ಬಂಡೆಕಲ್ಲುಗಳು ಬದಿಗಿರಿಸಲ್ಪಟ್ಟಿರುವುದರಿಂದ, ಒಂದು ಬ್ಯಾಡ್ಜರಿನ ಬಿಲವನ್ನು ಗುರುತಿಸುವುದು ಕಷ್ಟಕರವಾದದ್ದೇನಲ್ಲ. ಬಿಲದಿಂದ ಏನೆಲ್ಲಾ ವಸ್ತುಗಳನ್ನು ಹೊರಗೆ ಹಾಕಲಾಗಿದೆ ಎಂಬುದನ್ನು ನೀವು ನೋಡುವಾಗ, ಆ ಪ್ರಾಣಿಯು ಎಷ್ಟು ಬಲಶಾಲಿಯಾಗಿದೆ ಎಂಬುದನ್ನು ನೀವು ಗ್ರಹಿಸುವಿರಿ.
ಒಂದು ಬಿಲವು ಉಪಯೋಗಿಸಲ್ಪಡುತ್ತಿದೆಯೋ ಇಲ್ಲವೋ ಎಂಬುದನ್ನು ನೀವು ಹೇಗೆ ಕಂಡುಕೊಳ್ಳುವಿರಿ? ಮೊದಲಾಗಿ ಬ್ಯಾಡ್ಜರ್‌ನ ಪಾಯಿಖಾನೆಗಳಿಗಾಗಿ ಬಿಲದ ಸುತ್ತಲೂ ದೃಷ್ಟಿಹರಿಸಿರಿ. 6ರಿಂದ 9 ಇಂಚುಗಳಷ್ಟು ಅಗಲ ಮತ್ತು 9 ಇಂಚುಗಳಷ್ಟು ಆಳವಾಗಿರುವ ಚಿಕ್ಕ ಗುಂಡಿಗಳಿಂದ ಕೂಡಿರುವ ಈ ಪಾಯಿಖಾನೆಗಳು ಬಿಲದ ಸುತ್ತಮುತ್ತಲೂ ಇರುತ್ತವೆ. ಅವುಗಳಲ್ಲಿ ಹಿಕ್ಕೆಗಳು ಇರುವಲ್ಲಿ, ವಿಶೇಷವಾಗಿ ಅವು ಸ್ವಲ್ಪ ಸಮಯಕ್ಕೆ ಮುಂಚೆಯೇ ಹಾಕಲ್ಪಟ್ಟಿರುವಂತೆ ಕಂಡುಬರುವಲ್ಲಿ, ಬ್ಯಾಡ್ಜರ್‌ಗಳು ಆ ಬಿಲದಲ್ಲಿ ವಾಸಿಸುತ್ತಿವೆ ಎಂಬುದು ಗೊತ್ತಾಗುತ್ತದೆ. ಬಿಲದಿಂದ ಹೊರಗೆ ಚೆನ್ನಾಗಿ ನಡೆದಾಡಲ್ಪಟ್ಟಿರುವ ಹಾದಿಗಳಿವೆಯೋ ಎಂಬುದನ್ನೂ ಗಮನಿಸಿರಿ, ಮತ್ತು ಬೇಸಗೆ ತಿಂಗಳುಗಳಲ್ಲಿ ಚಪ್ಪಟೆಯಾಗಿರುವ ಗಿಡಗಂಟಿಗಳನ್ನು ನೋಡಿರಿ. ಕೆಸರಿನಿಂದ ಕೂಡಿರುವಂಥ ಒಂದು ಕ್ಷೇತ್ರದಲ್ಲಿ, ಬ್ಯಾಡ್ಜರ್‌ನ ಪಾದಗಳ ಗುರುತುಗಳು, ಅಥವಾ ಬಿಲದ ಅಕ್ಕಪಕ್ಕದಲ್ಲೇ ಇರುವ ಮರಗಳಲ್ಲಿ ಕೆಸರಿನ ಗುರುತುಗಳು ಮತ್ತು ಗೀರುಗಳು ಇವೆಯೋ ಎಂಬುದನ್ನು ಪರೀಕ್ಷಿಸಿರಿ. ಏಕೆಂದರೆ ಬೆಕ್ಕುಗಳು ಮೈಮುರಿಯುವಂತೆಯೇ, ಈ ಬ್ಯಾಡ್ಜರ್‌ಗಳು ಸಹ ತಮ್ಮ ಹಿಂಗಾಲುಗಳ ಮೇಲೆ ನಿಂತುಕೊಂಡು ತಮ್ಮ ಬಲವಾದ ಪಂಜಗಳ ಸಹಾಯದಿಂದ ಮೈಮುರಿಯುತ್ತವೆ. ಒಂದು ಬಿಲವು ತುಂಬ ದೊಡ್ಡದಾಗಿರುವಲ್ಲಿ, ಇದನ್ನೆಲ್ಲಾ ಗಮನಿಸುವುದು ಕಷ್ಟಕರವಾಗಿ ಕಂಡುಬರಬಹುದು, ಏಕೆಂದರೆ ಬ್ಯಾಡ್ಜರ್‌ಗಳು ಬೇರೊಂದು ಪ್ರವೇಶದ್ವಾರವನ್ನು ಅಥವಾ ನಿರ್ಗಮನದ್ವಾರವನ್ನು ಉಪಯೋಗಿಸುತ್ತಿರಬಹುದು. ದಿನದಲ್ಲಿ ಬೇಗನೆ ಹೋಗಿ, ಪ್ರತಿಯೊಂದು ತೂತಿನ ಮೇಲೆ ಕಡ್ಡಿಯ ತುಂಡುಗಳನ್ನು ಇಡಿ. ಮರುದಿನ ಬೆಳಗ್ಗೆ, ಆ ಪ್ರಾಣಿಗಳು ಯಾವ ಪ್ರವೇಶದ್ವಾರವನ್ನು ಉಪಯೋಗಿಸಿವೆ ಎಂಬುದನ್ನು ನೀವು ನೋಡುವಿರಿ. ಅದು ಹೊರಬಂದಂಥ ತೂತಿನ ಮೇಲೆ ಇಡಲ್ಪಟ್ಟಿರುವ ಕಡ್ಡಿಯ ತುಂಡುಗಳು ಆಚೀಚೆ ಸರಿಸಲ್ಪಟ್ಟಿರುತ್ತವೆ.
ಒಂದು ಬ್ಯಾಡ್ಜರ್ ಆಹಾರಕ್ಕಾಗಿರುವ ತನ್ನ ಹುಡುಕಾಟದಲ್ಲಿ ರಾತ್ರಿ ಹೊತ್ತು ಬಹಳ ದೂರ ಪ್ರಯಾಣಿಸುತ್ತದೆ; ಈ ಸಮಯದಲ್ಲಿ ಅದು ಓಕ್‌ಮರದ ಹಣ್ಣುಗಳು ಅಥವಾ ಬೀಚ್‌ಮರದ ಕಾಯಿಗಳನ್ನು ಹುಡುಕುತ್ತಿರುತ್ತದೆ ಅಥವಾ ಮೊಲದ ಮರಿಗಳ ವಾಸನೆಯನ್ನು ಕಂಡುಹಿಡಿದು ಅವುಗಳ ಅನ್ವೇಷಣೆಯಲ್ಲಿ ಗುಂಡಿಯನ್ನು ತೋಡಬಹುದು ಅಥವಾ ಮರಿಹುಳುಗಳನ್ನು ತಿನ್ನಲಿಕ್ಕಾಗಿ ಒಂದು ಕಣಜದ ಬಲೆಯ ಮೇಲೆ ದಾಳಿಮಾಡಬಹುದು. ಅದರ ಮುಖ್ಯ ಆಹಾರವೇನು? ಎರೆಹುಳುಗಳೇ! ಕಾಡು ಹಣ್ಣುಗಳು, ಬ್ಲೂಬೆಲ್ ಗೆಡ್ಡೆಗಳು, ಅಣಬೆಗಳು ಮತ್ತು ಜೀರುಂಡೆಗಳನ್ನು ಒಳಗೊಂಡು ಹೆಚ್ಚುಕಡಿಮೆ ಎಲ್ಲವನ್ನೂ ಬ್ಯಾಡ್ಜರ್ ತಿನ್ನುತ್ತದೆ. ಜುಲೈ ತಿಂಗಳ ಆರ್ದ್ರವಾದ ಒಂದು ರಾತ್ರಿ ನಾನು ಬ್ಯಾಡ್ಜರ್‌ಗಳನ್ನು ವೀಕ್ಷಿಸುತ್ತಿದ್ದದ್ದು ನನಗೆ ನೆನಪಿದೆ, ಮತ್ತು ಅಂದು ಅವು ತಮ್ಮ ಬಿಲಗಳಿಂದ ಹೆಚ್ಚು ದೂರ ಹೋಗಲೇ ಇಲ್ಲ, ಏಕೆಂದರೆ ಒರಟಾದ ಒಳನಾಡಿನ ಹುಲ್ಲಿನಲ್ಲಿ ಕಪ್ಪು ಬಣ್ಣದ ಬಸವನಹುಳುಗಳು ಯಥೇಚ್ಛವಾಗಿ ಲಭ್ಯವಿದ್ದವು; ಈ ರಸಭಕ್ಷ್ಯವು ಮಳೆಯಿಂದ ಹೊರತರಲ್ಪಟ್ಟದ್ದಾಗಿತ್ತು.
ಬ್ಯಾಡ್ಜರ್‌ಗಳು ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಸಂತಾನೋತ್ಪತ್ತಿಗಾಗಿ ಕೂಡುತ್ತವೆ, ಮತ್ತು ಫೆಬ್ರವರಿ ತಿಂಗಳಿನಲ್ಲಿ ಒಂದು ಬಾರಿಗೆ ನಾಲ್ಕು ಅಥವಾ ಐದು ಮರಿಗಳು ಜನಿಸುತ್ತವೆ. ಮರಿಗಳು ಸುಮಾರು ಮೂರು ತಿಂಗಳುಗಳಷ್ಟು ದೊಡ್ಡವುಗಳಾದಾಗ, ಅವು ನೆಲದ ಮೇಲೆ ಕಾಣಿಸಿಕೊಳ್ಳುತ್ತವೆ ಮತ್ತು ಬಿಲದ ಪ್ರವೇಶದ್ವಾರದ ಬಳಿ ಆಟವಾಡುತ್ತಿರುತ್ತವೆ. ಮರಿಗಳು ಬಿಲದ ಹೊರಗಿರುವಾಗ, ಗಂಡುಬ್ಯಾಡ್ಜರ್ ಹಾಗೂ ಹೆಣ್ಣುಬ್ಯಾಡ್ಜರ್ ಎರಡೂ ಸೇರಿಕೊಂಡು ಗೂಡಿನ ಹಾಸನ್ನು ನವೀಕರಿಸುತ್ತವೆ. ಬ್ಯಾಡ್ಜರ್‌ಗಳು ತುಂಬ ಚೊಕ್ಕಟವಾದ ಪ್ರಾಣಿಗಳಾಗಿವೆ ಮತ್ತು ತಮ್ಮ ಬಿಲವನ್ನು ತುಂಬ ಅಚ್ಚುಕಟ್ಟಾಗಿಡುತ್ತವೆ. ವಸಂತಕಾಲ ಹಾಗೂ ಶರತ್ಕಾಲಗಳಲ್ಲಿ ಹುಲ್ಲುಮೆತ್ತೆಯ ಹಾಸನ್ನು ಗಾಳಿಗೊಡ್ಡುವುದು ಸಾಮಾನ್ಯವಾದ ಸಂಗತಿಯಾಗಿರುವುದಾದರೂ, ಇದು ವರ್ಷದ ಯಾವುದೇ ತಿಂಗಳಿನಲ್ಲಿಯೂ ನಡೆಯಬಲ್ಲದು. ಗಂಡು ಮತ್ತು ಹೆಣ್ಣು ಬ್ಯಾಡ್ಜರ್‌ಗಳು ಹಳೆಯ, ಒಣಗಿಹೋದ ಹುಲ್ಲನ್ನೂ ಜರಿಗಿಡಗಳನ್ನೂ ಹೊರಗೆ ಎಳೆದು ತರುತ್ತವೆ ಮತ್ತು ಅವುಗಳ ಸ್ಥಳದಲ್ಲಿ ತಾಜಾ ಹುಲ್ಲು ಹಾಗೂ ಜರಿಗಿಡಗಳನ್ನು ಇರಿಸುತ್ತವೆ. ಒಂದೇ ರಾತ್ರಿಯಲ್ಲಿ ಅವು ಸುಮಾರು 30 ಕಂತೆಗಳಷ್ಟು ಹುಲ್ಲನ್ನು ಹಾಗೂ ಜರಿಗಿಡಗಳನ್ನು ಒಟ್ಟುಗೂಡಿಸುತ್ತವೆ. ಇದನ್ನು ಅವು ತಮ್ಮ ಗಲ್ಲ ಹಾಗೂ ಮುಂಗಾಲುಗಳ ಪಂಜಗಳಲ್ಲಿ ಹಿಡಿದುಕೊಂಡು, ಹಿಮ್ಮುಖವಾಗಿ ಚಲಿಸುತ್ತವೆ ಮತ್ತು ತಮ್ಮ ಬಿಲದ ಪ್ರವೇಶದ್ವಾರದ ಮೂಲಕ ಒಳಗೆ ತೆಗೆದುಕೊಂಡುಹೋಗುತ್ತವೆ.
ತಮ್ಮ ಬಾಲದ ಕೆಳಗಿರುವ ಒಂದು ಗ್ರಂಥಿಯಿಂದ ಬ್ಯಾಡ್ಜರ್‌ಗಳು, ತಮ್ಮ ಕ್ಷೇತ್ರವನ್ನು ಗುರುತಿಸಲಿಕ್ಕಾಗಿ ಹುಲ್ಲಿನ ಕುಚ್ಚುಗಳ ಮೇಲೆ, ಕಲ್ಲುಗಳ ಮೇಲೆ ಅಥವಾ ಬೇಲಿಯ ಕಂಬಗಳ ಮೇಲೆ, ತುಂಬ ತೀಕ್ಷ್ಣವಾದ ವಾಸನೆಯಿರುವ ದ್ರವವನ್ನು ಸ್ರವಿಸುತ್ತವೆ. ಅವು ಗುರುತಿಗಾಗಿಯೂ ಈ ದ್ರವದಿಂದ ಪರಸ್ಪರ ಅಭಿಷೇಕಿಸಿಕೊಳ್ಳುತ್ತವೆ. ಒಂದು ಬ್ಯಾಡ್ಜರ್ ತನ್ನ ಬಿಲಕ್ಕೆ ಹಿಮ್ಮುಖವಾಗಿ ಚಲಿಸುತ್ತಿರುವಾಗ, ಈ ದ್ರವದ ಗುರುತುಗಳ ಸಹಾಯದಿಂದ ಪ್ರವೇಶದ್ವಾರವನ್ನು ಸುಲಭವಾಗಿ ಕಂಡುಹಿಡಿಯುತ್ತದೆ.
ಆ ಕಪ್ಪುಲಿಗ ಹಕ್ಕಿಯ ಹಾಡು ಇನ್ನಿಲ್ಲವಾಗಿತ್ತು, ಮತ್ತು ಕತ್ತಲು ಕವಿಯುತ್ತಿರುವ ಕಾಡುಪ್ರದೇಶದಲ್ಲಿ ಎಲ್ಲೆಡೆಯೂ ನೀರವತೆಯು ಆವರಿಸಿತ್ತು. ನನ್ನ ಕಣ್ಣಿನ ಪಕ್ಕದಿಂದ, ಒಂದು ಬ್ಯಾಡ್ಜರ್‌ನ ಕಪ್ಪು ಮತ್ತು ಬಿಳುಪು ಬಣ್ಣದ ತಲೆಯನ್ನು ನಾನು ನೋಡಿದಾಗ, ಉಸಿರಾಡಲು ಸಹ ಧೈರ್ಯಮಾಡದೆ ನಾನು ಇನ್ನಷ್ಟು ನಿಶ್ಚಲನಾಗಿ ಕುಳಿತೆ. ಕೆಲವು ಕ್ಷಣಗಳ ವರೆಗೆ ಬ್ಯಾಡ್ಜರ್, ತನ್ನ ಬಿಲದ ಪ್ರವೇಶದ್ವಾರದ ಬಳಿ ನಿಂತುಕೊಂಡು, ಏನಾದರೂ ಅಪಾಯವಿದೆಯೋ ಎಂಬುದನ್ನು ಪರೀಕ್ಷಿಸಲಿಕ್ಕಾಗಿ ಸಂಜೆಯ ತಂಗಾಳಿಯನ್ನು ಆಘ್ರಾಣಿಸಿತು. ನಂತರ ಕತ್ತಲೆಯಲ್ಲಿ ಹೊರಗೆ ಚಲಿಸಲಾರಂಭಿಸಿತು—ಇದು, ಭವ್ಯ ಭವನದ ಯಜಮಾನನೊಬ್ಬನು ತನ್ನ ಪೂರ್ವಜರ ಸ್ಥಿರಾಸ್ತಿಯ ಸುತ್ತಲೂ ಅಡ್ಡಾಡಲು ಹೋಗುತ್ತಿದ್ದಾನೋ ಎಂಬಂತೆ ತೋರುತ್ತಿತ್ತು. (g02 11/08)
[ಪುಟ 12ರಲ್ಲಿರುವ ಚಿತ್ರ]
ಮರಿಗಳ ಜನನದ ಸಮಯದಲ್ಲಿ ಉಪಯೋಗಿಸಲ್ಪಡುವ ಕೋಣೆ
ಮಲಗುವ ಕೋಣೆ
ಹುಲ್ಲುಮೆತ್ತೆಯ ಹಾಸು
[ಪುಟ 13ರಲ್ಲಿರುವ ಚಿತ್ರ]
ಬ್ಯಾಡ್ಜರ್ ಮರಿಗಳು
[ಪುಟ 13ರಲ್ಲಿರುವ ಚಿತ್ರಗಳು]
ಬ್ಯಾಡ್ಜರ್‌ನ ಆಹಾರದಲ್ಲಿ ಓಕ್‌ಮರದ ಹಣ್ಣುಗಳು, ಅಣಬೆಗಳು ಮತ್ತು ಎರೆಹುಳುಗಳು ಒಳಗೂಡಿವೆ
[ಪುಟ 13ರಲ್ಲಿರುವ ಚಿತ್ರ ಕೃಪೆ]
Badger photos: © Steve Jackson, www.badgers.org.uk