ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಮಾನವ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಸರ್ವವ್ಯಾಪಿ ವ್ಯಾಧಿ”

“ಮಾನವ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಸರ್ವವ್ಯಾಪಿ ವ್ಯಾಧಿ”

“ಮಾನವ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಸರ್ವವ್ಯಾಪಿ ವ್ಯಾಧಿ”

ದಕ್ಷಿಣ ಆಫ್ರಿಕದಲ್ಲಿರುವ ಎಚ್ಚರ! ಲೇಖಕರಿಂದ

“ಭೂಮಿಯ ಮೇಲಿನ ಯಾವುದೇ ಯುದ್ಧವು ಏಡ್ಸ್‌ ಎಂಬ ಸರ್ವವ್ಯಾಪಿ ವ್ಯಾಧಿಯಷ್ಟು ವಿನಾಶಕಾರಿಯಾಗಿಲ್ಲ.” ​—⁠ಅಮೆರಿಕದ ವಿದೇಶ ಸಚಿವರಾಗಿರುವ ಕಾಲಿನ್‌ ಪವೆಲ್‌.

ಏಡ್ಸ್‌ (ಅಕ್ವೈರ್ಡ್‌ ಇಮ್ಯೂನೊಡಿಫಿಶಿಯೆನ್ಸಿ ಸಿಂಡ್ರೋಮ್‌) ಕುರಿತಾದ ಪ್ರಥಮ ಅಧಿಕೃತ ವರದಿಯು 1981ರಲ್ಲಿ ಕಂಡುಬಂತು. ಏಚ್‌ಐವಿ/ಏಡ್ಸ್‌ನ ಕುರಿತಾದ ವಿಶ್ವ ಸಂಸ್ಥೆಯ ಕಾರ್ಯಕ್ರಮ (ಯುಎನ್‌ಎಐಡಿಎಸ್‌) ಎಂಬ ಸಂಸ್ಥೆಯ ಕಾರ್ಯನಿರ್ವಾಹಕರಾಗಿರುವ ಪೀಟರ್‌ ಪ್ಯಾ ಹೇಳುವುದು: “ಏಡ್ಸ್‌ ಸಾಂಕ್ರಾಮಿಕ ರೋಗವು ಆರಂಭವಾದಾಗ ಈ ಸಮಸ್ಯೆಯೊಂದಿಗೆ ವ್ಯವಹರಿಸುತ್ತಿದ್ದ ನಮ್ಮಲ್ಲಿ ಯಾರೊಬ್ಬರೂ, ಅದು ಈಗ ಬಯಲುಮಾಡಲ್ಪಟ್ಟಿರುವಷ್ಟು ದೊಡ್ಡ ಪ್ರಮಾಣದ ಸಾಂಕ್ರಾಮಿಕ ರೋಗವಾಗುವುದು ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ.” ಇಪ್ಪತ್ತು ವರ್ಷಗಳೊಳಗೆ ಇದು, ಇಷ್ಟರ ತನಕ ಹಬ್ಬಿರುವ ಸರ್ವವ್ಯಾಪಿ ವ್ಯಾಧಿಗಳಲ್ಲೇ ಅತ್ಯಂತ ಮಾರಕವಾದದ್ದಾಗಿ ಪರಿಣಮಿಸಿದೆ, ಮತ್ತು ಇದು ಇನ್ನೂ ಅಧಿಕಗೊಳ್ಳುವುದು ಎಂಬ ಸೂಚನೆಗಳು ಕಂಡುಬರುತ್ತಿವೆ.

ಸುಮಾರು 3.6 ಕೋಟಿಗಿಂತಲೂ ಹೆಚ್ಚು ಜನರು ಏಚ್‌ಐವಿಯಿಂದ ಸೋಂಕಿತರಾಗಿದ್ದಾರೆ, ಮತ್ತು ಇನ್ನೂ 2.2 ಕೋಟಿ ಜನರು ಏಡ್ಸ್‌ನ ಪರಿಣಾಮಗಳಿಂದ ಮೃತಪಟ್ಟಿದ್ದಾರೆ ಎಂದು ಅಂದಾಜುಮಾಡಲಾಗಿದೆ. * 2000 ಇಸವಿಯಲ್ಲಿ, ಲೋಕವ್ಯಾಪಕವಾಗಿ 30 ಲಕ್ಷ ಜನರು ಏಡ್ಸ್‌ನಿಂದಾಗಿ ಮೃತಪಟ್ಟಿದ್ದು, ಈ ಸಾಂಕ್ರಾಮಿಕ ರೋಗವು ಆರಂಭಗೊಂಡಂದಿನಿಂದ ಇದೇ ಅತ್ಯುಚ್ಚ ವಾರ್ಷಿಕ ಸಂಖ್ಯೆಯಾಗಿದೆ. ವಿಶೇಷವಾಗಿ ಹೆಚ್ಚು ಶ್ರೀಮಂತ ರಾಷ್ಟ್ರಗಳಲ್ಲಿ, ರೆಟ್ರೋವೈರಸ್‌ನಾಶಕ ಔಷಧ ಚಿಕಿತ್ಸೆಯ ಉಪಯೋಗದ ಹೊರತಾಗಿಯೂ ಇದು ಸಂಭವಿಸುತ್ತಿದೆ.

ಏಡ್ಸ್‌ ಆಫ್ರಿಕದಾದ್ಯಂತ ಹಬ್ಬುತ್ತದೆ

ಆಫ್ರಿಕದ ಸಹಾರಾದ ದಕ್ಷಿಣ ಪ್ರದೇಶಗಳಲ್ಲಿ 2.53 ಕೋಟಿ ಜನರು ಸೋಂಕಿತರಾಗಿದ್ದಾರೆಂದು ಅಂದಾಜುಮಾಡಲಾಗಿದ್ದು, ಅದು ಈ ಸರ್ವವ್ಯಾಪಿ ವ್ಯಾಧಿಯ ಮೂಲ ಕೇಂದ್ರವಾಗಿ ಪರಿಣಮಿಸಿದೆ. ಈ ಪ್ರದೇಶವೊಂದರಲ್ಲಿಯೇ 2000 ಇಸವಿಯಲ್ಲಿ ಏಡ್ಸ್‌ನ ಪರಿಣಾಮಗಳಿಂದ 24 ಲಕ್ಷ ಜನರು ಮೃತಪಟ್ಟಿದ್ದು, ಇದು ಲೋಕವ್ಯಾಪಕ ಮರಣ ಸಂಖ್ಯೆಯ 80 ಪ್ರತಿಶತವಾಗಿದೆ. ಈ ಪ್ರದೇಶದಲ್ಲಿನ ಮರಣಗಳಿಗೆ ಪ್ರಮುಖ ಕಾರಣವು ಏಡ್ಸ್‌ ಆಗಿದೆ. *

ಲೋಕದಲ್ಲಿರುವ ಯಾವುದೇ ದೇಶಕ್ಕಿಂತಲೂ, ದಕ್ಷಿಣ ಆಫ್ರಿಕದಲ್ಲಿಯೇ ಅತ್ಯಧಿಕ ಸಂಖ್ಯೆಯ ಜನರು​—⁠ಸುಮಾರು 47 ಲಕ್ಷ​—⁠ಈ ರೋಗದಿಂದ ಬಾಧಿತರಾಗಿದ್ದಾರೆ. ಇಲ್ಲಿ ಪ್ರತಿ ತಿಂಗಳು 5,000 ಶಿಶುಗಳು ಏಚ್‌ಐವಿ ರೋಗದೊಂದಿಗೆ ಜನಿಸುತ್ತವೆ. 2000 ಇಸವಿಯ ಜುಲೈ ತಿಂಗಳಿನಲ್ಲಿ ಡರ್ಬನ್‌ನಲ್ಲಿ ನಡೆದ 13ನೆಯ ಅಂತಾರಾಷ್ಟ್ರೀಯ ಏಡ್ಸ್‌ ಸಮ್ಮೇಳನದಲ್ಲಿ ಭಾಷಣ ನೀಡುತ್ತಿದ್ದಾಗ, ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷರಾದ ನೆಲ್ಸನ್‌ ಮಂಡೇಲಾ ಹೇಳಿದ್ದು: “ದಕ್ಷಿಣ ಆಫ್ರಿಕದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು, ಅಂದರೆ ನಮ್ಮ ಯುವ ಜನರಲ್ಲಿ ಅರ್ಧದಷ್ಟು ಜನರು ಏಡ್ಸ್‌ನಿಂದಾಗಿ ಮೃತಪಡುತ್ತಾರೆ ಎಂಬುದನ್ನು ತಿಳಿದು ನಮಗೆ ಆಘಾತವಾಯಿತು. ಆದರೆ ಯಾವುದರ ಕುರಿತು ಸಂಖ್ಯಾಸಂಗ್ರಹಣಗಳು ನಮಗೆ ತಿಳಿಸುತ್ತವೋ ಆ ಎಲ್ಲಾ ಸೋಂಕುಗಳನ್ನು ಮತ್ತು ಅದರಿಂದ ಬರುವ ಮಾನವ ಕಷ್ಟಾನುಭವವನ್ನು ನಾವು ತಡೆಗಟ್ಟಸಾಧ್ಯವಿತ್ತು ಮತ್ತು ತಡೆಗಟ್ಟಸಾಧ್ಯವಿದೆ ಎಂಬುದೇ ಅತ್ಯಂತ ಭೀತಿದಾಯಕ ಸಂಗತಿಯಾಗಿದೆ.”

ಇತರ ದೇಶಗಳಲ್ಲಿ ಏಡ್ಸ್‌ನ ದಾಳಿ

ಪೂರ್ವ ಯೂರೋಪ್‌, ಏಷಿಯಾ ಮತ್ತು ಕ್ಯಾರಿಬಿಯನ್‌ನಲ್ಲಿ ಸಹ ಸೋಂಕಿನ ಪ್ರಮಾಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿವೆ. 1999ರ ಅಂತ್ಯಭಾಗದಷ್ಟಕ್ಕೆ ಪೂರ್ವ ಯೂರೋಪ್‌ನಲ್ಲಿ ಈ ರೋಗದಿಂದ ಬಾಧಿತರಾದ ಜನರ ಸಂಖ್ಯೆಯು 4,20,000 ಆಗಿತ್ತು. 2000 ಇಸವಿಯ ಅಂತ್ಯಭಾಗದಷ್ಟಕ್ಕೆ ಆ ಸಂಖ್ಯೆಯು 7,00,000ಕ್ಕೆ ಏರಿತ್ತು ಎಂದು ಮಿತವಾಗಿ ಅಂದಾಜುಮಾಡಲಾಗಿತ್ತು.

ಅಮೆರಿಕದ ಆರು ದೊಡ್ಡ ನಗರಗಳಲ್ಲಿ ನಡೆಸಲ್ಪಟ್ಟ ಒಂದು ಸಮೀಕ್ಷೆಯು, ಯುವ ಪ್ರಾಯದ ಸಲಿಂಗೀಕಾಮಿ ಪುರುಷರಲ್ಲಿ ಏಚ್‌ಐವಿ ಸೋಂಕಿನ ಪ್ರಮಾಣ 12.3 ಪ್ರತಿಶತ ಆಗಿರುವುದನ್ನು ಬಯಲುಪಡಿಸಿತು. ಅಷ್ಟುಮಾತ್ರವಲ್ಲ, ಏಚ್‌ಐವಿ ರೋಗವಿದ್ದವರಲ್ಲಿ ಕೇವಲ 29 ಪ್ರತಿಶತ ಮಂದಿಗೆ ಮಾತ್ರ ತಮಗೆ ಈ ರೋಗ ಸೋಂಕಿದೆ ಎಂಬುದು ಗೊತ್ತಿತ್ತು. ಈ ಸಮೀಕ್ಷೆಯ ಮುಂದಾಳುತ್ವ ವಹಿಸಿದ್ದ ಒಬ್ಬ ಸಾಂಕ್ರಾಮಿಕಶಾಸ್ತ್ರಜ್ಞನು ಹೇಳಿದ್ದು: “ತಮಗೆ ಏಚ್‌ಐವಿ ರೋಗವು ಸೋಂಕಿದೆ ಎಂಬುದು ಕೇವಲ ಇಷ್ಟೇ ಜನರಿಗೆ ತಿಳಿದಿತ್ತು ಎಂಬುದನ್ನು ಕಂಡು ನಾವು ಬಹಳವಾಗಿ ಎದೆಗುಂದಿದೆವು. ಏಕೆಂದರೆ ಇದರ ಅರ್ಥ, ಈ ರೋಗದಿಂದ ಹೊಸದಾಗಿ ಬಾಧಿತರಾದ ಜನರು ಅರಿವಿಲ್ಲದೇ ಈ ವೈರಸನ್ನು ಇತರರಿಗೆ ದಾಟಿಸುತ್ತಿದ್ದಾರೆ.”

ಇಸವಿ 2001ರ ಮೇ ತಿಂಗಳಿನಲ್ಲಿ ಸ್ವಿಟ್ಸರ್ಲೆಂಡ್‌ನ ಏಡ್ಸ್‌ ಪರಿಣತರ ಒಂದು ಕೂಟದಲ್ಲಿ, ಈ ರೋಗವನ್ನು “ಮಾನವ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಸರ್ವವ್ಯಾಪಿ ವ್ಯಾಧಿ” ಎಂದು ಘೋಷಿಸಲಾಯಿತು. ಈಗಾಗಲೇ ಗಮನಿಸಿದಂತೆ, ಏಡ್ಸ್‌ನ ದಾಳಿಯು ನಿರ್ದಿಷ್ಟವಾಗಿ ಆಫ್ರಿಕದ ಸಹಾರಾದ ದಕ್ಷಿಣ ಪ್ರದೇಶಗಳಲ್ಲಿ ತೀಕ್ಷ್ಣವಾದದ್ದಾಗಿದೆ. ಇದಕ್ಕೆ ಕಾರಣವೇನು ಎಂಬುದನ್ನು ನಮ್ಮ ಮುಂದಿನ ಲೇಖನವು ಪರಿಗಣಿಸುತ್ತದೆ. (g02 11/08)

[ಪಾದಟಿಪ್ಪಣಿಗಳು]

^ ಉಪಯೋಗಿಸಲ್ಪಟ್ಟಿರುವ ಸಂಖ್ಯೆಗಳು, ಯುಎನ್‌ಎಐಡಿಎಸ್‌ ಸಂಸ್ಥೆಯಿಂದ ಪ್ರಕಾಶಿಸಲ್ಪಟ್ಟ ಅಂದಾಜುಗಳಾಗಿವೆ.

^ ಫೆಬ್ರವರಿ 22, 2001ರ ಎಚ್ಚರ! (ಇಂಗ್ಲಿಷ್‌)ದ 14-15ನೆಯ ಪುಟಗಳನ್ನು ನೋಡಿರಿ.

[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]

ಈ ಎಲ್ಲ ಸೋಂಕುಗಳನ್ನು ಮತ್ತು . . . ಮಾನವ ಕಷ್ಟಾನುಭವವನ್ನು . . . ತಡೆಗಟ್ಟಸಾಧ್ಯವಿತ್ತು ಮತ್ತು ತಡೆಗಟ್ಟಸಾಧ್ಯವಿದೆ ಎಂಬುದೇ ಅತ್ಯಂತ ಭೀತಿದಾಯಕ ಸಂಗತಿಯಾಗಿದೆ.”—ನೆಲ್ಸನ್‌ ಮಂಡೇಲಾ

[ಪುಟ 2, 3ರಲ್ಲಿರುವ ಚಿತ್ರ]

ಏಚ್‌ಐವಿಯಿಂದ ಸೋಂಕಿತರಾಗಿರುವ ಅನೇಕ ಜನರಿಗೆ ಅದರ ಅರಿವೇ ಇಲ್ಲ

[ಪುಟ 3ರಲ್ಲಿರುವ ಚಿತ್ರ ಕೃಪೆ]

UN/DPI Photo 198594C/Greg Kinch