ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವೆನಿಲ ದೀರ್ಘ ಇತಿಹಾಸವಿರುವ ಒಂದು ಸಂಬಾರ ಪದಾರ್ಥ

ವೆನಿಲ ದೀರ್ಘ ಇತಿಹಾಸವಿರುವ ಒಂದು ಸಂಬಾರ ಪದಾರ್ಥ

ವೆನಿಲ ದೀರ್ಘ ಇತಿಹಾಸವಿರುವ ಒಂದು ಸಂಬಾರ ಪದಾರ್ಥ

ಮೆಕ್ಸಿಕೋದಲ್ಲಿರುವ ಎಚ್ಚರ! ಲೇಖಕರಿಂದ

ಹದಗೊಳಿಸಲ್ಪಟ್ಟಿದ್ದ ಆ ಕಾಯಿಯ ಬಣ್ಣವನ್ನು ಸೂಚಿಸುತ್ತಾ ಆ್ಯಸ್‌ಟೆಕ್‌ ಜನಾಂಗದವರು ಅದನ್ನು ಟ್ಲಿಲ್‌ಕ್ಸೋಶೀಟ್ಲ್‌, “ಬ್ಲ್ಯಾಕ್‌ ಫ್ಲವರ್‌” ಎಂದು ಕರೆದರು. ಕೋಕೊದಿಂದ ಮಾಡಲ್ಪಟ್ಟ ಕ್ಸೋಕೋಲಾಟ್ಲ್‌ ಅಥವಾ ಚಾಕೊಲೆಟ್‌ ಎಂಬ ತಮ್ಮ ಪಾನೀಯದ ರುಚಿಯನ್ನು ಹೆಚ್ಚಿಸಲಿಕ್ಕಾಗಿ ಅವರು ವೆನಿಲವನ್ನು ಉಪಯೋಗಿಸಿದರು. ಮೆಕ್ಸಿಕೋದ ಆ್ಯಸ್‌ಟೆಕ್‌ ಚಕ್ರವರ್ತಿಯಾಗಿದ್ದ ಮಾಂಟೆಸೂಮ, 1520ರಲ್ಲಿ ಎರ್ನಾನ್‌ ಕಾರ್ಟೀಸ್‌ ಎಂಬ ಸ್ಪ್ಯಾನಿಷ್‌ ವಿಜಯಿಗೆ ಇದನ್ನು ಸೇವಿಸಲು ಕೊಟ್ಟಿದ್ದನು ಎಂದು ಹೇಳಲಾಗುತ್ತದೆ. ತದನಂತರ ಕಾರ್ಟೀಸ್‌ ಕೋಕೊ ಕಾಯಿಗಳನ್ನು ಹಾಗೂ ವೆನಿಲ ಕಾಯಿಗಳನ್ನು ಯೂರೋಪಿಗೆ ಪರಿಚಯಿಸಿದನು. ಅಂದಿನಿಂದ ಯೂರೋಪಿಯನ್‌ ಆಸ್ಥಾನಗಳಲ್ಲಿ ವೆನಿಲದ ಪರಿಮಳವುಳ್ಳ ಬಿಸಿ ಚಾಕೊಲೆಟ್‌ ತುಂಬ ಜನಪ್ರಿಯವಾಯಿತು ಮತ್ತು ಅದೊಂದು ಫ್ಯಾಷನ್‌ ಆಗಿ ಪರಿಣಮಿಸಿತು; 1602ರ ನಂತರವೇ, 1ನೆಯ ರಾಣಿ ಎಲಿಸಬೆತಳ ಔಷಧ ವ್ಯಾಪಾರಿಯಾಗಿದ್ದ ಹ್ಯೂ ಮೋರ್ಗನ್‌, ಇತರ ವಸ್ತುಗಳ ರುಚಿಯನ್ನು ಹೆಚ್ಚಿಸಲಿಕ್ಕಾಗಿ ವೆನಿಲವನ್ನು ಬಳಸುವ ಸಲಹೆ ನೀಡಿದನು. ತದನಂತರ 1700ಗಳಲ್ಲಿ, ವೆನಿಲವನ್ನು ಮದ್ಯಸಾರ ಪಾನೀಯಗಳು, ಹೊಗೆಸೊಪ್ಪು ಹಾಗೂ ಸುಗಂಧ ತೈಲಗಳಲ್ಲಿ ಉಪಯೋಗಿಸಲು ಪ್ರಾರಂಭಿಸಲಾಯಿತು.

ಆದರೆ, ಆ್ಯಸ್‌ಟೆಕ್‌ ಚಕ್ರಾಧಿಪತ್ಯದ ಆಗಮನಕ್ಕಿಂತಲೂ ಬಹಳ ಸಮಯಕ್ಕೆ ಮುಂಚೆಯೇ, ಮೆಕ್ಸಿಕೋದ ವೇರಕ್ರೂಸ್‌ನ ಟೋಟೋನಾಕ್‌ ಇಂಡಿಯನ್ನರು ವೆನಿಲ ಕಾಯಿಗಳನ್ನು ಬೆಳೆಸಿ, ಕಟಾವುಮಾಡಿ, ಅದನ್ನು ಹದಗೊಳಿಸುತ್ತಿದ್ದರು. * ವೆನಿಲ ಗಿಡವು ಯೂರೋಪಿಗೆ ಕೊಂಡೊಯ್ಯಲ್ಪಟ್ಟದ್ದು 1800ಗಳ ಆರಂಭದಲ್ಲೇ ಮತ್ತು ಅಲ್ಲಿಂದಲೇ ಇದು ಹಿಂದೂ ಮಹಾ ಸಾಗರದ ದ್ವೀಪಗಳಿಗೆ ರವಾನಿಸಲ್ಪಟ್ಟಿತು. ಆದರೆ ಈ ಗಿಡದ ನೈಸರ್ಗಿಕ ಪರಾಗಸ್ಪರ್ಶಕಗಳಾಗಿರುವ ಮೆಲಿಪೋನ ಜಾತಿಗೆ ಸೇರಿದ ನೊಣಗಳ ಅನುಪಸ್ಥಿತಿಯಿಂದಾಗಿ, ಈ ಗಿಡದಿಂದ ಫಲವನ್ನು ಉತ್ಪಾದಿಸಲಿಕ್ಕಾಗಿ ತೋಟಗಾರಿಕೆ ಕಲೆಯ ನಿಪುಣರು ಮಾಡಿದ ಪ್ರಯತ್ನಗಳು ಬಹುಮಟ್ಟಿಗೆ ಅಸಫಲವಾಗಿದ್ದವು. ಆದುದರಿಂದ, 16ನೆಯ ಶತಮಾನದಿಂದ ಹಿಡಿದು 19ನೆಯ ಶತಮಾನದ ವರೆಗೆ, ವೆನಿಲ ವ್ಯಾಪಾರದಲ್ಲಿ ಮೆಕ್ಸಿಕೊ ದೇಶವು ಮಾತ್ರ ಪೂರ್ಣಾಧಿಕಾರವನ್ನು ಪಡೆದಿತ್ತು. 1841ರಲ್ಲಿ, ರೆಯೂನಿಯನ್‌ ಎಂಬ ಫ್ರೆಂಚ್‌ ದ್ವೀಪದಲ್ಲಿನ ಒಬ್ಬ ಮಾಜಿ ಗುಲಾಮನು, ವೆನಿಲ ಕಾಯಿಯನ್ನು ಉತ್ಪಾದಿಸಸಾಧ್ಯವಾಗುವಂತೆ, ವೆನಿಲ ಹೂವುಗಳಿಗೆ ಕೈಯಿಂದ ಪರಾಗಸ್ಪರ್ಶಮಾಡಿಸುವ ಒಂದು ಪ್ರಾಯೋಗಿಕ ವಿಧಾನವನ್ನು ಪರಿಷ್ಕರಿಸಿದನು. ಇದು, ಮೆಕ್ಸಿಕೊ ದೇಶದ ಹೊರಗೆ ವೆನಿಲದ ವಾಣಿಜ್ಯ ಕೃಷಿಗೆ ಮುನ್ನಡಿಸಿತು. ಇಂದು ವೆನಿಲ ಕಾಯಿಯನ್ನು ಮುಖ್ಯವಾಗಿ ಉತ್ಪಾದಿಸುವ ಸ್ಥಳಗಳು, ಮುಂಚೆ ಫ್ರಾನ್ಸ್‌ಗೆ ಅಧೀನವಾಗಿದ್ದ ರೆಯೂನಿಯನ್‌ ಮತ್ತು ಕಾಮರೋ ಎಂಬ ದ್ವೀಪಗಳಾಗಿದ್ದು, ಮಡಗಾಸ್ಕರ್‌ ದೇಶವು ಪ್ರಮುಖ ಉತ್ಪಾದಕವಾಗಿದೆ.

ವೆನಿಲದ ಕೃಷಿ

ವೆನಿಲ ಕಾಯಿಯು ವಾಸ್ತವದಲ್ಲಿ ಒಂದು ಆರ್ಕಿಡ್‌ ಸಸ್ಯದ ಫಲವಾಗಿದೆ. ಸುಮಾರು 20,000 ಆರ್ಕಿಡ್‌ ಜಾತಿಗಳಲ್ಲಿ, ತಿನ್ನಲು ಯೋಗ್ಯವಾದ ವಸ್ತುವನ್ನು ಉತ್ಪಾದಿಸುವಂಥ ಆರ್ಕಿಡ್‌ ಜಾತಿಯು ವೆನಿಲ ಮಾತ್ರವೇ ಆಗಿದೆ. ವೆನಿಲ ಸಸ್ಯವು ಒಂದು ಬಳ್ಳಿಯಾಗಿದ್ದು, ಯಾವುದಾದರೊಂದು ರೀತಿಯ ಆಧಾರ ಹಾಗೂ ಸ್ವಲ್ಪ ನೆರಳು ಇದ್ದರೆ ಇದು ಹುಲುಸಾಗಿ ಬೆಳೆಯುತ್ತದೆ. ಕಾಡಿನಲ್ಲಿ ಇದು ಸಾಮಾನ್ಯವಾಗಿ ಆರ್ದ್ರವಾದ, ಉಷ್ಣವಲಯದ ಕೆಳನಾಡಿನ ಅರಣ್ಯಗಳಲ್ಲಿರುವ ಮರಗಳ ಮೇಲೆ ಹಬ್ಬಿಕೊಳ್ಳುತ್ತದೆ. ಮೆಕ್ಸಿಕೋದಲ್ಲಿನ ಸಾಂಪ್ರದಾಯಿಕ ತೋಟಗಳಲ್ಲಿ, ಪೀಚೋಕೋ ಎಂಬಂಥ ಸ್ವದೇಶೀಯ ಸಸ್ಯಗಳನ್ನು ವೆನಿಲಕ್ಕೆ ಆಧಾರ ಕೊಡಲಿಕ್ಕಾಗಿ ಉಪಯೋಗಿಸಲಾಗುತ್ತದೆ, ಆದರೆ ಇತ್ತೀಚೆಗೆ ಕಿತ್ತಿಳೆ ಹಣ್ಣಿನ ಮರಗಳನ್ನು ಈ ಉದ್ದೇಶಕ್ಕಾಗಿ ಉಪಯೋಗಿಸಲಾಗುತ್ತಿದ್ದು, ಸ್ವಲ್ಪ ಮಟ್ಟಿಗಿನ ಯಶಸ್ಸನ್ನೂ ಪಡೆದುಕೊಳ್ಳಲಾಗಿದೆ.

ವೆನಿಲ ಆರ್ಕಿಡ್‌, ಮೇಣದಂಥ ಹಸಿರುಮಿಶ್ರಿತ ಹಳದಿ ಹೂವುಗಳನ್ನು ಗೊಂಚಲುಗೊಂಚಲಾಗಿ ಬಿಡುತ್ತದೆ. ಪ್ರತಿಯೊಂದು ಹೂವು ಒಂದು ವರ್ಷದಲ್ಲಿ ಕೇವಲ ಕೆಲವು ಗಂಟೆಗಳ ವರೆಗೆ ಮಾತ್ರ ಅರಳುತ್ತದೆ. ಹೂವುಗಳಿಗೆ ಪರಾಗಸ್ಪರ್ಶಮಾಡುವ ಸೂಕ್ಷ್ಮ ಕೆಲಸವನ್ನು ಟೋಟೋನಾಕ್‌ ಇಂಡಿಯನ್ನರು ಮಾಡುವುದನ್ನು ವೀಕ್ಷಿಸುವುದು ನಯನಮನೋಹರ ನೋಟವಾಗಿದೆ. ಇಡೀ ಗಿಡದ ಜೀವರಸವನ್ನು ಬತ್ತಿಸದಿರಲಿಕ್ಕಾಗಿ, ಅವರು ಪ್ರತಿಯೊಂದು ಗೊಂಚಲಿನಲ್ಲಿರುವ ಕೆಲವೇ ಹೂವುಗಳಿಗೆ ಪರಾಗಸ್ಪರ್ಶಮಾಡುತ್ತಾರೆ. ಹೀಗೆ ಮಾಡದಿದ್ದಲ್ಲಿ, ಇದು ಗಿಡವನ್ನು ದುರ್ಬಲಗೊಳಿಸಿ, ಅದು ಬೇಗನೆ ರೋಗಕ್ಕೆ ತುತ್ತಾಗುವಂತೆ ಮಾಡುತ್ತದೆ. ಪರಾಗಸ್ಪರ್ಶದ ಫಲಿತಾಂಶವಾಗಿ ಉಂಟಾಗುವ ಪುಟ್ಟ ಪುಟ್ಟ ಬೀಜಗಳನ್ನು ಒಳಗೊಂಡಿರುವ ಉದ್ದವಾದ ಹಸಿರು ತೆಳೆಗಳು ಅಥವಾ ಕಾಯಿಗಳನ್ನು, ಆರರಿಂದ ಒಂಬತ್ತು ತಿಂಗಳುಗಳ ನಂತರ ಮತ್ತು ಅವು ಪೂರ್ಣವಾಗಿ ಹಣ್ಣಾಗುವುದಕ್ಕೆ ಮೊದಲು ಕೈಯಿಂದ ಕೀಳಲಾಗುತ್ತದೆ.

ಹದಗೊಳಿಸುವ ಕಾರ್ಯವಿಧಾನ

ಆಸಕ್ತಿಕರ ಸಂಗತಿಯೇನೆಂದರೆ, ತಾಜಾ ವೆನಿಲ ಕಾಯಿಗಳಿಗೆ ಯಾವುದೇ ರುಚಿ ಅಥವಾ ಸುವಾಸನೆ ಇರುವುದಿಲ್ಲ. ಅವು ತುಂಬ ದೀರ್ಘ ಸಮಯದ ಹದಗೊಳಿಸುವ ಕಾರ್ಯವಿಧಾನಕ್ಕೆ ಒಳಪಡಿಸಲ್ಪಡಬೇಕು, ಮತ್ತು ಇದರ ಫಲಿತಾಂಶವಾಗಿ ಅದರಿಂದ ವಿಶಿಷ್ಟವಾದ ಸುವಾಸನೆ ಹಾಗೂ ರುಚಿಯಿರುವಂಥ ವೆನಿಲದ ಘಟಕ ದ್ರವ್ಯವು ಬಿಡುಗಡೆಯಾಗುತ್ತದೆ. ಈ ಕಾರ್ಯವಿಧಾನದಿಂದ ಮತ್ತು ಕೈಯಿಂದ ಪರಾಗಸ್ಪರ್ಶಮಾಡಬೇಕಾಗಿರುವ ಕಾರಣದಿಂದ, ವೆನಿಲವು ಅತಿ ದುಬಾರಿ ಸಂಬಾರ ಪದಾರ್ಥಗಳಲ್ಲಿ ಒಂದಾಗಿ ಪರಿಣಮಿಸಿದೆ. ಮೆಕ್ಸಿಕೋದಲ್ಲಿನ ಸಾಂಪ್ರದಾಯಿಕ ಹದಗೊಳಿಸುವಿಕೆಯ ಕಾರ್ಯವಿಧಾನದಲ್ಲಿ ವೆನಿಲ ಕಾಯಿಗಳನ್ನು ದಟ್ಟ ಬಣ್ಣದ ಕಂಬಳಿಗಳ ಮೇಲೆ ಹರಡಿಸಿ, ಆರಂಭದ ಒಣಗಿಸುವಿಕೆಗಾಗಿ ಸೂರ್ಯನ ಬಿಸಿಲಿಗೆ ಒಡ್ಡುವುದು ಒಳಗೂಡಿದೆ. ಇದನ್ನು ಸೂರ್ಯನ ಬಿಸಿಲಿನಿಂದ ಬಾಡಿಸುವುದು ಎಂದು ಕರೆಯಲಾಗುತ್ತದೆ. ಇಂದು ಆರಂಭದ ಒಣಗಿಸುವಿಕೆಗಾಗಿ ಒಲೆಗಳಲ್ಲಿ ಬಾಡಿಸುವುದು ತುಂಬ ಸರ್ವಸಾಮಾನ್ಯವಾಗಿದೆ. ನಂತರ ವೆನಿಲವು ತೇವಾಂಶವನ್ನು ಹೊರಸೂಸಲಿಕ್ಕಾಗಿ ಅದನ್ನು ಕಂಬಳಿಗಳಲ್ಲಿ ಹಾಗೂ ಎಸ್ಟೆರಾಸ್‌ ಅಥವಾ ಚಾಪೆಗಳಲ್ಲಿ ಸುತ್ತಿ ವಿಶೇಷ ಪೆಟ್ಟಿಗೆಗಳಲ್ಲಿ ಇಡಲಾಗುತ್ತದೆ. ಇದಾದ ಬಳಿಕ, ವೆನಿಲವನ್ನು ಒಂದು ದಿನ ಬಿಟ್ಟು ಇನ್ನೊಂದು ದಿನ ಬಿಸಿಲಿನಲ್ಲಿ ಇಡಲಾಗುತ್ತದೆ ಮತ್ತು ಅನೇಕ ದಿನಗಳ ವರೆಗೆ ತೇವಾಂಶವನ್ನು ಹೊರಸೂಸುವಂತೆ ಮಾಡಲಾಗುತ್ತದೆ. ವೆನಿಲ ಕಾಯಿಗಳು ಕಡು ಕಂದು (ಚಾಕೊಲೆಟ್‌) ಬಣ್ಣಕ್ಕೆ ತಿರುಗುವ ತನಕ ಹೀಗೆ ಮಾಡಲಾಗುತ್ತದೆ. ಅನಂತರ, ಸುಮಾರು 45 ದಿನಗಳ ವರೆಗೆ ಪರಿವೇಷ್ಟಕ ಉಷ್ಣತೆಯಲ್ಲಿ ನಿಧಾನವಾಗಿ ಒಣಗಿಸಲಿಕ್ಕಾಗಿ, ಅವುಗಳನ್ನು ತೇವಾಂಶವನ್ನು ಹೊರಸೆಳೆಯುವ ಪೆಟ್ಟಿಗೆಗಳಲ್ಲಿ ಅಥವಾ ಮೇಣದ ಪೇಪರಿನಿಂದ ಆವೃತವಾದ ಹಾಸಿಗೆಗಳಲ್ಲಿ ಇಡಲಾಗುತ್ತದೆ. ಇಷ್ಟೆಲ್ಲಾ ಆದ ಬಳಿಕ ತಮ್ಮ ಪೂರ್ಣ ಕಂಪನ್ನು ವರ್ಧಿಸಲಿಕ್ಕಾಗಿ ಇವುಗಳನ್ನು ಮುಚ್ಚಿದ ಡಬ್ಬ ಅಥವಾ ಪಾತ್ರೆಗಳೊಳಗೆ ಸುಮಾರು ಮೂರು ತಿಂಗಳುಗಳ ವರೆಗೆ ಹದಗೊಳಿಸಲಾಗುತ್ತದೆ. ಹೀಗೆ ವೆನಿಲ ಉತ್ಪಾದನೆಯು, ಬಹಳಷ್ಟು ದುಡಿಮೆಯನ್ನು ಆವಶ್ಯಪಡಿಸುವಂಥ ಒಂದು ಕಾರ್ಯಯೋಜನೆಯಾಗಿದೆ.

ನೈಸರ್ಗಿಕ ವೆನಿಲವೊ ಅಥವಾ ಕೃತಕ ವೆನಿಲವೊ?

ವೆನಿಲವು, ಮರದ ತಿರುಳಿನ ಉಪಉತ್ಪನ್ನಗಳಿಂದ ಸಂಯೋಗ ತಯಾರಿಕೆಯ ಮೂಲಕವೂ ಉತ್ಪಾದಿಸಲ್ಪಟ್ಟಿದೆ. ವೆನಿಲದಿಂದ ಮಾಡಲ್ಪಟ್ಟಿರಬಹುದಾದ ಉತ್ಪನ್ನಗಳ ಲೇಬಲ್‌ಗಳನ್ನು ಓದುವುದು ನಿಮ್ಮನ್ನು ಇನ್ನಷ್ಟು ಚಕಿತಗೊಳಿಸಬಹುದು. ಉದಾಹರಣೆಗೆ, ಅಮೆರಿಕದಲ್ಲಿ “ವೆನಿಲ” ಎಂಬ ಲೇಬಲ್‌ ಇರುವ ಐಸ್‌ ಕ್ರೀಮ್‌ ಶುದ್ಧವಾದ ವೆನಿಲ ಸಾರದಿಂದ ಹಾಗೂ/ಅಥವಾ ವೆನಿಲ ಕಾಯಿಗಳಿಂದ ಮಾಡಲ್ಪಟ್ಟಿರುವಾಗ, “ವೆನಿಲ ರುಚಿಯಿರುವಂಥದ್ದು” ಎಂಬ ಲೇಬಲ್‌ ಇರುವ ಐಸ್‌ ಕ್ರೀಮ್‌ನಲ್ಲಿ 42 ಪ್ರತಿಶತ ಕೃತಕ ವೆನಿಲ ರುಚಿಕಾರಕವು ಒಳಗೂಡಿರಬಹುದು, ಮತ್ತು “ಕೃತಕ ರುಚಿಯಿರುವಂಥದ್ದು” ಎಂಬ ಲೇಬಲ್‌ ಇರುವ ಐಸ್‌ ಕ್ರೀಮ್‌ನಲ್ಲಿ ನಕಲಿ ರುಚಿಕಾರಕಗಳು ಮಾತ್ರ ಒಳಗೂಡಿರಬಹುದು. ಆದರೆ ಭೋಜನ ರಸಿಕರು ದೃಢೀಕರಿಸುವಂತೆ, ನಿಜವಾದ ವೆನಿಲದ ರುಚಿಗೆ ಬದಲಿಯಾದದ್ದು ಯಾವುದೂ ಇಲ್ಲ.

ಕರಾವಳಿ ಮಳೆಕಾಡಿನ ವಿನಾಶದಂಥ ಅಂಶಗಳಿಂದ ಹಾಗೂ ಇತ್ತೀಚಿಗೆ ಉಂಟಾದ ಪ್ರವಾಹದಿಂದ ಮೆಕ್ಸಿಕೋ ದೇಶದ ವೆನಿಲ ಉತ್ಪಾದನೆಯು ಕುಂಠಿತಗೊಂಡಿದ್ದು, ಈ ದೇಶವು ಈಗ ವೆನಿಲ ಬೆಳೆಯ ಪ್ರಮುಖ ಉತ್ಪಾದಕವಾಗಿಲ್ಲ. ಆದರೂ, ಇದು ಇನ್ನೂ ಅಮೂಲ್ಯವಾದ ಒಂದು ನಿಕ್ಷೇಪವನ್ನು, ಅಂದರೆ ವೆನಿಲದ ತಳಿ ಮೂಲವನ್ನು ಈಗಲೂ ಹೊಂದಿದೆ. * ಮೆಕ್ಸಿಕೋದ ವೆನಿಲವು ಅತ್ಯುತ್ಕೃಷ್ಟ ಪ್ರಮಾಣದ ಸುವಾಸನೆ ಹಾಗೂ ರುಚಿಯನ್ನು ಹೊಂದಿದೆ ಎಂದು ಸಾಂಪ್ರದಾಯಿಕವಾಗಿ ಪರಿಗಣಿಸಲಾಗಿದೆ. ತುಲನಾತ್ಮಕವಾಗಿ ಕಡಿಮೆ ಬೆಲೆಗಳಿಗೆ ನೈಸರ್ಗಿಕ ವೆನಿಲವನ್ನು ಕೊಂಡುಕೊಳ್ಳಲಿಕ್ಕಾಗಿ, ಮೆಕ್ಸಿಕೋದ ಗಡಿಯಲ್ಲಿರುವ ಅಂಗಡಿಗಳಿಗೆ ಮತ್ತು ಅಲ್ಲಿನ ವಿಮಾನ ನಿಲ್ದಾಣಗಳಲ್ಲಿರುವ ತೆರಿಗೆರಹಿತ ಮಳಿಗೆಗಳಿಗೆ ಆಗಿಂದಾಗ್ಗೆ ಭೇಟಿ ನೀಡುವ ಪ್ರವಾಸಿಗರು ಇದನ್ನು ಒಪ್ಪಿಕೊಳ್ಳುವಂತೆ ತೋರುತ್ತದೆ. ಮುಂದಿನ ಬಾರಿ ನೀವು ನೈಸರ್ಗಿಕ ವೆನಿಲದಿಂದ ಮಾಡಲ್ಪಟ್ಟಿರುವ ಐಸ್‌ ಕ್ರೀಮನ್ನು ತಿನ್ನುವಾಗ, ಅದರ ದೀರ್ಘ ಇತಿಹಾಸದ ಕುರಿತು ಮತ್ತು ಅದನ್ನು ಉತ್ಪಾದಿಸುವುದರಲ್ಲಿ ಒಳಗೂಡಿರುವ ಕೆಲಸದ ಕುರಿತು ತುಸು ಯೋಚಿಸಿ, ಆ ರುಚಿಯನ್ನು ಆಸ್ವಾದಿಸಿರಿ! (g02 09/22)

[ಪಾದಟಿಪ್ಪಣಿಗಳು]

^ ವೆನಿಲ ಕಾಯಿ ಮಧ್ಯ ಅಮೆರಿಕಕ್ಕೂ ಸೇರಿದ್ದಾಗಿದೆ.

^ ರೆಯೂನಿಯನ್‌, ಮಡಗಾಸ್ಕರ್‌, ಮರೀಶಿಯಸ್‌ ಮತ್ತು ಸೇಶೆಲ್ಸ್‌ನಲ್ಲಿರುವ ವೆನಿಲ ಕೃಷಿ ಜಮೀನುಗಳು ತಮ್ಮ ವೆನಿಲವನ್ನು, ಪ್ಯಾರಿಸ್‌ನಲ್ಲಿರುವ ಸಾರ್ಡನ್‌ ಡೆ ಪ್ಲಾಟ್‌ನ ಸಸ್ಯೋದ್ಯಾನದಿಂದ ರೆಯೂನಿಯನ್‌ಗೆ ಪರಿಚಯಿಸಲ್ಪಟ್ಟ ಕಸಿಕೊಂಬೆಯಿಂದ ಪಡೆಯುತ್ತಾರೆಂದು ಹೇಳಲಾಗುತ್ತದೆ.

[ಪುಟ 25ರಲ್ಲಿರುವ ಚಿತ್ರಗಳು]

ಟೋಟೋನಾಕ್‌ ಇಂಡಿಯನ್ನರು ಹೂವುಗಳ ಪರಾಗಸ್ಪರ್ಶಮಾಡುತ್ತಿರುವುದು (ಎಡಭಾಗದಲ್ಲಿ) ಮತ್ತು ಹದಗೊಳಿಸುವ ಕಾರ್ಯವಿಧಾನದ ಬಳಿಕ ವೆನಿಲ ಕಾಯಿಗಳನ್ನು ಆರಿಸುತ್ತಿರುವುದು (ಬಲಭಾಗದಲ್ಲಿ). ವೆನಿಲ ಆರ್ಕಿಡ್‌ (ಕೆಳಗೆ)

[ಕೃಪೆ]

Copyright Fulvio Eccardi/vsual.com