“ಒಂದು ಪಾಶವೀಯ ಕೃತ್ಯ”
“ಒಂದು ಪಾಶವೀಯ ಕೃತ್ಯ”
ಮಾರೀಯ * 14 ವರ್ಷ ಪ್ರಾಯದವಳಾಗಿದ್ದಾಗ ಒಬ್ಬ ಬಾಲ್ಯ ವೇಶ್ಯೆಯಾದಳು. ಈ ಘೋರವಾದ ಜೀವನ ಶೈಲಿಯನ್ನು ತನ್ನ ತಾಯಿಯ ಒತ್ತಾಯದ ಮೇರೆಗೆ ಅವಳು ತನ್ನದಾಗಿಸಿಕೊಂಡಿದ್ದಳು. ಅವಳು ತುಂಬ ಸುಂದರಿಯೆಂದೂ ಗಂಡಸರು ಅವಳನ್ನು ತುಂಬ ಇಷ್ಟಪಡುವರೆಂದೂ ಅವಳ ತಾಯಿ ಹೇಳಿದ್ದಳು. ಮಾತ್ರವಲ್ಲದೆ, ಅವಳು ತುಂಬ ಹಣವನ್ನೂ ಸಂಪಾದಿಸಸಾಧ್ಯವಿದೆ ಎಂದೂ ಹೇಳಿದ್ದಳು. ಸಾಯಂಕಾಲಗಳಲ್ಲಿ ಮಾರೀಯಳ ತಾಯಿ ಅವಳನ್ನು ಒಂದು ಮೋಟೆಲ್‌ಗೆ (ವಸತಿ ಗೃಹ) ಕೊಂಡೊಯ್ಯುತ್ತಿದ್ದಳು ಮತ್ತು ಅಲ್ಲಿ ಅವರು ಗಂಡಸರನ್ನು ಸಂಪರ್ಕಿಸುತ್ತಿದ್ದರು. ಒಂದೇ ರಾತ್ರಿಯಲ್ಲಿ ಮಾರೀಯ ಮೂರು ಅಥವಾ ನಾಲ್ಕು ಪುರುಷರಿಂದ ಭೋಗಿಸಲ್ಪಡುತ್ತಿದ್ದಳು.
ಮಾರೀಯಳ ಮನೆಯಿಂದ ಅಷ್ಟೇನೂ ದೂರದಲ್ಲಿರದ, 13 ವರ್ಷ ಪ್ರಾಯದ ಕಾರೀನ ಕೂಡ ವೇಶ್ಯಾವೃತ್ತಿಯಲ್ಲಿ ತೊಡಗುವಂತೆ ಒತ್ತಾಯಿಸಲ್ಪಟ್ಟಿದ್ದಳು. ತನ್ನ ಸಮಾಜದಲ್ಲಿ ಜೀವಿಸುತ್ತಿರುವ ಕಬ್ಬು ಕೆಲಸದ ಇತರ ಅನೇಕ ಕುಟುಂಬಗಳಂತೆಯೇ, ಕಾರೀನಳ ಹೆತ್ತವರು ತಮ್ಮ ನಿಗದಿತ ಸಂಪಾದನೆಯನ್ನು ಹೆಚ್ಚಿಸಲಿಕ್ಕಾಗಿ ಅವಳ ದೇಹವನ್ನು ಮಾರಿದರು. ಮತ್ತೊಂದು ಸ್ಥಳದಲ್ಲಿ, ಎಸ್ಟೆಲ ತುಂಬ ಚಿಕ್ಕ ಪ್ರಾಯದಲ್ಲಿ ಓದು-ಬರಹವನ್ನು ಕಲಿಯುವುದಕ್ಕೆ ಮುಂಚೆಯೇ ಶಾಲೆಯನ್ನು ಬಿಟ್ಟಳು ಮತ್ತು ಬೀದಿಬದಿಯ ಒಬ್ಬ ವೇಶ್ಯೆಯಾಗಿ ಕೆಲಸಮಾಡಲಾರಂಭಿಸಿದಳು. ಮತ್ತು ಡೇಸೀ ತನ್ನ ಅಣ್ಣನಿಂದ ಲೈಂಗಿಕವಾಗಿ ಭ್ರಷ್ಟಗೊಳಿಸಲ್ಪಟ್ಟಾಗ ಅವಳಿಗೆ ಆರು ವರ್ಷ ವಯಸ್ಸು. ಇದು ಅವಳ ಮೇಲೆ ಎಸಗಲ್ಪಟ್ಟ ಅನೇಕ ಅಗಮ್ಯಗಮನ ಕೃತ್ಯಗಳಲ್ಲಿ
ಕೇವಲ ಮೊದಲನೆಯದ್ದಾಗಿತ್ತು. ಅವಳು 14 ವರ್ಷ ಪ್ರಾಯದವಳಾಗಿದ್ದಾಗ ವೇಶ್ಯಾವೃತ್ತಿಯಲ್ಲಿ ತೊಡಗಿದಳು.ಲೋಕದ ಅನೇಕ ಭಾಗಗಳಲ್ಲಿ, ಬಾಲ್ಯ ವೇಶ್ಯಾವೃತ್ತಿಯ ಸಮಸ್ಯೆಯು ದಿಗಿಲುಟ್ಟಿಸುವ ನಿಜತ್ವವಾಗಿದೆ. ಇದರ ಫಲಿತಾಂಶಗಳು ಭೀಕರವಾಗಿವೆ. ಸಾಂದರ್ಭಿಕ ಅಥವಾ ಪೂರ್ಣಕಾಲಿಕ ಬಾಲ್ಯ ವೇಶ್ಯೆಯರು ಅನೇಕವೇಳೆ ಪಾತಕ ಮತ್ತು ಅಮಲೌಷಧದ ದುರುಪಯೋಗದಲ್ಲೂ ತೊಡಗುತ್ತಾರೆ. ತಮ್ಮ ದುರ್ಗತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯತೆ ಕೊಂಚವೇ ಅಥವಾ ಸಾಧ್ಯತೆಯೇ ಇಲ್ಲವೆಂದು ಅವರು ನೆನಸುವುದರಿಂದ, ಅವರಲ್ಲಿ ಅನೇಕರು ಬೇಸರ ಮತ್ತು ಅಯೋಗ್ಯ ಭಾವನೆಗೆ ಬಲಿಯಾಗುತ್ತಾರೆ.
ಬಾಲ್ಯ ವೇಶ್ಯಾವೃತ್ತಿಯ ಧ್ವಂಸಕಾರಕ ಪರಿಣಾಮಗಳನ್ನು ಪ್ರಭಾವಶಾಲಿ ವ್ಯಕ್ತಿಗಳು ಗ್ರಹಿಸುತ್ತಾರೆ. ಬ್ರಸಿಲ್‌ನ ಮಾಜಿ ರಾಷ್ಟ್ರಪತಿ ಫರ್‌ನಾಂಡೂ ಏನ್‌ರೀಕ ಕಾರ್‌ಡೋಸೂ, “ಬಾಲ್ಯ ವೇಶ್ಯಾವೃತ್ತಿಯು ಒಂದು ಪಾಶವೀಯ ಕೃತ್ಯವಾಗಿದೆ” ಎಂದು ಸೂಕ್ತವಾಗಿಯೇ ತಿಳಿಸಿದರು. ಬ್ರಸಿಲ್‌ನ ಒಂದು ವಾರ್ತಾಪತ್ರಿಕೆಯು ಬಾಲ್ಯ ವೇಶ್ಯಾವೃತ್ತಿಯ ಕುರಿತು ಈ ಗಂಭೀರವಾದ ಹೇಳಿಕೆಯನ್ನು ನೀಡಿತು: “ಅದರಿಂದ ಉತ್ಪತ್ತಿಯಾಗುವ [ಹಣಕ್ಕಾಗಿ], ಈ ಚಾಳಿಯು ಸಾಮಾನ್ಯವಾಗಿರುವ, ಸಹಿಸಲ್ಪಡುತ್ತಿರುವ, ಅಂಗೀಕರಿಸಲ್ಪಡುತ್ತಿರುವ ಮತ್ತು ಅಪೇಕ್ಷಣೀಯವೂ ಆಗಿರುವ ದೇಶಗಳು ಸಹ ಇದು ಮಾಡುವ ಧ್ವಂಸವನ್ನು ಪ್ರತಿ ದಿನವೂ ಅನುಭವಿಸುತ್ತವೆ. ಇದು ಉತ್ಪಾದಿಸಬಲ್ಲ ಯಾವುದೇ ಹಣಕಾಸಿನ ಆದಾಯವು, ಇಂತಹ ಚಾಳಿಯಿಂದ ಉಂಟಾಗುವ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಅನಾಹುತಗಳಿಂದ ಸಂದೇಹವಿಲ್ಲದೆ ಶೂನ್ಯಾವಸ್ಥೆಗಿಳಿಯುತ್ತದೆ.”
ಬಾಲ್ಯ ವೇಶ್ಯಾವೃತ್ತಿಯನ್ನು ನಿಲ್ಲಿಸಬಯಸುವವರ ಸದುದ್ದೇಶಗಳ ಹೊರತೂ, ಈ ಸಮಸ್ಯೆಯು ಬೆಳೆಯುತ್ತಿದೆ. ಈ ಘೋರ ಪರಿಸ್ಥಿತಿಗೆ ಯಾವುದು ನಡಿಸುತ್ತದೆ? ಇಷ್ಟು ಮಂದಿ ವ್ಯಕ್ತಿಗಳು ಇಂತಹ ಅಪರಾಧ ಕೃತ್ಯವನ್ನು ಏಕೆ ಸಹಿಸಿಕೊಳ್ಳುತ್ತಾರೆ ಅಥವಾ ಅದನ್ನು ಉತ್ತೇಜಿಸುತ್ತಾರೆ? (g03 2/08)
[ಪಾದಟಿಪ್ಪಣಿ]
^ ಈ ಮುಖಪುಟ ಲೇಖನಗಳಲ್ಲಿ ಹೆಸರುಗಳು ಬದಲಾಯಿಸಲ್ಪಟ್ಟಿವೆ.
[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಬಾಲ್ಯ ವೇಶ್ಯಾವೃತ್ತಿಯು ಒಂದು ಪಾಶವೀಯ ಕೃತ್ಯ.”—ಬ್ರಸಿಲ್‌ನ ಮಾಜಿ ರಾಷ್ಟ್ರಪತಿ ಫರ್‌ನಾಂಡೂ ಏನ್‌ರೀಕ ಕಾರ್‌ಡೋಸೂ
[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಎಲ್ಲಾ ರೀತಿಯ ಲೈಂಗಿಕ ಶೋಷಣೆಯು, ಬಲಿಯಾಗುವ ವ್ಯಕ್ತಿಯ ವಯಸ್ಸು, ಲಿಂಗ, ವರ್ಗ, ಜಾತಿ ಅಥವಾ ದರ್ಜೆಯ ಹೊರತೂ ಮಾನವ ಮರ್ಯಾದೆಗೆ ಅಸಮಂಜಸವಾಗಿದೆ ಮತ್ತು ಈ ಕಾರಣ ಮೂಲಭೂತ ಮಾನವ ಹಕ್ಕುಗಳನ್ನು ಉಲ್ಲಂಘಿಸುವಂತಿದೆ.”—ಯುನೆಸ್ಕೊ ಸೋರ್ಸಸ್