ಜಗತ್ತನ್ನು ಗಮನಿಸುವುದು
ಜಗತ್ತನ್ನು ಗಮನಿಸುವುದು
“ಟೆಲಿಫೋನ್ ತಾಯಂದಿರು” ಉತ್ತಮವಾದ ಆಹಾರವನ್ನು ಒದಗಿಸುತ್ತಾರೆ
ಸ್ಪೆಯ್ನ್‌ನ ಮಡ್ರಿಡ್‌ನಲ್ಲಿ, ರುಚಿಕರವಾದ ಆಹಾರವನ್ನು ತಿನ್ನಬಯಸುವ ಆದರೆ ಅದನ್ನು ತಯಾರಿಸಲು ಸಮಯದ ಅಥವಾ ಇಚ್ಛೆಯ ಕೊರತೆಯಿರುವ ಕಾರ್ಯಮಗ್ನ ಯುವ ಜನರು ಒಂದು ಹೊಸ ಪರಿಹಾರವನ್ನು ಕಂಡುಕೊಂಡಿದ್ದಾರೆ. ಇಂಟರ್‌ನೆಟ್‌ನ ಮೂಲಕ ಅವರು “ಟೆಲಿಫೋನ್ ತಾಯಿ”ಯನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ ಎಂಬುದಾಗಿ ಎಲ್ ಪಾಈಸ್ ಎಂಬ ಸ್ಪೆಯ್ನ್‌ನ ವಾರ್ತಾಪತ್ರಿಕೆಯು ತಿಳಿಸುತ್ತದೆ. ವಾರದಲ್ಲಿ ಎರಡಾವರ್ತಿ ಟ್ಯಾಕ್ಸಿಯ ಮೂಲಕ ಕೆಲವು ದಿವಸಗಳಿಗೆ ಸಾಕಾಗುವಷ್ಟು ಆರೋಗ್ಯಕರವಾದ, ಮನೆಯಲ್ಲೇ ತಯಾರಿಸಿದ ಆಹಾರವನ್ನು ಅವರ ದತ್ತುತಾಯಿಯು ಕಳುಹಿಸಿಕೊಡುತ್ತಾಳೆ. ಈ ಊಟದಲ್ಲಿ ಮೀನು, ಶಾವಿಗೆ ಭಕ್ಷ್ಯ, ಕಾಯಿಪಲ್ಯಗಳು, ಕಾಳುಗಳು, ಮಾಂಸ, ಹಣ್ಣುಹಂಪಲು ಮತ್ತು ಕ್ಷೀರೋತ್ಪನ್ನಗಳು ಸೇರಿರುತ್ತವೆ. ಹೊಸ ದತ್ತುಮಗನ ಬಳಿ ಇರುವ ಪ್ರಿಜ್‌ನ ಸ್ಥಿತಿಗತಿ ಹೇಗಿದೆ, ಅವನು ಯಾವ ರೀತಿಯ ರುಚಿಯನ್ನು ಇಷ್ಟಪಡುತ್ತಾನೆ, ಮತ್ತು ಅವನ ಆವಶ್ಯಕತೆಗಳೇನು ಎಂಬುದನ್ನು ತಿಳಿಯಲು “ಟೆಲಿಫೋನ್ ತಾಯಿ” ಟೆಲಿಫೋನಿನ ಮೂಲಕ ಪ್ರತಿಯೊಬ್ಬ ಹೊಸ ದತ್ತು“ಮಗ”ನೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳುತ್ತಾಳೆ. ನಾಲ್ಕು ಅಥವಾ ಹೆಚ್ಚಿನ ಜನರಿಗೆ ಆಹಾರವನ್ನು ಪ್ರತಿದಿನ ಅವರು ಕೆಲಸಮಾಡುವ ಆಫೀಸುಗಳಿಗೇ ನೇರವಾಗಿ ವಿತರಣೆಮಾಡುವ ಏರ್ಪಾಡು ಸಹ ಇದೆ. ವಾರಾಂತ್ಯಕ್ಕೆಂದೇ ಒಂದು ಭಕ್ಷ್ಯಗಳ ಪಟ್ಟಿ (ಮೆನ್ಯೂ) ಸಹ ಇದೆ. (g03 1/22)
“ಸುಳ್ಳು ಹೇಳುವುದು ಮಿದುಳಿಗೆ ಕಠಿಣವಾದ ಕೆಲಸ”
ಮಿದುಳಿಗೆ ಸತ್ಯ ಹೇಳುವಾಗ ಮಾಡಬೇಕಾಗುವುದಕ್ಕಿಂತಲೂ ಸುಳ್ಳು ಹೇಳುವಾಗ ಬಹಳ ಹೆಚ್ಚು ಕಠಿಣವಾಗಿ ಕೆಲಸಮಾಡಬೇಕಾಗುತ್ತದೆ ಎಂಬುದನ್ನು ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದಲ್ಲಿರುವ ಸಂಶೋಧಕರು ಕಂಡುಕೊಂಡರು. ವ್ಯಕ್ತಿಯೊಬ್ಬನು ಸುಳ್ಳು ಹೇಳುವಾಗ ಮಿದುಳಿನ ಯಾವ ಭಾಗವು ಕ್ರೀಯಾಶೀಲವಾಗುತ್ತದೆ ಎಂಬುದನ್ನು ಗುರುತಿಸಲಿಕ್ಕಾಗಿ, ಕಾರ್ಯಸಮರ್ಥ ಕಾಂತೀಯ ಅನುರಣನ ಚಿತ್ರ ಯಂತ್ರ (ಎಫ್‌ಎಮ್‌ಆರ್‌ಐ)ವನ್ನು ಉಪಯೋಗಿಸುವ ಮೂಲಕ ಈ ಪ್ರಕೃತಿಯನ್ನು ಡಾ. ಡ್ಯಾನಿಯೆಲ್ ಲಾಂಗ್‌ಲೇಬೆನ್ ಅಧ್ಯಯನ ಮಾಡಿದರು. ಒಂದು ಪ್ರಶ್ನೆಯನ್ನು ಎದುರಿಸಿದಾಗ, ನಮ್ಮ ಮಿದುಳು ಮೊದಲಾಗಿ ಅದನ್ನು ಸಂಸ್ಕರಿಸಬೇಕಾಗುತ್ತದೆ. ಆದುದರಿಂದ, “ಸ್ವಾಭಾವಿಕವಾಗಿಯೇ ಒಬ್ಬ ಸುಳ್ಳುಗಾರನು ಸುಳ್ಳು ಉತ್ತರವನ್ನು ಕೊಡುವುದಕ್ಕಿಂತ ಮುಂಚಿತವಾಗಿ ಸತ್ಯ ಉತ್ತರದ ಕುರಿತು ಆಲೋಚಿಸುತ್ತಾನೆ” ಎಂಬುದಾಗಿ ಮೆಕ್ಸಿಕೊ ಪಟ್ಟಣದ ದ ನ್ಯೂಸ್ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. “ಮಿದುಳಿನಲ್ಲಿ ಏನೂ ಇಲ್ಲದೆ ಏನನ್ನಾದರೂ ಪಡೆಯಲು ಸಾಧ್ಯವಿಲ್ಲ” ಎಂದು ಲಾಂಗ್‌ಲೇಬೆನ್ ಹೇಳುತ್ತಾರೆ. “ಸತ್ಯವನ್ನು ಹೇಳುವುದಕ್ಕಿಂತಲೂ ಸುಳ್ಳು ಹೇಳುವ ಪ್ರಕ್ರಿಯೆಯು ಅತಿ ಜಟಿಲವಾಗಿದೆ. ಆ ಕಾರಣ ಇದು ಮಿದುಳಿನ ನರಕೋಶಕ್ಕೆ ಅಧಿಕ ಚಟುವಟಿಕೆಯನ್ನು ಉಂಟುಮಾಡುತ್ತದೆ.” ನರಕೋಶದ ಈ ಅಧಿಕ ಚಟುವಟಿಕೆಯು ಎಫ್‌ಎಮ್‌ಆರ್‌ಐ ಯಂತ್ರದಲ್ಲಿ ಒಂದು ಬಲ್ಬು ಉರಿಯುತ್ತಿರುವಂತೆ ತೋರಿಬರುತ್ತದೆ. “ನಿರರ್ಗಳವಾಗಿ ಮಾತಾಡುವವನಿಗೆ ಸಹ, ಸುಳ್ಳು ಹೇಳುವುದು ಮಿದುಳಿಗೆ ಕಠಿಣವಾದ ಕೆಲಸವಾಗಿದೆ” ಎಂದು ವಾರ್ತಾಪತ್ರಿಕೆಯು ತಿಳಿಸುತ್ತದೆ. (g03 2/22)
ಲೋಕದಲ್ಲಿರುವ ಕುರುಡರಲ್ಲಿ 25 ಪ್ರತಿಶತ ಕುರುಡರು ಭಾರತದಲ್ಲಿದ್ದಾರೆ
“ಭಾರತವು 1.2 ಕೋಟಿ ಕುರುಡರನ್ನು ಹೊಂದಿದ ಶೋಚನೀಯ ಸನ್ನಿವೇಶದಲ್ಲಿದೆ. ಇದು, ಲೋಕದಲ್ಲಿರುವ ಕುರುಡರ ಒಟ್ಟು ಸಂಖ್ಯೆಯಲ್ಲಿ 25 ಪ್ರತಿಶತವಾಗಿದೆ” ಎಂಬುದಾಗಿ ಭಾರತದ ಡೆಕ್ಕನ್ ಹೆರಲ್ಡ್ ವಾರ್ತಾಪತ್ರಿಕೆ ತಿಳಿಸುತ್ತದೆ. ಭಾರತದಾದ್ಯಂತ 40ಕ್ಕಿಂತಲೂ ಹೆಚ್ಚಿನ ಪಟ್ಟಣಗಳಲ್ಲಿನ ಶಾಲಾಕಾಲೇಜುಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ, 2002ರ ಯೂಥ್ಸ್ ವಿಷನ್ ಇಂಡಿಯದ ಒಂದು ವರದಿಯು ಸಹ ತಿಳಿಸುವುದು: “ದೃಷ್ಟಿಯ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕಾಗಿರುವ 50 ಪ್ರತಿಶತಕ್ಕಿಂತಲೂ ಹೆಚ್ಚಿನ ಯುವಕರು, ತಮಗೆ ಆ ಸಮಸ್ಯೆಯಿದೆ ಎಂಬುದನ್ನು ತಿಳಿದಿರಲಿಲ್ಲ.” ಕಣ್ಣಿನ ವಕ್ರೀಕಾರಕ ಸಮಸ್ಯೆ ಮತ್ತು ಪೊರೆಯು, ಈ ದೇಶದಲ್ಲಿರುವ ಕಣ್ಣಿನ ಸಮಸ್ಯೆಗಳಲ್ಲಿ ಹೆಚ್ಚಿನವುಗಳಿಗೆ ಕಾರಣವಾಗಿದೆ. ಇವು ಸರಿಪಡಿಸಬಹುದಾದ ಸಮಸ್ಯೆಗಳಾಗಿವೆ. “ತಮಗೆ ಕಣ್ಣಿನ ಸಮಸ್ಯೆಯಿದೆ ಎಂಬುದನ್ನು ಜನರು ತಿಳಿಯದಿರುವುದು” ಮತ್ತು “ಕಣ್ಣಿನ ಚಿಕಿತ್ಸಕರ ಕೊರತೆ” ಇವೇ ಭಾರತದ ಸಮಸ್ಯೆಗೆ ಮೂಲಕಾರಣಗಳು ಎಂಬುದಾಗಿ ವಾರ್ತಾಪತ್ರದ ಲೇಖನವು ತಿಳಿಸುತ್ತದೆ. ಅದು ಕೂಡಿಸುವುದು: “ಲೋಕಾರೋಗ್ಯ ಸಂಸ್ಥೆಯಿಂದ (ಡಬ್ಲ್ಯೂಏಚ್‌ಓ) ಶಿಫಾರಸ್ಸು ಮಾಡಲ್ಪಟ್ಟ 40,000 ದೃಷ್ಟಿಮಾಪನಕಾರರಿಗೆ ಹೋಲಿಸುವಾಗ ಭಾರತದಲ್ಲಿ ಕೇವಲ 5000 ದೃಷ್ಟಿಮಾಪನಕಾರರು ಇದ್ದಾರೆ.” (g03 1/08)
ಇನುವಟ್ ಬೈಬಲ್ ಪೂರ್ಣಗೊಳಿಸಲ್ಪಟ್ಟಿತು
ಕೆನಡದ ಇನುವಟ್ ಜನರು ಮಾತಾಡುವ ಇನೂಕ್ಟಿಟೂಟ್ ಭಾಷೆಗೆ ಸಂಪೂರ್ಣ ಬೈಬಲನ್ನು ಭಾಷಾಂತರಿಸುವ 23 ವರುಷದ ಯೋಜನೆಯನ್ನು ಕೆನಡದ ಬೈಬಲ್ ಸೊಸೈಟಿಯು ಪೂರ್ಣಗೊಳಿಸಿತು. ಭಾಷಾಂತರವು ಒಂದು ಕಷ್ಟಕರವಾದ ಕೆಲಸವಾಗಿತ್ತು. ಏಕೆಂದರೆ, “ಸೀಲ್ ಪ್ರಾಣಿ, ಕಡಲ್ಗುದುರೆ ಮತ್ತು ಕೇವಲ ಕೆಲವೇ ಗಿಡಗಳ ಪರಿಚಯವಿರುವ ಈ ಜನರ ಭಾಷೆಯಲ್ಲಿ, ಕುರಿ, ಒಂಟೆಗಳು ಮತ್ತು ಕತ್ತೆಗಳು ಮುಂತಾದ ಪ್ರಾಣಿಗಳನ್ನು ಒಳಗೊಂಡ ಜನರ ಸಂಸ್ಕೃತಿಯನ್ನು ವಿವರಿಸಲು ಸೂಕ್ತವಾದ ಪದಗಳನ್ನು ಉಪಯೋಗಿಸಿ ಭಾಷಾಂತರಿಸುವುದು ಬಹಳ ಕಷ್ಟಕರವಾಗಿತ್ತು” ಎಂದು ಕೆನಡದ ಬೈಬಲ್ ಸೊಸೈಟಿಯ ಶಾಸ್ತ್ರವಚನ ಭಾಷಾಂತರದ ಮೇಲ್ವಿಚಾರಕರಾದ ಹಾರ್ಟ್ ವೀನ್ಸ್‌ರವರು ತಿಳಿಸಿದರು. “ಉದಾಹರಣೆಗೆ, ತಾಳೆ ಮರಗಳಿಗೆ ಬೈಬಲಿನಲ್ಲಿ ಅನೇಕ ಪದಗಳಿವೆ. ಆದರೆ ನೂನವೂಟ್‌ನಲ್ಲಿ ಮರಗಳೇ ಇಲ್ಲ. ಆದುದರಿಂದ ತಾಳೆ ಮರಗಳನ್ನು ವರ್ಣಿಸುವುದು ಬಹಳ ಕಷ್ಟಕರವಾಗಿದೆ.” ಇನೂಕ್ಟಿಟೂಟ್, ಕೆನಡದಲ್ಲಿ ಜೀವಿಸುವ ಹೆಚ್ಚುಕಡಿಮೆ 28,000 ಜನರ ಮಾತೃಭಾಷೆಯಾಗಿದೆ. ನ್ಯಾಷನಲ್ ಪೋಸ್ಟ್ ವಾರ್ತಾಪತ್ರಕ್ಕನುಸಾರ, “ಬೈಬಲ್ ಈಗ 2,285ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿದೆ.” (g03 1/08)
ಪರಿವರ್ತನೆಗೊಳ್ಳುತ್ತಿರುವ ಚರ್ಚುಗಳು
“ಇಸವಿ 1881ರಲ್ಲಿ ಮಾರ್ಕ್ ಟ್ವೇನ್ ಮಾಂಟ್ರೀಯಲ್ ನಗರಕ್ಕೆ ಭೇಟಿ ನೀಡಿದಾಗ, ‘ನೀವು ಒಂದು ಕಲ್ಲನ್ನು ಎಸೆಯುವುದಾದರೆ ಖಂಡಿತವಾಗಿಯೂ ಯಾವುದಾದರೊಂದು ಚರ್ಚಿನ ಕಿಟಕಿಯ ಗಾಜು ಒಡೆಯುತ್ತದೆ,’ ಎಂಬುದಾಗಿ ಆತನು ಹೇಳುವಷ್ಟು ಚರ್ಚುಗಳು ಆ ನಗರದಲ್ಲಿ ಇದ್ದವು. ಆದರೆ ಈಗ, ಹಿಂದೊಮ್ಮೆ ಚರ್ಚುಗಳಿದ್ದ ಸ್ಥಳದಲ್ಲಿ ಅಪಾರ್ಟ್‌ಮೆಂಟ್‌ಗಳು ತಲೆದೋರಿವೆ. ಆದುದರಿಂದ ಈಗ ಕಲ್ಲೆಸೆದರೆ ಚರ್ಚಿಗೆ ಬದಲಾಗಿ ಅಪಾರ್ಟ್‌ಮೆಂಟಿನ ಕಿಟಕಿಯ ಗಾಜನ್ನು ಒಡೆಯುವಿರಿ” ಎಂದು ಮಾಂಟ್ರೀಯಲ್‌ನ ದ ಗಸೆಟ್ ವಾರ್ತಾಪತ್ರಿಕೆಯು ತಿಳಿಸುತ್ತದೆ. ಈಗಲೂ ಆ ನಗರದಲ್ಲಿ 600 ಆರಾಧನಾ ಸ್ಥಳಗಳಿವೆಯಾದರೂ, ಅವುಗಳಲ್ಲಿ ಹೆಚ್ಚುಕಡಿಮೆ 100 ಸ್ಥಳಗಳು—ಹೆಚ್ಚಿನವು ಕ್ಯಾಥೊಲಿಕ್ ಚರ್ಚುಗಳು—ಮುಂದಿನ ದಶಕದಲ್ಲಿ ಮಾರಾಟಕ್ಕಾಗಿ ಇಡಲ್ಪಡಬಹುದು. “ಮಾಂಟ್ರೀಯಲ್‌ನ ಆರ್ಚ್‌ಡಯೊಸಿಸ್‌ಗನುಸಾರ, 1960ರಿಂದ ಸುಮಾರು 25 ಕ್ಯಾಥೊಲಿಕ್ ಪಾದ್ರಿಯಾಡಳಿತದ ಪ್ರಾಂತಗಳು ಮುಚ್ಚಲ್ಪಟ್ಟಿವೆ.” ಕೆನಡಾದಲ್ಲಿ ಕ್ಯಾಥೊಲಿಕ್ ಜನಸಂಖ್ಯೆಯು 1871ರಲ್ಲಿ ಇದ್ದ ಸುಮಾರು 15 ಲಕ್ಷದಿಂದ 1971ರಲ್ಲಿ ಸುಮಾರು 1 ಕೋಟಿಗೆ ಏರಿತು. ಆದರೆ, “ಮುಖ್ಯವಾಗಿ ಕ್ರೈಸ್ತ ಪ್ರಾಂತಗಳಲ್ಲಿ ಚರ್ಚಿಗೆ ಹಾಜರಾಗುವವರ ಸಂಖ್ಯೆಯು ತೀವ್ರವಾಗಿ ಕಡಿಮೆಯಾಗಿದೆ” ಎಂಬುದಾಗಿ ದ ಗಸೆಟ್ ವಾರ್ತಾಪತ್ರಿಕೆಯು ತಿಳಿಸುತ್ತದೆ. ಮಾಂಟ್ರೀಯಲ್‌ನ ಆರ್ಚ್‌ಡಯೊಸಿಸ್‌ಗಾಗಿ ಧರ್ಮಾಧಿಕಾರ ಯೋಜನೆಯನ್ನು ಮೇಲ್ವಿಚಾರಣೆ ಮಾಡುವ ಬರ್ನಾರ್ ಫೋರ್‌ಟ್ಸ್‌ನ್‌ರವರು, ಆ ಸ್ಥಳದಲ್ಲಿನ ಚರ್ಚುಗಳ ಹಾಜರಿಯು 1970ರಲ್ಲಿ ಇದ್ದ 75 ಪ್ರತಿಶತದಿಂದ ಇಂದು 8 ಪ್ರತಿಶತಕ್ಕೆ ಇಳಿದಿದೆ ಎಂದು ವಾರ್ತಾಪತ್ರಿಕೆಗೆ ತಿಳಿಸಿದರು.(g03 2/22)
ರಕ್ತಪೂರಣಗಳು ಶ್ವಾಸಕೋಶಗಳಿಗೆ ಹಾನಿಮಾಡಬಲ್ಲವು
“ರಕ್ತದ ಉತ್ಪನ್ನಗಳನ್ನು ಸ್ವೀಕರಿಸುವ ಜನರು, ಮುಖ್ಯವಾಗಿ ದ್ರವರೂಪದ ಪ್ಲಾಸ್ಮವಿರುವ ಉತ್ಪನ್ನಗಳನ್ನು ಪಡೆಯುವವರು, ರಕ್ತಪೂರಣಕ್ಕೆ ಸಂಬಂಧಿಸಿದ ತೀವ್ರವಾದ ಶ್ವಾಸಕೋಶದ ಹಾನಿಯನ್ನು ಬೆಳೆಸಿಕೊಳ್ಳುವ ಅಪಾಯದಲ್ಲಿರಬಹುದು,” ಎಂಬುದಾಗಿ ಅಮೆರಿಕದ ಆಹಾರ ಮತ್ತು ಔಷಧ ಆಡಳಿತದ ನಿಯತಕಾಲಿಕ ಪತ್ರಿಕೆಯಾದ ಎಫ್‌ಡಿಎ ಕನ್ಸೂಮರ್ ತಿಳಿಸುತ್ತದೆ. ಈ ಪರಿಸ್ಥಿತಿಯನ್ನು ಕಂಡುಹಿಡಿದು, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದಲ್ಲಿ ಇದು ಮರಣಕ್ಕೆ ನಡಿಸಬಹುದು. “ದಾನಿಯ ರಕ್ತದಲ್ಲಿನ ಬಿಳಿ ರಕ್ತಕಣ ಪ್ರತಿಜನಕಗಳು, ರಕ್ತಪೂರಣವನ್ನು ಸ್ವೀಕರಿಸುವವನ ಬಿಳಿ ರಕ್ತಕಣಗಳೊಂದಿಗೆ ಸ್ಪಂದಿಸುವಾಗ, ದ್ರವವನ್ನು ಒಳಹೋಗುವಂತೆ ಅನುಮತಿಸುವ ಶ್ವಾಸಕೋಶದ ಅಂಗಾಂಶದಲ್ಲಿ ಬದಲಾವಣೆಗಳಾಗುತ್ತವೆ ಮತ್ತು ಇದರಿಂದ ಶ್ವಾಸಕೋಶಕ್ಕೆ ಹಾನಿಯುಂಟಾಗುತ್ತದೆ. ಈ ಹಾನಿಯನ್ನು ಉಂಟುಮಾಡುವ ದಾನಿಗಳಲ್ಲಿ ಹೆಚ್ಚಿನವರು, ಇಬ್ಬರು ಅಥವಾ ಹೆಚ್ಚಿನ ಮಕ್ಕಳಿರುವ ಸ್ತ್ರೀಯರು ಇಲ್ಲವೆ ಈಗಾಗಲೇ ಅನೇಕ ರಕ್ತಪೂರಣಗಳನ್ನು ತೆಗೆದುಕೊಂಡಿರುವ ದಾನಿಗಳಾಗಿದ್ದಾರೆ.” ರೋಗ ಲಕ್ಷಣಗಳಲ್ಲಿ, “ಜ್ವರ, ಉಸಿರಾಟದ ತೊಂದರೆ ಹಾಗೂ ರಕ್ತದೊತ್ತಡದಲ್ಲಿ ಕುಸಿತ ಮುಂತಾದವುಗಳು ಸೇರಿವೆ. ರಕ್ತವನ್ನು ಪಡೆದುಕೊಂಡವರ ಶ್ವಾಸಕೋಶಗಳು ಸಂಪೂರ್ಣವಾಗಿ ಬಿಳಿಯಾಗಿರುವುದು ಅನೇಕ ಬಾರಿ ಎಕ್ಸ್-ರೇಗಳಲ್ಲಿ ಕಂಡುಬಂದಿದೆ.” (g03 3/08)
ಮರಗಳು ನಗರ ಮಾಲಿನ್ಯವನ್ನು ಕಡಿಮೆಗೊಳಿಸುತ್ತವೆ
“ಪ್ರಪ್ರಥಮ ಬಾರಿ ಪರಿಣತರಿಗೆ, ವಿವಿಧ ಜಾತಿಯ ಮರಗಳು ಹೇಗೆ ಮಾಲಿನ್ಯವನ್ನು ಕಡಿಮೆಗೊಳಿಸುತ್ತವೆಂಬ ಪರಿಮಾಣವನ್ನು ಅಳೆಯಲು ಸಾಧ್ಯವಾಯಿತು,” ಎಂದು ಲಂಡನಿನ ದ ಸಂಡೇ ಟೈಮ್ಸ್ ವಾರ್ತಾಪತ್ರಿಕೆಯು ವರದಿಸುತ್ತದೆ. ವೆಸ್ಟ್ ಮಿಡ್ಲೆಂಡ್ ಪ್ರದೇಶದಲ್ಲಿನ ಮೂರು ವರುಷಗಳ ಅಧ್ಯಯನದಲ್ಲಿ, ಯಾವ ಜಾತಿಯ ಮರವು ಪರಿಸರದಲ್ಲಿನ ಹಾನಿಕಾರಕ ಪದಾರ್ಥಗಳನ್ನು ಅತಿ ಹೆಚ್ಚಾಗಿ ಹೀರಿಕೊಳ್ಳುತ್ತದೆ ಎಂಬ ಪರಿಮಾಣವನ್ನು ಅಳೆಯಲು ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡಿನ ವಿಜ್ಞಾನಿಗಳು ಹೆಚ್ಚುಕಡಿಮೆ 32,000 ಮರಗಳ ಸಮೀಪದ ಮಣ್ಣನ್ನು ಪರೀಕ್ಷಿಸಿದರು. ವಾತಾವರಣದಲ್ಲಿನ ಮತ್ತು ಓಸೋನ್ ಮಟ್ಟದಲ್ಲಿನ ಕಣಗಳನ್ನು ಸಹ ಸಂಶೋಧಕರು ಪರೀಕ್ಷಿಸಿದ್ದಾರೆ. ಹಾನಿಕಾರಕ ಪದಾರ್ಥಗಳನ್ನು ಹೀರಿಕೊಳ್ಳುವುದರಲ್ಲಿ ಬೂದಿಮರ, ಶಂಕುಧಾರಿ ಮರ ಮತ್ತು ಪೀತದಾರು ಮರಗಳು ಮೊದಲನೆಯ ಸ್ಥಾನದಲ್ಲಿವೆ. ಆದರೆ ಓಕ್, ವಿಲೋ ಮತ್ತು ಪಾಪ್ಲರ್ ಮರಗಳು ಕಡಿಮೆ ಪರಿಣಾಮಕಾರಿಯಾಗಿವೆ. “ಹುಲ್ಲುಗಾವಲಿಗಿಂತಲೂ ಮೂರು ಪಟ್ಟು ಹೆಚ್ಚಾಗಿ, ಮರಗಳು ವಾತಾವರಣದಲ್ಲಿನ ಮಾಲಿನ್ಯವನ್ನು ತೊಲಗಿಸುವುದರಲ್ಲಿ ಪರಿಣಾಮಕಾರಿಯಾಗಸಾಧ್ಯವಿದೆ” ಎಂಬುದನ್ನು ಅಧ್ಯಯನವು ತೋರಿಸಿಕೊಟ್ಟಿದೆ. ನಿಶ್ಚಯವಾಗಿಯೂ, ವೆಸ್ಟ್ ಮಿಡ್ಲೆಂಡ್‌ನಲ್ಲಿರುವ ಖಾಲಿ ಸ್ಥಳದಲ್ಲಿ ಅರ್ಧವನ್ನು ಮರಗಳಿಂದ ತುಂಬಿಸಿದರೆ, ಕಣಗಳಲ್ಲಿನ ವಾಯು ಮಾಲಿನ್ಯವು 20 ಪ್ರತಿಶತದಷ್ಟು ಕಡಿಮೆಗೊಳ್ಳುತ್ತದೆ ಎಂಬುದನ್ನು ಕಂಪ್ಯೂಟರ್ ಪ್ರಕ್ಷೇಪಣವು ತೋರಿಸಿತು.(g03 3/22)
ಧರ್ಮ ಮತ್ತು ಯುದ್ಧ
“ಇಂದು ನಡೆಯುವ ಅತಿ ರಕ್ತಮಯ ಹಾಗೂ ಅಪಾಯಕರವಾದ ಗಲಭೆಗಳು ಧರ್ಮದ ಹೆಸರಿನಲ್ಲಿ ನಡೆಸಲ್ಪಡುತ್ತವೆ” ಎಂಬುದಾಗಿ ಯುಎಸ್‌ಎ ಟುಡೇ ಎಂಬ ವಾರ್ತಾಪತ್ರಿಕೆಯು ತಿಳಿಸುತ್ತದೆ. ಅವು ಪರಿಹರಿಸಲು ಕಷ್ಟಕರವಾದವುಗಳಾಗಿವೆ. “ದೇವರು ನಮ್ಮ ಪಕ್ಷದಲ್ಲಿದ್ದಾನೆಂದು ಹೋರಾಟಗಾರರು ವಾದಿಸುವಾಗ, ಒಪ್ಪಂದಮಾಡಿಕೊಳ್ಳಲು ಸಿದ್ಧರಾಗುವುದು ಹಾಗೂ ಹಳೆಯ ಅಸಮಾಧಾನವನ್ನು ಕ್ಷಮಿಸಿಬಿಡುವುದು ಮುಂತಾದ ಸಾಮಾನ್ಯ ರಾಜತಂತ್ರದ ಉಪಾಯಗಳನ್ನು ಅನ್ವಯಿಸುವುದು ಬಹಳ ಕಷ್ಟಕರವಾಗಸಾಧ್ಯವಿದೆ” ಎಂಬುದಾಗಿ ವಾರ್ತಾಪತ್ರಿಕೆಯು ಕೂಡಿಸುತ್ತದೆ. “ಧರ್ಮವು ಹೋರಾಟದ ಕಾರಣವಾಗಿರುವುದಕ್ಕಿಂತಲೂ ಹೆಚ್ಚಾಗಿ ಬೆಂಬಲಕ್ಕಾಗಿ ಸಜ್ಜುಗೊಳಿಸಲ್ಪಡುವ ಉಪಕರಣವಾಗಿರುವಾಗಲೂ ಇದು ನಿಜವಾಗಿದೆ. ಈ ಸಂದರ್ಭದಲ್ಲಿ ಹೋರಾಟವು ಕಡಿಮೆ ಆಧ್ಯಾತ್ಮಿಕವಾಗಿದ್ದು, ಹೆಚ್ಚಾಗಿ ಪ್ರದೇಶ ಹಾಗೂ ಅಧಿಕಾರದ ಮೇಲೆ ಕೇಂದ್ರೀಕೃತವಾಗಬಹುದು.” ಧಾರ್ಮಿಕ ವ್ಯತ್ಯಾಸಗಳು ತಾತ್ಕಾಲಿಕ ಯುದ್ಧ ವಿರಾಮವನ್ನು ಸ್ಥಾಪಿಸುವುದನ್ನು ಸಹ ಕಷ್ಟಕರವನ್ನಾಗಿ ಮಾಡುತ್ತವೆ. ಕಾಸವೋದಲ್ಲಿ ನಡೆದ ಇತ್ತೀಚಿನ ಯುದ್ಧವು ಇದಕ್ಕೆ ಒಂದು ಉದಾಹರಣೆಯಾಗಿದೆ. ಈಸ್ಟರ್ ಹಬ್ಬದಂದು ಯುದ್ಧವನ್ನು ನಿಲ್ಲಿಸಲು ಯೋಚಿಸಲಾಯಿತು, ಆದರೆ ಕ್ಯಾಥೊಲಿಕ್ ಹಾಗೂ ಆರ್ತಡಾಕ್ಸ್ ಧರ್ಮದ ಜನರು ಆ ಹಬ್ಬವನ್ನು ಆಚರಿಸುವ ತಾರೀಖು ಬೇರೆ ಬೇರೆಯಾಗಿರುವ ಕಾರಣ ಈ ವಿಷಯವನ್ನು ಜಾರಿಗೆ ತರಸಾಧ್ಯವಾಗಲಿಲ್ಲ. “ಕೊನೆಯಲ್ಲಿ, ಯುದ್ಧ ವಿರಾಮವೇ ಇಲ್ಲದೆ ಹೋಯಿತು” ಎನ್ನುತ್ತದೆ ಯುಎಸ್‌ಎ ಟುಡೇ ವಾರ್ತಾಪತ್ರಿಕೆ.(g03 3/22)