ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದ್ವೇಷದ ಸಂಕೋಲೆಗಳಿಂದ ಬಿಡುಗಡೆ

ದ್ವೇಷದ ಸಂಕೋಲೆಗಳಿಂದ ಬಿಡುಗಡೆ

ದ್ವೇಷದ ಸಂಕೋಲೆಗಳಿಂದ ಬಿಡುಗಡೆ

ಹೋಸೇ ಗೋಮೆಸ್‌ರಿಂದ ಹೇಳಲ್ಪಟ್ಟಂತೆ

ದಕ್ಷಿಣ ಫ್ರಾನ್ಸ್‌ನ ಒಂದು ಚಿಕ್ಕ ಪಟ್ಟಣವಾದ ರಾನ್ಯಾಕ್‌ನಲ್ಲಿ 1964ರ ಸೆಪ್ಟೆಂಬರ್‌ 8ರಂದು ನಾನು ಜನಿಸಿದೆ. ಅಲ್ಜೀರಿಯ ಹಾಗೂ ಮೊರಾಕೊದಲ್ಲಿ ಹುಟ್ಟಿದ ನನ್ನ ಹೆತ್ತವರು ಮತ್ತು ಅಜ್ಜ ಅಜ್ಜಿಯರು ಆ್ಯನ್‌ಡುಲುಷಿಯನ್‌ ಜಿಪ್ಸಿಗಳಾಗಿದ್ದರು. ಜಿಪ್ಸಿ ಸಂಸ್ಕೃತಿಯಲ್ಲಿ ಸರ್ವಸಾಮಾನ್ಯವಾಗಿರುವಂತೆ ನಮ್ಮ ಕುಟುಂಬವೂ ಒಂದು ದೊಡ್ಡ ವಿಸ್ತೃತ ಕುಟುಂಬವಾಗಿತ್ತು.

ನನ್ನ ತಂದೆಯವರು ಹಿಂಸಾತ್ಮಕ ವ್ಯಕ್ತಿಯಾಗಿದ್ದರು. ನನ್ನ ತಾಯಿಯನ್ನು ಅವರು ಹಿಂಸಿಸುತ್ತಿದ್ದ ದೃಶ್ಯಗಳು ನನ್ನ ಬಾಲ್ಯದ ಕೆಲವು ಕಹಿನೆನಪುಗಳಲ್ಲಿ ಒಂದಾಗಿವೆ. ಸಮಯಾನಂತರ, ನನ್ನ ತಾಯಿಯವರು ವಿವಾಹ ವಿಚ್ಛೇದನವನ್ನು ಪಡೆದುಕೊಂಡರು. ಇದು ಜಿಪ್ಸಿ ಕುಟುಂಬಗಳಲ್ಲಿ ಬಹಳ ವಿರಳವಾದ ವಿಷಯವಾಗಿದೆ. ನನ್ನನ್ನು, ತಮ್ಮನನ್ನು ಮತ್ತು ನನ್ನ ಅಕ್ಕನನ್ನು ಆಕೆಯು ತನ್ನೊಂದಿಗೆ ಬೆಲ್ಜಿಯಮ್‌ಗೆ ಕರೆದೊಯ್ದಳು. ಅಲ್ಲಿ ನಾವು ಮುಂದಿನ ಎಂಟು ವರುಷಗಳ ಕಾಲ ಬಹಳ ನೆಮ್ಮದಿಯಿಂದ ಜೀವಿಸಿದೆವು.

ಹಾಗಿದ್ದರೂ, ಪರಿಸ್ಥಿತಿಯು ಬದಲಾಯಿತು. ಮಕ್ಕಳಾದ ನಾವು ತಂದೆಯನ್ನು ನೋಡಬೇಕೆಂದು ಬಯಸಿದ್ದರಿಂದ ತಾಯಿಯವರು ನಮ್ಮನ್ನು ಫ್ರಾನ್ಸಿಗೆ ಕರೆದೊಯ್ದರು ಮತ್ತು ಅಲ್ಲಿ ನಾವು ತಂದೆಯೊಂದಿಗೆ ಪುನಃ ಒಂದಾದೆವು. ತಂದೆಯೊಂದಿಗೆ ಜೀವಿಸುವುದು ನನಗೆ ಒಂದು ಪಂಥಾಹ್ವಾನವಾಗಿತ್ತು. ಬೆಲ್ಜಿಯಮ್‌ನಲ್ಲಿ ನಾವು ಎಲ್ಲಿ ಹೋಗಬೇಕಾದರೂ ತಾಯಿಯೊಂದಿಗೆ ಹೋಗುತ್ತಿದ್ದೆವು. ಆದರೆ ನನ್ನ ತಂದೆಯವರ ಕುಟುಂಬದಲ್ಲಿ ಗಂಡಸರು ಕೇವಲ ಗಂಡಸರೊಂದಿಗೆ ಹೋಗಬೇಕಿತ್ತು. ಗಂಡಸರಿಗೆ ಎಲ್ಲಾ ಹಕ್ಕುಗಳಿವೆ ಮತ್ತು ಹೆಂಗಸರು ಎಲ್ಲಾ ಕೆಲಸಗಳನ್ನು ಮಾಡಬೇಕು ಎಂಬ ಪುರುಷತ್ವ ಪ್ರದರ್ಶಕ ಮನೋಭಾವ ಅವರದ್ದಾಗಿತ್ತು. ಉದಾಹರಣೆಗೆ, ಒಂದು ದಿನ ಮಧ್ಯಾಹ್ನದ ಊಟದ ನಂತರ ಮೇಜನ್ನು ಶುಚಿಮಾಡುವ ಮತ್ತು ಪಾತ್ರೆಗಳನ್ನು ತೊಳೆಯುವುದರಲ್ಲಿ ನನ್ನ ಅತ್ತೆಗೆ ಸಹಾಯಮಾಡಲು ನಾನು ಬಯಸಿದಾಗ, ನನ್ನ ಚಿಕ್ಕಪ್ಪ ನನ್ನನ್ನು ಒಬ್ಬ ಸಲಿಂಗ ಕಾಮಿಯೆಂದು ಆರೋಪಿಸಿದರು. ಅವರ ಕುಟುಂಬದಲ್ಲಿ ಪಾತ್ರೆಗಳನ್ನು ತೊಳೆಯುವುದು ಕೇವಲ ಸ್ತ್ರೀಯರ ಕೆಲಸವಾಗಿತ್ತು. ಕ್ರಮೇಣ ಈ ವಿಚಾರವು ನನ್ನ ಮೇಲೆಯೂ ಪ್ರಭಾವ ಬೀರಿತು.

ಸ್ವಲ್ಪ ಸಮಯದ ನಂತರ ನನ್ನ ತಾಯಿಯವರು ಪುನಃ ತಂದೆಯ ಹಿಂಸಾತ್ಮಕ ಕೋಪಕ್ಕೆ ಬಲಿಯಾದರು. ನಾನು ಮತ್ತು ನನ್ನ ಅಣ್ಣನು ಅನೇಕ ಬಾರಿ ಅಡ್ಡಬರಲು ಪ್ರಯತ್ನಿಸಿದಾಗ ನಮಗೆ ಗುದ್ದುಗಳು ಸಿಗುತ್ತಿದ್ದವು. ನಮ್ಮ ತಂದೆಯ ಗುದ್ದುಗಳನ್ನು ತಪ್ಪಿಸಿಕೊಳ್ಳಲು ನಾವು ಕಿಟಕಿಯಿಂದ ಹಾರಿ ಓಡಿಹೋಗಬೇಕಾಗುತ್ತಿತ್ತು. ನನ್ನ ಅಕ್ಕ ಸಹ ಇದರಿಂದ ತಪ್ಪಿಸಿಕೊಳ್ಳಲಿಲ್ಲ. ಫಲಿತಾಂಶವಾಗಿ, ನಾನು ಸಾಧ್ಯವಿರುವಷ್ಟು ಹೆಚ್ಚಿನ ಸಮಯವನ್ನು ಮನೆಯಿಂದ ಹೊರಗೆ ಕಳೆದೆ. 15 ವರುಷ ಪ್ರಾಯದಲ್ಲಿಯೇ ನನ್ನ ಜೀವಿತಕ್ಕೆ ಯಾವುದೇ ಮಾರ್ಗದರ್ಶನ ಅಥವಾ ಉದ್ದೇಶವಿರಲಿಲ್ಲ.

ಕ್ರಮೇಣ ನಾನು ನನ್ನ ಹಿಂಸಾತ್ಮಕ ಸಿಡುಕಿಗೆ ಪ್ರಸಿದ್ಧನಾದೆ. ದಾಂಢಿಗನೆನಿಸಿಕೊಳ್ಳಲು ನಾನು ತುಂಬ ಇಷ್ಟಪಟ್ಟೆ. ಕೆಲವೊಮ್ಮೆ ನಾನು ಬೇಕುಬೇಕೆಂದೇ ಇತರ ಯುವಕರನ್ನು ಕೆರಳಿಸುತ್ತಿದ್ದೆ. ಆದರೆ ನಾನು ಹೆಚ್ಚಾಗಿ ಒಂದು ಕತ್ತಿಯನ್ನು ಅಥವಾ ಸರಪಳಿಯನ್ನು ಹಿಡಿದು ತಿರುಗಾಡುತ್ತಿದ್ದರಿಂದ, ಅವರಲ್ಲಿ ಕೇವಲ ಕೆಲವೇ ಜನರು ನನ್ನನ್ನು ಎದುರಿಸಲು ಧೈರ್ಯಮಾಡುತ್ತಿದ್ದರು. ಬೇಗನೆ ನಾನು ವಾಹನಗಳನ್ನು ಕದ್ದು, ಅದನ್ನು ಮಾರಲು ಆರಂಭಿಸಿದೆ. ಕೆಲವೊಂದು ಸಂದರ್ಭಗಳಲ್ಲಿ, ಕದ್ದ ವಾಹನಕ್ಕೆ ನಾನೇ ಬೆಂಕಿ ಹಚ್ಚಿ, ನಂತರ ಅಗ್ನಿಶಾಮಕ ದಳದವರು ಆ ಬೆಂಕಿಯನ್ನು ನಂದಿಸುವುದನ್ನು ನೋಡಿ ಆನಂದಿಸುತ್ತಿದ್ದೆ. ಮುಂದಕ್ಕೆ ನಾನು ಅಂಗಡಿಗಳು ಹಾಗೂ ಉಗ್ರಾಣಗಳಿಗೆ ನುಗ್ಗಿ ಕದಿಯಲಾರಂಭಿಸಿದೆ. ಇದಕ್ಕಾಗಿ ಅನೇಕ ಬಾರಿ ನಾನು ಬಂಧಿಸಲ್ಪಟ್ಟೆ. ಮತ್ತು ಪ್ರತಿ ಬಾರಿ ಬಂಧಿಸಲ್ಪಟ್ಟಾಗ, ನಾನು ದೇವರಲ್ಲಿ ಸಹಾಯಕ್ಕಾಗಿ ಬೇಡಿದೆ!

ಹೌದು, ನನಗೆ ದೇವರಲ್ಲಿ ನಂಬಿಕೆ ಇತ್ತು. ನಾವು ಬೆಲ್ಜಿಯಮ್‌ನಲ್ಲಿ ಇರುವಾಗ ನಾನೊಂದು ಧಾರ್ಮಿಕ ಶಾಲೆಗೂ ಹೋಗುತ್ತಿದ್ದೆ. ಆದುದರಿಂದ ನಾನೇನು ಮಾಡುತ್ತಿದ್ದೇನೊ ಅದು ತಪ್ಪೆಂದು ನನಗೆ ತಿಳಿದಿತ್ತು. ಆದರೂ, ದೇವರಲ್ಲಿನ ನನ್ನ ನಂಬಿಕೆಯು ನನ್ನ ನಡತೆಯ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ. ಕ್ಷಮಾಪಣೆಗಾಗಿ ದೇವರಲ್ಲಿ ಬೇಡಿಕೊಳ್ಳಬೇಕು ಮತ್ತು ಬೇಡಿಕೊಂಡರೆ ಅಷ್ಟೇಸಾಕು, ಆಗ ದೇವರು ನನ್ನ ಪಾಪವನ್ನು ಕ್ಷಮಿಸುತ್ತಾನೆ ಎಂದು ನಾನು ನೆನಸುತ್ತಿದ್ದೆ.

ಇಸವಿ 1984ರಲ್ಲಿ ಕಳ್ಳತನದ ಕಾರಣ ನನಗೆ 11 ತಿಂಗಳು ಸೆರೆಮನೆ ದಂಡನೆ ವಿಧಿಸಲಾಯಿತು. ಮಾರ್ಸೇಯಲ್ಲಿನ ಬೋಮೆಟ್‌ ಸೆರೆಮನೆಗೆ ನಾನು ಕಳುಹಿಸಲ್ಪಟ್ಟೆ. ಅಲ್ಲಿ, ನನ್ನ ದೇಹದ ವಿವಿಧ ಭಾಗಗಳ ಮೇಲೆ ನಾನು ಹಚ್ಚೆ ಗುರುತನ್ನು ಹಾಕಿಸಿಕೊಂಡೆ. ಅದರಲ್ಲಿ “ದ್ವೇಷ ಮತ್ತು ಸೇಡು” ಎಂಬ ಒಂದು ಹಚ್ಚೆ ಗುರುತೂ ಸೇರಿತ್ತು. ಸೆರೆವಾಸವು ನನ್ನನ್ನು ಪರಿವರ್ತಿಸುವ ಬದಲು ಅಧಿಕಾರಿಗಳ ಕಡೆಗೆ ಹಾಗೂ ಸಮಾಜದ ಮೇಲೆ ನನ್ನ ದ್ವೇಷವನ್ನು ಅದು ಇನ್ನಷ್ಟು ಹೆಚ್ಚಿಸಿತು. ಕೇವಲ ಮೂರು ತಿಂಗಳ ಸೆರೆವಾಸದ ನಂತರ ನಾನು ಬಿಡುಗಡೆ ಹೊಂದಿ ಹಿಂದಿರುಗುವಾಗ ಹಿಂದೆಂದಿಗಿಂತಲೂ ಹೆಚ್ಚು ದ್ವೇಷಭರಿತನಾಗಿದ್ದೆ. ಅನಂತರ ಒಂದು ದುರಂತವು ನನ್ನ ಜೀವಿತವನ್ನೇ ಬದಲಾಯಿಸಿತು.

ಸೇಡು ತೀರಿಸುವುದು ನನ್ನ ಗುರಿಯಾಯಿತು

ನನ್ನ ಕುಟುಂಬಕ್ಕೆ ಇನ್ನೊಂದು ಜಿಪ್ಸಿ ಕುಟುಂಬದೊಂದಿಗೆ ವ್ಯಾಜ್ಯವಿತ್ತು. ಈ ವ್ಯಾಜ್ಯವನ್ನು ಬಗೆಹರಿಸುವ ಉದ್ದೇಶದಿಂದ ನಾನು ಮತ್ತು ನನ್ನ ದೊಡ್ಡಪ್ಪನವರು ಆ ಕುಟುಂಬದವರನ್ನು ಸಂಧಿಸಲು ನಿರ್ಧರಿಸಿದೆವು. ಎರಡೂ ಕುಟುಂಬಗಳು ಶಸ್ತ್ರಸಜ್ಜಿತವಾಗಿದ್ದವು. ಅಲ್ಲಿ ಸಂಭವಿಸಿದ ವಾಗ್ವಾದದಲ್ಲಿ, ನನ್ನ ದೊಡ್ಡಪ್ಪನವರಾದ ಪ್ಯೆರ್‌ ಹಾಗೂ ನನ್ನ ತಂದೆಯವರ ಸೋದರ ಸಂಬಂಧಿಯೊಬ್ಬರು ಗುಂಡಿನಿಂದ ಕೊಲ್ಲಲ್ಪಟ್ಟರು. ಇದರಿಂದ ನಾನು ಎಷ್ಟು ಕ್ಷೋಭೆಗೊಂಡೆನೆಂದರೆ, ನಾನು ದಾರಿಯ ಮಧ್ಯದಲ್ಲಿ ನಿಂತು, ಬಂದೂಕನ್ನು ಕೈಯಲ್ಲಿ ಹಿಡಿದು, ಕಡುಕೋಪದಿಂದ ತುಂಬಿದವನಾಗಿ ಹುಚ್ಚನಂತೆ ಅರಚತೊಡಗಿದೆ. ನನ್ನ ಅಂಕಲ್‌ಗಳಲ್ಲಿ ಒಬ್ಬರು ಬಹು ಒತ್ತಾಯದಿಂದ ನನ್ನಿಂದ ಬಂದೂಕನ್ನು ಕಸಿದುಕೊಂಡರು.

ನಾನು ತಂದೆಯಂತೆ ಪರಿಗಣಿಸುತ್ತಿದ್ದ ನನ್ನ ದೊಡ್ಡಪ್ಪನವರಾದ ಪ್ಯೆರ್‌ರವರನ್ನು ಕಳೆದುಕೊಂಡದ್ದು, ನನ್ನನ್ನು ಉಗ್ರವ್ಯಥೆಯಲ್ಲಿ ಮುಳುಗಿಸಿತು. ಜಿಪ್ಸಿ ಸಂಪ್ರದಾಯಕ್ಕನುಸಾರ ನಾನು ಶೋಕಪ್ರದರ್ಶನದ ಸಮಯವನ್ನು ಆಚರಿಸಿದೆ. ಕೆಲವು ದಿವಸಗಳ ತನಕ ನಾನು ಕ್ಷೌರಮಾಡಿಕೊಳ್ಳಲಿಲ್ಲ ಅಥವಾ ಯಾವುದೇ ಮಾಂಸಾಹಾರವನ್ನು ತಿನ್ನಲಿಲ್ಲ. ಟಿವಿ ಕಾರ್ಯಕ್ರಮವನ್ನು ನೋಡಲು ಅಥವಾ ಸಂಗೀತವನ್ನು ಆಲಿಸಲು ನಾನು ನಿರಾಕರಿಸಿದೆ. ಖಂಡಿತವಾಗಿಯೂ ನನ್ನ ದೊಡ್ಡಪ್ಪನವರ ಮರಣಕ್ಕೆ ಪ್ರತೀಕಾರವನ್ನು ತೀರಿಸುತ್ತೇನೆಂದು ನಾನು ಪ್ರತಿಜ್ಞೆಮಾಡಿದೆ. ಆದರೆ ನಾನು ಒಂದು ಬಂದೂಕನ್ನು ಪಡೆದುಕೊಳ್ಳುವುದರಿಂದ ನನ್ನ ಸಂಬಂಧಿಕರು ತಡೆದರು.

ಇಸವಿ 1984ರ ಆಗಸ್ಟ್‌ ತಿಂಗಳಿನಲ್ಲಿ ನಾನು ಮಿಲಿಟರಿ ಸೇವೆಗೆ ನೇಮಿಸಲ್ಪಟ್ಟೆ. 20 ವರುಷ ಪ್ರಾಯದವನಾಗಿದ್ದಾಗ ಲೆಬನನ್‌ನ ವಿಶ್ವಸಂಸ್ಥೆಯ ಶಾಂತಿಸಂಧಾನ ಪಡೆಯಲ್ಲಿ ನಾನು ಭರ್ತಿಯಾದೆ. ಇತರರನ್ನು ಕೊಲ್ಲುವ ಅಥವಾ ಇತರರಿಂದ ಕೊಲ್ಲಲ್ಪಡುವ ಅಪಾಯಕಾರಿ ಕೆಲಸವನ್ನು ನಾನು ಸ್ವೀಕರಿಸಿದೆ. ಆ ಸಮಯದಲ್ಲಿ ನಾನು ಅತಿ ಹೆಚ್ಚು ಮೊತ್ತದಲ್ಲಿ ಹಶೀಷ್‌ ಸೇದುತ್ತಿದ್ದೆ. ಆ ಮಾದಕ ಪದಾರ್ಥವು, ಒಂದು ಹಾಯಾದ ಭಾವನೆಯನ್ನು ಅನುಭವಿಸುವಂತೆ ಮಾಡುವುದರೊಂದಿಗೆ ಯಾರೂ ನನಗೇನೂ ಮಾಡಸಾಧ್ಯವಿಲ್ಲ ಎಂಬಂತಹ ಅನಿಸಿಕೆಯನ್ನು ಸಹ ನನ್ನಲ್ಲಿ ಉಂಟುಮಾಡಿತು.

ಲೆಬನನ್‌ನಲ್ಲಿ ಶಸ್ತ್ರಗಳನ್ನು ಪಡೆದುಕೊಳ್ಳುವುದು ಬಹಳ ಸುಲಭವಾಗಿತ್ತು. ನನ್ನ ದೊಡ್ಡಪ್ಪನವರನ್ನು ಕೊಂದವರಿಗೆ ಮುಯ್ಯಿ ತೀರಿಸುವ ನನ್ನ ಯೋಜನೆಯನ್ನು ಮುಂದುವರಿಸುವ ಉದ್ದೇಶದಿಂದ ಶಸ್ತ್ರಗಳನ್ನು ಫ್ರಾನ್ಸ್‌ಗೆ ಹಡಗಿನ ಮೂಲಕ ಕಳುಹಿಸಲು ನಾನು ನಿರ್ಧರಿಸಿದೆ. ಸ್ಥಳಿಕ ನಿವಾಸಿಗಳಿಂದ ನಾನು ಯುದ್ಧ ಸಾಮಗ್ರಿಗಳೊಂದಿಗೆ ಎರಡು ಬಂದೂಕುಗಳನ್ನು ಸಹ ಖರೀದಿಸಿದೆ. ನಾನು ಬಂದೂಕುಗಳನ್ನು ಕಳಚಿ, ಎರಡು ರೇಡಿಯೊಗಳೊಳಗೆ ಅವುಗಳನ್ನು ಬಚ್ಚಿಟ್ಟು ಮನೆಗೆ ರವಾನಿಸಿದೆ.

ನನ್ನ ಮಿಲಿಟರಿ ಸೇವೆಯು ಮುಗಿಯುವ ಎರಡು ವಾರಗಳ ಮುಂಚೆ, ನಾನು ಮತ್ತು ನನ್ನ ಮೂವರು ಸಂಗಾತಿಗಳು ಅಧಿಕಾರಿಗಳ ಅನುಮತಿಯಿಲ್ಲದೆ ನಮ್ಮ ಮಿಲಿಟರಿ ಸೇವೆಯಿಂದ ಗೈರುಹಾಜರಾದೆವು. ನಾವು ಪಾಳೆಯಕ್ಕೆ ಹಿಂದಿರುಗಿದಾಗ ನಮ್ಮನ್ನು ಬಂಧಿಸಲಾಯಿತು. ನಾನು ಸೆರೆಮನೆಯಲ್ಲಿರುವಾಗ, ಅತಿ ಕೋಪಗೊಂಡವನಾಗಿ ಒಬ್ಬ ಕಾವಲುಗಾರನ ಮೇಲೆ ದಾಳಿಮಾಡಿದೆ. ಅದಕ್ಕೆ ಕಾರಣ, ಪೆಯೋ ಎಂದು ನಾವು ಕರೆಯುತ್ತಿದ್ದ ಜಿಪ್ಸೇತರನಿಂದ ಕೀಳಾಗಿ ಕಾಣಲ್ಪಡುವುದು ಯೋಚಿಸಲಸಾಧ್ಯವಾದ ಸಂಗತಿಯಾಗಿತ್ತು. ಮರುದಿನ ಒಬ್ಬ ಅಧಿಕಾರಿಯೊಂದಿಗೆ ಇನ್ನೊಂದು ಹಿಂಸಾತ್ಮಕ ಜಗಳದಲ್ಲಿ ನಾನು ಭಾಗಿಯಾದೆ. ನನ್ನ ಉಳಿದ ಮಿಲಿಟರಿ ಸೇವಾವಧಿಗಾಗಿ ನಾನು ಲಾಯನ್ಸ್‌ನಲ್ಲಿನ ಮಾಂಟ್‌ಲೂವೆಕ್‌ ಸೆರೆಮನೆಗೆ ಕಳುಹಿಸಲ್ಪಟ್ಟೆ.

ಸೆರೆಮನೆಯಲ್ಲಿ ನಾನು ಸ್ವಾತಂತ್ರ್ಯವನ್ನು ಕಂಡುಕೊಂಡೆ

ಮಾಂಟ್‌ಲೂವೆಕ್‌ ಸೆರೆಮನೆಯಲ್ಲಿನ ನನ್ನ ಮೊದಲನೆಯ ದಿನದಂದು ನಾನೊಬ್ಬ ಪ್ರಸನ್ನ ಯುವ ವ್ಯಕ್ತಿಯಿಂದ ಹೃತ್ಪೂರ್ವಕವಾಗಿ ವಂದಿಸಲ್ಪಟ್ಟೆ. ಅವನು ಒಬ್ಬ ಯೆಹೋವನ ಸಾಕ್ಷಿಯಾಗಿದ್ದಾನೆಂದು ನಾನು ತಿಳಿದುಕೊಂಡೆ. ಅವನೂ ಅವನ ನಂಬಿಕೆಗೆ ಸೇರಿದ ಇತರರೂ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳದ ಕಾರಣ ಸೆರೆಮನೆಯಲ್ಲಿ ಹಾಕಲ್ಪಟ್ಟರೆಂದು ನನಗೆ ತಿಳಿದುಬಂತು. ಅದು ನನ್ನನ್ನು ಆಶ್ಚರ್ಯಗೊಳಿಸಿತು. ಹೆಚ್ಚನ್ನು ತಿಳಿಯಬೇಕೆಂದು ನಾನು ಬಯಸಿದೆ.

ಯೆಹೋವನ ಸಾಕ್ಷಿಗಳಿಗೆ ದೇವರಲ್ಲಿ ನೈಜವಾದ ಪ್ರೀತಿಯಿದೆ ಎಂಬುದನ್ನು ತಿಳಿದುಕೊಂಡೆ. ಅವರ ಉತ್ತಮ ನೈತಿಕ ಮಟ್ಟಗಳು ನನ್ನನ್ನು ಪ್ರಭಾವಿಸಿದವು. ಆದರೂ, ನನ್ನಲ್ಲಿ ಅನೇಕ ಪ್ರಶ್ನೆಗಳಿದ್ದವು. ನಿರ್ದಿಷ್ಟವಾಗಿ, ಸ್ವಪ್ನಗಳ ಮೂಲಕ ಜೀವಿತರೊಂದಿಗೆ ಸತ್ತವರು ಮಾತಾಡಬಲ್ಲರೊ ಎಂಬುದನ್ನು ನಾನು ತಿಳಿಯಬಯಸಿದೆ. ಈ ವಿಷಯದಲ್ಲಿ ಅನೇಕ ಜಿಪ್ಸಿಗಳು ವಿಶ್ವಾಸವಿಟ್ಟಿದ್ದರು. ಸಾನ್‌ಪಾಲ್‌ ಎಂಬ ಒಬ್ಬ ಸಾಕ್ಷಿಯು, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ * ಎಂಬ ಪುಸಕ್ತವನ್ನು ಉಪಯೋಗಿಸುತ್ತಾ ನನ್ನೊಂದಿಗೆ ಬೈಬಲ್‌ ಅಧ್ಯಯನವನ್ನು ಮಾಡಿದರು.

ಒಂದೇ ರಾತ್ರಿಯಲ್ಲಿ ನಾನು ಇಡಿ ಪುಸ್ತಕವನ್ನು ಬಹಳ ಉತ್ಸಾಹದಿಂದ ಓದಿ ಮುಗಿಸಿದೆ. ಮತ್ತು ನಾನೇನನ್ನು ಓದಿದೆನೊ ಅದರಿಂದ ಬಹಳ ಪ್ರಭಾವಿತನಾದೆ. ಇಲ್ಲಿ ಈ ಸೆರೆಮನೆಯಲ್ಲಿ ನಾನು ನಿಜವಾದ ಸ್ವಾತಂತ್ರ್ಯವನ್ನು ಕಂಡುಕೊಂಡೆ! ಕೊನೆಗೆ ನಾನು ಸೆರೆಮನೆಯಿಂದ ಬಿಡುಗಡೆ ಹೊಂದಿದಾಗ, ಬೈಬಲ್‌ ಸಾಹಿತ್ಯಗಳಿಂದ ತುಂಬಿದ ಬ್ಯಾಗ್‌ ಅನ್ನು ಹಿಡಿದು ರೈಲು ಹತ್ತಿ ಮನೆಗೆ ಹೋದೆ.

ನನ್ನ ಸ್ವದೇಶದಲ್ಲಿ ಸಾಕ್ಷಿಗಳನ್ನು ಸಂಪರ್ಕಿಸಲಿಕ್ಕಾಗಿ ನಾನು ಮಾರ್ಟೀಗ್‌ ಪಟ್ಟಣದಲ್ಲಿನ ರಾಜ್ಯ ಸಭಾಗೃಹಕ್ಕೆ ಹೋದೆ. ಎರೀಕ್‌ ಎಂಬ ಒಬ್ಬ ಪೂರ್ಣ ಸಮಯದ ಯುವ ಶುಶ್ರೂಷಕನೊಂದಿಗೆ ನನ್ನ ಬೈಬಲ್‌ ಅಧ್ಯಯನವನ್ನು ಮುಂದುವರಿಸಿದೆ. ಕೆಲವೇ ದಿನಗಳಲ್ಲಿ ನಾನು ಧೂಮಪಾನವನ್ನು ನಿಲ್ಲಿಸಿದೆ. ಅಷ್ಟುಮಾತ್ರವಲ್ಲದೆ ಹಿಂದೆ ಹಿಂಸಾಕೃತ್ಯಗಳಲ್ಲಿ ನನ್ನ ಸಂಗಾತಿಗಳಾಗಿದ್ದವರಿಗೆ ಭೇಟಿ ನೀಡುವುದನ್ನೂ ನಿಲ್ಲಿಸಿದೆ. ಜ್ಞಾನೋಕ್ತಿ 27:11ರಲ್ಲಿ ಹೇಳಿರುವ ಮಾತುಗಳಿಗನುಸಾರ ಕ್ರಿಯೆಗೈಯಲು ನಾನು ದೃಢ ನಿರ್ಧಾರವುಳ್ಳವನಾದೆ. ಅದು ಹೇಳುವುದು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು.” ನಾನು ಮೆಚ್ಚಿಸಬಯಸುವ ಪ್ರೀತಿಯ ತಂದೆಯನ್ನು ನಾನು ಯೆಹೋವನಲ್ಲಿ ಕಂಡುಕೊಂಡೆ.

ಪರಿವರ್ತಿಸಿಕೊಳ್ಳುವ ಪಂಥಾಹ್ವಾನ

ಕ್ರೈಸ್ತ ಮೂಲತತ್ತ್ವಗಳನ್ನು ಕಾರ್ಯರೂಪಕ್ಕೆ ಹಾಕುವುದು ನನಗೆ ಒಂದು ಸುಲಭದ ವಿಷಯವಾಗಿರಲಿಲ್ಲ. ಉದಾಹರಣೆಗೆ, ನಾನು ಪುನಃ ಮಾದಕ ಪದಾರ್ಥಗಳನ್ನು ಉಪಯೋಗಿಸಲು ಪ್ರಾರಂಭಿಸಿದೆ. ಅದು ಅನೇಕ ವಾರಗಳ ವರೆಗೆ ಮುಂದುವರಿಯಿತು. ಮುಯ್ಯಿ ತೀರಿಸುವಂತಹ ಇಚ್ಛೆಯನ್ನು ಹೋಗಲಾಡಿಸುವುದು ನನಗೊಂದು ಅತಿ ಕಷ್ಟಕರವಾದ ಪಂಥಾಹ್ವಾನವಾಗಿತ್ತು. ಎರೀಕ್‌ ಅವರಿಗೆ ತಿಳಿಯದಂತೆ ನಾನು ಯಾವಾಗಲೂ ನನ್ನೊಂದಿಗೆ ಬಂದೂಕನ್ನು ಕೊಂಡೊಯ್ಯುತ್ತಿದ್ದೆ. ನನ್ನ ದೊಡ್ಡಪ್ಪನವರನ್ನು ಕೊಂದವರಿಗೆ ಸೇಡು ತೀರಿಸಲು ನಾನಿನ್ನೂ ಹುಡುಕಾಡುತ್ತಿದ್ದೆ. ಒಂದು ಇಡೀ ರಾತ್ರಿ ಅವರನ್ನು ಹುಡುಕುವುದರಲ್ಲಿ ಕಳೆದೆ.

ಈ ಕುರಿತು ಎರೀಕ್‌ ಅವರಿಗೆ ನಾನು ತಿಳಿಸಿದಾಗ, ಶಸ್ತ್ರಗಳನ್ನು ಉಪಯೋಗಿಸುವವನೂ ಸೇಡು ತೀರಿಸಲು ಪ್ರಯತ್ನಿಸುವವನೂ ಆಗಿರುವ ವರೆಗೆ ನಾನು ದೇವರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಸ್ಥಾಪಿಸಸಾಧ್ಯವಿಲ್ಲವೆಂದು ಅವರು ಸ್ಪಷ್ಟವಾಗಿ ವಿವರಿಸಿದರು. ನನಗೆ ಆಯ್ಕೆಯನ್ನು ಮಾಡಬೇಕಾಯಿತು. “ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ” ಎಂಬ ರೋಮಾಪುರ 12:19ರ ಅಪೊಸ್ತಲ ಪೌಲನ ಬುದ್ಧಿವಾದವನ್ನು ನಾನು ಆಳವಾಗಿ ಮನನ ಮಾಡಿದೆ. ಈ ಬುದ್ಧಿವಾದ ಮತ್ತು ಅದರೊಂದಿಗೆ ಸತತವಾದ ಪ್ರಾರ್ಥನೆಯು ನನ್ನ ಭಾವನೆಗಳನ್ನು ಹತೋಟಿಯಲ್ಲಿಡಲು ನನಗೆ ಸಹಾಯಮಾಡಿತು. (ಕೀರ್ತನೆ 55:22) ಕೊನೆಗೆ ನಾನು ಶಸ್ತ್ರಗಳನ್ನು ಉಪಯೋಗಿಸುವುದನ್ನು ಬಿಟ್ಟುಬಿಟ್ಟೆ. ಒಂದು ವರುಷ ಬೈಬಲನ್ನು ಅಧ್ಯಯನ ಮಾಡಿದ ನಂತರ, 1986ರ ಡಿಸೆಂಬರ್‌ 26ರಂದು, ನೀರಿನ ದೀಕ್ಷಾಸ್ನಾನದ ಮೂಲಕ ನಾನು ಯೆಹೋವನಿಗೆ ಮಾಡಿದಂತಹ ಸಮರ್ಪಣೆಯನ್ನು ಸಂಕೇತಿಸಿದೆ.

ನನ್ನ ಕುಟುಂಬವು ಪ್ರತಿಕ್ರಿಯೆ ತೋರಿಸುತ್ತದೆ

ನನ್ನ ನಡತೆಯಲ್ಲಾದ ಬದಲಾವಣೆಗಳು, ನನ್ನ ಹೆತ್ತವರು ಸಹ ಬೈಬಲನ್ನು ಅಧ್ಯಯನ ಮಾಡುವಂತೆ ಅವರನ್ನು ಉತ್ತೇಜಿಸಿದವು. ಅವರು ಪುನಃ ಮದುವೆಯಾದರು ಹಾಗೂ 1989ರ ಜುಲೈ ತಿಂಗಳಿನಂದು ನನ್ನ ತಾಯಿಯವರು ದೀಕ್ಷಾಸ್ನಾನ ಹೊಂದಿದರು. ಸಮಯಾನಂತರ, ನಮ್ಮ ಕುಟುಂಬದ ಅನೇಕ ಸದಸ್ಯರು ಬೈಬಲಿನ ಸಂದೇಶಕ್ಕೆ ಪ್ರತಿಕ್ರಿಯಿಸಿ, ಯೆಹೋವನ ಸಾಕ್ಷಿಗಳಾದರು.

ಇಸವಿ 1988ರ ಆಗಸ್ಟ್‌ ತಿಂಗಳಿನಂದು ನಾನೊಬ್ಬ ಪೂರ್ಣ ಸಮಯದ ಶುಶ್ರೂಷಕನಾಗಲು ನಿರ್ಧರಿಸಿದೆ. ಆಮೇಲೆ ನನ್ನ ಸಭೆಯಲ್ಲಿರುವ ಕಾಟ್ಯಾ ಎಂಬ ಒಬ್ಬ ಯುವ ಸಹೋದರಿಯನ್ನು ಪ್ರೀತಿಸತೊಡಗಿದೆ. ನಾವು 1989ರ ಜೂನ್‌ 10ರಂದು ವಿವಾಹವಾದೆವು. ನಮ್ಮ ಮದುವೆಯ ಮೊದಲನೆಯ ವರುಷ ಅಷ್ಟೊಂದು ಸುಲಭವಾಗಿರಲಿಲ್ಲ. ಸ್ತ್ರೀಯರ ಕಡೆಗಿನ ನನ್ನ ಮನೋಭಾವದಲ್ಲಿ ನಾನು ಕೆಲವೊಂದು ಬದಲಾವಣೆಗಳನ್ನು ಇನ್ನೂ ಮಾಡಬೇಕಾಗಿತ್ತು. ತಮ್ಮ ಹೆಂಡತಿಯರಿಗೆ ಗೌರವವನ್ನು ಸಲ್ಲಿಸಬೇಕೆಂದು ಉತ್ತೇಜಿಸುವ 1 ಪೇತ್ರ 3:7ರ ಮಾತುಗಳನ್ನು ಅನ್ವಯಿಸುವುದು ನನಗೆ ಬಹಳ ಕಷ್ಟಕರವಾಗಿತ್ತು. ನನ್ನ ಅಹಂಭಾವವನ್ನು ಅದುಮಿಡಲು ಮತ್ತು ಆಲೋಚನಾ ಧಾಟಿಯನ್ನು ಬದಲಾಯಿಸಲು ಬೇಕಾದ ಶಕ್ತಿಗಾಗಿ ನಾನು ಆಗಾಗ ಪ್ರಾರ್ಥಿಸಬೇಕಾಯಿತು. ವಿಷಯಗಳು ಕ್ರಮೇಣ ಉತ್ತಮವಾದವು.

ನನ್ನ ದೊಡ್ಡಪ್ಪನವರ ಮರಣವು ಇನ್ನೂ ನನಗೆ ದುಃಖವನ್ನು ಕೊಡುತ್ತದೆ. ಕೆಲವೊಂದು ಸಂದರ್ಭದಲ್ಲಿ ನಾನು ಅವರ ಕುರಿತು ಆಲೋಚಿಸುವಾಗ ಕಣ್ಣೀರನ್ನು ತಡೆದುಹಿಡಿಯಲಾರೆ. ಅವರ ಕೊಲೆಯ ಜ್ಞಾಪಕದಿಂದ ಉಂಟಾಗುವ ಆಳವಾದ ಭಾವೋದ್ರೇಕದ ವಿರುದ್ಧವಾಗಿ ನಾನು ಹೋರಾಡುತ್ತಿದ್ದೇನೆ. ನನ್ನ ದೀಕ್ಷಾಸ್ನಾನದ ನಂತರವೂ ಅನೇಕ ವರುಷಗಳ ತನಕ, ಈ ಹಿಂದೆ ವೈರತ್ವವಿದ್ದ ಕುಟುಂಬದ ಸದಸ್ಯರನ್ನು ಆಕಸ್ಮಿಕವಾಗಿ ಭೇಟಿಯಾಗುವ ಭಯ ನನ್ನಲ್ಲಿತ್ತು. ಅವರು ನನ್ನ ಮೇಲೆ ದಾಳಿಮಾಡಿದರೆ ಆಗ ನಾನೇನು ಮಾಡುವೆ? ನಾನು ಹೇಗೆ ಪ್ರತಿಕ್ರಿಯಿಸುವೆ? ನನ್ನ ಹಳೆಯ ವ್ಯಕ್ತಿತ್ವ ಪುನಃ ನನ್ನ ಮೇಲೆ ಜಯಹೊಂದಬಹುದೊ?

ಒಂದು ದಿನ ನಾನು ಹತ್ತಿರದ ಸಭೆಯೊಂದರಲ್ಲಿ ಸಾರ್ವಜನಿಕ ಭಾಷಣವನ್ನು ಕೊಡುತ್ತಿದ್ದೆ. ಅಲ್ಲಿ ನಾನು ನನ್ನ ದೊಡ್ಡಪ್ಪನವರನ್ನು ಕೊಂದ ವ್ಯಕ್ತಿಯ ಸಂಬಂಧಿಯಾದ ಪೆಪಾಳನ್ನು ನೋಡಿದೆ. ಅವಳನ್ನು ನೋಡಿದಾಗ ನನ್ನ ಕ್ರೈಸ್ತ ವ್ಯಕ್ತಿತ್ವದ ನಿಜವಾದ ಪ್ರಕೃತಿಯು ಹಿಂದೆಂದಿಗಿಂತಲೂ ಹೆಚ್ಚಾಗಿ ಪರೀಕ್ಷಿಸಲ್ಪಟ್ಟಿತು. ಆದರೆ ನಾನು ನನ್ನ ಭಾವನೆಗಳನ್ನು ಬದಿಗೊತ್ತಿದೆ. ನಂತರ ಪೆಪಾಳ ದೀಕ್ಷಾಸ್ನಾನದ ದಿವಸ, ನಾನು ಅವಳನ್ನು ತಬ್ಬಿಕೊಂಡು, ಆಕೆಯು ಯೆಹೋವನನ್ನು ಸೇವಿಸಲು ಮಾಡಿದ ನಿರ್ಣಯಕ್ಕಾಗಿ ಅವಳನ್ನು ಅಭಿನಂದಿಸಿದೆ. ನಡೆದಂಥ ಎಲ್ಲಾ ಘಟನೆಗಳ ಹೊರತಾಗಿಯೂ ನಾನು ಆಕೆಯನ್ನು ನನ್ನ ಆತ್ಮಿಕ ಸಹೋದರಿಯಾಗಿ ಸ್ವೀಕರಿಸಿದೆ.

ದ್ವೇಷದ ಸಂಕೋಲೆಯಿಂದ ನನ್ನನ್ನು ಬಿಡಿಸಿಕೊಳ್ಳಲು ಸಹಾಯಮಾಡಿದ್ದಕ್ಕಾಗಿ ನಾನು ಪ್ರತಿದಿನ ಯೆಹೋವನಿಗೆ ಉಪಕಾರ ಸಲ್ಲಿಸುತ್ತೇನೆ. ಯೆಹೋವನು ನನ್ನನ್ನು ಕರುಣಿಸದಿರುತ್ತಿದ್ದಲ್ಲಿ ಇಂದು ನಾನು ಯಾವ ಸ್ಥಿತಿಯಲ್ಲಿ ಇರುತ್ತಿದ್ದೆ? ಈಗ ನಾನೊಂದು ಸಂತೋಷದ ಕುಟುಂಬ ಜೀವನವನ್ನು ನಡಿಸುತ್ತಿದ್ದೇನೆ. ಅದಕ್ಕಾಗಿ ನಾನು ಯೆಹೋವನಿಗೆ ಬಹಳ ಆಭಾರಿಯಾಗಿದ್ದೇನೆ. ಭವಿಷ್ಯತ್ತಿಗಾಗಿ, ಹಗೆ ಮತ್ತು ಹಿಂಸೆಯಿಲ್ಲದ ಒಂದು ಹೊಸ ಲೋಕದ ನಿರೀಕ್ಷೆಯೂ ನನಗಿದೆ. “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದಿದೆ” ಎಂಬ ಯೆಹೋವನ ವಾಗ್ದಾನವು ನೆರವೇರುವುದು ಎಂಬುದರಲ್ಲಿ ನನಗೆ ಪೂರ್ಣ ಭರವಸೆಯಿದೆ.​—⁠ಮೀಕ 4:⁠4.(g03 1/08)

[ಪಾದಟಿಪ್ಪಣಿ]

^ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 15ರಲ್ಲಿರುವ ಚಿತ್ರ]

ಇಸವಿ 1985ರಲ್ಲಿ, ಲೆಬನನ್‌ನ ವಿಶ್ವ ಸಂಸ್ಥೆಯ ಶಾಂತಿಸಂಧಾನ ಪಡೆಗಳೊಂದಿಗೆ

[ಪುಟ 16ರಲ್ಲಿರುವ ಚಿತ್ರ]

ಕಾಟ್ಯಾ ಮತ್ತು ನನ್ನ ಗಂಡು ಮಕ್ಕಳಾದ ಟೀಮೆಯೋ ಹಾಗೂ ಪ್ಯೆರ್‌ರೊಂದಿಗೆ