ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಗರ್ಭಾವಸ್ಥೆಯನ್ನು ಹೆಚ್ಚು ಸುರಕ್ಷಿತವಾದದ್ದಾಗಿ ಮಾಡುವುದು

ನಿಮ್ಮ ಗರ್ಭಾವಸ್ಥೆಯನ್ನು ಹೆಚ್ಚು ಸುರಕ್ಷಿತವಾದದ್ದಾಗಿ ಮಾಡುವುದು

ನಿಮ್ಮ ಗರ್ಭಾವಸ್ಥೆಯನ್ನು ಹೆಚ್ಚು ಸುರಕ್ಷಿತವಾದದ್ದಾಗಿ ಮಾಡುವುದು

ಮೆಕ್ಸಿಕೊದಲ್ಲಿರುವ ಎಚ್ಚರ! ಲೇಖಕರಿಂದ

ವಿಶ್ವ ಸಂಸ್ಥೆಯ ಜನಸಂಖ್ಯಾ ನಿಧಿಗನುಸಾರ, ಪ್ರತಿ ವರುಷ ಐದು ಲಕ್ಷಕ್ಕಿಂತಲೂ ಹೆಚ್ಚು ಸ್ತ್ರೀಯರು ಗರ್ಭಧಾರಣೆಗೆ ಸಂಬಂಧಿಸಿದ ಕಾರಣಗಳಿಂದ ಮೃತರಾಗುತ್ತಾರೆ. ಇದಕ್ಕೆ ಕೂಡಿಸಿ, ಪ್ರತಿ ವರುಷ ಆರು ಕೋಟಿಗಿಂತಲೂ ಹೆಚ್ಚಿನ ಸ್ತ್ರೀಯರು ಗರ್ಭಾವಸ್ಥೆಯ ಸಮಯದಲ್ಲಿ ತೀವ್ರವಾದ ಸಮಸ್ಯೆಗಳಿಗೆ ಒಳಗಾಗುತ್ತಾರೆ ಮತ್ತು ಇವರಲ್ಲಿ ಹೆಚ್ಚುಕಡಿಮೆ ಕಾಲುಭಾಗದಷ್ಟು ಸ್ತ್ರೀಯರು ಜೀವನಾದ್ಯಂತ ಉಳಿಯುವ ಹಾನಿ ಅಥವಾ ಸೋಂಕು ರೋಗಗಳಿಗೆ ತುತ್ತಾಗುತ್ತಾರೆಂದು ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯೂನಿಸೆಫ್‌) ವರದಿಸುತ್ತದೆ. ಪ್ರಗತಿಪರ ದೇಶಗಳಲ್ಲೂ, ಗರ್ಭಧಾರಣೆಗಳು, ಹೆರಿಗೆಗಳು, ನಿರ್ಲಕ್ಷ್ಯ ಎಂಬ ಚಕ್ರದೊಳಗೆ ಅನೇಕ ಸ್ತ್ರೀಯರು ಸಿಕ್ಕಿಬಿದ್ದಿರುತ್ತಾರೆ. ಇದು ಅವರನ್ನು ಪೂರ್ತಿಯಾಗಿ ಬಳಲಿಸುತ್ತದೆ ಹಾಗೂ ಅಸ್ವಸ್ಥರನ್ನಾಗಿ ಮಾಡುತ್ತದೆ. ಹೌದು, ಗರ್ಭಾವಸ್ಥೆಯು ಹಾನಿಕರವಾಗಿಯೂ ಅಪಾಯಕರವಾಗಿಯೂ ಇರಸಾಧ್ಯವಿದೆ. ಸ್ತ್ರೀಯೊಬ್ಬಳು ತನ್ನ ಗರ್ಭಾವಸ್ಥೆಯನ್ನು ಸುರಕ್ಷಿತವಾದದ್ದಾಗಿ ಮಾಡಸಾಧ್ಯವಿರುವ ಯಾವುದಾದರೂ ವಿಧಾನಗಳಿವೆಯೊ?

ಗರ್ಭಧಾರಣೆಯ ಮುಂಚೆ ಆರೋಗ್ಯದ ಪಾಲನೆ

ಯೋಜಿಸುವುದು. ತಮಗೆ ಎಷ್ಟು ಮಕ್ಕಳು ಬೇಕು ಎಂಬುದನ್ನು ಮೊದಲಾಗಿಯೇ ಗಂಡಹೆಂಡತಿಯರು ಚರ್ಚಿಸಬೇಕು. ಪ್ರಗತಿಪರ ದೇಶಗಳಲ್ಲಿ, ಮೊಲೆಯುಣ್ಣುವ ಮಗುವಿದ್ದರೂ ಇನ್ನೊಂದು ಮಗುವಿಗಾಗಿ ಮುನ್ನೋಡುತ್ತಿರುವ ಸ್ತ್ರೀಯರನ್ನು ಕಾಣುವುದು ಸಾಮಾನ್ಯವಾಗಿರುತ್ತದೆ. ಜಾಗರೂಕ ಯೋಜನೆ ಮತ್ತು ಪರಿಗಣನೆಯು, ಎರಡು ಮಕ್ಕಳ ನಡುವೆ ಸಾಕಷ್ಟು ಸಮಯದ ಅಂತರವನ್ನಿಡುವುದನ್ನು ಸಾಧ್ಯಗೊಳಿಸಬಹುದು. ಇದು, ಹೆರಿಗೆಯ ನಂತರ ತಾಯಿಗೆ ಚೇತರಿಸಿಕೊಳ್ಳಲು ಸಾಧ್ಯಮಾಡುತ್ತದೆ ಮತ್ತು ಆಕೆಗೆ ಉಪಶಮನವನ್ನು ಒದಗಿಸುತ್ತದೆ.

ಪೌಷ್ಟಿಕಾಂಶ. ಒಂದು ಒಕ್ಕೂಟಕ್ಕನುಸಾರ, ಗರ್ಭಾವಸ್ಥೆಯು ಯಶಸ್ವಿಯಾಗಬೇಕಾದರೆ, ಹಾನಿಕಾರಕ ಪದಾರ್ಥಗಳಿಂದ [ವೈದ್ಯರಿಂದ ಸೂಚಿಸಲಾದ ಅಥವಾ ವೈದ್ಯರ ಸೂಚನೆಯಿಲ್ಲದೇ ಪಡೆದುಕೊಳ್ಳಸಾಧ್ಯವಿರುವ ಔಷಧಗಳು, ಸಿಗರೇಟುಗಳು, ಅಮಲೌಷಧ, ಕ್ಯಾಫೀನ್‌ ಅಂಶ ಮುಂತಾದವುಗಳು] ಚೇತರಿಸಿಕೊಂಡು, ಬೆಳೆಯುವ ಮಗುವಿಗಾಗಿ ತನ್ನ ದೇಹದಲ್ಲಿ ಒಳ್ಳೆಯ ಪೌಷ್ಟಿಕಾಂಶವನ್ನು ಶೇಖರಿಸಿಕೊಳ್ಳಲು, ಗರ್ಭಧಾರಣೆಗೆ ಮುಂಚೆ ಸ್ತ್ರೀಯೊಬ್ಬಳಿಗೆ ಕಡಿಮೆಪಕ್ಷ ನಾಲ್ಕು ತಿಂಗಳುಗಳು ಬೇಕಾಗುತ್ತವೆ. ಉದಾಹರಣೆಗಾಗಿ, ತಾಯಿಯಾಗಲಿರುವವಳಲ್ಲಿ ಸಾಕಷ್ಟು ಪ್ರಮಾಣದ ಫಾಲಿಕ್‌ ಆಮ್ಲದ ಶೇಖರಣೆಯಿರುವುದಾದರೆ, ಬೆನ್ನೆಲುಬಿನ ಮೂಳೆಗಳ ಎರಡು ಭಾಗ ಸರಿಯಾಗಿ ಸೇರಿಕೊಳ್ಳದೆ ಇರುವುದರಿಂದ ಮಗುವಿನಲ್ಲಿ ಉಂಟಾಗುವ ಸ್ಪೈನಾ ಬೈಫಿಡಾ ಎಂಬ ರೋಗದ ಅಪಾಯವು ಕಡಿಮೆಗೊಳ್ಳುತ್ತದೆ. ಗರ್ಭಧಾರಣೆಯ ನಂತರದ 24 ಹಾಗೂ 28ನೆಯ ದಿನಗಳ ಮಧ್ಯೆ ಅಂದರೆ ತಾವು ಗರ್ಭಿಣಿಯರೆಂದು ಅನೇಕ ಸ್ತ್ರೀಯರು ತಿಳಿಯುವುದಕ್ಕಿಂತ ಎಷ್ಟೋ ಮುಂಚಿತವಾಗಿ ಭ್ರೂಣದ ಬೆನ್ನೆಲುಬಿನ ಮೂಳೆಗಳು ಸೇರಿಕೊಳ್ಳುತ್ತವೆ. ಗರ್ಭಧರಿಸಲು ಯೋಜಿಸುತ್ತಿರುವ ಕೆಲವು ಸ್ತ್ರೀಯರು ಫಾಲಿಕ್‌ ಆಮ್ಲ ಪೂರಕಗಳನ್ನು ತೆಗೆದುಕೊಳ್ಳುತ್ತಾರೆ.

ಕಬ್ಬಿಣಾಂಶವು ಇನ್ನೊಂದು ಅತಿ ಮುಖ್ಯವಾಗಿರುವ ಪೋಷಕ ವಸ್ತುವಾಗಿದೆ. ಗರ್ಭಾವಸ್ಥೆಯ ಸಮಯದಲ್ಲಿ ಸ್ತ್ರೀಯ ಕಬ್ಬಿಣಾಂಶದ ಆವಶ್ಯಕತೆಯು ಹಿಂದಿಗಿಂತಲೂ ದ್ವಿಗುಣಗೊಳ್ಳುತ್ತದೆ. ಆಕೆಯ ದೇಹದಲ್ಲಿ ಕಬ್ಬಿಣಾಂಶದ ಶೇಖರಣೆಯು ಕಡಿಮೆಯಾಗಿರುವಲ್ಲಿ​—⁠ಪ್ರಗತಿಪರ ದೇಶಗಳಲ್ಲಿರುವ ಅನೇಕ ಸ್ತ್ರೀಯರ ವಿಷಯದಲ್ಲಿಯೂ ಇದು ಸತ್ಯವಾಗಿದೆ​—⁠ಅವಳು ಕಬ್ಬಿಣಾಂಶದ ಕೊರತೆಯಿಂದುಂಟಾಗುವ ರಕ್ತಹೀನತೆಗೆ ತುತ್ತಾಗಸಾಧ್ಯವಿದೆ. ಪುನಃ ಪುನಃ ಗರ್ಭಧರಿಸುವುದು ಈ ಪರಿಸ್ಥಿತಿಯನ್ನು ಇನ್ನೂ ಗಂಭೀರಗೊಳಿಸಸಾಧ್ಯವಿದೆ. ಏಕೆಂದರೆ ಇದರಿಂದ ತನ್ನ ಕಬ್ಬಿಣಾಂಶದ ಶೇಖರಣೆಯನ್ನು ಭರ್ತಿಮಾಡಲು ಆಕೆಗೆ ಸಾಕಷ್ಟು ಸಮಯ ಸಿಗದಿರಬಹುದು. *

ವಯಸ್ಸು. 20ರ ಪ್ರಾಯದಲ್ಲಿರುವ ಗರ್ಭಿಣಿ ಸ್ತ್ರೀಯರಿಗೆ ಹೋಲಿಸುವಾಗ, 16 ವರುಷಕ್ಕಿಂತಲೂ ಕಡಿಮೆ ಪ್ರಾಯದ ಗರ್ಭಿಣಿ ಹುಡುಗಿಯರಿಗೆ ಬರುವ ಮರಣದ ಅಪಾಯವು 60 ಪ್ರತಿಶತ ಹೆಚ್ಚಾಗಿದೆ. ಇನ್ನೊಂದು ಬದಿಯಲ್ಲಿ, 35ಕ್ಕಿಂತಲೂ ಹೆಚ್ಚು ವರುಷ ಪ್ರಾಯದ ಸ್ತ್ರೀಯರು, ಡೌನ್ಸ್‌ ಸಿನ್‌ಡ್ರೋಮ್‌ನಂಥ ಅಂಗವಿಕಲತೆಗಳಿರುವ ಮಗುವಿಗೆ ಜನ್ಮನೀಡುತ್ತಾರೆ. ತೀರ ಚಿಕ್ಕ ಪ್ರಾಯದ ತಾಯಂದಿರು ಅಥವಾ ಮಗುವನ್ನು ಪಡೆಯಸಾಧ್ಯವಿರುವ ವರುಷಗಳ ಕೊನೆಯಲ್ಲಿರುವ ತಾಯಂದಿರು, ಪ್ರೀಇಕ್ಲ್ಯಾಂಪ್ಸೀಯ ರೋಗಕ್ಕೆ ತುತ್ತಾಗುತ್ತಾರೆ. ಈ ಅವ್ಯವಸ್ಥೆಯು, ಗರ್ಭಾವಸ್ಥೆಯ 20ನೆಯ ವಾರದ ನಂತರದ ಅಧಿಕ ರಕ್ತದೊತ್ತಡ, ಶರೀರದ ಊದಿಕೊಳ್ಳುವಿಕೆ [ಜೀವಕೋಶಗಳ ಮಧ್ಯದಲ್ಲಿ ನೀರು ತುಂಬಿಕೊಳ್ಳುವುದು] ಮತ್ತು ಮೂತ್ರದಲ್ಲಿ ಪ್ರೊಟೀನಿನ ಹೆಚ್ಚುವಿಕೆ ಮುಂತಾದ ಲಕ್ಷಣಗಳಿಂದ ತಿಳಿದುಬರುತ್ತದೆ. ಇದು ತಾಯಿ ಹಾಗೂ ಮಗುವಿನ ಪ್ರಾಣಾಪಾಯವನ್ನು ಹೆಚ್ಚಿಸುತ್ತದೆ.

ಸೋಂಕುಗಳು. ಮೂತ್ರದ, ಯೋನಿದ್ವಾರದ, ಹಾಗೂ ಜಠರ ಮತ್ತು ಕರುಳುಗಳಿಗೆ ಸಂಬಂಧಿಸಿದ ಸೋಂಕುಗಳು ಗರ್ಭಾವಸ್ಥೆಯಲ್ಲಿ ಇನ್ನೂ ಹದಗೆಡಸಾಧ್ಯವಿದೆ. ಇದರಿಂದಾಗಿ ಕಾಲಕ್ಕಿಂತ ಮುಂಚಿತವಾಗಿ ಹೆರಿಗೆಯಾಗುವ ಹಾಗೂ ಪ್ರೀಇಕ್ಲ್ಯಾಂಪ್ಸೀಯ ಎಂಬ ರೋಗಕ್ಕೆ ತುತ್ತಾಗುವ ಅಪಾಯವು ಹೆಚ್ಚಾಗಸಾಧ್ಯವಿದೆ. ಯಾವುದೇ ಸೋಂಕು ರೋಗಕ್ಕೆ ಗರ್ಭಧಾರಣೆಯ ಮುಂಚೆಯೇ ಚಿಕಿತ್ಸೆ ನೀಡುವುದು ಅತ್ಯುತ್ತಮ.

ಗರ್ಭಾವಸ್ಥೆಯ ಸಮಯದಲ್ಲಿ ಆರೋಗ್ಯದ ಪಾಲನೆ

ಪ್ರಸವಪೂರ್ವ ಜಾಗರೂಕತೆ. ಗರ್ಭಾವಸ್ಥೆಯ ಸಮಯದಲ್ಲಿ ಕ್ರಮವಾಗಿ ವೈದ್ಯರಿಗೆ ಭೇಟಿ ನೀಡುವುದು, ಗರ್ಭಿಣಿಯ ಮರಣದ ಅಪಾಯವನ್ನು ಕಡಿಮೆಗೊಳಿಸುತ್ತದೆ. ಕ್ಲಿನಿಕ್‌ ಮತ್ತು ಆಸ್ಪತ್ರೆಗಳಿಗೆ ಕ್ರಮವಾಗಿ ಭೇಟಿ ನೀಡುವುದು ಎಲ್ಲಿ ಕಷ್ಟಕರವಾಗಿರುತ್ತದೊ ಅಂತಹ ದೇಶಗಳಲ್ಲೂ ನುರಿತ ಸೂಲಗಿತ್ತಿಯರು ಸಿಗಬಹುದು.

ಪ್ರಸವಪೂರ್ವ ಆರೈಕೆಯು, ಅನುಭವಸ್ಥರಿಂದ ವಿಶೇಷವಾದ ಜಾಗರೂಕತೆಯನ್ನು ಅವಶ್ಯಪಡಿಸುವ ಸಂದರ್ಭಗಳಿಗಾಗಿ ಎಚ್ಚರದಿಂದಿರುವಂತೆ ಮಾಡಸಾಧ್ಯವಿದೆ. ಗರ್ಭದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಭ್ರೂಣಗಳು, ಅಧಿಕ ರಕ್ತದೊತ್ತಡ, ಹೃದಯ ಹಾಗೂ ಮೂತ್ರಪಿಂಡದ ಸಮಸ್ಯೆಗಳು, ಮತ್ತು ಮಧುಮೇಹ ಮುಂತಾದ ಅಸ್ವಸ್ಥತೆಗಳು, ವಿಶೇಷವಾದ ಜಾಗರೂಕತೆಯನ್ನು ಅವಶ್ಯಪಡಿಸುವ ಸಂದರ್ಭಗಳಾಗಿವೆ. ಕೆಲವು ದೇಶಗಳಲ್ಲಿ ಗರ್ಭಿಣಿಯು ಧನುರ್ವಾಯು ರೋಗನಿರೋಧಕ ಲಸಿಕೆ ಹಾಕಿಸಿಕೊಳ್ಳಸಾಧ್ಯವಿದೆ ಮತ್ತು ಇದು ನವಜಾತ ಶಿಶುವನ್ನು ಧನುರ್ವಾಯು ರೋಗದಿಂದ ತಡೆಯಸಾಧ್ಯವಿದೆ. ಗರ್ಭಧಾರಣೆಯಾದ ನಂತರದ 26ನೆಯ ಮತ್ತು 28ನೆಯ ವಾರದ ಮಧ್ಯೆ, ಆಕೆಯಲ್ಲಿ ಬಿ ಗುಂಪಿಗೆ ಸೇರಿದ ಸ್ಟ್ರೆಪ್ಟೊಕಾಕಸ್‌ ಏಕಾಣು ಜೀವಿಗಳು ಇವೆಯೋ ಎಂಬುದನ್ನು ಸಹ ಪರೀಕ್ಷಿಸಬಹುದು. ಈ ಏಕಾಣು ಜೀವಿಗಳು ತಾಯಿಯ ದೊಡ್ಡ ಕರುಳಿನಲ್ಲಿ ಇರುವುದಾದರೆ, ಹೆರಿಗೆಯ ಸಮಯದಲ್ಲಿ ಮಗುವಿಗೆ ಸೋಂಕಸಾಧ್ಯವಿದೆ.

ತಾಯಿಯಾಗಲಿರುವವಳು, ಆಕೆಯ ವೈದ್ಯಕೀಯ ದಾಖಲೆಯನ್ನು ಸೇರಿಸಿ ಆಕೆಗೆ ತನ್ನ ಆರೋಗ್ಯದ ಬಗ್ಗೆ ತಿಳಿದಿರುವ ಎಲ್ಲಾ ಮಾಹಿತಿಯನ್ನು ವೈದ್ಯರಿಗೆ ಒದಗಿಸಲು ತಯಾರಿರಬೇಕು. ಅವಳು ಯಾವುದೇ ಮುಚ್ಚುಮರೆಯಿಲ್ಲದೆ ಪ್ರಶ್ನೆಗಳನ್ನೂ ಕೇಳಬೇಕು. ಯೋನಿಯಿಂದ ರಕ್ತಸ್ರಾವ, ಇದ್ದಕ್ಕಿದ್ದ ಹಾಗೆ ಮುಖ ಊದಿಕೊಳ್ಳುವುದು, ಭಯಂಕರವಾದ ಅಥವಾ ನಿರಂತರವಾದ ತಲೆನೋವು ಅಥವಾ ಬೆರಳುಗಳಲ್ಲಿ ನೋವು, ಹಠಾತ್ತಾಗಿ ದೃಷ್ಟಿ ಮಾಂದ್ಯತೆ, ನುಲಿಯುವಂಥ ಹೊಟ್ಟೆ ನೋವು, ಪದೇ ಪದೇ ವಾಂತಿಯಾಗುವುದು, ನಡುಕ ಅಥವಾ ಜ್ವರ, ಭ್ರೂಣದ ಚಲನೆಯ ಪ್ರಮಾಣ ಅಥವಾ ತೀವ್ರತೆಯಲ್ಲಿ ಬದಲಾವಣೆ, ಯೋನಿಯಿಂದ ದ್ರವ ಸ್ರಾವವಾಗುವುದು, ಮೂತ್ರಮಾಡುವಾಗ ಉರಿ ಅಥವಾ ಮೂತ್ರ ವಿಸರ್ಜನೆ ಸರಿಯಾಗಿ ಆಗದಿರುವುದು ಮುಂತಾದ ಸಮಸ್ಯೆಯು ಕಂಡುಬಂದಲ್ಲಿ ತಕ್ಷಣ ವೈದ್ಯರ ಬಳಿ ಹೋಗಿರಿ.

ಮದ್ಯಸಾರ ಮತ್ತು ಮಾದಕ ವಸ್ತುಗಳು. ತಾಯಿಯು ಮದ್ಯಸಾರ ಮತ್ತು ಮಾದಕ ವಸ್ತುವನ್ನು (ತಂಬಾಕನ್ನು ಸೇರಿಸಿ) ಸೇವಿಸುವುದು, ಆಕೆಯ ಮಗುವಿನಲ್ಲಿ ಮಾನಸಿಕ ಬೆಳವಣಿಗೆ ಕುಂಠಿತವಾಗುವಿಕೆ, ಶಾರೀರಿಕ ಅಂಗವಿಕಲತೆ, ಮತ್ತು ವರ್ತನ ಅಸ್ವಸ್ಥತೆ ಮುಂತಾದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಮಾದಕ ವಸ್ತುಗಳ ವ್ಯಸನಿಗಳಾದ ತಾಯಂದಿರ ಮಗುವಿನಲ್ಲಿ, ಮಾದಕ ಸೇವನೆ ನಿಲ್ಲಿಸಿದ್ದರಿಂದಾಗಿ ಉಂಟಾಗುವ ರೋಗಲಕ್ಷಣಗಳೂ ಕಂಡುಬರಬಹುದು. ಅಪರೂಪವಾಗಿ ಒಂದು ಗ್ಲಾಸ್‌ ದ್ರಾಕ್ಷಾಮದ್ಯವನ್ನು ಕುಡಿಯುವುದು ಹಾನಿಕಾರಕವಲ್ಲವೆಂದು ಕೆಲವು ಜನರು ನಂಬುತ್ತಾರಾದರೂ, ಗರ್ಭಾವಸ್ಥೆಯ ಸಮಯದಲ್ಲಿ ಸಂಪೂರ್ಣವಾಗಿ ಮದ್ಯಸಾರ ಪಾನೀಯಗಳಿಂದ ದೂರವಿರಬೇಕೆಂದು ಅನುಭವಸ್ಥರು ಸಾಮಾನ್ಯವಾಗಿ ಸಲಹೆ ನೀಡುತ್ತಾರೆ. ಗರ್ಭಿಣಿಯು, ಆಕೆಯ ಸುತ್ತಲಿರುವ ಜನರು ಸಿಗರೇಟು ಸೇದುತ್ತಿರುವುದರಿಂದ ಬರುವ ಹೊಗೆಯನ್ನು ಸೇವಿಸುವುದರಿಂದಲೂ ಬಹು ಜಾಗರೂಕತೆಯಿಂದಿರಬೇಕು.

ಔಷಧಿಗಳು. ನಿಮ್ಮ ಗರ್ಭಾವಸ್ಥೆಯನ್ನು ತಿಳಿದಿರುವ ಹಾಗೂ ಔಷಧಿಯಿಂದಾಗುವ ತೊಂದರೆಗಳನ್ನು ಜಾಗರೂಕತೆಯಿಂದ ತೂಗಿನೋಡಿರುವ ವೈದ್ಯರು ಸೂಚಿಸಿದ ಔಷಧಿಯನ್ನು ಮಾತ್ರ ತೆಗೆದುಕೊಳ್ಳಬೇಕು. ಕೆಲವೊಂದು ವಿಟಮಿನ್‌ ಸಂಪೂರಕಗಳು ಸಹ ಹಾನಿಕರವಾಗಿರಸಾಧ್ಯವಿದೆ. ಉದಾಹರಣೆಗೆ, ವಿಟಮಿನ್‌ ಎ ದೇಹದಲ್ಲಿ ಹೆಚ್ಚಾದಾಗ, ಭ್ರೂಣದ ವಿಕೃತ ರಚನೆಗೆ ನಡಿಸಸಾಧ್ಯವಿದೆ.

ದೇಹದ ತೂಕ ಹೆಚ್ಚುವಿಕೆ. ಗರ್ಭಿಣಿಯು ತನ್ನ ತೂಕವು ಹೆಚ್ಚಾಗದಂತೆ ಎಚ್ಚರ ವಹಿಸಬೇಕು. ಕ್ರಾವ್ಸ್‌ರವರ ಆಹಾರ, ಪೋಷಣೆ ಮತ್ತು ಪಥ್ಯ ಚಿಕಿತ್ಸೆ (ಇಂಗ್ಲಿಷ್‌)ಗನುಸಾರ, ಸಾಮಾನ್ಯ ತೂಕದ ಮಗುವಿಗಿಂತಲೂ ಕಡಿಮೆ ತೂಕದ ಮಗುವಿನ ಮರಣದ ಅಪಾಯವು 40 ರಷ್ಟು ಹೆಚ್ಚಾಗಿರುತ್ತದೆ. ಆದರೆ, ಇನ್ನೊಂದು ಬದಿಯಲ್ಲಿ, ಇಬ್ಬರು ವ್ಯಕ್ತಿಗಳ ಆಹಾರವನ್ನು ತಿನ್ನುವುದು ಕೇವಲ ಅಧಿಕ ಕೊಬ್ಬನ್ನು ಉಂಟುಮಾಡುತ್ತದೆ. ಸರಿಯಾದ ದೇಹ ತೂಕವು​—⁠ಗರ್ಭಧಾರಣೆಯ ನಾಲ್ಕನೆಯ ತಿಂಗಳಿನಲ್ಲಿ ಹೆಚ್ಚು ತೋರಿಬರುತ್ತದೆ​—⁠ತಾಯಿಯಾಗಲಿರುವವಳು ತನ್ನ ಹೆಚ್ಚುತ್ತಿರುವ ಅಗತ್ಯಕ್ಕೆ ಹೊಂದಿಕೆಯಲ್ಲಿ ಸರಿಯಾದ ಪ್ರಮಾಣದ ಆಹಾರವನ್ನು ಸೇವಿಸುತ್ತಿದ್ದಾಳೆಂದು ತೋರಿಸುತ್ತದೆ. *

ಶುಚಿತ್ವ ಮತ್ತು ಇತರ ವಿಚಾರಗಳು. ಸಾಮಾನ್ಯ ರೀತಿಯಲ್ಲಿಯೇ ಸ್ನಾನವನ್ನು ಮಾಡಸಾಧ್ಯವಿದೆ, ಆದರೆ ಯೋನಿದ್ವಾರದ ಜೀರ್ಕೊಳವೆಯನ್ನು ಉಪಯೋಗಿಸಬಾರದು. ಜರ್ಮನ್‌ ದಡಾರದಂತಹ ಸೋಂಕು ವೈರಸ್‌ ರೋಗಗಳಿಂದ ನರಳುತ್ತಿರುವವರ ಸಂಪರ್ಕದಿಂದ ಗರ್ಭಿಣಿಯು ದೂರವಿರಬೇಕು. ಟಾಕ್ಸೋಪ್ಲಾಸ್‌ಮೋಸಿಸ್‌ ಎಂಬ ರೋಗವನ್ನು ತಡೆಗಟ್ಟಲು ಸಾಧ್ಯವಾಗುವಂತೆ, ಅರ್ಧಬೆಂದ ಮಾಂಸವನ್ನು ತಿನ್ನಬಾರದು ಮತ್ತು ಬೆಕ್ಕುಗಳ ಮಲದ ಸಂಪರ್ಕವನ್ನು ಮಾಡದಂತೆ ತೀರ ಜಾಗ್ರತೆ ವಹಿಸಬೇಕು. ಗರ್ಭಾವಸ್ಥೆಯ ಕೊನೆಯ ವಾರಗಳಲ್ಲಿ ಅಥವಾ ರಕ್ತಸ್ರಾವ, ನುಲಿಯುವ ನೋವು, ಇಲ್ಲವೆ ಹಿಂದೆ ಗರ್ಭಪಾತವಾಗಿರುವ ಸಂದರ್ಭದಲ್ಲಿ ಹೊರತು, ಲೈಂಗಿಕ ಸಂಬಂಧವು ಸಾಮಾನ್ಯವಾಗಿ ಯಾವುದೇ ಅಪಾಯವನ್ನೊಡ್ಡುವುದಿಲ್ಲ.

ಒಂದು ಯಶಸ್ವಿಕರವಾದ ಹೆರಿಗೆ

ಗರ್ಭಾವಸ್ಥೆಯ ಸಮಯದಲ್ಲಿ ತನ್ನ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಸ್ತ್ರೀಗೆ ಹೆರಿಗೆಯ ಸಮಯದಲ್ಲಿ ಕಡಿಮೆ ತೊಡಕುಗಳುಂಟಾಗುತ್ತವೆ. ಸಾಮಾನ್ಯವಾಗಿ, ಆಕೆ ತಾನು ಮನೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಬಯಸುತ್ತಾಳೋ ಅಥವಾ ಆಸ್ಪತ್ರೆಯಲ್ಲೊ ಎಂಬುದನ್ನು ಮುಂಚಿತವಾಗಿಯೇ ಯೋಜಿಸಿರುತ್ತಾಳೆ. ಏನನ್ನು ನಿರೀಕ್ಷಿಸಸಾಧ್ಯವಿದೆ ಮತ್ತು ನುರಿತ ಸೂಲಗಿತ್ತಿಯರು ಅಥವಾ ವೈದ್ಯರೊಂದಿಗೆ ಹೇಗೆ ಸಹಕರಿಸಬೇಕು ಎಂಬುದರ ತಕ್ಕಮಟ್ಟಿನ ಜ್ಞಾನವು ಆಕೆಗಿರುತ್ತದೆ. ಹೆರಿಗೆಯ ಭಂಗಿ, ಪಂಗಕೊಯ್ಸೀಳಿಕೆ (ಎಪಿಸಿಯೋಟಮಿ), ಚಿಮುಟಗಳ ಉಪಯೋಗ, ವೇದನಹಾರಿ ಔಷಧಗಳು, ಹಾಗೂ ಇಲೆಕ್ಟ್ರಾನಿಕ್‌ ಯಂತ್ರದ ಮೂಲಕ ಭ್ರೂಣವನ್ನು ಗಮನಿಸುವುದು ಮುಂತಾದ ವಿಷಯದಲ್ಲಿ ಸ್ತ್ರೀಯ ಆಯ್ಕೆ​—⁠ಎಲ್ಲಿ ಆಯ್ಕೆಗಳು ಸಾಧ್ಯವೋ ಅಲ್ಲಿ​—⁠ಯಾವುದು ಎಂಬುದಾಗಿ ಸೂಲಗಿತ್ತಿಯರಿಗೆ ಅಥವಾ ವೈದ್ಯರಿಗೆ ತಿಳಿದಿರುತ್ತದೆ. ಇತರ ವಿಷಯಗಳಲ್ಲೂ ಹೊಂದಾಣಿಕೆ ಇರುವುದು ಅವಶ್ಯವಾಗಿದೆ. ಉದಾಹರಣೆಗೆ: ಮನೆಯಲ್ಲಿ ಹೆರಿಗೆ ಮಾಡಿಸುವಾಗ ಏನಾದರೂ ತೊಡಕುಂಟಾಗುವಲ್ಲಿ ಯಾವ ಆಸ್ಪತ್ರೆ ಅಥವಾ ಕ್ಲಿನಿಕ್‌ಗೆ ಅವರು ಹೋಗುತ್ತಾರೆ? ಅಧಿಕ ರಕ್ತನಷ್ಟವಾದಲ್ಲಿ ಏನು ಮಾಡಬೇಕು? ರಕ್ತಸ್ರಾವವು ಅನೇಕ ಗರ್ಭಿಣಿಯರ ಮರಣಕ್ಕೆ ನಡಿಸುತ್ತದಾದ್ದರಿಂದ, ರಕ್ತಪೂರಣವನ್ನು ನಿರಾಕರಿಸುವ ರೋಗಿಗಳಿಗಾಗಿ ರಕ್ತದ ಬದಲಿಗಳು ಸುಲಭವಾಗಿ ಸಿಗಬೇಕು. ಒಂದುವೇಳೆ ಸಿಸೇರಿಯನ್‌ ಶಸ್ತ್ರಚಿಕಿತ್ಸೆಯು ಅಗತ್ಯವಾದಲ್ಲಿ ಏನು ಮಾಡಬೇಕೆಂಬುದನ್ನು ಸಹ ಮುಂಚಿತವಾಗಿ ಆಲೋಚಿಸಲೇಬೇಕು.

ಮಕ್ಕಳು ದೇವರಿಂದ ಬಂದ ಒಂದು ಬಹುಮಾನ, ಒಂದು “ಸ್ವಾಸ್ತ್ಯ”ವಾಗಿದ್ದಾರೆ ಎಂಬುದಾಗಿ ಬೈಬಲ್‌ ತಿಳಿಸುತ್ತದೆ. (ಕೀರ್ತನೆ 127:3) ಸ್ತ್ರೀಯು ತನ್ನ ಗರ್ಭಾವಸ್ಥೆಯ ಕುರಿತು ಎಷ್ಟು ಹೆಚ್ಚಾಗಿ ತಿಳಿದಿರುತ್ತಾಳೊ ಅಷ್ಟೇ ಹೆಚ್ಚಾಗಿ ಆಕೆಯ ಗರ್ಭಾವಸ್ಥೆ ಮತ್ತು ಹೆರಿಗೆಯು ಯಶಸ್ವಿಕರವಾಗುತ್ತದೆ. ಗರ್ಭಧಾರಣೆಗೆ ಮುನ್ನ ಹಾಗೂ ಗರ್ಭಾವಸ್ಥೆಯ ಸಮಯದಲ್ಲಿ ತನ್ನ ಬಗ್ಗೆ ಜಾಗರೂಕತೆ ವಹಿಸುವ ಮೂಲಕ ಮತ್ತು ಹೆರಿಗೆಯ ವಿವಿಧ ವಿಷಯಗಳ ಕುರಿತು ಮುಂಚಿತವಾಗಿಯೇ ಆಲೋಚಿಸುವ ಮೂಲಕ, ಒಬ್ಬ ಸ್ತ್ರೀಯು ನಿರಪಾಯಕರ ಗರ್ಭಾವಸ್ಥೆಯನ್ನು ಸಾಧ್ಯಗೊಳಿಸಲು ತನ್ನಿಂದಾದುದೆಲ್ಲವನ್ನೂ ಮಾಡುತ್ತಾಳೆ.(g03 1/08)

[ಪಾದಟಿಪ್ಪಣಿಗಳು]

^ ಖನಿಜ, ಧಾನ್ಯಗಳು, ಕಾಯಿಪಲ್ಯಗಳು, ಕರಟಕಾಯಿಗಳು, ಹಾಗೂ ಪೌಷ್ಟಿಕಾಂಶಗಳುಳ್ಳ ಸೀರಿಯಲ್‌ಗಳು, ಫಾಲಿಕ್‌ ಆಮ್ಲ ಮತ್ತು ಕಬ್ಬಿಣಾಂಶವನ್ನು ಪಡೆಯುವ ಕೆಲವು ಮೂಲಗಳಾಗಿವೆ. ಅಧಿಕ ಕಬ್ಬಿಣಾಂಶವುಳ್ಳ ಆಹಾರದೊಂದಿಗೆ ವಿಟಮಿನ್‌ ಸಿಯನ್ನು ಹೊಂದಿರುವ ತಾಜಾ ಹಣ್ಣುಗಳನ್ನು ಬೆರೆಸುವುದು, ಅವುಗಳ ಸೇವನೆಗೆ ಸಹಾಯಮಾಡಬಹುದು.

^ ಆರೋಗ್ಯಕರವಾದ ದೇಹ ತೂಕದೊಂದಿಗೆ ತನ್ನ ಗರ್ಭಾವಸ್ಥೆಯನ್ನು ಆರಂಭಿಸಿದ ಸ್ತ್ರೀಯು, ಆಕೆಯ ಗರ್ಭಾವಸ್ಥೆಯ ಕೊನೆಯಲ್ಲಿ 9 ರಿಂದ 12 ಕಿಲೊಗ್ರಾಮಿನಷ್ಟು ತೂಕವನ್ನು ಹೆಚ್ಚಿಸಬೇಕಾಗಿ ಶಿಫಾರಸ್ಸು ಮಾಡಲಾಗಿದೆ. ಹಾಗಿದ್ದರೂ, ತರುಣಾವಸ್ಥೆಯ ಅಥವಾ ನ್ಯೂನಪೋಷಿತರಾದ ಸ್ತ್ರೀಯರು 12 ರಿಂದ 15 ಕಿಲೊಗ್ರಾಮಿನಷ್ಟು ತೂಕವನ್ನು ಹೆಚ್ಚಿಸಬೇಕು. ಆದರೆ ಈಗಾಗಲೇ ಅಧಿಕ ದೇಹ ತೂಕವಿರುವವರು ಕೇವಲ 7 ರಿಂದ 9 ಕಿಲೊಗ್ರಾಮಿನಷ್ಟು ತೂಕವನ್ನು ಹೆಚ್ಚಿಸಬೇಕು.

[ಪುಟ 22ರಲ್ಲಿರುವ ಚೌಕ]

ಗರ್ಭಿಣಿ ಸ್ತ್ರೀಗೆ ಉಪಯುಕ್ತ ಸಲಹೆಗಳು

● ಗರ್ಭಿಣಿಯು ಸೇವಿಸುವ ಆಹಾರದಲ್ಲಿ, ಹಣ್ಣು ಹಂಪಲುಗಳು, ಕಾಯಿಪಲ್ಯಗಳು (ಮುಖ್ಯವಾಗಿ ಕಡು ಹಸಿರು, ಕಿತ್ತಳೆ ಮತ್ತು ಕೆಂಪು ಬಣ್ಣದವು), ಧಾನ್ಯಗಳು (ಬೀನ್ಸ್‌, ಸೋಯಾಬೀನ್ಸ್‌, ಕಾಳುಗಳು ಹಾಗೂ ಬಟಾಣಿ ಕಾಳುಗಳು) ಸೀರಿಯಲ್‌ಗಳು (ಗೋಧಿ, ಜೋಳ, ಓಟ್ಸ್‌ ಮತ್ತು ಬಾರ್ಲಿ ಮುಂತಾದವುಗಳನ್ನು ಸೇರಿಸಿ ಇಡೀ ಕಾಳುಗಳಿರುವ ಅಥವಾ ಪೌಷ್ಟಿಕಾಂಶಗಳುಳ್ಳ ಸೀರಿಯಲ್‌ಗಳು), ಪ್ರಾಣಿಜನ್ಯ ಆಹಾರಗಳು (ಮೀನು, ಕೋಳಿ, ದನದ ಮಾಂಸ, ಮೊಟ್ಟೆಗಳು, ಚೀಸ್‌ ಹಾಗೂ ಹಾಲು, ಅದರಲ್ಲೂ ವಿಶೇಷವಾಗಿ ಕೊಬ್ಬು ತೆಗೆದ ಹಾಲು ಉತ್ತಮ) ಸೇರಿರಬೇಕು. ಕೊಬ್ಬು, ಶೋಧಿಸಲ್ಪಟ್ಟ ಸಕ್ಕರೆ ಮತ್ತು ಉಪ್ಪನ್ನು ಮಿತವಾಗಿ ಸೇವಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಕ್ಯಾಫೀನ್‌ ಇರುವ ಪಾನೀಯದಿಂದ ದೂರವಿರಿ. ಆಹಾರವು ಕೆಡದಂತೆ ಉಪಯೋಗಿಸಲಾಗುವ ರಾಸಾಯನಿಕ ಪದಾರ್ಥಗಳನ್ನು ಮತ್ತು ಸೇರಿಸುವಿಕೆಗಳನ್ನು (ಕೃತಕ ಬಣ್ಣಗಳು ಹಾಗೂ ರುಚಿಕಾರಕ ಪದಾರ್ಥಗಳು) ಹೊಂದಿರುವ ಪದಾರ್ಥವನ್ನು ಸೇವಿಸಬೇಡಿರಿ. ಪಿಷ್ಟ, ಜೇಡಿ ಮಣ್ಣು ಹಾಗೂ ತಿನ್ನಸಾಧ್ಯವಿಲ್ಲದ ಇತರ ವಸ್ತುಗಳು, ನ್ಯೂನ ಪೋಷಣೆ ಮತ್ತು ನಂಜನ್ನು ಉಂಟುಮಾಡಸಾಧ್ಯವಿದೆ.

● ಎಕ್ಸ್‌-ರೇ ಮತ್ತು ಹಾನಿಕಾರಕ ರಾಸಾಯನಿಕ ವಸ್ತುಗಳಿಗೆ ಹೆಚ್ಚಾಗಿ ಒಡ್ಡಿಕೊಳ್ಳುವುದು ಮುಂತಾದ ಸಂಭವನೀಯ ಪರಿಸರೀಯ ಗಂಡಾಂತರಗಳ ಕುರಿತು ಎಚ್ಚರದಿಂದಿರಬೇಕು. ಪಿಚಕಾರಿ ದ್ರವ್ಯ ಹಾಗೂ ಮನೆಯಲ್ಲಿ ಉಪಯೋಗಿಸುವ ಇತರ ದ್ರವ್ಯಗಳನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕು. ಅತಿಯಾದ ಬಿಸಿಲಿಗೆ ಹೋಗುವ ಮೂಲಕ ಅಥವಾ ಅತಿಯಾಗಿ ವ್ಯಾಯಾಮ ಮಾಡುವ ಮೂಲಕ ನಿಮ್ಮ ದೇಹವು ವಿಪರೀತವಾಗಿ ಬಿಸಿಯಾಗದಂತೆ ನೋಡಿಕೊಳ್ಳಿರಿ. ದೀರ್ಘಸಮಯದ ವರೆಗೆ ನಿಂತುಕೊಳ್ಳುವುದನ್ನು ಮತ್ತು ಅತಿಪ್ರಯಾಸವನ್ನು ತಡೆಯಿರಿ. ಕುಳಿತುಕೊಳ್ಳುವಾಗ ಸರಿಯಾದ ಭಂಗಿಯನ್ನು ಉಪಯೋಗಿಸಿರಿ.