ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರೀಕ್ಷೆಯಲ್ಲಿ ವಂಚಿಸುವುದು ತಪ್ಪೋ?

ಪರೀಕ್ಷೆಯಲ್ಲಿ ವಂಚಿಸುವುದು ತಪ್ಪೋ?

ಯುವ ಜನರು ಪ್ರಶ್ನಿಸುವುದು . . .

ಪರೀಕ್ಷೆಯಲ್ಲಿ ವಂಚಿಸುವುದು ತಪ್ಪೋ?

“ಪ್ರತಿಯೊಬ್ಬರಿಗೂ ವಂಚಿಸುವುದು ತಪ್ಪೆಂದು ತಿಳಿದಿದೆ, ಆದರೆ ಅದೇ ಸುಲಭ.” ​—⁠ಜಿಮೀ, 17ರ ಪ್ರಾಯದವನು.

ಪರೀಕ್ಷೆಯಲ್ಲಿ ನಿಮ್ಮ ಸಹಪಾಠಿಯ ಉತ್ತರ ಹಾಳೆಯನ್ನು ಕದ್ದು ನೋಡುವ ಶೋಧನೆಗೆ ಎಂದಾದರೂ ನೀವು ಒಳಗಾಗಿದ್ದೀರೋ? ಹಾಗಿರುವಲ್ಲಿ, ಈ ರೀತಿ ಶೋಧನೆಗೊಳಗಾಗಿರುವವರು ನೀವೊಬ್ಬರೇ ಅಲ್ಲ. ಯಾವುದೇ ನಾಚಿಕೆಯ ಭಾವನೆ ಇಲ್ಲದೆ ತನ್ನ ಸಹಪಾಠಿಗಳಲ್ಲಿ ಅನೇಕರು ಪರೀಕ್ಷೆಯಲ್ಲಿ ವಂಚಿಸುತ್ತಾರೆಂದು ಹನ್ನೆರಡನೆಯ ತರಗತಿಯಲ್ಲಿರುವ ಜೆನ ಎಂಬುವವಳು ತಿಳಿಸುತ್ತಾಳೆ. ಅವಳು ಹೇಳುವುದು: “ಅವರು ತಾವು ಯಾವ ರೀತಿಯಲ್ಲಿ ಪರೀಕ್ಷೆಯಲ್ಲಿ ವಂಚಿಸಿದೆವು ಎಂಬುದಾಗಿ ಜಂಬದಿಂದ ಹೇಳಿಕೊಳ್ಳುತ್ತಾರೆ. ನೀವು ವಂಚಿಸುವುದಿಲ್ಲವಾದರೆ ಅವರು ನಿಮ್ಮನ್ನು ವಿಲಕ್ಷಣವಾಗಿ ವೀಕ್ಷಿಸುತ್ತಾರೆ.”

ಅಮೆರಿಕದಲ್ಲಿನ ಒಂದು ಸಮೀಕ್ಷೆಯಲ್ಲಿ, ಅತ್ಯುತ್ತಮ ಅಂಕಗಳನ್ನು ಪಡೆದವರಲ್ಲಿ 80 ಪ್ರತಿಶತದಷ್ಟು ಹದಿವಯಸ್ಕರು ತಾವು ಪರೀಕ್ಷೆಯಲ್ಲಿ ನಕಲು ಮಾಡಿದ್ದೇವೆಂದು ಒಪ್ಪಿಕೊಂಡಿದ್ದಾರೆ ಮತ್ತು ಈ “ಅತ್ಯುತ್ತಮ ಅಂಕಗಳನ್ನು” ಪಡೆದವರಲ್ಲಿ 95 ಪ್ರತಿಶತದಷ್ಟು ವ್ಯಕ್ತಿಗಳು ನಕಲು ಮಾಡುವಾಗ ಹಿಡಿಯಲ್ಪಡಲಿಲ್ಲ. 20,000ಕ್ಕಿಂತಲೂ ಹೆಚ್ಚಿನ ಮಾಧ್ಯಮಿಕ ಶಾಲೆಯ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸಮೀಕ್ಷೆಯನ್ನು ಮಾಡಿದ ನಂತರ ಜೋಸೆಫ್‌ಸನ್‌ ನೀತಿಶಾಸ್ತ್ರ ಸಂಸ್ಥೆಯು ಈ ತೀರ್ಮಾನಕ್ಕೆ ಬಂತು: “ಪ್ರಾಮಾಣಿಕತೆ ಹಾಗೂ ಸಮಗ್ರತೆ ಎಂಬಂಥ ಗುಣಗಳ ಕುರಿತು ನೋಡುವಾಗ, ವಿಷಯಗಳು ಪ್ರಗತಿಪರವಾಗಿ ಹೆಚ್ಚು ಕೆಟ್ಟದಾಗುತ್ತಾ ಹೋಗುತ್ತಿವೆ.” ವಂಚಿಸುವಂತಹ ಹವ್ಯಾಸವು ಎಷ್ಟೊಂದು ವ್ಯಾಪಿಸಿದೆ ಎಂಬುದರ ಬಗ್ಗೆ ಶಿಕ್ಷಕರು ದಿಗ್ಭ್ರಮೆಗೊಂಡಿದ್ದಾರೆ! “ವಂಚಿಸದಂಥ ಜನರು ಅಲ್ಪ ಸಂಖ್ಯಾತರಾಗಿದ್ದಾರೆ” ಎಂಬುದಾಗಿ ಶಾಲೆಯ ಕಾರ್ಯ ನಿರ್ವಾಹಕರಾದ ಗ್ಯಾರೀ ಜೆ. ನೀಲ್ಸ್‌ರವರು ಹೇಳುವಷ್ಟರ ಮಟ್ಟಿಗೆ ಪರಿಸ್ಥಿತಿಯು ಹದಗೆಟ್ಟಿದೆ.

ಶಾಲಾಗೆಲಸದ ವಿಷಯದಲ್ಲಿ ತಮ್ಮ ಮಕ್ಕಳು ಗೌರವಾರ್ಹವಾಗಿ ನಡೆದುಕೊಳ್ಳಬೇಕೆಂದು ಹೆಚ್ಚಿನ ಹೆತ್ತವರು ಬಯಸುತ್ತಾರೆ. ಹಾಗಿದ್ದರೂ, ದುಃಖಕರವಾಗಿ ಹೆಚ್ಚಿನ ಮಕ್ಕಳು ಪರೀಕ್ಷೆಯಲ್ಲಿ ವಂಚಿಸುವ ಮೂಲಕ ತಮ್ಮ ಪ್ರಾಮಾಣಿಕತೆಯನ್ನು ಕಳೆದುಕೊಳ್ಳುತ್ತಾರೆ. ಯಾವ ಹೊಸ ವಿಧಾನಗಳನ್ನು ಅವರು ಉಪಯೋಗಿಸುತ್ತಾರೆ? ಕೆಲವು ಯುವಕರು ವಂಚನೆಯ ಮಾರ್ಗವನ್ನು ಯಾಕೆ ಅವಲಂಬಿಸುತ್ತಾರೆ? ಈ ಪದ್ಧತಿಯನ್ನು ನೀವು ತ್ಯಜಿಸಬೇಕೇಕೆ?

ಉಚ್ಚ ತಂತ್ರಜ್ಞಾನದ ಮೂಲಕ ಪರೀಕ್ಷೆಯಲ್ಲಿ ವಂಚಿಸುವುದು

ಆಧುನಿಕ ವಂಚಕರಿಂದ ಅನೇಕ ಅಪ್ರಾಮಾಣಿಕ ವಿಧಾನಗಳು ಉಪಯೋಗಿಸಲ್ಪಡುತ್ತವೆ. ಇಂದಿನ ಉಚ್ಚ ತಂತ್ರಜ್ಞಾನದ ನಿಪುಣತೆಗಳಿಗೆ ಹೋಲಿಸುವಾಗ, ಹೋಮ್‌ವರ್ಕ್‌ ಅನ್ನು ನಕಲು ಮಾಡುವ ಅಥವಾ ಅನೇಕ ಉತ್ತರಗಳನ್ನು ಬರೆದು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗುವ ಮೂಲಕ ವಂಚಿಸುವುದು ಅಲ್ಪ ವಿಷಯವಾಗಿ ಕಂಡುಬರುತ್ತದೆ. ಇಂದಿನ ಉಚ್ಚ ತಂತ್ರಜ್ಞಾನದಲ್ಲಿ, ಇನ್ನೊಂದು ಸ್ಥಳದಿಂದ ಕರೆನೀಡುವವನಿಂದ ಪರೀಕ್ಷಾ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುವಂಥ ಪೇಜರ್‌ಗಳ ಉಪಯೋಗ, “ಹೆಚ್ಚಿನ” ಮಾಹಿತಿಯಿಂದ ಮುನ್ನೇರ್ಪಡಿಸಲ್ಪಟ್ಟಿರುವ ಕ್ಯಾಲ್‌ಕ್ಯುಲೇಟರ್‌ಗಳು, ಬೇರೆಲ್ಲೊ ಇರುವ ಒಬ್ಬ ಸಹಾಯಕನಿಗೆ ಪ್ರಶ್ನೆಗಳನ್ನು ಕಳುಹಿಸಿಕೊಡಲು ಉಪಯೋಗಿಸಲ್ಪಡುವಂತಹ ಬಟ್ಟೆಗಳಲ್ಲಿ ಬಚ್ಚಿಡಲಾಗುವಂಥ ಚಿಕ್ಕದಾದ ಕ್ಯಾಮರಾಗಳು, ಕ್ಲಾಸ್‌ರೂಮಿನ ಅಕ್ಕಪಕ್ಕದಲ್ಲಿರುವ ವಿದ್ಯಾರ್ಥಿಗಳಿಗೆ ರಕ್ತವರ್ಣಾತೀತ ವಿಕಿರಣವನ್ನು ಉಪಯೋಗಿಸುತ್ತಾ ಸಂದೇಶಗಳನ್ನು ಸಾಗಿಸುವ ಸಾಧನಗಳು, ಮತ್ತು ಯಾವುದೇ ವಿಷಯದ ಮೇಲೆ ಪೂರ್ತಿ ಉತ್ತರ ದೊರೆಯುವ ಇಂಟರ್‌ನೆಟ್‌ ಸೈಟುಗಳೂ ಸೇರಿವೆ.

ಪರೀಕ್ಷೆಗಳಲ್ಲಿ ವಂಚಿಸುವ ಪ್ರವೃತ್ತಿಯನ್ನು ನಿಲ್ಲಿಸಲು ಶಿಕ್ಷಕರು ಪ್ರಯತ್ನಿಸುತ್ತಾರೆ. ಆದರೆ ಇದು ಸುಲಭದ ಕೆಲಸವಲ್ಲ. ಏಕೆಂದರೆ ಯಾವುದನ್ನು ನಾವು ವಂಚನೆ ಎಂಬುದಾಗಿ ಪರಿಗಣಿಸುತ್ತೇವೊ ಅದನ್ನು ಎಲ್ಲ ವಿದ್ಯಾರ್ಥಿಗಳು ಅಥವಾ ಎಲ್ಲಾ ಶಿಕ್ಷಕರೂ ಒಪ್ಪುವುದಿಲ್ಲ. ಉದಾಹರಣೆಗೆ, ಒಂದು ಕೆಲಸವನ್ನು ವಿದ್ಯಾರ್ಥಿಗಳ ತಂಡಗಳು ಒಟ್ಟಾಗಿ ಮಾಡುವಲ್ಲಿ, ಪ್ರಾಮಾಣಿಕ ಸಹೋದ್ಯಮ ಮತ್ತು ಅಪ್ರಾಮಾಣಿಕ ವಂಚನೆಯ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿ ತೋರಿಬರುವುದಿಲ್ಲ. ನಂತರ ಅದರಲ್ಲಿ ಕೆಲವರು, ಇತರರು ಎಲ್ಲಾ ಕೆಲಸವನ್ನು ಮಾಡುವಂತೆ ಬಿಟ್ಟುಬಿಡುವುದರ ಮೂಲಕ ಗುಂಪಿನ ಪ್ರಯತ್ನದ ಸದುಪಯೋಗವನ್ನು ಪಡೆಯುತ್ತಾರೆ. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಯಾದ ಯುಜೀ ಎಂಬುವವನು ಹೇಳುವುದು: “ಇವರಲ್ಲಿ ಕೆಲವು ವಿದ್ಯಾರ್ಥಿಗಳು ಬಹಳ ಸೋಮಾರಿಗಳಾಗಿರುತ್ತಾರೆ. ಅವರು ಯಾವುದೇ ಕೆಲಸವನ್ನು ಮಾಡುವುದಿಲ್ಲ. ಆಮೇಲೆ ಎಲ್ಲಾ ಕೆಲಸವನ್ನು ಮಾಡಿದವರಷ್ಟೇ ಅಂಕವನ್ನು ಅವರೂ ಪಡೆಯುತ್ತಾರೆ. ನನ್ನ ಪ್ರಕಾರ ಇದೂ ವಂಚನೆಯಾಗಿದೆ!”

ಅವರು ವಂಚಿಸುವುದೇಕೆ?

ಒಂದು ಸಮೀಕ್ಷೆಗನುಸಾರ, ವಂಚನೆಮಾಡಲು ಅನೇಕ ವಿದ್ಯಾರ್ಥಿಗಳು ಆಯ್ಕೆ ಮಾಡಿರುವುದಕ್ಕೆ ಮೊದಲನೆಯ ಕಾರಣವು ತಯಾರಿಯ ಕೊರತೆಯೇ ಆಗಿದೆ. ಇನ್ನಿತರ ವಿದ್ಯಾರ್ಥಿಗಳು, ಶಾಲೆಯಲ್ಲಿನ ಸ್ಪರ್ಧಾತ್ಮಕ ವಾತಾವರಣ ಅಥವಾ ತಮ್ಮ ಹೆತ್ತವರ ಅತಿ ಉಚ್ಚ ನಿರೀಕ್ಷೆಗಳ ಕಾರಣ ನಿರ್ಬಂಧಿಸಲ್ಪಟ್ಟವರಾಗಿ ತಮಗೆ ಬೇರೆ ಯಾವುದೇ ಆಯ್ಕೆ ಇಲ್ಲ ಎಂಬ ನಿರ್ಧಾರಕ್ಕೆ ಬರುತ್ತಾರೆ. 13 ವರುಷ ಪ್ರಾಯದ ಸ್ಯಾಮ್‌ ಎಂಬುವವನು ತಿಳಿಸುವುದು: “ನನ್ನ ಹೆತ್ತವರು ಅಂಕಗಳನ್ನು ಅತಿ ಪ್ರಾಮುಖ್ಯವೆಂದು ಪರಿಗಣಿಸುತ್ತಾರೆ. ಗಣಿತ ಪರೀಕ್ಷೆಯಲ್ಲಿ ಎಷ್ಟು ಅಂಕಗಳು ಬಂದಿವೆ? ಇಂಗ್ಲಿಷ್‌ ಪರೀಕ್ಷೆಯಲ್ಲಿ ಎಷ್ಟು ಅಂಕಗಳು ಬಂದಿವೆ? ಎಂಬುದಾಗಿ ಅವರು ನನ್ನನ್ನು ಕೇಳುತ್ತಾರೆ. ಇದನ್ನು ನಾನು ಹಗೆಮಾಡುತ್ತೇನೆ!”

ಕೆಲವರಿಗೆ, ಅತ್ಯುತ್ತಮ ಅಂಕಗಳನ್ನು ಪಡೆಯಬೇಕೆಂಬ ಸತತ ಒತ್ತಡವೇ ವಂಚನೆಯ ದಾರಿಗೆ ನಡಿಸುತ್ತದೆ. ಅಮೆರಿಕದ ಹದಿವಯಸ್ಕನ ಖಾಸಗಿ ಜೀವನ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ತಿಳಿಸುವುದು: “ಪ್ರಾಮಾಣಿಕತೆಯನ್ನು ತ್ಯಾಗಮಾಡಿಯಾದರೂ ಉತ್ತಮ ಅಂಕಗಳನ್ನು ಗಳಿಸಬೇಕೆಂಬ ಒತ್ತಡದಿಂದ, ಕಲಿಯುವುದರಲ್ಲಿ ಸಿಗುವ ಸಂತೃಪ್ತಿಯು ಸ್ಥಳಾಂತರಿಸಲ್ಪಟ್ಟಿದೆ. ಇಷ್ಟರ ಮಟ್ಟಿಗೆ ಉತ್ತಮ ಅಂಕಗಳನ್ನು ಗಳಿಸಬೇಕೆಂಬ ಒತ್ತಡವು ತೀವ್ರವಾಗಿರುವ ಈ ವ್ಯವಸ್ಥೆಯಲ್ಲಿ ಏನೋ ಅಸಮತೋಲನವಿದೆ.” ಈ ಮಾತನ್ನು ಅನೇಕ ವಿದ್ಯಾರ್ಥಿಗಳೂ ಒಪ್ಪಿಕೊಳ್ಳುತ್ತಾರೆ. ಸಂಪೂರ್ಣ ಕೋರ್ಸ್‌ನಲ್ಲಿ ಅನುತ್ತೀರ್ಣರಾಗುವುದು ದೂರದ ಮಾತು, ಕೇವಲ ಒಂದು ಪರೀಕ್ಷೆಯಲ್ಲಿಯೂ ಅನುತ್ತೀರ್ಣರಾಗಲು ಖಂಡಿತವಾಗಿಯೂ ಯಾರೂ ಬಯಸುವುದಿಲ್ಲ. ಕೆಲವು ವ್ಯಕ್ತಿಗಳು ತಾವು ಅನುತ್ತೀರ್ಣರಾಗುತ್ತೇವೆಂದು ನಿಜವಾಗಿಯೂ ಬಹಳ ಹೆದರುತ್ತಾರೆ. ಆದುದರಿಂದ ಅವರಿಗೆ ಉತ್ತರಗಳು ತಿಳಿದಿದ್ದರೂ, ಅವು ಸರಿಯಾಗಿವೆಯೊ ಎಂದು ಖಚಿತಪಡಿಸಿಕೊಳ್ಳಲು ನಕಲು ಮಾಡುತ್ತಾರೆ.”

ಪ್ರಾಮಾಣಿಕತೆಯ ಮಟ್ಟಗಳನ್ನು ತ್ಯಾಗಮಾಡಲು ಸಿದ್ಧರಿರುವ ಅಧಿಕ ಸಂಖ್ಯಾತ ಜನರು ವಂಚಿಸುವುದನ್ನು ಅಪಾಯರಹಿತವಾಗಿ ತೋರುವಂತೆ ಮಾಡಸಾಧ್ಯವಿದೆ. ಕೆಲವೊಮ್ಮೆ ಇದು ಅತಿ ಪ್ರಯೋಜನಕರವಾಗಿಯೂ ತೋರಿಬರಬಹುದು. 17 ವರುಷ ಪ್ರಾಯದವನಾದ ಗ್ರೆಗ್‌ ಎಂಬುವವನು ಹೇಳುವುದು: “ನಿನ್ನೆ ನನ್ನ ಕ್ಲಾಸ್‌ನ ಒಂದು ಪರೀಕ್ಷೆಯಲ್ಲಿ ಒಬ್ಬ ಹುಡುಗನು ನಕಲು ಮಾಡುತ್ತಿರುವುದನ್ನು ನಾನು ನೋಡಿದೆ. ಇಂದು ನಮಗೆ ಅಧ್ಯಾಪಕರಿಂದ ಪರೀಕ್ಷೆಯ ಉತ್ತರ ಹಾಳೆಯು ಹಿಂದೆ ಸಿಕ್ಕಿದಾಗ ಅವನಿಗೆ ನನಗಿಂತಲೂ ಹೆಚ್ಚು ಅಂಕಗಳು ದೊರಕಿದ್ದವು.” ತಮ್ಮ ಸಮಾನಸ್ಥರ ಮಧ್ಯೆ ಪರೀಕ್ಷೆಯಲ್ಲಿ ವಂಚಿಸುವುದು ಹೆಚ್ಚುತ್ತಾ ಇರುವುದರಿಂದ ಅನೇಕರು ಇದರಿಂದ ಪ್ರಭಾವಿತರಾಗಿದ್ದಾರೆ. “‘ಇತರರು ಮಾಡುತ್ತಾರಾದರೆ ನಾನೂ ಮಾಡಬೇಕು’ ಎಂಬುದಾಗಿ ಕೆಲವು ವಿದ್ಯಾರ್ಥಿಗಳು ಭಾವಿಸುತ್ತಾರೆ” ಎಂದು ಯುಜೀ ಹೇಳುತ್ತಾನೆ. ಆದರೆ ಅದು ಸರಿಯೊ?

ವಂಚಿಸುವಂಥ ಒಂದು ಚಟ

ವಂಚಿಸುವುದನ್ನು ಕದಿಯುವುದಕ್ಕೆ ಹೋಲಿಸಿರಿ. ಅನೇಕ ಜನರು ಕಳ್ಳತನದ ಮಾರ್ಗದಲ್ಲಿ ಹೋಗುತ್ತಾರೆ ಎಂದ ಮಾತ್ರಕ್ಕೆ ಅದು ಸ್ವೀಕಾರಯೋಗ್ಯವಾಗುತ್ತದೋ? ‘ಖಂಡಿತವಾಗಿಯೂ ಇಲ್ಲ,’ ಎಂಬುದಾಗಿ ನೀವು ಹೇಳುವಿರಿ. ಅದರಲ್ಲಿಯೂ ನಿಮ್ಮ ಹಣವು ಕದಿಯಲ್ಪಟ್ಟಿರುವಲ್ಲಿ ನೀವು ನಿಶ್ಚಯವಾಗಿ ಹೀಗೆ ಉತ್ತರಿಸುವಿರಿ! ವಂಚಿಸುವುದರ ಮೂಲಕ ನಾವು, ನಮಗೆ ಸಲ್ಲದ ಹೊಗಳಿಕೆಯನ್ನು ಪಡೆದುಕೊಳ್ಳುತ್ತೇವೆ. ಮಾತ್ರವಲ್ಲದೆ ಪ್ರಾಮಾಣಿಕ ಜನರ ಸದುಪಯೋಗವನ್ನು ಸಹ ಮಾಡಿಕೊಳ್ಳುತ್ತೇವೆ. (ಎಫೆಸ 4:28) ಇತ್ತೀಚೆಗೆ ಪ್ರೌಢ ಶಾಲೆಯಿಂದ ಪದವಿಪಡೆದ ಟಾಮೀ ಹೇಳುವುದು: “ನಿಮಗೆ ಒಂದು ವಿಷಯವು ನಿಜವಾಗಿಯೂ ತಿಳಿಯದಿರುವಾಗ, ‘ನನಗೆ ಆ ವಿಷಯ ತಿಳಿದಿದೆ’ ಎಂಬುದಾಗಿ ನೀವು ಹೇಳುವುದಾದರೆ, ನೀವು ಸುಳ್ಳು ಹೇಳುತ್ತಿದ್ದೀರಿ.” ಈ ವಿಷಯದ ಕುರಿತಾದ ಬೈಬಲಿನ ದೃಷ್ಟಿಕೋನವನ್ನು ಕೊಲೊಸ್ಸೆ 3:9ರಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಅದು ತಿಳಿಸುವುದು: “ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ.”

ವಂಚನೆಯು, ನಿಲ್ಲಿಸಲು ಕಷ್ಟಕರವಾದ ಚಟವಾಗಿ ಪರಿಣಮಿಸಸಾಧ್ಯವಿದೆ. ಜೆನ ಎಂಬವಳು ಹೇಳುವುದು: “ವಂಚಿಸುವವರು, ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ತಾವು ಅಧ್ಯಯನಮಾಡುವ ಅಗತ್ಯವಿಲ್ಲ ಎಂದು ತಿಳಿದುಕೊಳ್ಳುತ್ತಾರೆ. ಆದುದರಿಂದ ಅವರು ವಂಚಿಸುವುದರ ಮೇಲೆ ಆತುಕೊಳ್ಳುತ್ತಾರೆ. ಆದರೆ ಮುಂದಕ್ಕೆ, ಸ್ವತಃ ತಮ್ಮ ಕಾಲ ಮೇಲೆ ನಿಲ್ಲಬೇಕಾಗಿ ಬಂದಾಗ ಜೀವಿತವನ್ನು ಹೇಗೆ ಯಶಸ್ವಿಕರವಾಗಿ ನಡೆಸುವುದು ಎಂಬುದು ಅವರಿಗೆ ತಿಳಿಯುವುದಿಲ್ಲ.”

“ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು,” ಎಂಬುದಾಗಿ ಗಲಾತ್ಯ 6:7ರಲ್ಲಿ ದಾಖಲಾಗಿರುವ ಮೂಲತತ್ತ್ವವು ವಿಚಾರಪ್ರೇರಕವಾಗಿದೆ. ಶಾಲೆಯಲ್ಲಿ ವಂಚಿಸುವುದರ ಪರಿಣಾಮಗಳಲ್ಲಿ, ಕ್ಷೋಭೆಗೊಂಡ ಮನಸ್ಸಾಕ್ಷಿಯಿಂದ ಉಂಟಾಗುವ ನೋವು, ನಿಮ್ಮ ಸ್ನೇಹಿತರ ಭರವಸೆಯನ್ನು ಕಳೆದುಕೊಳ್ಳುವುದು, ಮತ್ತು ಕಲಿಯುವ ಪ್ರಕ್ರಿಯೆಯನ್ನು ನೀವು ತ್ಯಜಿಸಿದ ಕಾರಣ ಕಲಿಯುವ ಸಾಮರ್ಥ್ಯಗಳ ಕೊರತೆ ಮುಂತಾದವುಗಳು ಒಳಗೊಂಡಿರಸಾಧ್ಯವಿದೆ. ಈ ವಂಚನೆಯ ಮಾದರಿಯು, ಮಾರಕವಾಗಿ ಪರಿಣಮಿಸುವ ಕ್ಯಾನ್ಸರ್‌ನಂತೆ ನಿಮ್ಮ ಜೀವಿತದ ಇತರ ಕ್ಷೇತ್ರಗಳನ್ನೂ ಬಾಧಿಸಲು ಮತ್ತು ನಿಮ್ಮ ಅತಿ ಬೆಲೆಬಾಳುವ ಸಂಬಂಧಗಳನ್ನೂ ಕೆಡಿಸಲು ಸಾಧ್ಯವಿದೆ. ನಿಶ್ಚಯವಾಗಿಯೂ ಇದು ವಂಚನೆಯನ್ನು ಹಗೆಮಾಡುವ ದೇವರೊಂದಿಗಿರುವ ನಿಮ್ಮ ಸಂಬಂಧವನ್ನು ಬಾಧಿಸುತ್ತದೆ.​—⁠ಜ್ಞಾನೋಕ್ತಿ 11:⁠1.

ವಂಚಿಸುವುದರ ಮೇಲೆ ಆತುಕೊಳ್ಳುವವರು ಸ್ವತಃ ತಮ್ಮನ್ನೇ ಮೋಸಗೊಳಿಸಿಕೊಳ್ಳುತ್ತಾರೆ. (ಜ್ಞಾನೋಕ್ತಿ 12:19) ಅವರ ಕ್ರಿಯೆಗಳ ಮೂಲಕ ಅವರು ಪುರಾತನ ಪಟ್ಟಣವಾದ ಯೆರೂಸಲೇಮಿನಲ್ಲಿನ ಭ್ರಷ್ಟ ಅಧಿಕಾರಿಗಳಿಗೆ ಸಮಾನವಾದ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ: ‘ನಾವು ಅಸತ್ಯವನ್ನು ಆಶ್ರಯಿಸಿಕೊಂಡು ಮೋಸವನ್ನು ಮರೆಹೊಕ್ಕಿದ್ದೇವೆ.’ (ಯೆಶಾಯ 28:15) ಹಾಗಿದ್ದರೂ, ವಾಸ್ತವದಲ್ಲಿ ವಂಚಕನು ತನ್ನ ಕ್ರಿಯೆಗಳನ್ನು ದೇವರಿಂದ ಮರೆಮಾಡಲಾರನು.​—⁠ಇಬ್ರಿಯ 4:13.

ವಂಚಿಸಬೇಡಿರಿ!

ಅನೇಕ ಸಂದರ್ಭಗಳಲ್ಲಿ ಯುವಕರು, ವಂಚಿಸಲು ಬಹಳಷ್ಟು ಪ್ರಯತ್ನ ಮತ್ತು ಜಾಣತನವನ್ನು ಉಪಯೋಗಿಸುತ್ತಾರೆ. ಆದರೆ ವಂಚಿಸದೆ, ವಿದ್ಯಾಭ್ಯಾಸವನ್ನು ಪಡೆಯುವುದರಲ್ಲಿ ಅವರು ಅದೇ ಪ್ರಯತ್ನ ಮತ್ತು ಜಾಣತನವನ್ನು ಉಪಯೋಗಿಸುವುದಾದರೆ ಅತಿ ಪ್ರಯೋಜನವಾಗಬಲ್ಲದು. ಆ್ಯಬೀ ಎಂಬ 18 ವರುಷ ಪ್ರಾಯದ ಒಬ್ಬಾಕೆ ಹೇಳುವುದು: “ವಂಚಿಸುವುದರಲ್ಲಿ ಅವರು ಶ್ರದ್ಧೆ ವಹಿಸುವ ಪ್ರಕಾರ, ಕಲಿಯುವುದರಲ್ಲಿ ಶ್ರದ್ಧೆ ವಹಿಸಿದರೆ, ಒಂದುವೇಳೆ ಅವರು ಉತ್ತಮ ಅಂಕಗಳನ್ನು ಪಡೆಯಬಲ್ಲರು.”

ವಂಚಿಸಲಿಕ್ಕಾಗಿರುವ ಶೋಧನೆಯು ಬಹಳ ಬಲವಾಗಿರಬಹುದು ಎಂಬುದು ಒಪ್ಪತಕ್ಕದಾಗಿದೆ. ಆದರೂ, ಈ ನೈತಿಕ ಕುಸಿತವನ್ನು ನೀವು ಎದುರಿಸಲೇಬೇಕು. (ಜ್ಞಾನೋಕ್ತಿ 2:10-15) ನೀವದನ್ನು ಹೇಗೆ ಮಾಡಸಾಧ್ಯವಿದೆ? ಮೊದಲಾಗಿ, ನೀವು ಏಕೆ ಶಾಲೆಯಲ್ಲಿದ್ದೀರೆಂದು ಜ್ಞಾಪಿಸಿಕೊಳ್ಳಿರಿ​—⁠ಕಲಿಯಲಿಕ್ಕಾಗಿಯೇ. ನಿಜ, ಮುಂದೆಂದೂ ನಿಮಗೆ ಉಪಯೋಗವಾಗದ ಅನೇಕ ವಿಷಯಗಳನ್ನು ನೀವು ಕಲಿಯುವುದರಿಂದ ಯಾವ ಪ್ರಯೋಜನವೂ ಸಿಕ್ಕುವುದಿಲ್ಲ. ಆದರೆ, ವಂಚಿಸುವ ಮೂಲಕ ಈ ಪ್ರಕ್ರಿಯೆಯನ್ನು ನಿರ್ಲಕ್ಷಿಸುವ ಒಬ್ಬ ವ್ಯಕ್ತಿಯು, ಹೊಸ ವಿಷಯಗಳನ್ನು ಕಲಿಯುವ ಹಾಗೂ ಜ್ಞಾನವನ್ನು ಪ್ರಾಯೋಗಿಕವಾಗಿ ಉಪಯೋಗಿಸುವ ತನ್ನ ಸಾಮರ್ಥ್ಯವನ್ನು ತಡೆಗಟ್ಟುತ್ತಾನೆ. ಯಾವುದೇ ಪ್ರಯತ್ನವಿಲ್ಲದೆ ನಿಜವಾದ ತಿಳುವಳಿಕೆಯನ್ನು ಗಳಿಸಸಾಧ್ಯವಿಲ್ಲ. ಅದನ್ನು ಪಡೆಯಲು ಒಬ್ಬನು ಪ್ರಯತ್ನಪಡಬೇಕಾಗಿದೆ. ಬೈಬಲ್‌ ತಿಳಿಸುವುದು: “ಸತ್ಯವನ್ನು ಎಂದರೆ ಜ್ಞಾನ ಸುಶಿಕ್ಷೆ ವಿವೇಕಗಳನ್ನು ಕೊಂಡುಕೋ; ಮಾರಿ ಬಿಡಬೇಡ.” (ಜ್ಞಾನೋಕ್ತಿ 23:23) ಹೌದು, ಅಧ್ಯಯನ ಮತ್ತು ತಯಾರಿಯನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಬೇಕು. “ಪರೀಕ್ಷೆಗೆ ಮುಂಚೆಯೇ ನೀವು ಪ್ರಯಾಸಪಟ್ಟು ಅಧ್ಯಯನವನ್ನು ಮಾಡಬೇಕು. ಅದು, ನಿಮಗೆ ಉತ್ತರಗಳು ತಿಳಿದಿವೆ ಎಂಬ ಭರವಸೆಯನ್ನು ನಿಮ್ಮಲ್ಲಿ ಹುಟ್ಟಿಸುತ್ತದೆ” ಎಂಬುದಾಗಿ ಜಿಮೀ ಸಲಹೆ ಕೊಡುತ್ತಾನೆ.

ಕೆಲವೊಮ್ಮೆ ಎಲ್ಲಾ ಉತ್ತರಗಳು ನಿಮಗೆ ತಿಳಿದಿರಲಿಕ್ಕಿಲ್ಲವೆಂಬುದು ನಿಜ ಮತ್ತು ಇದರ ಪರಿಣಾಮವಾಗಿ ನಿಮಗೆ ಕಡಿಮೆ ಅಂಕ ದೊರೆಯಬಹುದು. ಹಾಗಿದ್ದರೂ ನಿಮ್ಮ ಮೂಲತತ್ತ್ವಗಳನ್ನು ನೀವು ಒಪ್ಪಂದ ಮಾಡಿಕೊಳ್ಳದಿದ್ದಲ್ಲಿ, ಪ್ರಗತಿಮಾಡಲು ನೀವೇನು ಮಾಡಬೇಕೆಂಬದನ್ನು ನೀವು ಕಂಡುಕೊಳ್ಳಬಹುದು.​—⁠ಜ್ಞಾನೋಕ್ತಿ 21:⁠5.

ಈ ಮುಂಚೆ ತಿಳಿಸಲ್ಪಟ್ಟಿರುವ ಯುಜೀ ಎಂಬವನು ಒಬ್ಬ ಯೆಹೋವನ ಸಾಕ್ಷಿಯಾಗಿದ್ದಾನೆ. ಅವನ ಸಹಪಾಠಿಗಳು ನಕಲು ಮಾಡಲು ತಮಗೆ ಸಹಾಯಮಾಡುವಂತೆ ಅವನನ್ನು ಒತ್ತಾಯಿಸುವಾಗ ಅವನು ಏನು ಮಾಡುತ್ತಾನೆಂಬುದನ್ನು ಹೀಗೆ ವಿವರಿಸುತ್ತಾನೆ: “ಮೊದಲಾಗಿ ನಾನೊಬ್ಬ ಯೆಹೋವನ ಸಾಕ್ಷಿಯೆಂದು ಅವರಿಗೆ ತಿಳಿಸುತ್ತೇನೆ. ಇದು ನನಗೆ ಬಹಳ ಸಹಾಯಮಾಡಿದೆ. ಏಕೆಂದರೆ ಯೆಹೋವನ ಸಾಕ್ಷಿಗಳು ಪ್ರಾಮಾಣಿಕ ಜನರೆಂದು ಅವರಿಗೆ ತಿಳಿದಿದೆ. ಪರೀಕ್ಷೆಯ ಮಧ್ಯದಲ್ಲಿ ಒಂದು ಉತ್ತರವನ್ನು ಕೊಡುವಂತೆ ಯಾರಾದರೂ ನನ್ನನ್ನು ಕೇಳುವುದಾದರೆ ನಾನು ನಿರಾಕರಿಸುತ್ತೇನೆ. ನಂತರ, ನಾನೇಕೆ ಹಾಗೆ ಮಾಡಿದೆ ಎಂಬುದನ್ನು ಅವರಿಗೆ ವಿವರಿಸಸಾಧ್ಯವಿದೆ.”

‘ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ [“ಪ್ರಾಮಾಣಿಕರಾಗಿ,” NW] ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದೇವೆ’ ಎಂಬುದಾಗಿ ಇಬ್ರಿಯರಿಗೆ ಬರೆದ ಅಪೊಸ್ತಲ ಪೌಲನ ಮಾತನ್ನು ಯುಜೀ ಒಪ್ಪಿಕೊಳ್ಳುತ್ತಾನೆ. (ಇಬ್ರಿಯ 13:18) ಪ್ರಾಮಾಣಿಕತೆಯ ಉತ್ಕೃಷ್ಟ ಮಟ್ಟಗಳಿಗೆ ನೀವು ಬಲವಾಗಿ ಅಂಟಿಕೊಳ್ಳುವುದು ಮತ್ತು ವಂಚಿಸುವ ಮೂಲಕ ರಾಜಿಮಾಡಿಕೊಳ್ಳಲು ನಿರಾಕರಿಸುವುದು, ನೀವು ಪಡೆದುಕೊಂಡ ಉತ್ತಮ ಅಂಕಗಳಿಗೆ ನಿಜವಾದ ಮೌಲ್ಯವನ್ನು ಕೊಡುತ್ತದೆ. ನಿಮ್ಮ ಹೆತ್ತವರಿಗೆ ನೀವು ಕೊಡಸಾಧ್ಯವಿರುವ ಅತ್ಯುತ್ತಮ ಉಡುಗೊರೆಯಾದ ಕ್ರೈಸ್ತ ಸಮಗ್ರತೆಯ ದಾಖಲೆಯನ್ನು ನೀವು ಶಾಲೆಯಿಂದ ತರುತ್ತೀರಿ. (3 ಯೋಹಾನ 4) ಅಷ್ಟುಮಾತ್ರವಲ್ಲದೆ, ಶುದ್ಧ ಮನಸ್ಸಾಕ್ಷಿಯನ್ನು ನೀವು ಕಾಪಾಡಿಕೊಳ್ಳುವಿರಿ ಹಾಗೂ ಯೆಹೋವ ದೇವರ ಹೃದಯವನ್ನು ಸಂತೋಷಪಡಿಸುತ್ತಿದ್ದೀರೆಂದು ತಿಳಿಯುವ ಆನಂದವು ನಿಮ್ಮದಾಗುತ್ತದೆ.​—⁠ಜ್ಞಾನೋಕ್ತಿ 27:11.

ಆದುದರಿಂದ, ವಂಚಿಸುವುದು ಎಷ್ಟೇ ಸರ್ವಸಾಮಾನ್ಯವಾಗಿದ್ದರೂ ಅದನ್ನು ತ್ಯಜಿಸಿರಿ! ಹೀಗೆ ಮಾಡುವುದರಿಂದ, ಇತರರೊಂದಿಗೆ ಮತ್ತು ಅತಿ ಪ್ರಾಮುಖ್ಯವಾಗಿ, ಸತ್ಯದೇವರಾದ ಯೆಹೋವನೊಂದಿಗಿರುವ ನಿಮ್ಮ ಒಳ್ಳೆಯ ಸಂಬಂಧವನ್ನು ನೀವು ಕಾಪಾಡಿಕೊಳ್ಳುವಿರಿ.​—⁠ಕೀರ್ತನೆ 11:7; 31:⁠5.(g03 1/22)

[ಪುಟ 18ರಲ್ಲಿರುವ ಸಂಕ್ಷಿಪ್ತ ವಿವರಣೆ]

ಅನೇಕವೇಳೆ ವಂಚಕನು ತಾನು ನಿಜವಾಗಿಯೂ ಕಳ್ಳತನ ಮಾಡುತ್ತಿದ್ದೇನೆ ಎಂಬುದನ್ನು ಗ್ರಹಿಸಲು ತಪ್ಪಿಹೋಗುತ್ತಾನೆ

[ಪುಟ 18ರಲ್ಲಿರುವ ಸಂಕ್ಷಿಪ್ತ ವಿವರಣೆ]

ಅನೇಕವೇಳೆ, ವಂಚನೆಯು ಅತಿ ಗಂಭೀರವಾದ ಅಪ್ರಾಮಾಣಿಕ ಕೃತ್ಯಗಳಿಗೆ ನಡಿಸುತ್ತದೆ

[ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]

ವಂಚಕನು ತನ್ನ ಕ್ರಿಯೆಗಳನ್ನು ದೇವರಿಂದ ಮರೆಮಾಡಲು ಸಾಧ್ಯವಿಲ್ಲ

[ಪುಟ 19ರಲ್ಲಿರುವ ಚಿತ್ರ]

ಪರೀಕ್ಷೆಗೆ ಮುಂಚೆ ಸಾಕಷ್ಟು ಅಧ್ಯಯನವು ನಿಮಗೆ ಭರವಸೆಯನ್ನು ಕೊಡುತ್ತದೆ