ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಮಿಯ ಮೇಲಿನ ಬಹೂಪಯೋಗಿ ಕಾಯಿಗಳಲ್ಲೊಂದು

ಭೂಮಿಯ ಮೇಲಿನ ಬಹೂಪಯೋಗಿ ಕಾಯಿಗಳಲ್ಲೊಂದು

ಭೂಮಿಯ ಮೇಲಿನ ಬಹೂಪಯೋಗಿ ಕಾಯಿಗಳಲ್ಲೊಂದು

ಭೂಗೋಳದಲ್ಲೆಲ್ಲಾ ಪ್ರಯಾಣಿಸಿರುವ ಒಂದು ಅತ್ಯದ್ಭುತಕರ “ಕಾಯಿ” ಇದೆ. ಅದು ಆಹಾರವನ್ನೂ ಪಾನೀಯವನ್ನೂ ಒದಗಿಸುತ್ತದೆ. ಮತ್ತು ಈ ಕಾಯಿಯನ್ನು ಬಿಡುವ ಮರದ ಅದ್ವಿತೀಯ ಬಾಹ್ಯರೂಪವು ಉಷ್ಣವಲಯದ ದ್ವೀಪಗಳ ಹೆಗ್ಗುರುತು ಆಗಿದೆ. ಸರಿ, ನಾವು ಯಾವ ಕಾಯಿಯ ಕುರಿತಾಗಿ ಮಾತಾಡುತ್ತಿದ್ದೇವೆ? ಭೂಮಿಯ ಮೇಲಿನ ಬಹೂಪಯೋಗಿ ಕಾಯಿಗಳಲ್ಲಿ ಒಂದಾಗಿರುವ ತೆಂಗಿನಕಾಯಿಯ ಕುರಿತು ಮಾತಾಡುತ್ತಿದ್ದೇವೆ.

ಉಷ್ಣವಲಯದಾಚೆಯ ಪ್ರದೇಶಗಳಲ್ಲಿ ಜೀವಿಸುವ ಜನರಿಗೆ, ತೆಂಗಿನ ಮರವು ಅವರು ಉಷ್ಣವಲಯದಲ್ಲಿ ವ್ಯಯಿಸಿದ ರಜಾದಿನದ ಕೇವಲ ಒಂದು ಜ್ಞಾಪನವಾಗಿ ಇರಬಹುದು ಅಷ್ಟೇ. ಆದರೆ ಉಷ್ಣವಲಯ ಪ್ರದೇಶದಲ್ಲಿ ಜೀವಿಸುವವರಿಗಾದರೋ, ಈ ಮರವು ಸುಖಸಂಪನ್ಮೂಲಗಳ ಬುಗ್ಗೆಯೇ ಆಗಿದೆ. ಇಂಡೊನೇಷಿಯಾದವರು, “ವರ್ಷದಲ್ಲಿರುವ ದಿನಗಳಷ್ಟೇ ಹಲವಾರು ಉಪಯೋಗಗಳು” ಈ ಉತ್ಪನ್ನದಿಂದ ಸಿಗುತ್ತವೆ ಎಂದು ಹೇಳುತ್ತಾರೆ. ಫಿಲಿಪ್ಪೀನ್ಸ್‌ನಲ್ಲಿ, “ಈ ತೆಂಗಿನ ಸಸಿಗಳನ್ನು ನೆಡುವವನು, ಪಾತ್ರೆಗಳನ್ನು ಮತ್ತು ಉಡುಪನ್ನು, ಅನ್ನ ಮತ್ತು ಪಾನವನ್ನು, ತನಗೊಂದು ವಾಸಸ್ಥಳವನ್ನು ಮತ್ತು ತನ್ನ ಮಕ್ಕಳಿಗೊಂದು ಪರಂಪರೆಯನ್ನು ನೆಡುತ್ತಾನೆ” ಎಂದು ಹೇಳಲಾಗುತ್ತದೆ.

ಈ ಹೇಳಿಕೆಯು ಒಂದು ಅತಿಶಯೋಕ್ತಿಯಾಗಿರುವುದಿಲ್ಲ. ತೆಂಗಿನ ಮರ​—⁠ಜೀವವೃಕ್ಷ (ಇಂಗ್ಲಿಷ್‌) ಎಂಬ ಪುಸ್ತಕಕ್ಕನುಸಾರ, ತೆಂಗಿನ ಮರವು “ಆಹಾರ, ನೀರು ಮತ್ತು ಅಡಿಗೆಗಾಗಿ ಎಣ್ಣೆಯನ್ನು ಒದಗಿಸುವುದು ಮಾತ್ರವಲ್ಲದೆ, ಚಾವಣಿಯ ಹೊದಿಕೆಗಾಗಿ ಗರಿಯನ್ನು, ಹಗ್ಗ ಮತ್ತು ಚಾಪೆಗಳಿಗೆ ನಾರನ್ನು, ಪಾತ್ರೆ ಮತ್ತು ಆಭರಣಗಳಿಗೆಂದು ಉಪಯೋಗಿಸಲ್ಪಡಲು ಚಿಪ್ಪುಗಳನ್ನು, ಮತ್ತು ಯಾವುದರ ಸಿಹಿಯಾದ ರಸದಿಂದ ಬೆಲ್ಲ ಮತ್ತು ಹೆಂಡವನ್ನು ತಯಾರಿಸಲಾಗುತ್ತದೋ ಆ ಹೂ ದಿಂಡನ್ನು ಒದಗಿಸುತ್ತದೆ.” ಆ ಪುಸ್ತಕವು ಕೂಡಿಸಿ ಹೇಳುವುದು: “ಅದರ ಮರವು ಸರಿಯಾದ ರೀತಿಯಲ್ಲಿ ಕತ್ತರಿಸಲ್ಪಡುವುದಾದರೆ, ಅದು ಕೂಡ ಉಪಯುಕ್ತವಾಗಿರಸಾಧ್ಯವಿದೆ.” ವಾಸ್ತವದಲ್ಲಿ, ಹಿಂದೂ ಮಹಾಸಾಗರದಲ್ಲಿರುವ ಮಾಲ್ಡೀವ್‌ ದ್ವೀಪಗಳ ನಿವಾಸಿಗಳು ತೆಂಗಿನ ಮರದ ಭಾಗಗಳಿಂದ ದೋಣಿಗಳನ್ನು ಕಟ್ಟಿ, ಇವುಗಳ ಸಹಾಯದಿಂದ ಅರೇಬಿಯ ಮತ್ತು ಫಿಲಿಪ್ಪೀನ್ಸ್‌ಗೆ ಸಮುದ್ರಯಾನ ಮಾಡಿದರು ಎಂದು ಹೇಳಲಾಗುತ್ತದೆ. ತೆಂಗಿನಕಾಯಿಯ ಬೇಸಾಯಗಾರರಿಗಿಂತಲೂ ಹೆಚ್ಚಾಗಿ ತೆಂಗಿನಕಾಯಿಯು ದೊಡ್ಡ ಸಮುದ್ರ ಪ್ರಯಾಣಿಕನಾಗಿ ಪರಿಣಮಿಸಿದೆ.

ಒಂದು ಸಮುದ್ರಯಾತ್ರಿ ಬೀಜ

ತೆಂಗು ಸಾಕಷ್ಟು ಮಳೆ ಬೀಳುವಂಥ ಉಷ್ಣವಲಯದ ತೀರಗಳಲ್ಲಿ ಹುಲುಸಾಗಿ ಬೆಳೆಯುತ್ತದೆ. ಈ ಬಹೂಪಯೋಗಿ ತೆಂಗಿನ ಮರವನ್ನು ಸ್ಥಳಿಕ ಜನರು ನೆಡಬಹುದಾದರೂ, ತೆಂಗಿನಕಾಯಿಯು ನಮ್ಮ ಭೂಗ್ರಹದ ಅತಿ ದೂರದ ಪ್ರತ್ಯೇಕ ಸ್ಥಳಗಳಿಗೆ ಸ್ವತಃ ದಾರಿಮಾಡಿಕೊಂಡು ಹೋಗಿದೆ. ಹಲವಾರು ಬಗೆಯ ಬೀಜಗಳು ಹಲವಾರು ರೀತಿಗಳಲ್ಲಿ ಪ್ರಸಾರವಾಗುತ್ತವಾದರೂ ತೆಂಗಿನಕಾಯಿಯು ಸಮುದ್ರದ ಬೆನ್ನುಹತ್ತಿ ಪ್ರಯಾಣಿಸುತ್ತದೆ. ಇದೇ ಅದರ ಲೋಕ ಸಂಚಾರದ ಯಶಸ್ಸಿನ ಕೈವಾಡವಾಗಿದೆ.

ಒಂದು ತೆಂಗಿನಕಾಯಿ ಬಲಿತಾಗ ಅದು ನೆಲಕ್ಕೆ ಬೀಳುತ್ತದೆ. ಕೆಲವು ಸಂದರ್ಭಗಳಲ್ಲಿ, ಬಲಿತ ಕಾಯಿ ನೀರಿನತ್ತ ಸಮುದ್ರ ತೀರದ ಮೇಲೆ ಉರುಳುತ್ತಾ ಹೋಗುತ್ತದೆ. ದೊಡ್ಡದಾದ ಅಲೆಯೊಂದು ತೆಂಗಿನಕಾಯಿಯನ್ನು ಸಮುದ್ರದೊಳಕ್ಕೆ ಎಳೆದೊಯ್ಯಬಹುದು. ಅದರ ನಾರುತುಂಬಿದ ಸಿಪ್ಪೆಯು ತುಂಬ ಗಾಳಿಯನ್ನು ಹಿಡಿದಿಡಲು ಸಾಧ್ಯವಿರುವುದರಿಂದ, ತೆಂಗಿನಕಾಯಿ ಸುಲಭವಾಗಿ ನೀರಿನಲ್ಲಿ ತೇಲಿಕೊಂಡು ಹೋಗುತ್ತದೆ. ಒಂದುವೇಳೆ, ತೆಂಗು ಶಾಂತಮಹಾಸಾಗರದ ಒಂದು ಹವಳದ ದಿಬ್ಬದ ಮೇಲೆ ನೆಲೆಸಿದ್ದರೆ, ಅದು ಕೇವಲ ದಿಬ್ಬದ ಮತ್ತೊಂದು ದಡಕ್ಕೆ ಸಾಗಬಹುದು. ಆದರೆ ಅದು ತೆರೆದ ಸಮುದ್ರವನ್ನು ಸೇರುವುದಾದರೆ, ತೆಂಗಿನಕಾಯಿ ಅತಿ ದೂರ ಪ್ರಯಾಣಿಸಬಲ್ಲದು.

ಹೆಚ್ಚಿನ ಇತರ ಬೀಜಗಳನ್ನು ನಾಶಮಾಡುವ ಉಪ್ಪು ನೀರಿಗೆ, ಗಟ್ಟಿಯಾದ ತೆಂಗಿನಕಾಯಿನ ಸಿಪ್ಪೆಯನ್ನು ತೂರಿಕೊಂಡು ಹೋಗಲು ಹೆಚ್ಚಿನ ಸಮಯ ತಗಲುತ್ತದೆ. ಕೆಲವೊಮ್ಮೆ ಸಾವಿರಾರು ಕಿಲೊಮೀಟರುಗಳಷ್ಟು ದೂರದ ವರೆಗೆ ಸಾಗುತ್ತಾ, ತೆಂಗಿನಕಾಯಿಗಳು ಮೂರು ತಿಂಗಳುಗಳ ಕಾಲ ಸುಲಭವಾಗಿ ಉಳಿಯಸಾಧ್ಯವಿದೆ; ಆದರೆ ಈಗಲೂ ಒಂದು ಯೋಗ್ಯವಾದ ದಡವನ್ನು ತಲಪಿದ ಮೇಲೆ ಅದು ಯಶಸ್ವಿದಾಯಕವಾಗಿ ಮೊಳಕೆಯೊಡೆಯಲು ಸಾಧ್ಯವಿದೆ. ಪ್ರಾಯಶಃ ಇದೇ ರೀತಿಯಲ್ಲಿ ತೆಂಗು ಲೋಕದ ಉಷ್ಣವಲಯದ ಅನೇಕ ತೀರಗಳಲ್ಲಿ ತನ್ನ ವಸಾಹತುಗಳನ್ನು ಸ್ಥಾಪಿಸಿದೆ.

ಉಷ್ಣವಲಯದ ರುಚಿಕಾರಕ ಪದಾರ್ಥ

ಉಷ್ಣವಲಯದಾಚೆಯ ಜನರು ತೆಂಗಿನಕಾಯಿಯನ್ನು ಮಿಠಾಯಿಗಳ ಅಥವಾ ಬಿಸ್ಕತ್‌ಗಳ ತಯಾರಿಕೆಯಲ್ಲಿ ರುಚಿಕಾರಕ ಪದಾರ್ಥವೆಂದು ಎಣಿಸಬಹುದು. ಆದರೆ ನೀವು ನೈರುತ್ಯ ಏಷಿಯಾಗೆ ಹೋಗುವುದಾದರೆ, ತೆಂಗಿನಕಾಯಿಯು ನಿಜಕ್ಕೂ ಒಂದು ಅತಿ ಉಪಯುಕ್ತ ಕಾಯಿಯಾಗಿದೆ ಎಂಬುದನ್ನು ಕಂಡುಕೊಳ್ಳುವಿರಿ. ಪೆಸಿಫಿಕ್‌ ಮತ್ತು ನೈರುತ್ಯ ಏಷಿಯಾದ ಪಾಕವಿಧಾನ (ಇಂಗ್ಲಿಷ್‌) ಎಂಬ ಪುಸ್ತಕಕ್ಕನುಸಾರ, “ಹವಾಯಿಯಿಂದ ಹಿಡಿದು ಬ್ಯಾಂಕಾಕ್‌ನ ವರೆಗಿನ ಎಲ್ಲಾ ದೇಶಗಳ ಮತ್ತು ಪ್ರದೇಶಗಳ ಪಾಕವಿಧಾನಗಳಲ್ಲಿ, ಅತ್ಯಾವಶ್ಯಕ ಮೂಲಪದಾರ್ಥಗಳಲ್ಲಿ ತೆಂಗಿನಕಾಯಿ ಒಂದಾಗಿದೆ.” ಮತ್ತು ಆ ಕ್ಷೇತ್ರಗಳಲ್ಲಿರುವ ನಿವಾಸಿಗಳಿಗೆ ‘ತೆಂಗಿನಕಾಯಿ ಒಂದು ಜೀವನಾವಶ್ಯಕತೆಯಾಗಿದೆ ಮತ್ತು ಇದರಿಂದ ಅವರು ಅನೇಕ ವಿಧಗಳಲ್ಲಿ ಅಸಂಖ್ಯಾತ ಪಾಕವಿಧಾನ ಮತ್ತು ರುಚಿಗಳ ಮೂಲಕ ಪೌಷ್ಠಿಕಾಂಶವನ್ನು ಪಡೆದುಕೊಳ್ಳುತ್ತಾರೆ,’ ಎಂದೂ ಆ ಪುಸ್ತಕವು ಹೇಳುತ್ತದೆ.

ಉಷ್ಣವಲಯದ ಅಡುಗೆ ಮನೆಗಳಲ್ಲಿ ತೆಂಗಿನಕಾಯಿ ಪಡೆದುಕೊಂಡಿರುವ ಗೌರವಸ್ಥಾನಕ್ಕೆ ಈ ಕಾರಣವಿದೆ: ಅದು ನೀರು, ಹಾಲು, ಮತ್ತು ಅಡಿಗೆಗೆ ಉಪಯುಕ್ತವಾದ ಎಣ್ಣೆಯನ್ನು ಒದಗಿಸುತ್ತದೆ. ಎಳಸಾದ ಹಸಿರು ಕಾಯಿಯಲ್ಲಿ ತುಂಬಿಕೊಂಡಿರುವ ತೆಳುವಾದ ಸಿಹಿ ನೀರು, ಎಳನೀರು ಅಥವಾ ಸೀಯಾಳ ಎಂದು ಕರೆಯಲ್ಪಡುತ್ತದೆ. ಇದು ರುಚಿಯಾದ, ದಣಿವಾರಿಸುವ ಪಾನೀಯವನ್ನು ಒದಗಿಸುತ್ತದೆ, ಮತ್ತು ಇದನ್ನು ಉಷ್ಣವಲಯದ ಬೀದಿಬದಿಯ ಅಂಗಡಿಗಳಲ್ಲಿ ಮಾರಲಾಗುತ್ತದೆ. ಇನ್ನೊಂದು ಬದಿಯಲ್ಲಿ, ತುರಿಯಲ್ಪಟ್ಟ ತೆಂಗಿನ ತಿರುಳಿಗೆ ನೀರನ್ನು ಹಾಕಿ ರಸವನ್ನು ಹಿಂಡುವ ಮೂಲಕ ತೆಂಗಿನಹಾಲನ್ನು ಪಡೆದುಕೊಳ್ಳಲಾಗುತ್ತದೆ. ತೆಂಗಿನಹಾಲು ಸೂಪ್‌, ಸಾಸ್‌, ಮತ್ತು ನಾದಿದ ಹಿಟ್ಟಿಗೆ ರುಚಿಯನ್ನು ಹಾಗೂ ಸತ್ವವನ್ನು ಕೂಡಿಸುತ್ತದೆ.

ತೆಂಗಿನಕಾಯಿಗಳಿಂದ ಅಡುಗೆ ಎಣ್ಣೆಯನ್ನು ತೆಗೆಯಲಿಕ್ಕಾಗಿ, ಬೇಸಾಯಗಾರನು ಬಲಿತ ಕಾಯನ್ನು ಒಡೆದು ತುಂಡು ಮಾಡಿ ಬಿಸಿಲಿನಲ್ಲಿ ಒಣಗಿಸುತ್ತಾನೆ. ಒಮ್ಮೆ ಒಣಗಿದ ಮೇಲೆ, ತೆಂಗಿನಕಾಯಿಯ ತಿರುಳು ಅಥವಾ ಕೊಬ್ಬರಿಯನ್ನು ಕರಟದಿಂದ ಬೇರ್ಪಡಿಸಿ, ಅನಂತರ ಎಣ್ಣೆಯನ್ನು ತೆಗೆಯಲಾಗುತ್ತದೆ. ಉಷ್ಣವಲಯ ಪ್ರದೇಶಗಳಲ್ಲಿ, ತೆಂಗಿನೆಣ್ಣೆ ಪ್ರಧಾನವಾಗಿ ಬಳಸಲ್ಪಡುವ ಅಡಿಗೆ ಎಣ್ಣೆಯಾಗಿದೆ, ಆದರೆ ಪಾಶ್ಚಾತ್ಯ ದೇಶಗಳಲ್ಲಿ ಇದನ್ನು ಹೆಚ್ಚಾಗಿ ವನಸ್ಪತಿ ಬೆಣ್ಣೆ, ಐಸ್‌ ಕ್ರೀಮ್‌, ಮತ್ತು ಬಿಸ್ಕತ್‌ಗಳಲ್ಲಿ ಉಪಯೋಗಿಸಲಾಗುತ್ತದೆ.

ತೆಂಗಿನಕಾಯಿಗಳನ್ನು ಕೀಳುವುದು ಸುಲಭ ಸಾಧನೆಯೇನಲ್ಲ. ಅನೇಕ ಸಲ, ಕಾಯಿಗಳನ್ನು ಕೀಳುವವನು ಮರವನ್ನು ಹತ್ತಿ ಕಾಯಿಗಳನ್ನು ಕತ್ತರಿಸಿ ಹಾಕುತ್ತಾನೆ. ಬೇರೆ ಕೊಯ್ಲುಗಾರರು ಕತ್ತಿಯು ಕಟ್ಟಲ್ಪಟ್ಟಿರುವ ಒಂದು ಉದ್ದದ ಕೋಲನ್ನು ಉಪಯೋಗಿಸುತ್ತಾರೆ. ಇಂಡೊನೇಷಿಯಾದಲ್ಲಿ ಈ ಕೆಲಸವನ್ನು ಮಾಡಲು ಕೋತಿಗಳನ್ನು ತರಬೇತುಗೊಳಿಸಲಾಗಿದೆ. ಆದರೂ ಸಾಮಾನ್ಯವಾಗಿ ಬಲಿತ ಕಾಯನ್ನು ಮಾತ್ರ ಕೊಯ್ಯಲು ಬಯಸುವವರು ಅಪೇಕ್ಷಿಸುವ ಅತಿ ಸರಳ ವಿಧಾನವು, ಅದು ತಾನಾಗಿಯೇ ನೆಲಕ್ಕೆ ಬೀಳುವ ವರೆಗೆ ಕಾಯುವುದಾಗಿದೆ.

ತೆಂಗಿನಕಾಯಿ ಹೇಗೆಯೇ ಕೊಯ್ಯಲ್ಪಡಲಿ, ಅದರ ವ್ಯಾಪಕವಾದ ಉಪಯೋಗಗಳು ಅದನ್ನು ಯೋಗ್ಯವಾದ ವಾಣಿಜ್ಯ ಬೆಳೆಯಾಗಿ ಮಾಡಿರುವುದು ಮಾತ್ರವಲ್ಲದೆ, ಅನೇಕರಿಗೆ ಆಹಾರದ ಅಪೂರ್ವ ಮೂಲವಾಗಿಯೂ ಪರಿಣಮಿಸಿದೆ. ಆದ್ದರಿಂದ, ನೀವು ಮುಂದೊಮ್ಮೆ ಒಂದು ತೆಂಗಿನ ಮರವನ್ನು ನೋಡುವಾಗ​—⁠ಅದು ಚಿತ್ರದಲ್ಲಿಯೇ ಇರಲಿ, ನಿಜ ಜೀವನದಲ್ಲಿಯೇ ಇರಲಿ​—⁠ಅದು ಕೇವಲ ಉಷ್ಣವಲಯದ ತೀರಗಳ ಅಲಂಕಾರ ಆಭರಣವಾಗಿರುವುದಕ್ಕಿಂತಲೂ ಹೆಚ್ಚನ್ನು ಅರ್ಥೈಸುತ್ತದೆ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ನೀವು ಭೂಮಿಯ ಮೇಲಿನ ಬಹೂಪಯೋಗಿ “ಕಾಯಿ”ಗಳಲ್ಲೊಂದನ್ನು ಉತ್ಪಾದಿಸುವ ಮರವನ್ನು ನೋಡುತ್ತಿದ್ದೀರಿ.(g03 3/22)

[ಪುಟ 24ರಲ್ಲಿರುವ ಚೌಕ/ಚಿತ್ರಗಳು]

ತೆಂಗಿನಕಾಯಿಯ ಕೌತುಕಾಂಶಗಳು

ತೆಂಗಿನ ಏಡಿ ತೆಂಗಿನಕಾಯಿಯ ಬೆಳೆಯಲ್ಲಿ ಆನಂದಿಸುವವರು ಕೇವಲ ಮನುಷ್ಯರು ಮಾತ್ರವೇ ಆಗಿರುವುದಿಲ್ಲ. ತೆಂಗಿನ ಏಡಿ ಹಗಲು ಹೊತ್ತಿನಲ್ಲಿ ನೆಲದಲ್ಲಿ ಒಂದು ಗುಂಡಿಯಲ್ಲಿ ಜೀವಿಸುತ್ತದೆ, ಆದರೆ ರಾತ್ರಿಹೊತ್ತಿನಲ್ಲಿ ಅದು ತೆಂಗಿನಕಾಯಿಗಳನ್ನು ತಿಂದು ಆನಂದಿಸುತ್ತದೆ. ಒಂದು ತೆಂಗಿನಕಾಯನ್ನು ಒಡೆಯಲಿಕ್ಕಾಗಿ ಮಾನವರಿಗೆ ಒಂದು ಮಚ್ಚು ಬೇಕಾಗುತ್ತದಾದರೂ, ಈ ವ್ಯವಹಾರ ಕೌಶಲವುಳ್ಳ ಏಡಿ ಒಂದು ತೆಂಗಿನಕಾಯಿಯನ್ನು ಒಡೆಯಲು ಒಂದಷ್ಟು ಕೆಲಸವನ್ನು ಮಾಡುತ್ತದೆ. ಒಂದು ತೆಂಗಿನಕಾಯಿ ಒಡೆದು ತೆರೆದುಕೊಳ್ಳುವ ತನಕ ಈ ಏಡಿ ಅದನ್ನು ಒಂದು ಬಂಡೆಗೆ ಅಪ್ಪಳಿಸುತ್ತಿರುತ್ತದೆ. ಈ ಜೀವಿಗೆ ತೆಂಗಿನಕಾಯಿಯನ್ನು ಒಳಗೊಂಡ ಪಥ್ಯವು ಯೋಗ್ಯವಾಗಿರುವಂತೆ ಕಾಣುತ್ತದೆ​—⁠ಅದು 30ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಜೀವಿಸಬಲ್ಲದು!

ಸೌಂದರ್ಯ ವರ್ಧಕಗಳಲ್ಲಿ ತೆಂಗಿನಕಾಯಿ ತೆಂಗಿನೆಣ್ಣೆ ಚರ್ಮಕ್ಕೆ ಯೋಗ್ಯವಾಗಿರುವ ಕಾರಣ, ಉತ್ಪಾದಕರು ಅದನ್ನು ಲಿಪ್‌ಸ್ಟಿಕ್‌ನಲ್ಲಿ ಮತ್ತು ಸೂರ್ಯನಿಂದ ಚರ್ಮದ ಕಂದಾಗಿಸುವಿಕೆಯನ್ನು ತಡೆಯುವುದಕ್ಕಾಗಿರುವ ಮುಲಾಮುಗಳಲ್ಲಿ ಉಪಯೋಗಿಸುತ್ತಾರೆ. ಮತ್ತು ನೀವು ಒಂದುವೇಳೆ ಹೆಚ್ಚು ನೊರೆಯನ್ನು ಹೊರಡಿಸುವ ಜೈವಿಕ ವಿಘಟನೀಯ ಸಾಬೂನು ಅಥವಾ ಷ್ಯಾಂಪೂವನ್ನು ಉಪಯೋಗಿಸುವುದಾದರೆ, ಅದರ ಆವಶ್ಯಕ ಮೂಲಘಟಕಾಂಶಗಳಲ್ಲಿ ತೆಂಗಿನೆಣ್ಣೆಯೂ ಒಂದಾಗಿರಸಾಧ್ಯವಿದೆ.

[ಚಿತ್ರಗಳು]

ತೆಂಗಿನಕಾಯಿ ಸಮುದ್ರ ಯಾತ್ರೆಗಳನ್ನು ಪಾರಾಗಿ ಉಳಿಯಬಲ್ಲದು

ತೆಂಗಿನ ಏಡಿ

ತೆಂಗಿನ ಸಸಿ

[ಪುಟ 24ರಲ್ಲಿರುವ ಚಿತ್ರ ಕೃಪೆ]

ಮೇಲೆ ಬಲಗಡೆಯ ಒಳಚಿತ್ರ: Godo-Foto