ಮ್ಯಾಗ್ನ ಕಾರ್ಟ ಮತ್ತು ಸ್ವಾತಂತ್ರ್ಯಕ್ಕಾಗಿ ಮಾನವನ ಅನ್ವೇಷಣೆ
ಮ್ಯಾಗ್ನ ಕಾರ್ಟ ಮತ್ತು ಸ್ವಾತಂತ್ರ್ಯಕ್ಕಾಗಿ ಮಾನವನ ಅನ್ವೇಷಣೆ
ಬ್ರಿಟನ್‌ನಲ್ಲಿರುವ ಎಚ್ಚರ! ಲೇಖಕರಿಂದ
ಸರೆ ಪ್ರಾಂತ್ಯದ ಸುಂದರವಾದ ಭೂದೃಶ್ಯದ ನಡುವೆ ಥೇಮ್ಸ್ ನದಿಯು ಹರಿಯುತ್ತದೆ. ಆ ನದಿಯ ದಡದುದ್ದಕ್ಕೂ ಸಾಲಾಗಿ ಹುಲ್ಲುಗಾವಲುಗಳಿವೆ. ಆ ಹುಲ್ಲುಗಾವಲುಗಳಲ್ಲಿ ಒಂದರಲ್ಲಿ, 13ನೆಯ ಶತಮಾನದಲ್ಲಿ ನಡೆದ ಒಂದು ಘಟನೆಯ ಜ್ಞಾಪಕಾರ್ಥವಾಗಿ ಒಂದು ಶಿಲಾಸ್ಮಾರಕವಿದೆ. ಇಲ್ಲಿ, ರನೀಮೀಡ್ ಎಂಬ ಈ ಹುಲ್ಲುಗಾವಲಿನಲ್ಲಿ, ಇಂಗ್ಲೆಂಡಿನ ರಾಜನಾದ ಜಾನ್ (1199-1216ರ ವರೆಗೆ ಆಳಿದನು) ತನ್ನ ವಿರೋಧಿ ಬ್ಯಾರನ್ ವರ್ಗದವರನ್ನು ಸಂಧಿಸಿದನು. ರಾಜನ ದೌರ್ಜನ್ಯಗಳಿಂದ ಈ ಶಕ್ತಿಶಾಲಿ ಜಮೀನುದಾರರು ಕುಪಿತರಾಗಿದ್ದರು. ಕೆಲವೊಂದು ಹಕ್ಕುಗಳನ್ನು ತಮಗೊಪ್ಪಿಸುವ ಮೂಲಕ ತಮ್ಮನ್ನು ಸಮಾಧಾನಪಡಿಸಬೇಕೆಂದು ಈ ಬ್ಯಾರನ್ ವರ್ಗದವರು ತಗಾದೆಮಾಡಿದರು. ಬಹಳ ಒತ್ತಡದ ಕೆಳಗೆ, ರಾಜನು ಪ್ರಮಾಣವೊಂದಕ್ಕೆ ಮುದ್ರೆ ಒತ್ತಿದನು. ಈ ಪ್ರಮಾಣವನ್ನೇ ಮುಂದಕ್ಕೆ ಮ್ಯಾಗ್ನ ಕಾರ್ಟ (ಮಹಾಶಾಸನ) ಎಂಬುದಾಗಿ ಕರೆಯಲಾಯಿತು.
ಈ ಪ್ರಮಾಣವು ಪಾಶ್ಚಾತ್ಯರ ಇತಿಹಾಸದಲ್ಲೇ ಅತಿ ಪ್ರಮುಖವಾದ ಶಾಸನಬದ್ಧ ಪ್ರಮಾಣವಾಗಿ ವರ್ಣಿಸಲ್ಪಟ್ಟಿರುವುದು ಏಕೆ? ಇದರ ಉತ್ತರವು, ಸ್ವಾತಂತ್ರ್ಯಕ್ಕಾಗಿ ಮಾನವನ ಅನ್ವೇಷಣೆಯ ಕುರಿತು ಹೆಚ್ಚನ್ನು ಪ್ರಕಟಪಡಿಸುತ್ತದೆ.
ಬ್ಯಾರನ್ ವರ್ಗದವರ ಲಿಖಿತ ಕಾನೂನು
ರಾಜ ಜಾನ್‌ಗೆ, ರೋಮನ್ ಕ್ಯಾಥೊಲಿಕ್ ಚರ್ಚ್‌ನೊಂದಿಗೆ ವೈಮನಸ್ಯ ಉಂಟಾಗಿತ್ತು. ಅವನು, ಸ್ಟೀಫನ್ ಲ್ಯಾಂಗ್ಟನ್ ಅವರನ್ನು ಆರ್ಚ್‌ಬಿಷಪರನ್ನಾಗಿ ಅಂಗೀಕರಿಸಲು ನಿರಾಕರಿಸುವ ಮೂಲಕ ।।।ನೆಯ ಪೋಪ್ ಇನಸೆಂಟ್ ಅವರನ್ನು ತಾತ್ಸಾರಮಾಡಿದನು. ಪರಿಣಾಮವಾಗಿ, ಚರ್ಚ್ ತನ್ನ ಬೆಂಬಲವನ್ನು ಹಿಂದೆಗೆಯಿತು ಮತ್ತು ರಾಜನನ್ನು ಬಹಿಷ್ಕರಿಸಿತು. ಹಾಗಿದ್ದರೂ, ಜಾನ್ ರಾಜಿಮಾಡಿಕೊಳ್ಳಲು ಪ್ರಯತ್ನಿಸಿದನು. ಇಂಗ್ಲೆಂಡ್ ಮತ್ತು ಐರ್ಲೆಂಡ್‌ನ ತನ್ನ ರಾಜ್ಯಗಳನ್ನು ಪೋಪ್‌ರ ವಶಕ್ಕೆ ಕೊಡಲು ಸಮ್ಮತಿಸಿದನು. ನಂತರ, ಚರ್ಚಿಗೆ ಹಾಗೂ ವಾರ್ಷಿಕ ಕಪ್ಪವನ್ನು ಕಟ್ಟುವ ವಿಷಯಕ್ಕೆ ರಾಜನ ನಿಷ್ಠೆಯ ಘೋಷಣೆಯ ಆಧಾರದ ಮೇಲೆ ಈ ರಾಜ್ಯಗಳನ್ನು ಪೋಪ್ ಅವನಿಗೆ ಹಿಂದಿರುಗಿಸಿದರು. ಜಾನ್ ಈಗ ಪೋಪ್‌ರವರ ಅಡಿಯಾಳಾದನು.
ಆರ್ಥಿಕ ಬಿಕ್ಕಟ್ಟು ರಾಜನ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿತು. ತನ್ನ 17ನೆಯ ವರುಷದ ಆಳಿಕೆಯ ಸಮಯದಲ್ಲಿ ಜಾನ್, ಜಮೀನ್ದಾರರ ಮೇಲೆ 11 ಪಟ್ಟು ಹೆಚ್ಚು ತೆರಿಗೆಗಳನ್ನು ವಿಧಿಸಿದನು. ಈ ಎಲ್ಲಾ ವಿಷಯಗಳು—ಚರ್ಚಿನೊಂದಿಗಿನ ವೈಮನಸ್ಸು ಹಾಗೂ ಆರ್ಥಿಕ ವಿಷಯಗಳು—ರಾಜನು ಭರವಸಾರ್ಹನಲ್ಲವೆಂಬ ಭಾವನೆಯನ್ನು ವ್ಯಾಪಕವಾಗಿ ಉಂಟುಮಾಡಿತು. ಜನರ ಆತಂಕಗಳನ್ನು ನಿವಾರಿಸುವಲ್ಲಿ ಜಾನ್‌ನ ವ್ಯಕ್ತಿತ್ವವು ಸಹ ಸಹಾಯಮಾಡಲಿಲ್ಲ ಎಂಬುದು ಸುಸ್ಪಷ್ಟವಾಗಿದೆ.
ಕೊನೆಯದಾಗಿ, ದೇಶದ ಉತ್ತರ ಭಾಗದಲ್ಲಿರುವ ಬ್ಯಾರನ್ ವರ್ಗದ ಜನರು ತೆರಿಗೆಗಳನ್ನು ಕಟ್ಟಲು ನಿರಾಕರಿಸಿದಾಗ ವಿಷಯವು ಕೈಮೀರಿ ಹೋಯಿತು. ಆ ಬ್ಯಾರನರು ಲಂಡನಿಗೆ ಹೋಗಿ, ಇನ್ನು ಮುಂದೆ ತಾವು ರಾಜನಿಗೆ ಸ್ವಾಮಿನಿಷ್ಠೆಯನ್ನು ಸಲ್ಲಿಸುವುದಿಲ್ಲವೆಂಬುದಾಗಿ ತಿಳಿಸಿದರು. ವಿಂಡ್ಸರ್‌ನಲ್ಲಿರುವ ಅರಮನೆಯಲ್ಲಿ ರಾಜನೊಂದಿಗೆ, ಉಭಯ ಪಕ್ಷಗಳ ನಡುವೆ ಒಪ್ಪಂದಕ್ಕಾಗಿ ಬಹಳಷ್ಟು ಪ್ರಯತ್ನ ನಡೆಯಿತು. ಬ್ಯಾರನರು, ಸ್ಟೇನ್ಸ್ ಪಟ್ಟಣದ ಬಳಿ ಪೂರ್ವಕ್ಕೆ ಪಾಳೆಯ ಹೂಡಿದರು. ಗೋಪ್ಯವಾಗಿ ನಡೆಸಿದ ಈ ಸಂಧಾನಗಳು, ವಿಂಡ್ಸರ್ ಹಾಗೂ ಸ್ಟೇನ್ಸ್ ಎಂಬ ಎರಡು ಪಟ್ಟಣಗಳ ಮಧ್ಯದಲ್ಲಿರುವ ರನೀಮೀಡ್‌ನಲ್ಲಿ ಅವರು ಮುಖಾಮುಖಿಯಾಗಿ ಭೇಟಿಯಾಗುವಂತೆ ನಡೆಸಿತು. ಈ ಸ್ಥಳದಲ್ಲಿಯೇ, 1215, ಜೂನ್ 15ರ ಸೋಮವಾರದಂದು ಜಾನ್ 49 ಲಿಖಿತ ಕಾನೂನುಗಳ ಪಟ್ಟಿಯಿರುವ ಒಂದು ಪ್ರಮಾಣಕ್ಕೆ ಸಹಿಮಾಡಿದನು. ಆ ಪ್ರಮಾಣವು ಈ ರೀತಿಯ ಮಾತುಗಳಿಂದ ಆರಂಭವಾಗುತ್ತದೆ: ‘ಇವು, ಬ್ಯಾರನರಿಂದ ಕೇಳಲ್ಪಟ್ಟು, ರಾಜನಿಂದ ಒಪ್ಪಿಗೆ ಪಡೆದ ಲಿಖಿತ ಕಾನೂನುಗಳಾಗಿವೆ.’
ನಿಯಮದ ಹತೋಟಿಯಲ್ಲಿ ಸ್ವಾತಂತ್ರ್ಯ
ಹೇಗಿದ್ದರೂ, ಜಾನ್‌ನ ನಿಜವಾದ ಹೇತುಗಳು ಏನೆಂಬುದು ಬೇಗನೆ ತಿಳಿದುಬಂದವು. ಅನೇಕ ಜನರು ರಾಜನಿಗೆ ಮತ್ತು
ಪೋಪ್ ಪ್ರಭುತ್ವಕ್ಕೆ ವಿರುದ್ಧವಾಗಿದ್ದರೂ, ರಾಜನು ತನ್ನ ಪ್ರತಿನಿಧಿಗಳನ್ನು ಪೋಪರನ್ನು ಭೇಟಿಯಾಗಲು ರೋಮಿಗೆ ಕಳುಹಿಸಿದನು. ರನೀಮೀಡ್‌ನ ಒಪ್ಪಂದವು ಅನೂರ್ಜಿತ ಹಾಗೂ ನಿರರ್ಥಕವೆಂದು ಘೋಷಿಸುತ್ತಾ ಪೋಪರು ಒಂದು ಕಟ್ಟಳೆಯನ್ನು ಒಡನೆಯೇ ಹೊರಡಿಸಿದರು. ಒಡನೆ, ಇಂಗ್ಲೆಂಡಿನಲ್ಲಿ ಒಂದು ಅಂತರ್ಯುದ್ಧವು ತಲೆದೋರಿತು. ಇದರ ನಂತರದ ವರುಷದಲ್ಲೇ ರಾಜ ಜಾನ್ ಆಕಸ್ಮಿಕವಾಗಿ ತೀರಿಕೊಂಡನು ಮತ್ತು ಅವನ ಒಂಭತ್ತು ವರುಷ ಪ್ರಾಯದ ಮಗನಾದ ಹೆನ್ರಿ ಪಟ್ಟಕ್ಕೆ ಬಂದನು.ರನೀಮೀಡ್ ಒಪ್ಪಂದವನ್ನು ಪುನಃ ಜಾರಿಗೆ ತರಲು ಯುವ ಹೆನ್ರಿಯ ಬೆಂಬಲಿಗರು ಏರ್ಪಾಡುಮಾಡಿದರು. ಮ್ಯಾಗ್ನ ಕಾರ್ಟ ಎಂಬ ಪುಸ್ತಿಕೆಗನುಸಾರ, ಈ ಪರಿಷ್ಕೃತ ಮುದ್ರಣವು, “ನಿರಂಕುಶಾಧಿಕಾರವನ್ನು ತಡೆಗಟ್ಟುವ ಉದ್ದೇಶದಿಂದ ಮಾಡಲಾದ ಆ ಶಾಸನಬದ್ದ ಪ್ರಮಾಣವನ್ನು, ರಾಜನ ಮತ್ತು ಅವನ ಪ್ರಜೆಗಳ ಬೆಂಬಲಕ್ಕಾಗಿ ಜನರನ್ನು ಒಟ್ಟುಗೂಡಿಸಬಲ್ಲ ಒಂದು ಬರಿಯ ಸಾರ್ವಜನಿಕ ಪ್ರಕಟನೆಯಾಗಿ ತ್ವರಿತಗತಿಯಲ್ಲಿ ಬದಲಾಯಿಸಲ್ಪಟ್ಟಿತು.” ಹೆನ್ರಿಯ ಆಳ್ವಿಕೆಯ ಸಮಯದಲ್ಲಿ ಈ ಒಪ್ಪಂದವನ್ನು ಅನೇಕ ಬಾರಿ ಜಾರಿಗೆ ತರಲಾಯಿತು. ಆದರೆ ಅವನ ಉತ್ತರಾಧಿಕಾರಿಯಾದ Iನೆಯ ಎಡ್ವರ್ಡ್, 1297ರ ಅಕ್ಟೋಬರ್ 12ರಂದು ಮ್ಯಾಗ್ನ ಕಾರ್ಟವನ್ನು ದೃಢೀಕರಿಸಿದನು. ಅಂತಿಮವಾಗಿ, ಅದರ ಒಂದು ಪ್ರತಿಯನ್ನು ವಿಶೇಷ ಸಾರ್ವಜನಿಕ ಮಹತ್ವದ ಪ್ರಮಾಣ ಪತ್ರಗಳ ಪಟ್ಟಿಯಾಗಿದ್ದ ಲಿಖಿತ ಶಾಸನದ ದಾಖಲೆಯಲ್ಲಿ ಸೇರಿಸಲಾಯಿತು.
ಈ ಶಾಸನವು ರಾಜನ ಅಧಿಕಾರಗಳನ್ನು ಸೀಮಿತಗೊಳಿಸಿತು. ಅವನು ತನ್ನ ಇತರ ಪ್ರಜೆಗಳಂತೆ ಕಾನೂನಿನ ಪ್ರಭುತ್ವಕ್ಕೆ ಒಳಗಾಗಿದ್ದಾನೆ ಎಂಬುದನ್ನು ಇದು ಗೊತ್ತುಪಡಿಸಿತು. 20ನೆಯ ಶತಮಾನದ ಪ್ರಖ್ಯಾತ ಇತಿಹಾಸಗಾರರೂ ಮುಖ್ಯಮಂತ್ರಿಯೂ ಆದ ವಿನ್ಸ್‌ಟನ್ ಚರ್ಚಿಲ್‌ರವರ ಪ್ರಕಾರ, ಮ್ಯಾಗ್ನ ಕಾರ್ಟವು ಅಧಿಕಾರದಲ್ಲಿರುವವರ “ಇತಿಮಿತಿಗಳ ಒಂದು ವ್ಯವಸ್ಥೆಯನ್ನು” ನಿರ್ದಿಷ್ಟವಾಗಿ ಒದಗಿಸುತ್ತದೆ. ಇದು, ರಾಜಮನೆತನಕ್ಕೆ ಅಗತ್ಯವಿರುವ ಅಧಿಕಾರವನ್ನು ಕೊಟ್ಟಿತ್ತಾದರೂ, ಅದೇ ಸಮಯದಲ್ಲಿ ಒಬ್ಬ ಪ್ರಜಾಪೀಡಕ ರಾಜ ಅಥವಾ ಮೂರ್ಖ ಅಧಿಕಾರಿಯು ತನ್ನ ಅಧಿಕಾರವನ್ನು ದುರುಪಯೋಗಿಸದಂತೆ ತಡೆಯಿತು. ನಿಜವಾಗಿಯೂ ಉಚ್ಚ ವಿಚಾರಾಭಿಪ್ರಾಯಗಳು! ಆದರೆ ಒಬ್ಬ ಸಾಮಾನ್ಯ ವ್ಯಕ್ತಿಗೆ ಈ ಪ್ರಮಾಣವು ಯಾವ ಅರ್ಥದಲ್ಲಿತ್ತು? ಆ ಸಮಯದಲ್ಲಿ ಹೆಚ್ಚೇನೂ ಅರ್ಥವನ್ನು ಹೊಂದಿರಲಿಲ್ಲ. *
ಆ ಸಮಯದಲ್ಲಿ ಅಲ್ಪಸಂಖ್ಯಾತರಾಗಿದ್ದ “ಸ್ವತಂತ್ರ ಪ್ರಜೆ”ಯ—ಪ್ರಥಮ ವರ್ಗದ ಜನರ ಗುಂಪು—ಹಕ್ಕುಗಳನ್ನು ಮಾತ್ರ ಅದು ವಿವರವಾಗಿ ತಿಳಿಸಿತ್ತು.ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕ ತಿಳಿಸುವುದು: ಮ್ಯಾಗ್ನ ಕಾರ್ಟವು “ಅದರ ಇತಿಹಾಸದ ಆರಂಭದಲ್ಲಿಯೇ, ದಂಗೆಗೆ ವಿರುದ್ಧವಾದ ಒಂದು ಸಂಕೇತ ಮತ್ತು ಕದನ ಕೂಗಾಗಿ ಪರಿಣಮಿಸಿತು. ಹಿಂಬಾಲಿಸಿ ಬರುವ ಪ್ರತಿಯೊಂದು ಸಂತತಿಯವರೂ, ತಮ್ಮ ಸ್ವಂತ ಸ್ವಾತಂತ್ರ್ಯಕ್ಕೆ ಹಾಕಲ್ಪಡುವ ಬೆದರಿಕೆಗೆ ವಿರುದ್ಧವಾಗಿ ಒಂದು ರಕ್ಷಣೆಯೋಪಾದಿ ಇದನ್ನು ಅರ್ಥಮಾಡಿಕೊಳ್ಳಲಿದ್ದಾರೆ.” ಈ ಮಹತ್ವವನ್ನು ಸೂಚಿಸುತ್ತಾ, ಮ್ಯಾಗ್ನ ಕಾರ್ಟದ ಪುನರ್‌ದೃಢೀಕರಣದೊಂದಿಗೆ ಇಂಗ್ಲೆಂಡ್ ಪಾರ್ಲಿಮೆಂಟ್‌ನ ಪ್ರತಿಯೊಂದು ಸಭೆಯು ಪ್ರಾರಂಭವಾಯಿತು.
ಇಂಗ್ಲೆಂಡ್‌ನ 17ನೆಯ ಶತಮಾನದ ನ್ಯಾಯಧೀಶರು, ನ್ಯಾಯದರ್ಶಿ ಮಂಡಲಿಯಿಂದ ವಿಚಾರಣೆ, ವ್ಯಕ್ತಿ ಹಾಜರಿ ಆಜ್ಞೆ [ಹೇಬಿಯಸ್ ಕಾರ್ಪಸ್], * ನ್ಯಾಯಶಾಸನದ ಮುಂದೆ ಸರಿಸಮಾನತೆ, ನಿರಂಕುಶ ಹಾಗೂ ಅನಿರ್ಬಂಧಿತ ಬಂಧನದಿಂದ ಸ್ವಾತಂತ್ರ್ಯ, ಮತ್ತು ಪಾರ್ಲಿಮೆಂಟಿನ ತೆರಿಗೆ ನಿಯಂತ್ರಣ ಮುಂತಾದ ಹಕ್ಕು ಹಾಗೂ ಪ್ರಯೋಜನಗಳಿಗೆ ಆಧಾರವಾಗಿ ಮ್ಯಾಗ್ನ ಕಾರ್ಟದಲ್ಲಿರುವ ಲಿಖಿತ ಕಾನೂನುಗಳನ್ನು ಉಪಯೋಗಿಸಿದರು. ಆದುದರಿಂದಲೇ, ವಿಲ್ಯಮ್ ಪಿಟ್ ಎಂಬ ಒಬ್ಬ ಬ್ರಿಟಿಷ್ ರಾಜ್ಯ ನೀತಿಜ್ಞನ ದೃಷ್ಟಿಯಲ್ಲಿ ಮ್ಯಾಗ್ನ ಕಾರ್ಟವು ‘ಆಂಗ್ಲ ಸಂವಿಧಾನದ’ ಒಂದು ಭಾಗವಾಗಿತ್ತು.
ಅನ್ವೇಷಣೆಯು ಮುಂದುವರಿಯುತ್ತದೆ
ಇಸವಿ 1996ರಿಂದ 2000ದ ವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್‌ನ ಘನತೆವೆತ್ತ ಮುಖ್ಯ ನ್ಯಾಯಾಧೀಶರಾದ ಲಾರ್ಡ್ ಬಿಂಗ್‌ಹ್ಯಾಮ್ ಒಪ್ಪಿಕೊಂಡದ್ದು, “ಇತಿಹಾಸದಲ್ಲಿ, ಹಿಂದೆ ಅನೇಕ ಬಾರಿ ಮ್ಯಾಗ್ನ ಕಾರ್ಟದ ಸಂವಿಧಾನೀಯ ಮಹತ್ವವು, ಶಾಸನವು ಏನನ್ನು ಹೇಳಿತೋ ಅದಕ್ಕಿಂತಲೂ ಹೆಚ್ಚಾಗಿ ಅದು ಏನನ್ನು ಹೇಳಿದ್ದಿರಸಾಧ್ಯವಿದೆಯೆಂದು ನೆನಸಲಾಗುತ್ತದೋ ಅದರ ಮೇಲೆ ಆತುಕೊಂಡಿತ್ತು.” ಆದರೂ, ಈ ಶಾಸನದಲ್ಲಿರುವ ಸ್ವಾತಂತ್ರ್ಯದ ಆದರ್ಶಗಳು ಮುಂದಕ್ಕೆ ಆಂಗ್ಲ ಭಾಷೆಯನ್ನು ಮಾತಾಡುವ ಲೋಕದ ಸುತ್ತಲೂ ಹಬ್ಬಿದವು.
ಇಸವಿ 1620ರಲ್ಲಿ ಇಂಗ್ಲೆಂಡಿನಿಂದ ಅಮೆರಿಕಕ್ಕೆ ಹೋದ ಯಾತ್ರಿಕರು ತಮ್ಮೊಂದಿಗೆ ಮ್ಯಾಗ್ನ ಕಾರ್ಟದ ಒಂದು ಪ್ರತಿಯನ್ನು ಕೊಂಡೊಯ್ದರು. 1775ರಲ್ಲಿ, ಅಮೆರಿಕದಲ್ಲಿರುವ ಬ್ರಿಟಿಷ್ ವಸಾಹತುಗಳು ಪ್ರಾತಿನಿಧ್ಯ ನೀಡದೆ ತೆರಿಗೆ ವಿಧಿಸುವುದರ ವಿರುದ್ಧ ದಂಗೆ ಎದ್ದಾಗ, ಈಗ ಮ್ಯಾಸಚೂಸೆಟ್ಸ್ ರಾಜ್ಯವೆಂದು ಕರೆಯಲಾಗುವ ರಾಜ್ಯದ ಶಾಸನ ಸಭೆಯು ಈ ತೆರಿಗೆಯು ಮ್ಯಾಗ್ನ ಕಾರ್ಟವನ್ನು ಉಲ್ಲಂಘಿಸುತ್ತದೆಂದು ಘೋಷಿಸಿತು. ವಾಸ್ತವದಲ್ಲಿ, ಆ ಸಮಯದಲ್ಲಿ ಉಪಯೋಗಿಸಲಾಗುತ್ತಿದ್ದ ಮ್ಯಾಸಚೂಸೆಟ್ಸ್‌ನ ಅಧಿಕೃತ ಮುದ್ರೆಯಲ್ಲಿ, ಒಬ್ಬ ಮನುಷ್ಯನು ತನ್ನ ಒಂದು ಕೈಯಲ್ಲಿ ಖಡ್ಗವನ್ನೂ ಇನ್ನೊಂದು ಕೈಯಲ್ಲಿ ಮ್ಯಾಗ್ನ ಕಾರ್ಟವನ್ನೂ ಹಿಡಿದು ನಿಂತಿರುವ ಚಿತ್ರವಿತ್ತು.
ಅಮೆರಿಕ ದೇಶಕ್ಕೆ ಸಂವಿಧಾನವನ್ನು ತಯಾರಿಸಲು ರಾಜ್ಯದ ಹೊಸ ಅನನುಭವಿ ಪ್ರತಿನಿಧಿಗಳು ಒಟ್ಟುಸೇರಿದಾಗ, ನಿಯಮಕ್ಕೊಳಗಾಗುವುದರಿಂದ ದೊರಕುವ ಸ್ವಾತಂತ್ರ್ಯದ ಮೂಲತತ್ತ್ವವನ್ನು ಎತ್ತಿಹಿಡಿದರು. ಈ ಮೂಲತತ್ತ್ವವನ್ನು ಸ್ವೀಕರಿಸಿ, ಅಮೆರಿಕದ ಹಕ್ಕುಗಳ ಮಸೂದೆಯನ್ನು ತಯಾರಿಸಲಾಯಿತು. ಹೀಗೆ, 1957ರಲ್ಲಿ ಮತ್ತು ಮ್ಯಾಗ್ನ ಕಾರ್ಟದ ಅಂಗೀಕಾರಾರ್ಹವಾಗಿ, “ನಿಯಮದ ಕೆಳಗೆ ದೊರಕುವ ಸ್ವಾತಂತ್ರ್ಯದ ಸಂಕೇತ—ಮ್ಯಾಗ್ನ ಕಾರ್ಟದ ಸ್ಮಾರಕಾರ್ಥವಾಗಿ” ಎಂಬ ಕೆತ್ತನೆಯನ್ನು ಹೊಂದಿರುವ ಒಂದು ಶಿಲಾಸ್ಮಾರಕವನ್ನು ಅಮೆರಿಕದ ನ್ಯಾಯವಾದಿಗಳ ಸಂಘವು ರನೀಮೀಡ್‌ನಲ್ಲಿ ನಿಲ್ಲಿಸಿತು.
ಇಸವಿ 1948ರಲ್ಲಿ ಅಮೆರಿಕದ ಒಬ್ಬಾಕೆ ರಾಜಕಾರಣಿ ಮಹಿಳೆಯಾದ ಎಲನರ್ ರೂಸ್‌ವೆಲ್ಟ್ ಎಂಬವರು, ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (ಇಂಗ್ಲಿಷ್) ಎಂಬ ದಸ್ತಾವೇಜನ್ನು ತಯಾರಿಸಲು ಸಹಾಯಮಾಡಿದರು. ಈ ದಸ್ತಾವೇಜು, “ಎಲ್ಲೆಡೆಯಲ್ಲಿರುವ ಮಾನವರಿಗೆ ಒಂದು ಅಂತಾರಾಷ್ಟ್ರೀಯ ಮ್ಯಾಗ್ನ ಕಾರ್ಟ”ವಾಗಿ ಪರಿಣಮಿಸಬಹುದು ಎಂಬ ನಿರೀಕ್ಷೆಯಿಂದ ಅವರಿದನ್ನು ಮಾಡಿದರು. ನಿಶ್ಚಯವಾಗಿಯೂ, ಮಾನವ ಕುಟುಂಬವು ಸ್ವಾತಂತ್ರ್ಯಕ್ಕಾಗಿ ಎಷ್ಟು ಗಹನವಾಗಿ ಹಾತೊರೆಯುತ್ತದೆಂಬುದನ್ನು ಮ್ಯಾಗ್ನ ಕಾರ್ಟದ ಇತಿಹಾಸವು ತೋರಿಸುತ್ತದೆ. ಅತ್ಯುಚ್ಚ ಹಾರೈಕೆಯ ಹೊರತಾಗಿಯೂ, ಇಂದು ಅನೇಕ ದೇಶಗಳಲ್ಲಿ ಮಾನವನ ಮೂಲಭೂತ ಹಕ್ಕುಗಳು ಅಪಾಯಕ್ಕೆ ಒಡ್ಡಲ್ಪಟ್ಟಿವೆ. ಮಾನವ ಸರಕಾರ ಎಲ್ಲರಿಗೂ ಸ್ವಾತಂತ್ರ್ಯದ ಖಾತ್ರಿ ನೀಡಲು ಅಸಮರ್ಥವಾಗಿದೆ ಎಂಬುದನ್ನು ಇದು ಪುನಃ ಪುನಃ ತೋರಿಸಿಕೊಟ್ಟಿದೆ. ಇದೇ ಕಾರಣಕ್ಕಾಗಿ, ಲಕ್ಷಾಂತರ ಮಂದಿ ಯೆಹೋವನ ಸಾಕ್ಷಿಗಳು ಒಂದು ವಿಭಿನ್ನವಾದ ಸರಕಾರ ಅಂದರೆ ದೇವರ ರಾಜ್ಯದ ನಿಯಮಗಳ ಕೆಳಗೆ ದೊರಕಲಿರುವ ಉತ್ಕೃಷ್ಟ ಮಟ್ಟದ ಸ್ವಾತಂತ್ರ್ಯವನ್ನು ಎದುರುನೋಡುತ್ತಿದ್ದಾರೆ.
ಬೈಬಲ್ ದೇವರ ಕುರಿತು ಗಮನಾರ್ಹವಾದ ವಿಷಯವನ್ನು ತಿಳಿಸುತ್ತದೆ. ಅದು ಹೇಳುವುದು: “ಯೆಹೋವನ ಆತ್ಮವು ಎಲ್ಲಿದೆಯೋ, ಅಲ್ಲಿ ಸ್ವಾತಂತ್ರ್ಯವಿದೆ.” (2 ಕೊರಿಂಥ 3:17, NW) ದೇವರ ರಾಜ್ಯವು ಮಾನವಕುಲಕ್ಕೆ ಒದಗಿಸಲಿರುವ ಸ್ವಾತಂತ್ರ್ಯದ ಕುರಿತು ನೀವು ತಿಳಿಯಬಯಸುವಿರಾದರೆ, ಯೆಹೋವನ ಸಾಕ್ಷಿಗಳಲ್ಲೊಬ್ಬರು ನಿಮ್ಮ ಮನೆಗೆ ಮುಂದಿನ ಸಲ ಭೇಟಿ ನೀಡುವಾಗ ಯಾಕೆ ಕೇಳಿ ತಿಳಿದುಕೊಳ್ಳಬಾರದು? ಉತ್ತರವು ಅತ್ಯಂತ ಆಕರ್ಷಣೀಯವೂ ಬಿಡುಗಡೆ ನೀಡುವಂಥದ್ದೂ ಆಗಿದೆ ಎಂಬುದನ್ನು ನೀವು ಕಂಡುಕೊಳ್ಳಬಹುದು. (g02 12/22)
[ಪಾದಟಿಪ್ಪಣಿಗಳು]
^ “1215ರಲ್ಲಿ “ಸ್ವತಂತ್ರ ಪ್ರಜೆ” ಎಂಬ ಪದಕ್ಕೆ ಕೇವಲ ಸೀಮಿತವಾದ ಅರ್ಥವಿತ್ತಾದರೂ, ಹದಿನೇಳನೆಯ ಶತಮಾನದಷ್ಟಕ್ಕೆ ಈ ಪದವು ಹೆಚ್ಚುಕಡಿಮೆ ಎಲ್ಲಾ ಜನರಿಗೆ ಅನ್ವಯಿಸಿತು.”—ಪಾಶ್ಚಾತ್ಯ ನಾಗರಿಕತೆಯ ಇತಿಹಾಸ (ಇಂಗ್ಲಿಷ್).
^ ಹೇಬಿಯಸ್ ಕಾರ್ಪಸ್ ಎಂಬ ಪದಕ್ಕೆ ಲಾಟಿನ್ ಭಾಷೆಯಲ್ಲಿ “ನಿಮಗೆ ಶರೀರವಿರಲೇಬೇಕು” ಎಂಬ ಅರ್ಥವಿದೆ. ಹೇಬಿಯಸ್ ಕಾರ್ಪಸ್‌ನ ಲಿಖಿತ ಆಜ್ಞೆಗಳು, ಒಬ್ಬ ವ್ಯಕ್ತಿಯ ಬಂಧನವು ನ್ಯಾಯಬದ್ಧವೊ ಅಲ್ಲವೊ ಎಂಬುದನ್ನು ವಿಚಾರಣೆ ಮಾಡಬೇಕೆಂದು ಆಜ್ಞಾಪಿಸುವ ಒಂದು ಶಾಸನಬದ್ಧ ಪ್ರಮಾಣವಾಗಿವೆ.
[ಪುಟ 27ರಲ್ಲಿರುವ ಚೌಕ/ಚಿತ್ರ]
ಮಹಾಶಾಸನ
“ಬ್ಯಾರನ್ ವರ್ಗದವರ ಲಿಖಿತ ಕಾನೂನುಗಳು” ಎಂಬ ರೂಪದಲ್ಲಿ ಮ್ಯಾಗ್ನ ಕಾರ್ಟ (“ಮಹಾಶಾಸನ” ಎಂಬುದಕ್ಕೆ ಲಾಟಿನ್ ಭಾಷೆಯ ಶಬ್ದ)ವು ಆರಂಭಗೊಂಡಿತು. ರಾಜ ಜಾನ್ ಈ 49 ಲಿಖಿತ ಕಾನೂನುಗಳ ಪ್ರಮಾಣಕ್ಕೆ ತನ್ನ ಮುದ್ರೆಯನ್ನು ಹಾಕಿದನು. ಮುಂದಿನ ಕೆಲವು ದಿವಸಗಳಲ್ಲಿ, ಒಂಪ್ಪಂದವು 63 ಲಿಖಿತ ಕಾನೂನುಗಳಿಗೆ ವಿಸ್ತರಿಸಲ್ಪಟ್ಟು, ರಾಜನಿಂದ ಪುನಃ ಮುದ್ರೆಯೊತ್ತಲ್ಪಟ್ಟಿತು. 1217ರಲ್ಲಿ ಅದು ಪುನಃ ಹೊರಡಿಸಲ್ಪಟ್ಟಾಗ, ಅದರೊಂದಿಗೆ ಅರಣ್ಯ ನಿಯಮದ ಕುರಿತು ತಿಳಿಸುವ ಎರಡನೆಯ ಸಣ್ಣ ಶಾಸನವನ್ನೂ ಸೇರಿಸಲಾಯಿತು. ಅಂದಿನಿಂದ, ಆ ಲಿಖಿತ ನಿಯಮಾವಳಿಯನ್ನು ಮ್ಯಾಗ್ನ ಕಾರ್ಟ ಎಂದು ಹೆಸರಿಸಲಾಯಿತು.
ಈ 63 ಲಿಖಿತ ಕಾನೂನುಗಳು ಒಂಬತ್ತು ಗುಂಪುಗಳಾಗಿ ವಿಂಗಡಿಸಲ್ಪಟ್ಟಿವೆ. ಇವುಗಳಲ್ಲಿ ಕೆಲವು, ಬ್ಯಾರನರ ಅಸಮಾಧಾನ, ನಿಯಮ ಮತ್ತು ನ್ಯಾಯದ ನ್ಯೂನತೆಗಳು, ಹಾಗೂ ಚರ್ಚಿನ ಸ್ವಾತಂತ್ರ್ಯ ಮುಂತಾದ ವಿಷಯಗಳ ಕುರಿತು ವ್ಯವಹರಿಸುತ್ತವೆ. ಆಂಗ್ಲ ಪೌರ ಸ್ವಾತಂತ್ರ್ಯಗಳ ಕುರಿತಾಗಿರುವ 39ನೆಯ ಕಾನೂನು ಓದುವುದು: “ಯಾವುದೇ ಸ್ವತಂತ್ರ ವ್ಯಕ್ತಿಯನ್ನು, ಅವನ ಸಮಾನಸ್ಕಂಧರ ನ್ಯಾಯವಾದ ತೀರ್ಪಿನ ಆಧಾರದ ಮೇಲೆ ಅಥವಾ ದೇಶದ ನಿಯಮದ ಆಧಾರದ ಹೊರತಾಗಿ ಬಂಧಿಸಲು, ಅವನ ಇಲ್ಲವೆ ಅವನ ಸೊತ್ತುಗಳ ಮೇಲಿರುವ ಅವನ ಹಕ್ಕುಗಳನ್ನು ಕಸಿದುಕೊಳ್ಳಲು, ಅವನನ್ನು ಗಡೀಪಾರುಮಾಡಲು, ಯಾವುದೇ ರೀತಿಯಲ್ಲಿ ಅವನ ನಿಲುವನ್ನು ಅಪಹರಿಸಲು, ಅಥವಾ ನಾವು ಅವನ ವಿರುದ್ಧ ಬಲಾತ್ಕಾರದಿಂದ ಕ್ರಮತೆಗೆದುಕೊಳ್ಳಲು, ಇಲ್ಲವೆ ಹಾಗೆ ಮಾಡುವಂತೆ ಇತರರನ್ನು ಉಪಯೋಗಿಸಲು ಸಾಧ್ಯವಿಲ್ಲ.”
[ಚಿತ್ರ]
ಹಿನ್ನೆಲೆ: ಮ್ಯಾಗ್ನ ಕಾರ್ಟದ ಮೂರನೇ ಪರಿಷ್ಕೃತ ರೂಪ
[ಕೃಪೆ]
By permission of the British Library, 46144 Exemplification of King Henry III’s reissue of Magna Carta 1225
[ಪುಟ 27ರಲ್ಲಿರುವ ಚಿತ್ರ]
ರಾಜ ಜಾನ್
[ಕೃಪೆ]
From the book Illustrated Notes on English Church History (Vols. I and II)
[ಪುಟ 26ರಲ್ಲಿರುವ ಚಿತ್ರ]
ರಾಜ ಜಾನ್ ತನ್ನ ಕಿರೀಟವನ್ನು ಪೋಪರ ರಾಯಭಾರಿಗೆ ಒಪ್ಪಿಸುತ್ತಾನೆ
[ಕೃಪೆ]
From the book The History of Protestantism (Vol. I)
[ಪುಟ 27ರಲ್ಲಿರುವ ಚಿತ್ರ]
1215ರಲ್ಲಿ ರಾಜ ಜಾನ್ ತನ್ನ ಬ್ಯಾರನ್‌ರನ್ನು ಭೇಟಿಯಾಗಿ, ಮ್ಯಾಗ್ನ ಕಾರ್ಟಕ್ಕೆ ಮುದ್ರೆ ಒತ್ತಲು ಒಪ್ಪಿಕೊಳ್ಳುತ್ತಾನೆ
[ಕೃಪೆ]
From the book The Story of Liberty, 1878
[ಪುಟ 28ರಲ್ಲಿರುವ ಚಿತ್ರ]
ಇಂಗ್ಲೆಂಡಿನ ರನೀಮೀಡ್‌ನಲ್ಲಿ ಮ್ಯಾಗ್ನ ಕಾರ್ಟದ ಸ್ಮಾರಕ
[ಕೃಪೆ]
ABAJ/Stephen Hyde
[ಪುಟ 26ರಲ್ಲಿರುವ ಚಿತ್ರ ಕೃಪೆ]
ಮೇಲಿನ ಹಿನ್ನೆಲೆಯಲ್ಲಿ: By permission of the British Library, Cotton Augustus II 106 Exemplification of King John’s Magna Carta 1215; ರಾಜ ಜಾನ್‌ನ ಮುದ್ರೆ: Public Record Office, London