ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವೃದ್ಧಿಯಾಗುತ್ತಿರುವ ಒಂದು ಸಮಸ್ಯೆಯಾಗಿದೆ ಏಕೆ?

ವೃದ್ಧಿಯಾಗುತ್ತಿರುವ ಒಂದು ಸಮಸ್ಯೆಯಾಗಿದೆ ಏಕೆ?

ವೃದ್ಧಿಯಾಗುತ್ತಿರುವ ಒಂದು ಸಮಸ್ಯೆಯಾಗಿದೆ ಏಕೆ?

ಲೋಕದ ಬೃಹತ್ಪ್ರಮಾಣದ ವಾಣಿಜ್ಯ ಚಟುವಟಿಕೆಗಳಲ್ಲಿ ವೇಶ್ಯಾವೃತ್ತಿಯು ಮೂರನೇ ಸ್ಥಾನವನ್ನು ಪ್ರತಿನಿಧಿಸುತ್ತದೆ ಎಂಬುದು ನಿಮಗೆ ತಿಳಿದಿತ್ತೋ? ಪ್ರಥಮ ಹಾಗು ದ್ವಿತೀಯ ಸ್ಥಾನವನ್ನು ಅಮಲೌಷಧ ಮತ್ತು ಶಸ್ತ್ರಾಸ್ತ್ರಗಳ ಕಳ್ಳವ್ಯಾಪಾರವು ಆಕ್ರಮಿಸಿದೆ. ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ)ಗನುಸಾರ, ಎಲ್ಲಾ ರೀತಿಯ ವೇಶ್ಯಾವೃತ್ತಿಯಲ್ಲಿ ಕ್ರಮಾನುಗತವಾದ ಏರಿಕೆಯು ಕಂಡುಬರುತ್ತಿದೆ.

ಲ್ಯಾಟಿನ್‌-ಅಮೆರಿಕನ್‌ ದೇಶವೊಂದರಲ್ಲಿ, ವೇಶ್ಯಾವೃತ್ತಿಯು ನಿಷಿದ್ಧವಾಗಿದ್ದರೂ ವೇಶ್ಯೆಯರಾಗಿರುವ 5,00,000 ಮಂದಿ ಹೆಣ್ಣು ಮಕ್ಕಳಿದ್ದಾರೆ ಎಂದು ಕಾಂಗ್ರೆಷನಲ್‌ ಕಮಿಟಿ ಆಫ್‌ ಇಂಕ್ವಯರಿ ವರದಿಸಿತು.

ಮತ್ತೊಂದು ದೇಶದಲ್ಲಿ, ಬೀದಿಗಳಲ್ಲಿ 3,00,000 ಬಾಲ್ಯ ವೇಶ್ಯೆಯರಿದ್ದರು, ಅದರಲ್ಲೂ ವಿಶೇಷವಾಗಿ ಅಮಲೌಷಧದ ಕಳ್ಳವ್ಯಾಪಾರವಿದ್ದ ಕ್ಷೇತ್ರಗಳಲ್ಲಿ.

ಏಷಿಯಾದ ದೇಶಗಳಲ್ಲಿ ಸುಮಾರು ಹತ್ತು ಲಕ್ಷ ಯುವತಿಯರು ದಾಸತ್ವಕ್ಕೆ ಸಮಾನವಾಗಿರುವ ಪರಿಸ್ಥಿತಿಗಳಲ್ಲಿ ವೇಶ್ಯೆಯರಾಗಿ ಉಪಯೋಗಿಸಲ್ಪಡುತ್ತಾರೆ ಎಂದು ವರದಿಸಲಾಗಿದೆ. ಕೆಲವು ದೇಶಗಳು ಬಾಲ್ಯ ವೇಶ್ಯಾವೃತ್ತಿ ಮತ್ತು ಸೆಕ್ಸ್‌ ಪ್ರವಾಸೋದ್ಯಮಗಳ ಯಾತ್ರಾಸ್ಥಳಗಳೆಂಬ ಹೆಸರುಗಳನ್ನು ಪಡೆದುಕೊಂಡಿವೆ.

ಏಡ್ಸ್‌ನಂತಹ ಲೈಂಗಿಕವಾಗಿ ರವಾನಿತವಾಗುವ ರೋಗಗಳ ಸಂಭಾವ್ಯತೆಯ ಕಾರಣ ಸೋಂಕಿತರಾಗಿರುವ ಸಾಧ್ಯತೆ ಕಡಿಮೆ ಎಂದೆಣಿಸಿ, ಹೆಚ್ಚಾಗಿ ಕನ್ಯೆಯರಾಗಿ ಪರಿಗಣಿಸಲ್ಪಡುವ ಮಕ್ಕಳಿಗೆ ಗಿರಾಕಿಗಳು ದುಬಾರಿ ಬೆಲೆಯನ್ನು ತೆರಲು ಸಿದ್ಧರಿದ್ದಾರೆ. “ಏಡ್ಸ್‌ನಿಂದ ಸೋಂಕಿತರಾಗುವ ಹೆದರಿಕೆಯು, ಪುರುಷರು ಹೆಚ್ಚು ಎಳೆಯರಾಗಿರುವ ಹೆಣ್ಣು-ಗಂಡು ಮಕ್ಕಳಿಗಾಗಿ ಹುಡುಕುವಂತೆ ಮಾಡಿದೆ. ಇದು ಸಮಸ್ಯೆಯನ್ನು ಇನ್ನೂ ಗಂಭೀರಗೊಳಿಸುತ್ತದೆ,” ಎಂದು ಬ್ರಸಿಲ್‌ನ ಶಾಸನ ಸಭೆಯ ಸದಸ್ಯೆಯಾಗಿರುವ ಲೂಈಸ ನಾಜೀಬ್‌ ಅಲೂಫ್‌ ವಿವರಿಸುತ್ತಾರೆ. ಅವರು ಹೇಳಿದ್ದು: “ಹುಡುಗಿಯರ ಮತ್ತು ಹದಿಹರೆಯದವರ ಲೈಂಗಿಕ ಶೋಷಣೆ, ಬ್ರಸಿಲ್‌ನ ಬಡ ಸ್ತ್ರೀಯರ ಮಧ್ಯೆ ಕಂಡುಬರುವ ಅತಿ ಗಂಭೀರವಾದ ಸಾಮಾಜಿಕ ಸಮಸ್ಯೆಯಾಗಿದೆ.”

ಬಡತನ ಮತ್ತು ಬಾಲ್ಯ ವೇಶ್ಯಾವೃತ್ತಿ

ದುರವಸ್ಥೆ ಮತ್ತು ಬಡತನದ ಪರಿಸರದಲ್ಲಿ ಬಾಲ್ಯ ವೇಶ್ಯಾವೃತ್ತಿ ತುಂಬಿತುಳುಕುತ್ತದೆ. ಒಬ್ಬ ಸರಕಾರಿ ಅಧಿಕಾರಿಗನುಸಾರ, ಅವಳ ದೇಶದ ಬಾಲ್ಯ ಶೋಷಣೆ ಮತ್ತು ವೇಶ್ಯಾವೃತ್ತಿಗಳು “ಕುಟುಂಬ ಬಿರುಕಿನೊಂದಿಗೆ ನೇರವಾಗಿ ಸಂಬಂಧಿತವಾಗಿವೆ ಮತ್ತು ದುರವಸ್ಥೆ ಹಾಗೂ ಹಸಿವೆಯ ಫಲಗಳಾಗಿವೆ.” ಬಡತನವೇ ತಮ್ಮ ಮಕ್ಕಳನ್ನು ವೇಶ್ಯಾವೃತ್ತಿಗೆ ಮಾರುವಂತೆ ಮಾಡಿತು ಎಂದು ಕೆಲವು ಹೆತ್ತವರು ಒಪ್ಪಿಕೊಳ್ಳುತ್ತಾರೆ. ತಾವು ಬದುಕಿ ಉಳಿಯಲು ಇರುವ ಏಕಮಾತ್ರ ಮಾಧ್ಯಮವೆಂದೆಣಿಸಿ ದಿಕ್ಕಿಲ್ಲದ ಮಕ್ಕಳು ವೇಶ್ಯಾವೃತ್ತಿಯನ್ನು ಆಶ್ರಯಿಸುತ್ತಾರೆ.

ಓ ಎಸ್ಟಾಡ ಡ ಸೌಂ ಪೌಲೂ ಎಂಬ ವಾರ್ತಾಪತ್ರಿಕೆಯು, ಹುಡುಗಿಯೊಬ್ಬಳು ಒಂದು ಬೀದಿ ಗ್ಯಾಂಗನ್ನು ಸೇರಿಕೊಳ್ಳುವುದರ ಫಲಿತಾಂಶವಾಗಿ ಒಬ್ಬ ವೇಶ್ಯೆಯಾಗಬಹುದು ಎಂದು ವಿವರಿಸುತ್ತದೆ. ತಿನ್ನಲಿಕ್ಕೆಂದು ಏನನ್ನಾದರೂ ಪಡೆದುಕೊಳ್ಳಲು ಅವಳು ಕದಿಯಬಹುದು ಮತ್ತು ಯಾವಾಗಲಾದರೊಮ್ಮೆ ತನ್ನ ದೇಹವನ್ನು ಮಾರಿಕೊಳ್ಳಬಹುದು. ನಂತರ ಅವಳು ಒಬ್ಬ ವೃತ್ತಿಪರ ವೇಶ್ಯೆಯಾಗಬಹುದು.

ಕೆಲವೊಮ್ಮೆ ಹದಿಹರೆಯದವರು ವೇಶ್ಯೆಯರಾಗಿ ಕೆಲಸಮಾಡಲು ಬೇರೆ ದೇಶಗಳಿಗೂ ಕಳುಹಿಸಲ್ಪಡುತ್ತಾರೆ. “ವಲಸೆಹೋಗಿರುವ ವೇಶ್ಯೆಯರಿಂದ ತಮ್ಮ ಕುಟುಂಬಗಳಿಗೆ ಕಳುಹಿಸಲ್ಪಡುವ ಹಣವು, ಏಷಿಯಾ ಮತ್ತು ಆಫ್ರಿಕವೆಂಬ ದೇಶಗಳ ಬಡತನದ ದೃಷ್ಟಿಯಲ್ಲಿ ದೊಡ್ಡ ಮೊತ್ತದ ಹಣವನ್ನು ಅರ್ಥೈಸುತ್ತದೆ” ಎಂದು ವರದಿಸುತ್ತದೆ ಯುನೆಸ್ಕೊ ಸೋರ್ಸಸ್‌. “ಈ ದೇಶಗಳಲ್ಲಿ ಕೂಡ ವೇಶ್ಯಾವೃತ್ತಿಯು ಪ್ರೋತ್ಸಾಹಿಸಲ್ಪಡುತ್ತದೆ. ಏಕೆಂದರೆ ಯುವ ಜನರು ಮತ್ತು ಚಿಕ್ಕ ಮಕ್ಕಳು ಒದಗಿಸುವ ‘ಸೇವೆಗಳನ್ನು’ ಪಡೆದುಕೊಳ್ಳಲಿಕ್ಕೆಂದೇ ಶ್ರೀಮಂತ ದೇಶಗಳಿಂದ ಪ್ರವಾಸಿಗರು ಬರುತ್ತಾರೆ.”

ಲ್ಯಾಟಿನ್‌-ಅಮೆರಿಕದ ನಗರವೊಂದರಲ್ಲಿ, ಬೀದಿಬದಿಯ ವೇಶ್ಯೆಯರಾಗಿರುವ ಮಕ್ಕಳು ಬಲಿಬೀಳಸಾಧ್ಯವಿರುವ ಅಪಾಯವನ್ನು ವಿವರಿಸುತ್ತಾ ಟೈಮ್‌ ಪತ್ರಿಕೆಯು ವರದಿಸುವುದು: “ವೇಶ್ಯೆಯರಲ್ಲಿ ಕೆಲವರು ಕೇವಲ 12 ವರ್ಷ ಪ್ರಾಯದವರಾಗಿದ್ದಾರೆ. ಸಾಮಾನ್ಯವಾಗಿ ವಿಭಾಜಿತ ಕುಟುಂಬಗಳ ಫಲಗಳಾಗಿದ್ದು, ಅವರು ದಿನದ ಹೊತ್ತಿನಲ್ಲಿ ಎಲ್ಲಿಯಾದರೂ ಸರಿ ಸ್ಥಳ ಸಿಕ್ಕಿದಲ್ಲಿ ನಿದ್ರಿಸುತ್ತಾರೆ ಮತ್ತು ರಾತ್ರಿ ಹೊತ್ತಿನಲ್ಲಿ ನಾವಿಕರು ಸಮಯ ವ್ಯಯಮಾಡುವ ಡಿಸ್ಕೊಗಳತ್ತಿತ್ತ ಅಲೆದಾಡುತ್ತಾ ಜೊತೆಗಾರರನ್ನು ಹುಡುಕುತ್ತಾರೆ.”

ಅಮಲೌಷಧದ ಅಮಲಿನಲ್ಲಿ ಒಬ್ಬ ಬಾಲ್ಯ ವೇಶ್ಯೆಯು ತಾನು ಸಾಮಾನ್ಯವಾಗಿ ಎಂದಿಗೂ ಒಪ್ಪದ ಅವಮಾನಗಳಿಗೆ ಒಳಪಡಿಸಲ್ಪಡಬಹುದು. ಉದಾಹರಣೆಗೆ, ವೇಸಾ ಪತ್ರಿಕೆಗನುಸಾರ, ಒಬ್ಬ ಡಾಕ್ಟರನಿಂದ ರೆಕಾರ್ಡ್‌ ಮಾಡಲ್ಪಟ್ಟ 92 ವಿಡಿಯೋಟೇಪ್‌ಗಳನ್ನು ಪೊಲೀಸರು ಕಂಡುಕೊಂಡರು. ಅದರಲ್ಲಿ ಅವನು 50ಕ್ಕಿಂತ ಹೆಚ್ಚು ಸ್ತ್ರೀಯರ ಪಾಶವೀಯ ಚಿತ್ರಹಿಂಸೆಯನ್ನು ಮಾಡಿ, ಅದನ್ನು ದಾಖಲುಮಾಡಿದ್ದನು​—⁠ಇವರಲ್ಲಿ ಕೆಲವರು ಅಪ್ರಾಪ್ತ ವಯಸ್ಕರಾಗಿದ್ದರು.

ಈ ಭಯಂಕರ ಸತ್ಯತೆಯ ಹೊರತೂ ಒಬ್ಬ ಯುವ ವೇಶ್ಯೆ ಹೇಳಿದ್ದು: “ನಾನು ಒಂದು ಕೆಲಸಕ್ಕೆಂದು ಹುಡುಕುವುದಾದರೆ, ಅದು ನನ್ನ ಹೊಟ್ಟೆಪಾಡಿಗೂ ಸಾಲದು. ಏಕೆಂದರೆ ನಾನು ಯಾವುದೇ ಕೆಲಸವನ್ನು ಮಾಡಲು ಕಲಿತಿಲ್ಲ. ನನ್ನ ಕುಟುಂಬಕ್ಕೆ ಎಲ್ಲವೂ ಗೊತ್ತಿದೆ. ಮತ್ತು ಈ ಬಾಳನ್ನು ಬಿಟ್ಟುಬಿಡಲು ನನಗೆ ಇಷ್ಟವಿಲ್ಲ. ದೇಹ ನನ್ನದು, ನನ್ನ ಇಷ್ಟದಂತೆ ಅದನ್ನು ಉಪಯೋಗಿಸುತ್ತೇನೆ.”

ಆದರೂ, ಈ ಹುಡುಗಿಯರು ವೇಶ್ಯಾವೃತ್ತಿಯನ್ನು ತಮ್ಮ ಗುರಿಯಾಗಿ ಎಂದಿಗೂ ಇಟ್ಟಿರಲಿಲ್ಲ. ಒಬ್ಬ ಸಮಾಜ ಸೇವಕನಿಗನುಸಾರ, ಅನೇಕ ಯುವ ವೇಶ್ಯೆಯರು “ಮದುವೆ ಮಾಡಿಕೊಳ್ಳಲು ಇಷ್ಟ”ಪಡುತ್ತಾರೆ ಮತ್ತು ತಮ್ಮ “ಮನಮೆಚ್ಚಿದ ಪ್ರಿಯತಮನ” ಕನಸು ಕಾಣುತ್ತಾರೆ. ವೇಶ್ಯಾವೃತ್ತಿಯಲ್ಲಿ ತೊಡಗುವಂತೆ ಅವರನ್ನು ಮುನ್ನಡೆಸುವ ಅನೇಕ ಜಟಿಲ ಪರಿಸ್ಥಿತಿಗಳು ಇರಬಹುದಾದರೂ, ಒಬ್ಬ ಸಂಶೋಧಕಿಯು ಹೇಳುವುದು: “ತಲ್ಲಣಗೊಳಿಸುವ ಅಂಶವೆಂದರೆ, ಇವರಲ್ಲಿ ಹೆಚ್ಚಿನ ಮಂದಿ ತಮ್ಮ ಮನೆಗಳಲ್ಲಿ ಬಲಾತ್ಕಾರವಾಗಿ ಸಂಭೋಗಿಸಲ್ಪಟ್ಟಿದ್ದರು.”

ಬಾಲ್ಯ ವೇಶ್ಯಾವೃತ್ತಿಗೆ ಅಂತ್ಯ

ಆದರೂ, ಈ ದುರವಸ್ಥೆಯಲ್ಲಿ ಸಿಕ್ಕಿ ನರಳುತ್ತಿರುವ ಈ ಮಕ್ಕಳಿಗೆ ನಿರೀಕ್ಷೆಯಿದೆ. ಎಲ್ಲಾ ಪ್ರಾಯದ ವೇಶ್ಯೆಯರು ತಮ್ಮ ಜೀವನ ರೀತಿಯನ್ನು ಬದಲಾಯಿಸಿಕೊಂಡಿದ್ದಾರೆ. (7ನೇ ಪುಟದಲ್ಲಿರುವ, “ವ್ಯಕ್ತಿಗಳು ಪರಿವರ್ತನೆ ಹೊಂದಬಲ್ಲರು” ಎಂಬ ಚೌಕವನ್ನು ನೋಡಿರಿ.) ದೇವರ ವಾಕ್ಯವಾದ ಬೈಬಲು, ಒಳ್ಳೆಯ ನೆರೆಯವರಾಗಲು ಮತ್ತು ಕುಟುಂಬದ ನಂಬಿಗಸ್ತ ಸದಸ್ಯರಾಗಲು ಲಕ್ಷಾಂತರ ಮಂದಿಗೆ ಸಹಾಯಮಾಡಿದೆ. ಮುಂಚೆ ಜಾರರು ವ್ಯಭಿಚಾರಿಗಳು ಕಳ್ಳರು ಲೋಭಿಗಳು ಕುಡಿಕರು ಆಗಿದ್ದವರ ಕುರಿತಾಗಿ ನಾವು ಓದುವುದು: “ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಲ್ಲಿಯೂ ತೊಳೆದುಕೊಂಡಿರಿ, ದೇವಜನರಾದಿರಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.”​—⁠1 ಕೊರಿಂಥ 6:9-11.

ಬೈಬಲ್‌ ಕಾಲಗಳಲ್ಲಿದ್ದಂತೆಯೇ, ಇಂದು ಸಹ ತಮ್ಮ ಜೀವಿತಗಳನ್ನು ಒಳ್ಳೆಯದಕ್ಕೆ ಬದಲಾಯಿಸಿಕೊಳ್ಳುವ ವ್ಯಕ್ತಿಗಳಿದ್ದಾರೆ. ಆದರೂ, ಲೈಂಗಿಕ ಶೋಷಣೆಯೆಂಬ ಈ ಪ್ರವೃತ್ತಿಯನ್ನು ಹೊಡೆದೋಡಿಸಲು ಹೆಚ್ಚಿನದ್ದು ಆವಶ್ಯಕವಾಗಿದೆ. ಕೆಲವು ಸರಕಾರಗಳು ಮತ್ತು ಇನ್ನಿತರ ಸಂಸ್ಥೆಗಳು ಸೆಕ್ಸ್‌ ಪ್ರವಾಸೋದ್ಯಮ ಮತ್ತು ಬಾಲ್ಯ ವೇಶ್ಯಾವೃತ್ತಿಯ ವಿರುದ್ಧ ಹೋರಾಡುತ್ತಿವೆ. ಆದರೆ, ವಾಸ್ತವದಲ್ಲಿ, ದೌರ್ಭಾಗ್ಯ ಮತ್ತು ಬಡತನವನ್ನು ತೊಡೆದುಹಾಕುವುದರಲ್ಲಿ ಮಾನವನು ಮಾಡಸಾಧ್ಯವಿರುವುದು ಕೊಂಚವೇ. ಶಾಸನಕಾರರು ಅನೈತಿಕತೆಗೆ ಮೂಲಭೂತವಾಗಿರುವ ಯೋಚನೆಗಳು ಮತ್ತು ಮನೋಭಾವಗಳನ್ನು ನಿಷೇಧಿಸಲಾರರು.

ಆದರೂ, ಮಾನವ ಪ್ರಯತ್ನಗಳ ಬದಲಿಗೆ, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬಲ್ಲ ಇನ್ನೊಂದು ಮೂಲವಿದೆ. ಅದು ದೇವರ ರಾಜ್ಯವೇ. ಮುಂದಿನ ಲೇಖನವು ಅದನ್ನು ವಿವರಿಸುವುದು. (g03 02/08)

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ಬಡತನವು ಹೆಚ್ಚಾಗಿ ಬಾಲ್ಯ ವೇಶ್ಯಾವೃತ್ತಿಗೆ ನಡೆಸುತ್ತದೆ

[ಪುಟ 6ರಲ್ಲಿರುವ ಚೌಕ]

ಭಾರಿ ಬೆಲೆಯನ್ನು ತೆರುವುದು

ಡೇಸೀ ಕೇವಲ ಆರು ವರ್ಷ ಪ್ರಾಯದವಳಾಗಿದ್ದಾಗ, ಅವಳ ಒಡಹುಟ್ಟಿದವರಲ್ಲಿ ಒಬ್ಬನು ಅವಳ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದನು. ಇದರ ಪರಿಣಾಮವಾಗಿ, ಅವಳು 14 ವರ್ಷ ಪ್ರಾಯದವಳಾಗುವ ತನಕ ತನ್ನ ಅಣ್ಣನೊಂದಿಗೆ ಉಳಿದಳು. ನಂತರ ಒಂದು ನೈಟ್‌ಕ್ಲಬ್‌ನಲ್ಲಿ ಕೆಲಸ ಮಾಡಲು ಆರಂಭಿಸಿದಳು. ಕೆಲವು ದಿನಗಳ ನಂತರ, ಡೇಸೀ ಅಸ್ವಸ್ಥಳಾಗಿ ಹಾಸಿಗೆ ಹಿಡಿದಳು. ಅವಳು ಚೇತರಿಸಿಕೊಂಡಾಗ, ಕ್ಲಬ್‌ನ ಯಜಮಾನರು ಅವಳು ಸಲ್ಲಿಸಬೇಕಾದ ಸಾಲದ ಮೊತ್ತವನ್ನು ತೋರಿಸುತ್ತಾ, ಅವಳು ಒಬ್ಬ ವೇಶ್ಯೆಯಾಗಿ ಕೆಲಸಮಾಡುವಂತೆ ಅವಳನ್ನು ಒತ್ತಾಯಿಸಿದರು. ಸುಮಾರು ಒಂದು ವರ್ಷ ಕಳೆದರೂ ಅವಳ ಸಾಲದ ಮೊತ್ತವು ಸಂದಾಯವಾಗಿರಲಿಲ್ಲ, ಮತ್ತು ಅವಳೆಂದೂ ಇದರಿಂದ ವಿಮುಕ್ತಳಾಗುವ ಹಾಗೆ ತೋರಲಿಲ್ಲ. ಆದರೂ, ಅವಳ ಉಳಿದ ಸಾಲವನ್ನು ಒಬ್ಬ ನಾವಿಕನು ಸಲ್ಲಿಸಿದನು ಮತ್ತು ಅವಳನ್ನು ಮತ್ತೊಂದು ಪಟ್ಟಣಕ್ಕೆ ಕರೆದೊಯ್ದನು. ಅಲ್ಲಿ ಅವಳನ್ನು ಒಬ್ಬ ಗುಲಾಮಳಂತೆ ನಡೆಸಿದನು. ಅವಳು ಅವನನ್ನು ಬಿಟ್ಟು ಹೋಗಿ, ನಂತರ ಇನ್ನೊಬ್ಬ ವ್ಯಕ್ತಿಯೊಂದಿಗೆ ಮೂರು ವರ್ಷ ಜೀವಿಸಿದ ಮೇಲೆ ಅವರು ಮದುವೆ ಮಾಡಿಕೊಂಡರು. ಹಲವಾರು ವೈವಾಹಿಕ ಸಮಸ್ಯೆಗಳ ಕಾರಣ, ಅವಳು ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಳು.

ಸಮಯಾನಂತರ, ಅವಳೂ ಅವಳ ಗಂಡನೂ ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದರು. ಆದರೆ ಒಬ್ಬ ಯೆಹೋವನ ಸಾಕ್ಷಿಯಾಗಲು ತಾನು ಯೋಗ್ಯಳಲ್ಲ ಎಂದು ಡೇಸೀಗನಿಸಿತು. ಅಗತ್ಯವಿರುವ ಹೊಂದಾಣಿಕೆಗಳನ್ನು ಮಾಡುವ ಜನರನ್ನು ಯೆಹೋವ ದೇವರು ಸ್ವೀಕರಿಸುತ್ತಾನೆ ಎಂಬುದು ಬೈಬಲಿನಿಂದ ತೋರಿಸಲ್ಪಟ್ಟಾಗ, ಅವಳು ತನ್ನ ಜೀವನವನ್ನು ಆತನಿಗೆ ಸಮರ್ಪಿಸಿದಳು. ಸರಿಯಾದದ್ದನ್ನು ಮಾಡಲು ಡೇಸೀ ಅತ್ಯಧಿಕ ಪ್ರಯತ್ನಗಳನ್ನು ಮಾಡಿದಳು. ಆದರೂ ಅದು ಸಾಲದೆಂಬ ಅನಿಸಿಕೆಯಿದ್ದು, ಅವಳು ಖಿನ್ನತೆಯೊಂದಿಗೆ ಹೋರಾಡುತ್ತಿದ್ದ ಅವಧಿಗಳಿದ್ದವು. ಆದರೆ ಸಂತೋಷಕರವಾಗಿ, ಲೈಂಗಿಕ ದೌರ್ಜನ್ಯ ಮತ್ತು ಬಾಲ್ಯ ವೇಶ್ಯೆಯಾಗಿದ್ದ ಅವಳ ಜೀವನದ ಮನೋವ್ಯಥೆಗಳಿಂದ ಹೊರಬರಲು, ಹಾಗೂ ಭಾವನಾತ್ಮಕ ಸಮತೋಲನವನ್ನು ಪಡೆದು, ಅದನ್ನು ಕಾಪಾಡಿಕೊಳ್ಳಲು ಅವಳು ಸಹಾಯವನ್ನು ಸ್ವೀಕರಿಸಿದ್ದಾಳೆ.

[ಪುಟ 7ರಲ್ಲಿರುವ ಚೌಕ]

ವ್ಯಕ್ತಿಗಳು ಪರಿವರ್ತನೆ ಹೊಂದಬಲ್ಲರು

ಯೇಸು ಕ್ರಿಸ್ತನು ಭೂಮಿಯ ಮೇಲಿದ್ದಾಗ, ಆಗ ದುರುಪಚರಿಸಲ್ಪಡುತ್ತಿದ್ದ ಪಾಪಭರಿತ ಜನರಿಗಾಗಿ ಮರುಕಪಟ್ಟನು. ವೇಶ್ಯೆಯರು, ಅವರು ಯಾವುದೇ ಪ್ರಾಯದವರಾಗಿರಲಿ ತಮ್ಮ ಜೀವನ ರೀತಿಯನ್ನು ಬದಲಾಯಿಸಿಕೊಳ್ಳಬಲ್ಲರು ಎಂಬುದನ್ನು ಅವನು ಗ್ರಹಿಸಿದ್ದನು. ಧಾರ್ಮಿಕ ಮುಖಂಡರಿಗೆ ಯೇಸು ಹೀಗೂ ಹೇಳಿದನು: “ಭ್ರಷ್ಟರೂ ಸೂಳೆಯರೂ ನಿಮಗಿಂತ ಮೊದಲು ದೇವರ ರಾಜ್ಯವನ್ನು ಸೇರುವರು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” (ಮತ್ತಾಯ 21:31) ಅವರ ಜೀವನ ರೀತಿಗಾಗಿ ಉಪೇಕ್ಷಿಸಲ್ಪಟ್ಟರೂ, ಈ ರೀತಿಯ ಸಹೃದಯದ ವ್ಯಕ್ತಿಗಳು ದೇವಕುಮಾರನಲ್ಲಿಟ್ಟ ನಂಬಿಕೆಯಿಂದ ಪಾಪಕ್ಷಮಾಪಣೆಯನ್ನು ಪಡೆದುಕೊಂಡರು. ಪಶ್ಚಾತ್ತಾಪಿ ಪಾಪಿಗಳು ತಮ್ಮ ವೇಶ್ಯಾವೃತ್ತಿಯ ಜೀವನಗಳನ್ನು ತೊರೆಯುವುದರ ಮೂಲಕ ದೇವರ ರಾಜ್ಯದ ಆಶೀರ್ವಾದಗಳನ್ನು ಪಡೆದುಕೊಳ್ಳಲು ಬಯಸಿದರು. ತದನಂತರ, ಅವರು ದೇವರ ನೀತಿಯ ಮಟ್ಟಗಳಿಗನುಸಾರ ಜೀವಿಸಿದರು. ಇಂದು ಕೂಡ ಎಲ್ಲಾ ರೀತಿಯ ಜನರು ದೇವರ ವಾಕ್ಯದ ಸತ್ಯವನ್ನು ಸ್ವೀಕರಿಸಿ, ತಮ್ಮ ಜೀವಿತಗಳನ್ನು ಬದಲಾಯಿಸಿಕೊಳ್ಳುತ್ತಾರೆ.

ಮೊದಲನೇ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟ ಮಾರೀಯ, ಕಾರೀನ ಮತ್ತು ಎಸ್ಟೆಲರಿಗೆ ಏನು ಸಂಭವಿಸಿತೆಂಬುದನ್ನು ಪರಿಗಣಿಸಿರಿ. ವೇಶ್ಯೆಯಾಗಿ ಮುಂದುವರಿಯುವಂತೆ ತನ್ನ ತಾಯಿಯಿಂದ ಬಂದ ಒತ್ತಡವನ್ನು ವಿರೋಧಿಸುವುದರೊಂದಿಗೆ, ಮಾರೀಯ ಅಮಲೌಷಧಗಳ ದುರುಪಯೋಗವನ್ನು ನಿಲ್ಲಿಸುವುದರಲ್ಲಿ ಸತತವಾದ ಹೋರಾಟವನ್ನು ಮಾಡಬೇಕಿತ್ತು. ಅವಳು ವಿವರಿಸುವುದು: “ವೇಶ್ಯೆಯ ಜೀವನವನ್ನು ನಡೆಸುತ್ತಿದ್ದುದರಿಂದ ಬರುವ ಅಯೋಗ್ಯತೆಯ ಅನಿಸಿಕೆಗಳನ್ನು ನಿಗ್ರಹಿಸಲಿಕ್ಕಾಗಿ ನಾನು ಅಮಲೌಷಧಗಳನ್ನು ಉಪಯೋಗಿಸುತ್ತಿದ್ದೆ.” ಯೆಹೋವನ ಸಾಕ್ಷಿಗಳ ಕ್ರೈಸ್ತ ಸಭೆಯಿಂದ ತನಗೆ ಸಿಕ್ಕಿದ ಸ್ವಾಗತದ ಬಗ್ಗೆ ಅವಳು ಹೀಗೆ ಹೇಳುತ್ತಾಳೆ: “ಸಭೆಯ ಸದಸ್ಯರು ತೋರಿಸಿದ ಪ್ರೀತಿಯನ್ನು ನನ್ನಿಂದ ನಂಬಲಿಕ್ಕೇ ಆಗಲಿಲ್ಲ. ಮಕ್ಕಳೂ ಮತ್ತು ವಯಸ್ಕರೆಲ್ಲರೂ ನನ್ನನ್ನು ಗೌರವದಿಂದ ಕಂಡರು. ಮದುವೆ ಮಾಡಿಕೊಂಡಿರುವ ಗಂಡಸರು ತಮ್ಮ ಹೆಂಡತಿಯರಿಗೆ ನಂಬಿಗಸ್ತರಾಗಿರುವುದನ್ನು ನಾನು ಗಮನಿಸಿದೆ. ಅವರ ಒಬ್ಬ ಸ್ನೇಹಿತೆಯಾಗಿ ಸ್ವೀಕರಿಸಲ್ಪಟ್ಟಿರುವುದರಿಂದ ನಾನು ತುಂಬ ಸಂತೋಷಿತಳಾಗಿದ್ದೇನೆ.”

ಕಾರೀನ 17 ವರ್ಷ ಪ್ರಾಯದವಳಾಗಿದ್ದಾಗ ಯೆಹೋವನ ಸಾಕ್ಷಿಗಳು ಅವಳನ್ನು ಭೇಟಿಮಾಡಿದರು. ಅವಳು ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದಳು, ಮತ್ತು ಆಗಲೂ ಸ್ವಲ್ಪಕಾಲ ತನ್ನ ವೇಶ್ಯಾವೃತ್ತಿಯಲ್ಲಿ ಮುಂದುವರಿದಳು. ಕ್ರಮೇಣ, ಅವಳು ಬೈಬಲ್‌ ಸತ್ಯಗಳನ್ನು ಅರ್ಥಮಾಡಿಕೊಂಡು ಗಣ್ಯಮಾಡಲಾರಂಭಿಸಿದಳು. ಆದುದರಿಂದ ಒಂದು ದೂರದ ನಗರಕ್ಕೆ ಹೋಗಲು ತೀರ್ಮಾನಿಸಿದಳು, ಮತ್ತು ಅಲ್ಲಿ ಒಬ್ಬ ಯೆಹೋವನ ಸಾಕ್ಷಿಯಾದಳು.

ಈ ಮುಂಚೆ ವೇಶ್ಯಾವೃತ್ತಿ, ದುಂದೌತನಗಳು, ಮತ್ತು ಕುಡಿಕತನದಲ್ಲಿ ಒಳಗೂಡಿದ್ದ ಎಸ್ಟೆಲ ಬೈಬಲಿನಲ್ಲಿ ಆಸಕ್ತಿ ತೋರಿಸಲು ಆರಂಭಿಸಿದಳು. ಆದರೂ, ದೇವರು ಅವಳನ್ನು ಎಂದಿಗೂ ಕ್ಷಮಿಸಲಾರನು ಎಂದು ತೀರ್ಮಾನಿಸಿಕೊಂಡಿದ್ದಳು. ಇದರ ಹೊರತೂ, ಯೆಹೋವನು ಪಶ್ಚಾತ್ತಾಪಪಡುವ ವ್ಯಕ್ತಿಗಳನ್ನು ಕ್ಷಮಿಸುತ್ತಾನೆಂದು ಆಕೆ ಕಾಲಾನಂತರ ಅರಿತುಕೊಂಡಳು. ಈಗ ಕ್ರೈಸ್ತ ಸಭೆಯ ಒಬ್ಬ ಸದಸ್ಯಳೂ ವಿವಾಹಿತಳೂ ಮೂರು ಮಕ್ಕಳ ತಾಯಿಯೂ ಆಗಿರುವ ಎಸ್ಟೆಲ ತಿಳಿಸುವುದು: “ಯೆಹೋವನು ನನ್ನನ್ನು ಕೆಸರಿನಿಂದ ಮೇಲೆತ್ತಿ, ತನ್ನ ನಿರ್ಮಲ ಸಂಸ್ಥೆಗೆ ನನ್ನನ್ನು ಸೇರಿಸಿಕೊಂಡಿದ್ದಾನೆ ಎಂಬುದಕ್ಕೆ ತುಂಬ ಸಂತೋಷಿತಳೂ ಆತನಿಗೆ ಆಭಾರಿಯೂ ಆಗಿದ್ದೇನೆ.”

ಈ ವೃತ್ತಾಂತಗಳು, “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆ ಎಂಬ ಬೈಬಲಿನ ಹೇಳಿಕೆಯನ್ನು ಸಮರ್ಥಿಸುತ್ತವೆ.​—⁠1 ತಿಮೊಥೆಯ 2:⁠4.

[ಪುಟ 7ರಲ್ಲಿರುವ ಚಿತ್ರ]

ಬಾಲ್ಯ ವೇಶ್ಯೆಯರು ಅನೇಕವೇಳೆ ಅಮಲೌಷಧಗಳ ಸೇವನೆಯಲ್ಲಿ ಒಳಗೂಡಿರುತ್ತಾರೆ

[ಪುಟ 5ರಲ್ಲಿರುವ ಚಿತ್ರ ಕೃಪೆ]

© Jan Banning/Panos Pictures, 1997