ಹದ್ದಿನ ಕಣ್ಣು
ಹದ್ದಿನ ಕಣ್ಣು
ಸ್ಪೆಯಿನ್‌ನಲ್ಲಿರುವ ಎಚ್ಚರ! ಲೇಖಕರಿಂದ
ತೀಕ್ಷ್ಣ ದೃಷ್ಟಿಯುಳ್ಳ ಒಬ್ಬ ವ್ಯಕ್ತಿಯನ್ನು ಸ್ಪೆಯಿನ್ ದೇಶದವರು ಹದ್ದಿನ ದೃಷ್ಟಿಶಕ್ತಿಯುಳ್ಳವನು ಎಂದು ವರ್ಣಿಸುತ್ತಾರೆ (ಬೀಸ್‌ಟೇ ಡೆ ಆಗೀಲಾ). ಜರ್ಮನರು ಕೂಡ ಹೀಗೆ ಹೇಳುವುದುಂಟು (ಆಡ್‌ಲಾಔಗೆ). ಹದ್ದಿನ ಚುರುಕಾದ ದೃಷ್ಟಿಶಕ್ತಿಯು ಯಾವುದೇ ಕಾರಣವಿಲ್ಲದೆ ಹಲವಾರು ಶತಮಾನಗಳಿಂದ ಗಾದೆಯ ಮಾತಾಗಿರುವುದಿಲ್ಲ. ಮೂರು ಸಾವಿರ ವರ್ಷಗಳ ಹಿಂದೆ ಬರೆಯಲ್ಪಟ್ಟ ಯೋಬನು ಪುಸ್ತಕವು ಹದ್ದಿನ ಕುರಿತಾಗಿ ಹೇಳುವುದು: ‘ಹದ್ದು ಮೇಲಕ್ಕೆ ಹಾರಿ ದೂರದಿಂದಲೇ ನೋಡುತ್ತದೆ.’—ಯೋಬ 39:27, 29.
ಹದ್ದು ಎಷ್ಟು ದೂರದ ವರೆಗೆ ನೋಡಬಲ್ಲದು? “ಅನುಕೂಲಕರ ಪರಿಸ್ಥಿತಿಗಳ ಕೆಳಗೆ ಒಂದು ಹೊಂಬಣ್ಣದ ಹದ್ದು (ಅಕ್ವಿಲ ಕ್ರಿಸೆಟೊಸ್) 2 ಕಿಮೀ [1 1/4 ಮೈಲಿಗಳ] ದೂರದಿಂದ ಒಂದು ಮೊಲದ ಅತ್ಯಲ್ಪ ಚಲನೆಗಳನ್ನು ಗೊತ್ತುಪಡಿಸಿಕೊಳ್ಳಬಲ್ಲದು,” ಎಂದು ಪ್ರಾಣಿ ದಾಖಲೆಗಳ ಗಿನ್ನಸ್ ಪುಸ್ತಕ (ಇಂಗ್ಲಿಷ್) ಹೇಳುತ್ತದೆ. ಇತರರು ಹದ್ದು ಇನ್ನೂ ದೂರದಿಂದ ನೋಡಬಲ್ಲದು ಎಂದು ಅಂದಾಜುಮಾಡುತ್ತಾರೆ!
ಹದ್ದಿಗೆ ಯಾವುದು ಇಂತಹ ಸೂಕ್ಷ್ಮ ದೃಷ್ಟಿಯನ್ನು ಕೊಡುತ್ತದೆ? ಮೊದಲನೆಯದಾಗಿ, ಹೊಂಬಣ್ಣದ ಹದ್ದಿಗೆ ಅದರ ತಲೆಯ ಹೆಚ್ಚಿನ ಭಾಗವನ್ನು ಆವರಿಸುವ ದೊಡ್ಡ ಎರಡು ಕಣ್ಣುಗಳಿವೆ. ಹೊಂಬಣ್ಣದ ಹದ್ದಿನ ವಿಷಯದಲ್ಲಿ, ಅದರ ಕಣ್ಣುಗಳು “ವಾಸ್ತವದಲ್ಲಿ ಸಾಧ್ಯವಿರುವಷ್ಟು ದೊಡ್ಡದಾಗಿವೆಯಾದರೂ ಅದರ ಹಾರಾಟವನ್ನು ಕುಂಠಿತಗೊಳಿಸುವಷ್ಟು ತೂಕದ್ದಾಗಿರುವುದಿಲ್ಲ” ಎಂದು, ಬ್ರಿಟಿಷ್ ಪಕ್ಷಿಗಳ ಪುಸ್ತಕ (ಇಂಗ್ಲಿಷ್) ಹೇಳುತ್ತದೆ.
ಮಾತ್ರವಲ್ಲದೆ, ಹದ್ದಿನ ಕಣ್ಣಿನಲ್ಲಿ ನಮ್ಮ ಕಣ್ಣಿನಲ್ಲಿರುವುದಕ್ಕಿಂತ ಸುಮಾರು ಐದು ಪಟ್ಟು ಹೆಚ್ಚು ಸಂಖ್ಯೆಯ ಬೆಳಕು-ಗ್ರಾಹಕ ಕಣಗಳಿವೆ—ನಮ್ಮಲ್ಲಿರುವ 2,00,000 ಕೋನ್‌ಗಳಿಗೆ ಹೋಲಿಸುವಾಗ ಪ್ರತಿ ಚದರ ಮಿಲಿಮೀಟರ್‌ಗೆ ಸುಮಾರು 10,00,000 ಕೋನ್‌ಗಳು. ವಾಸ್ತವವಾಗಿ ಪ್ರತಿಯೊಂದು ಗ್ರಾಹಕವೂ ಒಂದು ನರಕೋಶಕ್ಕೆ ಜೋಡಿಸಲ್ಪಟ್ಟಿದೆ. ಇದರ ಫಲಿತಾಂಶವಾಗಿ, ಕಣ್ಣಿನಿಂದ ಮಿದುಳಿಗೆ ಸಂದೇಶಗಳನ್ನು ಒಯ್ಯುವ ದೃಷ್ಟಿ ನರದಲ್ಲಿ, ಮಾನವರಿಗಿರುವುದಕ್ಕಿಂತ ಹದ್ದುಗಳಲ್ಲಿ ದ್ವಿಗುಣ ಎಣಿಕೆಯ ತಂತುರಚನೆಗಳಿವೆ. ಆದುದರಿಂದ ಈ ಜೀವಿಗಳಿಗೆ ಸೂಕ್ಷ್ಮ ಬಣ್ಣಗ್ರಾಹ್ಯ ಶಕ್ತಿಯಿದೆ ಎಂಬುದು ಆಶ್ಚರ್ಯಕರವೇನಲ್ಲ! ಕೊನೆಯದಾಗಿ, ಇತರ ಹಕ್ಕಿಗಳಿಗಿರುವಂತೆಯೇ ಬೇಟೆಹಕ್ಕಿಗಳಿಗೂ, ಕಣ್ಣುಗಳಲ್ಲಿ ಶಕ್ತಿಯುತವಾದ ಲೆನ್ಸು ಅಳವಡಿಸಲ್ಪಟ್ಟಿದೆ. ಇದು ತಮ್ಮ ದೃಷ್ಟಿಯನ್ನು ಕೆಲವು ಸೆಂಟಿಮೀಟರ್‌ಗಳಷ್ಟು ದೂರದಲ್ಲಿರುವ ವಸ್ತುಗಳನ್ನು ನೋಡುತ್ತಿರುವಾಗಲೇ ಒಮ್ಮೆಲೇ ಅತಿ ದೂರದಲ್ಲಿರುವ ವಸ್ತುಗಳನ್ನು ನೋಡುವುದನ್ನು ಸಾಧ್ಯಗೊಳಿಸುತ್ತದೆ. ಈ ವಿಷಯದಲ್ಲೂ ಅವುಗಳ ಕಣ್ಣುಗಳು ನಮ್ಮ ಕಣ್ಣುಗಳಿಗಿಂತ ಎಷ್ಟೋ ಶ್ರೇಷ್ಠವಾಗಿವೆ.
ಹದ್ದಿನ ದೃಷ್ಟಿಯು ತುಂಬು ಬೆಳಕಿನಲ್ಲಿ ಚಮತ್ಕಾರ ತೋರಿಸುವಾಗ, ರಾತ್ರಿಹೊತ್ತಿನಲ್ಲಿ ಸರದಿಯು ಗೂಬೆಯದ್ದಾಗಿರುತ್ತದೆ. ರಾತ್ರಿಯಲ್ಲಿ ಓಡಾಡುವ ಈ ಹಿಂಸ್ರ ಪಕ್ಷಿಗಳಿಗೆ ವಿಪುಲವಾದ ಬೆಳಕು-ಗ್ರಾಹ್ಯ ಕಂಬಿ (ರಾಡ್)ಗಳು ಮತ್ತು ಒಂದು ದೊಡ್ಡ ಮೇಲ್ಮೈ ಮಸೂರವಿರುವ ಕಣ್ಣುಗಳಿರುತ್ತವೆ. ಈ ಕಾರಣದಿಂದ, ನಾವು ಕತ್ತಲೆಯಲ್ಲಿ ನೋಡಸಾಧ್ಯವಿರುವುದಕ್ಕಿಂತಲೂ 100 ಪಟ್ಟು ಹೆಚ್ಚು ಉತ್ತಮವಾಗಿ ಇವುಗಳು ನೋಡಶಕ್ತವಾಗಿವೆ. ಆದರೂ, ಕತ್ತಲೆಯೇ ತುಂಬಿರುವ ಆ ಕೆಲವು ಸಂದರ್ಭಗಳಲ್ಲಿ, ಗೂಬೆಗಳು ತಮ್ಮ ಆಹಾರಪ್ರಾಣಿಯ ಪತ್ತೆಹಚ್ಚಲಿಕ್ಕಾಗಿ ಸಂಪೂರ್ಣವಾಗಿ ತಮ್ಮ ತೀಕ್ಷ್ಣ ಶ್ರವಣಶಕ್ತಿಯ ಮೇಲೆ ಆತುಕೊಳ್ಳಬೇಕಾಗಿದೆ.
ಈ ಪಕ್ಷಿಗಳಿಗೆ ಈ ರೀತಿಯ ವಿಶಿಷ್ಟಾಂಶಗಳನ್ನು ಕೊಟ್ಟವರಾರು? ದೇವರು ಯೋಬನಿಗೆ ಕೇಳಿದ್ದು: “ಹದ್ದು ಮೇಲಕ್ಕೆ ಹಾರಿ ಉನ್ನತದಲ್ಲಿ ಗೂಡುಮಾಡುವದು ನಿನ್ನ ಅಪ್ಪಣೆಯಿಂದಲೋ?” ಸಾಕ್ಷ್ಯಪೂರ್ವಕವಾಗಿ, ಸೃಷ್ಟಿಯ ಈ ಅದ್ಭುತದ ಕೀರ್ತಿಗೆ ತಾನು ಪಾತ್ರನೆಂದು ಯಾವ ಮಾನವನೂ ಹೇಳಸಾಧ್ಯವಿಲ್ಲ. ಯೋಬನು ಸ್ವತಃ ದೀನತೆಯಿಂದ ಒಪ್ಪಿಕೊಂಡದ್ದು: “ನೀನು ಸಕಲ ಕಾರ್ಯಗಳನ್ನು ನಡಿಸಬಲ್ಲಿಯೆಂತ . . . ತಿಳಿದುಕೊಂಡೇ ಇದ್ದೇನೆ.” (ಯೋಬ 39:27; 42:1, 2) ಹದ್ದಿನ ಕಣ್ಣು ಸೃಷ್ಟಿಕರ್ತನ ವಿವೇಕದ ಕೇವಲ ಮತ್ತೊಂದು ಸಾಕ್ಷ್ಯವಾಗಿದೆ ಅಷ್ಟೆ. (g02 12/22)
[ಪುಟ 24ರಲ್ಲಿರುವ ಚಿತ್ರ]
ಹೊಂಬಣ್ಣದ ಹದ್ದು
[ಪುಟ 29ರಲ್ಲಿರುವ ಚಿತ್ರ]
ಧ್ರುವಪ್ರದೇಶದ ಗೂಬೆ