ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಕ್ಷಿಭರಿತ ಗರಿಗಳಿರುವ ಒಂದು ನಯನಮನೋಹರ ಪಕ್ಷಿ

ಅಕ್ಷಿಭರಿತ ಗರಿಗಳಿರುವ ಒಂದು ನಯನಮನೋಹರ ಪಕ್ಷಿ

ಅಕ್ಷಿಭರಿತ ಗರಿಗಳಿರುವ ಒಂದು ನಯನಮನೋಹರ ಪಕ್ಷಿ

ಭಾರತದಲ್ಲಿರುವ ಎಚ್ಚರ! ಲೇಖಕರಿಂದ

ನಾವು ನವಿಲುಗಳ ಕುರಿತಾಗಿಯೇ ಮಾತಾಡುತ್ತಿದ್ದೇವೆ ಎಂಬುದನ್ನು ಈ ಲೇಖನದ ಮೇಲ್ಬರಹದಿಂದಲೇ ನೀವು ಊಹಿಸಿರಬಹುದು. ಗಂಡು ನವಿಲಿಗೆ ಅದರ ಬೆನ್ನಿನ ಮೇಲೆ ಗರಿಗಳಿಂದ ಕೂಡಿರುವ ಒಂದು ಉದ್ದವಾದ ಹಿಂಜೋಲು ಇದ್ದು, ಅದು ಜಗತ್ಪ್ರಸಿದ್ಧವಾಗಿದೆ. * ಆದರೂ, ಈ ಪಕ್ಷಿಯ ಅಂಥ ಭಾವೋತ್ಪಾದಕ ಗರಿಯು ಯಾವ ಉದ್ದೇಶವನ್ನು ಪೂರೈಸುತ್ತದೆ ಮತ್ತು ಅದರ ಮನಮೋಹಕ ಸೌಂದರ್ಯವಲ್ಲದೆ ಇನ್ನಾವ ವಿಧಗಳಲ್ಲಿ ಅದು ಅಪೂರ್ವವಾದದ್ದಾಗಿದೆ ಎಂದು ನೀವೆಂದಾದರೂ ಕುತೂಹಲಪಟ್ಟಿದ್ದೀರೋ?

ಜೀವಂಜೀವ (ಪೆಸಂಟ್‌) ವರ್ಗಕ್ಕೆ ಸೇರಿರುವಂಥ ನವಿಲಿನಲ್ಲಿ ಮೂರು ಜಾತಿಗಳಿವೆ. ಈ ಲೇಖನದಲ್ಲಿ ನಾವು ಭಾರತದ ನವಿಲು ಅಥವಾ ಸಾಮಾನ್ಯ ನವಿಲಿನ ಕುರಿತು ತಿಳಿದುಕೊಳ್ಳಲಿದ್ದೇವೆ. ಈ ನವಿಲು ಹೆಚ್ಚಾಗಿ ನೀಲಹಸುರು ಬಣ್ಣದ್ದಾಗಿರುತ್ತದೆ ಮತ್ತು 150 ಸೆಂಟಿಮೀಟರುಗಳಷ್ಟು ಉದ್ದವಿರುವ ಹಿಂಜೋಲನ್ನೂ ಸೇರಿಸಿ ಅದರ ದೇಹದ ಉದ್ದ ಸುಮಾರು 200ರಿಂದ 235 ಸೆಂಟಿಮೀಟರುಗಳಷ್ಟಿರುತ್ತದೆ. ಈ ಹಿಂಜೋಲಿನ ಗರಿಗಳು ಹಸುರು ಹಾಗೂ ಹೊಂಬಣ್ಣದವುಗಳಾಗಿದ್ದು, ನೀಲಿ ಮತ್ತು ಕಂಚಿನ ಬಣ್ಣದ ಕಣ್ಣುಗಳನ್ನು ಹೋಲುವಂಥ ಗುರುತುಗಳನ್ನು ಹೊಂದಿರುತ್ತವೆ. ದೇಹದ ಮೇಲಿರುವ ಪುಕ್ಕಗಳು ಹೆಚ್ಚಾಗಿ ಲೋಹೀಯ ನೀಲಹಸುರುಗಳ ಮಿಶ್ರ ಬಣ್ಣವನ್ನು ಹೊಂದಿವೆ.

ಭಾರತದ ರಾಷ್ಟ್ರಪಕ್ಷಿ ಎಂಬ ಅಧಿಕೃತ ಖ್ಯಾತಿಯನ್ನು ಹೊಂದಿರುವ ನವಿಲಿಗೆ ಖಂಡಿತವಾಗಿಯೂ ಗಾಂಭೀರ್ಯಭರಿತ ತೋರಿಕೆಯಿದೆ. ಆದುದರಿಂದಲೇ ಅಹಂಕಾರಿ ವ್ಯಕ್ತಿಗಳನ್ನು ವರ್ಣಿಸಲಿಕ್ಕಾಗಿ ಕೆಲವು ಭಾಷೆಗಳಲ್ಲಿ “ಜಂಬದ ನವಿಲು” ಎಂಬ ಅಭಿವ್ಯಕ್ತಿಯನ್ನು ಉಪಯೋಗಿಸಲಾಗುತ್ತದೆ. ಆದರೂ, ಈ ಪಕ್ಷಿಯ ಹೊರತೋರಿಕೆಯಿಂದ ಒಬ್ಬನು ನೆನಸಬಹುದಾದಂತೆ ಇದು ಯಾರೊಂದಿಗೂ ಬೆರೆಯದೆ ಪ್ರತ್ಯೇಕವಾಗಿರುವಂಥ ಪಕ್ಷಿಯೇನಲ್ಲ. ವಾಸ್ತವದಲ್ಲಿ, ಇದನ್ನು ಸುಲಭವಾಗಿಯೇ ಪಳಗಿಸಸಾಧ್ಯವಿದೆ. ಕೆಲವರು ನವಿಲನ್ನು ಪೂಜ್ಯನೀಯವಾಗಿ ಪರಿಗಣಿಸುತ್ತಾರೆ. ಈ ಕಾರಣದಿಂದಲೇ ಭಾರತದಲ್ಲಿರುವ ಹಳ್ಳಿಯ ರೈತರು, ಈ ಪಕ್ಷಿಗಳು ತಮ್ಮ ಹೊಲಗದ್ದೆಗಳಿಗೆ ಅಪಾಯವನ್ನೊಡ್ಡುವಾಗ ಇವುಗಳ ಕಾಟವನ್ನು ಕೆಲವೊಮ್ಮೆ ಸಹಿಸಿಕೊಳ್ಳುತ್ತಾರೆ.

ಅವುಗಳ ಮನಮೋಹಕ ಪ್ರದರ್ಶನ

ತಮ್ಮ ಹಿಂಜೋಲುಗಳನ್ನು ಕಣ್ಣುಕೋರೈಸುವಂಥ ಬೀಸಣಿಗೆಯಂತೆ ಹರವುದರ ಮೂಲಕ ನವಿಲುಗಳು ತೋರಿಸುವ ಭವ್ಯ ಪ್ರದರ್ಶನಕ್ಕೆ ಅವು ಸುಪ್ರಸಿದ್ಧವಾಗಿವೆ ಎಂಬುದಂತೂ ನಿಶ್ಚಯ. ಈ ಬೆಡಗಿನ ಪ್ರದರ್ಶನದ ಉದ್ದೇಶವೇನು? ತನ್ನ ಸೊಬಗನ್ನು ತೋರಿಸಿ ಹೆಣ್ಣು ನವಿಲುಗಳನ್ನು ಆಕರ್ಷಿಸುವುದೇ ಆಗಿದೆ ಎಂಬುದು ಸುವ್ಯಕ್ತ.

ಸಾಮಾನ್ಯವಾಗಿ ಹೆಣ್ಣು ನವಿಲನ್ನು ಮೆಚ್ಚಿಸುವುದು ತುಂಬ ಕಷ್ಟಕರವಾದರೂ, ಗಂಡು ನವಿಲಿನ ಮನಮೋಹಕ ಪ್ರದರ್ಶನವೇ ಅದರ ದೌರ್ಬಲ್ಯವಾಗಿದೆ. ಅಪೂರ್ವವಾದ ವರ್ಣರಂಜಿತ ಕಣ್ಣುಗಳಿಂದ ತುಂಬಿರುವ ಗಂಡು ನವಿಲಿನ ಅಗಲವಾದ ಬೀಸಣಿಗೆಯಂತಿರುವ ಹಿಂಜೋಲು, ಸಂಪೂರ್ಣವಾಗಿ ಹೆಣ್ಣು ನವಿಲಿನ ಗಮನವನ್ನು ಸೆರೆಹಿಡಿಯುತ್ತದೆ. ಹೆಣ್ಣು ನವಿಲು, ಅತ್ಯಂತ ಬೆಡಗಿನ ಪ್ರದರ್ಶನವನ್ನು ಮಾಡುವಂಥ ನವಿಲನ್ನು ತನ್ನ ಸಂಗಾತಿಯಾಗಿ ಆಯ್ಕೆಮಾಡುವ ಪ್ರವೃತ್ತಿಯುಳ್ಳದ್ದಾಗಿರುತ್ತದೆ.

ಆದರೂ ಹಿಂಜೋಲಿನ ತೋರ್ಪಡಿಸುವಿಕೆಯು ಅದರ ಪ್ರದರ್ಶನದ ಒಂದು ಭಾಗವಾಗಿದೆ ಅಷ್ಟೇ. ಮೊದಲಾಗಿ ಗಂಡು ನವಿಲು ತನ್ನ ಉದ್ದವಾದ ಹಿಂಜೋಲನ್ನು ಬೀಸಣಿಗೆಯಂತೆ ಹರವಿ, ಅದನ್ನು ಮುಂದಕ್ಕೆ ಬಗ್ಗಿಸುತ್ತದೆ. ತದನಂತರ ಅದು ತನ್ನ ಬೆಡಗಿನ ನೃತ್ಯವನ್ನು ಆರಂಭಿಸುತ್ತದೆ. ಅದು ತನ್ನ ದೇಹವನ್ನು ಕಂಪಿಸುತ್ತಿರುವಾಗ, ಅದರ ವರ್ಣರಂಜಿತ ರೆಕ್ಕೆಗಳು ಅದರ ಪಾರ್ಶ್ವಗಳಲ್ಲಿ ಕೆಳಮುಖವಾಗಿ ಬಾಗಿರುತ್ತವೆ ಮತ್ತು ನೆಟ್ಟಗೆ ನಿಂತಿರುವ ಗರಿಗಳು ಮರ್ಮರ ಶಬ್ದವನ್ನು ಮಾಡುವಂತೆ ನೆರವು ನೀಡುತ್ತವೆ. ಗಂಡು ನವಿಲು ಆಗಿಂದಾಗ್ಗೆ ಗಟ್ಟಿಯಾದ ಧ್ವನಿಯಿಂದ ಕೇಕೆಹಾಕುತ್ತದೆ. ಅದರ ಸ್ವರವು ಇಂಪಾಗಿರದಿದ್ದರೂ, ಕಡಿಮೆಪಕ್ಷ ಅದು ಹೆಣ್ಣು ನವಿಲಿನಲ್ಲಿ ಆಸಕ್ತವಾಗಿದೆ ಎಂಬ ಸಂದೇಶವನ್ನು ಅದಕ್ಕೆ ತಲಪಿಸುತ್ತದೆ.

ಕೆಲವೊಮ್ಮೆ, ಹೆಣ್ಣು ನವಿಲು ಗಂಡು ನವಿಲಿನ ಚೇಷ್ಟೆಗಳನ್ನು ಸ್ವಲ್ಪಮಟ್ಟಿಗೆ ಅನುಕರಿಸಲು ಪ್ರಯತ್ನಿಸುತ್ತದೆ, ಆದರೆ ಹೆಚ್ಚಿನ ಸಮಯ ಅದು ಅನಾಸಕ್ತವಾಗಿ ಕಂಡುಬರುತ್ತದೆ. ಆದರೂ, ಅತ್ಯಂತ ಅಪೂರ್ವವಾದ ನೃತ್ಯ ಪ್ರದರ್ಶನವು ಹೆಣ್ಣು ನವಿಲಿನ ಮನಸ್ಸನ್ನು ಗೆಲ್ಲುತ್ತದೆ. ಒಂದೊಂದು ಗಂಡು ನವಿಲು ಒಂದು ವರ್ಷದಲ್ಲಿ ಸುಮಾರು ಐದು ಹೆಣ್ಣು ನವಿಲುಗಳ ಜೊತೆ ಸಂಬಂಧ ಬೆಳೆಸಿ, ಸುಮಾರು 25 ಮರಿಗಳಿಗೆ ತಂದೆಯಾಗಬಹುದು.

ಗಂಡು ನವಿಲಿನ ಕುಟುಂಬ ಜೀವನ

ಸಂತಾನಾಭಿವೃದ್ಧಿಯ ಕಾಲಾವಧಿಯ ಬಳಿಕ, ಗರಿಗಳು ಬಿದ್ದುಹೋಗುವ ಸಮಯ ಬರುತ್ತದೆ. ಒಂದು ವಯಸ್ಕ ಗಂಡು ನವಿಲಿನ ಪೂರ್ಣವಾಗಿ ಬೆಳೆದ ಹಿಂಜೋಲಿನಲ್ಲಿ ಸರಾಸರಿ 200 ಗರಿಗಳಿರುತ್ತವೆ. ಭಾರತದ ಹಳ್ಳಿ ಜನರು ಇವುಗಳನ್ನು ಸಂಗ್ರಹಿಸಿ, ಪಾಶ್ಚಾತ್ಯ ದೇಶಗಳಿಗೆ ರಫ್ತುಮಾಡುತ್ತಿದ್ದರು. ಆದರೆ ಈಗ ಈ ಪಕ್ಷಿ ಜಾತಿಯನ್ನು ಸಂರಕ್ಷಿಸಲಿಕ್ಕಾಗಿ ಅಂಥ ರಫ್ತುಮಾಡುವಿಕೆಯನ್ನು ನಿಷೇಧಿಸಲಾಗಿದೆ. ಸ್ಥಳಿಕವಾಗಿ ಈಗಲೂ ಈ ಗರಿಗಳನ್ನು ಉಪಯೋಗಿಸಿ ಬೀಸಣಿಗೆಗಳನ್ನು ಮತ್ತು ಇತರ ಆಕರ್ಷಕ ವಸ್ತುಗಳನ್ನು ತಯಾರಿಸಲಾಗುತ್ತದೆ.

ಸಂಜೆಯ ಸಮಯದಲ್ಲಿ ನವಿಲುಗಳು ನಿಧಾನವಾಗಿ ಎತ್ತರವಾಗಿರುವ ಮರಗಳನ್ನು ಹತ್ತಿ, ಮಲಗಲು ಸೂಕ್ತವಾದ ಸ್ಥಳವನ್ನು ಕಂಡುಕೊಳ್ಳುತ್ತವೆ. ಬೆಳಗ್ಗೆ ಅವು ನಿಧಾನವಾಗಿ ಕೆಳಗಿಳಿದು ಬರುತ್ತವೆ. ಈ ಜೀವಿಗಳು ತಮ್ಮ ನಯನಮನೋಹರ ಸೌಂದರ್ಯದಿಂದ ನಿಮ್ಮ ಕಣ್ಮನ ತಣಿಸಬಹುದಾದರೂ, ಅವುಗಳ ಹಾಡುವಿಕೆಯು ಸಹ ಅದೇ ಮಟ್ಟದ್ದಾಗಿರುವುದೆಂದು ನಿರೀಕ್ಷಿಸಬೇಡಿ. ಈ ಪಕ್ಷಿಗಳು ಆಹಾರಕ್ಕಾಗಿ ಹುಡುಕಲು ಆರಂಭಿಸುವ ತನಕ, ಇವುಗಳ ಗೋಳುಕರೆಗಳು ಸಾಯಂಕಾಲದ ಪ್ರಶಾಂತತೆಯನ್ನು ಭಂಗಗೊಳಿಸುತ್ತವೆ.

ನವಿಲುಗಳು ಸರ್ವಭಕ್ಷಕಗಳಾಗಿದ್ದು, ಸಿಕ್ಕಿದ್ದನೆಲ್ಲಾ ತಿನ್ನುತ್ತವೆ. ಇವುಗಳ ಆಹಾರದಲ್ಲಿ ಕೀಟಗಳು, ಹಲ್ಲಿಗಳು, ಮತ್ತು ಕೆಲವೊಮ್ಮೆ ಚಿಕ್ಕಪುಟ್ಟ ಹಾವುಗಳು ಹಾಗೂ ಬೀಜಗಳು, ಕಾಳುಗಳು, ದ್ವಿದಳಧಾನ್ಯಗಳು, ಮತ್ತು ಬೆಳೆಗಳ ಮೃದುವಾದ ಬೇರುಗಳು ಒಳಗೂಡಿವೆ.

ಗಂಡು ನವಿಲು ಹೊರತೋರಿಕೆಗೆ ತುಂಬ ಜಂಬವುಳ್ಳದ್ದಾಗಿ ಕಂಡುಬರುವುದಾದರೂ, ಇದು ತುಂಬ ರಕ್ಷಕ ಸ್ವಭಾವದ ಪಕ್ಷಿಯಾಗಿದೆ. ಅದು ಒಂದು ಹುಲಿಯ ಆಕ್ರಮಣದಂಥ ಅಪಾಯಕರ ಪರಿಸ್ಥಿತಿಗಳನ್ನು ಬೇಗನೆ ಪತ್ತೆಹಚ್ಚಿ, ಕಾಡಿನಾದ್ಯಂತ ವೇಗವಾಗಿ ಓಡುವ ಮೂಲಕ ಸನ್ನಿಹಿತವಾಗುತ್ತಿರುವ ಅಪಾಯದ ಕುರಿತು ಎಚ್ಚರಿಕೆ ನೀಡಲಿಕ್ಕಾಗಿ ಗಟ್ಟಿಯಾದ ಧ್ವನಿಯಿಂದ ಕೂಗುತ್ತದೆ. ಬೇರೆ ಗಂಡು ನವಿಲುಗಳು ಸಹ ಇದರೊಂದಿಗೆ ಗಟ್ಟಿಯಾಗಿ ಕೂಗುತ್ತವೆ. ಸಾಮಾನ್ಯವಾಗಿ ಅವು ಒಂದರ ಹಿಂದೆ ಒಂದರಂತೆ ಅತಿ ವೇಗದಿಂದ ಓಡುತ್ತವೆ. ಆದರೆ, ಹೆಣ್ಣು ನವಿಲುಗಳು ಮಾತ್ರ ಮರಣಾಪಾಯವು ಒದಗಿಬಂದರೂ ತಮ್ಮ ಮರಿಗಳನ್ನು ಎಂದಿಗೂ ತೊರೆದುಹೋಗುವುದಿಲ್ಲ.

ಗಂಡು ನವಿಲು ಹಾರಲು ಆರಂಭಿಸುವಾಗ, ಗರಿಗಳಿಂದ ಕೂಡಿರುವ ಅದರ ಉದ್ದವಾದ ಹಿಂಜೋಲು ಸ್ವಲ್ಪ ಅನನುಕೂಲಕರವಾಗಿ ತೋರಬಹುದಾದರೂ, ಇದು ಅದರ ವೇಗವನ್ನು ನಿಧಾನಗೊಳಿಸುವಂತೆ ತೋರುವುದಿಲ್ಲ. ಆದರೂ, ಒಮ್ಮೆ ಗಂಡು ನವಿಲು ಹಾರಲು ಆರಂಭಿಸಿತೆಂದರೆ, ಅದು ರಭಸದಿಂದ ತನ್ನ ರೆಕ್ಕೆಗಳನ್ನು ಬಡಿಯುತ್ತಾ ಅತಿಯಾದ ವೇಗದಲ್ಲಿ ಹಾರುತ್ತದೆ.

ಮರಿಗಳು ಎಂಟು ತಿಂಗಳ ಪ್ರಾಯದವುಗಳಾದಾಗ, ಅವು ತಮ್ಮ ತಂದೆತಾಯಿಯನ್ನು ಬಿಟ್ಟುಹೋಗಲು ಸಿದ್ಧವಾಗಿರುತ್ತವೆ ಮತ್ತು ಸ್ವತಃ ತಮ್ಮ ಆರೈಕೆ ಮಾಡಿಕೊಳ್ಳಲು ಆರಂಭಿಸುತ್ತವೆ. ಅವು ಅಲ್ಲಿಂದ ಹೊರಡುವುದರಿಂದ, ಸಂತತಿಯನ್ನು ಬೆಳೆಸುವ ಮುಂದಿನ ಸುತ್ತಿಗಾಗಿ ತಾಯಿ ನವಿಲು ಸಿದ್ಧತೆಗಳನ್ನು ಮಾಡಿಕೊಳ್ಳಲು ಸಹಾಯವಾಗುತ್ತದೆ. ಆ ಮರಿಗಳಲ್ಲಿ, ಚಿಕ್ಕ ಗಂಡು ನವಿಲುಗಳು ಸುಮಾರು ಎಂಟು ತಿಂಗಳ ಪ್ರಾಯದಲ್ಲಿ ತಮ್ಮ ವೈಶಿಷ್ಟ್ಯವಾಗಿರುವ ಹಿಂಜೋಲನ್ನು ಬೆಳೆಸಿಕೊಳ್ಳಲು ಆರಂಭಿಸುತ್ತವೆ. ಆದರೆ ಅವು ನಾಲ್ಕು ವರ್ಷ ಪ್ರಾಯದವುಗಳಾದಾಗ ಮಾತ್ರ ಅವುಗಳಿಗೆ ಪೂರ್ಣವಾದ ಗರಿಗಳಿಂದ ಕೂಡಿರುವ ಹಿಂಜೋಲು ಬೆಳೆದಿರುತ್ತದೆ. ಅಷ್ಟರಲ್ಲಿ ಅವು ತಮ್ಮ ಸ್ವಂತ ಕುಟುಂಬವನ್ನು ಆರಂಭಿಸಲು ಸಿದ್ಧವಾಗಿರುತ್ತವೆ.

ಇತಿಹಾಸದಲ್ಲಿ ನವಿಲು

ಪುರಾತನ ಗ್ರೀಸ್‌, ರೋಮ್‌ ಮತ್ತು ಭಾರತದ ತೋಟಗಳಲ್ಲಿ ನವಿಲುಗಳು ವಿಜೃಂಭಿಸುತ್ತಿದ್ದವು. ಸಾವಿರಾರು ವರ್ಷಗಳ ವರೆಗೆ ಭಾರತದ ರಾಜರ ಆಸ್ಥಾನಗಳಲ್ಲಿನ ಪೈಂಟಿಂಗ್‌, ಶಿಲ್ಪಕಲೆ ಮತ್ತು ಇತರ ಅಲಂಕೃತ ವಸ್ತುಗಳಲ್ಲಿ ನವಿಲುಗಳನ್ನು ವಿಶಿಷ್ಟವಾಗಿ ಚಿತ್ರಿಸಲಾಗುತ್ತಿತ್ತು. ಅಷ್ಟುಮಾತ್ರವಲ್ಲ, ಭಾರತದ ಸಿರಿಸಂಪತ್ತಿನ ಅತ್ಯಂತ ಪ್ರಾಮುಖ್ಯ ಉದಾಹರಣೆಗಳಲ್ಲಿ ನವಿಲು ಸಿಂಹಾಸನ (ಪೀಕಾಕ್‌ ಥ್ರೋನ್‌)ವು ಒಂದಾಗಿ ಪರಿಗಣಿಸಲ್ಪಟ್ಟಿತ್ತು. ಸಿಂಹಾಸನದ ಮೇಲ್ಪದರದಲ್ಲಿ ಅಸಂಖ್ಯಾತ ವಜ್ರಗಳು ಅಳವಡಿಸಲ್ಪಟ್ಟಿದ್ದು, ಇದರಲ್ಲಿ 108 ಮಾಣಿಕ್ಯಗಳು ಮತ್ತು 116 ಪಚ್ಚೆಕಲ್ಲುಗಳನ್ನು ಅಲಂಕರಿಸಲಾಗಿತ್ತು ಎಂದು ವರದಿಸಲಾಗುತ್ತದೆ. ಅದರ ಮೇಲ್ಕಟ್ಟಿನ ಮೇಲೆ ಚಿನ್ನದ ಒಂದು ನವಿಲು ಇತ್ತು, ಮತ್ತು ಇದರಿಂದಲೇ ಇದಕ್ಕೆ ಆ ಹೆಸರು ಬಂತು. ಅತ್ಯಂತ ಪ್ರಾಮುಖ್ಯವಾದ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಮಾತ್ರ ಈ ಸಿಂಹಾಸನವನ್ನು ಜೋಡಿಸಿ, ಉಪಯೋಗಿಸಲಾಗುತ್ತಿತ್ತು.

ಅರಸನಾದ ಸೊಲೊಮೋನನು ಆಮದು ಮಾಡಿಕೊಂಡ ಅಮೂಲ್ಯವಾದ ವಸ್ತುಗಳಲ್ಲಿ ನವಿಲುಗಳೂ ಇದ್ದವು ಎಂದು ಬೈಬಲ್‌ ಇತಿಹಾಸವು ತೋರಿಸುತ್ತದೆ. ಅವನ ರಾಜವೈಭವದ ತೋಟಗಳಲ್ಲಿ ನವಿಲುಗಳು ಬಿಂಕದಿಂದ ಓಡಾಡುತ್ತಿರುವುದನ್ನು ಊಹಿಸಿಕೊಳ್ಳುವುದು ತುಂಬ ಆಸಕ್ತಿಕರವಾದ ವಿಷಯವಾಗಿದೆ. (1 ಅರಸುಗಳು 10:​22, 23) ಒಬ್ಬ ಬುದ್ಧಿವಂತ ವಿನ್ಯಾಸಕನಿದ್ದಾನೆ ಎಂಬುದನ್ನು ಈ ಪಕ್ಷಿಗಳು ಖಂಡಿತವಾಗಿಯೂ ನಮಗೆ ತಿಳಿಯಪಡಿಸುತ್ತವೆ. ಕಣ್ಣುಕೋರೈಸುವಂಥ ಬಣ್ಣಗಳಿಂದ ಕೂಡಿರುವ ಬೀಸಣಿಗೆಯಂಥ ಗರಿಗಳುಳ್ಳ ಹಿಂಜೋಲಿನೊಂದಿಗೆ ನವಿಲು ನರ್ತಿಸುವಾಗ, ‘ಸಮಸ್ತವನ್ನು ಸೃಷ್ಟಿಸಿದಂಥ’ ದೇವರಾಗಿರುವ ಯೆಹೋವನ ಕಲಾತ್ಮಕ ಸಾಮರ್ಥ್ಯಗಳನ್ನು ನೋಡಿ ಒಬ್ಬನು ಖಂಡಿತವಾಗಿಯೂ ಆಶ್ಚರ್ಯಚಕಿತನಾಗುತ್ತಾನೆ.​—⁠ಪ್ರಕಟನೆ 4:⁠11. (g03 6/22)

[ಪಾದಟಿಪ್ಪಣಿ]

^ ಈ ಹಿಂಜೋಲಿನ ಗರಿಗಳು ಈ ಪಕ್ಷಿಯ ಬಾಲದಿಂದಲ್ಲ ಬದಲಾಗಿ ಅದರ ಬೆನ್ನಿನ ಮೇಲೆ ಬೆಳೆಯುತ್ತವೆ. ಗಂಡು ನವಿಲು ತನ್ನ ಬಾಲದ ಪುಕ್ಕಗಳನ್ನು ಉಪಯೋಗಿಸಿ ಅದರ ಹಿಂಜೋಲಿನ ಗರಿಗಳನ್ನು ನೇರವಾಗಿ ಮೇಲಕ್ಕೆ ಎತ್ತುತ್ತದೆ.

[ಪುಟ 18ರಲ್ಲಿರುವ ಚಿತ್ರ]

ಹೆಣ್ಣು ನವಿಲು ಯಾವಾಗಲೂ ಗಂಡು ನವಿಲಿನ ನೃತ್ಯಕ್ಕೆ ಮನಸೋಲುವುದಿಲ್ಲ

[ಕೃಪೆ]

© D. Cavagnaro/Visuals Unlimited

[ಪುಟ 19ರಲ್ಲಿರುವ ಚಿತ್ರಗಳು]

ಹೆಣ್ಣು ನವಿಲುಗಳು ಒಳ್ಳೇ ತಾಯಂದಿರಾಗಿರುತ್ತವೆ

[ಕೃಪೆ]

© 2001 Steven Holt/stockpix.com

[ಪುಟ 17ರಲ್ಲಿರುವ ಚಿತ್ರ ಕೃಪೆ]

2 ಮತ್ತು 17ನೆಯ ಪುಟಗಳಲ್ಲಿರುವ ನವಿಲು: Lela Jane Tinstman/Index Stock Photography

[ಪುಟ 18ರಲ್ಲಿರುವ ಚಿತ್ರ ಕೃಪೆ]

John Warden/Index Stock Photography