ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಕೆ ಈ ಪುನರುಜ್ಜೀವನ?

ಏಕೆ ಈ ಪುನರುಜ್ಜೀವನ?

ಏಕೆ ಈ ಪುನರುಜ್ಜೀವನ?

ಸುಮಾರು 40 ವರುಷಗಳ ಹಿಂದೆ, ಸರ್ವಸಾಮಾನ್ಯ ಕೀಟರವಾನಿತ ರೋಗಗಳಾದ ಮಲೇರಿಯ, ಪೀತಜ್ವರ, ಮತ್ತು ಡೆಂಗೀ ಜ್ವರವನ್ನು ಭೂಮಿಯ ಅನೇಕ ಪ್ರದೇಶಗಳಿಂದ ಹೆಚ್ಚುಕಡಿಮೆ ನಿರ್ಮೂಲಮಾಡಲಾಗಿದೆ ಎಂಬುದಾಗಿ ಭಾವಿಸಲಾಗಿತ್ತು. ಆದರೆ ನಂತರ ಅನಿರೀಕ್ಷಿತವಾದ ಘಟನೆಯೊಂದು ಸಂಭವಿಸಿತು. ಕೀಟರವಾನಿತ ರೋಗಗಳು ಪುನರುಜ್ಜೀವಿಸಲು ಆರಂಭಗೊಂಡವು.

ಏಕೆ? ಒಂದು ಕಾರಣವೇನೆಂದರೆ, ಕೆಲವು ಕೀಟಗಳು ಮತ್ತು ಅವುಗಳೊಳಗಿರುವ ಸೂಕ್ಷ್ಮಜೀವಿಗಳು, ಅವುಗಳನ್ನು ನಿಯಂತ್ರಿಸಲು ಉಪಯೋಗಿಸುವ ಕೀಟನಾಶಕಗಳ ಹಾಗೂ ಔಷಧಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡವು. ಕೀಟನಾಶಕಗಳ ಅತಿಯಾದ ಉಪಯೋಗದಿಂದ ಮಾತ್ರವಲ್ಲದೆ ಔಷಧಿಗಳ ದುರುಪಯೋಗದ ಮೂಲಕವೂ, ಹೊಂದಿಸಿಕೊಳ್ಳುವಂಥ ಈ ಸ್ವಾಭಾವಿಕ ಪ್ರಕ್ರಿಯೆಗೆ ಸಹಾಯವು ನೀಡಲ್ಪಟ್ಟಿತ್ತು. “ಅನೇಕಾನೇಕ ಬಡ ಕುಟುಂಬಗಳಲ್ಲಿ, ಜನರು ಔಷಧವನ್ನು ಪಡೆದುಕೊಂಡು, ತಾವು ರೋಗ ಲಕ್ಷಣಗಳಿಂದ ಉಪಶಮನ ಹೊಂದುವ ವರೆಗೆ ಮಾತ್ರ ಅದನ್ನು ಉಪಯೋಗಿಸಿ, ಉಳಿದದ್ದನ್ನು ಮುಂದೆ ಎಂದಾದರೂ ಅದೇ ಅಸ್ವಸ್ಥತೆ ಬಂದರೆ ಉಪಯೋಗಿಸಲು ಇಟ್ಟುಕೊಳ್ಳುತ್ತಾರೆ” ಎಂಬುದಾಗಿ ಸೊಳ್ಳೆ (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುತ್ತದೆ. ಈ ರೀತಿಯ ಅರ್ಧ ಗುಣಪಡಿಸುವಿಕೆಯ ಕಾರಣ, ಅತಿ ಬಲಶಾಲಿಯಾಗಿರುವ ಸೂಕ್ಷ್ಮಜೀವಿಗಳು ವ್ಯಕ್ತಿಯ ದೇಹದಲ್ಲಿ ಪಾರಾಗಿ ಉಳಿದು, ಔಷಧ-ನಿರೋಧಕ ಶಕ್ತಿಯನ್ನು ಹೊಂದಿರುವ ಒಂದು ಹೊಸ ಸಂತಾನವನ್ನು ಉತ್ಪಾದಿಸಬಹುದು.

ಹವಾಮಾನದಲ್ಲಿನ ಬದಲಾವಣೆ

ನಿಸರ್ಗದಲ್ಲಿನ ಮತ್ತು ಸಮಾಜದಲ್ಲಿನ ಬದಲಾವಣೆಯು, ಕೀಟರವಾನಿತ ರೋಗಗಳ ಪುನರುಜ್ಜೀವನಕ್ಕೆ ಒಂದು ಬಹುಮುಖ್ಯ ಅಂಶವಾಗಿವೆ. ಇದಕ್ಕೆ ಸೂಕ್ತವಾದ ಉದಾಹರಣೆಯು, ಭೌಗೋಳಿಕ ಹವಾಮಾನದಲ್ಲಿನ ಬದಲಾವಣೆಯೇ ಆಗಿದೆ. ಸದ್ಯಕ್ಕೆ ತಂಪಾದ ಹವಾಮಾನವಿರುವ ಪ್ರದೇಶದಲ್ಲಿ ರೋಗವಾಹಕ ಕೀಟಗಳ ವ್ಯಾಪ್ತಿಯನ್ನು ಹೆಚ್ಚಿಸಲು ಭೌಗೋಳಿಕ ಪರಿಸರದ ಕಾವೇರುವಿಕೆಯು ಕಾರಣವಾಗಬಹುದು ಎಂದು ಕೆಲವು ವಿಜ್ಞಾನಿಗಳು ನಿರೀಕ್ಷಿಸುತ್ತಾರೆ. ಇದು ಈಗಾಗಲೇ ಸಂಭವಿಸುತ್ತಿರಬಹುದು ಎಂಬುದಕ್ಕೆ ಕೆಲವು ಪುರಾವೆಗಳಿವೆ. ಹಾವರ್ಡ್‌ ಮೆಡಿಕಲ್‌ ಸ್ಕೂಲ್‌ನ, ಆರೋಗ್ಯ ಮತ್ತು ಭೌಗೋಳಿಕ ಪರಿಸರ ಕೇಂದ್ರದಲ್ಲಿರುವ ಡಾ. ಪಾಲ್‌ ಆರ್‌. ಎಪ್‌ಸ್ಟೈನ್‌ ಎಂಬವರು ತಿಳಿಸುವುದು: “ಇಂದು ಕೀಟಗಳೂ ಕೀಟರವಾನಿತ ರೋಗಗಳೂ ಆಫ್ರಿಕ, ಏಷ್ಯಾ, ಮತ್ತು ಲ್ಯಾಟಿನ್‌ ಅಮೆರಿಕದಲ್ಲಿ ಹೆಚ್ಚು ಎತ್ತರದ ಪ್ರದೇಶಗಳಲ್ಲಿವೆಯೆಂದು ವರದಿಸಲಾಗುತ್ತದೆ.” ಕೊಸ್ಟರೀಕದಲ್ಲಿ, ಡೆಂಗೀ ಜ್ವರವು ಪರ್ವತಗಳನ್ನು ದಾಟಿಹೋಗಿದೆ. ಇತ್ತೀಚಿನ ವರೆಗೆ ಈ ಪರ್ವತಗಳು ಆ ರೋಗವನ್ನು ಶಾಂತ ಸಾಗರ ಕರಾವಳಿಗೆ ಸೀಮಿತವಾಗಿಟ್ಟಿದ್ದವು, ಆದರೆ ಈಗ ಇದು ದೇಶದಲ್ಲೆಲ್ಲಾ ಪಸರಿಸಿದೆ.

ಆದರೆ ಬೆಚ್ಚಗಿನ ತಾಪಮಾನವು ಇದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಬಲ್ಲದು. ಕೆಲವು ಪ್ರದೇಶಗಳಲ್ಲಿ ಇದು ನದಿಗಳನ್ನು ಹಳ್ಳವನ್ನಾಗಿ ಮಾರ್ಪಡಿಸಿದೆ ಮತ್ತು ಇನ್ನಿತರ ಪ್ರದೇಶಗಳಲ್ಲಿ ಮಳೆ ಮತ್ತು ನೆರೆಗಳನ್ನು ಉಂಟುಮಾಡಿವೆ. ಈ ಮಳೆ ಮತ್ತು ನೆರೆಗಳ ಕಾರಣ, ಅಲ್ಲಲ್ಲಿ ಅಚಲ ನೀರಿನ ಹಳ್ಳಗಳು ಉಂಟಾಗಿವೆ. ಈ ಎರಡೂ ಸಂದರ್ಭಗಳಲ್ಲಿ, ಅಚಲ ನೀರು ಸೊಳ್ಳೆಗಳಿಗೆ ಸಂತಾನವೃದ್ಧಿಮಾಡುವ ಒಂದು ಸೂಕ್ತವಾದ ಸ್ಥಳವಾಗಿ ಪರಿಣಮಿಸಿದೆ. ಬಿಸಿ ತಾಪಮಾನವು, ಸೊಳ್ಳೆಗಳ ಸಂತಾನವೃದ್ಧಿಮಾಡುವ ಚಕ್ರದ ಪುನರಾವರ್ತನೆಯ ಅವಧಿಯನ್ನು ಕಡಿಮೆಗೊಳಿಸುತ್ತದೆ. ಈ ರೀತಿ ಮಾಡುವ ಮೂಲಕ, ಸೊಳ್ಳೆಗಳ ಸಂತಾನೋತ್ಪತ್ತಿ ವೇಗವು ಹೆಚ್ಚಾಗುತ್ತದೆ ಮತ್ತು ಅವು ವೃದ್ಧಿಯಾಗುವ ಕಾಲವನ್ನು ಹೆಚ್ಚಾಗಿಸುತ್ತದೆ. ಬೆಚ್ಚಗಿನ ತಾಪಮಾನದಲ್ಲಿ ಸೊಳ್ಳೆಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಬಿಸಿ ತಾಪಮಾನವು, ಸೊಳ್ಳೆಗಳ ಕರುಳಿನೊಳಗೂ ಪ್ರಭಾವವನ್ನು ಬೀರಿ ರೋಗವನ್ನು ಉಂಟುಮಾಡುವ ಸೂಕ್ಷ್ಮಜೀವಿಗಳ ಸಂತಾನೋತ್ಪತ್ತಿ ವೇಗವನ್ನು ಹೆಚ್ಚಿಸುತ್ತದೆ. ಈ ಮೂಲಕ, ಒಂದೇ ಕಡಿತದಿಂದ ಸೋಂಕನ್ನು ತಗಲಿಸುವ ಸಾಧ್ಯತೆಯು ಹೆಚ್ಚುತ್ತದೆ. ಆದರೂ, ಇತರ ಚಿಂತನೆಗಳೂ ಇವೆ.

ರೋಗದ ಬಗ್ಗೆ ಒಂದು ಅಧ್ಯಯನ

ಮಾನವ ಸಮಾಜದಲ್ಲಿನ ಬದಲಾವಣೆಯು ಸಹ ಕೀಟರವಾನಿತ ರೋಗಗಳಿಗೆ ನೆರವಾಗಬಲ್ಲದು. ಇದು ಹೇಗೆ ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಲು, ಕೀಟಗಳ ಪಾತ್ರವನ್ನು ನಾವು ಸೂಕ್ಷ್ಮವಾಗಿ ಪರೀಕ್ಷಿಸಬೇಕು. ಅನೇಕ ರೋಗಗಳು ಹರಡಲ್ಪಡುವ ವಿಭಿನ್ನ ಹಂತಗಳಲ್ಲಿ ಕೀಟವು ಕೇವಲ ಒಂದು ಹಂತವಾಗಿರಬಹುದು. ಒಂದು ಪ್ರಾಣಿ ಅಥವಾ ಹಕ್ಕಿಯು, ತನ್ನ ದೇಹದಲ್ಲಿ ಕೀಟಗಳನ್ನು ಹೊತ್ತುಕೊಂಡಿರುವ ಅಥವಾ ತನ್ನ ರಕ್ತಪ್ರವಾಹದಲ್ಲಿ ಸೂಕ್ಷ್ಮಜೀವಾಣುಗಳಿಗೆ ಆಶ್ರಯ ನೀಡುವ ಮೂಲಕ ಒಬ್ಬ ಆತಿಥೇಯನಂತೆ ರೋಗಕ್ಕೆ ಸೇವೆಸಲ್ಲಿಸಸಾಧ್ಯವಿದೆ. ಹೀಗೆ, ಸೂಕ್ಷ್ಮಜೀವಾಣುಗಳಿಗೆ ಆಶ್ರಯ ನೀಡುತ್ತಿರುವಾಗಲೂ ಈ ಆತಿಥೇಯರು ಜೀವದಿಂದಿರಬಲ್ಲರಾದರೆ, ಅವುಗಳು ಮುಂದಕ್ಕೆ ರೋಗಗಳ ಭಂಡಾರವಾಗಲೂಬಹುದು.

ಇಸವಿ 1975ರಲ್ಲಿ ಗುರುತಿಸಲ್ಪಟ್ಟ ಲೈಮ್‌ ರೋಗದ ಕುರಿತು ಪರಿಗಣಿಸಿರಿ. ಈ ರೋಗವು, ಅಮೆರಿಕದ ಕನೆಟಿಕಟ್‌ನ ಲೈಮ್‌ ಎಂಬ ಸ್ಥಳದಲ್ಲಿ ಮೊದಲಾಗಿ ಕಂಡುಹಿಡಿಯಲ್ಪಟ್ಟ ಕಾರಣ ಇದಕ್ಕೆ ಈ ಹೆಸರು ನೀಡಲ್ಪಟ್ಟಿತು. ಲೈಮ್‌ ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯವು, ಯೂರೋಪಿನಿಂದ ಬಂದ ಹಡಗುಗಳಲ್ಲಿ ಇದ್ದ ಇಲಿಗಳ ಅಥವಾ ಜಾನುವಾರುಗಳ ಮೂಲಕ ನೂರು ವರುಷಗಳ ಹಿಂದೆ ಉತ್ತರ ಅಮೆರಿಕಕ್ಕೆ ಬಂದಿರಬಹುದು. ಈ ಪುಟ್ಟ ಉಣ್ಣಿಹುಳು, ರೋಗಗ್ರಸ್ಥ ಪ್ರಾಣಿಯ ರಕ್ತವನ್ನು ಹೀರಿದ ನಂತರ, ಬ್ಯಾಕ್ಟೀರಿಯವು ಅದರ ಕರುಳಿನಲ್ಲಿ ಜೀವನಪರ್ಯಂತ ಉಳಿಯುತ್ತದೆ. ಮುಂದಕ್ಕೆ ಆ ಉಣ್ಣಿಹುಳು ಒಬ್ಬ ಮನುಷ್ಯನನ್ನೋ ಅಥವಾ ಪ್ರಾಣಿಯನ್ನೋ ಕಡಿದಾಗ, ತನ್ನಲ್ಲಿರುವ ಬ್ಯಾಕ್ಟೀರಿಯವನ್ನು ಕಡಿತಕ್ಕೆ ಬಲಿಯಾದ ಜೀವಿಯ ರಕ್ತಪ್ರವಾಹಕ್ಕೆ ರವಾನಿಸಸಾಧ್ಯವಿದೆ.

ಈಶಾನ್ಯ ಅಮೆರಿಕದಲ್ಲಿ, ಲೈಮ್‌ ರೋಗವು ಸ್ಥಳಿಕ ರೋಗವಾಗಿ ಪರಿಣಮಿಸಿದೆ ಏಕೆಂದರೆ ದೀರ್ಘಕಾಲದಿಂದ ಆ ರೋಗವು ಅಲ್ಲಿದೆ. ಲೈಮ್‌ ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯದ ಮುಖ್ಯ ಸ್ಥಳಿಕ ಭಂಡಾರವು ಬಿಳಿ ಕಾಲುಗಳುಳ್ಳ ಇಲಿಗಳಾಗಿವೆ. ಅಷ್ಟುಮಾತ್ರವಲ್ಲದೆ, ಈ ಇಲಿಗಳು ಉಣ್ಣಿಹುಳುಗಳಿಗೂ​—⁠ಮುಖ್ಯವಾಗಿ ಬೆಳೆಯುತ್ತಿರುವ ಹಂತಗಳಲ್ಲಿರುವ ಉಣ್ಣಿಹುಳುಗಳಿಗೆ​—⁠ಆತಿಥೇಯ ಪ್ರಾಣಿಯಾಗಿದೆ. ಪೂರ್ಣವಾಗಿ ಬೆಳೆದ ಉಣ್ಣಿಹುಳುಗಳು ಜಿಂಕೆಯ ಮೇಲೆ ತಮ್ಮ ಮನೆಯನ್ನು ಮಾಡಬಯಸಿ ಅಲ್ಲಿಯೇ ಉಣ್ಣುತ್ತ ಸಂಗಮಿಸುತ್ತವೆ. ರಕ್ತದಿಂದ ಹೊಟ್ಟೆ ತುಂಬಿದ ಬಳಿಕ, ಪೂರ್ಣವಾಗಿ ಬೆಳೆದ ಉಣ್ಣಿಹುಳು ಮೊಟ್ಟೆಯಿಡಲಿಕ್ಕಾಗಿ ನೆಲಕ್ಕೆ ಬೀಳುತ್ತವೆ. ಆ ಮೊಟ್ಟೆಯಿಂದ ಮರಿಗಳು ಬಂದು ಈ ರೀತಿಯಲ್ಲಿ ಪುನಃ ಚಕ್ರವು ಆರಂಭವಾಗುತ್ತದೆ.

ಪರಿಸ್ಥಿತಿಗಳಲ್ಲಿನ ಬದಲಾವಣೆ

ರೋಗಾಣುಗಳು ಮಾನವರಲ್ಲಿ ರೋಗವನ್ನು ಉಂಟುಮಾಡದೆ, ಅನೇಕ ವರುಷಗಳಿಂದ ಪ್ರಾಣಿಗಳ ಮತ್ತು ಕೀಟಗಳ ಜೊತೆಗೆ ವಾಸಿಸಿವೆ. ಆದರೆ ಪರಿಸ್ಥಿತಿಗಳಲ್ಲಿನ ಬದಲಾವಣೆಯು, ಒಂದು ಸ್ಥಳಿಕ ರೋಗವನ್ನು ಸಾಂಕ್ರಾಮಿಕ ರೋಗವಾಗಿ ಅಂದರೆ ಸಮಾಜದಲ್ಲಿರುವ ಅನೇಕರನ್ನು ಬಾಧಿಸುವ ರೋಗವಾಗಿ ಮಾರ್ಪಡಿಸಸಾಧ್ಯವಿದೆ. ಲೈಮ್‌ ರೋಗದ ವಿಷಯದಲ್ಲಿ, ಪರಿಸ್ಥಿತಿಗಳಲ್ಲಿ ಯಾವ ಬದಲಾವಣೆಯಾಯಿತು?

ಗತಕಾಲದಲ್ಲಿ, ಪರಭಕ್ಷಕ ಪ್ರಾಣಿಗಳ ಕಾರಣ ಜಿಂಕೆಗಳ ಸಂಖ್ಯೆಯು ನಿಯಂತ್ರಿಸಲ್ಪಟ್ಟಿತ್ತು. ಹೀಗೆ, ಅವುಗಳು ಜಿಂಕೆ ಉಣ್ಣಿಹುಳುಗಳ ಮತ್ತು ಮಾನವರ ಮಧ್ಯೆ ಸಂಪರ್ಕವನ್ನು ಕಡಿಮೆಗೊಳ್ಳಿಸುವುದರಲ್ಲಿ ಸಹಾಯಮಾಡಿದವು. ಅಷ್ಟುಮಾತ್ರವಲ್ಲದೆ ಅಮೆರಿಕದ ಪೂರ್ವ ಭಾಗದಲ್ಲಿ, ವ್ಯವಸಾಯ ಮಾಡಲಿಕ್ಕಾಗಿ ಯೂರೋಪಿಯನ್‌ ಆದಿವಾಸಿಗಳು ಮರಗಳನ್ನು ಕಡಿದುಹಾಕಿದಾಗ ಜಿಂಕೆಯ ಸಂಖ್ಯೆಯು ಇನ್ನಷ್ಟೂ ಕಡಿಮೆಯಾಯಿತು ಮತ್ತು ಜಿಂಕೆಯನ್ನು ಹಿಡಿದು ತಿನ್ನುವ ಪರಭಕ್ಷಕ ಪ್ರಾಣಿಗಳು ಸಹ ಆ ಸ್ಥಳವನ್ನು ಬಿಟ್ಟುಹೋದವು. ಆದರೆ, ಇಸವಿ 1800ರ ಮಧ್ಯಭಾಗದಂದಿನಿಂದ, ಬೇಸಾಯಗಾರರು ಅಮೆರಿಕದ ಪಶ್ಚಿಮ ಭಾಗಕ್ಕೆ ಸ್ಥಳಾಂತರಿಸಿದ ಕಾರಣ ಜಮೀನುಗಳು ಬರಿದಾದವು ಮತ್ತು ಕ್ರಮೇಣ ಕಾಡು ಮರಗಳು ಪುನಃ ಬೆಳೆಯಲಾರಂಭಿಸಿ ಭೂಮಿಯನ್ನು ಆವರಿಸಿದವು. ಇದರಿಂದಾಗಿ, ಜಿಂಕೆಗಳು ಪುನಃ ಈ ಸ್ಥಳಕ್ಕೆ ಹಿಂದಿರುಗಿ ಬಂದವು, ಆದರೆ ಅವುಗಳನ್ನು ಹಿಡಿದು ತಿನ್ನುವ ಪರಭಕ್ಷಕ ಪ್ರಾಣಿಗಳು ಹಿಂದಿರುಗಿ ಬರಲಿಲ್ಲ. ಈ ಕಾರಣ, ಜಿಂಕೆಗಳ ಸಂಖ್ಯೆಯು ಶೀಘ್ರವಾಗಿ ಹೆಚ್ಚಿತು ಮತ್ತು ಅದರೊಂದಿಗೆ ಉಣ್ಣಿಹುಳುಗಳ ಸಂಖ್ಯೆಯೂ ಹೆಚ್ಚಿತು.

ಸ್ವಲ್ಪ ಸಮಯದ ನಂತರ, ಲೈಮ್‌ ರೋಗದ ರೋಗಾಣು ಆಗಮಿಸಿ, ಅದು ಮಾನವರಿಗೆ ಯಾವುದೇ ಹಾನಿಯನ್ನುಂಟುಮಾಡುವ ಮುಂಚೆ ಅನೇಕ ದಶಕಗಳ ವರೆಗೆ ತನ್ನ ಆಶ್ರಯದಾತ ಪ್ರಾಣಿಗಳಲ್ಲಿ ನೆಲೆಸಿತ್ತು. ಆದರೆ ಕಾಡಿನ ಅಂಚಿನಲ್ಲಿ ಉಪನಗರಗಳು ಕಟ್ಟಲ್ಪಡಲಾರಂಭಿಸಿದಾಗ, ಅಧಿಕ ಸಂಖ್ಯೆಯಲ್ಲಿ ಮಕ್ಕಳೂ ಪ್ರಾಯಸ್ಥರೂ ಉಣ್ಣಿಹುಳುಗಳಿದ್ದ ಪ್ರಾಂತವನ್ನು ಪ್ರವೇಶಿಸಲಾರಂಭಿಸಿದರು. ಹೀಗೆ, ಉಣ್ಣಿಹುಳುಗಳು ಮನುಷ್ಯನಲ್ಲಿ ಸೇರಿಕೊಂಡವು ಮತ್ತು ಮನುಷ್ಯನಿಗೆ ಲೈಮ್‌ ರೋಗವು ಸೋಂಕಿತು.

ಅಸ್ಥಿರವಾದ ಲೋಕದಲ್ಲಿ ರೋಗ

ಈ ಮೊದಲು ಹೇಳಿದ ಸಂಗತಿಯು, ರೋಗಗಳು ಬೆಳೆಯುವ ಮತ್ತು ಹರಡುವ ವಿಧಗಳಲ್ಲಿ ಕೇವಲ ಒಂದನ್ನು ತೋರಿಸಿತು ಮತ್ತು ಅದು ಪುನರುಜ್ಜೀವನಗೊಳ್ಳಲು ಮನುಷ್ಯನ ಕೃತ್ಯಗಳು ಹೇಗೆ ಕಾರಣಭೂತವಾಗಿವೆ ಎಂಬುದಕ್ಕೆ ಕೇವಲ ಒಂದು ಉದಾಹರಣೆಯನ್ನು ತೋರಿಸಿತು. “ಹೆಚ್ಚುಕಡಿಮೆ ಎಲ್ಲಾ ಹೊಸ ರೋಗಗಳ ಪುನರುಜ್ಜೀವನಕ್ಕೆ ಮಾನವನ ಮಧ್ಯೆಬರುವಿಕೆಯೇ ಕಾರಣವಾಗಿದೆ,” ಎಂಬುದಾಗಿ ಪರಿಸರವಾದಿ ಯೂಜೀನ್‌ ಲಿಂಡೆನ್‌, ಅಡಚಣೆಯಿಲ್ಲದ ದೃಷ್ಟಿಯಲ್ಲಿ ಭವಿಷ್ಯತ್ತು (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಬರೆಯುತ್ತಾರೆ. ಮಾನವನ ಮಧ್ಯೆಬರುವಿಕೆಯ ಇನ್ನು ಕೆಲವು ಉದಾಹರಣೆಗಳು: ಆಧುನಿಕ ದಿನಗಳ ಸಂಚಾರ ಜನಪ್ರಿಯತೆ ಮತ್ತು ತೀವ್ರತೆಯು, ರೋಗಾಣುಗಳನ್ನು ಮತ್ತು ಅವುಗಳ ವಾಹಕಗಳನ್ನು ಲೋಕಾದ್ಯಂತ ಹರಡಿಸಲು ಕಾರಣವಾಗಿರಸಾಧ್ಯವಿದೆ. ದೊಡ್ಡ ಹಾಗೂ ಚಿಕ್ಕ ಜೀವಿಗಳು ಹುಟ್ಟಿ ಬೆಳೆಯುವ ಸ್ಥಳದ ಕೆಡಿಸುವಿಕೆಯು, ಜೈವಿಕ ವೈವಿಧ್ಯತೆಗೆ ಗಂಡಾಂತರವನ್ನೊಡ್ಡಿದೆ. ಲಿಂಡೆನ್‌ ತಿಳಿಸುವುದು: “ಮಾಲಿನ್ಯವು ಗಾಳಿ ಮತ್ತು ನೀರಿನ ಮೇಲೆಯೂ ಪ್ರಭಾವವನ್ನು ಬೀರುತ್ತದೆ ಮತ್ತು ಪ್ರಾಣಿಗಳ ಹಾಗೂ ಮಾನವರ ಸೋಂಕುರಕ್ಷಣಾ ವ್ಯವಸ್ಥೆಗಳನ್ನು ಬಲಹೀನಗೊಳಿಸುತ್ತದೆ.” ಇವರು ಡಾ. ಎಪ್‌ಸ್ಟೈನ್‌ರ ಮಾತನ್ನು ಉದ್ಧರಿಸುತ್ತಾ ಹೀಗೆ ಹೇಳುತ್ತಾರೆ: “ಪರಿಸರ ವಿಜ್ಞಾನದೊಂದಿಗೆ ಮಾನವನ ಅಕ್ರಮ ವರ್ತನೆಯು, ಭೌಗೋಳಿಕ ಸೋಂಕುರಕ್ಷಣಾ ವ್ಯವಸ್ಥೆಯನ್ನು ಬಲಹೀನಗೊಳಿಸಿದೆ. ಈ ಮೂಲಕ, ಸೂಕ್ಷ್ಮಜೀವಿಗಳಿಗೆ ಅನುಕೂಲಕರ ಸಂದರ್ಭಗಳು ಹುಟ್ಟಿವೆ.”

ರಾಜಕೀಯ ಅಸ್ಥಿರತೆಯು, ಪರಿಸರ ವ್ಯವಸ್ಥೆಗೆ ಹಾನಿಯನ್ನುಂಟುಮಾಡುವಂಥ ಹಾಗೂ ಆರೋಗ್ಯಾರೈಕೆ ಮತ್ತು ಆಹಾರ ಸರಬರಾಯಿಯನ್ನು ಸಾಧ್ಯಗೊಳಿಸುವ ಮೂಲಭೂತ ವ್ಯವಸ್ಥೆಗಳನ್ನು ನಾಶಮಾಡುವಂಥ ಯುದ್ಧಗಳಿಗೆ ನಡೆಸುತ್ತದೆ. ಅಷ್ಟುಮಾತ್ರವಲ್ಲದೆ, ನೈಸರ್ಗಿಕ ಇತಿಹಾಸಕ್ಕೆ ಸಂಬಂಧಿಸಿದ ಅಮೆರಿಕದ ವಸ್ತು ಪ್ರದರ್ಶನಾಲಯದ ಬೈಯೋಬುಲೆಟಿನ್‌ ತಿಳಿಸುವುದು: “ಆಹಾರದ ಕೊರತೆಯಿರುವ ಮತ್ತು ಬಲಹೀನವಾಗಿರುವ ನಿರಾಶ್ರಿತರು, ಅನೇಕವೇಳೆ ನಿರಾಶ್ರಿತ ಶಿಬಿರಗಳಿಗೆ ಒತ್ತಾಯಪೂರ್ವಕವಾಗಿ ಕಳುಹಿಸಲ್ಪಡುತ್ತಾರೆ. ಅಲ್ಲಿ ಅತಿಯಾದ ಜನಸಂಖ್ಯೆ ಮತ್ತು ಕೊಳಕಾದ ಪರಿಸ್ಥಿತಿಗಳ ಕಾರಣದಿಂದ, ಜನರು ಅನೇಕ ರೀತಿಯ ಸೋಂಕು ರೋಗಗಳಿಗೆ ಬಲಿಯಾಗುತ್ತಾರೆ.”

ಆರ್ಥಿಕ ಅಸ್ಥಿರತೆಯು, ಜನರು ರಾಷ್ಟ್ರದ ಮೇರೆಗಳನ್ನು ದಾಟಿ, ಬೇರೆ ಬೇರೆ ಸ್ಥಳಗಳಿಗೆ, ಮುಖ್ಯವಾಗಿ ಜನರಿಂದ ಕಿಕ್ಕಿರಿದಿರುವ ನಗರ ಕ್ಷೇತ್ರಗಳಿಗೆ ವಲಸೆಹೋಗುವಂತೆ ಒತ್ತಾಯಿಸುತ್ತದೆ. ಬೈಯೋಬುಲೆಟಿನ್‌ ವಿವರಿಸುವುದು: “ಜನರಿಂದ ಕಿಕ್ಕಿರಿದಿರುವ ಸ್ಥಳಗಳು ರೋಗಾಣುಗಳಿಗೆ ಅತಿ ಪ್ರಿಯವಾದ ತಾಣಗಳಾಗಿವೆ.” ಪಟ್ಟಣದ ಜನಸಂಖ್ಯೆಯು ತೀವ್ರಗತಿಯಲ್ಲಿ ಹೆಚ್ಚಾದಂತೆ, “ಜನಸಾಮಾನ್ಯರಿಗೆ ಅನೇಕವೇಳೆ ಅಗತ್ಯವಾಗಿರುವ ಮೂಲಭೂತ ಶಿಕ್ಷಣ, ಪೋಷಣೆ, ಮತ್ತು ಲಸಿಕೆಯನ್ನು ನೀಡುವ ಕಾರ್ಯಕ್ರಮಗಳಂಥ ಆರೋಗ್ಯಾರೈಕೆ ಕಾರ್ಯಕ್ರಮಗಳನ್ನು ಸಹ ಅದೇ ಪ್ರಮಾಣದಲ್ಲಿ ಹೆಚ್ಚಿಸುವುದು ಅಸಾಧ್ಯ.” ಜನಸಂಖ್ಯೆಯ ಹೆಚ್ಚುವಿಕೆಯು, ನೀರು, ಚರಂಡಿ ವ್ಯವಸ್ಥೆ, ಮತ್ತು ಕಚಡ ತೊಲಗಿಸುವ ವ್ಯವಸ್ಥೆಗಳ ಮೇಲೆ ಅತಿಯಾದ ಹೊರೆಯನ್ನು ಉಂಟುಮಾಡುತ್ತದೆ. ಇದು, ಆರೋಗ್ಯಕರ ಪರಿಸ್ಥಿತಿಯನ್ನೂ ವೈಯಕ್ತಿಕ ಶುದ್ಧತೆಯನ್ನೂ ಕಾಪಾಡಿಕೊಳ್ಳುವುದನ್ನು ಕಷ್ಟಕರವನ್ನಾಗಿ ಮಾಡುತ್ತದೆ. ಆದರೆ ಅದೇ ಸಮಯದಲ್ಲಿ ಇದು ಕೀಟಗಳಿಗೆ ಮತ್ತು ಇತರ ರೋಗವಾಹಕಗಳಿಗೆ ಸೂಕ್ತವಾದ ಪರಿಸರವನ್ನು ಸೃಷ್ಟಿಸುತ್ತದೆ. ಹೀಗಿದ್ದರೂ, ಪರಿಸ್ಥಿತಿಯು ಆಶಾಹೀನವಾಗಿರುವುದಿಲ್ಲ ಎಂಬುದನ್ನು ಮುಂದಿನ ಲೇಖನವು ತೋರಿಸಿಕೊಡುತ್ತದೆ.(g03 5/22)

[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಹೆಚ್ಚುಕಡಿಮೆ ಎಲ್ಲಾ ಹೊಸ ರೋಗಗಳ ಪುನರುಜ್ಜೀವನಕ್ಕೆ ಮಾನವನ ಮಧ್ಯೆಬರುವಿಕೆಯೇ ಕಾರಣವಾಗಿದೆ”

[ಪುಟ 7ರಲ್ಲಿರುವ ಚೌಕ/ಚಿತ್ರ]

ವೆಸ್ಟ್‌ ನೈಲ್‌ ವೈರಸ್‌ ಅಮೆರಿಕವನ್ನು ಆಕ್ರಮಿಸುತ್ತದೆ

ಇಸವಿ 1937ರಲ್ಲಿ, ಸೊಳ್ಳೆಗಳಿಂದ ರವಾನಿಸಲ್ಪಡುವ ವೆಸ್ಟ್‌ ನೈಲ್‌ ವೈರಸ್‌ ಯುಗಾಂಡದಲ್ಲಿ ಪ್ರಥಮವಾಗಿ ಕಂಡುಬಂತು. ಆದರೆ ತದನಂತರ, ಮಧ್ಯ ಪೂರ್ವ, ಏಷ್ಯಾ, ಒಷಿಯಾನಿಯ, ಮತ್ತು ಯೂರೋಪ್‌ ಮುಂತಾದ ದೇಶಗಳಲ್ಲಿಯೂ ಅದು ಕಂಡುಬಂತು. ಇಸವಿ 1999ರ ವರೆಗೆ ಪಶ್ಚಿಮ ಗೋಳಾರ್ಧದ ಪ್ರದೇಶಗಳಲ್ಲಿ ಈ ವೈರಸ್‌ ಕಂಡುಬರಲಿಲ್ಲ. ಆದರೆ ಆ ಇಸವಿಯಂದಿನಿಂದ, ಅಮೆರಿಕದಲ್ಲಿ ಸುಮಾರು 3,000ಕ್ಕಿಂತಲೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆಂದು ವರದಿಸಲ್ಪಟ್ಟಿದೆ ಮತ್ತು 200ಕ್ಕಿಂತಲೂ ಹೆಚ್ಚು ವ್ಯಕ್ತಿಗಳು ಮೃತರಾಗಿದ್ದಾರೆ.

ಕೆಲವರಿಗೆ ಫ್ಲೂವಿನಂಥ ರೋಗಲಕ್ಷಣಗಳು ಉಂಟಾಗುವುದಾದರೂ, ಸೋಂಕಿತರಾದ ಹೆಚ್ಚಿನ ಜನರಿಗೆ ತಾವು ಸೋಂಕಿತರಾಗಿದ್ದೇವೆಂದು ತಿಳಿದಿರುವುದಿಲ್ಲ. ಆದರೆ ಒಂದು ಸಣ್ಣ ಪ್ರತಿಶತದಷ್ಟು ಜನರಿಗೆ ಗಂಭೀರವಾದ ಅಸ್ವಸ್ಥತೆಗಳಾದ ಮಸ್ತಿಷ್ಕೋದ್ರೇಕ ಮತ್ತು ಸ್ಪೈನಲ್‌ ಮೆನಿಂಜೈಟಿಸ್‌ ಉಂಟಾಗುತ್ತವೆ. ಇಂದಿನ ವರೆಗೂ, ವೆಸ್ಟ್‌ ನೈಲ್‌ ವೈರಸ್‌ ರೋಗ ನಿವಾರಣೆಗೆ ಯಾವುದೇ ಲಸಿಕೆಯಾಗಲಿ ಖಚಿತ ಔಷಧವಾಗಲಿ ಲಭ್ಯವಿಲ್ಲ. ವೆಸ್ಟ್‌ ನೈಲ್‌ ವೈರಸ್‌, ಅಂಗಗಳ ಸ್ಥಳಾಂತರ ಅಥವಾ ಒಬ್ಬ ಸೋಂಕಿತನಾದ ದಾತನ ರಕ್ತದ ಪೂರಣದಿಂದಲೂ ಬರಬಹುದು ಎಂಬುದಾಗಿ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟು ಕೇಂದ್ರಗಳು ಎಚ್ಚರಿಸುತ್ತವೆ. “ರಕ್ತದಲ್ಲಿ ವೆಸ್ಟ್‌ ನೈಲ್‌ ವೈರಸ್‌ ಇದೆಯೋ ಎಂಬುದನ್ನು ಪರೀಕ್ಷಿಸಲು ಯಾವ ಮಾರ್ಗವೂ ಸದ್ಯದಲ್ಲಿ ಲಭ್ಯವಿಲ್ಲ,” ಎಂಬುದಾಗಿ ಇಸವಿ 2002ರ ರಾಯ್ಟರ್ಸ್‌ ನ್ಯೂಸ್‌ ವರದಿಸಿದೆ.

[ಕೃಪೆ]

CDC/James D. Gathany

[ಪುಟ 8, 9ರಲ್ಲಿರುವ ಚೌಕ/ಚಿತ್ರ]

ನೀವು ನಿಮ್ಮನ್ನೇ ಹೇಗೆ ರಕ್ಷಿಸಿಕೊಳ್ಳಸಾಧ್ಯವಿದೆ?ಮಾಡಬೇಕಾದ ಮತ್ತು ಮಾಡಬಾರದಾದ ಕೆಲವು ಸಂಗತಿಗಳು

ಎಚ್ಚರ!ವು, ಆರೋಗ್ಯವಂತರಾಗಿ ಉಳಿಯಲು ಅಗತ್ಯವಾಗಿರುವ ಕೆಲವು ಸಲಹೆಸೂಚನೆಗಳಿಗಾಗಿ, ಸೋಂಕಿತ ಮತ್ತು ರೋಗದಿಂದ ಬಾಧಿಸಲ್ಪಟ್ಟಿರುವ ವಿವಿಧ ಪ್ರದೇಶಗಳಲ್ಲಿನ ಜನರನ್ನು ಲೋಕವ್ಯಾಪಕವಾಗಿ ಭೇಟಿನೀಡಿತು. ಅವರ ಸಲಹೆಯು, ನಿಮ್ಮ ಪ್ರದೇಶದಲ್ಲಿಯೂ ಉಪಯುಕ್ತಕರವಾಗಿದೆಯೆಂದು ನಿಮಗೆ ಅನಿಸಬಹುದು.

ಶುದ್ಧತೆ​—⁠ರೋಗವನ್ನು ತಡೆಗಟ್ಟುವ ಮೊದಲನೇ ಅಸ್ತ್ರ

ನಿಮ್ಮ ಮನೆಯನ್ನು ಶುದ್ಧವಾಗಿಡಿರಿ

“ಆಹಾರವನ್ನು ಶೇಖರಿಸಿಡುವ ಪಾತ್ರೆಗಳನ್ನು ಮುಚ್ಚಿಡಿರಿ. ಬೇಯಿಸಿದ ಆಹಾರವನ್ನು ಬಡಿಸುವ ವರೆಗೆ ಮುಚ್ಚಿಡಿರಿ. ಆಹಾರವು ನೆಲಕ್ಕೆ ಚೆಲ್ಲಿದರೆ ಅದನ್ನು ಕೂಡಲೆ ಶುಚಿಮಾಡಿರಿ. ಉಪಯೋಗಿಸಿದ ಪಾತ್ರೆಗಳನ್ನು ಮರುದಿನದ ವರೆಗೆ ತೊಳೆಯದೆ ಇಡಬೇಡಿರಿ ಅಥವಾ ಮರುದಿನ ಬೆಳಿಗ್ಗೆ ಬಿಸಾಡುವ ಆಹಾರ ಪದಾರ್ಥವನ್ನು ಮನೆಯ ಹೊರಗೆ ಇಡಬೇಡಿರಿ. ಅದನ್ನು ಮುಚ್ಚಿಡಿರಿ ಅಥವಾ ಹೂಣಿಡಿರಿ, ಏಕೆಂದರೆ ರಾತ್ರಿಯಲ್ಲಿ ಆಹಾರವನ್ನು ಹುಡುಕುತ್ತಾ ಕೀಟಗಳು ಮತ್ತು ಇಲಿ ಮುಂತಾದ ಪ್ರಾಣಿಗಳು ಬರುತ್ತವೆ. ಅಷ್ಟುಮಾತ್ರವಲ್ಲದೆ, ಮನೆಯ ನೆಲ ಮಣ್ಣಿನದ್ದಾಗಿರುವಲ್ಲಿ ಅದಕ್ಕೆ ತೆಳ್ಳಗಿನ ಗಾರೆಹಾಕಿದರೆ, ಅದು ಮನೆಯನ್ನು ಶುದ್ಧವಾಗಿಡುತ್ತದೆ ಮತ್ತು ಕೀಟಗಳಿಂದ ಮುಕ್ತವಾಗಿರಿಸುತ್ತದೆ.”​—⁠ಆಫ್ರಿಕ.

“ಹಣ್ಣುಹಂಪಲು ಅಥವಾ ಕೀಟಗಳನ್ನು ಆಕರ್ಷಿಸುವ ಇನ್ನಾವುದೇ ವಸ್ತುವನ್ನು ಮನೆಯಿಂದ ದೂರವಾಗಿಡಿರಿ. ಆಡುಗಳು, ಹಂದಿಗಳು, ಕೋಳಿಗಳು ಮುಂತಾದ ಪ್ರಾಣಿಗಳನ್ನು ಮನೆಯಿಂದ ಹೊರಗಿಡಿರಿ. ಮನೆಯ ಹೊರಗಡೆ ಇರುವ ಶೌಚಾಲಯದ ಬಾಗಿಲನ್ನು ಮುಚ್ಚಿಡಿರಿ. ಪ್ರಾಣಿಯ ಮಲವನ್ನು ಕೂಡಲೆ ಹೂಣಿಡಿರಿ ಅಥವಾ ನೊಣಗಳಿಂದ ದೂರವಿಡಲು ಅದನ್ನು ಸುಣ್ಣದ ಪುಡಿಯಿಂದ ಮುಚ್ಚಿಡಿರಿ. ನೆರೆಯವರು ಈ ವಿಷಯಗಳನ್ನು ಮಾಡದಿದ್ದರೂ, ನೀವು ಇವುಗಳನ್ನು ಮಾಡುವ ಮೂಲಕ ಕೀಟಗಳನ್ನು ತಕ್ಕಮಟ್ಟಿಗೆ ದೂರವಿಡಬಹುದು ಮತ್ತು ಒಂದು ಒಳ್ಳೆಯ ಮಾದರಿಯನ್ನೂ ಇಡಬಹುದು.”​—⁠ದಕ್ಷಿಣ ಅಮೆರಿಕ.

[ಚಿತ್ರ]

ಆಹಾರವನ್ನು ಅಥವಾ ಕಸದ ತೊಟ್ಟಿಯನ್ನು ತೆರೆದಿಡುವುದು, ಕೀಟಗಳನ್ನು ನಿಮ್ಮೊಂದಿಗೆ ಉಣ್ಣಲು ಆಮಂತ್ರಿಸುವಂತಿರುತ್ತದೆ

ವೈಯಕ್ತಿಕ ಶುದ್ಧತೆ

“ಸಾಬೂನು ಒಂದು ದುಬಾರಿ ವಸ್ತುವಲ್ಲ. ಆದುದರಿಂದ, ಕೈಗಳನ್ನು ಮತ್ತು ಬಟ್ಟೆಗಳನ್ನು ಅನೇಕಬಾರಿ​—⁠ಮುಖ್ಯವಾಗಿ ಮನುಷ್ಯರ ಅಥವಾ ಪ್ರಾಣಿಗಳ ಸಂಪರ್ಕದ ಬಳಿಕ​—⁠ತೊಳೆಯಿರಿ. ಸತ್ತ ಪ್ರಾಣಿಗಳನ್ನು ಮುಟ್ಟಬೇಡಿರಿ. ನಿಮ್ಮ ಕೈಗಳಿಂದ ಬಾಯಿಯನ್ನು, ಮೂಗನ್ನು, ಅಥವಾ ಕಣ್ಣುಗಳನ್ನು ಮುಟ್ಟಬೇಡಿರಿ. ಬಟ್ಟೆಗಳು ಶುದ್ಧವಾಗಿ ಕಂಡರೂ ಅದನ್ನು ಕ್ರಮವಾಗಿ ಒಗೆಯಬೇಕು. ಹಾಗಿದ್ದರೂ, ಕೆಲವು ರೀತಿಯ ಸುವಾಸನೆಯು ಕೀಟಗಳನ್ನು ಆಕರ್ಷಿಸುತ್ತವೆ, ಆದುದರಿಂದ ಸುವಾಸನೆಭರಿತ ಸಾಬೂನುಗಳನ್ನು ಮತ್ತು ವೈಯಕ್ತಿಕ ಶುದ್ಧತೆಗಾಗಿರುವ ಸುವಾಸನೆಭರಿತ ಉತ್ಪನ್ನಗಳನ್ನು ಉಪಯೋಗಿಸಬೇಡಿರಿ.”​—⁠ಆಫ್ರಿಕ.

ನಿರೋಧಕ ಕ್ರಮಗಳು

ಸೊಳ್ಳೆಗಳು ಉತ್ಪಾದನೆಯಾಗುವ ಸ್ಥಳಗಳನ್ನು ನಾಶಗೊಳಿಸಿರಿ

“ನೀರಿನ ಟ್ಯಾಂಕುಗಳನ್ನು ಮತ್ತು ತೊಟ್ಟಿಗಳನ್ನು ಮುಚ್ಚಿಡಿರಿ. ಮನೆಯ ಹೊರಗೆ ಬಿದ್ದಿರುವ ನೀರು ಶೇಖರವಾಗುವ ಯಾವುದೇ ತೆರೆದ ವಸ್ತುವನ್ನು ತೆಗೆದುಹಾಕಿರಿ. ಗಿಡಗಳನ್ನು ನೆಡುವ ಕುಂಡದಲ್ಲಿ ನೀರು ನಿಲ್ಲಲು ಬಿಡಬೇಡಿ. ನಾಲ್ಕು ದಿನಕ್ಕಿಂತ ಹೆಚ್ಚು ಸಮಯದ ವರೆಗೆ ನೀರು ನಿಂತಿರುವ ಯಾವುದೇ ಸಣ್ಣ ಹಳ್ಳದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಸಾಧ್ಯವಿದೆ.”​—⁠ನೈರುತ್ಯ ಏಷ್ಯಾ.

◼ ಕೀಟಗಳಿಗೆ ಒಡ್ಡಲ್ಪಡುವುದನ್ನು ಕಡಿಮೆಗೊಳಿಸಿರಿ

ಕೀಟಗಳಿಗೆ ತಿನ್ನಲು ಇಷ್ಟವಾಗಿರುವ ಸಮಯಗಳಿಂದ ಮತ್ತು ಸ್ಥಳಗಳಿಂದ ದೂರವಿರಿ. ಉಷ್ಣವಲಯಗಳಲ್ಲಿ ಸೂರ್ಯನು ಬೇಗನೆ ಅಸ್ತಮಿಸುತ್ತಾನೆ. ಆದುದರಿಂದ ದಿನನಿತ್ಯದ ಹಲವಾರು ಚಟುವಟಿಕೆಗಳನ್ನು, ಅನೇಕ ಕೀಟಗಳು ಅತಿಯಾಗಿ ಕಾರ್ಯಮಗ್ನವಾಗಿರುವ ಸಮಯವಾದ ಕತ್ತಲೆಯ ಸಮಯದಲ್ಲಿ ನಡಿಸಬೇಕಾಗುತ್ತದೆ. ಕೀಟರವಾನಿತ ರೋಗವು ಹಬ್ಬಿರುವ ಸಮಯದಲ್ಲಿ, ಹೊರಗೆ ಕುಳಿತುಕೊಳ್ಳುವುದು ಮತ್ತು ಮಲಗುವುದು ಅಪಾಯವನ್ನು ಹೆಚ್ಚಿಸುತ್ತದೆ.​—⁠ಆಫ್ರಿಕ.

[ಚಿತ್ರ]

ಸೊಳ್ಳೆಗಳು ತುಂಬಿರುವ ಪ್ರದೇಶದಲ್ಲಿ ಹೊರಗೆ ಮಲಗುವುದು, ನಿಮ್ಮ ಮೇಲೆ ಉಣ್ಣುವಂತೆ ಅವುಗಳನ್ನು ಆಮಂತ್ರಿಸುವಂತಿರುತ್ತದೆ

ಮುಖ್ಯವಾಗಿ ನೀವು ಅಡವಿಯಂಥ ಪ್ರದೇಶದಲ್ಲಿರುವಾಗ, ಮೈಮುಚ್ಚುವ ಬಟ್ಟೆಯನ್ನು ಧರಿಸಿಕೊಳ್ಳಿರಿ. ನಿಮ್ಮ ಬಟ್ಟೆಯ ಮತ್ತು ಚರ್ಮದ ಮೇಲೆ ಕೀಟ ವಿಕರ್ಷಕ ಮದ್ದನ್ನು ಹಚ್ಚಿಕೊಳ್ಳಿ. ಆ ಮದ್ದನ್ನು ಹಚ್ಚುವಾಗ, ಲೇಬಲ್‌ನಲ್ಲಿರುವ ನಿರ್ದೇಶನವನ್ನು ಅನುಸರಿಸಿರಿ. ಮನೆಯಿಂದ ಹೊರಗೆ ಸಮಯವನ್ನು ಕಳೆದ ನಂತರ, ನಿಮ್ಮ ಮತ್ತು ಮಕ್ಕಳ ಮೈಯಲ್ಲಿ ಉಣ್ಣಿಹುಳುಗಳು ಇವೆಯೋ ಎಂಬುದನ್ನು ಪರೀಕ್ಷಿಸಿರಿ. ನಿಮ್ಮ ಮುದ್ದಿನ ಪ್ರಾಣಿಗಳು, ಆರೋಗ್ಯಕರವಾಗಿಯೂ ಕೀಟರಹಿತವಾಗಿಯೂ ಇರುವಂತೆ ನೋಡಿಕೊಳ್ಳಿರಿ.​—⁠ಉತ್ತರ ಅಮೆರಿಕ.

ಸಾಕುಪ್ರಾಣಿಗಳೊಂದಿಗೆ ಸಂಪರ್ಕವನ್ನು ಕಡಿಮೆಗೊಳಿಸಿರಿ. ಏಕೆಂದರೆ ಅವುಗಳ ಮೂಲಕ ಕೀಟಗಳು ರೋಗವನ್ನು ಮನುಷ್ಯರಿಗೆ ಹರಡಿಸಸಾಧ್ಯವಿದೆ.​—⁠ಮಧ್ಯ ಏಷ್ಯಾ.

ಕುಟುಂಬದ ಎಲ್ಲಾ ಸದಸ್ಯರಿಗಾಗಿ ಸೊಳ್ಳೆ ಪರದೆಗಳನ್ನು ಉಪಯೋಗಿಸಿ, ಅದರಲ್ಲಿಯೂ ಕೀಟನಾಶಕಪೂರಿತವಾದ ಪರದೆಗಳು ಉತ್ತಮವಾಗಿರುತ್ತವೆ. ಕೀಟಗಳು ಒಳಬರದಂತೆ, ಕಿಟಕಿಗಳ ಮೇಲೆ ತೆರೆಗಳನ್ನು ಉಪಯೋಗಿಸಬೇಕು ಮತ್ತು ಆ ತೆರೆಗಳು ಯಾವಾಗಲೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಗೋಡೆಯ ಮತ್ತು ಸೂರಿನ ಮಧ್ಯೆಯಿರುವ ಸಂದನ್ನು ಸರಿಯಾಗಿ ಮುಚ್ಚಿರಿ, ಇಲ್ಲವಾದರೆ ಅಲ್ಲಿಂದ ಕೀಟಗಳು ಒಳಬರುವ ಸಾಧ್ಯತೆಯಿದೆ. ಇಂಥ ಪ್ರತಿರೋಧ ಕ್ರಮಗಳಿಗೆ ಸ್ವಲ್ಪ ಹಣವು ವ್ಯಯವಾಗುತ್ತದೆ, ಆದರೆ ನಿಮ್ಮ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದರೆ ಅಥವಾ ಕುಟುಂಬ ಪೋಷಕನು ಅಸ್ವಸ್ಥನಾದರೆ ನೀವು ಅದಕ್ಕಿಂತಲೂ ಹೆಚ್ಚಿನ ಹಣವನ್ನು ಕಳೆದುಕೊಳ್ಳುವಿರಿ.​—⁠ಆಫ್ರಿಕ.

[ಚಿತ್ರ]

ಕೀಟನಾಶಕಪೂರಿತವಾದ ಸೊಳ್ಳೆ ಪರದೆಗಳು, ಔಷಧಿ ಮತ್ತು ಆಸ್ಪತ್ರೆ ಬಿಲ್‌ಗಳಿಗಿಂತ ಕಡಿಮೆ ವೆಚ್ಚದ್ದಾಗಿರುತ್ತವೆ

ಕೀಟವು ಅಡಗಿಕೊಳ್ಳಲು ಸಾಧ್ಯವಿರುವ ಸ್ಥಳಗಳನ್ನು ನಿಮ್ಮ ಮನೆಯಿಂದ ತೆಗೆದುಹಾಕಿರಿ. ಗೋಡೆಗಳು ಮತ್ತು ಚಾವಣಿಯ ಒಳಮೈಗೆ ಗಾರೆ ಹಾಕಿರಿ. ಬಿರುಕುಗಳಿಗೆ ಮತ್ತು ರಂಧ್ರಗಳಿಗೆ ತೇಪೆ ಹಚ್ಚಿ. ಹುಲ್ಲು ಚಾವಣಿಗಳ ಒಳಮೈಯನ್ನು ಕೀಟಭೇದ್ಯ ಬಟ್ಟೆಯಿಂದ ಮುಚ್ಚಿರಿ. ಕೀಟಗಳು ತಮ್ಮನ್ನು ಬಟ್ಟಿಟ್ಟುಕೊಳ್ಳಬಹುದಾದ, ಕಾಗದಗಳ ಅಥವಾ ಬಟ್ಟೆಗಳ ರಾಶಿ ಅಥವಾ ಗೋಡೆಗಳಲ್ಲಿ ತೂಗುಹಾಕಿದ ಅನೇಕ ಚಿತ್ರಗಳು ಮುಂತಾದ ಅಸ್ತವ್ಯಸ್ತತೆಯನ್ನು ತೆಗೆಯಿರಿ.​—⁠ದಕ್ಷಿಣ ಅಮೆರಿಕ.

ಕೀಟಗಳು ಮತ್ತು ಇಲಿ ಮುಂತಾದ ಪ್ರಾಣಿಗಳನ್ನು ಕೆಲವು ವ್ಯಕ್ತಿಗಳು ಅತಿಥಿಗಳಂತೆ ಪರಿಗಣಿಸುತ್ತಾರೆ. ಆದರೆ ಅವುಗಳು ಅತಿಥಿಗಳಲ್ಲ! ಅವುಗಳನ್ನು ಮನೆಯಿಂದ ಹೊರಗಿರಿಸಿರಿ. ಕೀಟ ವಿಕರ್ಷಕ ಮದ್ದನ್ನು ಮತ್ತು ಕೀಟ ನಾಶಕಗಳನ್ನು ಉಪಯೋಗಿಸಿರಿ, ಆದರೆ ಅದನ್ನು ನಿರ್ದೇಶನಕ್ಕನುಸಾರ ಮಾತ್ರ ಉಪಯೋಗಿಸಿರಿ. ನೊಣಹಿಡಿಯುವ ಸಾಧನವನ್ನು ಮತ್ತು ನೊಣಬೀಸಣಿಗೆಯನ್ನು ಉಪಯೋಗಿಸಿರಿ. ಸಂಶೋಧಕ ಮನೋಭಾವದವರಾಗಿರಿ: ಒಬ್ಬಾಕೆ ಸ್ತ್ರೀಯು ಬಟ್ಟೆಯ ಒಂದು ಟ್ಯೂಬ್‌ ಅನ್ನು ತಯಾರಿಸಿ, ಅದರಲ್ಲಿ ಮರಳನ್ನು ತುಂಬಿಸಿ, ಅದನ್ನು ಬಾಗಿಲಿನ ಕೆಳಗಿರುವ ಸಂದಿನಲ್ಲಿ ಇಡುವ ಮೂಲಕ ಕೀಟಗಳು ಮನೆಯೊಳಗೆ ಬಾರದಂತೆ ತಡೆದಳು.​—⁠ಆಫ್ರಿಕ.

[ಚಿತ್ರ]

ಕೀಟಗಳು ನಮ್ಮ ಅತಿಥಿಗಳಾಗಿರಬಾರದು. ಅವುಗಳನ್ನು ಅಟ್ಟಿಬಿಡಿರಿ!

ಪ್ರತಿರೋಧಕ ಔಷಧಿ

ಸರಿಯಾದ ಪೋಷಣೆ, ವಿರಾಮ, ಮತ್ತು ವ್ಯಾಯಾಮವನ್ನು ಪಡೆದುಕೊಳ್ಳುವ ಮೂಲಕ ನಿಮ್ಮ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸಿಕೊಳ್ಳಿರಿ. ಒತ್ತಡವನ್ನು ಕಡಿಮೆಗೊಳಿಸಿರಿ.​—⁠ಆಫ್ರಿಕ.

ಪ್ರಯಾಣಿಕರು: ಕೀಟರವಾನಿತ ರೋಗಗಳ ಅಪಾಯದ ಕುರಿತಾಗಿ ಇತ್ತೀಚಿಗಿನ ಮಾಹಿತಿಯನ್ನು ಮುಂಚಿತವಾಗಿಯೇ ಪಡೆದುಕೊಳ್ಳಿರಿ. ಸಾರ್ವಜನಿಕ ಆರೋಗ್ಯ ಇಲಾಖೆಗಳ ಮತ್ತು ಸರಕಾರಿ ಇಂಟರ್‌ನೆಟ್‌ ಸೈಟ್‌ಗಳಿಂದ ಮಾಹಿತಿಯು ದೊರಕುತ್ತದೆ. ನೀವು ಪ್ರಯಾಣಿಸುವ ಮುನ್ನ, ನೀವು ಭೇಟಿನೀಡಲಿರುವ ಸ್ಥಳಕ್ಕೆ ಸೂಕ್ತವಾಗಿರುವ ಪ್ರತಿರೋಧಕ ಔಷಧಿಯನ್ನು ತೆಗೆದುಕೊಳ್ಳಿರಿ.

ನೀವು ಅಸ್ವಸ್ಥರಾದರೆ

ಕೂಡಲೆ ವೈದ್ಯರನ್ನು ಭೇಟಿಯಾಗಿ

ಹೆಚ್ಚಿನ ರೋಗಗಳು ಬೇಗನೆ ಕಂಡುಹಿಡಿಯಲ್ಪಟ್ಟಲ್ಲಿ ವಾಸಿಮಾಡುವುದು ಸುಲಭಸಾಧ್ಯ.

◼ ತಪ್ಪಾದ ರೋಗ ನಿರೂಪಣೆಯ ಕುರಿತು ಜಾಗರೂಕರಾಗಿರಿ

ಕೀಟರವಾನಿತ ರೋಗದ ಮತ್ತು ಸೂಕ್ತವಾಗಿರುವಲ್ಲಿ ಉಷ್ಣವಲಯ ರೋಗದ ಕುರಿತು ಉತ್ತಮವಾಗಿ ತಿಳಿದಿರುವ ವೈದ್ಯರನ್ನು ಭೇಟಿನೀಡಿರಿ. ನಿಮ್ಮ ಎಲ್ಲಾ ರೋಗಲಕ್ಷಣಗಳನ್ನು ಮತ್ತು ಈ ಹಿಂದೆಯೂ ನೀವು ಎಲ್ಲೆಲ್ಲಾ ಪ್ರಯಾಣಿಸಿದ್ದೀರೆಂಬುದನ್ನು ವೈದ್ಯರಿಗೆ ತಿಳಿಸಿರಿ. ಅಗತ್ಯವಿದ್ದರೆ ಮಾತ್ರ ಆ್ಯನ್ಟಿಬೈಆಟಿಕ್‌ ಅನ್ನು ಸೇವಿಸಿರಿ, ಮತ್ತು ಒಮ್ಮೆ ಸೇವಿಸ ತೊಡಗಿದರೆ ಸಂಪೂರ್ಣ ಕೋರ್ಸ್‌ ಅನ್ನು ಮುಗಿಸಬೇಕು.

[ಚಿತ್ರ]

ಕೀಟರವಾನಿತ ರೋಗಗಳು ಇತರ ಅಸ್ವಸ್ಥತೆಗಳನ್ನು ಉಂಟುಮಾಡಸಾಧ್ಯವಿದೆ. ವೈದ್ಯರಿಗೆ ನಿಮ್ಮ ಸಂಪೂರ್ಣ ಚರಿತ್ರೆಯನ್ನು ತಿಳಿಸಿರಿ

[ಕೃಪೆ]

ಭೂಗೋಳ: Mountain High Maps® Copyright © 1997 Digital Wisdom, Inc.

[ಪುಟ 10ರಲ್ಲಿರುವ ಚೌಕ/ಚಿತ್ರ]

ಕೀಟಗಳು ಏಚ್‌ಐವಿಯನ್ನು ಹರಡಿಸುತ್ತವೋ?

ಒಂದು ದಶಕಕ್ಕಿಂತಲೂ ಹೆಚ್ಚು ಸಮಯದ ವರೆಗಿನ ತನಿಖೆ ಮತ್ತು ಸಂಶೋಧನೆಯ ನಂತರ, ಸೊಳ್ಳೆಗಳು ಅಥವಾ ಯಾವುದೇ ಇತರ ಕೀಟಗಳು ಏಡ್ಸ್‌ ರೋಗವನ್ನು ಉಂಟುಮಾಡುವ ವೈರಸ್‌ ಆದ ಏಚ್‌ಐವಿಯನ್ನು ರವಾನಿಸುತ್ತವೆ ಎಂಬುದಕ್ಕೆ ಯಾವುದೇ ಪುರಾವೆಯನ್ನು ಕೀಟಶಾಸ್ತ್ರಜ್ಞರು ಹಾಗೂ ವೈದ್ಯಕೀಯ ವಿಜ್ಞಾನಿಗಳು ಕಂಡುಹಿಡಿದಿರುವುದಿಲ್ಲ.

ಉದಾಹರಣೆಗಾಗಿ, ಸೊಳ್ಳೆಗಳ ವಿಷಯದಲ್ಲಿ, ಅದರ ಬಾಯಿಯ ಭಾಗಗಳು ಒಂದೇ ರಂಧ್ರವಿರುವ ಮತ್ತು ಅದರ ಮೂಲಕ ರಕ್ತವನ್ನು ಪುನಃಚುಚ್ಚುವ ಸಿರಿಂಜಿನಂತಿರುವುದಿಲ್ಲ. ಬದಲಾಗಿ, ಸೊಳ್ಳೆಗಳು ರಕ್ತವನ್ನು ಒಂದು ದ್ವಾರದಿಂದ ಸೇವಿಸಿ, ಇನ್ನೊಂದು ದ್ವಾರದಿಂದ ಉಗುಳನ್ನು ಹೊರಬಿಡುತ್ತವೆ. ಸಾಂಬಿಯಾದ ಮಾಂಗೂ ನಗರದ ಜಿಲ್ಲಾ ಆರೋಗ್ಯ ಆಡಳಿತ ತಂಡದೊಂದಿಗೆ ಕೆಲಸಮಾಡುವ ಏಚ್‌ಐವಿ ರೋಗದ ವಿಶೇಷಜ್ಞರಾದ ಥಾಮಸ್‌ ಡಾಮಾಸೋಓರವರು ವಿವರಿಸುವುದು, ಸೊಳ್ಳೆಗಳ ಪಚನಕ್ರಿಯೆಯು ರಕ್ತವನ್ನು ವಿಭಜನೆಗೊಳಿಸುತ್ತದೆ ಮತ್ತು ವೈರಸ್‌ ಅನ್ನು ನಾಶಗೊಳಿಸುತ್ತದೆ. ಕೀಟದ ಮಲದಲ್ಲಿಯೂ ಏಚ್‌ಐವಿ ರೋಗಾಣುಗಳು ಕಂಡುಬರುವುದಿಲ್ಲ. ಮಲೇರಿಯದ ಪರೋಪಜೀವಿಗಳಿಗೆ ಅಸದೃಶವಾಗಿ, ಏಚ್‌ಐವಿ ರೋಗಾಣುಗಳು ಸೊಳ್ಳೆಯ ಲಾಲಾಗ್ರಂಥಿಗಳನ್ನು ಪ್ರವೇಶಿಸುವುದಿಲ್ಲ.

ಒಬ್ಬ ವ್ಯಕ್ತಿಯು ಏಚ್‌ಐವಿ ರೋಗದಿಂದ ಸೋಂಕಿತನಾಗಬೇಕಾದರೆ, ದೊಡ್ಡ ಪ್ರಮಾಣದಲ್ಲಿ ಸೋಂಕಿತ ಕಣಗಳು ಅವನ ದೇಹದೊಳಕ್ಕೆ ಸೇರಬೇಕಾಗಿದೆ. ಒಂದುವೇಳೆ ಸೊಳ್ಳೆಯು ರಕ್ತಹೀರುತ್ತಿರುವಾಗ ಅಡಚಣೆಯುಂಟಾಗಿ ಅದು ಕೂಡಲೆ ಇನ್ನೊಬ್ಬ ವ್ಯಕ್ತಿಯ ಬಳಿ ಹಾರಿಹೋದರೆ, ಅದರ ಬಾಯಿಯ ಭಾಗದಲ್ಲಿ ಉಳಿದಿರುವ ರಕ್ತವು ಹಾನಿಯನ್ನುಂಟುಮಾಡಲು ತೀರಾ ಕಡಿಮೆ ಪ್ರಮಾಣದ್ದಾಗಿರುತ್ತದೆ. ವಿಶೇಷಜ್ಞರಿಗನುಸಾರ, ಏಚ್‌ಐವಿ ರೋಗಾಣುಗಳಿರುವ ರಕ್ತದಿಂದ ತುಂಬಿದ ಒಂದು ಸೊಳ್ಳೆಯು, ತೆರೆದ ಗಾಯದ ಮೇಲೆ ಕೂತಿರುವಾಗ ಅದನ್ನು ಹೊಡೆದರು ಸಹ ಅದು ಏಚ್‌ಐವಿ ಸೋಂಕನ್ನು ಉಂಟುಮಾಡುವುದಿಲ್ಲ.

[ಕೃಪೆ]

CDC/James D. Gathany

[ಪುಟ 7ರಲ್ಲಿರುವ ಚಿತ್ರಗಳು]

ಜಿಂಕೆ ಉಣ್ಣಿಹುಳುಗಳು (ಬಲಬದಿಯಲ್ಲಿ ದೊಡ್ಡದಾಗಿ ತೋರಿಸಲಾಗಿರುವ) ಲೈಮ್‌ ರೋಗವನ್ನು ಮಾನವರಿಗೆ ಹರಡಿಸುತ್ತವೆ

ಎಡಬದಿಯಿಂದ ಬಲಬದಿಗೆ: ಪೂರ್ತಿ ಬೆಳೆದ ಹೆಣ್ಣುಹುಳು, ಪೂರ್ತಿ ಬೆಳೆದ ಗಂಡುಹುಳು, ಮತ್ತು ಮರಿಹುಳು, ಎಲ್ಲವನ್ನು ಅದರದ್ದೇ ಆದ ಗಾತ್ರದಲ್ಲಿ ತೋರಿಸಲಾಗಿದೆ

[ಕೃಪೆ]

ಎಲ್ಲಾ ಉಣ್ಣಿಹುಳುಗಳು: CDC

[ಪುಟ 10, 11ರಲ್ಲಿರುವ ಚಿತ್ರಗಳು]

ನೆರೆಗಳು, ನೈರ್ಮಲ್ಯವಿಲ್ಲದ ಪರಿಸ್ಥಿತಿಗಳು, ಮತ್ತು ಮಾನವನ ವಲಸೆಹೋಗುವಿಕೆಯು, ಕೀಟರವಾನಿತ ರೋಗದ ಹರಡುವಿಕೆಗೆ ಕಾರಣವಾಗಿವೆ

[ಕೃಪೆ]

FOTO UNACIONES (from U.S. Army)