ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಗಾಯವು ನನ್ನ ಬದುಕನ್ನೇ ಬದಲಾಯಿಸಿದ ವಿಧ

ಒಂದು ಗಾಯವು ನನ್ನ ಬದುಕನ್ನೇ ಬದಲಾಯಿಸಿದ ವಿಧ

ಒಂದು ಗಾಯವು ನನ್ನ ಬದುಕನ್ನೇ ಬದಲಾಯಿಸಿದ ವಿಧ

ಸ್ಟ್ಯಾನ್ಲೀ ಆಂಬೀವಾ ಅವರು ಹೇಳಿದಂತೆ

ಇಸವಿ 1982ರಲ್ಲಿ, ವೇಗವಾಗಿ ಧಾವಿಸುತ್ತಿದ್ದ ಒಂದು ವಾಹನವು ನನಗೆ ಢಿಕ್ಕಿಹೊಡೆಯಿತು. ಆ ಕೂಡಲೆ ನಾನು ಚಿಕಿತ್ಸೆಯನ್ನು ಪಡೆದುಕೊಂಡೆ ಮತ್ತು ಬೇಗನೆ ಗುಣಮುಖನಾಗಿ ಪುನಃ ಎಂದಿನಂತೆ ನನ್ನ ದೈನಂದಿನ ಚಟುವಟಿಕೆಗಳನ್ನು ಆರಂಭಿಸಿದೆ. ಆದರೂ ನನ್ನ ಕತ್ತು ಮತ್ತು ಎದೆಯ ನಡುವಣ ಸ್ಲಿಪ್ಡ್‌ ಡಿಸ್ಕ್‌ (ಜಾರಿದ ಮೃದ್ವಸ್ಥಿತಟ್ಟೆ)ನ ಕಾರಣದಿಂದ ಆಗಿಂದಾಗ್ಗೆ ನೋವಿನಿಂದ ನರಳುತ್ತಾ ಇದ್ದೆ. 15 ವರ್ಷಗಳ ತರುವಾಯ, ನನ್ನ ಬದುಕಿನ ಅತ್ಯಂತ ಪಂಥಾಹ್ವಾನದಾಯಕ ಅನುಭವವನ್ನು ನಾನು ಮುಖಾಮುಖಿಯಾಗಿ ಎದುರಿಸಿದೆ.

ಅಪಘಾತಕ್ಕೆ ಮುಂಚೆ ಮತ್ತು ನಂತರ ಸ್ವಲ್ಪ ಸಮಯದ ವರೆಗೆ, ನಾನು ತುಂಬ ಚಟುವಟಿಕೆಭರಿತ ವ್ಯಕ್ತಿಯಾಗಿದ್ದೆ. ನಾನು ಕ್ರಮವಾಗಿ ವ್ಯಾಯಾಮ ಮಾಡುತ್ತಿದ್ದೆ; ಅಂದರೆ ವಾರಾಂತ್ಯಗಳಲ್ಲಿ ಸುಮಾರು 10ರಿಂದ 13 ಕಿಲೊಮೀಟರುಗಳಷ್ಟು ದೂರ ಜಾಗಿಂಗ್‌ ಮಾಡುತ್ತಿದ್ದೆ, ಸ್ಕ್ವಾಷ್‌ ಆಡುತ್ತಿದ್ದೆ, ಮತ್ತು ಶ್ರಮದಾಯಕ ಕೆಲಸಗಳನ್ನು ಮಾಡುತ್ತಿದ್ದೆ. ನಾವು ಎಲ್ಲಿ ಜೀವಿಸುತ್ತಿದ್ದೇವೋ ಆ ಕೆನ್ಯದ ನೈರೋಬಿಯಲ್ಲಿ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಗಳನ್ನು ಹಾಗೂ ಒಂದು ದೊಡ್ಡ ಅಸೆಂಬ್ಲಿ ಹಾಲ್‌ ಅನ್ನು ನಿರ್ಮಿಸುವ ಕೆಲಸದಲ್ಲಿ ನಾನು ಸಹಾಯಮಾಡಿದೆ.

ಇಸವಿ 1997ರಲ್ಲಿ, ನನಗೆ ಕ್ರಮವಾಗಿ ಎದೆ ನೋವು ಬರತೊಡಗಿತು ಮತ್ತು ಅದು ತುಂಬ ತೀವ್ರವಾಗಿರುತ್ತಿತ್ತು. ಬೆನ್ನೆಲುಬುಗಳ ನಡುವಣ ಮೃದ್ವಸ್ಥಿಯ ಒಂದು ಪದರವು ಜೋಡಣೆಯಿಂದ ತಪ್ಪಿಹೋಗಿದೆ ಮತ್ತು ಅದು ನನ್ನ ಮಿದುಳು ಬಳ್ಳಿಯನ್ನು ಅಡಚುತ್ತಾ ಇದೆ ಎಂಬುದನ್ನು ಒಂದು ವೈದ್ಯಕೀಯ ತಪಾಸಣೆಯು ಬಯಲುಪಡಿಸಿತು. ಈ ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟ ಅಪಘಾತವೇ ಇದಕ್ಕೆ ಕಾರಣವಾಗಿರಸಾಧ್ಯವಿದೆ ಎಂದು ಕಂಡುಬಂತು.

ನನ್ನ ಆರೋಗ್ಯವು ಹದಗೆಡುವುದಕ್ಕೆ ಮುಂಚೆ, ಒಬ್ಬ ಸೇಲ್ಸ್‌ ವ್ಯಕ್ತಿಯೋಪಾದಿ ನನಗೆ ಸುಭದ್ರವಾದ ಉದ್ಯೋಗವಿತ್ತು. ಈ ಉದ್ಯೋಗದಲ್ಲಿ ಕುಟುಂಬದ ಆರೋಗ್ಯ ವಿಮಾ ಯೋಜನೆಯೂ ಸೇರಿತ್ತು. ವ್ಯಾಪಾರ ಜಗತ್ತಿನಲ್ಲಿ ನನ್ನ ಪ್ರತೀಕ್ಷೆಗಳು ತುಂಬ ಆಶಾದಾಯಕವಾಗಿ ಕಂಡುಬಂದವು. ಆದರೆ 1998ರ ಮಧ್ಯದಷ್ಟಕ್ಕೆ, ನನ್ನ ಎದೆಯಿಂದ ಹಿಡಿದು ಪಾದಗಳ ವರೆಗಿನ ಭಾಗವು ತೀವ್ರವಾಗಿ ಮರಗಟ್ಟತೊಡಗಿತು. ನಂತರ ದಿನೇ ದಿನೇ ನನ್ನ ಆರೋಗ್ಯವು ಕ್ಷೀಣಿಸತೊಡಗಿತು.

ತದನಂತರ ಸ್ವಲ್ಪದರಲ್ಲೇ ನಾನು ಉದ್ಯೋಗವನ್ನು ಮತ್ತು ಅದರಿಂದ ಸಿಗುವ ಇತರ ಎಲ್ಲಾ ಪ್ರಯೋಜನಗಳನ್ನು ಕಳೆದುಕೊಂಡೆ. ಆಗ ನಮ್ಮ ಇಬ್ಬರು ಹೆಣ್ಣು ಮಕ್ಕಳಾದ ಸಿಲ್ವಿಯ ಮತ್ತು ವಿಲ್ಹೆಲ್ಮಿನ, 13 ಹಾಗೂ 10 ವರ್ಷ ಪ್ರಾಯದವರಾಗಿದ್ದರು. ನನ್ನ ಉದ್ಯೋಗವು ಕೈಬಿಟ್ಟುಹೋದದ್ದರಿಂದ, ನನ್ನ ಹೆಂಡತಿಯಾದ ಜಾಯ್ಸ್‌ ತಿಂಗಳ ಕೊನೆಯಲ್ಲಿ ತರುತ್ತಿದ್ದ ಸಂಬಳದ ಮೇಲೇ ನಾವು ಅವಲಂಬಿಸಬೇಕಾಗಿತ್ತು. ಈ ಎಲ್ಲಾ ಹೊಸ ಸನ್ನಿವೇಶಗಳು ನಮಗೆ ಎದುರಾದ್ದರಿಂದ, ಅನಗತ್ಯವಾದ ವಸ್ತುಗಳಿಗೆ ಹಣವನ್ನು ಖರ್ಚುಮಾಡದಿರುವ ಮೂಲಕ ನಾವು ನಮ್ಮ ಜೀವನದಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಂಡೆವು. ಹೇಗೊ ಇದ್ದುದರಲ್ಲಿಯೇ ಜೀವನ ಸಾಗಿಸುತ್ತಿದ್ದೆವು.

ನಕಾರಾತ್ಮಕ ಭಾವನೆಗಳು

ನನ್ನ ಪರಿಸ್ಥಿತಿಯ ಗಂಭೀರತೆಯನ್ನು ನಾನು ಕ್ರಮೇಣ ಮನಗಂಡಂತೆ, ನಾನು ನಕಾರಾತ್ಮಕ ಮನೋಭಾವದವನು, ಸ್ವವಿಚಾರಾಸಕ್ತನು, ಮತ್ತು ಮುಂಗೋಪಿಯಾದೆ ಎಂಬುದನ್ನು ಖಂಡಿತವಾಗಿಯೂ ಒಪ್ಪಿಕೊಳ್ಳಲೇಬೇಕು. ಕೆಲವೊಮ್ಮೆ, ಪ್ರತಿಯೊಂದು ಸಣ್ಣಪುಟ್ಟ ವಿಷಯವನ್ನು ದೊಡ್ಡದಾಗಿ ಮಾಡುತ್ತಾ, ತುಂಬ ಕೋಪಗೊಳ್ಳುತ್ತಿದ್ದೆ ಮತ್ತು ಕಹಿಮನೋಭಾದವನಾಗಿರುತ್ತಿದ್ದೆ. ನಾನು ಯಾವಾಗಲೂ ಖಿನ್ನತೆಗೆ ಬಲಿಬೀಳುವ ಹಂತದಲ್ಲಿರುತ್ತಿದ್ದೆ. ಕುಟುಂಬದಲ್ಲಿರುವ ಪ್ರತಿಯೊಬ್ಬರೂ ಒತ್ತಡವನ್ನು ಅನುಭವಿಸಿದರು. ನನ್ನ ಹೆಂಡತಿ ಹಾಗೂ ನಮ್ಮ ಹೆಣ್ಣು ಮಕ್ಕಳು, ತಮಗೆ ಸ್ವಲ್ಪವೂ ಅರಿವಿಲ್ಲದಂಥ ಒಂದು ಅಸಾಮಾನ್ಯ ಪರಿಸ್ಥಿತಿಯನ್ನು ಎದುರಿಸಬೇಕಾಯಿತು.

ಆ ಸಮಯದಲ್ಲಿ, ನನಗೆ ಹೀಗೆಲ್ಲಾ ಅನಿಸುತ್ತಿರುವುದರಲ್ಲಿ ತಪ್ಪೇನೂ ಇಲ್ಲ, ನನ್ನ ಪರಿಸ್ಥಿತಿಯೇ ಹೀಗಿದೆ ಎಂದು ನಾನು ಭಾವಿಸಿದೆ. ಇದ್ದಕ್ಕಿದ್ದಂತೆ ನನ್ನ ತೂಕವು ಹೆಚ್ಚಾಗತೊಡಗಿತು. ಮಲವಿಸರ್ಜನೆ ಹಾಗೂ ಮೂತ್ರ ನಿಯಂತ್ರಣದ ಸಂಬಂಧದಲ್ಲೂ ನನಗೆ ಗಂಭೀರವಾದ ಸಮಸ್ಯೆಗಳಿದ್ದವು. ಅನೇಕವೇಳೆ ನಾನು ತುಂಬ ಪೇಚಾಟಕ್ಕೆ ಒಳಗಾಗುತ್ತಿದ್ದೆ. ನಾನು ಮನೆಯ ಒಂದು ಮೂಲೆಯಲ್ಲಿ ಒಂಟಿಯಾಗಿ ಕುಳಿತುಕೊಂಡು ಕಣ್ಣೀರು ಸುರಿಸುವುದು ಸಾಮಾನ್ಯ ನೋಟವಾಗಿತ್ತು. ಕೆಲವು ಬಾರಿ ನಾನು ಎಷ್ಟು ಕೋಪೋದ್ರಿಕ್ತನಾಗುತ್ತಿದ್ದೆನೆಂದರೆ, ಅದು ಬಹುಮಟ್ಟಿಗೆ ಹಾಸ್ಯಮಯ ಸನ್ನಿವೇಶವಾಗಿರುತ್ತಿತ್ತು. ನಾನು ನನ್ನ ಸನ್ನಿವೇಶವನ್ನು ಅತ್ಯುತ್ತಮವಾದ ರೀತಿಯಲ್ಲಿ ನಿಭಾಯಿಸುತ್ತಿಲ್ಲ ಎಂಬುದು ನನಗೆ ಗೊತ್ತಿತ್ತು.

ಯೆಹೋವನ ಸಾಕ್ಷಿಗಳ ಕ್ರೈಸ್ತ ಸಭೆಯಲ್ಲಿ ಒಬ್ಬ ಹಿರಿಯನಾಗಿದ್ದ ನಾನು, ಯಾವುದೇ ರೀತಿಯ ಕಷ್ಟಾನುಭವಕ್ಕಾಗಿ ಎಂದಿಗೂ ದೇವರನ್ನು ದೂಷಿಸಬಾರದೆಂಬುದರ ಕುರಿತು ನನ್ನ ಜೊತೆ ಕ್ರೈಸ್ತರಿಗೆ ಅನೇಕ ಬಾರಿ ಸಲಹೆ ನೀಡಿದ್ದೆ. ಆದರೂ, ಈಗ ಸ್ವತಃ ನಾನೇ ಕೇವಲ ಒಮ್ಮೆಯಲ್ಲ ಬದಲಾಗಿ ಅನೇಕ ಸಲ, ‘ನನಗೆ ಇದೆಲ್ಲಾ ಸಂಭವಿಸುವಂತೆ ಯೆಹೋವನು ಏಕೆ ಅನುಮತಿಸಿದನು?’ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿರುವುದು ನನ್ನ ಅರಿವಿಗೆ ಬಂತು. ಈ ಮುಂಚೆ ಇತರರನ್ನು ಬಲಪಡಿಸಲಿಕ್ಕಾಗಿ ಮತ್ತು ಉತ್ತೇಜಿಸಲಿಕ್ಕಾಗಿ ನಾನು 1 ಕೊರಿಂಥ 10:13ರಂಥ ಶಾಸ್ತ್ರವಚನಗಳನ್ನು ಉಪಯೋಗಿಸಿದ್ದೆನಾದರೂ, ನಾನು ಅನುಭವಿಸುತ್ತಿರುವ ಕಷ್ಟವು ಸಹನೆಗೆ ಮೀರಿದ್ದಾಗಿದೆ ಎಂದು ನನಗನಿಸಿತು!

ಒಂದು ವೈದ್ಯಕೀಯ ಪಂಥಾಹ್ವಾನ

ಒಳ್ಳೇ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ದೊಡ್ಡ ಸವಾಲಾಗಿ ಕಂಡುಬಂತು. ಒಂದೇ ದಿನದಲ್ಲಿ ನಾನು ಒಬ್ಬ ಭೌತಚಿಕಿತ್ಸಕನನ್ನು, ಒಬ್ಬ ಕಶೇರುಮರ್ದಕ ಚಿಕಿತ್ಸಕನನ್ನು, ಮತ್ತು ಆಕ್ಯುಪಂಚರ್‌ ಚಿಕಿತ್ಸಕನನ್ನು ಭೇಟಿಯಾಗುತ್ತಿದ್ದೆ. ಆದರೂ, ಅವರಿಂದ ಸಿಗುವ ಯಾವುದೇ ಉಪಶಮನವು ತುಂಬ ತಾತ್ಕಾಲಿಕವಾದದ್ದಾಗಿತ್ತು. ಅಂಗವಿಕಾರಗಳನ್ನು ಸರಿಪಡಿಸುವಂಥ ಒಬ್ಬ ಶಸ್ತ್ರಚಿಕಿತ್ಸಕನನ್ನು ಮತ್ತು ಒಬ್ಬ ನರವ್ಯೂಹ ತಜ್ಞನನ್ನೂ ಸೇರಿ ಅನೇಕ ವೈದ್ಯರನ್ನು ನಾನು ಸಂಪರ್ಕಿಸಿದೆ. ಎಲ್ಲರೂ ಒಂದೇ ಅಂಶವನ್ನು ಅನುಮೋದಿಸುತ್ತಿದ್ದರು: ನೋವನ್ನು ಶಮನಮಾಡಲು ಮತ್ತು ಸ್ಲಿಪ್ಡ್‌ ಡಿಸ್ಕನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯ ಆವಶ್ಯಕತೆಯಿದೆ. ನನ್ನ ಬೈಬಲ್‌ ಆಧಾರಿತ ನಂಬಿಕೆಗಳ ಕಾರಣ, ಯಾವುದೇ ಸನ್ನಿವೇಶಗಳ ಕೆಳಗೆ ನನಗೆ ರಕ್ತವನ್ನು ನೀಡಬಾರದು ಎಂದು ನಾನು ಈ ವೈದ್ಯಕೀಯ ಪರಿಣತರಿಗೆ ಸ್ಪಷ್ಟವಾಗಿ ವಿವರಿಸಿದೆ.​—⁠ಅ. ಕೃತ್ಯಗಳು 15:​28, 29.

ನನ್ನ ಬೆನ್ನನ್ನು ತೆರೆದು ಶಸ್ತ್ರಕ್ರಿಯೆಯನ್ನು ಮಾಡುವೆನೆಂದು ಮೊದಲ ಶಸ್ತ್ರಚಿಕಿತ್ಸಕನು ಹೇಳಿದನು. ಆದರೆ ಈ ರೀತಿಯ ಕಾರ್ಯವಿಧಾನವು ತುಂಬ ಅಪಾಯಕರವಾದದ್ದಾಗಿದೆ ಎಂದು ನನಗೆ ವಿವರಿಸಲಾಯಿತು. ಆದರೂ, ಈ ಶಸ್ತ್ರಚಿಕಿತ್ಸಕನು ರಕ್ತವನ್ನು ಖಂಡಿತವಾಗಿಯೂ ಉಪಯೋಗಿಸುವುದಿಲ್ಲವೆಂದು ಖಚಿತವಾಗಿ ಹೇಳಲಿಲ್ಲ. ಆದುದರಿಂದ ನಾನು ಪುನಃ ಅವನ ಬಳಿ ಹೋಗಲಿಲ್ಲ.

ನನ್ನ ಕತ್ತಿನ ಮೂಲಕ ಮಿದುಳುಬಳ್ಳಿಯನ್ನು ಸರಿಪಡಿಸಲು ಪ್ರಯತ್ನಿಸುವೆನೆಂದು ಎರಡನೆಯ ಶಸ್ತ್ರಚಿಕಿತ್ಸಕನು ಹೇಳಿದನು. ಆದರೆ ಅಂಥ ಕಾರ್ಯವಿಧಾನವು ತುಂಬ ಭೀಕರವಾಗಿ ಕಂಡುಬಂತು. ನಾನು ರಕ್ತವನ್ನು ಸ್ವೀಕರಿಸುವುದಿಲ್ಲ ಎಂಬ ಷರತ್ತಿಗೆ ಅವನು ಒಪ್ಪಿಕೊಂಡನಾದರೂ, ಅವನು ಆ ಕೂಡಲೆ ಶಸ್ತ್ರಚಿಕಿತ್ಸೆಯನ್ನು ಮಾಡಲು ಬಯಸಿದನು ಮತ್ತು ಇದರ ಕುರಿತು ಸ್ವಲ್ಪ ವಿವರಗಳನ್ನೂ ನೀಡಿದನು. ಆದರೆ ನಾನು ಅವನ ಬಳಿಗೂ ಹಿಂದಿರುಗಲಿಲ್ಲ.

ಇಷ್ಟರಲ್ಲೇ ನಮ್ಮ ಸ್ಥಳಿಕ ಹಾಸ್ಪಿಟಲ್‌ ಲಿಯೆಸಾನ್‌ ಕಮಿಟಿಯಲ್ಲಿ ಸೇವೆಮಾಡುತ್ತಿದ್ದ ಯೆಹೋವನ ಸಾಕ್ಷಿಗಳ ಸಹಾಯದಿಂದ ನಾನು ಸಹಕರಿಸುವಂಥ ಮನೋಭಾವವಿದ್ದ ಒಬ್ಬ ವೈದ್ಯನನ್ನು ಕಂಡುಕೊಳ್ಳಲು ಶಕ್ತನಾದೆ. ಮೂರನೆಯ ಶಸ್ತ್ರಚಿಕಿತ್ಸಕನಿಂದ ಶಿಫಾರಸ್ಸುಮಾಡಲ್ಪಟ್ಟ ಚಿಕಿತ್ಸೆಯು, ಎರಡನೆಯ ಶಸ್ತ್ರಚಿಕಿತ್ಸಕನು ಪ್ರಸ್ತಾಪಿಸಿದಂಥದ್ದೇ ಆಗಿತ್ತು; ಅಂದರೆ ಕತ್ತಿನ ಮೂಲಕ ಕೊರೆತವನ್ನು ಮಾಡುವುದು ಅದರಲ್ಲಿ ಒಳಗೂಡಿತ್ತು. ಇದರಿಂದ ಅಪಾಯಗಳು ತುಂಬ ಕಡಿಮೆ ಎಂದು ಅವನು ವಿವರಿಸಿದನು.

ಶಸ್ತ್ರಚಿಕಿತ್ಸೆಯನ್ನು ಹೇಗೆ ಮಾಡಲಾಗುತ್ತದೆ ಎಂಬುದರ ಕುರಿತಾದ ಸುಸ್ಪಷ್ಟ ವರ್ಣನೆಗಳು ನಿಜವಾಗಿಯೂ ನನ್ನಲ್ಲಿ ಅತ್ಯಧಿಕ ಭಯವನ್ನು ಉಂಟುಮಾಡಿದವು. ಹೃದಯ ಮತ್ತು ಶ್ವಾಸಕೋಶಗಳಂಥ ಅತಿ ಸೂಕ್ಷ್ಮ ಅವಯವಗಳ ಸುತ್ತಲೂ ಆ ಶಸ್ತ್ರಚಿಕಿತ್ಸೆಯು ನಡೆಸಲ್ಪಡುತ್ತದೆ ಎಂಬುದನ್ನು ತಿಳಿದುಕೊಂಡಾಗ ನನಗೆ ಇನ್ನಷ್ಟು ಹೆದರಿಕೆಯಾಯಿತು. ಈ ಶಸ್ತ್ರಚಿಕಿತ್ಸೆಯಿಂದ ನಾನು ಬದುಕಿ ಉಳಿಯುವೆನೋ? ಇಂಥ ನಕಾರಾತ್ಮಕ ಆಲೋಚನೆಗಳು ನನ್ನ ಭಯವನ್ನು ನಿಗ್ರಹಿಸಲಿಲ್ಲ ಎಂಬುದಂತೂ ಸತ್ಯ.

ಇಸವಿ 1998ರ ನವೆಂಬರ್‌ 25ರಂದು, ನೈರೋಬಿಯ ಒಂದು ಆಸ್ಪತ್ರೆಯಲ್ಲಿ ನನಗೆ ನಾಲ್ಕು ತಾಸುಗಳ ಒಂದು ಯಶಸ್ವಿಕರ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ನನ್ನ ವಸ್ತಿಕುಹರದ ಮೂಳೆಯ ಒಂದು ತುಂಡನ್ನು ತೆಗೆಯುವುದು ಈ ಶಸ್ತ್ರಚಿಕಿತ್ಸೆಯಲ್ಲಿ ಒಳಗೂಡಿತ್ತು. ನಂತರ ಆ ಮೂಳೆಯ ತುಂಡನ್ನು ನಿಗದಿತ ಆಕಾರಕ್ಕೆ ತಂದು, ಗಾಯಗೊಂಡಿದ್ದ ಸ್ಥಳದಲ್ಲಿ ಅದನ್ನು ಲೋಹದ ತಗಡು ಮತ್ತು ಸ್ಕ್ರೂಗಳಿಂದ ಜೋಡಿಸಲಾಯಿತು. ಇದು ಪ್ರಯೋಜನದಾಯಕವಾಗಿತ್ತು. ಆದರೆ ಇದು ನನ್ನ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲಿಲ್ಲ. ಏಕೆಂದರೆ ನಡೆಯುವಾಗ ನಾನು ತುಂಬ ಕಷ್ಟಪಡುತ್ತಿದ್ದೆ. ನಾನು ಈಗಲೂ ಸತತವಾದ ಜಡತೆಯಿಂದ ಕಷ್ಟಾನುಭವಿಸುತ್ತೇನೆ.

ಸಕಾರಾತ್ಮಕ ಮನೋಭಾವ

ಈ ಮುಂಚೆಯೇ ತಿಳಿಸಲ್ಪಟ್ಟಂತೆ, ನನ್ನ ಈ ದುರವಸ್ಥೆಯ ಬಗ್ಗೆ ಚಿಂತಿಸುವುದರಲ್ಲಿ ಮತ್ತು ಅದರ ಕುರಿತು ಕೊರಗುವುದರಲ್ಲಿ ನಾನು ಬಹಳಷ್ಟು ಸಮಯವನ್ನು ಕಳೆದಿದ್ದೆ. ಹಾಸ್ಯವ್ಯಂಗ್ಯವಾಗಿ, ವೈದ್ಯಕೀಯ ಸಿಬ್ಬಂದಿಯಲ್ಲಿ ಅನೇಕರು ನನ್ನ ಶಾಂತಚಿತ್ತತೆ ಹಾಗೂ ಆಶಾವಾದಕ್ಕಾಗಿ ನನ್ನನ್ನು ಶ್ಲಾಘಿಸಿದರು. ಅವರಿಗೆ ಹಾಗೇಕೆ ಅನಿಸಿತು? ನಾನು ತುಂಬ ನೋವನ್ನು ಅನುಭವಿಸುತ್ತಿರುವಾಗಲೂ, ದೇವರಲ್ಲಿನ ನನ್ನ ನಂಬಿಕೆಯ ಕುರಿತು ನಾನು ಅವರೊಂದಿಗೆ ಮಾತಾಡುತ್ತಿದ್ದುದನ್ನು ಅವರು ನೋಡಸಾಧ್ಯವಿತ್ತು.

ನನ್ನ ಅವಸ್ಥೆಯ ಕುರಿತು ನಾನು ಕೆಲವೊಮ್ಮೆ ಕೋಪಗೊಂಡು, ಕಹಿಮನೋಭಾವದವನಾಗಿರುತ್ತಿದ್ದರೂ ನಾನು ಯೆಹೋವನ ಮೇಲೆ ಆತುಕೊಳ್ಳುವುದನ್ನು ಮಾತ್ರ ಬಿಡಲಿಲ್ಲ. ನಾನು ಅನುಭವಿಸಿರುವ ಎಲ್ಲಾ ಸಂಕಷ್ಟಗಳಲ್ಲಿ ಆತನು ಯಾವಾಗಲೂ ನನಗೆ ಸಹಾಯಹಸ್ತವನ್ನು ಚಾಚಿದನು. ಆತನು ನನಗೆ ಎಷ್ಟರ ಮಟ್ಟಿಗೆ ಸಹಾಯಮಾಡಿದ್ದನೆಂದರೆ, ಕೆಲವೊಮ್ಮೆ ನನಗೆ ನನ್ನ ಬಗ್ಗೆಯೇ ನಾಚಿಕೆಯೆನಿಸುತ್ತಿತ್ತು. ನನ್ನ ಸನ್ನಿವೇಶದಲ್ಲಿ ಸಾಂತ್ವನದಾಯಕವಾಗಿರುತ್ತದೆಂದು ನನಗೆ ಗೊತ್ತಿದ್ದ ಶಾಸ್ತ್ರವಚನಗಳನ್ನು ಓದಿ, ಅವುಗಳ ಕುರಿತು ಮನನ ಮಾಡುವ ದೃಢನಿರ್ಧಾರವನ್ನು ಮಾಡಿದೆ. ಅವುಗಳಲ್ಲಿ ಕೆಲವು ಹೀಗಿವೆ:

ಪ್ರಕಟನೆ 21:4: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.” ದುಃಖ ಮತ್ತು ಗೋಳಾಟವು ಶಾಶ್ವತವಾಗಿ ಇಲ್ಲವಾಗುವಂಥ ಒಂದು ಹೊಸ ಲೋಕದ ಕುರಿತಾದ ಬೈಬಲ್‌ ವಾಗ್ದಾನದ ಬಗ್ಗೆ ಧ್ಯಾನಿಸುವುದು, ಖಂಡಿತವಾಗಿಯೂ ಸಾಂತ್ವನದಾಯಕವಾಗಿ ರುಜುವಾಯಿತು.

ಇಬ್ರಿಯ 6:10: “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” ನಾನೀಗ ಶಾರೀರಿಕವಾಗಿ ಹೆಚ್ಚನ್ನು ಮಾಡಲಾರೆನಾದರೂ, ಆತನ ಸೇವೆಯಲ್ಲಿನ ನನ್ನ ಪ್ರಯತ್ನಗಳನ್ನು ಯೆಹೋವನು ಖಂಡಿತವಾಗಿಯೂ ಅಮೂಲ್ಯವಾಗಿ ಪರಿಗಣಿಸುತ್ತಾನೆ ಎಂಬುದು ನನಗೆ ತಿಳಿದಿತ್ತು.

ಯಾಕೋಬ 1:13: “ಯಾವನಾದರೂ ಪಾಪಮಾಡುವದಕ್ಕೆ ಪ್ರೇರೇಪಿಸಲ್ಪಡುವಾಗ [“ಪರೀಕ್ಷೆಯ ಕೆಳಗಿರುವಾಗ,” NW]​—⁠ಈ ಪ್ರೇರಣೆಯು [“ಪರೀಕ್ಷೆಯು,” NW] ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ.” ಈ ಮಾತುಗಳೆಷ್ಟು ಸತ್ಯ! ಯೆಹೋವನು ನನ್ನ ಸಂಕಷ್ಟವನ್ನು ಅನುಮತಿಸಿದ್ದಾನಾದರೂ, ಖಂಡಿತವಾಗಿಯೂ ಆತನು ಅದಕ್ಕೆ ಕಾರಣನಲ್ಲ.

ಫಿಲಿಪ್ಪಿ 4:​6, 7: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” ನನ್ನ ಸನ್ನಿವೇಶವನ್ನು ಹೆಚ್ಚು ವಿವೇಕದಿಂದ ನಿಭಾಯಿಸುವಂತೆ ಪ್ರಾರ್ಥನೆಯು ನನ್ನನ್ನು ಶಕ್ತನನ್ನಾಗಿ ಮಾಡುತ್ತಾ, ಅತ್ಯಗತ್ಯವಾಗಿ ಬೇಕಾಗಿದ್ದ ಮನಶ್ಶಾಂತಿಯನ್ನು ಪಡೆದುಕೊಳ್ಳಲು ನನಗೆ ಸಹಾಯಮಾಡಿತು.

ನಾನು ಈ ಶಾಸ್ತ್ರವಚನಗಳನ್ನು, ದುರವಸ್ಥೆಯಲ್ಲಿದ್ದವರನ್ನು ಉತ್ತೇಜಿಸಲಿಕ್ಕಾಗಿ ಉಪಯೋಗಿಸಿದ್ದೆ​—⁠ಮತ್ತು ಖಂಡಿತವಾಗಿಯೂ ಇವೇ ಶಾಸ್ತ್ರವಚನಗಳು ಈಗ ನನಗೆ ಸಹಾಯಮಾಡಿದವು! ಆದರೂ, ಈ ಹಿಂದೆ ನಾನು ಅವುಗಳ ಮೌಲ್ಯವನ್ನು ಪೂರ್ಣವಾಗಿ ಗ್ರಹಿಸಲಿಲ್ಲ ಎಂಬುದು ನನ್ನ ಅರಿವಿಗೆ ಬಂತು. ಇಷ್ಟು ಅಸ್ವಸ್ಥ ಸ್ಥಿತಿಯನ್ನು ತಲಪಿದ ಬಳಿಕವೇ ನಾನು ದೀನಭಾವವನ್ನು ಅರ್ಥಮಾಡಿಕೊಂಡೆ ಮತ್ತು ಯೆಹೋವನ ಮೇಲೆ ಪೂರ್ಣವಾಗಿ ಅವಲಂಬಿಸಬೇಕೆಂಬುದನ್ನು ಕಲಿತುಕೊಂಡೆ.

ಇತರ ಉಪಶಮನದಾಯಕ ಸಹಾಯಕಗಳು

ಸಂಕಷ್ಟದ ಸಮಯಗಳಲ್ಲಿ ಕ್ರೈಸ್ತ ಸಹೋದರತ್ವವು ಸ್ತಂಭವೂ ಆಧಾರವೂ ಆಗಿದೆ ಎಂದು ಅನೇಕರು ಹೇಳುತ್ತಾರೆ. ಆದರೂ, ನಮ್ಮ ಕ್ರೈಸ್ತ ಸಹೋದರ ಸಹೋದರಿಯರನ್ನು ಮಾಮೂಲಿಯಾಗಿ ಪರಿಗಣಿಸುವುದು ಎಷ್ಟು ಸುಲಭ! ನಮಗೆ ಸಹಾಯಮಾಡಲು ಅವರು ಏನು ಮಾಡಶಕ್ತರೋ ಅದು ತುಂಬ ಪರಿಮಿತವಾಗಿದೆ ಎಂಬುದು ನಿಜವಾದರೂ, ಸಹಾಯಮಾಡಲಿಕ್ಕಂತೂ ಅವರು ಯಾವಾಗಲೂ ತುದಿಗಾಲಲ್ಲಿ ನಿಂತಿರುತ್ತಾರೆ. ನನ್ನ ವಿಷಯದಲ್ಲೂ ಇದು ಸತ್ಯವಾಗಿತ್ತು. ಆಸ್ಪತ್ರೆಯಲ್ಲಿ ನನ್ನ ಹಾಸಿಗೆಯ ಬಳಿ ಕೆಲವೊಮ್ಮೆ ಬೆಳಗ್ಗೆ ಬೆಳಗ್ಗೆಯೇ ಸಹೋದರ ಸಹೋದರಿಯರು ಕಂಡುಬರುವುದು ಅಸಾಮಾನ್ಯವಾದ ಸಂಗತಿಯಾಗಿರಲಿಲ್ಲ. ಅಷ್ಟುಮಾತ್ರವಲ್ಲ, ನನ್ನ ವೈದ್ಯಕೀಯ ಖರ್ಚುವೆಚ್ಚಗಳನ್ನು ತೆರಲು ಕಾಣಿಕೆಯನ್ನು ಕೊಡುತ್ತೇವೆಂದು ಸಹ ಅವರು ಹೇಳಿದರು. ನನ್ನ ಅವಸ್ಥೆಯನ್ನು ನೋಡಿ, ನನ್ನ ಸಹಾಯಕ್ಕೆ ಬಂದ ಎಲ್ಲಾ ಸಹೋದರ ಸಹೋದರಿಯರಿಗೂ ನಾನು ತುಂಬ ಕೃತಜ್ಞನಾಗಿದ್ದೇನೆ.

ನಾನೀಗ ಏನು ಮಾಡಸಾಧ್ಯವಿದೆಯೋ ಅದು ತುಂಬ ಪರಿಮಿತವಾದದ್ದಾಗಿದೆ ಎಂಬುದು ನಮ್ಮ ಸ್ಥಳಿಕ ಸಭೆಯಲ್ಲಿರುವ ಸಾಕ್ಷಿಗಳಿಗೆ ಗೊತ್ತಿದೆ. ಸದ್ಯಕ್ಕೆ ನಾನು ಅಧ್ಯಕ್ಷ ಮೇಲ್ವಿಚಾರಕನಾಗಿ ಸೇವೆಮಾಡುತ್ತಿದ್ದೇನೆ ಮತ್ತು ತುಂಬ ಬೆಂಬಲಾತ್ಮಕ ಮನೋಭಾವವಿರುವಂಥ ಕ್ರೈಸ್ತ ಹಿರಿಯರ ಮಂಡಲಿಯೊಂದಿಗೆ ಕೆಲಸಮಾಡುತ್ತಿದ್ದೇನೆ. ಸಾರುವ ಕೆಲಸದಲ್ಲಿ ನಾನೆಂದೂ ಅಕ್ರಮ ಪ್ರಚಾರಕನಾಗಿಲ್ಲ. ನನ್ನ ಅನಾರೋಗ್ಯದ ಅತ್ಯಂತ ಗುರುತರ ಸನ್ನಿವೇಶವನ್ನು ಅನುಭವಿಸುತ್ತಿದ್ದಾಗ, ಇಬ್ಬರು ವ್ಯಕ್ತಿಗಳು ತಮ್ಮ ಜೀವವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವ ಹಂತವನ್ನು ಮುಟ್ಟುವಂತೆ ನಾನು ಸಹಾಯಮಾಡಿದೆ. ಅವರಲ್ಲಿ ಒಬ್ಬನು ಈಗ, ಯೆಹೋವನ ಸಾಕ್ಷಿಗಳ ನೈರೋಬಿ ಸಭೆಯೊಂದರಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿ ಸೇವೆಮಾಡುತ್ತಿದ್ದಾನೆ.

ನನ್ನ ಉಗ್ರ ಪರೀಕ್ಷೆಯ ಸಮಯದಲ್ಲೆಲ್ಲಾ ನನಗೆ ಪೂರ್ಣವಾಗಿ ಬೆಂಬಲ ನೀಡಿದಂಥ ನನ್ನ ಪತ್ನಿಗೆ ಉಪಕಾರವ ಹೇಳಲು ನನಗೆ ಶಬ್ದಗಳೇ ಸಿಗುತ್ತಿಲ್ಲ. ನನ್ನ ಕೋಪ, ನನ್ನ ಭಿನ್ನ ಮನೋಭಾವಗಳು, ನನ್ನ ಅವಿವೇಕತನ, ಮತ್ತು ನನ್ನ ಆಶಾಭಂಗವನ್ನೆಲ್ಲಾ ಅವಳು ತಾಳಿಕೊಂಡಳು. ನಾನು ಕಣ್ಣೀರಿಡುತ್ತಿದ್ದಾಗ ಮತ್ತು ನೋವನ್ನು ಅನುಭವಿಸುತ್ತಿದ್ದಾಗ, ಅವಳು ನನಗೆ ಆಶ್ವಾಸನೆ ನೀಡಿದಳು ಮತ್ತು ಸಾಕಷ್ಟು ಸಮಾಧಾನ ಮಾಡಿದಳು. ಆಪತ್ಕಾಲದಲ್ಲಿ ಅವಳು ತೋರಿಸಿದ ಬಲ ಮತ್ತು ಚೇತರಿಸಿಕೊಳ್ಳುವ ಶಕ್ತಿಯು ಈಗಲೂ ನನಗೆ ಅತ್ಯಾಶ್ಚರ್ಯವನ್ನು ಉಂಟುಮಾಡುತ್ತದೆ. ಅವಳು “ಎಲ್ಲಾ ಸಮಯಗಳಲ್ಲಿ . . . ಒಬ್ಬ ನಿಜ ಸಂಗಾತಿಯಾಗಿ” ಪರಿಣಮಿಸಿದ್ದಾಳೆ.​—⁠ಜ್ಞಾನೋಕ್ತಿ 17:​17, NW.

ನನ್ನ ಪುತ್ರಿಯರು ನನ್ನ ಸನ್ನಿವೇಶದೊಂದಿಗೆ ನಿಭಾಯಿಸಿಕೊಂಡು ಹೋಗಲು ಕಲಿತಿದ್ದಾರೆ. ನನಗೆ ಸಹಾಯಮಾಡಲಿಕ್ಕಾಗಿ ಅವರು ತಮ್ಮಿಂದ ಸಾಧ್ಯವಿರುವುದನ್ನೆಲ್ಲಾ ಮಾಡುತ್ತಾರೆ. ನನ್ನ ಆವಶ್ಯಕತೆಗಳನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅದಕ್ಕೆ ಬೇಗನೆ ಪ್ರತಿಕ್ರಿಯಿಸುತ್ತಾರೆ. ಅವರ ತಾಯಿಯು ಹತ್ತಿರದಲ್ಲಿರದಿದ್ದಾಗ ನನ್ನ ಹಿತಕ್ಷೇಮವನ್ನು ನೋಡಿಕೊಳ್ಳುತ್ತಾರೆ. ನನಗೆ ಅಶಕ್ತ ಅನಿಸಿಕೆಯಾದಾಗ ಮನೆಯಲ್ಲೆಲ್ಲಾ ಓಡಾಡಲು ಸಹಾಯಮಾಡುವ ಮೂಲಕ, ಸಿಲ್ವಿಯಳು ನನ್ನ “ಆಸರೆಗೋಲು” ಆಗಿದ್ದಾಳೆ.

ಕಿರಿಯ ಮಗಳಾಗಿರುವ ಮಿನಳ ಕುರಿತಾಗಿ ಏನು? ಒಂದು ಸಲ ನಾನು ಮನೆಯೊಳಗೇ ಬಿದ್ದುಬಿಟ್ಟಾಗ, ಎದ್ದೇಳಲು ಆಗದಿದ್ದದ್ದು ನನಗಿನ್ನೂ ನೆನಪಿದೆ. ಆ ಸಮಯದಲ್ಲಿ ಮನೆಯಲ್ಲಿದ್ದವಳು ಅವಳೊಬ್ಬಳೇ. ಅವಳು ತನಗಿದ್ದ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ, ನನ್ನನ್ನು ಮೇಲೆತ್ತಿ, ನಿಧಾನವಾಗಿ ನನ್ನ ಕೋಣೆಗೆ ಕರೆದುಕೊಂಡು ಹೋದಳು. ಆಗ ಅವಳು ಇದನ್ನು ಹೇಗೆ ಮಾಡಿದಳು ಎಂಬುದು ಈಗಲೂ ಅವಳನ್ನು ಆಶ್ಚರ್ಯಪಡಿಸುತ್ತದೆ. ಅಂಥ ಒಂದು ಧೀರ ಸಾಹಸವು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಅಪಘಾತದಿಂದಾದ ಈ ಗಾಯವನ್ನು ನಿಭಾಯಿಸುವುದು, ನನ್ನ ಜೀವನದಲ್ಲೇ ನಾನು ಅನುಭವಿಸಿರುವ ಅತ್ಯಂತ ಕಷ್ಟಕರ ಸನ್ನಿವೇಶವಾಗಿದೆ. ಇದಲ್ಲದೆ, ಇನ್ನು ಮುಂದೆಯೂ ನಾನು ನೋವನ್ನು ಸಹಿಸಿಕೊಂಡು ಬಾಳಬೇಕಾಗಿದೆ. ಬೇರೆ ಯಾವುದೇ ಸಂಗತಿಯೂ ನನ್ನ ಜೀವನವನ್ನು ಮತ್ತು ನಂಬಿಕೆಯನ್ನು ಇಷ್ಟರ ಮಟ್ಟಿಗೆ ಪರೀಕ್ಷೆಗೊಡ್ಡಿಲ್ಲ. ದೀನಭಾವ, ವಿವೇಕ, ಮತ್ತು ಸಹಾನುಭೂತಿಯ ವಿಷಯದಲ್ಲಿ ನಾನು ಅನೇಕ ಪಾಠಗಳನ್ನು ಕಲಿತಿದ್ದೇನೆ. ಯೆಹೋವನಲ್ಲಿ ಪೂರ್ಣ ಭರವಸೆ ಹಾಗೂ ದೃಢವಿಶ್ವಾಸವು, ಈ ಸಮಸ್ಯೆಯನ್ನು ಯಶಸ್ವಿಕರವಾಗಿ ತಾಳಿಕೊಳ್ಳಲು ನನಗೆ ಸಹಾಯಮಾಡಿದೆ.

ಅಪೊಸ್ತಲ ಪೌಲನ ಈ ಮಾತುಗಳ ಸತ್ಯತೆಯನ್ನು ನಾನು ಮನಗಂಡಿದ್ದೇನೆ: “ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು ತೋರುವದಕ್ಕಾಗಿ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು.” (2 ಕೊರಿಂಥ 4:⁠7) ಬರಲಿರುವ ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಕುರಿತಾದ ದೇವರ ವಾಗ್ದಾನದಿಂದ ನಾನು ಅತ್ಯಧಿಕ ಸಾಂತ್ವನವನ್ನು ಕಂಡುಕೊಳ್ಳುತ್ತೇನೆ. (2 ಪೇತ್ರ 3:13) ನಾನು ಇನ್ನಷ್ಟು ಅಶಕ್ತನೂ ನನ್ನ ಸ್ವಂತ ಬಲದಲ್ಲಿ ಕೊಂಚವನ್ನೇ ಪೂರೈಸಶಕ್ತನೂ ಆಗಿರುವುದಿರಂದ, ಆ ನೂತನ ಲೋಕಕ್ಕಾಗಿ ಕಾಯುತ್ತಿರುವಾಗ ಯೆಹೋವನು ನನ್ನನ್ನು ಪೋಷಿಸಲಿ ಎಂದು ಪ್ರಾರ್ಥಿಸುತ್ತೇನೆ. (g03 4/22)

[ಪುಟ 22ರಲ್ಲಿರುವ ಚಿತ್ರಗಳು]

ನನ್ನ ಕುಟುಂಬದೊಂದಿಗಿನ ಕ್ರೈಸ್ತ ಚಟುವಟಿಕೆಯು, ತಾಳಿಕೊಳ್ಳುವಂತೆ ನನಗೆ ಸಹಾಯಮಾಡಿದೆ