ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೀಟರವಾನಿತ ರೋಗಗಳು ಬೆಳೆಯುತ್ತಿರುವ ಒಂದು ಸಮಸ್ಯೆ

ಕೀಟರವಾನಿತ ರೋಗಗಳು ಬೆಳೆಯುತ್ತಿರುವ ಒಂದು ಸಮಸ್ಯೆ

ಕೀಟರವಾನಿತ ರೋಗಗಳು ಬೆಳೆಯುತ್ತಿರುವ ಒಂದು ಸಮಸ್ಯೆ

ಲ್ಯಾಟಿನ್‌ ಅಮೆರಿಕದ ಮನೆಗಳಲ್ಲಿ ಇದು ಮಲಗುವ ಸಮಯ. ಒಬ್ಬಾಕೆ ಪ್ರೀತಿಪರ ತಾಯಿ ತನ್ನ ಮಗನನ್ನು ಹಾಸಿಗೆಯಲ್ಲಿ ಮಲಗಿಸಿ, ಅವನಿಗೆ ಹೊದಿಕೆಯನ್ನು ಹೊದಿಸಿ, ಗುಡ್‌ ನೈಟ್‌ ಹೇಳುತ್ತಾಳೆ. ಆದರೆ ಮಧ್ಯ ರಾತ್ರಿಯಲ್ಲಿ, ಮೂರು ಸೆಂಟಿಮೀಟರ್‌ಗಿಂತ ಕಡಿಮೆ ಉದ್ದದ, ಹೊಳೆಯುವ, ಕಪ್ಪು ಬಣ್ಣದ, ಒಂದು ಚುಂಬನ ಕೀಟವು ಚಾವಣಿಯ ಬಿರುಕಿನಿಂದ ಹೊರಬಂದು ಹಾಸಿಗೆಯ ಮೇಲೆ ಬಿದ್ದು, ಯಾರಿಗೂ ಪತ್ತೆಯಾಗದ ರೀತಿಯಲ್ಲಿ ಮಲಗಿರುವ ಆ ಮಗುವಿನ ಮುಖದ ಮೇಲೆ ಏರುತ್ತದೆ ಮತ್ತು ತನ್ನ ಕೊಕ್ಕಿನಂಥ ಮೂತಿಯಿಂದ ಮಗುವಿನ ಮೃದುವಾದ ಚರ್ಮವನ್ನು ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾಗಿ ಚುಚ್ಚುತ್ತದೆ. ಆ ಕೀಟವು ರಕ್ತವನ್ನು ಗಬಗಬನೆ ಹೀರಿಕೊಳ್ಳುತ್ತಿರುವಾಗ, ಪರಾವಲಂಬಿ ಜೀವಿಗಳಿಂದ ತುಂಬಿದ ತನ್ನ ಕಲ್ಮಷವನ್ನು ವಿಸರ್ಜಿಸುತ್ತದೆ. ನಿದ್ದೆಯಿಂದೇಳದೆ ಆ ಮಗು ತನ್ನ ಮುಖವನ್ನು ತುರಿಸುತ್ತದೆ ಮತ್ತು ಈ ಮೂಲಕ ಸೋಂಕು ತಗಲಿದ ಕಲ್ಮಷವು ಗಾಯದೊಳಕ್ಕೆ ಪ್ರವೇಶಿಸುತ್ತದೆ.

ಈ ಒಂದು ಸಂಧಿಸುವಿಕೆಯ ಫಲಿತಾಂಶವಾಗಿ ಮಗು ಶಾಗಸ್‌ ರೋಗಕ್ಕೆ ತುತ್ತಾಗುತ್ತದೆ. ಒಂದು ಅಥವಾ ಎರಡು ವಾರಗಳೊಳಗೆ, ಅವನಿಗೆ ತೀಕ್ಷ್ಣವಾದ ಜ್ವರ ಬರುತ್ತದೆ ಮತ್ತು ಅವನ ದೇಹವು ಉಬ್ಬಿಕೊಳ್ಳುತ್ತದೆ. ಅವನು ಜ್ವರ ಮತ್ತು ದೇಹದ ಉಬ್ಬುವಿಕೆಯಿಂದ ಪಾರಾದರೂ, ಪರಾವಲಂಬಿಗಳು ಅವನ ದೇಹದಲ್ಲಿ ವಾಸಿಸತೊಡಗುತ್ತಾ ಅವನ ಹೃದಯ, ನರಗಳು, ಮತ್ತು ಆಂತರಿಕ ಅಂಗಾಂಶಗಳನ್ನು ಪ್ರವೇಶಿಸುತ್ತವೆ. ಇದು ಸಂಭವಿಸಿದ ಬಳಿಕ, ರೋಗದ ಯಾವುದೇ ಲಕ್ಷಣಗಳಿಲ್ಲದೆಯೇ ಸುಮಾರು 10ರಿಂದ 20 ವರುಷಗಳು ದಾಟಬಹುದು. ಆದರೆ ನಂತರ, ಅವನ ಜೀರ್ಣೇಂದ್ರಿಯ ಅಂಗಭಾಗದಲ್ಲಿ ಗಾಯವು ಉಂಟಾಗಬಹುದು, ಮಿದುಳಿಗೆ ಸೋಂಕು ತಟ್ಟಬಹುದು, ಮತ್ತು ಕೊನೆಗೆ ಹೃದಯಸ್ತಂಭನದಿಂದ ಅವನು ಮೃತನಾಗಬಹುದು.

ಈ ಕಾಲ್ಪನಿಕ ಘಟನೆಯು, ಯಾವ ರೀತಿಯಲ್ಲಿ ಶಾಗಸ್‌ ರೋಗವು ಒಬ್ಬ ವ್ಯಕ್ತಿಗೆ ತಗಲಸಾಧ್ಯವಿದೆ ಎಂಬುದನ್ನು ನೈಜವಾಗಿ ಚಿತ್ರಿಸುತ್ತದೆ. ಲ್ಯಾಟಿನ್‌ ಅಮೆರಿಕದಲ್ಲಿ, ಕೋಟಿಗಟ್ಟಲೆ ಜನರು ಈ ಮರಣ ಚುಂಬನವನ್ನು ಪಡೆಯುವ ಗಂಡಾಂತರದಲ್ಲಿರಬಹುದು.

ಮಾನವನ ಬಹು ಕಾಲುಗಳುಳ್ಳ ಸಂಗಾತಿ

“ಮನುಷ್ಯನಿಗೆ ಬರುವ ತೀಕ್ಷ್ಣ ಜ್ವರಗಳಲ್ಲಿ ಹೆಚ್ಚಿನವು ಕೀಟಗಳಿಂದ ಸಾಗಿಸಲ್ಪಡುವ ಸೂಕ್ಷ್ಮಜೀವಿಗಳಿಂದ ಉಂಟಾಗುತ್ತವೆ,” ಎಂಬುದಾಗಿ ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕ ತಿಳಿಸುತ್ತದೆ. ಜನರು ಸಾಮಾನ್ಯವಾಗಿ “ಕೀಟ” ಎಂಬ ಪದವನ್ನು, ನಿಜವಾದ ಕೀಟ ವರ್ಗಕ್ಕೆ ಸೇರಿದ ಆರು ಕಾಲಿನ ಜೀವಿಗಳಾದ ನೊಣಗಳು, ಚಿಗಟಗಳು, ಸೊಳ್ಳೆಗಳು, ಹೇನುಗಳು, ಮತ್ತು ಜೀರುಂಡೆಗಳಿಗೆ ಮಾತ್ರವಲ್ಲದೆ, ಎಂಟು ಕಾಲಿನ ಜೀವಿಗಳಾದ ತೊಣಚಿ ಹಾಗೂ ಉಣ್ಣಿಹುಳುಗಳನ್ನೂ ಸೂಚಿಸಲು ಉಪಯೋಗಿಸುತ್ತಾರೆ. ವಿಜ್ಞಾನಿಗಳು, ಈ ಎಲ್ಲಾ ಜೀವಿಗಳನ್ನು ಸಂದುಗಾಲುಗಳುಳ್ಳ ಪ್ರಾಣಿಗಳನ್ನೊಳಗೊಂಡ ಒಂದು ದೊಡ್ಡ ವಿಭಾಗದ ಕೆಳಗೆ ಹೆಸರಿಸುತ್ತಾರೆ. ಇದು ಪ್ರಾಣಿಗಳ ಪ್ರಪಂಚದಲ್ಲಿ ಒಂದು ದೊಡ್ಡ ವರ್ಗೀಕರಣವಾಗಿದೆ ಮತ್ತು ಇದರಲ್ಲಿ ಕಡಿಮೆಪಕ್ಷ ಹತ್ತು ಲಕ್ಷ ಜಾತಿಗಳ ಜ್ಞಾತ ಪ್ರಾಣಿಗಳು ಒಳಗೊಂಡಿವೆ.

ಕೀಟಗಳಲ್ಲಿ ಹೆಚ್ಚಿನವು ಮನುಷ್ಯನಿಗೆ ಹಾನಿಯನ್ನುಂಟುಮಾಡುವುದಿಲ್ಲ. ಕೆಲವು ಕೀಟಗಳಂತೂ ಬಹಳ ಪ್ರಯೋಜನಕಾರಿಯೂ ಆಗಿವೆ. ಇವುಗಳಿಲ್ಲದಿದ್ದರೆ, ಮಾನವರು ಮತ್ತು ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಅವಲಂಬಿಸಿರುವ ಸಸ್ಯ ಹಾಗೂ ಮರಗಳು ಪರಾಗಸ್ಪರ್ಶವಾಗದೆಯೂ ಫಲವನ್ನು ಫಲಿಸದೆಯೂ ಇರುತ್ತಿದ್ದವು. ತ್ಯಾಜ್ಯ ಪದಾರ್ಥಗಳನ್ನು ಪುನಃ ಬಳಸುವಂತೆ ಪರಿವರ್ತಿಸುವುದರಲ್ಲಿ ಕೆಲವು ಕೀಟಗಳು ಸಹಾಯಮಾಡುತ್ತವೆ. ಅನೇಕ ಕೀಟಗಳು ಕೇವಲ ಸಸ್ಯಗಳನ್ನು ತಿಂದು ಜೀವಿಸುತ್ತವೆ, ಆದರೆ ಕೆಲವು ಇತರ ಕೀಟಗಳನ್ನು ತಿನ್ನುತ್ತವೆ.

ತಮ್ಮ ನೋವನ್ನುಂಟುಮಾಡುವ ಕಡಿತದ ಮೂಲಕ ಅಥವಾ ದೊಡ್ಡ ಸಂಖ್ಯೆಯ ಅಸ್ತಿತ್ವದ ಮೂಲಕ, ಮನುಷ್ಯನನ್ನು ಮತ್ತು ಮೃಗಗಳನ್ನು ಪೀಡಿಸುವ ಕೀಟಗಳೂ ಇವೆ ಎಂಬುದು ನಿಶ್ಚಯ. ಕೆಲವು ಕೀಟಗಳು ಪೈರುಗಳಿಗೂ ಹಾನಿಯನ್ನುಂಟುಮಾಡುತ್ತವೆ. ಹಾಗಿದ್ದರೂ, ರೋಗಗಳನ್ನು ಮತ್ತು ಮರಣವನ್ನು ಹರಡಿಸುವ ಕೀಟಗಳು ತೀರ ಹಾನಿಕಾರವಾಗಿವೆ. “17ನೆಯ ಶತಮಾನದಿಂದ 20ನೆಯ ಶತಮಾನದ ಆದಿ ಭಾಗದ ವರೆಗೆ ಸಂಭವಿಸಿದ ಹೆಚ್ಚಿನ ಮಾನವ ರೋಗ ಮತ್ತು ಮರಣಗಳಿಗೆ, ಬೇರೆಲ್ಲ ಕಾರಣಗಳಿಗಿಂತ” ಕೀಟರವಾನಿತ ರೋಗಗಳೇ ಕಾರಣವಾಗಿವೆ ಎಂಬುದಾಗಿ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟು ಕೇಂದ್ರದ ಡ್ವೇನ್‌ ಗಬ್ಲರ್‌ ತಿಳಿಸುತ್ತಾರೆ.

ಈಗ, ಪ್ರತಿ 6 ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿಯು ಕೀಟಗಳಿಂದ ಬರುವ ರೋಗದಿಂದ ಸೋಂಕಿತನಾಗಿದ್ದಾನೆ. ಕೀಟರವಾನಿತ ರೋಗವು ಮಾನವರಿಗೆ ನರಳಾಟವನ್ನು ಉಂಟುಮಾಡುವುದು ಮಾತ್ರವಲ್ಲದೆ, ಅವರ ಮೇಲೆ ಹಣಕಾಸಿನ ದೊಡ್ಡ ಹೊರೆಯನ್ನೂ ಹೊರಿಸುತ್ತದೆ. ಯಾರು ಹಣ ವೆಚ್ಚಮಾಡಲು ಅಶಕ್ತರಾಗಿದ್ದಾರೋ ಮುಖ್ಯವಾಗಿ ಆ ಹಿಂದುಳಿದ ದೇಶಗಳವರಿಗೆ ಇದು ಒಂದು ದೊಡ್ಡ ಹೊರೆಯಾಗಿದೆ. ಅಂಥ ಸೋಂಕು ವ್ಯಾಧಿಯು ಕೇವಲ ಒಮ್ಮೆ ತಲೆದೋರಿದರೂ ಅದು ಬಹು ದುಬಾರಿಯಾಗಿರುತ್ತದೆ. 1994ರಲ್ಲಿ ಪಶ್ಚಿಮ ಭಾರತದಲ್ಲಿ ಸಂಭವಿಸಿದ ಅಂಥ ಒಂದು ಘಟನೆಯು, ಸ್ಥಳಿಕ ಮತ್ತು ಜಗದ್ವ್ಯಾಪಕ ಆರ್ಥಿಕ ವ್ಯವಸ್ಥೆಯಿಂದ ನೂರಾರು ಕೋಟಿ ಡಾಲರ್‌ ಹಣವನ್ನು ಬರಿದು ಮಾಡಿತು. ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂಏಚ್‌ಓ)ಗನುಸಾರ, ಇಂಥ ಆರೋಗ್ಯ ಸಮಸ್ಯೆಗಳನ್ನು ಹತೋಟಿಗೆ ತರುವ ವರೆಗೂ ಲೋಕದ ಬಡ ದೇಶಗಳು ತಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿಹೊಂದಸಾಧ್ಯವಿಲ್ಲ.

ಕೀಟಗಳು ನಮ್ಮನ್ನು ರೋಗಗ್ರಸ್ಥರಾಗಿಸುವ ವಿಧ

ಕೀಟಗಳು, ಎರಡು ಮುಖ್ಯ ವಿಧಗಳಲ್ಲಿ ರೋಗಗಳನ್ನು ರವಾನಿಸುತ್ತವೆ. ಮೊದಲನೆಯದು, ಸ್ವಯಂಚಾಲಿತ ರವಾನೆ. ಅಂದರೆ, ಜನರು ಹೇಗೆ ತಮ್ಮ ಅಶುದ್ಧವಾದ ಪಾದರಕ್ಷೆಗಳ ಮೂಲಕ ಕೊಳೆಯನ್ನು ಮನೆಯೊಳಕ್ಕೆ ತೆಗೆದುಕೊಂಡು ಹೋಗಸಾಧ್ಯವಿದೆಯೋ, ಅದೇ ರೀತಿಯಲ್ಲಿ “ನೊಣಗಳು ತಮ್ಮ ಕಾಲುಗಳ ಮೂಲಕ ಮಿಲ್ಯಾಂತರ ಸೂಕ್ಷ್ಮಜೀವಿಗಳನ್ನು ತೆಗೆದುಕೊಂಡು ಬರಸಾಧ್ಯವಿದೆ. ಈ ಸೂಕ್ಷ್ಮಜೀವಿಗಳು ಅಧಿಕ ಸಂಖ್ಯೆಯಲ್ಲಿರುವಾಗ ಅವು ರೋಗವನ್ನು ಉಂಟುಮಾಡಸಾಧ್ಯವಿದೆ” ಎಂಬುದಾಗಿ ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕ ತಿಳಿಸುತ್ತದೆ. ಉದಾಹರಣೆಗೆ, ನೊಣಗಳು ಮಲದಿಂದ ಹೊಲಸನ್ನು ತೆಗೆದುಕೊಂಡು ಬರಸಾಧ್ಯವಿದೆ ಮತ್ತು ನಂತರ ನಮ್ಮ ಆಹಾರ ಅಥವಾ ಪಾನೀಯದ ಮೇಲೆ ಕುಳಿತುಕೊಳ್ಳುವಾಗ ಅವುಗಳನ್ನು ಸಾಗಿಸುತ್ತವೆ. ಈ ರೀತಿಯಲ್ಲಿ, ಟೈಫಾಯ್ಡ್‌, ಆಮಶಂಕೆ, ಮತ್ತು ಕಾಲರಾ ಮುಂತಾದ ದುರ್ಬಲಗೊಳಿಸುವ ಮತ್ತು ಮರಣಕಾರಕವಾದ ಅಸ್ವಸ್ಥತೆಗೆ ಮನುಷ್ಯರು ಗುರಿಯಾಗುತ್ತಾರೆ. ಲೋಕದಲ್ಲಿರುವ ಕುರುಡುತನಕ್ಕೆ ಮುಖ್ಯ ಕಾರಣವಾಗಿರುವ ಕಣ್ಣಿನ ರವೆ ರೋಗ (ಟ್ರಾಕೋಮಾ)ವನ್ನು ಹರಡಿಸುವುದರಲ್ಲಿಯೂ ನೊಣಗಳು ಸಹಾಯಕಾರಿಯಾಗಿವೆ. ಕಣ್ಣಿನ ರವೆ ರೋಗವು, ಕಣ್ಣುಗುಡ್ಡೆಯನ್ನು​—⁠ಕಣ್ಣಿನ ಪಾಪೆ ಪೊರೆಯ ಮುಂದುಗಡೆಯಿರುವ, ಕಣ್ಣಿನಲ್ಲಿ ಸ್ಪಷ್ಟವಾಗಿ ಕಾಣುವ ಭಾಗ​—⁠ಕಲೆಗಟ್ಟಿಸುವ ಮೂಲಕ ಕುರುಡುತನವನ್ನು ಉಂಟುಮಾಡುತ್ತದೆ. ಲೋಕವ್ಯಾಪಕವಾಗಿ ಸುಮಾರು 50,00,00,000 ಮಾನವರು ಈ ಪೀಡೆಯಿಂದ ಕಷ್ಟಾನುಭವಿಸುತ್ತಿದ್ದಾರೆ.

ಹೊಲಸಿನಲ್ಲಿ ಸಂಖ್ಯಾವೃದ್ಧಿಯಾಗುವ ಜಿರಲೆಗಳು ಸಹ ರೋಗವನ್ನು ಸ್ವಯಂಚಾಲಿತವಾಗಿ ರವಾನಿಸುತ್ತವೆಂದು ಶಂಕಿಸಲಾಗಿದೆ. ಅದಕ್ಕೆ ಕೂಡಿಕೆಯಾಗಿ, ಮುಖ್ಯವಾಗಿ ಮಕ್ಕಳಲ್ಲಿ ಉಬ್ಬಸ ರೋಗದ ಇತ್ತೀಚಿನ ಏರುವಿಕೆಗೆ, ಜಿರಲೆಗಳ ಅಲರ್ಜಿ ಕಾರಣವಾಗಿದೆ ಎಂಬುದಾಗಿ ಪರಿಣತರು ತಿಳಿಸುತ್ತಾರೆ. ದೃಷ್ಟಾಂತಕ್ಕಾಗಿ, ಉಬ್ಬಸದ ಕಾರಣ ಅನೇಕ ರಾತ್ರಿಗಳನ್ನು ಉಸಿರಾಡುವ ತೊಂದರೆಗಳೊಂದಿಗೆ ಹೆಣಗಾಡುತ್ತಾ ಕಳೆದ ಆ್ಯಷ್‌ಲೀ ಎಂಬ 15 ವರುಷ ಪ್ರಾಯದ ಹುಡುಗಿಯನ್ನು ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿರಿ. ಅವಳ ಶ್ವಾಸಕೋಶದ ಸದ್ದನ್ನು ಕೇಳಿಸಿಕೊಳ್ಳಲೆಂದು ವೈದ್ಯರು ಹೋದಾಗ, ಒಂದು ಜಿರಲೆಯು ಆ್ಯಷ್‌ಲೀಯ ಬಟ್ಟೆಯಿಂದ ಕೆಳಗೆ ಬಿದ್ದು, ಪರೀಕ್ಷಾ ಮೇಜಿನ ಕಡೆಗೆ ಓಡಿತು.

ಕೀಟಗಳೊಳಗಿನಿಂದ ಬರುವ ರೋಗಗಳು

ಕೀಟಗಳು ತಮ್ಮ ದೇಹದೊಳಗೆ ವೈರಸ್‌, ಬ್ಯಾಕ್ಟೀರಿಯ ಅಥವಾ ಪರಾವಲಂಬಿ ಜೀವಿಗಳನ್ನು ಆಶ್ರಯಿಸಿಕೊಂಡಿದ್ದು, ಕಡಿತದ ಅಥವಾ ಇತರ ವಿಧದಲ್ಲಿ ಅದನ್ನು ದಾಟಿಸುವ ಮೂಲಕವೂ ರೋಗವನ್ನು ಹರಡಿಸಸಾಧ್ಯವಿದೆ ಮತ್ತು ಇದು ಎರಡನೇ ವಿಧವಾಗಿದೆ. ಕೇವಲ ಸಣ್ಣ ಪ್ರತಿಶತ ಕೀಟಗಳು ಈ ರೀತಿಯಲ್ಲಿ ರೋಗಗಳನ್ನು ಮಾನವರಿಗೆ ರವಾನಿಸುತ್ತವೆ. ದೃಷ್ಟಾಂತಕ್ಕೆ, ಸೊಳ್ಳೆಗಳಲ್ಲಿ ಸಾವಿರಾರು ಜಾತಿಯ ಸೊಳ್ಳೆಗಳಿರುವುದಾದರೂ, ಅನಾಫಿಲೀಸ್‌ ಜಾತಿಯ ಸೊಳ್ಳೆಯು ಮಾತ್ರ ಮಲೇರಿಯ ರೋಗವನ್ನು ರವಾನಿಸುತ್ತದೆ. ಇದು, (ಕ್ಷಯರೋಗದ ನಂತರ) ಲೋಕದಲ್ಲೇ ಎರಡನೇ ಸ್ಥಾನದಲ್ಲಿರುವ ಮಾರಕ ಅಂಟುರೋಗವಾಗಿದೆ.

ಹಾಗಿದ್ದರೂ, ಇತರ ಸೊಳ್ಳೆಗಳು ಅನೇಕ ವಿವಿಧ ರೋಗಗಳನ್ನು ರವಾನಿಸುತ್ತವೆ. ಡಬ್ಲ್ಯೂಏಚ್‌ಓ ವರದಿಸುವುದು: “ರೋಗರವಾನಿಸುವಂಥ ಎಲ್ಲಾ ಕೀಟಗಳಲ್ಲಿ, ಸೊಳ್ಳೆಯು ಅತಿ ಅಪಾಯಕಾರಿ. ಮಲೇರಿಯ, ಡೆಂಗೀ ಜ್ವರ ಮತ್ತು ಪೀತಜ್ವರವನ್ನು ಇದು ಹರಡಿಸುತ್ತದೆ. ಈ ಮೂರು ರೋಗಗಳನ್ನು ಒಟ್ಟುಸೇರಿಸುವಾಗ, ಪ್ರತಿ ವರುಷ ಸಂಭವಿಸುವ ಲಕ್ಷಾಂತರ ಮರಣಗಳಿಗೆ ಮತ್ತು ಕೋಟಿಗಟ್ಟಲೆ ಸೋಂಕು ರೋಗಿಗಳಿಗೆ ಕಾರಣವಾಗಿರುತ್ತವೆ.” ಲೋಕದ ಜನಸಂಖ್ಯೆಯಲ್ಲಿ ಹೆಚ್ಚುಕಡಿಮೆ 40 ಪ್ರತಿಶತದಷ್ಟು ಜನರು ಮಲೇರಿಯ ರೋಗ ತಗಲುವ ಗಂಡಾಂತರದಲ್ಲಿದ್ದಾರೆ ಮತ್ತು ಸುಮಾರು 40 ಪ್ರತಿಶತ ಜನರು ಡೆಂಗೀ ಜ್ವರ ತಗಲುವ ಗಂಡಾಂತರದಲ್ಲಿದ್ದಾರೆ. ಅನೇಕ ಸ್ಥಳಗಳಲ್ಲಿ, ಒಬ್ಬ ವ್ಯಕ್ತಿಗೆ ಈ ಎರಡೂ ಅಸ್ವಸ್ಥತೆಗಳು ತಗಲಸಾಧ್ಯವಿದೆ.

ಆದರೂ, ಸೊಳ್ಳೆಗಳು ಮಾತ್ರ ತಮ್ಮೊಳಗೆ ರೋಗವನ್ನು ಹೊತ್ತುಕೊಂಡು ಹೋಗುವ ಕೀಟಗಳಲ್ಲ. ಟ್ಸೆಟ್ಸಿ ನೊಣಗಳು ಪ್ರೋಟೋಸೋವಾವನ್ನು ರವಾನಿಸುತ್ತವೆ ಮತ್ತು ಇದು ಲಕ್ಷಾಂತರ ಜನರನ್ನು ಬಾಧಿಸುತ್ತಿರುವ ನಿದ್ರಾ ರೋಗವನ್ನು ಉಂಟುಮಾಡುತ್ತದೆ. ಇದರಿಂದಾಗಿ ಇಡೀ ಸಮಾಜಗಳೇ ತಮ್ಮ ಫಲವತ್ತಾದ ಭೂಮಿಯನ್ನು ಬಿಟ್ಟುಹೋಗುವಂತೆ ಒತ್ತಾಯಿಸಲ್ಪಡುತ್ತವೆ. ಕಪ್ಪು ನೊಣಗಳು, ಪರಾವಲಂಬಿ ಜೀವಿಯನ್ನು ರವಾನಿಸುವ ಮೂಲಕ ನದೀ ಕುರುಡನ್ನು ಉಂಟುಮಾಡಿ, ಆಫ್ರಿಕದ ಸುಮಾರು 4,00,000 ಜನರನ್ನು ಕುರುಡರನ್ನಾಗಿ ಮಾಡಿವೆ. ಗಾಳದ ನೊಣಗಳು, ಲೀಷ್ಮನೈಅಸಿಸ್‌ ರೋಗವನ್ನು​—⁠ಲೋಕವ್ಯಾಪಕವಾಗಿ ಎಲ್ಲಾ ಪ್ರಾಯದ ಲಕ್ಷಾಂತರ ಜನರನ್ನು ಈಗ ಬಾಧಿಸುತ್ತಿರುವ ವಿವಿಧ ರೀತಿಯ ಅಂಗವಿಕಲತೆ, ಅಂಗವಿಕಾರತೆ, ಮತ್ತು ಅನೇಕವೇಳೆ ಮಾರಕ ರೋಗಗಳನ್ನು​—⁠ಉಂಟುಮಾಡುವ ಪ್ರೋಟೋಸೋವಾವನ್ನು ರವಾನಿಸುತ್ತವೆ. ಎಲ್ಲೆಡೆಯಲ್ಲಿಯೂ ಕಂಡುಬರುವ ಚಿಗಟಗಳು, ಲಾಡಿಹುಳು, ಎನ್‌ಸೆಫಲೈಟಿಸ್‌, ಟೂಲರೀಮಿಯ ಮತ್ತು ಪ್ಲೇಗು ರೋಗಗಳ ಆತಿಥೇಯ ಕೀಟವಾಗಿರಬಲ್ಲವು. ಪ್ಲೇಗು ರೋಗ ಎಂಬುದಾಗಿ ಹೇಳುವಾಗ, ಮಧ್ಯಯುಗಗಳಲ್ಲಿ ಯೂರೋಪಿನ ಮೂರನೇ ಒಂದಂಶ ಜನಸಂಖ್ಯೆಯನ್ನು ಕೇವಲ ಆರು ವರುಷಗಳಲ್ಲಿ ನಾಶಗೊಳಿಸಿದ ಕರಿ ಮೃತ್ಯು ಎಂದು ಕರೆಯಲ್ಪಟ್ಟಿದ್ದ ಪ್ಲೇಗು ರೋಗವನ್ನು ಸೂಚಿಸಲಾಗಿದೆ.

ಹೇನುಗಳು, ತೊಣಚಿಗಳು, ಮತ್ತು ಉಣ್ಣಿಹುಳುಗಳು, ಇತರ ರೋಗಗಳನ್ನಲ್ಲದೆ ಅನೇಕ ರೀತಿಯ ಟೈಫಸ್‌ ಜ್ವರವನ್ನು ಉಂಟುಮಾಡಸಾಧ್ಯವಿದೆ. ಲೋಕವ್ಯಾಪಕವಾಗಿ ಸಮಶೀತೋಷ್ಣ ದೇಶಗಳಲ್ಲಿರುವ ಉಣ್ಣಿಹುಳುಗಳು, ಅತಿ ದುರ್ಬಲಗೊಳಿಸುವಂಥ ಲೈಮ್‌ ರೋಗವನ್ನು ಸಾಗಿಸುತ್ತವೆ. ಲೈಮ್‌ ರೋಗವು, ಅಮೆರಿಕ ಮತ್ತು ಯೂರೋಪಿನಲ್ಲಿ ಅತಿ ಸಾಮಾನ್ಯವಾಗಿರುವ ಕೀಟರವಾನಿತ ಕಾಯಿಲೆಯಾಗಿದೆ. ವಲಸೆಹೋಗುವ ಹಕ್ಕಿಗಳು ಸಾವಿರಾರು ಕಿಲೋಮೀಟರ್‌ ದೂರಕ್ಕೆ ಉಣ್ಣಿಹುಳುಗಳನ್ನು ರವಾನಿಸುತ್ತವೆ ಎಂಬುದಾಗಿ ಸ್ವೀಡನ್‌ ದೇಶದಲ್ಲಿ ನಡೆಸಲ್ಪಟ್ಟ ಅಧ್ಯಯನವು ಬಯಲುಪಡಿಸಿತು. ಹೀಗೆ, ಅವು ಈ ರೋಗಗಳನ್ನು ಹೊಸ ಪ್ರದೇಶಗಳಿಗೆ ಪರಿಚಯಪಡಿಸಬಲ್ಲವು. “ಮಾನವರಿಗೆ ರೋಗಗಳನ್ನು ರವಾನಿಸುವ ಸಂಖ್ಯೆಯಲ್ಲಿ ಉಣ್ಣಿಹುಳುಗಳು ಬೇರೆಲ್ಲಾ ಸಂದುಗಾಲುಳ್ಳ ಪ್ರಾಣಿಗಳನ್ನು (ಸೊಳ್ಳೆಗಳನ್ನು ಬಿಟ್ಟು) ಮೀರಿಸುತ್ತವೆ” ಎಂಬುದಾಗಿ ಬ್ರಿಟ್ಯಾನಿಕ ತಿಳಿಸುತ್ತದೆ. ವಾಸ್ತವದಲ್ಲಿ, ಒಂದು ಉಣ್ಣಿಹುಳು ಮೂರು ವಿವಿಧ ರೋಗಗಳನ್ನು ಉಂಟುಮಾಡುವ ಜೀವಾಣುಗಳನ್ನು ಸಾಗಿಸಬಲ್ಲದು ಮತ್ತು ಅವೆಲ್ಲವುಗಳನ್ನು ಒಂದೇ ಕಡಿತದಲ್ಲಿ ಸಾಗಿಸಬಲ್ಲದು!

ರೋಗದಿಂದ “ವಿಶ್ರಾಂತಿ”

ಕೀಟಗಳು ರೋಗವನ್ನು ರವಾನಿಸಬಲ್ಲವೆಂಬುದು 1877ರ ವರೆಗೆ ವೈಜ್ಞಾನಿಕವಾಗಿ ರುಜುಪಡಿಸಲ್ಪಟ್ಟಿರಲಿಲ್ಲ. ಆದರೆ ಅಂದಿನಿಂದ, ರೋಗವಾಹಕ ಕೀಟಗಳನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಅತಿ ಬೃಹತ್‌ ಚಳವಳಿಗಳು ನಡಿಸಲ್ಪಟ್ಟವು. 1939ರಲ್ಲಿ ಕೀಟನಾಶಕ ಡಿಡಿಟಿಯನ್ನು, ಈ ರೋಗವಾಹಕ ಕೀಟಗಳ ವಿರುದ್ಧ ಹೋರಾಡಲು ಉಪಯೋಗಿಸಲಾಯಿತು. ಇಸವಿ 1960ರಷ್ಟಕ್ಕೆ, ಆಫ್ರಿಕವನ್ನು ಬಿಟ್ಟು ಬೇರೆ ಸ್ಥಳಗಳಲ್ಲಿ ಕೀಟರವಾನಿತ ರೋಗವು ಜನಸಾಮಾನ್ಯರ ಆರೋಗ್ಯಕ್ಕೆ ಒಂದು ಮಹತ್ತರವಾದ ಬೆದರಿಕೆಯಾಗಿರಲಿಲ್ಲ. ಕೀಟಗಳನ್ನು ನಿಯಂತ್ರಿಸುವುದರ ಬದಲಾಗಿ ತುರ್ತು ಪರಿಸ್ಥಿತಿಗಳಲ್ಲಿ ವ್ಯಕ್ತಿಗಳಿಗೆ ಔಷಧವನ್ನು ಕೊಡುವ ಮೂಲಕ ಅವರನ್ನು ಗುಣಪಡಿಸುವುದರ ಮತ್ತು ಕೀಟಗಳ ಹಾಗೂ ಅವುಗಳು ಬೆಳೆದು ವೃದ್ಧಿಯಾಗುವ ಸ್ಥಳಗಳ ಕುರಿತು ಅಧ್ಯಯನಮಾಡುವುದಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಯಿತು. ಹೊಸ ಔಷಧಗಳನ್ನೂ ಕಂಡುಹಿಡಿಯಲಾಯಿತು ಮತ್ತು ಯಾವುದೇ ಅಸ್ವಸ್ಥತೆಯನ್ನು ಹೋಗಲಾಡಿಸುವ ಸಾಮರ್ಥ್ಯವಿರುವ “ಅದ್ಭುತ ಔಷಧ”ವನ್ನು ವಿಜ್ಞಾನಿಗಳು ಕಂಡುಹಿಡಿಯಬಲ್ಲರೆಂಬಂತೆ ತೋರಿಬಂತು. ಲೋಕವು ಸೋಂಕು ರೋಗದಿಂದ “ವಿಶ್ರಾಂತಿ”ಯನ್ನು ಅನುಭವಿಸುತ್ತಿತ್ತು. ಆದರೆ ಆ ವಿಶ್ರಾಂತಿಯು ಬೇಗನೆ ಕೊನೆಗೊಳ್ಳಲಿತ್ತು. ಏಕೆಂಬುದನ್ನು ಮುಂದಿನ ಲೇಖನವು ಚರ್ಚಿಸುತ್ತದೆ.(g03 5/22)

[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]

ಇಂದು 6 ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿಯು ಕೀಟರವಾನಿತ ರೋಗದಿಂದ ಸೋಂಕಿತನಾಗಿದ್ದಾನೆ

[ಪುಟ 3ರಲ್ಲಿರುವ ಚಿತ್ರ]

ಚುಂಬನ ಕೀಟ

[ಪುಟ 4ರಲ್ಲಿರುವ ಚಿತ್ರ]

ನೊಣಗಳು ತಮ್ಮ ಕಾಲುಗಳ ಮೂಲಕ ರೋಗವನ್ನುಂಟುಮಾಡುವ ಕಾರಕಗಳನ್ನು ರವಾನಿಸುತ್ತವೆ

[ಪುಟ 5ರಲ್ಲಿರುವ ಚಿತ್ರಗಳು]

ಅನೇಕ ಕೀಟಗಳು ತಮ್ಮ ದೇಹದೊಳಗೆ ರೋಗಗಳನ್ನು ಹೊತ್ತುಕೊಂಡು ಸಾಗುತ್ತವೆ

ಕಪ್ಪು ನೊಣಗಳು ನದೀ ಕುರುಡನ್ನು ಸಾಗಿಸುತ್ತವೆ

ಸೊಳ್ಳೆಗಳು ಮಲೇರಿಯ, ಡೆಂಗೀ ಜ್ವರ, ಮತ್ತು ಪೀತಜ್ವರವನ್ನು ರವಾನಿಸುತ್ತವೆ

ಹೇನುಗಳು ಟೈಫಸ್‌ ಜ್ವರವನ್ನು ಉಂಟುಮಾಡಸಾಧ್ಯವಿದೆ

ಚಿಗಟಗಳು ಮಸ್ತಿಷ್ಕೋದ್ರೇಕ ಮತ್ತು ಇತರ ರೋಗಗಳಿಗೆ ಆಶ್ರಯಸ್ಥಾನವಾಗಿವೆ

ಟ್ಸೆಟ್ಸಿ ನೊಣಗಳು ನಿದ್ರಾ ರೋಗವನ್ನು ರವಾನಿಸುತ್ತವೆ

[ಕೃಪೆ]

WHO/TDR/LSTM

CDC/James D. Gathany

CDC/Dr. Dennis D. Juranek

CDC/Janice Carr

WHO/TDR/Fisher

[ಪುಟ 4ರಲ್ಲಿರುವ ಚಿತ್ರ ಕೃಪೆ]

Clemson University - USDA Cooperative Extension Slide Series, www.insectimages.org