ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಕುಂಡಗಳಲ್ಲಿ ನೆಟ್ಟ ಸಸಿಗಳ ಮೌಲ್ಯ

“ಶಾಲೆಯ ಕ್ಲಾಸ್‌ರೂಮಿನೊಳಗೆ ಕುಂಡಗಳಲ್ಲಿ ನೆಟ್ಟ ಸಸಿಗಳನ್ನು ಇಡುವುದಾದರೆ ಸಾವಿರಾರು ಮಕ್ಕಳು ಹೆಚ್ಚಿನ ಅಂಕಗಳನ್ನು ಗಳಿಸಬಹುದು,” ಎಂದು ಸಂಶೋಧಕರು ತಿಳಿಸಿದ್ದಾರೆಂದು ದಿ ಟೈಮ್ಸ್‌ ಆಫ್‌ ಲಂಡನ್‌ ವಾರ್ತಾಪತ್ರಿಕೆಯು ವರದಿಸಿತು. ಹೆಚ್ಚು ಮಕ್ಕಳಿಂದ ಕೂಡಿದ ಮತ್ತು ಸರಿಯಾದ ಗಾಳಿ ಸಂಚಾರವಿಲ್ಲದ ಕೋಣೆಯಲ್ಲಿ, ಬೇಕಾಗಿರುವುದಕ್ಕಿಂತ 500 ಪ್ರತಿಶತ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲಾಮ್ಲವು ಇರುತ್ತದೆಂದು, ರೀಡಿಂಗ್‌ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ ಡೆರಿಕ್‌ ಕ್ಲೆಮೆನ್ಟ್ಸ್‌-ಕ್ರೂಮಿ ಕಂಡುಹಿಡಿದಿದ್ದಾರೆ. ಈ ರೀತಿಯಲ್ಲಿ, ಕೊಠಡಿಯಲ್ಲಿ ಇಂಗಾಲಾಮ್ಲದ ಹೆಚ್ಚಳವು, ಮಕ್ಕಳ ಏಕಾಗ್ರತೆಯನ್ನು ಮತ್ತು ಅವರ ಪ್ರಗತಿಯನ್ನು ತಡೆಗಟ್ಟುತ್ತದೆ. ಈ ಪರಿಸ್ಥಿತಿಯನ್ನು ಅನಾರೋಗ್ಯಕರ ಕ್ಲಾಸ್‌ರೂಮ್‌ ರೋಗಲಕ್ಷಣವೆಂದು ಕರೆಯುತ್ತಾ ಅವರು ತಿಳಿಸುವುದು, ತರಗತಿಯೊಂದರಲ್ಲಿ ಒಬ್ಬ ವಿದ್ಯಾರ್ಥಿಗೆ ಸಿಗುವ ಸ್ಥಳದ ಸರಾಸರಿ ಗಾತ್ರಕ್ಕಿಂತ ಆಫೀಸು ಕಟ್ಟಡಗಳಲ್ಲಿ ಒಬ್ಬ ಉದ್ಯೋಗಿಗೆ ಸಿಗುವ ಸ್ಥಳದ ಗಾತ್ರವು ಐದು ಪಟ್ಟು ಹೆಚ್ಚಾಗಿರುತ್ತದೆ. ಹಾಗಿದ್ದರೂ, “ರೋಗಗ್ರಸ್ಥ ಕಟ್ಟಡದ ಲಕ್ಷಣವು” ಆಫೀಸು ಉದ್ಯೋಗಿಗಳ ಮತ್ತು ಅವರ ಸಾಧನೆಯ ಮೇಲೆ ಪರಿಣಾಮವನ್ನು ಬೀರಿದೆ. ಕೋಣೆಯಲ್ಲಿನ ಗಾಳಿಯ ಮಟ್ಟವನ್ನು ಉತ್ತಮಗೊಳಿಸಲು ಯಾವ ರೀತಿಯ ಸಸಿಗಳನ್ನು ಉಪಯೋಗಿಸಸಾಧ್ಯವಿದೆ? ಅಮೆರಿಕದಲ್ಲಿ ನಡೆಸಿದ ಒಂದು ಅಧ್ಯಯನವು, ಸ್ಪೈಡರ್‌ ಸಸಿಯನ್ನು ಅತಿ ಪರಿಣಾಮಕಾರಿ ಸಸಿ ಎಂದು ಹೆಸರಿಸಿತು. ಡ್ರ್ಯಾಗನ್‌ ಮರಗಳು, ಐವಿ ಲತೆ, ರಬ್ಬರ್‌ ಗಿಡಗಳು, ಶಾಂತಿ ನೈದಿಲೆಗಳು, ಮತ್ತು ಯುಕ್ಕ ಸಸಿಗಳು ಸಹ ಗಾಳಿ ಮಾಲಿನ್ಯವನ್ನು ತಡೆಗಟ್ಟುವುದರಲ್ಲಿ ಪರಿಣಾಮಕಾರಿಯಾಗಿವೆ. ಮನೆಯೊಳಗೆ ಬೆಳೆಸುವಂಥ ಸಸಿಗಳು ಇಂಗಾಲಾಮ್ಲವನ್ನು ಆಮ್ಲಜನಕವಾಗಿ ಪರಿವರ್ತಿಸುವ ಮೂಲಕ ಅದರ ಪ್ರಮಾಣವನ್ನು ಕಡಿಮೆಗೊಳಿಸುತ್ತವೆ. (g03 6/08)

“ಮಾತನಾಡುವ” ಗಿಡಗಳು

ಜರ್ಮನಿಯಲ್ಲಿರುವ, ಬಾನ್‌ ವಿಶ್ವವಿದ್ಯಾನಿಲಯದ ಪ್ರಾಯೋಗಿಕ ಭೌತವಿಜ್ಞಾನ ಸಂಘದಲ್ಲಿನ ಸಂಶೋಧಕರು, ಗಿಡಗಳಿಗೆ “ಕಿವಿಗೊಡ”ಸಾಧ್ಯವಿರುವ ಲೇಸರ್‌ ಧ್ವನಿ ವರ್ಧಕವನ್ನು ತಯಾರಿಸಿದ್ದಾರೆ. ಮರಗಳು ಒತ್ತಡದಲ್ಲಿರುವಾಗ ಹೊರಬಿಡುವ ಎತಿಲೀನ್‌ ಅನಿಲದಿಂದ ಉಂಟಾಗುವ ಧ್ವನಿ ತರಂಗಗಳನ್ನು ಈ ಧ್ವನಿ ವರ್ಧಕಗಳು ಹೀರಿಕೊಳ್ಳತ್ತವೆ. ಬಾನ್‌ ವಿಶ್ವವಿದ್ಯಾನಿಲಯದ ವಿಜ್ಞಾನಿಯಾದ ಡಾ. ಫ್ರಾಂಕ್‌ ಕೂನಮಾನ್‌ ಹೇಳುವುದು: “ಒಂದು ಮರವು ಹೆಚ್ಚೆಚ್ಚು ಒತ್ತಡಕ್ಕೆ ಒಳಗಾದಂತೆ, ನಮ್ಮ ಧ್ವನಿ ವರ್ಧಕದಲ್ಲಿ ನಮಗೆ ಹೆಚ್ಚು ಗಟ್ಟಿಯಾಗಿ ಧ್ವನಿಕೇಳಿಸುತ್ತದೆ.” ಒಂದು ವಿಶ್ಲೇಷಣೆಯಲ್ಲಿ, ಆರೋಗ್ಯಕರವಾಗಿ ತೋರುತ್ತಿದ್ದ ಒಂದು ಸೌತೆ ಬಳ್ಳಿಯು “ಬಹುಮಟ್ಟಿಗೆ ಬೊಬ್ಬೆ ಹಾಕುತ್ತಿರುವುದನ್ನು” ಉಪಕರಣದ ಮೂಲಕ ಕಂಡುಕೊಳ್ಳಲಾಯಿತು. “ಅದರ ಕುರಿತು ಅತಿ ಜಾಗರೂಕತೆಯ ಅಧ್ಯಯನವು, ಅದಕ್ಕೆ ಬುಕುಟು ಹಿಡಿಯಲಾರಂಭಿಸಿತ್ತು ಎಂಬುದನ್ನು ತೋರಿಸಿಕೊಟ್ಟಿತು, ಆದರೂ ರೋಗಲಕ್ಷಣಗಳು ಕಣ್ಣಿಗೆ ಕಾಣಿಸುತ್ತಿರಲಿಲ್ಲ.” ವಾಸ್ತವದಲ್ಲಿ, ಬುಕುಟಿನ ಕಾರಣ ಕಣ್ಣಿಗೆ ಕಾಣಿಸುವ ಚುಕ್ಕೆಗಳು ಉಂಟಾಗಲು ಎಂಟು ಅಥವಾ ಒಂಭತ್ತು ದಿನಗಳು ತಗಲುತ್ತವೆ ಮತ್ತು ಆಗ ಮಾತ್ರ ಬೇಸಾಯಗಾರರು ಸಮಸ್ಯೆಯನ್ನು ಪತ್ತೆಹಚ್ಚಬಲ್ಲರು. “ಮರಗಳ ಗುಟ್ಟಿನ ಮಾತನ್ನು ಕದ್ದು ಕೇಳುವ ಮೂಲಕ, ಕ್ರಿಮಿಕೀಟಗಳನ್ನು ಮತ್ತು ರೋಗವನ್ನು ಅದರ ಆರಂಭದ ಹಂತದಲ್ಲಿಯೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಹಣ್ಣುಹಂಪಲು ಮತ್ತು ತರಕಾರಿ ಸಸ್ಯದ ಒತ್ತಡದ ಮಟ್ಟವನ್ನು ತಿಳಿಯುವುದು, ಅದನ್ನು ಪರಿಣಾಮಕಾರಿ ರೀತಿಯಲ್ಲಿ ಕೂಡಿಡಲು ಮತ್ತು ಸಾಗಿಸಲು ಸಹ ಸಹಾಯಕಾರಿಯಾಗಿರಬಲ್ಲದು” ಎಂಬುದಾಗಿ ಲಂಡನಿನ ದಿ ಟೈಮ್ಸ್‌ ವಾರ್ತಾಪತ್ರಿಕೆಯು ತಿಳಿಸುತ್ತದೆ.(g03 5/08)

ಪೋಪ್‌ ಸ್ಮಾರಕವಸ್ತುಗಳ ಮಾರಾಟವು ಕುಸಿಯುತ್ತಿದೆ

ಅನೇಕ ವರುಷಗಳಿಂದ, “ಧಾರ್ಮಿಕ ವಸ್ತುಗಳನ್ನು ಮಾರುವುದು [ಪೋಲೆಂಡ್‌ನಲ್ಲಿ] ನಿಶ್ಚಿತ ವರಮಾನವನ್ನು ಖಚಿತಪಡಿಸಿತು,” ಎಂಬುದಾಗಿ ನ್ಯೂಸ್‌ವೀಕ್‌ ವಾರ್ತಾಪತ್ರಿಕೆಯ ಪೋಲೆಂಡ್‌ ಆವೃತ್ತಿಯು ವರದಿಸುತ್ತದೆ. ಹಾಗಿದ್ದರೂ, ಇತ್ತೀಚಿನ ಸಮಯವು ಪವಿತ್ರ ಮೂರ್ತಿಗಳ ಮಾರಾಟಕ್ಕೆ “ಒಂದು ಸಂದಿಗ್ಧ ಸಮಯ”ವಾಗಿರುವುದನ್ನು ಗಮನಿಸಲಾಗಿದೆ. 2002ರಲ್ಲಿ ಪೋಲೆಂಡಿಗೆ ಪೋಪರ ಭೇಟಿಯ ಕುರಿತು ಬಹಳಷ್ಟು ಪ್ರಚಾರವು ಇದ್ದರೂ, ಚೈನುಗಳು ಮತ್ತು ವರ್ಣ ಚಿತ್ರಗಳಂಥ ಸಾಂಪ್ರದಾಯಿಕ ಧಾರ್ಮಿಕ ವಸ್ತುಗಳಿಗೆ ಬೇಡಿಕೆಯು ತೀರಾ ಕಡಿಮೆಯಾಗಿತ್ತು. ಪೋಪರ ಚಿತ್ರವನ್ನು ಹೊಂದಿದ, “ಲಕ್ಷಾಂತರ ಪ್ಲ್ಯಾಸ್ಟರ್‌ ಆಫ್‌ ಪ್ಯಾರಿಸಿನ ಮತ್ತು ಲೋಹದ ಪ್ರತಿಮೆಗಳು, ಚಾಪೆಗಳು, ವರ್ಣ ಚಿತ್ರಗಳು, ಹಾಗೂ ಚಿಕ್ಕಬೊಂಬೆಗಳಿಂದ ಮಾರುಕಟ್ಟೆಯು ತುಂಬಿತುಳುಕುತ್ತಿತ್ತು, ಆದರೆ ಗಿರಾಕಿಗಳು ಅತಿ ಜಾಗರೂಕತೆಯಿಂದ ಆಯ್ಕೆಮಾಡುವವರಾಗಿದ್ದಾರೆ,” ಎಂದು ಆ ವಾರ್ತಾಪತ್ರಿಕೆಯು ತಿಳಿಸುತ್ತದೆ. ಹಾಗಿದ್ದರೂ, ಒಂದು ವಿನ್ಯಾಸವು ಬಹಳ ಜನಪ್ರಿಯವಾಗಿದೆ. ಅದು ಪ್ಲ್ಯಾಸ್ಟಿಕ್‌ ಕಾರ್ಡ್‌ ಆಗಿದೆ. ಈ ಪ್ಲ್ಯಾಸ್ಟಿಕ್‌ ಕಾರ್ಡ್‌ನಲ್ಲಿ, ಒಂದು ಬದಿಯಲ್ಲಿ “ಪವಿತ್ರ ಚಿತ್ರಗಳು” ಇವೆ ಮತ್ತು ಇನ್ನೊಂದು ಬದಿಯಲ್ಲಿ “ಹೊಂಬಣ್ಣದ ಜಪಮಣಿಗಳನ್ನು ಕರಗಿಸಿ ಪ್ಲ್ಯಾಸ್ಟಿಕಿಗೆ ಅಂಟಿಸ”ಲಾಗಿದೆ. ಈ “ಜಪಮಾಲೆ ಕಾರ್ಡ್‌ಗಳು” “ಇತ್ತೀಚಿನ ಮತ್ತು ಅತಿ ಜನಪ್ರಿಯ ಪೋಪ್‌” ಸ್ಮಾರಕವಸ್ತುಗಳಾಗಿವೆ ಎಂಬುದಾಗಿ ಪೋಲೆಂಡಿನ ವಿಪ್‌ಪ್ರಾಸ್ಟ್‌ ಸಾಪ್ತಾಹಿಕ ಪತ್ರಿಕೆಯು ತಿಳಿಸುತ್ತದೆ.(g03 5/22)

ಮಾರ್ನಿಂಗ್‌ ಸಿಕ್‌ನೆಸ್‌ ಅನ್ನು ತಡೆಗಟ್ಟುವುದು

“70ರಿಂದ 80 ಪ್ರತಿಶತ ಗರ್ಭಿಣಿಯರು ಮಾರ್ನಿಂಗ್‌ ಸಿಕ್‌ನೆಸ್‌ (ಬೆಳಗ್ಗಿನ ಹೊತ್ತು ಆಗುವ ಓಕರಿಕೆ ಮತ್ತು ವಾಂತಿ)ನಿಂದ ಕಷ್ಟಪಡುತ್ತಾರೆ,” ಎಂಬುದಾಗಿ ಆಸ್ಟ್ರೇಲಿಯದ ಸನ್‌-ಹೆರಾಲ್ಡ್‌ ವಾರ್ತಾಪತ್ರಿಕೆಯು ತಿಳಿಸುತ್ತದೆ. ಈ ಹೊಸದಾಗಿ ಗರ್ಭಧರಿಸಿದ ಸ್ತ್ರೀಯರಿಗೆ, ಬೆಳಗ್ಗಿನ ಹೊತ್ತಿನಲ್ಲಿ ಓಕರಿಕೆ ಮತ್ತು ಅನೇಕವೇಳೆ ವಾಂತಿಯಾಗುತ್ತದೆ. ಈ ಪರಿಸ್ಥಿತಿಗೆ ಶಂಕಿಸಲಾದ ಕಾರಣಗಳಲ್ಲಿ ಒಂದು, ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಪ್ರೋಜೆಸ್ಟರೋನ್‌ ಎಂಬ ಅಂತಃಸ್ರಾವದ ಮಟ್ಟವು ಹೆಚ್ಚಾಗುವುದೇ ಆಗಿದೆ. ಈ ಪ್ರೋಜೆಸ್ಟರೋನ್‌ ಅಂತಃಸ್ರಾವವು ಹೊಟ್ಟೆಯ ಆಮ್ಲವನ್ನು ಹೆಚ್ಚಿಸಸಾಧ್ಯವಿದೆ. ಇದಕ್ಕೆ ಕೂಡಿಕೆಯಾಗಿ, “ಸುವಾಸನೆಯ ಅತಿ ಸೂಕ್ಷ್ಮ ಪರಿಜ್ಞಾನವು ಓಕರಿಕೆ, ಒತ್ತಡ, ನಿತ್ರಾಣ ಮುಂತಾದ ಸಮಸ್ಯೆಗೆ ಗರ್ಭಿಣಿಯು ಗುರಿಯಾಗುವಂತೆ ಮಾಡಸಾಧ್ಯವಿದೆ.” ಮಾರ್ನಿಂಗ್‌ ಸಿಕ್‌ನೆಸ್‌ಗೆ ಯಾವುದೇ ಸಾರ್ವತ್ರಿಕ ಔಷಧವಿಲ್ಲವಾದರೂ, ಬೆಚ್ಚಗಿನ ಸ್ಥಳವು ಓಕರಿಕೆಯನ್ನು ಉಂಟುಮಾಡಸಾಧ್ಯವಿರುವ ಕಾರಣ ಬೆಚ್ಚಗಿನ ಸ್ಥಳಗಳಿಂದ ದೂರವಿರುವಂತೆ, ಹಗಲಿನಲ್ಲಿ ಆಗಾಗ ನಸು ನಿದ್ದೆಯನ್ನು ಹಾಗೂ ರಾತ್ರಿ ಸಾಕಷ್ಟು ನಿದ್ದೆಯನ್ನು ಪಡೆಯುವಂತೆ, ಮತ್ತು ಕತ್ತರಿಸಿದ ಲಿಂಬೆಹಣ್ಣನ್ನು ಆಘ್ರಾಣಿಸುವಂತೆ ವಾರ್ತಾಪತ್ರಿಕೆಯು ಸಲಹೆನೀಡುತ್ತದೆ. “ಸಾದಾ ಬಿಸ್ಕತ್ತುಗಳನ್ನು ಅಥವಾ ಒಣ ಸಿರಿಯಲ್‌ ಅನ್ನು ಬೆಳಗ್ಗೆ ಎದ್ದೊಡನೆ ತಿನ್ನಿರಿ. ಯಾವಾಗಲೂ ಮಂಚದಿಂದ ನಿಧಾನವಾಗಿ ಕೆಳಗಿಳಿಯಿರಿ,” ಎಂಬುದಾಗಿ ವಾರ್ತಾಪತ್ರಿಕೆಯು ಮುಂದುವರಿಸುತ್ತದೆ. “ಸಸಾರಜನಕದಿಂದ ತುಂಬಿದ ತಿಂಡಿಗಳನ್ನು ಆಗಾಗ ಸೇವಿಸಿರಿ.” ವಾರ್ತಾಪತ್ರಿಕೆಯು ತಿಳಿಸುವುದು: “ಮಾರ್ನಿಂಗ್‌ ಸಿಕ್‌ನೆಸ್‌ನಿಂದ ಪ್ರಯೋಜನವೂ ಇದೆ. ಮಾರ್ನಿಂಗ್‌ ಸಿಕ್‌ನೆಸ್‌ ಅನ್ನು ಅನುಭವಿಸಿದ ತಾಯಂದಿರಲ್ಲಿ ಕಡಿಮೆ ಗರ್ಭಪಾತವು ಸಂಭವಿಸಿದೆ ಎಂಬುದಾಗಿ ಇತ್ತೀಚಿನ ಅಧ್ಯಯನಗಳು ಸೂಚಿಸಿವೆ.” (g03 4/22)

ಭಾರತದಲ್ಲಿ ವಾರ್ತಾಮಾಧ್ಯಮಗಳ ಬೆಳವಣಿಗೆ

ಮೂರು ವರುಷ ಕಾಲಾವಧಿಯಲ್ಲಿಯೇ ಅಂದರೆ 1999ರಿಂದ 2002ರ ವರೆಗೆ, ಭಾರತದಲ್ಲಿ ವಾರ್ತಾಪತ್ರಿಕೆಯ ಓದುಗರ ಸಂಖ್ಯೆಯು 13.1 ಕೋಟಿಯಿಂದ 15.1 ಕೋಟಿಗೆ ಏರಿದೆ ಎಂಬುದಾಗಿ ರಾಷ್ಟ್ರೀಯ ಓದುಗರ ಅಧ್ಯಯನಗಳ ಸಂಸ್ಥೆಯು ಮಾಡಿದ ಸಮೀಕ್ಷೆಯಿಂದ ತಿಳಿದುಬಂದಿದೆ. ವಾರ್ತಾಪತ್ರಗಳ, ಪತ್ರಿಕೆಗಳ, ಮತ್ತು ಇತರ ನಿಯತಕಾಲಿಕಗಳ ಓದುಗರನ್ನು ಒಟ್ಟುಸೇರಿಸುವಾಗ, ದೇಶದ ಮುದ್ರಿತ ಸಾಹಿತ್ಯಗಳ ಓದುಗರ ಸಂಖ್ಯೆಯು ಒಟ್ಟು 18 ಕೋಟಿಯಾಗಿದೆ. 100 ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ, 65 ಪ್ರತಿಶತಕ್ಕಿಂತಲೂ ಹೆಚ್ಚಿನ ಜನರು ಅಕ್ಷರಸ್ಥರಾಗಿರುವಾಗ, ಓದುಗರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವನ್ನು ಕಾಣುವ ಸಾಧ್ಯತೆಯಿದೆ. ಟೆಲಿವಿಷನ್‌ ವೀಕ್ಷಕರ ಸಂಖ್ಯೆಯು 38.36 ಕೋಟಿಯಾಗಿದೆ, ಆದರೆ ರೇಡಿಯೋ ಅನ್ನು ಕೇಳುವವರ ಸಂಖ್ಯೆಯು 68.06 ಕೋಟಿ. ಇಸವಿ 1999ರಲ್ಲಿ 14 ಲಕ್ಷ ಜನರು ಇಂಟರ್‌ನೆಟ್‌ ಸೌಲಭ್ಯವನ್ನು ಹೊಂದಿದ್ದರು, ಆದರೆ ಇಂದು 60 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಜನರಿಗೆ ಅದು ಲಭ್ಯವಿದೆ. ಭಾರತದಲ್ಲಿ ಟೆಲಿವಿಷನ್‌ ಅನ್ನು ಹೊಂದಿರುವ ಒಟ್ಟು ಮನೆಗಳಲ್ಲಿ ಸುಮಾರು ಅರ್ಧದಷ್ಟು ಮನೆಗಳಲ್ಲಿ ಕೇಬಲ್‌ ಮತ್ತು ಸ್ಯಾಟಿಲೈಟ್‌ ಸೌಕರ್ಯವಿದೆ. ಇದು, ಮೂರು ವರುಷಗಳಲ್ಲಿಯೇ 31 ಪ್ರತಿಶತ ಅಭಿವೃದ್ಧಿಯಾಗಿದೆ.(g03 5/08)

ಜಪಸ್ತೋತ್ರದ ನವೀಕರಣ

“ಸುಮಾರು 500 ವರುಷಗಳಿಂದ, ದೇವಭಕ್ತಿಯುಳ್ಳ ರೋಮನ್‌ ಕ್ಯಾಥೊಲಿಕ್‌ ಜನರು ಜಪಸ್ತೋತ್ರವನ್ನು ಪಠಿಸಿದ್ದಾರೆ. ಜಪಸ್ತೋತ್ರವೆಂಬುದು, ಯೇಸುವಿನ ಮತ್ತು ಅವನ ತಾಯಿಯ ಜೀವನದಲ್ಲಿ ಸಂಭವಿಸಿದ 15 ಮುಖ್ಯ ಘಟನೆಗಳ ಅಥವಾ ‘ರಹಸ್ಯಗಳ’ ಕುರಿತು ಮನನ ಮಾಡಲು ಉತ್ತೇಜಿಸುವ ಸಲುವಾಗಿ ತಯಾರಿಸಲ್ಪಟ್ಟಿರುವ, ನಮ್ಮ ತಂದೆ ಮತ್ತು ಹೇಲ್‌ ಮೇರಿ ಮುಂತಾದ ಪ್ರಾರ್ಥನೆಗಳನ್ನು ಮಂತ್ರದಂತೆ ಪಠಿಸುವುದಾಗಿದೆ” ಎಂಬುದಾಗಿ ನ್ಯೂಸ್‌ವೀಕ್‌ ವಾರ್ತಾಪತ್ರಿಕೆಯು ವರದಿಸುತ್ತದೆ. “ಕಳೆದ [ಅಕ್ಟೋಬರ್‌] ತಿಂಗಳಿನಲ್ಲಿ ಎರಡನೇ ಪೋಪ್‌ ಜಾನ್‌ ಪಾಲ್‌ರವರು, ಜಪಸ್ತೋತ್ರಕ್ಕೆ ನಾಲ್ಕನೇ ಸುತ್ತನ್ನು ಸೇರಿಸುತ್ತಾ ಒಂದು ಅಪೊಸ್ಟಾಲಿಕ್‌ ಪತ್ರವನ್ನು ಹೊರಡಿಸಿದರು.” ಈ ನಾಲ್ಕನೇ ಸುತ್ತು, ಯೇಸುವಿನ ದೀಕ್ಷಾಸ್ನಾನದಿಂದ ಅವನ ಕಡೇ ರಾತ್ರಿ ಭೋಜನದ ವರೆಗಿನ ಶುಶ್ರೂಷೆಯ ಮೇಲಾಧಾರಿತವಾಗಿದೆ. ವಾರ್ತಾಪತ್ರಿಕೆಯು ಕೂಡಿಸುವುದು: “ಪೋಪರ ಗುರಿಯು, ಅವರಿಗೆ ‘ಅಭಿರುಚಿ’ ಇರುವ ಪ್ರಾರ್ಥನಾ ವಿಧಾನದ ಜನಪ್ರಿಯತೆಯು ವ್ಯಾಟಿಕನ್‌ ಕೌನ್ಸಿಲ್‌ IIರಂದಿನಿಂದ ಕುಸಿಯುತ್ತಾ ಇರುವುದರಿಂದ ಅದರ ಕಡೆಗೆ ಜನರ ಆಸಕ್ತಿಯನ್ನು ಪುನರುಜ್ಜೀವಿಸುವುದೇ ಆಗಿದೆ. ಪೋಪರ ಈ ಕೃತ್ಯದ ಮುಖ್ಯ ಗುರಿಯು, ಕ್ಯಾಥೊಲಿಕ್‌ ಭಕ್ತಿಯಲ್ಲಿ ಜಪಸ್ತೋತ್ರದೊಂದಿಗೆ ಹೆಚ್ಚು ಜೊತೆಗೂಡಿಸಲ್ಪಟ್ಟ ವ್ಯಕ್ತಿಯಾದ ಮರಿಯಳ ಸಂಬಂಧದಲ್ಲಿ ಯೇಸುವಿನ ಪಾತ್ರಕ್ಕೆ ಹೆಚ್ಚಾದ ಮಹತ್ವವನ್ನು ನೀಡುವುದೇ ಆಗಿದೆ.” ಇದು, “ಕ್ರೈಸ್ತತ್ವವು ಪೌರಾತ್ಯ ಧರ್ಮಗಳ ಧ್ಯಾನಕ್ಕೆ ಸಂಬಂಧಿಸಿದ ಸಂಪ್ರದಾಯಗಳಿಂದ ಪ್ರಭಾವಿಸಲ್ಪಡುತ್ತಿರುವ” ಈ ಸಮಯದಲ್ಲಿ, ಕ್ಯಾಥೊಲಿಕರಲ್ಲಿ ಧ್ಯಾನಮಾಡುವ ಹವ್ಯಾಸವನ್ನು ಉತ್ತೇಜಿಸುವಂತೆ ನಿರೀಕ್ಷಿಸಲಾಗುತ್ತದೆ ಎಂಬುದಾಗಿ ಪೋಪ್‌ ಸೂಚಿಸುತ್ತಾರೆ. (g03 6/08)

ವಿವಾಹವನ್ನು ಮುರಿಯುವ ಸಂಸ್ಥೆಗಳು

ಜಪಾನಿನಲ್ಲಿ, ವಿವಾಹ ಜೀವನದಲ್ಲಿ ಅಸಂತೋಷವಿರುವ ಕೆಲವು ವ್ಯಕ್ತಿಗಳು ತಮ್ಮ ವಿವಾಹವನ್ನು ಮುರಿಯಲು ಸಂಸ್ಥೆಗಳಿಗೆ ಹಣವನ್ನು ನೀಡುತ್ತಾರೆ ಎಂಬುದಾಗಿ ಟೋಕಿಯೋವಿನ ಐಏಚ್‌ಟಿ ಆಸಾಹೀ ಶೀಂಬನ್‌ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಗಂಡನಿಗೆ ತನ್ನ ಹೆಂಡತಿಯನ್ನು ಬಿಡಬೇಕೆಂಬ ಇಚ್ಛೆಯಿದ್ದರೂ ಅವಳಿಗೆ ಕಾನೂನುಬದ್ಧವಾಗಿ ವಿವಾಹ ವಿಚ್ಛೇದನ ನೀಡಲು ಯಾವುದೇ ಆಧಾರವಿಲ್ಲದಿರುವಾಗ, ಅವನು ವಿವಾಹವನ್ನು ಮುರಿಯುವ ಸಂಸ್ಥೆಗೆ ಹಣವನ್ನು ನೀಡುತ್ತಾನೆ. ಆ ಸಂಸ್ಥೆಯು, ಒಬ್ಬ ಸುಂದರ ಪುರುಷನನ್ನು, ಅವನು ತಮ್ಮ ಕಕ್ಷಿಗಾರನ ಹೆಂಡತಿಯನ್ನು “ಆಕಸ್ಮಿಕವಾಗಿ” ಭೇಟಿಯಾಗುವಂತೆ ಕಳುಹಿಸಿಕೊಡುತ್ತದೆ ಮತ್ತು ಆ ವ್ಯಕ್ತಿಯು ಆಕೆಯೊಂದಿಗೆ ಪ್ರಣಯಾಚರಣೆಯನ್ನು ಆರಂಭಿಸುತ್ತಾನೆ. ಸ್ವಲ್ಪ ಸಮಯಾನಂತರ, ಹೆಂಡತಿಯು ಸ್ವತಃ ವಿವಾಹ ವಿಚ್ಛೇದನೆಯನ್ನು ನೀಡಲು ಸಮ್ಮತಿಸುತ್ತಾಳೆ. ಆದರೆ, ಒಮ್ಮೆ ಕೆಲಸವು ಮುಗಿದ ನಂತರ ಆ ಪ್ರಿಯತಮನು ಕಣ್ಮರೆಯಾಗುತ್ತಾನೆ. ಅಂತೆಯೇ, ಹೆಂಡತಿಯು ತನ್ನ ಗಂಡನನ್ನು ಬಿಡಲು ಇಚ್ಛಿಸುವಲ್ಲಿ, ಅವನನ್ನು ವಂಚಿಸಿ ಅವನೊಂದಿಗೆ ಜಾರತ್ವ ಮಾಡಲು, ಸಂಸ್ಥೆಯು ಅತಿ ಆಕರ್ಷಕಳಾದ ಒಬ್ಬ ಯುವತಿಯನ್ನು ಅವನ ಬಳಿ ಕಳುಹಿಸಿಕೊಡುತ್ತದೆ. ಒಬ್ಬಾಕೆ 24 ವರುಷ ಪ್ರಾಯದ ಸ್ತ್ರೀಗನುಸಾರ, ಅವಳು ಭೇಟಿನೀಡುವ ಗಂಡಸರು “ಹೆಚ್ಚಾಗಿ ಇಲ್ಲವೆನ್ನುವುದಿಲ್ಲ. 85ರಿಂದ 90 ಪ್ರತಿಶತದಷ್ಟು ಸಮಯ ನಾನು ಯಶಸ್ವಿಯಾಗುತ್ತೇನೆ.” ಒಂದು ಸಂಸ್ಥೆಯ ಅಧ್ಯಕ್ಷನು, ತನ್ನ ಸಂಸ್ಥೆಯಲ್ಲಿ ಕೆಲಸಮಾಡುವ ಯಾರಾದರೂ ಒಬ್ಬ ವ್ಯಕ್ತಿಯನ್ನು ವಂಚಿಸಲೆಂದು 5 ಬಾರಿ ಕಳುಹಿಸಲ್ಪಟ್ಟಾಗ ಅದರಲ್ಲಿ 3 ಬಾರಿ ಯಶಸ್ವಿಯಾಗದೆ ಹಿಂದಿರುಗಿದರೆ ಅಂಥವರನ್ನು ಕೆಲಸದಿಂದ ತೆಗೆದುಹಾಕುತ್ತಾನೆ ಎಂಬುದಾಗಿ ವಾರ್ತಾಪತ್ರಿಕೆಯು ತಿಳಿಸುತ್ತದೆ. ಹಾಗೇಕೆ ಮಾಡುತ್ತಾನೆಂದು ಅವನನ್ನು ಕೇಳಿದಾಗ: “ಅವರು ಯಶಸ್ವಿಯಾಗಲೇಬೇಕು, ಯಾಕೆಂದರೆ ಇದೊಂದು ವ್ಯಾಪಾರ ವ್ಯವಹಾರವಾಗಿದೆ” ಎಂಬುದಾಗಿ ಅವನು ಉತ್ತರಿಸುತ್ತಾನೆ.(g03 6/22)

ಬೀದಿ ಮಕ್ಕಳು​—⁠ಏಕೆ?

“ಮಕ್ಕಳು ಮತ್ತು ಹದಿವಯಸ್ಕರು ಮನೆಯನ್ನು ಬಿಟ್ಟು ಬೀದಿಯಲ್ಲಿ ವಾಸಿಸಲು ಹೋಗುವುದಕ್ಕೆ ಗೃಹಸಂಬಂಧಿತ ಹಿಂಸಾಚಾರವೇ ಮುಖ್ಯ ಕಾರಣವಾಗಿದೆ,” ಎಂಬುದಾಗಿ ಬ್ರಸಿಲ್‌ನ ಆ ಎಸ್ಟಾಡಾ ಡಿ ಎಸ್‌. ಪೌಲೋ ಎಂಬ ವಾರ್ತಾಪತ್ರಿಕೆಯು ಹೇಳುತ್ತದೆ. ರಿಯೋ ಡೇ ಜನೈರೊವಿನಲ್ಲಿನ ಮಕ್ಕಳ ಮತ್ತು ತರುಣರ ಆಶ್ರಮದಲ್ಲಿರುವ 1,000 ಮಂದಿ ಬೀದಿ ಮಕ್ಕಳನ್ನು ಇತ್ತೀಚೆಗೆ ಸರ್ವೇಮಾಡಿದಾಗ ತಿಳಿದುಬಂದದ್ದೇನೆಂದರೆ, ಅವರಲ್ಲಿ 39 ಪ್ರತಿಶತ ಮಕ್ಕಳು ಅಪಪ್ರಯೋಗದಿಂದ ಬಾಧಿತರಾಗಿದ್ದರು ಅಥವಾ ಮನೆಯಲ್ಲಿ ಕಚ್ಚಾಟವನ್ನು ನೋಡಿದ್ದರು. “ಈ ಮಕ್ಕಳು ಸ್ವಗೌರವವನ್ನು ಹುಡುಕುತ್ತಾ, ಅದನ್ನು ಬೀದಿಯಲ್ಲಿ ಕಂಡುಕೊಳ್ಳಬಹುದೆಂಬ ಭ್ರಮೆಯಲ್ಲಿದ್ದಾರೆ,” ಎಂಬುದಾಗಿ ಸಮಾಜ ವಿಜ್ಞಾನಿಯಾದ ಲೀನೀ ಶ್ಮೀಟ್ಸ್‌ ತಿಳಿಸುತ್ತಾಳೆ. 34 ಪ್ರತಿಶತ ಮಕ್ಕಳು, ಯಾವುದೇ ಕಡಿಮೆ ಸಂಬಳ ನೀಡುವ ಕೆಲಸವನ್ನು ಮಾಡಲು ಅಥವಾ ಭಿಕ್ಷೆ ಬೇಡುವ ಸಲುವಾಗಿ ಬೀದಿಗಿಳಿಯಲು ಆಯ್ಕೆಮಾಡಿದ್ದಾರೆ, 10 ಪ್ರತಿಶತ ಮಕ್ಕಳು ತಾವು ಅಮಲೌಷಧಗಳ ಸೇವನೆಯಲ್ಲಿ ತೊಡಗಿದ ಕಾರಣ ಹೀಗೆ ಮಾಡಿದ್ದಾರೆ, ಮತ್ತು 14 ಪ್ರತಿಶತ ಮಕ್ಕಳು ತಮಗೆ ಹಾಗೆ ಮಾಡಬೇಕೆನಿಸಿತು ಅದಕ್ಕೆ ಮಾಡಿದೆವು ಎಂದು ತಿಳಿಸುತ್ತಾರೆ. ಸಂಶೋಧಕರಿಗನುಸಾರ, ಅಂತಿಮ ಕಾರಣದ ಮರೆಯಲ್ಲಿ ಅನೇಕವೇಳೆ ಮನೆಯಲ್ಲಿ ಸಂಭವಿಸಿದ ಲೈಂಗಿಕ ದೌರ್ಜನ್ಯ ಮುಂತಾದ ವಿಷಯಗಳು ಅಡಗಿರುತ್ತವೆ. ಸುಮಾರು 71 ಪ್ರತಿಶತ ಮಕ್ಕಳು ಇತರ ಬೀದಿ ಮಕ್ಕಳೊಂದಿಗೆ ಜೀವಿಸುತ್ತಾ, ಅವರು “ತಮ್ಮದೇ ಆದ ಕುಟುಂಬ ಸಮುದಾಯವನ್ನು ಸೃಷ್ಟಿಸುತ್ತಾರೆ, ಅಂದರೆ ಇತರ ಬೀದಿ ಮಕ್ಕಳನ್ನು ತಮ್ಮ ಅಣ್ಣತಮ್ಮಂದಿರಂತೆ, ದೊಡ್ಡಪ್ಪಚಿಕ್ಕಪ್ಪರಂತೆ, ತಂದೆಯಂದಿರಂತೆ, ಅಥವಾ ತಾಯಂದಿರಂತೆ ಪರಿಗಣಿಸುತ್ತಾರೆ” ಎಂಬುದಾಗಿ ಶ್ಮೀಟ್ಸ್‌ ತಿಳಿಸುತ್ತಾರೆ.(g03 6/22)