ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿರಾಡಂಬರ ಕಡಲೆಕಾಯಿಯ ವಿಶಾಲ ಪ್ರಪಂಚ

ನಿರಾಡಂಬರ ಕಡಲೆಕಾಯಿಯ ವಿಶಾಲ ಪ್ರಪಂಚ

ನಿರಾಡಂಬರ ಕಡಲೆಕಾಯಿಯ ವಿಶಾಲ ಪ್ರಪಂಚ

ನೀವು ಕಡಲೆಕಾಯಿಗಳನ್ನು ತಿನ್ನಲು ಇಷ್ಟಪಡುತ್ತೀರೋ? ಹೌದಾಗಿರುವುದಾದರೆ, ನೀವು ಒಬ್ಬರೇ ಅಲ್ಲ. ನಿಮ್ಮ ಹಾಗೆ ಅನೇಕ ಜನರು ಅದನ್ನು ತಿನ್ನಲು ಇಷ್ಟಪಡುತ್ತಾರೆ. ಮಾನವ ಕುಟುಂಬದ ಬಹುತೇಕ ಭಾಗವು ನೆಲಗಡಲೆ ಎಂಬುದಾಗಿ ಸಹ ಕರೆಯಲ್ಪಡುವ ಕಡಲೆಕಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ. ಲೋಕವ್ಯಾಪಕ ಕಡಲೆಕಾಯಿ ಕೃಷಿಯ 50 ಪ್ರತಿಶತಕ್ಕಿಂತಲೂ ಹೆಚ್ಚನ್ನು, ಭೂಮಿಯ ಎರಡು ಅತ್ಯಂತ ಜನಭರಿತ ರಾಷ್ಟ್ರಗಳಾದ ಚೀನ ಮತ್ತು ಭಾರತ ಒಟ್ಟಾಗಿ ಉತ್ಪಾದಿಸುತ್ತವೆ.

ಅಮೆರಿಕವು ಪ್ರತಿ ವರುಷ ನೂರಾರು ಕೋಟಿ ಕಿಲೋಗ್ರಾಮ್‌ಗಳಷ್ಟು ಕಡಲೆಕಾಯಿಯನ್ನು ಬೆಳೆಸುತ್ತದೆ. ಈ ದೇಶವು, ಲೋಕವ್ಯಾಪಕ ಕಡಲೆಕಾಯಿ ಕೃಷಿಯ ಹೆಚ್ಚುಕಡಿಮೆ 10 ಪ್ರತಿಶತದಷ್ಟನ್ನು ಉತ್ಪಾದಿಸುತ್ತದೆ. ಆರ್ಜೆಂಟೀನ, ನೈಜೀರಿಯ, ದಕ್ಷಿಣ ಆಫ್ರಿಕ, ಬ್ರಸಿಲ್‌, ಮಲಾವಿ, ಸೆನಿಗಲ್‌, ಮತ್ತು ಸುಡಾನ್‌ ಮುಂತಾದ ದೇಶಗಳು ಸಹ ಕಡಲೆಕಾಯಿಯನ್ನು ಉತ್ಪಾದಿಸುವ ಪ್ರಮುಖ ದೇಶಗಳಾಗಿವೆ. ಕಡಲೆಕಾಯಿಯು ಹೇಗೆ ಇಷ್ಟೊಂದು ಜನಪ್ರಿಯವಾಯಿತು? ಕಡಲೆಕಾಯಿ ತಿನ್ನುವುದನ್ನು ನಿಲ್ಲಿಸುವುದು ಉತ್ತಮವಾಗಿರುವ ಯಾವುದಾದರೂ ಸನ್ನಿವೇಶಗಳಿವೆಯೋ?

ದೀರ್ಘಕಾಲದ ಇತಿಹಾಸ

ಕಡಲೆಕಾಯಿಯ ಮೂಲವು ದಕ್ಷಿಣ ಅಮೆರಿಕವೆಂದು ಭಾವಿಸಲಾಗುತ್ತದೆ. ಕಡಲೆಕಾಯಿಗಳ ಕಡೆಗೆ ಮಾನವನ ಗಣ್ಯತೆಯನ್ನು ತೋರಿಸುವ, ಮೊದಲ ಅತಿ ಪ್ರಸಿದ್ಧವಾದ ಮನುಷ್ಯನಿರ್ಮಿತ ವಸ್ತುವಾಗಿರುವ ಕಲಶವೊಂದು ಪೆರೂವಿನಲ್ಲಿ ಕಂಡುಹಿಡಿಯಲ್ಪಟ್ಟಿತು. ಅದು, ಕೊಲಂಬಸನ ಕಾಲಕ್ಕೆ ಪೂರ್ವದ ಕಲಶವಾಗಿತ್ತು. ಆ ಕಲಶವು ಕಡಲೆಕಾಯಿಯ ಆಕಾರದಲ್ಲಿದೆ ಮತ್ತು ಅದರ ಮೇಲೆ ಕಡಲೆಕಾಯಿಯ ಆಕಾರದ ಚಿತ್ರಗಳಿವೆ. ದಕ್ಷಿಣ ಅಮೆರಿಕದಲ್ಲಿ ಮೊದಲಾಗಿ ಕಡಲೆಕಾಯಿಯನ್ನು ಕಂಡುಹಿಡಿದ ಸ್ಪ್ಯಾನಿಷ್‌ ಪರಿಶೋಧಕರು, ಅದನ್ನು ಸಮುದ್ರ ಸಂಚಾರದಲ್ಲಿ ಉಪಯೋಗಿಸಬಹುದಾದ ಪೌಷ್ಟಿಕಾಂಶಗಳ ಅತ್ಯುತ್ತಮ ಮೂಲವಾಗಿ ಪರಿಗಣಿಸಿದರು. ನಂತರ ಅವರು ಅದನ್ನು ಯೂರೋಪಿಗೂ ತಮ್ಮೊಂದಿಗೆ ತೆಗೆದುಕೊಂಡು ಬಂದರು. ಯೂರೋಪಿಯನರು, ಕಡಲೆಕಾಯಿಯನ್ನು ಇನ್ನಿತರ ಉಪಯೋಗಕ್ಕೂ ಬಳಸಿದರು. ಅದನ್ನು ಕಾಫಿ ಬೀಜಗಳಿಗೆ ಬದಲಿಯಾಗಿಯೂ ಉಪಯೋಗಿಸಿದರು.

ನಂತರ, ಪೋರ್ಚುಗೀಸ್‌ ಜನರು ಕಡಲೆಕಾಯಿಯನ್ನು ಆಫ್ರಿಕಕ್ಕೆ ಪರಿಚಯಿಸಿದರು. ಅಲ್ಲಿ ಕಡಲೆಕಾಯಿಯನ್ನು, ಇತರ ಕೃಷಿಯನ್ನು ಉತ್ಪತ್ತಿ ಮಾಡಲು ಫಲವತ್ತಾಗಿರದ ಮಣ್ಣಿನಲ್ಲಿಯೂ ಬೆಳೆಸಬಲ್ಲ ಬೆಲೆಬಾಳುವ ಆಹಾರದ ಮೂಲವಾಗಿ ಕೂಡಲೇ ಪರಿಗಣಿಸಲಾಯಿತು. ವಾಸ್ತವದಲ್ಲಿ, ಕಡಲೆಕಾಯಿಯ ಗಿಡಗಳು ಫಲವತ್ತಾಗಿರದ ಮಣ್ಣನ್ನು, ಬೇಕಾಗಿರುವ ಸಾರಜನಕದಿಂದ ಪುಷ್ಟಿಗೊಳಿಸುತ್ತದೆ. ಕ್ರಮೇಣ, ಅಂದರೆ ಗುಲಾಮರ ವ್ಯಾಪಾರದ ಸಮಯದಲ್ಲಿ ಆಫ್ರಿಕದಿಂದ ಉತ್ತರ ಅಮೆರಿಕಕ್ಕೆ ಕಡಲೆಕಾಯಿಯು ಪರಿಚಯಿಸಲ್ಪಟ್ಟಿತು.

ಇಸವಿ 1530ರಲ್ಲಿ, ಕಡಲೆಕಾಯಿಯು ಪೋರ್ಚುಗೀಸ್‌ರೊಂದಿಗೆ ಭಾರತ ಮತ್ತು ಮಕಾಓಕ್ಕೆ ಹಾಗೂ ಸ್ಪ್ಯಾನಿಷ್‌ ಜನರೊಂದಿಗೆ ಫಿಲಿಪ್ಪೀನ್ಸ್‌ಗೆ ತರಲ್ಪಟ್ಟಿತು. ಮುಂದಕ್ಕೆ, ಈ ಎಲ್ಲಾ ದೇಶಗಳಿಂದ ವ್ಯಾಪಾರಿಗಳು ಕಡಲೆಕಾಯಿಗಳನ್ನು ಚೀನಾ ದೇಶಕ್ಕೆ ಪರಿಚಯಿಸಿದರು. ಅಲ್ಲಿ ಕಡಲೆಕಾಯಿಯನ್ನು, ಬರಗಾಲವನ್ನು ನಿಭಾಯಿಸಲು ರಾಷ್ಟ್ರಕ್ಕೆ ಸಹಾಯಕಾರಿಯಾಗಿರುವ ಕೃಷಿ ಎಂಬುದಾಗಿ ಪರಿಗಣಿಸಲಾಯಿತು.

ಇಸವಿ 1700ಗಳ ಸಸ್ಯ ವಿಜ್ಞಾನಿಗಳು ಕಡಲೆಕಾಯಿಗಳ ಬಗ್ಗೆ ಅಧ್ಯಯನ ಮಾಡಿ, ಅದನ್ನು ಅವರು ನೆಲಗಡಲೆಗಳು ಎಂಬುದಾಗಿ ಹೆಸರಿಸಿದರು. ಅಷ್ಟುಮಾತ್ರವಲ್ಲದೆ, ಇದರಿಂದ ಹಂದಿಗಳಿಗೆ ಅತ್ಯುತ್ತಮ ಆಹಾರವನ್ನು ತಯಾರಿಸಸಾಧ್ಯವಿದೆ ಎಂಬುದಾಗಿಯೂ ಅವರು ನಿರ್ಣಯಿಸಿದರು. ಇಸವಿ 1800ರ ಆರಂಭದಷ್ಟಕ್ಕೆ, ಅಮೆರಿಕದ ದಕ್ಷಿಣ ಕ್ಯಾರೊಲೈನದಲ್ಲಿ ಕಡಲೆಕಾಯಿಗಳನ್ನು ವ್ಯಾಪಾರದ ಉದ್ದೇಶದಿಂದ ಬೆಳೆಸಲಾಯಿತು. 1861ರಲ್ಲಿ ಆರಂಭಗೊಂಡ ಅಮೆರಿಕದ ಒಳಯುದ್ಧದ ಸಮಯದಲ್ಲಿ, ಎರಡೂ ಬದಿಯಲ್ಲಿದ್ದ ಸೈನಿಕರಿಗೆ ಕಡಲೆಕಾಯಿ ಆಹಾರವಾಗಿ ಉಪಯುಕ್ತವಾಯಿತು.

ಹಾಗಿದ್ದರೂ, ಆ ಸಮಯದಲ್ಲಿ ಅನೇಕರು ಕಡಲೆಕಾಯಿಯನ್ನು ಬಡವರ ಆಹಾರವೆಂದು ಪರಿಗಣಿಸುತ್ತಿದ್ದರು. ಅಂದಿನ ಅಮೆರಿಕದ ಬೇಸಾಯಗಾರರು ಕಡಲೆಕಾಯಿಯನ್ನು ಮಾನವ ಸೇವನೆಗಾಗಿ ಏಕೆ ವಿಸ್ತಾರವಾಗಿ ಬೆಳೆಸಲಿಲ್ಲ ಎಂಬುದನ್ನು ಈ ಭಾವನೆಯು ಸ್ವಲ್ಪಮಟ್ಟಿಗೆ ವಿವರಿಸುತ್ತದೆ. ಅಷ್ಟುಮಾತ್ರವಲ್ಲದೆ, 1900ರಲ್ಲಿ ಯಾಂತ್ರಿಕ ಸಲಕರಣೆಗಳನ್ನು ಕಂಡುಹಿಡಿಯುವುದಕ್ಕಿಂತ ಮುನ್ನ, ಕಡಲೆಕಾಯಿಯನ್ನು ಬೆಳೆಸುವುದು ಬಹಳ ಪ್ರಯಾಸಕರವಾದ ಕೆಲಸವಾಗಿತ್ತು.

ಆದರೆ ಇಸವಿ 1903ರಷ್ಟಕ್ಕೆ, ಅಮೆರಿಕದ ಕೃಷಿ ರಸಾಯನ ವಿಜ್ಞಾನಿಯಾದ ಜಾರ್ಜ್‌ ವಾಶಿಂಗ್ಟನ್‌ ಕಾರ್ವರ್‌, ಕಡಲೆಕಾಯಿ ಗಿಡದ ಹೊಸ ಉಪಯೋಗಗಳ ಕುರಿತು ಸಂಶೋಧನೆಯನ್ನು ಮಾಡಲಾರಂಭಿಸಿದರು. ಕ್ರಮೇಣ ಅವರು ಅದರಿಂದ 300ಕ್ಕಿಂತಲೂ ಹೆಚ್ಚಿನ ಹೊಸ ಉತ್ಪನ್ನಗಳನ್ನು ತಯಾರಿಸಿದರು. ಇದರಲ್ಲಿ, ಪಾನೀಯಗಳು, ಸೌಂದರ್ಯವರ್ಧಕಗಳು, ವರ್ಣದ್ರವ್ಯಗಳು, ಔಷಧಿಗಳು, ಬಟ್ಟೆ ಒಗೆಯುವ ಸಾಬೂನು, ಕೀಟನಾಶಕ, ಮತ್ತು ಅಚ್ಚುಮಸಿ ಮುಂತಾದವುಗಳು ಒಳಗೊಂಡಿವೆ. ಮಣ್ಣಿನ ಸಾರವನ್ನು ಬರಿದು ಮಾಡುವ ಹತ್ತಿ ಉತ್ಪನ್ನವನ್ನು ಮಾತ್ರ ಮಾಡುವ ರೂಢಿಯನ್ನು ನಿಲ್ಲಿಸಿ, ಅದರೊಂದಿಗೆ ಬದಲಿ ಕೃಷಿಯೋಪಾದಿ ಕಡಲೆಕಾಯಿಯನ್ನು ಸಹ ಉತ್ಪನ್ನಮಾಡುವಂತೆ ಕಾರ್ವರ್‌ರವರು ಸ್ಥಳಿಕ ಬೇಸಾಯಗಾರರನ್ನು ಉತ್ತೇಜಿಸಿದರು. ಆ ಸಮಯದಲ್ಲಿ, ಬೋಲ್‌ ವೀವಲ್‌ ಎಂಬ ನಾಶಕಾರಿಯಾದ ಚಿಕ್ಕ ಕೀಟವು ಹತ್ತಿ ಕೃಷಿಯನ್ನು ನಾಶಗೊಳಿಸುತ್ತಿತ್ತು ಮತ್ತು ಇದರಿಂದಾಗಿ ಅನೇಕ ಬೇಸಾಯಗಾರರು ಕಾರ್ವರ್‌ರವರ ಬುದ್ಧಿವಾದವನ್ನು ಅನುಸರಿಸಿದರು. ಇದರಿಂದ ಯಾವ ಪ್ರತಿಫಲ ದೊರಕಿತು?

ಕಡಲೆಕಾಯಿ ಕೃಷಿಯು ಎಷ್ಟು ಯಶಸ್ವಿಕಾರಿಯಾಯಿತೆಂದರೆ ಅದು ಅಮೆರಿಕದ ದಕ್ಷಿಣ ಭಾಗದಲ್ಲಿ ಹಣದ ಪ್ರಮುಖ ಬೆಳೆಯಾಗಿ ಪರಿಣಮಿಸಿತು. ಇಂದು, ಆಲಬಾಮದ ಡೋತನ್‌ ಪಟ್ಟಣದಲ್ಲಿ ಕಾರ್ವರ್‌ ಜ್ಞಾಪಕಾರ್ಥವಾಗಿ ಒಂದು ಸ್ಮಾರಕವನ್ನು ಸ್ಥಾಪಿಸಲಾಗಿದೆ. ಅಷ್ಟುಮಾತ್ರವಲ್ಲದೆ, ಬೋಲ್‌ ವೀವಲ್‌ ಕೀಟವು ಹತ್ತಿ ಕೃಷಿಯನ್ನು ನಾಶಮಾಡಿ, ಕಡಲೆಕಾಯಿಯನ್ನು ಉತ್ಪಾದಿಸಲು ಬೇಸಾಯಗಾರರನ್ನು ಪ್ರೇರೇಪಿಸಿದ ಕಾರಣ, ವ್ಯಾಪಾರೋದ್ಯಮ ದೇಶವಾದ ಆಲಬಾಮದಲ್ಲಿ ಈ ಕೀಟಕ್ಕಾಗಿಯೂ ಒಂದು ಸ್ಮಾರಕವನ್ನು ನಿಲ್ಲಿಸಲಾಗಿದೆ.

ಕಡಲೆಕಾಯಿಯನ್ನು ಬೆಳೆಸುವುದು

ಕಡಲೆಕಾಯಿಗಳು ನಿಜವಾಗಿಯೂ ಕರಟಕಾಯಿಗಳಲ್ಲ ಬದಲಾಗಿ ಅವು ಕಡಲೆಕಾಯಿ ಗಿಡದ ಬೀಜಗಳಾಗಿವೆ. ಗಿಡವು ಬೆಳೆದಂತೆ ಅದು ಹಳದಿ ಬಣ್ಣದ ಹೂವುಗಳನ್ನು ಬಿಡುತ್ತದೆ ಮತ್ತು ಆ ಹೂವುಗಳು ಸ್ವತಃ ಪರಾಗಸ್ಪರ್ಶ ಮಾಡಿಕೊಳ್ಳುತ್ತವೆ.

ಇದಾದ ನಂತರ, ಪೆಗ್‌ ಎಂದು ಕರೆಯಲ್ಪಡುವ ದಂಟುಗಳು ಬೆಳೆಯಲಾರಂಭಿಸುತ್ತವೆ. ಆ ದಂಟಿನ ತುದಿಯಲ್ಲಿ, ಭ್ರೂಣವನ್ನು ಹೊಂದಿದ ಗರ್ಭಾಧಾನವಾದ ಗಿಡದ ಅಂಡಾಶಯವು ಇರುತ್ತದೆ. ಮತ್ತು ಈ ದಂಟು ಮಣ್ಣಿನೊಳಕ್ಕೆ ಪ್ರವೇಶಿಸಲಾರಂಭಿಸುತ್ತದೆ. ಮಣ್ಣಿನಲ್ಲಿ ಭ್ರೂಣವು ಮೇಲ್ಮೈಗೆ ಸಮಾಂತರವಾಗಿ ಬೆಳೆಯಲಾರಂಭಿಸಿ ಕಡಲೆಕಾಯಿಯ ಆಕಾರವನ್ನು ತಾಳುತ್ತದೆ. ಒಂದೇ ಗಿಡದಲ್ಲಿ ಸುಮಾರು 40 ಕಡಲೆಕಾಯಿಗಳು ಬೆಳೆಯಬಹುದು.

ಕಡಲೆಕಾಯಿಗಳಿಗೆ, ಬೆಚ್ಚಗಿನ ಪ್ರಕಾಶಮಾನವಾದ ಮಿತವಾದ ಮಳೆಯ ಹವಾಮಾನವು ಬಹಳ ಸೂಕ್ತವಾಗಿದೆ. ಕಡಲೆಕಾಯಿಯ ಜಾತಿ ಮತ್ತು ಹವಾಮಾನದ ಪರಿಸ್ಥಿತಿಗೆ ಹೊಂದಿಕೊಂಡು, ನೆಡುವುದರಿಂದ ಕೊಯ್ಲಿನ ವರೆಗೆ 120ರಿಂದ 160 ದಿನಗಳು ತಗಲಬಹುದು. ಕಡಲೆಕಾಯಿಯ ಕೊಯ್ಲಿನಲ್ಲಿ, ಗಿಡವನ್ನು ಬಳ್ಳಿ ಸಮೇತ ಅಗೆದು ತೆಗೆಯುವುದು, ಅದನ್ನು ತಲೆಕೆಳಗಾಗಿ ಹಾಕುವುದು, ಮತ್ತು ಅದು ಕೊಳೆತು ಹೋಗದೆ ಶೇಖರಿಸಿಡಸಾಧ್ಯವಾಗುವಂತೆ ಒಣಗಿಸುವುದು ಸೇರಿದೆ. ಇಂದು ಅನೇಕ ಬೆಳೆಗಾರರು, ಗಿಡವನ್ನು ಅಗೆದು, ಅದರ ಮಣ್ಣನ್ನು ಉದುರಿಸಿ, ಅದನ್ನು ತಲೆಕೆಳಗಾಗಿ ಹಾಕುವ ಎಲ್ಲಾ ಪ್ರಕ್ರಿಯೆಯನ್ನು ಒಮ್ಮೆಗೇ ಮಾಡುವ ಆಧುನಿಕ ವ್ಯವಸಾಯ ಸಾಧನವನ್ನು ಉಪಯೋಗಿಸುತ್ತಾರೆ.

ಕಡಲೆಕಾಯಿಯ ಅನೇಕ ಉಪಯೋಗಗಳು

ಕಡಲೆಕಾಯಿಯ ಆಹಾರ ಮೌಲ್ಯವು ಮನತಟ್ಟುವಂತಹದ್ದಾಗಿದೆ. ಕಡಲೆಕಾಯಿಗಳು ನಾರಿನ ಪದಾರ್ಥವಾಗಿದೆ ಮತ್ತು ಆಧುನಿಕ ಆಹಾರ ಕ್ರಮದಲ್ಲಿ ಕಂಡುಬರದ 13 ರೀತಿಯ ವಿಟಮಿನ್‌ಗಳು ಹಾಗೂ 26 ರೀತಿಯ ಖನಿಜಗಳಿಂದ ಇವು ಕೂಡಿವೆ. “ಕಡಲೆಕಾಯಿಗಳನ್ನು ಮತ್ತು ಬೀಫ್‌ ಕಲಿಜವನ್ನು ಸಮತೂಕದಲ್ಲಿ ತೆಗೆದುಕೊಂಡು ಹೋಲಿಸುವಾಗ, ಕಡಲೆಕಾಯಿಗಳಲ್ಲಿ ಹೆಚ್ಚು ಪ್ರೋಟೀನ್‌, ಖನಿಜಗಳು, ಮತ್ತು ವಿಟಮಿನ್‌ಗಳು ಲಭ್ಯವಿವೆ” ಎಂಬುದಾಗಿ ದಿ ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕ ಹೇಳುತ್ತದೆ. ಆದರೆ, ದೇಹ ತೂಕದ ಕುರಿತು ಚಿಂತಿಸುವವರೇ ಜಾಗರೂಕರಾಗಿರಿ! ಕಡಲೆಕಾಯಿಗಳಲ್ಲಿ, “ತೀರಾ ಕೊಬ್ಬಿನಿಂದ ತುಂಬಿದ ಕೆನೆಗಿಂತಲೂ ಹೆಚ್ಚು ಕೊಬ್ಬು” ಮತ್ತು “ಸಕ್ಕರೆಗಿಂತಲೂ ಹೆಚ್ಚು ಕ್ಯಾಲೊರಿಗಳು” ಇವೆ.

ವಿವಿಧ ರಾಷ್ಟ್ರಗಳ ಆಹಾರ ತಯಾರಿಕೆಯಲ್ಲಿ ಕಡಲೆಕಾಯಿಯನ್ನು ಬಳಸಲಾಗುತ್ತದೆ. ಅದರ ಅದ್ವಿತೀಯ ರುಚಿಯನ್ನು ಸುಲಭವಾಗಿ ಕಂಡುಹಿಡಿಯಸಾಧ್ಯವಿದೆ. “ಅದರ ರುಚಿ ಮತ್ತು ಸುವಾಸನೆ ಎಷ್ಟು ತೀಕ್ಷ್ಣವೂ ಭಿನ್ನವೂ ಆಗಿದೆ ಎಂದರೆ ಅದನ್ನು ಯಾವುದೇ ಆಹಾರಕ್ಕೆ ಬೆರೆಸಿದರೂ ಅದು ಒಂದೇ ರೀತಿಯ ರುಚಿ ಹಾಗೂ ಸುವಾಸನೆಯನ್ನು ಹೊಂದಿರುತ್ತವೆ” ಎಂಬುದಾಗಿ ಅಡಿಗೆಗೆ ಸಂಬಂಧಿಸಿದ ಪುಸ್ತಕಗಳನ್ನು ಬರೆಯುವ ಬರಹಗಾರಳಾದ ಆ್ಯನ್ಯ ಫಾನ್‌ ಬ್ರೆಂಸನ್‌ ತಿಳಿಸುತ್ತಾಳೆ. “ಆದುದರಿಂದಲೇ, ಇಂಡೊನೇಷಿಯಾದ ಕಡಲೆಕಾಯಿ ಸಾಸ್‌, ಪಶ್ಚಿಮ ಆಫ್ರಿಕದ ಸೂಪ್‌, ಚೀನಾದ ನೂಡುಲ್ಸ್‌, ಪೆರೂವಿನ ಸಾರು, ಮತ್ತು ಕಡಲೆಕಾಯಿಯಿಂದ ತಯಾರಿಸಿದ ಬೆಣ್ಣೆಯ (ಪೀನಟ್‌ ಬಟರ್‌) ಸ್ಯಾಂಡ್‌ವಿಚ್‌ ಇವೆಲ್ಲವುಗಳ ರುಚಿಯಲ್ಲಿ ಒಂದಕ್ಕೊಂದು ಹೋಲುತ್ತವೆ.”

ಅಷ್ಟುಮಾತ್ರವಲ್ಲದೆ, ಲೋಕವ್ಯಾಪಕವಾಗಿ ಕಡಲೆಕಾಯಿಯು ಒಂದು ಅತ್ಯುತ್ತಮ ಉಪಾಹಾರವಾಗಿದೆ. ಉದಾಹರಣೆಗೆ ಭಾರತದಲ್ಲಿ ಕಡಲೆಕಾಯಿಯನ್ನು, ಒಣಗಿಸಿದ ಇತರ ಕಾಳುಗಳೊಂದಿಗೆ ಬೆರೆಸಿ, ದಾರಿಮಗ್ಗುಲಲ್ಲಿ ಮಾರಲಾಗುತ್ತದೆ. ಆಸಕ್ತಿಕರವಾಗಿ, ಕೆಲವು ದೇಶಗಳಲ್ಲಿ ಪ್ರಸಿದ್ಧವಾಗಿರುವ ಕಡಲೆಕಾಯಿಯಿಂದ ತಯಾರಿಸಿದ ಬೆಣ್ಣೆ ಹಚ್ಚಿರುವ ಸ್ಯಾಂಡ್‌ವಿಚ್‌, “ವೃದ್ಧರಿಗೆ ಆರೋಗ್ಯಕರವಾದ ಆಹಾರವಾಗಿದೆಯೆಂದು ಇಸವಿ 1890ರ ಸುಮಾರಿಗೆ ಸೈಂಟ್‌ ಲೂಯಿಯಲ್ಲಿದ್ದ ಒಬ್ಬ ವೈದ್ಯರಿಂದ ಕಂಡುಹಿಡಿಯಲ್ಪಟ್ಟಿತು” ಎನ್ನುತ್ತದೆ ಅಮೆರಿಕದ ಮಹಾನ್‌ ಕಡಲೆಕಾಯಿ (ಇಂಗ್ಲಿಷ್‌) ಎಂಬ ಪ್ರಕಾಶನ.

ನೇರವಾಗಿ ಆಹಾರದೋಪಾದಿ ಉಪಯೋಗಿಸುವುದಲ್ಲದೆ, ಕಡಲೆಕಾಯಿಯ ಇತರ ಅನೇಕ ಉಪಯೋಗಗಳನ್ನೂ ಕಂಡುಹಿಡಿಯಲಾಗಿದೆ. ಏಷ್ಯಾದಾದ್ಯಂತ, ಕಡಲೆಕಾಯಿಯಿಂದ ಅಡಿಗೆ ಎಣ್ಣೆಯನ್ನು ತಯಾರಿಸಲಾಗುತ್ತದೆ. ಕಡಲೆಕಾಯಿ ಎಣ್ಣೆಯನ್ನು ಅತಿ ತೀಕ್ಷ್ಣ ಶಾಖದಲ್ಲಿ ಬೇಯಿಸಲು ಸಹ ಉಪಯೋಗಿಸಸಾಧ್ಯವಿದೆ ಮತ್ತು ಅದು, ಅದರಲ್ಲಿ ಬೇಯಿಸಲಾದ ಪದಾರ್ಥದ ರುಚಿ ಹಾಗೂ ಸುವಾಸನೆಯನ್ನು ಹೀರಿಕೊಳ್ಳುವುದಿಲ್ಲ.

ಬ್ರಸಿಲ್‌ನಲ್ಲಿ ಕಡಲೆಕಾಯಿ ಊಟ ಎಂಬುದಾಗಿ ಕರೆಯಲಾಗುವ ಕಡಲೆಕಾಯಿ ಎಣ್ಣೆ ತಯಾರಿಯ ಉಪಉತ್ಪನ್ನವನ್ನು ಪ್ರಾಣಿಯಾಹಾರವಾಗಿ ಉಪಯೋಗಿಸಲಾಗುತ್ತದೆ. ಅಷ್ಟುಮಾತ್ರವಲ್ಲದೆ, ಕಡಲೆಕಾಯಿ ಉತ್ಪನ್ನಗಳು ಅನೇಕ ದಿನನಿತ್ಯದ ಸಾಮಾನುಗಳಲ್ಲಿಯೂ ಕಂಡುಬರುತ್ತವೆ.​—⁠ಮೇಲೆ ನೋಡಿರಿ.

ಕಡಲೆಕಾಯಿ ಅಲರ್ಜಿಯ ಕುರಿತು ಎಚ್ಚರವಾಗಿರಿ!

ಶೀತಕದಲ್ಲಿಡದೇ ಬಹಳ ಕಾಲದ ವರೆಗೆ ಕಡಲೆಕಾಯಿಗಳನ್ನು ಶೇಖರಿಸಿಡಸಾಧ್ಯವಿದೆ. ಹಾಗಿದ್ದರೂ, ಎಚ್ಚರಿಕೆಯ ಅಗತ್ಯವಿದೆ. ಬೂಷ್ಟು ಹಿಡಿದ ಕಡಲೆಕಾಯಿಗಳು, ಆಫ್ಲಟಾಕ್ಸಿನ್‌ ಎಂಬ ಕ್ಯಾನ್ಸರ್‌ಜನಕ ವಸ್ತುವನ್ನು ಹೊಂದಿರುತ್ತವೆ. ಅದಕ್ಕೆ ಕೂಡಿಕೆಯಾಗಿ, ಕೆಲವು ವ್ಯಕ್ತಿಗಳಿಗೆ ಕಡಲೆಕಾಯಿಯಿಂದ ಅಲರ್ಜಿ ಉಂಟಾಗುತ್ತದೆ. ಅಲರ್ಜಿಯಿಂದಾಗಿ, “ಮೂಗು ಸೋರುವಿಕೆ ಮತ್ತು ಚರ್ಮದ ಮೇಲೇಳುವ ಸಣ್ಣ ಸಣ್ಣ ಗುಳ್ಳೆಗಳಿಂದ ಜೀವಕ್ಕೆ ಗಂಡಾಂತರವನ್ನು ತರುವಂಥ ತೀವ್ರವಾದ ಅಘಾತದ ವರೆಗಿನ ರೋಗಲಕ್ಷಣಗಳು ಉಂಟಾಗಸಾಧ್ಯವಿದೆ” ಎಂಬುದಾಗಿ ತಡೆಗಟ್ಟುವಿಕೆ (ಇಂಗ್ಲಿಷ್‌) ಎಂಬ ಪತ್ರಿಕೆಯು ತಿಳಿಸುತ್ತದೆ. ಚಿಕ್ಕ ಪ್ರಾಯದ ಮಕ್ಕಳಲ್ಲಿ ಕಡಲೆಕಾಯಿಗಳ ಅಲರ್ಜಿಯು ಹೆಚ್ಚು ಸಾಮಾನ್ಯವಾಗುತ್ತಿದೆ ಎಂಬುದಾಗಿ ಕೆಲವು ಅಧ್ಯಯನಗಳು ತೋರಿಸಿವೆ.

ಮಗುವಿನ ಹೆತ್ತವರಿಬ್ಬರಿಗೂ ಉಬ್ಬಸ, ಮೂಗಿನ ಲೋಳೆಪೊರೆಯ ಉರಿಯೂತದ ಅಲರ್ಜಿ, ಅಥವಾ ಚರ್ಮರೋಗ ಇರುವುದಾದರೆ, ಮಗುವಿನಲ್ಲಿ ಕಡಲೆಕಾಯಿಯ ಅಲರ್ಜಿ ಉಂಟಾಗುವ ಸಾಧ್ಯತೆಯು ಹೆಚ್ಚಾಗಿರುತ್ತದೆ ಎಂಬುದಾಗಿ ತಡೆಗಟ್ಟುವಿಕೆ (ಇಂಗ್ಲಿಷ್‌) ಎಂಬ ಪತ್ರಿಕೆ ವರದಿಸುತ್ತದೆ.

ಅಲರ್ಜಿಗಳಿರುವ ತಾಯಂದಿರ ಮಗುವಿನ ಮತ್ತು ತಮ್ಮ ಮೊದಲ ವರುಷದಲ್ಲಿಯೇ ಹಾಲಿನಿಂದ ಅಲರ್ಜಿ ಉಂಟಾಗುವ ಮಗುವಿನ ವಿಷಯದಲ್ಲಿ ಇದು ಸತ್ಯವಾಗಿದೆ. “ಇಂಥ ಕುಟುಂಬಗಳು, ತಮ್ಮ ಮಗು ಕಡಿಮೆಪಕ್ಷ ಮೂರು ವರುಷವನ್ನು ದಾಟುವಷ್ಟರ ವರೆಗೆ ಕಡಲೆಕಾಯಿಯಿಂದ ತಯಾರಿಸಿದ ಬೆಣ್ಣೆಯನ್ನು ಅವರಿಂದ ದೂರವಿಡುವುದು ಸೂಕ್ತವಾಗಿದೆ,” ಎಂಬುದಾಗಿ ಅಮೆರಿಕದ ಜಾನ್ಸ್‌ ಹಾಪ್ಕಿನ್ಸ್‌ ಯುನಿವರ್ಸಿಟಿ ಮೆಡಿಕಲ್‌ ಕೇಂದ್ರದಲ್ಲಿ ಮಕ್ಕಳ ತಜ್ಞರ ಪ್ರೊಫೆಸರರಾದ ಡಾ. ಹ್ಯೂ ಸ್ಯಾಮ್‌ಸನ್‌ ತಿಳಿಸುತ್ತಾರೆ.

ನೀವೊಬ್ಬ ಕಡಲೆಕಾಯಿ ಪ್ರಿಯರಾಗಿರಬಹುದು ಇಲ್ಲದಿರಬಹುದು, ಆದರೆ ಅದರ ಅನೇಕ ಉಪಯೋಗಗಳ ಕುರಿತಾದ ಈ ಚರ್ಚೆಯು, ನಿರಾಡಂಬರವಾದ ಆದರೆ ಅದೇ ಸಮಯದಲ್ಲಿ ಜನಪ್ರಿಯವಾದ ಈ ಬೀಜದ ಕಡೆಗಿನ ನಿಮ್ಮ ಗಣ್ಯತೆಯನ್ನು ಪ್ರಾಯಶಃ ಹೆಚ್ಚಿಸಿರಬಹುದು.(g03 4/22)

[ಪುಟ 28ರಲ್ಲಿರುವ ಚೌಕ/ಚಿತ್ರ]

ಕಡಲೆಕಾಯಿಯ ಉಪಉತ್ಪನ್ನಗಳು ಅನೇಕ ದಿನನಿತ್ಯದ ಸಾಮಾನುಗಳಲ್ಲಿ ಕಂಡುಬರುತ್ತವೆ

• ಗೋಡೆಹಲಗೆ

• ಬೆಂಕಿಗೂಡಿನ ದಿಮ್ಮಿಗಳು

• ಪ್ರಾಣಿ ಹಾಸಿಗೆ

• ಕಾಗದ

• ಡಿಟರ್ಜೆಂಟ್‌

• ಮುಲಾಮು

• ಲೋಹದ ಪಾಲಿಷ್‌

• ಬ್ಲೀಚ್‌

• ಶಾಯಿ

• ಅಚ್ಚುಗಂಬಿಯ ಗ್ರೀಸ್‌

• ಕ್ಷೌರದ ಕ್ರೀಮ್‌

• ಮುಖದ ಕ್ರೀಮ್‌

• ಸಾಬೂನು

• ನೆಲದ ಹಾಸು ಬಟ್ಟೆ

• ರಬ್ಬರ್‌

• ಕಾಂತಿವರ್ಧಕಗಳು

• ಬಣ್ಣ

• ಸ್ಫೋಟಕಗಳು

• ಶ್ಯಾಂಪೂ

• ಔಷಧಿ

[ಕೃಪೆ]

ಮೂಲ: ಅಮೆರಿಕದ ಮಹಾನ್‌ ಕಡಲೆಕಾಯಿ (ಇಂಗ್ಲಿಷ್‌)

[ಪುಟ 26ರಲ್ಲಿರುವ ರೇಖಾಕೃತಿ/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಎಲೆಗಳು

ಪೆಗ್‌

ನೆಲದ ಮಟ್ಟ |

ಬೇರುಗಳು ಕಡಲೆಕಾಯಿ

[ಕೃಪೆ]

The Peanut Farmer magazine

[ಪುಟ 26ರಲ್ಲಿರುವ ಚಿತ್ರ]

ಜಾರ್ಜ್‌ ವಾಶಿಂಗ್ಟನ್‌ ಕಾರ್ವರ್‌ ಜ್ಞಾಪಕಾರ್ಥವಾಗಿ ಒಂದು ಸ್ಮಾರಕ

[ಪುಟ 27ರಲ್ಲಿರುವ ಚಿತ್ರ]

ಅಮೆರಿಕ

[ಪುಟ 27ರಲ್ಲಿರುವ ಚಿತ್ರ]

ಆಫ್ರಿಕ

[ಪುಟ 27ರಲ್ಲಿರುವ ಚಿತ್ರ]

ಏಷ್ಯಾ

[ಕೃಪೆ]

FAO photo/R. Faidutti

[ಪುಟ 27ರಲ್ಲಿರುವ ಚಿತ್ರ]

ಕೆಲವು ಬಗೆಯ ಕಡಲೆಕಾಯಿ ಉಪಾಹಾರಗಳು

[ಪುಟ 28ರಲ್ಲಿರುವ ಚಿತ್ರ]

ಕೆಲವು ದೇಶಗಳಲ್ಲಿ ಕಡಲೆಕಾಯಿ ಬೆಣ್ಣೆಯು ಒಂದು ಜನಪ್ರಿಯ ಆಹಾರವಾಗಿದೆ