ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಖ್ಯಾತ ಮತ್ತು ಕುಖ್ಯಾತ ವ್ಯಕ್ತಿಗಳ ರೇಖಾಚಿತ್ರಬಿಡಿಸುವುದು

ಪ್ರಖ್ಯಾತ ಮತ್ತು ಕುಖ್ಯಾತ ವ್ಯಕ್ತಿಗಳ ರೇಖಾಚಿತ್ರಬಿಡಿಸುವುದು

ಪ್ರಖ್ಯಾತ ಮತ್ತು ಕುಖ್ಯಾತ ವ್ಯಕ್ತಿಗಳ ರೇಖಾಚಿತ್ರಬಿಡಿಸುವುದು

ಬ್ರಿಟನಿನ ಎಚ್ಚರ! ಲೇಖಕರಿಂದ

ಒಬ್ಬ ಮನುಷ್ಯನ ಮುಖದ ಚಿತ್ರವನ್ನು ಬಿಡಿಸಲು ನೀವು ಎಂದಾದರೂ ಪ್ರಯತ್ನಿಸಿದ್ದೀರೋ? ಅದು ಸುಲಭದ ಕೆಲಸವಲ್ಲ. ಆದರೆ ಒಂದುವೇಳೆ, ಈಗ ತಾನೇ ಮೊದಲ ಬಾರಿಗೆ ನೋಡಿದ ಮತ್ತು ಕೇವಲ ಕೆಲವೇ ನಿಮಿಷಗಳ ಕಾಲ ನೋಡಿದ ಒಬ್ಬ ವ್ಯಕ್ತಿಯ ಚಿತ್ರವನ್ನು ಬಿಡಿಸಬೇಕಾದರೆ ಆಗೇನು? ಈ ಕೆಲಸವು ನಿಜವಾಗಿಯೂ ಬಹಳ ಕಷ್ಟಕರವಾಗಿರುತ್ತದೆ. ಏಕೆಂದರೆ ನೀವು ನೋಡಿದ ಆ ವ್ಯಕ್ತಿಯ ಮುಖದ ತೋರಿಕೆಯನ್ನು ನೀವು ಕೇವಲ ನಿಮ್ಮ ಜ್ಞಾಪಕ ಶಕ್ತಿಯಿಂದ ಬಿಡಿಸಬೇಕಾಗಿದೆ. ಅಷ್ಟುಮಾತ್ರವಲ್ಲದೆ, ನೀವು ಬಣ್ಣದ ಕಡ್ಡಿಯನ್ನು ಉಪಯೋಗಿಸಿ, ನಿಮ್ಮ ಜ್ಞಾಪಕ ಶಕ್ತಿಯ ಸಹಾಯದಿಂದ ಬಿಡಿಸಿದ ಚಿತ್ರವು, 30 ನಿಮಿಷದೊಳಗೆ ಅದಕ್ಕಾಗಿ ಕಾಯುತ್ತಿರುವ ಟೆಲಿವಿಷನ್‌ ಸಿಬ್ಬಂದಿಗಳಿಗೆ ನೀಡಲು ತಯಾರಿರಬೇಕು!

ಇಂಥ ಪಂಥಾಹ್ವಾನವನ್ನು ಎದುರಿಸಲು ನಮ್ಮಲ್ಲಿ ಅನೇಕರಿಗೆ ಅಸಾಧ್ಯವಾಗಿರಬಹುದು. ಹಾಗಿದ್ದರೂ, ಬ್ರಿಟನಿನಲ್ಲಿ ಕೆಲವು ಮಂದಿ ಸ್ತ್ರೀಪುರುಷರು ಇದನ್ನು ಮಾಡುವುದರಲ್ಲಿ ಪ್ರವೀಣರಾಗಿದ್ದಾರೆ. ಅವರು ಯಾರು? ನ್ಯಾಯಾಲಯದ ಕಲಾಕಾರರು.

ಕಾನೂನುಬದ್ಧ ತಡೆಗಳು

ನ್ಯಾಯಾಲಯದ ಮೊಕದ್ದಮೆಗಳು ಕೂಡಲೆ ಜನಸಾಮಾನ್ಯರ ಆಸಕ್ತಿಯನ್ನು ಕೆರಳಿಸುತ್ತವೆ. ಅನೇಕ ದೇಶಗಳಲ್ಲಿ ಇಂಥ ಮೊಕದ್ದಮೆಗಳನ್ನು ಟೆಲಿವಿಷನ್‌ ಮತ್ತು ಛಾಯಾಚಿತ್ರದ ಮೂಲಕ ತೋರಿಸುವುದು ಸರ್ವಸಾಮಾನ್ಯವಾಗಿದೆ. ಆದರೆ ಬ್ರಿಟನಿನಲ್ಲಿ ಇದು ಭಿನ್ನವಾಗಿದೆ. ಅಲ್ಲಿನ ಜನರು “ಯಾವುದೇ ನ್ಯಾಯಾಲಯದಲ್ಲಿ, ನ್ಯಾಯಾಧೀಶರ, ನ್ಯಾಯದರ್ಶಿಗಳ, ಮಾತ್ರವಲ್ಲದೆ ಪ್ರತಿವಾದಿಗಳ ಅಥವಾ ಸೆರೆವಾಸಿಗಳ ಹೀಗೆ ಯಾವುದೇ ವ್ಯಕ್ತಿಗಳ ಛಾಯಾಚಿತ್ರ ಅಥವಾ ರೇಖಾಚಿತ್ರವನ್ನು ಬಿಡಿಸಲು ಪ್ರಯತ್ನಿಸುವುದನ್ನು” ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. * ಇಂಥ ಸಂದರ್ಭದಲ್ಲಿಯೇ ನ್ಯಾಯಾಲಯದ ಕಲಾಕಾರರ ಕೌಶಲವು ಉಪಯೋಗಕ್ಕೆ ಬರುತ್ತದೆ. ನ್ಯಾಯಾಲಯದ ಪ್ರಾಂಗಣದಲ್ಲಿ ಏನು ಸಂಭವಿಸಿತೋ ಅದನ್ನು ಅವರು ಮಾಧ್ಯಮಗಳಿಗಾಗಿ ದಾಖಲಿಸಬೇಕಾಗಿದೆ.

ಈ ಆಕರ್ಷಕವಾದ ಕೆಲಸದ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು, ನಾನು ಲಂಡನಿನಲ್ಲಿ ನಡೆದ ಕಲೆ ಮತ್ತು ನಕ್ಷೆ ಪ್ರದರ್ಶನವನ್ನು ನೋಡಲು ಹೋದೆ. ಈ ಪ್ರದರ್ಶನದ ಒಂದು ಅತಿ ಜನಪ್ರಿಯವಾದ ಸ್ಥಳದಲ್ಲಿ, ವಿಶಿಷ್ಟ ಕಲಾಕಾರರ ಗುಂಪಿನಲ್ಲಿ ಒಬ್ಬಳಾದ ಬೆತ್‌ಳನ್ನು ಭೇಟಿಯಾದೆ. “ನ್ಯಾಯಾಲಯದಲ್ಲಿ ಒಬ್ಬ ಪ್ರತಿವಾದಿಯನ್ನು ನೋಡಲು ನಿಮಗೆ ಎಷ್ಟು ಸಮಯ ಸಿಗುತ್ತದೆ?” ಎಂಬುದು ನನ್ನ ಮೊದಲ ಪ್ರಶ್ನೆಯಾಗಿತ್ತು.

ಸಮಯ ಮತ್ತು ಉದ್ದೇಶ

“ಕೈದಿಯೊಬ್ಬನು ಮೊದಲನೇ ವಿಚಾರಣೆಗಾಗಿ ನ್ಯಾಯಾಲಯದ ಕೈದಿಯ ಕಟಕಟೆಯಲ್ಲಿ ನಿಂತಿರುವಾಗ, ಅಲ್ಲಿ ಅವನು ಸಾಮಾನ್ಯವಾಗಿ ಸುಮಾರು ಎರಡು ನಿಮಿಷಗಳ ಕಾಲ ನಿಂತಿರುತ್ತಾನೆ. ಅಷ್ಟು ಸಮಯ ಸಾಕಾಗುತ್ತದೆ,” ಎಂದು ಬೆತ್‌ ನನಗೆ ಭರವಸೆಯಿಂದ ಹೇಳಿದಳು. “ಅದು ನನಗೆ ಆ ವ್ಯಕ್ತಿಯ ತಲೆಯ ಆಕಾರ, ಕೇಶಶೈಲಿ, ಮತ್ತು ಅವನ ಮೂಗಿನ, ಕಣ್ಣುಗಳ, ತುಟಿಗಳ, ಹಾಗೂ ಬಾಯಿಯ ಆಕಾರ ಮುಂತಾದವುಗಳನ್ನು ಗುರುತಿಸಲು ಬೇಕಾಗಿರುವಷ್ಟು ಸಮಯವನ್ನು ಒದಗಿಸುತ್ತದೆ. ಅಷ್ಟುಮಾತ್ರವಲ್ಲದೆ, ವ್ಯಕ್ತಿಯ ಮುಖದ ಅಗಲ, ಹಣೆಯ ಉದ್ದ, ಕಿವಿಯ ಹಾಲೆಯ ಗಾತ್ರ, ಅದಕ್ಕೆ ಕೂಡಿಕೆಯಾಗಿ ಇತರ ವಿಶೇಷ ವಿಚಾರಗಳಾದ ಗಡ್ಡ ಅಥವಾ ಕನ್ನಡಕಗಳು ಮುಂತಾದವುಗಳನ್ನು ಸಹ ನಾನು ನನ್ನ ಮನಸ್ಸಿನಲ್ಲಿ ಟಿಪ್ಪಣಿ ಮಾಡಿಡಬೇಕು. ಹಾಗೆ ಮಾಡುವುದಾದರೆ ಮಾತ್ರ, ನಿಷ್ಕೃಷ್ಟವಾದ ಚಿತ್ರವನ್ನು ಬಿಡಿಸಲು ಅಗತ್ಯವಿರುವ ಮೂಲಭೂತ ಮಾಹಿತಿಯು ನನ್ನ ಬಳಿ ಲಭ್ಯವಿರುತ್ತದೆ.

“ಕೆಲವೊಮ್ಮೆ ನನ್ನ ಕೆಲಸವು ಬಹಳ ಕಠಿನವಾಗುತ್ತದೆ. ಉದಾಹರಣೆಗೆ, ಇತ್ತೀಚಿನ ಒಂದು ಮೊಕದ್ದಮೆಯಲ್ಲಿ 12 ವ್ಯಕ್ತಿಗಳು ಕೈದಿಯ ಕಟಕಟೆಯಲ್ಲಿದ್ದರು. ಅವರು 15 ನಿಮಿಷಗಳ ವರೆಗೆ ಇದ್ದರು ಎಂಬುದು ನಿಜ ಆದರೆ 12 ಮಂದಿಯ ಮುಖಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳಷ್ಟು ಏಕಾಗ್ರತೆಯನ್ನು ಕೇಳಿಕೊಂಡಿತು. ನನ್ನಲ್ಲಿ, ವಿಷಯಗಳನ್ನು ನೋಡಿ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯವಿದೆ, ಆದರೆ ಈ ಸಾಮರ್ಥ್ಯವನ್ನು ನಾನು ಎಷ್ಟೋ ವರುಷಗಳಿಂದ ಬೆಳೆಸಿಕೊಳ್ಳಬೇಕಿತ್ತು. ನಾನು ನ್ಯಾಯಾಲಯದ ಪ್ರಾಂಗಣವನ್ನು ಬಿಟ್ಟು ಹೊರಗೆ ಬಂದಾಗ, ಕಣ್ಣು ಮುಚ್ಚಿದರೆ ನಾನು ನೋಡಿದ ಮುಖಗಳು ನನ್ನ ನೆನಪಿಗೆ ಸ್ಪಷ್ಟವಾಗಿ ಬರಬೇಕು.”

“ನೀವು ನ್ಯಾಯಾಲಯದಲ್ಲಿ ಸಂಧಿಸಿದ ಜನರ ನಿಜತ್ವಗಳನ್ನು ಪರಿಶೀಲಿಸಲು ಎಷ್ಟು ಸಮಯವನ್ನು ವ್ಯಯಿಸುತ್ತೀರಿ?” ಎಂಬುದಾಗಿ ನಾನು ಇನ್ನೊಂದು ಪ್ರಶ್ನೆಯನ್ನು ಕೇಳಿದೆ. ಬೆತ್‌ಳ ಉತ್ತರವು ನನ್ನನ್ನು ಆಶ್ಚರ್ಯಗೊಳಿಸಿತು.

“ಒಬ್ಬ ಪತ್ರಕರ್ತನಿಗೆ ವ್ಯತಿರಿಕ್ತವಾಗಿ, ನಾನು ಯಾವ ಸಂಶೋಧನೆಯನ್ನೂ ಮಾಡುವುದಿಲ್ಲ. ನಾನು ನ್ಯಾಯಾಲಯಕ್ಕೆ ಬರುವಾಗ ನನ್ನ ಮನಸ್ಸಿನಲ್ಲಿ ಯಾವ ವಿಚಾರವೂ ಇರುವುದಿಲ್ಲ. ನ್ಯಾಯಾಲಯದ ಕಾರ್ಯಕಲಾಪಗಳನ್ನು ನಾನು ನನ್ನ ಮನಸ್ಸಿನಲ್ಲಿ ದಾಖಲಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನ್ಯಾಯಾಲಯದಲ್ಲಿ ಪ್ರತಿದಿನ ಜನರ ಮುಖಭಾವವು ಭಿನ್ನವಾಗಿರುತ್ತದೆ. ನಾನು ಬಿಡಿಸಿದ ಚಿತ್ರಗಳನ್ನು, ಟೆಲಿವಿಷನ್‌ ಅಥವಾ ವಾರ್ತಾಪತ್ರದಲ್ಲಿ ನ್ಯಾಯದರ್ಶಿಗಳು ಸಹ ನೋಡಬಹುದು ಎಂಬುದನ್ನು ನಾನು ನೆನಪಿನಲ್ಲಿಡಬೇಕು. ‘ಪ್ರತಿವಾದಿಗೆ ಎಂಥ ಒಂದು ಅಪರಾಧಿ ಮುಖಭಾವವಿದೆ!’ ಎಂಬುದಾಗಿ ಅವರಲ್ಲಿ ಯಾರಾದರೊಬ್ಬನು ಹೇಳುವಂತೆ, ನಾನು ಬಿಡಿಸಿದ ಚಿತ್ರವು ಪ್ರಭಾವಿಸಬಾರದು. ಈ ಎಲ್ಲಾ ವಿಶಿಷ್ಟ ಅಂಶಗಳಲ್ಲಿ, ನ್ಯಾಯಾಲಯದ ಕಲೆಯು ಭಾವಚಿತ್ರಕ್ಕಿಂತ ಭಿನ್ನವಾಗಿದೆ.”

“ವಿಶೇಷ ಕ್ಷಣ”

ನಾನು ಬೆತ್‌ಳನ್ನು, ಅವಳ ಸಾಫಲ್ಯದ ರಹಸ್ಯವೇನು ಎಂಬುದಾಗಿ ಕೇಳಿದಾಗ, ಅವಳು ಉತ್ತರಿಸಿದ್ದು: “ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಾರ್ಯಕಲಾಪಗಳಲ್ಲಿ ಎಲ್ಲರ ಮನಸ್ಸನ್ನು ಸೆರೆಹಿಡಿಯುವ ಒಂದು ಕ್ಷಣಕ್ಕಾಗಿ, ಹೌದು ಒಂದು ವಿಶೇಷ ಕ್ಷಣಕ್ಕಾಗಿ ನಾನು ಕಾಯುತ್ತೇನೆ. ಉದಾಹರಣೆಗೆ, ಒಬ್ಬ ಅಪರಾಧಿಯು ತನ್ನ ಮುಖವನ್ನು ಕೈಗಳಿಂದ ಮುಚ್ಚಿಕೊಂಡರೆ, ಮೊಕದ್ದಮೆಯು ಅವನ ಪರವಾಗಿ ಸಾಗಲಿಲ್ಲ ಎಂಬುದನ್ನು ಅವನ ಈ ಹಾವಭಾವ ಸ್ಪಷ್ಟಪಡಿಸುತ್ತದೆ. ಇನ್ನೊಂದು ಸಂದರ್ಭದಲ್ಲಿ, ‘ನೀನೊಬ್ಬ ಒಳ್ಳೇ ತಾಯಿಯೋ?’ ಎಂಬ ಪ್ರಶ್ನೆಗೆ, ಸ್ತ್ರೀಯ ಮುಖಭಾವವು ತಾನೇ ಅವಳ ನೇರವಾದ ಉತ್ತರಕ್ಕಿಂತಲೂ ಹೆಚ್ಚಿನದ್ದನ್ನು ತಿಳಿಸುತ್ತದೆ. ತದ್ರೀತಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ಕಣ್ಣೀರನ್ನು ಕರವಸ್ತ್ರದಿಂದ ಒರಸುತ್ತಿರುವ ಚಿತ್ರವು, ಅವನ ಆಂತರಿಕ ಭಾವನೆಗಳನ್ನು ಬಯಲುಪಡಿಸಸಾಧ್ಯವಿದೆ.

“ನ್ಯಾಯಾಲಯದ ಕಲಾಕಾರನೊಬ್ಬನು, ನ್ಯಾಯಾಲಯದ ಸನ್ನಿವೇಶವನ್ನು ಸಹ ಸೆರೆಹಿಡಿಯಬೇಕು. ಅಂದರೆ, ನ್ಯಾಯಾಧೀಶರು, ವಕೀಲರು, ಮತ್ತು ನ್ಯಾಯಾಲಯದ ಅಧಿಕಾರಿಗಳು ಹಾಗೂ ಅಲ್ಲಿರುವ ಪುಸ್ತಕಗಳು, ಲೈಟ್‌ಗಳು, ಮತ್ತು ಸಾಮಾಗ್ರಿಗಳು ಮುಂತಾದವುಗಳನ್ನು ಸಹ ಬಿಡಿಸಬೇಕು. ಇಂಥ ಸಂಪೂರ್ಣ ಚಿತ್ರಗಳು, ಹೆಚ್ಚಿನ ಜನರು ಎಂದಿಗೂ ಸ್ವತಃ ನೋಡಸಾಧ್ಯವಿರದ ವಿಷಯವಾಗಿರುವುದರಿಂದ ಅವರ ಆಸಕ್ತಿಯನ್ನು ಕೆರಳಿಸುತ್ತದೆ. ನಾನು ಎಲ್ಲಿ ಚಿತ್ರಗಳನ್ನು ಬಿಡಿಸುತ್ತೇನೆ? ಕೆಲವೊಮ್ಮೆ ನ್ಯಾಯಾಲಯದ ಪತ್ರಕರ್ತರ ಕೋಣೆಯಲ್ಲಿ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಎಲ್ಲಿಯಾದರೂ ನಿಶ್ಶಬ್ದ ವಾತಾವರಣವಿರುವ ಮೆಟ್ಟಲುಗಳ ಮೇಲೆ ಕುಳಿತುಕೊಂಡು ಚಿತ್ರಗಳನ್ನು ಬಿಡಿಸುತ್ತೇನೆ. ಆದರೆ ನಂತರ, ಒಬ್ಬ ಹೊಸ ಸಾಕ್ಷಿಯನ್ನು ಕರೆದಾಗ ಅಥವಾ ಆರೋಪಿಯ ಪರವಾಗಿ ವಕೀಲರು ನ್ಯಾಯಾಲಯವನ್ನು ಸಂಬೋಧಿಸುವಾಗ, ನಾನು ಬಿಡಿಸಿದ ಚಿತ್ರಕ್ಕೆ ಹೆಚ್ಚಿನ ಮುಖಗಳನ್ನು ಸೇರಿಸುವ ಸಲುವಾಗಿ ನಾನು ಪುನಃ ನ್ಯಾಯಾಲಯಕ್ಕೆ ಹೋಗಬೇಕು.” ಮುಗುಳ್ನಗೆಯಿಂದ ಬೆತ್‌ ಕೂಡಿಸುವುದು: “ಓಹ್‌, ನಿಜ. ನಾನು ಬಿಡಿಸಿದ ಚಿತ್ರಗಳಲ್ಲಿ ಅನೇಕ ಚಿತ್ರಗಳು ಇಂದು ವಕೀಲರ ಆಫೀಸುಗಳಲ್ಲಿ ತೂಗುಹಾಕಲ್ಪಟ್ಟಿವೆ ಎಂಬುದು ನನಗೆ ತಿಳಿದಿದೆ.”

ಅವಳಿಂದ ಮಾಡಲ್ಪಟ್ಟ ಕಲೆ ಮತ್ತು ನಕ್ಷೆಗಳ ವಿಭಾಗದಲ್ಲಿನ ಚಿತ್ರಗಳನ್ನು ನಾನು ಆಸಕ್ತಿಯಿಂದ ನೋಡಿದೆ. ಅವೆಲ್ಲವುಗಳು, ಇತ್ತೀಚಿನ ವರುಷಗಳಲ್ಲಿ ನಾನು ಓದಿದ ಪ್ರಖ್ಯಾತ ಮತ್ತು ಕುಖ್ಯಾತ ನ್ಯಾಯಾಲಯ ಮೊಕದ್ದಮೆಗಳ ನೆನಪನ್ನು ನನ್ನ ಮನಸ್ಸಿಗೆ ತಂದವು. ಸುಮಾರು ಹತ್ತು ನಿಮಿಷಗಳ ನಂತರ ನಾನು ಇನ್ನೇನು ಆ ಸ್ಥಳವನ್ನು ಬಿಟ್ಟುಹೋಗಲು ಸಿದ್ಧನಾದಾಗ, ಬೆತ್‌ಳು ನನಗೆ ಬಣ್ಣದ ಕಡ್ಡಿಯಿಂದ ಬಿಡಿಸಿದ ಒಂದು ಚಿತ್ರವನ್ನು ನೀಡಿದಳು. ಅದು ನನ್ನ ಚಿತ್ರವಾಗಿತ್ತು! (g03 4/8)

[ಪಾದಟಿಪ್ಪಣಿ]

^ ಇದು ಸ್ಕಾಟ್ಲೆಂಡಿಗೆ ಅನ್ವಯಿಸುವುದಿಲ್ಲ.

[ಪುಟ 24, 25ರಲ್ಲಿರುವ ಚಿತ್ರಗಳು]

ಒಂದು ನ್ಯಾಯಾಲಯ ಪ್ರಾಂಗಣದ ಚಿತ್ರ ಮತ್ತು ಅದು ವಾರ್ತಾಪತ್ರದಲ್ಲಿ ತೋರಿಸಲ್ಪಟ್ಟ ರೀತಿ (ಎಡಬದಿಯಲ್ಲಿ)

[ಕೃಪೆ]

© The Guardian