ವಿಷಯಗಳು ಎಂದಾದರೂ ಉತ್ತಮಗೊಳ್ಳುವವೋ?
ವಿಷಯಗಳು ಎಂದಾದರೂ ಉತ್ತಮಗೊಳ್ಳುವವೋ?
ಇಂದು, ಲೋಕಾರೋಗ್ಯ ಸಂಸ್ಥೆ ಮತ್ತು ಇತರ ಸಂಬಂಧಿತ ಗುಂಪುಗಳು, ರೋಗ ನಿಗಾವಣೆ ಮತ್ತು ನಿಯಂತ್ರಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಕೀಟರವಾನಿತ ರೋಗದ ವೃದ್ಧಿಯಾಗುತ್ತಿರುವ ಸಮಸ್ಯೆಯನ್ನು ತಡೆಗಟ್ಟಲು ಮಾಡಲಾಗುವ ಪ್ರಯತ್ನಗಳಲ್ಲಿ ಅನೇಕ ಸಂಸ್ಥೆಗಳು, ಮಾಹಿತಿಯನ್ನೂ ಪ್ರಸಾರ ಮಾಡುತ್ತಿವೆ ಮತ್ತು ಹೊಸ ಔಷಧಿಗಳನ್ನು ಹಾಗೂ ರೋಗಗಳನ್ನು ನಿಯಂತ್ರಿಸುವ ನವೀನ ವಿಧಾನಗಳನ್ನು ಕಂಡುಹಿಡಿಯಲು ಅನ್ವೇಷಣೆಯನ್ನು ಉತ್ತೇಜಿಸುತ್ತವೆ. ಮಾಹಿತಿಯನ್ನು ಪಡೆಯಲು ಮತ್ತು ತಮ್ಮನ್ನೇ ರಕ್ಷಿಸಿಕೊಳ್ಳಲು ವ್ಯಕ್ತಿಗಳು ಹಾಗೂ ಸಮುದಾಯಗಳು ಸಹ ಹೆಚ್ಚನ್ನು ಮಾಡಸಾಧ್ಯವಿದೆ. ಹಾಗಿದ್ದರೂ, ವ್ಯಕ್ತಿಪರವಾಗಿ ಪ್ರತಿಯೊಬ್ಬರಿಗೆ ರೋಗರಕ್ಷಣೆ ನೀಡುವುದು ಲೋಕವ್ಯಾಪಕವಾಗಿ ರೋಗಗಳನ್ನು ನಿಯಂತ್ರಿಸುವುದಕ್ಕೆ ಸಮಾನವಾಗಿರುವುದಿಲ್ಲ.
ರೋಗ ನಿಯಂತ್ರಣಕ್ಕೆ, ಭೌಗೋಳಿಕ ಸಹಕಾರ ಮತ್ತು ಭರವಸೆಯು ಅತಿ ಪ್ರಾಮುಖ್ಯವಾಗಿದೆ ಎಂಬುದನ್ನು ಅನೇಕ ವಿಶೇಷಜ್ಞರು ನಂಬುತ್ತಾರೆ. “ಮಾನವ ನೆಲೆಯಲ್ಲಾಗುತ್ತಿರುವ ತೀವ್ರಗತಿಯ ಜಾಗತೀಕರಣವು, ಭೂಗ್ರಹದ ಎಲ್ಲೆಡೆಯೂ ಇರುವ ಮಾನವ ಜೀವಿಗಳು ತಮ್ಮ ನೆರೆಹೊರೆಗಳು, ಪ್ರಾಂತಗಳು, ದೇಶಗಳು, ಮತ್ತು ಅರ್ಧಗೋಳಗಳಷ್ಟೇ ತಮ್ಮ ವೈಯಕ್ತಿಕ ಪರಿಸರವಾಗಿದೆ ಎಂದು ಪರಿಗಣಿಸದಿರುವುದನ್ನು ಅಗತ್ಯಪಡಿಸುತ್ತದೆ” ಎಂಬುದಾಗಿ ಪುಲಿಟ್‌ಸರ್ ಬಹುಮಾನ ವಿಜೇತೆಯಾದ ಲಾರೀ ಗಾರ್‌ಟ್, ಬರಲಿರುವ ಮಾರಕ ವ್ಯಾಧಿ—ಸಮತೋಲನ ತಪ್ಪಿರುವ ಲೋಕದಲ್ಲಿ ತಲೆದೋರುತ್ತಿರುವ ಹೊಸ ರೋಗಗಳು (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. “ಸೂಕ್ಷ್ಮಜೀವಿಗಳು ಮತ್ತು ಅವುಗಳನ್ನು ಸಾಗಿಸುವ ಕೀಟಗಳು, ಮಾನವರಿಂದ ಸ್ಥಾಪಿಸಲಾದ ಯಾವುದೇ ಕೃತಕ
ಎಲ್ಲೆಗಳನ್ನು ಅಂಗೀಕರಿಸುವುದಿಲ್ಲ.” ಒಂದು ದೇಶದಲ್ಲಿ ರೋಗವು ತಲೆದೋರುವುದಾದರೆ, ಅದು ಕೂಡಲೆ ನೆರೆರಾಷ್ಟ್ರಗಳಲ್ಲಿ ಮಾತ್ರವಲ್ಲ ಲೋಕವ್ಯಾಪಕವಾಗಿ ಚಿಂತೆಯನ್ನುಂಟುಮಾಡುತ್ತದೆ.ಇತರ ದೇಶಗಳಿಂದ ಬರುವ ಯಾವುದೇ ರೀತಿಯ ಸಹಾಯವನ್ನು—ಅದು ರೋಗ ನಿಯಂತ್ರಣ ಕಾರ್ಯಕ್ರಮಗಳಾಗಿರುವುದಾದರೂ—ಕೆಲವು ಸರಕಾರಗಳು ಮತ್ತು ಜನರು ಸಂಶಯಿಸುತ್ತಾರೆ. ಇದಕ್ಕೆ ಕೂಡಿಕೆಯಾಗಿ, ರಾಜಕೀಯ ಮುನ್ನೋಟದ ಕೊರತೆ ಮತ್ತು ವ್ಯಾಪಾರ ರಂಗದಲ್ಲಿನ ಅತ್ಯಾಸೆಯು ಅನೇಕವೇಳೆ ಅಂತಾರಾಷ್ಟ್ರೀಯ ಒಮ್ಮತದ ಪ್ರಯತ್ನಗಳನ್ನು ತಡೆಗಟ್ಟುತ್ತದೆ. ಮಾನವನ ಮತ್ತು ರೋಗದ ನಡುವಣ ಹೋರಾಟದಲ್ಲಿ, ಸೂಕ್ಷ್ಮಜೀವಿಗಳು ಗೆಲುವನ್ನು ಪಡೆಯುವವೋ? ಪಡೆಯುವವು ಎಂಬುದಾಗಿ ಭಾವಿಸುವ ಗ್ರಂಥಕರ್ತ ಯೂಜೀನ್ ಲಿಂಡಲ್ ಹೇಳುವುದು: “ಪರಿಸ್ಥಿತಿಯನ್ನು ಸರಿಪಡಿಸಲು ಕೇವಲ ಕೊಂಚ ಸಮಯವು ಉಳಿದಿದೆ.”
ನಿರೀಕ್ಷೆಗೆ ಕಾರಣ
ರೋಗಗಳ ಸಂಖ್ಯೆಯಲ್ಲಿನ ಬೆಳವಣಿಗೆಯೊಂದಿಗೆ ಹೋಲಿಸುವಾಗ ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳು ಬಹಳ ಹಿಂದುಳಿದಿವೆ. ಮಾನವನ ಆರೋಗ್ಯಕ್ಕೆ ಇರುವ ಅನೇಕ ಗಂಡಾಂತರಗಳಲ್ಲಿ, ಕೀಟರವಾನಿತ ರೋಗಗಳ ಸಮಸ್ಯೆಯು ಕೇವಲ ಒಂದಾಗಿದೆ. ಆದರೆ ನಿರೀಕ್ಷೆಗೆ ಕಾರಣವಿದೆ. ವಿಜ್ಞಾನಿಗಳು ಜೀವಾಣುಗಳ ಬೃಹತ್ ಸಂಬಂಧಗಳ ಕುರಿತು ಈಗ ತಾನೇ ತಿಳಿದುಕೊಳ್ಳಲು ಆರಂಭಿಸಿರುವುದಾದರೂ, ಭೂಮಿಗೆ ಸ್ವತಃ ಗುಣಪಡಿಸಿಕೊಳ್ಳುವ ಶಕ್ತಿಯಿದೆಯೆಂಬದನ್ನು ಅವರು ಅಂಗೀಕರಿಸುತ್ತಾರೆ. ನೈಸರ್ಗಿಕ ವ್ಯವಸ್ಥೆಗಳಿಗೆ ಸಮತೋಲನವನ್ನು ಪುನಃ ಸ್ಥಾಪಿಸುವ ಸಾಮರ್ಥ್ಯವು ನಮ್ಮ ಗ್ರಹಕ್ಕಿದೆ. ಉದಾಹರಣೆಗಾಗಿ, ಕಾಡನ್ನು ಕಡಿದ ನಂತರ ಅದು ಪುನಃ ತಾನಾಗಿ ಬೆಳೆಯಲಾರಂಭಿಸುತ್ತದೆ ಮತ್ತು ಸೂಕ್ಷ್ಮಜೀವಿಗಳ, ಕೀಟಗಳ, ಹಾಗೂ ಪ್ರಾಣಿಗಳ ಸಂಬಂಧವು ಕ್ರಮೇಣ ದೃಢವಾಗುತ್ತದೆ.
ಅತಿ ಪ್ರಾಮುಖ್ಯವಾಗಿ, ಪ್ರಕೃತಿಯ ಜಟಿಲ ವಿನ್ಯಾಸವು ಆದಿಯಲ್ಲಿಯೇ ಭೂಮಿಯ ಯಾಂತ್ರಿಕ ವ್ಯವಸ್ಥೆಗಳನ್ನು ಚಲನೆಯಲ್ಲಿಟ್ಟಿರುವ ಸೃಷ್ಟಿಕರ್ತನಾದ ದೇವರೆಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ. ಭೂಮಿಯ ಸೃಷ್ಟಿಗೆ ಒಬ್ಬ ಅತ್ಯುನ್ನತ ಬುದ್ಧಿಜೀವಿಯು ಕಾರಣನಾಗಿದ್ದಾನೆ ಎಂಬುದನ್ನು ಅನೇಕ ವಿಜ್ಞಾನಿಗಳು ಸ್ವತಃ ಒಪ್ಪಿಕೊಳ್ಳುತ್ತಾರೆ. ಹೌದು, ವಿಷಯವನ್ನು ಗಂಭೀರವಾಗಿ ಆಲೋಚಿಸುವವರು ದೇವರ ಅಸ್ತಿತ್ವವನ್ನು ಯಶಸ್ವಿಯಾಗಿ ಅಲ್ಲಗಳೆಯಸಾಧ್ಯವಿಲ್ಲ. ಬೈಬಲು ಸೃಷ್ಟಿಕರ್ತನಾದ ಯೆಹೋವ ದೇವರನ್ನು ಸರ್ವಶಕ್ತನೂ ಪ್ರೀತಿಭರಿತನೂ ಎಂಬುದಾಗಿ ಸಹ ವರ್ಣಿಸುತ್ತದೆ. ಆತನಿಗೆ ನಮ್ಮ ಸಂತೋಷದಲ್ಲಿ ಗಾಢವಾದ ಆಸಕ್ತಿಯಿದೆ.
ಮೊದಲನೆಯ ಮಾನವನ ಉದ್ದೇಶಪೂರ್ವಕ ಪಾಪದ ಕಾರಣ ಮನುಷ್ಯನು ಅಪರಿಪೂರ್ಣತೆ, ಅಸ್ವಸ್ಥತೆ, ಮತ್ತು ಮರಣವನ್ನು ಬಾಧ್ಯತೆಯಾಗಿ ಪಡೆದುಕೊಂಡಿದ್ದಾನೆಂದೂ ಬೈಬಲ್ ವಿವರಿಸುತ್ತದೆ. ನಾವು ಅನಿಯತವಾಗಿ ಕಷ್ಟವನ್ನು ಅನುಭವಿಸುತ್ತಾ ಇರುವಂತೆ ಪೂರ್ವನಿರ್ಣಯಮಾಡಲ್ಪಟ್ಟಿದೆ ಎಂದು ಇದರ ಅರ್ಥವೋ? ಇಲ್ಲ! ದೇವರ ಉದ್ದೇಶವು ಈ ಭೂಮಿಯನ್ನು ಒಂದು ಪರದೈಸಾಗಿ ಮಾಡಿ, ಅಲ್ಲಿ ಮಾನವರು ಇತರ ಎಲ್ಲಾ ದೊಡ್ಡ ಹಾಗೂ ಚಿಕ್ಕ ಜೀವಿಗಳೊಂದಿಗೆ ನೆಮ್ಮದಿಯಿಂದ ಜೀವಿಸುವುದೇ ಆಗಿದೆ. ಒಂದು ದೊಡ್ಡ ಮೃಗವಾಗಲಿ ಅಥವಾ ಒಂದು ಚಿಕ್ಕ ಕೀಟವಾಗಲಿ ಮನುಷ್ಯನಿಗೆ ಅಪಾಯವನ್ನು ಒಡ್ಡದ ಒಂದು ಲೋಕದ ಕುರಿತು ಬೈಬಲ್ ಮುನ್‌ತಿಳಿಸುತ್ತದೆ.—ಯೆಶಾಯ 11:6-9.
ನಿಶ್ಚಯವಾಗಿಯೂ, ಅಂಥ ಪರಿಸ್ಥಿತಿಗಳನ್ನು ಸಾಮಾಜಿಕವಾಗಿ ಮತ್ತು ನೈಸರ್ಗಿಕವಾಗಿ ಕಾಪಾಡುವುದರಲ್ಲಿ ಮನುಷ್ಯನಿಗೂ ಒಂದು ಪಾತ್ರವಿದೆ. ದೇವರು ಮನುಷ್ಯನಿಗೆ ಭೂಮಿಯನ್ನು ‘ಕಾಯುವದಕ್ಕೆ’ ಆಜ್ಞಾಪಿಸಿದನು. (ಆದಿಕಾಂಡ 2:15) ಮಾನವನು ಭವಿಷ್ಯತ್ತಿನ ಪರದೈಸಿನಲ್ಲಿ ಸೃಷ್ಟಿಕರ್ತನ ಮಾರ್ಗದರ್ಶನವನ್ನು ವಿಧೇಯತೆಯಿಂದ ಅನುಸರಿಸುತ್ತಾ, ಆ ಕೆಲಸವನ್ನು ಪರಿಪೂರ್ಣ ರೀತಿಯಲ್ಲಿ ನಿರ್ವಹಿಸುವನು. ಆದುದರಿಂದ, ‘ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳದ,’ ಆ ದಿನವನ್ನು ನಾವು ಮುನ್ನೋಡಸಾಧ್ಯವಿದೆ.—ಯೆಶಾಯ 33:24.(g03 5/22)