ಸಾಲುಗಟ್ಟಿ ಹೋಗುತ್ತಿರುವ ಒಂದು ಸೇನೆ!
ಸಾಲುಗಟ್ಟಿ ಹೋಗುತ್ತಿರುವ ಒಂದು ಸೇನೆ!
“ಬೆಲೀಸ್ ದೇಶದ, ಅಭಿವೃದ್ಧಿಶೀಲ ಹಾಗೂ ಬಹಳ ಸಸ್ಯಗಳಿಂದ ಸುತ್ತುವರಿಯಲ್ಪಟ್ಟಿರುವ ಒಂದು ಗ್ರಾಮದಲ್ಲಿ ನಾವು ಜೀವಿಸುತ್ತಿದ್ದೇವೆ. ಒಂದು ದಿನ ಬೆಳ್ಳಿಗೆ ಸುಮಾರು ಒಂಬತ್ತು ಗಂಟೆ ಸಮಯಕ್ಕೆ, ಒಂದು ಸೇನೆಯು ನಮ್ಮ ಮನೆಯ ಮೇಲೆ ದಾಳಿಮಾಡಿತು. ಆಹಾರವನ್ನು ಹುಡುಕುತ್ತಾ, ಬಾಗಿಲಿನ ಕೆಳಗಿನಿಂದ ಮತ್ತು ಪ್ರತಿಯೊಂದು ಬಿರುಕಿನಿಂದ ಬಹಳಷ್ಟು ಸಂಖ್ಯೆಯಲ್ಲಿ ಇರುವೆಗಳು ಒಳಬಂದವು. ಇರುವೆಗಳಿಂದ ನಮ್ಮ ಮನೆಯು ಆಕ್ರಮಿಸಲ್ಪಟ್ಟಾಗ, ಒಂದು ಅಥವಾ ಎರಡು ತಾಸಿಗಾಗಿ ಮನೆಯನ್ನು ಬಿಟ್ಟು ಹೋಗುವುದರ ಹೊರತು ನಮಗೆ ಬೇರೆ ದಾರಿ ಇರಲಿಲ್ಲ. ನಾವು ಹಿಂದಿರುಗಿ ಬಂದಾಗ, ನಮ್ಮ ಮನೆಯು ಸಂಪೂರ್ಣವಾಗಿ ಕೀಟಗಳಿಂದ ಮುಕ್ತವಾಗಿತ್ತು ಮತ್ತು ಇರುವೆಗಳೂ ಅಲ್ಲಿಂದ ಹೋಗಿದ್ದವು.”
ಬೆಲೀಸ್‌ನಂಥ ಉಷ್ಣವಲಯ ದೇಶಗಳಲ್ಲಿಜೀವಿಸುತ್ತಿರುವ ಅನೇಕ ಜನರಿಗೆ ಇದೊಂದು ಸಾಮಾನ್ಯ ಘಟನೆಯಾಗಿದೆ, ಆದರೆ ಸಂಪೂರ್ಣವಾಗಿ ಅಹಿತಕರವಾದ ಒಂದು ಘಟನೆಯಲ್ಲ. ಏಕೆಂದರೆ? ಜಿರಲೆಗಳಿಂದ ಮತ್ತು ಇತರ ಕ್ರಿಮಿಕೀಟಗಳಿಂದ ಮನೆಯನ್ನು ಶುದ್ಧವಾಗಿರಿಸಲು ಇದೊಂದು ಒಳ್ಳೇ ಮಾರ್ಗವಾಗಿದೆ. ಅಷ್ಟುಮಾತ್ರವಲ್ಲದೆ, ಅವು ಯಾವುದೇ ಕೊಳಕನ್ನು ಬಿಟ್ಟುಹೋಗುವುದೂ ಇಲ್ಲ.
ಆಸಕ್ತಿಕರವಾಗಿ, ಇಲ್ಲಿ ತಿಳಿಸಲಾದ ಇರುವೆಗಳನ್ನು ಅವುಗಳ ಸೈನಿಕ ಸದೃಶ ಜೀವನಶೈಲಿ ಮತ್ತು ಚಟುವಟಿಕೆಗಳಿಂದಾಗಿ ಸೇನೆ ಇರುವೆಗಳು ಎಂದು ಕರೆಯಲಾಗುತ್ತದೆ. * ಗೂಡುಗಳನ್ನು ಕಟ್ಟುವ ಬದಲಾಗಿ ಸಾವಿರಾರು ಸಂಖ್ಯೆಯಲ್ಲಿರುವ ಈ ಅಲೆಮಾರಿ ಸೇನೆಗಳು, ತಮ್ಮ ಕಾಲುಗಳನ್ನು ಸಂಕೋಲೆಯಂತೆ ಒಂದರ ಎಡೆಗೆ ಇನ್ನೊಂದನ್ನು ಹಾಕಿ ತಮ್ಮ ದೇಹದಿಂದಲೇ, ರಾಣಿ ಮತ್ತು ಅದರ ಮರಿಗಳ ಸುತ್ತಲು ಒಂದು ಪರದೆಯನ್ನುಂಟುಮಾಡುವ ಮೂಲಕ ತಾತ್ಕಾಲಿಕ ಶಿಬಿರಗಳನ್ನು ಉಂಟುಮಾಡುತ್ತವೆ. ಈ ತಾತ್ಕಾಲಿಕ ಶಿಬಿರಗಳಿಂದ, ಕೆಲವು ದಾಳಿಮಾಡುವ ತಂಡಗಳನ್ನು, ಕೀಟಗಳು ಮತ್ತು ಹಲ್ಲಿಗಳಂಥ ಇತರ ಸಣ್ಣ ಜೀವಿಗಳನ್ನು ಒಳಗೊಂಡ ಆಹಾರವನ್ನು ಹುಡುಕಲು ದೀರ್ಘಸಾಲುಗಳಲ್ಲಿ ಕಳುಹಿಸಲಾಗುತ್ತದೆ. ಈ ದಾಳಿ ತಂಡಗಳ ನಾಯಕ ಇರುವೆಗಳು ತಮ್ಮ ಬಲಿಗಳನ್ನು ಸಿಕ್ಕಿಸಿಹಾಕಲು ಪಕ್ಕದಿಂದ ಹೋಗಿ ಮುತ್ತುವಂತೆ ಕಾಣುವ ತಂತ್ರವನ್ನೂ ಉಪಯೋಗಿಸುತ್ತವೆ. ಈ ಅಸಾಧಾರಣ ಸಂಗತಿ ನಡೆಯುವುದು, ಮುಂದಿರುವ ಇರುವೆಗಳಿಗೆ ಇನ್ನೆಲ್ಲಿಗೆ ಹೋಗಬೇಕೆಂಬ ವಾಸನೆ ದೊರೆಯದಿರುವಾಗಲೇ. ಆಗ ಅವು ಹಿಂದಿರುವ ಇರುವೆಗಳ ಮುನ್ನಡೆಯನ್ನು ನಿಲ್ಲಿಸುತ್ತವೆ. ಆದರೆ ಹಿಂದಿರುವ ಇರುವೆಗಳು ಅನಿವಾರ್ಯವಾಗಿ ಮುಂದೆ ನುಗ್ಗಿ, ಹೀಗೆ ಮುಂದಿನ ಸಾಲಿನಲ್ಲಿ ಉಬ್ಬು ಉಂಟಾಗಿ, ಅನೇಕ ಭಾಗಗಳಿಂದ ಮುತ್ತಿಗೆ ಹಾಕುವ ತಂತ್ರವನ್ನು ಸೂಚಿಸುವ ಚಲನೆಗಳು ಉಂಟಾಗುತ್ತವೆ.
ಸೇನೆ ಇರುವೆಗಳು 36 ದಿನಗಳ ಚಕ್ರದಲ್ಲಿ ಕಾರ್ಯ ನಡೆಸುತ್ತವೆ. ಅವು ಸುಮಾರು 16 ದಿನಗಳ ವರೆಗೆ ಸೇನಾಪ್ರಯಾಣದಲ್ಲಿರುತ್ತವೆ ಮತ್ತು ಉಳಿದ 20 ದಿನಗಳು ಅಂದರೆ ಅವುಗಳ ರಾಣಿಯು ಮೊಟ್ಟೆಗಳನ್ನು ಇಡುವ ಸಮಯದಲ್ಲಿ ಒಂದೇ ಸ್ಥಳದಲ್ಲಿ ನೆಲೆಸಿರುತ್ತವೆ. ನಂತರ, ಹಸಿವೆಯು ಅವುಗಳನ್ನು ಪುನಃ ತಮ್ಮ ಸೇನಾಪ್ರಯಾಣವನ್ನು ಆರಂಭಿಸುವಂತೆ ಮಾಡುತ್ತದೆ. ಅವುಗಳ ಸೇನೆಯ ಸಾಲು ಸುಮಾರು ಹತ್ತು ಮೀಟರ್ ಅಗಲವಾಗಿರುತ್ತದೆ ಮತ್ತು ಪಲಾಯನ ಗೈಯುತ್ತಿರುವ ಜೇಡಗಳು, ಚೇಳುಗಳು, ಜೀರುಂಡೆಗಳು, ಕಪ್ಪೆಗಳು, ಮತ್ತು ಹಲ್ಲಿಗಳು ಈ ಸೇನಾಸಾಲಿನ ಅಂಚಿನಲ್ಲಿರುತ್ತವೆ. ಅಷ್ಟುಮಾತ್ರವಲ್ಲದೆ, ಇರುವೆಗಳನ್ನಲ್ಲ ಬದಲಾಗಿ ಪಲಾಯನ ಗೈಯುತ್ತಿರುವ ಈ ಜೀವಿಗಳನ್ನು ಹಿಡಿದು ತಿನ್ನಲು ಹಕ್ಕಿಗಳೂ ಹಿಂದಿನಿಂದ ಹಾರಿ ಬರುತ್ತವೆ.
ಬೈಬಲಿನಲ್ಲಿ ಜ್ಞಾನೋಕ್ತಿ 30:24, 25ರಲ್ಲಿ ವಿವರಿಸಲ್ಪಟ್ಟಿರುವಂತೆ “ಅಧಿಕ ಜ್ಞಾನವುಳ್ಳ” ಜೀವಿಗಳಾದ ಇರುವೆಗಳು, ಸೃಷ್ಟಿಯ ಅದ್ಭುತಗಳಲ್ಲಿ ಒಂದಾಗಿವೆ.(g03 6/8)
[ಪಾದಟಿಪ್ಪಣಿ]
^ ಈ ಲೇಖನವು, ಮಧ್ಯ ಮತ್ತು ದಕ್ಷಿಣ ಅಮೆರಿಕದ ಏಸಟನ್ ಜಾತಿಯ ಇರುವೆಯ ವಿಷಯದಲ್ಲಿ ತಿಳಿಸುತ್ತದೆ.
[ಪುಟ 29ರಲ್ಲಿರುವ ಚಿತ್ರ]
ಸೇನೆ ಇರುವೆ
[ಕೃಪೆ]
© Frederick D. Atwood
[ಪುಟ 29ರಲ್ಲಿರುವ ಚಿತ್ರ]
ತಮ್ಮ ಕಾಲುಗಳನ್ನು ಸಂಕೋಲೆಯೋಪಾದಿ ಒಂದರ ಎಡೆಗೆ ಇನ್ನೊಂದನ್ನು ಹಾಕುವ ಮೂಲಕ ಒಂದು ಸೇತುವೆಯನ್ನು ಕಟ್ಟುವುದು
[ಕೃಪೆ]
© Tim Brown/www.infiniteworld.org