ಹಾನಿಕಾರಕ ಮಾತುಗಳನ್ನು ತ್ಯಜಿಸಿರಿ
ಬೈಬಲಿನ ದೃಷ್ಟಿಕೋನ
ಹಾನಿಕಾರಕ ಮಾತುಗಳನ್ನು ತ್ಯಜಿಸಿರಿ
“ಅದೇ ಬಾಯಿಂದ ಸ್ತುತಿ ಶಾಪ ಎರಡೂ ಬರುತ್ತವೆ. ನನ್ನ ಸಹೋದರರೇ, ಹೀಗಿರುವದು ಯೋಗ್ಯವಲ್ಲ.”—ಯಾಕೋಬ 3:10.
ಮಾತನಾಡುವ ಸಾಮರ್ಥ್ಯವು, ನಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸುವ ಒಂದು ಅದ್ವಿತೀಯ ವೈಶಿಷ್ಟ್ಯವಾಗಿದೆ. ದುಃಖಕರವಾಗಿ, ಕೆಲವರು ಈ ಸುಯೋಗವನ್ನು ದುರುಪಯೋಗಿಸುತ್ತಾರೆ. ಅವಹೇಳನ, ಶಪಿಸುವುದು, ಅಸಹ್ಯಕರವಾದ ಮಾತು, ದೂಷಣೆ, ಅಸಭ್ಯ ಹಾಗೂ ಅಶ್ಲೀಲ ಮಾತು ಮುಂತಾದವುಗಳು ಹಾನಿಯನ್ನು, ಕೆಲವೊಮ್ಮೆ ಶಾರೀರಿಕ ಹಾನಿಗಿಂತಲೂ ಹೆಚ್ಚನ್ನು ಉಂಟುಮಾಡಸಾಧ್ಯವಿದೆ. “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು,” ಎಂಬುದಾಗಿ ಬೈಬಲ್ ತಿಳಿಸುತ್ತದೆ.—ಜ್ಞಾನೋಕ್ತಿ 12:18.
ಹೆಚ್ಚೆಚ್ಚು ಜನರು ತಮ್ಮ ದಿನನಿತ್ಯದ ಸಂಭಾಷಣೆಯಲ್ಲಿ ಬೈಗುಳದ ಮಾತುಗಳನ್ನು ಉಪಯೋಗಿಸುತ್ತಾರೆ. ಮಕ್ಕಳ ಮಧ್ಯೆಯೂ ಆಶ್ಲೀಲ ಮಾತುಗಳು ಹೆಚ್ಚಾಗುತ್ತಿವೆಯೆಂದು ಶಾಲೆಗಳು ವರದಿಸುತ್ತವೆ. ಹಾಗಿದ್ದರೂ, ಭಾವನಾತ್ಮಕ ಉಪಶಮನವನ್ನು ಪಡೆದುಕೊಳ್ಳುವ ಉದ್ದೇಶದಿಂದ ಉಪಯೋಗಿಸಲ್ಪಟ್ಟಾಗ, ಹಾನಿಕಾರಕ ಮಾತುಗಳು ಪ್ರಯೋಜನಕಾರಿಯಾಗಿರಬಲ್ಲವು ಎಂಬುದಾಗಿ ಕೆಲವು ವ್ಯಕ್ತಿಗಳು ಪ್ರತಿಪಾದಿಸುತ್ತಾರೆ. ರಾಜಕೀಯ ವಿಜ್ಞಾನದ ವಿದ್ಯಾರ್ಥಿಯೊಬ್ಬನು ಬರೆದದ್ದು: “ನಮ್ಮ ಭಾವನೆಗಳ ಆಳವನ್ನು ಸಾಮಾನ್ಯ ಪದಗಳಿಂದ ವ್ಯಕ್ತಪಡಿಸಲು ಅಸಾಧ್ಯವಾದಾಗ,
ಅಶ್ಲೀಲ ಮಾತುಗಳ ಉಪಯೋಗವು ಶಕ್ತಿಯುತವಾದ ಸಾಧನವಾಗಿದೆ.” ಹಾನಿಕಾರಕ ಮಾತುಗಳ ವಿಷಯದಲ್ಲಿ ಕ್ರೈಸ್ತರಿಗೆ ಇಂಥ ಒಂದು ಹಗುರವಾದ ಮನೋಭಾವ ಇರತಕ್ಕದ್ದೋ? ಇದರ ಕುರಿತು ದೇವರ ದೃಷ್ಟಿಕೋನವೇನಾಗಿದೆ?ಅಶ್ಲೀಲವಾದ ಕುಚೋದ್ಯ ಮಾತುಗಳನ್ನು ಹೇಸಿರಿ
ಅಶ್ಲೀಲ ಮಾತುಗಳು, ಆಧುನಿಕ ದಿನದಲ್ಲಿ ಆರಂಭಗೊಂಡ ಒಂದು ಸಂಗತಿಯಲ್ಲ. ಸುಮಾರು 2,000 ವರುಷಗಳ ಹಿಂದೆ, ಅಪೊಸ್ತಲರ ದಿನಗಳಲ್ಲಿಯೂ ಜನರು ಅಶ್ಲೀಲ ಮಾತನ್ನು ಉಪಯೋಗಿಸುತ್ತಿದ್ದರು ಎಂಬುದನ್ನು ತಿಳಿಯುವಾಗ ನಿಮಗೆ ಆಶ್ಚರ್ಯವಾಗುತ್ತದೋ? ಉದಾಹರಣೆಗೆ, ಕೊಲೊಸ್ಸೆಯ ಸಭೆಯಲ್ಲಿದ್ದ ಕೆಲವರು ಕೋಪಗೊಂಡಾಗ ಅಶ್ಲೀಲ ಮಾತುಗಳನ್ನು ಉಪಯೋಗಿಸಿದ್ದಿರಬಹುದು. ಅವರು, ಪ್ರತೀಕಾರ ತೀರಿಸಲು, ಉದ್ದೇಶಪೂರ್ವಕವಾಗಿ ಇತರರನ್ನು ನೋಯಿಸಲು ಅಥವಾ ಅವರಿಗೆ ಹಾನಿಮಾಡಲು ಈ ರೀತಿ ಮಾತನಾಡುತ್ತಿದ್ದಿರಬಹುದು. ಅಂತೆಯೇ, ಇಂದು ಸಹ ಅನೇಕರು ಕೋಪವನ್ನು ವ್ಯಕ್ತಪಡಿಸುವಾಗ ಅಶ್ಲೀಲ ಮಾತುಗಳನ್ನು ಉಪಯೋಗಿಸುತ್ತಾರೆ. ಆದುದರಿಂದ, ಕೊಲೊಸ್ಸೆಯವರಿಗೆ ಪೌಲನು ಬರೆದ ಪತ್ರವು ನಮ್ಮ ದಿನದಲ್ಲಿಯೂ ಉಪಯುಕ್ತವಾಗಿದೆ. ಪೌಲನು ಬರೆದದ್ದು: “ಈಗಲಾದರೋ ಕ್ರೋಧ ಕೋಪ ಮತ್ಸರ ದೂಷಣೆ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ.” (ಕೊಲೊಸ್ಸೆ 3:8) ಸ್ಪಷ್ಟವಾಗಿ, ಕೋಪದ ಕೆರಳುವಿಕೆಗಳನ್ನು ಮತ್ತು ಅನೇಕವೇಳೆ ಕೋಪದೊಂದಿಗೆ ಜೊತೆಗೂಡಿ ಬರುವ ಅಶ್ಲೀಲ ಮಾತುಗಳನ್ನು ತ್ಯಜಿಸುವಂತೆ ಕ್ರೈಸ್ತರು ಎಚ್ಚರಿಸಲ್ಪಟ್ಟಿದ್ದಾರೆ.
ಅನೇಕರು, ಇತರರನ್ನು ನೋಯಿಸುವ ಅಥವಾ ಹಾನಿಯನ್ನುಂಟುಮಾಡುವ ಯಾವುದೇ ಉದ್ದೇಶದಿಂದ ಅಶ್ಲೀಲ ಮಾತುಗಳನ್ನು ಉಪಯೋಗಿಸುವುದಿಲ್ಲ ಎಂಬುದು ನಿಜ. ಸಂಭವನೀಯವಾಗಿ, ಅನೇಕವೇಳೆ ಅಶ್ಲೀಲ ಮಾತುಗಳು ನಿರ್ಲಕ್ಷ್ಯ ರೀತಿಯಲ್ಲಿ ಉಪಯೋಗಿಸಲ್ಪಡುತ್ತವೆ. ಈ ರೀತಿಯಲ್ಲಿ, ತುಚ್ಛ ಮಾತುಗಳು ದಿನನಿತ್ಯದ ಮಾತುಗಳಲ್ಲಿ ಆಳವಾಗಿ ಬೇರೂರುತ್ತವೆ. ಕೆಲವರಿಗೆ ಅಸಹ್ಯಕರವಾದ ಮಾತುಗಳಿಲ್ಲದೆ ಸಂವಾದ ಮಾಡುವುದೇ ಕಷ್ಟಕರವಾಗಿ ಪರಿಣಮಿಸುತ್ತದೆ. ಅನೇಕವೇಳೆ, ಇತರರನ್ನು ನಗಿಸುವ ಉದ್ದೇಶದಿಂದಲೂ ಅಶ್ಲೀಲ ಮಾತುಗಳು ಉಪಯೋಗಿಸಲ್ಪಡುತ್ತವೆ. ಆದರೆ, ಇಂಥ ಅಶ್ಲೀಲ ಕುಚೋದ್ಯ ಮಾತುಗಳನ್ನು ಕಡಿಮೆ ಗಂಭೀರವಾದ, ಸಹಿಸಬಹುದಾದ ಅಪರಾಧವೆಂದು ಭಾವಿಸಬೇಕೋ? ಕೆಳಗೆ ತಿಳಿಸಲ್ಪಟ್ಟಿರುವ ವಿಷಯವನ್ನು ಪರಿಗಣಿಸಿರಿ.
ಅಶ್ಲೀಲ ಕುಚೋದ್ಯ ಮಾತು ಬೆಚ್ಚಿಬೀಳಿಸುವಂಥ ಮಾತಾಗಿದೆ ಮತ್ತು ಇತರರನ್ನು ನಗಿಸುವ ಉದ್ದೇಶದಿಂದ ಇದನ್ನಾಡಲಾಗುತ್ತದೆ. ಇಂದು, ಅಶ್ಲೀಲ ಕುಚೋದ್ಯ ಮಾತು ಹೆಚ್ಚಾಗಿ ಲೈಂಗಿಕ ವಿಷಯಕ್ಕೆ ಸಂಬಂಧಿಸಿರುತ್ತದೆ. ಅಷ್ಟುಮಾತ್ರವಲ್ಲದೆ, ಸಭ್ಯರೆಂದೆಣಿಸಿಕೊಳ್ಳುವ ವ್ಯಕ್ತಿಗಳು ಸಹ ಇಂಥ ಮಾತುಗಳಿಂದ ಆನಂದವನ್ನು ಪಡೆದುಕೊಳ್ಳುತ್ತಾರೆ. (ರೋಮಾಪುರ 1:28-32) ಆದುದರಿಂದ, ಸ್ವಾಭಾವಿಕ ಮತ್ತು ಅಸ್ವಾಭಾವಿಕ ಲೈಂಗಿಕ ವರ್ತನೆಗಳು ಅನೇಕ ಹಾಸ್ಯಗಾರ ಕಸಬಿನವರ ಮುಖ್ಯ ವಿಷಯವಾಗಿದೆ. ಟೆಲಿವಿಷನ್ ಮತ್ತು ರೇಡಿಯೋ ಕಾರ್ಯಕ್ರಮಗಳಲ್ಲಿ ಹಾಗೂ ಅನೇಕ ಚಲನ ಚಿತ್ರಗಳಲ್ಲಿ ಅಶ್ಲೀಲ ಕುಚೋದ್ಯ ಮಾತುಗಳು ಕೇಳಿಬರುತ್ತವೆ.
ಅಶ್ಲೀಲ ಕುಚೋದ್ಯ ಮಾತಿನ ಕುರಿತು ಬೈಬಲ್ ತಿಳಿಸುತ್ತದೆ. ಎಫೆಸ ಸಭೆಯ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದದ್ದು: “ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು; ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು. ಹೊಲಸು ಮಾತು ಹುಚ್ಚು ಮಾತು ಕುಚೋದ್ಯ ಮಾತು ಇವು ಬೇಡ, ಅಯುಕ್ತವಾಗಿವೆ.” (ಎಫೆಸ 5:3, 4) ಸ್ಪಷ್ಟವಾಗಿಯೇ, ಅಶ್ಲೀಲ ಮಾತನ್ನು ಆಡುವ ಉದ್ದೇಶವು ಏನೇ ಆಗಿರಲಿ ಅದು ದೇವರ ಮುಂದೆ ಅಪರಾಧವಾಗಿದೆ. ಅದು ಕೆಟ್ಟದ್ದಾಗಿದೆ ಮತ್ತು ಇತರರಿಗೆ ಹಾನಿಯನ್ನುಂಟುಮಾಡುವ ಮಾತಾಗಿದೆ.
ದೇವರನ್ನು ಅಸಂತೋಷಗೊಳಿಸುವಂಥ ನಿರ್ದಯ ಮಾತುಗಳು
ಹಾನಿಕಾರಕ ಮಾತುಗಳಲ್ಲಿ ಅಶ್ಲೀಲ ಮಾತುಗಳಿಗಿಂತಲೂ ಹೆಚ್ಚಿನದ್ದು ಒಳಗೊಂಡಿದೆ. ಮುಖಭಂಗಗೊಳಿಸುವ ಮಾತು, ಚುಚ್ಚು ಮಾತು, ಗೇಲಿ, ಮತ್ತು ನಿರ್ದಯವಾದ ಟೀಕೆ ಮುಂತಾದವುಗಳು ಮನಸ್ಸನ್ನು ಆಳವಾಗಿ ನೋಯಿಸಸಾಧ್ಯವಿದೆ. ನಾವೆಲ್ಲರೂ ನಮ್ಮ ನಾಲಿಗೆಯ ಮೂಲಕ ಪಾಪ ಮಾಡುವವರಾಗಿದ್ದೇವೆ ಎಂಬುದು ನಿಜ. ಮತ್ತು ಇದು, ಚುಚ್ಚು ಮಾತು ಮತ್ತು ಚಾಡಿ ಮಾತು ತುಂಬಿರುವ ಈ ಲೋಕದಲ್ಲಿ ವಿಶೇಷವಾಗಿ ಸತ್ಯವಾಗಿದೆ. (ಯಾಕೋಬ 3:2) ಆದರೂ, ಸತ್ಯ ಕ್ರೈಸ್ತರು ನಿಂದಾತ್ಮಕ ಮಾತುಗಳ ಕಡೆಗೆ ಹಗುರವಾದ ಮನೋಭಾವವನ್ನು ತಮ್ಮದಾಗಿಸಿಕೊಳ್ಳಬಾರದು. ಹಾನಿಕಾರಕವಾದ ಎಲ್ಲಾ ಮಾತುಗಳನ್ನು ಯೆಹೋವ ದೇವರು ಅಸಮ್ಮತಿಸುತ್ತಾನೆಂದು ಬೈಬಲ್ ಸ್ಪಷ್ಟವಾಗಿ ತೋರಿಸುತ್ತದೆ.
ಉದಾಹರಣೆಗೆ, ಬೈಬಲಿನ ಎರಡನೇ ಅರಸುಗಳು ಪುಸ್ತಕದಲ್ಲಿ, ಹುಡುಗರ ಒಂದು ಗುಂಪು ಪ್ರವಾದಿಯಾದ ಎಲೀಷನನ್ನು ಮಾತಿನ ಮೂಲಕ ಪರಿಹಾಸ್ಯಮಾಡಿದ ವಿಷಯವನ್ನು ನಾವು ಕಲಿಯುತ್ತೇವೆ. ವೃತ್ತಾಂತವು ತಿಳಿಸುವುದು, ಅವರು “ಬೋಳಮಂಡೆಯವನೇ, ಏರು; ಬೋಳಮಂಡೆಯವನೇ, ಏರು ಎಂದು ಕೂಗಿ ಅವನನ್ನು ಪರಿಹಾಸ್ಯಮಾಡಿದರು.” ಈ ಎಳೆಯರ ಹೃದಯವನ್ನು ಓದಬಲ್ಲವನಾದ ಮತ್ತು ಅವರ ದುರುದ್ದೇಶವನ್ನು ತಿಳಿಯಬಲ್ಲವನಾದ ಯೆಹೋವನು, ಅವರ ನಿಂದಾತ್ಮಕ ಮಾತನ್ನು ಗಂಭೀರವಾಗಿ ತೆಗೆದುಕೊಂಡನು. ವೃತ್ತಾಂತವು ತಿಳಿಸುವುದು, ಅವರ ನಿಂದಾತ್ಮಕ ಮಾತಿನ ಕಾರಣ ದೇವರು ಆ ನಾಲ್ವತ್ತೆರಡು ಮಂದಿ ಹುಡುಗರನ್ನು ಹತಿಸಿದನು.—2 ಅರಸುಗಳು 2:23, 24.
2 ಪೂರ್ವಕಾಲವೃತ್ತಾಂತ 36:16) ದೇವರ ಕೋಪವು ಆತನ ಜನರ ಮೇಲೆ ಪ್ರಾಮುಖ್ಯವಾಗಿ ವಿಗ್ರಹಾರಾಧನೆ ಮತ್ತು ಅವಿಧೇಯ ಕೃತ್ಯಗಳ ಕಾರಣ ಎಬ್ಬಿಸಲ್ಪಟ್ಟಿತ್ತಾದರೂ, ಬೈಬಲ್ ವಿಶೇಷವಾಗಿ ಅವರು ದೇವರ ಪ್ರವಾದಿಗಳ ವಿರುದ್ಧ ಮಾತನಾಡಿದ ನಿಂದಾತ್ಮಕ ಮಾತುಗಳ ಕುರಿತು ಉಲ್ಲೇಖಿಸುವುದು ಗಮನಾರ್ಹವಾಗಿದೆ. ಇದು, ಇಂಥ ನಡತೆಯ ಕಡೆಗೆ ದೇವರ ಅಪ್ರಸನ್ನತೆಯನ್ನು ನೇರವಾಗಿ ಎತ್ತಿತೋರಿಸುತ್ತದೆ.
ಇಸ್ರಾಯೇಲ್ ಜನರು, “ದೇವಪ್ರೇಷಿತರನ್ನು ಗೇಲಿಮಾಡಿ ಆತನ ಮಾತುಗಳನ್ನು ತುಚ್ಛೀಕರಿಸಿ ಆತನ ಪ್ರವಾದಿಗಳನ್ನು ಹೀಯಾಳಿಸಿದ್ದರಿಂದ ಆತನ ಕೋಪಾಗ್ನಿಯು ಆತನ ಪ್ರಜೆಯ ಮೇಲೆ ಉರಿಯಹತ್ತಿತು, ಅವರ ತಾಪವು ಆರಿಹೋಗಲೇ ಇಲ್ಲ.” (ಆದುದರಿಂದಲೇ, ಬೈಬಲ್ ಕ್ರೈಸ್ತರಿಗೆ ಬುದ್ಧಿಹೇಳುವುದು: “ವೃದ್ಧನನ್ನು ಟೀಕೆ ಮಾಡಬೇಡ.” (1 ತಿಮೊಥೆಯ 5:1, NW) ಈ ಮೂಲತತ್ತ್ವವನ್ನು ನಾವು ಎಲ್ಲಾ ಜನರೊಂದಿಗಿನ ನಮ್ಮ ವ್ಯವಹಾರದಲ್ಲಿ ಅನ್ವಯಿಸಸಾಧ್ಯವಿದೆ. “ಯಾರನ್ನೂ ದೂಷಿಸದೆ ಕುತರ್ಕಮಾಡದೆ ಎಲ್ಲಾ ಮನುಷ್ಯರಿಗೆ ಪೂರ್ಣಸಾಧುಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರಬೇಕೆಂತಲೂ” ಬೈಬಲ್ ನಮ್ಮನ್ನು ಉತ್ತೇಜಿಸುತ್ತದೆ.—ತೀತ 3:2.
ನಮ್ಮ ತುಟಿಗಳನ್ನು ಕಾಯುವುದು
ಕೆಲವೊಮ್ಮೆ, ಇನ್ನೊಬ್ಬರನ್ನು ಬಾಯಿಮಾತಿನ ಮೂಲಕ ನೋಯಿಸಬೇಕೆಂಬ ಪ್ರಚೋದನೆಯನ್ನು ತಡೆಗಟ್ಟುವುದು ಬಹಳ ಕಷ್ಟಕರವಾಗಿರಸಾಧ್ಯವಿದೆ. ಒಬ್ಬ ವ್ಯಕ್ತಿಗೆ, ಇನ್ನೊಬ್ಬ ವ್ಯಕ್ತಿಯಿಂದ ತಪ್ಪಾದಾಗ ಆ ತಪ್ಪಿತಸ್ಥನನ್ನು ನೇರವಾಗಿಯೋ ಪರೋಕ್ಷವಾಗಿಯೋ ಕಠಿನವಾದ, ನಿರ್ದಯ ಮಾತುಗಳಿಂದ ಶಿಕ್ಷಿಸುವುದು ನ್ಯಾಯೋಚಿತವಾಗಿ ತೋರಬಹುದು. ಹಾಗಿದ್ದರೂ, ಕ್ರೈಸ್ತರು ಅಂಥ ಪ್ರಚೋದನೆಯನ್ನು ತಡೆಗಟ್ಟುತ್ತಾರೆ. ಜ್ಞಾನೋಕ್ತಿ 10:19 ತಿಳಿಸುವುದು: “ಮಾತಾಳಿಗೆ ಪಾಪ ತಪ್ಪದು. ಮೌನಿಯು (“ತುಟಿಗಳನ್ನು ಕಾಯುವವನು,” NW) ಮತಿವಂತ.”
ದೇವದೂತರು ಒಂದು ಒಳ್ಳೆಯ ಮಾದರಿಯನ್ನು ಇಟ್ಟಿದ್ದಾರೆ. ಮಾನವಕುಲದಿಂದ ಮಾಡಲ್ಪಟ್ಟಿರುವ ಎಲ್ಲಾ ಕೆಟ್ಟ ಸಂಗತಿಗಳು ಅವರಿಗೆ ತಿಳಿದಿವೆ. ದೇವದೂತರು ಮನುಷ್ಯರಿಗಿಂತ ಬಲ ಮತ್ತು ಮಹತ್ತಿನಲ್ಲಿ ಶ್ರೇಷ್ಠರಾಗಿರುವುದಾದರೂ, ನಿಂದಾತ್ಮಕ ಮಾತುಗಳ ಮೂಲಕ ಮನುಷ್ಯರಿಗೆ ವಿರುದ್ಧವಾಗಿ ದೂಷಣಾಭಿಪ್ರಾಯವನ್ನು ಹೇಳುವದಿಲ್ಲ. ಅವರಿದನ್ನು, “ದೇವರ ಕಡೆಗಿನ ಗೌರವದ ಕಾರಣ ಮಾಡುವುದಿಲ್ಲ.” (2 ಪೇತ್ರ 2:11, NW) ದೇವರು ಎಲ್ಲರ ತಪ್ಪು ಕೃತ್ಯಗಳನ್ನು ಬಲ್ಲವನಾಗಿದ್ದಾನೆ ಮತ್ತು ವಿಷಯಗಳನ್ನು ಸರಿಪಡಿಸಲು ಶಕ್ತನಾಗಿದ್ದಾನೆ ಎಂಬುದನ್ನು ತಿಳಿದವರಾಗಿ, ದೇವದೂತರು ತಮ್ಮ ತುಟಿಗಳನ್ನು ಕಾಯುತ್ತಾರೆ. ಪ್ರಧಾನ ದೇವದೂತನಾದ ಮೀಕಾಯೇಲನು, ಸೈತಾನನ ವಿರುದ್ಧವಾಗಿಯೂ ದೂಷಣಾಭಿಪ್ರಾಯವನ್ನು ಹೇಳುವುದರಿಂದ ತನ್ನನ್ನು ತಡೆದುಕೊಂಡನು.—ಯೂದ 9.
ಕ್ರೈಸ್ತರು ಆ ದೇವದೂತರನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವವಾದದ್ದೋ ಅದನ್ನೇ ಯೋಚಿಸಿ ಸಾಧಿಸಿರಿ. ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ. ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು [“ಯೆಹೋವನು,” NW] ಹೇಳುತ್ತಾನೆಂಬದಾಗಿ ಬರೆದದೆ.”—ರೋಮಾಪುರ 12:17-19.
ಆಸಕ್ತಿಕರವಾಗಿ, ನಮ್ಮ ಸ್ವರಭಾರವು ಸಹ ನಾವು ಏನನ್ನು ಹೇಳುತ್ತೇವೋ ಅದಕ್ಕೆ ಹಾನಿಕಾರಕ ಅಂಶವನ್ನು ಸೇರಿಸಸಾಧ್ಯವಿದೆ. ಗಂಡಹೆಂಡತಿಯರು ಜಗಳವಾಡುವಾಗ ಒಬ್ಬರಿಗೊಬ್ಬರು ಹಾನಿಕಾರಕವಾದ ಮಾತುಗಳನ್ನು ಉಪಯೋಗಿಸುವಂತಹದ್ದು ಸಾಮಾನ್ಯವಾಗಿದೆ. ಅನೇಕ ಹೆತ್ತವರು ತಮ್ಮ ಮಕ್ಕಳಿಗೆ ಕಿರಿಚಿ ಮಾತಾಡುತ್ತಾರೆ. ಹಾಗಿದ್ದರೂ, ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವಾಗ ನಾವು ಕಿರಿಚುವ ಅಗತ್ಯವಿಲ್ಲ. ಬೈಬಲ್ ಪ್ರೇರೇಪಿಸುವುದು: “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ [“ಕಿರಿಚುವಿಕೆ,” NW] ದೂಷಣೆ ಇವುಗಳನ್ನೂ . . . ದೂರಮಾಡಿರಿ.” (ಎಫೆಸ 4:31) “ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧು” ಗುಣವುಳ್ಳವನಾಗಿರಬೇಕು ಎಂಬುದಾಗಿ ಸಹ ಬೈಬಲ್ ತಿಳಿಸುತ್ತದೆ.—2 ತಿಮೊಥೆಯ 2:24.
ಗುಣಪಡಿಸುವಂಥ ಮಾತುಗಳು
ನಿಂದಾತ್ಮಕ ಮತ್ತು ಅಶ್ಲೀಲ ಮಾತುಗಳು ಇಂದು ಹೆಚ್ಚು ಬಳಕೆಯಲ್ಲಿರುವ ಕಾರಣ, ಅದರ ಹಾನಿಕಾರಕ ಪ್ರಭಾವವನ್ನು ತ್ಯಜಿಸಲು ಕ್ರೈಸ್ತರು ಹೆಣಗಾಡಬೇಕಾಗುತ್ತದೆ. ಈ ಗುರಿಯನ್ನು ತಲಪಲು ಬೈಬಲ್ ನಮಗೆ ಒಂದು ಉತ್ತಮವಾದ ವಿಧವನ್ನು ತಿಳಿಸುತ್ತದೆ. ಅದೇನಂದರೆ, ನಮ್ಮ ನೆರೆಯವರನ್ನು ಪ್ರೀತಿಸುವುದೇ. (ಮತ್ತಾಯ 7:12; ಲೂಕ 10:27) ನೆರೆಯವರ ಕಡೆಗೆ ನೈಜವಾದ ಕಾಳಜಿ ಮತ್ತು ಪ್ರೀತಿಯು, ನಾವು ಯಾವಾಗಲೂ ಗುಣಪಡಿಸುವಂಥ ಮಾತುಗಳನ್ನು ಉಪಯೋಗಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಬೈಬಲ್ ತಿಳಿಸುವುದು: “ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.”—ಎಫೆಸ 4:29.
ಅಷ್ಟುಮಾತ್ರವಲ್ಲದೆ, ದೇವರ ವಾಕ್ಯವನ್ನು ನಮ್ಮ ಮನಸ್ಸಿನಲ್ಲಿ ಬೇರೂರಿಸುವುದು, ಹಾನಿಕಾರಕ ಮಾತುಗಳನ್ನು ತಡೆಗಟ್ಟಲು ನಮಗೆ ಸಹಾಯಮಾಡುತ್ತದೆ. ಪವಿತ್ರ ಶಾಸ್ತ್ರಗಳನ್ನು ಓದುವುದು ಮತ್ತು ಮನನ ಮಾಡುವುದು, ‘ಎಲ್ಲಾ ನೀಚತನವನ್ನು ತೆಗೆದುಹಾಕಲು’ ನಮಗೆ ಸಹಾಯಮಾಡುತ್ತದೆ. (ಯಾಕೋಬ 1:21) ಹೌದು, ದೇವರ ವಾಕ್ಯವು ನಮ್ಮ ಮನಸ್ಸನ್ನು ಗುಣಪಡಿಸಶಕ್ತವಾಗಿದೆ.(g03 6/8)