ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಶ್ಲೀಲ ಸಾಹಿತ್ಯವು ಏಕೆ ಇಷ್ಟೊಂದು ವ್ಯಾಪಕವಾಗಿದೆ?

ಅಶ್ಲೀಲ ಸಾಹಿತ್ಯವು ಏಕೆ ಇಷ್ಟೊಂದು ವ್ಯಾಪಕವಾಗಿದೆ?

ಅಶ್ಲೀಲ ಸಾಹಿತ್ಯವು ಏಕೆ ಇಷ್ಟೊಂದು ವ್ಯಾಪಕವಾಗಿದೆ?

ಲೈಂಗಿಕ ಭಾವನೆಗಳನ್ನು ಕೆರಳಿಸಲೆಂದೇ ವಿನ್ಯಾಸಿಸಲಾದ ಕಾಮಪ್ರಚೋದಕ ವಿಷಯಗಳ ತಯಾರಿಯು, ಎರಡು ಸಾವಿರಕ್ಕಿಂತಲೂ ಹೆಚ್ಚು ವರ್ಷಗಳಷ್ಟು ಹಳೆಯ ಸಂಗತಿಯಾಗಿದೆ. ಆದರೆ ಆ ಸಮಯಗಳಲ್ಲಿ ಅಶ್ಲೀಲ ಸಾಹಿತ್ಯವನ್ನು ತಯಾರಿಸುವುದು ಬಹಳ ಕಷ್ಟಕರವಾಗಿದ್ದ ಕಾರಣ, ಅದು ಮುಖ್ಯವಾಗಿ ಶ್ರೀಮಂತ ಹಾಗೂ ಆಳುವ ವರ್ಗಗಳ ಜನರಿಗೆ ಮಾತ್ರ ದೊರೆಯುತ್ತಿತ್ತು. ಸಮಯಾನಂತರ, ವಿಸ್ತೃತವಾದ ಮುದ್ರಣ ಸೌಕರ್ಯ ಮತ್ತು ಛಾಯಾಚಿತ್ರಗಳ ಹಾಗೂ ಚಲನ ಚಿತ್ರಗಳ ಕಂಡುಹಿಡಿಯುವಿಕೆಯು ಇದೆಲ್ಲವನ್ನು ಬದಲಾಯಿಸಿತು. ಅಶ್ಲೀಲ ಸಾಹಿತ್ಯವು, ಶ್ರೀಮಂತರಲ್ಲದವರಿಗೂ ಕೈಗೆಟಕುವಂಥ ಮತ್ತು ಲಭ್ಯವಿರುವ ವಿಷಯವಾಯಿತು.

ವಿಡಿಯೋ ಕ್ಯಾಸೆಟ್‌ ರೆಕಾರ್ಡರ್‌ಗಳ ಬೆಳವಣಿಗೆಯು ಈ ಪ್ರವೃತ್ತಿಯನ್ನು ಇನ್ನಷ್ಟು ಉಲ್ಬಣಗೊಳಿಸಿತು. ವಿಡಿಯೋ ಕ್ಯಾಸೆಟ್‌ಗಳು ಸಿನಿಮಾ ರೀಲ್‌ಗಳಂತೆಯಾಗಲಿ ಹಳೆಯ ಫೋಟೋಗ್ರಾಫ್‌ಗಳಂತೆಯಾಗಲಿ ಇರಲಿಲ್ಲ. ಅವು ಶೇಖರಣೆಗೂ ನಕಲುಪ್ರತಿ ತಯಾರಿಕೆಗೂ ಮತ್ತು ವಿತರಣೆಗೂ ಸುಲಭವಾಗಿದ್ದವು. ಅಷ್ಟುಮಾತ್ರವಲ್ಲದೆ, ಅವುಗಳನ್ನು ಈಗ ಮನೆಯಲ್ಲೇ ಖಾಸಗಿಯಾಗಿ ವೀಕ್ಷಿಸಬಹುದು. ಇತ್ತೀಚೆಗೆ, ಕೇಬಲ್‌ ಟಿವಿ ಮತ್ತು ಇಂಟರ್‌ನೆಟ್‌ಗಳಲ್ಲಿನ ಸಂಖ್ಯಾಭಿವೃದ್ಧಿಯು, ಅಶ್ಲೀಲ ಸಾಹಿತ್ಯವು ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಸಾಧ್ಯಗೊಳಿಸಿದೆ. ವಿಡಿಯೋ ಸ್ಟೋರ್‌ನಲ್ಲಿ ಅಶ್ಲೀಲ ವಿಡಿಯೋಗಳಿರುವ ವಿಭಾಗದಲ್ಲಿ ತನ್ನನ್ನು ತನ್ನ ನೆರೆಯವರು ಒಂದುವೇಳೆ ನೋಡಬಹುದು ಎಂಬ ಭಯವಿದ್ದ ಗ್ರಾಹಕನು, ಈಗ “ತನ್ನ ಮನೆಯಲ್ಲಿಯೇ ಇದ್ದು ತನ್ನ ಕೇಬಲ್‌ ವ್ಯವಸ್ಥೆಯಲ್ಲಿ ಅಥವಾ ಸ್ಯಾಟಿಲೈಟ್‌ ಚಾನೆಲ್‌ನಲ್ಲಿ ಒದಗಿಸಲಾದ ಒಂದು ಬಟನನ್ನು ಒತ್ತುವ ಮೂಲಕ ಅದನ್ನು ಖರೀದಿಸಬಲ್ಲನು” ಎಂಬುದಾಗಿ ಸಾಮೂಹಿಕ ಮಾಧ್ಯಮಗಳ ವಿಶ್ಲೇಷಕನಾದ ಡೆನ್ನಿಸ್‌ ಮ್ಯಾಕ್ಕಲ್‌ಪೆನ್‌ ತಿಳಿಸುತ್ತಾರೆ. ಅಶ್ಲೀಲ ಸಾಹಿತ್ಯವು “ಇನ್ನಷ್ಟು ಹೆಚ್ಚು ಸ್ವೀಕಾರಾರ್ಹವಾಗಲು” ಈ ರೀತಿಯ ಕಾರ್ಯಕ್ರಮಗಳ ಸುಲಭ ಲಭ್ಯತೆಯೇ ಒಂದು ಕಾರಣವಾಗಿದೆ ಎಂಬುದು ಮ್ಯಾಕ್ಕಲ್‌ಪೆನ್‌ರವರ ಅಭಿಪ್ರಾಯವಾಗಿದೆ.

ಅಶ್ಲೀಲ ಸಾಹಿತ್ಯವು ಸರ್ವಸಾಮಾನ್ಯ ಸಂಗತಿಯಾಗುತ್ತದೆ

ಅನೇಕರಲ್ಲಿ ಅಶ್ಲೀಲ ಸಾಹಿತ್ಯದ ಕುರಿತು ಚಂಚಲ ಭಾವನೆಗಳಿವೆ. ಇದಕ್ಕೆ, ಅಶ್ಲೀಲ ಸಾಹಿತ್ಯವು ಸರ್ವಸಾಮಾನ್ಯ ಸಂಗತಿಯಾಗುತ್ತಿರುವುದೇ ಕಾರಣವಾಗಿದೆ. “ಈಗಾಗಲೇ ಇದು ನಾಟಕ, ನೃತ್ಯ, ಚಿತ್ರಮಂದಿರ, ಸಂಗೀತ ಮತ್ತು ಚಿತ್ರಕಲೆ ಮುಂತಾದ ಎಲ್ಲಾ ವಿಷಯಗಳು ಒಟ್ಟುಸೇರಿ ಬೀರಿದ ಪ್ರಭಾವಕ್ಕಿಂತಲೂ ಹೆಚ್ಚು ಅಪಾರವಾದ ಪ್ರಭಾವವನ್ನು ನಮ್ಮ ಸಂಸ್ಕೃತಿಯ ಮೇಲೆ ಬೀರಿದೆ,” ಎಂದು ಬರಹಗಾರನಾದ ಜರ್ಮೇನ್‌ ಗ್ರಿರ್‌ ಹೇಳುತ್ತಾಳೆ. ಅಶ್ಲೀಲ ಸಾಹಿತ್ಯದ ಕಡೆಗಿನ ಆಧುನಿಕ ಮನೋಭಾವವು, ವೇಶ್ಯೆಯರೆಂದು ಎಲ್ಲರಿಗೂ ತಿಳಿದಿರುವಂಥವರ ಉಡುಪುಗಳನ್ನು ‘ಸ್ಟೈಲ್‌’ ಎಂದೆಣಿಸುತ್ತಾ ಅನೇಕ ಪ್ರಸಿದ್ಧ ವ್ಯಕ್ತಿಗಳು ಅದನ್ನು ಅನುಕರಿಸುವುದರಿಂದ, ಸಂಗೀತ ವಿಡಿಯೋಗಳು ಲೈಂಗಿಕ ವಿಷಯಗಳನ್ನು ಹೆಚ್ಚೆಚ್ಚಾಗಿ ಪ್ರದರ್ಶಿಸುವುದರಿಂದ, ಮತ್ತು ಜಾಹೀರಾತು ಮಾಧ್ಯಮಗಳು ತಮ್ಮ ಜಾಹೀರಾತಿಗಾಗಿ ಉಪಯೋಗಿಸುವ “ಅಶ್ಲೀಲ ಚಿತ್ರ”ಗಳಿಂದ ಪ್ರತಿಬಿಂಬಿಸಲ್ಪಡುತ್ತಿದೆ. ಮ್ಯಾಕ್ಕಲ್‌ಪೆನ್‌ ತಿಳಿಸುವುದು: “ಸಾಮೂಹಿಕ ಮಾಧ್ಯಮಗಳಲ್ಲಿ ಏನನ್ನು ತೋರಿಸಲಾಗುತ್ತದೋ ಅದನ್ನು ಯಾವುದೇ ಆಕ್ಷೇಪಣೆಯಿಲ್ಲದೆ ಸಮಾಜವು ಸ್ವೀಕರಿಸುತ್ತಿದೆ. . . . ಇದು ಜನರಲ್ಲಿ, ಅಶ್ಲೀಲ ಸಾಹಿತ್ಯವೂ ಸ್ವೀಕಾರಾರ್ಹ ಎಂಬ ನೋಟವನ್ನು ಹುಟ್ಟಿಸಲು ಸಹಾಯಮಾಡಿದೆ.” ಇದರ ಪರಿಣಾಮವಾಗಿ, “ಜನರು ಅಂಥ ವಿಷಯಗಳನ್ನು ನೋಡುವಾಗ ದಂಗಾಗಿ ಹೋಗುತ್ತಿರುವಂತೆ ತೋರುವುದಿಲ್ಲ. ಅವರು ಅದನ್ನು ಒಂದು ಗಂಭೀರ ವಿಷಯವೆಂದೂ ಪರಿಗಣಿಸುವುದಿಲ್ಲ,” ಎಂದು ಆ್ಯಡ್ರಿಯ ಡೋರ್‌ಕಿನ್‌ ಪ್ರಲಾಪಿಸುತ್ತಾಳೆ.

ಅಶ್ಲೀಲ ಸಾಹಿತ್ಯದ ತಾರ್ಕಿಕ ವಿವರಣೆ

ಲೇಖಕಿಯಾದ ಡೋರ್‌ಕಿನ್‌ಳ ಹೇಳಿಕೆಯಂತದ್ದೇ ಆದ ಹೇಳಿಕೆಯನ್ನು ನೀಡುತ್ತಾ ನಿವೃತ್ತ ಎಫ್‌ಬಿಐ ಗುಪ್ತಚಾರನಾದ ರೋಜರ್‌ ಯಂಗ್‌ ತಿಳಿಸುವುದೇನೆಂದರೆ, ಅನೇಕ ಜನರು “ಅಶ್ಲೀಲತೆಯ ಗಂಭೀರ ಪರಿಣಾಮಗಳನ್ನು ಮತ್ತು ಅದು ಉಂಟುಮಾಡುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ.” ಅಶ್ಲೀಲ ಚಿತ್ರಗಳು ಜನರ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆಂಬುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಹೇಳುತ್ತಾ, ಅಶ್ಲೀಲ ಸಾಹಿತ್ಯದ ಪರವಾಗಿ ವಾದಿಸುವವರಿಂದ ಕೆಲವರು ಮೋಸಹೋಗಿದ್ದಾರೆ. “ಅಶ್ಲೀಲ ಸಾಹಿತ್ಯವು ಬರಿಯ ಕಾಲ್ಪನಿಕತೆಯಾಗಿದೆ ಅಷ್ಟೆ. ಆದರೆ ಈ ವಾಸ್ತವಾಂಶವನ್ನು ಅದರ ವಿರೋಧಿಗಳಿಗೆ ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿದೆ ಎಂದು ತೋರುತ್ತದೆ,” ಎಂದು ಲೇಖಕ ಎಫ್‌. ಎಮ್‌. ಕ್ರಿಸ್‌ಟೆನ್‌ಸೆನ್‌ ಬರೆಯುತ್ತಾರೆ. ಆದರೆ, ಕಾಲ್ಪನಿಕತೆಗೆ ಯಾವುದೇ ರೀತಿಯ ಪ್ರಭಾವವನ್ನು ಬೀರುವ ಸಾಮರ್ಥ್ಯವಿಲ್ಲವಾದರೆ, ಜಾಹೀರಾತು ಉದ್ಯಮಗಳು ಯಾವುದರ ಮೇಲೆ ಆಧಾರಿತವಾಗಿವೆ? ರೇಡಿಯೋ ಅಥವಾ ದೂರದರ್ಶನದಲ್ಲಿ ಪ್ರಸಾರವಾಗುವ ಜಾಹೀರಾತುಗಳಿಗೆ, ವಿಡಿಯೋ ಜಾಹೀರಾತುಗಳಿಗೆ, ಮತ್ತು ಮುದ್ರಿತ ಜಾಹೀರಾತುಗಳಿಗೆ ಜನರ ಮೇಲೆ ಯಾವುದೇ ಬಾಳುವ ಪ್ರಭಾವವನ್ನು ಬೀರುವ ಸಾಮರ್ಥ್ಯವಿಲ್ಲವಾದರೆ, ಸಂಸ್ಥೆಗಳು ಕೋಟ್ಯಾಂತರ ಡಾಲರು ಹಣವನ್ನು ಅದಕ್ಕಾಗಿ ಏಕೆ ವ್ಯಯಿಸಬೇಕು?

ವಾಸ್ತವವೇನೆಂದರೆ, ಎಲ್ಲಾ ಯಶಸ್ವಿದಾಯಕ ಜಾಹೀರಾತಿನಂತೆ ಅಶ್ಲೀಲ ಸಾಹಿತ್ಯದ ಮುಖ್ಯ ಧ್ಯೇಯವು, ಹಿಂದೆಂದೂ ಇರದಂಥ ಅಭಿಲಾಷೆಗಳನ್ನು ಹುಟ್ಟಿಸುವುದೇ ಆಗಿದೆ. “ಅಶ್ಲೀಲ ಸಾಹಿತ್ಯದ ಮುಖ್ಯ ಹೇತುವು ಲಾಭಗಳಿಸುವುದೇ ಆಗಿದೆ, ಇನ್ನೇನೂ ಅಲ್ಲ. ಇಂದಿನ ಹತೋಟಿಮೀರಿ ಹೋಗಿರುವ ವ್ಯಾಪಾರ ಜಗತ್ತಿನಲ್ಲಿ ಎಲ್ಲವನ್ನೂ​—⁠ಅದರಲ್ಲೂ ಮುಖ್ಯವಾಗಿ ಸ್ತ್ರೀಯರ ಶರೀರಗಳನ್ನು ಮತ್ತು ಮಾನವರ ಲೈಂಗಿಕ ಸಂಬಂಧಗಳನ್ನು​—⁠ಬಳಕೆಯೋಗ್ಯ ಹಾಗೂ ಲಾಭಭರಿತ ಸಂಪನ್ಮೂಲವಾಗಿ ಪರಿಗಣಿಸಲಾಗುತ್ತದೆ” ಎಂದು ಸಂಶೋಧಕರಾದ ಸ್ಟೀವನ್‌ ಹಿಲ್‌ ಮತ್ತು ನೀನ ಸಿಲ್ವರ್‌ ಬರೆಯುತ್ತಾರೆ. ಗ್ರಿರ್‌, ಅಶ್ಲೀಲ ಸಾಹಿತ್ಯವನ್ನು ಪೌಷ್ಟಿಕಾಂಶರಹಿತವೂ ರುಚಿವರ್ಧಕಗಳಿಂದ ಮತ್ತು ರಾಸಾಯನಗಳಿಂದ ಮಿಶ್ರಿತವೂ ಆಗಿರುವ ಅತಿ ಬೇಗನೆ ಚಟಹಿಡಿಸುವ ಫಾಸ್ಟ್‌ ಫುಡ್‌ಗಳಿಗೆ ಹೋಲಿಸುತ್ತಾಳೆ. “ಮಾಧ್ಯಮಗಳ ಮೂಲಕ ದೊರಕುವ ಫಾಸ್ಟ್‌ ಸೆಕ್ಸ್‌ ನಿಜವಾದ ಸೆಕ್ಸ್‌ ಅಲ್ಲ. . . . ಆಹಾರ ಜಾಹೀರಾತುಗಳು ಕಾಲ್ಪನಿಕ ಆಹಾರವನ್ನು ಮಾರುತ್ತವೆ ಮತ್ತು ಸೆಕ್ಸ್‌ ಜಾಹೀರಾತುಗಳು ಕಾಲ್ಪನಿಕ ಸೆಕ್ಸ್‌ ಅನ್ನು ಮಾರುತ್ತವೆ.”

ಕೆಲವು ವೈದ್ಯರಿಗನುಸಾರ, ಅಶ್ಲೀಲ ಸಾಹಿತ್ಯವು ಮಾದಕ ಪದಾರ್ಥಗಳ ವ್ಯಸನಕ್ಕಿಂತಲೂ ನಂದಿಸಲು ಬಹು ಕಷ್ಟಕರವಾದ ಒಂದು ವ್ಯಸನದ ಕಿಡಿಯನ್ನು ಹೊತ್ತಿಸಬಲ್ಲದು. ಮಾದಕ ವ್ಯಸನಿಗಳ ಚಿಕಿತ್ಸೆಯು ಸಾಮಾನ್ಯವಾಗಿ ನಿರ್ವಿಷೀಕರಣ ಅಂದರೆ ದೇಹದಿಂದ ಮಾದಕ ಪದಾರ್ಥಗಳ ಅಂಶವನ್ನು ತೆಗೆಯುವುದರೊಂದಿಗೆ ಆರಂಭವಾಗುತ್ತದೆ. ಆದರೆ ಅಶ್ಲೀಲ ಸಾಹಿತ್ಯದ ವ್ಯಸನವು, “ಅದನ್ನು ಉಪಯೋಗಿಸುವವನ ಮನಸ್ಸಿನಲ್ಲಿ ನಿತ್ಯಕ್ಕೂ ಅಚ್ಚೊತ್ತಲ್ಪಟ್ಟ ಮಾನಸಿಕ ಚಿತ್ರಗಳನ್ನು ಉಂಟುಮಾಡುತ್ತದೆ ಮತ್ತು ಇದು ಮಿದುಳಿನ ವಿನ್ಯಾಸ ವಿಜ್ಞಾನದ ಭಾಗವಾಗಿಬಿಡುತ್ತದೆ” ಎಂದು ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ಡಾ. ಮೇರಿ ಆ್ಯನ್ನಿ ಲೇಡನ್‌ ವಿವರಿಸುತ್ತಾಳೆ. ಆದುದರಿಂದಲೇ, ವ್ಯಕ್ತಿಗಳು ಅನೇಕ ವರುಷಗಳ ಹಿಂದೆ ನೋಡಿದ ಅಶ್ಲೀಲ ಚಿತ್ರಗಳನ್ನು ಸ್ಪಷ್ಟವಾಗಿ ಮರುಕಳಿಸಬಲ್ಲರು. ಅವಳು ಕೊನೆಯಲ್ಲಿ ತಿಳಿಸಿದ್ದು: “ಇದು, ನಿರ್ವಿಷೀಕರಣದ ಯಾವುದೇ ನಿರೀಕ್ಷೆಯಿಲ್ಲದ ಮೊದಲ ವ್ಯಸನಕಾರಿ ಪದಾರ್ಥವಾಗಿದೆ.” ಅಂದರೆ ಇದರ ಅರ್ಥ, ಅಶ್ಲೀಲ ಸಾಹಿತ್ಯದ ಪ್ರಭಾವದಿಂದ ಹೊರಬರಲು ಸಾಧ್ಯವೇ ಇಲ್ಲ ಎಂದಾಗಿದೆಯೋ? ಮತ್ತು, ಅಶ್ಲೀಲ ಸಾಹಿತ್ಯವು ಯಾವ ನಿರ್ದಿಷ್ಟ ಹಾನಿಯನ್ನು ಉಂಟುಮಾಡುತ್ತದೆ? (g03 7/22)

[ಪುಟ 5ರಲ್ಲಿರುವ ಚೌಕ]

ಇಂಟರ್‌ನೆಟ್‌ ಅಶ್ಲೀಲ ಸಾಹಿತ್ಯದ ಕುರಿತಾದ ವಾಸ್ತವಾಂಶಗಳು

◼ ಸುಮಾರು 75 ಪ್ರತಿಶತ ಇಂಟರ್‌ನೆಟ್‌ ಅಶ್ಲೀಲ ಸಾಹಿತ್ಯವು ಅಮೆರಿಕದಲ್ಲಿ ಆರಂಭಗೊಳ್ಳುತ್ತದೆ. ಸುಮಾರು 15 ಪ್ರತಿಶತದಷ್ಟು ಯೂರೋಪಿನಲ್ಲಿ ಆರಂಭಗೊಳ್ಳುತ್ತದೆ.

◼ ಒಂದು ವಾರಕ್ಕೆ ಏಳು ಕೋಟಿಯಷ್ಟು ಜನರು ಅಶ್ಲೀಲ ಸಾಹಿತ್ಯಗಳಿರುವ ವೆಬ್‌ಸೈಟ್‌ಗಳಿಗೆ ಭೇಟಿನೀಡುತ್ತಾರೆ ಎಂದು ಅಂದಾಜುಮಾಡಲಾಗಿದೆ. ಇವರಲ್ಲಿ ಸುಮಾರು ಎರಡು ಕೋಟಿಯಷ್ಟು ಜನರು ಕೆನಡ ಮತ್ತು ಅಮೆರಿಕದಲ್ಲಿದ್ದಾರೆ.

◼ ಒಂದು ಸಮೀಕ್ಷೆಯು, ಇತ್ತೀಚಿನ ಒಂದು ತಿಂಗಳಿನ ಅವಧಿಯಲ್ಲಿ ಇಡೀ ಯೂರೋಪ್‌ನಲ್ಲೇ ಎಲ್ಲಕ್ಕಿಂತಲೂ ಹೆಚ್ಚಾಗಿ ಜರ್ಮನಿಯಲ್ಲಿ ಇಂಟರ್‌ನೆಟ್‌ ಅಶ್ಲೀಲ ಸಾಹಿತ್ಯಕ್ಕೆ ಅತಿ ಹೆಚ್ಚು ಪ್ರೇಕ್ಷಕರಿದ್ದರು ಎಂಬುದನ್ನು ಪ್ರಕಟಪಡಿಸಿತು. ಅದನ್ನು ಹಿಂಬಾಲಿಸಿ ಗ್ರೇಟ್‌ ಬ್ರಿಟನ್‌, ಫ್ರಾನ್ಸ್‌, ಇಟಲಿ, ಮತ್ತು ಸ್ಪೆಯಿನ್‌ ದೇಶಗಳಿದ್ದವು.

◼ ಜರ್ಮನಿಯಲ್ಲಿ, ಇಂಟರ್‌ನೆಟ್‌ ಅಶ್ಲೀಲ ಸಾಹಿತ್ಯವನ್ನು ಉಪಯೋಗಿಸುವವರು ಪ್ರತಿ ತಿಂಗಳು ಸರಾಸರಿ 70 ನಿಮಿಷಗಳನ್ನು ಅಶ್ಲೀಲ ಸಾಹಿತ್ಯಗಳಿರುವ ಸೈಟ್‌ಗಳನ್ನು ವೀಕ್ಷಿಸುವುದರಲ್ಲಿ ಕಳೆಯುತ್ತಾರೆ.

◼ ಇಂಟರ್‌ನೆಟ್‌ ಅಶ್ಲೀಲ ಸಾಹಿತ್ಯದ ಯೂರೋಪಿಯನ್‌ ವೀಕ್ಷಕರಲ್ಲಿ, ಲೈಂಗಿಕ ವಿಷಯಗಳಿರುವ ವೆಬ್‌ಸೈಟ್‌ಗಳಲ್ಲಿ ಅತಿ ಹೆಚ್ಚಿನ ಸಮಯವನ್ನು ಕಳೆಯುವವರು 50 ವರುಷ ಪ್ರಾಯಕ್ಕೆ ಮೇಲ್ಪಟ್ಟ ಜನರಾಗಿದ್ದಾರೆ.

◼ ಒಂದು ಮೂಲಕ್ಕನುಸಾರ, ಇಂಟರ್‌ನೆಟ್‌ ಅಶ್ಲೀಲ ಸಾಹಿತ್ಯಗಳ 70 ಪ್ರತಿಶತ ವ್ಯಾಪಾರವಹಿವಾಟು ಹಗಲುಹೊತ್ತಿನಲ್ಲಿಯೇ ಆಗುತ್ತದೆ.

◼ ಒಂದು ಲಕ್ಷ ಇಂಟರ್‌ನೆಟ್‌ ಸೈಟ್‌ಗಳು ಮಕ್ಕಳ ಮೇಲಾಧಾರಿತವಾದ ಅಶ್ಲೀಲ ಸಾಹಿತ್ಯವನ್ನು ಹೊಂದಿವೆ ಎಂದು ಕೆಲವರಿಂದ ಅಂದಾಜುಮಾಡಲಾಗಿದೆ.

◼ ಇಂಟರ್‌ನೆಟ್‌ನಲ್ಲಿರುವ ಮಕ್ಕಳ ಮೇಲಾಧಾರಿತವಾದ ಅಶ್ಲೀಲ ಸಾಹಿತ್ಯದ ವ್ಯಾಪಾರದಲ್ಲಿ ಸುಮಾರು 80 ಪ್ರತಿಶತ ಜಪಾನಿನಲ್ಲಿ ಆರಂಭಗೊಳ್ಳುತ್ತದೆ.

[ಪುಟ 4ರಲ್ಲಿರುವ ಚಿತ್ರಗಳು]

ಅಶ್ಲೀಲ ಸಾಹಿತ್ಯವು ಈಗ ಹೆಚ್ಚು ಸುಲಭವಾಗಿ ಲಭ್ಯವಾಗುತ್ತದೆ