ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಶ್ಲೀಲ ಸಾಹಿತ್ಯ ತದ್ವಿರುದ್ಧವಾದ ದೃಷ್ಟಿಕೋನಗಳು

ಅಶ್ಲೀಲ ಸಾಹಿತ್ಯ ತದ್ವಿರುದ್ಧವಾದ ದೃಷ್ಟಿಕೋನಗಳು

ಅಶ್ಲೀಲ ಸಾಹಿತ್ಯ ತದ್ವಿರುದ್ಧವಾದ ದೃಷ್ಟಿಕೋನಗಳು

“ಇದು, ಒಬ್ಬ ವ್ಯಕ್ತಿಯಲ್ಲಿ ಇರಲೇಬಾರದಷ್ಟು ತೀವ್ರವಾದ ಕಾಮಾಪೇಕ್ಷೆಯನ್ನು ಹುಟ್ಟಿಸುತ್ತದೆ, ಎಂದಿಗೂ ತೃಪ್ತಿಗೊಳಿಸಲ್ಪಡಬಾರದಂಥ ಕಾಮೋದ್ರೇಕವನ್ನು ಇದು ಕೆರಳಿಸುತ್ತದೆ.”​—⁠ಟೋನೀ ಪಾರ್ಸನ್ಸ್‌, ಅಂಕಣಕಾರ.

ಜಾನ್‌, ತಾನು ‘ಇಂಟರ್‌ನೆಟ್‌ ಸೆಕ್ಸ್‌’ನ [ಅಂತರ್ಜಾಲ ಲೈಂಗಿಕತೆ] ವ್ಯಸನಿಯಾಗಲು ಎಂದಿಗೂ ಉದ್ದೇಶಿಸಿರಲಿಲ್ಲ. * ತಮಗರಿವಿಲ್ಲದೆಯೇ ಅಶ್ಲೀಲ ಸಾಹಿತ್ಯವು ಕಣ್ಣಿಗೆ ಬೀಳುವ ಮತ್ತು ಸೆಕ್ಸ್‌ ಚ್ಯಾಟ್‌ ರೂಮ್‌ಗಳನ್ನು ಪ್ರವೇಶಿಸುವ ಇತರ ಅನೇಕರಂತೆಯೇ, ಇವನು ಸಹ ಒಂದು ದಿನ ಇಂಟರ್‌ನೆಟ್‌ ಅನ್ನು ಉಪಯೋಗಿಸುತ್ತಿದ್ದಾಗ ಅಂಥ ಚ್ಯಾಟ್‌ ರೂಮ್‌ಗಳನ್ನು ತನಗರಿವಿಲ್ಲದೆ ತೆರೆದುನೋಡಿದನು. ಬೇಗನೆ, ಅವನು ಇಂಟರ್‌ನೆಟ್‌ ಸೆಕ್ಸ್‌ನಲ್ಲಿ ಸಂಪೂರ್ಣವಾಗಿ ತಲ್ಲೀನನಾದನು. “ನನ್ನ ಹೆಂಡತಿ ಕೆಲಸಕ್ಕೆ ಹೋಗುವುದನ್ನೇ ನಾನು ಕಾಯುತ್ತಿದ್ದೆ, ಮತ್ತು ಅವಳು ಹೋದೊಡನೆ ಹಾಸಿಗೆಯಿಂದ ತಟ್ಟನೆ ಎದ್ದು, ಗಂಟೆಗಟ್ಟಳೆ ಕಂಪ್ಯೂಟರ್‌ ಮುಂದೆ ಸಮಯವನ್ನು ಕಳೆಯುತ್ತಿದ್ದೆ” ಎಂದು ಅವನು ಜ್ಞಾಪಿಸಿಕೊಳ್ಳುತ್ತಾನೆ. ದೀರ್ಘಾವಧಿಯ ಕಾರ್ಯಕ್ರಮಗಳ ಸಮಯದಲ್ಲಿ, ಉಣ್ಣಲು ಅಥವಾ ಕುಡಿಯಲು ಸಹ ಅವನದನ್ನು ನಿಲ್ಲಿಸುತ್ತಿರಲಿಲ್ಲ. “ನನಗೆ ಹಸಿವೆಯ ಪ್ರಜ್ಞೆಯೇ ಇರುತ್ತಿರಲಿಲ್ಲ” ಎಂದು ಅವನು ಹೇಳುತ್ತಾನೆ. ತನ್ನ ಗುಪ್ತ ಚಟುವಟಿಕೆಗಳ ಕುರಿತು ಅವನು ತನ್ನ ಹೆಂಡತಿಗೆ ಸುಳ್ಳು ಹೇಳಲಾರಂಭಿಸಿದನು. ಕೆಲಸದಲ್ಲಿನ ಅವನ ಏಕಾಗ್ರತೆಯನ್ನು ಅದು ಬಾಧಿಸಲಾರಂಭಿಸಿತು ಮತ್ತು ಅವನು ಹೆಚ್ಚೆಚ್ಚು ಸಂಶಯಗ್ರಸ್ತ ಪ್ರವೃತ್ತಿಯವನಾಗುತ್ತಾ ಬಂದನು. ಇದು ಅವನ ವೈವಾಹಿಕ ಜೀವನವನ್ನೂ ನಕಾರಾತ್ಮಕವಾಗಿ ಪ್ರಭಾವಿಸಿತು, ಮತ್ತು ಕೊನೆಯಲ್ಲಿ ಅವನು, ನಿಜ ಜೀವನದಲ್ಲಿ ತನ್ನ ಸೈಬರ್‌ಸೆಕ್ಸ್‌ ಸಂಗಾತಿಗಳಲ್ಲಿ ಒಬ್ಬಳನ್ನು ವೈಯಕ್ತಿಕವಾಗಿ ಭೇಟಿಯಾಗಲು ಏರ್ಪಡಿಸಿದಾಗ ಅವನ ಹೆಂಡತಿಗೆ ಈ ವಿಷಯ ತಿಳಿದುಬಂತು. ಇಂದು, ಜಾನ್‌ ಅವನ ಈ ಚಟದಿಂದ ಹೊರಬರಲು ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ.

ಈ ರೀತಿಯ ಅನುಭವಗಳು ಅಶ್ಲೀಲ ಸಾಹಿತ್ಯದ [ಪೋರ್ನಾಗ್ರಫಿ] ಹಾನಿಕಾರಕ ಪ್ರಭಾವಗಳಿಗೆ ರುಜುವಾತಾಗಿವೆ ಎಂದು ಅಶ್ಲೀಲ ಸಾಹಿತ್ಯದ ವಿರೋಧಿಗಳು ತಿಳಿಸುತ್ತಾರೆ. ಇದು ಸಂಬಂಧಗಳನ್ನು ಕೆಡವಿಹಾಕುತ್ತದೆ, ಹೆಂಗಸರನ್ನು ತುಚ್ಛೀಕರಿತ್ತದೆ, ಮಕ್ಕಳನ್ನು ದುರುಪಯೋಗಿಸುತ್ತದೆ, ಮತ್ತು ಸೆಕ್ಸ್‌ನ ಕುರಿತು ವಿಕೃತ ಹಾಗೂ ಹಾನಿಕಾರಕ ದೃಷ್ಟಿಕೋನವನ್ನು ಮೂಡಿಸುತ್ತದೆ. ಇನ್ನೊಂದು ಬದಿಯಲ್ಲಿ ಅದನ್ನು ಬೆಂಬಲಿಸುವವರು, ಅಶ್ಲೀಲ ಸಾಹಿತ್ಯವು ಸ್ವತಂತ್ರತೆಯ ವ್ಯಕ್ತಪಡಿಸುವಿಕೆ ಎಂದು ಸಮರ್ಥಿಸುತ್ತಾರೆ ಮತ್ತು ಅದನ್ನು ವಿರೋಧಿಸುವವರನ್ನು ಅತಿಯಾದ ಶಿಷ್ಟತೆಯನ್ನು ನಟಿಸುವವರು ಎಂಬಂತೆ ವೀಕ್ಷಿಸುತ್ತಾರೆ. ಅಶ್ಲೀಲ ಸಾಹಿತ್ಯದ ಪ್ರವರ್ತಕನೊಬ್ಬನು ಬರೆಯುವುದು: “ಜನರು ತಮ್ಮ ಲೈಂಗಿಕಾಸಕ್ತಿಗಳ ಅಥವಾ ಅಭಿಲಾಷೆಗಳ ಬಗ್ಗೆ ನಾಚಿಕೆಪಡಬಾರದು. ಅಶ್ಲೀಲ ಸಾಹಿತ್ಯವನ್ನು, ಸೆಕ್ಸ್‌ನ ಕುರಿತು ಮುಚ್ಚುಮರೆಯಿಲ್ಲದ ಚರ್ಚೆಗಳನ್ನು ಆರಂಭಿಸಲು ಮತ್ತು ಉತ್ತೇಜಿಸಲು ಒಂದು ಸಾಧನವಾಗಿ ಉಪಯೋಗಿಸಸಾಧ್ಯವಿದೆ.” ಅಶ್ಲೀಲ ಸಾಹಿತ್ಯದ ತ್ವರಿತಗತಿಯ ಬೆಳವಣಿಗೆಯು ಒಂದು ಮುಚ್ಚುಮರೆಯಿಲ್ಲದ ಹಾಗೂ ಆರೋಗ್ಯಕರ ಸಮಾಜದ ಗುರುತು ಚಿಹ್ನೆಯಾಗಿದೆ ಎಂದು ಸಹ ಕೆಲವರು ಸೂಚಿಸುತ್ತಾರೆ. “ತಮ್ಮೊಳಗೆಯೇ ಒಪ್ಪಿಗೆಯಿರುವ ಎರಡು ಪ್ರೌಢ ವ್ಯಕ್ತಿಗಳು ನಡಿಸುವ ಲೈಂಗಿಕ ಸಂಬಂಧವನ್ನು ತೋರಿಸುವ ವಿವರವಾದ ಚಿತ್ರವನ್ನು ನೋಡಿ ಸಹಿಸಶಕ್ಯವಾದಷ್ಟು ಮಟ್ಟಿಗೆ ವಿಕಾಸ ಹೊಂದಿರುವ ಸಮಾಜವು, ಲೈಂಗಿಕ ವೈವಿಧ್ಯತೆಯನ್ನು ಮತ್ತು ಸ್ತ್ರೀಯರ ಸಮಾನತೆಯನ್ನು ಸಹ ಸಹಿಸಿಕೊಳ್ಳಶಕ್ಯವಾಗಿರುವ ಸಂಭವನೀಯತೆಯಿದೆ” ಎಂಬುದಾಗಿ ಬರಹಗಾರ ಬ್ರೈಯನ್‌ ಮ್ಯಾಕ್‌ನೇರ್‌ ತಿಳಿಸುತ್ತಾನೆ.

ಸಮಾಜದಲ್ಲಿರುವ ಈ ಮಿಶ್ರ ದೃಷ್ಟಿಕೋನಗಳು, ಅಶ್ಲೀಲ ಸಾಹಿತ್ಯವನ್ನು ಸ್ವೀಕಾರಾರ್ಹವಾದದ್ದಾಗಿ ಮಾಡುತ್ತದೋ? ಏಕೆ ಇದು ಇಷ್ಟೊಂದು ವ್ಯಾಪಕವಾಗಿದೆ? ಅಶ್ಲೀಲ ಸಾಹಿತ್ಯವು ನಿಜವಾಗಿಯೂ ಒಂದು ಅಪಾಯಕಾರಿ ಹವ್ಯಾಸವಾಗಿದೆಯೋ? ಈ ಪ್ರಶ್ನೆಗಳನ್ನು ಮುಂದಿನ ಲೇಖನಗಳು ಪರಿಗಣಿಸಲಿವೆ. (g03 7/22)

[ಪಾದಟಿಪ್ಪಣಿ]

^ ಹೆಸರುಗಳು ಬದಲಾಯಿಸಲ್ಪಟ್ಟಿದೆ.